Friday, February 1, 2013

ಹಿಂಗಿದ್ರು ನಮ್ ಮೇಷ್ಟ್ರು!

(ದಿನಾಂಕ 31-ಜನವರಿ-೨೦೧೩ ರಂದು ಅವಧಿಯಲ್ಲಿ ಪ್ರಕಟವಾದ ನನ್ನ ಲೇಖನ.
 http://avadhimag.com/?p=73186)

ಆರನೇ ಕ್ಲಾಸು ನಡೆಯುತ್ತಿತ್ತು.ಸಮಾಜ ವಿಜ್ಞಾನಕ್ಕೆ ಯಾರೂ ಇಲ್ಲದ ಕಾರಣ ನಮ್ಮ ಶಾಲೆಯ ಮುಖ್ಯೋಪಧ್ಯಾಯರೇ ಆ ವಿಷಯವನ್ನೂ ತೆಗೆದುಕೊಳ್ಳುತ್ತಿದ್ದರು.ವಿದ್ಯಾರ್ಥಿಗಳು ಅಷ್ಟೊಂದು ಸೀರಿಯಸ್ ಆಗಿ ಕುಳಿತುಕೊಳ್ಳುತ್ತಿರಲಿಲ್ಲ.ಸ್ವಲ್ಪ ದಿನಗಳಲ್ಲೇ ಇದ್ದಕ್ಕಿದ್ದಂತೆ ಹೊಸ ಉಪಾಧ್ಯಾಯರ ನೇಮಕವಾಯಿತು. ಎಲ್ಲ ವಿದ್ಯಾರ್ಥಿಗಳಿಗೂ ಹೊಸ ಮೇಷ್ಟ್ರು ಹೇಗಿರುತ್ತಾರೋ ಅನ್ನುವ ಕುತೂಹಲ. ಆ ಕುತೂಹಲ ಬಹಳಷ್ಟು ದಿನ ಉಳಿಯಲಿಲ್ಲ. ನಮ್ಮ ತರಗತಿಗೂ ಅವರನ್ನೇ ಪಾಠ ಮಾಡಲು ನೇಮಕ ಮಾಡಲಾಯಿತು.

ಕ್ಲಾಸಿನಲ್ಲಿ ಇದ್ದುದರಲ್ಲೇ ನಾನು ಕೊಂಚ ಚೆನ್ನಾಗಿ ಓದುತ್ತಿದ್ದೆ. ಅಪ್ಪ ಅಮ್ಮನಿಂದ ಯಾವತ್ತೂ ಓದಿನ ವಿಷಯಕ್ಕೆ ಹೀಗೆಯೇ ಮಾಡಬೇಕು ಅಂತ ಹೇಳಿಸಿಕೊಂಡವನಲ್ಲ. ಎಂದಿಗೂ ಯಾರಿಂದಲೂ ಬೈಸಿಕೊಳ್ಳದ ನಾನು ಅವತ್ತು ಮಾತ್ರ ದೊಣ್ಣೆಯಿಂದ ಪಟಾರನೆ ಏಟು ತಿಂದಿದ್ದೆ. ಮೊದಲ ಬೆತ್ತದೇಟು ಕಣ್ಣಲ್ಲಿ ನೀರು ತರಿಸಿತ್ತು. ಮನೆಗೆ ಹೋಗಿ ಏನೂ ಆಗಿಲ್ಲದವನಂತೆ ಸುಮ್ಮನಿದ್ದೆ. ಎಲ್ಲರಿಂದಲೂ ಬಹಳ ಹೊತ್ತು ಮುಚ್ಚಿಡಲಾಗಲಿಲ್ಲ. ಅಜ್ಜಿ ಕೆಂಪಾಗಿದ್ದ ನನ್ನ ಕೈ ನೋಡಿ “ಯಾವನ ಅವ ನನ್ ಕೂಸುನ್ ಕೈಗ್ ಹೊಡದೌನು? ಅವನ್ಗೇನು ಎದೆ ಸಿರ ಮುರದೋಗಿದ್ದ?” ಅಂತ ಹೊಡೆದ ಮೇಷ್ಟ್ರಿಗೆ ಬೈದಿದ್ದರು.
(ಯಾರು ನನ್ನ ಕೂಸಿನ ಕೈಗೆ ಹೊಡೆದಿದ್ದು, ಅವನಿಗೇನು ಎದೆ ಶಿರ ಮುರಿದು ಹೋಗಿದೆಯ?– ಕೊಳ್ಳೇಗಾಲದ ನಮ್ಮ ಭಾಷೆ!!)

ಅಷ್ಟಕ್ಕೂ ಆ ಮೇಷ್ಟ್ರು ನನಗೆ ಏಟು ಕೊಟ್ಟಿದ್ದು ನನ್ನ ಬಳಿ ಪಠ್ಯಪುಸ್ತಕ ಇಲ್ಲವೆಂದಿದ್ದಕ್ಕೆ. ಶಾಲೆ ಶುರುವಾಗಿ ಒಂದೂವರೆ ತಿಂಗಳಾದರೂ ಇನ್ನೂ ಪಠ್ಯಪುಸ್ತಕ ಕೊಂಡಿರಲಿಲ್ಲ. ಕೊಳ್ಳಲು ಹಣವೂ ಇರಲಿಲ್ಲ. ಬರೀ ಮೇಷ್ಟ್ರು ಮಾಡುವ ಪಾಠ ಕೇಳಿ,ಅವರು ಕೊಡುತ್ತಿದ್ದ ನೋಟ್ಸ್ ನಿಂದಲೇ ಓದಿಕೊಳ್ಳುತ್ತಿದ್ದೆವು.ಆದರೆ ಈಗ ