Saturday, October 23, 2021

ಸರ್ದಾರ್ ಉಧಮ್ (೨೦೨೧)

ಸರ್ದಾರ್ ಉಧಮ್ (೨೦೨೧)




ತನ್ನ ಪರ ವಕಾಲತ್ತು ವಹಿಸಿದ್ದ ವಕೀಲರು "ಹೋಗಲಿ. ಕ್ಷಮಾದಾನ ಬೇಡಿಕೋ. ನಿನಗಾಗುವ ಶಿಕ್ಷೆ ಬದಲಾಗಬಹುದು" ಅಂತ ಕೇಳುತ್ತಾನೆ. ಆದರೆ ಸರ್ದಾರ್ ಉಧಮ್ ಸಿಂಗ್ ಒಪ್ಪುವುದಿಲ್ಲ.


"ಹೋಗಲಿ. ನನ್ನಿಂದ ಏನು ಸಹಾಯ ಬೇಕು ಕೇಳು" ಅಂತ ಆ ವಕೀಲರು ಕೇಳಿದಾಗ ನಿರ್ಭಾವುಕರಾಗಿಯೇ ಉಧಮ್ ಸಿಂಗ್ ಕೇಳಿಕೊಳ್ಳುವುದು ಒಂದೇ ಒಂದು!


"Let the world know.... I was a revolutionary" ಅಂತ.


ಇದೊಂದೇ ವಾಕ್ಯ ಉಧಮ್ ಸಿಂಗ್ ತನ್ನ ಗುರಿಯ ಬಗ್ಗೆ ಎಷ್ಟು ನಿಖರತೆ ಹೊಂದಿದ್ದರು ಅಂತ ತೋರಿಸಿಬಿಡುತ್ತದೆ.


------------------


೧೯೧೯ ಏಪ್ರಿಲ್ ೧೩ ಅದು ಸಿಖ್ಖರ ಪವಿತ್ರ ಬೈಸಾಖಿಯ ದಿನ. ಅಂದು ಪಂಜಾಬಿನ ಅಮೃತಸರದ ಜಲಿಯನ್‍ವಾಲಾ ಭಾಗ್‍ನಲ್ಲಿ ಸಾವಿರಾರು ಜನರು ಸ್ವಾತಂತ್ರ್ಯ ಹೋರಾಟಗಾರರಾದ ಡಾ.ಸತ್ಯಪಾಲ್ ಮತ್ತು ಡಾ.ಸೈಫುದ್ದೀನ್ ಕಿಚ್ಲ್ಯೂ ಅವರ ಬಂಧನವನ್ನು ವಿರೋಧಿಸಿ ಶಾಂತಿ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು. ಅಲ್ಲಿಗೆ ತನ್ನ ಟ್ರೂಪಿನ ಜೊತೆಯಲ್ಲಿ ಬಂದಿಳಿದಿದ್ದು ಬ್ರಿಗೇಡಿಯರ್ ಜನರಲ್ ಡಯರ್.


ಭಾರತೀಯ ಸ್ವಾತಂತ್ರ್ಯ ಹೋರಾಟಗಾರರ ನಡೆಯ ಬಗ್ಗೆ ತಿಳಿದಿದ್ದ ಬ್ರಿಟಿಷ್ ಸರ್ಕಾರ ಅಮೃತಸರದಲ್ಲಾಗಲೇ ಮಾರ್ಷಲ್ ನಿಯಮವನ್ನು ಹೇರಿತ್ತು. ಇದರ ಪ್ರಕಾರ ಐದಕ್ಕಿಂತ ಹೆಚ್ಚು ಜನರು ಒಂದು ಕಡೆ ಸೇರುವಂತಿರಲಿಲ್ಲ.


