Sunday, December 5, 2021

ಮಾನಾಡು...(2021, Tamil)

 


"ಮಾನಾಡು"
ನೋಡಿದ ಮೇಲೊಮ್ಮೆ
"ಮಾ(ತ)ನಾಡು"!

ಒಬ್ಬ ಯಶಸ್ವೀ ಸಿನಿಮಾ ನಾಯಕನೊಬ್ಬ ತನ್ನ ೧೦೦ನೇ ಸಿನಿಮಾ ಎಂದೆಂದಿಗೂ ವಿಶೇಷವಾಗಿ ಇರಬೇಕೆಂದು ಅಪೇಕ್ಷಿಸುತ್ತಾನೆ. ಹಾಗಾಗಿಯೇ ಆ ಸಿನಿಮಾದ ಕಥೆ ಎಲ್ಲವೂ ಉಳಿದ ಸಿನಿಮಾಗಳಿಗಿಂತಲೂ ವಿಭಿನ್ನವಾಗಿರುತ್ತದೆ. ಈ ಸಿನಿಮಾ ಶತಾಯಗತಾಯ ಗೆಲ್ಲಲ್ಲೇಬೇಕೆಂಬ ಸಹಜ ಬಯಕೆಯಿರುತ್ತದೆ.

ಅದೇ ವಿಷಯವನ್ನು ಬೇರೆ ವಿಭಾಗಗಳಿಗೆ ಹೋಲಿಸಿದರೆ ಅಲ್ಲಿ ನೂರರ ಸಂಭ್ರಮ ಕೇವಲ ಸಂಖ್ಯೆಯಷ್ಟೇ. ಏಕೆಂದರೆ ಅವರಿಗೆ ಆ ವಿಭಿನ್ನವಾದುದನ್ನು ಆಯ್ದುಕೊಳ್ಳುವ ಆಯ್ಕೆ ಇರುತ್ತದಾ ಅನ್ನುವುದೇ ಅನುಮಾನ. ಆದರೆ ಈ ಅವಕಾಶ ಸಿಕ್ಕರೆ, ಅವರ ಕೌಶಲ್ಯತೆಯನ್ನು ತೋರಿಸಬಲ್ಲ ಸರಿಯಾದ ಸಿನಿಮಾ ಸಿಕ್ಕರೆ ಅದು ಸಿನಿಮಾಪ್ರೇಮಿಗಳಿಗೆ ಹಬ್ಬ!

"ಮಾನಾಡು"...ಪ್ರವೀಣ್ ಕೆ.ಎಲ್ ಎಂಬ ಖ್ಯಾತ ಸಂಕಲನಕಾರನೊಬ್ಬನ ನೂರನೇ ಸಿನಿಮಾ! ಒಂದು ವಾರದ ಹಿಂದೆ ಬಿಡುಗಡೆಯಾಗಿ ವಿಶ್ವದಾದ್ಯಂತ ಯಶಸ್ವೀ ಪ್ರದರ್ಶನ ಕಾಣುತ್ತಿರುವ ತಮಿಳು ಸೈನ್ಸ್, ಫಿಕ್ಷನ್, ಆಕ್ಷನ್- ಥ್ರಿಲ್ಲರ್ ಸಿನಿಮಾ. ಸಿಲಂಬರಸನ್ (ಸಿಂಬು) ಮತ್ತು ಎಸ್ಜ಼ೆ ಸೂರ್ಯ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರದ ಕಥೆಯನ್ನು ಟೈಮ್ ಲೂಪ್ ಪರಿಕಲ್ಪನೆಯ ಮೇಲೆ ಹೆಣೆಯಲಾಗಿದೆ.

ಟೈಮ್ ಲೂಪ್ ಕಾನ್ಸೆಪ್ಟ್ ಇದೀಗ ಎಲ್ಲರಿಗೂ ತಿಳಿದಿರುವ ವಿಚಾರ. ಈ ಕಾನ್ಸೆಪ್ಟಿನ ಆಧಾರದ ಮೇಲೆ ಇಲ್ಲಿಯವರೆಗೆ ಅನೇಕ ಸಿನಿಮಾಗಳು ಬಂದಿವೆ. ಆದರೆ ಈ ಸಿನಿಮಾ ತಮಿಳು ಸಿನಿಮಾರಂಗದ ಮಟ್ಟಿಗೆ ಅತ್ಯುತ್ತಮ ಟೈಮ್ ಲೂಪ್ ಸಿನಿಮಾ ಎಂದು ಹೇಳಬಹುದು. ಅದಕ್ಕೆ ಕಾರಣ ಒಂದು ಡ್ರಾಮಾ ಪ್ರಕಾರದ ಕಥೆಯನ್ನು ಥ್ರಿಲ್ಲರ್ ಕಥೆಯನ್ನಾಗಿಸಿ ಅದನ್ನು ಟೈಮ್ ಲೂಪ್ ಕಾನ್ಸೆಪ್ಟಿಗೆ ಜೋಡಿಸುವುದಿದೆಯಲ್ಲ. ಅದು ನಿಜಕ್ಕೂ ಸವಾಲಿನ ಕೆಲಸವೇ. ಸ್ವಲ್ಪ ಹೆಚ್ಚು ಕಡಿಮೆಯಾದರೂ ಪ್ರೇಕ್ಷಕ ಕಥೆ ಅರ್ಥವಾಗದೆ ಸೀಟಿನಲ್ಲೇ ಆಕಳಿಸುವ ಸಾಧ್ಯತೆಯೇ ಹೆಚ್ಚು. ಹೊರಬಂದ ಮೇಲೆ ಸಿನಿಮಾ ವಿಶ್ಲೇಷಕರ ವಿವರಣೆಯಿಂದಷ್ಟೇ ಸಿನಿಮಾ ಅರ್ಥಮಾಡಿಕೊಳ್ಳಬೇಕಾಗುತ್ತದೆ.

ಆದರೆ "ಮಾನಾಡು" ಸಿನಿಮಾ ಇವೆಲ್ಲವನ್ನು ಹುಸಿಗೊಳಿಸಿ ಒಂದು ಕಡೆ ಟೈಮ್ ಲೂಪ್ ಕಾನ್ಸೆಪ್ಟ್ ಅನ್ನು ಸಾಮಾನ್ಯ ಪ್ರೇಕ್ಷಕನಿಗೂ ಅರ್ಥವಾಗುವಂತೆ ಹೇಳುತ್ತ, ಸಿನಿಮಾದ ಮುಖ್ಯ ಕಥೆಯನ್ನು ಸ್ವಾರಸ್ಯವಾಗಿ ಹೇಳುವುದರಲ್ಲಿ ಯಶಸ್ವಿಯಾಗಿದೆ. ಕಥೆಯ ವಿಚಾರದಲ್ಲೂ ನಿರ್ದೇಶಕರು ಭಯಪಟ್ಟಿಲ್ಲ. ರಾಜಕೀಯ ಲಾಭಗಳಿಗಾಗಿ ಕೋಮು ಗಲಭೆಯನ್ನು ಹುಟ್ಟುಹಾಕುವ ಕಥೆಯನ್ನು ಎಲ್ಲೂ ಆಚೀಚೆ ಹೋಗದಂತೆ ಕುತೂಹಲಕಾರಿಯಾಗಿ ಹೇಳುತ್ತಾರೆ.

ಟೈಮ್ ಲೂಪ್ ಕಾನ್ಸೆಪ್ಟಿಗೆ ಬರುವುದಾದರೂ ಅದು ಅರ್ಥವಾಗದಿದ್ದರೆ ಇಷ್ಟು ಹೊತ್ತಿಗೆ ಸಿನಿಮಾ ತೋಪೆದ್ದು ಹೋಗುತ್ತಿತ್ತು. ಇಂದು ಆ ಕಾನ್ಸೆಪ್ಟ್ ಅನ್ನು ಅರ್ಥೈಸಿಕೊಳ್ಳುತ್ತಲೇ ಇಡೀ ಕಥೆಯನ್ನು ಅರ್ಥ ಮಾಡಿಕೊಳ್ಳುವುದು ಸುಲಭವಾಗುವಂತೆ ದೃಶ್ಯಗಳನ್ನು ತೋರಿಸಿರುವುದು ಸಿನಿಮಾದ ಎಡಿಟರ್ ಪ್ರವೀಣ್ ಕೆ,ಎಲ್.

ಮೊದಲನೆಯ ಲೂಪಿನಿಂದಲೂ ನಮಗೆ ಅರ್ಥವಾಗುವಂತೆ ಹೇಳುತ್ತಲೇ ಮತ್ತೆ ಮತ್ತೆ ಸಿನಿಮಾ ಮುಂದಿನ ಲೂಪಿಗೆ ಹೋದಂತೆ ನಮಗೆ ಕಾಣುವ ಹಾಗೆ ಒಂದೇ ಅಳತೆಯಲ್ಲಿ ಆ ವಿವರಿಸುವಿಕೆಯನ್ನು ತೆಳುವಾಗಿಸುತ್ತ ಹೋಗುತ್ತಾರೆ. ಹೀಗೆ ನಡೆಯುತ್ತ ಒಂದು ಹಂತದಲ್ಲಿ ಟೈಮ್ ಲೂಪಿನ ದೃಶ್ಯಗಳನ್ನೇ ಅದೃಶ್ಯ ಮಾಡಿಬಿಡುತ್ತಾದೆ. ಅಷ್ಟು ಹೊತ್ತಿಗಾಗಲೇ ಸಾಮಾನ್ಯ ಪ್ರೇಕ್ಷಕನಿಗೂ ಆ ಕಾನ್ಸೆಪ್ಟ್ ಅರ್ಥವಾಗಿರುತ್ತದೆ. ಆ ಘಟ್ಟದಲ್ಲಿ ನಾಯಕ ಸತ್ತರೂ, ಮುಂದಿನ ದೃಶ್ಯದಲ್ಲಿ ಆತ ಎದ್ದು ನಿಂತು ಹೋರಾಡುವುದು ಟೈಮ್ ಲೂಪ್'ನ ಸಹಾಯದಿಂದ ಅಂತ ನಮಗೆ ಸುಲಭವಾಗಿ ಅರ್ಥವಾಗುತ್ತದೆ. ಹಾಗಾಗಿ ಈ ಸಿನಿಮಾದ ನಿಜವಾದ ಹೀರೋ ಅದರ ಸಂಕಲನಕಾರ ಪ್ರವೀಣ್ ಕೆ.ಎಲ್.

ಸಿಲಂಬರಸನ್ (ಸಿಂಬು) ಅವರಿಗೆ ಇಂಥದೊಂದು ಗೆಲುವು ಬೇಕಿತ್ತು. ಅವರ ಕಮ್ ಬ್ಯಾಕ್ ಇಲ್ಲಿ ತುಂಬಾ ಗಟ್ಟಿಯಾಗಿದೆ. ತಾನಿನ್ನೂ ಮುಗಿದಿಲ್ಲ, ತಾನಿನ್ನೂ ಮಾಡಬೇಕಿರುವುದು ಬಹಳಷ್ಟಿದೆ ಅಂತ ತಮ್ಮ ಪಾತ್ರ ನಿರ್ವಹಣೆಯಲ್ಲಿ ಹೇಳಿಬಿಡುತ್ತಾರೆ. ಆದರೆ ತೆರೆಯ ಮೇಲೆ ಕಾಣಿಸಿಕೊಂಡಾಗಲೆಲ್ಲ ಚಪ್ಪಾಳೆ ಗಿಟ್ಟಿಸಿಕೊಳ್ಳುವುದು ಮಾತ್ರ ಸಿನಿಮಾದ ಖಳನಟನ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟ, ನಿರ್ದೇಶಕ "ಎಸ್. ಜೆ. ಸೂರ್ಯ". ಅವರ ಡೈಲಾಗ್ ಡೆಲಿವರಿ ಹೇಳುವ ಆವರ ಆತ್ಮವಿಶ್ವಾಸ ನಿಜಕ್ಕೂ ಮೆಚ್ಚುವಂಥದ್ದು.

ಮೊದಲಾರ್ಧ ಒಬ್ಬ ನಟನ ಟೈಮ್ ಲೂಪ್ ಕಥೆಯಿಂದ ಶುರುವಾದರೆ ಉಳಿದರ್ಧ ಇನ್ನೊಬ್ಬನ ಟೈಮ್ ಲೂಪ್ ಸೇರಿಕೊಳ್ಳುವುದರ ಜೊತೆ ಇನ್ನಷ್ಟು ಜಟಿಲವಾಗುತ್ತದೆ. ಆದರೆ ಒಟ್ಟಾರೆ ಕಥೆ ಅರ್ಥ ಮಾಡಿಸಲು ಬರೆದಿರುವ ರೀತಿಗೆ ನಿರ್ದೇಶಕ ವೆಂಕಟ್ ಪ್ರಭು ಅವರನ್ನು ಅಭಿನಂದಿಸಲೇಬೇಕು.

ಒಂದೆಡೆ ನಾಯಕರಿಬ್ಬರ ಅಭಿನಯ, ಇನ್ನೊಂದೆಡೆ ಟೈಮ್-ಲೂಪ್, ಮತ್ತೊಂದೆಡೆ ಯುವನ್ ಶಂಕರ್ ರಾಜಾ ಅವರ ಹಿನ್ನೆಲೆ ಸಂಗೀತ ಎಲ್ಲವೂ ಸೇರಿ "ಮಾನಾಡು" ಸಿನಿಮಾ ನೋಡುವ ಅನುಭವವನ್ನು ಸಿಕ್ಕಾಪಟ್ಟೆ ಚಂದಗೊಳಿಸುತ್ತವೆ.

ಸಿನಿಮಾ ಈಗಾಗಲೇ ಗೆದ್ದು ಕೋಟಿಕೋಟಿ ಬಾಚಿಕೊಳ್ಳುತ್ತಿದೆ. ಇಂಥ ಪ್ರಯತ್ನಗಳು ಗೆಲ್ಲಬೇಕು.

-Santhosh Kumar LM
05-Dec-2021

Thursday, November 18, 2021

ಗರುಡ ಗಮನ ವೃಷಭ ವಾಹನ (ಕನ್ನಡ, ಕ್ರೈಂ ಡ್ರಾಮಾ, 2021)

 





ಗರುಡ ಗಮನ ವೃಷಭ ವಾಹನ (ಕನ್ನಡ, ಕ್ರೈಂ ಡ್ರಾಮಾ, 2021)

"ಲೇಯ್ ಜುಟ್ಟೂ.... ನಾನ್ ಎಂಥ ಕಿತ್ತೋಗಿರೋ ನನ್ ಮಗಾ ನಿನಗೆ ಗೊತ್ತಿಲ್ಲ.... ಸುಮ್ಮನೆ ಸೈಲೆಂಟಾಗಿ ಸೈಡಲ್ಲಿದ್ಬುಡು" ಅನ್ನೋ ಡೈಲಾಗು ಸಾಮಾನ್ಯವಾಗಿ ಹೀರೋ ಒಬ್ಬನನ್ನು ಮಾಸ್ ಸ್ಟೈಲ್'ನಲ್ಲಿ ತೋರಿಸುವಾಗ ಆತ ತನ್ನ ಎದುರಾಳಿಗೆ ಬಳಸುವ ಡೈಲಾಗು!

ಆದರೆ ಈ ನಿರ್ದೇಶಕನಿಗೆ ಅವೆಲ್ಲ ಹೇಳುವುದು ಬೇಕಿಲ್ಲ. ಏಕೆಂದರೆ ನಿಜ ಜೀವನದಲ್ಲಿ ಮಾಸ್ ಡೈಲಾಗನ್ನು ಯಾರೂ ಯಾರ ಎದುರೂ ನಾಟಕೀಯವಾಗಿ ಹೇಳುವುದಿಲ್ಲ! ಅದಕ್ಕಾಗಿಯೇ ನಿರ್ದೇಶಕ ರಾಜ್ ಬಿ ಶೆಟ್ಟಿ ಈ ಡೈಲಾಗಿನ ಬದಲಾಗಿ ಅದೇ ಸಾಲುಗಳನ್ನು ಒಂದು ಕಾಡುವ ಟ್ಯೂನ್ ಇರುವ ಹಾಡಿನೊಳಗೆ ಬೆರೆಸಿ ಆರಂಭದಲ್ಲೇ ನೀಡುತ್ತ ಇಡೀ ಸಿನಿಮಾ ನೋಡಲು ಬೇಕಾದ ಮನಸ್ಥಿತಿಯನ್ನು ಪ್ರೇಕ್ಷಕನಿಗೆ ಕಟ್ಟಿಕೊಡುತ್ತಾರೆ!

Keep your silence


Keep your distance

You better stay away
Oh
you’re better off this way



You won’t believe
the things that I’ve been through
so
You better stay away


Hell knows
you’re better off this way!

ಇದು ಆರಂಭ...ಅಲ್ಲೇ ಪ್ರೇಕ್ಷಕನಿಗೆ ತಾನು ನೋಡ ಹೊರಟ ಸಿನಿಮಾ ಮಾಮೂಲಿ "ಕ್ರೈಂ ಡ್ರಾಮಾ" ಅಲ್ಲ ಅಂತ ಅನ್ನಿಸುವುದು. ಇಲ್ಲಿ ಒಳಹೋದ ಪ್ರೇಕ್ಷಕ ಹೊರಬರಲು ಸಾಧ್ಯವೇ ಇಲ್ಲ ಅನ್ನುವ ಹಾಗೆ ನಿರ್ದೇಶಕ ಅವನನ್ನು ಕಥೆಯೊಳಗೆ ಕಟ್ಟಿಹಾಕಿಬಿಡುತ್ತಾರೆ! "Demon in Me" ಅಂತ ತನ್ನೊಳಗಿನ ರಾಕ್ಷಸನನ್ನು ಜನರಿಗೆ ತೋರಿಸಬೇಕಿತ್ತು ರಾಜ್ ಬಿ ಶೆಟ್ಟಿ! ಆದರೆ ಸಿನಿಮಾದ ಆ Demon ಅನ್ನು ನೋಡುತ್ತ ನೋಡುತ್ತ "Demon in Us" ಪ್ರೇಕ್ಷಕನ ಶಿಳ್ಳೆಗಳ ಮೂಲಕ, ಚಪ್ಪಾಳೆಯ ಮೂಲಕ, ಕೂಗುವುದರ ಮೂಲಕ ಹೊರಬರುತ್ತಾನೆ! ಇದು non-stop ನಡೆಯುತ್ತಲೇ ಇರುತ್ತದೆ. ಇದು ಪ್ರೇಕ್ಷಕನನ್ನು ಪರಿಣಾಮಕಾರಿಯಾಗಿ ತನ್ನೊಳಗೆ ಸೆಳೆದುಕೊಳ್ಳುವುದಕ್ಕೆ ಒಂದು ಸಿನಿಮಾಗಿರುವ ಶಕ್ತಿ!


ತಮಿಳಿನ "ವಿಕ್ರಮ್ ವೇದ" ಸಿನಿಮಾ ಓಟಿಟಿಯಲ್ಲಿ ಬಿಡುಗಡೆಯಾದಾಗ ಅಲ್ಲಿ ನೋಡಿದ ಮೇಲೆ ಮೈನವಿರೇಳಿಸುವ ಆ ಮಾಸ್ ದೃಶ್ಯಗಳನ್ನು ಥಿಯೇಟರಿನಲ್ಲೇ ನೋಡಿ ಆನಂದಿಸಬೇಕಿತ್ತು ಅಂತ ಅದೆಷ್ಟು ಕೈಹಿಸುಕಿಕೊಂಡೆನೋ. ಅಂಥದ್ದೇ, ಅಷ್ಟೇ Force ಇರುವ ರೋಮಾಂಚಕ ದೃಶ್ಯಗಳನ್ನು ನೋಡಬೇಕೆಂದರೆ "ಗರುಡ ಗಮನ ವೃಷಭ ವಾಹನ"ವನ್ನು ಥಿಯೇಟರಿನಲ್ಲೇ ನೀವು ನೋಡಬೇಕು.


ಸಾಮಾನ್ಯವಾಗಿ ಸಿನಿಮಾದ ಕಥೆಯನ್ನು ಗ್ರಾಫಿನಲ್ಲಿ ಹಾಕಿಕೊಳ್ಳುವುದಾದರೆ ಇಡೀ ಸಿನಿಮಾದಲ್ಲಿ ಮೂರ್ನಾಲ್ಕು ಕಡೆ ಪ್ರೇಕ್ಷಕನನ್ನು "ವ್ಹಾವ್" ಅನ್ನಿಸುವ ದೃಶ್ಯಗಳಿರುತ್ತವೆ. ಆದರೆ ಈ ಸಿನಿಮಾದಲ್ಲಿ ಹಾಗಿಲ್ಲ. ಒಂದು ದೃಶ್ಯ "ತಾನು ಬೆಸ್ಟ್" ಅಂತ ಬಂದರೆ ಅದರ ಮುಂದಿನ ದೃಶ್ಯವೇ ಹಿಂದಿನ ದೃಶ್ಯಕ್ಕೇ ಸೆಡ್ಡು ಹೊಡೆಯುತ್ತ "ನಾನು ನಿನಗಿಂತ ಬೆಸ್ಟ್" ಅಂತ ಅದಕ್ಕಿಂತ ಅದ್ಬುತ ಅನ್ನಿಸುವ ಅನುಭವ ನೀಡುತ್ತದೆ. ಹೀಗೇ ಸಿನಿಮಾ ಸಾಗುತ್ತದೆ.


ಒಬ್ಬ ಒಳ್ಳೆಯ ಸಿನಿಮಾ ಕಸುಬುದಾರನ ಕೈಗೆ ಎಂಥ ಸಬ್ಜೆಕ್ಟ್ ಸಿಕ್ಕರೂ ಆತ ಅದನ್ನು ಒಂದು ಒಳ್ಳೆಯ ಕೃತಿಯನ್ನಾಗಿ ಹೇಗೆ ಮಾಡಬಲ್ಲ ಅನ್ನುವುದಕ್ಕೆ ಗರುಡಗಮನ ಸಾಕ್ಷಿ! ಸಿನಿಮಾದ ಚಿತ್ರಕಥೆಯನ್ನು ಬರೆಯುವಾಗ ನಿರ್ದೇಶಕ ಪ್ರತಿ ಸನ್ನಿವೇಶದಲ್ಲೂ ಆ ದೃಶ್ಯ ಪ್ರೇಕ್ಷಕರಿಗೆ ಯಾವ ರೀತಿಯ ಅನುಭವ ನೀಡಬಲ್ಲುದು ಎಂದು ಊಹಿಸಿಯೇ ದೃಶ್ಯ ಹೆಣೆದಿರುತ್ತಾನೆ. ಚಿತ್ರಮಂದಿರದಲ್ಲಿ ಕುಳಿತ ಪ್ರೇಕ್ಷಕನಿಗೆ ಆ ಸನ್ನಿವೇಶಗಳು ಅದೇ ರೀತಿ ಅನುಭವ ಕೊಟ್ಟುಬಿಟ್ಟರೆ ಆ ಸಿನಿಮಾ ಅಲ್ಲಿಗೆ ಗೆದ್ದಂತೆಯೇ. ಇಲ್ಲಿ "ಗರುಡಗಮನ ವೃಷಭವಾಹನ" ಬರೀ ಪಾಸ್ ಆಗಿಲ್ಲ.... ಡಿಸ್ಟಿಂಕ್ಷನ್ ಗಳಿಸುತ್ತದೆ!

ಕ್ರೈಂ ಡ್ರಾಮಾ ಅಂದರೆ ಬರೀ ರೌಡಿಗಳ ಮಾಸ್ ಡೈಲಾಗುಗಳೇ ತುಂಬಿ ಹೋಗಿರುತ್ತವೆ. ಇಲ್ಲಿ ಹಾಗಿಲ್ಲ. ಅವೆಲ್ಲವನ್ನು ಬದಿಗಿರಿಸಿ ಬೇರೆಯದೇ ರೀತಿಯ ಕಥೆ ಹೆಣೆಯಲಾಗಿದೆ. ಹಿಂದಿನ ದಿನವಷ್ಟೇ ಒಬ್ಬ ಎದುರಾಳಿಯನ್ನು ಮುಗಿಸಿ ಎಲ್ಲರನ್ನು ನಡುಗಿಸಿ ಬಂದವನೊಬ್ಬ ಲೋಕಲ್ ಹುಡುಗರ ಜೊತೆ ಸೇರಿ "ಹೇಯ್ ಇದು ಔಟ್ ಅಲ್ಲ ಕಣೋ.... ಫುಲ್ ಟಾಸ್ ಹಾಕ್ಬೇಡ ಮಾರಾಯಾ....ಎಂಥದೋ ಇದು ವೈಡ್ ಬಾಲ್...ಅಂಪೈರ್ ಹೇಳಿ ಆಯ್ತು, ನೀ ಹೋಗು" ಅಂತ ಮಕ್ಕಳಂತೆಯೇ ಜಗಳವಾಡುತ್ತ ಕ್ರಿಕೆಟ್ ಆಡುತ್ತಿದ್ದರೆ ಆ ಸಹಜತೆ ಪ್ರೇಕ್ಷಕನಿಗೆ ಭರಪೂರ ನಗು ತರಿಸುತ್ತದೆ.


ಅಬ್ಬರಿಸಿ ಭಯಪಡಿಸಬಾರದು. ಜೋರಾಗಿ ಅತ್ತು ಇನ್ನೊಬ್ಬರನ್ನು ಅಳಿಸಬಾರದು. ಅಸಹಜವಾಗಿ ಏನನ್ನೂ ಮಾಡದೆ ಕೇವಲ ಸನ್ನಿವೇಶವನ್ನು ಕಟ್ಟಿಕೊಡುವ ಮೂಲಕವೇ ಪ್ರೇಕ್ಷಕನನ್ನು ನಗಿಸಬೇಕು, ಅಳಿಸಬೇಕು, ಕೋಪ, ಆಕ್ರೋಷ, ಎಲ್ಲವೂ ಆತನ ಮನಸ್ಸಿನಲ್ಲಿ ತಂತಾನೇ ಸೃಷ್ಟಿಯಾಗಬೇಕು ಅನ್ನುವುದು ಈ ಸಿನಿಮಾ ಹೇಳಿಕೊಟ್ಟ ಪಾಠ!

