(ಚಿತ್ರಕೃಪೆ: google)
ಕೈಯಲ್ಲೊಂದು ಹಾಳೆ ಜತೆಗೆ ಪೆನ್ನು. ಏಕೋ ಏನೋ ಗೀಚಬೇಕೆನಿಸಿತು.ಇದೇ ವಿಷಯ ಕಳೆದ ತಿಂಗಳಿನಿಂದ ತಲೆ ಕೊರೆಯುತ್ತಿದೆ.
"ಇಂಗ್ಲೆಂಡ್ ನಲ್ಲಿ ೨೦೧೨ರ ಒಲಿಂಪಿಕ್ ನಡೆಯುತ್ತಿದೆ.
ಕ್ಯೂಬ,ಉಕ್ರೇನ್, ಹಂಗೇರಿ,ಕಝಕ್ ಸ್ತಾನ್ ಈ ರಾಷ್ಟ್ರಗಳೆಲ್ಲ ಎಷ್ಟು ದೊಡ್ಡದಿವೆ?
ನಮ್ಮ ಭಾರತದ ಅರ್ಧದಷ್ಟಿವೆಯಾ?
ಕೊನೆಯ ಪಕ್ಷ ನಮ್ಮ ದೇಶದ ಯಾವುದಾದರೊಂದು ರಾಜ್ಯದಷ್ಟಿದೆಯಾ?
ಅವುಗಳ ಜನಸಂಖ್ಯೆಯಾದರೂ ಎಷ್ಟು?
ಇಡೀ ರಾಷ್ಟ್ರದ ಒಟ್ಟು ಜನಸಂಖ್ಯೆ ನಮ್ಮ ದೇಶದ ಯಾವುದಾದರೊಂದು ಮಹಾನಗರದ ಒಟ್ಟು ಜನಸಂಖ್ಯೆಗಿಂತ ಹೆಚ್ಚಿರಲಾರದು!!
ಆದರೂ ಆ ರಾಷ್ಟ್ರಗಳ ಕ್ರೀಡಾಪಟುಗಳ ಹುರುಪು ನೋಡಿ.
ಈಗಾಗಲೇ ಆ ದೇಶಗಳು ಒಂದಷ್ಟು ಚಿನ್ನ, ಬೆಳ್ಳಿ ಹಾಗೂ ಕಂಚು ಪದಕಗಳನ್ನು ಗೆದ್ದಾಗಿವೆ.
ಇನ್ನೂ ಗೆಲ್ಲುತ್ತಲೂ ಇವೆ.
ಇನ್ನು ಅಮೇರಿಕ ಹಾಗೂ ಚೀನಾ ದೇಶಗಳ ಜೊತೆ ಚಿನ್ನದ ಪದಕಗಳ ಹೋಲಿಕೆಯಂತೂ ಮಾಡ ಹೊರಟವ ಮೂರ್ಖನೇ ಸರಿ.
ಏನಾಗಿದೆ ನಮ್ಮ ಕ್ರೀಡಾಪಟುಗಳಿಗೆ?
ಒಂದೆರಡು ಬೆಳ್ಳಿ, ಒಂದೆರಡು ಕಂಚು!!
ಒಂದೊಂದು ರಾಜ್ಯದ ಜನಗಳು ಒಂದೊಂದು ಕ್ರೀಡೆಯಲ್ಲಿ ಪಳಗಿ ಒಲಿಂಪಿಕ್ ನಲ್ಲಿ ಭಾಗವಹಿಸಿದರೂ ಯಾವ ಕ್ರೀಡೆಯಲ್ಲೂ ನಮ್ಮ ಭಾರತದವರು ಇಲ್ಲದೇ ಹೋಗುವುದಿಲ್ಲ. ಅಲ್ಲವೇ?
ಹೇಗಿದ್ದರೂ ಒಂದಷ್ಟು ಪದಕಗಳಂತೂ ಗ್ಯಾರಂಟಿ.
ಛೇ.
ಏನು ಮಾಡುತ್ತಿದ್ದಾರೆ ನಮ್ಮ ದೇಶದವರೆಲ್ಲ.ಎಲ್ಲ ಸೋಮಾರಿಗಳು.
ಏನಾಗಿದೆ ಇವರಿಗೆ ಧಾಡಿ?"
ಇನ್ನೇನು ನನ್ನ ಲೇಖನ ಮುಗಿಯಬೇಕಿತ್ತು.
"ಅಲ್ಲಪ್ಪಾ ಮಹಾರಾಯ, ಇನ್ನೊಂದು ಸಲ ನೀನೇನು ಬರೆದಿದ್ದೀಯಾ ಯೋಚಿಸಿ ಹೇಳು"
ಇದ್ಯಾರ ಧ್ವನಿ?
ಓಹ್ ನನ್ನ ಮನಸ್ಸು ಮಾತನಾಡುತ್ತಿದೆ!!
ನಾನೂ ಬಿಡಲಿಲ್ಲ, ಕೇಳಿದೆ "ಯಾಕಪ್ಪಾ, ನಾನೇನು ತಪ್ಪು ಬರೆದಿದ್ದೀನಿ"
ಮನಸು, "ಈ ದೇಶದ ಜನಗಳು ಸೋಮಾರಿ ಎಂದೆಯಾ? ಅದು ಸರೀನಾ?"
ನಾನು, "ಮತ್ತಿನ್ನೇನು ಏನಾಗುತ್ತೆ ಇವರ ಕೈಲಿ, ಕಷ್ಟದ ಕೆಲಸ ಯಾವುದೂ ಆಗಬಾರದು.