ಆ ಮೈದಾನಕ್ಕೆ ಮೂರೂ ಕಡೆ ಎತ್ತರದ ಗೋಡೆಗಳಿದ್ದು ಒಂದು ಕಡೆಯಷ್ಟೇ ಹೊರಹೋಗುವ ದಾರಿ ಇತ್ತು. ಅಲ್ಲೇ ಅಡ್ಡ ನಿಂತ ಡಯರ್ ಮತ್ತವನ ತಂಡ ಮನಬಂದಂತೆ ಜನರ ಮೇಲೆ ಗುಂಡು ಹಾರಿಸಿದರು. ಒಂದೂ ಎಚ್ಚರಿಕೆ ನೀಡದೆ ಏಕಾಏಕಿ ಆ ಜನರ ಮೇಲೆ ನಡೆದ ಗುಂಡಿನ ದಾಳಿ ಉದ್ದೇಶಪೂರ್ವಕವಾಗಿಯೇ ಇತ್ತು. ಅಲ್ಲಿ ನಡೆದದ್ದು ರಕ್ತದೋಕುಳಿ. ಕೆಲವೇ ನಿಮಿಷಗಳಲ್ಲಿ ಹೆಂಗಸರು, ಮಕ್ಕಳೆನ್ನದೆ ಸಾವಿರಾರು ಜನರು ಅಲ್ಲೇ ಮೃತಪಟ್ಟರು. ಸಾವಿರಾರು ಜನರು ಗಾಯಗೊಂಡರು. ಕಡೆಗೂ ಡಯರ್ ಮತ್ತವನ ತಂಡ ಫೈರಿಂಗ್ ನಿಲ್ಲಿಸಿದ್ದು ಬುಲೆಟ್ಟುಗಳು ಖಾಲಿಯಾದ ಮೇಲೆಯೇ!


ಈ ಘಟನೆಯಲ್ಲಿ ಶೂಟ್ ಮಾಡಿ ಕೊಂದಿದ್ದು ಜನರಲ್ ಬ್ರಿಗೇಡಿಯರ್ ಜನರಲ್ ಡಯರ್ ಮತ್ತು ಆತನ ಟ್ರೂಪ್ ಆದರೂ, ಇದಕ್ಕೆ ನೇರ ಕಾರಣವಾಗಿದ್ದು ಮತ್ತು ಹತ್ಯೆಯನ್ನು ಬ್ರಿಟನ್ನಿನಲ್ಲಿ ಸಮರ್ಥಿಸಿಕೊಂಡಿದ್ದು ಆಗ ಪಂಜಾಬಿನ ಲೆಫ್ಟಿನಂಟ್ ಗವರ್ನರ್ ಆಗಿದ್ದ "ಮೈಕೇಲ್ ಓ ಡ್ವಾಯರ್"


ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಪೆಟ್ಟು ಕೊಟ್ಟೆವೆಂಬ ಅಹಮ್ಮಿಕೆ ಬ್ರಿಟಿಷ್ ಸರಕಾರದ್ದಾದರೆ, ಇದೇ ಘಟನೆ ಸ್ವಾತಂತ್ರ ಚಳುವಳಿಯಲ್ಲಿ ಪ್ರಮುಖ ಪಾತ್ರ ವಹಿಸಿತು. ಈ ಘಟನೆಯಾದ ನಂತರ ಇನ್ಯಾರೂ ಚಳುವಳಿ ಅಂತ ಧೈರ್ಯದಿಂದ ಮುಂದೆ ಬರಲಾರರು ಅನ್ನುವ ಲೆಕ್ಕಾಚಾರ ಈಸ್ಟ್ ಇಂಡಿಯಾ ಸರ್ಕಾರದ್ದಾಗಿತ್ತು. ಆದರೆ ಈ ಕಿಚ್ಚಿನ ಉರಿ ತಾಕಿದ್ದು ಮಾತ್ರ ಈಗಾಗಲೇ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿ ಈ ಘಟನೆಯಿಂದ ಜರ್ಜರಿತಗೊಂಡ ಅನೇಕರಿಗೆ.


