Wednesday, December 28, 2022

Jaya Jaya Jaya Jaya Hey (Malayalam, 2022)

 


Jaya Jaya Jaya Jaya Hey (Malayalam, 2022)

ಅವಳು ಹೆಣ್ಣು. ಅದಕ್ಕಾಗಿಯೇ ಅವಳನ್ನು ಅವಳು ಕಾಪಾಡಿಕೊಳ್ಳುವ ಶಕ್ತಿಯಿದ್ದರೂ ಹೆಣ್ಣೆಂಬ ಕಾರಣಕ್ಕೆ ಅವಳ ರಕ್ಷಣೆಗೆ ನಾವು (ಪುರುಷಪ್ರಧಾನ ಸಮಾಜ) ನಿಲ್ಲುತ್ತೀವಿ. ಅವಳಿಗೆ ತನಗೇನು ಬೇಕು ಅಂತ ಗೊತ್ತು. ಆದರೂ ಅವಳಿಗೇನು ಬೇಕು ಅಂತ ನಾವು ನಿರ್ಧರಿಸ್ತೀವಿ. ಅವಳಿಗೆ ಯಾರ ಜೊತೆ ಮಾತನಾಡಬೇಕು, ಹೇಗೆ ಮಾತನಾಡಬೇಕು ಅಂತ ಕಲಿತುಕೊಳ್ಳಬಲ್ಲಳು. ಆದರೂ ಆಕೆ ಹೆಣ್ಣು ಎಂಬ ಕಾರಣದಿಂದ ನಾವೇ ಅವಳು ಯಾರೊಂದಿಗೆ ಮಾತನಾಡಬೇಕು ಅನ್ನುವುದನ್ನು ಡಿಸೈಡ್ ಮಾಡ್ತೀವಿ. ನಮಗೆ ಗೊತ್ತಿರದಿದ್ದರೂ ಅನೇಕ ವಿಷಯಗಳಲ್ಲಿ ಅವಳಿಗಿಂತ ಮುಂದೆ ಹೋಗಿ ಅವಳಿಗಾಗಿ ಕೆಲವು ಕಟ್ಟುಪಾಡುಗಳನ್ನು ವಿಧಿಸುತ್ತೇವೆ. ಏಕೆಂದರೆ ಆಕೆ ಹೆಣ್ಣಲ್ಲವೇ. ನಾವು ಮಾಡುವುದೆಲ್ಲ ಅವಳಿಗಾಗಿ ತಾನೇ? ಹಾಗಾಗಿ ಅವಳಿಗೆ ಅವುಗಳಿಂದ ತೊಂದರೆಯಾಗುತ್ತಿದ್ದರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಕಡೆಗೆ ನಾವು ತೆಗೆದುಕೊಂಡ ನಿರ್ಧಾರಗಳು ಅವಳಿಗೆ ಕುತ್ತಾದರೂ ಅದಕ್ಕೆ ಹೆಚ್ಚು ನೊಂದುಕೊಳ್ಳುವುದಿಲ್ಲ. ಏಕೆ ಹೇಳಿ? ಅವೆಲ್ಲ ಅವಳ ಒಳಿತಿಗಾಗಿ ತೆಗೆದುಕೊಂಡ ನಿರ್ಧಾರಗಳು ತಾನೇ?

ಇವೆಲ್ಲವನ್ನೂ ಮಾಡುವಾಗ ಅವಳಿಗೆ ಸಿಗಬೇಕಾದ ಸಮಾನತೆ, ಸ್ವಾತಂತ್ರ್ಯತೆ, ನ್ಯಾಯದ ಬಗ್ಗೆ ಕಿಂಚಿತ್ತೂ ಯೋಚಿಸಿರುವುದಿಲ್ಲ. ಏಕೆಂದರೆ ಇವೆಲ್ಲವನ್ನೂ ಕಿತ್ತುಕೊಂಡೇ ಉಳಿದ ಒಳಿತಿನ ಬಗ್ಗೆ ಯೋಚಿಸುತ್ತೇವೆ. ಎಷ್ಟು ಹಾಸ್ಯಾಸ್ಪದ ಅಲ್ಲವೇ?

