Tuesday, March 19, 2019

Timil Movie: ಪರಿಯೇರುಮ್ ಪೆರುಮಾಳ್





ರಜನೀಕಾಂತ್ ಅಭಿನಯದ ಕಬಾಲಿ ಚಿತ್ರ ಬಿಡುಗಡೆಯಾದಾಗ ನಾನು ಮಲೇಷ್ಯಾದಲ್ಲಿದ್ದೆ. ಇಲ್ಲಿಗಿಂತ ಒಂದು ದಿನ ಮೊದಲೇ ಅಲ್ಲಿ ಬಿಡುಗಡೆಯಾಗಿತ್ತು. ಅದ್ಯಾವ ಪರಿ ಜನ ಆ ಸಿನಿಮಾ ನೋಡಲು ಮುಗಿಬಿದ್ದಿದ್ದರು ಅಂತೀರಿ. ಆ ಕಥೆಯೂ ಮಲೇಷ್ಯಾ ತಮಿಳಿಯನ್ನರ ಮೇಲೆ ನಡೆಯುವ ದೌರ್ಜನ್ಯವನ್ನು ಹೇಳುತ್ತದಲ್ಲ. ಆದರೆ ನನಗೆ ರಜನೀಕಾಂತ್ ಸಿನಿಮಾ ನೋಡಿದ ಹಾಗಾಗಲಿಲ್ಲ. ಕಾರಣ ರಜನೀಕಾಂತ್ ಇದ್ದರೂ ನಿರ್ದೇಶಕ ತಾನಂದುಕೊಂಡದ್ದನ್ನು ದೃಶ್ಯರೂಪದಲ್ಲಿ ತೋರಿಸಲು ಸೋತಿದ್ದ.

ಆದರೆ ಅದೇ ನಿರ್ದೇಶಕ, ತನ್ನ ಮುಂದಿನ ಸಿನಿಮಾ ಕಾಲಾದಲ್ಲಿ ಈ ತಪ್ಪನ್ನು ಮಾಡಲಿಲ್ಲ. ರಜನೀಕಾಂತ್ ಸಿನಿಮಾದೊಳಗೆ ತಾನು ಹೇಳಬೇಕಾದ್ದನ್ನು ಹೇಳಿದ್ದ. ಆದರೆ ಇನ್ನೂ ಬೇರೆ ರೀತಿಯಲ್ಲಿ ಹೇಳಬಹುದು ಅಂತ ನನಗನ್ನಿಸಿತ್ತು. ಆ ಸಿನಿಮಾದಲ್ಲಿ ಬರುವ ಅನೇಕ ವಿಷಯಗಳು ಸಿನಿಮಾ ಭಾಷೆಯನ್ನು ಅರಿತಿರುವ ಮಂದಿಗಷ್ಟೇ ಅರ್ಥವಾಗಲು ಸಾಧ್ಯ ಅನ್ನಿಸಿತ್ತು.

ಹೇಳಬೇಕು ಅಂತ ಅನ್ನಿಸಿದ್ದನ್ನು ಸಿನಿಮಾದೊಳಗೆ ಕಷ್ಟಪಟ್ಟು ತುರುಕಲಾಗುವುದಿಲ್ಲ. ಹಾಗೆ ಮಾಡಿದರೂ ಒಟ್ಟಾರೆ ಸಿನಿಮಾ ನೋಡುವಾಗ ತನ್ನ ಮೂಲ ಉದ್ದೇಶವನ್ನೇ ಮರೆತಿರುತ್ತದೆ. ಹಾಗಾದಾಗಲೇ ಪ್ರೇಕ್ಷಕ ನಿರಾಸೆಗೊಂಡು "ಇವನೇನೋ ಬೇಕು ಅಂತ ಈ ಥರ ಸಿನಿಮಾ ತೆಗೆದಿದ್ದಾನೆ" ಅಂತ ಬೈಕೊಂಡು ಹೋಗುತ್ತಾನೆ. ಆದರೆ ಅದೇ ಪ.ರಂಜಿತ್ ನಿರ್ಮಾಣದಲ್ಲಿ ಬಂದ "ಪರಿಯೇರುಮ್ ಪೆರುಮಾಳ್" ಸಿನಿಮಾದಲ್ಲಿ ನಾನಂದುಕೊಂಡ ನಿರೀಕ್ಷೆಗಳಿಗೆಲ್ಲ ಉತ್ತರ ಸಿಕ್ಕಿತು. ಕಡೆಯವರೆಗೂ ನಮ್ಮನ್ನು ಹಿಡಿದಿಟ್ಟುಕೊಳ್ಳುವ ಕಥೆ. ಮಾರಿ ಸೆಲ್ವರಾಜ್ ನಿರ್ದೇಶನದ್ದು. ಜಾತಿಸಮಸ್ಯೆಯ ಬಗ್ಗೆ ಹೇಳುತ್ತ ಇನ್ನೇನೋ ಆಗಬಹುದಿದ್ದ ಸಿನಿಮಾವನ್ನು ಕಮರ್ಶಿಯಲ್ ಅನ್ನುವ ರೀತಿಯಲ್ಲೇ ಹೇಳುವಲ್ಲಿ ಸಫಲರಾಗುತ್ತಾರೆ. ಅವರ ಉದ್ದೇಶ ವಾಸ್ತವಕ್ಕೆ ಕನ್ನಡಿ ಹಿಡಿಯುವುದಷ್ಟೇ. ಮುಂದೇನಾಗಬೇಕು ಅನ್ನುವ ಪರಿಹಾರವಲ್ಲ. ಕುರುಡನಂತಿರುವ ಸಮಾಜಕ್ಕೆ ಕಡೇಪಕ್ಷ ಹೀಗಾದರೂ ತೋರಿಸಿದರೆ, ಅದರಿಂದ ಮನುಷ್ಯತ್ವದ ಕಿಡಿಯೊಂದು ಹೊತ್ತಿಕೊಂಡು ಆ ಸಮಸ್ಯೆಯ ಪರಿಹಾರದತ್ತ ಮನಸ್ಸು ಮಾಡಿದರೆ ಅದಕ್ಕಿಂತ ಬೆಳವಣಿಗೆ ಇನ್ನೊಂದಿಲ್ಲ. ಇಂಥ ಸಿನಿಮಾಗಳು ಬರಬೇಕು. ಮತ್ತು ಹೀಗೆಯೇ ಇರಬೇಕು.

ಕಥೆಯಲ್ಲಿ ಅನಾವಶ್ಯಕ ಸಂಭಾಷಣೆಗಳಿಲ್ಲ. ಸಂಭಾಷಣೆಯನ್ನೂ ಕೋಪವನ್ನೂ ಕೇವಲ ದೃಶ್ಯದಲ್ಲಿ ತೋರಿಸುವುದಷ್ಟೆ ಇಲ್ಲಿಯ ನಿರ್ದೇಶಕನ ಗುರಿ. ಅದರಲ್ಲಿ ಆತ ಗೆಲ್ಲುತ್ತಾನೆ ಕೂಡ. ನಾಯಕನ ಪ್ರೀತಿಯ ನಾಯಿಯನ್ನು ಕೊಂದಾಗಲೂ ಆತ ಮಾತಿನಲ್ಲಿ ಬೈಯುತ್ತ ಕೂರುವುದಿಲ್ಲ.ಆದರೆ ಅಲ್ಲೊಂದು ಅಗ್ನಿಪರ್ವತ ಕೋಪವನ್ನು ತನ್ನೊಳಗೆ ಹಿಡಿದಿಟ್ಟುಕೊಳ್ಳುತ್ತದೆ. ಸಿನಿಮಾ ನೋಡಲು ಕೂತ ಈ ಮೊದಲ ದೃಶ್ಯದಲ್ಲೇ ಇಡೀ ಚಿತ್ರ ನೋಡಲು ಬೇಕಾದ ಮನಸ್ಥಿತಿಯನ್ನು ಅಲ್ಲಿ ಸೃಷ್ಟಿಸಲಾಗುತ್ತದೆ. ಆತನನ್ನು ಕಾಲೇಜಿನಲ್ಲಿ ಇಂಗ್ಲೀಷಿನಲ್ಲಿ ಹೇಳುವ ನೋಟ್ಸನ್ನು ಬರೆದುಕೊಳ್ಳುತ್ತಿಲ್ಲ ಅಂತ ಕೋಪದಲ್ಲಿ ಹೊರಗೆ ಕಳಿಸುವಾಗಲೂ, ಆತ ಅವಮಾನದಲ್ಲೂ ಕೆಟ್ಟದಾಗಿ ಕೂಗಾಡುವುದಿಲ್ಲ. ಬದಲಿಗೆ ಬೇರೆಯವರ ನೋಟ್ಸನ್ನೂ ಒಮ್ಮೆ ಪರೀಕ್ಷಿಸಿ ಅಂತ ಅವಲತ್ತುಕೊಳ್ಳುತ್ತಾನೆ. ಆತನ ಉದ್ದೇಶ ಸತ್ಯವನ್ನು ತೋರಿಸುವುದಷ್ಟೇ ಹೊರತು ಆ ಉಪನ್ಯಾಸಕರ ಮೇಲೆ ಕೂಗಾಡುವುದಲ್ಲ. ಸಿನಿಮಾದ ಮುಖ್ಯ ದೃಶ್ಯವೊಂದರಲ್ಲಿ ಆತ ಏಕೆ ಮಾತನಾಡಲು ಹಿಂಜರಿಯುತ್ತೇನೆ(ವೆ) ಅಂತ ಹೇಳುತ್ತಾನೆ. ಪ್ರೇಕ್ಷಕ ಅದು ಕೇವಲ ಆ ದೃಶ್ಯಕ್ಕಷ್ಟೇ ಹೇಳುವ ಸಂಭಾಷಣೆಯಲ್ಲ ಅಂತ ಅರ್ಥೈಸಿಕೊಳ್ಳುವಷ್ಟು ಸುಲಭ ಮತ್ತು ಪರಿಣಾಮಕಾರಿಯಾಗಿದೆ.

ಚಿತ್ರದಲ್ಲಿ ಬರೀ ಕಾಲೇಜು ಜೀವನವನ್ನಷ್ಟೇ ತೋರಿಸದೆ, ಅಲ್ಲಲ್ಲಿ ಊರಿನಲ್ಲಿ ನಡೆಯುವ ಜಾತಿಜಗಳಗಳ ಹತ್ಯೆಗಳ ವಿವಿಧ ಮುಖಗಳನ್ನು ಮಧ್ಯೆ ಮಧ್ಯೆ ತೋರಿಸುತ್ತ ತಾನು ಹೇಳುವ ವಿಷಯದ ತೀವ್ರತೆಯನ್ನು ಹೆಚ್ಚುಮಾಡುತ್ತಾರೆ. ಚಿತ್ರದ ಅನೇಕ ದೃಶ್ಯಗಳನ್ನು ಅದು ಹೇಳುವ ಸಂದೇಶಗಳನ್ನು ಒಂದೊಂದಾಗಿ ಚರ್ಚಿಸಬಹುದು. ಆದರೆ ಇವೆಲ್ಲ ಅಂಶಗಳಿದ್ದೂ ಒಟ್ಟಾರೆಯಾಗಿಯೂ ಇದು ಸಂಪೂರ್ಣ ಸಿನಿಮಾದಂತೆ ಭಾಸವಾಗುತ್ತದೆ.

ಕಬಾಲಿಯಲ್ಲಿ ನಾಯಕ ಹಾಕಿಕೊಳ್ಳುವ ಬಟ್ಟೆಯ ಬಗ್ಗೆಯೂ ಸಾಂಕೇತಿಕವಾಗಿ ತೋರಿಸಿದ್ದೇವೆ ಅಂತ ನಿರ್ದೇಶಕ ಹೇಳಿದ್ದರು. ಹಾಗೆ ಹೇಳಿದ್ದರೂ ನಮಗೆ ಮನಸ್ಸಿಗೆ ಅವು ಅಷ್ಟೊಂದು ತಾಕುವುದಿಲ್ಲ. ಆದರೆ ಇಲ್ಲಿ ಹಾಗೆ ತೋರಿಸುವ ಕಡೆಯ ದೃಶ್ಯದ ಎರಡು ಲೋಟಗಳ ರೂಪಕಗಳು, ಪೆರುಮಾಳ್ ರೈಲಿನ ಹಳಿಯ ಮೇಲೆ ಬಿದ್ದಿದ್ದಾಗ ಅವನ ನಾಯಿ ಕರುಪ್ಪಿಯಂತೆ ಬರುವ ರೂಪಕಗಳು, ತಾನು ಮುಂದಿನ ಬೆಂಚಿಗಾಗಿ ಆ ಹುಡುಗರ ಮಧ್ಯೆ ಜಗಳ ನಡೆದಾಗ ಪೆರುಮಾಳ್ "ಯಾಕೆ, ನಾವು ಮುಂದೆ ಬರಬಾರದೇ?" ಅಂತ ಕೇಳುವಾಗ ಆತ ಬೆಂಚಿನ ಬಗ್ಗೆ ಹೇಳುತ್ತಿಲ್ಲ ಅನ್ನುವಂತಹ ವಿಷಯಗಳು, ......ಸಾಮಾನ್ಯ ಪ್ರೇಕ್ಷಕನಾಗಿಯೇ ಅರ್ಥೈಸಿಕೊಳ್ಳಬಹುದು.

ಪುಟ್ಟ ಹಳ್ಳಿಯಿಂದ ಸಮುದಾಯವೊಂದರಿಂದ ಓದಲು ಬರುವ ಹುಡುಗನನ್ನು ಅವನ ಸುತ್ತಲಿನ ಘಟನೆಗಳು, ಸಮಾಜ ಹೇಗೆಲ್ಲ ಕಾಡುತ್ತವೆ ಅನ್ನುವುದನ್ನು ಗೋಳು ಅನ್ನುವ ಹಾಗೆ ತೋರಿಸದೆ, ಲಘು ಹಾಸ್ಯದಿಂದಲೇ ತೋರಿಸಲಾಗಿದೆ. ಆದರೆ ಎಲ್ಲಿಯೂ ಆ ಸಮಸ್ಯೆಗಳು ಅವಾಸ್ತವಿಕ ಅನ್ನಿಸುವುದಿಲ್ಲ. ಡಾಕ್ಯುಮೆಂಟರಿ ಅನ್ನುವಂತಹ ವಿಷಯವನ್ನು ಸಿನಿಮಾ ಆಗಿ ಮಾರ್ಪಡಿಸಲು ಈ ಬಗೆಯ ದೃಶ್ಯಗಳು ಅವಶ್ಯಕ. ಜತೆಗೆ ಸಿನಿಮಾ ನೋಡುವಾಗ ಇದ್ಯಾವುದೋ ದೇಶದ ಸಿನಿಮಾದ ಹಾಗೆ ಅನ್ನಿಸುವುದಿಲ್ಲ. ನಮ್ಮ ಬೀದಿಯಲ್ಲೇ ನಡೆಯುತ್ತಿದೆ ಅನ್ನಿಸುತ್ತದೆ. ಅದಕ್ಕೆ ಕಾರಣ ನಿರ್ದೇಶಕ ತನ್ನದೇ ಸುತ್ತಲಿನ ವಾತಾವರಣವನ್ನು ಕಟ್ಟಿಕೊಡುವ ರೀತಿ. ಈ ಸಿನಿಮಾದಲ್ಲಿ ಬರುವ ಆ ಖಳ, ನಾಯಕನ ತಂದೆ, ನಾಯಕಿ, ಅವರ ಮೆಚ್ಚಿನ ಉಪನ್ಯಾಸಕರು, ಪ್ರಿನ್ಸಿಪಾಲರು, ಪ್ರೀತಿಯ ನಾಯಿ ಕರುಪ್ಪಿ......ಎಲ್ಲರ ಪಾತ್ರಗಳು ಮನಸ್ಸಿನಲ್ಲಿ ಉಳಿಯುತ್ತವೆ. ಮತ್ತು ಅವುಗಳನ್ನು ಚಿತ್ರಿಸಿರುವ ರೀತಿಯೂ ವಿಭಿನ್ನ.

ಮುಕ್ತಾಯಕ್ಕೂ ಮುನ್ನ ನಾಯಕ ಹುಡುಗಿಯ ತಂದೆಗೆ ಹೇಳುತ್ತಾನೆ " ನೀವು ನೀವಾಗಿಯೇ ಇರುವವರೆಗೂ, ನಾನು ಯಾವಾಗಲೂ ನಾನಾಗಿಯೇ ಇರಬೇಕು ಅಂತ ಎದುರು ನೋಡುವವರೆಗೂ ಇಲ್ಲಿ ಯಾವುದೂ ಬದಲಾಗದು" ಅಂತ ಹೇಳುತ್ತಾನೆ. ಅದೊಂದು ಡೈಲಾಗ್ ಹಾಗೆಯೇ ಮನಸ್ಸಿನಲ್ಲಿ ಉಳಿಯುತ್ತದೆ.

-----------------------

ಸಿನಿಮಾ ನೋಡುವಾಗ "ವ್ಹಾ" ಅನ್ನಿಸಿದ ಸೂಪರ್ ಸೀನ್:

ಪೆರುಮಾಳ್ ಲಾ ಕಾಲೇಜಿಗೆ ಅಡ್ಮಿಷನ್'ಗೆಂದು ತನ್ನ ತಾಯಿಯೊಂದಿಗೆ ಹಳ್ಳಿಯಿಂದ ನಗರಕ್ಕೆ ಬರುತ್ತಾನೆ. ಆತ ಮುಗ್ಧ.

"ಗುಡ್, ಈ ಕಾಲೇಜಿನಲ್ಲಿ ಸೀಟು ಸಿಗೋದೆ ಕಷ್ಟ. ಎಷ್ಟು ಜನ ಕಷ್ಟಪಡುತ್ತಾರೆ?! ನಿನಗೆ ಸೀಟು ಸಿಕ್ಕಿದೆ" ಅಂತ ಸಂತೋಷದ ವಿಷಯವನ್ನು ಹೇಳುವ ಪ್ರಿನ್ಸಿಪಾಲರು "ಓದಿದ ಮೇಲೆ ಏನಾಗಬೇಕು ಅಂದುಕೊಂಡಿದ್ದೀಯ?" ಅಂತ ಕೇಳ್ತಾರೆ.

ಆಗ ಅವನು ತಡವರಿಸದೆ "ಡಾಕ್ಟರ್" ಅನ್ನುತ್ತಾನೆ.

ಪ್ರಿನ್ಸಿಪಾಲ್'ಗೆ ಶಾಕ್! ಒಳಗೊಳಗೆ ಅವನ ಪೆದ್ದುತನದ ಬಗ್ಗೆ ನಗುತ್ತ "ಸರಿ ಹೊರಡಿ" ಅನ್ನುತಾರೆ. ಅವರ ತಾಯಿ ಆ ಕೊಠಡಿಯಿಂದ ಹೊರಗೆ ಹೋದ ಮೇಲೆ ಅವನನ್ನು ಮತ್ತೆ ಒಳಗೆ ಕರೆದು, "ಲೇ, ನೀನು ಸೇರಿಕೊಳ್ಳುತ್ತ ಇರೋದು ಲಾ ಕಾಲೇಜು. ಇಲ್ಲಿ ಓದಿಯಾದ ಮೇಲೆ ಲಾಯರ್ ಆಗೋದು. ಡಾಕ್ಟರಲ್ಲ" ಅನ್ನುತ್ತ ಹೇಳುತ್ತಾರೆ.

ಮಧ್ಯೆಯೇ ಅವರ ಮಾತನ್ನು ತಡೆದ ಪೆರುಮಾಳ್,
" ಸರ್, ನಾನು ಹೇಳಿದ್ದು ಬರೀ ಡಾಕ್ಟರ್ ಅಲ್ಲ.
ಡಾಕ್ಟರ್ ಬಿ.ಆರ್. ಅಂಬೇಡ್ಕರ್" ಅನ್ನುತ್ತಾನೆ!!
------------------------------
ಇದೊಂದು ಗೋಳಿನ ಸಿನಿಮಾ ಅಲ್ಲ. ಆದರೆ ಖಂಡಿತ ನಮ್ಮ ಕಣ್ತೆರೆಸುವ ಸಿನಿಮಾ. ನೋಡುವಾಗ ಅನ್ನಿಸಿದ್ದನ್ನು ಬಿಡಿಬಿಡಿಯಾಗಿ ಹೇಳಿದ್ದೇನೆ.. ಮಿಸ್ ಮಾಡದೇ ನೋಡಿ.

Amazon Prime ನಲ್ಲಿದೆ
------------------------------

ಸಂತೋಷ್ ಕುಮಾರ್ ಎಲ್.ಎಂ.
01-Mar-2019

Tamil Cinema:ಜೋಕರ್








ಅನೇಕ ಸಲ ಈ ಸಿನಿಮಾ ಸಿಕ್ಕಾಪಟ್ಟೆ ಗಂಭೀರ ಕಥೆಯುಳ್ಳದ್ದು ಅಂತ ಹೋಗುತ್ತೇವೆ. ನೋಡಿದರೆ ಸಿಲ್ಲಿ ಸಿಲ್ಲಿ ಅನಿಸುವಷ್ಟು ಕಾಮಿಡಿಯಾಗಿರುತ್ತದೆ. ಕೆಲವು ಸಿನಿಮಾಗಳ ಹೆಸರನ್ನು ನೋಡಿ ಇದು ತಿಳಿಹಾಸ್ಯವಿರಬಹುದಾದ ಸಿನಿಮಾ ಅಂದುಕೊಳ್ಳುತ್ತೇವೆ. ಆದರೆ ಆ ಸಿನಿಮಾ ನಗಿಸುತ್ತಲೇ ಗಂಭೀರವಾದ ವಿಷಯವೊಂದನ್ನು ಹೇಳುತ್ತಿರುತ್ತದೆ. ತಮಿಳಿನ "ಜೋಕರ್" ಈ ಎರಡನೇ ಧಾಟಿಯ ಸಿನಿಮಾ.


ಶಂಕರ್ ಸಿನಿಮಾ 'ಅನ್ನಿಯನ್' ಅನ್ನು ನೀವು ನೋಡಿರಬಹುದು. ಅಲ್ಲಿ ಸಮಾಜದಲ್ಲಿ ನಡೆಯುವ ಚಿಕ್ಕಪುಟ್ಟ ಭ್ರಷ್ಟಾಚಾರಗಳೇ ನಾಯಕನ ಮನಸ್ಸಿಗೆ ನಾಟಿ ಆ ಸಣ್ಣ ಅಪರಾಧಗಳನ್ನು ಮಾಡಿದವರನ್ನೇ ಅಟ್ಟಾಡಿಸಿಕೊಂಡು ಹೊಡೆಯುತ್ತಾನೆ. ಎದುರಾಳಿ ಅದ್ಯಾವ ಪ್ರಭಾವೀ ಶಕ್ತಿಶಾಲಿ ವ್ಯಕ್ತಿಯಾಗಿರಲಿ. ಸೂಪರ್-ಹೀರೋನಂತೆ ಎಲ್ಲಿಂದಲೋ ಬಂದು ದಾಳಿಮಾಡಿ ಹಣ್ಣುಗಾಯಿ ನೀರುಗಾಯಿ ಮಾಡುತ್ತಾನೆ. ನಿರ್ದೇಶಕ ಶಂಕರ್'ಗೆ ಸತ್ಯಾಗ್ರಹ ಮಾಡಿಸುವುದರಲ್ಲಿ ಆಸಕ್ತಿಯಿಲ್ಲ. ಅಷ್ಟು ವ್ಯವಧಾನವೂ ಇಲ್ಲ. ಅವನಿಗೆ ಬೇಕಾಗಿರುವುದು ಈ ಕ್ಷಣದ ಪರಿಹಾರ. ಅದಕ್ಕೆ ಆತ ಹೀರೋನ ಕೈಗೆ ಯಾವ ಆಯುಧವನ್ನಾದರೂ ಕೊಡಬಲ್ಲ.


ಆದರೆ ಜೋಕರ್ ಸಿನಿಮಾದ ಹೀರೋ ಆ ಬಗೆಯ ಸೂಪರ್ ಹೀರೋ ಅಲ್ಲ. ಆತ ಒಬ್ಬ ಸಾಮಾನ್ಯ ಮನುಷ್ಯ. ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾಮಾನ್ಯ ಮನುಷ್ಯನೇ ಸೂಪರ್ ಹೀರೋ ಎಂಬ ಸತ್ಯವನ್ನು ಅರಿತುಕೊಂಡವ. ತಾನೇ ಈ ವ್ಯವಸ್ಥೆಯ ಆಧಾರಸ್ಥಂಭವೆಂಬಂತೆ ಪ್ರತಿಯೊಂದನ್ನು ಹಿಂಜರಿಕೆಯಿಲ್ಲದೆಯೇ ಪ್ರಶ್ನಿಸಬಲ್ಲವ. ಅನ್ಯಾಯವಾದಲ್ಲಿ ಕಾನೂನಾತ್ಮಕವಾಗಿಯೇ ಅದಕ್ಕೊಂದು ಪರಿಹಾರ ಹುಡುಕಬಲ್ಲೆ ಅಂತ ಹೊರಡುವವ. ಕಿತ್ತುಹೋದ ರಾಜಕೀಯ ವ್ಯವಸ್ಥೆಯಲ್ಲಿ ಏನೂ ಆಗದಿದ್ದಾಗ ಜನರ ಕಣ್ತೆರೆಸಲು ಮತ್ತು ಜನಪ್ರತಿನಿಧಿಗಳ ನಿದ್ರೆಗೆಡಿಸಲು ಗಾಂಧೀತತ್ವವನ್ನು ಬಳಸಬಹುದು ಎಂಬ ವಿಶ್ವಾಸವುಳ್ಳವ. ಒಟ್ಟಿನಲ್ಲಿ ಏನಾದರೂ ತಪ್ಪು ಎಂದು ಕಂಡುಬಂದಲ್ಲಿ ಹಿಂದೆಮುಂದೆ ನೋಡದೇ ಮುನ್ನುಗ್ಗುವವ.


ಇವನ್ನೆಲ್ಲ ಒಬ್ಬಾತ ಮಾಸ್ ಹೀರೋ ಆಗಿ ಮಾಡುತ್ತಾನೆ ಎಂದು ಊಹಿಸಿದರೆ ತಪ್ಪಾಗುತ್ತದೆ. ಒಬ್ಬಾತ ತಾನು ಈ ದೇಶದ ರಾಷ್ಟ್ರಪತಿ ಎಂದು ತನ್ನನ್ನು ತಾನು ಘೋಷಿಸಿಕೊಂಡು ಅದರಂತೆಯೇ ಹಾವಭಾವ ತೋರಿಸುತ್ತ ಛತ್ರಿಯಿರುವ ಟಿವಿಎಸ್ ಮೊಪೆಡ್ ಮೇಲೆ ಕೂತು ಗಾಂಭೀರ್ಯದಿಂದ ಹೊರಡುವಾಗ ನಕ್ಕು ಸಾಕಾಗುತ್ತೇವೆ. ಆ ಸಿನಿಮಾದೊಳಗೂ ಅವನ ಪರಿಪಾಟಲನ್ನು ನೋಡಿ ನಗುವವರೇ! ಆದರೆ ಒಂದೊಂದು ದೃಶ್ಯ ಮುಗಿದಂತೆ ಆ ಹಾವಭಾವದ ಹಿಂದಿನ ಗಂಭೀರತೆ ಅರ್ಥವಾಗತೊಡಗುತ್ತದೆ. ನಂತರ ಆ ವ್ಯಕ್ತಿಯ ಹಿನ್ನೆಲೆ ಗೊತ್ತಾದಾಗ ಮನಸ್ಸು ಆರ್ದ್ರವಾಗುತ್ತದೆ. ನಾವು ಊಹಿಸುವಂತೆಯೇ ನಗ್ನ ಸಮಾಜದ ಮಧ್ಯೆ ನಿಂತ ಬಟ್ಟೆ ತೊಟ್ಟವ ಎಲ್ಲರೆದುರು ತನ್ನನ್ನು ಸಮರ್ಥಿಸಿಕೊಳ್ಳಲಾಗದ ಪರಿಸ್ಥಿತಿಯಲ್ಲೂ ತನ್ನ ನಿಲುವನ್ನು ಬದಲಾಯಿಸಿಕೊಳ್ಳುವುದಿಲ್ಲ. ಕಡೆಗೆ ಆ ನಗ್ನ ಸಮಾಜ ಅವನನ್ನು ನೆಲಕ್ಕೆ ನೂಕಿ ಅವನ ಕಳೇಬರದ ಮೇಲೆ ನಡೆಯುತ್ತದೆ.


ಸಿನಿಮಾದ ಅಂತ್ಯದಲ್ಲಿ ನೋಡುಗ ದೊರೆಗಳು ಮುಖ ಒರೆಸಿಕೊಳ್ಳುವಂತೆ ವಸ್ತುವಿಷಯವನ್ನು ಹೇಳಲಾಗುತ್ತದೆ. ಸಿನಿಮಾದಿಂದ ಎದ್ದು ಬರುವಾಗ ನೋಡುಗ ಇನ್ನು ಮುಂದೆ ಸಮಾಜದ ಸಮಸ್ಯೆಯ ಬಗ್ಗೆ ಯಾರಾದರೂ ಸೊಲ್ಲೆತ್ತಿದರೆ ಅವರನ್ನು ಜೋಕರ್'ನಂತೆ ನೋಡುವುದಿಲ್ಲ ಅಂತ ಪ್ರತಿಜ್ಞೆ ಮಾಡುತ್ತಾನೆ. ಅದು ಈ ಸಿನಿಮಾವನ್ನು ಸಮರ್ಥವಾಗಿ ಹೇಳಿರುವ ರೀತಿ. ಪ್ರಶ್ನೆ ಮಾಡುವವರನ್ನು ಜೋಕರ್'ನನ್ನಾಗಿ ಮಾಡುವ ಕೆಟ್ಟ ಬೆಳವಣಿಗೆಗಳನ್ನು ಈ ಸಿನಿಮಾ ಸಂಪೂರ್ಣವಾಗಿ ಬೆತ್ತಲು ಮಾಡುತ್ತದೆ. ಸಿನಿಮಾದ ಕೊನೆಯಲ್ಲೇ ಆ ಸಿನಿಮಾದ ಶೀರ್ಷಿಕೆ ಅರ್ಥವಾಗುವುದು ಕೂಡ.


ಈ ಸಿನಿಮಾದಲ್ಲಿ ನನಗಿಷ್ಟವಾಗಿದ್ದು ಯಾವುದೇ ಅಜೆಂಡಾ ಅಂತ ಇಟ್ಟುಕೊಂಡು ಮಾಡಿದ ಸಿನಿಮಾವಲ್ಲ. ಕೆಲವು ನಿರ್ದೇಶಕರ ಕಥೆ ಹೇಳುವಿಕೆಯಲ್ಲೇ ಅವರು ಯಾವ ಪಕ್ಷದ ವಿರುದ್ಧ ಮಾತನಾಡುತ್ತಿದ್ದಾನೆ ಅಂತ ಹೇಳಬಹುದು. ಆದರೆ ಇಲ್ಲಿಯ ನಿರ್ದೇಶಕ ಕೇವಲ ಬಡವರ ಪರ, ನಿರ್ಗತಿಕರ ಪರ, ಪ್ರಜಾಪ್ರಭುತ್ವದ ಸರ್ವಶಕ್ತ ಮತದಾರ ಪ್ರಭುವಿನ ಪರ, ಅನ್ಯಾಯದ ವಿರುದ್ಧವಾಗಿ ಮಾತನಾಡುತ್ತನೆಯೇ ಹೊರತು ಅದಕ್ಕೆ ಯಾವ ಪಕ್ಷದವರು ಕಾರಣ ಅಂತ ಹೇಳುವುದರಲ್ಲಿ ತಲೆಕೆಡಿಸಿಕೊಂಡಿಲ್ಲ. ಏಕೆಂದರೆ ಅವ ಹೇಳುವ ಸಮಸ್ಯೆಗಳೂ ದಶಕಗಳಿಂದಲೇ ನಮ್ಮ ಮಧ್ಯೆ ಹೊಕ್ಕಿವೆ. ಪರಿಹರಿಸದಿದ್ದರೆ ಮುಂದೆಯೂ ಇರುತ್ತವೆ. ಈ ಬಗೆಯ ಸಿನಿಮಾಗಳು ಇನ್ನೂ ಮೂವತ್ತು ವರ್ಷಗಳ ನಂತರ ನೋಡಿದ ಮೇಲೂ ಪ್ರಶ್ನೆ ಮಾಡುವ ಮನೋಭಾವವನ್ನು ಜನಸಾಮಾನ್ಯರಲ್ಲಿ ತುಂಬಬೇಕು.


ಸಿನಿಮಾದಲ್ಲಿ ಕಥೆ, ಅದನ್ನು ಹೇಳಿರುವ ರೀತಿ, ಸಂಗೀತ, ನಿರ್ದೇಶನ, ಕಲಾವಿದರು, ಸಂಭಾಷಣೆ, ಛಾಯಾಗ್ರಹಣ ಎಲ್ಲವೂ ಚೆನ್ನಾಗಿದೆ. ಆರ್ಟ್ ಸಿನಿಮಾ ನೋಡಬೇಕು ಅನ್ನುವವರಿಗೂ, ಕಥೆಯಿರುವ ಸಿನಿಮಾ ನೋಡಬೇಕು ಅಂದುಕೊಳ್ಳುವವರಿಗೂ, ವಿಭಿನ್ನ ಸಿನಿಮಾದ ತುಡಿತದಲ್ಲಿರುವವರಿಗೂ ಇದು ಖಂಡಿತ ನೋಡಲೇಬೇಕಾದ ಸಿನಿಮಾ. ಈ ಸಿನಿಮಾದ ಬಗ್ಗೆ ಇರುವ ರೇಟಿಂಗ್ ಅನ್ನು ನೋಡಿದರೇ ಇದರ ತೂಕವನ್ನು ಅಳೆಯಬಹುದು. ಕೆಲವೆಡೆ ಎಳೆದಂತೆ ಅನ್ನಿಸಿದರೂ ಮುಗಿದ ಮೇಲೆ ಅನೇಕ ವಿಷಯಗಳ ಬಗ್ಗೆ ಚಿಂತನೆಗೆ ಹಚ್ಚುವ ಸಿನಿಮಾ.


ಸಾಧ್ಯವಾದರೆ ಒಮ್ಮೆ ನೋಡಿ.

ಸಂತೋಷ್ ಕುಮಾರ್ ಎಲ್.ಎಂ
19-Mar-2019

Sunday, October 28, 2018

Tamil Movie: 96







ಹಾಗಂದರೇನು? ಬಹುಶಃ ನೋಡಿದ ಪ್ರೇಕ್ಷಕರಲ್ಲಿ ಪ್ರತಿಶತ ಎಷ್ಟು ಜನ "ಸಕ್ಕತ್ ಸಿನಿಮಾ" ಅನ್ನಬಹುದು ಅಂತ ಅದನ್ನೇ ಸಿನಿಮಾ ಹೆಸರಾಗಿಟ್ಟಿದ್ದಾರಾ? ಗೊತ್ತಿಲ್ಲ. ಆದರೆ ನೋಡಿದ ಮೇಲೆ ಹಾಗನ್ನಿಸಿದರೆ ಅದು ನಮ್ಮ ತಪ್ಪಲ್ಲ.
--------------------

ಈ ಸಿನಿಮಾ ಯಾರು ನೋಡಲೇಬಾರದು?
ತಮಿಳು ಅರ್ಥ ಆಗದೇ ಇರೋರು. Subtitle ಓದಿಕೊಂಡು ನೋಡುವ ಸಿನಿಮಾ ಇದಲ್ಲ. ಯಾರಿಗಾದರೂ ಈ ಸಿನಿಮಾ ಇಷ್ಟ ಆಗಿಲ್ಲ ಅಂದ್ರೆ, ತಮಿಳು ಅರ್ಥ ಆಗಿರಲ್ಲ. ಅಥವಾ ನಿಮಗೆ ನಿಮ್ಮ ಶಾಲಾ ದಿನಗಳಲ್ಲಿ ಯಾರನ್ನೂ ಇಷ್ಟಪಟ್ಟಿಲ್ಲ 🤣 (Just kidding)

------------------------

ಈ ವಿಜಯ್ ಸೇತುಪತಿ ಹೇಗೆ ಬೇರೆ ಬೇರೆ Genreನ ಸಿನಿಮಾಗಳನ್ನು ಆಯ್ದುಕೊಳ್ಳುತ್ತಾನೋ ಗೊತ್ತಿಲ್ಲ. ಯಾವುದೋ thriller ಸಿನಿಮಾ ಮಾಡುತ್ತಾನೆ. ನೋಡಿದಾಗ 'ಮಸ್ತ್' ಅನ್ನಿಸಿ 'ಇವನಿಗೆ ಇದೇ ಸರಿ' ಅನ್ನಿಸುತ್ತೆ. ಇನ್ಯಾವುದೋ ಲವ್ ಸ್ಟೋರಿಯಲ್ಲಿದ್ದರೆ ಇದರಲ್ಲೂ ಚೆನ್ನಾಗಿ ಮಾಡಿದ್ದಾನೆ ಅನ್ನಿಸಿಬಿಡುತ್ತೆ. ಆ ಬಗೆಯ versatile actor ಆತ.

ನೋಡೋಕೆ ಇವನ್ನೊಬ್ಬ ಹೀರೋನಾ ಅನ್ನಿಸಬೇಕು. ಆದರೆ ಸಿನಿಮಾ ನೋಡಿದ ಮೇಲೆ ಇವನೇ ನಿಜಕ್ಕೂ ಹೀರೋ ಅನ್ನಿಸುವ ನಟರೇ ತಮಿಳಿನಲ್ಲಿ ಬೇಗ ಜನರಿಗೆ ಇಷ್ಟ ಆಗೋದು. ಅಂತಹ ನಟರ ಸಾಲಿನಲ್ಲಿ ವಿಜಯ್ ಸೇತುಪತಿ ಯಾವಾಗಲೋ ಸೇರಿಯಾಗಿದೆ.