ಅವರಲ್ಲೊಬ್ಬ ಸರದಾರ "ಉಧಮ್ ಸಿಂಗ್". ಆತ ಬರೀ ದಂಗೆಯಲ್ಲಷ್ಟೇ ಪಾಲ್ಗೊಳ್ಳಲಿಲ್ಲ. ಇಲ್ಲಷ್ಟೇ ಹೋರಾಡುವುದಲ್ಲ. ಬ್ರಿಟಿಷರ ಮಾತೃಭೂಮಿ ಇಂಗ್ಲೆಂಡಿಗೇ ತೆರಳಿ ಅವರ ನೆಲದಲ್ಲೇ ಅವರಿಗೆ ಬಿಸಿ ಮುಟ್ಟಿಸುವ ಪಣ ತೊಡುತ್ತಾನೆ. ಈ ಮೂಲಕ ದಂಗೆ ತಣ್ಣಗಾಯಿತು ಅಂತ ಸಮಾಧಾನಪಟ್ಟುಕೊಳ್ಳುತ್ತಿದ್ದ ಬ್ರಿಟಿಷರಿಗೆ "ಅದು ಇನ್ನೂ ಜೀವಂತವಿದೆ. ಮತ್ತು ಅದರ ಕಾವು ಇನ್ನೂ ಜಾಸ್ತಿಯಾಗುತ್ತದೆ" ಅಂತ ಸ್ವಾತಂತ್ರ ಚಳುವಳಿಯ ಸಂದೇಶವನ್ನು ಅಲ್ಲಿಯ ಪ್ರಜೆಗಳಿಗೆ, ಸರ್ಕಾರಕ್ಕೆ ಮುಟ್ಟಿಸುವುದು ಅವನ ಗುರಿಯಾಗಿರುತ್ತದೆ. ಅದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ.


ಆತ ಏನೆಲ್ಲ ಮಾಡಿ ನಮ್ಮ ಭಾರತಾಂಬೆಯ ಸ್ವಾತಂತ್ರ್ಯ ಹೋರಾಟದಲ್ಲಿ ತನ್ನನ್ನು ಅರ್ಪಿಸಿಕೊಂಡ ಅನ್ನುವುದೇ "ಸರ್ದಾರ್ ಉಧಮ್" ಅನ್ನುವ ವೀರನೊಬ್ಬನ ನಿಜ ಜೀವನದ ಕಥೆ.
-----------------


ಮೊನ್ನೆ ಈ ಸಿನಿಮಾದ ಬಗ್ಗೆ ಅನಿಸಿಕೆ ಬರೆಯುವಾಗ ಗೆಳೆಯ ಪ್ರಶಾಂತ್ ಸಾಗರ ಬರೆದಿದ್ದರು....


ಮಾಸ್ ಸಿನಿಮಾಗಳಲ್ಲಿ ಒಬ್ಬ ಹೀರೋ ರೌಡಿಗೆ ಆವಾಜ್ ಹಾಕ್ತಾನಲ್ಲ.....
"ಲೇಯ್..... ನನ್ನ ಮೈ ಮುಟ್ಟಕ್ಕಾಗಲ್ಲ ಅಂತ ಮೆರೀತಿದ್ದೀಯಲ್ಲ.
ಹೇಳು... ನಿನ್ನ ಜಾಗಕ್ಕೆ ಬಂದು ನಿನ್ನ ಅಟ್ಟಾಡಿಸಿಕೊಂಡು ಹೊಡೀತೀನಿ" ಅಂತ


ಅಂಥ ಮಾಸ್ ಡೈಲಾಗನ್ನು ರಿಯಲ್ಲಾಗಿಯೇ ಮಾಡಿ ತೋರಿಸಿದ ದೇಶಭಕ್ತನೊಬ್ಬನ ಕಥೆ "ಸರ್ದಾರ್ ಉಧಮ್ ಸಿಂಗ್"


--------------------


ಜಲಿಯನ್‍ವಾಲಾ ಭಾಗ್‍ ಹತ್ಯಾಕಾಂಡವಾದ ನಂತರದ ಮಾಹಿತಿಗಳಲ್ಲಿ ಇದುವರೆಗೆ ಉಧಮ್ ಸಿಂಗ್ ಬಗ್ಗೆ ಕೇಳಿರಲೇ ಇಲ್ಲ. ಈ ಕಥೆ ಕೇಳಿದ ಮೇಲೆ ಎಷ್ಟೋ ವಿಷಯಗಳು ಅರಿವಿಗೆ ಬಂದವು.