ಲಾರಿಯೊಳಗೆ ಕೂತು ಪಾತ್ರವೊಂದು ಡ್ರೈವಿಂಗ್ ಕಲಿಯುತ್ತಿರುತ್ತದೆ. ಆ ಸನ್ನಿವೇಶದಲ್ಲಿ ನಗು ಬುಗ್ಗೆಯಾಗಿ ಹೊರಬರುತ್ತದೆ. ಮುಂದಿನ ದೃಶ್ಯದಲ್ಲಿ ನಾವು ನಕ್ಕಿದ್ದನ್ನೇ ನೆನಪಿಸಿಕೊಂಡರೆ ಬೇರೆಯದೇ ಫೀಲ್ ಆಗುತ್ತದೆ. ಪರೋಕ್ಷವಾಗಿ ನಿರ್ದೇಶಕ ಏನನ್ನೆಲ್ಲ ಮಾಡಿ ಪ್ರೇಕ್ಷಕನಿಗೆ ಕಥೆ ಹೇಳಬಹುದು ಅನ್ನುವುದೇ ಇಲ್ಲಿಯ ವಿಶೇಷತೆ. ಈ ದೃಶ್ಯ ಮತ್ತೆ ಮತ್ತೆ ನಿಮಗೆ ನೆನಪಾದರೆ ಅದರಲ್ಲಿ ಅತಿಶಯೋಕ್ತಿಯೇನಿಲ್ಲ.

ಈ ಸಿನಿಮಾ ನೋಡಿ ಬಂದ ಮೇಲೆ ಚಪ್ಪಲಿ, ನಾಯಿ, ಹುಡುಗರು, ಕ್ರಿಕೆಟ್, ಹುಲಿಕುಣಿತ, ಲಾರಿ, ಕೇಬಲ್, ಮಂಗಳಾದೇವಿ, ಕದ್ರಿ, RX ಅನ್ನುವ ಪದಗಳೆಲ್ಲಾ ತಲೆಯಲ್ಲಿ ಗಿರಕಿ ಹೊಡೆಯಲು ಶುರುಮಾಡುತ್ತವೆ ಅನ್ನುವುದಕ್ಕೆ ಅವನ್ನೆಲ್ಲ ಎಷ್ಟು ಸಶಕ್ತವಾಗಿ ಕಥೆಯೊಳಗೆ ಬಳಸಿಕೊಂಡಿದ್ದಾರೆ ಅಂತ ಅರ್ಥ.

ಮೊದಲನೇ ಸಿನಿಮಾ ಹಿಟ್ ಆದರೆ ಒಂದು ಅನುಮಾನ ಇರುತ್ತದೆ. ನಿರ್ದೇಶಕ ಗಿಮಿಕ್ ಮಾಡಿ ಗೆದ್ದಿರಬಹುದಾ ಅಂತ. ಅದನ್ನು ಪರಿಹರಿಸಬೇಕೆಂದರೆ ನಿರ್ದೇಶಕ ಮತ್ತೊಂದು ಹಿಟ್ ಕೊಡಲೇಬೇಕು. ಮತ್ತೆ ಕೊಡುತ್ತಲೇ ಇರಬೇಕು. ಅದು ಇಲ್ಲಿನ ಅನಿವಾರ್ಯತೆ. ಇಲ್ಲಿ ರಾಜ್ ಬಿ ಶೆಟ್ಟಿ ತೆಗೆದುಕೊಂಡಿರುವುದು ದೊಡ್ಡ ಸವಾಲಿನ ಕೆಲಸವೇ. "ಒಂದು ಮೊಟ್ಟೆಯ ಕಥೆ" ಸಿನಿಮಾದಲ್ಲಿ ಬೋಳುತಲೆಯ ಮದುವೆಯಾಗದ ಅವಿವಾಹಿತನ ಪಾತ್ರದಲ್ಲಿ ನಮ್ಮನ್ನು ನಕ್ಕುನಲಿಸಿದ್ದ ರಾಜ್ ಶೆಟ್ಟಿ ಈ ಸಿನಿಮಾದಲ್ಲಿ ಮಾಡಿದ ಪಾತ್ರಕ್ಕೂ ಆ ಸಿನಿಮಾದ ಆ ಪಾತ್ರಕ್ಕೂ ಯಾವುದೇ ಸಾಮ್ಯತೆ ಇಲ್ಲ. ಎರಡೂ ಸಿನಿಮಾಗಳ ನಿರ್ದೇಶಕ ಇವರೇನಾ ಅನ್ನುವ ಮಟ್ಟಿಗೆ ಮೇಕಿಂಗ್ ಎರಡೂ ಸಿನಿಮಾಗಳಲ್ಲಿ ವಿಭಿನ್ನವಾಗಿದೆ.

"ಒಂದು ಮೊಟ್ಟೆಯ ಕಥೆ" ನೋಡಿ ಈ ಸಿನಿಮಾಗೆ ಹೋಗುವಾಗ "ಹಾಸ್ಯ ಪಾತ್ರ ಮಾಡಿದವರು ಗಂಭೀರ ಪಾತ್ರ ಮಾಡಬಲ್ಲರೇ?" ಅನ್ನುವ ಅನುಮಾನವಿತ್ತು. ಈಗ ಈ ಸಿನಿಮಾ ನೋಡಿದ ಮೇಲೆ "ಆ ಸಿನಿಮಾದ ಹಾಸ್ಯದ ಪಾತ್ರ ಮಾಡಿದ್ದು ಇವರೇನಾ?" ಅನ್ನುವ ಮಟ್ಟಿಗಿನ ಅವರ Transformation ಇಲ್ಲಿದೆ! Script ಮತ್ತು execution ಎರಡೂ ಸರಿಯಿದ್ದು ಚೆನ್ನಾಗಿದ್ದರೆ ಒಬ್ಬ ನಟ ಹೇಗೆ ಬೇಕಾದರೂ ತೆರೆಯ ಮೇಲೆ ರಾರಾಜಿಸಬಹುದು ಅಂತ ಇಲ್ಲಿ ಸ್ಪಷ್ಟವಾಗಿ ತಿಳಿಯುತ್ತದೆ.


ಮೊದಲರ್ಧದಲ್ಲಿ ಮೈನವಿರೇಳಿಸುವ ಮಾಸ್ ದೃಶ್ಯಗಳಿಗೆ ಮೀಸಲಾಗಿದ್ದರೆ ದ್ವಿತೀಯಾರ್ಧದಲ್ಲಿ ಕಥೆ ತನ್ನ ದಿಕ್ಕು ಬದಲಿಸುತ್ತ ನಮ್ಮೊಳಗೆ ತಲ್ಲಣವನ್ನುಂಟು ಮಾಡುತ್ತದೆ. ಮುಂದೇನು ಅನ್ನುವ ಕುತೂಹಲ ಕೊನೆಯವರೆಗೂ ಕಾಯ್ದುಕೊಳ್ಳುವುದು ಇಲ್ಲಿಯ ವಿಶೇಷ. ದ್ವಿತೀಯಾರ್ಧ ಮೊದಲಾರ್ಧಕ್ಕಿಂತ ನಿಧಾನ ಅನ್ನಿಸುವುದು ಸಹಜ. ಅದಕ್ಕೆ ಕಾರಣ ಮೊದಲಾರ್ಧದಲ್ಲಿರುವ ಬೆಸ್ಟ್ ಮಾಸ್ ದೃಶ್ಯಗಳು!

ಈ ಸಿನಿಮಾ ನೋಡಿದವರು ರಿಷಭ್ ಶೆಟ್ಟಿಯನ್ನು ಖಂಡಿತ ಗಂಭೀರ ಪಾತ್ರಕ್ಕೆ ಎಷ್ಟು ಒಪ್ಪುತ್ತಾರೆ ಅನ್ನದೆ ಇರಲಾರರು. ಪುಟ್ಟ ಪುಟ್ಟ ಪಾತ್ರಗಳು ನಟಿಸುತ್ತಿಲ್ಲವೇನೋ ಎಂಬಂತೆ ಸಹಜವಾಗಿಯೇ ಅಭಿನಯಿಸುತ್ತವೆ. ಸ್ಥಳೀಯ ಪ್ರತಿಭೆಗಳನ್ನೇ ಸಿನಿಮಾಗೆ ಬಳಸಿಕೊಂಡು ಸಹಜವಾದ ಕಥೆ ಹೇಳುವಿಕೆ ರಾಜ್ ಶೆಟ್ಟಿಯವರಿಗೆ ಒಲಿದಿರುವ ಜಾಣ್ಮೆ! ಗೋಪಾಲಕೃಷ್ಣ ದೇಶಪಾಂಡೆ ಅವರದು ಮೊದಲಿಗೆ ಚಿಕ್ಕ ಪಾತ್ರ ಅನ್ನಿಸಿದರೆ ದ್ವಿತೀಯಾರ್ಧದಲ್ಲಿ ಬಹುತೇಕ ತಿರುವುಗಳಿಗೆ ಕಾರಣಕರ್ತರಾಗಿ ಮುಖ್ಯವಾಗಿಬಿಡುತ್ತಾರೆ.


"ಉಳಿದವರು ಕಂಡಂತೆ" ಸಿನಿಮಾದಲ್ಲೇ ಹುಲಿ ಕುಣಿತ ನೋಡಿ ತಲೆಕೆಡಿಸಿಕೊಂಡು ಕುಣಿದವರು ನಾವು....ಅದನ್ನೇ ಮತ್ತೆ ಇನ್ನೊಂದು ಸಿನಿಮಾದಲ್ಲಿ ಮಾಡಿದ್ದಾರೆ ಅಂದರೆ ಅದು "ಉಳಿದವರು ಕಂಡಂತೆ"ಯ ನಕಲಿ ಅಂತ ಕಾಣಿಸಬಹುದು ತಾನೇ? ಇಲ್ಲಿ ಹಾಗಾಗಿಲ್ಲ. ಹುಲಿ‌ಕುಣಿತವನ್ನು ಬರೀ ಮನರಂಜನೆಯ ಅಂಶವನ್ನಾಗಿ ತೆಗೆದುಕೊಳ್ಳದೆ ಸಿನಿಮಾದ ಕಥೆಯ ಭಾಗವನ್ನಾಗಿ ತೆಗೆದುಕೊಂಡಿದ್ದಾರೆ. ಅದರ placement ಹೇಗಿದೆ ಅಂದರೆ ನಾವೂ ಮೈಮರೆತು ಕೂಗುತ್ತೇವೆ. ಅದು ಈ ಸಿನಿಮಾದ Best Moment. ಇದು ಗ್ಯಾರಂಟಿ ಅನೇಕ ವರ್ಷಗಳು ನಮ್ಮ ನೆನಪಿನಲ್ಲಿ ಉಳಿಯಬಲ್ಲ ದೃಶ್ಯ!

ನಿರ್ದೇಶಕರಿಗೆ ನಾವು ತೆಗೆಯುವ ಸಿನಿಮಾದಲ್ಲಿ ಬೇರೆಯದೇ ಥರದ ಫ್ಲೇವರ್ ಬೇಕು ಅನ್ನೋ ಸ್ಪಷ್ಟತೆ ಇದೆ. ಹಾಗಾಗಿಯೇ ಕ್ರೈಮ್ ಡ್ರಾಮಾ ಅನಿಸಿಕೊಳ್ಳುವ ಈ ಸಿನಿಮಾದಲ್ಲಿ ನಮ್ಮ ಮನಸೆಳೆಯುವ ನೈಜ ಅಂಶಗಳಿವೆ. ಇಡೀ ಸಿನಿಮಾ ಹುಡುಕಿದರೂ ಎಲ್ಲೂ ಎಲ್ಲೋ ನಡೆಯುವ ವಿಷಯಗಳನ್ನು ಕಥೆ ಮಾಡಿಲ್ಲ. ಮಂಗಳೂರಿನ ಅಪ್ಪಟ ಸ್ಥಳೀಯ ವಿಷಯಗಳನ್ನಿಟ್ಟುಕೊಂಡೇ ಅದ್ಭುತ ಅನ್ನಿಸುವಂತೆ ಚಿತ್ರಕಥೆ ಮಾಡಿದ್ದಾರೆ. ಕೊಲೆಯ ದೃಶ್ಯಗಳಿದ್ದರೂ ಅವುಗಳನ್ನು ಚಿತ್ರೀಕರಿಸಿರುವ ರೀತಿ ಮನಸ್ಸಿಗೆ ಘಾಸಿ ಮಾಡದೆ ಕೇವಲ ಆ ದೃಶ್ಯದ ತೀವ್ರತೆಯನ್ನು ಅರಿಯುವಂತೆ ಮಾಡಿದೆ. ಮಿದುನ್ ಮುಕುಂದನ್ ಅವರು ನೀಡಿರುವ ಸಿನಿಮಾದ ಹಿನ್ನೆಲೆ ಸಂಗೀತ ಬೇರೆ ಮಾಡಿ ಅನುಭವಿಸಲಾಗದಷ್ಟು ಸಿನಿಮಾದೊಳಗೆ ಬೆರೆತುಹೋಗಿದೆ!

ಸಿನಿಮಾ ಓಘದಲ್ಲೇ ಒಂದು ನಿರಾಳವಿದೆ. ಆ ನಿರಾಳತೆಯೊಳಗೆ ಒಂದು force ಇದೆ. ಅದನ್ನು ನೀವು ಒಳ್ಳೆಯ Audio system ಉಳ್ಳ ಥಿಯೇಟರಿನಲ್ಲೇ ನೋಡಿ ಅನುಭವಿಸಬೇಕು. ಬೇಕಿದ್ದರೆ "ಇಡೀ ಸಿನಿಮಾವನ್ನು ಒಂದೂ ಕಡೆ ಚಪ್ಪಾಳೆ ಹೊಡೆಯದೆ ರೋಮಾಂಚನಗೊಳ್ಳದೆ ನೋಡಿ" ಅಂತ ಸವಾಲು ಹಾಕಿ. ಸಿನಿಮಾ ಹಾಗಿದೆ! "ಉಳಿದವರು ಕಂಡಂತೆ" ಬಿಡುಗಡೆಯಾದಾಗ ಅದೇ ಬೇರೆ ಬಗೆಯ ಪ್ರೇಕ್ಷಕರನ್ನು ಸೃಷ್ಟಿಸಿಕೊಂಡಿತ್ತು. ಅಂಥವರೆಲ್ಲರಿಗೂ ಈ ಸಿನಿಮಾ ನಿಜವಾಗಿ ಇಷ್ಟವಾಗುತ್ತದೆ.

ಸಿನಿಮಾದ ಕಥೆ ಹೇಳದಲೇ ಹೇಗಿದೆ ಅನ್ನುವುದನ್ನು ಹೇಳಬೇಕು ಅನ್ನುವ ಸಲುವಾಗಿ "ಸಿನಿಮಾ ಯಾವ ಅನುಭವ ಕೊಟ್ಟಿದೆ" ಅನ್ನುವುದನ್ನು ಮಾತ್ರ ಇಲ್ಲಿ ಹೇಳಿದ್ದೇನೆ. ಸಿನಿಮಾ ನೋಡಿದವರೊಂದಿಗೆ ಮಾತನಾಡಲು ಹಲವಾರು ವಿಷಯಗಳಿವೆ. ಅವೆಲ್ಲವನ್ನೂ ಈಗಲೇ ಮಾತನಾಡುವುದು ಬೇಡ. ನೋಡಿದವರು ಕಥೆ ಹೇಳಿ ಅದರ ಸ್ವಾರಸ್ಯವನ್ನು ಕಿತ್ತುಕೊಳ್ಳುವ ಮುನ್ನ ಥಿಯೇಟರಿಗೆ ಹೋಗಿ ನೋಡಿಬಿಡಿ. ನಮ್ಮೊಳಗೊಬ್ಬ ಮತ್ತೊಬ್ಬ ದಿಟ್ಟ, ಸಶಕ್ತ ನಿರ್ದೇಶಕ ಒಳ್ಳೆಯ ಸಿನಿಮಾಗಳನ್ನು ಕೊಡುವೆನೆಂಬ ಭರವಸೆ ಕೊಟ್ಟು ಅದರಂತೆಯೇ ಆತ್ಮವಿಶ್ವಾಸದಿಂದಲೇ ಇಂಥದ್ದೊಂದು ಒಳ್ಳೆಯ ಸಿನಿಮಾ ಕೊಟ್ಟಿದ್ದಾನೆ. ನಾವೆಲ್ಲ ಅದನ್ನು ನೋಡಿ ಅವನ ಬೆನ್ನು ತಟ್ಟಿ, Celebrate ಮಾಡಲೇಬೇಕಾದ ಸಿನಿಮಾ ಇದು.

ಈ ಸಿನಿಮಾ ಒಮ್ಮೆ ನೋಡಿ. ನೀವೇ ಹೇಳುತ್ತೀರಿ "ಇದು ಥಿಯೇಟರಿನಲ್ಲಷ್ಟೇ ನೋಡಬೇಕಾದ ಸಿನಿಮಾ" ಅಂತ. ರಾಜಾದ್ಯಂತ ಕಳೆದೆರಡು ವಾರಗಳಲ್ಲಿ ಇದ್ದಕ್ಕಿದ್ದಂತೆ ಶುರುವಾದ ಮಳೆ-ಚಳಿಯಿಂದ ಹೊರಬರಲಾರದೆ ನಡುಗುತ್ತಿರುವ ಜನರಿಗೆ "ಗರುಡ ಗಮನ ವೃಷಭ ವಾಹನ" ಚಳಿ ಬಿಡಿಸುವುದಂತೂ ಗ್ಯಾರಂಟಿ. ಸಿನಿಮಾ ಮಂದಿರದೊಳಕ್ಕೆ ನಾವು ಧೈರ್ಯದಿಂದ ಕಾಲಿಡಬೇಕಷ್ಟೇ.

-SanthoshKumar L M
18-Nov-2021


Friday, November 5, 2021

ಜೈ ಭೀಮ್ (2021, ತಮಿಳು)







(Spoiler Alert: ಮಿಸ್ ಮಾಡಬಾರದ ಸಿನಿಮಾ...ಸಿನಿಮಾ ನೋಡಿ ಈ ಪೋಸ್ಟ್ ಓದಿ)

ತಾನು ಹಿಡಿದ ಹಾವೊಂದನ್ನು ಮತ್ತೆ ಕಾಡಿಗೆ ಬಿಡುವ ಮುಖ್ಯ ಪಾತ್ರ ರಾಜಾಕಣ್ಣು..."ಹೋಗಿ ಬದುಕ್ಕೋ. ಈ ಜನರ ಕೈಗೆ ಮಾತ್ರ ಸಿಗಬೇಡ" ಅನ್ನುತ್ತಾನೆ. ಸಿನಿಮಾ ಹೇಳುವ ಕಥೆಯೂ ಈ "ವಿಷಪೂರಿತ" ಜನರ ಬಗ್ಗೆಯೇ!


ಸಿನಿಮಾದ ಹೆಸರು, ಟ್ರೈಲರ್ ನೋಡಿಯೇ ಸಿನಿಮಾದ ಕಥೆಯಲ್ಲಿ ಏನೆಲ್ಲ ಇರಬಹುದು ಅಂತ ಊಹಿಸಬಹುದಿತ್ತು ಅಲ್ಲವೇ? ಅಷ್ಟಿದ್ದರೂ ಎರಡೂ ಮುಕ್ಕಾಲು ಗಂಟೆ ಸಿನಿಮಾ ಸ್ವಲ್ಪವೂ ಬೇಸರವಿಲ್ಲದೆ ನೋಡಿಸಿಕೊಳ್ಳುತ್ತದೆ ಅಂದರೆ ಅದಕ್ಕೆ ಕಾರಣ ಸಿನಿಮಾ ಕಥೆಯನ್ನು ಕುತೂಹಲದಿಂದ ಹೇಳಿರುವ ರೀತಿ. ಬರೀ ಸಿನಿಮಾ ಆಗಿಯೂ "ಜೈ ಭೀಮ್" ಅದು ಹೇಳಿರುವ ರೀತಿಯಿಂದ ಮನಸ್ಸಿಗೆ ಇಷ್ಟವಾಗುತ್ತದೆ.


ಮುಖ್ಯವಾಗಿ ಪ್ರತೀ ದೃಶ್ಯದಲ್ಲೂ ನಿರ್ದೇಶಕ ಹೇಳುವ ಪುಟ್ಟ ಪುಟ್ಟ ಸೂಕ್ಷ್ಮಗಳಿಂದ ಸಿನಿಮಾ ಇಷ್ಟವಾಗಿಬಿಡುತ್ತದೆ. ಅವುಗಳಲ್ಲಿ ಕೆಲವನ್ನು ಇಲ್ಲಿ ಹೇಳಬೇಕೆಂದೇ Spoiler Alert ಕೊಟ್ಟು ಮಾತನಾಡಿದ್ದೇನೆ.


ಹಾವು ಹಿಡಿಯಲು ಬರುವ ರಾಜಾಕಣ್ಣು ಅಲ್ಲಿಟ್ಟಿರುವ ಆಭರಣಗಳ ಕಡೆ ಕಣ್ಣೆತ್ತಿಯೂ ನೋಡದೆ ಹಾವು ಹುಡುಕುತ್ತಾನೆ. ಅಲ್ಲಿ ಸಿಗುವ ಚಿನ್ನದ ಓಲೆಯನ್ನು ಮನೆಯಾಕೆಗೆ ಕೊಡುತ್ತಾನೆ. ಅಲ್ಲಿ ಆತನಿಗೆ ಬಡತನವಿದ್ದರೂ ಅನ್ಯರ ಹಣದ ಬಗ್ಗೆ ಆಸೆಯಿಲ್ಲ ಅನ್ನುವುದು ವ್ಯಕ್ತವಾಗುತ್ತದೆ. ಹಾವು ಹಿಡಿದು ಹೊರಡುವಾಗ ಆ ಮಾಲಿಕ ಹಣ ಕೊಡಲು ಬಂದಾಗಲೂ ಆತ ಅದನ್ನು ನಿರಾಕರಿಸುತ್ತಾನೆ. ಆ ಮಾಲಿಕನು ಏನೂ ಆಗಿಯೇ ಇಲ್ಲ ಅನ್ನುವಂತೆ ಹೊರಟು ಹೋಗುತ್ತಾನೆ. ಅವನ ಸದ್ಗುಣ ಅವರಿಗೆ ಅರ್ಥವಾಗುವುದಿಲ್ಲ. ಏಕೆಂದರೆ ಅವರು ಕಣ್ಣಿದ್ದೂ ಕುರುಡರು! ಹಣವಿದ್ದೂ ಬಡವರು!

ವೀರಪ್ಪನ್ ಬದುಕಿದ್ದ ಕಾಲದಲ್ಲಿ ಕೊಳ್ಳೇಗಾಲ, ಚಾಮರಾಜನಗರದ ಕಾಡುಗಳಲ್ಲಿ ವಾಸವಿರುತ್ತಿದ್ದ ಸೋಲಿಗ ಜನಾಂಗ ಪೊಲೀಸರ ದೌರ್ಜನ್ಯಕ್ಕೆ ಅದೆಷ್ಟು ಹಿಂಸೆ ಅನುಭವಿಸಿದರೆಂದು ಅವರಿಗಷ್ಟೇ ಗೊತ್ತು. ವೀರಪ್ಪನ್'ಗೆ ಸಹಾಯ ಮಾಡುತ್ತಿದ್ದಾರೆಂದು ಅನುಮಾನಿಸಿ ಅದೆಷ್ಟು ಜನರ ಮೇಲೆ ದೌರ್ಜನ್ಯ ಮಾಡಲಾಗಿತ್ತು. ವೀರಪ್ಪನ್'ಗೆ ಈ ವಿಷಯದಿಂದಾಗಿಯೂ ಪೊಲೀಸ್ ಇಲಾಖೆ ಮೇಲೆ ಸಿಕ್ಕಾಪಟ್ಟೆ ಕೋಪವಿತ್ತು ಅಂತ ಹೇಳಲಾಗುತ್ತಿತ್ತು. "ನಿಮ್ಮ ಕೋಪವನ್ನು ನನ್ನ ಮೇಲಷ್ಟೇ ತೋರಿಸಿ, ಯಾರ್ಯಾರೋ ಜನರಿಗೆ ತೊಂದರೆ ಕೊಡಬೇಡಿ" ಅಂತ ಆತ ರೋಷದಿಂದ ಹೇಳಿಕೊಂಡಿದ್ದ ಕೂಡ.


ಇಂದಿಗೂ ಕೆಲ ಸೋಲಿಗರು ಊರಿಗೆ ಬಂದರೆ ಅವರ ಕೆಲಸಗಳಿಗೆ ಹಣ ತೆಗೆದುಕೊಳ್ಳುವುದಿಲ್ಲ. ಅವರಿಗೆ ಅದರಿಂದ ಉಪಯೋಗವೂ ಇಲ್ಲ. ತಮ್ಮ ಕೆಲಸಕ್ಕೆ ಬದಲಾಗಿ ಅಕ್ಕಿಯನ್ನೋ ಬೇಳೆಯನ್ನೋ ಕೇಳಿ ತೆಗೆದುಕೊಳ್ಳುತ್ತಾರೆ. ಉದಾ: ಬಿದಿರು ಕಳಲೆ ಸಿಗುವ ಸಂದರ್ಭಗಳಲ್ಲಿ ಊರಿಗೆ ತಂದು ಮಾರುವ ಅವರು ಬದಲಿಗೆ ಅಕ್ಕಿ, ಬೇಳೆ, ರಾಗಿಯನ್ನು ತೆಗೆದುಕೊಳ್ಳುತ್ತಿದ್ದುದು ನನಗಿನ್ನೂ ನೆನಪಿದೆ.