------------------------

ಆಟೋಗ್ರಾಫ್ ಸಿನಿಮಾ ಬಂದಾಗ ಇಂತಹ ಬಾಲ್ಯವನ್ನು ನೆನಪಿಸಿಕೊಳ್ಳುವ ಸಿನಿಮಾ ಇನ್ನು ಮುಂದೆ ಬರುವುದಿಲ್ಲ ಅಂತ ಅನಿಸಿತ್ತು ತಾನೆ? ಅದಕ್ಕೆ ಉತ್ತರವೆಂಬಂತೆ ಇದೀಗ '96' ಇದೆ. ಇದು ಮೂರ್ನಾಲ್ಕು ಸಾಲುಗಳಲ್ಲಿ ಹೇಳಿಕೊಳ್ಳಬಹುದಾದ ಕಥೆ ಇರುವ ಸಿನಿಮಾ ಅಲ್ಲ. ಆದರೆ ನೋಡುವಾಗ ಎಂಥವರನ್ನೂ ಅವರ ಶಾಲೆಯ ದಿನಗಳಿಗೆ ಕೊಂಡೊಯ್ಯಬಲ್ಲುದು. ಅದರಲ್ಲೂ one-sided ಪ್ರೀತಿಯಲ್ಲಿ ಅವಳ ನೆನಪನ್ನು ಎದೆಯೊಳಗೆ ಜತನವಾಗಿರಿಸಿಕೊಂಡು ಕಾಪಿಡುವ ಹೆಚ್ಚು ಮಾತನಾಡದ ಹುಡುಗರಿಗೆ ಇದು ತಮ್ಮದೇ ಕಥೆಯೆನಿಸಿದರೆ ಅದು ಅವರ ತಪ್ಪಲ್ಲ! ಯಾವುದೇ ಬಿಲ್ಡಪ್ ತೆಗೆದುಕೊಳ್ಳದೇ ಎಂಟ್ರಿ ಕೊಡುವ ವಿಜಯ್ ಸೇತುಪತಿ ಮತ್ತು ತ್ರಿಶಾ ಖಂಡಿತ ಮನಸೆಳೆಯುತ್ತಾರೆ. ಮೊದಲರ್ಧದಲ್ಲಂತೂ ವಿಜಯ್ ಸೇತುಪತಿಗೆ ಸಂಭಾಷಣೆಯೇ ಇಲ್ಲ. ತನ್ನ ಹುಡುಗಿ ಎದುರಿಗಿದ್ದಾಗ ಮಾತನಾಡಲು ಹಿಂಜರಿಯುವ ಹುಡುಗನಾಗಿ ಅಭಿನಯಿಸುವ ವಿಜಯ್ ಬರೀ ಅಭಿನಯದಲ್ಲಷ್ಟೇ ನಮ್ಮನ್ನು ಗೆಲ್ಲಬೇಕು. ಅದರಲ್ಲಿ ಅವರು ಯಶಸ್ಸು ಗಳಿಸುತ್ತಾರೆ ಸಹ. ತ್ರಿಶಾರಿಂದ ಈ ಬಗೆಯ ನಟನೆಯೂ ಸಾಧ್ಯ ಅನಿಸುವಷ್ಟು ಅವರನ್ನು ತೊಡಗಿಸಿಕೊಂಡಿರುವ ಸಿನಿಮಾ.

ಹಿನ್ನೆಲೆ ಸಂಗೀತವನ್ನು ಎಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗಿದೆಯೆಂದರೆ ಅದು ಎಲ್ಲಿ-ಎಷ್ಟಿರಬೇಕೋ ಅಷ್ಟೇ ಇದೆ. ಹಲವು ಕಡೆ ಸಂಭಾಷಣೆಯಲ್ಲಿ ಆ ಜೋಡಿಯ ಮಾತು ಮತ್ತು ಉಸಿರಾಟವಷ್ಟೇ ನಮಗೆ ಕೇಳಿಸುತ್ತದೆ. ಸಂಭಾಷಣೆಯ ಮಧ್ಯೆ ಇರುವ ಮೌನವೂ ಕೂಡ ನಮ್ಮನ್ನು ಆ ಸನ್ನಿವೇಶಕ್ಕೆ ಕೊಂಡೊಯ್ಯುತ್ತದೆ. ಒಂದಷ್ಟು ದೃಶ್ಯಗಳನ್ನು ಇಲ್ಲಿ ಹೇಳಬೇಕೆನಿಸಿದರೂ ಇನ್ನೂ ಸಿನಿಮಾ ನೋಡದವರ ಕುತೂಹಲವನ್ನು ಹಾಳುಮಾಡಬಹುದೆಂಬ ಕಾರಣದಿಂದ ಹೇಳುತ್ತಿಲ್ಲ.

ಈ ಮೊದಲೇ ಹೇಳಿದಂತೆ ಸಂಭಾಷಣೆಯನ್ನು ಗ್ರಹಿಸಲಾಗದವರಿಗೆ, ಈ ಸಿನಿಮಾ ಮೊದಲ ದೃಶ್ಯದಿಂದಲೇ ನಮ್ಮನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗದಿದ್ದ ಪಕ್ಷದಲ್ಲಿ ಎರಡೂಮುಕ್ಕಾಲು ಘಂಟೆಯ ಸಿನಿಮಾ ನಿಧಾನಗತಿ ಎನಿಸಿದರೆ ಅದು ಸರಿಯೇ. ಇದು ಕಥೆಗಿಂತ ಆ ಕಥೆಯನ್ನು ಹೇಳುವಾಗಿನ ಪ್ರತೀ ಸಾಲಿಗೆ ಬೇಕಾದ ಭಾವ, ಮತ್ತು ಅದು ನಮ್ಮಲ್ಲಿ ಉಂಟುಮಾಡುವ ಪರಿಣಾಮವನ್ನು ಗಮನದಲ್ಲಿಟ್ಟುಕೊಂಡೇ ಕಥೆಗೆ ಈ ವೇಗ ನೀಡಿದ್ದಾರೆ. ಮೊದಲಾರ್ಧದಲ್ಲಿ ಬರುವ ಉಳಿದ ನಟರು ತಮಗೆ ಸಿಕ್ಕ ಅವಕಾಶದಲ್ಲಿ ನಮ್ಮನ್ನು ಮೋಡಿ ಮಾಡುತ್ತಾರೆ.

ಇಂಗ್ಲೀಷಿನ "Before Sunrise" ಥರದ್ದೇ ಕಥೆ ಮತ್ತು ಚಿತ್ರಕ್ಥೆ ಇಲ್ಲಿಯೂ ಇದೆ ಎಂದು ಗೆಳೆಯರು ಹೇಳಿದ್ದಾರೆ. ನಾ ಕೆಲವು ವರ್ಷಗಳ ಹಿಂದೆ ಆ ಸಿನಿಮಾವನ್ನು ನೋಡಲು ಪ್ರಯತ್ನಪಟ್ಟೆನಾದರೂ ಅರ್ಧಕ್ಕಿಂತ ಹೆಚ್ಚು ಮುಂದುವರೆಯಲಾಗಲಿಲ್ಲ. ಇಲ್ಲಿ ಹೇಳಿದ ಕಾರಣವೇ ಅಲ್ಲಿಯೂ ನನಗೆ ಸಮಸ್ಯೆಯಾಗಿತ್ತು. (ಅದೇ, ಇಂಗ್ಲೀಷ್ ಸಂಭಾಷಣೆಯನ್ನು ಅರ್ಥ ಮಾಡಿಕೊಳ್ಳುವ ಪ್ರಾಬ್ಲಮ್ಮು ಸ್ವಾಮಿ 😂)

ಉಳಿದಂತೆ ಏನೋ ಆಗಿಬಿಡಬಹುದು ಅನ್ನುವ ನಾವು expect ಮಾಡಬಹುದಾದ ಕೆಲವು ಮಾಮೂಲಿ ಸಿನಿಮಾದ ಅಂಶಗಳನ್ನು ಕಡೆಯವರೆಗೂ ಹೇಳದಲೇ ಹಾಗೇ ಉಳಿಸಿ "ಇದು ಸಿನಿಮಾ ಅಲ್ಲ, ಕೊಂಚ ವಾಸ್ತವಕ್ಕೂ ಬನ್ನಿ" ಅನಿಸುವ ಭಾವವನ್ನು ಉಳಿಸಿಹೋಗುವ ನಿರ್ದೇಶಕರ ತಂತ್ರ ಥಿಯೇಟರಿನಿಂದ ಹೊರಬಂದಮೇಲೂ ನಮ್ಮನ್ನು ಕಾಡದೇ ಇರಲಾರದು!

-Santhosh Kumar LM

#santhuLm
28-Oct-2018

Thursday, September 29, 2016

UNSTOPPABLE ಚಿತ್ರ





ಒಮ್ಮೆ ಊಹಿಸಿಕೊಳ್ಳಿ. ನೀವು ಬೈಸಿಕಲ್ಲನ್ನು ತುಳಿಯುತ್ತ ಮುಂದೆ ಸಾಗುತ್ತಿರುವಿರಿ. ಮುಂದೆ ಕೊಂಚ ಇಳಿಜಾರಿನ ಪ್ರದೇಶ. ನೀವು ಪೆಡಲ್ಲನ್ನು ತುಳಿಯುವ ಅವಶ್ಯಕತೆಯೇ ಇಲ್ಲವೆಂಬಂತೆ ಇಳಿಜಾರಿನಲ್ಲಿ ಬೈಸಿಕಲ್ಲಿನ ವೇಗ ಹೆಚ್ಚುತ್ತದೆ. ಅತ್ತಲಿಂದ ಗಾಳಿ ಭರ್ರನೆ ಬೀಸುವುದಕ್ಕೂ ನಿಮ್ಮ ಸೈಕಲ್ಲು ಬಿಟ್ಟ ಬಾಣದಂತೆ ಮುನ್ನುಗ್ಗುವುದಕ್ಕೂ ಗಾಳಿಯಲ್ಲಿ ಹಾರಿದ ಅನುಭವ. ಸೈಕಲ್ಲು ವೇಗ ಹೆಚ್ಚಿಸಿಕೊಂಡು ಸಾಗಿದಂತೆ, ಹಾಗೆಯೇ ಕೊಂಚ ಮುಂದೆ ಇದ್ದಕ್ಕಿದ್ದಂತೆ ಯಾರೋ ರಸ್ತೆಯ ವಾಹನಗಳನ್ನು ಗಮನಿಸದೆ ರಸ್ತೆಯನ್ನು ದಾಟುತ್ತಿದ್ದಾರೆ. ಸೈಕಲ್ಲಿನ ವೇಗ ತಗ್ಗಿಸದಿದ್ದರೆ ಅವರಿಗೆ ತಗುಲುವುದು ಗ್ಯಾರಂಟಿ. ಹಾಗೆಂದುಕೊಂಡು ಮುಂದಿನ ಮತ್ತು ಹಿಂದಿನ ಎರಡೂ ಬ್ರೇಕುಗಳನ್ನು ಒಟ್ಟಿಗೆ ಹಿಡಿಯುತ್ತೀರಿ. ಎದೆ ಧಸಕ್ಕೆನ್ನುತ್ತದೆ. ಬ್ರೇಕುಗಳು ಕೆಲಸ ಮಾಡುತ್ತಿಲ್ಲ. ಈಗ ಉಳಿದಿರುವುದು ಹೆಚ್ಚೆಂದರೆ ಮೂರು ಸೆಕೆಂಡುಗಳು. ಬೇಗೊಂದು ನಿರ್ಧಾರಕ್ಕೆ ಬರದಿದ್ದರೆ ಬೈಸಿಕಲ್ಲು ಗುದ್ದಿ ಪಾದಾಚಾರಿಗೂ ಗಾಯ, ಬಿದ್ದು ನಿಮಗೂ ಗಾಯ. ಸೈಕಲ್ಲನ್ನು ಕೊಂಚ ಎಡಕ್ಕೆ ತಿರುಗಿಸೋಣವೇ? ಅಸಾಧ್ಯ, ಅಲ್ಲಿ ಆಳವಾದ ನೀರಿನ ಹೊಂಡವಿದೆ. ಗಾಯವಿರಲಿ, ಜೀವವೇ ಹೋದರೂ ಹೋದೀತು. ಹೋಗಲಿ, ಸೈಕಲ್ಲನ್ನು ಬಲಕ್ಕೆ ತಿರುಗಿಸೋಣವೇ? ದೇವರೇ.... ಲಾರಿಯೊಂದು ಧೂಳೆಬ್ಬಿಸಿಕೊಂಡು ಯಮನಂತೆ ಬರುತ್ತಿದೆ. ಉಳಿಯುವುದೊಂದೇ ದಾರಿ, ಬಿದ್ದರೆ ಬಿದ್ದು ಗಾಯವಾದರೂ ಸರಿಯೇ, ಇಲ್ಲಿಂದಲೇ ಹ್ಯಾಂಡಲ್ ಬಿಟ್ಟು ಸೈಕಲ್ಲಿನಿಂದ ಹಾರಿದರೆ ಪಾದಾಚಾರಿಗೆ ಏನಾಗುವುದಿಲ್ಲ, ತನಗೆ ಕೊಂಚ ಗಾಯಗಳಾಗಬಹುದು. ಸೈಕಲ್ಲು ಮುರಿಯಬಹುದು. ಸದ್ಯಕ್ಕಿರುವ ಆಯ್ಕೆಗಳಲ್ಲಿ ಕೊಂಚ ಇದೇ ಸರಿ ಅನ್ನಿಸುತ್ತದೆ!


ಹುಫ಼್ಫ಼್ಫ಼್..... ಗಮನಿಸಿ, ಇಷ್ಟೆಲ್ಲ ಯೋಚನಾಲಹರಿ, ತರ್ಕ, ನಿರ್ಧಾರ ಎಲ್ಲವೂ ಆ ಅನಿರೀಕ್ಷಿತವಾಗಿ ಬರುವ ಆ ಮೂರು ಸೆಕೆಂಡುಗಳಲ್ಲೇ ಆಗಬೇಕು. ಎಂಥಹ ಒತ್ತಡದ ಪರಿಸ್ಥಿತಿಯಲ್ಲವೇ? ಒಬ್ಬ ಮನುಷ್ಯನ ಕಾಮನ್ ಸೆನ್ಸು, ತರ್ಕ ಎಲ್ಲವೂ ಒರೆಗೆ ಹಚ್ಚುವುದು ಇಂತಹ ಸಂದರ್ಭಗಳಲ್ಲಿಯೇ!

ನನ್ನಂತಹ ಮನಸ್ಥಿತಿಯವರು ನೀವಾಗಿದ್ದರೆ ಪ್ರತೀ ಹಂತದಲ್ಲೂ, ಪ್ರತೀ ಪ್ರಯಾಣಗಳಲ್ಲೂ ಈ ಬಗ್ಗೆ ಊಹಿಸಿಕೊಳ್ಳುತ್ತಲೇ ಇರುತ್ತೀರಿ. ಬೇರೆಯವರು ಬೈದ ಮೇಲೂ!! :) ಅದಿರಲಿ. ಇಂಥ ಪರಿಸ್ಥಿತಿಗಳನ್ನು ಊಹಿಸಿಕೊಳ್ಳುವಾಗ ನಿಮಗೆ ಮುಂದಾಗಬಹುದಾದ ಪರಿಣಾಮಗಳ ಕೊಂಚ ಅಂದಾಜು ಇದ್ದೇ ಇರುತ್ತದೆ. ಇದೀಗ ಇದೇ ಪರಿಸ್ಥಿತಿಯನ್ನು ನೀವು ಬೈಕಿನಲ್ಲಿ ಹೋಗುವಾಗ, ಕಾರು ಓಡಿಸುವಾಗ ಎಂದು ಬದಲಾಯಿಸಿಕೊಳ್ಳುತ್ತ ಊಹಿಸಿಕೊಳ್ಳಿ. ಒಮ್ಮೆ ಮೈ ಝುಮ್ಮೆನ್ನುತ್ತದೆ. ಕಾರಿನಲ್ಲಿ ಸಮತೋಲನ ತಪ್ಪುವ ಭಯ ಅಷ್ಟಿಲ್ಲವಾದ್ದರಿಂದ ಇಂತಹ ಸಂಕಷ್ಟಗಳು ಎದುರಾದಾಗ ಒಳಗಿರುವವರಿಗಿಂತ ಹೊರಗೆ ಸಿಕ್ಕಿಹಾಕಿಕೊಳ್ಳುವವರಿಗೇ ಹೆಚ್ಚು ಅಪಾಯ. ಆದರೆ ಚಾಲಕ ಈ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬಲ್ಲ ಎಂಬುದರ ಮೇಲೆ ಎಲ್ಲವೂ ನಿರ್ಧಾರವಾಗುತ್ತದೆ. ಹಾಗಾಗಿಯೇ ಈಗಲೂ ಕಾರುಗಳು,ಬಸ್ಸು-ಲಾರಿಗಳು ಬ್ರೇಕ್ ವಿಫಲವಾದಾಗ ಆಗುವ-ತಪ್ಪುವ ಅನಾಹುತಗಳ ಬಗ್ಗೆ ನಾವು ಸುದ್ದಿಗಳಲ್ಲಿ ನೋಡುತ್ತಲೇ ಇರುತ್ತೇವೆ.

ಈಗ ಇನ್ನೂ ಕೊಂಚ ಹೆಚ್ಚಾಗಿಯೇ ಊಹಿಸಿಕೊಳ್ಳೋಣ, ಸಾಗುತ್ತಿರುವ ರೈಲೊಂದರ ಬ್ರೇಕ್ ಇಲ್ಲ. ಅಯ್ಯೋ, ಸುಮ್ನಿರು ಗುರೂ, ತಲೆಗೆ ಹುಳ ಬಿಡ್ಬೇಡ ಅನ್ನಬೇಡಿ. ಹೌದು. ಈ ಕಥೆಯನ್ನೊಮ್ಮೆ ಕೇಳಿ: ಶಕ್ತಿಶಾಲಿ ಎಂಜಿನ್ನುಗಳಿಂದ ಎಳೆಯಲ್ಪಡುವ ಆ ಗೂಡ್ಸ್ ರೈಲುಗಾಡಿ ನಿಲ್ದಾಣ ಬಿಟ್ಟು ಹೊರಡುತ್ತದೆ. ಶುರುವಿನಲ್ಲಿ ಗಂಟೆಗೆ ಸುಮಾರು ಎಂಟು ಮೈಲಿ ವೇಗದಲ್ಲಿ ಹೊರಡಲ್ಪಡುವ ರೈಲಿನ ಚಾಲಕನಿಗೆ ಕಣ್ಣಳತೆಯಲ್ಲಿ ಕಾಣುವ ಹಳಿಯ ಸ್ವಿಚ್ ಸರಿಯಿಲ್ಲದಿದ್ದುದು ಗಮನಕ್ಕೆ ಬರುತ್ತದೆ. ಕೆಳಗೆ ಕೆಲಸ ಮಾಡುತ್ತಿದ್ದ ಸಿಬ್ಬಂದಿಯೊಂದಿಗೆ ಮಾತನಾಡುತ್ತ ತಾನೇ ರೈಲಿನಿಂದಿಳಿದು ಓಡಿ ಹೋಗಿ ಸ್ವಿಚ್ ಸರಿಪಡಿಸುತ್ತಾನೆ. ಇದೀಗ ಮತ್ತೆ ಬಂದು ನಿಧಾನಕ್ಕೆ ಸಾಗುತ್ತಿರುವ ರೈಲಿನೊಳಕ್ಕೆ ಹತ್ತುವುದು ಅವನ ಅಂದಾಜು. ಆದರೆ ಅಷ್ಟರಲ್ಲಾಗಲೇ ವೇಗ ಕೊಂಚ ಹೆಚ್ಚಿರುವುದರಿಂದ ಓಡಿ ಹೋಗಿ ಏಣಿ ಹಿಡಿದು ರೈಲಿನ ಒಳಹೋಗಲು ಸಾಧ್ಯವಾಗುವುದಿಲ್ಲ. ಹೇಗಾದರೂ ಮಾಡಿ ಹತ್ತಲೇಬೇಕೆಂದು ಹಟತೊಟ್ಟು ಓಡಿ ಏಣಿ ಹಿಡಿದರೂ ಒಂದಷ್ಟು ದೂರದವರೆಗೆ ಎಳೆದು ಬೀಸಲ್ಪಡುತ್ತಾನೆ. ಸದ್ಯಕ್ಕೆ ಆ ರೈಲು ಕೋಸ್ಟಿಂಗ್ ಮೋಡ್ ನಲ್ಲಿರುವುದರಿಂದ ವೇಗ ವೃದ್ಧಿಯಾಗುವುದಿಲ್ಲ. ಹಾಗಾಗಿ ಅದನ್ನು ನಿರಾಯಾಸವಾಗಿ ಹಿಡಿಯಬಹುದು ಎಂಬುದು ಇವನ ಲೆಕ್ಕಾಚಾರವಾಗಿರುತ್ತದೆ. ತಕ್ಷಣವೇ ತನ್ನ ಮೇಲಧಿಕಾರಿಗೆ ವಿಷಯ ತಿಳಿಸಿ ಪುಟ್ಟ ಟ್ರಕ್ಕೊಂದರಲ್ಲಿ ರೈಲಿನ ಪಕ್ಕವೇ ಚಲಿಸುತ್ತ ಒಳಗೆ ನುಸುಳಲು ಯತ್ನಿಸಲಾಗುತ್ತದೆ. ಊಹುಂ...ಪ್ರಯತ್ನ ವ್ಯರ್ಥ. ರೈಲು ಕೋಸ್ಟಿಂಗ್-ನಲ್ಲಿರದೇ ಫ಼ುಲ್-ಪವರ್ ನಲ್ಲಿ ಯಾವುದೇ ನಿಯಂತ್ರಣವಿಲ್ಲದೇ ವೇಗ ಹೆಚ್ಚಿಸಿಕೊಳ್ಳುತ್ತ ಸಾಗುತ್ತದೆ.

ತಕ್ಷಣವೇ ಎಲ್ಲ ಪೊಲೀಸ್ ಹಾಗೂ ಇನ್ನಿತರೆ ಸುರಕ್ಷತಾ ವಿಭಾಗಗಳಿಗೆ ವಿಷಯ ತಿಳಿಸಿ ಆ ಮಾರ್ಗದಲ್ಲಿ ಬರುವ ಎಲ್ಲ ಗ್ರೇಡ್ ಕ್ರಾಸಿಂಗುಗಳಲ್ಲಿ ಜನ-ವಾಹನಗಳು ಹಳಿದಾಟದಂತೆ ಕಟ್ಟೆಚ್ಚರವಹಿಸಲು ತಿಳಿಸಲಾಗುತ್ತದೆ. ಈಗ ಗಾಯದ ಮೇಲೆ ಮತ್ತೊಂದು ಬರೆ. ಸುರಕ್ಷತಾ ವಿಭಾಗದ ಮೇಲಧಿಕಾರಿ ಬಂದಾಗ ಆತನಿಗೆ ತಿಳಿಯುವ ಇನ್ನೊಂದು ವಿಚಾರವೆಂದರೆ, ಆ ಗೂಡ್ಸ್ ರೈಲಿನ ಎಂಟು ಕ್ಯಾರಿಯರು(ಬೋಗಿ))ಗಳಲ್ಲಿ ತುಂಬಿರುವುದು ಅಪಾಯಕಾರಿ ದ್ರವರೂಪದ ಫೆನಾಲ್. ಅಂದರೆ ಈ ರೈಲು ತನ್ನ ವೇಗಹೆಚ್ಚಿಸಿಕೊಳ್ಳುತ್ತ ಸಾಗಿ ಜನವಸತಿಯಿರುವ ಪ್ರದೇಶಗಳಲ್ಲಿ ಹಳಿತಪ್ಪಿ ಬಿದ್ದರೆ ಅದೊಂದು ಭೀಕರ ದುರಂತಕ್ಕೆ ನಾಂದಿಯಾಗಬಹುದು. ಪರಿಸ್ಥಿತಿ ಅರ್ಥೈಸಿಕೊಳ್ಳುವ ಆ ಮೇಲಧಿಕಾರಿ ಈ ರೈಲನ್ನು ಅಪಾಯಕಾರಿ ಕ್ಷಿಪಣಿಗೆ ಹೋಲಿಸಿ ಉದ್ಗರಿಸುತ್ತಾನೆ. ಎಲ್ಲ ಇಲಾಖೆಗಳಿಗೆ ಈ ವಿಷಯ ತಿಳಿದು ಈ ಸುದ್ದಿಯನ್ನು ಮಾಧ್ಯಮಗಳು ಬಿತ್ತರಿಸಲು ಶುರು ಮಾಡುತ್ತವೆ.

ಮೊದಲಿಗೆ ಮತ್ತೊಂದು ಎಂಜಿನ್ನಿನಲ್ಲಿ ಕುಳಿತು ಗೂಡ್ಸ್ ರೈಲಿನ ದಿಕ್ಕಿನಲ್ಲೇ ಸಾಗುತ್ತ, ಬೇರೊಂದು ಮಾರ್ಗದಿಂದ ಈ ರೈಲಿನ ಮುಂದೆ ಬಂದು ನಂತರ ಬ್ರೇಕ್ ಹಾಕಿ ವೇಗ ತಗ್ಗಿಸಿ ನಂತರ ನಿಯಂತ್ರಿಸುವುದು. ಅದೇ ಸಮಯದಲ್ಲಿ ಹೆಲಿಕಾಪ್ಟರಿನಲ್ಲಿ ಮೇಲಿಂದ ಚಾಲಕನೊಬ್ಬನನ್ನು ರೈಲಿನೊಳಕ್ಕೆ ಇಳಿಸುವ ಉಪಾಯ ಮಾಡಲಾಗುತ್ತದೆ, ಆದರೆ ಗೂಡ್ಸ್ ರೈಲು ಸಾಗುವ ವೇಗದಲ್ಲಿ ಮುಂದೆ ವೇಗ ತಗ್ಗಿಸಲೆಂದು ತಂದಿದ್ದ ಎಂಜಿನ್ ಕೂಡ ಸಿಡಿದು ಚಿಂದಿಯಾಗಿ ನಿಯಂತ್ರಿಸಲು ಪ್ರಯತ್ನಿಸುತ್ತಿದ್ದ ಹಿರಿಯ ಉದ್ಯೋಗಿ ಈ ದುರ್ಘಟನೆಯಲ್ಲಿ ಅಸುನೀಗುತ್ತಾರೆ. ಇನ್ನು ಮುಂದೆ ರೈಲು ಸಾಗುತ್ತಿರುವ ಹಾದಿಯಲ್ಲಿ Stanton Curve ಎಂದು ಕರೆಯಲ್ಪಡುವ ತೀವ್ರ ತಿರುವಿದೆ. ಅಲ್ಲಿ ಸಾಗುವ ರೈಲುಗಳು ವೇಗವನ್ನು ತಗ್ಗಿಸಲೇಬೇಕು. ಇಲ್ಲದಿದ್ದರೆ ರೈಲುಗಳು ಹಳಿತಪ್ಪುವುದು ಗ್ಯಾರಂಟಿ. ಇನ್ನು ಈ ಅಪಾಯಕಾರಿ ರೈಲು ಇದೇ ವೇಗದಲ್ಲಿ ಸಾಗಿ ಆ ಜಾಗದಲ್ಲಿ ಹಳಿತಪ್ಪಿದರೆ ಜನಗಳ ಮಾರಣಹೋಮವೇ ನಡೆದೀತು. ರೈಲು ಅಲ್ಲಿ ತಲುಪುವುದರೊಳಗೆ ಏನಾದರೊಂದು ಮಾಡಲೇಬೇಕು.

ಇದೀಗ ಗೂಡ್ಸ್ ರೈಲು ಚಲಿಸುತ್ತಿರುವ ಹಾದಿಯಲ್ಲೇ ಚಿತ್ರದ ಮುಖ್ಯ ಭೂಮಿಕೆಯಲ್ಲಿರುವ ಎರಡು ಪಾತ್ರಗಳಿವೆ. ಒಬ್ಬ ಇಂದಷ್ಟೇ ರೈಲ್ವೇ ಇಲಾಖೆಗೆ ಕೆಲಸಕ್ಕೆ ಸೇರಿಕೊಂಡಿರುವಾತ. ಇನ್ನೊಬ್ಬ ಇವನಿಗೆ ಕೆಲಸ ಹೇಳಿಕೊಡುವ, ಮತ್ತು ಇನ್ನೊಂದೆರಡು ವಾರಗಳಲ್ಲೇ ಸೇವೆಯಿಂದ ನಿವೃತ್ತನಾಗುತ್ತಿರುವ ಹಿರಿಯ ಉದ್ಯೋಗಿ. ಇಬ್ಬರಿಗೂ ತಮ್ಮದೇ ಆದ ಕೌಟುಂಬಿಕ ಸಮಸ್ಯೆಗಳಿವೆ. ಮೊದಲಿಗೆ ಒಬ್ಬರಿಗೊಬ್ಬರಿಗೆ ಕಿರಿಕಿರಿಯುಂಟುಮಾಡುತ್ತ ಸಾಗುವ ಪಾತ್ರಗಳು ಕಡೆಗೆ ಇದ್ದಕ್ಕಿದ್ದಂತೆ ಒಂದಾಗಿ ಈ ಕಥೆಯಲ್ಲಿ ಮುಖ್ಯವೆನಿಸಿಕೊಳ್ಳುತ್ತವೆ. ಮುಂದೆ ಈ ರೈಲು ನಿಲ್ಲುತ್ತದೆಯೇ? ಇನ್ನಷ್ಟು ಜನರನ್ನು ಬಲಿ ತೆಗೆದುಕೊಳ್ಳಲಿದೆಯೇ? ಅದನ್ನು ನಿಲ್ಲಿಸುವುದು ಹೇಗೆ? "ಹೊಸ ಡಾಕ್ಟರಿಗಿಂತ ಹಳೆ ಕಾಂಪೌಂಡರೇ ಮೇಲು" ಅನ್ನುವ ಗಾದೆ ಈ ಚಿತ್ರದಲ್ಲಿ ಹೇಗೆ ನೆನಪಿಗೆ ಬರುತ್ತದೆ? ಇವೆಲ್ಲಕ್ಕೂ ನೀವು 2010ರಲ್ಲಿ ಬಿಡುಗಡೆಯಾದ ಈ "UNSTOPPABLE" ಇಂಗ್ಲೀಷ್ ಸಿನಿಮಾವನ್ನು ನೋಡಲೇಬೇಕು.

ಕಥೆ ಎಷ್ಟು ರೋಚಕವಾಗಿದೆಯಲ್ಲವೇ? ನನಗೆ ಇಷ್ಟವಾಗಿದ್ದು ಈ ಕಥೆಯ ವಿಭಿನ್ನತೆ. ಕಥೆ ಬರೆದವರಾರು ಎಂಬುದನ್ನು ಹುಡುಕಾಡಿದಾಗ ನನಗೆ ಸಿಕ್ಕ ಮಾಹಿತಿಯೆಂದರೆ, ಈ ಚಿತ್ರಕಥೆ ನೈಜ ಘಟನೆಯೊಂದರ ಆಧಾರದ ಮೇಲೆ ಬರೆದದ್ದು. 2001ರಲ್ಲಿ ಅಮೇರಿಕಾದ ಓಹಿಯೋ ರಾಜ್ಯದಲ್ಲಿ ಚಾಲಕನಿಲ್ಲದೆ ಅಪಾಯಕಾರಿ ರಾಸಾಯನಿಕಗಳನ್ನು ತುಂಬಿದ್ದ ರೈಲೊಂದು ಘಂಟೆಗೆ 82 km ವೇಗದಲ್ಲಿ ಚಲಿಸಿತ್ತು. ಸುಮಾರು ಎರಡು ಘಂಟೆಗಳ ಕಾಲ ಚಲಿಸಿದ್ದ ರೈಲನ್ನು ಕಡೆಗೆ ಒಬ್ಬ ಹಿರಿಯ ಮತ್ತು ಕಿರಿಯ ಉದ್ಯೋಗಿಗಳ ಸಹಾಯದಿಂದ ನಿಲ್ಲಿಸಲಾಗಿತ್ತು. ಇದೇ ಘಟನೆಯನ್ನು ಆಧಾರವಾಗಿಟ್ಟುಕೊಂಡು "UNSTOPPABLE" ಸಿನಿಮಾವನ್ನು ತಯಾರಿಸಲಾಗಿದೆ. ಸಿನಿಮಾ ನೋಡುವಾಗ ನಮ್ಮ ಯೋಚನಾ ಲಹರಿಯೂ ಆ ವೇಗದ ರೈಲಿನ ಜೊತೆಯಲ್ಲೇ ಸಾಗುತ್ತದೆ. ಈ ಸಿನಿಮಾ ನೋಡಿಯಾದ ಮೇಲೆ ನನಗನ್ನಿಸಿದ್ದು ಹೇಗೆ ತಾನೇ ಈ ಘಟನೆಯನ್ನು ಸಿನಿಮಾ ಮಾಡಲು ಮನಸ್ಸು ಮಾಡಿರಬಹುದು ಎಂದು.

ವಿಭಿನ್ನ ಕಥೆಗಳನ್ನು ಇಷ್ಟಪಡುವವರು ಈ ಚಿತ್ರವನ್ನು ನೋಡಲೇಬೇಕು!

ಚಿತ್ರ: Unstoppable
ನಿರ್ದೇಶಕ: Tony Scott
ತಾರಾಗಣ: Denzel Washington,Chris Pine, Rosario Dawson, Lew Temple, Ethan Suplee, Kevin Dunn,

-------------------------------------------------

-ಸಂತೋಷ್ ಕುಮಾರ್ ಎಲ್.ಎಂ.

Saturday, April 16, 2016

GONE GIRL ಚಿತ್ರ




ಸಿನಿಮಾ ನೋಡಿ ಬಂದ ನಂತರ ಯಾರಾದರೂ ಆ ಕಥೆ ಹೇಳು ಅಂತ ಕೇಳಿದ್ರೆ ನಾವು ಶುರು ಮಾಡುತ್ತಿದ್ದ ರೀತಿಯನ್ನು ಒಮ್ಮೆ ನೆನಪಿಸಿಕೊಳ್ಳಿ! "ಹೀರೋಯಿನ್ನು ರೋಡಲ್ಲಿ ಹೋಗ್ತಿರ್ತಾಳೆ. ಆಗ ಬರ್ತಾನೆ ಭಯಂಕರ ವಿಲನ್ನು. ಬುಲೆಟ್ಟಲ್ಲಿ ಕೂತ್ಕೊಂಡು ಅವಳ ಪಕ್ಕ ಬಂದು ಅವಳನ್ನು ರೇಗಿಸಿದಾಗ ಅವಳು ಕಪಾಳಕ್ಕೆ ಹೊಡೀತಾಳೆ. ಆಗ ವಿಲನ್ನಿಗೆ ಕೋಪ ಬಂದು ಅವಳ ಸೀರೆಯ ಸೆರಗಿಗೆ ಕೈಹಾಕ್ತಾನೆ. ಆಗ ಅವಳು ಕಿರುಚ್ಕೊಳ್ತಾಳೆ. ಆಗ ಎಂಟ್ರಿ ಕೊಡ್ತಾನೆ ನೋಡು ನಮ್ಮ ಹೀರೋ. ವಿಲನ್ನಿಗೆ ಯದ್ವಾ ತದ್ವಾ ಹೊಡ್ದು ಅವಳನ್ನು ಕಾಪಾಡ್ತಾನೆ. ಆಗಲೇ ಅವರಿಬ್ಬರ ಮಧ್ಯೆ ಪ್ರೀತಿ ಶುರುವಾಗುತ್ತೆ".

ಇಲ್ಲಿ ನೋಡಿ ಹೀರೋ, ಹೀರೋಯಿನ್ನು, ವಿಲನ್ನು ಇವರ ಪಾತ್ರಗಳಿಗೆ ಒಂದು ಚೌಕಟ್ಟು ಇದೆ. ಹೀರೋಯಿನ್ನು ವಿಲನ್ನಿಗೆ ಹೊಡಿಯೋದು ಕಮ್ಮಿ. ಹೀರೋ ಮಾಡೋದೆಲ್ಲ ಒಳ್ಳೇದೇ. ವಿಲನ್ನು ಅಪ್ಪಿತಪ್ಪಿಯೂ ಒಂದೂ ಒಳ್ಳೆ ಕೆಲಸ ಮಾಡ್ಬಾರ್ದು..... ಹೀಗೆ ಸಾಗುತ್ತೆ ಪಾತ್ರಗಳಿಗೆ ನಾವು ಹಾಕುವ ನಿರ್ಬಂಧಗಳು. ಆದರೆ ನಿಜವಾದ ಸವಾಲು ಅಂದ್ರೆ ಸಿನಿಮಾ ನೋಡುವಾಗ ಯಾವುದೇ ಪಾತ್ರವನ್ನು ಇದು ಒಳ್ಳೇದು/ಕೆಟ್ಟದ್ದು ಅಂತ ಹೇಳದೇ ಅವುಗಳ ಮನುಷ್ಯ ಸಹಜ ಗುಣಗಳನ್ನು ಹೇಳುವುದು. ಉದಾಹರಣೆಗೆ, "ದುನಿಯಾ" ಸಿನಿಮಾದ ರಂಗಾಯಣ ರಘುರವರ ಪಾತ್ರವನ್ನೇ ಅವಲೋಕಿಸಿ. ತಕ್ಷಣಕ್ಕೆ ಅದರ ಗುಣ ಒಳ್ಳೆಯದೋ ಕೆಟ್ಟದ್ದೋ ಅಂತ ಹೇಳುವುದು ಸುಲಭದ ಮಾತಲ್ಲ. ಇಂತಹ ಪಾತ್ರಗಳು ಸಿನಿಮಾ ಮುಗಿದ ಮೇಲೂ ಮತ್ತೆ ಮತ್ತೆ ಅದೇ ಪ್ರಶ್ನೆ ಹಾಕಿ ನಮ್ಮನ್ನು ಕಾಡುತ್ತವೆ.

ಈ ಪೀಠಿಕೆಗೆ ನಾಂದಿ ಹಾಡಲು ಕಾರಣವಾದ ಚಿತ್ರ "Gone Girl". ಯಾವ ಪಾತ್ರಗಳ ಗುಣಗಳನ್ನೂ ಒಳ್ಳೆಯವೆಂದೋ ಕೆಟ್ಟವೆಂದೋ ಹೇಳದೇ ಅದರ ಅವಲೋಕನವನ್ನು ಕೇವಲ ಪ್ರೇಕ್ಷಕನಿಗೆ ಬಿಡುವ ತಂತ್ರ ಈ ಸಿನಿಮಾದಲ್ಲಿ ಬಹಳ ಇಷ್ಟವಾಯಿತು. ಈ ಚಿತ್ರದ ಎಲ್ಲ ಪಾತ್ರಗಳು ಹಾಗೆಯೇ ರಚನೆಯಾಗಿವೆ. ಇದೊಂದೇ ಈ ಚಿತ್ರದ ವಿಶೇಷವಲ್ಲ. ಮೊದಲಿಗೆ ಈ ಸಿನಿಮಾದ ಕಥೆಯ ಕೊಂಚವೇ ಕೊಂಚ ಸಾರಂಶವನ್ನು(ಪೂರ್ತಿಯಲ್ಲ) ಹೇಳುತ್ತೇನೆ ಕೇಳಿ.
-------------------------
ಅಂದು ನಿಕ್ ಮತ್ತು ಎಮಿ ದಂಪತಿಗಳ ಐದನೇ ವಿವಾಹ ವಾರ್ಷಿಕೋತ್ಸವ. ಬೆಳಗ್ಗೆ ತನ್ನ ಸಹೋದರಿಯನ್ನು ಭೇಟಿ ಮಾಡಿ ಮನೆಗೆ ಮರಳುವ ನಿಕ್'ಗೆ ತನ್ನ ಹೆಂಡತಿ ಎಮಿ ಮನೆಯಿಂದ ಕಾಣೆಯಾಗಿರುವುದು ತಿಳಿಯುತ್ತದೆ. ತಕ್ಷಣವೇ ಆತ ಪೊಲೀಸರಿಗೆ ಮಾಹಿತಿ ನೀಡಿ ಬರಹೇಳುತ್ತಾನೆ. ಕಾಣೆಯಾದ ಎಮಿಯ ತಂದೆ-ತಾಯಿ ಪ್ರಸಿದ್ಧ ಲೇಖಕರು. ತಮ್ಮ ಮಗಳು ಎಮಿ ಮಗುವಾಗಿದ್ದಾಗ ಅವಳನ್ನೇ ಪ್ರೇರಣೆಯಾಗಿಟ್ಟುಕೊಂಡು ಅವರು ಬರೆದ "Amazing Amy" ಮಕ್ಕಳ ಕಥೆಗಳು ಪ್ರಖ್ಯಾತಿಯಾಗಿವೆ. ಹಾಗಾಗಿ ಎಮಿ ಕೂಡ ಸಮಾಜದಲ್ಲಿ ಎಲ್ಲರಿಗೂ ಚಿರಪರಿಚಿತಳೇ. ಹಾಗಾಗಿ ಆಕೆ ಕಾಣೆಯಾದ ವಿಚಾರ ಮಾಧ್ಯಮಗಳಲ್ಲಿ ತಕ್ಷಣವೇ ರಾಷ್ಟ್ರೀಯ ಪ್ರಮುಖ ಸುದ್ದಿಯಾಗಿ ಬಿತ್ತರವಾಗುತ್ತದೆ. ಇತ್ತ ಪೊಲೀಸರು ಈ ಕೇಸನ್ನು ಬಗೆಹರಿಸಲು ಪ್ರಯತ್ನಿಸುತ್ತಿದ್ದರೆ ಅತ್ತ ಮಾಧ್ಯಮ ಪ್ರತಿನಿಧಿಗಳು ಹಿಂಡುಹಿಂಡಾಗಿ ಮನೆಮುಂದೆ ಬೀಡು ಬಿಟ್ಟು ಇವರ ಪ್ರತೀ ಚಲನವಲನಗಳನ್ನು ನೇರಪ್ರಸಾರದಲ್ಲಿ ಬಿತ್ತರಿಸುತ್ತಿರುತ್ತವೆ.