---------------


ಮೊದಲ ಮತ್ತು ಎರಡನೇ ಮಹಾಯುದ್ಧಗಳ ಯಾವುದೇ ಘಟನೆಯ ಬಗ್ಗೆ ಅದೆಷ್ಟು ಸಿನಿಮಾಗಳು ಬಂದಿವೆ. "ಸೈನಿಕರು ನಡೆಯುವ ದಾರಿಯಲ್ಲಿ ಒಂದು ಬಾಳೆಹಣ್ಣಿನ ಸಿಪ್ಪೆ ಬಿದ್ದಿತ್ತು. ಅದನ್ನು ಒಬ್ಬ ಹೇಗೆ ಎತ್ತಿ ಪಕ್ಕಕ್ಕೆ ಎಸೆದ" ಅಂತ ವಿಷಯ ಸಿಕ್ಕಿದರೂ ಸಾಕು. ನಾಳೆ ಯಾರಾದರೊಬ್ಬರು ಸಿನಿಮಾ ತೆಗೆಯುತ್ತಾರೆ.


ಅಂಥದ್ದರಲ್ಲಿ ನಮ್ಮ ಸ್ವಾತಂತ್ರ್ಯ ಸುಮ್ಮನೆ ಸಿಕ್ಕಿದ್ದಲ್ಲ. ಇಂಗ್ಲೀಷರ ಆಡಳಿತದಲ್ಲಿ, ಜನರನ್ನು ಸಂಪರ್ಕಿಸಲು, ಒಟ್ಟುಗೂಡಿಸಲು ಸಾಧ್ಯವಾಗದ ಕಾಲಘಟ್ಟದಲ್ಲಿ ಏನೆಲ್ಲ ನಡೆದಿರಬಹುದು. ಅವುಗಳ ಬಗ್ಗೆ ಸಿನಿಮಾಗಳೇ ಇಲ್ಲ ಅಂತ ಬೇಸರಪಟ್ಟುಕೊಳ್ಳುತ್ತಿದ್ದೆ. "ಸರ್ದಾರ್ ಉಧಮ್" ಸಿನಿಮಾ ನೋಡಿದ ಮೇಲೆ ಖುಶಿಯ ಜೊತೇ ಇಂಥ ಸಿನಿಮಾಗಳು ಬರಲಿ ಅಂತ ಅನ್ನಿಸಿತು.


----------------


ಇತ್ತೀಚಿನ ಕೆಲವು ಸಿನಿಮಾಗಳಲ್ಲಿ ನನಗೆ ತುಂಬಾ ಮೆಚ್ಚುಗೆಯಾಗಿದ್ದು ಅಂದರೆ ಹಂತಕನೊಬ್ಬನನ್ನು ಮಾತಿಗೆಳೆದು ಅವನನ್ನು ಆ ಘಟನೆಯ ಬಗ್ಗೆ ಮತ್ತು ಆ ಘಟನೆಯ ಬಗೆಗಿನ ಆತನ ಅಭಿಪ್ರಾಯದ ಬಗ್ಗೆ ಪ್ರೇಕ್ಷಕನಿಗೆ ಹೇಳಿದ್ದು.