ಮತ್ತೆ ಈ ಸಿನಿಮಾಗೆ ಬರುವುದಾದರೆ ಮುಖ್ಯ ಕಥೆಗಿಂತ ಅಲ್ಲಿ ಪುಟ್ಟಪುಟ್ಟದಾಗಿ ಆ ಜನರ ಬದುಕನ್ನು ಹೇಳಲು ಬಳಸಿಕೊಂಡಿರುವ ತುಣುಕುಗಳು ನನಗೆ ಸಿಕ್ಕಾಪಟ್ಟೆ ಹಿಡಿಸಿದವು. ಉದಾಹರಣೆಗೆ: ಬಲವಂತವಾಗಿ ಆಕೆಯನ್ನೂ, ಮಗಳನ್ನು ಪೊಲೀಸ್ ಠಾಣೆಗೆ ಕರೆದೊಯ್ಯುವ ಪೊಲೀಸರು ಒತ್ತಡದಿಂದಾಗಿ ಮತ್ತೆ ಅವರಿಬ್ಬರನ್ನೂ ವಾಪಸ್ಸು ಕಳಿಸುವಾಗ ತಮ್ಮ ಜೀಪಿನಲ್ಲಿ ಬಿಟ್ಟು ಬರುತ್ತೇವೆಂದು ಬಂದರೂ ಆಕೆ ತನ್ನ ಸ್ವಾಭಿಮಾನದಿಂದಾಗಿ ಅವರು ಗೋಗರೆದರೂ ಬಸ್ಸಿನಲ್ಲೇ ಹತ್ತಿ ಬರುತ್ತಾಳೆ. ನೋಡುವಾಗ "ವ್ಹಾ" ಅನ್ನಿಸಿತು.


ಸೂರ್ಯ ಮಾತೊಂದರಲ್ಲಿ "ಹುಟ್ಟುವಾಗಲೇ ನಾ ವಕೀಲನಾಗಿ ಹುಟ್ಟಲಿಲ್ಲ. ಮನುಷ್ಯನಾಗಿ ಹುಟ್ಟಿದೆ" ಅನ್ನುವ ಮಾತು.... ಇತರೆ ಮನುಷ್ಯರನ್ನು ತನ್ನಂತೆ ಮನುಷ್ಯರನ್ನಾಗಿಯೇ ನೋಡುತ್ತೇನೆ ಅನ್ನುವ ಹಾಗೆ ಗೋಚರಿಸಿತು.


ವಕೀಲನಿಗೆ ಹಣ ಕೊಡಲು ತನ್ನ ಬಳಿ ಏನಿಲ್ಲ ಅಂತ ಪರದಾಡುವ ದೃಶ್ಯ ನನ್ನ ಪಾಲಿಗೆ ಬೆಸ್ಟ್. ಆಕೆ ತನ್ನ ಅಳಲನ್ನು ವಕೀಲನಲ್ಲಿ ತೋಡಿಕೊಂಡಾಗ ಆತ ಹೇಳುತ್ತಾನಲ್ಲ. "ಹಾವು ಕಡಿಸಿಕೊಂಡವ ನಿನ್ನ ಹತ್ತಿರ ಬಂದರೆ ಮೊದಲು ಮದ್ದು ಕೊಡುತ್ತೀಯ? ಅಥವ ದುಡ್ಡು ನೋಡುತ್ತೀಯ?" ಅಂತ


ಅದಕ್ಕೆ ಆಕೆ: "ಥೂ ಏನು ಮಾತು ಹೇಳ್ತೀರಾ? ಹಣವೂ, ಜೀವವೂ ಒಂದೇನಾ? ನಮ್ಮ ಮೇಲೆ ದೌರ್ಜನ್ಯ ಎಸಗುತ್ತಿರುವ ಪೊಲೀಸರಿಗೆ ಅಪ್ಪಿತಪ್ಪಿ ಹಾವು ಕಚ್ಚಿ ನನ್ನ ಬಳಿ ಬಂದರೂ ಅವರಿಗೆ ಮದ್ದು ಕೊಡುತ್ತೇನೆ" ಅನ್ನುವಾಗ ಅ ಮುಗ್ಧ ಜನರ ಹೃದಯ ವೈಶಾಲ್ಯತೆ ನಮ್ಮ ಮನಸ್ಸಿಗೆ ನಾಟದೆ ಇರದು.


ನಾವೆಲ್ಲ ಏನೆಲ್ಲ ಕಲಿತಿದ್ದೇವೆ. ಆದರೆ ಅದೆಲ್ಲ, ಯಾವುದಕ್ಕಾಗಿ, ಎಷ್ಟು ಉಪಯೋಗವಾಗುತ್ತಿದೆ? ಆಗಲೆ ಆತ ಹೇಳುತ್ತಾನೆ. "ಒಬ್ಬ ವ್ಯಕ್ತಿಗೆ ಸಿಗುವ ಗೌರವ ಆತ ತಾನು ಕಲಿತ ವಿದ್ಯೆಯನ್ನು ಯಾವುದಕ್ಕಾಗಿ ಬಳಸುತ್ತಿದ್ದಾನೆ ಅನ್ನುವುದರ ಮೇಲೆ ನಿರ್ಧಾರವಾಗುತ್ತೆ" ಅಂತ. ಇಡೀ ಸಿನಿಮಾದಲ್ಲಿ ಗಮನಿಸಿ. ಕೆಲವೇ ಕೆಲವು ಪಾತ್ರಗಳಷ್ಟೇ ತಾವು ಕಲಿತ ವಿದ್ಯೆಯನ್ನು ಸರಿಯಾದ ಕೆಲಸಕ್ಕೆ ಬಳಸಿಕೊಳ್ಳುತ್ತವೆ. ಉಳಿದವುಗಳಿಗೆ ತಮ್ಮ ಸಂಸ್ಥೆಗೆ ಕೆಟ್ಟ ಹೆಸರು ಬರುತ್ತದೆಂಬ ಭಯ, ಕೆಲವಕ್ಕೆ ತನ್ನ ಅಸ್ಥಿತ್ವಕ್ಕೆ ಧಕ್ಕೆ ಬರುತ್ತದೆಂಬ ಭಯ.


ಇವತ್ತಿಗೂ ಹಳ್ಳಿಗಳಲ್ಲಿ ದಲಿತ ಸಮುದಾಯ ಉಳಿದವರ ಎದುರಿಗೆ ಮಾತನಾಡುವಾಗ ಎದ್ದು ನಿಂತು ಕೈಕಟ್ಟಿ ತಲೆ ತಗ್ಗಿಸಿ ಮಾತನಾಡುತ್ತದೆ. ಪ್ರಕಾಶ್ ರಾಜ್, ಸೂರ್ಯ ಆ ಜನರ ಕಷ್ಟ ಕೇಳಲೆಂದು ಒಂದೆಡೆ ಕೂತಿರುವಾಗ ಮಾತನಾಡುವವರೆಲ್ಲ ಎದ್ದು ಕೈಕಟ್ಟಿ ತಮ್ಮ ಕಥೆ ಹೇಳತೊಡಗುತ್ತಾರೆ. ಸೂರ್ಯನ ಪಾತ್ರ "ಕುಳಿತಲ್ಲಿಯೇ ಮಾತನಾಡಿ" ಅಂತ ಹೇಳಿದ ಮೇಲಷ್ಟೇ " ಕುಳಿತು ಮಾತನಾಡತೊಡಗುತ್ತಾರೆ.


ಚಂದ್ರು ಪಾತ್ರದಂತೆಯೇ ನಾಯಕನೊಬ್ಬ ಹುಟ್ಟಿ ತಮಗೆ ಹೇಳಿಕೊಡಬೇಕು ಅಂತ ಯಾರೂ ಅಂದುಕೊಳ್ಳಬೇಕಿಲ್ಲ. ಇತರರೆದುರಿಗೆ ತಾವೂ ಸ್ವಾಭಿಮಾನದಿಂದ ತಲೆಯೆತ್ತಿ ನಿಂತು ಮಾತನಾಡುವುದು ತಪ್ಪಿಲ್ಲ ಅನ್ನುವ ಸಂದೇಶ ಇಲ್ಲಿ ಅರ್ಥವಾದರೆ ಸಾಕು.


ಒಂದು ರೂಪಾಯಿಯನ್ನು ತೆಗೆದುಕೊಳ್ಳದೆ ದೌರ್ಜನ್ಯಕ್ಕೊಳಗಾದವರ ಪರವಾಗಿ ನಿಂತು ನ್ಯಾಯ ಕೊಡಿಸುವ ಚಂದ್ರು (ನಿಜ ಜೀವನದಲ್ಲೂ ಕೆ.ಚಂದ್ರು ಅಂತ ಹೀಗೆ ಹೋರಾಡಿದ ವ್ಯಕ್ತಿಯೊಬ್ಬರಿದ್ದಾರೆ. ಅವರಿಂದಲೇ ಪ್ರಭಾವಿತವಾದ ಪಾತ್ರವಿದು) ಇರುವ ಸಿನಿಮಾಗೆ "ಜೈ ಭೀಮ್" ಅಂತ ಟೈಟಲ್ ಇಟ್ಟಿರುವುದು ಸೂಕ್ತವಾಗಿದೆ. ಆ ಪಾತ್ರ ಹೇಳುವ "ನಿನ್ನಂಥ ಶೋಷಣೆಗೊಳಗಾದವರಿಗೆ ನ್ಯಾಯ ಸಿಕ್ಕ ದಿನ ನಾನು ನೆಮ್ಮದಿಯಿಂದ ಮಲಗುತ್ತೇನೆ" ಅನ್ನುವುದೇ ಸಿನಿಮಾದ ಟೈಟಲ್'ಗೆ ಹೊಂದುವ ಬೆಸ್ಟ್ ಡೈಲಾಗ್!


ಪೊಲೀಸ್ ಠಾಣೆಯಲ್ಲಿ ಅಮಾಯಕರಿಗೆ ಚಿತ್ರಹಿಂಸೆ ಕೊಟ್ಟು ಅವರು ಮಾಡದ ಅಪರಾಧಗಳನ್ನು ಒಪ್ಪಿಕೊಳ್ಳಿ ಅಂತ ಒತ್ತಡ ಹೇರುವ ದೃಶ್ಯಗಳು ವೆಟ್ರಿಮಾರನ್ ಅವರ "ವಿಸಾರಣೈ" ಅನ್ನು ನೆನಪಿಸುತ್ತದಾದರೂ ಮಧ್ಯೆ ಮಧ್ಯೆ ಕೋರ್ಟಿನ ದೃಶ್ಯಗಳು ಆ "ಹಿಂಸೆ"ಯಿಂದ ಕೊಂಚ ನಿರಾಳವನ್ನಾಗಿಸುತ್ತವೆ. ಪ್ರತೀ ಕೋರ್ಟಿನ ದೃಶ್ಯದಲ್ಲಿ ನೊಂದವರ ಪರವಾಗಿ ಜಯ ಸಿಕ್ಕುವಾಗ "ನ್ಯಾಯಾಂಗ"ದ ಪ್ರಾಮುಖ್ಯತೆ ಎಷ್ಟು ಮುಖ್ಯ ಅನ್ನಿಸದೇ ಇರದು.


ಒಟ್ಟಾರೆ ಸಿನಿಮಾ ಇಷ್ಟವಾಯಿತು ಅಂದ ಮೇಲೆ ಕಥೆ, ಚಿತ್ರಕಥೆ, ಒಬ್ಬೊಬ್ಬರ ಅಭಿನಯ ಹೇಗಿತ್ತು, ಹಾಡು ಎಲ್ಲದರ ಬಗ್ಗೆ ಒಂದೊಂದಾಗಿ ಮಾತನಾಡುವ ಅವಶ್ಯಕತೆ ಇಲ್ಲ.


ಈ ಫೋಟೋದಲ್ಲಿರುವ ದೃಶ್ಯದಲ್ಲಿ ಆ ಪುಟ್ಟ ಹುಡುಗಿ ತಾನು ಕಾಲ ಮೇಲೆ ಕಾಲು ಹಾಕಿ ಪತ್ರಿಕೆ ಓದಬೇಕೆನ್ನುವ ಇಂಗಿತ ತೋರುವುದು.... ವಕೀಲನತ್ತ ನೋಡುವುದು.. ಆತ "ಪರವಾಗಿಲ್ಲ" ಅನ್ನುವಂತೆ ಸನ್ನೆ ಮಾಡಿದಾಗ ಆಕೆ ಹಾಗೆ ಕೂತಾಗ.... ಆ ಒಟ್ಟಾರೆ ದೃಶ್ಯ ಅನೇಕ ವಿಷಯಗಳನ್ನು ಒಮ್ಮೆಲೇ ಹೇಳಿತು....


ಸಿನಿಮಾ ಕಲಾತ್ಮಕವಾಗಿ ಸಿಕ್ಕಾಪಟ್ಟೆ ಏನೂ ಹೇಳದೇ, ಕಮರ್ಶಿಯಲ್ ಸಬ್ಜೆಕ್ಟ್ ಹೇಳಿದ ರೀತಿಯಲ್ಲೇ ಹೇಳಿರುವುದು ಹೆಚ್ಚು ಜನರನ್ನು ತಲುಪಲು ಸಹಾಯವಾಗಬಹುದೇ? ಹಾಗಾದರೆ ಈ ಸಿನಿಮಾ ಗೆದ್ದಂತೆಯೇ!

P.S: ಚೆನ್ನೈನ ಕೋರ್ಟೊಂದರಲ್ಲಿ ನ್ಯಾಯಾಧೀಶರಾಗಿದ್ದ ಕೆ.ಚಂದ್ರು ಅವರ ನಿಜ ಜೀವನದ ಕಥೆಯಿಂದಲೇ ಪ್ರಭಾವಿತರಾಗಿ ಕಥಾನಾಯಕ ಚಂದ್ರು (ಸೂರ್ಯ)ನ ಪಾತ್ರವನ್ನು ಹೆಣೆಯಲಾಗಿದೆ. ಆದಿವಾಸಿಗಳ ಮೂಲಕವೇ ಕಥೆ ಶುರುವಾಗುವುದರಿಂದ ಚಂದ್ರು ಕಥೆ ಮುಖ್ಯವಾಗುವುದಿಲ್ಲ. ನಿಜ ಜೀವನದ ಚಂದ್ರು ಅವರ ಬಗ್ಗೆ ಓದುವಾಗ ಅವರ ಜೀವನವನ್ನೇ ಕೇಂದ್ರವನ್ನಾಗಿಟ್ಟುಕೊಂಡು ಸಿನಿಮಾವೊಂದು ಬರಲಿ ಅನ್ನಿಸಿತು.


ಈ ಸಿನಿಮಾ ಆ ಆದಿವಾಸಿಗಳಿಗಾಗಲಿ, ಅಥವ ಇನ್ನೂ ಮೂಲಭೂತ ಸೌಕರ್ಯಗಳನ್ನು ಕಾಣದೆ ಅದಕ್ಕಾಗಿ ಹಂಬಲಿಸುತ್ತಿರುವವರಿಗಾಗಲಿ ತಲುಪುವುದು ಅನುಮಾನ. ಆದರೆ ಈ ಸಿನಿಮಾವನ್ನು ನಿಜವಾಗಿ ನೋಡಬೇಕಾದವರು, ಅದರ ಆಶಯಗಳನ್ನು ಅರ್ಥ ಮಾಡಿಕೊಳ್ಳಬೇಕಾದವರು "ನಾವೇ".


-Santhosh Kumar LM
05-Nov-2021

Saturday, October 23, 2021

ಸರ್ದಾರ್ ಉಧಮ್ (೨೦೨೧)

ಸರ್ದಾರ್ ಉಧಮ್ (೨೦೨೧)




ತನ್ನ ಪರ ವಕಾಲತ್ತು ವಹಿಸಿದ್ದ ವಕೀಲರು "ಹೋಗಲಿ. ಕ್ಷಮಾದಾನ ಬೇಡಿಕೋ. ನಿನಗಾಗುವ ಶಿಕ್ಷೆ ಬದಲಾಗಬಹುದು" ಅಂತ ಕೇಳುತ್ತಾನೆ. ಆದರೆ ಸರ್ದಾರ್ ಉಧಮ್ ಸಿಂಗ್ ಒಪ್ಪುವುದಿಲ್ಲ.


"ಹೋಗಲಿ. ನನ್ನಿಂದ ಏನು ಸಹಾಯ ಬೇಕು ಕೇಳು" ಅಂತ ಆ ವಕೀಲರು ಕೇಳಿದಾಗ ನಿರ್ಭಾವುಕರಾಗಿಯೇ ಉಧಮ್ ಸಿಂಗ್ ಕೇಳಿಕೊಳ್ಳುವುದು ಒಂದೇ ಒಂದು!


"Let the world know.... I was a revolutionary" ಅಂತ.


ಇದೊಂದೇ ವಾಕ್ಯ ಉಧಮ್ ಸಿಂಗ್ ತನ್ನ ಗುರಿಯ ಬಗ್ಗೆ ಎಷ್ಟು ನಿಖರತೆ ಹೊಂದಿದ್ದರು ಅಂತ ತೋರಿಸಿಬಿಡುತ್ತದೆ.


------------------


೧೯೧೯ ಏಪ್ರಿಲ್ ೧೩ ಅದು ಸಿಖ್ಖರ ಪವಿತ್ರ ಬೈಸಾಖಿಯ ದಿನ. ಅಂದು ಪಂಜಾಬಿನ ಅಮೃತಸರದ ಜಲಿಯನ್‍ವಾಲಾ ಭಾಗ್‍ನಲ್ಲಿ ಸಾವಿರಾರು ಜನರು ಸ್ವಾತಂತ್ರ್ಯ ಹೋರಾಟಗಾರರಾದ ಡಾ.ಸತ್ಯಪಾಲ್ ಮತ್ತು ಡಾ.ಸೈಫುದ್ದೀನ್ ಕಿಚ್ಲ್ಯೂ ಅವರ ಬಂಧನವನ್ನು ವಿರೋಧಿಸಿ ಶಾಂತಿ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು. ಅಲ್ಲಿಗೆ ತನ್ನ ಟ್ರೂಪಿನ ಜೊತೆಯಲ್ಲಿ ಬಂದಿಳಿದಿದ್ದು ಬ್ರಿಗೇಡಿಯರ್ ಜನರಲ್ ಡಯರ್.


ಭಾರತೀಯ ಸ್ವಾತಂತ್ರ್ಯ ಹೋರಾಟಗಾರರ ನಡೆಯ ಬಗ್ಗೆ ತಿಳಿದಿದ್ದ ಬ್ರಿಟಿಷ್ ಸರ್ಕಾರ ಅಮೃತಸರದಲ್ಲಾಗಲೇ ಮಾರ್ಷಲ್ ನಿಯಮವನ್ನು ಹೇರಿತ್ತು. ಇದರ ಪ್ರಕಾರ ಐದಕ್ಕಿಂತ ಹೆಚ್ಚು ಜನರು ಒಂದು ಕಡೆ ಸೇರುವಂತಿರಲಿಲ್ಲ.


ಆ ಮೈದಾನಕ್ಕೆ ಮೂರೂ ಕಡೆ ಎತ್ತರದ ಗೋಡೆಗಳಿದ್ದು ಒಂದು ಕಡೆಯಷ್ಟೇ ಹೊರಹೋಗುವ ದಾರಿ ಇತ್ತು. ಅಲ್ಲೇ ಅಡ್ಡ ನಿಂತ ಡಯರ್ ಮತ್ತವನ ತಂಡ ಮನಬಂದಂತೆ ಜನರ ಮೇಲೆ ಗುಂಡು ಹಾರಿಸಿದರು. ಒಂದೂ ಎಚ್ಚರಿಕೆ ನೀಡದೆ ಏಕಾಏಕಿ ಆ ಜನರ ಮೇಲೆ ನಡೆದ ಗುಂಡಿನ ದಾಳಿ ಉದ್ದೇಶಪೂರ್ವಕವಾಗಿಯೇ ಇತ್ತು. ಅಲ್ಲಿ ನಡೆದದ್ದು ರಕ್ತದೋಕುಳಿ. ಕೆಲವೇ ನಿಮಿಷಗಳಲ್ಲಿ ಹೆಂಗಸರು, ಮಕ್ಕಳೆನ್ನದೆ ಸಾವಿರಾರು ಜನರು ಅಲ್ಲೇ ಮೃತಪಟ್ಟರು. ಸಾವಿರಾರು ಜನರು ಗಾಯಗೊಂಡರು. ಕಡೆಗೂ ಡಯರ್ ಮತ್ತವನ ತಂಡ ಫೈರಿಂಗ್ ನಿಲ್ಲಿಸಿದ್ದು ಬುಲೆಟ್ಟುಗಳು ಖಾಲಿಯಾದ ಮೇಲೆಯೇ!


ಈ ಘಟನೆಯಲ್ಲಿ ಶೂಟ್ ಮಾಡಿ ಕೊಂದಿದ್ದು ಜನರಲ್ ಬ್ರಿಗೇಡಿಯರ್ ಜನರಲ್ ಡಯರ್ ಮತ್ತು ಆತನ ಟ್ರೂಪ್ ಆದರೂ, ಇದಕ್ಕೆ ನೇರ ಕಾರಣವಾಗಿದ್ದು ಮತ್ತು ಹತ್ಯೆಯನ್ನು ಬ್ರಿಟನ್ನಿನಲ್ಲಿ ಸಮರ್ಥಿಸಿಕೊಂಡಿದ್ದು ಆಗ ಪಂಜಾಬಿನ ಲೆಫ್ಟಿನಂಟ್ ಗವರ್ನರ್ ಆಗಿದ್ದ "ಮೈಕೇಲ್ ಓ ಡ್ವಾಯರ್"


ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಪೆಟ್ಟು ಕೊಟ್ಟೆವೆಂಬ ಅಹಮ್ಮಿಕೆ ಬ್ರಿಟಿಷ್ ಸರಕಾರದ್ದಾದರೆ, ಇದೇ ಘಟನೆ ಸ್ವಾತಂತ್ರ ಚಳುವಳಿಯಲ್ಲಿ ಪ್ರಮುಖ ಪಾತ್ರ ವಹಿಸಿತು. ಈ ಘಟನೆಯಾದ ನಂತರ ಇನ್ಯಾರೂ ಚಳುವಳಿ ಅಂತ ಧೈರ್ಯದಿಂದ ಮುಂದೆ ಬರಲಾರರು ಅನ್ನುವ ಲೆಕ್ಕಾಚಾರ ಈಸ್ಟ್ ಇಂಡಿಯಾ ಸರ್ಕಾರದ್ದಾಗಿತ್ತು. ಆದರೆ ಈ ಕಿಚ್ಚಿನ ಉರಿ ತಾಕಿದ್ದು ಮಾತ್ರ ಈಗಾಗಲೇ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿ ಈ ಘಟನೆಯಿಂದ ಜರ್ಜರಿತಗೊಂಡ ಅನೇಕರಿಗೆ.


ಅವರಲ್ಲೊಬ್ಬ ಸರದಾರ "ಉಧಮ್ ಸಿಂಗ್". ಆತ ಬರೀ ದಂಗೆಯಲ್ಲಷ್ಟೇ ಪಾಲ್ಗೊಳ್ಳಲಿಲ್ಲ. ಇಲ್ಲಷ್ಟೇ ಹೋರಾಡುವುದಲ್ಲ. ಬ್ರಿಟಿಷರ ಮಾತೃಭೂಮಿ ಇಂಗ್ಲೆಂಡಿಗೇ ತೆರಳಿ ಅವರ ನೆಲದಲ್ಲೇ ಅವರಿಗೆ ಬಿಸಿ ಮುಟ್ಟಿಸುವ ಪಣ ತೊಡುತ್ತಾನೆ. ಈ ಮೂಲಕ ದಂಗೆ ತಣ್ಣಗಾಯಿತು ಅಂತ ಸಮಾಧಾನಪಟ್ಟುಕೊಳ್ಳುತ್ತಿದ್ದ ಬ್ರಿಟಿಷರಿಗೆ "ಅದು ಇನ್ನೂ ಜೀವಂತವಿದೆ. ಮತ್ತು ಅದರ ಕಾವು ಇನ್ನೂ ಜಾಸ್ತಿಯಾಗುತ್ತದೆ" ಅಂತ ಸ್ವಾತಂತ್ರ ಚಳುವಳಿಯ ಸಂದೇಶವನ್ನು ಅಲ್ಲಿಯ ಪ್ರಜೆಗಳಿಗೆ, ಸರ್ಕಾರಕ್ಕೆ ಮುಟ್ಟಿಸುವುದು ಅವನ ಗುರಿಯಾಗಿರುತ್ತದೆ. ಅದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ.


ಆತ ಏನೆಲ್ಲ ಮಾಡಿ ನಮ್ಮ ಭಾರತಾಂಬೆಯ ಸ್ವಾತಂತ್ರ್ಯ ಹೋರಾಟದಲ್ಲಿ ತನ್ನನ್ನು ಅರ್ಪಿಸಿಕೊಂಡ ಅನ್ನುವುದೇ "ಸರ್ದಾರ್ ಉಧಮ್" ಅನ್ನುವ ವೀರನೊಬ್ಬನ ನಿಜ ಜೀವನದ ಕಥೆ.
-----------------


ಮೊನ್ನೆ ಈ ಸಿನಿಮಾದ ಬಗ್ಗೆ ಅನಿಸಿಕೆ ಬರೆಯುವಾಗ ಗೆಳೆಯ ಪ್ರಶಾಂತ್ ಸಾಗರ ಬರೆದಿದ್ದರು....


ಮಾಸ್ ಸಿನಿಮಾಗಳಲ್ಲಿ ಒಬ್ಬ ಹೀರೋ ರೌಡಿಗೆ ಆವಾಜ್ ಹಾಕ್ತಾನಲ್ಲ.....
"ಲೇಯ್..... ನನ್ನ ಮೈ ಮುಟ್ಟಕ್ಕಾಗಲ್ಲ ಅಂತ ಮೆರೀತಿದ್ದೀಯಲ್ಲ.
ಹೇಳು... ನಿನ್ನ ಜಾಗಕ್ಕೆ ಬಂದು ನಿನ್ನ ಅಟ್ಟಾಡಿಸಿಕೊಂಡು ಹೊಡೀತೀನಿ" ಅಂತ


ಅಂಥ ಮಾಸ್ ಡೈಲಾಗನ್ನು ರಿಯಲ್ಲಾಗಿಯೇ ಮಾಡಿ ತೋರಿಸಿದ ದೇಶಭಕ್ತನೊಬ್ಬನ ಕಥೆ "ಸರ್ದಾರ್ ಉಧಮ್ ಸಿಂಗ್"


--------------------


ಜಲಿಯನ್‍ವಾಲಾ ಭಾಗ್‍ ಹತ್ಯಾಕಾಂಡವಾದ ನಂತರದ ಮಾಹಿತಿಗಳಲ್ಲಿ ಇದುವರೆಗೆ ಉಧಮ್ ಸಿಂಗ್ ಬಗ್ಗೆ ಕೇಳಿರಲೇ ಇಲ್ಲ. ಈ ಕಥೆ ಕೇಳಿದ ಮೇಲೆ ಎಷ್ಟೋ ವಿಷಯಗಳು ಅರಿವಿಗೆ ಬಂದವು.