ಈ ಕೇಸನ್ನು ಕೈಗೆತ್ತಿಕೊಳ್ಳುವ ಪೊಲೀಸ್ ಡಿಟೆಕ್ಟಿವ್ ಬೋನಿಗೆ ಪರಿಶೀಲಿಸುವಾಗ ಅನೇಕ ಸುಳಿವುಗಳು ಸಿಗುತ್ತದೆ. ಅಲ್ಲಿ ಯಾರೋ ತೊಳೆದಿದ್ದರೂ ದೊರಕುವ ಅರ್ಧಂಬರ್ಧ ರಕ್ತದ ಕಲೆಗಳು ಎಮಿಯದೆಂದು ಗೊತ್ತಾಗುವ ಜೊತೆಗೆ ಆಕೆ ಕೊಲೆಯಾಗಿರಬಹುದೆಂದು ಸಂದೇಹಿಸಲಾಗುತ್ತದೆ. ಎಮಿಯ ಗಂಡ ನಿಕ್'ನನ್ನು ವಿಚಾರಣೆ ಮಾಡುವ ವೇಳೆ ಅವಳ ಬಗೆಗಿನ ಯಾವುದೇ ಸರಳ ಪ್ರಶ್ನೆಗಳಿಗೂ ಉತ್ತರ ಕೊಡಲು ವಿಫಲನಾಗುತ್ತಾನೆ. ಉದಾ: ಅವಳ ಗೆಳತಿಯರು ಯಾರು? ಅವಳ ರಕ್ತದ ಗುಂಪೇನು? ಅನ್ನುವಂತಹ ಸಾಮಾನ್ಯ ಪ್ರಶ್ನೆಗಳಿಗೂ ಅವನ ಬಳಿ ಉತ್ತರವಿಲ್ಲ. ಇನ್ನು ಮುಂದೆ ಹೋಗಿ ಬೋನಿ ಅವರ ಆರ್ಥಿಕ ಸ್ಥಿತಿಯ ಬಗ್ಗೆ ಮಾಹಿತಿ ಹುಡುಕಿದಾಗ, 2007 ಇಸವಿಯಲ್ಲಿನ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ನ್ಯೂಯಾರ್ಕಿನಿಂದ ನಿಕ್'ನ ತವರೂರಿಗೆ ವಾಸ್ತವ್ಯ ಬದಲಿಸಿದ್ದರು ಮತ್ತು ಇದೀಗಲೂ ಕ್ರೆಡಿಟ್ ಕಾರ್ಡಿನಲ್ಲಿ ಬಹಳಷ್ಟು ಸಾಲವಿದೆ ಎಂಬುದು ತಿಳಿಯುತ್ತದೆ.

ಈ ಮಧ್ಯೆ ನಮಗೆ Flashbackನಲ್ಲಿ ಅವರಿಬ್ಬರೂ ಪರಿಚಯವಾದ ಬಗೆಗೆ, ನಂತರ ಮದುವೆಯಾದ ಬಗ್ಗೆ, ಕೊಂಚ ದಿನ ಅವರಿಬ್ಬರೂ ಚೆನ್ನಾಗಿಯೇ ಸಂಸಾರ ಮಾಡಿದ ಬಗ್ಗೆ ದೃಶ್ಯಗಳನ್ನು ತೋರಿಸಲಾಗುತ್ತದೆ. ನಂತರ ಅವರಿಬ್ಬರ ಮಧ್ಯೆ ಎಲ್ಲವೂ ಸರಿಯಿಲ್ಲ ಎನ್ನುವುದು ಆಕೆ ಬರೆಯುವ ಡೈರಿಯ ದಾಖಲೆಗಳಿಂದ ಗೊತ್ತಾಗುತ್ತದೆ. ಈ ಮಧ್ಯೆ ಡಿಟೆಕ್ಟಿವ್ ಬೋನಿಗೆ ಎಮಿಯು ಕೆಲ ತಿಂಗಳ ಹಿಂದೆ ತನ್ನ ಸ್ವಯಂರಕ್ಷಣೆಗೆ ಪಿಸ್ತೂಲೊಂದನ್ನು ಕೊಳ್ಳಲು ಪ್ರಯತ್ನಿಸಿದ್ದಳು ಎಂಬ ಮಾಹಿತಿಯೂ ಸಿಗುತ್ತದೆ. ನಂತರದ ದೃಶ್ಯಗಳಲ್ಲಿ ನಿಕ್ ತನ್ನ ಹಳೆಯ ಪ್ರೇಯಸಿಯೊಂದಿಗೆ ಇನ್ನೂ ಅನೈತಿಕ ಸಂಬಂಧ ಹೊಂದಿರುವ ಬಗ್ಗೆ ನಿಕ್'ನ ಸಹೋದರಿಗೆ ರೆಡ್ ಹ್ಯಾಂಡೆಡ್ ಆಗಿ ಸಿಕ್ಕಿ ಬೀಳುವುದರೊಂದಿಗೆ, ನಿಕ್ ತನ್ನ ಪತ್ನಿಯನ್ನು ಕೊಲೆ ಮಾಡಿ ಮುಚ್ಚಿಡಲು ಪ್ರಯತ್ನಿಸುತ್ತಿದ್ದಾನೆ ಎಂಬುದು ಮಾಧ್ಯಮಗಳಲ್ಲೂ ಪ್ರಸಾರವಾಗುತ್ತದೆ.
---------------------

ಓಹ್! ತುಂಬ ಕುತೂಹಲಕಾರಿಯಾಗಿದೆ ಅಲ್ಲವೇ?! ಇದೀಗ ನಿಕ್'ನಿಂದ ಸತ್ಯವನ್ನು ಹೊರಗೆಳೆಯುವುದಷ್ಟೇ ಸಿನಿಮಾದ ಉದ್ದೇಶವೆಂದರೆ ಇದೂ ಒಂದು ಮಾಮೂಲಿ ಕ್ರೈಂ ಸಿನಿಮಾ ಅಷ್ಟೇ! ಕ್ಷಮಿಸಿ, ಕಥೆ ಹಾಗಿಲ್ಲ!!
---------------------

ಎಮಿಯು ನಿಕ್'ನನ್ನು ಮದುವೆಯಾಗುವ ಮುನ್ನ ಆಕೆಗೂ ಇಬ್ಬರೊಂದಿಗೆ ಸಂಬಂಧ ಮುರಿದು ಬಿದ್ದಿರುತ್ತದೆ.
ಆ ಎರಡೂ ಸಂಬಂಧಗಳಲ್ಲಿನ ಇಬ್ಬರೂ ಹುಡುಗರು ಆಕೆಯ ಮೇಲೆ ದೈಹಿಕ ಹಲ್ಲೆ ಮಾಡಿದ, ಅತ್ಯಾಚಾರ ಮಾಡಿದಂತಹ ಕೇಸುಗಳಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಅವರಲ್ಲಿ ಒಬ್ಬನನ್ನು ಭೇಟಿ ಮಾಡುವ ನಿಕ್'ಗೆ ಆತ ನಿರಪರಾಧಿ ಎಂದು ಗೊತ್ತಾಗುವುದರೊಂದಿಗೆ ಕಥೆ ಮತ್ತೆ ದಿಕ್ಕು ಬದಲಿಸುತ್ತದೆ.

ನಿಕ್'ನ ಅನೈತಿಕ ಸಂಬಂಧ ತಿಳಿದ ದಿನದಿಂದ ಮನನೊಂದ ಎಮಿ, ಅವನಿಗೆ ಜೀವನದ ಅತೀ ದೊಡ್ಡ ಪಾಠ ಕಲಿಸುವ ದೃಷ್ಟಿಯಿಂದ ಅನೇಕ ತಿಂಗಳುಗಳಿಂದ ಯೋಜನೆ ರೂಪಿಸಿರುತ್ತಾಳೆ. ಮೊದಲು ತಾನು ನಾಪತ್ತೆಯಾಗಬೇಕು. ನಂತರ ಎಲ್ಲರಿಗೂ ತಾನು ಕೊಲೆಯಾಗಿದ್ದೇನೆನ್ನುವ ಅನುಮಾನ ಬರಬೇಕು. ಎಲ್ಲರಿಗೂ ತಾನು ನಿಕ್ ಮೇಲೆಯೇ ಸಂದೇಹ ಬರುವಂತೆ ಮಾಡಿ ಅವನನ್ನು ಜೈಲಿಗೆ ಕಳುಹಿಸಿ ಬದುಕಿನಲ್ಲೇ ದೊಡ್ಡ ಪಾಠ ಕಲಿಸಬೇಕು ಎಂಬ ಯೋಜನೆ ಹಾಕಿಕೊಂಡು ಅದರಂತೆಯೇ ಪ್ರತಿಯೊಂದನ್ನು ರೂಪಿಸುತ್ತಾಳೆ. ತನ್ನ ರಕ್ತವನ್ನು ಅಲ್ಲಲ್ಲಿ ಚೆಲ್ಲಿ, ಹಾಗೆಯೇ ತಾನು ಕೊಲೆಯಾಗುವ ಮುನ್ನ ಗರ್ಭಿಣಿ ಎಂಬಂತೆ ತೋರಿಸುವ ಕಳ್ಳ ರಿಪೋರ್ಟ್, ಅವನಿಗೆ ಗೊತ್ತಾಗದಂತೆ ಕ್ರೆಡಿಟ್ ಕಾರ್ಡಿನಲ್ಲಿ ಅನೇಕ ವಸ್ತುಗಳ ಖರೀದಿ. ಹೀಗೆ ಹತ್ತು ಹಲವು ದಾಖಲೆಗಳನ್ನು ಸೃಷ್ಟಿಸಿ ತಮ್ಮ ವಾರ್ಷಿಕೋತ್ಸವದ ದಿನವೇ ನಾಪತ್ತೆಯಾಗುವಂತೆ ನಾಟಕವಾಡುತ್ತಾಳೆ
---------------------

ಕ್ಷಮಿಸಿ, ಮತ್ತೆ ಕಥೆ ನಾವಂದುಕೊಂಡಂತೆ ನಡೆಯುವುದಿಲ್ಲ. ಅನಿರೀಕ್ಷಿತ ತಿರುವುಗಳನ್ನು ಪಡೆದುಕೊಳ್ಳುತ್ತ ಸಾಗುವ ಕಥೆ ಪ್ರೇಕ್ಷಕನಿಗೆ ಎಲ್ಲಿಯೂ ಸುಳಿವು ಕೊಡದಂತೆ ಸಾಗುತ್ತದೆ. ಸುಳಿವು ಸಿಕ್ಕಿತು ಎನ್ನುವಷ್ಟರಲ್ಲಿ ಅದು ತಪ್ಪುಗ್ರಹಿಕೆ ಎಂಬಂತೆ ಮತ್ತಾವುದೋ ದಾರಿ ಹಿಡಿಯುತ್ತದೆ. ಕಡೆಯ ಕ್ಷಣದವರೆಗೂ ಹೀಗೆಯೇ ಸಾಗುವ ಸಿನಿಮಾ ತಾರ್ಕಿಕ ಅಂತ್ಯವನ್ನೇನೋ ಕಾಣುತ್ತದೆ. ಆದರೆ ಮುಗಿದ ನಂತರ ಮತ್ತೆ ನಮ್ಮ ಮನಸ್ಸಿನೊಳಗೆ ಯಾರು ಮಾಡಿದ್ದು ಸರಿ, ಯಾರು ಮಾಡಿದ್ದು ತಪ್ಪು ಅನ್ನುವ ಪ್ರಶ್ನೆಗಳನ್ನು ಹಾಕಿ ಮತ್ತೆ ಒಂದೊಂದೇ ದೃಶ್ಯವನ್ನು ಮೆಲುಕು ಹಾಕುತ್ತ ಇದಕ್ಕೆ ಕಾರಣವೇನಿರಬಹುದು ಅನ್ನುವುದನ್ನು ಅವಲೋಕಿಸುವಂತೆ ಮಾಡುತ್ತದೆ. ಇದು ಕಥೆಯ ಮತ್ತು ಪಾತ್ರಗಳನ್ನು ಕಟ್ಟಿದ ಬಗೆಗಿರುವ ತಾಕತ್ತು. ಹೈಪ್ರೊಫೈಲ್ ಕೇಸುಗಳಲ್ಲಿ ಮಾಧ್ಯಮಗಳು ಜನಗಳ ಭಾವನೆಯೊಂದಿಗೆ ಹೇಗೆ ಆಟವಾಡುತ್ತವೆ ಎನ್ನುವುದನ್ನು ಈ ಚಿತ್ರದಲ್ಲಿ ಸೂಕ್ಷ್ಮವಾಗಿ ಹೇಳಲಾಗಿದೆ.

ಚಿತ್ರ ಎರಡೂವರೆ ಘಂಟೆ ಓಡಿದರೂ ಎಲ್ಲೂ ಬೇಸರವಾಗುವುದಿಲ್ಲ ಎಂದರೆ ಇದರ ಕಥೆಯನ್ನು ಮತ್ತು ನಿರ್ಮಾತೃಗಳನ್ನು ಶ್ಲಾಘಿಸಲೇಬೇಕು. ಈ "Gone Girl" ಚಿತ್ರದ ನಿರ್ದೇಶಕ ಡೇವಿಡ್ ಫಿಂಚರ್. ಬಹುತೇಕ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾದ ಈ ಚಿತ್ರದ ಮೂಲ 2012ರಲ್ಲಿ ಬಿಡುಗಡೆಯಾಗಿ 85 ಲಕ್ಷ ಪ್ರತಿ ಮಾರಾಟವಾದ ಇದೇ ಹೆಸರಿನ ಜನಪ್ರಿಯ ಕಾದಂಬರಿ "Gone Girl". ಕಾದಂಬರಿಯನ್ನು ಬರೆದ gillian flynn ರವರೇ ಈ ಚಿತ್ರಕ್ಕೆ ಚಿತ್ರಕಥೆಯನ್ನೂ ಬರೆದಿದ್ದಾರೆ. Ben Affleck ನಿಕ್ ಪಾತ್ರದಲ್ಲಿ ಮತ್ತು Rosamund Pike ಎಮಿ ಪಾತ್ರದಲ್ಲಿ ಇಡೀ ಚಿತ್ರವನ್ನು ಆವರಿಸಿಕೊಳ್ಳುತ್ತಾರೆ.

ಇದೊಂದು ಸೈಕೋಪಾತ್ ಚಿತ್ರವಾ? ಕ್ರೈ ಥ್ರಿಲ್ಲರ್? ಫ್ಯಾಮಿಲಿ ಡ್ರಾಮಾ? ಗೊತ್ತಿಲ್ಲ! ಚಿತ್ರವನ್ನೊಮ್ಮೆ ನೋಡಿ ನೀವೇ ಹೇಳಿ! :)


-ಸಂತೋಷ್ ಕುಮಾರ್ ಎಲ್.ಎಂ.

Tuesday, April 5, 2016

SAVING PRIVATE RYAN ಚಿತ್ರ



ಅಮೇರಿಕಾ ಸೈನ್ಯವು ಜರ್ಮನಿ ಆಕ್ರಮಿತ ಒಮಾಹಾ ಸಮುದ್ರತೀರದ ಮೇಲೆ ದಾಳಿ ಮಾಡಿ ತನ್ನ ನೆಲೆಯೂರಿದ್ದು ಎರಡನೇ ಮಹಾಯುದ್ಧದ ಪ್ರಮುಖ ಘಟನೆಗಳಲ್ಲೊಂದು. ಸಮುದ್ರದ ಕಡೆಯಿಂದ ದಾಳಿ ಮಾಡುವ ಅಮೇರಿಕಾ ಸೈನ್ಯಕ್ಕೆ ಎದುರು ನಿಲ್ಲುವುದು ಎತ್ತರದ ಪ್ರದೇಶಗಳಲ್ಲಿ ಕುಳಿತು ಗುಂಡು ಹಾರಿಸಿ ಪ್ರಾಣ ತೆಗೆಯುವ ಜರ್ಮನಿ ಸೈನಿಕ ಪಾಳಯ. ಈ ಕಾಳಗದಲ್ಲಿ ಬಲಿಯಾದದ್ದು ಸಾವಿರಾರು ಸೈನಿಕರು. ಕಡೆಗೂ ನೆಲೆಯೂರುವಲ್ಲಿ ಅಮೇರಿಕಾ ಸೇನೆ ಯಶಸ್ವಿಯಾಗುತ್ತದೆ. ಇದು ನಡೆದದ್ದು 1944 ಜೂನ್ 6 ರಂದು.

ರಿಯಾನ್ ಕುಟುಂಬದ ತಾಯಿಗೆ ಒಂದೇ ದಿನ ಮೂರು ಟೆಲಿಗ್ರಾಮ್'ಗಳು ಬರುತ್ತವೆ. ಅವಳ ಮೂರು ಜನ ಪುತ್ರರು ಒಮಾಹಾ ದಾಳಿಯ ಸಂದರ್ಭದಲ್ಲಿ ವೀರಮರಣವನ್ನಪ್ಪಿರುತ್ತಾರೆ. ಅವಳಿಗಿರುವುದೇ ನಾಲ್ಕು ಮಕ್ಕಳು. ಇದೀಗ ಮೂವರು ಇಲ್ಲವಾಗಿದ್ದಾರೆ. ಉಳಿದ ಕಿರಿಯವ ಜೇಮ್ಸ್ ಫ್ರಾನ್ಸಿಸ್ ರಿಯಾನ್. ಅವನೂ ಸೇನೆಯಲ್ಲಿ ಪ್ಯಾರಾಟ್ರೂಪರ್ ಆಗಿದ್ದಾನೆ. (ಪ್ಯಾರಾಟ್ರೂಪ್: ಯುದ್ಧದ ಸಂದರ್ಭಗಳಲ್ಲಿ ಕೆಲವು ನೆಲೆಗಳನ್ನು ವಶಪಡಿಸಿಕೊಳ್ಳಲು ಪ್ಯಾರಾಶೂಟ್'ಗಳ ಮೂಲಕ ದಾಳಿ ಮಾಡಲು ಇರುವ ಪಡೆಗಳು). ಆತನೂ ಒಮಾಹಾ ಬೀಚಿನಿಂದ ನೂರು ಮೈಲಿ ದೂರದಲ್ಲಿರುವ ಓರ್ಮ್ಯಾಂಡಿ ಪ್ರದೇಶದಲ್ಲಿ ಇಳಿದ ನಂತರ ಕಾಣೆಯಾಗಿದ್ದಾನೆ.

ಈ ಸಂದರ್ಭದಲ್ಲಿ ಸೇನೆಯ ಜನರಲ್ ಜಾರ್ಜ್ ಮಾರ್ಷಲ್ ಅಮೇರಿಕಾದ ಅಧ್ಯಕ್ಷ ಅಬ್ರಹಾಮ್ ಲಿಂಕನ್ ಬರೆದಿದ್ದ ಬಿಕ್ಸ್ಬೀ ಪತ್ರವನ್ನು ಓದುತ್ತಾರೆ.

ಈ ಬಿಕ್ಸ್ಬೀ ಪತ್ರಕ್ಕೊಂದು ಹಿನ್ನೆಲೆಯಿದೆ. ಅಮೇರಿಕಾ ಸೇನೆಗೆ ಕಳುಹಿಸಿದ ತಾಯಿಯೊಬ್ಬಳ ಐದೂ ಜನ ಪುತ್ರರು ವೀರಮರಣವನ್ನಪ್ಪಿದ ಮನಕಲಕುವ ಸುದ್ದಿ ತಿಳಿದಾಗ ನೊಂದುಕೊಳ್ಳುವ ಅಮೇರಿಕಾದ ಅಧ್ಯಕ್ಷ ಅಬ್ರಹಾಂ ಲಿಂಕನ್, ಆ ತಾಯಿ ಲಿಡಿಯಾ ಬಿಕ್ಸ್ಬೀಗೆ ಸಾಂತ್ವನದ ಪತ್ರ ಬರೆಯುತ್ತಾರೆ. ಇದು ಇತಿಹಾಸದಲ್ಲಿ ಬಿಕ್ಸ್ಬೀ ಪತ್ರ ಎಂದೇ ಜನಜನಿತವಾಗಿದ ಜೊತೆಗೆ ಅಬ್ರಹಾಂ ಲಿಂಕನ್ ರವರ ಅತ್ಯುತ್ತಮ ಬರಹ ಎಂದೂ ದಾಖಲಿಸಲ್ಪಟ್ಟಿದೆ. ಆ ಪತ್ರದಲ್ಲೇನಿತ್ತು? ಓದಿ:

Executive Mansion,
Washington, Nov. 21, 1864.

Dear Madam,

I have been shown in the files of the War Department a statement of the Adjutant General of Massachusetts that you are the mother of five sons who have died gloriously on the field of battle. I feel how weak and fruitless must be any word of mine which should attempt to beguile you from the grief of a loss so overwhelming. But I cannot refrain from tendering you the consolation that may be found in the thanks of the Republic they died to save. I pray that our Heavenly Father may assuage the anguish of your bereavement, and leave you only the cherished memory of the loved and lost, and the solemn pride that must be yours to have laid so costly a sacrifice upon the altar of freedom.


Yours, very sincerely and respectfully,
A. Lincoln

)


ಈಗಾಗಲೇ ಮೂರು ಮಕ್ಕಳನ್ನು ಕಳೆದುಕೊಂಡಿರುವ ತಾಯಿಗೆ ಕಡೆಯ ಕುಡಿಯೂ ಇಲ್ಲವಾಗುವುದು ಬೇಡ. ಹಾಗಾಗಿ ಅವನನ್ನು ಸೇನೆಯಿಂದ ವಾಪಸ್ಸು ಕರೆಯಿಸಿ ಮನೆಗೆ ಕಳುಹಿಸುವುದು ಒಳ್ಳೆಯದೆಂಬ ಆಲೋಚನೆ ಬರುತ್ತದೆ. ಬಿಕ್ಸ್ಬೀ ಪತ್ರವನ್ನೋದಿದ ಜನರಲ್ ಕೂಡಲೇ ಜೇಮ್ಸ್ ಫ್ರಾನ್ಸಿಸ್ ರಿಯಾನ್ ನನ್ನು ಕೂಡಲೇ ಪತ್ತೆ ಹಚ್ಚಿ ಅವರ ಮನೆಗೆ ಕಳುಹಿಸುವಂತೆ ಆದೇಶಿಸುತ್ತಾನೆ. ಒಮಾಹಾ ದಾಳಿಯ ಟ್ರೂಪಿನ ಮುಖ್ಯಸ್ಥನಾಗಿದ್ದ ಜಾನ್ ಹೆಚ್ ಮಿಲ್ಲರ್ ಗೇ ಈ ಕೆಲಸದ ಜವಾಬ್ದಾರಿ ವಹಿಸಲಾಗುತ್ತದೆ. ರಿಯಾನ್'ನ ಹೆಸರು ಬಿಟ್ಟರೆ ಬೇರಾವುದೇ ವಿಷಯ ಗೊತ್ತಿಲ್ಲ, ಆತ ಎಲ್ಲಿ ಇಳಿದ, ಹೇಗೆ ಕಾಣೆಯಾದ ಯಾವ ವಿಷಯವೂ ಗೊತ್ತಿಲ್ಲ. ಇವರೀಗ ಹೋಗಬೇಕಾದ ಜಾಗಗಳು ಯುದ್ಧದ ಕಾವಿಳಿಯದೆ ವಿಷಮ ಸ್ಥಿತಿಯಲ್ಲೇ ಇವೆ. ಹೀಗೆ ಹೆಚ್ಚು ವಿವರಗಳಿಲ್ಲದೇ ಅಪಾಯಕಾರಿ ಸ್ಥಳಗಳಲ್ಲಿ ರಿಯಾನ್'ಗಾಗಿ ಹುಡುಕುತ್ತ ಹೊರಡುವ ಮಿಲ್ಲರ್'ನ ಪಯಣ ರೋಚಕ.

ಮಿಲ್ಲರ್ ತಂಡ ಕಡೆಗೂ ರಿಯಾನ್ನನ್ನು ಹುಡುಕುವಲ್ಲಿ ಯಶಸ್ವಿಯಾಗುತ್ತದೆಯೇ?ತನ್ನ ಎಲ್ಲ ಸಹೋದರರ ಮರಣ ವಾರ್ತೆಯನ್ನು ಕೇಳಿದರೆ ರಿಯಾನ್ ಹೇಗೆ ಪ್ರತಿಕ್ರಿಯಿಸಬಹುದು? ಆ ವಿವರಗಳಿಗಾಗಿ ಚಿತ್ರ "ಸೇವಿಂಗ್ ಪ್ರೈವೇಟ್ ರಿಯಾನ್" ಚಿತ್ರವನ್ನು ನೋಡಲೇಬೇಕು.

ನಾಲ್ಕು ಆಸ್ಕರ್ ಪ್ರಶಸ್ತಿಗಳನ್ನು ಬಾಚಿಕೊಂಡ ಈ ಚಿತ್ರದ ನಿರ್ದೇಶಕ ಹಾಲಿವುಡ್ ಚಿತ್ರರಂಗದ ಮೇರುಪ್ರತಿಭೆ ಸ್ಟೀವನ್ ಸ್ಪಿಲ್ಬರ್ಗ್. 1998 ರಲ್ಲಿ ಬಿಡುಗಡೆಯಾದ ಈ ಚಿತ್ರ ಬೇರೆ ಬೇರೆ ವಿಭಾಗಗಳಲ್ಲಿ ನಾಲ್ಕು ಆಸ್ಕರ್ ಪ್ರಶಸ್ತಿಗಳನ್ನು ಬಾಚಿಕೊಂಡಿತು. ಯುದ್ಧದ ಕರಾಳತೆಯನ್ನು ಇದ್ದಂತೆಯೇ ಕಟ್ಟಿಕೊಡುವ ಈ ಚಿತ್ರ ನೋಡುಗರೆದೆಯನ್ನು ಝಿಲ್ಲೆನಿಸುತ್ತದೆ. ಇತಿಹಾಸದ ಘಟನೆಗಳು ತನ್ನ ಕಥೆಯೊಳಗೆ ಬರುತ್ತವೆಯೆಂದರೆ, ಸ್ಪಿಲ್ಬರ್ಗ್ ಆ ಘಟನೆಗಳ ವಿವರಗಳಿಗೆ ಧಕ್ಕೆಯಾಗದಂತೆ ಎಚ್ಚರವಹಿಸುತ್ತಾರೆ. ಇನ್ನು ಪಾತ್ರಗಳಿಗೆ ಜೀವ ತುಂಬಲು ಟಾಮ್ ಹ್ಯಾಂಕ್ಸ್,ಎಡ್ವರ್ಡ್ ಬರ್ನ್ಸ್, ಮ್ಯಾಟ್ ಡ್ಯಾಮನ್, ವಿನ್ ಡೀಸಲ್ ಸೇರಿದಂತೆ ಅನೇಕ ನಟರ ದಂಡೇ ಈ ಚಿತ್ರದಲ್ಲಿದೆ.

ಬರೀ ಸಿನಿಮಾ ನೋಡುವುದಷ್ಟೇ ಅಲ್ಲ. ನಂತರ ಆ ಚಿತ್ರ ನಮ್ಮನ್ನು ಕಾಡುತ್ತ ಹೋದಂತೆ ಅದರ ವಿವರಗಳನ್ನು ಹುಡುಕುತ್ತ ಹೋದರೆ ಅನೇಕ ವಿಷಯಗಳು ಬಿಚ್ಚಿಕೊಳ್ಳುತ್ತ ಹೋಗಿ ನಿರ್ದೇಶಕ ತನ್ನ ಕೃತಿಗೆ ಆ ಆಕಾರ ಕೊಡಲು ಎಷ್ಟು ಶ್ರಮ ಹಾಕಿರಬಹುದು ಎಂಬ ಅಂದಾಜು ಸಿಗುತ್ತದೆ.

"Saving Private Ryan" ಜೀವನದಲ್ಲಿ 
ಒಮ್ಮೆ ನೋಡಲೇಬೇಕಾದ ಚಿತ್ರ!

-Santhosh Kumar LM

Thursday, March 24, 2016

Room ಚಿತ್ರ









ಆತನೊಬ್ಬನಿದ್ದಾನೆ. ಅವಳನ್ನು ಅಪಹರಿಸಿ ತಂದು, ತನ್ನ ಮನೆಯ ಹಿಂಬದಿಯ ಶೆಡ್ಡಿನಲ್ಲಿ ಕೂಡಿ ಹಾಕಿ ದಿನವೂ ಲೈಂಗಿಕವಾಗಿ ಬಳಸಿಕೊಳ್ಳುವಷ್ಟು ಕ್ರೂರಿ ಆತ. ಆ ಮನೆಗೆ ಕಿಟಕಿಗಳಿಲ್ಲ. ಕೇವಲ ಅಲ್ಲಿರುವುದು ಬದುಕಲು ಬೇಕಾಗುವಷ್ಟು ಕನಿಷ್ಟ ಸೌಕರ್ಯಗಳಷ್ಟೇ. ಅಲ್ಲಿರುವ ಜಾಗದಲ್ಲೇ ದಿನನಿತ್ಯ ಕಾರ್ಯಗಳು, ಸ್ನಾನ, ಅಡಿಗೆ ಎಲ್ಲವೂ ಆಗಬೇಕು. ಚಾವಣಿಯಿಂದ ಒಳಕ್ಕೆ ಬೀಳುವ ಬೆಳಕು ಅವಳಿಗೂ ಒಂದು ಬಗೆಯ ಆಶಾಕಿರಣವೇ! ಆ ರೂಮಿಗೊಂದು ಎಲೆಕ್ಟ್ರಾನಿಕ್ ಲಾಕ್ ಇದೆ. ಅಲ್ಲಿ ಸೀಕ್ರೆಟ್ ಕೋಡ್ ಒತ್ತಿದರಷ್ಟೇ ಬಾಗಿಲು ತೆರೆಯುತ್ತದೆ. ಅದು ಅವನಿಗೆ ಮಾತ್ರ ಗೊತ್ತಿದೆ. ಒಳಗಿನಿಂದ ಎಷ್ಟೇ ಕೂಗಿದರೂ ಹೊರಗಿನವರಿಗೆ ಏನೂ ಕೇಳಿಸುವುದಿಲ್ಲ. ಆತ ರಾತ್ರಿ ಬರುತ್ತಾನೆ, ಆಹಾರಕ್ಕೆ ಒಂದಷ್ಟು ಸಾಮಾನು ಕೊಟ್ಟು ತನ್ನ ಕೆಲಸ ಮುಗಿಸಿ ಹೊರಟುಬಿಡುತ್ತಾನೆ. ಆಕೆ ಅಲ್ಲಿ ಏನೂ ಮಾಡಲಾಗದ ಅಸಹಾಯಕಿ.


ಇದು ಒಂದೆರಡು ದಿನ ಅಥವ ವಾರಗಳಲ್ಲ. ಹೀಗೆಯೇ ಬರೋಬ್ಬರಿ ಏಳು ವರ್ಷ ಕಳೆದಿದೆ. ಆಗಾಗ ಆಕೆ ಖಿನ್ನತೆಗೆ ಒಳಗಾಗುತ್ತಾಳೆ. ಅಲ್ಲೇ ಅವಳಿಗೊಂದು ಗಂಡು ಮಗುವಾಗಿದೆ. ಆಕೆಗೆ ಆ ಮಗುವಷ್ಟೇ ಪ್ರಪಂಚ. ಇದೀಗ ಆ ಮಗು ನಾಲ್ಕು ವರ್ಷ ತುಂಬಿ ಐದಕ್ಕೆ ಕಾಲಿಡುತ್ತಿದೆ. ಆತ ಬರುವ ಹೊತ್ತಿಗೆ ಆ ಮಗುವನ್ನು ಹೇಗಾದರೂ ಮಾಡಿ ವಾರ್ಡ್ರೋಬಿನೊಳಗೆ ಮಲಗಿಸಿಬಿಡುವುದು ಮತ್ತು ಅದೇ ನೆಪ ಹೇಳಿ ಆ ಮಗುವನ್ನು ಮುಟ್ಟದಂತೆ ನೋಡಿಕೊಳ್ಳುವುದು ಅವಳ ಪ್ರತಿದಿನದ ಸವಾಲು. ಆ ಮಗುವಿಗೆ ಆ ರೂಮಿನ ಹೊರಗಿನ ಜಗತ್ತಿನ ಪರಿವೆಯೇ ಇಲ್ಲ. ಟಿವಿಯ ಕಾರ್ಯಕ್ರಮ ನೋಡುತ್ತ ಅಲ್ಲಿನ ವ್ಯಕ್ತಿ ಮತ್ತು ಪರಿಸರದ ಬಗ್ಗೆ ಕೇಳುವಾಗಲೆಲ್ಲ ಆಕೆ ಮಗುವಿಗೆ ಅವೆಲ್ಲವೂ ವಾಸ್ತವವಲ್ಲ ಎಂದೇ ಹೇಳುತ್ತಿದ್ದಾಳೆ.



ಆಕೆ ದಿನ ದಿನವೂ ಹೊರಹೋಗುವ ಅವಕಾಶಕ್ಕಾಗಿ ಕಾಯುತ್ತಿದ್ದಾಳೆ. ಮಗುವಿಗೆ ಐದು ವರ್ಷವಾದಾಗ ಅವನ ಸಹಾಯವನ್ನು ಬೇಡುವ ನಿರ್ಧಾರ ಮಾಡುತ್ತಾಳೆ. ಇದೀಗ ಹೊರಪ್ರಪಂಚದ ವಾಸ್ತವವನ್ನು ಅದಕ್ಕೆ ಅರ್ಥ ಮಾಡಿಸಲು ಹೆಣಗಾಡುತ್ತಿದ್ದಾಳೆ. ಏನಾಗುತ್ತದೋ ಗೊತ್ತಿಲ್ಲ. ಇಬ್ಬರೂ ಹೊರಹೋಗುವುದಿರಲಿ. ಕಡೇ ಪಕ್ಷ ಆ ಮಗುವನ್ನಾದರೂ ಹೊರಗಿನ ಪ್ರಪಂಚಕ್ಕೆ ಕಳುಹಿಸಿ ಅದರ ಬಾಳನ್ನು ಈ ನರಕದಿಂದ ಪಾರು ಮಾಡುವುದು ಅವಳ ಉದ್ದೇಶ. ಅದರಂತೆ ಒಮ್ಮೆ ಆ ಮಗುವಿಗೆ ವಿಪರೀತ ಜ್ವರ ಬರುವಂತೆ ಮಾಡಿ ಆಸ್ಪತ್ರೆಗಾದರೂ ಕರೆದುಕೊಂಡು ಹೋಗುವಂತೆ ಅವನಿಗೆ ಹೇಳುತ್ತಾಳೆ. ಆಸ್ಪತ್ರೆಗೆ ಹೋದಾಗ ಜೋರಾಗಿ ಕೂಗಿಕೊಂಡು ಸುತ್ತಲಿನವರ ಗಮನ ಸೆಳೆದು ತಪ್ಪಿಸಿಕೋ ಎಂಬ ಬುದ್ಧಿಯನ್ನು ಆ ಮಗುವಿಗೆ ಹೇಳುತ್ತಾಳೆ. ಆದರೆ ಆತ ಮಗುವಿನ ಅನಾರೋಗ್ಯ ನೋಡಿಯೂ, ಮುಖ ಸಿಂಡರಿಸಿ ಹೋಗುವುದರೊಂದಿಗೆ ಆ ಉಪಾಯ ಹಳ್ಳ ಹಿಡಿಯುತ್ತದೆ.


ಮರುದಿನವೇ ಮತ್ತೆ ಆ ಮಗು ಚಿಕಿತ್ಸೆ ಸಿಗದ ಕಾರಣ ಕೊನೆಯುಸಿರೆಳೆಯಿತೆಂದು ನಟಿಸಿ, ಅದಕ್ಕೂ ನಟಿಸಲು ಹೇಳಿ ಅದರ ಶವಸಂಸ್ಕಾರ ಮಾಡಿ ಬಾ ಎನ್ನುವಂತೆ ಉಪಾಯ ಮಾಡುತ್ತಾಳೆ...........ಆ ರಾತ್ರಿ.......ಮಗುವಿಗೆ ಧೈರ್ಯ ಹೇಳಿ ಕಡೆಯದಾಗೊಮ್ಮೆ ಅದಕ್ಕೆ ಮುತ್ತನಿಟ್ಟು, ಧೈರ್ಯತುಂಬಿ ಕಾರ್ಪೆಟ್ಟೊಂದಕ್ಕೆ ಸುತ್ತಿದ್ದಾಳೆ......ಆ ರೂಮಿನ ಬಾಗಿಲು ಸೀಕ್ರೆಟ್ ಕೋಡ್ ಒತ್ತಿ ತೆರೆಯುತ್ತಿರುವ ಶಬ್ದವಾಗುತ್ತದೆ...... ಆತ ಒಳಬರುತ್ತಿದ್ದಾನೆ.........


