Thursday, January 20, 2022

ಸೀತಾರಾಮ್ ಬಿನೋಯ್ ಕೇಸ್ ನಂ 18 (Kannada, 2021)

 


ಸೀತಾರಾಮ್ ಬಿನೋಯ್ ಕೇಸ್ ನಂ 18 (Kannada, 2021)

ಈ ಸಿನಿಮಾ ಯಾಕೆ ವಿಭಿನ್ನ ಅನ್ನುವುದಕ್ಕೆ ಒಂದಷ್ಟು ಅಂಶಗಳನ್ನು ಇಲ್ಲಿ ಪಟ್ಟಿ ಮಾಡಿದ್ದೇನೆ.

-Starcast: protagonist ವಿಜಯ್ ರಾಘವೇಂದ್ರ ಅವರನ್ನು ಬಿಟ್ಟರೆ ಗೊತ್ತಿರುವ ಒಂದೇ ಒಂದು ಮುಖವಿಲ್ಲ.

- Antagonist ಪಾತ್ರಗಳಲ್ಲಿರುವ ಒಬ್ಬರ ಮುಖವೂ ಪರಿಚಯವಿಲ್ಲ. ಆದರೆ ಸಿನಿಮಾ ನೋಡಿದ ಮೇಲೆ ಮನಸ್ಸಿನಲ್ಲಿ ರೆಜಿಸ್ಟರ್ ಆಗುವಷ್ಟು ಇಂಪ್ಯಾಕ್ಟ್ ಮಾಡುವ ಲುಕ್, ನಟನೆ ಅವರೆಲ್ಲರಿಗಿದೆ

- ಕಡೆಯವರೆಗೆ ಕೊಂಚವೂ ಸುಳಿವು ಬಿಟ್ಟುಕೊಡದ ಸಿನಿಮಾದ ಕಥೆ, ಚಿತ್ರಕಥೆ

- ಕುತೂಹಲ ಹೆಚ್ಚಿಸುವ ಸನ್ನಿವೇಶಗಳಿಗೆ ತಕ್ಕಂತೆ ಅಳವಡಿಸಲಾದ ಸೂಕ್ತ ಹಿನ್ನೆಲೆ ಸಂಗೀತ

- ಥ್ರಿಲ್ಲರ್ ಕಥೆ ಅತ್ತಿತ್ತ ಹೋಗದಂತೆ ಎಲ್ಲೂ ತುರುಕದ ಲವ್ ಸ್ಟೋರಿ ಅಥವ ಪಾತ್ರಗಳ ಪರ್ಸನಲ್ ಕಥೆಗಳು

- ಅವಶ್ಯಕತೆ ಇಲ್ಲದಿರುವುದರಿಂದ ಯಾವುದೇ ಹಾಡು ಇಲ್ಲದಿರುವುದು

- ಸಿನಿಮಾದ ನಾಯಕನ ಶೌರ್ಯದ ಗುಣಗಾನ ಮಾಡಲೆಂದೇ ಅನಗತ್ಯ ದೃಶ್ಯಗಳನ್ನು ತೋರಿಸದೆ ಅವನಿಗೂ ತನ್ನ ಕೆಲಸ ಸವಾಲಿನಂತೆ ಮಾಡುವುದು.

- ಬೇಕೆಂದೇ ಪ್ರೇಕ್ಷಕನನ್ನು ಬೇರೆ ಕಡೆ ಯೋಚಿಸುವಂತೆ ಮಾಡಲು ಇಟ್ಟ ಕೆಲವು ಒಳ್ಳೆಯ ಅಂಶಗಳು

- ಮುಖ್ಯ ಅಪರಾಧಿಯನ್ನು ಎಲ್ಲರ ಒಟ್ಟಿಗೆ ತೋರಿಸದೆ ಒಂದು ಒಳ್ಳೆಯ ದೃಶ್ಯದಲ್ಲಿ ಸಂಕಲನದ ಕೈಚಳಕದೊಂದಿಗೆ ತೋರಿಸುವುದು. ಅಲ್ಲಿನ ಆ ಶಾಟ್ ಕಂಪೋಸ್ ಮಾಡಿದ ರೀತಿ ಸಕ್ಕತ್.

- ಬರೀ ಎರಡು ಗಂಟೆಗಳ ಸಿನಿಮಾ. ಥ್ರಿಲ್ಲರ್ ಸಿನಿಮಾಗಳು ಇರಬೇಕಾದ ಕಾಲಾವಧಿಯೇ ಇದು.