---------------


ಮೊದಲ ಮತ್ತು ಎರಡನೇ ಮಹಾಯುದ್ಧಗಳ ಯಾವುದೇ ಘಟನೆಯ ಬಗ್ಗೆ ಅದೆಷ್ಟು ಸಿನಿಮಾಗಳು ಬಂದಿವೆ. "ಸೈನಿಕರು ನಡೆಯುವ ದಾರಿಯಲ್ಲಿ ಒಂದು ಬಾಳೆಹಣ್ಣಿನ ಸಿಪ್ಪೆ ಬಿದ್ದಿತ್ತು. ಅದನ್ನು ಒಬ್ಬ ಹೇಗೆ ಎತ್ತಿ ಪಕ್ಕಕ್ಕೆ ಎಸೆದ" ಅಂತ ವಿಷಯ ಸಿಕ್ಕಿದರೂ ಸಾಕು. ನಾಳೆ ಯಾರಾದರೊಬ್ಬರು ಸಿನಿಮಾ ತೆಗೆಯುತ್ತಾರೆ.


ಅಂಥದ್ದರಲ್ಲಿ ನಮ್ಮ ಸ್ವಾತಂತ್ರ್ಯ ಸುಮ್ಮನೆ ಸಿಕ್ಕಿದ್ದಲ್ಲ. ಇಂಗ್ಲೀಷರ ಆಡಳಿತದಲ್ಲಿ, ಜನರನ್ನು ಸಂಪರ್ಕಿಸಲು, ಒಟ್ಟುಗೂಡಿಸಲು ಸಾಧ್ಯವಾಗದ ಕಾಲಘಟ್ಟದಲ್ಲಿ ಏನೆಲ್ಲ ನಡೆದಿರಬಹುದು. ಅವುಗಳ ಬಗ್ಗೆ ಸಿನಿಮಾಗಳೇ ಇಲ್ಲ ಅಂತ ಬೇಸರಪಟ್ಟುಕೊಳ್ಳುತ್ತಿದ್ದೆ. "ಸರ್ದಾರ್ ಉಧಮ್" ಸಿನಿಮಾ ನೋಡಿದ ಮೇಲೆ ಖುಶಿಯ ಜೊತೇ ಇಂಥ ಸಿನಿಮಾಗಳು ಬರಲಿ ಅಂತ ಅನ್ನಿಸಿತು.


----------------


ಇತ್ತೀಚಿನ ಕೆಲವು ಸಿನಿಮಾಗಳಲ್ಲಿ ನನಗೆ ತುಂಬಾ ಮೆಚ್ಚುಗೆಯಾಗಿದ್ದು ಅಂದರೆ ಹಂತಕನೊಬ್ಬನನ್ನು ಮಾತಿಗೆಳೆದು ಅವನನ್ನು ಆ ಘಟನೆಯ ಬಗ್ಗೆ ಮತ್ತು ಆ ಘಟನೆಯ ಬಗೆಗಿನ ಆತನ ಅಭಿಪ್ರಾಯದ ಬಗ್ಗೆ ಪ್ರೇಕ್ಷಕನಿಗೆ ಹೇಳಿದ್ದು.


ಈ ಸಿನಿಮಾದಲ್ಲಿಯೂ ಸರ್ದಾರ್ ಉಧಮ್ ತಾನು ಕೊಲ್ಲಬೇಕೆಂದಿರುವ ಮೈಕೇಲ್ ಓ ಡ್ವಾಯರ್ ಮನೆಯಲ್ಲೇ ಕೆಲಸಕ್ಕೆ ಸೇರಿ ಜಲಿಯನ್‍ವಾಲಾ ಭಾಗ್‍ ಹತ್ಯಾಕಾಂಡದ ಬಗ್ಗೆ ಆತನ ಅಭಿಪ್ರಾಯ ಕೇಳುತ್ತಾನೆ. ಆ ಘಟನೆಯ ಬಗ್ಗೆ ಡ್ವಾಯರ್'ಗೆ ಯಾವುದೇ ಪಾಪಪ್ರಜ್ಞೆ ಕಾಡದಿರುವುದು ಉಧಮ್'ಗೆ ತನ್ನ ಗುರಿಯತ್ತ ಸಾಗಲು ಇನ್ನಷ್ಟು ಪುಷ್ಟಿ ನೀಡುತ್ತದೆ.


-----------------


ಡ್ವಾಯರ್'ನ ಮನೆಯಲ್ಲಿ ಕೆಲಸಕ್ಕೆ ಸೇರಿದಾಗ ಆತನನ್ನು ಕೊಲೆ ಮಾಡಲು ಅನೇಕ ಅವಕಾಶಗಳಿರುತ್ತವೆ. ಜೊತೆಗೆ ಕೊಂದು ಯಾರಿಗೂ ಗೊತ್ತಾಗದಂತೆ ತಪ್ಪಿಸಿಕೊಳ್ಳಬಹುದಿತ್ತು. ಆದರೆ ಸರ್ದಾರ್ ಹಾಗೆ ಮಾಡುವುದಿಲ್ಲ.


ವೈಯಕ್ತಿಕವಾಗಿ ಹೀಗೆ ಕೆಲಸಗಾರನೊಬ್ಬ ತನ್ನ ಮಾಲೀಕನನ್ನೇ ಕೊಂದರೆ ಕೊಲೆಯ ಉದ್ದೇಶ ಬೇರೆಯದೇ ರೀತಿಯಲ್ಲಿ ಬಿಂಬಿತವಾಗಿ ಚಳುವಳಿಯ ದಿಕ್ಕು ತಪ್ಪಬಹುದು ಅಂತ ಉಧಮ್ ಆ ಆಲೋಚನೆಯನ್ನು ಮಾಡುವುದಿಲ್ಲ.


ಜೊತೆಗೆ ಸ್ವಾತಂತ್ರ್ಯ ಚಳುವಳಿಯ ಸಂದೇಶ ಇಡೀ ಇಂಗ್ಲೆಂಡಿಗೆ ತಲುಪಬೇಕೆಂದರೆ ಡ್ವಾಯರ್'ನನ್ನು ಭಾರತಕ್ಕೆ ಸಂಬಂಧಪಟ್ಟ ಕಾರ್ಯಕ್ರಮವೊಂದರಲ್ಲೇ ಹತ್ಯೆ ಮಾಡಿ ಚಳುವಳಿ ಇನ್ನೂ ಜೀವಂತವಿದೆ ಅಂತ ತೋರಿಸಬೇಕೆನ್ನುವುದು ಅವನ ಗುರಿಯಾಗಿರುತ್ತದೆ. ಹಾಗೆ ಎಲ್ಲರೆದುರು ಕೊಂದು ಸಿಕ್ಕಿಹಾಕಿಕೊಂಡರೆ ಮರಣದಂಡನೆ ಗ್ಯಾರಂಟಿ ಅಂತ ಗೊತ್ತಿದ್ದ ಮೇಲೂ ಅದೇ ರೀತಿಯನ್ನು ಅನುಸರಿಸಿದ ಉಧಮ್ ಎಷ್ಟು ಧೈರ್ಯವಂತನಿರಬೇಕು?


----------------


ಡ್ವಾಯರ್'ನನ್ನು ಕೊಂದ ಮೇಲೂ ಅಷ್ಟೇ. ಶಾಂತವಾಗಿಯೇ ಯಾವುದೇ ಪ್ರತಿರೋಧ ಒಡ್ಡದೆ ಬಂಧನಕ್ಕೊಳಗಾಗುತ್ತಾನೆ. ಮರಣದಂಡನೆ ಎದುರಿಗಿದೆ ಅನ್ನುವಾಗಲೂ ಅವನಿಗೆ ಭಯವಿರುವುದಿಲ್ಲ. ಆತನ ಗುರಿ ಭಾರತದ ಬಗ್ಗೆ ಪ್ರಪಂಚದ ಗಮನ ಸೆಳೆಯುವುದಾಗಿರುತ್ತದೆ.
--------------


ಡ್ವಾಯರ್ ಹತ್ಯೆಯಾದ ನಂತರ ಸರ್ದಾರ್ ಉಧಮ್'ಗೆ ಮರಣದಂಡನೆ ನೀಡಿದಾಗ ಉಧಮ್ ಕೊಂಚವೂ ಭಯಪಡದೆ ಧೈರ್ಯವಾಗಿ ಹೇಳುವುದು ಇದನ್ನೇ:


"ನಾನು ಅದನ್ನು ಯಾಕೆ ಮಾಡಿದೆ ಅಂದರೆ ಮೈಕೆಲ್ ಓ ಡ್ವಾಯರ್ ಮೇಲೆ ನನಗೆ ದ್ವೇಷವಿತ್ತು. ಆತನಿಗಿದು ತಕ್ಕ ಶಾಸ್ತಿ. ಆತನೇ ನಿಜವಾದ ಅಪರಾಧಿ. ನನ್ನ ಜನಗಳ ಸ್ವಾತಂತ್ರ್ಯ ಹೋರಾಟದ ಉತ್ಸಾಹವನ್ನು ಬಗ್ಗುಬಡಿಯುವುದು ಅವನ ಉದ್ದೇಶವಾಗಿತ್ತು. ಬರೋಬ್ಬರಿ ೨೧ ವರ್ಷಗಳ ಕಾಲ ನನ್ನ ಹಗೆ ತೀರಿಸಿಕೊಳ್ಳಲು ಕಾದಿದ್ದೆ. ಇಂದು ಆ ನನ್ನ ಕೆಲಸ ನೆರವೇರಿತು ಅನ್ನುವ ತೃಪ್ತಿ ನನಗಿದೆ. ನನಗೆ ಸಾವಿನ ಬಗ್ಗೆ ಭಯವಿಲ್ಲ. ಏಕೆಂದರೆ ನಾನು ನನ್ನ ದೇಶಕ್ಕಾಗಿ ಪ್ರಾಣ ಬಿಡುತ್ತಿದ್ದೇನೆ. ನನ್ನ ಜನಗಳು ಬ್ರಿಟಿಷ್ ಆಡಳಿತದಲ್ಲಿ ಹೇಗೆ ಸಾಯುತ್ತಿದ್ದಾರೆ ಅನ್ನುವುದನ್ನು ನಾನು ಕಣ್ಣಾರೆ ಕಂಡಿದ್ದೇನೆ. ಅವರ ವಿರುದ್ಧವಾಗಿ ನಾನಿಂದು ಪ್ರತಿಭಟನೆ ಮಾಡಿದ್ದೇನೆ. ಅದು ನನ್ನ ಕರ್ತವ್ಯವಾಗಿತ್ತು. ಹಾಗಾಗಿ ದೇಶಕ್ಕಾಗಿ ಪ್ರಾಣ ಕೊಡುವ ವಿಷಯಕ್ಕಿಂತ ಇನ್ಯಾವ ದೊಡ್ಡ ಗೌರವ ಸಿಕ್ಕಲು ಸಾಧ್ಯ?"


-------------


ಇವಿಷ್ಟು ಸರ್ದಾರ್ ಉಧಮ್ ಸಿಂಗ್ ಬಗ್ಗೆ. ಸಿನಿಮಾದ ಬಗ್ಗೆ ಹೇಳುವುದಾದರೆ ಗೊತ್ತಿರದ ಅನೇಕ ವಿಷಯಗಳು ತಿಳಿದು ಖುಶಿಯಾಯ್ತು. ಎಲ್ಲ ಮಾಹಿತಿಯನ್ನು ಕಲೆಹಾಕಿ, ಸಿನಿಮಾಗೆ ಅದನ್ನು ಅಳವಡಿಸಿಕೊಂಡು ಆ ಕಾಲಘಟ್ಟವನ್ನು ಮರುಸೃಷ್ಟಿ ಮಾಡಲು ನಿರ್ದೇಶಕ ಎಷ್ಟು ಕಷ್ಟಪಟ್ಟಿದ್ದಾರೆ ಅನ್ನುವುದು ಗೊತ್ತಾಗುತ್ತದೆ. ಇಂಗ್ಲೆಂಡಿನ ದೃಶ್ಯಗಳು ಸಕ್ಕತ್. ಜಲಿಯನ್ ವಾಲಾ ಭಾಗ್ ದೃಶ್ಯವಂತೂ ಕರುಳು ಕಿವುಚಿದಂತಾಯ್ತು. ಸ್ವಾತಂತ್ರ್ಯಕ್ಕಾಗಿ ಅದೆಷ್ಟು ಜನ ಪ್ರಾಣ ಬಿಟ್ಟಿದ್ದಾರೆ. ನಾವಿಂದು ಖುಷಿಯಾಗಿರುವುದರ ಹಿಂದೆ ಅದೆಷ್ಟು ಜನರ ಬಲಿದಾನವಿದೆ?
------------


ನನ್ನ ಅನಿಸಿಕೆ: ಸಿನಿಮಾದಲ್ಲಿ ಮೊದಲೇ ಡ್ವಾಯರ್ ಹತ್ಯೆಯನ್ನು ತೋರಿಸಿ ನಂತರ ಹಿಂದಿನ ಘಟನೆಗಳನ್ನು ಹಿಮ್ಮುಖವಾಗಿ ತೋರಿಸಿದ್ದಾರೆ. ಸಿನಿಮಾ ಮುಗಿದಾಗ ಬರೀ ನಿಟ್ಟುಸಿರೊಂದೇ ಉಳಿದುಹೋಗುತ್ತದೆ. ಚಿತ್ರದ ಮೊದಲೇ ಜಲಿಯನ್ ವಾಲಾ ಭಾಗ್ ಘಟನೆ ತೋರಿಸಿ, ನಂತರ ಅಲ್ಲಿಂದ ಸರ್ದಾರ್ ಉಧಮ್ ಕಥೆಯನ್ನು ತೋರಿಸಿ, ಕಡೆಯಲ್ಲಿ ಡ್ವಾಯರ್ ಹತ್ಯೆ ಮತ್ತು ಉಧಮ್'ರ ಅಂತ್ಯವನ್ನು ತೋರಿಸಬೇಕಿತ್ತು ಅನ್ನಿಸಿತು. ಆಗ ಪ್ರೇಕ್ಷಕನಲ್ಲಿ ಇನ್ನೂ ಹೆಚ್ಚಿನ ಪರಿಣಾಮ ಬೀರಬಹುದಿತ್ತು
-------------


ಇರಲಿ..... "ಸರ್ದಾರ್ ಉಧಮ್"..
ಎಲ್ಲ ಭಾರತೀಯರು ನೋಡಿ, ಸ್ವಾತಂತ್ರ್ಯ ಹೋರಾಟಗಾರರನ್ನು ನೆನೆಯುತ್ತ, ಆತ್ಮಾವಲೋಕನ ಮಾಡಿಕೊಳ್ಳಲೇಬೇಕಾದ ಚಿತ್ರ.


#santhuLm
23-Oct-2021




Sunday, September 12, 2021

Schindler's List

Schindler's list (೧೯೯೩, ಇಂಗ್ಲಿಷ್)




ಅದು ಎರಡನೇ ಮಹಾಯುದ್ಧದ ಸಂದರ್ಭ. ಯಹೂದಿಗಳನ್ನು ಈ ಭೂಮಿಯಿಂದ ನಿರ್ನಾಮ ಮಾಡಲೇಬೇಕೆಂದು ಹಿಟ್ಲರ್ ಮುಂದಾಳತ್ವದ ನಾಜಿ ಪಡೆ ಹೇಳಹೆಸರಿಲ್ಲದಂತೆ ಕಂಡಕಂಡಲ್ಲಿ ಸಾಮೂಹಿಕ ಹತ್ಯೆ ಮಾಡುವಾಗ ಅದೇ ನಾಜಿ ಜನಾಂಗದ ವ್ಯಕ್ತಿಯೊಬ್ಬ ಸುಮಾರು ಸಾವಿರದಿನ್ನೂರು ಯಹೂದಿಗಳನ್ನು ತನ್ನ ಫ್ಯಾಕ್ಟರಿಗೆ ಕೆಲಸ ಮಾಡಲು ಬೇಕೆಂದು ಗುತ್ತಿಗೆಯ ಆಧಾರದ ಮೇಲೆ ಕರೆದುಕೊಂಡು ಹೋಗುತ್ತಾನೆ. ಆ ವ್ಯಕ್ತಿಯ ಹೆಸರು "ಆಸ್ಕರ್ ಶಿಂಡ್ಲರ್". ಊಟವಿಲ್ಲದೆ ಸಾಯುತ್ತಿದ್ದ ಅಮಾಯಕ ಯಹೂದಿಗಳಿಗೆ ಊಟ ಕೊಟ್ಟು, ಜರ್ಮನ್ ಸೇನೆಯ ಕಣ್ಣು ತಪ್ಪಿಸಿ ಯುದ್ಧ ಮುಗಿಯುವವರೆಗೆ ಅವರನ್ನು ಸಲಹಿ ಸಾವಿನ ದವಡೆಯಿಂದ ಕಾಪಾಡುತ್ತಾನೆ. ಅಂದು ಆತ ತನ್ನ ಫ್ಯಾಕ್ಟರಿಗೆ ಕೆಲಸಕ್ಕೆ ಬೇಕೆಂದು ಯಹೂದಿ ಖೈದಿಗಳ ಹೆಸರನ್ನು ಪಟ್ಟಿ ಮಾಡುತ್ತಾನಲ್ಲ. ಆ ಪಟ್ಟಿಯೇ "ಶಿಂಡ್ಲರ್ಸ್ ಲಿಸ್ಟ್". ಸಾವಿನಿಂದ ಅವರನ್ನು ಪಾರು ಮಾಡಿದ ಆ ಲಿಸ್ಟಿಗೆ "ಲಿಸ್ಟ್ ಆಫ್ ಲೈಫ್" ಅಂತಲೇ ಕರೆಯಲಾಗುತ್ತದೆ. ಆ ಮನಕಲಕುವ, ಆಸ್ಕರ್ ಶಿಂಡ್ಲರ್ ಅನ್ನುವ ಆಶ್ರಯದಾತನ ಸಾಹಸದ ಕಥೆಯೇ "ಶಿಂಡ್ಲರ್ಸ್ ಲಿಸ್ಟ್" ಸಿನಿಮಾದ್ದು.

ಲಂಚ ಕೊಡುವ ಅಥವ ಸ್ವೀಕರಿಸುವ ದೃಶ್ಯಗಳು ಬಂದಾಗ ನಮಗೆ ಸಹಜವಾಗಿ ಒಂದು ಕೋಪ, ಅಸಹನೆ ಮೂಡುತ್ತದಲ್ಲ. ಆದರೆ ಈ ಸಿನಿಮಾದಲ್ಲಿ ಶಿಂಡ್ಲರ್ ಆ ಅಧಿಕಾರಿಗಳಿಗೆ ಲಂಚ ಕೊಡುವಾಗ ಹಾಗೆ ಅನ್ನಿಸುವುದಿಲ್ಲ. ಏಕೆಂದರೆ ನಮ್ಮ ಮನಸ್ಸಿನಲ್ಲಿ ಆ ಲಂಚದ ಉದ್ದೇಶ ಮನೆಮಾಡಿರುತ್ತದೆ.

ಈ ಸಿನಿಮಾವನ್ನು ಹದಿನೈದು ವರ್ಷಗಳ‌ ಹಿಂದೊಮ್ಮೆ ನೋಡಿದ್ದೆ. ಆಗ ಇಷ್ಟೊಂದು impact ಮಾಡಿರಲಿಲ್ಲ. ಇತಿಹಾಸಕ್ಕೆ ಸಂಬಂಧಪಟ್ಟ ಸಿನಿಮಾಗಳನ್ನು ನೋಡುವಾಗ ಅಲ್ಲಿಯ ಇತಿಹಾಸದ ಬಗ್ಗೆ ಕನಿಷ್ಟ ಜ್ಞಾನ ಇರಬೇಕು ಅನ್ನುವುದು ಮತ್ತೊಮ್ಮೆ ತಿಳಿಯಿತು. ಭಾರತಿ ಬಿವಿ ಅವರು ಬರೆದ "ನಕ್ಷತ್ರಗಳ ಸುಟ್ಟ ನಾಡಿನಲ್ಲಿ" ಪುಸ್ತಕ ಓದಿದ ಮೇಲೆ ಜರ್ಮನಿ, ಹಿಟ್ಲರ್, ಯಾಹೂದಿಗಳು, ನಾಜಿಗಳು, ಯಹೂದಿಗಳ ಹತ್ಯಾಕಾಂಡ , ಯಹೂದಿಗಳನ್ನು ನಾಜಿ ಸೈನಿಕರು ನಡೆಸಿಕೊಂಡ ರೀತಿ, ಕಾನ್ಸಂಟ್ರೇಶನ್ ಕ್ಯಾಂಪುಗಳು ಎಲ್ಲ ಮಾಹಿತಿಗಳು ಕೊಂಚ ಕೊಂಚವಾಗಿಯೇ ಒಳಗಿಳಿದವು. ಅವೆಲ್ಲವುಗಳನ್ನು ಅರ್ಥ ಮಾಡಿಕೊಳ್ಳದೆ ಶಿಂಡ್ಲರ್ ಬಗ್ಗೆ ಅರ್ಥ ಮಾಡಿಕೊಳ್ಳಲು ಹೊರಟರೆ ಅದು ವ್ಯರ್ಥವಾಗುತ್ತದೆ. ಅದೇ ಪುಸ್ತಕದಲ್ಲಿ ಆಸ್ಕರ್ ಶಿಂಡ್ಲರ್ ಬಗ್ಗೆಯೂ ಒಂದು ಅಧ್ಯಾಯವಿತ್ತು. ಅದನ್ನು ಓದಿದ ಮೇಲಂತೂ ಈ ಮರೆತು ಹೋದ ಸಿನಿಮಾವನ್ನು ಮತ್ತೆ ನೋಡುವ ಮನಸ್ಸಾಯಿತು. ಹಾಗಾಗಿಯೇ ಈ ಸಿನಿಮಾ ಮತ್ತೊಮ್ಮೆ ನೋಡಿಸಿಕೊಂಡಿತು.

ಹೇಳಿ ಕೇಳಿ ಇದು ಸ್ಟೀವನ್ ಸ್ಪೀಲ್‌ಬರ್ಗ್ ಸಿನಿಮಾ. ಅಂಥ ಜನಪ್ರಿಯ ನಿರ್ದೇಶಕನ ಸಿನಿಮಾವನ್ನು ಬಹುತೇಕರು ನೋಡಿಯೇ ಇರುತ್ತೀರಿ. ಇನ್ನೂ ನೋಡಿಲ್ಲವಾದರೆ ನೋಡುವ ಮೊದಲು ಕೊಂಚ ಈ ಮೇಲೆ ಹೇಳಿದ ಇತಿಹಾಸದ ಹಿನ್ನೆಲೆಯನ್ನು ಓದಿಕೊಳ್ಳಿ. ಆಗ ನಿಜಕ್ಕೂ ಈ ಸಿನಿಮಾ ಒಳಕ್ಕಿಳಿಯುತ್ತದೆ.

ಏಕೆ ಇದನ್ನು ಹೇಳಿದೆನೆಂದರೆ ಸಿನಿಮಾದಲ್ಲಿ ಕಥೆಯನ್ನು ಹೇಳಿರುವ ರೀತಿಯೂ ಹಾಗೇ ಇದೆ. ಅದೊಂದು ದೃಶ್ಯದಲ್ಲಿ ಜರ್ಮನ್ನರು ಯಹೂದಿಗಳನ್ನು ಅವರ ಮನೆಗಳಿಂದ ಹೊರಗೆಳೆದು ನಿರಾಶ್ರಿತರನ್ನಾಗಿಸಿ ಬೇರೆ ಬೇರೆ ಕಾನ್ಸಂಟ್ರೇಶನ್ ಕ್ಯಾಂಪುಗಳಿಗೆ ಕರೆದುಕೊಂಡು ಹೋಗುವ ಸಂದರ್ಭ. ನಾಜಿ ಸೈನಿಕರು ಆ ಯಹೂದಿಗಳಿಗೆ ತಮ್ಮ ತಮ್ಮ ಸೂಟ್‍ಕೇಸ್‍ಗಳನ್ನು ತೆಗೆದುಕೊಂಡು ಹೋಗಬಾರದೆಂದು ಅವುಗಳ ಮೇಲೆ ತಮ್ಮ ತಮ್ಮ ಹೆಸರನ್ನು ಬರೆದು ಅಲ್ಲೇ ಇಟ್ಟು ಹೊರಡಬೇಕೆಂದು ಹೇಳುತ್ತಾರೆ. ಎಲ್ಲರೂ ಹೆಸರು ಬರೆದಿಟ್ಟು ರೈಲುಗಳಲ್ಲಿ ಹೊರಡುತ್ತಾರೆ. ಅದರ ಮುಂದಿನ ದೃಶ್ಯದಲ್ಲೇ ಆ ಸೂಟ್‍ಕೇಸ್‍ಗಳನ್ನು ತೆರೆದು ಅಲ್ಲಿ ಸುರಿಯಲಾಗುತ್ತದೆ. ಅಲ್ಲಿನ ಸಾಮಾನುಗಳನ್ನು ಬೇರೆ ಬೇರೆ ಮಾಡಲಾಗುತ್ತದೆ. ಹೆಸರು ಬರೆದಿಟ್ಟು ಹೊರಡಿ ಅಂತ ಅಂದಿದ್ದು "ನೀವು ಮತ್ತೆ ಇಲ್ಲಿಗೆ ಬರುತ್ತೀರ" ಅಂತ ನಂಬಿಸಲು! ಇದು ಹಾಗೆ ಬಂದು ಹೀಗೆ ಹೋಗುವ ಒಂದು ದೃಶ್ಯದಲ್ಲಿ ನಿರ್ದೇಶಕ ಥಟ್ಟನೆ ಹೇಳಿಬಿಡುತ್ತಾನೆ. ಹಿನ್ನೆಲೆ ಗೊತ್ತಿದ್ದರೆ ಮಾತ್ರ ನಮಗೆ ಇದು ಅರ್ಥವಾಗುತ್ತದೆ.

