Monday, December 24, 2012
ಚೀಟ …..
ಚೀಟ .....
ಆಕೆಗೆ ಅರ್ಥವಾಗಲಿಲ್ಲ!!
ನನ್ನ ಸಹಪಾಠಿಯೊಬ್ಬ ಮತ್ತೊಮ್ಮೆ "ಚೀಟ" ಅಂತ ಸಂಬೋಧಿಸಿ ಕರೆದಾಗ ಹೊಸದಾಗಿ ಬಂದಿದ್ದ ಆ ಉಪಾಧ್ಯಾಯಿನಿಯೊಬ್ಬರು ಅಕ್ಷರಶಃ ಏನೆಂದು ತಿಳಿಯದೆ ದಂಗಾಗಿ ಹೋಗಿದ್ದರು!!
ಕೊನೆಗೆ ಬೇರೆ ಮಾಸ್ತರರೊಬ್ಬರು ಆತ ಕರೆದಿದ್ದು "ಟೀಚರ್" ಅಂತ ತಿಳಿಹೇಳಿದಾಗಲೇ ಆಕೆಗೆ ಅರ್ಥವಾಗಿದ್ದು!!
"ಟೀಚರ್" ಬರುಬರುತ್ತಾ "ಟೀಚ" ಆಗಿ, ಕೊನೆಗೆ "ಚೀಟ" ಅಂತ ಮಾರ್ಪಾಡಾಗಿತ್ತು!!
ಕೊನೆಗೂ ಆತ "ಟೀಚರ್"ನ್ನು ಕಲಿಯಲೇ ಇಲ್ಲ, ಅವರು ಕಲಿಸಿದ್ದನ್ನು ಕೂಡ!! ಅದು ಬೇರೆ ವಿಷಯ.
ನಾ ಕಲಿತ ನಮ್ಮೂರ ಶಾಲೆಯ ಹುಡುಗರ ಮುಗ್ಧತೆಗೆ ಇದೊಂದು ಉದಾಹರಣೆಯಷ್ಟೇ.
ವರ್ಷಕ್ಕೊಮ್ಮೆ ಉಚಿತ ಪುಸ್ತಕಗಳನ್ನು ಸರ್ಕಾರ ಕೊಡುತ್ತಿತ್ತು. ಅದು ಬರೇ ಒಂದನೇ ಮತ್ತು ಎರಡನೇ ತರಗತಿಗೆ ಮಾತ್ರ.
ಮುಂದಿನ ವಾರ ಹೊಸ ಪುಸ್ತಕ ಬರುತ್ತಿದೆಯೆಂದರೆ ಈಗಿಂದೀಗಲೇ ಮನಸ್ಸು ಬಕ ಪಕ್ಷಿಯಂತೆ ಕಾಯುತ್ತಿರುತ್ತಿತ್ತು!! ಉಚಿತ ಪುಸ್ತಕ ವಿತರಿಸಿದ ದಿನ ಊಟ, ನಿದ್ರೆ ಏನೂ ಬೇಡ. ಅಪ್ಪನಿಂದ ದುಡ್ಡು ತೆಗೆದುಕೊಂಡು ಶೆಟ್ಟರಂಗಡಿಯ ರಟ್ಟು ತಂದು ಜೋಪಾನವಾಗಿ ಆ ಪುಸ್ತಕಕ್ಕೆ ಹೊರಕವಚ ಹಾಕಿ, ಓದಲು ಕುಳಿತುಬಿಡುತ್ತಿದ್ದೆವು. ಇಡೀ ಪುಸ್ತಕದಲ್ಲಿಯ ಚಿತ್ರಗಳನ್ನು ನೋಡಿ, ನಂತರ ಎಲ್ಲ ಪಾಠ ಓದಿ ಮುಗಿಸಿದ ನಂತರವಷ್ಟೇ ಉಳಿದ ಪ್ರಪಂಚ ಅರಿವಿಗೆ ಬರುತ್ತಿದ್ದುದು!!
ನಿಮಗೆ ಗೊತ್ತಾ?