ಕಥೆ ಎಷ್ಟು ರೋಚಕವೆನಿಸುತ್ತದೆಯಲ್ಲವೇ? ಹೌದು. ಇದು 2015ರಲ್ಲಿ ಬಿಡುಗಡೆಯಾದ "ರೂಮ್" ಚಿತ್ರದ ಸನ್ನಿವೇಶ. ಈ ಚಿತ್ರ ನೋಡಿದರೆ ಆ ಮಗು ಮತ್ತು ತಾಯಿಯ ಪಾತ್ರ ಮಾಡಿದ
Jacob Tremblay ಮತ್ತು Brie Larsonರನ್ನು ನಿಜವಾಗಿಯೂ ಅಭಿನಂದಿಸಬೇಕೆನಿಸುತ್ತದೆ. ಪ್ರತೀ ದೃಶ್ಯದಲ್ಲೂ ಮನಸ್ಸಿಗೆ ನಾಟುವಂತೆ ಮನೋಜ್ಞವಾಗಿ ನಟಿಸಿದ್ದಾರೆ. ಅನೇಕ ಬೇರೆ ಬೇರೆ ಪ್ರಶಸ್ತಿಗಳೊಂದಿಗೆ, ಪ್ರಮುಖವಾಗಿ Brie Larson ಈ ಚಿತ್ರದ ಅಭಿನಯಕ್ಕೆ "ಅತ್ಯುತ್ತಮ ನಟಿ" ಆಸ್ಕರ್ ಗರಿಯನ್ನು ಮುಡಿಗೇರಿಸಿಕೊಂಡಿದ್ದಾರೆ ಎಂದರೆ ಈ ಚಿತ್ರದ ಅವರ ಪಾತ್ರದ ತೂಕವನ್ನು ಗಮನಿಸಲೇಬೇಕು.


ಹಾಗಂತ ಇದು ಹಾರರ್ ಚಿತ್ರವಲ್ಲ. ಒಂದು ಚಿಕ್ಕ ಕೋಣೆಯಲ್ಲೇ ವರ್ಷಗಳಷ್ಟು ಸಮಯ ಕಳೆಯುವ ಮಗು ಹೊರಗಿನ ಪ್ರಪಂಚದ ಬಗ್ಗೆ ಅರಿವೇ ಇಲ್ಲದಿರುವಾಗಿನ ಮನಸ್ಥಿತಿ, ಮತ್ತು ಅಲ್ಲಿಂದ ಹೊರಗೆ ಬಂದಾಗ ತಾಯಿ-ಮಗ ಇಬ್ಬರೂ ಎದುರಿಸುವ ಪ್ರಪಂಚ, ಸವಾಲುಗಳು, ಮಾನಸಿಕ ಒತ್ತಡ....ಎಲ್ಲವನ್ನೂ ಮನದಟ್ಟಾಗುವಂತೆ ಅದ್ಭುತವಾಗಿ ಚಿತ್ರೀಕರಿಸಲಾಗಿದೆ. ಎಲ್ಲ ವಿವರಗಳನ್ನು ತೋರಿಸಿದ್ದರೆ ದೊಡ್ಡ ಧಾರಾವಾಹಿಯೇ ಆಗಿಬಿಡಬಹುದಾಗಿದ್ದ ಕಥೆಯ ಬೇಕಾದ ಅಂಶಗಳನ್ನಷ್ಟೇ ತೋರಿಸಿ ಬೇರೆಯದೇ Genre-ಗೆ ಸಿನಿಮಾ ಕೊಂಡುಹೋದ ನಿರ್ದೇಶಕರಿಗೆ ಹ್ಯಾಟ್ಸಾಫ್ ಹೇಳಲೇಬೇಕು.


Emma Donoghue ರವರ ಅದೇ ಹೆಸರಿನ ಕಾದಂಬರಿಯ ಕಥಾವಸ್ತುವನ್ನೇ ಇಲ್ಲಿ ಸಿನಿಮಾಗೆ ರೂಪಾಂತರಿಸಲಾಗಿದೆ. ಇಷ್ಟವಾಗುತ್ತದೆ. ಸಾಧ್ಯವಾದರೆ ನೀವೂ ಒಮ್ಮೆ ನೋಡಿ.......

"ROOM"


-ಸಂತೋಷ್ ಕುಮಾರ್ ಎಲ್.ಎಂ

Thursday, March 17, 2016

ನಾ ಓದಿದ ಪುಸ್ತಕ - ನೀಲು 2




ಹಾಡಲಾರದ, ಕುಣಿಯಲಾರದ

ನಾನು
ಕೂತು ಬಿಟ್ಟ ನಿಟ್ಟುಸಿರುಗಳೇ
ನನ್ನ ಪುಟ್ಟ ಕವನಗಳು
--ನೀಲು



ಇವತ್ತಿನ ಬೆಳ್ಳಂಬೆಳಕಲಿ
ನಿನ್ನೆಯ ನೆನಪುಗಳು
ಮತ್ತು
ನಾಳೆಯ ನಿರೀಕ್ಷೆಗಳು
ನಿನ್ನನ್ನು ನಿಗೂಢವಾಗಿ ಕೆಣಕದಿದ್ದರೆ,
ನೀನು ಕವಿಯಲ್ಲ
--ನೀಲು



ಕವನ ಕವಿಯ ಕೂಸಲ್ಲ
ಮುಗ್ಧತೆ ಹೊತ್ತು
ನೂರಾರು ವರ್ಷ
ಸಾಗಬೇಕಾಗಿರುವ
ಸಂಕೀರ್ಣ ಉನ್ಮಾದ
--ನೀಲು
--------------------------------------------------------------------


                                                        




--------------------------------------------------------------------


ಸಮಾಜದ ಹಂಗಿಗೆ ಒಳಗಾಗಿ ತನ್ನತನವನ್ನು ಬಿಟ್ಟು ಕೂರುವ ಹೆಣ್ಣುಮಗಳ ಮನಸ್ಸಿನೊಳಗಿರುವ ಜ್ವಾಲಮುಖಿಯ ಅರಿವು ನೀಲುವಿಗಿದೆ. ಅಲ್ಲಿಯೇ ಕೂತು ವಿಶಾಲ ಪ್ರಪಂಚದ ಸ್ವಾತಂತ್ರ್ಯದೊಡನೆ ಹೋಲಿಸುತ್ತ ಅವಳನ್ನು ನಾಲ್ಕು ಗೋಡೆಗಳ ಮಧ್ಯೆಯಿಂದ ಹೊರತರುವ ತುಡಿತ ನೀಲುವಿಗಿದೆ.

ನಾಗರೀಕತೆಯ ಹೆಸರಿನಲ್ಲಿ ಪ್ರಕೃತಿಯನ್ನು ಮರೆಯುತ್ತ, ಬೆಳೆಯುತ್ತಿದ್ದೇನೆಂಬ ಭ್ರಮೆಯಲ್ಲೇ ಚಿಕ್ಕವನಾಗುತ್ತ ಹೋಗುತ್ತಿರುವ ಮಾನವನ ಬುದ್ಧಿಭ್ರಮಣೆಯ ಬಗೆಗಿನ ಅನುಕಂಪ ಅನೇಕ ಕವನಗಳಲ್ಲಿದೆ. ಹಾಗೆಯೇ ಪ್ರಕೃತಿ ತನ್ನ ಪಾಡಿಗೆ ತಾನು ಮಾಡಬೇಕಾದ ಕರ್ತವ್ಯಗಳನ್ನು ಆನಂದದಿಂದ ನೇರವೇರಿಸುತ್ತ ಆ ಮೂಲಕ ಸಾರ್ಥಕ್ಯ ಅನುಭವಿಸುವುದನ್ನು ಸೂಕ್ಷ್ಮವಾಗಿ ನೋಡುವ ನೀಲು, ನಮಗೆ ಗೊತ್ತಿಲ್ಲದಂತೆಯೇ ಅತ್ತ ದಾರಿ ತೋರುತ್ತಾರೆ.

ನಾವೇನು ಹನಿಗವನ, ಚುಟುಕ, ಹನಿ, ಹಾಯ್ಕು ಅಂತ ಏನೇನು ಹೇಳುತ್ತೇವೆಯೋ ಅವೆಲ್ಲ ಪ್ರಕಾರಗಳು ಇಲ್ಲಿಯ ಅನೇಕ ಸಾಲುಗಳಲ್ಲಿ ಬಂದು ಹೋಗುತ್ತವೆ. ತಾನು ಯಾವುದರ ಬಗ್ಗೆ ಮಾತನಾಡುತ್ತಿದ್ದೇನೆ ಎಂಬ ಚೌಕಟ್ಟು ಹಾಕಿಕೊಳ್ಳದೇ ಎಲ್ಲದರತ್ತ ಕಣ್ಣು ಹಾಯಿಸುವ ವಿಶಾಲ ದೃಷ್ಟಿಕೋನ ನೀಲುವಿಗಿರುವುದು ಇಲ್ಲಿಯ ವಿಶೇಷ. ತಮಾಷೆಯನ್ನು ಗಂಭೀರವಾಗಿ, ಗಂಭೀರ ವಿಷಯಗಳನ್ನು ತಮಾಷೆಯಾಗಿ ಹೇಳುತ್ತ ಜಾಗತೀಕರಣ, ಪ್ರಕೃತಿಯೊಡನೆ ಸಂಬಂಧ, ಸಂಬಂಧಗಳ ನಡುವಿನ ಸೂಕ್ಷ್ಮ ಸಂಗತಿಗಳು, ಸ್ತ್ರೀ ಸಂವೇದನೆ, ಶಿಕ್ಷಣಕ್ಕೆ ಒತ್ತು, ಸಾಮಾಜಿಕ ಕಳಕಳಿ..ಇಂತಹ ಹಲವಾರು ವಿಷಯಗಳನ್ನು ನೇರವಾಗಿ ಮನದಟ್ಟಾಗುವಂತೆ ಹೇಳುವುದು ನೀಲುವಿಗೆ ಸಿದ್ಧಿಸಿದ ಕೌಶಲ್ಯ.

ಪ್ರಾಸಗಳ ಹಂಗಿಗೆ ಸಿಕ್ಕಿ ಒದ್ದಾಡುತ್ತಿರುವವರು ನೀಲು ಪದ್ಯವನ್ನು ಓದಲೇಬೇಕು. ಪುಸ್ತಕ ಮುಗಿಸುವಷ್ಟರಲ್ಲಿ ನೀಲುವಿನ ನಶೆಯಲ್ಲಿ ಪ್ರಾಸ ಕಣ್ಣಿಗೆ ಕಾಣಿಸದಷ್ಟು ಓಡಿ ಹೋಗಿರುತ್ತದೆ. ವಯುಕ್ತಿಕವಾಗಿ ಪ್ರಾಸವಿಲ್ಲದೇ ಕವಿತೆಯನ್ನು ಕೇವಲ ಅದರ ವಸ್ತುವಿನಿಂದಲೇ ಪರಿಣಾಮಕಾರಿಯಾಗಿ ಹೇಳಬಲ್ಲ ಸವಾಲನ್ನು ನಿಭಾಯಿಸುವುದನ್ನು ನೀಲುಕಾವ್ಯ ಹೇಳಿಕೊಟ್ಟದ್ದು ಸುಳ್ಳಲ್ಲ. ಹಾಗಾಗಿ ಇದನ್ನು ಪರಿಚಯಿಸಿದ ಗೆಳೆಯರಿಗೆ ಧನ್ಯವಾದ ಹೇಳಲೇಬೇಕು.

ಅನೇಕ ಪದ್ಯಗಳಲ್ಲಿ ಕವಿಗೆ ದಕ್ಕಿದಷ್ಟು ಸಾಕ್ಷಾತ್ಕಾರ ನಮಗೆ ಆ ಕ್ಷಣಕ್ಕೆ ಸಿಗುವುದಿಲ್ಲ ಎಂಬುದು ಓದುಗನಾಗಿ ನಾನೂ ಬೆಳೆಯಬೇಕು ಮತ್ತು ಮಾಗಬೇಕು ಎಂಬುದಕ್ಕೆ ಸಾಕ್ಷಿಯಷ್ಟೇ! ಈ ಕ್ಷಣಕ್ಕೆ ದಕ್ಕದ ಅನೇಕ ಹನಿಗಳ ಹೊಳವು ಮತ್ತೆ ಸ್ವಲ್ಪ ಹೊತ್ತಿನ ನಂತರ ಬೇರೆಯದೇ ರೀತಿಯಲ್ಲಿ ದೊರಕುವುದು ತುಟಿಯಂಚಿನಲ್ಲಿ ನಗೆಯ ಮೂಡಿಸದೇ ಇರಲಾರದು. ಅನೇಕ ವಿಷಯಗಳನ್ನು ಇದಕ್ಕಿಂತ ಸೂಕ್ಷ್ಮವಾಗಿ ಹೇಳಲು ಸಾಧ್ಯವೇ ಇಲ್ಲ ಅನಿಸುವಷ್ಟರ ಮಟ್ಟಿಗೆ ಹೆಚ್ಚೆಂದರೆ ಏಳೆಂಟು ಪದಗಳಲ್ಲಿ ಕಟ್ಟಿಕೊಡುವುದು ನೀಲು ಕಾವ್ಯದ ಹೆಗ್ಗಳಿಕೆ. ಕೆಲವು ಪದ್ಯಗಳಲ್ಲಿ ದೈಹಿಕ ಸುಖದ ಮತ್ತು ಪ್ರೇಮದ ನಡುವಿನ ವ್ಯತ್ಯಾಸಗಳನ್ನು ಸೂಕ್ಷ್ಮವಾಗಿ ಹೇಳಿದರೆ, ಇನ್ನು ಕೆಲವುಗಳಲ್ಲಿ ದೀರ್ಘ ಕಾಲದ ನಾಟಕೀಯ ಪ್ರೇಮದ ಬಗೆಗಿನ ವ್ಯಂಗ್ಯವಿದೆ.

ಪ್ರತೀ ಕವಿತೆಗಳು ಪುಟ್ಟದಾಗಿರುವುದರಿಂದ ಒಂದೇ ಬಾರಿ ಮುಗಿಸಿ ಎತ್ತಿಡದೇ ಸಮಯವಿದ್ದಾಗಲೆಲ್ಲ ಓದಬಹುದು. ಚಿಕ್ಕ ಮಕ್ಕಳು ಪೆಪ್ಪರಮೆಂಟನ್ನು ಚೀಪಿದಂತೆಯೇ ನೀಲುಕಾವ್ಯವನ್ನು ಒಂದೊಂದಾಗಿ ಅಸ್ವಾದಿಸಬಹುದು. ಪ್ರಕೃತಿಯಾಗಿ, ಗಂಡನಾಗಿ, ಹೆಂಡತಿಯಾಗಿ, ಯುವಕನಾಗಿ, ಪೋಲಿಯಾಗಿ, ತುಂಟನಾಗಿ, ಮಗುವಾಗಿ, ಪ್ರಾಣಿ ಪಕ್ಷಿಗಳಾಗಿ ಎಲ್ಲ ಭಾವಗಳನ್ನು ಅಕ್ಷರಗಳನ್ನಾಗಿಸುತ್ತ ನಗಿಸುತ್ತ ತನ್ನೊಡನೆ ಕೊಂಡೊಯ್ಯುವ ನೀಲುವಿನತ್ತ ಪ್ರೀತಿ ಒಮ್ಮೆಯಾದರೂ ಹುಟ್ಟದೆ ಇರಲಾರದು.

                                                                                                                   -ಸಂತು
----------------------------------



ನೀಲು ಕಾವ್ಯದ ಒಂದಷ್ಟು ಝಲಕುಗಳು ನಿಮಗಾಗಿ...............


ಹಣ್ಣಿನೊಂದಿಗೆ ಬೀಜ ನುಂಗಿದ
ಹಕ್ಕಿ
ಹಿಕ್ಕೆ ಹಾಕಿ ಹಾರಿ ಹೋಗಿ
ಬೀಜ ಗಿಡವಾದ ಬಗ್ಗೆ
ಹೆಮ್ಮೆಪಡದಿರುವಂತೆ
ನಮ್ಮ ಕ್ರಿಯೆ ಇರಲಿ
-ನೀಲು


ತನ್ನ ಕುಟುಂಬದ
ಮೂರು ಹೊಟ್ಟೆಗಳಿಗಾಗಿ
ರಾಶಿ ಬತ್ತವ ಬೆಳೆದ
ರೈತನ ನೋಡಿ
ಅಚ್ಚರಿಪಡುತ್ತ ಕೂತ
ಹಕ್ಕಿ
--ನೀಲು

ತಾಯಿಯ ಹೊಟ್ಟೆಯ
ಬೆಚ್ಚನೆಯ ಪ್ರೀತಿಯ ತೊರೆದು
ಜಗತ್ತಿನ ಸೆರೆಮನೆಗೆ ಬರುವ
ಮಗು, ಪಾಪ ಅಳುವುದು
--ನೀಲು


ಅನ್ನ ಬಟ್ಟೆಗೆ ಪರದಾಡುವ
ಬಡವರು ಕೊಂಡುಕೊಂಡ
ಸರಳ ಟಿ.ವಿಯ
ಗರುಕೆ ಕೂಡ
ಅವರಿಗೆ ಮೋಹಕ
--ನೀಲು

ಬಟ್ಟೆ ಬದಲಿಸುವಾಗ
ಕ್ಷಣ ಬೆತ್ತಲಾದ
ಯಜಮಾನನನ್ನು
ನಾಯಿ
ಅಪರಿಚಿತನ ನೋಡುವಂತೆ
ನೋಡಿತು
--ನೀಲು

ಅವಳ ಆಕರ್ಷಕ ಯೌವನ
ತಾಯಿಯಲ್ಲಿ ಆತಂಕ
ಅಜ್ಜಿಯಲ್ಲಿ ನಿಟ್ಟುಸಿರು
ಮತ್ತು ಇಡೀ ಕೇರಿಯಲ್ಲಿ
ಉಲ್ಲಾಸ ಮೂಡಿಸಿತು
--ನೀಲು

ಮೊನ್ನೆ ಓದಿದ ಕತೆಯೊಂದರಲ್ಲಿ
ಅಪರಿಚಿತನೊಬ್ಬ
ಅಪರಿಚಿತೆಯ
ತುಂಬು ಎದೆಯ ಮೇಲೆ ಕ್ಷಣಕಾಲ
ಇಡೀ ಜೀವನವ ಸ್ಪಂದಿಸಿದ್ದು
ಮರೆಯಲಾಗುತ್ತಿಲ್ಲ.
--ನೀಲು


ಬಟ್ಟೆ ತೊಟ್ಟ ನಾವು
ಅರಣ್ಯದ ಚಿಗರಿ ಮರಿಗೆ
ಎಷ್ಟು ಹಾಸ್ಯಾಸ್ಪದವಾಗಿ
ಕಾಣಬಹುದೆಂದು
ಊಹಿಸಿದ್ದೀರಾ?
--ನೀಲು



ಇವತ್ತು
ಸರ್ಕಾರ ಬಿತ್ತಿಬೆಳೆಯುವುದನ್ನು
ನಿರೀಕ್ಷಿಸುವ ಮನುಷ್ಯ
ನಾಳೆ
ಹುಲಿಸಿಂಹಗಳಿಂದ
ಶಾಸ್ತ್ರೀಯ ಸಂಗೀತ ಬಯಸುವವ
--ನೀಲು



ಬೆಟ್ಟ ಕಣಿವೆಗಳನ್ನು ಕಡಿದು
ಹೊಲ ಮಾಡಿದವನು
ಕೊನೆಗೂ ಆನಂದಗೊಂಡದ್ದು
ಕಾಡಿನ ಹಕ್ಕಿಗಳ
ಇಂಚರದಿಂದ
--ನೀಲು



ಕೊಂಬೆಯ ಮೇಲಿನ ಕಾಜಾಣದ
ಹಾಡುಗಳನ್ನು
ಧ್ವನಿ ಮುದ್ರಿಸಿಕೊಂಡು
ಮಾರಾಟ ಮಾಡುವವನೇ
ನಿಜವಾದ ಸಮಯಸಾಧಕ
--ನೀಲು



ದನ ಕಾಯುವ ಹುಡುಗ
ಪ್ರೇಮ ಕವನವ
ಅಂಚೆಗೆ ಹಾಕಿದ ದಿವಸ
ಇಲ್ಲಿ
ಅಕ್ಷರತೆ ಇದೆ ಅನ್ನಬಹುದು
--ನೀಲು



ಹೆಂಡತಿ ನೆರೆಮನೆಯ
ಅಂಗಿಗೆ
ಹೊಲಿಗೆ ಹಾಕುತ್ತಿದ್ದಾಗ
ಆತ ತನ್ನ
ಶ್ರೇಷ್ಠ ಕವನ ರಚಿಸಿದ
--ನೀಲು



ಕುಗ್ರಾಮದ ಏಕಾಂಗಿ ಕೋಮಲೆ
ಮತಗಟ್ಟೆಗೆ ಹೋಗಿ
ನೀಡಿದ ಮತ
ಅವಳ ನಿಟ್ಟುಸಿರಲ್ಲಿ
ಪರ್ಯಾವಸಾನಗೊಂಡರೆ,
ಅದು ಭ್ರಷ್ಟ ರಾಜಕೀಯ
--ನೀಲು



ಒಮ್ಮೆ ತಲೆ ಹಾರಿದರೆ
ಮತ್ತೆ ಚಿಗುರದ ತೆಂಗು
ಪ್ರೇಮ;
ಕಾಮ ನುಗ್ಗೆಯ ಮರದಂತೆ
ಕಡಿದಷ್ಟೂ ಚಿಗುರು
--ನೀಲು

Saturday, March 8, 2014

ಸರ್…. ಡ್ರಾಪ್ ಪ್ಲೀಸ್!


                                                                                                                                                                               (ಚಿತ್ರಕೃಪೆ:Google)
(http://www.panjumagazine.com/?p=6516)



ಒಂದು 

ಸುಮಾರು 15 ವರ್ಷಗಳ ಹಿಂದೆ ಮೈಸೂರಿನಲ್ಲಿ PUC ಓದುತ್ತಿದ್ದ ಸಂದರ್ಭ. ಅಪ್ಪ ನನಗೆ ಕೊಡಿಸಿದ ಸೆಕೆಂಡ್ ಹ್ಯಾಂಡ್ ಬೈಸಿಕಲ್ಲು ಮುರಿದು ಮೂಲೆ ಸೇರಿತ್ತು. ಅದರ ರಿಪೇರಿಗೂ ನೂರು ರೂಪಾಯಿ ಇಲ್ಲದ ಪರಿಸ್ಥಿತಿ. ಕಾಲೇಜು ಶುರುವಾಗುತ್ತಿದ್ದುದೇ ಒಂಭತ್ತು ಗಂಟೆಗೆ. ಮೊದಲ ಪಿರಿಯಡ್ ಮುಂಗೋಪಿ ಮತ್ತು ಮಹಾಸಿಡುಕ ಪ್ರೊಫೆಸರ್ ಸಾಂಬಶಿವಯ್ಯನವರದ್ದು. ಆದ್ದರಿಂದ ಅವರು ಕ್ಲಾಸಿಗೆ ಪ್ರವೇಶವಾಗುವ ಮೊದಲೇ ಎಲ್ಲರೂ ಒಳಗಿರಬೇಕಿತ್ತು. ಲೇಟಾಗಿ ಬಂದವರಿಗೆ ಮರದ ಸ್ಕೇಲಿನ ಬಿಸಿಯೇಟು. ಬರದೆ ಹೋದವರ ಮನೆಗೆ absence report. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಪ್ರತಿ ವಿದ್ಯಾರ್ಥಿಗೂ ಹೇಗಾದರೂ ಮಾಡಿ ಅವರ ಪಿರಿಯಡ್ ಶುರುವಾಗುವ ಮೊದಲೇ ಕಾಲೇಜು ತಲುಪುವ ಬಯಕೆ.

ನನಗೆ ಸೈಕಲ್ಲು ಕೈ ಕೊಟ್ಟಿದ್ದರಿಂದ ಬೇಗನೆ ಎದ್ದು ಆದಷ್ಟು ಬೇಗ ರೆಡಿಯಾಗುತ್ತಿದ್ದೆ. ರಾತ್ರಿ ಉಳಿದ ಅನ್ನವಿದ್ದರೆ ಮೊಸರು ಕಲೆಸಿ ಬೇಗ ಬೇಗ ತಿಂದು ಹೊರಡುತ್ತಿದ್ದೆ. ಇಲ್ಲದಿದ್ದರೆ ಅದೂ ಇಲ್ಲ, ಬೇಗ ತಿಂಡಿ ಮಾಡೋಕೆ ಸಾಧ್ಯವಿಲ್ಲದರಿಂದ ಎಷ್ಟೋ ಸಲ ಉಪವಾಸದಲ್ಲೇ ಕಾಲೇಜಿಗೆ ಓಡಿದ್ದೇನೆ. ವಾಸವಿದ್ದ ಬಾಡಿಗೆ ಮನೆಯಿಂದ ನಾ ಓದುತ್ತಿದ್ದ JSS ಕಾಲೇಜು ಸುಮಾರು ಐದು ಕಿಲೋಮೀಟರ್ ದೂರ. ಸಿಟಿ ಬಸ್ಸಿನಲ್ಲಿ ಹೋಗೋಣವೆಂದರೆ ಅದಕ್ಕೆ ಕೊಡಲೂ ಕಾಸಿರಲಿಲ್ಲ. ದೇವರಿಗೆ ಆ ವಿಷಯದಲ್ಲಂತೂ ನಾನು ಕೃತಜ್ಞ. ಆತ ಆ ದಿನಗಳಲ್ಲಿ ನನಗೆ ಕೊಟ್ಟಿದ್ದು ಬಡತನವಷ್ಟೇ ಹೊರತು ಸೋಮಾರಿತನವಲ್ಲ. ಬ್ಯಾಗು ಬೆನ್ನಿಗೇರಿಸಿ ಕಾಲೇಜಿಗೆ ನಡಿಗೆಯಲ್ಲಿ ಹೊರಟೆನೆಂದರೆ ಕಷ್ಟವನ್ನು ಮಾತ್ರ ಯಾವ ಕ್ಷಣದಲ್ಲಿಯೂ ಶಪಿಸಲಿಲ್ಲ. 

ಒಂದಷ್ಟು ದೂರ ನಡೆಯುವುದು, ಸುಸ್ತಾದಾಗ ನಿಂತು ಆ ರಸ್ತೆಯಲ್ಲಿ ಸಾಗುವ ದ್ವಿಚಕ್ರ ವಾಹನಗಳತ್ತ ನೋಡುವುದು. ಅವರ ದೃಷ್ಟಿ ತಾಕಿತೆಂದ ತಕ್ಷಣ "ಸರ್, ಡ್ರಾಪ್ ಪ್ಲೀಸ್" ಅಂತ ದೈನ್ಯ ಭಾವದಿಂದ ಕೇಳುವುದು. ಈ ಒಂದು ವಿಚಾರದಲ್ಲಿ ನನಗೆ ಬೇಡುವ ಭಿಕ್ಷುಕರ ಅವಸ್ಥೆ ಸಾವಿರ ಪಟ್ಟು ಅರ್ಥವಾಗುತ್ತದೆ. ದೇವರು ಆ ವಾಹನದವರಿಗೆ ಆ ಕ್ಷಣ ಸರಿಯಾದ ಬುದ್ಧಿ ಕೊಟ್ಟಿದ್ದರೆ ಆ ಕ್ಷಣ ನನ್ನನ್ನು ಹತ್ತಿಸಿಕೊಳ್ಳುತ್ತಿದ್ದರು. ಕೇವಲ ಆ ರಸ್ತೆಯ ಕೊನೆಯವರೆಗಾದರೂ ಸರಿಯೇ, ಡ್ರಾಪ್ ತೆಗೆದುಕೊಳ್ಳುತ್ತಿದ್ದೆ. ಮತ್ತೆ ಅಲ್ಲಿಂದ ಒಂದಷ್ಟು ದೂರ ನಡೆಯುವುದು, ಮತ್ತೆ ಇನ್ನೊಂದು ದ್ವಿಚಕ್ರ ವಾಹನದ ಡ್ರಾಪ್ ಗಾಗಿ ಕಾಯುವುದು. ಇದೇ ಮುಂದುವರೆಯುತ್ತಿತ್ತು. ಬಹಳಷ್ಟು ಬಾರಿ ಡ್ರಾಪ್ ಕೇಳಿದ ಮೇಲೆಯೂ ಅವರು ಅದೇ ರಸ್ತೆಯಲ್ಲೇ ಹೋದರೂ ನನ್ನ ಬಗ್ಗೆ ತಿರಸ್ಕಾರದ ನೋಟ ಬೀರಿ ಮುಂದೆ ಸಾಗುತ್ತಿದ್ದರು. ನಡೆದು ಸುಸ್ತಾಗಿದ್ದ ನನಗೆ ತಡೆದುಕೊಳ್ಳಲಾಗದೆ ನಿಜಕ್ಕೂ ಆ ಕ್ಷಣ ಕಣ್ಣಲ್ಲಿ ನೀರು ಜಿನುಗಿಸುತ್ತಿತ್ತು.

ಮತ್ತೆ ಆ ತಿರಸ್ಕಾರ "ಯಾವೋನ್ನೂ ಡ್ರಾಪ್ ಕೇಳಲ್ಲ" ಅಂತ ಹೇಳಿಸುತ್ತಾ ಇನ್ನಷ್ಟು ದೂರ ನಡೆಯುವಂತೆ ಪ್ರೇರೇಪಿಸುತ್ತಿತ್ತು. ಎಷ್ಟೇ ಆದರೂ, "ಬಡವನ ಕೋಪ ದವಡೆಗೆ ಮೂಲ" ನೋಡಿ. ಸ್ವಲ್ಪ ದೂರ ನಡೆದು ಸುಸ್ತಾದ ಮೇಲೆ ಆ ಮುಂಚಿನ ದುಃಖ ಅವಮಾನಗಳೆಲ್ಲ ಕರಗಿ ಮತ್ತೆ ಇನ್ಯಾವುದೋ ದ್ವಿಚಕ್ರ ವಾಹನಕ್ಕೆ ಡ್ರಾಪ್ ಅಂತ ಕೈಯೊಡ್ದುತ್ತಿದ್ದೆ. ಇದೇ ಪ್ರಯೋಗ ನಾನು ಕಾಲೇಜು ಮುಟ್ಟುವತನಕ ನಡೆಯುತ್ತಿತ್ತು. ಆ ಮೈಸೂರಿನ ದಿನಗಳಲ್ಲಿ ಸಾವಿರ ಬಾರಿ ಆ ಬಗೆಯ ಅವಮಾನಗಳನ್ನು ದುಃಖ ನುಂಗುವುದನ್ನು ಕಲಿತಿದ್ದೇನೆ. ಯಾರೋ ನಮ್ಮ JSS ಕಾಲೇಜಿನ ಹುಡುಗನೇ ಸಿಕ್ಕಿ ಕಾಲೇಜಿನವರೆಗೆ ಡ್ರಾಪ್ ಕೊಟ್ಟರಂತೂ ಆ ದಿನ ನನಗೆ ಸಿಕ್ಕ ದೇವರುಗಳಿಗೆಲ್ಲ ಕೈಮುಗಿಯುತ್ತಿದ್ದೆ. ಇದೇ ಡ್ರಾಪ್ ಕಥೆ ಮಧ್ಯಾಹ್ನ ಕಾಲೇಜಿನಿಂದ ಮನೆ ಸೇರುವಾಗಲೂ ನಡೆಯುತ್ತಿತ್ತು. ಪುಣ್ಯಕ್ಕೆ ಕಾಲೇಜಿನಿಂದ ಮನೆಗೆ ಹೊರಡುವ ನನ್ನ ಸಹಪಾಠಿಗಳು ಯಾರಾದರೊಬ್ಬರು ನನ್ನನ್ನು ಸಾಧ್ಯವಾದಷ್ಟು ದೂರ ಡ್ರಾಪ್ ಮಾಡುತ್ತಿದ್ದರು.ಅದ್ಯಾವ ಜನುಮದಲ್ಲಿ ನಮ್ಮ ಋಣವಿತ್ತೋ, ಹಾಗೆ ಡ್ರಾಪ್ ಕೊಟ್ಟವರಿಗೆಲ್ಲ ಪ್ರತಿಯಾಗಿ ಹೇಳಿದ್ದು ಬರೀ "ಥ್ಯಾಂಕ್ಸ್ " ಅಂದಿದ್ದೊಂದೇ.

ಸೆಕೆಂಡ್ PUCಯ ದಿನಗಳಲ್ಲಿ ಬೆಳಿಗ್ಗೆಯೇ ನನ್ನ ಲೆಕ್ಚರರ್ ಬಳಿ ಟ್ಯೂಶನ್ ಗೆಂದು ಹೋದರೆ ಅವರೇ ಅಲ್ಲಿಂದ ಕಾಲೇಜಿನವರೆಗೆ ಬಿಡುತ್ತಿದ್ದರು. ಕಾಲೇಜು ತಲುಪಲು ಅದೆಷ್ಟು ದಾರಿಗಳೋ! ಕಡೆಗೂ ಮತ್ತೆ ನನಗೆ ಚಿಂತೆ ಶುರುವಾಯಿತು. ಪರೀಕ್ಷೆಯ ದಿನಗಳಲ್ಲಿ ಪರೀಕ್ಷೆಯ ಒತ್ತಡದ ನಡುವೆ ಬೆಳಿಗ್ಗೆ ಹೇಗೆ ಕಾಲೇಜಿಗೆ ನಡೆದು ಹೋಗುವುದು. ಆ ಚಿಂತೆಯಲ್ಲಿದ್ದಾಗ ನನಗೆ ಟ್ಯೂಶನ್ನಿನಲ್ಲಿ ಪರಿಚಯವಾದ ಗೆಳೆಯನೆಂದರೆ ಪ್ರಶಾಂತ್. ಕಾಲೇಜು ಒಂದೇ ಆದರೂ ಬೇರೆ ವಿಭಾಗದಲ್ಲಿದ್ದ. ಆತ ನನ್ನ ಅವಸ್ಥೆ ನೋಡಲಾರದೇ ತಾನೇ ಬಂದು ಆತನ ದ್ವಿಚಕ್ರ ವಾಹನದಲ್ಲಿ ಕರೆದೊಯ್ದು ಮತ್ತು ಪರೀಕ್ಷೆ ಮುಗಿದ ಮೇಲೆ ಮನೆಯವರೆಗೂ ತಲುಪಿಸುತ್ತಿದ್ದ. ವಿಚಿತ್ರ ನೋಡಿ, ಬಡವರಿಗೆ ಹೆಚ್ಚು ಆಪ್ತವಾಗುವುದೂ ಕೂಡ ಬಡವರೇ! ಆತನೂ ಅಷ್ಟೊಂದು ಶ್ರೀಮಂತ ಕುಟುಂಬದಿಂದ ಬಂದಿರಲಿಲ್ಲ. ಪೆಟ್ರೋಲ್ ಗೂ ಸೇರಿ ಸ್ವಲ್ಪವಷ್ಟೇ ಆತನಿಗೆ ಪಾಕೆಟ್-ಮನಿ ಅಂತ ಸಿಗುತ್ತಿತ್ತು. ಅವನ ಮನೆಯ ರೂಟ್ ಇದ್ದದ್ದೇ ಬೇರೆ ಕಡೆ. ಆದರೂ ನನ್ನನ್ನು ಕರೆದೊಯ್ಯುವ ಸಲುವಾಗಿ ಬೇಗನೇ ಮನೆಯಿಂದ ಹೊರಟು ನನ್ನನ್ನು ಕಾಲೇಜು ತಲುಪಿಸುತ್ತಿದ್ದ. 

ಸಮಯ ಹಾಗೇ ಇರುವುದಿಲ್ಲ ನೋಡಿ. ಒಂದಷ್ಟು ವರ್ಷಗಳ ಶ್ರಮದ ನಂತರ ನಾನು ಬೆಂಗಳೂರಿನ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆದೆ. ಡ್ರಾಪ್ ಕೇಳುತ್ತಿದ್ದವನ ಮನೆಯಲ್ಲೀಗ ಒಂದು ಪುಟ್ಟ ಕಾರಿದೆ. ಈಗಲೂ ಮನೆಯವರೊಂದಿಗೆ ಎಲ್ಲಾದರೂ ಹೊರಗೆ ಹೋಗುವಾಗ ಯಾರಾದರೂ "ಸರ್ …ಡ್ರಾಪ್ ಪ್ಲೀಸ್" ಎಂದಾಗ ನನಗರಿವಿಲ್ಲದಂತೆಯೇ ನನ್ನ ಕಾಲು ಬ್ರೇಕ್ ಅದುಮಿರುತ್ತದೆ. 

ಎರಡು


ರಾತ್ರಿ ಒಂಭತ್ತರ ಸಮಯವಿರಬಹುದು. ಬೆಂಗಳೂರಿನ ಹೊರವಲಯದಲ್ಲಿ ಆ ಡ್ರೈವರ್ ತನ್ನ ಕ್ಯಾಬ್ ಚಲಿಸುತ್ತಿದ್ದಾನೆ. ಅಲ್ಲೇ ರಸ್ತೆ ಮಧ್ಯದಲ್ಲಿ ಗರ್ಭಿಣಿ ಹೆಂಗಸೊಬ್ಬಳು ಕೈ ಹಾಕಿ "ಸರ್, ಡ್ರಾಪ್ ಪ್ಲೀಸ್" ಎನ್ನುತ್ತಾಳೆ. ಹತ್ತಿಸಿಕೊಂಡ ಆತ ಮುಂದೆ ಚಲಿಸುತ್ತಾನೆ. ಒಂದರ್ಧ ಮೈಲಿ ಹೋಗಿರಬಹುದು. ಒಂದು ಹೆಚ್ಚು ಜನಸಂದಣಿಯಿಲ್ಲದ ಪ್ರದೇಶ ಬಂದಾಗ ಆ ಹೆಂಗಸು ತನ್ನ ಹೊಟ್ಟೆಗೆ ಸಿಕ್ಕಿಸಿಕೊಂಡಿದ್ದ ಬಟ್ಟೆ ಗಂಟನ್ನು ಹೊರತೆಗೆಯುತ್ತಾಳೆ. ಆಕೆ ಗರ್ಭಿಣಿಯಲ್ಲ! ಹಾಗೆ ನಟಿಸುತ್ತಿದ್ದಳು. ಯೋಚಿಸುವಷ್ಟರಲ್ಲಿ ಆಕೆಯ ಕೈಯಲ್ಲಿ ಚಾಕು ಪ್ರತ್ಯಕ್ಷವಾಗಿದೆ. ಅದರಿಂದ ಆ ಡ್ರೈವರ್-ನ ಕುತ್ತಿಗೆಗೆ ಒತ್ತಿ ಹಿಡಿದು "ನಿಲ್ಲಿಸು" ಅಂತ ಅರಚುತ್ತಾಳೆ. ಆತ ನಿಲ್ಲಿಸಿದಾಕ್ಷಣ ಅಲ್ಲೇ ಅಡಗಿ ಕುಳಿತಿದ್ದ ಆಕೆಯ ಕಡೆಯವರು ಇವನ ವಾಹನನನ್ನು ಸುತ್ತುವರೆದು ಪ್ರಾಣ ಬೆದರಿಕೆ ಹಾಕಿ ಇವನಲ್ಲಿದ್ದ ಹಣ, ಮೊಬೈಲು ಎಲ್ಲವನ್ನೂ ದೋಚಿ ಪರಾರಿಯಾಗುತ್ತಾರೆ. ಜರ್ಜರಿತನಾದ ಆ ಡ್ರೈವರ್ ಇನ್ನು ಮುಂದೆ ಜೀವನದಲ್ಲಿ ಯಾರು ಸಾಯುತ್ತಿದ್ದರೂ ಡ್ರಾಪ್ ಕೊಡುವುದಿಲ್ಲ ಅಂತ ನಿರ್ಧಾರ ಮಾಡುತ್ತಾನೆ.
ದಿನಪತ್ರಿಕೆಗಳಲ್ಲಿ ಈ ರೀತಿ ಗರ್ಭಿಣಿಯರ, ರೋಗಿಗಳ ಸೋಗಿನಲ್ಲಿ ಅಥವಾ ಸುಂದರ ಹುಡುಗಿಯರ ಡ್ರಾಪ್ ಕೇಳಲೆಂದು ನಿಲ್ಲಿಸಿ ಡ್ರಾಪ್ ಕೊಟ್ಟವರನ್ನು ದೋಚುವ ಸುದ್ದಿಗಳನ್ನು ಓದುತ್ತಿರುತ್ತೇವೆ. ಹಾಗಾಗಿ ಕಾಲ ಬದಲಾಗಿದೆ, ಯಾರಾದರೂ "ಸರ್ …ಡ್ರಾಪ್ ಪ್ಲೀಸ್"ಎಂದಾಗ ಮನಸ್ಸು ಕೇವಲ ನಮ್ಮ ಸುರಕ್ಷತೆಯ ಬಗ್ಗೆ ಯೋಚಿಸುತ್ತದೆ ಹೊರತು ಡ್ರಾಪ್ ಕೇಳಿದವನ ಪರಿಸ್ಥಿತಿಯ ಬಗ್ಗೆ ಅಲ್ಲ. ಯಾರೋ ಮಾಡುವ ತಪ್ಪಿಗೆ ಇನ್ಯಾರೋ ಬೆಲೆ ತೆರುವುದೆಂದರೆ ಇದೇ ಅಲ್ಲವೇ?