ಇನ್ನೊಂದು ದೃಶ್ಯದಲ್ಲಿ ಆ ಸಾಮಾನುಗಳಲ್ಲಿ ಬೆಲೆಬಾಳುವ ವಸ್ತುಗಳನ್ನು ಬೇರ್ಪಡಿಸಿ ಅವುಗಳ ಬೆಲೆಯನ್ನು ಅಳೆದು ಇಡುವ ದೃಶ್ಯ. ಆ ಕೆಲಸಕ್ಕಾಗಿಯೇ ಅನೇಕ ಜನರನ್ನು ನೇಮಿಸಲಾಗಿರುತ್ತದೆ. ಆಭರಣಗಳು, ಅಮೂಲ್ಯ ಹರಳುಗಳು, ಬೆಲೆಬಾಳುವ ಅಲಂಕಾರಿಕ ವಸ್ತುಗಳು ಹೀಗೆ ಎಲ್ಲವೂ ಅಲ್ಲಿ ಬಂದು ಬೀಳುತ್ತಿರುತ್ತವೆ. ಒಂದು ಗಂಟನ್ನು ಆ ಕೆಲಸಗಾರ ಬಿಚ್ಚಿ ಸುರಿಯುತ್ತಾನೆ. ಅದರಲ್ಲಿದ್ದುದನ್ನು ಕಂಡು ಆತ ಬೆಚ್ಚಿ ಬೀಳುತ್ತಾನೆ. ಅಲ್ಲಿದ್ದವೆಲ್ಲ ಚಿನ್ನದಿಂದ ಮಾಡಿಸಿಕೊಂಡ ಯಹೂದಿಗಳ ಹಲ್ಲುಗಳು. ಆತ ದಂಗಾಗಿ ನೋಡುತ್ತಿರುವಂತೆಯೇ ದೃಶ್ಯ ಮುಂದಕ್ಕೆ ಸಾಗುತ್ತದೆ. ಆದರೆ ಇಲ್ಲಿ ನಮಗೆ ಗೊತ್ತಿರಬೇಕಾದ ವಿಷಯವೆಂದರೆ ಯಹೂದಿಗಳನ್ನು ಒತ್ತೆಯಾಗಿರಿಸಿಕೊಂಡ ತಕ್ಷಣ ಅವರು ಜೀವಂತವಿರುವಾಗಲೇ ಯಾವುದೇ ಕರುಣೆ ತೋರದೆ ಅವರ ಚಿನ್ನದ ಹಲ್ಲುಗಳನ್ನು ಇಕ್ಕಳಗಳಿಂದ ಕಿತ್ತುಕೊಂಡಿರುತ್ತಾರೆ. ಅವುಗಳ ರಾಶಿಯೇ ಅಲ್ಲಿರುತ್ತದೆ! ಅವುಗಳನ್ನು ನೋಡುವಾಗ ನಮಗೆ ಯಹೂದಿಗಳು ಅನುಭವಿಸಿದ ಹಿಂಸೆ ಅರ್ಥವಾಗಬೇಕು.

ಮತ್ತೊಂದು ದೃಶ್ಯದಲ್ಲಿ ಕಾನ್ಸಂಟ್ರೇಶನ್ ಕ್ಯಾಂಪೊಂದರ ಬಳಿ ತನ್ನ ಕಾರು ನಿಲ್ಲಿಸಿ ಒಳಗೆ ಹೋಗಿ ಅಧಿಕಾರಿಗಳನ್ನು ಭೇಟಿ ಮಾಡಿ ಹೊರಬರುತ್ತಾನೆ. ಅವನ ಕಾರಿನ ಮೇಲೆ ಅದಾಗಲೇ ಕಣ್ಣಿಗೆ ಕಾಣುವಷ್ಟು ಬೂದಿ ಕುಳಿತಿರುತ್ತದೆ. ಆತ ಅದನ್ನು ಕೈಯಿಂದ ಮುಟ್ಟಿ ಅತ್ತ ತಿರುಗುತ್ತಾನೆ. ಅಲ್ಲಿ ಚಿಮಣಿಯಿಂದ ಅದ್ಯಾವ ಪರಿ ಬೂದಿ ಮಿಶ್ರಿತ ಹೊಗೆ ಬರುತ್ತಿರುತ್ತದೆಂದರೆ, ಹಿಮಪಾತದ ರೀತಿಯಲ್ಲಿ ಬೂದಿ ಆಕಾಶದಿಂದ ಸುತ್ತಮುತ್ತಲಿನ ಮನೆಗಳ ಮೇಲೆ ಸುರಿಯುತ್ತಿರುತ್ತದೆ. ಅಲ್ಲಿ ನಮಗೆ ಅರ್ಥವಾಗಬೇಕಾದ ವಿಷಯವೆಂದರೆ ಅಲ್ಲಿ ನಡೆಯುವ ಸಾಮೂಹಿಕ ಹತ್ಯೆಯ ಬಳಿಕ ರಾಶಿರಾಶಿ ಹೆಣಗಳನ್ನು ಸುಡಲು ದೊಡ್ದ ದೊಡ್ಡ ಚಿತಾಗಾರಗಳನ್ನು ಬಳಸಲಾಗುತ್ತದೆ. ಅದರಿಂದ ಹೊರಬರುವ ಬೂದಿಯೇ ಅಷ್ಟು ಹೆಚ್ಚೆಂದರೆ ಅಲ್ಲಿ ಇನ್ಯಾವ ಪರಿ ಜನರನ್ನು ಹತ್ಯೆಗೈಯಲಾಗುತ್ತಿತ್ತು ಅಂತ.

ಹೀಗೆ ಅನೇಕ ಸೂಕ್ಷ್ಮಗಳನ್ನು ಅರ್ಥ ಮಾಡಿಕೊಳ್ಳಬೇಕಾದ ಸಿನಿಮಾ "ಶಿಂಡ್ಲರ್ಸ್ ಲಿಸ್ಟ್". ಈ ಸಿನಿಮಾದ ನಿರ್ದೇಶಕ ಸ್ಟೀವನ್ ಸ್ಪೀಲ್ಬರ್ಗ್. ಸ್ವತಃ ಸ್ಟೀವನ್ ಸ್ಪೀಲ್‌ಬರ್ಗ್ ಯಹೂದಿ ಕುಟುಂಬದಲ್ಲಿ ಜನಿಸಿದವನು. ಆತನ ತಂದೆ ಹಾಲೋಕಾಸ್ಟ್'ನಲ್ಲಿ ಸುಮಾರು ಇಪ್ಪತ್ತು ಬಂಧುಗಳನ್ನು ಕಳೆದುಕೊಂಡಿದ್ದರು. ಜೊತೆಗೆ ಮಗನಿಗೆ ಚಿಕ್ಕಂದಿನಿಂದಲೂ ಹಾಲೋಕಾಸ್ಟ್'ನ ಭೀಕರತೆಯನ್ನು ಹೇಳುತ್ತಿದ್ದರು. ಹೀಗಾಗಿ ಈ ಸಿನಿಮಾ ತೆಗೆಯಲು ಸ್ಪೀಲ್‌ಬರ್ಗ್'ಗೆ ಪ್ರೇರೇಪಣೆಯಾಯಿತು. ಈ ಸಿನಿಮಾದ ಶೂಟಿಂಗ್ ಸಮಯದಲ್ಲಿ ಆ ಕರಾಳ ದಿನಗಳ ಬಗ್ಗೆ ನೆನೆದು ಸ್ಪೀಲ್‌ಬರ್ಗ್ ಮನಸ್ಸು ಜರ್ಜರಿತವಾಗಿತ್ತಂತೆ. ಈ ಸಿನಿಮಾಗಾಗಿ ಸ್ವತಃ ಸ್ಪೀಲ್‌ಬರ್ಗ್ ಪೋಲೆಂಡಿಗೆ ಭೇಟಿ ಕೊಟ್ಟು ಸಿನಿಮಾಗೆ ಬೇಕಾಗುವ ವಿಷಯಗಳ ಬಗ್ಗೆ ಸಂಶೋಧನೆ ನಡೆಸಿದ್ದರಂತೆ. ಮತ್ತು ಘೆಟ್ಟಾಗಳಿಂದ ಯಹೂದಿಗಳನ್ನು ಹೊರಗೋಡಿಸುವ ದೃಶ್ಯ ಮತ್ತು ಇನ್ನಿತರ ದೃಶ್ಯಗಳನ್ನು ಅವು ನಡೆದ ಜಾಗಗಳಲ್ಲೇ ಚಿತ್ರೀಕರಿಸಿಕೊಳ್ಳಲಾಯಿತು. ಕೆಲಸಕ್ಕೆ ಆಯ್ಕೆ ಮಾಡಲು ಯಹೂದಿ ವೃದ್ಧರನ್ನು, ಮಹಿಳೆಯರನ್ನು ಬೆತ್ತಲೆಯಾಗಿ ಓಡಿಸುವ ದೃಶ್ಯವನ್ನಂತೂ ತಾನು ನೋಡಲು ಸಾಧ್ಯವಿಲ್ಲ ಅಂತ ಆ ಚಿತ್ರೀಕರಣದಿಂದ ದೂರ ಉಳಿದರಂತೆ.

ಸುಮಾರು ೧೯೮೦ರಲ್ಲೇ ಈ ಕಥೆಯನ್ನು ಕೇಳಿದ್ದ ಸ್ಪೀಲ್‌ಬರ್ಗ್ ಇಷ್ಟಪಟ್ಟು ಈ ಕಥೆಯನ್ನು ಸಿನಿಮಾ ಮಾಡಲು ಸಮಯ ಬೇಕು. ಇನ್ನು ಹತ್ತು ವರ್ಷಗಳೊಳಗೆ ಮಾಡುತ್ತೇನೆ ಅಂತ ಸಮಯ ತೆಗೆದುಕೊಂಡು ಬಂದಿದ್ದರು. ಆದರೆ ಸಿನಿಮಾ ಹೇಳುವ ಗಂಭೀರ ವಿಷಯದಿಂದಾಗಿ ಈ ಸಿನಿಮಾ ಮಾಡುವ ವಿಷಯದಲ್ಲಿ ಹಿಂದೇಟು ಹಾಕುತ್ತಿದ್ದರು. ಆದರೆ ತೊಂಭತ್ತರ ದಶಕದಲ್ಲಿ ಅಂದಿನ ಇನ್ನೊಬ್ಬ ಜನಪ್ರಿಯ ನಿರ್ದೇಶಕ ಬಿಲ್ಲಿ ವೈಲ್ಡರ್ ಈ ಸಿನಿಮಾ ಕಥೆಯನ್ನು ಕೇಳಿ ಸಿನಿಮಾ ಮಾಡುವ ಇಂಗಿತ ವ್ಯಕ್ತಪಡಿಸಿದರು. ಆದರೆ ಆ ವಿಷಯ ತಿಳಿದ ಸ್ಪೀಲ್‌ಬರ್ಗ್ ಅವರಿಗಿಂತಲೂ ಮೊದಲೇ ಕಥೆಯ ಹಕ್ಕುಗಳನ್ನು ತೆಗೆದುಕೊಂಡು ಸಿನಿಮಾ ಮಾಡಲು ಶುರುಮಾಡಿಯೇ ಬಿಟ್ಟರು. ಶಿಂಡ್ಲರ್ಸ್ ಲಿಸ್ಟ್ ಶುರುವಾದದ್ದು ಹೀಗೆ!

ಈ ಸಿನಿಮಾದಲ್ಲಿ ನನಗೆ ಇಷ್ಟವಾಗಿದ್ದೆಂದರೆ ಆಸ್ಕರ್ ಶಿಂಡ್ಲರ್ ಎಲ್ಲಿಯೂ ತಾನು ಯಹೂದಿಗಳನ್ನು ಕಾಪಾಡುತ್ತಿದ್ದೇನೆ. ಅವರ ಜೀವವನ್ನು ಉಳಿಸಲು ಇಷ್ಟೆಲ್ಲ ರಿಸ್ಕ್ ತೆಗೆದುಕೊಳ್ಳುತ್ತಿದ್ದೇನೆ ಅಂತ ಹೇಳುವುದೇ ಇಲ್ಲ. ಮೇಲೆ ಆತ ಮಾಡುವುದೆಲ್ಲ ವಿಲಾಸಕ್ಕೆ ಅಂತ ಕಂಡರೂ ಅಲ್ಲೆಲ್ಲ ಅಧಿಕಾರಿಗಳನ್ನು ತನ್ನತ್ತ ಸೆಳೆಯುವುದೇ ಆಗಿರುತ್ತದೆ. ಆತನ ವಿಷಯಗಳನ್ನು ತಿಳಿದ ಯಹೂದಿ ಮಹಿಳೆಯೊಬ್ಬಳು ಆತನನ್ನು ಭೇಟಿ ಮಾಡಲು ಪ್ರಯತ್ನಿಸಿ "ತನ್ನ ತಂದೆ-ತಾಯಿಯರನ್ನು ಕೂಡ ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಸೇರಿಸಿಕೊಳ್ಳಿ. ಹಾಗಾದರೆ ಅವರ ಜೀವ ಉಳಿಯುತ್ತದೆ" ಅಂತ ಅಂಗಲಾಚಿದಾಗ ಅವಳನ್ನು ಬೈದು, ಹೆದರಿಸಿ ಕಳುಹಿಸುತ್ತಾನೆ. ಅಲ್ಲೂ ಆತ ತಾನು ಮಾಡುತ್ತಿರುವ ವಿಷಯದ ಬಗ್ಗೆ ಒಪ್ಪಿಕೊಳ್ಳುವುದೇ ಇಲ್ಲ. ಆದರೆ ಅದರ ಮರುದಿನ ಆ ಮಹಿಳೆಯ ತಂದೆ ತಾಯಿಯರನ್ನು ಕಂಡುಹಿಡಿದು ಈತನ ಫ್ಯಾಕ್ಟರಿಗೆ ಕರೆತರಲಾಗಿರುತ್ತದೆ. ಅಷ್ಟೆಲ್ಲ ಮಾಡಿದ ಮೇಲೂ ಕಡೆಯ ದೃಶ್ಯದಲ್ಲಿ ಆತ ತನ್ನ ಕೆಲಸದ ಬಗ್ಗೆ ಹೆಮ್ಮೆಪಡುವ ಬದಲು, ತಾನು "ಇದಕ್ಕಿಂತಲೂ ಇನ್ನೂ ಹೆಚ್ಚು ಮಾಡಬಹುದಿತ್ತು, ಇನ್ನಷ್ಟು ಅಮಾಯಕ ಯಹೂದಿಗಳ ಜೀವವನ್ನು ಉಳಿಸಬಹುದಿತ್ತು" ಅಂತ ಕಣ್ಣೀರಾಗುವಾಗ ಮನಸ್ಸು ಆರ್ದ್ರವಾಗುತ್ತದೆ. ಪ್ರತೀ ಕ್ಷಣದಲ್ಲೂ ಆತ ತನ್ನ ಗುಟ್ಟು ಬಿಟ್ಟುಕೊಡದಂತೆ ಆ ಜನರನ್ನು ಉಳಿಸಿಕೊಳ್ಳಲು ಹೋರಾಡುವ ವಿಷಯ ಮಾತ್ರ ಮನಸ್ಸಲ್ಲಿ ಅಚ್ಚಾಗುತ್ತದೆ.

ಸಿನಿಮಾ ಬಿಡುಗಡೆಯಾಗಿದ್ದು ೧೯೯೩ರಲ್ಲಿ. ಆದರೂ ಈ ಸಿನಿಮಾವನ್ನು ಕಪ್ಪು-ಬಿಳುಪಿನಲ್ಲೇ ಚಿತ್ರಿಸಲಾಗಿದೆ! ಎರಡನೇ ಮಹಾಯುದ್ಧದ ಕಾಲಘಟ್ಟವನ್ನು ತೋರಿಸುವ ಉದ್ದೇಶದಿಂದ ಹೀಗೆ ಮಾಡಲಾಗಿದೆ ಅನ್ನಿಸಿದರೂ ಅಮಾಯಕ ಜನರನ್ನು ಪ್ರಾಣಿಗಳಿಗಿಂತ ನಿಕೃಷ್ಟವಾಗಿ ಬಲಿಕೊಡುವ ಕಥೆಯನ್ನು ಬಣ್ಣದಲ್ಲಿ ತೋರಿಸಿ ವಿಜೃಂಭಿಸುವುದು ಬೇಡ ಅನ್ನುವುದು ಸ್ಪೀಲ್‌ಬರ್ರ್'ನ ಉದ್ದೇಶವಂತೆ. ಇಡೀ ಸಿನಿಮಾ ಕಪ್ಪು-ಬಿಳುಪಿನಲ್ಲಿದ್ದರೂ ಒಂದು ಪುಟ್ಟ ಹುಡುಗಿಯೊಂದು ತಬ್ಬಲಿಯಾಗಿ ಯಾರನ್ನೋ ಹುಡುಕಾಡುವ, ಪುಟ್ಟ ಅಲ್ಮೆರಾದಲ್ಲಿ ಬಚ್ಚಿಟ್ಟುಕೊಳ್ಳುವ, ಕಡೆಗೆ ಜರ್ಮನ ಸೈನಿಕರು ಎಳೆದುಕೊಂಡು ಹೋಗುವ ತಳ್ಳುಗಾಡಿಯಲ್ಲಿ ಶವವಾಗಿ ಕಾಣುವ ದೃಶ್ಯವನ್ನು ಮಾತ್ರ ಬಣ್ಣದಲ್ಲಿ ಉಳಿಸಿಕೊಳ್ಳಲಾಗಿದೆ.

ಈ ಸಿನಿಮಾಗೆ ಹಿನ್ನೆಲೆ ಸಂಗೀತ ನೀಡಿದವರು ಜಾನ್ ವಿಲ್ಲಿಯಮ್ಸ್. ಈ ಸಿನಿಮಾಗಾಗಿ ಜಾನ್ ವಿಲ್ಲಿಯಮ್ಸ್ ಅನ್ನು ಭೇಟಿಯಾದಾಗ ಈ ಸಿನಿಮಾದ ಬಗ್ಗೆ ತಿಳಿದುಕೊಂಡ ಮೇಲೆ ಆಲೋಚಿಸಿ ಜಾನ್ ಹೇಳಿದರಂತೆ " ಈ ಸಿನಿಮಾಗೆ ನಾನು ಸಂಗೀತ ಕೊಡುವಷ್ಟು ಶಕ್ತನಲ್ಲ. ಬಹುಶಃ ನನಗಿಂತ ಉತ್ತಮ ಸಂಗೀತ ನಿರ್ದೇಶಕರನ್ನು ನೋಡಿಕೊಂಡರೆ ಒಳ್ಳೆಯದು" ಅಂತ. ಅದಕ್ಕೆ ಸ್ಪೀಲ್‍ಬರ್ಗ್ ನಕ್ಕು ಹೇಳಿದರಂತೆ " ಹೌದು. ಈ ಸಿನಿಮಾಗೆ ನಿನಗಿಂತ ಒಳ್ಳೆಯ ಸಂಗೀತ ಕೊಡುವ ಸಂಗೀತ ನಿರ್ದೇಶಕರನ್ನು ನಾನು ಬಲ್ಲೆ.... ಆದರೆ ಅವರ್ಯಾರೂ ಈಗ ಜೀವಂತವಿಲ್ಲ" ಅಂತ! ಕಡೆಗೆ ಜಾನ್ ವಿಲ್ಲಿಯಮ್ಸ್ ಸಂಗೀತ ನಿರ್ದೇಶನ ಮಾಡಲು ಒಪ್ಪಿಕೊಂಡರು. ಕಾಕತಾಳೀಯವೆಂಬಂತೆ ಜಾನ್ ವಿಲ್ಲಿಯಮ್ಸ್'ಗೆ ಈ ಸಿನಿಮಾದಲ್ಲಿನ ಸಂಗೀತಕ್ಕಾಗಿ ಆಸ್ಕರ್ ಪ್ರಶಸ್ತಿ ದೊರೆಯಿತು!

ಈ ಸಿನಿಮಾದಲ್ಲಿ ಬರುವ ಕೆಂಪು ಕೋಟಿನ ಹುಡುಗಿಯ ಪಾತ್ರ ಮಾಡಿದಾಕೆ ಒಲಿವಿಯಾ ಡಬ್ರೋವ್ಸ್ಕಾ. ಆ ಸಿನಿಮಾದಲ್ಲಿ ನಟಿಸುವಾಗ ಆಕೆಗೆ ಕೇವಲ ಮೂರು ವರ್ಷ ವಯಸ್ಸು. ಸ್ಪೀಲ್‍ಬರ್ಗ್ ಆಗಲೇ ತಾಕೀತು ಮಾಡಿದ್ದರು. "ಈ ಸಿನಿಮಾವನ್ನು ನೀನು ಕೊಂಚ ಪ್ರಬುದ್ಧತೆ ಬಂದ ಮೇಲೆ ನೋಡಬೇಕು. ಹಾಗಾಗಿ ನಿನಗೆ ೧೮ ವರ್ಷ ವಯಸ್ಸಾಗುವವರೆಗೆ ಇದನ್ನು ನೋಡಬೇಡ" ಅಂತ. ಅದಕ್ಕೆ ಆಕೆ ಒಪ್ಪಿಕೊಂಡಳು ಕೂಡ. ಆದರೆ ಕೊಟ್ಟ ಮಾತನ್ನು ಮುರಿದು ತನ್ನ ಹನ್ನೊಂದನೇ ವಯಸ್ಸಿನಲ್ಲೇ ನೋಡಿ ಭಯಪಟ್ಟಿದ್ದಳು. ಮತ್ತೆ ಹದಿನೆಂಟು ವರ್ಷಗಳಾದ ಮೇಲೆ ನೋಡಿದಾಗ ಆಕೆಗೆ ತಾನು ಮಾಡಿದ ಪಾತ್ರದ ಬಗ್ಗೆ ಹೆಮ್ಮೆಯಾಯಿತು.

ಈ ಸಿನಿಮಾ ಬರುವ ಹೊತ್ತಿಗಾಗಲೇ ಸ್ಪೀಲ್‍ಬರ್ಗ್ ಜನಪ್ರಿಯ ನಿರ್ದೇಶಕರಾಗಿದ್ದರು. ಆದರೆ ಈ ಸಿನಿಮಾಗೆ ಸ್ಪೀಲ್‍ಬರ್ಗ್ ನಯಾಪೈಸೆ ಸಂಭಾವನೆ ಪಡೆಯಲಿಲ್ಲ. ರಕ್ತಚರಿತ್ರೆಗೆ ಸಾಕ್ಷಿಯಾದ ಈ ಸಿನಿಮಾವನ್ನು ಲಾಭದ ಉದ್ದೇಶದಿಂದ ಮಾಡಬಾರದು. ಹಾಗೆ ಮಾಡಿದರೆ ಬರುವ ಹಣ ನೆತ್ತರಿನ ಹಣ ಅಂತ ಕರೆದುಕೊಳ್ಳುತ್ತಾರೆ. ಬದಲಿಗೆ ಈ ಸಿನಿಮಾದಿಂದ ಬರುವ ಹಣವನ್ನು ಹಾಲೋಕಾಸ್ಟ್'ನಲ್ಲಿ ಮಡಿದವರ ನೆನಪಿನ ಸ್ಮಾರಕವನ್ನು ಆರಂಭಿಸಲು ಬಳಸುತ್ತಾರೆ.

ಕರಾಳ ಇತಿಹಾಸಕ್ಕೆ ಸಾಕ್ಷಿಯಾದ ಹಾಗೂ ಸಾಂಸ್ಕೃತಿಕವಾಗಿ ಮತ್ತು ಕಲಾತ್ಮಕತೆಯಿಂದ ಶ್ರೀಮಂತಗೊಂಡ ಈ ಸಿನಿಮಾ ಇವತ್ತಿಗೂ ಅಮೇರಿಕಾದ ಅತ್ಯುನ್ನತ ಸಿನಿಮಾಗಳಲ್ಲಿ ಒಂದಾಗಿದೆ. ಆಸ್ಕರ್ ಪ್ರಶಸ್ತಿಗೆ ಒಟ್ಟು ಹನ್ನೆರಡು ವಿಭಾಗಗಳಲ್ಲಿ ನಾಮಿನೇಟ್ ಆಗಿ ಅದರಲ್ಲಿ ಏಳು ಪ್ರಶಸ್ತಿಯನ್ನು ಗೆದ್ದುಕೊಂಡ ಸಿನಿಮಾ ಇದು! ಹತ್ತಿರತ್ತಿರ ಮೂರುವರೆ ಘಂಟೆ ಇರುವ ಈ ಸಿನಿಮಾ ನೋಡುವಾಗ ನಮ್ಮನ್ನೇ ನಾವು ಮರೆತುಬಿಡುತ್ತೇವೆ. ನೀವಿನ್ನೂ ನೋಡಿರದಿದ್ದರೆ ಎಂದಾದರೊಮ್ಮೆ ನೋಡಲೇಬೇಕಾದ ಸಿನಿಮಾ "ಶಿಂಡ್ಲರ್ಸ್ ಲಿಸ್ಟ್" ! ನಿಮ್ಮ ಪಟ್ಟಿಗೆ ಮರೆಯದೆ ಸೇರಿಸಿಕೊಳ್ಳಿ.

