Wednesday, December 28, 2022

Jaya Jaya Jaya Jaya Hey (Malayalam, 2022)

 


Jaya Jaya Jaya Jaya Hey (Malayalam, 2022)

ಅವಳು ಹೆಣ್ಣು. ಅದಕ್ಕಾಗಿಯೇ ಅವಳನ್ನು ಅವಳು ಕಾಪಾಡಿಕೊಳ್ಳುವ ಶಕ್ತಿಯಿದ್ದರೂ ಹೆಣ್ಣೆಂಬ ಕಾರಣಕ್ಕೆ ಅವಳ ರಕ್ಷಣೆಗೆ ನಾವು (ಪುರುಷಪ್ರಧಾನ ಸಮಾಜ) ನಿಲ್ಲುತ್ತೀವಿ. ಅವಳಿಗೆ ತನಗೇನು ಬೇಕು ಅಂತ ಗೊತ್ತು. ಆದರೂ ಅವಳಿಗೇನು ಬೇಕು ಅಂತ ನಾವು ನಿರ್ಧರಿಸ್ತೀವಿ. ಅವಳಿಗೆ ಯಾರ ಜೊತೆ ಮಾತನಾಡಬೇಕು, ಹೇಗೆ ಮಾತನಾಡಬೇಕು ಅಂತ ಕಲಿತುಕೊಳ್ಳಬಲ್ಲಳು. ಆದರೂ ಆಕೆ ಹೆಣ್ಣು ಎಂಬ ಕಾರಣದಿಂದ ನಾವೇ ಅವಳು ಯಾರೊಂದಿಗೆ ಮಾತನಾಡಬೇಕು ಅನ್ನುವುದನ್ನು ಡಿಸೈಡ್ ಮಾಡ್ತೀವಿ. ನಮಗೆ ಗೊತ್ತಿರದಿದ್ದರೂ ಅನೇಕ ವಿಷಯಗಳಲ್ಲಿ ಅವಳಿಗಿಂತ ಮುಂದೆ ಹೋಗಿ ಅವಳಿಗಾಗಿ ಕೆಲವು ಕಟ್ಟುಪಾಡುಗಳನ್ನು ವಿಧಿಸುತ್ತೇವೆ. ಏಕೆಂದರೆ ಆಕೆ ಹೆಣ್ಣಲ್ಲವೇ. ನಾವು ಮಾಡುವುದೆಲ್ಲ ಅವಳಿಗಾಗಿ ತಾನೇ? ಹಾಗಾಗಿ ಅವಳಿಗೆ ಅವುಗಳಿಂದ ತೊಂದರೆಯಾಗುತ್ತಿದ್ದರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಕಡೆಗೆ ನಾವು ತೆಗೆದುಕೊಂಡ ನಿರ್ಧಾರಗಳು ಅವಳಿಗೆ ಕುತ್ತಾದರೂ ಅದಕ್ಕೆ ಹೆಚ್ಚು ನೊಂದುಕೊಳ್ಳುವುದಿಲ್ಲ. ಏಕೆ ಹೇಳಿ? ಅವೆಲ್ಲ ಅವಳ ಒಳಿತಿಗಾಗಿ ತೆಗೆದುಕೊಂಡ ನಿರ್ಧಾರಗಳು ತಾನೇ?

ಇವೆಲ್ಲವನ್ನೂ ಮಾಡುವಾಗ ಅವಳಿಗೆ ಸಿಗಬೇಕಾದ ಸಮಾನತೆ, ಸ್ವಾತಂತ್ರ್ಯತೆ, ನ್ಯಾಯದ ಬಗ್ಗೆ ಕಿಂಚಿತ್ತೂ ಯೋಚಿಸಿರುವುದಿಲ್ಲ. ಏಕೆಂದರೆ ಇವೆಲ್ಲವನ್ನೂ ಕಿತ್ತುಕೊಂಡೇ ಉಳಿದ ಒಳಿತಿನ ಬಗ್ಗೆ ಯೋಚಿಸುತ್ತೇವೆ. ಎಷ್ಟು ಹಾಸ್ಯಾಸ್ಪದ ಅಲ್ಲವೇ?