ಮೂರು 


ಬದಲಾದ ಈ ಮನಸ್ಥಿತಿಯ ಬಗ್ಗೆ ಯೋಚಿಸುತ್ತಾ ಮೊನ್ನೆ ಮೊನ್ನೆ ನನ್ನ ವಿವಾಹ ವಾರ್ಷಿಕೋತ್ಸವದ ದಿನ ಊಟಿಯಿಂದ ಮೈಸೂರಿಗೆ ಪ್ರಯಾಣ ಬೆಳೆಸಿದ್ದೆವು. ಮಾರ್ಗ ಮಧ್ಯೆ ಗುಂಡ್ಲುಪೇಟೆಗೆ ಇನ್ನೇನು ಹದಿನೈದು ಕಿಲೋಮೀಟರ್ ಇರಬೇಕಾದರೆ ಭಾರದ ಬ್ಯಾಗು ಹೊತ್ತ ಒಂದಷ್ಟು ಸರ್ಕಾರಿ ಶಾಲೆಯ ಹುಡುಗರು ಬಸ್ಸಿಗೆ ಕಾಯುತ್ತಾ ಮಧ್ಯೆ ಬರುವ ವಾಹನಗಳಿಗೆ ಕೈ ತೋರಿಸಿ "ಡ್ರಾಪ್ ಸಾ" ಅಂತ ಬೇಡುತ್ತಿದ್ದರು. 
ನಿಲ್ಲಿಸಿ ನಾಲ್ಕೈದು ಚಿಕ್ಕ ಮಕ್ಕಳನ್ನು ಹತ್ತಿಸಿಕೊಂಡೆ. ಓಡಿಸುತ್ತಿರುವಾಗ ಹಿಂದೆ ಆ ಮಕ್ಕಳ ಮಾತು ಕೇಳಿಸುತ್ತಿತ್ತು "ಸೂಪರ್ ಕಲಾ, ಇವತ್ತು ಇಸ್ಕೂಲ್ಗೆ ಬೇಗನೇ ಸೇರ್ಕಬೋದು. ಮೊದುಲ್ನೆ ಸರ್ತಿ ಕಾರು ಸಿಕ್ತು, ಎಷ್ಟು ಚೆಂದಾಗದೆ ಅಲ್ವಾ?" ಹೀಗೆ ಮಾತನಾಡುತ್ತ ಪಿಳಿಪಿಳಿ ಕಣ್ಣು ಬಿಡುತ್ತ ಸುತ್ತಲಿನ ಪರಿಸರವನ್ನು ಮತ್ತು ಆ ಕಾರಿನ ಪ್ರಯಾಣವನ್ನು ಆನಂದಿಸುತ್ತಿದ್ದರು. ಇಳಿಯುವಾಗ ನನ್ನೆಡೆಗೆ ಹಲ್ಲು ಕಿರಿಯುತ್ತಾ "ಟ್ಯಾಂಕ್ಸು ಸಾ" ಎಂದವರ ಮುಖದಲ್ಲಿ ಖುಷಿಯಿತ್ತು.

ನನ್ನ ಮುಖದಲ್ಲಿಯೂ…

ನಿಮ್ಮವನು
ಸಂತು.

Tuesday, November 19, 2013

ಪಟಾಕಿ

("ಪಂಜು"ವಿನಲ್ಲಿ ಪ್ರಕಟವಾದ ನನ್ನ ಸಣ್ಣ ಕಥೆ )
(ಚಿತ್ರಕೃಪೆ:Google)
ಅದು ಬೃಹದಾಕಾರವಾಗಿ ಬೆಳೆದ ನಗರದ ಮೂಲೆಯಲ್ಲಿ, ಇನ್ನೂ ತಲೆಯೆತ್ತಿ ನಿಲ್ಲಲೂ ಕಷ್ಟಪಡುತ್ತಿರುವ ಒಂದು ಬಡವರ್ಗದವರ ಏರಿಯಾ. ನಾಲ್ಕು ಗಂಟೆಗೆಲ್ಲ ಎದ್ದು ಕೂಲಿಗೆ ಹೊರಡುವ ಶ್ರಮಜೀವಿಗಳು ಮತ್ತೆ ವಾಪಸ್ಸು ಬರುವುದೇ ಸಂಜೆ ಸೂರ್ಯ ಮುಳುಗುವ ಹೊತ್ತಿಗೆ.

ಮನೆಯೊಳಗೆ ಅಜ್ಜಿಯ ಕೈತುತ್ತು ತಿಂದು ಮಲಗಿದ ಪುಟ್ಟಿ ದೀಪಳಿಗೆ ನಿದ್ರೆ ಬರುತ್ತಿಲ್ಲ. ಅಜ್ಜಿ ನಾಳೆಯ ದಿನ ದೀಪಾವಳಿ ಅಂತ ಹೇಳಿದ್ದಾಳೆ. ಅಪ್ಪ ಹುಟ್ಟಿದಾಗಿನಿಂದ ಇಲ್ಲಿಯವರೆಗೆ ಯಾವತ್ತಿಗೂ ಪಟಾಕಿ ತರುವುದನ್ನು ಮರೆತಿಲ್ಲ. ಯಾವುದಕ್ಕೂ ದುಡ್ಡಿಲ್ಲದಿದ್ದರೂ ಪ್ರತೀ ತಿಂಗಳು ಪಟಾಕಿಗೆಂದೇ ಇಂತಿಷ್ಟು ಅಂತ ಒಂದಷ್ಟು ಚಿಲ್ಲರೆ ಎತ್ತಿಡುತ್ತಿದ್ದ.. ಅಲ್ಲೆಲ್ಲೂ ಪಟಾಕಿ ಮಾರುವ ಅಂಗಡಿಗಳಿರಲಿಲ್ಲ. ಹಬ್ಬ ಶುರುವಾಗುವ ಒಂದು ವಾರದ ಮುಂಚೆಯೇ ಅಪ್ಪ ದೂರದ ಮಾರುಕಟ್ಟೆಗೆ ಹೋಗಿ ಪಟಾಕಿಯನ್ನು ತರುತ್ತಿದ್ದ. ಒಂದು ದಿನ ಹಬ್ಬ ಇರುವಾಗಲೇ ಅಡಿಗೆಯಾದ ಮೇಲೆ ಒಲೆಯಿಂದ ಕೆಂಡವೆಲ್ಲ ತಗೆದು ಆ ಪಟಾಕಿಯ ಪೊಟ್ಟಣವನ್ನು ಇನ್ನೂ ಬಿಸಿಯಿರುತ್ತಿದ್ದ ಅ ಒಲೆಯ ಪಕ್ಕದಲ್ಲಿಟ್ಟು ಬೆಚ್ಚಗೆ ಮಾಡಿಕೊಳ್ಳುತ್ತಿದ್ದರು. ಇದರಿಂದಾಗಿ ಬಹಳಷ್ಟು ಪಟಾಕಿಗಳು ಟುಸ್ ಆಗುತ್ತಿರಲಿಲ್ಲ.
ಪುಟ್ಟಿಯಂತೂ ಹಬ್ಬದ ದಿನ ಅದೆಷ್ಟು ಬೇಗ ಸಂಜೆಯಾಗುವುದೋ ಅಂತ ಕಾಯುತ್ತಿದ್ದಳು. ಅಂದು ಆಕೆಗೆ ಊಟವೇ ಬೇಡ. ಸಂಜೆಯಾದೊಡನೆ ಅಪ್ಪನೊಂದಿಗೆ ಅಂಗಳದಲ್ಲಿ ಪಟಾಕಿ ಸಿಡಿಸಲು ತಯಾರಿ ನಡೆಯುತ್ತಿತ್ತು. ಪೊಟ್ಟಣದೊಳಗಿಂದ ಪಟಾಕಿಯನ್ನು ಒಂದೊಂದಾಗಿ ಅಪ್ಪ ದೀಪಳ ಕೈಗಿಡುತ್ತಿದ್ದ. ಗಂಧದಕಡ್ಡಿಯೊಂದನ್ನು ಹಚ್ಚಿ ಅಂಗಳದಲ್ಲಿ ಪಟಾಕಿಯ ಬತ್ತಿಗೆ ಕಿಡಿ ಸೋಕಿಸಿ ಓಡಿ ಬರುತ್ತಿದ್ದಳು. ಪಟಾಕಿ ಸಿಡಿದ ಖುಷಿಗೆ ಅಪ್ಪನನ್ನು ಅಪ್ಪಿ ಮುದ್ದಾಡುತ್ತಿದ್ದಳು. ಅವಳ ಸಂತೋಷವನ್ನು ನೋಡುತ್ತಿದ್ದ ಅಪ್ಪನಿಗೆ ತನಗಿದ್ದ ಕಷ್ಟಗಳೆಲ್ಲ ಮರೆತು ಹೋಗುತ್ತಿದ್ದವು. ದೀಪಾವಳಿ ಸಮೀಪಿಸುತ್ತಿದ್ದ ದಿನಗಳಲ್ಲಿ ಹುಟ್ಟಿದ್ದಕ್ಕೋ ಏನೋ ಅವಳಿಗೆ ಅಕ್ಕಪಕ್ಕದ ಮನೆಯವರೆಲ್ಲ ಸೇರಿ ದೀಪ ಅಂತಲೇ ಹೆಸರಿಟ್ಟಿದ್ದರು.ಒಂದು ವರ್ಷದ ಮಗುವಾಗಿದ್ದಾಗಲೇ ಅಮ್ಮನನ್ನು ಕಳೆದುಕೊಂಡ ತಬ್ಬಲಿ ದೀಪಳ ಖುಷಿಯೊಂದೇ ಅಪ್ಪನ ಏಕೈಕ ಗುರಿಯಾಗಿತ್ತು. 
ಆದರೆ ಈ ಸಲವೇಕೋ ಹಬ್ಬ ನಾಳೆಯಿದ್ದರೂ ಅಪ್ಪ ಪಟಾಕಿ ತಂದಿರಲಿಲ್ಲ. ಅದರ ಯೋಚನೆಯಲ್ಲಿಯೇ ನಿದ್ರೆ ಹತ್ತಿರ ಸುಳಿದಿರಲಿಲ್ಲ. ಯಾಕೋ ಕೇಳಿಯೇಬಿಡೋಣವೆಂದು ಅಪ್ಪನತ್ತ ತಿರುಗಿದಳು.
 "ಯಾಕೆ ದೀಪು, ನಿದ್ರೆ ಬರ್ತಿಲ್ವಾ ಬಂಗಾರಿ?" ಅಂತ ಅಪ್ಪ ಅಂದ.
ದೀಪ ಹೇಳಿದಳು, "ಇಲ್ಲ ಪಪ್ಪಾ,ಯಾಕೋ ನಿದ್ರೆ ಬರ್ತಿಲ್ಲ.ಆಮೇಲೆ.... ಆಮೇಲೆ... ಏನೋ ಕೇಳಲಾ?"
"ಕೇಳು ಪುಟ್ಟಿ."
"ಯಾಕೆ ಪಪ್ಪಾ, ನಾಳೆ ದೀಪಾವಳಿ ಹಬ್ಬ ತಾನೇ? ಇಷ್ಟು ದಿನ ಒಂದು ವಾರದ ಮುಂಚೆನೇ ಪಟಾಕಿ ತರ್ತಿದ್ದಲ್ವಾ ಈ ಸಲ ಯಾಕೆ ತಂದಿಲ್ಲಾ?"
"ಓಹ್, ಹೌದಲ್ವಾ ಪುಟ್ಟಿ. ಮರೆತುಬಿಟ್ಟೆಕಣವ್ವಾ. ನಾಳೆಗೆ ಹೋಗಿ ಮಾರ್ಕೆಟ್ ಹತ್ರ ಪಟಾಕಿ ತರ್ತೀನಿ "
"ನಿಜವಾಗಲೂ.... ?"
"ಹೂಮ್.... ದೀಪು. ನಿಜವಾಗಲೂ... ಈಗ ಮಲ್ಕೊಳವ್ವಾ" ಅಂತ ಪ್ರೀತಿಯಿಂದ ಹೇಳಿ ದೀಪಳನ್ನು ಎದೆಗೆ ಆತುಕೊಂಡು ತಟ್ಟಲಾರಂಭಿಸಿದ. ನಿಧಾನವಾಗಿ ಮಗುವಿಗೆ ನಿದ್ರೆ ಹತ್ತಿತ್ತು. ಕಿಟಕಿಯಾಚೆ ಮಲಗದ ಮಕ್ಕಳು ಹಬ್ಬದ ಮುಂಚೆಯೇ ಪಟಾಕಿ ಹೊಡೆಯಲು ಶುರು ಮಾಡಿದ್ದರು. ಪ್ರತೀ ಬಾರಿ ಪಟಾಕಿ ಶಬ್ದ ಕೇಳಿದಾಗ ಮನಸ್ಸಿನಲ್ಲಿ ಹೇಳಲಾರದ ಸಂಕಟವೊಂದು ಕಾಡುತ್ತಿತ್ತು.
ನಿಜವಾಗಿಯೂ ಆತ ಪಟಾಕಿ ತರೋದನ್ನು ಮರೆತಿದ್ದನೇ?ಇಲ್ಲ. ಕಮ್ಮಿ ಸಂಬಳಕ್ಕೆ ಕೆಲಸ ಮಾಡಿಸಿಕೊಳ್ಳುತ್ತಿದ್ದ ಗಾರ್ಮೆಂಟ್ ಫ್ಯಾಕ್ಟರಿಯೂ ಮೂರು ತಿಂಗಳ ಹಿಂದೆ ನಷ್ಟದಿಂದಾಗಿ ಬಾಗಿಲು ಮುಚ್ಚಿತ್ತು. ಸಾವಿರಾರು ನೌಕರರು ಕೆಲಸ ಕಳೆದುಕೊಂಡು ಬೀದಿಗೆ ಬರುವಂತಾಯಿತು. ಒಂದು ಹೊತ್ತಿನ ಊಟ ಹುಟ್ಟಿಸಿಕೊಳ್ಳಲೂ ಕಷ್ಟಪಡುವ ದುಸ್ತರ ಪರಿಸ್ಥಿತಿ ಎದುರಾಗಿತ್ತು . ಈತ ಹಾಗೂ ಹೀಗೂ ದಿನಗೂಲಿಗೆ ಹೋಗಿ ಬರುತ್ತಿದ್ದ ದುಡ್ಡಿನಲ್ಲಿ ದಿನದ ಜೀವನ ಮುಂದುವರೆಯುತ್ತಿತ್ತು. ಮನೆಯಲ್ಲಿ ವಯಸ್ಸಾದ ತನ್ನಮ್ಮ ಇದ್ದದ್ದಕ್ಕೆ ಮಗು ದೀಪಳ ಸಾಕುವುದು ಸಮಸ್ಯೆಯಾಗಲಿಲ್ಲ. ಆದರೆ ಕೂಲಿ ಸಿಕ್ಕರೆ ಮಾತ್ರ ಮೂವರಿಗೂ ಊಟಕ್ಕೆ ದಾರಿಯಾಗುತ್ತಿತ್ತು ಅಷ್ಟೇ. ಯಾಕೋ ಜೀವನ ದಿನದಿಂದ ದಿನಕ್ಕೆ ಕಷ್ಟದ ಕೂಪದೊಳಕ್ಕೆ ಬೀಳುತ್ತಿದೆಯಾ ಅನಿಸುತ್ತಿತ್ತು. ತಬ್ಬಲಿ ದೀಪಳ ಸಂತೋಷವೇ ತನ್ನ ಸಂತೋಷ ಅಂತ ಅಂದುಕೊಂಡಿದ್ದವನಿಗೆ  ಈ ಬಾರಿ ಪಟಾಕಿ ತರಲು ಮಾತ್ರ ಬಿಡಿಗಾಸು ಇರಲಿಲ್ಲ. ಜೊತೆಗೆ ದೀಪಾವಳಿ ಹತ್ತಿರ ಬಂದಿದ್ದರಿಂದ ಕೆಲಸಗಳು ನಿಲ್ಲಿಸಿದ್ದರಿಂದ ಈತನಿಗೆ ಕೂಲಿಯೂ ಸಿಗುತ್ತಿರಲಿಲ್ಲ. ಊಟಕ್ಕೇ ಕಷ್ಟವಾಗಿರುವಾಗ ಪಟಾಕಿಯೋ, ಹಬ್ಬಕ್ಕೆ ಸಾಮಾನುಗಳೋ...
"ಮಾದೇಸ್ವರಾ,ಹೇಗಾದರೂ ಮಾಡಿ ನಾಳೆ ಕೂಲಿ ಸಿಗುವ ಹಾಗೆ ಮಾಡಪ್ಪ" ಅಂತ ಪ್ರಾರ್ಥಿಸುತ್ತಾ ಮಲಗಿದವನಿಗೆ ನಿದ್ರೆ ಹತ್ತಿದ್ದೇ ತಿಳಿಯಲಿಲ್ಲ.



------------------------------------------------



ಬೆಳಿಗ್ಗೆ ಎಚ್ಚರವಾಗುವಷ್ಟರಲ್ಲಿ ಎಂಟು ಗಂಟೆ. ಅಪ್ಪ ಎದ್ದು ಕೆಲಸಕ್ಕೆ ಹೊರಟು ಹೋಗಿದ್ದ. ದೀಪಳಿಗೆ ಯಾಕೋ ಮನಸಿಲ್ಲ. ಅಜ್ಜಿ ಒಂದೇ ಸಮನೆ "ಬಾ, ಹಲ್ಲುಜ್ಜು, ಹಾಲು ಕುಡೀವಂತೆ" ಅಂತ ಕೂಗುತ್ತಿದ್ದಾಳೆ. ದೀಪ ಗುಡಿಸಲ ಹೊರಬಂದಳು. ದೂರದಲ್ಲಿ ಒಂದಷ್ಟು ಹುಡುಗರು ಗುಂಪು ಕಟ್ಟಿಕೊಂಡು ಪಟಾಕಿ ಹಿಡಿದುಕೊಂಡಿವೆ. ಹತ್ತಿರ ಹೋಗಿ ನೋಡಿದಳು. ಅದೊಂಥರಾ ಲಾಟರಿ ಇದ್ದ ಹಾಗೆ. ಒಂದು ಪುಟ್ಟ  ಮೇಜಿನ ಮೇಲೆ ಒಂದರಿಂದ ನೂರರವರೆಗೆ ಸಂಖ್ಯೆಗಳನ್ನು ಬರೆದು ಅವುಗಳ ಮೇಲೆ ಒಂದೊಂದು ವಿವಿಧ ರೀತಿಯ ಪಟಾಕಿಗಳನ್ನು ಇಡಲಾಗಿದೆ. ಕೆಲವು ಸಂಖ್ಯೆಗಳ ಮೇಲೆ ಏನೂ ಇಲ್ಲ. ಒಂದು ಡಬ್ಬದಲ್ಲಿ ಒಂದರಿಂದ ನೂರರವರೆಗೆ ಬರೆದ ಚೀಟಿಗಳನ್ನು ಹಾಕಲಾಗಿದೆ. ಒಂದು ರೂಪಾಯಿ ಕೊಟ್ಟರೆ ಆ ಹುಡುಗ ಡಬ್ಬವನ್ನು ಅಲ್ಲಾಡಿಸಿ ಮುಂದೆ ಹಿಡಿಯುತ್ತಾನೆ. ಯಾವುದಾದರೊಂದು ಚೀಟಿಯನ್ನು ಆರಿಸಿ ಬಂದ ಸಂಖ್ಯೆ ನೋಡಬೇಕು. ಆ ಸಂಖ್ಯೆಯಲ್ಲಿ ಯಾವುದಾದರೂ ಪಟಾಕಿಯಿದ್ದರೆ ಮಾತ್ರ ಅದು ಸಿಗುತ್ತದೆ. ಇಲ್ಲದಿದ್ದರೆ ಏನೂ ಇಲ್ಲ.

ಇದನ್ನು ತಿಳಿದು ಮತ್ತೆ ಮನೆಯೊಳಗೆ ಓಡಿದ ದೀಪ ಅಜ್ಜಿಯ ಬಳಿ ಒಂದು ರೂಪಾಯಿ ಕೇಳಿದಳು. ಅಜ್ಜಿ ಕೊಡಲಿಲ್ಲ. ದೀಪ ಅಳುತ್ತ ಕುಳಿತಾಗ ಸೆರಗಂಚಿನಿಂದ ಕಟ್ಟಿಟ್ಟಿದ್ದ ಒಂದು ರೂಪಾಯಿಯ ನಾಣ್ಯವನ್ನು ಕೊಟ್ಟಳು. ಒಂದೇ ಉಸಿರಿಗೆ ಆ ಪಟಾಕಿಯ ಹುಡುಗನ ಬಳಿ ಓಡಿದ ದೀಪ ಒಂದು ರೂಪಾಯಿಯನ್ನು ಆತನ ಕೈಗಿಟ್ಟಳು. ಆತ ಡಬ್ಬವನ್ನು ಅಲ್ಲಾಡಿಸಿ ಕೊಟ್ಟಾಗ ಎತ್ತಿದ ಚೀಟಿಯಲ್ಲಿದ್ದ ನಂಬರಿಗೆ ಯಾವುದೇ ಪಟಾಕಿ ಬಂದಿರಲಿಲ್ಲ. ಮತ್ತೆ ಅಳುತ್ತಾ ಮನೆಯೊಳಗೆ ಬಂದು ಪೆಚ್ಚು ಮೋರೆಯಲ್ಲಿ ಕುಳಿತಳು. ಆ ದಿನ ಊಟವನ್ನೂ ಸರಿಯಾಗಿ ಮಾಡಲಿಲ್ಲ.
ಅಜ್ಜಿಯ ಒತ್ತಾಯಕ್ಕಷ್ಟೇ ಒಂದೆರಡು ತುತ್ತು ತಿಂದಳು.
------------------------------------------------------------


ಸೂರ್ಯ ಇನ್ನೇನು ಮುಳುಗುವುದರಲ್ಲಿದ್ದ. ಕಾಯುತ್ತ ಕುಳಿತಿದ್ದ ದೀಪಳಿಗೆ ದೂರದಲ್ಲಿ ಅಪ್ಪ ಬರುವುದು ಕಾಣಿಸಿತು. ಏನಾಶ್ಚರ್ಯ, ಅವನ ಕೈಯಲ್ಲಿ ಪಟಾಕಿಯ ದೊಡ್ಡ ಬ್ಯಾಗು. ಓಡಿ ಹೋಗಿ ಅಪ್ಪನನ್ನು ತಬ್ಬಿ ಮುದ್ದಾಡಿದಳು. ಕೆನ್ನೆಗೊಂದು ಮುತ್ತ ಕೊಟ್ಟು ತನಗೆಷ್ಟು ನೀನು ಇಷ್ಟ ಅಂತ ಹೇಳಿದಳು. ಅವಳ ಕಣ್ಣುಗಳಲ್ಲಿನ ಹೊಳಪು ಕಂಡ ಅಪ್ಪನಿಗೆ ಹಾಲು ಕುಡಿದಷ್ಟು ಸಂತೋಷ.
ದೀಪಳ ಕೈಗೆ ನೂರು ರೂಪಾಯಿ ಕೊಟ್ಟು, "ಹೋಗು ಮಗಳೇ ಅಂಗಡಿಯಲ್ಲಿ ಅಕ್ಕಿ,ಬೇಳೆ ಕೊಂಡು ತಾ, ಊಟ ಮಾಡಿದ ಆಮೇಲೆ ಪಟಾಕಿ ಹೊಡೆಯುವಿಯಂತೆ" ಎಂದು ಹೇಳಿದ. ಖುಷಿಯಲ್ಲೇ ಮಗಳು ಅಂಗಡಿಯತ್ತ ಓಡಿದಳು.
ನಂತರ ತನ್ನ ಅಮ್ಮನಿಗೆ ಹೇಳಿದ.
"ಅವ್ವಾ, ಬೇಗ ಅಡುಗೆ ಮಾಡಿ ಅವಳಿಗೆ ತಿನ್ನಿಸು. ನೀನೂ ಊಟ ಮಾಡು. ಆಮೇಲೆ ಅವಳ ಕೂಡ ಪಟಾಕಿ ಹೊಡಿ"
ಆಕೆ ಕೇಳಿದಳು,"ಏನಪ್ಪಾ, ಇವತ್ತು ದೇವರ ದಯೆ, ಕೂಲಿ ಕೆಲಸ ಸಿಕ್ತಾ?"
ಈತ,"ಇಲ್ಲ ಕಣವ್ವಾ. ನಮ್ಮ ಗ್ರಹಚಾರ ನೆಟ್ಟಗಿಲ್ಲ. ಕೂಲಿ ಇವತ್ತೂ ಸಿಗಲಿಲ್ಲ"
ಅವ್ವ, "ಹಂಗಾದ್ರೆ, ಈ ಪಟಾಕಿ, ದುಡ್ಡೆಲ್ಲ ......."
ಈತ, "ಹ್ಞೂ ಕಣವ್ವಾ, ಕೆಲ್ಸಾ ಸಿಕ್ದೇ ಬೇಜಾರಾಗಿ ಒಂದ್ ಕಡೆ ಕೂತ್ಕಂಡ್ ಯೋಚ್ನೆ ಮಾಡ್ತಿದ್ದೆ. ಅಲ್ಲೊಂದ್ ಕಡೆ ರಕ್ತದಾನ ನಡೀತಿತ್ತು. ಒಂದ್ ಬಾಟಲಿ ರಕ್ತ ಕೊಟ್ರೆ ಐನೂರು ರೂಪಾಯಿ ಕೊಡ್ತಿದ್ರು, ರಕ್ತ ತಾನೇ. ಇವತ್ತು ಕೊಟ್ರೆ ನಾಳೆಗೆ ಮತ್ತೆ ಬತ್ತದೆ. ಈ ದೀಪಾವಳಿ ದಿನ ನನ್ ಮಗಳು ದೀಪನ್ ಮುಖದಲ್ಲಿ ಬರೋ ಸಂತೋಷನ ತಪ್ಪುಸ್ಕೊಂಡ್ರೆ ಮತ್ತೆ ಅದನ್ನ ನೋಡೋಕೆ ಇನ್ನೊಂದ್ ವರ್ಷ ಕಾಯಬೇಕು.... ಅದಕ್ಕೇ... ರಕ್ತ ಕೊಟ್ಟು ಬಂದೆ.... ಸರಿ... ಡಾಕ್ಟ್ರು ಮಲ್ಕೊಂಡು ಚೆನ್ನಾಗಿ ನಿದ್ರೆ ಮಾಡ್ಬೇಕು ಅಂತ ಹೇಳವ್ರೆ. ಮಲ್ಕೊತೀನಿ. ದೀಪುಗೆ ಊಟ ಮಾಡ್ಸು" ಅಂತ ಹೇಳಿ ಮಲಗಿದ.
ಅವ್ವನ ಕಣ್ಣಂಚಿನಲ್ಲಿ ಹನಿಯಿತ್ತು.........!

Sunday, July 21, 2013

ಮೂಕ ಕರು

"ಪಂಜು" ವಾರಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ:

(http://www.panjumagazine.com/?p=3203)

"ಲೋ ಮಗಾ, ಬಿಸಿಲು ನೆತ್ತಿಗೇರ್ತಾ ಅದೆ, ಕರಾನ ಜಮೀನ್ ತಾವ ಹೊಡ್ಕಂಡ್ ಹೋಗಿ ಮರಕ್ ಕಟ್ಟಾಕಿ ಮೇಯಕ್ ಬುಡು. ಹಾಂ… ಹೋಗಕ್ ಉಂಚೆ ಮನೆತಾವ್ ಒಸಿ ನೀರು ಕುಡುಸ್ಬುಡು. ಬರದ್ ಹೊತ್ತಾಗ್ಬೋದು. ಇಸ್ಕೂಲಿಂದ ಬಂದ್ ಮ್ಯಾಕೆ ಮತ್ತೆ ಹೊಡ್ಕಂಡ್ ಬಂದ್ ಕೊಟ್ಟಿಗೇಲಿ ಕಟ್ಟಾಕ್ ಬುಡು. ಮರಿಬ್ಯಾಡ" ಪೇಟೆಗೆ ಹೊರಟಿದ್ದ ನಮ್ಮಪ್ಪ ಕೂಗಿ ಹೇಳಿದರು. ಒಲ್ಲದ ಮನಸ್ಸಿಂದ ನಾ "ಹೂಂ…..ಸರಿ" ಅಂದಿದ್ದು ಅಪ್ಪಂಗೆ ಕೇಳಿಸಲೇ ಇಲ್ಲ. 
ನಮ್ಮದೊಂದು ಚಿಕ್ಕ ಹಳ್ಳಿ. ನಮ್ಮ ಜಮೀನಿದ್ದದ್ದು ಹಳ್ಳಿಯಿಂದ ಹೊರಗೆ. ಮೂರು ಮೈಲಿ ನಡೀಬೇಕು. ಒಂದು ಬೆಳೆ ಮುಗಿದು ಇನ್ನೊಂದು ಬೆಳೆಗೆ ಜಮೀನು ಸಿದ್ಧವಾಗುತ್ತಿದ್ದ ಸಮಯ. ಆದ್ದರಿಂದ ತೆಕ್ಕಲು ಬಿದ್ದಿದ್ದ ಜಮೀನಿನಲ್ಲಿ ಉಳಿದುಕೊಂಡ ಅಷ್ಟಿಷ್ಟು ಮೇವನ್ನು ತಿನ್ನಲು ನಮ್ಮ ಮನೆಯ ಹಸುಕರುಗಳನ್ನೇ ಬಿಡುತ್ತಿದ್ದೆವು. ನನಗೋ ಮುಂಚಿನಿಂದಲೂ ಈ ಬೇಸಿಗೆ, ಹಸು ಕರು, ವ್ಯವಸಾಯ, ಅದರಿಂದ ಬರೋ ಸ್ವಲ್ಪ ಕಾಸು ಇವೆಲ್ಲ ಕೊಂಚವೂ ಇಷ್ಟವಾಗದ ವಿಷಯಗಳು. ಆದರೂ ಅಪ್ಪ ಕೆಲಸಕ್ಕೆ ಅಂತ ಕರೆದಾಗ ಅಂಜಿಕೆಯಿಂದ ಕೆಲಸಕ್ಕೆ ಬರಲಾರೆ ಅನ್ನುವಂತಿಲ್ಲ. ಆದರೂ ಹಲವಾರು ಬಾರಿ ಶಾಲೆ, ಪರೀಕ್ಷೆ, ತಲೆನೋವು, ಮನೆಪಾಠ ಅಂತ ಏನೇನೋ ನೆಪವೊಡ್ಡಿ  ಅಪ್ಪ ಹೇಳುವ ಕೆಲಸದಿಂದ ತಪ್ಪಿಸಿಕೊಂಡು ಬಿಡುತ್ತಿದ್ದೆ.
 
ಇವತ್ತೂ ಅಪ್ಪ ಯಾವುದೋ ಕಾರ್ಯದ ನಿಮಿತ್ತ ಪಕ್ಕದ ಪೇಟೆಗೆ ತೆರಳಿದ್ದರು. ತಾವು ಕರುವನ್ನು ಜಮೀನಿನ ಬಳಿ ಹೊಡೆದುಕೊಂಡು ಹೋಗಿ ಅಲ್ಲಿ ಮೇಯಲು ಬಿಟ್ಟು ನಂತರ ಪೇಟೆಗೆ ಹೊರಟಿದ್ದರೆ ಅದು ಸಾಧ್ಯವಾಗದ ಮಾತು. ಏಕೆಂದರೆ ಬೆಳಗಿನ ಬಸ್ಸನ್ನು ಬಿಟ್ಟರೆ ನಂತರದ್ದು ಮಧ್ಯಾಹ್ನವೇ. ಅದಕ್ಕಾಗಿ ಶಾಲೆಗೇ ಹೊರಡುವ ಮುಂಚೆ ನನ್ನನ್ನೇ ಕರುವನ್ನು ಜಮೀನಿಗೆ ಮೇಯಲು ಬಿಟ್ಟು ಬರುವಂತೆ ಹೇಳಿ ಹೋಗಿದ್ದರು. ಒಲ್ಲದ ಮನಸ್ಸಿನಿಂದಲೇ ನೀರು ಕುಡಿಸಿ ಕರುವನ್ನು ಬೇಗನೆ ಓಡಿಸಿಕೊಂಡು ಜಮೀನಿಗೆ ಹೋಗಿದ್ದೆ. ಬೆಳೆ ಮುಗಿದ ಜಮೀನಿನಲ್ಲಿ ಹಸಿರು ಹುಲ್ಲು ಬೆಳೆದು ನಿಂತಿರುತ್ತದೆ. ಜಮೀನಿನ ಒಳಗೆ ಒಂದು ತೆರೆದ ಬಾವಿಯಿದೆ. ಅದನ್ನು ತೋಡಿ ಅದೆಷ್ಟು ವರ್ಷಗಳಾಗಿವೆಯೋ ನಾ ಕಾಣೆ. ಆದರೆ ಅದು ಇದುವರೆಗೂ ಎಂತಹ ಬರವಿದ್ದ ಸಮಯದಲ್ಲೂ ಬತ್ತಿಲ್ಲವೆಂಬುದು ಊರ ಜನರು ಹೇಳುವ ಮಾತು. ಆ ಬಾವಿಯ ನೀರು ಬಹಳ ರುಚಿ. ಅ ನೀರು ಕನ್ನಡಿಯಷ್ಟೇ ಪರಿಶುದ್ಧ. ಬಗ್ಗಿ ನೋಡಿ ನಮ್ಮ ಮುಖದ ಪ್ರತಿಬಿಂಬ ನೋಡಿಕೊಳ್ಳಬಹುದು.  ಆ ಬಾವಿಗೆ ಹೊಂದಿಕೊಂಡಂತೆ ಐದಾರು ಹೆಜ್ಜೆ ದೂರದಲ್ಲಿ ಬಹಳ ಎತ್ತರಕ್ಕೆ ಬೆಳೆದ ತೆಂಗಿನಮರವೊಂದಿದೆ. ಅದರ ಸುತ್ತ ಹುಲ್ಲು ಯಥೇಚ್ಛವಾಗಿ ಬೆಳೆದಿದೆ. ಅಪ್ಪನೇನಾದರೂ ಮೇಯಿಸಲು ಬಂದರೆ ಎಲ್ಲ ದನಕರುಗಳನ್ನೂ ಸುಮ್ಮನೆ ಅವುಗಳ ಇಚ್ಛೆಯಂತೆ ಜಮೀನಿನಲ್ಲಿ ಮೇಯಲು ಬಿಡುತ್ತಾನೆ. ಅವು ದಿನಪೂರ್ತಿ ಹೊಟ್ಟೆತುಂಬ ಮೇಯ್ದ ನಂತರ ಆ ಬಾವಿಯ ಪಕ್ಕದ ತೊಟ್ಟಿಯಲ್ಲಿ ತುಂಬಿದ ನೀರನ್ನು ಕುಡಿಸಿ ಮನೆಗೆ ಹಿಂತಿರುಗುತ್ತಾನೆ. ನಾನು ಬರೇ ಕರುವನ್ನು ಕರೆತಂದರೆ ಆ ಬಾವಿಯ ಪಕ್ಕದಲ್ಲಿಯ ತೆಂಗಿನ ಮರಕ್ಕೆ ಕಟ್ಟಿಹಾಕಿ ಹಗ್ಗವನ್ನು ಕೊಂಚ ಉದ್ದವಾಗಿಯೇ ಬಿಟ್ಟು ಮನೆ ಕಡೆ ಹೊರಟುಬಿಡುತ್ತೇನೆ. ಆ ಹಗ್ಗದ ಉದ್ದಕ್ಕೆ ಎಷ್ಟು ಸ್ಥಳವನ್ನು ಆ ಕರು ತಲುಪಬಲ್ಲುದೋ ಅಲ್ಲಿಯವರೆಗೆ ಅದು ಹುಲ್ಲು ಮೇಯ್ದಿರುತ್ತದೆ.  ಸಂಜೆ ಶಾಲೆ ಮುಗಿದ ಮೇಲೆ ಜಮೀನಿಗೆ ಬಂದು ಕರುವಿಗೆ ನೀರು ಕುಡಿಸಿ ಮತ್ತೆ ಮನೆ ಕಡೆ ಕರೆದುತರಬೇಕು.
 

 
ಕರುವನ್ನು ಜಮೀನಿನಲ್ಲಿ ಮೇಯಲಿಕ್ಕೆ ಕಟ್ಟಿಹಾಕಿ ಶಾಲೆಗೇ ಹೋದ ನಾನು ಅದನ್ನು ಮರೆತೇಬಿಟ್ಟಿದ್ದೆ. ದಿನದ ಕೊನೆಯ ಪಿರಿಯಡ್ ಆಟವಾಡುವುದಕ್ಕೆ ಬಿಟ್ಟಿದ್ದರಿಂದ ಶಾಲೆಯ ಸಮಯ ಮುಗಿದ ಮೇಲೂ ಆಟವನ್ನು ಮುಂದುವರೆಸಿದ್ದೆವು. ಸಂಜೆ ಏಳಾಯಿತು, ಎಂಟಾಯಿತು. ಕತ್ತಲಾದ್ದರಿಂದ ಶಾಲೆಯ ಹತ್ತಿರದಲ್ಲೇ ಇದ್ದ ಸುನೀಲನ ಮನೆಗೆ ಹೋಗಿ ಅವರಮ್ಮ ಕೊಟ್ಟ ಕಾಫೀ ಹೀರುತ್ತಾ ಮನೆಪಾಠದ ನೆಪದಲ್ಲಿ ಹರಟೆ ಹೊಡೆಯುತ್ತ ಕುಳಿತುಬಿಟ್ಟೆವು.
 