-Santhosh Kumar LM
12-Sep-2021

Saturday, September 11, 2021

ಮೇರ್ಕು ತೊಡರ್ಚಿ ಮಲೈ




ಮೇರ್ಕು ತೊಡರ್ಚಿ ಮಲೈ
( spoiler alert: ಸಿನಿಮಾ ಈಗಾಗಲೇ ನೋಡಿದವರಿಗಾಗಿ.....ಮತ್ತು ನೋಡುವ ಯಾವುದೇ ಪ್ಲಾನ್ ಇಲ್ಲದವರಿಗಾಗಿ)

ಕೆಲವು ಸಿನಿಮಾಗಳು ಹಾಗೆಯೇ. ಯಾವುದೋ ಒಂದು ವಿಷಯದ ಟ್ರ್ಯಾಕಿನಲ್ಲಿ ಸಾಗುತ್ತಿರುತ್ತವೆ. ಇನ್ನೇನು ಸಿನಿಮಾ ಮುಗಿಯುವ ಸಮಯ ಬಂತು ಅಂದಾಗ ಥೇಟ್ ಸಾಂಬಾರಿಗೆ ಹಾಕುವ ಒಗ್ಗರಣೆಯಂತೆ "ಅದೊಂದು" ವಿಶೇಷವಾದ ದೃಶ್ಯದೊಂದಿಗೆ ಮುಗಿದುಬಿಡುತ್ತವೆ. "ಹಾಳಾದ ಸಿನಿಮಾ" ಅಂತ ವೀಕ್ಷಕನೂ ಬೈದುಕೊಳ್ಳುತ್ತಾನೆ. ಏಕೆಂದರೆ ಸಿನಿಮಾ ಮುಗಿದು ಕೆಲ ದಿನಗಳಾದರೂ ಆ ಒಂದು ದೃಶ್ಯ ಮನಸ್ಸಿನೊಳಗೆ ಗಿರಕಿ ಹೊಡೆಯುತ್ತಲೇ ಇರುತ್ತದೆ. ಆ ಒಂದು ದೃಶ್ಯ ಸಿನಿಮಾದ ಕಥೆಯನ್ನು ಬರೆಯುವಾಗಲೇ ಬರೆದದ್ದೋ ಅಥವಾ ಇನ್ಯಾವಾಗಲೋ ಸಿನಿಮಾದ ಅಂತ್ಯ ಕೊಂಚ ಜಾಸ್ತಿ ಪರಿಣಾಮ ಬೀರಬೇಕೆಂದು ನಿರ್ದೇಶಕ ಮಾಡುವುದೋ ಗೊತ್ತಾಗುವುದೇ ಇಲ್ಲ.

ಮೇರ್ಕು ತೊಡರ್ಚಿ ಮಲೈ..... ಈ ಸಿನಿಮಾದ ಕಥೆಯ ಎಳೆಯೇ ಜಮೀನಿಲ್ಲದ ಶ್ರಮಿಕನೊಬ್ಬ ಜಮೀನನ್ನು ಖರೀದಿಸಲು ಹಂಬಲಿಸಿ ಅದಕ್ಕಾಗಿ ಇನ್ನಿಲ್ಲದ ಪ್ರಯತ್ನ ಮಾಡುವುದು.

ಅದು ಪಶ್ಚಿಮ ಘಟ್ಟಗಳು ಮತ್ತು ಬಯಲು ಸೀಮೆ ಸೇರುವ ಜಾಗ. ಘಟ್ಟಗಳನ್ನು ಹತ್ತಲು ಸುಲಭದ ರಸ್ತೆಗಳು ಇಲ್ಲದ ಕಾರಣ, ಮೇಲಿನ ಎಸ್ಟೇಟಿಗೆ ಮತ್ತು ಕೆಳಗಿನ ಊರುಗಳಿಗಿರುವ ಸಂಪರ್ಕವೆಂದರೆ ಕಾಲ್ನಡಿಗೆಯಲ್ಲೇ ಹತ್ತಿಳಿದು ಸಾಮಾನುಗಳನ್ನು ತಲುಪಿಸುವ ಆ ಊರಿನ ಶ್ರಮಿಕ ಯುವಕರು. ರಂಗಸ್ವಾಮಿ ಕೂಡ ಅವರಲ್ಲೊಬ್ಬ. ಪ್ರತಿದಿನ ಬೆಟ್ಟ ಹತ್ತಿ ಅತ್ತಲಿಂದ ಏಲಕ್ಕಿಯ ಮೂಟೆಗಳನ್ನು ಹೊತ್ತು ಇಳಿದು ಅದರಿಂದ ಬಂದ ಕೂಲಿಯಿಂದಲೇ ಜೀವನ ಸಾಗಿಸುವುದು ರಂಗಸ್ವಾಮಿ ಸೇರಿದಂತೆ ಅಲ್ಲಿನ ಬಹುತೇಕರ ಜೀವನೋಪಾಯ.

ರಂಗಸ್ವಾಮಿಗೆ ಪುಟ್ಟ ಜಮೀನನ್ನು ಕೊಂಡು ಕೃಷಿಕನಾಗಬೇಕೆನ್ನುವ ಮಹದಾಸೆ. ಹಾಗಾಗಿ ಪುಟ್ಟ ಪುಟ್ಟ ಉಳಿತಾಯ ಮಾಡುತ್ತಿರುತ್ತಾನೆ. ಕಷ್ಟಪಟ್ಟದ್ದಕ್ಕೆ ಉತ್ತರವೆಂಬಂತೆ, ಜೊತೆಗೆ ಇನ್ನೊಬ್ಬ ಸಹೃದಯರ ಸಹಾಯದಿಂದ ಆ ಪುಟ್ಟ ಜಮೀನಿಗೆ ಒಡೆಯನಾಗುತ್ತಾನೆ. ಅವನ ಕುಟುಂಬದಲ್ಲಿ ಅದೇ ಮೊದಲ ಬಾರಿಗೆ ಸಂತೋಷ ಮನೆಮಾಡುತ್ತದೆ. ಜಮೀನಿನಲ್ಲಿ ಕೃಷಿ ಮಾಡಿ ಬಂದ ಹಣವನ್ನು ಸ್ವಲ್ಪ ಸ್ವಲ್ಪ ಕೊಟ್ಟು ಸಾಲ ತೀರಿಸುತ್ತಾನೆ. ಎಲ್ಲವೂ ಚೆನ್ನಾಗಿದೆ ಅಂದುಕೊಂಡಿರುವಾಗ ಅದೊಂದು ದಿನ ಮಳೆ ಬಂದು ಬೆಳೆಯನ್ನೆಲ್ಲ ಕೊಚ್ಚಿಕೊಂಡು ಹೋಗುತ್ತದೆ. ಅದೇ ಸಮಯದಲ್ಲಿ ಅಲ್ಲಿ ನಡೆಯುವ ರಾಜಕೀಯ ವಿದ್ಯಮಾನಗಳಿಂದ ಜೈಲು ಸೇರುತ್ತಾನೆ. ಜೈಲುವಾಸ ಮುಗಿಸಿ ಮತ್ತೆ ಮನೆ ಸೇರುವ ವೇಳೆಗೆ ಐದಾರು ವರ್ಷಗಳಿಂದ ಕೃಷಿಗಾಗಿ ತೆಗೆದುಕೊಂಡಿದ್ದ ಬೀಜ, ಗೊಬ್ಬರ, ಕೀಟನಾಶಕ ಇತ್ಯಾದಿಗಳ ಸಾಲ ಕೈ ಮೀರಿ ಹೋಗಿರುತ್ತದೆ.

ಅದೊಂದು ದಿನ ಸಾಲ ಕೊಟ್ಟಿದ್ದ ಆ ಅಂಗಡಿಯ ಮಾಲಿಕ ಇವನನ್ನು ಬರ ಹೇಳುತ್ತಾನೆ. ಲೆಕ್ಕ ನೋಡಿದರೆ ಈತನ ಸಾಲ ಜಮೀನಿನ ಬೆಲೆಗಿಂತ ಜಾಸ್ತಿಯಾಗಿರುತ್ತದೆ. ಹಾಗಾಗಿ ಈತನ ಜಮೀನಿನ ಪತ್ರಗಳಿಗೆ ಸಹಿ ಮಾಡಿಸಿಕೊಂಡು ವಾಪಸ್ಸು ಕಳುಹಿಸುತ್ತಾನೆ. ಆದರೆ ಕಳುಹಿಸುವ ಮುನ್ನ ಈತನ ಸ್ಥಿತಿಗೆ ಮರುಕಪಟ್ಟು ಆತನಿಗೊಂದು ಕೆಲಸ ಕೊಡಿಸುತ್ತಾನೆ.

-----

ಸಿನಿಮಾ ಮುಗಿಯುತ್ತದಾ?

ಇಲ್ಲ..... ರಂಗಸ್ವಾಮಿ ಮನೆಗೆ ಬರುತ್ತಾನೆ. ಮರುದಿನ ಬೆಳಿಗ್ಗೆ ಆ ಹೊಸ ಕೆಲಸದ ಮೊದಲ ದಿನ. ಇಲ್ಲಿಯೂ ನಿರ್ದೇಶಕ ಏನೂ ಗುಟ್ಟು ಬಿಟ್ಟುಕೊಡುವುದಿಲ್ಲ. ಹೊಸ ಕೆಲಸಕ್ಕೆಂದು ಕೊಟ್ಟ ನೀಲಿ ಬಣ್ಣದ ಯೂನಿಫಾರಂ ಅನ್ನು ತೊಟ್ಟು ಮನೆಯಿಂದ ಹೊರಬರುತ್ತಾನೆ. ಅಲ್ಲಿಗೆ ಆಗಲೇ ತುಂಬಿ ಕಿಕ್ಕಿರಿದಿದ್ದ ಟಾಟಾ ಸುಮೋ ಬರುತ್ತದೆ. ಇದ್ದ ಸ್ವಲ್ಪ ಜಾಗದಲ್ಲೇ ಈತನೂ ಅನುಸರಿಸಿಕೊಂಡು ಕೂರುತ್ತಾನೆ. ಆ ವಾಹನ ಆ ಮಾಲಿಕನಿಗೆ ಸೇರಿದ್ದು. ಟಾಟಾ ಸುಮೋ ಇವನನ್ನು ಅದೊಂದು ಜಾಗದಲ್ಲಿ ಇಳಿಸಿ ಹೊರಟುಹೋಗುತ್ತದೆ.

ಈತ ನಡೆಯುತ್ತ ಹೋಗಿ ಆ ಜಾಗದ ಮಧ್ಯದಲ್ಲಿ ಹಾಕಿದ್ದ ಖುರ್ಚಿಯಲ್ಲಿ ಕುಳಿತುಕೊಳ್ಳುತ್ತಾನೆ. ಇನ್ನು ಮುಂದೆ ಆ ಜಾಗವನ್ನು ಕಾಯುವುದೇ ಕೆಲಸ. ನಿಧಾನಕ್ಕೆ ಡ್ರೋನ್ ವ್ಯೂ ಮೇಲೆ-ಮೇಲೆ ಸಾಗುತ್ತದೆ. ಆಗ ನಮಗೆ ಗೊತ್ತಾಗುವುದು ಆ ಜಾಗ ಅವನ ಜಮೀನೇ!! ಆದರೆ ಒಂದೊಮ್ಮೆ ಹಸಿರಿನಿಂದ ಕಂಗೊಳಿಸುತ್ತಿದ್ದ ಆ ಜಾಗ ಈಗ ಬರಿಯ ಮೈದಾನವಾಗಿರುತ್ತದೆ. ಇನ್ನೂ ಮೇಲೆ ಮೇಲೆ ಹೋದಂತೆ ಬರಿ ಇವನ ಜಾಗವಷ್ಟೇ ಅಲ್ಲ. ಅಕ್ಕ ಪಕ್ಕದ ನೂರಾರು ಎಕರೆ ಜಮೀನುಗಳೂ ಬರೀ ಮೈದಾನವಾಗಿರುತ್ತವೆ. ಅಲ್ಲಿ ಯಾವುದೇ ಬೆಳೆ ಬೆಳೆದಿರುವುದಿಲ್ಲ ಅಂತ ಗೊತ್ತಾಗುತ್ತದೆ. ಏಕೆಂದರೆ ಕೊಂಡವನು ಕೃಷಿಕನಲ್ಲ!

ಇನ್ನೂ ಮೇಲೆ ಮೇಲೆ ಹೋದಂತೆ ಇವನ ಜಮೀನು ಸೇರಿದಂತೆ ಆ ಎಲ್ಲ ಜಮೀನುಗಳಲ್ಲಿ ವಿಂಡ್‍ಮಿಲ್ ತಿರುಗುತ್ತಿರುವುದು ಕಾಣಿಸುತ್ತದೆ. ಹಿಂದೆ ಇದೇ ಜಾಗದಲ್ಲಿ ಈತ ನಡೆದು ಬೆಟ್ಟ ಹತ್ತುವಾಗ ಅಲ್ಲಿದ್ದ ಕಾಡು, ಹಸಿರೆಲ್ಲ ನಿರ್ನಾಮವಾಗಿ ಇಂದು ಅಭಿವೃದ್ಧಿಯ ಹೆಸರಲ್ಲಿ ಬರಿದಾಗಿರುತ್ತವೆ. ಜೀವನವೆಲ್ಲ ತುಂಡು ಜಮೀನು ಹೊಂದಬೇಕು, ಹಿಡುವಳಿದಾರನಾಗಬೇಕು, ಕೃಷಿ ಮಾಡಬೇಕು, ನಾಲ್ಕು ಕಾಸು ಸಂಪಾದಿಸಬೇಕು ಎಂದು ಬೆವರ ಬಸಿದಿದ್ದ ರಂಗಸ್ವಾಮಿ.... ಇಂದು ಹಸಿರೇ ಕಾಣದ ತನ್ನದೇ ಜಮೀನಿನಲ್ಲಿ ಸೆಕ್ಯುರಿಟಿ ಕೆಲಸ ಮಾಡುವ ಆ ದೃಶ್ಯ ಪ್ರೇಕ್ಷಕನ ಕರುಳ ಹಿಂಡುತ್ತದೆ.

ಇಲ್ಲಿ ಇಷ್ಟೆಲ್ಲ ವಿವರಿಸಿದೆನಲ್ಲ. ಆದರೆ ನಿರ್ದೇಶಕ ಇಷ್ಟೆಲ್ಲವನ್ನೂ ಅದೊಂದು ಡ್ರೋನ್ ಶಾಟ್'ನಲ್ಲಿ ಹೇಳಿಬಿಡುತ್ತಾನೆ. ಅಲ್ಲಿ ರಂಗಸ್ವಾಮಿ ಅಳುವುದಿಲ್ಲ, ಸಾಲು ಸಾಲು ಡೈಲಾಗು ಹೊಡೆಯುವುದಿಲ್ಲ...ಆದರೆ ಅಸಹಾಯಕನಾಗಿ ಕೂರುವ ಆತನ ಸ್ಥಿತಿಯೇ ಎಲ್ಲವನ್ನೂ ಹೇಳಿಬಿಡುತ್ತದೆ.

ದೃಶ್ಯಕಲೆ ನಿಜಕ್ಕೂ ಪರಿಣಾಮಕಾರಿ. ಆದರೆ ಅದನ್ನು ನಿರ್ದೇಶಕ ತನ್ನ ಕಥೆ ಹೇಳಲು ಹೇಗೆ ಬಳಸಿಕೊಳ್ಳಬಲ್ಲಅನ್ನುವುದರ ಮೇಲೆ ಎಲ್ಲವು ನಿರ್ಧರಿತವಾಗುತ್ತದೆ.

ನಿರ್ದೇಶಕ: ಲೆನಿನ್ ಭಾರತಿ
ಸಿನಿಮಾ: ಮೇರ್ಕು ತೊಡರ್ಚಿ ಮಲೈ(2016)

-Santhosh Kumar LM
11-Sep-2021

Sunday, July 18, 2021

Don't F**K with Cats: Hunting An Internet Killer (Netflix Documentary Series)

 

Don't F**K with Cats: Hunting An Internet Killer (Netflix Documentary Series)

ಮೂರ್ನಾಲ್ಕು ವರ್ಷಗಳ ಹಿಂದೆ ಇಂಟರ್ನೆಟ್ಟಿನಲ್ಲಿ ವೀಡಿಯೋ ಒಂದು ವೈರಲ್ ಆಗಿತ್ತು, ನೆನಪಿದೆಯೇ? ಮಗನೊಬ್ಬ ಹೆತ್ತಮ್ಮನಿಗೆ ಪೊರಕೆಯಿಂದ ಥಳಿಸುತ್ತಿದ್ದ. ಆತನ ಸಹೋದರಿ ಅವನಿಗೆ ಗೊತ್ತಿಲ್ಲದಂತೆ ಅದನ್ನು ರೆಕಾರ್ಡ್ ಮಾಡಿಕೊಂಡಿದ್ದಳು. ಕೇವಲ ಸಿಗರೇಟು ಸೇದುವುದಕ್ಕೆ ಮತ್ತು ಇನ್ನಿತರ ವಿಷಯಗಳ ಬಗ್ಗೆ ಆತನಿಗೆ ಬುದ್ಧಿವಾದ ಹೇಳಿದ್ದಕ್ಕೆ ಆತ ಕೋಪಗೊಂಡು ಅಮ್ಮನಿಗೆ ಬೈಯುತ್ತ ಥಳಿಸುತ್ತಿದ್ದ.

ಆ ವೀಡಿಯೋ ನೋಡಿ ಬೈದುಕೊಂಡವರೆಷ್ಟೋ ಜನ? ಅದನ್ನು ನೋಡಿದಾಗ ನನಗೆ ಅದೆಷ್ಟು ಕೋಪ ಬಂದಿತ್ತೆಂದರೆ ಆತ ಎದುರಿಗೆ ಸಿಕ್ಕಿದ್ದರೆ ಅದೇನು ಮಾಡುತ್ತಿದ್ದೆನೋ? ಸೋಷಿಯಲ್ ಮೀಡಿಯಾಗಳಲ್ಲಿ ಈ ಬಗೆಯ ವೀಡಿಯೋಗಳು ಬಂದಾಗ ನಮ್ಮ ಸಹನೆಯ ಕಟ್ಟೆಯೊಡೆಯುವುದು ಸಾಮಾನ್ಯ. ನಮ್ಮ ಮನಸ್ಸಿನ ಮೇಲೆ ಅವುಗಳು ಬೀರುವ ಪರಿಣಾಮ ಬೇರೆ ಬೇರೆ ರೀತಿಯದ್ದಾಗಿರುತ್ತದೆ.

2010ರ ಆಸುಪಾಸಿನಲ್ಲಿ ಇಂಟರ್ನೆಟ್ಟಿನಲ್ಲಿ ಫೇಕ್ ಪ್ರೊಫೈಲಿನ ಅಕೌಂಟಿನಲ್ಲಿ ವೀಡಿಯೋವೊಂದು ಕಾಣಿಸಿಕೊಳ್ಳುತ್ತದೆ. ಅಪರಿಚಿತ ವ್ಯಕ್ತಿಯೊಬ್ಬ ಎರಡು ಪುಟ್ಟ ಬೆಕ್ಕಿನ ಮರಿಗಳನ್ನು ವ್ಯಾಕ್ಯೂಮ್ ಕವರೊಂದಕ್ಕೆ ಹಾಕಿ ಉಸಿರುಗಟ್ಟಿ ಸಾಯಿಸುತ್ತಾನೆ. ಇಂಥ ಕ್ರೂರ ಮನಸ್ಥಿತಿಯ ದೃಶ್ಯವೊಂದು ಬಂದ ತಕ್ಷಣ ವೈರಲ್ ಆಗುತ್ತದೆ. ನೋಡಿದವರ ರಕ್ತ ಕುದಿಯುತ್ತದೆ. ಪ್ರಾಣಿಪ್ರಿಯರು ಇಂಥ ಕ್ರೂರಿಗೆ ಮರಣದಂಡನೆ ಸಿಗಬೇಕು ಅಂತ ಶಾಪ ಹಾಕುತ್ತಾರೆ. ಆ ಪುಟ್ಟ ಬೆಕ್ಕಿನ ಮರಿಗಳನ್ನು ನೋಡಿದರೆ ಕೈಗಳಲ್ಲಿ ಹಿಡಿದು ಮೈ ಸವರಿ ಮುತ್ತು ಕೊಡಬೇಕು ಅನ್ನುವಷ್ಟರ ಮಟ್ಟಿಗೆ ಮುದ್ದಾಗಿರುತ್ತವೆ. ಆದರೆ ಅಂಥ ಮೂಕ ಪ್ರಾಣಿಗಳನ್ನು ಉಸಿರುಗಟ್ಟಿಸಿ ಕೊಂದು ಅದರಿಂದ ಖುಶಿಪಡುವ ವಿಕೃತ ಮನಸ್ಥಿತಿಯವರು ನಮ್ಮ ಮಧ್ಯದಲ್ಲಿ ಇದ್ದಾರೆಯೇ ಅನ್ನುವುದೇ ನೋಡಿದವರಿಗೆ ನಂಬಲಸಾಧ್ಯವಾಗಿರುತ್ತದೆ.

ಎಲ್ಲರೂ ಮನಸ್ಸಿನಲ್ಲಿಯೇ ಬೈದು, ಶಾಪ ಹಾಕಿ ಸುಮ್ಮನಾದರೆ ಅಷ್ಟು ಹೊತ್ತಿಗಾಗಲೇ ಇಂಟರ್ನೆಟ್ಟನ್ನು ಅರೆದು ಕುಡಿದ ಕೆಲವು ಇಂಟರ್ನೆಟ್ ಜೀಕ್‍ಗಳು ಇನ್ನೊಂದು ಹೆಜ್ಜೆ ಮುಂದಿಡುತ್ತಾರೆ. ಆ ವಿಕೃತ ಮನುಷ್ಯನನ್ನು ಹಿಡಿದು ಬುದ್ಧಿ ಕಲಿಸಲೇಬೇಕೆಂದು ಮನಸ್ಸು ಮಾಡುತ್ತಾರೆ. ಈ ವೀಡಿಯೋ ನೋಡಿ ತಾಳ್ಮೆಗೆಟ್ಟ ನಂಬಿಕಸ್ಥ ಜನರೆಲ್ಲ ಫೇಸ್ಬುಕ್ಕಿನಲ್ಲಿ ಒಂದು ಗ್ರೂಪ್ ಮಾಡಿಕೊಂಡು ತಮಗೆ ತಿಳಿದ ಮಟ್ಟಿಗೆ ಆ ಕ್ರೂರಿಯನ್ನು ಹುಡುಕಲು ಶುರುಮಾಡುತ್ತಾರೆ. ಆದರೆ ಅದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ವೀಡಿಯೋದಲ್ಲಿ ಅಸ್ಪಷ್ಟವಾಗಿ ಕಾಣುತ್ತಿದ್ದ ಆತನ ಮುಖ ಬಿಟ್ಟರೆ, ಆತ ಎಲ್ಲಿಯವನು? ಅವನ ಹೆಸರೇನು? ಎಲ್ಲಿ ಆ ವೀಡಿಯೋ ತೆಗೆದದ್ದು? ಅದು ಇತ್ತೀಚಿನದಾ, ಹಳೆಯ ವೀಡಿಯೋನಾ? ಹೀಗೆ ಅನೇಕ ಪ್ರಶ್ನೆಗಳಿಗೆ ಉತ್ತರವಿರಲಿಲ್ಲ. ಪೊಲೀಸರಿಗೆ ದೂರು ಕೊಡಲು ಅವನ ವಿವರಗಳಿಲ್ಲ. ಹಾಗಾಗಿ ಇವರೇ ಸಾಧ್ಯವಾದಷ್ಟು ವಿವರ ಕಲೆ ಹಾಕಬೇಕೆಂದು ಪ್ರಯತ್ನಿಸುತ್ತಾರೆ.

ಅಷ್ಟು ಹೊತ್ತಿಗಾಗಲೇ ಮತ್ತೊಂದು ವೀಡಿಯೋ ಬಿಡುಗಡೆಯಾಗುತ್ತದೆ.....ಆ ವೀಡಿಯೋದಲ್ಲಿ ಸಹ ಒಂದು ಬೆಕ್ಕಿನಮರಿಯನ್ನು.........
------------------

ಕಥೆ ಹೀಗೆ ಸಾಗುತ್ತದೆ. ಬಿಡುಗಡೆಯಾಗುವ ವೀಡಿಯೋದಲ್ಲಿ ಸಿಗುವ ಬೇರೆಲ್ಲರೂ ಇಗ್ನೋರ್ ಮಾಡಬಹುದಾದ ಪುಟ್ಟ ವಿವರಗಳನ್ನೂ ಸಹ ಇವರು ದಾಖಲಿಸಿಕೊಳ್ಳುತ್ತ ಆತನ ಬೆನ್ನು ಹತ್ತುತ್ತಾರೆ. ಗಮನಿಸಿ. ಇಲ್ಲಿ ಹುಡುಕಾಟ ಅಪರಾಧಿ-ಪೋಲಿಸ್ ಮಧ್ಯದ್ದಲ್ಲ. ಅಪರಾಧಿ-ಜನಸಾಮಾನ್ಯರ ಮಧ್ಯದ್ದು. ಅಪರಾಧಿ ಇವರಂದುಕೊಂಡಷ್ಟೇ ಹಿಂಸಾತ್ಮಕ ಮನಸ್ಥಿತಿಯವನಲ್ಲ, ಅದಕ್ಕಿಂತಲೂ ಜಾಸ್ತಿ.

ಇವರು ಇವರಿಗೆ ತಿಳಿದ ಇಂಟರ್ನೆಟ್ಟಿನ ದಾರಿಗಳ ಮೂಲಕ ಅವನನ್ನು ಹುಡುಕುತ್ತಿದ್ದರೆ, ಆತ ಅವನಿಗೆ ತಿಳಿದ ರೀತಿಯಲ್ಲಿ ಇವರನ್ನು ದಾರಿ ತಪ್ಪಿಸುತ್ತಿರುತ್ತಾನೆ. ಅದು ಏನಾಗುತ್ತದೆ ಅನ್ನುವುದೇ ಕಥೆ.

ಕ್ಷಮಿಸಿ ಇದು ಕಥೆಯಲ್ಲ, ನಿಜವಾಗಿ ನಡೆದದ್ದು. ಡಾಕ್ಯುಮೆಂಟರಿ ಆದರೂ ಸಿನಿಮಾ ನೋಡಿದಷ್ಟೇ ಕುತೂಹಲಕಾರಿಯಾಗಿದೆ. ವಿವರಗಳನ್ನು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ರೀತಿಯಲ್ಲಿಯೇ ಕೊಂಚಕೊಂಚವೇ ಅನಾವರಣಗೊಳಿಸುತ್ತ ಸಾಗುತ್ತಾರೆ. ಕೆನಡಾದಲ್ಲಿ 2012 ರಲ್ಲಿ ಲೂಕಾ ಮ್ಯಾಗ್ನೋಟ್ಟಾ ಅನ್ನುವ ಅಪರಾಧಿಯ ಸುತ್ತ ನಡೆದ ನೈಜ ಘಟನೆಗಳನ್ನೇ ಈ ಮೂರು ಕಂತುಗಳ ಡಾಕ್ಯುಮೆಂಟರಿ ಸರಣಿಯನ್ನಾಗಿ ಮಾಡಲಾಗಿದೆ. ಇಂಟರ್ನೆಟ್ ಪ್ರಪಂಚದಲ್ಲಿ ಈಗಾಗಲೇ ಅನುಭವವಿರುವವರಿಗೆ ಇದು ಸಕ್ಕತ್ ಮಜಾ ಕೊಡುತ್ತದೆ. ಅಪರಾಧಿಗಳನ್ನು ಹುಡುಕಿ ಹೊರಟಾಗ ಪುಟ್ಟ ಪುಟ್ಟ ವಿವರಗಳು ಅದೆಷ್ಟು ಮುಖ್ಯವಾಗಿರುತ್ತವೆ ಅನ್ನುವುದು ಈ ಸರಣಿ ನೋಡುವಾಗ ಅರಿವಾಗುತ್ತದೆ.