ಈ ಸಿನಿಮಾದಲ್ಲಿಯೂ ಸರ್ದಾರ್ ಉಧಮ್ ತಾನು ಕೊಲ್ಲಬೇಕೆಂದಿರುವ ಮೈಕೇಲ್ ಓ ಡ್ವಾಯರ್ ಮನೆಯಲ್ಲೇ ಕೆಲಸಕ್ಕೆ ಸೇರಿ ಜಲಿಯನ್‍ವಾಲಾ ಭಾಗ್‍ ಹತ್ಯಾಕಾಂಡದ ಬಗ್ಗೆ ಆತನ ಅಭಿಪ್ರಾಯ ಕೇಳುತ್ತಾನೆ. ಆ ಘಟನೆಯ ಬಗ್ಗೆ ಡ್ವಾಯರ್'ಗೆ ಯಾವುದೇ ಪಾಪಪ್ರಜ್ಞೆ ಕಾಡದಿರುವುದು ಉಧಮ್'ಗೆ ತನ್ನ ಗುರಿಯತ್ತ ಸಾಗಲು ಇನ್ನಷ್ಟು ಪುಷ್ಟಿ ನೀಡುತ್ತದೆ.


-----------------


ಡ್ವಾಯರ್'ನ ಮನೆಯಲ್ಲಿ ಕೆಲಸಕ್ಕೆ ಸೇರಿದಾಗ ಆತನನ್ನು ಕೊಲೆ ಮಾಡಲು ಅನೇಕ ಅವಕಾಶಗಳಿರುತ್ತವೆ. ಜೊತೆಗೆ ಕೊಂದು ಯಾರಿಗೂ ಗೊತ್ತಾಗದಂತೆ ತಪ್ಪಿಸಿಕೊಳ್ಳಬಹುದಿತ್ತು. ಆದರೆ ಸರ್ದಾರ್ ಹಾಗೆ ಮಾಡುವುದಿಲ್ಲ.


ವೈಯಕ್ತಿಕವಾಗಿ ಹೀಗೆ ಕೆಲಸಗಾರನೊಬ್ಬ ತನ್ನ ಮಾಲೀಕನನ್ನೇ ಕೊಂದರೆ ಕೊಲೆಯ ಉದ್ದೇಶ ಬೇರೆಯದೇ ರೀತಿಯಲ್ಲಿ ಬಿಂಬಿತವಾಗಿ ಚಳುವಳಿಯ ದಿಕ್ಕು ತಪ್ಪಬಹುದು ಅಂತ ಉಧಮ್ ಆ ಆಲೋಚನೆಯನ್ನು ಮಾಡುವುದಿಲ್ಲ.


ಜೊತೆಗೆ ಸ್ವಾತಂತ್ರ್ಯ ಚಳುವಳಿಯ ಸಂದೇಶ ಇಡೀ ಇಂಗ್ಲೆಂಡಿಗೆ ತಲುಪಬೇಕೆಂದರೆ ಡ್ವಾಯರ್'ನನ್ನು ಭಾರತಕ್ಕೆ ಸಂಬಂಧಪಟ್ಟ ಕಾರ್ಯಕ್ರಮವೊಂದರಲ್ಲೇ ಹತ್ಯೆ ಮಾಡಿ ಚಳುವಳಿ ಇನ್ನೂ ಜೀವಂತವಿದೆ ಅಂತ ತೋರಿಸಬೇಕೆನ್ನುವುದು ಅವನ ಗುರಿಯಾಗಿರುತ್ತದೆ. ಹಾಗೆ ಎಲ್ಲರೆದುರು ಕೊಂದು ಸಿಕ್ಕಿಹಾಕಿಕೊಂಡರೆ ಮರಣದಂಡನೆ ಗ್ಯಾರಂಟಿ ಅಂತ ಗೊತ್ತಿದ್ದ ಮೇಲೂ ಅದೇ ರೀತಿಯನ್ನು ಅನುಸರಿಸಿದ ಉಧಮ್ ಎಷ್ಟು ಧೈರ್ಯವಂತನಿರಬೇಕು?