ಸರಿಯಾಗೇ ಎಂಟು ಘಂಟೆಯ ಬಸ್ಸಿಗೆ ಪೇಟೆಗೆ ಹೋಗಿದ್ದ ಅಪ್ಪ ಮನೆಗೆ ಬಂದರು. ಬಂದವರೇ ಮೊದಲು ನೋಡಿದ್ದು ಕೊಟ್ಟಿಗೆಯಲ್ಲಿ ಕರುವಿದೆಯಾ ಅಂತ. ಅಮ್ಮನನ್ನು ವಿಚಾರಿಸಿದಾಗ "ಅವ್ನು ಇಸ್ಕೂಲಿಂದ ಇನ್ನೂ ಬಂದಿಲ್ಲ ಕಣ, ನೋಡಿ" ಅಂದರು. ಅಪ್ಪ "ಅವನ್ ಎಲ್ ಒಯ್ತನೆ, ಬೊಡ್ಡಿಕೂಸು?!. ಕರಾನ ಜಮೀನಲ್ಲಿ ಕಟ್ಟಾಕಿ ಎಲ್ಲೋ ಇಸ್ಕೂಲ್ ಮುಗಿಸ್ಕಂಡವ ಊರ್ ತಿರ್ಗಕ್ ಹೋಗಿರಬೇಕು, ಅವನು ಅಟ್ಟಿಗ್ ಬರಲಿ. ಇವತ್ತು ಹುಟ್ನಿಲ್ಲ ಅಂತ ಅನ್ನುಸ್ಬುಡ್ತೀನಿ " ಅಂತ ಟಾರ್ಚನ್ನು ಕೈಲಿ ಹಿಡಿದವರೇ ಬಿರಬಿರನೆ ಹೆಜ್ಜೆ ಹಾಕುತ್ತಾ ಜಮೀನಿನ ಕಡೆ ನಡೆದರು. ಹಳ್ಳಿಯ ಮಾಮೂಲಿ ಹಣೆಬರಹ. ಆರು ಘಂಟೆಗೆಲ್ಲ ಕರೆಂಟು ತೆಗೆದಿದ್ದರು. ಇಡೀ ಹಳ್ಳಿಯೇ ಕತ್ತಲಲ್ಲಿ ಮಲಗಿತ್ತು. ಅಲ್ಲೊಬ್ಬರು ಇಲ್ಲೊಬ್ಬರು ಹೆಂಡ ಕುಡಿದು ರಸ್ತೆಯಲ್ಲಿ ಅಡ್ಡವಾಗಿ ಸಿಗುತ್ತಿದ್ದರು.
 
ತಣ್ಣನೆಯ ಗಾಳಿ ಬೀಸುತ್ತಲಿದೆ. ಇದ್ದಕ್ಕಿದ್ದಂತೆ ಗಾಳಿಯ ಆರ್ಭಟ ಶುರುವಾಯಿತು. ಮರಗಳು ಜೋರಾಗಿ ಆಡಲಾರಂಭಿಸಿದವು.ಆಕಾಶದಲ್ಲಿ ಮಿಂಚು.  ಮಳೆ ಬರುವ ಸೂಚನೆ. ಅಪ್ಪ ಕೊಡೆ ತರಲು ಮರೆತ ತನ್ನನ್ನು ತಾನು "ಛೇ" ಅಂತ ಬೈದುಕೊಳ್ಳುತ್ತಾ ಬೇಗನೆ ಹೆಜ್ಜೆ ಹಾಕತೊಡಗಿದರು. ಹೊರಟು ಐದು ನಿಮಿಷವಾಗಿಲ್ಲ. ಹನಿಗಳು ಚಟಪಟ ಅಂತ ಬೀಳಲಾರಂಭಿಸಿದವು. "ಚಡೀ………. ಲ್" ಅಂತ ಗುಡುಗಿದ್ದು ಒಮ್ಮೆ ತಮ್ಮ ಪಕ್ಕದಲ್ಲೇ ದೊಡ್ಡ ಬಂಡೆಯೊಂದನ್ನು ಎತ್ತಿ ಯಾರೋ ಪಕ್ಕದಲ್ಲೇ ನಿಂತು ತಲೆಯ ಮೇಲೆ ಹಾಕಿದಂತೆ ಭಾಸವಾಯಿತು. ಕಿವಿ ತಮಟೆ ಹೊಡೆಯುವುದೊಂದು ಬಾಕಿ. ಆಗ ಶುರುವಾಯಿತು ನೋಡಿ, ಕುಂಭದ್ರೋಣ ಮಳೆ. ಆಕಾಶಕ್ಕೇ ಯಾರೋ ರಂಧ್ರ ಕೊರೆದಂತೆ. ಅಷ್ಟು ಹೊತ್ತಿಗಾಗಲೇ ಮೈಮೇಲಿದ್ದ ಬಟ್ಟೆಗಳೆಲ್ಲ ಒದ್ದೆಯಾಗಿ  ಮೈಗೆಲ್ಲ ಸ್ನಾನವಾಗಿತ್ತು. ಕೈಲಿದ್ದ ಟಾರ್ಚಿನ ಬೆಳಕು ಬಹುದೂರ ಸಾಗುತ್ತಿರಲಿಲ್ಲ. ಈ ಮಳೆಗೂ ಆ ಕತ್ತಲೆಗೂ ಆ ಬಡಪಾಯಿ ಪುಟ್ಟ ಕರುವಿನ ಸ್ಥಿತಿ ಹೇಗಾಗಬೇಡ? ಹೇಗಾದರೂ ಮಾಡಿ ಬೇಗಬೇಗನೆ ಕರುವನ್ನು ಮನೆಗೆ ತಲುಪಿಸಬೇಕು ಅಂದುಕೊಳ್ಳುತ್ತಾ ಆ ಮಳೆಯನ್ನೂ ಲೆಕ್ಕಿಸದೇ ಜಮೀನಿನ ಕಡೆಗೆ ಹೆಜ್ಜೆ ಹಾಕತೊಡಗಿದರು.
 
ಅದು ಊರ ಹೊರಭಾಗವಾದ್ದರಿಂದ ಜಮೀನಿನ ಹತ್ತಿರ ಯಾವುದೇ ಮನೆಗಳಿಲ್ಲ. ಆ ಮಳೆಗೂ, ಕಾಲಿಗೆ ತಾಕುವ ಆ ಚಿಕ್ಕಪುಟ್ಟ ಗಿಡಗಳು, ಮೊಳಕಾಲುದ್ದ ಹರಿಯುತ್ತಿರುವ ನೀರು, ನಂತರ ಜಮೀನಿನ ಒಳಗೆ ಕಾಲಿಟ್ಟಾಗ ಮೊದಲೇ ಮಣ್ಣಿದ್ದ ನೆಲಕ್ಕೆ ನೀರು ಬಿದ್ದು ಅಂಟುವ ಆ ಕೆಸರಿಗೂ ಬೇಗ ಬೇಗ ನಡೆಯಲು ಕೊಂಚ ಕಷ್ಟವಾಗುತ್ತಿತ್ತು. ಜಮೀನು ಹತ್ತಿರ ಬಂತು. ದೂರದಿಂದಲೇ ಒಡೆಯನನ್ನು ಕಂಡ ಆ ಕರು "ಅಂಬಾ" ಎಂದು ಕೂಗಿಕೊಳ್ಳಲಾರಂಭಿಸಿತು. ಆ ತೆಂಗಿನಮರದ ಬಳಿ ಹೋದವರೇ ಊರುಗುಣಿಕೆಯನ್ನು ಬಿಚ್ಚಿದರು. ಈಗ ಕರುವಿಗೆ ಕೊಂಚ ನಿರಾಳವಾಯಿತು. ಕರು ಮರದ ಅತ್ತ ಬದಿಯಲ್ಲಿ, ಅಪ್ಪ ಇತ್ತ ಬದಿಯಲ್ಲಿ. ಪೂರ್ಣ ಸಂಪೂರ್ಣ ಕತ್ತಲು. ಆಗಲೇ ಆಗಿದ್ದು ಎಡವಟ್ಟು. ಟಾರ್ಚನ್ನು ಒಂದು ಕೈಲಿ ಹಿಡಿದುಕೊಂಡೇ ಕರುವಿನ ಹಗ್ಗವನ್ನು ಹಿಡಿಯುವ ಭರದಲ್ಲಿ ಟಾರ್ಚ್ ಅಲುಗಾಡಿದ್ದರಿಂದ ಅತ್ತಲಿದ್ದ ಕರುವಿಗೆ ಮರದ ನೆರಳಿನಾಕೃತಿ  ಅಲುಗಾಡಿದಂತೆ ಕಂಡಿತು! ಇದ್ದಕ್ಕಿದ್ದಂತೆ ಮರ ಅಲುಗಾಡಿದಂತೆ ಕಂಡದ್ದರಿಂದ ಆ ಕರುವಿಗೆ ಗಾಬರಿಯಾಗಿ ದಿಕ್ಕೆಟ್ಟು ಹಿಂದಕ್ಕೆ ಓಡಿತು.
 
ಎರಡೇ ಕ್ಷಣ. ಅಪ್ಪನ ಎದೆ ಝಲ್ಲೆಂದಿತು. ದಿಕ್ಕೆಟ್ಟು ಹಿಂದಕ್ಕೆ ಜಿಗಿದ ಕರು ಹಗ್ಗದ ಸಮೇತ ನಲವತ್ತು ಅಡಿ ಆಳದ ತೆರೆದ ಬಾವಿಗೆ "ದುಡುಂ…. "ಎಂಬ ಶಬ್ದದೊಡನೆ ಬಿದ್ದಿತ್ತು. ಅಪ್ಪ ಒಂದೇ ಕ್ಷಣದಲ್ಲಿ ಆದ ಈ ಅನಾಹುತಕ್ಕೆ ಶಾಕ್ ಆದರೂ ತಕ್ಷಣವೇ ಹೆಚ್ಚು ಕಾಲ ಯೋಚಿಸದೇ ಟಾರ್ಚನ್ನು ಕೈಯಲ್ಲಿ ಗಟ್ಟಿ ಹಿಡಿದು ಬಾವಿಯ ಅಂಚಿನಲ್ಲಿ ನಿಂತು ಒಳಗೆ ಬೆಳಕು ಬಿಟ್ಟರು. ಟಾರ್ಚಿನ ಬೆಳಕು ಪೂರ್ತಿ ಒಳಗೆ ಹೋಗಲಿಲ್ಲ. ಬಾವಿಯ ಒಳಗಿಂದ ಸ್ವಲ್ಪ ಶಬ್ದವೂ ಬರುತ್ತಿಲ್ಲ. ರಾಡಿಯಾಗಿದ್ದ ಚಪ್ಪಲಿಯನ್ನು ಕಾಲಿಂದಲೇ ಎತ್ತಿ ಬಿಸಾಕಿದವರೇ ಬಾವಿಯ ಒಂದು ಮೂಲೆಯ  ಹೋಗಿ ಅಲ್ಲಿದ್ದ ಮೆಟ್ಟಿಲನ್ನು ನಿಧಾನವಾಗಿ ಒಂದೊಂದಾಗೇ ಇಳಿಯತೊಡಗಿದರು. ಮೆಟ್ಟಿಲನ್ನು ಇತ್ತೀಚಿಗೆ ಉಪಯೋಗಿಸದ ಕಾರಣ ಮಣ್ಣೆಲ್ಲ ಒಂದು ಬದಿಗಿದ್ದು ಕಾಲಿಟ್ಟರೆ ಮಳೆಯ ನೀರಿನಿಂದಾಗಿ ಜರ್ರನೆ ಜಾರುತ್ತಿತ್ತು. ಬೇರೆ ದಾರಿಯೇ ಇಲ್ಲ. ಕರುವನ್ನು ಬದುಕಿಸಿಕೊಳ್ಳಲೇಬೇಕು. ತನಗೆ ಈಜು ಬರುವುದಿಲ್ಲ!! ಆದರೂ ಇನ್ನೊಂದು ಜೀವದ ಬೆಲೆ ತನಗೆ ಗೊತ್ತು. ಈ ಜಗತ್ತಿನ ಯಾವ ಪ್ರಾಣಿ ಪಕ್ಷಿ ಸಂಕುಲದ್ದಾಗಲಿ ಜೀವವೆಂದರೆ ಜೀವ ತಾನೇ? ಮನುಷ್ಯರು ಜೀವ ಉಳಿಸಿಕೊಳ್ಳುವ ಸಲುವಾಗಿ ಮಾತಿನಲ್ಲೇ ಯಾವ ತರಹದ ಸುಳ್ಳು, ಹಣ, ಹಲವಾರು ಆಮಿಷವೊಡ್ಡಬಲ್ಲರು. ಪಾಪ ಅವಾದರೋ ಮೂಕಪ್ರಾಣಿಗಳು. ಹೇಗೆ ತಾನೇ ತಮ್ಮ ದುಗುಡವನ್ನು ಹೇಳಿಕೊಂಡಾವು?
 
ನೀರಿನ ಮಟ್ಟದ ಮೇಲಿನ ಕೊನೆಯ ಮೆಟ್ಟಿಲಂತೂ ಸರಿಯಾಗಿ ಕಾಣುತ್ತಲೇ ಇಲ್ಲ. ಮೇಲೆ ಸುರಿಯುತ್ತಿರುವ ಮಳೆಯ ಪರಿಣಾಮ ನೀರು ಝರಿಯಂತೆ ಮೆಟ್ಟಿಲುಗಳ ಮೂಲಕ ಒಳ ನುಗ್ಗುತ್ತಿದೆ. ನಿಧಾನವಾಗಿ ಕೊನೆಯ ಮೆಟ್ಟಿಲ ಮೇಲೆ ಒಂದೇ ಕಾಲಿಟ್ಟರು. ಸರ್ರನೆ ಜಾರಿತು. ತಕ್ಷಣ ಸಮತೋಲನ ಕಾಯ್ದುಕೊಂಡವರೇ ನಿಧಾನವಾಗಿ ಕೊನೆಯ ಮೆಟ್ಟಿಲ ಮೇಲೆ ತಳವೂರಿ ಕುಳಿತುಬಿಟ್ಟರು. ಆಗ ಮುಂದಿನ ನೀರಿನಲ್ಲಿ ಈಜುತ್ತಾ ತನ್ನತ್ತ ಏನೋ ಬಂದಂತಾಯ್ತು. ಅದೇ ಕ್ಷಣಕ್ಕೆ ಮಿಂಚೊಂದು ಫಳ್ಳನೆ ಹೊಳೆದು ಮರೆಯಾಯಿತು. ಹೌದು ಅದು ತನ್ನದೇ ಮುದ್ದಿನ ಕರು. ಅದನ್ನು ಹಿಡಿದುಕೊಳ್ಳಲು ಮುಂದೆ ಬಾಗಿದರೂ ಅದು ಕೈಗೆ ಸಿಗಲಿಲ್ಲ . ಅಪ್ಪಿ ತಪ್ಪಿ ಬಿದ್ದರೆ ಕರುವಿನ ಜೊತೆ ತಾನೂ ಇಹಲೋಕ ತ್ಯಜಿಸಬೇಕಾಗುತ್ತದೆ. ಮಲೆಮಹದೇಶ್ವರನನ್ನು ಮನದಲ್ಲಿಯೇ ನೆನೆದು ಮತ್ತೊಮ್ಮೆ ತನ್ನ ಶಕ್ತಿಯನ್ನೆಲ್ಲ ಬಳಸಿ ಅದು ತನ್ನತ್ತ ಬರುವುದನ್ನೇ ಕಾಯ್ದು ಒಮ್ಮೆಗೇ ಅದರ ಮೂಗುದಾರವನ್ನು ಹಿಡಿದುಕೊಂಡು ಬಿಟ್ಟರು. ಅಷ್ಟು ಹೊತ್ತು ಕಾಲಿಗೆ ಯಾವುದೇ ಆಧಾರ ಸಿಗದೆ ಈಜಾಡುತ್ತ ತನ್ನ ಪ್ರಾಣವನ್ನು ಕೈಲಿ ಹಿಡಿದುಕೊಂಡಿದ್ದ ಮುದ್ದಿನ ಕರು ಜೋರಾಗಿ ನಿಟ್ಟುಸಿರು ಬಿಟ್ಟಿತು. ಆದರೆ ಇತ್ತ ಆ ಜಾಗದಲ್ಲಿ ಕುಳಿತೇ ಆ ಕರುವಿನ ಮೂಗುದಾರವನ್ನು ಹಿಡಿದು ಅದು ಮುಳುಗದಂತೆ ತೇಲಿಸುತ್ತ ಕುಳಿತಿದ್ದ ಅಪ್ಪನ ಮೇಲೆ ಮಳೆ ಧೋ ಅಂತ ಸುರಿಯುತ್ತಿದೆ. ಬಹುಷಃ ನೀರು ನುಗ್ಗಿರಬೇಕು,ಅಷ್ಟು ಹೊತ್ತಿನ ತನಕ ಬೆಳಗುತ್ತಿದ್ದ ಟಾರ್ಚ್ ಇದ್ದಕ್ಕಿದಂತೆ ಆರಿ ಹೋಯಿತು.ಇನ್ನು ಅದರ ಉಪಯೋಗವಿಲ್ಲವೆಂದರಿತ ಅಪ್ಪ ಅದನ್ನು ಅಲ್ಲೇ ಹರಿಯುತ್ತಿದ್ದ ನೀರಿನೊಳಗೆ ಬೀಸಾಕಿಬಿಟ್ಟ. ಈಗ ಇನ್ನೊಂದು ಕೈಗೆ ಬಿಡುವಾದ್ದರಿಂದ "ಒಂದು ತಪ್ಪಿದರೆ ಇನ್ನೊಂದು " ಎಂಬಂತೆ ಕೈ ಶಕ್ತಿ ಇಂಗಿ ಹೋದಂತೆಲ್ಲ ಒಂದು ಕೈಯಿಂದ ಇನ್ನೊಂದಕ್ಕೆ ಕರುವಿನ ಮೂಗುದಾರವನ್ನು ಬದಲಾಯಿಸಿಕೊಳ್ಳುತ್ತಾ ಸಮಯ ದೂಡಲಾರಂಭಿಸಿದರು. ಕೂತ ಜಾಗದಲ್ಲಿಯೇ ಘಂಟೆಗಳ ಕಾಲ ಬಾಗಿ ಕರುವನ್ನು ಹಿಡಿದುಕೊಂಡಿರುವುದರಿಂದ ಕೈ ನೋಯಲಾರಂಭಿಸಿತು.  ಆಗ ಸಮಯ ರಾತ್ರಿ ಹನ್ನೆರಡು. ಎಂಟು ಘಂಟೆಗೆ ಹೋದವರು ಇನ್ನೂ ಬಂದಿಲ್ಲವೆಂದು ಅಮ್ಮನಿಗೆ ಭಯ ಶುರುವಾಯಿತು. ಸಿಡಿಲು ಬೇರೆ ಬಡಿದು ಜೀವವೇ ನಡುಗುವಷ್ಟು ಸದ್ದಾಯಿತು. ಏನಾದರೂ ಸಿಡಿಲಿಗೆ ಸಿಕ್ಕಿ…..ಅಯ್ಯೋ ದೇವರೇ ಅಂತ, ಬೇಗನೆ ಕೂಗಿ ಪಕ್ಕದ ಮನೆಯಲ್ಲಿ ಮಲಗಿದ್ದ ಬಸವರಾಜನನ್ನು ಕರೆದು ಇನ್ನೊಂದಿಬ್ಬರನ್ನು ಜತೆಹಾಕಿಕೊಂಡು ಕೊಡೆ, ಟಾರ್ಚ್ ಹಿಡಿದು ಬೇಗಬೇಗನೆ ಹೊಲದ ಕಡೆಗೆ ಹೆಜ್ಜೆ ಹಾಕಿದರು. ಜಮೀನಿನ ದಾರಿಯಲ್ಲಿ ಹುಡುಕುತ್ತಾ ಬಂದು ಹತ್ತಿರ ಬರುತ್ತಿದ್ದಂತೆ ಪರಿಸ್ಥಿತಿ ಅರ್ಥವಾಗತೊಡಗಿತ್ತು. ತೆಂಗಿನಮರದ ಬುಡದಲ್ಲಿ ಕಟ್ಟಿದ್ದ ಕರುವೂ ನಾಪತ್ತೆಯಾಗಿದ್ದನ್ನು ಕಂಡು ಏನೋ ಆಗಬಾರದ್ದು ಆಗಿದೆ ಎಂಬಂತೆ  "ಬೇಗ ಬಾವಿ ಒಳಗೆ ನೋಡ್ಲಾ ಬಸ್ರಾಜ" ಅಂತ ಕೂಗಿದಳು. ಅವರು ಟಾರ್ಚ್ ಬಿಟ್ಟಾಗ ಬಾವಿಯ ಒಳಗೆ ಮಳೆಯಿಂದ ನೆನೆದು ಮುದ್ದೆಯಾಗಿ ನಡುಗುತ್ತಾ ಒಂದು ಕೈಯಲ್ಲಿ ಕರುವಿನ ಮೂಗುದಾರ ಹಿಡಿದಿದ್ದ ಅಪ್ಪ ಕಂಡ. ತನ್ನ ಮುಖದ ಮೇಲೆ ಬಿದ್ದ ಬೆಳಕಿನಿಂದಾಗಿ ಅಪ್ಪನಿಗೆ ಉಸಿರು ಬಂದಂತಾಯ್ತು. "ಬೇಗ ಇಳಿರ್ಲಾ" ಅಂತ ಎಲ್ಲರೂ ಕೂಗಿಕೊಂಡರು. ಮುಂದಿನ ಅರ್ಧ ಘಂಟೆಯಲ್ಲಿ ಹಗ್ಗದ ಸಹಾಯದಿಂದ ಕರುವನ್ನು ಮೇಲೆ ತರಲಾಯಿತು.  ಕೈಗಳು ಮರಗಟ್ಟಿ ಹೋಗಿದ್ದರೂ ಸುರಿಯುವ ಮಳೆಯ ಆರ್ಭಟದ ಮಧ್ಯದಲ್ಲೂ ಹೇಗೆ ನಾಲ್ಕು ತಾಸುಗಳ ಕಾಲ ಅಪ್ಪ ಆ ಕರುವನ್ನು ಹಿಡಿದುಕೊಂಡಿದ್ದರೋ ನಾ ಕಾಣೆ. ಅಪ್ಪ ಹೇಳಿದ "ಇನ್ನೊಂದರ್ಧ ಘಂಟೆ ತಡವಾಗಿದ್ದರೆ, ನಾನು ಮತ್ತೆ ಕರು ಜೀವಂತವಾಗಿರ್ತಿರ್ಲಿಲ್ಲ" ಅಂದಾಗ ಎಲ್ಲರ ಕಣ್ಣಲ್ಲಿ ನೀರು.
ಮೂಕ ಕರು ಕೃತಜ್ಞತೆ ಹೇಳಿಕೊಳ್ಳಲಾಗದೆ ಅಪ್ಪನ ಬಳಿ ಬಂದು ಆವನ ಕೆನ್ನೆ ನೇವರಿಸಿತು. 
ಅಪ್ಪ ಅದರ ಮೈ ಸವರುತ್ತಿದ್ದ………….
ಈಗಲೂ ಅಪ್ಪ ಹೇಳಿದ ಮಾತು ನನ್ನ ಕಿವಿಯಲ್ಲಿ ಗುಂಯ್-ಗುಡುತ್ತಿದೆ. "ಮನ್ಸಂದಾಗಲೀ, ಮೂಕ ಪ್ರಾಣಿಗಳದ್ದಾಗಲೀ ಜೀವ ಅಂದ್ ಮ್ಯಾಕೆ ಜೀವ ತಾನೇಯಾ?" 
 
ಮುಂದೆ ಕರು ಕರೆತರದೇ ಶಾಲೆಯ ಬಳಿಯೇ ಆಟವಾಡುತ್ತಾ ಕಾಲಕಳೆದ ನನ್ನ ಕಥೆ ಏನಾಯಿತೆನ್ನುವ ನಿಮ್ಮ ಪ್ರಶ್ನೆಗೆ ನನ್ನ ಬೆನ್ನಿನ ಮೇಲೆ ಈಗಲೂ ಉಳಿದಿರುವ ಬಾಸುಂಡೆಗಳೇ ಸಾಕ್ಷಿ!!
 
(ಗೆಳೆಯ ವಿಶ್ವನಾಥ ಕಲ್ಲಣ್ಣ ರವರ ನಿಜ ಜೀವನದ ಘಟನೆಯಿಂದ ಪ್ರೇರಿತನಾಗಿ…….)
–ಸಂತು

Monday, June 17, 2013

ಗಿಫ್ಟ್ ಶಾಪ್ ನಲ್ಲೊಂದು ದಿನ

"ಪಂಜು" ವಾರಪತ್ರಿಕೆಯಲ್ಲಿ  ನನ್ನ ಲೇಖನ:

http://www.panjumagazine.com/?p=1786


ಪ್ರಪಂಚ ಓಡುತ್ತಿದೆ ಅನ್ನುವ ಭ್ರಮೆಯಲ್ಲಿ ನಾವು! ಪ್ರಪಂಚವೇನೂ ಓಡುತ್ತಿಲ್ಲ, ಅದು ಇದ್ದಲ್ಲೇ ಇದೆ. ಆದರೆ ಮನುಷ್ಯನೆಂಬೋ ಈ ಮನುಷ್ಯ ಮಾಮೂಲಿ ಜೀವನವನ್ನು ಸುಖಾಸುಮ್ಮನೆ ಓಡಿಸುತ್ತಿದ್ದಾನೆ ಎನ್ನುವುದು ತಿಳಿದವರ ಮಾತು. ಅದೇನೇ ಇರಲಿ ಈ ಓಡುತ್ತಿರುವ ಜೀವನದ ಮಧ್ಯೆ ಅದೆಷ್ಟೋ ಮುಗ್ಧರು, ಬಡವರು, ಅಸಹಾಯಕ ಪುಟಾಣಿಗಳು ನಮ್ಮ ಕಾಲಿಗೆ ಎಡವಿದರೂ ನಮಗೆ ಗೊತ್ತೇ ಇಲ್ಲದವರಂತೆ ಮುಂದೆ ಹೋಗುತ್ತಿರುತ್ತೇವೆ.


ನಮ್ಮ ಪಕ್ಕದಲ್ಲೇ ರಸ್ತೆಯಲ್ಲಿ ಅಪಘಾತವಾಗಿ ನಮ್ಮ ಅಪ್ಪನ ವಯಸ್ಸಿನ ವ್ಯಕ್ತಿಯೊಬ್ಬ ಬಿದ್ದು ಹೊರಳಾಡುತ್ತಿದ್ದರೆ ಆತನ ಕಡೆಗೆ ಕಣ್ಣಾಯಿಸಿಯೂ ನೋಡದೆ ಆಫೀಸಿನತ್ತ ಗಾಡಿ ನಡೆಸುತ್ತೇವೆ. ಬಣ್ಣಬಣ್ಣದ ದೀಪಗಳೊಂದಿಗೆ ಜಗಮಗಿಸುವ ಪಾನಿಪೂರಿ ಅಂಗಡಿಯಲ್ಲಿ ಅಷ್ಟೊಂದು ಯೋಗ್ಯವಲ್ಲದಿದ್ದರೂ ಅದಕ್ಕೆ ನಲವತ್ತು ಐವತ್ತು ರೂಪಾಯಿ ಕೊಟ್ಟು ತಿನ್ನುವವರಿಗೆ, ಅಲ್ಲೇ ಹಿಂದೆ ನಿಂತು "ಅಮ್ಮ,ಅಣ್ಣಾ, ಹೊಟ್ಟೆಗೆ ಏನೂ ತಿಂದಿಲ್ಲಣ್ಣ, ಏನಾದರೂ ಸಹಾಯ ಮಾಡಿ" ಎನ್ನುವ ಸ್ವರ ಕೇಳಿಸುವುದೇ ಇಲ್ಲ. ಅವರಿಗೆ ಐವತ್ತು ಪೈಸೆ ಕೊಡದಿದ್ದರೂ ನಡೆದೀತು. ಆ ಹಸಿವಿನ ಮುಖವನ್ನೊಮ್ಮೆ ನೋಡಿದರೆ ಸಾಕು. ಕಡೇ ಪಕ್ಷ ಆ ಹಸಿವಿನ ನೋವಾದರೂ ಗೊತ್ತಾಗುತ್ತದೆ. ಆದರೆ ಅವರತ್ತ ನೋಡುವ ವ್ಯವಧಾನವೆಲ್ಲಿಯಾದರೂ ನಮಗೆಲ್ಲಿದೆ.


ಇಂತಹ ಪ್ರಪಂಚದ ಮಧ್ಯದಲ್ಲೂ ಅಲ್ಲಲ್ಲಿ ಬೇರೆಯೇ ತರಹದ ಜನಗಳು ನಮಗೆ ಕಾಣ ಸಿಗುತ್ತಾರೆ. ಅಂತಹದ್ದೊಂದು ಅನುಭವವನ್ನು ನಾ ಹೇಳುತ್ತಿದ್ದೇನೆ.
ನೆನಪಿಡಿ, ಇದು ಕಟ್ಟು ಕಥೆಯಲ್ಲ!!


—————————————————
ಅರಮನೆ ನಗರಿ ಮೈಸೂರಿನ ಹೃದಯಭಾಗದಲ್ಲಿರುವ ಸರಸ್ವತಿಪುರಂನಲ್ಲಿ ಪ್ರತಿಷ್ಟಿತ ಕಂಪೆನಿಯ ಗಿಫ್ಟ್ ಶಾಟ್ ಒಂದಿದೆ. ಅಲ್ಲಿಗೆ ಬರುವ ಗ್ರಾಹಕರೆಲ್ಲರೂ ಕೊಂಚ ಶ್ರೀಮಂತ ವರ್ಗದವರೇ. ಏಕೆಂದರೆ ಅಲ್ಲಿ ಮಾರುವ ಉಡುಗೊರೆ ಸಾಮಾನುಗಳೆಲ್ಲ ಬ್ರಾಂಡೆಡ್ ನವು, ಹೆಚ್ಚಾಗಿ ವಿದೇಶೀ ಮಾಲುಗಳೇ. ಬೇರೆಲ್ಲೋ ಚಿಕ್ಕ ಅಂಗಡಿಗಳಲ್ಲಿ ಕೊಂಡರೆ ಸಿಗುವ ಸಾಮಾನುಗಳನ್ನು ಇಲ್ಲಿ ದುಪ್ಪಟ್ಟು ದರದಲ್ಲಿ ಮಾರಾಟ ಮಾಡಲಾಗುತ್ತದೆ. ಕೊಡುವ ಕಾರಣವೊಂದೇ, ಅವುಗಳ ಗುಣಮಟ್ಟ ಬೇರಾವ ಅಂಗಡಿಗಳಿಗೂ ಸರಿಸಾಟಿಯಾಗಲಾರದು.


ಅಲ್ಲಿ ಕೇವಲ ಗ್ರಾಹಕರ ನಿರ್ವಹಣೆಗಾಗಿ ಐದಾರು ಜನ ಹುಡುಗಿಯರು ಕೆಲಸ ಮಾಡುತ್ತಿದ್ದಾರೆ. ಅವರ ಕೆಲಸವೆಂದರೆ ಗ್ರಾಹಕರಿಗೆ ತಮ್ಮ ಗಿಫ್ಟ್ ಗಳನ್ನು ಆರಿಸಿಕೊಳ್ಳಲು ಸಹಾಯ ಮಾಡುವುದು. ಅವರು ಆರಿಸಿದ ಮೇಲೆ ಅವುಗಳನ್ನು ಉಡುಗೊರೆಗಾಗಿ ಗಿಫ್ಟ್ ಪ್ಯಾಕ್ ಮಾಡುವುದು.ಆ ಹುಡುಗಿಯರಿಗೆ ಆ ಗಿಫ್ಟ್ ಶಾಪ್ ನ ಮಾಲೀಕ ಕೊಡುವುದು ಮಾಸಿಕ ಕೇವಲ ಎರಡು ಸಾವಿರ ರುಪಾಯಿ. ಅವರುಗಳಿಗೆ ಆ ಸಂಬಳವನ್ನು ಬಿಟ್ಟರೆ ಬೇರಾವ ಆದಾಯ ಬರುವುದಿಲ್ಲ. ಆದರೆ ದಿನದ ಹೊಟ್ಟೆಪಾಡಿಗಾಗಿ ಕೆಲಸ ಮಾಡಲೇಬೇಕು. ಅದೂ ಬೆಳಗ್ಗೆ ಒಂಭತ್ತರಿಂದ ರಾತ್ರಿ  ಎಂಟರತನಕ! ನೆನಪಿಡಿ, ದಿನ ಪೂರ ನಿಂತೇ ಇರಬೇಕು. ಅಲ್ಲಿ ಆ ಹುಡುಗಿಯರು ಕೆಲಸದ ಮಧ್ಯೆ ಗಿರಾಕಿಗಳ ಬಗ್ಗೆ ಗಮನ ಕೊಡದೇ, ಮಧ್ಯೆ ಕುಳಿತುಬಿಡುತ್ತಾರೆ ಎಂಬ ಕಾರಣದಿಂದ ಅವರಿಗಾಗಿ ಯಾವುದೇ ಕುರ್ಚಿಗಳನ್ನು ಹಾಕಿಲ್ಲ.  ಮಾಲೀಕ ಎಂತಹ ಜಿಪುಣನೆಂದರೆ, ಹಬ್ಬ ಹರಿದಿನಗಳಲ್ಲಿ ರಾತ್ರಿ ಎಂಟರ ನಂತರ ಸ್ವ ಇಚ್ಚೆಯಿಂದ ಕೆಲಸ ಮಾಡಿದರೂ ಒಂದು ರೂಪಾಯಿಯನ್ನೂ ಜಾಸ್ತಿ ಕೊಡುತ್ತಿರಲಿಲ್ಲ. ಇಂತಹ ಪರಿಸ್ಥಿತಿಯಲ್ಲೂ ಹೇಗಾದರೂ ಮಾಡಿ ಹೆಚ್ಚು ವ್ಯಾಪಾರ ಮಾಡಬೇಕು ಎನ್ನುವುದು ಮಾಲೀಕನ ಆಶಯ, ಹೀಗಾಗಿ ಕೆಲಸದ ಹುಡುಗಿಯರ ಮೇಲೆ ಒತ್ತಡ ಹೇರುತ್ತಿದ್ದ.


ಅದೊಂದು ಮಧ್ಯಾಹ್ನ, ಹೊರಗೆ ಬಿರುಬಿಸಿಲು. ಸದ್ಯದಲ್ಲೇ ಯಾವುದೋ ಹಬ್ಬವಿದ್ದುದರಿಂದ ಆ ಅಂಗಡಿ ಉಡುಗೊರೆ ಕೊಳ್ಳುವ ಗ್ರಾಹಕರಿಂದ ತುಂಬಿಹೋಗಿದೆ.  ಎಲ್ಲ ಹುಡುಗಿಯರು ಗ್ರಾಹಕರನ್ನು ಗಮನಿಸುವುದರಲ್ಲಿ ತಲ್ಲೀನರಾಗಿದ್ದಾರೆ. ಆಗ BMW ಕಾರೊಂದು ಬಂದು ನಿಲ್ಲುತ್ತದೆ. ಅದರೊಳಗಿಂದ ಇಳಿದ ವ್ಯಕ್ತಿಯ ವೇಷ ಭೂಷಣ ಹಾವ ಭಾವವೇ ಆತ ಆಗರ್ಭ ಶ್ರೀಮಂತ ಎನ್ನುವುದನ್ನು ಸಾರಿ ಹೇಳುತ್ತಿತ್ತು. ಟಕಟಕನೆ ನಡೆದು ಬಂದು ನೇರ ಆ ಹುಡುಗಿಯ ಬಳಿಗೆ ಹೋಗುತ್ತಾನೆ. "ನನ್ನ ಕಸಿನ್ ಮಗುವಿನ ಹುಟ್ಟಿದ ದಿನ ಇವತ್ತು. ಏನಾದರೂ ಉಡುಗೊರೆ ಕೊಡಬೇಕು. ಕೊಂಚ ನಿಮ್ಮ ಅಂಗಡಿಯಲ್ಲಿರುವ ಉಡುಗೊರೆಯ ವಸ್ತುಗಳನ್ನೆಲ್ಲ ತೋರಿಸುತ್ತೀಯ" ಅಂತ ಕೇಳಿ ಒಂದೊಂದನ್ನು ಗಮನಿಸುತ್ತ ಹೋಗುತ್ತಾನೆ. ಅದೇಕೋ ಯಾವುದೂ ಇಷ್ಟವಾಗುವುದಿಲ್ಲ. ಕೊನೆಗೆ "ಯಾವುದೂ ಬೇಡ, ಒಳ್ಳೆಯ ಚಾಕಲೇಟ್ ಗಳನ್ನು ತೋರಿಸು" ಅಂತ ಕೇಳುತ್ತಾನೆ.


ಆ ಹುಡುಗಿ ಒಂದೊಂದು ಚಾಕಲೇಟ್ ತೆಗೆದು ತೋರಿಸುತ್ತ ಅವುಗಳ ಬೆಲೆ ಹೇಳತೊಡಗುತ್ತಾಳೆ. ಕೊನೆಗೆ ಆಯ್ಕೆ ಮಾಡಿದ ಎರಡರಲ್ಲಿ ಯಾವುದು ಅತ್ಯಂತ ರುಚಿಯಾಗಿದೆ ಅಂತ ಕೇಳುತ್ತಾನೆ. ಈಕೆ ಬರೇ ಬೆಲೆ ನೋಡಿ ದುಬಾರಿ ಬೆಲೆಯ ಚಾಕಲೇಟ್ ತೋರಿಸಿ "ಇದು ಚೆನ್ನಾಗಿದೆಯಂತೆ ಸರ್, ತಗೊಳ್ಳಿ" ಅಂತ ಕೇಳುತ್ತಾಳೆ.


"ಚೆನ್ನಾಗಿದೆಯಂತಾ, ಯಾಕೆ ಈ ಅಂತೆ-ಕಂತೆ? ಯಾಕಮ್ಮ ನಿಮಗೆ ಗೊತ್ತಿಲ್ವಾ ?"ಅವನ ಪ್ರಶ್ನೆ.
ಈಕೆ ಒಂದು ಕ್ಷಣ ಯೋಚಿಸತೊಡಗುತ್ತಾಳೆ. ಬರುತ್ತಿರೋದೆ ತಿಂಗಳಿಗೆ ಎರಡು ಸಾವಿರ, ಅದರಲ್ಲಿ ತಮ್ಮನ ಟ್ಯೂಷನ್ ಫೀಸ್, ಮನೆಗೆ ಅಡಿಗೆ ಸಾಮಾನು ಎಲ್ಲವನ್ನೂ ಅದರಲ್ಲೇ ತರಬೇಕು. 
ಇನ್ನು ಈ ಚಾಕಲೇಟ್ ಗೆ ಎಲ್ಲಿಂದ ನಾಲ್ಕುನೂರು ರೂಪಾಯಿಗಳನ್ನು ಕೊಡುವುದು?