ಹೊರಗೆ ಹೋಗಿ ಸಂಪಾದನೆ ಮಾಡುತ್ತೇವೆ ಅನ್ನೋ ಕಾರಣಕ್ಕೆ ಮನೆಯೊಳಗಿನ ಹೆಂಡತಿ ಗಂಡನಿಗೆ ತಗ್ಗಿ ಬಗ್ಗಿ ನಡೆಯಬೇಕು. ನಾಲ್ಕು ಬಿಗಿದರೂ ಆಕೆ ಮರುಮಾತಾಡದೆ ಸಹಿಸಿಕೊಳ್ಳಬೇಕು. ಮನೆಯನ್ನೂ ಸಂಭಾಳಿಸಿ, ಹೊರಗೆ ಕೆಲಸವನ್ನೂ ಮಾಡುತ್ತೇನೆ ಅಂದಳಾ? ಮುಗೀತು. ಏಕೆಂದರೆ ನಮ್ಮ ಪುರುಷ ಅಹಮ್ಮಿನ ಬುಡಕ್ಕೇ ಅದು ಕೊಡಲಿಯೇಟು ನೀಡುತ್ತದೆ. ನಿನ್ನ ದುಡ್ಡಿನಲ್ಲಿ ನಾನು ತಿನ್ನಬೇಕಾ ಅಂತ! ಜೊತೆಗೆ ಅವಳಿಗೆ ಆರ್ಥಿಕ ಸ್ವಾತಂತ್ರ್ಯ ಸಿಕ್ಕರೆ ಮುಗೀತು. ನನ್ನ ನಿಯಂತ್ರಣಕ್ಕೆ ಎಲ್ಲಿ ಸಿಕ್ಕಾಳು? ಅಲ್ಲವೇ?! ಎಲ್ಲ ವಿಷಯಗಳಲ್ಲೂ ಅವಳನ್ನು ಕಟ್ಟಿಹಾಕಿ ಕಡೆಗೊಮ್ಮೆ ಅವಳಿಗೆ ಏನೂ ಬರುವುದಿಲ್ಲವೆಂದು ಹಣೆಪಟ್ಟಿ ಕಟ್ಟಿದರಾಯಿತು.

ನಾವೆಲ್ಲ ಮುಂದಿನ ಪೀಳಿಗೆಯಲ್ಲಿದ್ದೇವೆ. ಎಲ್ಲೂ ಹೀಗೆ ನಡೆಯುತ್ತಿಲ್ಲ ಅಂದುಕೊಂಡರೆ ಅದು ಭ್ರಮೆಯಷ್ಟೇ. ಅನೇಕ ಕಡೆ ಇಷ್ಟಿಲ್ಲದಿದ್ದರೂ ಇದರ ಅರ್ಧದಷ್ಟಾದರೂ ಅವಳು ಹಾಗೇ ಇದ್ದಾಳೆ. ಅನೇಕ ಮನೆಗಳಲ್ಲಿ ಅವಳಿಗೆ ತನ್ನ ಮನೆಯವರಿಂದಲೇ ಸ್ವಾತಂತ್ರ್ಯ ಸಿಗದೆ "ಮದುವೆಯಾದರೆ ಸಾಕು" ಅಂತ ತಾನೇ ಅಂದುಕೊಂಡಿರುತ್ತಾಳೆ. ಮುಂದೆ ಅವಳು ಮದುವೆಯಾದ ಮನೆಯಲ್ಲೂ ಹೀಗೇ ಆದರೆ?

ಹೀಗೊಂದು ಕಥೆಯನ್ನು ಸಿನಿಮಾದಲ್ಲಿ ಅಳವಡಿಸಿಕೊಳ್ಳೋಣ ಅಂದುಕೊಂಡರೆ ಅದೆಷ್ಟು ಗೋಳಿನ ಸಿನಿಮಾವಾದೀತು ತಾನೇ? ಖಂಡಿತ ಇಲ್ಲ. ನಮ್ಮೆಲ್ಲ ಊಹೆಯನ್ನು ಮೀರಿ ಎರಡೂವರೆ ಘಂಟೆ ಪೂರ್ತಿ ನಕ್ಕು ನಗಿಸುವ ಕಥೆಯನ್ನಿಟ್ಟು ಸಿನಿಮಾ ಮಾಡಿದ್ದಾರೆ ನಿರ್ದೇಶಕ ವಿಪಿನ್ ದಾಸ್ (Vipin Das). ಮೇಲೆ ಮೇಲೆ ಪ್ರತೀ ದೃಶ್ಯದಲ್ಲೂ ನಾವು ನಗುತ್ತಿದ್ದರೆ ನಮ್ಮೊಳಗಿನ ಅವನು ತನ್ನ ಮೇಲೆ ತಾನೇ ನಾಚಿಕೆಪಟ್ಟುಕೊಳ್ಳುತ್ತಾನೆ. ಅನೇಕ ಸಲ ಗಂಭೀರವಾಗಿ ಹೇಳಲಾಗದ ವಿಷಯಗಳನ್ನು ಹಾಸ್ಯದ ಮೂಲಕವೇ ಮನಮುಟ್ಟುವಂತೆ ಹೇಳಬಹುದು. ಅದಕ್ಕೊಂದು ಒಳ್ಳೆಯ ಉದಾಹರಣೆ "ಜಯ ಜಯ ಜಯ ಜಯ ಹೇ" ಸಿನಿಮಾ.