ಏನೂ ಮಾಡದೇ ಚಿನ್ನದ ಪದಕ ಬಾ ಅಂದ್ರೆ ಬರುತ್ಯೆ?,
ನಾನೇನು ತಪ್ಪು ಹೇಳಿದೆ?
ನಂಗೂ ದೇಶದ ಮೇಲೆ ಭಕ್ತಿ ಇದೆ, ಪ್ರೀತಿ ಇದೆ.
ನಮ್ಮ ದೇಶದ ಹೆಸರು ಒಲಿಂಪಿಕ್ ಪದಕಗಳ ಪಟ್ಟಿಯಲ್ಲಿ ಚೀನಾ ಅಮೇರಿಕಗಳ ತರಹ ಅಗ್ರಸ್ತಾನದಲ್ಲಿ ಇರಬೇಕು ಅನ್ನೋ ಆಸೆ ಇದ್ದರೆ ಅದು ತಪ್ಪೇ"
ಮನಸು ಯೋಚಿಸಿ ಹೇಳಿತು,"ಪುಣ್ಯಾತ್ಮ, ನಿಂದೆಲ್ಲ ವಾದವನ್ನು ಒಪ್ಪುತ್ತೀನಿ.
ನಂಗೂ ನಮ್ಮ ದೇಶದ ಹೆಸರು ಪದಕಗಳ ಪಟ್ಟಿಯಲ್ಲಿ ರಾರಾಜಿಸಬೇಕು ಅನ್ನೋ ಆಸೆ ಇದೆ.
ನಾನೂ ಈ ದೇಶದ ಅಪ್ಪಟ ಪ್ರೇಮಿ. ನಾನು ಕೂಡ ನಿನ್ನ ತರಹ ಯೋಚನೆ ಮಾಡುತ್ತೇನೆ.
ಇಷ್ಟೆಲ್ಲಾ ರಾಜಕೀಯ ಪುಡಾರಿಗಳ ತರಹ ಭಾಷಣ ಬಿಗಿಯೋ ನೀನು,
ನೀನೇ ಯಾಕೆ ಆ ಕೆಲ್ಸ ಮಾಡಬಾರದು?
ನೀನೇ ಯಾಕೆ ಯಾವುದಾದರೊಂದು ಕ್ರೀಡೆಯಲ್ಲಿ ಪಳಗಿ ಒಲಿಂಪಿಕ್ ನಲ್ಲಿ ಸ್ಪರ್ಧಿಸಬಾರದು?
ಎಂಟು ಗಂಟೆಗೆ ಹೋಗಬೇಕಾದ ಆಫೀಸಿಗೆ, ಎಂಟೂವರೆಗೆ ಎದ್ದು ತಡಬಡಾಯಿಸಿಕೊಂಡು ಹೋಗುವ ಜಾಯಮಾನದವನು ನೀನು.
ಕೊನೆಯ ಪಕ್ಷ ಯಾವುದಾದರೊಂದು ಸ್ಪರ್ಧೆಯಲ್ಲಿ ಭಾಗವಹಿಸುತ್ತೇನೆಂದು ಎದೆ ತಟ್ಟಿ ಹೇಳಿನೋಡು.
ಕೊನೆಯ ಪಕ್ಷ ಒಲಿಂಪಿಕ್ ಬೇಡ, ನಿನ್ನದೇ ಏರಿಯಾದ ಆಟಗಾರರೊಂದಿಗೆ ಜಯಿಸಿ ನೋಡು.
ಆಗ ಗೊತ್ತಾಗುತ್ತದೆ, ನಿನಗೆ ಅದಕ್ಕೆ ಬೇಕಾದ ಶ್ರಮ!!
ಆ ಆಟಗಾರರೋ, ಕೊನೆಯ ಪಕ್ಷ ಬೆಳ್ಳಿ,ಕಂಚು ಪದಕಗಳನ್ನಾದರೂ ಪಡೆದಿದ್ದಾರೆ.
ನೀನೇನು ಮಾಡಿದ್ದೀಯಾ?
ಈಗ ಯೋಚಿಸು, ಬರೀ ತಪ್ಪು ಹುಡುಕುವುದರಲ್ಲಿ ಕಾಲ ಕಳೆಯುತ್ತೀಯೋ?
ಅಥವಾ ಇನ್ನೇನಾದರೂ ಸರಿಯಾದ ಕೆಲಸ ಮಾಡುತ್ತೀಯೋ.
ಯೋಚಿಸಿ ನೋಡು!!"
ಹೀಯಾಳಿಸಿ ಬರೆದಿದ್ದ ಹಾಳೆಯನ್ನು ಪರ್ರನೆ ಹರಿದು ಹಾಕಿ,
ಮತ್ತೊಂದು ಹೊಸ ಹಾಳೆಯ ಮೇಲೆ ಬರೆಯತೊಡಗಿದೆ....
"ಪದಕ ಗೆದ್ದ ಭಾರತಾಂಬೆಯ ಪುತ್ರರಿಗೆ ಅಭಿನಂದನೆಗಳು!!
ಅಮ್ಮನ ಕೀರ್ತಿ ಎತ್ತಿ ಹಿಡಿಯುವ ನಿಮ್ಮ ಈ ಕಾರ್ಯ ಹೀಗೆಯೇ ಸಾಗುತಿರಲಿ,
ಜೈ ಭಾರತ ಮಾತೆ".
ಮನಸ್ಸು ಮುಗುಳ್ನಗುತ್ತಿತ್ತು:)
--ಪರಿಕಲ್ಪನೆ
ಸಂತು.
ಸಂತು.
Post a Comment
Please post your comments here.