ಹಾಂ..... 2019ರಲ್ಲಿ Netflixನಲ್ಲಿ ಜನರು ಅತೀ ಹೆಚ್ಚು ವೀಕ್ಷಿಸಿದ ಐದು ಡಾಕ್ಯುಮೆಂಟರಿಗಳಲ್ಲಿ ಇದೂ ಒಂದು ಎಂಬ ಹೆಗ್ಗಳಿಕೆ ಪಡೆದಿದೆ.

Netflix ನಲ್ಲಿದೆ. ಅಸಕ್ತಿಯಿದ್ದರೆ ಮರೆಯದೆ ನೋಡಿ!

-Santhosh Kumar LM
18-Jul-2021

Thursday, May 13, 2021

Inspector ವಿಕ್ರಂ (2021, Kannada)





ಇತ್ತೀಚೆಗಿನ ಸಿನಿಮಾಗಳಲ್ಲಿ ಪ್ರಜ್ವಲ್ ದೇವರಾಜ್ ಸಿನಿಮಾದೊಳಗೆ ಕಾಣಿಸಿಕೊಳ್ಳುತ್ತಿರುವ ರೀತಿ ಇಷ್ಟವಾಗುತ್ತಿದೆ. ಮುಂದಿನ ದಿನಗಳಲ್ಲಿ ಮಾಸ್ ಸಿನಿಮಾಗಳಿಗೆ ಹೇಳಿ ಮಾಡಿಸಿದ ರೀತಿ ಪ್ರಜ್ವಲ್ ಬೆಳೆಯುತ್ತಿದ್ದಾರೆ ಅನ್ನುವುದರಲ್ಲಿ ಸಂದೇಹವಿಲ್ಲ. ಕಳೆದ ವರ್ಷ ಬಂದಿದ್ದ "ಜಂಟಲ್‍ಮ್ಯಾನ್" ಸಿನಿಮಾದಲ್ಲೂ ಇಷ್ಟವಾಗಿದ್ದರು.


"Inspector ವಿಕ್ರಂ" ಸಿನಿಮಾದಲ್ಲಿ ಇಡೀ ಸಿನಿಮಾ ಹಾಸ್ಯ ಮತ್ತು Action Sequenceಗಳಿಂದ ತುಂಬಿಕೊಂಡಿತ್ತು. ಆದರೆ ಹಾಸ್ಯವಿರುವಾಗ ಕಥೆ ಮುಂದಕ್ಕೆ ಹೋಗುವುದೇ ಇಲ್ಲ. ಮತ್ತು ಉಳಿದ ಜಾಗದಲ್ಲಿ ಕಥೆ ಹೇಳಲು ಪ್ರಯತ್ನಿಸಲಾಗಿದೆ. ನನ್ನ ಅನಿಸಿಕೆಯ ಪ್ರಕಾರ ಸಿನಿಮಾದ ಆರಂಭದಲ್ಲೇ ಖಳನಾಯಕನನ್ನು ತೋರಿಸುವ ಬದಲು ಕಡೆಯಲ್ಲಿ ತೋರಿಸಿ, ಅದರಂತೆ ಕಥೆಯನ್ನು ಬದಲಾಯಿಸಿಕೊಂಡಿದ್ದರೆ, ಸಸ್ಪೆನ್ಸ್ ಥ್ರಿಲ್ಲರ್ ಕಥಾಶೈಲಿಯಲ್ಲಿ ಸಿನಿಮಾ ಇನ್ನೂ Crisp ಆಗುತ್ತಿತ್ತೇನೋ! ಮೊದಲೇ ನಮಗೆ ಖಳನಾಯಕ ಯಾರು ಅಂತ ಗೊತ್ತಾಗುವುದರಿಂದ ಮತ್ತು ಮಧ್ಯೆ ಬರುವ ಹಾಸ್ಯದ ದೃಶ್ಯಗಳು ಮೂಲ ಎಳೆಯ ಗಂಭೀರತೆಯನ್ನು ಹಾಳುಮಾಡುವುದರಿಂದ ಒಟ್ಟಾರೆಯಾಗಿ ಏನೋ ಮಿಸ್ ಆಗಿದೆ ಅನ್ನಿಸಿತು. ಹೊಡೆದಾಟದ ದೃಶ್ಯಗಳು, ಹಿನ್ನೆಲೆ ಸಂಗೀತ, ಸಂಭಾಷಣೆ ಚೆನ್ನಾಗಿದ್ದವು!


ಭಾವನಾ ತುಂಬಾ ಚುರುಕಾಗಿ ನಟಿಸಿದ್ದಾರೆ. ಬೇರೆ ಭಾಷೆಯವರೆಂದು ಹೇಳಲು ಕಷ್ಟ. ಡಿ'ಬಾಸ್ ದರ್ಶನ್ ರವರ Cameo appearance ಸಹಜವಾಗಿ ಸಿನಿಮಾದ ತೂಕವನ್ನು ಹೆಚ್ಚಿಸಿದೆ. ತುಂಬಾ ಇಷ್ಟವಾಗಿದ್ದು ಖಳನಾಯಕನ ಪಾತ್ರದಲ್ಲಿ ಬಂದ ರಘು ಮುಖರ್ಜಿ (Raghu Mukherjee) ತಮ್ಮ ಧ್ವನಿ ಮತ್ತು ಗಂಭೀರ ಲುಕ್‍ನಲ್ಲಿ ಸಕತ್ತಾಗಿ ಕಾಣುತ್ತಾರೆ. ಅವರು ಪಾತ್ರ ನಿರ್ವಹಿಸಿದ ರೀತಿ ಸಿನಿಮಾಗೊಂದು ಪ್ಲಸ್ ಪಾಯಿಂಟ್. ಖಂಡಿತ ನಮ್ಮ ಚಿತ್ರರಂಗ ಅವರಿಗೆ ಒಳ್ಳೆಯ ಪಾತ್ರಗಳನ್ನು ಕೊಟ್ಟು ಬಳಸಿಕೊಳ್ಳಲಿ.


-Santhosh Kumar LM
13-May-2021

Sunday, April 11, 2021

ಕರ್ಣನ್ (ತಮಿಳು, 2021)

 


ಕರ್ಣನ್ (ತಮಿಳು, 2021)

ಮಾರಿ ಸೆಲ್ವರಾಜ್ ಅನ್ನುವ ನಿರ್ದೇಶಕನ "ಪರಿಯೇರುಮ್ ಪೆರುಮಾಳ್" ಸಿನಿಮಾವನ್ನು ಈ ಹಿಂದೆ ನೋಡಿದ್ದೆವು. ಮತ್ತೊಮ್ಮೆ ಅದೇ ನಿರ್ದೇಶಕ ತನ್ನ ಸಿನಿಮಾಗಳ ವ್ಯಾಪ್ತಿ ಮನರಂಜನೆಯಿಂದಾಚೆಗೂ ಬಹು ವಿಸ್ತಾರವಾದದ್ದು ಅನ್ನುವ ಸಂದೇಶವನ್ನು "ಕರ್ಣನ್" ಸಿನಿಮಾದ ಮೂಲಕ ಸ್ಪಷ್ಟಪಡಿಸುತ್ತಾರೆ.

ಸಿನಿಮಾದ ಮಧ್ಯೆ ಕಥೆಗೆ ಪೂರಕವಾದಂತಹ ರೂಪಕಗಳನ್ನು ತೋರಿಸಿ ಕೇವಲ ಸಿನಿಮಾ ಪಂಡಿತರಿಂದಷ್ಟೇ ಅವುಗಳನ್ನು ಗುರುತಿಸಲ್ಪಡುವುದು ಮಾರಿ ಸೆಲ್ವರಾಜ್'ಗೆ ಬೇಕಿಲ್ಲ. ಆತನಿಗೆ ತನ್ನ ರೂಪಕಗಳು ಸಾಮಾನ್ಯ ಪ್ರೇಕ್ಷಕನಿಗೂ ಅರ್ಥವಾಗಬೇಕು. ಹಾಗಾದಾಗಲಷ್ಟೇ ಜನಸಾಮಾನ್ಯರ ಮಧ್ಯದಲ್ಲೊಂದು ವಿಚಾರವನ್ನು ಹುಟ್ಟಿಹಾಕಲು ಸಾಧ್ಯ ಎಂಬ ಸ್ಪಷ್ಟತೆಯಿದೆ. "ಪರಿಯೇರುಮ್ ಪೆರುಮಾಳ್" ಸಿನಿಮಾದಲ್ಲಿ ಹಗೆ ಸಾಧಿಸಲು ನಾಯಕನ ಪ್ರೀತಿಯ ಕಪ್ಪು ಬಣ್ಣದ ನಾಯಿಯೊಂದನ್ನು ರೈಲಿನ ಹಳಿಗಳಿಗೆ ಕಟ್ಟಿ ಹಾಕಿ ಬಲಿ ತೆಗೆದುಕೊಳ್ಳುವಾಗ ಪ್ರೇಕ್ಷಕನಿಗೆ ಅಲ್ಲಿ ನಾಯಿಯಷ್ಟೇ ಕಾಣುವುದಿಲ್ಲ. ಆ ಕಪ್ಪು ನಾಯಿ ಒಂದು ಸಮುದಾಯವನ್ನೇ ಪ್ರತಿನಿಧಿಸುತ್ತದೆ.

ಈ ಸಿನಿಮಾದಲ್ಲೂ ಅಷ್ಟೇ. ಪೊಲೀಸ್ ಸ್ಟೇಷನ್ನಿನೊಳಗೆ ಚಿಟ್ಟೆಯೊಂದು ಹಾರುವಾಗಿನ ಹರ್ಷವನ್ನು, ತಕ್ಷಣವೇ ಆ ಮುಗ್ಧರು ಪೊಲೀಸರ ಲಾಠಿಯೇಟಿಗೆ ಚೀರಾಡುವಾಗ ಅದೇ ಚಿಟ್ಟೆ ಮೂಲೆಯಲ್ಲಿ ರೆಕ್ಕೆ ಬಡಿಯುತ್ತಲೇ ಒದ್ದಾಡುವುದನ್ನು ಅರ್ಥೈಸಿಕೊಳ್ಳಲು ನಾವು ಏನೇನನ್ನೋ ಕಲಿತಿರಬೇಕಿಲ್ಲ. ಕುದುರೆಯಷ್ಟು ವೇಗವಿಲ್ಲದಿದ್ದರೂ ಅದರಂತೆ ಕತ್ತೆಯೂ ಓಡಬಲ್ಲುದು. ಆ ಸಾಮರ್ಥ್ಯವಿದ್ದರೂ ಹದ್ದು ಮೀರಬಾರದೆಂಬ ಕಾರಣಕ್ಕೆ ಕತ್ತೆಯ ಕಾಲುಗಳಿಗೆ ಹಗ್ಗ ಬಿಗಿಯಲಾಗಿದೆ. ಆ ಹಗ್ಗ ಬಿಚ್ಚಿದ ತಕ್ಷಣ ಅದು ಕುದುರೆಯಂತೆ ಓಡುತ್ತದೆ. ಇದು ಭೌತಿಕ ವಿಷಯಗಳಿಗಷ್ಟೇ ಸೀಮಿತವಾಗಬೇಕಿಲ್ಲ. ನಮ್ಮ ಮನಸ್ಸಿನ ಕಾಲುಗಳಿಗೂ ನಾವೇ ಹಗ್ಗ ಬಿಗಿದುಕೊಂಡಿದ್ದೇವೆ. ಬದಲಾವಣೆ ಬೇಕೆಂದರೆ ಮೊದಲು ನಾವೇ ಮೊದಲು ಆ ಹಗ್ಗವನ್ನು ಕಿತ್ತೊಗೆಯಬೇಕು.

ನಾವೂ ಅದೆಷ್ಟೋ ಸಮಸ್ಯೆಗಳನ್ನು "ಅದೇ ನಮ್ಮ ಹಕ್ಕು" ಅಂತ ಸ್ವೀಕರಿಸಿಬಿಟ್ಟಿದ್ದೇವೆ. ಅವುಗಳಿಗೆ ಪರಿಹಾರವಿದೆ ಎಂಬುದರ ಅರಿವೂ ನಮಗಿಲ್ಲ. ಅವುಗಳಿಂದ ಹೊರಬರುವ ಬಗೆಯಾದರೂ ಹೇಗೆ? ಸಿನಿಮಾದಲ್ಲಿ ಕರ್ಣನ್ ಅನ್ನುವ ನಾಯಕ ಮುಂದೆ ಬರುತ್ತಾನೆ. ಅಂತಹ ಪ್ರತಿ ವಾತಾವರಣದಲ್ಲಿ ಕರ್ಣನ್ ಹುಟ್ಟಿಕೊಳ್ಳಲು ಸಾಧ್ಯವೇ? ಆ ಸಣ್ಣ ಕಿಡಿಯನ್ನು ಹುಟ್ಟುಹಾಕುವ ಪ್ರಯತ್ನವನ್ನು ಕರ್ಣನ್ ಮಾಡುತ್ತದೆ. ಇದು ತಮಿಳುನಾಡಿನ ಕೊಡಿಯಾಂಗುಲಂ ನೈಜ ಕಥೆಯನ್ನೇ ಆಧರಿಸಿ ತಯಾರಿಸಿದ ಸಿನಿಮಾ. ಆ ಹಿನ್ನೆಲೆಯನ್ನುಅರ್ಥ ಮಾಡಿಕೊಂಡು ಸಿನಿಮಾ ನೋಡಿದರೆ ನಿಜಕ್ಕೂ ಖುಶಿಯಾಗುತ್ತದೆ.

-------------------------------
ಕೊಡಿಯಾಂಗುಲಂ ಘಟನೆಯ ಬಗೆಗಿನ ಒಂದು ಪುಟ್ಟ ಬರಹ ಓದಿ.

ಆ ಘಟನೆಯಾದ ನಂತರ ಅಲ್ಲಿಗೆ ಭೇಟಿ ನೀಡಿದ ಪೊಲೀಸ್ ಮಹಾನಿರ್ದೇಶಕರಾದ ವಿ.ವೈಕುಂಠ ಅನ್ನುವವರೊಡನೆ ನಡೆದ ಸಂದರ್ಶನದಲ್ಲಿ ಅವರು ಹೇಳಿದ ಮಾತುಗಳು ಇಂತಿವೆ:

"ಅಂದು ಕೊಡಿಯಾಂಗುಲಂ ಗ್ರಾಮಕ್ಕೆ ಭೇಟಿ ನೀಡಿದಾಗ ನಾ ನೋಡಿದ್ದು ಹೃದಯ ವಿದ್ರಾವಕವಾಗಿತ್ತು. ಯಾರೋ ಗ್ರಾಮಸ್ಥರು ತಮ್ಮ ಮೇಲೆ ದಾಳಿ ಮಾಡಿದ್ದಕ್ಕೆ ಪ್ರತಿದಾಳಿ ನಡೆಸಲು ಎಂಬ ನೆಪದಲ್ಲಿ ಪೊಲೀಸರು ಅಲ್ಲಿಗೆ ಹೋಗಿದ್ದರು. ವರದಿಯ ಪ್ರಕಾರ ಆ ವಲಯದ ಮೇಲ್ಜಾತಿಯೊಬ್ಬನ ಕೊಲೆಯ ವಿಷಯದಲ್ಲಿ ಆರೋಪಿಯನ್ನು ಬಂಧಿಸಲು ಅಲ್ಲಿಗೆ ಹೋಗಲಾಗಿತ್ತು. ಬುದ್ಧಿಹೀನರಾಗಿ ಹಿಂಸೆಗಿಳಿದ ಪೊಲೀಸರು ಹೆಂಗಸರು, ವೃದ್ಧರು, ಮಕ್ಕಳೆನ್ನದೆ ಅವರ ಮೇಲೆರಗಿದ್ದರು. ಮನೆಗಳೊಳಗೆ ನುಗ್ಗಿ ದಾಂಧಲೆ ಮಾಡಿದರು. ಇಟ್ಟಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದರು. ಟಿವಿಗಳನ್ನು ಒಡೆದು ಹಾಕಿದರು. ಅಕ್ಕಿ ಚೀಲಗಳನ್ನು ಹರಿದು ಹಾಕಿ ರಸ್ತೆಗೆ ಸುರಿದರು. ಇನ್ನೂ ಅಮಾನವೀಯ ಅಂದರೆ ಜನರು ಕುಡಿಯುವ ನೀರಿಗಾಗಿ ಅವಲಂಬಿಸಿದ್ದ ಬಾವಿಗೆ ಡೀಸೆಲ್ ಸುರಿದರು. ಬೀರುಗಳಲ್ಲಿದ್ದ ಬಟ್ಟೆಗಳನ್ನು ಹೊರ ಚೆಲ್ಲಿದರು. ಕೈಗೆ ಸಿಕ್ಕ ವಿದ್ಯಾರ್ಥಿಗಳ ಯೂನಿವರ್ಸಿಟಿ ಡಿಗ್ರೀ ಸರ್ಟಿಫಿಕೇಟುಗಳನ್ನು ಅವರ ಕಣ್ಣೆದುರೇ ಹರಿದು ಬಿಸಾಡಿದರು. ನಾ ಅಲ್ಲಿಗೆ ಹೋದಾಗ ಅಲ್ಲಿನ ಜನರು ಅತ್ತು ಗೋಳಾಡಿ ತಮ್ಮ ಕಷ್ಟಗಳನ್ನು ಹೇಳಿಕೊಂಡಾಗ ನಾ ನಡುಗಿ ಹೋದೆ. ನನ್ನ ಮೂವತ್ತು ವರ್ಷಗಳ ಪೊಲೀಸ್ ಜೀವನದಲ್ಲಿ ನನ್ನ ಇಲ್ಲಾಖೆಯ ಪೊಲೀಸರಿಂದಲೇ ನಡೆದ ಇಂಥ ಅಮಾನವೀಯ ಕೃತ್ಯವನ್ನು ಎಂದೂ ಕಂಡಿರಲಿಲ್ಲ. ಪ್ರತಿ ಗ್ರಾಮಸ್ಥನೂ ತಾನಾಗಿಯೇ ನಿಂತು ಅಲ್ಲಿ ನಡೆದ ಪೊಲೀಸ್ ದೌರ್ಜನ್ಯವನ್ನು ಹೇಳಿದಾಗ ನನಗೆ ನಂಬದೇ ವಿಧಿಯಿರಲಿಲ್ಲ. ಆದರೂ ನಾನು ನಡೆದ ಸತ್ಯವನ್ನು ಮನವರಿಕೆ ಮಾಡಿಕೊಳ್ಳಬೇಕಿತ್ತು. ಹಾಗಾಗಿ ಸಂಬಂಧಪಟ್ಟ ಪೊಲೀಸ್ ಅಧೀಕ್ಷಕರನ್ನು (superintendent of police) ಪಕ್ಕಕ್ಕೆ ಕರೆದುಕೊಂಡು ಹೋಗಿ ಅದೇ ಗ್ರಾಮದ ಮರವೊಂದರ ನೆರಳಲ್ಲಿ ನಿಜವಾಗಿ ನಡೆದ ವಿಷಯವೇನೆಂದು ಕೇಳಿದೆ. ಪೊಲೀಸ್ ಉಪನಿರ್ದೇಶಕರ ಸಮ್ಮುಖದಲ್ಲಿಯೇ S.P. ಯವರು ಹಾಗೆ ನಡೆದದ್ದು ಸತ್ಯ ಎಂದು ಎಲ್ಲವನ್ನೂ ಒಪ್ಪಿಕೊಂಡರು"

-------------------------------

ಅಸುರನ್, ಪರಿಯೇರುಮ್ ಪೆರುಮಾಳ್ ಸಿನಿಮಾಗಳನ್ನು ಈ ಸಿನಿಮಾದೊಂದಿಗೆ ಹೋಲಿಸುವ ಅಗತ್ಯವಿಲ್ಲ. ಏಕೆಂದರೆ ಈ ಎರಡೂ ಸಿನಿಮಾಗಳನ್ನು ನೋಡುವಾಗಿನ ಮನಸ್ಥಿತಿ ಸಂಪೂರ್ಣ ಭಿನ್ನವಾಗಿರುತ್ತದೆ. ಒಂದಷ್ಟು ಕಥೆ ಹೇಳುವ ಬಗೆಗಿನ ಋಣಾತ್ಮಕ ವಿಷಯಗಳನ್ನು ಇಲ್ಲಿ ಚರ್ಚಿಸಬಹುದು. ಆದರೆ ಸಮಸ್ಯೆಗಳನ್ನು ಆಧಾರವಾಗಿಟ್ಟುಕೊಂಡು ಚಿತ್ರೀಕರಿಸಿದ ಸಿನಿಮಾವಾದ್ದರಿಂದ ಅವೆಲ್ಲವೂ ಗೌಣವಾಗುತ್ತವೆ.

ಈ ಸಿನಿಮಾದಲ್ಲಿ ತೋರಿಸುವ ಸಮಸ್ಯೆ ಈಗಿಲ್ಲ ಅಂತ ಒಬ್ಬರ ವಿಮರ್ಶೆ ನೋಡಿ ನಗು ಬಂತು. ಇವತ್ತಿಗೂ ನಮ್ಮ ರಾಜ್ಯದ ಕೆಲವು ಗ್ರಾಮಗಳು ಮೂಲ ಸೌಕರ್ಯಗಳಿಂದ ವಂಚಿತರಾಗಿ ನಮಗೂ ಅದಕ್ಕೂ ಸಂಬಂಧವೇ ಇಲ್ಲ ಅನ್ನುವಂತೆ ಅಲ್ಲಿನ ಜನ ಇನ್ನಷ್ಟು ಸಮಸ್ಯೆಗಳ ನಡುವೆ ಬದುಕಿದ್ದಾರೆ. ಸಮಸ್ಯೆಯ ಆಳ ಅರ್ಥವಾಗುವುದು ಅದರೊಳಗಿದ್ದವರಿಗೆ ಅಥವ ಅದನ್ನು ಕಣ್ಣಾರೆ ಕಂಡವರಿಗಷ್ಟೇ.

ಬೇರೆ ಸಿನಿಮಾಗಳಂತೆ ಇಲ್ಲಿ ದೃಶ್ಯಗಳು ರಪ್ಪನೆ ಬಂದು ಮುಗಿದು ಹೋಗುವುದಿಲ್ಲ. ಮಾರಿ ಸೆಲ್ವರಾಜ್ ಸಿನಿಮಾ ಮಾದರಿಯೇ ಇದು ಅನ್ನುವಷ್ಟರ ಮಟ್ಟಿಗೆ ವಿವರವಾಗಿ, ಸಾವಧಾನವಾಗಿ ಕಥೆ ಹೇಳುವ ಶೈಲಿಯನ್ನು ಅವರು ಮೈಗೂಡಿಸಿಕೊಂಡಿದ್ದಾರೆ. ಬಹುಶಃ ಗೌತಮ್ ಮೆನನ್, ಸೆಲ್ವರಾಘವನ್, ವೆಟ್ರಿಮಾರನ್, ಪ ರಂಜಿತ್, ಮಿಸ್ಕಿನ್, ಮಣಿರತ್ನಂ ಇತ್ಯಾದಿ ನಿರ್ದೇಶಕರಂತೆಯೇ ಇನ್ನೊಂದೆರಡು ಸಿನಿಮಾಗಳ ಬಳಿಕ ಅವರ ಹೆಸರಿಲ್ಲದಿದ್ದರೂ ಸಿನಿಮಾದ ನಿರ್ದೇಶಕ ಇವರೇ ಅಂತ ಗುರುತಿಸುವಷ್ಟರ ಮಟ್ಟಿಗೆ ಅವರ ಶೈಲಿ ನಮಗೆ ಕರಗತವಾಗುತ್ತಿದೆ. ಅದಕ್ಕೆ ತಕ್ಕಂತೆ ಹಿನ್ನೆಲೆ ಸಂಗೀತ, ಛಾಯಾಗ್ರಹಣ, ಪಾತ್ರಧಾರಿಗಳ ನಟನೆ ಎಲ್ಲವೂ ಹೊಂದಿಕೊಂಡಿವೆ. ವಿಭಿನ್ನ ಸಿನಿಮಾಗಳನ್ನು ಇಷ್ಟಪಡುವವರು ಮಿಸ್ ಮಾಡದೇ ನೋಡಬೇಕಾದ ಸಿನಿಮಾ ಇದು. ನೋಡಿದ ಮೇಲೂ ಅದರ ಬಗ್ಗೆ ಯೋಚಿಸುವಂತೆ ಮಾಡುತ್ತದೆ.

-ಸಂತೋಷ್ ಕುಮಾರ್ ಎಲ್.ಎಂ.

#santhuLm
11-Apr-2021

Wednesday, April 7, 2021

ಮಂಡೇಲಾ (ತಮಿಳು, ೨೦೨೧)



ಮಂಡೇಲಾ (ತಮಿಳು, ೨೦೨೧)





ಸಿನಿಮಾ ಅನ್ನೋದು ಸಂದೇಶವೊಂದನ್ನು ಕೊಡಲೇಬೇಕಾ? ಕೊಡುತ್ತೇವೆ ಅಂದುಕೊಂಡು ಬರುವ ಸಿನಿಮಾಗಳು ಬಹುತೇಕ ಅದರತ್ತ ಮಾತ್ರ ಗಮನ ಹರಿಸಿ ಮಾಮೂಲಿ ಸಿನಿಮಾ ಕೊಡಬಹುದಾದ ಅನುಭವದಿಂದ ನಮ್ಮನ್ನು ವಂಚಿತರನ್ನಾಗಿ ಮಾಡುತ್ತವೆ. ಸಿನಿಮಾ ಸಿನಿಮಾವಾಗಿಯೂ ಗೆಲ್ಲಬೇಕು. ಜೊತೆಗೆ ಅದು ಕೊಡಮಾಡುವ ಸಂದೇಶವೂ ಪರಿಣಾಮಕಾರಿಯಾಗಿರಬೇಕು.