ಐದನೇ ಕ್ಲಾಸಿಂದ ಆರನೇ ಕ್ಲಾಸಿಗೆ ಹೋಗಬೇಕಾದರೆ ನಮ್ಮೂರ ಶಾಲೆಯಲ್ಲಂತೂ ಬಹಳ ಸುಲಭವಿತ್ತು. ಬರೀ ಹಿಂದೆ ತಿರುಗಿ ಕುಳಿತರೆ ಸಾಕು!! ಗಾಬರಿಯಾಗಬೇಡಿ. ಕೇವಲ ಒಂದೇ ಕೊಠಡಿಯಲ್ಲಿ ಐದನೇ ಮತ್ತು ಆರನೇ ತರಗತಿಗಳು ನಡೆಯುತ್ತಿದ್ದವು. ಗುಡುಗು ಮಳೆ ಸುರಿದು ಹೆಂಚುಗಳು ಹಾರಿಹೋಗಿ ಮಳೆ ಬಂದ ದಿನ ಐದನೇ ತರಗತಿಯ ಕೊಠಡಿಯೆಲ್ಲ ಜಲಾವೃತಗೊಂಡಿತ್ತು. ಸುತ್ತ ಹಸಿರು ಬೆಟ್ಟಗಳಿಂದ ಕೂಡಿದ್ದ ನಮ್ಮೂರಿನಲ್ಲಿ ಅದ್ಯಾವುದೋ ಕಾಲದಲ್ಲಿ ಗಾಳಿ ಬೀಸಲು ಶುರು ಮಾಡಿದರೆ ಮುಗಿಯಿತು, ಕೊಠಡಿಗಳ ಹೆಂಚುಗಳು ನಿಲ್ಲುವುದಿಲ್ಲ. ಹೆಂಚುಗಳೇನಾದರೂ ಅಪ್ಪಿತಪ್ಪಿ ಪುಟ್ಟ ಮಕ್ಕಳ ತಲೆಮೇಲೆ ಬಿದ್ದರೇನು ಗತಿ!! ಆದ್ದರಿಂದ ಒಂದಷ್ಟು ತಿಂಗಳುಗಳ ಮಟ್ಟಿಗೆ ಐದನೇ ತರಗತಿಯ ಮಕ್ಕಳನ್ನು ಆರನೇ ತರಗತಿಯ ಕೊಠಡಿಯೊಳಗೇ ಕೂರಿಸಿ ಪಾಠ ಮಾಡಲು ವ್ಯವಸ್ಥೆ ಮಾಡಲಾಗಿತ್ತು.
ಪೂರ್ವಕ್ಕೊಂದು ಬ್ಲಾಕ್ ಬೋರ್ಡು. ಪಶ್ಚಿಮಕ್ಕೊಂದು ಬ್ಲಾಕ್ ಬೋರ್ಡು!!
ಐದನೇ ತರಗತಿಯ ಮಕ್ಕಳು ಕೊಠಡಿಯ ಅರ್ಧಭಾಗಕ್ಕೆ ಕುಳಿತು ಪಶ್ಚಿಮಕ್ಕೆ ಮುಖ ಹಾಕಿ ಕೂರಬೇಕು. ಹಾಗೆಯೇ ಆರನೆಯ ತರಗತಿಯ ಮಕ್ಕಳು ಕೊಠಡಿಯ ಇನ್ನರ್ಧಭಾಗಕ್ಕೆ ಕುಳಿತು ಪೂರ್ವಕ್ಕೆ ಮುಖ ಹಾಕಿ ಕೂರಬೇಕು.ಕೂರಲಿಕ್ಕೆ ಹಲಗೆಗಳೇ ಆಧಾರ. ಏಕಾಗ್ರತೆ ಅಂದರೆ ಅದು!! ಬೇರೆ ಮಾಸ್ತರರು ಆರನೇ ಕ್ಲಾಸಿಗೆ ಯಾವ ಪಾಠ ಮಾಡುತ್ತಿದ್ದಾರೆ ಎನ್ನುವುದರ ಬಗ್ಗೆ ಕಿವಿಯಲ್ಲಿ ಕೇಳಿಸಿಕೊಳ್ಳದೆ, ಬರೀ ನಮ್ಮ ಐದನೇ ಕ್ಲಾಸಿನ ಮಾಸ್ತರರ ದನಿಯನ್ನು ಮಾತ್ರ ಆಲಿಸಬೇಕು. ಏಳನೇ ತರಗತಿಗೆ ಹೋಗುವುದೆಂದರೆ ಬಡ್ತಿ ಪಡೆದಂತೆ! ಏಕೆಂದರೆ ಕುಳಿತುಕೊಳ್ಳುವುದಕ್ಕೆ ಮುಂಚಿನಂತೆ ಹಲಗೆಗಳಿರಲಿಲ್ಲ, ಹೊಸ ಬೆಂಚುಗಳನ್ನು ಹಾಕಲಾಗಿತ್ತು!!
ತರಗತಿಯಲ್ಲಿದ್ದ ವಿದ್ಯಾರ್ಥಿಗಳನ್ನು ಆರು ಗುಂಪುಗಳನ್ನಾಗಿ ವಿಂಗಡಿಸಲಾಗಿತ್ತು.ತರಗತಿಯ ಬಾಗಿಲ ಹಿಂದೆ ಆ ಗುಂಪುಗಳ ಪಟ್ಟಿಯೊಂದನ್ನು ತಯಾರಿಸಿ ಅಂಟಿಸಲಾಗಿತ್ತು. ವಾರದ ಆರು ದಿನಗಳಲ್ಲಿ ದಿನಕ್ಕೊಂದು ಗುಂಪಿನಂತೆ ಪ್ರತಿ ಗುಂಪಿನ ಸದಸ್ಯರು ತರಗತಿಯ ಕೋಣೆಯ ಶುಚಿತ್ವ ಕಾಪಾಡಬೇಕು!! ಇಬ್ಬರು ಸದಸ್ಯರು ಹಲಗೆಗಳನ್ನು ಎತ್ತಿ ನಿಲ್ಲಿಸುವುದು, ನಂತರ ಮುಂಚಿನಂತೆ ಮಲಗಿಸುವುದನ್ನು ಮಾಡಿದರೆ,ಉಳಿದ ಸದಸ್ಯರು ಕಸ ಗುಡಿಸುತ್ತಿದ್ದರು. ಇನ್ನಷ್ಟು ಜನ ಪಕ್ಕದ ಬೋರ್ವೆಲ್ ನಿಂದ ಕೊಡಗಳಲ್ಲಿ ನೀರು ತಂದರೆ, ಉಳಿದವರು ಆ ನೀರನ್ನು ಶಾಲೆಯ ಮುಂದಿನ ಆವರಣದಲ್ಲಿ ನೀರು ಸಿಂಪಡಿಸಿ ಧೂಳು ಏಳದ ಹಾಗೆ ಮಾಡಬೇಕಿತ್ತು. ಇವೆಲ್ಲವೂ ಬೆಳಗಿನ 10 ಘಂಟೆಯ ಬೆಲ್ ಹೊಡೆಯುವುದರೊಳಗೆ ಮುಗಿಯಬೇಕು.
ದಿನಗಳೆದಂತೆ ಮಾಸ್ತರರು ಬರೆಯಲು ಬಳಸುತ್ತಿದ್ದ ಕಪ್ಪು ಹಲಗೆ ತನ್ನ ಬಣ್ಣ ಕಳೆದುಕೊಂಡು ಅವರೇನು ಬರೆಯುತ್ತಾರೋ ಅರ್ಥವಾಗುತ್ತಿರಲಿಲ್ಲ. ತಿಂಗಳಿಗೊಂದು ಬಾರಿ ಶಾಲೆಯ ಪಕ್ಕದ ಪೊದೆಗಳಲ್ಲಿ ಬೆಳೆದ ಯಾವುದೋ ಸೊಪ್ಪು ಕಿತ್ತು ತಂದು, ಅದಕ್ಕೆ ಕೊಂಚ ಇದ್ದಲು, ನೀರು ಹಾಕಿ ಚೆನ್ನಾಗಿ ಅರೆದು ಅದನ್ನು ಆ ಕಪ್ಪು ಹಲಗೆಗೆ ಚೆನ್ನಾಗಿ ಉಜ್ಜಿ ಕೊಂಚ ಒಣಗಲು ಬಿಟ್ಟರೆ....ವ್ಹಾವ್, ಕಪ್ಪು ಹಲಗೆ ಆಗ ತನ್ನ ನಿಜವಾದ ಹೊಳಪು ತೋರಿಸುತ್ತಿತ್ತು.ಈ ಕೆಲಸದ ಜವಾಬ್ದಾರಿಯನ್ನು ಆ ತರಗತಿಯ ಲೀಡರ್ ವಹಿಸಿಕೊಳ್ಳಬೇಕಿತ್ತು. ಇವತ್ತಿನ ಟೀಮ್ ಬಿಲ್ಡಿಂಗ್, ಕೋ-ಆರ್ಡಿನೇಷನ್ ಎಂದು ನೂರಾರು ಮೈಲಿ ನಮ್ಮನು ಕರೆದುಕೊಂಡು ಹೋಗಿ ಕಲಿಸುವ ಪಾಠಗಳನ್ನು, ಅವತ್ತಿಗೆ ಕೇವಲ ತರಗತಿಗಳನ್ನು ಶುಚಿ ಮಾಡುವ ಚಟುವಟಿಕೆಯಲ್ಲಿಯೇ ನಮ್ಮ ಮಾಸ್ತರುಗಳು ಕಲಿಸಿಬಿಟ್ಟರು ಅನಿಸುತ್ತದೆ.