ಇಷ್ಟರವರೆಗೂ ಬರೆದಿದ್ದೆಲ್ಲ ಈ ಸಿನಿಮಾದ ಪೂರ್ತಿ ಕಥೆಯಲ್ಲ. ಬರೀ ಆರಂಭ ಅಷ್ಟೇ. ಮೊದಲ ಇಪ್ಪತ್ತು ನಿಮಿಷ ಯಾವುದೋ ಗೋಳಿನ, ಸಾಮಾಜಿಕ ಸಂದೇಶವುಳ್ಳ ಸಿನಿಮಾ ನೋಡುತ್ತೀವೇನೋ ಅನ್ನುವ ಭಾಸವಾಗುತ್ತಿರುವಂತೆಯೇ ಇದ್ದಕ್ಕಿದ್ದ ಹಾಗೆ ಸಿನಿಮಾ ತನ್ನ ದಿಕ್ಕು ಬದಲಿಸುತ್ತದೆ. ಅಲ್ಲಿಂದ ನಿಜವಾದ ಮನರಂಜನೆ. ಇಲ್ಲಿರುವ ಹಾಸ್ಯವೂ ಅಷ್ಟೇ. ಸಿಲ್ಲಿ ಅನ್ನಿಸುವುದಿಲ್ಲ. ಸಿನಿಮಾದೊಳಗಿನ ಪಾತ್ರಧಾರಿ ನಗದಿದ್ದರೂ ಅವನನ್ನು ನೋಡುತ್ತಿರುವ ನಾವು ಮಾತ್ರ ಬಿದ್ದೂ ಬಿದ್ದೂ ನಗುತ್ತಿರುತ್ತೇವೆ. ಸಿನಿಮಾ ನೋಡುವಾಗ ನಕ್ಕೂ ನಕ್ಕೂ, ಸಿನಿಮಾ ಮುಗಿದ ಮೇಲೆ ಅದರೊಳಗಿನ ವಿಷಯದ ಬಗ್ಗೆ ಮತ್ತೆ ಮತ್ತೆ ಯೋಚಿಸುತ್ತೇವೆ. ಅದು ಸಿನಿಮಾ ಗೆದ್ದ ಸೂಚನೆ.

ಚಿಕ್ಕಮಕ್ಕಳನ್ನು ಬೇಕಾದರೂ ಜೊತೆಯಲ್ಲಿ ಕೂರಿಸಿಕೊಂಡು ನೋಡುವ ರೀತಿ ಸಿನಿಮಾ ಕಟ್ಟಿಕೊಡಲಾಗಿದೆ. ಈ ಸಿನಿಮಾದ ವಿಶೇಷವೆಂದರೆ ಇದರ ಸಬ್ಜೆಕ್ಟ್ ಮೆಸೇಜ್ ಕೊಡುವಂತಿದ್ದರೂ ಇಡೀ ಕುಟುಂಬದ ಸಮೇತ ಕುಳಿತು ಮನಬಂದಂತೆ ನಗುತ್ತ ನೋಡುವಂತೆ ಕಥೆ ಹೆಣೆಯಲಾಗಿದೆ. ದರ್ಶನ ರಾಜೇಂದ್ರನ್ (Darshana Rajendran) ಮತ್ತು ಬ್ಯಾಸಿಲ್ ಜೋಸೆಫ್ (Basil Joseph) ಅವರದು ಸಂಪೂರ್ಣ ಮೈಮರೆಸುವ ಅಭಿನಯ. ಈ ಚಿತ್ರಕಥೆ ಬರೆದ ರೀತಿ, ಅದನ್ನು ಕಾರ್ಯಗತಗೊಳಿಸಿರುವ ರೀತಿ ನಿಜಕ್ಕೂ ಖುಶಿಕೊಡುವಂಥದ್ದು. ಎಲ್ಲರೂ ನೋಡಲೇಬೇಕಾದ, ನೋಡಿ ಆನಂದಿಸಬೇಕಾದ, ಮುಗಿದ ಮೇಲೆ ಅಲೋಚಿಸಬೇಕಾದ ಸಿನಿಮಾ.

ಖಂಡಿತವಾಗಿ ಈ ವರ್ಷದ ಮಿಸ್ ಮಾಡಿಕೊಳ್ಳಬಾರದ ಸಿನಿಮಾಗಳ ಪಟ್ಟಿಯಲ್ಲಿ ಇದೂ ಸೇರಿಕೊಳ್ಳುತ್ತದೆ. ನೋಡಬೇಕೆನ್ನುವವರಿಗೆ Hotstar ನಲ್ಲಿದೆ. ನೋಡಿ!

-Santhoshkumar LM
28-Dec-2022