ಟೈಮಾಯ್ತು ಧಾರೆ ಆಮೇಲೆ ಮುಂದುವರೆಯಲಿ.
ಈಗ ತಾಳಿ ಕಟ್ಟಿಸಿಬಿಡಿ ಅಯ್ನೋರೇ.
ಬೇಗ ಬೇಗ ಬಾರಪ್ಪ.....
ಯಾರಮ್ಮಾ ಅದು, ಬೇಗ ಹೋಗಿ ಈ ಮಾಂಗಲ್ಯ ತಟ್ಟೆನ ಎಲ್ಲ ಹಿರಿಯರ ಹತ್ರ ಮುಟ್ಟಿಸಿಕೊಂಡು ಬಾರಮ್ಮ.
ಇನ್ನೊಂದಿಬ್ರು ಬೇಗ ಹೋಗಿ ಅಕ್ಷತೆ ಎಲ್ಲರಿಗೂ ಹಂಚಿ.
ಸಂತು, ಬಾರಪ್ಪ ನೀನು ಎಡಗಡೆ ಕೂತ್ಕೋ.
ಲಾವಣ್ಯ ನೀನು ಈ ಕಡೆ ಕೂತ್ಕೊಳ್ಳಮ್ಮ.
ಇಡೀ ಮದುವೆ ಛತ್ರದಲ್ಲಿದ್ದ ಜನಗಳೆಲ್ಲ ಮಂಟಪದ ಸುತ್ತ ಇರುವೆಗಳು ಮುತ್ತಿಕೊಂಡಂತೆ ನಿಂತುಕೊಂಡರು.
ಇದೇನು ನಿಜವಾ?! ನನಗೇ ನಾನೇ ಕೇಳಿಕೊಂಡ ಪ್ರಶ್ನೆ!!
ಲಾವಣ್ಯ ನೀವು ಸಂತೋಷರ ಕಾಲನ್ನು ಮುಟ್ಟಿ ನಮಸ್ಕಾರ ಮಾಡ್ಕೊಳಿ.
ಅಷ್ಟರವರೆಗೆ ಸುಮ್ಮನೆ ನಿಂತಿದ್ದ ಗೆಳೆಯರು "ಮಗಾ, ನಿನ್ ಲೈಫ್ ಅಲ್ಲಿ ಮೊದಲ ಮತ್ತು ಕೊನೆ ಸಲ ಹೆಂಡತಿಯಿಂದ ನಮಸ್ಕಾರ ಮಾಡಿಸಿಕೊಳ್ಳೋದು, ಚೆನ್ನಾಗಿ ಮಾಡಿಸಿಕೊ"
ಎಲ್ಲ ಗೊಳ್ ಎಂದು ನಕ್ಕರು.
ಬೇಗ ಆ ಮಾಂಗಲ್ಯ ಇರೋ ತಟ್ಟೆ ತಗೊಳ್ಳಿ.
ಇಬ್ಬರೂ ಅದಕ್ಕೆ ವಿಭೂತಿ, ಅರಿಶಿನ, ಕುಂಕುಮ, ಹೂವು ಇಟ್ಟು ಪೂಜೆ ಮಾಡಿ.
ಇಬ್ಬರೂ ಈ ಅಕ್ಷತೆ ತಗೊಂಡು ಮಾಂಗಲ್ಯದ ಮೇಲೆ ಹಾಕಿ.
ಇಬ್ಬರೂ ಗಂಧದಕಡ್ಡಿ ಹಚ್ಚಿ ಪೂಜೆ ಮಾಡಿ.
ಸಂತೋಷ್ ಈಗ ನೀನು ಆ ಕರ್ಪೂರದ ಆರತಿ ಬೆಳಗು. ನಿಧಾನ....
ಅಜಯ್ ಸುಮ್ಮನಿರದೆ, "ಹೇಯ್ ನೋಡ್ರೋ ಸಂತೋಷನ್ ಕೈ ನಡುಗ್ತಾ ಇದೆ."
ಎಲ್ಲರೂ ಗೊಳ್ ಎಂದು ನಕ್ಕರು.
"ಪಾಪ, ನಮ್ ಹುಡುಗನ್ನ ನೋಡಿ ನಗಬೇಡ್ರಪ್ಪ, ಅವನಿಗೆ ತಾಳಿ ಕಟ್ಟಿ ಅಭ್ಯಾಸ ಇಲ್ಲ, ಇದೇ ಮೊದಲು" ಗಂಡಿನ ಕಡೆಯವರ ತಿರುಗೇಟು.
ಮತ್ತೆ ಎಲ್ಲರ ಮುಖದಲ್ಲಿ ನಗು.
ಈಗ ಸಂತೋಷ್ ಮಾಂಗಲ್ಯವನ್ನು ಕೈನಲ್ಲಿ ತಗೊಳ್ಳಪ್ಪ.
ಸರಿ, ವಾದ್ಯದವರಿಗೆ ಹೇಳಿ. ಮಂಗಳವಾದ್ಯ.......ಮಂಗಳವಾದ್ಯ.....
ಡುಂ ಡುಂ ಡುಂ ಡುಂ ಡುಂ ಡುಂ ಡುಂ ಡುಂ ಡುಂ ಡುಂ ............