ಈಗ ಬಹಳಷ್ಟು ವರ್ಷಗಳು ಕಳೆದು ಹೋಗಿವೆ. ಇಂದು ಅದೇ ಶಾಲೆ ವರ್ಣರಂಜಿತವಾಗಿ ಬದಲಾಗಿದೆ. ಸುತ್ತ ಬೆಳೆದಿದ್ದ ಮುಳ್ಳು ಪೊದೆಗಲೆಲ್ಲ ಮಾಯವಾಗಿ ಈಗ ಕಾಂಪೌಂಡು ತಲೆಯೆತ್ತಿದೆ. ಮುಂಚಿದ್ದ ಹಲಗೆಗಳೆಲ್ಲ ಹೋಗಿ ಬೆಂಚುಗಳು ಬಂದಾಗಿವೆ.ಸರಕಾರ ಮಕ್ಕಳನ್ನು ಶಾಲೆಗೆಳೆದು ತರಲು ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಮುಂಚಿನಂತೆ ಸೂರ್ಯ ಇಣುಕಲು ಶಾಲಾ ಕೊಠಡಿಯೊಳಗೆ ಒಡೆದ ಹೆಂಚುಗಳಿಲ್ಲ. ಸರಕಾರವೇ ಶಾಲಾ ಕೊಠಡಿಗಳನ್ನು ಸ್ವಚ್ಛಗೊಳಿಸಲು ಕೆಲಸಗಾರರನ್ನು ನೇಮಿಸಿದೆ. ಆಟಪಾಠಗಳ ಕಡೆಗೆ ಮಕ್ಕಳ ಗಮನವನ್ನು ಸೆಳೆಯಲು ನಾನಾ ಕಸರತ್ತುಗಳು ನಡೆಯುತ್ತಿವೆ. ಬಿಸಿಯೂಟ, ಉಚಿತ ಮೊಟ್ಟೆ, ಹಾಲು, ಅಕ್ಕಿ, ಪುಸ್ತಕ, ಸಮವಸ್ತ್ರ, ಬೈಸಿಕಲ್ಲು ಎಲ್ಲ ಯೋಜನೆಗಳನ್ನೂ ನೋಡಿಯಾಗಿದೆ. ನಮಗೆ ವಿದ್ಯಾರ್ಜನೆ ಮಾಡಿದ ಆ ಶಾಲೆಯನ್ನು ಈಗ ನೋಡಿದರೆ ಯಾವುದೋ ಆ ಬಿಡಿಸಲಾಗದ ನಂಟಿನ ನೆನಪಾಗುತ್ತದೆ. ಯಾವುದೇ ಸ್ಥಿತಿಯಲ್ಲಿದ್ದರೂ ನಮ್ಮನ್ನು ವಿದ್ಯಾವಂತರನ್ನಾಗಿ ಮಾಡಿ ಇಂದು ತಾನೇನು ಮಾಡಿಲ್ಲವೆಂಬಂತೆ ಮೌನವಾಗಿ ಕುಳಿತು ತನ್ನ ಸೇವೆಯನ್ನು ಇತರ ಕಂದಮ್ಮಗಳಿಗೂ ಮುಂದುವರೆಸಿರುವ ಆ ಶಾಲೆಯ ಬಗ್ಗೆ ಮನದೊಳಗೇ ಅಪಾರ ಗೌರವ ಮೂಡುತ್ತದೆ.
ಮೊನ್ನೆ ಊರಿಗೆ ಹೋಗಿದ್ದಾಗ ಅದರ ಹೊಸರೂಪವನ್ನು ನೋಡಿದ ನನಗೆ ಫೋಟೋ ಕ್ಲಿಕ್ಕಿಸದೆ ಇರಲು ಮನಸ್ಸಾಗಲಿಲ್ಲ.
ನಿಮ್ಮವನು,
-ಸಂತು
Subscribe to:
Posts (Atom)
Post a Comment
Please post your comments here.