ಹೊರಗೆ ಹೋಗಿ ಸಂಪಾದನೆ ಮಾಡುತ್ತೇವೆ ಅನ್ನೋ ಕಾರಣಕ್ಕೆ ಮನೆಯೊಳಗಿನ ಹೆಂಡತಿ ಗಂಡನಿಗೆ ತಗ್ಗಿ ಬಗ್ಗಿ ನಡೆಯಬೇಕು. ನಾಲ್ಕು ಬಿಗಿದರೂ ಆಕೆ ಮರುಮಾತಾಡದೆ ಸಹಿಸಿಕೊಳ್ಳಬೇಕು. ಮನೆಯನ್ನೂ ಸಂಭಾಳಿಸಿ, ಹೊರಗೆ ಕೆಲಸವನ್ನೂ ಮಾಡುತ್ತೇನೆ ಅಂದಳಾ? ಮುಗೀತು. ಏಕೆಂದರೆ ನಮ್ಮ ಪುರುಷ ಅಹಮ್ಮಿನ ಬುಡಕ್ಕೇ ಅದು ಕೊಡಲಿಯೇಟು ನೀಡುತ್ತದೆ. ನಿನ್ನ ದುಡ್ಡಿನಲ್ಲಿ ನಾನು ತಿನ್ನಬೇಕಾ ಅಂತ! ಜೊತೆಗೆ ಅವಳಿಗೆ ಆರ್ಥಿಕ ಸ್ವಾತಂತ್ರ್ಯ ಸಿಕ್ಕರೆ ಮುಗೀತು. ನನ್ನ ನಿಯಂತ್ರಣಕ್ಕೆ ಎಲ್ಲಿ ಸಿಕ್ಕಾಳು? ಅಲ್ಲವೇ?! ಎಲ್ಲ ವಿಷಯಗಳಲ್ಲೂ ಅವಳನ್ನು ಕಟ್ಟಿಹಾಕಿ ಕಡೆಗೊಮ್ಮೆ ಅವಳಿಗೆ ಏನೂ ಬರುವುದಿಲ್ಲವೆಂದು ಹಣೆಪಟ್ಟಿ ಕಟ್ಟಿದರಾಯಿತು.

ನಾವೆಲ್ಲ ಮುಂದಿನ ಪೀಳಿಗೆಯಲ್ಲಿದ್ದೇವೆ. ಎಲ್ಲೂ ಹೀಗೆ ನಡೆಯುತ್ತಿಲ್ಲ ಅಂದುಕೊಂಡರೆ ಅದು ಭ್ರಮೆಯಷ್ಟೇ. ಅನೇಕ ಕಡೆ ಇಷ್ಟಿಲ್ಲದಿದ್ದರೂ ಇದರ ಅರ್ಧದಷ್ಟಾದರೂ ಅವಳು ಹಾಗೇ ಇದ್ದಾಳೆ. ಅನೇಕ ಮನೆಗಳಲ್ಲಿ ಅವಳಿಗೆ ತನ್ನ ಮನೆಯವರಿಂದಲೇ ಸ್ವಾತಂತ್ರ್ಯ ಸಿಗದೆ "ಮದುವೆಯಾದರೆ ಸಾಕು" ಅಂತ ತಾನೇ ಅಂದುಕೊಂಡಿರುತ್ತಾಳೆ. ಮುಂದೆ ಅವಳು ಮದುವೆಯಾದ ಮನೆಯಲ್ಲೂ ಹೀಗೇ ಆದರೆ?