==============================
11-Feb-2008
ಹೌದು, ಗೆಳೆಯರೇ, ಈ ಮೇಲಿನ ಪ್ರಸಂಗ ನಡೆದು ಇವತ್ತಿಗೆ ಸರಿಯಾಗಿ ಐದು ವರ್ಷ. ನಾನು ಮತ್ತು ನನ್ನ ಗೆಳತಿ, ಬಾಳ ಸಂಗಾತಿಗಳಾಗಿ ಒಬ್ಬರಿಗೊಬ್ಬರು ಕೈಕೈ ಹಿಡಿದ ಸಂದರ್ಭ.
ಇಡೀ ಕಲ್ಯಾಣ ಮಂಟಪ ಸಡಗರದಲ್ಲಿ ನಲಿಯುತ್ತಿದ್ದರೆ, ಮಗಳನ್ನು ಚಿಕ್ಕಂದಿನಿಂದ ಮುದ್ದಾಗಿ ಬೆಳೆಸಿ ಇನ್ನೊಬ್ಬರ ಮನೆಗೆ ಕಳುಹಿಸಿಕೊಡಲು ಹೆತ್ತವರು ಗದ್ಗದಿತರಾದ ಹೃದಯಸ್ಪರ್ಶೀ ಸಂದರ್ಭ.
ಒಂದೆಡೆ ಪ್ರೀತಿಸಿದವಳನ್ನು ಮದುವೆಯಾದೆ ಎಂಬ ಖುಷಿಯಿದ್ದರೆ, ಇನ್ನೊಂದೆಡೆ ಸಾವಿರ ಸವಾಲುಗಳ ಕೊಟ್ಟು, "ನೋಡಿಯೇಬೇಡೋಣ, ನಾನಾ, ಇಲ್ಲ ನೀನಾ?" ಅಂತ ಭುಜ ತಟ್ಟಿ ನಿಂತಿರುವ
ಜೀವನ ಒಂದು ಕಡೆ. ಬಹುಷಃ ಇದು ಎಲ್ಲರ ಜೀವನದಲ್ಲಿ ಬರುವಂತಹ ಅಮೂಲ್ಯ ಘಳಿಗೆಗಳಲ್ಲೊಂದು.
ಆ ಕ್ಷಣಗಳನ್ನು ಈಗಲೂ ನೆನೆಸಿಕೊಂಡರೆ ಮೈ ರೋಮಾಂಚನಗೊಳ್ಳುತ್ತದೆ. ಅಪ್ಪ ಕೊಡಿಸಿದ ಮೊದಲ ಡ್ರಾಯಿಂಗ್ ಬುಕ್ ನಲ್ಲಿ ಯಾವುದೇ ಚಿತ್ರ ಬರೆದಿದ್ದರೂ, ಅದನ್ನು ಕೆಲವು ವರ್ಷಗಳ ನಂತರ ತೆರೆದು ನೋಡಿದಾಗ ಮೈಪುಳಕಗೊಳ್ಳುತ್ತದೆಯಲ್ಲ ಅದೇ ರೀತಿಯ ಭಾವತರಂಗಗಳನ್ನು ಸೃಷ್ಟಿಸುವ ವಿಶೇಷ ಘಳಿಗೆಯೆಂದರೆ ಅದು.
ಇದಾಗಿ ಐದು ವರ್ಷಗಳಾಗಿವೆ ಎಂದು ನಂಬಲೂ ಕಷ್ಟವಾಗುತ್ತದೆ. ನಿಜಕ್ಕೂ ಸಂಸಾರದ ಕ್ಷಣಗಳನ್ನು ನೆಮ್ಮದಿಯಿಂದ ಕಳೆಯಬೇಕೆಂದರೆ ಸುಖ-ದುಃಖಗಳೆರಡನ್ನೂ ಒಂದೇ ರೀತಿಯಲ್ಲಿ ಸ್ವೀಕರಿಸಿ ಸಹಬಾಳ್ವೆಯಿಂದ ಜೀವನ ನಡೆಸುವ ಮನಸ್ಥಿತಿಯಿರಬೇಕು. ಗೆಲ್ಲುವ ಸೋಲುವ ಎರಡಕ್ಕೂ ಸಿದ್ಧವಿರಬಲ್ಲವರಿಗೆ ಮಾತ್ರ ಈ ವಿವಾಹ. ಬರೇ ನಾನು ಮಾತ್ರ ಗೆಲ್ಲುವೆನೆನ್ನುವ ಮನೋಭಾವದವರಿಗಲ್ಲ ಎಂಬುದು ನಾ ಕಂಡುಕೊಂಡ ಉತ್ತರ. ವಿವಾಹನಂತರದ ಜೀವನದ ಬಗ್ಗೆ ಏನೇನೋ ಹೇಳಿ ದಿಗಿಲು ಮೂಡಿಸಿದ್ದ ಗೆಳೆಯರೆಲ್ಲರೂ ಒಮ್ಮೆ ನೆನಪಾಗಿ ನಗು ಬರುತ್ತದೆ.
ಹೀಗೆಯೇ ನನ್ನ ಲಗ್ನಪತ್ರಿಕೆಯನ್ನು ನೋಡುವಾಗ ನನ್ನ ಮನಃ ಪಟಲದಲ್ಲಿ ಮೂಡಿದ ಈ ಚಿತ್ರಗಳನ್ನು ಈ ದಿನ ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ.
ನಮ್ಮ ಮೇಲೆ ನಿಮ್ಮ ಆಶೀರ್ವಾದವಿರಲಿ...ಸದಾ.
ನಿಮ್ಮವನು
ಸಂತು.
Post a Comment
Please post your comments here.