"ಕ್ಷಮಿಸಿ ಸರ್, ಇಲ್ಲಿರುವ ಯಾವ ಹುಡುಗಿಗೂ ಇದರ ಟೇಸ್ಟ್ ಗೊತ್ತಿಲ್ಲ,  ನಮ್ಮ ಯೋಗ್ಯತೆಗೆ ಇದರ ಬೆಲೆ ಬಹಳ ದುಬಾರಿ ಸರ್. ನಮಗೆ ಸಿಗೋ ಸಂಬಳಕ್ಕೆ ನಮ್ಮ ಜೀವನ ಸಾಗಿಸೋದೆ ದೊಡ್ಡ ವಿಷಯ. ಅಂಥದ್ದರಲ್ಲಿ ಈ ಚಾಕಲೇಟ್ ತಿನ್ನುವ ದೊಡ್ಡ ಆಸೆ ಯಾಕೆ ಸರ್? ಅದಕ್ಕೋಸ್ಕರ ಬರೀ ಇದರ ಬಗ್ಗೆ ಕೇಳಿ ತಿಳಿದುಕೊಂಡಿದ್ದೇವೆ ಅಷ್ಟೇ!!" ಆ ಮುಗ್ಧ ಹುಡುಗಿಯ ನೇರ ನುಡಿ.


"ಓಕೆ ಕಣಮ್ಮ, ಪರವಾಗಿಲ್ಲ ಬಿಡಿ.ಎರಡು ಕೊಡಿ" ಎಂದು ಕೈಯಲ್ಲಿ ನೂರರ ಎಂಟು ನೋಟನ್ನು ಕೊಟ್ಟು, ನಂತರ ಹೇಳಿದರು.


"ಬರೀ ಒಂದನ್ನು ಮಾತ್ರ ಗಿಫ್ಟ್ ಪ್ಯಾಕ್ ಮಾಡಮ್ಮ, ಮತ್ತೊಂದನ್ನು ನೀವೆಲ್ಲರೂ ಹಂಚಿಕೊಂಡು ತಿನ್ನಿರಿ"!! ಅಂತ ಹೇಳಿ ಯಾರ ಮಾತಿಗೂ ಕಾಯದೇ, ತಾನು ಪ್ಯಾಕ್ ಮಾಡಿಸಿಕೊಂಡ ಚಾಕಲೇಟ್ ಹಿಡಿದು ಹೊರ ನಡೆಯುತ್ತಾನೆ.


ಅಲ್ಲಿ ನಿಂತಿದ್ದ ಆ ಎಲ್ಲ ಕೆಲಸದ ಹುಡುಗಿಯರ ಕಣ್ಣಲ್ಲಿ ಕೃತಜ್ಞ ಭಾವ, ಕಾಣದ ಹನಿ ಕಣ್ಣೀರು.
ಅಂಗಡಿ ಮಾಲೀಕ ಮಾತ್ರ ಬೆಪ್ಪು!!


 ನನಗನ್ನಿಸಿದ್ದು "ಹೀರೋಗಳನ್ನು ನೋಡೋಕೆ ಸಿನಿಮಾಗಳಿಗೇ ಹೋಗಬೇಕಾ??

Thursday, February 14, 2013

ಕಣ್ಣು - ಕಣ್ಣೀರು (ಚುಟುಕಗಳು)



("ಪಂಜು" ಅಂತರ್ಜಾಲ ತಾಣದಲ್ಲಿ February-4ರಂದು ಪ್ರಕಟವಾದ ನನ್ನ ಚುಟುಕಗಳು
http://www.panjumagazine.com/?p=499)


 =========================================
(ಚಿತ್ರಕೃಪೆ:Google)
ಕಣ್ಣೀರು

ಅತ್ತುಬಿಡು ಎಂದಾಗ,
ಬರದ ಹನಿ,
ಅಳಬೇಡ ತಡೆಯೆಂದಾಗ,
ಉಕ್ಕಿ ಹರಿವ ಧಾರೆ!!

 =========================================

ಹೃದಯ

ಇದ್ದಾಗ,
ಕೊಂಚವೂ ಗೋಚರಿಸದ ,
ತನ್ನನ್ನೇ ಕೊಟ್ಟು ಬರಿದಾದ ಮೇಲೆ,
ಭಾರ ತೋರುವ,
ಏಕೈಕ  ವೈಚಿತ್ರ್ಯ!!

 =========================================

ಕಣ್ಣು

ತೆರೆದಿದ್ದಾಗ
ಇದ್ದುದನ್ನು
ಮಾತ್ರ ತೋರುವ,
ಮುಚ್ಚಿದಾಗ 
ಏನೇನನ್ನೋ
ತೋರುವ
ಪ್ರಚೋದಕ!!

 =========================================

Monday, February 11, 2013

ಬರೀ ಗೆಲ್ಲಬೇಕೆನ್ನುವವರಿಗಲ್ಲ...ಮದುವೆ!!


ಟೈಮಾಯ್ತು ಧಾರೆ ಆಮೇಲೆ ಮುಂದುವರೆಯಲಿ.
ಈಗ ತಾಳಿ ಕಟ್ಟಿಸಿಬಿಡಿ ಅಯ್ನೋರೇ.

ಬೇಗ ಬೇಗ ಬಾರಪ್ಪ.....
ಯಾರಮ್ಮಾ ಅದು, ಬೇಗ ಹೋಗಿ ಈ ಮಾಂಗಲ್ಯ ತಟ್ಟೆನ ಎಲ್ಲ ಹಿರಿಯರ ಹತ್ರ ಮುಟ್ಟಿಸಿಕೊಂಡು ಬಾರಮ್ಮ.
ಇನ್ನೊಂದಿಬ್ರು ಬೇಗ ಹೋಗಿ ಅಕ್ಷತೆ ಎಲ್ಲರಿಗೂ ಹಂಚಿ.

ಸಂತು, ಬಾರಪ್ಪ ನೀನು ಎಡಗಡೆ ಕೂತ್ಕೋ.
ಲಾವಣ್ಯ ನೀನು ಈ ಕಡೆ ಕೂತ್ಕೊಳ್ಳಮ್ಮ.

ಇಡೀ ಮದುವೆ ಛತ್ರದಲ್ಲಿದ್ದ ಜನಗಳೆಲ್ಲ ಮಂಟಪದ ಸುತ್ತ ಇರುವೆಗಳು ಮುತ್ತಿಕೊಂಡಂತೆ ನಿಂತುಕೊಂಡರು.
ಇದೇನು ನಿಜವಾ?! ನನಗೇ ನಾನೇ ಕೇಳಿಕೊಂಡ ಪ್ರಶ್ನೆ!!


ಲಾವಣ್ಯ ನೀವು ಸಂತೋಷರ ಕಾಲನ್ನು ಮುಟ್ಟಿ  ನಮಸ್ಕಾರ ಮಾಡ್ಕೊಳಿ.
ಅಷ್ಟರವರೆಗೆ ಸುಮ್ಮನೆ ನಿಂತಿದ್ದ ಗೆಳೆಯರು "ಮಗಾ, ನಿನ್ ಲೈಫ್ ಅಲ್ಲಿ ಮೊದಲ ಮತ್ತು ಕೊನೆ ಸಲ ಹೆಂಡತಿಯಿಂದ ನಮಸ್ಕಾರ ಮಾಡಿಸಿಕೊಳ್ಳೋದು, ಚೆನ್ನಾಗಿ ಮಾಡಿಸಿಕೊ"
ಎಲ್ಲ ಗೊಳ್ ಎಂದು ನಕ್ಕರು.

ಬೇಗ ಆ ಮಾಂಗಲ್ಯ ಇರೋ ತಟ್ಟೆ ತಗೊಳ್ಳಿ.
ಇಬ್ಬರೂ ಅದಕ್ಕೆ ವಿಭೂತಿ, ಅರಿಶಿನ, ಕುಂಕುಮ, ಹೂವು ಇಟ್ಟು ಪೂಜೆ ಮಾಡಿ.
ಇಬ್ಬರೂ ಈ ಅಕ್ಷತೆ ತಗೊಂಡು ಮಾಂಗಲ್ಯದ ಮೇಲೆ ಹಾಕಿ.
ಇಬ್ಬರೂ ಗಂಧದಕಡ್ಡಿ ಹಚ್ಚಿ ಪೂಜೆ ಮಾಡಿ.

ಸಂತೋಷ್ ಈಗ ನೀನು ಆ ಕರ್ಪೂರದ ಆರತಿ ಬೆಳಗು. ನಿಧಾನ....
ಅಜಯ್ ಸುಮ್ಮನಿರದೆ, "ಹೇಯ್ ನೋಡ್ರೋ ಸಂತೋಷನ್ ಕೈ ನಡುಗ್ತಾ ಇದೆ."
ಎಲ್ಲರೂ ಗೊಳ್ ಎಂದು ನಕ್ಕರು.
"ಪಾಪ, ನಮ್ ಹುಡುಗನ್ನ ನೋಡಿ ನಗಬೇಡ್ರಪ್ಪ, ಅವನಿಗೆ ತಾಳಿ ಕಟ್ಟಿ ಅಭ್ಯಾಸ ಇಲ್ಲ, ಇದೇ ಮೊದಲು" ಗಂಡಿನ ಕಡೆಯವರ ತಿರುಗೇಟು.
ಮತ್ತೆ ಎಲ್ಲರ ಮುಖದಲ್ಲಿ ನಗು.

ಈಗ ಸಂತೋಷ್ ಮಾಂಗಲ್ಯವನ್ನು ಕೈನಲ್ಲಿ ತಗೊಳ್ಳಪ್ಪ.
ಸರಿ, ವಾದ್ಯದವರಿಗೆ ಹೇಳಿ. ಮಂಗಳವಾದ್ಯ.......ಮಂಗಳವಾದ್ಯ.....

ಡುಂ ಡುಂ ಡುಂ ಡುಂ ಡುಂ ಡುಂ ಡುಂ ಡುಂ ಡುಂ ಡುಂ ............

================================






11-Feb-2008

ಹೌದು, ಗೆಳೆಯರೇ, ಈ ಮೇಲಿನ ಪ್ರಸಂಗ ನಡೆದು ಇವತ್ತಿಗೆ ಸರಿಯಾಗಿ ಐದು ವರ್ಷ. ನಾನು ಮತ್ತು ನನ್ನ ಗೆಳತಿ, ಬಾಳ ಸಂಗಾತಿಗಳಾಗಿ ಒಬ್ಬರಿಗೊಬ್ಬರು ಕೈಕೈ ಹಿಡಿದ ಸಂದರ್ಭ.
ಇಡೀ ಕಲ್ಯಾಣ ಮಂಟಪ ಸಡಗರದಲ್ಲಿ ನಲಿಯುತ್ತಿದ್ದರೆ, ಮಗಳನ್ನು ಚಿಕ್ಕಂದಿನಿಂದ ಮುದ್ದಾಗಿ ಬೆಳೆಸಿ ಇನ್ನೊಬ್ಬರ ಮನೆಗೆ ಕಳುಹಿಸಿಕೊಡಲು ಹೆತ್ತವರು ಗದ್ಗದಿತರಾದ ಹೃದಯಸ್ಪರ್ಶೀ ಸಂದರ್ಭ.
ಒಂದೆಡೆ ಪ್ರೀತಿಸಿದವಳನ್ನು ಮದುವೆಯಾದೆ ಎಂಬ ಖುಷಿಯಿದ್ದರೆ, ಇನ್ನೊಂದೆಡೆ ಸಾವಿರ ಸವಾಲುಗಳ ಕೊಟ್ಟು,  "ನೋಡಿಯೇಬೇಡೋಣ, ನಾನಾ, ಇಲ್ಲ ನೀನಾ?" ಅಂತ ಭುಜ ತಟ್ಟಿ ನಿಂತಿರುವ
ಜೀವನ ಒಂದು ಕಡೆ.  ಬಹುಷಃ ಇದು ಎಲ್ಲರ ಜೀವನದಲ್ಲಿ ಬರುವಂತಹ ಅಮೂಲ್ಯ ಘಳಿಗೆಗಳಲ್ಲೊಂದು.

ಆ ಕ್ಷಣಗಳನ್ನು ಈಗಲೂ ನೆನೆಸಿಕೊಂಡರೆ ಮೈ ರೋಮಾಂಚನಗೊಳ್ಳುತ್ತದೆ. ಅಪ್ಪ ಕೊಡಿಸಿದ ಮೊದಲ ಡ್ರಾಯಿಂಗ್ ಬುಕ್ ನಲ್ಲಿ ಯಾವುದೇ ಚಿತ್ರ ಬರೆದಿದ್ದರೂ, ಅದನ್ನು ಕೆಲವು ವರ್ಷಗಳ ನಂತರ ತೆರೆದು ನೋಡಿದಾಗ ಮೈಪುಳಕಗೊಳ್ಳುತ್ತದೆಯಲ್ಲ ಅದೇ ರೀತಿಯ ಭಾವತರಂಗಗಳನ್ನು ಸೃಷ್ಟಿಸುವ ವಿಶೇಷ ಘಳಿಗೆಯೆಂದರೆ ಅದು.

ಇದಾಗಿ ಐದು ವರ್ಷಗಳಾಗಿವೆ ಎಂದು ನಂಬಲೂ ಕಷ್ಟವಾಗುತ್ತದೆ. ನಿಜಕ್ಕೂ ಸಂಸಾರದ ಕ್ಷಣಗಳನ್ನು ನೆಮ್ಮದಿಯಿಂದ ಕಳೆಯಬೇಕೆಂದರೆ ಸುಖ-ದುಃಖಗಳೆರಡನ್ನೂ ಒಂದೇ ರೀತಿಯಲ್ಲಿ ಸ್ವೀಕರಿಸಿ ಸಹಬಾಳ್ವೆಯಿಂದ ಜೀವನ ನಡೆಸುವ ಮನಸ್ಥಿತಿಯಿರಬೇಕು. ಗೆಲ್ಲುವ ಸೋಲುವ ಎರಡಕ್ಕೂ ಸಿದ್ಧವಿರಬಲ್ಲವರಿಗೆ ಮಾತ್ರ ಈ ವಿವಾಹ. ಬರೇ ನಾನು ಮಾತ್ರ ಗೆಲ್ಲುವೆನೆನ್ನುವ ಮನೋಭಾವದವರಿಗಲ್ಲ ಎಂಬುದು ನಾ ಕಂಡುಕೊಂಡ ಉತ್ತರ. ವಿವಾಹನಂತರದ ಜೀವನದ ಬಗ್ಗೆ ಏನೇನೋ ಹೇಳಿ ದಿಗಿಲು ಮೂಡಿಸಿದ್ದ ಗೆಳೆಯರೆಲ್ಲರೂ ಒಮ್ಮೆ ನೆನಪಾಗಿ ನಗು ಬರುತ್ತದೆ.





ಹೀಗೆಯೇ ನನ್ನ ಲಗ್ನಪತ್ರಿಕೆಯನ್ನು ನೋಡುವಾಗ ನನ್ನ ಮನಃ ಪಟಲದಲ್ಲಿ ಮೂಡಿದ ಈ ಚಿತ್ರಗಳನ್ನು ಈ ದಿನ ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ.
ನಮ್ಮ ಮೇಲೆ ನಿಮ್ಮ ಆಶೀರ್ವಾದವಿರಲಿ...ಸದಾ.

ನಿಮ್ಮವನು
ಸಂತು.

Tuesday, February 5, 2013

ನಾ ಕಂಡ ಹೀರೋಗಳು-1

ಪಂಜು ವೆಬ್ ಸೈಟ್ ನ ಮೊದಲ ಸಂಚಿಕೆಯಲ್ಲೇ ಪ್ರಕಟವಾದ ನನ್ನ ಲೇಖನ.
ಲಿಂಕ್: http://www.panjumagazine.com/?p=70

===========================================================
ನಾನಾಗ ಒಂಭತ್ತನೆಯ ತರಗತಿಯಲ್ಲಿ ಓದುತ್ತಿದ್ದೆ. ಆ ವರ್ಷದಲ್ಲಿ ನಡೆದ ರಾಷ್ಟ್ರ ಮಟ್ಟದ ಭಾರತೀಯ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಮೊದಲು ಜಿಲ್ಲಾ ಮಟ್ಟದ ಸ್ಪರ್ಧೆ ಮೈಸೂರಿನಲ್ಲಿ ನಡೆದಿತ್ತು. ನಮ್ಮ ವಿಜ್ಞಾನ ಮಾಸ್ತರರಾಗಿದ್ದ ನಾಗೇಂದ್ರರವರ ಮಾರ್ಗದರ್ಶನದಲ್ಲಿ ಭಾಗವಹಿಸಿದ್ದ ನಾನು, ಗ್ರಾಮೀಣ ವಿಭಾಗದಿಂದ ರಾಜ್ಯ ಮಟ್ಟದ ಸಮಾವೇಶಕ್ಕೆ ಆಯ್ಕೆಯಾಗಿದ್ದೆ.
ಬರೀ ೧೫ ದಿನಗಳ ಕಾಲಾವಕಾಶವಿದ್ದುದರಿಂದ ನಾನು ನಮ್ಮ ಮಾಸ್ತರರ ಕೊಳ್ಳೇಗಾಲ ನಿವಾಸದಲ್ಲಿಯೇ ಬೀಡು ಬಿಟ್ಟು ಹಗಲಿರುಳು ಶ್ರಮಿಸಿದ್ದೆ. ರಾಜ್ಯಮಟ್ಟದ ಸಮಾವೇಶಕ್ಕೆ ಅರಸೀಕೆರೆ ಮದುವೆ ಹೆಣ್ಣಿನಂತೆ ಅಲಂಕಾರಗೊಂಡಿತ್ತು. ಬೆಳಿಗ್ಗೆಯೇ ಕೊಳ್ಳೇಗಾಲ ಬಿಟ್ಟ ನಾವು ಮಧ್ಯಾಹ್ನವೇ ಅರಸೀಕೆರೆ ತಲುಪಿದ್ದೆವು. ಪ್ರತಿ ಜಿಲ್ಲೆಯವರಿಗೊಂದು ಕೊಂಚ ವಿಶಾಲವೆನಿಸುವಷ್ಟು ಜಾಗವಿದ್ದ ಕೊಠಡಿಯನ್ನು ತಂಗಲು ವ್ಯವಸ್ಥೆ ಮಾಡಲಾಗಿತ್ತು. ಬಿಸಿಲ ಝಳವಿದ್ದುದರಿಂದ ಆ ಕೊಠಡಿಯಲ್ಲಿ ಮಲಗಿಕೊಂಡ ಕೂಡಲೇ ಅದ್ಯಾವಾಗ ನಿದ್ರೆ ಹತ್ತಿತೆಂದೇ ತಿಳಿಯಲಿಲ್ಲ.

ಸಂಜೆ ಏಳುವಷ್ಟರಲ್ಲಿ ಮೈಸೂರು ಜಿಲ್ಲೆಯ ನಗರ ವಿಭಾಗಗಳಿಂದ ಬರಬೇಕಿದ್ದ ಅಭ್ಯರ್ಥಿಗಳೆಲ್ಲ ತಮ್ಮ ಮಾರ್ಗದರ್ಶಕರ ಜತೆ ಬಂದು ಕೊಠಡಿ ಸೇರಿಯಾಗಿತ್ತು. ನಾಗೇಂದ್ರ ಮಾಸ್ತರರು ಎದ್ದವರೇ ಮುಖ ತೊಳೆದು ಫ್ರೆಶ್ ಆಗಿ ಬರಲು ಹೊರಟರು. ನಾನು ಕೊಠಡಿಯಲ್ಲೇ ಉಳಿದೆ. ಪಕ್ಕದಲ್ಲಿ ಕುಳಿತು ಮೈಸೂರು ಜಿಲ್ಲೆಯಿಂದ ಬಂದ ಸಹ ಅಭ್ಯರ್ಥಿಗಳನ್ನು ನಿಧಾನವಾಗಿ ಗಮನಿಸತೊಡಗಿದೆ. ಬಂದವರೆಲ್ಲ ನಗರ ಪ್ರದೇಶದವರೇ ಆಗಿದ್ದು ನೋಡಲಿಕ್ಕೆ ಬಹಳ ನೀಟಾಗಿ ಡ್ರೆಸ್ ಮಾಡಿಕೊಂಡಿದ್ದರು. ಅದ್ಯಾವುದೋ ಸಿಕ್ಕ ಪ್ಯಾಂಟ್, ಶರ್ಟನ್ನು ಸಿಕ್ಕಿಸಿಕೊಂಡು ಬಂದಿದ್ದ ನನಗೆ ಏನೋ ಒಂದು ತರಹದ ಕೀಳರಿಮೆ ಕಾಡತೊಡಗಿತ್ತು.

 


ಆ ಟೀಚರ್ ಗಳು ಬಹಳ ನಿರರ್ಗಳವಾಗಿ ಮಾತನಾಡುತ್ತಿದ್ದರು. ಅವರ ಶಿಷ್ಯರುಗಳು ಕೂಡ!! ನಾ ಎದ್ದಿದ್ದನ್ನು ನೋಡಿ ಆಲ್ಲಿದ್ದ ಟೀಚರ್ ಗಳಲ್ಲೊಬ್ಬರು ಬನ್ನಿ ಎಲ್ಲರೂ ಪರಿಚಯಿಸಿಕೊಳ್ಳೋಣ ಎಂದು ಸೂಚಿಸಿದರು. ಯಾಕೋ ಸಂಕೋಚದಿಂದ ಎದ್ದು ನಿಂತು ಅವರ ಬಳಿಗೆ ಹೋದೆ. ಪ್ರತಿಯೊಬ್ಬರೂ ಇನ್ನೊಬ್ಬರಿಗೆ ಶೇಕ್ ಹ್ಯಾಂಡ್ ಕೊಡುವುದು ನಂತರ ಅವರ, ಶಾಲೆಯ ಮತ್ತು ಕುಟುಂಬದ ಹಿನ್ನೆಲೆಯನ್ನು ಹೇಳಬೇಕಿತ್ತು. ಆ ಹುಡುಗಿ ಓದುತ್ತಿರೋದು ಮರಿಮಲ್ಲಪ್ಪ ಸ್ಕೂಲಿನಲ್ಲಿ. ಅವರ ಅಪ್ಪ ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್ ನಲ್ಲಿ ಬ್ಯಾಂಕ್ ಮ್ಯಾನೇಜರ್. ಆ ಹುಡುಗ ಸೈಂಟ್  ಜೋಸೆಫ್ ಸ್ಕೂಲ್, ಅಪ್ಪ ಬೆಂಗಳೂರಿನಲ್ಲಿ ಸಿವಿಲ್ ಇಂಜಿನಿಯರ್ ಆಗಿದ್ದಾರೆ. ಹೀಗೆ ನಾಲ್ಕೈದು ಹುಡುಗರ ಪರಸ್ಪರ ಪರಿಚಯವಾದ ತರುವಾಯ ನನ್ನ ಸರದಿ ಬಂತು.
ಏನಂತ ತಾನೇ ಹೇಳಲಿ? ನನಗೆ ಯಾವಾಗಲೂ ನನ್ನ ಬಗ್ಗೆ ಕೀಳರಿಮೆಯಿತ್ತು. ಮೊದಲಿಗೆ ನಾನು ಕನ್ನಡ ಮಾಧ್ಯಮದ ಸರಕಾರೀ ಪ್ರೌಢಶಾಲೆಯಲ್ಲಿ ಓದುತ್ತಿದ್ದೇನೆ. ನಮ್ಮಪ್ಪ ಕೇವಲ ಒಬ್ಬ ವ್ಯವಸಾಯಗಾರರಷ್ಟೇ!! ಅದನ್ನು ಹೇಗೆ ಹೇಳಿಕೊಳ್ಳುವುದು? ಅದೇನು ಇಂಜಿನೀರ್ ಅಥವಾ ಬ್ಯಾಂಕ್ ಮ್ಯಾನೇಜರ್ ನಷ್ಟು ಹೇಳಿಕೊಳ್ಳಬಲ್ಲ, ಜೊತೆಗೆ ಅಷ್ಟೊಂದು ಸಂಬಳ ಬರಿಸುವ ಕೆಲಸವಲ್ಲ.

ವರ್ಷವಿಡೀ ಕಷ್ಟಪಟ್ಟು ವ್ಯವಸಾಯ ಮಾಡಿದ ಮೇಲೆ ಬಂದರೆ ಬಂತು, ಇಲ್ಲದಿದ್ದರೆ ಇಲ್ಲ ಎನ್ನುವ ಪರಿಸ್ಥಿತಿ. ಕಡೆಗೆ ಧೈರ್ಯ ಮಾಡಿ ಕೈ ಕುಲುಕಿದವನೇ "ನನ್ನ ಹೆಸರು ಸಂತೋಷ್, ಲೊಕ್ಕನಹಳ್ಳಿ ಎನ್ನುವ ಗ್ರಾಮದಲ್ಲಿ ಸರಕಾರೀ ಪ್ರೌಢಶಾಲೆಯೊಂದರಲ್ಲಿ ಒಂಭತ್ತನೇ ತರಗತಿ ಓದುತ್ತಿದ್ದೇನೆ" ಎಂದು ಹೇಳಿ ಬೇಗನೆ ಆ ವಾಕ್ಯ ಮುಗಿಸಿ ಹಿಂದೆ ಬರಲು ರೆಡಿಯಾದೆ!

ಅಷ್ಟು ಹೊತ್ತಿಗೆ ಸುಮ್ಮನೆ ಕೇಳಿಸಿಕೊಳ್ಳುತ್ತಿದ್ದ ಆ ಟೀಚರ್ ನನ್ನನ್ನು ಹೋಗದಂತೆ ಮತ್ತೆ ಕರೆದು "ಯಾಕಪ್ಪಾ ನಿಮ್ಮ ತಂದೆಯವರ ಕೆಲಸ ಹೇಳಲೇ ಇಲ್ಲ" ಅಂದುಬಿಟ್ಟರು. ಕಡೆಗೆ ಬೇರೆ ವಿಧಿಯಿಲ್ಲದೇ "ಏನೂ ಕೆಲಸ ಅಂತ ಏನಿಲ್ಲ ಮೇಡಂ, ನಮ್ಮಪ್ಪ ಕೇವಲ ಇರೋ ಚಿಕ್ಕ ಭೂಮಿಯಲ್ಲಿ ಬೇಸಾಯ ಮಾಡ್ತಾರೆ" ಎಂದು ಕೇವಲ ಆಯಮ್ಮನಿಗೆ ಕೇಳಿಸುವಷ್ಟು ಮಾತ್ರ ಹೇಳಿ ಹೊರಡಲನುವಾದೆ. ತಕ್ಷಣ ಮತ್ತೊಂದು ಪ್ರಶ್ನೆ…"ಏನು ಬೆಳೆಯುತ್ತೀರ", ನನ್ನ ಶಾರ್ಟ್ ಅಂಡ್ ಸ್ವೀಟ್ ಉತ್ತರ "ಜೋಳ". ಆ ಟೀಚರ್ ಗೆ ನನ್ನ ಮುಜುಗರ, ನಾ ಉತ್ತರಿಸುತ್ತಿದ್ದ ಧಾಟಿಯಲ್ಲಿಯೇ ಅರ್ಥವಾಗಿ ಹೋಯಿತು. ನನ್ನ ಹತ್ತಿರ ಬಂದವರೇ ನನ್ನ ಬೆನ್ನು ತಟ್ಟಿ, ಕೈಹಿಡಿದು ಹೇಳತೊಡಗಿದರು!!

 


"ಸಂತೋಷ್ ಮುಜುಗರ ಬೇಡಪ್ಪ, ಈ ದೇಶದ ಬೆನ್ನೆಲುಬು ರೈತ. ಇಲ್ಲಿರುವ ಕೋಟ್ಯಾಂತರ ಜನಗಳಲ್ಲಿ ಯಾರು ಬೇಕೆಂದರೂ ಇಂಜಿನಿಯರ್ ಆಗಬಹುದು. ಡಾಕ್ಟರ್ ಆಗಬಹುದು. ಅದಕ್ಕೆ ಕೇವಲ ವಿದ್ಯೆ ಬುದ್ದಿಯಿದ್ದರೆ ಸಾಕು. ಆದರೆ ರೈತರಾಗಲು ಮನಸ್ಸಿರಬೇಕು,ಉಳೋಕೆ ಭೂಮಿಯಿರಬೇಕು.ಆ ಭೂತಾಯಿಯನ್ನು ಮನಸಾರೆ ಭಕ್ತಿ ಭಾವದಿಂದ ಆಲಂಗಿಸಬೇಕು. ಅದಕ್ಕಿಂತಲೂ ದಣಿವಾದ ಮೇಲೂ ಉಳುವೆನೆನ್ನುವ ಛಲ ಬೇಕು. ಮಳೆರಾಯ ಬರುವನೆನ್ನುವ ನಂಬಿಕೆ ಬೇಕು. ಕೊನೆಗೆ ಉತ್ತು ಬಿತ್ತು ಫಸಲು ಬಂದ ಮೇಲೂ ಕೈಗೆ ಹಣ ಬರುವ ತನಕ ತಾಳ್ಮೆ ಬೇಕು. ಆದರೂ ರೈತನಿಗೆ ಸಿಗೋದು ಕೇವಲ ಬಿಡಿಗಾಸಷ್ಟೇ. ಆದರೂ ಮತ್ತೊಮ್ಮೆ ಆ ದುಡ್ಡಿನಲ್ಲಿ ಸಿಗುವ ಸಂತೋಷಕ್ಕೆ ದೇಹವನೊಡ್ಡದೇ, ಮತ್ತೊಮ್ಮೆ ನೇಗಿಲು ಕಟ್ಟಿ ಉಳಲು ಹೊರಡುತ್ತಾನೆ. ಹೀಗೆ ಇಡೀ ಜಗತ್ತಿಗೆ ದುಡಿಮೆಯೆಂದರೇನು ಅನ್ನುವುದನ್ನು ತೋರಿಸಿಕೊಡುತ್ತಾನೆ.
ಇಂಜಿನಿಯರ್, ಡಾಕ್ಟರ್ ಗಳು ಒಂದು ದಿನ ಕೆಲಸ ಮಾಡದೇ ಕುಳಿತರೂ ಏನೂ ಆಗುವುದಿಲ್ಲ, ಆದರೆ ಒಬ್ಬ ರೈತ ತನ್ನ ಕೆಲಸ ಮಾಡದೇ ಕೈಕಟ್ಟಿ ಕುಳಿತುಬಿಟ್ಟರೆ, ಇಡೀ ಜಗತ್ತಿಗೆ ಉಣ್ಣೋಕೆ ಅನ್ನದಗಳೂ ಇರುವುದಿಲ್ಲ. ಯಾರ ಹಂಗಿನಲ್ಲೂ ಬದುಕದೇ, ಕೇವಲ ಭೂತಾಯಿ ವರುಣರಾಯನನ್ನು ಮಾತ್ರ ನಂಬಿ ಬಾಳುವ ಏಕೈಕ ಸ್ವಾಭಿಮಾನಿ ರೈತ. ನಿಮ್ಮಿಂದ ನಾವು, ಆದರೆ ನಮ್ಮಿಂದ ನೀವಲ್ಲ. ಇಂದು ಆ ನಗರ ಪ್ರದೇಶಗಳಲ್ಲಿ ಕೋಟ್ಯಾಂತರ ಜನ ತಿನ್ನುವ ಪ್ರತೀ ಅನ್ನದಗಳಿನ ಹಿಂದೆ ನಿಮ್ಮ ನಿಸ್ವಾರ್ಥ ಪರಿಶ್ರಮವಿದೆ. ಕೃಷಿಯ ಬಗ್ಗೆ, ನಮ್ಮೆಲ್ಲ ದೇಶದ ರೈತರ ಬಗ್ಗೆ ನನಗೆ ಹೆಮ್ಮೆಯಿದೆ. ಅದಕ್ಕಾಗಿ ನಿಮ್ಮ ತಂದೆಗೆ ನಾನು ಕೃತಜ್ಞತೆ ಅರ್ಪಿಸಬಯಸುತ್ತೇನೆ. ಇನ್ನೆಂದಿಗೂ ನಿಮ್ಮ ತಂದೆಯ ಕೆಲಸದ ಬಗ್ಗೆ ನಿನಗೆ ಮುಜುಗರ ಬೇಡ."

ಈ ಮಾತನ್ನು ಕೇಳಿದ ನನಗೆ ಅರಿವಿಲ್ಲದೆಯೇ ರೋಮಾಂಚನವಾಯಿತು. ಇದುವರೆಗೂ ಅರ್ಥವಾಗಿರದಿದ್ದ ನಮ್ಮ ತಂದೆಯವರ ಕೃಷಿಯ ವಿಶೇಷತೆ ಈಗ ಅರ್ಥವಾಗಿ ಮನಸ್ಸಿನಲ್ಲಿಯೇ ಖುಷಿಪಟ್ಟೆ.ಗೊತ್ತಿದ್ದೂ ಗೊತ್ತಿರದಂತಿದ್ದ ನನ್ನ ಕಣ್ಣ ತೆರೆಸಿದ ಆ ಟೀಚರನ್ನು ನಾ ನನ್ನ ಜೀವನದಲ್ಲಿ ಮರೆಯಲಾರೆ. ಅದೇ ಕೊನೆ!! ಈಗ ಯಾರೇ "What is your Father?" ಎಂದು ಕೇಳಿದರೆ ಮುಜುಗರವಿಲ್ಲದೆಯೇ ಎದೆತಟ್ಟಿ "He is an agriculturist!!" ಎಂದು ಹೇಳುತ್ತೇನೆ. ಅದ್ಯಾಕೋ ಆವಾಗಲೆಲ್ಲ ಆ ಅರಸಿಕೆರೆಯ ಆ ಟೀಚರ್ ನೆನಪಿಗೆ ಬರುತ್ತಾರೆ!! ಆಗ ನನ್ನನ್ನು ನಾನು ಕೇಳಿಕೊಳ್ಳುತ್ತೇನೆ…. ಹೀರೋಗಳನ್ನು ನೋಡೋಕೆ ಕೇವಲ ಸಿನಿಮಾಗಳಿಗೆ ಹೋಗಬೇಕಾ ಅಂತ!!
–ಸಂತು



ಗುಟ್ಟು

"Kiyoshi Jewelers" ನಡೆಸುತ್ತಿರುವ "Valentine Couple Contest"ಗೆ ನನ್ನ ಮತ್ತು ನನ್ನ ಮಡದಿಯ ಭಾವಚಿತ್ರವನ್ನು ನನ್ನ ಒಂದು ಪುಟ್ಟ ಕವನದೊಂದಿಗೆ ಕಳುಹಿಸಿದ್ದೆ.
ಅದರ ನೆನಪಿಗಾಗಿ...
=============================================
 
ಒಬ್ಬನೇ ಬರಡು ಭೂಮಿಯ ಮೇಲೆ
ಉತ್ತು ಬಿತ್ತುವುದರಲ್ಲಿದ್ದೆ.
ಆಕೆ ಸಿಕ್ಕಳು, ಪ್ರೀತಿಮಳೆ ಸುರಿಸಿದಳು
ಈಗ ಬಾಳಭೂಮಿಯ ತುಂಬೆಲ್ಲ ನಗುವ ಹೂಗಳು!!

ನನ್ನ ಅವಳ ಗೆಳೆತನಕ್ಕೀಗ
ಬರೇ ಹನ್ನೊಂದು ವರ್ಷ!!
ನಮ್ಮಿಬ್ಬರ ಮಡಿಲಲ್ಲಿ ಪುಟ್ಟಿಯೊಬ್ಬಳಿದ್ದಾಳೆ
ತುಂಬಿರುವಳು ಬಾಳಿನಲಿ ಹರುಷ!

ಎಲ್ಲ ಹೇಳಿದರೇನು, ಪ್ರೀತಿಯಿಲ್ಲದಿದ್ದರೂ
ಇಲ್ಲಿ ಬದುಕಬಹುದು, ಅದು ಸುಳ್ಳಲ್ಲ!!
ಪ್ರಾಣವಿಲ್ಲದ ದೇಹ ಎಷ್ಟು ದಿನವಿದ್ದರೇನು
ಅದ ಜೀವನವೆಂದು ಕರೆವರಾರಿಲ್ಲ!!

ಕಳೆದಿಷ್ಟೂ ದಿನಗಳ ಜರಡಿ ಹಿಡಿದರೆ
ಕೆಳಗೆ ಸುರಿದದ್ದೆಲ್ಲ ಕೆಲವೇ ಹೊಟ್ಟು!.
ಮೇಲೆ ನೋಡಿ, ಉಳಿದದ್ದೆಲ್ಲ ಸಕ್ಕರೆ
ಅವಳ ಪ್ರೀತಿಯೇ ಇದರ ಗುಟ್ಟು!!

ಪ್ರೇಮರಾಗದಲಿ ಅಪಸ್ವರವೂ ಇಂಪು
ಹಾಡುವ ಸಾಲೆಲ್ಲ ಮುಗಿದ ಮೇಲೂ!
ಒಂದೊಂದು ಸ್ವರಗಳೂ ಕಾಡುತಲಿರುತಾವೆ
ಈ ದೇಹ ಇಲ್ಲಿಂದ ಅಳಿದ ಮೇಲೂ!!

====================================

Saturday, February 2, 2013

"ಚಿಕ್ಕ" ಮಕ್ಕಳಾ?

Poorvi and Me


ಮಕ್ಕಳು ಅಂತ ಅನ್ನುವಾಗ "ಚಿಕ್ಕ" ಅಂತ ಒಂದು ಪದ ಸೇರಿಸಿ ಚಿಕ್ಕಮಕ್ಕಳು ಅಂತ ಕರೆದುಬಿಟ್ಟಿರುತ್ತೇವೆ. ಅದು ಅವುಗಳ ವಯಸ್ಸು,ಆಕಾರವನ್ನು ಗಮನದಲ್ಲಿಟ್ಟುಕೊಂಡೋ ಅಥವಾ ಅವುಗಳ ಬುದ್ಧಿಶಕ್ತಿಯನ್ನು ಗಮನದಲ್ಲಿಟ್ಟುಕೊಂಡೋ ಅಂತ ಗೊತ್ತಾಗುವುದಿಲ್ಲ. ಕೆಲವರಂತೂ ಮಕ್ಕಳಿಗೆ ಲಾಜಿಕಲ್ ಆಗಿ ಯೋಚನೆ ಮಾಡುವುದಕ್ಕೆ ಬರುವುದಿಲ್ಲ ಅಂತ ಹೇಳುತ್ತಿರುತ್ತಾರೆ. ಅಂಥವರಿಗೆಲ್ಲ ತಮ್ಮ ಅಭಿಪ್ರಾಯ ತಪ್ಪು ಅಂತ ಗೊತ್ತಾಗುವುದೇ ಅವರ ಮನೆಯೊಳಗೆ ಒಂದು ಮಗು ಪ್ರವೇಶ ಕೊಟ್ಟಾಗ!!

======================================================

ಯಾವುದೇ ಕುತೂಹಲವಿದ್ದರೂ ನಾನು ಅದನ್ನು ನನ್ನ ಮಗಳು ಪೂರ್ವಿಯಿಂದಲೇ ಬಗೆಹರಿಸಿಕೊಳ್ಳಬಯಸುತ್ತೇನೆ.
ಎರಡು ತಿಂಗಳ ಹಿಂದೆ ನನಗೆ ಆ ಪ್ರಶ್ನೆ ಮನಸ್ಸಿನಲ್ಲಿ ಮೂಡಿ ಅವಳನ್ನೇ ಕೇಳಬೇಕೆನಿಸಿತು.