----------------


ಡ್ವಾಯರ್'ನನ್ನು ಕೊಂದ ಮೇಲೂ ಅಷ್ಟೇ. ಶಾಂತವಾಗಿಯೇ ಯಾವುದೇ ಪ್ರತಿರೋಧ ಒಡ್ಡದೆ ಬಂಧನಕ್ಕೊಳಗಾಗುತ್ತಾನೆ. ಮರಣದಂಡನೆ ಎದುರಿಗಿದೆ ಅನ್ನುವಾಗಲೂ ಅವನಿಗೆ ಭಯವಿರುವುದಿಲ್ಲ. ಆತನ ಗುರಿ ಭಾರತದ ಬಗ್ಗೆ ಪ್ರಪಂಚದ ಗಮನ ಸೆಳೆಯುವುದಾಗಿರುತ್ತದೆ.
--------------


ಡ್ವಾಯರ್ ಹತ್ಯೆಯಾದ ನಂತರ ಸರ್ದಾರ್ ಉಧಮ್'ಗೆ ಮರಣದಂಡನೆ ನೀಡಿದಾಗ ಉಧಮ್ ಕೊಂಚವೂ ಭಯಪಡದೆ ಧೈರ್ಯವಾಗಿ ಹೇಳುವುದು ಇದನ್ನೇ:


"ನಾನು ಅದನ್ನು ಯಾಕೆ ಮಾಡಿದೆ ಅಂದರೆ ಮೈಕೆಲ್ ಓ ಡ್ವಾಯರ್ ಮೇಲೆ ನನಗೆ ದ್ವೇಷವಿತ್ತು. ಆತನಿಗಿದು ತಕ್ಕ ಶಾಸ್ತಿ. ಆತನೇ ನಿಜವಾದ ಅಪರಾಧಿ. ನನ್ನ ಜನಗಳ ಸ್ವಾತಂತ್ರ್ಯ ಹೋರಾಟದ ಉತ್ಸಾಹವನ್ನು ಬಗ್ಗುಬಡಿಯುವುದು ಅವನ ಉದ್ದೇಶವಾಗಿತ್ತು. ಬರೋಬ್ಬರಿ ೨೧ ವರ್ಷಗಳ ಕಾಲ ನನ್ನ ಹಗೆ ತೀರಿಸಿಕೊಳ್ಳಲು ಕಾದಿದ್ದೆ. ಇಂದು ಆ ನನ್ನ ಕೆಲಸ ನೆರವೇರಿತು ಅನ್ನುವ ತೃಪ್ತಿ ನನಗಿದೆ. ನನಗೆ ಸಾವಿನ ಬಗ್ಗೆ ಭಯವಿಲ್ಲ. ಏಕೆಂದರೆ ನಾನು ನನ್ನ ದೇಶಕ್ಕಾಗಿ ಪ್ರಾಣ ಬಿಡುತ್ತಿದ್ದೇನೆ. ನನ್ನ ಜನಗಳು ಬ್ರಿಟಿಷ್ ಆಡಳಿತದಲ್ಲಿ ಹೇಗೆ ಸಾಯುತ್ತಿದ್ದಾರೆ ಅನ್ನುವುದನ್ನು ನಾನು ಕಣ್ಣಾರೆ ಕಂಡಿದ್ದೇನೆ. ಅವರ ವಿರುದ್ಧವಾಗಿ ನಾನಿಂದು ಪ್ರತಿಭಟನೆ ಮಾಡಿದ್ದೇನೆ. ಅದು ನನ್ನ ಕರ್ತವ್ಯವಾಗಿತ್ತು. ಹಾಗಾಗಿ ದೇಶಕ್ಕಾಗಿ ಪ್ರಾಣ ಕೊಡುವ ವಿಷಯಕ್ಕಿಂತ ಇನ್ಯಾವ ದೊಡ್ಡ ಗೌರವ ಸಿಕ್ಕಲು ಸಾಧ್ಯ?"