ಹೀಗೆ ಒಳ್ಳೆಯ ಸಸ್ಪೆನ್ಸ್ ಕ್ರೈಮ್ ಥ್ರಿಲ್ಲರ್ ಸಿನಿಮಾ ಒಂದಕ್ಕೆ ಬೇಕಾಗುವ ಸರಿಸುಮಾರು ಎಲ್ಲ ಅಂಶಗಳು ಈ ಸಿನಿಮಾದಲ್ಲಿವೆ. ಎಲ್ಲಕ್ಕಿಂತ ಹೆಚ್ಚಾಗಿ ವಿಜಯ್ ರಾಘವೇಂದ್ರ ಅವರಿಗೆ ಇದು ಐವತ್ತನೇ ಸಿನಿಮಾವಂತೆ. ಯಶಸ್ವಿಯಾಯಿತೋ ಇಲ್ಲವೋ ಆದರೆ ಖಂಡಿತ ಒಂದು ಇಂಟೆರೆಸ್ಟಿಂಗ್ ಅನ್ನಿಸುವ ಸಿನಿಮಾವನ್ನೇ ತಮ್ಮ ಮೈಲುಗಲ್ಲಿನ ಸಿನಿಮಾವನ್ನಾಗಿ ಆಯ್ದುಕೊಂಡಿದ್ದಾರೆ. ಹಾಗಿದೆ ಈ ಸಿನಿಮಾದ ಓಟ. ವಿಜಯ್ ರಾಘವೇಂದ್ರ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದಷ್ಟು ಚೆನ್ನಾಗಿ ಅಭಿನಯಿಸಿದ್ದಾರೆ. ಕನ್ನಡದಲ್ಲಿ ಕ್ರೈಮ್-ಸಸ್ಪೆನ್ಸ್-ಥ್ರಿಲ್ಲರ್ ಸಿನಿಮಾಗಳು ಬರುವುದೇ ಬಹಳಷ್ಟು ಕಡಿಮೆ. ಹಾಗಾಗಿಯೇ ಈ ಥರ ಸಿನಿಮಾಗಳನ್ನು ನೋಡುವಾಗ ಎಷ್ಟೋ ದಿನದಿಂದ ಉಪವಾಸ ಬಿದ್ದವರು ತಿನ್ನುವಂತೆ ನೋಡುವಂತಾಯಿತು. ಸಿನಿಮಾ ನಿಜಕ್ಕೂ ತುಂಬಾ ಚೆನ್ನಾಗಿದೆ. ಥ್ರಿಲ್ಲರ್ ಸಿನಿಮಾಗಳನ್ನು ಮಾಡಲು ನಿಜಕ್ಕೂ ಒಳ್ಳೆಯ ಅನುಭವ ಇರಬೇಕು. ಆದರೆ ದೇವಿಪ್ರಸಾದ್ ಶೆಟ್ಟಿ ಅನ್ನುವವರು ಇದು ಅವರ ಮೊದಲ ನಿರ್ದೇಶನದ ಸಿನಿಮಾ ಆಗಿದ್ದರೂ ಎಲ್ಲೂ ಆ ಅನುಮಾನ ಬರದಂತೆ ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ.

ಈ ಸಿನಿಮಾದ ಕಥೆಯಲ್ಲಿ ಕಂಡ ಕೊರತೆ ಒಂದೇ. ಅಷ್ಟು ಖಡಕ್ ಸಬ್-ಇನ್ಸ್'ಪೆಕ್ಟರ್ ಸೀತಾರಾಮ್ ಎರಡು ಪ್ರಮುಖ ದೃಶ್ಯಗಳಲ್ಲಿ ಆರೋಪಿಯನ್ನು ಕಣ್ಣ ಮುಂದೆಯೇ ಕಂಡು ಹಿಡಿಯಲಾಗದೆ ನಿರಾಶೆ ಹೊಂದುತ್ತಾರೆ. ಅಲ್ಲಿ ಅದನ್ನು ಅರಗಿಸಿಕೊಳ್ಳಲಾಗಲಿಲ್ಲ. ಕ್ಲೈಮ್ಯಾಕ್ಸ್ ದೃಶ್ಯದ ಹೊಡೆದಾಟದಲ್ಲೂ ಅವರು ಹೋರಾಡಲು ಅಶಕ್ತರೇನೋ ಅನ್ನುವ ಹಾಗೆ ಅವರ ಪಾತ್ರವಿದೆ. ಅದು ಸಮಾಧಾನ ತರಲಿಲ್ಲ. ಅತ್ತ ಹೋರಾಡುವುದೂ ಇಲ್ಲ, ಇತ್ತ ಅವರ ಕೈಯಲ್ಲಿ ಒಂದು ಗನ್ ಕೂಡ ಇಲ್ಲ ಅನ್ನುವುದು ಅವರನ್ನು ಪೊಲೀಸ್ ಅಂತ ಅರಗಿಸಿಕೊಳ್ಳಲು ಅಸಾಧ್ಯ ಅನ್ನುವಂತೆ ಆ ಪಾತ್ರ ಮತ್ತು ಆ ಕಥೆಯ ದೃಶ್ಯ ಇದೆ. ಇದು ಸರಿಯಿದ್ದರೆ ನಿಜಕ್ಕೂ ಸಿನಿಮಾ ಇನ್ನೇನೋ ಆಗಿರುತ್ತಿತ್ತು.

ಈಗಲೂ ಇದು ಎಂಥೆಂಥದ್ದೋ ಆಗಿಲ್ಲ. ನಿಜಕ್ಕೂ ಖುಶಿ ಕೊಟ್ಟಿತು. ಈ ಥರದ ಒಳ್ಳೆಯ (ಇನ್ವೆಸ್ಟಿಗೇಶನ್, ಕ್ರೈಮ್, ಸಸ್ಪೆನ್ಸ್) ಥ್ರಿಲ್ಲರ್ ಸಿನಿಮಾಗಳು ಆಗಾಗ ಬರುತ್ತಿರಬೇಕು. ಅದಕ್ಕೆಂದೇ ನನ್ನಂತಹ ಅಭಿಮಾನಿಗಳಿದ್ದಾರೆ.

ನೀವಿನ್ನೂ ನೋಡಿರದಿದ್ದರೆ ಅಮೇಜಾನ್ ಪ್ರೈಮ್'ನಲ್ಲಿದೆ. ಮಿಸ್ ಮಾಡದೆ ನೋಡಿ.

-Santhosh Kumar LM
20-Jan-2022