ಹೀಗೊಂದು ಕಥೆಯನ್ನು ಸಿನಿಮಾದಲ್ಲಿ ಅಳವಡಿಸಿಕೊಳ್ಳೋಣ ಅಂದುಕೊಂಡರೆ ಅದೆಷ್ಟು ಗೋಳಿನ ಸಿನಿಮಾವಾದೀತು ತಾನೇ? ಖಂಡಿತ ಇಲ್ಲ. ನಮ್ಮೆಲ್ಲ ಊಹೆಯನ್ನು ಮೀರಿ ಎರಡೂವರೆ ಘಂಟೆ ಪೂರ್ತಿ ನಕ್ಕು ನಗಿಸುವ ಕಥೆಯನ್ನಿಟ್ಟು ಸಿನಿಮಾ ಮಾಡಿದ್ದಾರೆ ನಿರ್ದೇಶಕ ವಿಪಿನ್ ದಾಸ್ (Vipin Das). ಮೇಲೆ ಮೇಲೆ ಪ್ರತೀ ದೃಶ್ಯದಲ್ಲೂ ನಾವು ನಗುತ್ತಿದ್ದರೆ ನಮ್ಮೊಳಗಿನ ಅವನು ತನ್ನ ಮೇಲೆ ತಾನೇ ನಾಚಿಕೆಪಟ್ಟುಕೊಳ್ಳುತ್ತಾನೆ. ಅನೇಕ ಸಲ ಗಂಭೀರವಾಗಿ ಹೇಳಲಾಗದ ವಿಷಯಗಳನ್ನು ಹಾಸ್ಯದ ಮೂಲಕವೇ ಮನಮುಟ್ಟುವಂತೆ ಹೇಳಬಹುದು. ಅದಕ್ಕೊಂದು ಒಳ್ಳೆಯ ಉದಾಹರಣೆ "ಜಯ ಜಯ ಜಯ ಜಯ ಹೇ" ಸಿನಿಮಾ.

ಇಷ್ಟರವರೆಗೂ ಬರೆದಿದ್ದೆಲ್ಲ ಈ ಸಿನಿಮಾದ ಪೂರ್ತಿ ಕಥೆಯಲ್ಲ. ಬರೀ ಆರಂಭ ಅಷ್ಟೇ. ಮೊದಲ ಇಪ್ಪತ್ತು ನಿಮಿಷ ಯಾವುದೋ ಗೋಳಿನ, ಸಾಮಾಜಿಕ ಸಂದೇಶವುಳ್ಳ ಸಿನಿಮಾ ನೋಡುತ್ತೀವೇನೋ ಅನ್ನುವ ಭಾಸವಾಗುತ್ತಿರುವಂತೆಯೇ ಇದ್ದಕ್ಕಿದ್ದ ಹಾಗೆ ಸಿನಿಮಾ ತನ್ನ ದಿಕ್ಕು ಬದಲಿಸುತ್ತದೆ. ಅಲ್ಲಿಂದ ನಿಜವಾದ ಮನರಂಜನೆ. ಇಲ್ಲಿರುವ ಹಾಸ್ಯವೂ ಅಷ್ಟೇ. ಸಿಲ್ಲಿ ಅನ್ನಿಸುವುದಿಲ್ಲ. ಸಿನಿಮಾದೊಳಗಿನ ಪಾತ್ರಧಾರಿ ನಗದಿದ್ದರೂ ಅವನನ್ನು ನೋಡುತ್ತಿರುವ ನಾವು ಮಾತ್ರ ಬಿದ್ದೂ ಬಿದ್ದೂ ನಗುತ್ತಿರುತ್ತೇವೆ. ಸಿನಿಮಾ ನೋಡುವಾಗ ನಕ್ಕೂ ನಕ್ಕೂ, ಸಿನಿಮಾ ಮುಗಿದ ಮೇಲೆ ಅದರೊಳಗಿನ ವಿಷಯದ ಬಗ್ಗೆ ಮತ್ತೆ ಮತ್ತೆ ಯೋಚಿಸುತ್ತೇವೆ. ಅದು ಸಿನಿಮಾ ಗೆದ್ದ ಸೂಚನೆ.