ಇಷ್ಟೆಲ್ಲ ಹೇಳಿದ ಮೇಲೆ ನಾನೊಂದು ಗಂಭೀರ ಸಿನಿಮಾದ ಬಗ್ಗೆ ಮಾತನಾಡುತ್ತೇನೆ ಅಂದುಕೊಂಡರೆ ಅದು ತಪ್ಪು. 2016ರಲ್ಲಿ ಜೋಕರ್ ಅನ್ನುವ ಸಾಮಾಜಿಕ ಸಂದೇಶವನ್ನು ಸಾರುವ ತಮಿಳು ಸಿನಿಮಾವೊಂದು ಬಿಡುಗಡೆಯಾಗಿ ಪ್ರಶಂಸೆಗೆ ಪಾತ್ರವಾಗಿತ್ತು. ಇದೀಗ "ಮಂಡೇಲಾ" ಅನ್ನುವ ಇನ್ನೊಂದು ಚಿತ್ರ ಅದಕ್ಕಿಂತಲೂ ಚೆನ್ನಾಗಿ ಮೂಡಿ ಬಂದಿದೆ.


ಇಡೀ ಚಿತ್ರದ ಹೈಲೈಟ್ ಅದರ ಕಥೆಯಷ್ಟೇ. ಒಂದು ಗ್ರಾಮಪಂಚಾಯಿತಿ ಚುನಾವಣೆಯ ಪುಟ್ಟ ಎಳೆಯೊಂದನ್ನು ಇಟ್ಟುಕೊಂಡೇ ಇಡೀ ಸಿನಿಮಾದ ಎಲ್ಲ ದೃಶ್ಯಗಳನ್ನು ಹೆಣೆಯಲಾಗಿದೆ. ಎಲ್ಲಿಯೂ ಯಾವುದೇ ವಿಷಯ ಹೆಚ್ಚು-ಕಡಿಮೆ ಅನ್ನಿಸುವುದಿಲ್ಲ. ಸಿನಿಮಾದ ಕಥಾನಾಯಕ ಒಬ್ಬ ಕ್ಷೌರಿಕ. ಆ ಪಾತ್ರದಲ್ಲಿ 'ಯೋಗಿ ಬಾಬು" ಅನ್ನುವ ಹಾಸ್ಯ ನಟ ಎಲ್ಲರೂ ನಾಚುವಂತೆ ಅಭಿನಯಿಸಿದ್ದಾರೆ.


ಒಂದೇ ಚಿತ್ರದಲ್ಲಿ ವೋಟು ರಾಜಕಾರಣ, ಮತದಾನದ ಬಗೆಗಿನ ಅರಿವು, ಒಂದು ಮತದ ಮೌಲ್ಯ, ಪಕ್ಷಗಳ ಓಲೈಸುವಿಕೆ, ಭ್ರಷ್ಟಾಚಾರ, ಜಾತೀಯತೆ, ದೇಶದ ನಾಗರಿಕನೊಬ್ಬನಿಗಿರುವ ಅಧಿಕಾರ ಇತ್ಯಾದಿ ವಿಷಯಗಳನ್ನು ಕೊಂಚವೂ ಬೇಸರವಾಗದಂತೆ ಮನಮುಟ್ಟುವ ಹಾಗೆ ಹೇಳಿದ್ದಾರೆ. ಆದರೆ ಇವೆಲ್ಲ ವಿಷಯಗಳನ್ನು ನಮಗೆ ಬೋಧಿಸಿದಂತೆ ಎಲ್ಲಿಯೂ ಅನ್ನಿಸುವುದಿಲ್ಲ. ಏಕೆಂದರೆ ಕಥೆಯಲ್ಲಿಯೂ ಈ ವಿಷಯಗಳನ್ನು ನೇರವಾಗಿ ಚರ್ಚಿಸುವುದಿಲ್ಲ. ಆದರೆ ನೋಡುಗನ ಮನಸ್ಸಿನಲ್ಲಿ ಮಾತ್ರ ಈ ವಿಷಯಗಳು ಮನದಟ್ಟಾಗುತ್ತ ಸಾಗುತ್ತದೆ.


ಒಂದು ದೃಶ್ಯದಲ್ಲಿ ಅಂಚೆ ಕಛೇರಿಯಲ್ಲಿ ಖಾತೆಯೊಂದನ್ನು ತೆರೆಯೋಣ ಅಂತ ಹೋಗುವ ನಾಯಕನಿಗೆ ಅದಕ್ಕೆ ಆಧಾರ್ ಕಾರ್ಡ್ ಕಡ್ಡಾಯ ಅಂತ ಅರಿವಾಗುತ್ತದೆ. ನಾಯಕನ ಜೊತೆಗಿದ್ದ ಹುಡುಗ ಕೇಳುತ್ತಾನೆ. "ಆಧಾರ್ ಯಾಕೆ ಬೇಕು" ಅಂತ. ಅದಕ್ಕೆ "ಇಲ್ಲದಿದ್ದರೆ ಇವನು ನಮ್ಮ ದೇಶದವನೇ ಅಂತ ಹೇಳೋದು ಹೇಗೆ?" ಅಂತ ಪ್ರತಿಕ್ರಿಯೆ ಬರುತ್ತೆ. ತಕ್ಷಣವೇ ಆ ಹುಡುಗ "ನೋಡಿದ್ರೆ ಗೊತ್ತಾಗಲ್ವಾ ಮೇಡಂ. ಈ ನನ್ಮಗನ ಮೂತಿ ಇನ್ನೇನು ಫಾರಿನ್ನೋನ ಥರಾ ಕಾಣುತ್ತಾ?" ಅಂತ. ಈ ಸಂಭಾಷಣೆಯನ್ನು ಸಿನಿಮಾದೊಳಗೆ ಹಾಸ್ಯದ ರೀತಿ ಹೇಳುವುದಿಲ್ಲ. ಗಂಭೀರವಾಗಿಯೇ ಇರುತ್ತದೆ. ಆದರೆ ನೋಡುವ ನಮಗೆ ಮಾತ್ರ ಫಕ್ಕನೆ ನಗು ತರಿಸುತ್ತದೆ. ಸಿನಿಮಾ ಮುಂದುವರಿಯುತ್ತದೆ. ಇದೇ ರೀತಿ ಸಿನಿಮಾ ಪೂರ್ತಿ ನಗಿಸುವ, ಕಣ್ಣೊದ್ದೆ ಮಾಡುವ, ಚಿಂತನೆಗೆ ದೂಡುವ ಅನೇಕ ದೃಶ್ಯಗಳಿವೆ. ಕೊಂಚವೂ ವಿಷಯಗಳು ಮೂಲ ಎಳೆಯನ್ನು ಬಿಟ್ಟು ಅತ್ತಿತ್ತ ಕದಲುವುದಿಲ್ಲ.


ನಾಯಕ ಯೋಗಿ ಬಾಬು ಮೂಲತಃ ಪುಟ್ಟ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಒಬ್ಬ ಹಾಸ್ಯ ನಟ. ಅವರೇನು ಸಿಕ್ಸ್ ಪ್ಯಾಕ್ ಮಾಡಿಲ್ಲ. ನೋಡಲು ಇತರ ಹೀರೋಗಳಂತಿಲ್ಲ. ಅಂಥ ನಟನನ್ನು ಸಿನಿಮಾ ಮುಗಿಯುವ ಹೊತ್ತಿಗೆ ಮನಸ್ಸು ಹೀರೋ ಅಂತ ಒಪ್ಪಿಕೊಳ್ಳುವ ಹಾಗೆ ಮಾಡುತ್ತದಲ್ಲ. ಅದು ನಿಜವಾದ ಸಿನಿಮಾ ಕಥೆಯ ತಾಕತ್ತು. ಅವರನ್ನು ಈ ಸಿನಿಮಾ ಮತ್ತೊಂದು ಮಜಲಿಗೆ ಕರೆದೊಯ್ಯುತ್ತದೆ ಅನ್ನುವುದರಲ್ಲಿ ಸಂದೇಹವಿಲ್ಲ. ಯೋಗಿಬಾಬು ಇರುವ ಹಾಗೆಯೇ ಅವರನ್ನು ಸಿನಿಮಾಗೆ ಸೂಕ್ತವಾಗಿ ಬಳಸಿಕೊಳ್ಳಲಾಗಿದೆ. ಸಿನಿಮಾದಲ್ಲಿರುವ ಮುಕ್ಕಾಲು ಭಾಗ ಪಾತ್ರಧಾರಿಗಳ ಅರಿಚಯವಿಲ್ಲ. ಆದರೆ ಸಿನಿಮಾ ನೋಡುವಾಗ ಎಲ್ಲೂ ಯಾರೂ ಅಪರಿಚಿತವೆನಿಸುವುದೇ ಇಲ್ಲ.


ಬಹುಶಃ ನಾಯಕರಿಗಾಗಿ ಕಥೆ ಬರೆಯುವ ಬದಲು ಕಥೆ ಬರೆದು ಸೂಕ್ತವಾದ ನಟರನ್ನು ಆಯ್ದುಕೊಂಡರೆ ಈ ಬಗೆಯ ಸಿನಿಮಾಗಳು ಹೊರಮೂಡುತ್ತವೆ ಅಂತ ಖಡಾಖಂಡಿತವಾಗಿ ಹೇಳಬಹುದು. ಸಿನಿಮಾ ಸ್ಕ್ರಿಪ್ಟ್ ಮೇಲೆ ಕೆಲಸ ಮಾಡುವವರು ಈ ಬಗೆಯ ಸಿನಿಮಾಗಳನ್ನು ಹೆಚ್ಚು ಹೆಚ್ಚು ನೋಡಬೇಕು. ಕಾಕತಾಳಿಯವೇನೋ ಎಂಬಂತೆ ತಮಿಳುನಾಡಿನ ವಿಧಾನಸಭಾ ಚುನಾವಣೆ ನಡೆಯುವ ಸಮಯದಲ್ಲೇ ಈ ಸಿನಿಮಾ ಬಿಡುಗಡೆಯಾಗಿದೆ. ನೆಟ್'ಫ್ಲಿಕ್ಸ್ ನಲ್ಲಿದೆ. ಮರೆಯದೆ ನೋಡಿ.


-Santhosh Kumar LM
07-Apr-2021

Friday, January 15, 2021

Master (Tamil, 2021)

 


Master (Tamil, 2021)

ಇಬ್ಬರು ಸಾಧಾರಣ ನಟರನ್ನು ಇಟ್ಟುಕೊಂಡು ಸಿನಿಮಾ ಮಾಡುವುದೆಂದರೆ ಅಷ್ಟೊಂದೇನೂ ಒತ್ತಡವಿರುವುದಿಲ್ಲ. ಕಥೆಗಾರ ಬರೀ ತನ್ನ ಸ್ಕ್ರಿಪ್ಟ್ ಮೇಲೆ ಗಮನ ಹರಿಸಿದರೆ ಸಾಕು! ಅಪ್ಪಿತಪ್ಪಿ ಆ ಇಬ್ಬರೂ ನಟರು ವೈಯಕ್ತಿಕವಾಗಿ ಒಬ್ಬೊಬ್ಬರೇ ಒಂದು ಸಿನಿಮಾವನ್ನು ಹಿಟ್ ಕೊಡಬಲ್ಲಷ್ಟು ಶಕ್ತರಾಗಿದ್ದರಂತೂ ಅವರಿಬ್ಬರನ್ನು ಹಾಕಿಕೊಂಡು ಸಿನಿಮಾ ತೆಗೆಯುವ ನಿರ್ದೇಶಕನಿಗೆ ಅದು ಖಂಡಿತವಾಗಿ "ಬಾಯಲ್ಲಿನ ಬಿಸಿತುಪ್ಪವೇ"!! ಅಭಿಮಾನಿಗಳಿಗೇನೋ ತಮ್ಮ ನೆಚ್ಚಿನ ನಟರನ್ನು ಒಟ್ಟೊಟ್ಟಿಗೆ ನೋಡಲು ಹಿಗ್ಗು. ಆದರೆ ಕಥೆ ಹೆಣೆಯುವವ ಮಾತ್ರ ತನ್ನೆಲ್ಲ ಬುದ್ಧಿಯನ್ನು ಓರೆಗೆ ಹಚ್ಚಬೇಕು. ಅದೊಂಥರ ಏನಾದರೂ ಮಾಡು, ಒಟ್ನಲ್ಲಿ ಒಂದು ಅದ್ಭುತ ಸಿನಿಮಾ ಕೊಡು ಅನ್ನೋ ಥರದ ಸವಾಲು. ಏಕೆಂದರೆ ಮೇಲ್ನೋಟಕ್ಕೆ ಸುಲಭದಂತೆ ಕಾಣುವ ಕೆಲಸ ಒಳಗೆ ಅತ್ಯಂತ ಕ್ಲಿಷ್ಟಕರವಾಗಿರುತ್ತೆ.

ಇಬ್ಬರ ಪರಿಚಯವೂ ಚೆನ್ನಾಗಿ ಮೂಡಿಬರಬೇಕು. ಇಬ್ಬರಿಗೂ ಪರದೆಯ ಮೇಲೆ ಸಮಯ ಕೊಡಬೇಕು. ಪ್ರೇಕ್ಷಕನಿಗೆ ಯಾರೊಬ್ಬರ ಗೈರು ತಟ್ಟದಂತೆ ಹೆಚ್ಚು ಅಂತರವಿಲ್ಲದೆ ಆ ಹೀರೋ ಆಗಾಗ ಕಾಣಿಸಿಕೊಳ್ಳುತ್ತಿರಬೇಕು. ಎಲ್ಲಕಿಂತ ಹೆಚ್ಚಾಗಿ ಇಬ್ಬರಲ್ಲಿ ಯಾರೂ ಕೂಡ ತಮ್ಮ ಪ್ರಾಮುಖ್ಯತೆ ಕಡಿಮೆಯಯ್ತು ಅನ್ನುವ ಹಾಗೆ ಭಾವಿಸದಂತೆ ಜಾಗರೂಕತೆ ವಹಿಸಬೇಕು! ನಟರು ಕೊಂಚ ಅಡ್ಜಸ್ಟ್ ಮಾಡಿಕೊಂಡರೂ ನಿರ್ದೇಶಕನಿಗೆ ಆ ನಟರ ಅಭಿಮಾನಿಗಳ ಭಯವಂತೂ ಇದ್ದೇ ಇರುತ್ತದೆ!

ಅಗಾಧ ಜನಪ್ರಿಯತೆ ಹೊಂದಿದ, ತಮ್ಮದೇ ಆದ ದೊಡ್ಡ ಅಭಿಮಾನಿವರ್ಗವನ್ನು ಹೊಂದಿರುವ ವಿಜಯ್ & ವಿಜಯ್ ಸೇತುಪತಿ ಅವರನ್ನು ಹಾಕಿಕೊಂಡು ತೆಗೆದ ಆ ಬಗೆಯ ಸಿನಿಮಾ "ಮಾಸ್ಟರ್" ಒಂದು ಮಾಸ್ಟರ್-ಪೀಸ್ ಆಗಬೇಕಿತ್ತು! ಅದು ಕಡೆಗೂ ಆಯ್ತಾ ಅನ್ನುವುದೇ ಪ್ರಶ್ನೆ! ಇಲ್ಲಿ ವಿಜಯ್ ನಾಯಕನಾದರೆ, ವಿಜಯ್ ಸೇತುಪತಿ ಖಳನಾಗಿ ಪಾತ್ರ ನಿರ್ವಹಿಸಿದ್ದಾರೆ. ಇವರೊಟ್ಟಿಗೆ ನಟ-ನಟಿಯರ ದಂಡೇ ಈ ಚಿತ್ರದಲ್ಲಿದೆ. ಆದರೆ ಅವರಲ್ಲಿ ಯಾರು ಪ್ರಮುಖರು ಅನ್ನಿಸುವಷ್ಟು ಎಲ್ಲೋ ಬರುತ್ತಾರೆ, ಎಲ್ಲೋ ಹೋಗಿಬಿಡುತ್ತಾರೆ. ಅದು ಈ ಚಿತ್ರದ ಒಂದು ಋಣಾತ್ಮಕ ಅಂಶ.

ವಿಜಯ್ ಸೇತುಪತಿ ಖಳನಾದರೂ ಆತ ಪ್ರತಿ ದೃಶ್ಯದಲ್ಲೂ ನಮ್ಮನ್ನು ನಗಿಸುತ್ತಲೇ ತನ್ನ ಕೆಲಸ ಮಾಡುತ್ತಿರುತ್ತಾನೆ. ಗಮನಿಸಿದರೆ, ನಮಗೆ ಗೊತ್ತಿಲ್ಲದೆಯೇ ನಾವು ಆತ ಮಾಡುವುದನ್ನು ಎಂಜಾಯ್ ಮಾಡುತ್ತೇವೆ! ಡಾನ್ ಚಿತ್ರಗಳಲ್ಲಿ ತನ್ನ ಮಣಿಸಲು ಬರುವ ಎಲ್ಲರನ್ನು ಕ್ಷಣಾರ್ಧದಲ್ಲಿ ಹಣ್ಣುಗಾಯಿ ಮಾಡುತ್ತ ತನ್ನ ಪ್ರಭುತ್ವ ಸಾಧಿಸಲು ತನ್ನದೇ ದಾರಿ ಹಿಡಿಯುವ ನಾಯಕರ ವರ್ತನೆಯನ್ನು ನಾವು ಖುಶಿಯಿಂದ ನೋಡಿದಂತೆಯೇ ಇಲ್ಲೂ ಸಹ ಎಂಜಾಯ್ ಮಾಡುತ್ತೇವೆ. ಈ ಕಾರಣದಿಂದಲೇ ನಮಗೆ ಆತ ಮಾಡುವುದು ತಪ್ಪು ಅನ್ನಿಸುವುದೇ ಇಲ್ಲ. ಈ ಸಂದರ್ಭದಲ್ಲಿಯೇ ಅತ್ತಲಿನ ನಾಯಕನ ಪರಿಚಯವೂ ನಮಗಾಗುತ್ತದೆ. ಇವರಿಬ್ಬರೂ ಸಂಧಿಸುವುದೇ ಇಲ್ಲವೇನೋ ಅನ್ನಿಸುವಷ್ಟರಲ್ಲಿ ನಿರ್ದೇಶಕ ಅಲ್ಲೊಂದು ತಿರುವು ನೀಡುತ್ತಾನೆ. ಆ ದೃಶ್ಯದಲ್ಲಿ ಭವಾನಿ (ವಿಜಯ್ ಸೇತುಪತಿ) ಮಾಡುವುದನ್ನು ನಾವೇ ಅಕ್ಷರಶಃ ದ್ವೇಷಿಸುತ್ತೇವೆ. ಅದೇ ಮೊದಲ ಬಾರಿಗೆ ಖಳನಾಯಕನ ಮೇಲೆ ನಮಗೆ ಬೇಸರ ಮೂಡುತ್ತದೆ. ಅಂದುಕೊಂಡಂತೆಯೇ ಅವನ ಅಂತ್ಯಕ್ಕೆ ನಾಯಕ ಭಾಷ್ಯ ಬರೆಯುತ್ತಾನೆ.

ದ್ವಿತೀಯಾರ್ಧ ಇನ್ನೇನೋ ಇರಬೇಕು ಅನ್ನಿಸುವಂತೆ ಕುತೂಹಲ ಹುಟ್ಟಿಸುತ್ತದಾದರೂ ಅಲ್ಲಿ ನಾಯಕನ ಸೇಡನ್ನು, ಕೋಪವನ್ನು ಸಂಭಾಳಿಸುವಲ್ಲಿ ನಿರ್ದೇಶಕ ಸೋತಿದ್ದಾರೆ. ಮತ್ತೊಮ್ಮೆ ಹೇಳುವುದಾದರೆ ಹಾವು-ಮುಂಗುಸಿಯಾಟದ ಹೊರತಾಗಿ ನಾಯಕನ ನಗುತ್ತಲೇ ಎಲ್ಲವನ್ನು ಎದುರಿಸುವ ಗುಣವನ್ನು ತೋರಿಸುತ್ತ ಮಧ್ಯೆ ಕಥೆಯನ್ನು ಸುಖಾಸುಮ್ಮನೆ ಎಳೆಯುತ್ತಾರೆ. ಎರಡೂ ಪಾತ್ರಗಳು ಒಟ್ಟಿಗೆ ಮುಖಾಮುಖಿಯಾದಾಗ ದೊಡ್ಡದೊಂದೇನೋ ಘಟಿಸಬೇಕಿತ್ತು. ಆದರೆ ಅಂಥದ್ದೇನೂ ನಡೆಯದೇ ಸಾಧಾರಣವಾಗಿಯೇ ಅಂತ್ಯವಾಗುತ್ತದೆ. ಇಲ್ಲಿಯೇ ಸಿನಿಮಾದ Duration ಜಾಸ್ತಿಯಾಗುತ್ತ ಸಾಗುತ್ತದೆ. ಅಂತ್ಯದಲ್ಲಿ ಖಳನಾಯಕನ ಅಂತ್ಯವಾದ ಮೇಲೂ ನಾಯಕನ ಕಥೆ ಹೇಳುವಿಕೆ ಮುಗಿಯುವುದಿಲ್ಲ! ಲಾರಿಗಳನ್ನು ಅಡ್ಡ ಹಾಕಿ ಹೊಡೆದಾಡುವ ನೀಳ ದೃಶ್ಯವೊಂದು ನಮ್ಮ ತಾಳ್ಮೆ ಪರೀಕ್ಷಿಸುತ್ತದೆ. ಬಹುಶಃ ಎರಡೂವರೆ ಗಂಟೆಯ ಗಡುವೊಂದನ್ನು ನಿರ್ದೇಶಕ ಹಾಕಿಕೊಂಡಿದ್ದರೆ ಕಥೆಯನ್ನು ಇನ್ನಷ್ಟು ಬಿಗಿಯಾಗಿಸಬಹುದಿತ್ತು.

ಒಂದೆಡೆ ಎಂಥ ದೃಶ್ಯವೇ ಆಗಲಿ, ಅದನ್ನು ತನ್ನದಾಗಿಸಿಕೊಳ್ಳುವ ವಿಜಯ್ ಸೇತುಪತಿ ಇದ್ದರೂ ತಾನಷ್ಟೇ ನಾಯಕನಲ್ಲ ಎಂಬಂತೆ ಎಲ್ಲರೊಂದಿಗೂ ತೆರೆಯನ್ನು ಹಂಚಿಕೊಳ್ಳುವ ವಿಜಯ್ ಇಷ್ಟವಾಗುತ್ತಾರೆ. ವಿಜಯ್ ಪಾತ್ರದ ಸೋಮಾರಿತನವನ್ನು, ಏಕೆ ಅವರನ್ನು ಕಂಡರೆ ವಿದ್ಯಾರ್ಥಿಗಳಿಗಿಷ್ಟ ಅನ್ನುವುದನ್ನು ತೋರಿಸಲೇ ಮೊದಲರ್ಧ ಭಾಗದ ಅರ್ಧದಷ್ಟು ಸಮಯ ವ್ಯಯಿಸಿದ್ದಾರೆ. ಆದರೆ ಅದು ಮನರಂಜನೆಯ ದೃಷ್ಟಿಯಿಂದ ವಿಜಯ್ ಅಭಿಮಾನಿಗಳಿಗೆ ಹಬ್ಬ. ಇದಷ್ಟೇ ಅಲ್ಲ. ಮೈ ನವಿರೇಳಿಸುವ ಹೊಡೆದಾಟದ ದೃಶ್ಯಗಳೊಂದಿಗೆ ವಿಜಯ್ ಅಭಿಮಾನಿಗಳಿಗಾಗಿಯೇ ಮೀಸಲೆಂಬಂತೆ ಅಲ್ಲಲ್ಲಿ ಬಗೆಬಗೆಯ ರುಚಿಕಟ್ಟಾದ ಅಂಶಗಳನ್ನು ಕಥೆಯಲ್ಲಿ ಮೀಸಲಿಟ್ಟಿದ್ದಾರೆ. ಇನ್ನೂ ವಿಜಯ್ ಚಿಕ್ಕ ಹುಡುಗರ ಹಾಗೆಯೇ ತೆರೆಯಲ್ಲಕಾಣಿಸಿಕೊಳ್ಳುವುದು ಮಾತ್ರ ಅಚ್ಚರಿಯ ಸಂಗತಿ.

ಸಿನಿಮಾ ಮುಗಿದಾಗ ಒಂದೊಳ್ಳೆಯ ಮನರಂಜನೆಯ ಸಿನಿಮಾವನ್ನು ನೋಡಿದೆ ಅನ್ನಿಸಿದರೂ ಕೆಲವೆಡೆ ಇನ್ನಷ್ಟು ಮುತುವರ್ಜಿವಹಿಸಿದ್ದರೆ ಈ ಸಿನಿಮಾ ಮತ್ತಷ್ಟು ಚೆನ್ನಾಗಿ ಮೂಡಿ ಬರುತ್ತಿತ್ತು ಅನ್ನುವುದಂತೂ ಸತ್ಯ.

ಕೊರೋನಾ ನಿರ್ಬಂಧನೆ ಸಡಿಲಿಸಿದ ತರುವಾಯ ದೊಡ್ಡ ತಾರಾಗಣದ ಸಿನಿಮಾಗಳು ಶುರುವಾಗದೆ ಜನರನ್ನು ಸೆಳೆಯಲು ಸಾಧ್ಯವಿಲ್ಲ. ಆ ನಿಟ್ಟಿನಲ್ಲಿ ನೋಡಿದಾಗ "ಮಾಸ್ಟರ್" ಸಿನಿಮಾ ಒಳ್ಳೆಯ ಆರಂಭವನ್ನೇ ಸಿನಿರಂಗಕ್ಕೆ ನೀಡಿದೆ. ಅದು ಮುಂದುವರಿಯಲಿ.

-Santhosh Kumar LM
15-Jan-2021