-------------


ಇವಿಷ್ಟು ಸರ್ದಾರ್ ಉಧಮ್ ಸಿಂಗ್ ಬಗ್ಗೆ. ಸಿನಿಮಾದ ಬಗ್ಗೆ ಹೇಳುವುದಾದರೆ ಗೊತ್ತಿರದ ಅನೇಕ ವಿಷಯಗಳು ತಿಳಿದು ಖುಶಿಯಾಯ್ತು. ಎಲ್ಲ ಮಾಹಿತಿಯನ್ನು ಕಲೆಹಾಕಿ, ಸಿನಿಮಾಗೆ ಅದನ್ನು ಅಳವಡಿಸಿಕೊಂಡು ಆ ಕಾಲಘಟ್ಟವನ್ನು ಮರುಸೃಷ್ಟಿ ಮಾಡಲು ನಿರ್ದೇಶಕ ಎಷ್ಟು ಕಷ್ಟಪಟ್ಟಿದ್ದಾರೆ ಅನ್ನುವುದು ಗೊತ್ತಾಗುತ್ತದೆ. ಇಂಗ್ಲೆಂಡಿನ ದೃಶ್ಯಗಳು ಸಕ್ಕತ್. ಜಲಿಯನ್ ವಾಲಾ ಭಾಗ್ ದೃಶ್ಯವಂತೂ ಕರುಳು ಕಿವುಚಿದಂತಾಯ್ತು. ಸ್ವಾತಂತ್ರ್ಯಕ್ಕಾಗಿ ಅದೆಷ್ಟು ಜನ ಪ್ರಾಣ ಬಿಟ್ಟಿದ್ದಾರೆ. ನಾವಿಂದು ಖುಷಿಯಾಗಿರುವುದರ ಹಿಂದೆ ಅದೆಷ್ಟು ಜನರ ಬಲಿದಾನವಿದೆ?
------------


ನನ್ನ ಅನಿಸಿಕೆ: ಸಿನಿಮಾದಲ್ಲಿ ಮೊದಲೇ ಡ್ವಾಯರ್ ಹತ್ಯೆಯನ್ನು ತೋರಿಸಿ ನಂತರ ಹಿಂದಿನ ಘಟನೆಗಳನ್ನು ಹಿಮ್ಮುಖವಾಗಿ ತೋರಿಸಿದ್ದಾರೆ. ಸಿನಿಮಾ ಮುಗಿದಾಗ ಬರೀ ನಿಟ್ಟುಸಿರೊಂದೇ ಉಳಿದುಹೋಗುತ್ತದೆ. ಚಿತ್ರದ ಮೊದಲೇ ಜಲಿಯನ್ ವಾಲಾ ಭಾಗ್ ಘಟನೆ ತೋರಿಸಿ, ನಂತರ ಅಲ್ಲಿಂದ ಸರ್ದಾರ್ ಉಧಮ್ ಕಥೆಯನ್ನು ತೋರಿಸಿ, ಕಡೆಯಲ್ಲಿ ಡ್ವಾಯರ್ ಹತ್ಯೆ ಮತ್ತು ಉಧಮ್'ರ ಅಂತ್ಯವನ್ನು ತೋರಿಸಬೇಕಿತ್ತು ಅನ್ನಿಸಿತು. ಆಗ ಪ್ರೇಕ್ಷಕನಲ್ಲಿ ಇನ್ನೂ ಹೆಚ್ಚಿನ ಪರಿಣಾಮ ಬೀರಬಹುದಿತ್ತು
-------------


ಇರಲಿ..... "ಸರ್ದಾರ್ ಉಧಮ್"..
ಎಲ್ಲ ಭಾರತೀಯರು ನೋಡಿ, ಸ್ವಾತಂತ್ರ್ಯ ಹೋರಾಟಗಾರರನ್ನು ನೆನೆಯುತ್ತ, ಆತ್ಮಾವಲೋಕನ ಮಾಡಿಕೊಳ್ಳಲೇಬೇಕಾದ ಚಿತ್ರ.


#santhuLm
23-Oct-2021