ಚಿಕ್ಕಮಕ್ಕಳನ್ನು ಬೇಕಾದರೂ ಜೊತೆಯಲ್ಲಿ ಕೂರಿಸಿಕೊಂಡು ನೋಡುವ ರೀತಿ ಸಿನಿಮಾ ಕಟ್ಟಿಕೊಡಲಾಗಿದೆ. ಈ ಸಿನಿಮಾದ ವಿಶೇಷವೆಂದರೆ ಇದರ ಸಬ್ಜೆಕ್ಟ್ ಮೆಸೇಜ್ ಕೊಡುವಂತಿದ್ದರೂ ಇಡೀ ಕುಟುಂಬದ ಸಮೇತ ಕುಳಿತು ಮನಬಂದಂತೆ ನಗುತ್ತ ನೋಡುವಂತೆ ಕಥೆ ಹೆಣೆಯಲಾಗಿದೆ. ದರ್ಶನ ರಾಜೇಂದ್ರನ್ (Darshana Rajendran) ಮತ್ತು ಬ್ಯಾಸಿಲ್ ಜೋಸೆಫ್ (Basil Joseph) ಅವರದು ಸಂಪೂರ್ಣ ಮೈಮರೆಸುವ ಅಭಿನಯ. ಈ ಚಿತ್ರಕಥೆ ಬರೆದ ರೀತಿ, ಅದನ್ನು ಕಾರ್ಯಗತಗೊಳಿಸಿರುವ ರೀತಿ ನಿಜಕ್ಕೂ ಖುಶಿಕೊಡುವಂಥದ್ದು. ಎಲ್ಲರೂ ನೋಡಲೇಬೇಕಾದ, ನೋಡಿ ಆನಂದಿಸಬೇಕಾದ, ಮುಗಿದ ಮೇಲೆ ಅಲೋಚಿಸಬೇಕಾದ ಸಿನಿಮಾ.

ಖಂಡಿತವಾಗಿ ಈ ವರ್ಷದ ಮಿಸ್ ಮಾಡಿಕೊಳ್ಳಬಾರದ ಸಿನಿಮಾಗಳ ಪಟ್ಟಿಯಲ್ಲಿ ಇದೂ ಸೇರಿಕೊಳ್ಳುತ್ತದೆ. ನೋಡಬೇಕೆನ್ನುವವರಿಗೆ Hotstar ನಲ್ಲಿದೆ. ನೋಡಿ!

-Santhoshkumar LM
28-Dec-2022







Friday, December 2, 2022

ಧರಣಿ ಮಂಡಲ ಮಧ್ಯದೊಳಗೆ (Kannada, 2022)

ಪ್ರೀತಿಯಿದೆಕೋ, ನೀತಿಯಿದೆಕೋ
ಹಲವು ಕಥೆಗಳ ಸುರುಳಿಯಿದೆಕೋ
ಪ್ರೇಕ್ಷಕಪ್ರಭು ನೀನಿದೆಲ್ಲವನುಂಡು ಸಂತಸದಿಂದಿರು.........


-ಧರಣಿ ಮಂಡಲ ಮಧ್ಯದೊಳಗೆ!



🍀🍀🍀🍀🍀🍀🍀


ಧರಣಿ ಮಂಡಲ ಮಧ್ಯದೊಳಗೆ! (ಕನ್ನಡ, 2022)


ಈ ಸಿನಿಮಾದಲ್ಲಿ ನೂರಾರು ಪಾತ್ರಗಳಿವೆ. ಯಾವ ಪಾತ್ರದ ಹೆಸರನ್ನೂ ನಾವು ನೆನಪಿನಲ್ಲಿಟ್ಟುಕೊಳ್ಳುವ ಅಗತ್ಯವಿಲ್ಲ. ಏಕೆಂದರೆ ಕಥೆಯೇ ಯಾವುದೇ ಗೊಂದಲವಿರದಂತೆ ಎಲ್ಲವನ್ನೂ ಸ್ಪಷ್ಟವಾಗಿ ಹೇಳಿ ಮುಗಿಸುತ್ತದೆ. ಅಷ್ಟು ಪಾತ್ರಗಳಿದ್ದರೂ ಈ ಸಿನಿಮಾದ ಹೀರೋ ಯಾರೆಂದರೆ ನೀವು ಯಾರೆಂದು ಹೇಳಲಾಗುವುದಿಲ್ಲ. ಇಲ್ಲಿ ಯಾರೂ ಹೀರೋ ಅಲ್ಲ. ಆದರೆ ಪ್ರಮುಖ ಎನಿಸುವ ಅನೇಕ ಪಾತ್ರಗಳಿವೆ. ವ್ಹಾವ್ ಅನ್ನಿಸುವ ಸಿನಿಮಾವೊಂದರ ಭಾಗವಾಗಿದ್ದಕ್ಕೆ ಕಾರಣರಾದ ಎಲ್ಲ ಕಲಾವಿದರಿಗೆ ನಾವು ಮೆಚ್ಚುಗೆ ಸೂಚಿಸಬೇಕು.


ಮೊನ್ನೆಯಷ್ಟೇ ತಮಿಳಿನ ಲೋಕೇಶ್ ಕನಕರಾಜ್ ಚೊಚ್ಚಲ ನಿರ್ದೇಶನದ ಸಿನಿಮಾ ಮಾನಗರಮ್(೨೦೧೭) ನೋಡಿದೆ. ಅಲ್ಲಿನ ಚಿತ್ರಕಥೆ ಹೆಣೆದ ರೀತಿ ವ್ಹಾವ್ ಅನ್ನಿಸಿತ್ತು. ಈ ಥರದ ಸಿನಿಮಾ ನಮ್ಮಲ್ಲಿ ಬರಲಿ ಅಂದುಕೊಳ್ಳುವಷ್ಟರಲ್ಲಿ ಉತ್ತರವಾಗಿ "ಧರಣಿ ಮಂಡಲ ಮಧ್ಯದೊಳಗೆ" ಸಿನಿಮಾ ಬಂದಿದೆ. ಕಾಕತಾಳೀಯವೆಂಬಂತೆ ಈ ಸಿನಿಮಾದ ನಿರ್ದೇಶಕ ಶ್ರೀಧರ್ ಶಿಕಾರಿಪುರ ಅವರಿಗೂ ಇದು ಚೊಚ್ಚಲ ನಿರ್ದೇಶನದ ಸಿನಿಮಾ. ಸಿನಿಮಾ ನೋಡಿದ ಮೇಲೆ ಹಾಗೆಂದು ನಂಬಲು ಸಾಧ್ಯವಾಗುವುದಿಲ್ಲ. ಏಕೆಂದರೆ ಈ ಸಿನಿಮಾದ ಚಿತ್ರಕಥೆಯನ್ನೊಮ್ಮೆ ನೆನಪಿಸಿಕೊಂಡರೆ ಅದನ್ನು ಹೆಣೆಯಲು ಅದೆಷ್ಟು ಮೆದುಳಿಗೆ ಕೆಲಸ ಕೊಟ್ಟಿರಬಹುದು ಅಂತ ಅಚ್ಚರಿಯಾಗುತ್ತದೆ. ಹೈಪರ್'ಲಿಂಕ್ ಚಿತ್ರಕಥೆಯ ಮಾದರಿಯಲ್ಲಿ ಚಿತ್ರಕಥೆ ಬರೆದಿರುವ ಸಿನಿಮಾ ಇದು. ನಿರ್ದೇಶಕರ ಜೊತೆಗೆ ಇಂಥದ್ದೊಂದು ಕುತೂಹಲಕಾರಿ ಚಿತ್ರಕಥೆಗೆ ಸೂಕ್ತ ಅನ್ನಿಸಿಕೊಳ್ಳುವ ಸಂಗೀತ ಕೊಟ್ಟಿರುವ ರೊನಾಡ ಬಕ್ಕೇಶ್, ಮತ್ತು ಅಷ್ಟೆಲ್ಲ ಸಂಕೀರ್ಣವಾದ ಚಿತ್ರಕಥೆಯನ್ನು ಸರಿಯಾಗಿ ಜೋಡಿಸಿರುವ ಸಂಕಲನಕಾರ ಉಜ್ವಲ್ ಚಂದ್ರ ಅವರಿಗೆ ಅಭಿನಂದನೆಗಳು.


ಒಂದಷ್ಟು ಕಥೆಗಳು ಒಟ್ಟೊಟ್ಟಿಗೆ ಶುರುವಾಗುತ್ತವೆ. ಮೊದಲ ನಲ್ವತ್ತು ನಿಮಿಷಗಳಲ್ಲಿ ಒಂದಾದ ಮೇಲೆ ಒಂದೊಂದು ಕಥೆಗಳು ಪರಿಚಯವಾಗುತ್ತ ಹೋದಂತೆ "ಏನಾಗ್ತಾ ಇದೆ. ಒಂದಕ್ಕೊಂದಕ್ಕೆ ಲಿಂಕೇ ಇಲ್ಲ" ಅಂತ ಮೂಗುಮುರಿಯುವ ಹೊತ್ತಿಗೆ ಒಮ್ಮೆಲೇ ಒಂದು ಜಾಗದಲ್ಲಿ ಅವೆಲ್ಲವನ್ನು ಒಟ್ಟಿಗೆ ಸೇರಿಸುತ್ತಾನೆ ನಿರ್ದೇಶಕ. ನೋಡುವಾಗ ಇದಕ್ಕಿದ್ದಂತೆ "ವ್ಹಾವ್" ಅನ್ನಿಸುತ್ತದೆ. ನಂತರದ್ದು ಸಿನಿಮಾ ಮುಗಿಯುವವರೆಗೆ ಸಂಪೂರ್ಣ ಥ್ರಿಲ್ಲರ್ ಪಯಣ. ಅವೆಲ್ಲ ಕಥೆಗಳನ್ನು ಹೇಳುವಾಗ ಅವೆಲ್ಲವೂ ಒಂದೇ ವಿಷಯದಲ್ಲಿ ಸಂಧಿಸುವಾಗ, ಅಥವ ಒಂದೇ ಜಾಗದಲ್ಲಿ ಸಂಧಿಸುವಾಗ ಚಿತ್ರಕಥೆ ಬರೆದವರ ಬಗ್ಗೆ ಮೆಚ್ಚುಗೆಯಾಗದೆ ಇರದು. ಶ್ರೀಧರ್ ಶಿಕಾರಿಪುರ, ನಿಮ್ಮ ಕೆಲಸ ಹೀಗೇ ಮುಂಂದುವರೆಯಲಿ. ಸಿನಿಮಾ ಮುಗಿದ ಮೇಲೊಮ್ಮೆ ಮೆಲುಕು ಹಾಕಿ ನೋಡಿದರೆ ಕಥೆಯಲ್ಲಿ ಬರುವ ಪ್ರತಿ ಪಾತ್ರಗಳು ಒಂದನ್ನೊಂದು ಎಲ್ಲಿಯಾದರೂ ಸಂಧಿಸುತ್ತವೆ.