ನಾನು ಮತ್ತು ನನ್ನ ಮಡದಿ ಆಟವಾಡುತ್ತಿದ್ದ ಪೂರ್ವಿಯನ್ನು ಹತ್ತಿರ ಕರೆದೆವು.
ನಾನು ಕೇಳಿದೆ "ಪೂರ್ವಿ ಬಂಗಾರಿ, ನೀನು ದೊಡ್ಡವಳಾದ ಮೇಲೆ ಏನಾಗುತ್ತೀಯ?", ಅದು ನೇರ ಮತ್ತು ಇದ್ದಕ್ಕಿದಂತೆ ಅವಳತ್ತ ಎಸೆದ ಪ್ರಶ್ನೆ.
ಒಂದು ಚೂರು ಯೋಚನೆ ಮಾಡದೆ ಒಂದೇ ಕ್ಷಣದಲ್ಲಿ ಉತ್ತರಿಸಿದಳು, "ಪಪ್ಪಾ, ನಾನು ದೊಡ್ಡವಳಾದ ಮೇಲೆ lipstick ಹಚ್ಚಿಕೊತೀನಿ!!"
ತಡೆಯಲಾಗಲಿಲ್ಲ, ಗೊಳ್ ಎಂದು ನಕ್ಕುಬಿಟ್ಟೆವು. ಅವಳೂ ನಮ್ಮ ಜೊತೆ ನಕ್ಕಳು, ಕಾರಣ ತಿಳಿಯದೇ!

ಕೊನೆಗೆ ಅರ್ಥವಾಯಿತು.
ಅವರಮ್ಮನ ಬ್ಯಾಗ್ನಲ್ಲಿ Lipstick ಕಂಡಾಗಲೆಲ್ಲ ನಾನೂ ಹಚ್ಚಿಕೊಳ್ಳುತ್ತೇನೆ ಅಂತ ಹಠ ಮಾಡುತ್ತಾಳೆ.
ಅದಕ್ಕೆ ಅವರಮ್ಮನ ಒಂದೇ ಉತ್ತರ, "ಚಿಕ್ಕಮಕ್ಕಳೆಲ್ಲ ಹಚ್ಚಿಕೊಳ್ಳಬಾರದು,ನೀನು ದೊಡ್ದವಳಾದ ಮೇಲೆ ಹಚ್ಚಿಕೊಳ್ಳುವಿಯಂತೆ!!".

======================================================


ಬೆಂಗಳೂರಿನಿಂದ ಮೂರೂವರೆ ಘಂಟೆಯ ಪ್ರಯಾಣ ಮಾಡಿದರೆ ನನ್ನ ಊರು ಸಿಗುತ್ತದೆ. ಕೆಲಸಕ್ಕೆ ಸೇರಿದ ಮೇಲೆ ಇತ್ತೀಚಿಗೆ ಎರಡು ತಿಂಗಳಿಗೊಮ್ಮೆ ಊರಿಗೆ ಹೋಗುತ್ತೇನೆ. ನಾ ಹೋಗುವ ಸಮಯದಲ್ಲೇ ನಮ್ಮ ಜೊತೆ ಕಾಲ ಕಳೆಯಲು ನನ್ನ ಅಕ್ಕ ಕೂಡ ಅವರ ಕುಟುಂಬದ ಜೊತೆಗೆ ಹಾಜರಿಯಿರುತ್ತಾಳೆ. ನನ್ನ ಅಕ್ಕನ ಮಗನ ಹೆಸರು ನೂತನ್. ಪೂರ್ವಿ ಮತ್ತು ನೂತನ್ ಇಬ್ಬರಿಗೂ ಹೆಚ್ಚು ಕಡಿಮೆ ಒಂದೇ ವಯಸ್ಸಿನವರು (3 ವರ್ಷ), ನೂತನ್ ಕೇವಲ ಕೆಲವೇ ತಿಂಗಳುಗಳಲ್ಲಿ ಪೂರ್ವಿಗಿಂತ ದೊಡ್ಡವನು. ಮಕ್ಕಳು ತನ್ನ ಓರಗೆಯ ಇನ್ನಿತರ ಮಕ್ಕಳನ್ನು ಇಷ್ಟಪಡುವಷ್ಟು ಇನ್ನಾರನ್ನೂ ಇಷ್ಟಪಡುವುದಿಲ್ಲ. ಪೂರ್ವಿ ಬರುತ್ತಾಳೆಂದರೆ ನೂತನ್ ಗೆ ಎಲ್ಲಿಲ್ಲದ ಸಂಭ್ರಮವಿರುತ್ತದೆ. ಇಬ್ಬರೂ ಆಟವಾಡುತ್ತಾ ಕುಳಿತರೆ ಇಡೀ ಜಗತ್ತನ್ನೇ ಮರೆತುಬಿಟ್ಟಿರುತ್ತಾರೆ. ಆಗಾಗ ಜಗಳವಾಡುತ್ತಾರೆ ಕೂಡ.

ಹೊಸಬಟ್ಟೆಯ ಬೆಲೆ ಗೊತ್ತಾಗಲೆಂದು ಹಾಕಿರುತ್ತಾರಲ್ಲ ಆ PrcieTag ಒಂದು ನೂತನ್ ಕೈಗೆ ಸಿಕ್ಕಿತ್ತು, ಅದರಲ್ಲಿ ಒಂದು ಹೂವಿನ ಚಿತ್ರವಿದ್ದ ಕಾರಣ ಅದನ್ನು ತನ್ನ ಕೈಲಿ ಹಿಡಿದುಕೊಂಡಿದ್ದ. ಪೂರ್ವಿ ನೋಡಿದ್ದೇ ತಡ ಅದು ತನಗೆ ಬೇಕೆಂದು ರಂಪಾಟ ಮಾಡಿಬಿಟ್ಟಳು. ಅತ್ತಿದ್ದು, ಕಿತ್ತಾಡಿದ್ದು ಎಲ್ಲ ಆಯಿತು. ನೂತನ್ ಅವಳಿಗೆ ಅದನ್ನು ಕೊಡಲೇ ಇಲ್ಲ. ಕೊನೆಗೆ ನಾವೇ ಅಲ್ಲೆಲ್ಲೋ ಬಿದ್ದಿದ್ದ ಇನ್ನೊಂದು PrcieTag ತಂದು ಪೂರ್ವಿಗೆ ಕೊಡುವಷ್ಟರಲ್ಲಿ ಸಾಕಾಗಿತ್ತು. ಆದರೂ ನೂತನ್ ಕೈಲಿದ್ದ PrcieTag ಬೇಕಿತ್ತು ಅನ್ನುವಂತೆ ಪೂರ್ವಿ ಮುಖ ಮಾಡಿಕೊಂಡಿದ್ದಳು.

ಸೋಮವಾರದ ಬೆಳಗ್ಗೆಯೇ ಕಾರಿನಲ್ಲಿ ಹೊರಟು ನಿಂತೆವು. ನಾವು ಹೊರಡುತ್ತೇವೆಂದರೆ ಸಾಕು ನಮ್ಮ ಅಪ್ಪಅಮ್ಮನವರ ಮುಖ ಇದ್ದಕ್ಕಿದ್ದಂತೆ ಚಿಕ್ಕದಾಗಿಬಿಡುತ್ತದೆ. ಒಂದೆರಡು ದಿನಗಳಿಂದ ಓಡಾಡಿಕೊಂಡಿದ್ದ ಪೂರ್ವಿ ಹೊರಡುವಾಗ ಮೌನವಾಗಿಬಿಡುತ್ತಾರೆ. ಎಲ್ಲರೂ ಪೂರ್ವಿಯನ್ನು ಎತ್ತಿ ಮುದ್ದಾಡಿ ಕಳಿಸಿಕೊಡುವ ಸಮಯ. ನೂತನ್ ಸಪ್ಪೆ ಮುಖದಿಂದ ಅಮ್ಮನ ಹೆಗಲ ಮೇಲೆ
ಮಲಗಿದ್ದ.

ಎಲ್ಲರೂ ನೂತನ್ ಗೆ ಹೇಳಿದರು. "ನೂತನ್, ShakeHand ಕೊಡು, ಪೂರ್ವಿಗೆ Bye ಹೇಳು!!"
ಸಪ್ಪೆ ಮುಖದಿಂದಲೇ "Bye ಪೂರ್ವಿ" ಅಂತ ಹೇಳಿ ಮತ್ತೆ ಅವರಮ್ಮನ ಭುಜದ ಮೇಲೆ ಮಲಗಿಕೊಂಡ.
ಕಾರಿನ ಇಂಜಿನ್ ಸ್ಟಾರ್ಟ್ ಮಾಡಿ ಇನ್ನೇನು ಮುಂದೆ ಹೊರಡಬೇಕು.ತಕ್ಷಣ ಅದೇನು ನೆನಪಾಯಿತೋ ಹತ್ತಿರ ಓಡಿ ಬಂದವನೇ, ಜೇಬಿಂದ ಅದೇನನ್ನೋ ತೆಗೆದು "ತಗೋ ಇಟ್ಟುಕೋ" ಎಂದು ಕೊಟ್ಟ.

 ಪೂರ್ವಿ ಅದನ್ನು ಖುಷಿಯಿಂದ ತೆಗೆದುಕೊಂಡವಳೇ "Thank you, Bye" ಎನ್ನುತ್ತಾ ಮುಗುಳ್ನಕ್ಕಳು. ಅವನ ಮುಖದಲ್ಲೂ ಮುಗುಳ್ನಗು ಮಿಂಚಿ ಮರೆಯಾಯಿತು. ಅವನು ಅವಳಿಗೆ ಕೊಟ್ಟದ್ದು, ನೆನ್ನೆ ತಾನೇ ಘಂಟೆಗಟ್ಟಲೆ ಜಗಳವಾಡಲು ಕಾರಣವಾದ ಅದೇ "PriceTag"!! ನಿಂತಿದ್ದ  ಎಲ್ಲರಿಗೂ ಏನೆಂದು ಹೇಳಬೇಕೆಂದೇ ತಿಳಿಯಲಿಲ್ಲ.
 ಈ ಚಿಕ್ಕ-ಮಕ್ಕಳ ದೊಡ್ಡ-ಮನಸ್ಸು ಬಹಳ ಮೆಚ್ಚುಗೆಯಾಗಿ, ಹೃದಯ ತುಂಬಿ ಬಂತು!!


======================================================


ಮೊನ್ನೆ ಕಾರ್ಯದ ನಿಮಿತ್ತ Czech Republic ದೇಶಕ್ಕೆ ತತ್ ಕ್ಷಣ ಒಬ್ಬನೇ ಹೊರಡಬೇಕಾಗಿ ಬಂದಾಗ ಬಟ್ಟೆ ಬರೆಯನ್ನೆಲ್ಲ ಪ್ಯಾಕ್ ಮಾಡಿಕೊಳ್ಳುತ್ತಿದ್ದೆ.
ಪೂರ್ವಿ ಹತ್ತಿರ ಬಂದವಳೇ "ಪಪ್ಪಾ, ನನ್ನನ್ನೂ ಜೊತೆ ಕರ್ಕೊಂಡು ಹೋಗು, ಪಪ್ಪಾ " ಅಂತ ಕೇಳಿದಳು.
ನಾನಂದೆ, "ಬೇಡ ಬಂಗಾರಿ, ನಾನು ಒಬ್ಬನೇ ಹೋಗ್ತಾ ಇದ್ದೀನಿ".
ಪೂರ್ವಿ,"ಇಲ್ಲ ಪಪ್ಪಾ, ನಾನೂ ಜೊತೆಗೆ ಬರ್ತೀನಿ. ಪ್ಲೀಸ್. ನೀನು ನನಗೆ ಚಾಕಲೇಟ್, ಐಸ್ ಕ್ರೀಂ, ಚಿಪ್ಸ್, ಎಳನೀರು ಏನನ್ನೂ ಕೊಡಿಸು ಅಂತ ಕೇಳಲ್ಲ....ಪ್ಲೀ....ಸ್"

ಸುಮ್ಮನೆ ಅವಳು ಏನೇನೋ ಬೇಕೆಂದು ಹಠ ಮಾಡಿದಾಗಲೆಲ್ಲ , "ನೀನು ಹಠ ಮಾಡಿದರೆ ಯುರೋಪ್ ಗೆ ಕರ್ಕೊಂಡು ಹೋಗಲ್ಲ ನೋಡು" ಅಂತ ನಾನೇ ಅವಳಿಗೆ ಹೇಳುತ್ತಿದ್ದ ಮಾತುಗಳು ನೆನಪಾಗಿ ಬೇಸರವಾಗಿತ್ತು. ಅವಳನ್ನು ಬಿಟ್ಟು ಏರ್ ಪೋರ್ಟ್ ಗೆ ಹೊರಡುವ ಸಂದರ್ಭದಲ್ಲಿ ಕಣ್ಣೀರು ತುಂಬಿ ಬಂದಿತ್ತು.

======================================================


ಈಗಾಗಲೇ ನೀವೆಲ್ಲರೂ ನಾನು ಅವಳ ಜೊತೆ ಹಾಡುವ ವೀಡಿಯೊ ತುಣುಕೊಂದನ್ನು ನೋಡಿರುತ್ತೀರಿ. (ಇಲ್ಲದಿದ್ದರೆ ಈ ಕೆಳಕಂಡ ಲಿಂಕಿನಲ್ಲಿ ಒಮ್ಮೆ ನೋಡಿಬಿಡಿ.)

http://www.youtube.com/watch?v=vqawNp5Jse8

ನಾ ಅವಳ ಜೊತೆ ಕುಳಿತುಕೊಂಡು ಈ ಹಾಡು ಹಾಡಿ ಸುಮಾರು ಎರಡು ತಿಂಗಳಾಗಿದೆ. ನಾ ಪಕ್ಕದಲ್ಲಿ ಮಲಗಿರುವಾಗ ಭಾವಗೀತೆಗಳನ್ನು ಹಾಡುತ್ತಿದ್ದರೆ ಸುಮ್ಮನೆ ಕೇಳಿಸಿಕೊಳ್ಳುತ್ತಾ ಮಲಗಿಬಿಡುತ್ತಾಳೆ. ಇಂದು ಈ ಲೇಖನ ಬರೆಯುವುದಕ್ಕೆ ಕೊಂಚ ಮುಂಚೆ Czech Republic ನಿಂದ ಮನೆಗೆ ಫೋನ್ ಮಾಡಿದಾಗ ಆಕೆ ಇನ್ನೂ ಎಚ್ಚರವಾಗಿಯೇ ಇದ್ದಳು.ರಾತ್ರಿ ಹನ್ನೊಂದಾಗಿದ್ದರೂ ಮಲಗಿರಲಿಲ್ಲ. ಅವಳೊಂದಿಗೆ ಏನೇನೋ ಮಾತನಾಡಿದ ಮೇಲೆ ಕೊನೆಗೆ "ಪಪ್ಪಾ,ನನಗೆ ಏನನ್ನಾದರೂ ಹಾಡು"ಎಂದಳು."ನಾಕುತಂತಿ" ಹಾಡಿದೆ. ಹಾಡು ಮುಗಿಯುವುದರಲ್ಲಿ ಅಕೆಯ ಕಣ್ಣಿಗೆ ನಿದ್ರೆ ಹತ್ತಿತ್ತು.

ಎದುರಿದ್ದಾಗ ಮಕ್ಕಳು ಹಠ ಹಿಡಿದಾಗ ಸಹನೆ ಕಳೆದುಕೊಂಡು, ಅವುಗಳ ತರಲೆಗಳನ್ನು ನೋಡಿ ಬೇಸತ್ತು ಹೋಗಿರುತ್ತೇವೆ . ಅವುಗಳು ಎದುರಿಲ್ಲದಿದ್ದಾಗ ಅವುಗಳ ಗೈರುಹಾಜರಿಯಿಂದ ಉಂಟಾಗುವ ಒಂಟಿತನದ ಭಾವ ಇದೆಯಲ್ಲ, ಅದನ್ನು ಆ ಕಷ್ಟ ಅನುಭವಿಸಿದವನೇ ಬಲ್ಲ!!

ನಿಮ್ಮವನು
ಸಂತು.

Friday, February 1, 2013

ಹಿಂಗಿದ್ರು ನಮ್ ಮೇಷ್ಟ್ರು!

(ದಿನಾಂಕ 31-ಜನವರಿ-೨೦೧೩ ರಂದು ಅವಧಿಯಲ್ಲಿ ಪ್ರಕಟವಾದ ನನ್ನ ಲೇಖನ.
 http://avadhimag.com/?p=73186)

ಆರನೇ ಕ್ಲಾಸು ನಡೆಯುತ್ತಿತ್ತು.ಸಮಾಜ ವಿಜ್ಞಾನಕ್ಕೆ ಯಾರೂ ಇಲ್ಲದ ಕಾರಣ ನಮ್ಮ ಶಾಲೆಯ ಮುಖ್ಯೋಪಧ್ಯಾಯರೇ ಆ ವಿಷಯವನ್ನೂ ತೆಗೆದುಕೊಳ್ಳುತ್ತಿದ್ದರು.ವಿದ್ಯಾರ್ಥಿಗಳು ಅಷ್ಟೊಂದು ಸೀರಿಯಸ್ ಆಗಿ ಕುಳಿತುಕೊಳ್ಳುತ್ತಿರಲಿಲ್ಲ.ಸ್ವಲ್ಪ ದಿನಗಳಲ್ಲೇ ಇದ್ದಕ್ಕಿದ್ದಂತೆ ಹೊಸ ಉಪಾಧ್ಯಾಯರ ನೇಮಕವಾಯಿತು. ಎಲ್ಲ ವಿದ್ಯಾರ್ಥಿಗಳಿಗೂ ಹೊಸ ಮೇಷ್ಟ್ರು ಹೇಗಿರುತ್ತಾರೋ ಅನ್ನುವ ಕುತೂಹಲ. ಆ ಕುತೂಹಲ ಬಹಳಷ್ಟು ದಿನ ಉಳಿಯಲಿಲ್ಲ. ನಮ್ಮ ತರಗತಿಗೂ ಅವರನ್ನೇ ಪಾಠ ಮಾಡಲು ನೇಮಕ ಮಾಡಲಾಯಿತು.

ಕ್ಲಾಸಿನಲ್ಲಿ ಇದ್ದುದರಲ್ಲೇ ನಾನು ಕೊಂಚ ಚೆನ್ನಾಗಿ ಓದುತ್ತಿದ್ದೆ. ಅಪ್ಪ ಅಮ್ಮನಿಂದ ಯಾವತ್ತೂ ಓದಿನ ವಿಷಯಕ್ಕೆ ಹೀಗೆಯೇ ಮಾಡಬೇಕು ಅಂತ ಹೇಳಿಸಿಕೊಂಡವನಲ್ಲ. ಎಂದಿಗೂ ಯಾರಿಂದಲೂ ಬೈಸಿಕೊಳ್ಳದ ನಾನು ಅವತ್ತು ಮಾತ್ರ ದೊಣ್ಣೆಯಿಂದ ಪಟಾರನೆ ಏಟು ತಿಂದಿದ್ದೆ. ಮೊದಲ ಬೆತ್ತದೇಟು ಕಣ್ಣಲ್ಲಿ ನೀರು ತರಿಸಿತ್ತು. ಮನೆಗೆ ಹೋಗಿ ಏನೂ ಆಗಿಲ್ಲದವನಂತೆ ಸುಮ್ಮನಿದ್ದೆ. ಎಲ್ಲರಿಂದಲೂ ಬಹಳ ಹೊತ್ತು ಮುಚ್ಚಿಡಲಾಗಲಿಲ್ಲ. ಅಜ್ಜಿ ಕೆಂಪಾಗಿದ್ದ ನನ್ನ ಕೈ ನೋಡಿ “ಯಾವನ ಅವ ನನ್ ಕೂಸುನ್ ಕೈಗ್ ಹೊಡದೌನು? ಅವನ್ಗೇನು ಎದೆ ಸಿರ ಮುರದೋಗಿದ್ದ?” ಅಂತ ಹೊಡೆದ ಮೇಷ್ಟ್ರಿಗೆ ಬೈದಿದ್ದರು.
(ಯಾರು ನನ್ನ ಕೂಸಿನ ಕೈಗೆ ಹೊಡೆದಿದ್ದು, ಅವನಿಗೇನು ಎದೆ ಶಿರ ಮುರಿದು ಹೋಗಿದೆಯ?– ಕೊಳ್ಳೇಗಾಲದ ನಮ್ಮ ಭಾಷೆ!!)

ಅಷ್ಟಕ್ಕೂ ಆ ಮೇಷ್ಟ್ರು ನನಗೆ ಏಟು ಕೊಟ್ಟಿದ್ದು ನನ್ನ ಬಳಿ ಪಠ್ಯಪುಸ್ತಕ ಇಲ್ಲವೆಂದಿದ್ದಕ್ಕೆ. ಶಾಲೆ ಶುರುವಾಗಿ ಒಂದೂವರೆ ತಿಂಗಳಾದರೂ ಇನ್ನೂ ಪಠ್ಯಪುಸ್ತಕ ಕೊಂಡಿರಲಿಲ್ಲ. ಕೊಳ್ಳಲು ಹಣವೂ ಇರಲಿಲ್ಲ. ಬರೀ ಮೇಷ್ಟ್ರು ಮಾಡುವ ಪಾಠ ಕೇಳಿ,ಅವರು ಕೊಡುತ್ತಿದ್ದ ನೋಟ್ಸ್ ನಿಂದಲೇ ಓದಿಕೊಳ್ಳುತ್ತಿದ್ದೆವು.ಆದರೆ ಈಗ ಹಾಗಲ್ಲ. ಹೊಸ ಮೇಷ್ಟ್ರು ಎಲ್ಲರಿಗೂ ಬಿಸಿ ಮುಟ್ಟಿಸಿದ್ದರು.ಅದೇ ನಾಳೆ ಎಲ್ಲರೂ ಅಪ್ಪ ಅಮ್ಮನಿಂದ ಸಾಲ ಮಾಡಿಸಿಯಾದರೂ ಪುಸ್ತಕ ಕೊಂಡು ತರಗತಿಯೊಳಗೆ ಕಾಲಿಟ್ಟಿದ್ದರು. ಆ ಬದಲಾವಣೆ ತಂದ ಮೇಷ್ಟ್ರ ಹೆಸರು “ಜಯಣ್ಣ”.

ಜಯಣ್ಣ ಮೇಷ್ಟ್ರು ಬಂದಾಗಿನಿಂದ ಮಕ್ಕಳ ಶಿಸ್ತು ಕೊಂಚ ಸುಧಾರಿಸಿತು. ಮುಂದಿನ ಪಿರಿಯಡ್ ಸಮಾಜವೆಂದರೆ ಇಡೀ ಕ್ಲಾಸು ನಿಶ್ಶಬ್ದ. ನಂತರದ ದಿನಗಳಲ್ಲಿ ನಿಜಕ್ಕೂ ಆ ಮೇಷ್ಟ್ರ “ಹವಾ” ಯಾವ ಮಟ್ಟಕ್ಕೆ ತಲುಪಿತ್ತೆಂದರೆ,ಒಂದು ದಿನ ಶಾಲೆ ಮುಗಿಸಿ ಮನೆಗೆ ಬಂದ ನನ್ನ ತಮ್ಮ, ನಮ್ಮಮ್ಮನಿಗೆ “ನಮ್ಮ ಜಯಣ್ಣ ಮೇಷ್ಟ್ರ ಬಗ್ಗೆ ನಿಂಗೆ ಗೊತ್ತಿಲ್ಲ. ಹೆಂಗ್ ಹೊಡಿತಾರೆ ಗೊತ್ತಾ? ದೊಣ್ಣೆ ಹಿಡ್ಕೊಂಡ್ ಬಂದ್ರೆ ನೀನೂ ಓಡಬೇಕು!!” ಅಂತ ಹೇಳಿದ್ದ.

======================================================

ಶಾಲೆ ಮುಗಿಸಿ ಕಾಲೇಜಿಗೆಂದು ಮೈಸೂರಿಗೆ ಕಾಲಿಟ್ಟಿದ್ದೆ. ಆಗ ತಾನೇ 10ನೇ ತರಗತಿ ಮುಗಿಸಿ ಶಾಲೆಯಿಂದ ಹೊರಬಂದ ಮಕ್ಕಳಿಗೆ ಅದೇನೋ ಹೊಸ ತರಹದ ಹುಮ್ಮಸ್ಸು.ಅದೇನೋ ಆ ಚಿಕ್ಕಮಕ್ಕಳು ಎಂಬ ಹಣೆಪಟ್ಟಿ ಕಳಚಿ ಕಾಲೇಜು-ಹುಡುಗರು ಎಂಬ ಹೊಸ ಹೆಸರು ಬಂದೊಡನೆ ಹಕ್ಕಿಗಳಿಗೆ ರೆಕ್ಕೆ ಬಂದ ಹಾಗಾಗಿಬಿಡುತ್ತದೆ ಮನಸು.ಯಾರಾದರೂ ಲೆಕ್ಚರರ್ ಕ್ಲಾಸಿನಲ್ಲಿ ಗಲಾಟೆ ಮಾಡುತ್ತಿದ್ದ ಅಂತ ಗದರಿಸಿದರೆ, “ಏನಪ್ಪಾ ಜಾಸ್ತಿ ಮಾತಾಡ್ತಿದ್ದೀಯ, ಹೊರಗಡೆ ಬಾ ನೋಡ್ಕೊತ್ತೀನಿ” ಅಂತ ಅವರನ್ನೇ ಗದರಿಸಿದ ಸಹಪಾಠಿಗಳೂ ಇದ್ದರು.

ಅಂತಹ ವಾತಾವರಣದಲ್ಲಿ ನವಯುವಕರ ಚಳಿಬಿಡಿಸಲೆಂದು ಬಂದ ಸಿಪಾಯಿಯೆಂದರೆ ಪ್ರೊಫೆಸರ್ ಸಾಂಬಶಿವಯ್ಯ. ಸೇನೆಯಿಂದ ನಿವೃತ್ತಿ ಪಡೆದು ಬಂಡ ನಂತರ ನಮ್ಮ ಕಾಲೇಜಿಗೆ ಪ್ರೊಫೆಸರ್ ಆಗಿ ಕಾರ್ಯ ಸಲ್ಲಿಸುತಿದ್ದರು.ಮೊದಲೇ ಮಿಲಿಟರಿ ಮ್ಯಾನ್. ಆರಡಿ ದೇಹದ, ಕಂಚಿನ ಕಂಠದ ಸಾಂಬ ಶಿವಯ್ಯ ನಡೆದು ಬರುತ್ತಿದ್ದರೆ ಪ್ರತಿಯೊಬ್ಬರಿಗೂ ಭಯವಾಗುತ್ತಿತ್ತು. ಕಾಲೇಜಿನೊಳಕ್ಕೆ ನಡೆದು ಬರುತ್ತಿದ್ದರೆ, ಹೆಚ್ಚು ಕಡಿಮೆ ಒಂದು ಫರ್ಲಾಂಗ್ ನಷ್ಟು ಕಾಣುವ ಕಾರಿಡಾರಿನಲ್ಲಿ ಒಬ್ಬನೇ ಒಬ್ಬ ವಿದ್ಯಾರ್ಥಿಯೂ ಕಾಣಿಸಿಕೊಳ್ಳುತ್ತಿರಲಿಲ್ಲ. ಯಾಕೆಂದರೆ ಬೋರೆನಿಸುವ ಪಿರಿಯಡ್ಡುಗಳನ್ನೂ ಅಟೆಂಡ್ ಮಾಡಿಸದೆ ಬಿಡುತ್ತಿರಲಿಲ್ಲ ಅಸಾಮಿ.ಭೌತಶಾಸ್ತ್ರವನ್ನು ಎಲ್ಲ ಪಿಯುಸಿ ತರಗತಿಗಳಿಗೆ ಪಾಠ ಮಾಡುತ್ತಿದ್ದ ಅವರ ಕೈಯಲ್ಲಿ, ಯಾವಾಗಲೂ ಒಂದು ಪುಸ್ತಕ ಮತ್ತು ನಾಲ್ಕಡಿ ಉದ್ದದ ಕೋಲು! ಎಲ್ಲಾದರೂ ಯಾವುದೇ ವಿದ್ಯಾರ್ಥಿ ಪಿರಿಯಡ್ ಬಂಕ್ ಮಾಡಿ ಹೊರಟು ಸಿಕ್ಕಿಹಾಕಿಕೊಂಡರೆ ಮುಗಿಯಿತು. ಹಣ್ಣುಗಾಯಿ ನೀರುಗಾಯಿ!! ತಪ್ಪಿಸಿಕೊಂಡರೂ ಅವರ ಐಡಿ ಕಾರ್ಡ್ ನಂಬರ್ ಬರೆದುಕೊಂಡು ಅವರಪ್ಪ ಅಮ್ಮನಿಗೆ ಒಂದು ಲೆಟರ್ ಬರೆದುಬಿಡುತ್ತಿದ್ದರು. ಅವರೇ ಎನ್ ಸಿ ಸಿ ಗೆ ಮುಖ್ಯಸ್ಥರಾಗಿದ್ದರಿಂದ ಎಲ್ಲಿ ತಪ್ಪಿಸಿಕೊಂಡರೂ ಅಲ್ಲಿ ಬಿಡುತ್ತಿರಲಿಲ್ಲ. ಕ್ಲಾಸಿನಲ್ಲಿ ಅವರು ಪಾಠ ಮಾಡುವಾಗ ಸೂಜಿ ಬಿದ್ದರೂ ಶಬ್ದ ಸ್ಪಷ್ಟ. ಅಷ್ಟೊಂದು ನಿಶ್ಶಬ್ದ.ಅವರ ಉಪಟಳ ತಡೆಯಲಾಗದೆ ಒಬ್ಬ ಹುಚ್ಚು ವಿದ್ಯಾರ್ಥಿ ಅವರಿಗೆ ಬುದ್ಧಿ ಕಲಿಸಬೇಕೆಂದು ಅವರ ಮನೆ ವಿಳಾಸ ಹುಡುಕಿ ಹಾವೊಂದನ್ನು ದಪ್ಪ ಬಾಕ್ಸಿನಲ್ಲಿಟ್ಟು ಕೊರಿಯರ್ ಮಾಡಿದ್ದನಂತೆ!!

ಆಮೇಲೇನಾಯಿತು ಎಂಬುದು ಇಲ್ಲಿ ಮುಖ್ಯವಲ್ಲ!!

ಮನೆಯಲ್ಲಿ ಎಲ್ಲ ಮಕ್ಕಳು ಅಪ್ಪ ಅಮ್ಮಂದಿರಿಗೆ ಆ ಪ್ರೊಫೆಸರ್ ರ ವಿಷಯವನ್ನು ಹೇಳಿದ್ದರೂ, ಎಲ್ಲ ತಂದೆತಾಯಿಗಳೂ ತಮ್ಮ ಮಕ್ಕಳ 2ನೇ ವರ್ಷದ ಪಿಯುಸಿಗೆ ಅವರ ಬಳಿಯೇ ಭೌತಶಾಸ್ತ್ರಕ್ಕೆ ಟ್ಯೂಶನ್ ಕಲಿಸಲು ನಾ ಮುಂದು ತಾ ಮುಂದು ಎಂಬಂತೆ ವ್ಯವಸ್ಥೆ ಮಾಡುತ್ತಿದ್ದರು. ಅವರ ಬಳಿ ಟ್ಯೂಶನ್ ಗೆ ವರ್ಷದ ಮುಂಚೆಯೇ ನೋಂದಣಿಯಾಗಿಬಿಡುತ್ತಿತ್ತು. ಯಾಕೆಂದರೆ ಅವರ ಬಳಿ ಟ್ಯೂಶನ್ ಗೆ ಹೋದವರಿಗೆ ಭೌತಶಾಸ್ತ್ರದಲ್ಲಿ ಫೇಲಾಗುವ ಅಥವಾ ಕಡಿಮೆ ಅಂಕ ಪಡೆಯುವ ಭಯವಿರುತ್ತಿರಲಿಲ್ಲ.

======================================================

ನಮ್ಮ ಬಾಲ್ಯದ ಶಾಲೆಯನ್ನು ನೆನಪಿಸಿಕೊಳ್ಳುವಾಗ ತುಂಬಾ ನೆನಪಿಗೆ ಬಂದವರೆಂದರೆ ಇದೇ ಜಯಣ್ಣ ಮೇಷ್ಟ್ರು.ಕೆಲವು ಹಳ್ಳಿಯ ಹುಡುಗರು ಎಷ್ಟು ಮೊಂಡರಿರುತ್ತಾರೆ ಎಂದರೆ ಅವರಿಗೆ ಅಷ್ಟು ಶಿಸ್ತು ಕಲಿಸದಿದ್ದರೆ ಜಪ್ಪಯ್ಯ ಎಂದರೂ ಕಲಿಯುವುದಿಲ್ಲ.ಬರೀ ಹೊಡೆಯುವ ವಿಷಯದಲ್ಲಿ ಜಯಣ್ಣ ಮೇಷ್ಟ್ರು ಕೊಂಚ ಒರಟುತನ ತೋರಿಸುತ್ತಿದ್ದರೆ ವಿನಹ ಪಾಠದಲ್ಲಿ ಮಾತ್ರ ಬಹಳ ಶಿಸ್ತು.ಆ ಶಾಲೆಯಲ್ಲಿ ಓದುವ ಸಮಯದಲ್ಲಿ ಅವರ ದೊಣ್ಣೆಗೆ ಹೆದರಿ ಅವರಿಗೆ ಬಹಳ ಶಾಪ ಹಾಕುತ್ತಿದ್ದುದು ನಿಜ.ಆದರೆ ಒಂದು ಬಾರಿ ಶಾಲೆಯನ್ನು ಬಿಟ್ಟು ಹೊರಗೆ ಬಂದ ಮೇಲೆ ಅದೇ ಜಯಣ್ಣ ಮೇಷ್ಟ್ರು ಯಾಕೋ ಮನಸ್ಸಿನಲ್ಲಿ ತುಂಬಾ ಕಾಡತೊಡಗುತ್ತಾರೆ. ಶಾಲೆ ಬಿಟ್ಟ ಮರುಘಳಿಗೆ ನಮಗನ್ನಿಸುವುದು ಅವರು ಕಲಿಸಿದ ಶಿಸ್ತಿನಿಂದಲೇ ಅಲ್ಲವೇ ಇವೆಲ್ಲ ಸಾಧಿಸಲಿಕ್ಕೆ ಆಗಿದ್ದು ಅಂತ.

ಮೊನ್ನೆ ಮೊನ್ನೆ ಊರಿಗೆ ಹೋಗಿದ್ದಾಗ ನಾನು ಜಯಣ್ಣ ಮೇಷ್ಟ್ರ ಬಗ್ಗೆ ಪ್ರಸ್ತಾಪಿಸಿದಾಗ ಅವರು ಬಹಳ ವರ್ಷಗಳ ಹಿಂದೆಯೇ ಬೇರೆ ಊರಿಗೆ ವರ್ಗವಾಗಿ ಹೋಗಿದ್ದಾರೆ. ಅವರಿಗೆ ಕೊಂಚ ವಯಸ್ಸಾಗಿ ಕಣ್ಣು ಅಷ್ಟೊಂದು ಸರಿಯಾಗಿ ಕಾಣುತ್ತಿಲ್ಲ. ಮುಂಚಿನಷ್ಟು ಹುರುಪಿಲ್ಲ,ಬಹಳ ಸೊರಗಿ ಹೋಗಿದ್ದಾರೆ ಅಂತ ಹೇಳಿದರು. ಯಾಕೋ ಮನಸ್ಸಿಗೆ ಬಹಳ ನೋವಾಯಿತು.
ಕಾಲೇಜಿನ ಬಿಸಿರಕ್ತಗಳ ಸೊಕ್ಕಡಗಿಸಿದ್ದ ಸಾಂಬಶಿವಯ್ಯನವರು ಈಗ ಅದೇ ಕಾಲೇಜಿನ ಪ್ರಿನ್ಸಿಪಾಲರಾಗಿದ್ದಾರೆ ಅಂತ ಕೇಳಿ ಸಂತೋಷವಾಯಿತು.ದೇವರು ಅವರೆಲ್ಲರನ್ನೂ ಚೆನ್ನಾಗಿಟ್ಟಿರಲಿ.

ಖಂಡಿತ ಪ್ರತೀ ಶಾಲೆಯಲ್ಲಿ, ಕಾಲೇಜಿನಲ್ಲಿ ಇಂತಹ ಕೊಂಚ ಶಿಸ್ತಿನ, ಕೋಪಿಷ್ಠ ಆದರೆ ಬದಲಾವಣೆಗೆ ಕಾರಣರಾದ ಗುರುಗಳು ಒಬ್ಬರಾದರು ನಿಮಗೆ ಖಂಡಿತ ಸಿಗುತ್ತಾರೆ. ಈ ಲೇಖನ ಓದುವಾಗ ಖಂಡಿತ ನಿಮಗೆ ಅವರುಗಳ ಚಿತ್ರಪಟ ಮನಸ್ಸಿನಲ್ಲಿ ಮಿಂಚಿ ಮರೆಯಾಗಿರುತ್ತದೆ. ಜೊತೆಗೆ ಮತ್ತೊಮ್ಮೆ ಅವರ ಬಗ್ಗೆ ಗೌರವ ಮೂಡಿರುತ್ತದೆ.
ಹೌದಾ?…ಹಾಗಿದ್ದರೆ ನನ್ನ ಶ್ರಮ ಸಾರ್ಥಕ.

 ನಿಮ್ಮವನು
 ಸಂತು

Sunday, January 20, 2013

ಜನಪ್ರಿಯ (ಚುಟುಕಗಳು)



                                                                                                                                             (ಚಿತ್ರಕೃಪೆ:Google)
ಜನಪ್ರಿಯ


ನಮ್ಮ ನಿಮ್ಮೆಲ್ಲರ
ಜನಪ್ರಿಯ ನಾಯಕ
ಎಂದ ಮೇಲೂ
ನೆರೆದಿದ್ದ ಜನ
ಪಿಸುಗುಟ್ಟಿಕೊಂಡರಂತೆ,
ಯಾರವನು?

===============================

ಸಂಪಾದನೆ

ಕೆಲವರಿಗಂತೂ ಕಷ್ಟದ ಕೂಗು
ಕೇಳುವ ಕಿವಿಗಳಿರದಿದ್ದರೂ,
ಕೆರ ಕಾಯುವವನಿಗೆ
ಕಾಸು ಕೊಡುವ ಕರಗಳಿರುತ್ತವೆ.

ಅದಕಾಗಿಯೇ,
ದೇಗುಲದ ಮುಂದಿನ
ಕೆರ ಕಾಯುವವ
ಭಿಕ್ಷುಕನಿಗಿಂತ ಸಿರಿವಂತ!!

===============================

ನೆನಪು

ಹುಡುಗೀ,
ಹರಿದ ಪುಸ್ತಕದ
ಕಳೆದ ಪುಟಗಳೇ ನೀನು.
ಅಂತ್ಯವಿಲ್ಲದ ಕತೆಗೆ
ಬರೀ ಮುನ್ನುಡಿಯೇ ನೆನಪು!!

===============================