ಮಧ್ಯಂತರಕ್ಕೆ ಮುನ್ನ ಒಂದು ದೃಶ್ಯವಿದೆ. ಮೊದಲ ಬಾರಿಗೆ ಡ್ರಗ್ಸ್'ನ ಬಳಸುವ ಯುವಕನೊಬ್ಬನ ಅನುಭವ ಹೇಳುವಂಥದ್ದು. ಅಲ್ಲಿನ ಕಥೆಯನ್ನು ನಿರೂಪಿಸಿರುವ ರೀತಿಗೆ ನಿಜಕ್ಕೂ ಹ್ಯಾಟ್ಸಾಫ್ ಹೇಳಲೇಬೇಕು. ನಿರ್ದೇಶಕರು ಅಕ್ಷರಶಃ ಆ ದೃಶ್ಯವನ್ನು ನಮಗೆ ಕಟ್ಟಿಕೊಟ್ಟಿದ್ದಾರೆ. ಆ ದೃಶ್ಯದಲ್ಲಿ ಸಿದ್ದು ಮೂಲಿಮನಿ ಅನ್ನುವ ಹುಡುಗ ತನ್ನ ಅದ್ಭುತ ಅಭಿನಯದಿಂದ ಗಮನ ಸೆಳೆಯುತ್ತಾನೆ. ಆ ದೃಶ್ಯ ಮುಗಿಯುವ ಹೊತ್ತಿಗೆ ಎಲ್ಲಿಗೋ ಹೋಗಿ ಬಂದಂತೆ ಭಾಸವಾಗುತ್ತದೆ. ಗುಲ್ಟೂ ಸಿನಿಮಾ ನೋಡಿದ್ದಾಗಲೇ ನವೀನ್ ಶಂಕರ್ ಇಷ್ಟವಾಗಿದ್ದರು. ಈ ಸಿನಿಮಾದಲ್ಲಿ ಅವರನ್ನು ನೋಡಿದ ಮೇಲೆ ಅವರ ಸ್ಕ್ರಿಪ್ಟ್ ಆಯ್ಕೆಗಳ ಬಗ್ಗೆ ಮೆಚ್ಚುಗೆಯಾಗುತ್ತದೆ. ಏಕೆಂದರೆ ತನಗೆ ಕಥೆಯಲ್ಲಿ ಏನಿದೆ ಅಂತ ಹೋಗುವುದಕ್ಕಿಂತ ಕಥೆಗೆ ತಾನೇನು ಕೊಡುಗೆ ನೀಡಬಲ್ಲೆ ಅನ್ನುವ ಕಲಾವಿದರು ಈಗ ನಮ್ಮೆಲ್ಲರಿಗೂ ಬೇಕು. ಖಳನ ಪಾತ್ರಗಳಲ್ಲೇ ಕಾಣಿಸಿಕೊಳ್ಳುತ್ತಿದ್ದ ಯಶ್ ಶೆಟ್ಟಿಗೆ ಇಲ್ಲಿ ಬೇರೆಯದೇ ಛಾಯೆಯಿರುವ ನಮಗೆಲ್ಲರಿಗೂ ಇಷ್ಟವಾಗುವ ಪಾತ್ರವಿದೆ. ಸಿನಿಮಾದಲ್ಲಿ ಇಷ್ಟವಾದ ಮತ್ತೊಂದು ಅಬ್ಬರಿಸಿ ಭಯಪಡಿಸುವ ಖಳನ ಪಾತ್ರ ಬಾಲ ರಾಜ್ವಾಡಿಯವರದು. ಈಗಾಗಲೇ ಹೇಳಿದಂತೆ ಈ ಸಿನಿಮಾದಲ್ಲಿ ನವೀನ್ ಶಂಕರ್, ಐಶಾನಿ ಶೆಟ್ಟಿ, ಯಶ್ ಶೆಟ್ಟಿ, ಸಿದ್ದು ಮೂಲಿಮನಿ, ಪ್ರಕಾಶ್ ತುಮಿನಾಡ್, ಬಾಲ ರಾಜ್ವಾಡಿ, ಮೋಹನ್ ಜುನೇಜ, ಕರಿಸುಬ್ಬು, ಮಹಂತೇಶ್ ಹೀರೇಮಠ್ ಸೇರಿದಂತೆ ಅನೇಕ ನಟರಿದ್ದಾರೆ. ಸಿನಿಮಾ ಕಥೆಯೇ ಮುಖ್ಯವಾದ ಮೇಲೆ ನಿರ್ದೇಶಕ ಸೇರಿದಂತೆ ಉಳಿದವರೆಲ್ಲರೂ ಅದನ್ನು ಮತ್ತಷ್ಟು ಚಂದಗೊಳಿಸಲು ಶ್ರಮಿಸುವ contributors ಅಷ್ಟೇ!


ಸಿನಿಮಾದ ನೆಗೆಟಿವ್ ಅಂತ ಏನೂ ನನಗನ್ನಿಸಲಿಲ್ಲ. ಹಾಸ್ಯ ದೃಶ್ಯಗಳು ಇನ್ನಷ್ಟು ನಗಿಸುವಷ್ಟು ಚೆನ್ನಾಗಿರಬಹುದಿತ್ತು ಅನ್ನಿಸಿದ್ದು ಬಿಟ್ಟರೆ ಉಳಿದದ್ದೇನೂ ಇಲ್ಲ. ವೇಗವಾಗಿ ಸಾಗುವ ಚಿತ್ರಕಥೆ ಉಳಿದದ್ದೆಲ್ಲವನ್ನು ಹಿಂದೆ ಹಾಕುತ್ತದೆ. ಈ ಸಿನಿಮಾದ ಚಿತ್ರಕಥೆ ಹೇಗಿದೆ ಎಂದರೆ ಒಂದೆರಡು ದೃಶ್ಯ ಮಿಸ್ ಮಾಡಿಕೊಂಡರೂ ಒಂದಕ್ಕೊಂದು ಕನೆಕ್ಟ್ ಆಗುವುದಿಲ್ಲ. ಹಾಗಾಗಿ ಸಂಪೂರ್ಣ ಸಿನಿಮಾವನ್ನು ಥಿಯೇಟರಿನಲ್ಲಿ ಕೂತು ಎಂಜಾಯ್ ಮಾಡಬಹುದು ಅನ್ನುವುದಕ್ಕೆ ಸರಿಯಾದ ಸಿನಿಮಾ "ಧರಣಿ ಮಂಡಲ ಮಧ್ಯದೊಳಗೆ"!


ಇದು ಬಹುತೇಕ ಹೊಸ ಹುಡುಗರೇ ಮಾಡಿರುವ ಸಿನಿಮಾ. ಅದ್ಯಾವ ರಿಯಾಯಿತಿಯನ್ನೂ ನಾವಿವರಿಗೆ ಕೊಡುವ ಅವಶ್ಯಕತೆಯಿಲ್ಲ. ಏಕೆಂದರೆ ಇದರ ಗುಣಮಟ್ಟ ಆ ಮಟ್ಟಕ್ಕಿದೆ. ಈ ಸಿನಿಮಾವನ್ನು ಪ್ರೋತ್ಸಾಹಿಸುವುದೂ ಬೇಕಿಲ್ಲ! ಏಕೆಂದರೆ ಒಂದು ವಿಭಿನ್ನ ಚಿತ್ರಕಥೆ ಇರುವ ಕ್ರೈಮ್ ಥ್ರಿಲ್ಲರ್ ಸಿನಿಮಾ ಬೇಕೆಂದರೆ ಈ ಸಿನಿಮಾ ನೋಡಹೋದರೆ ಸಾಕು. ಸಂಪೂರ್ಣ ತೃಪ್ತಿಯಿಂದ ಹೊರಬರುತ್ತೇವೆ. ಯಾರ ಹೆಸರನ್ನೂ ಹೇಳದೇ ಬರೀ ಸಿನಿಮಾದ ಗುಣಮಟ್ಟವನ್ನಷ್ಟೇ ನಂಬಿಕೊಂಡು ಹೋಗಬಹುದಾದ ಸಿನಿಮಾ ಇದು. ಕ್ರೈಮ್ ಥ್ರಿಲ್ಲರ್'ಗಳನ್ನು ಇಷ್ಟಪಡುವವರು ಮಿಸ್ ಮಾಡಬಾರದ ಕನ್ನಡ ಸಿನಿಮಾ.


ಇಂದೇ ಚಿತ್ರಮಂದಿರದಲ್ಲಿ ನೋಡಿ ಬನ್ನಿ.


-Santhoshkumar Lm


#santhuLm
02-Dec-2022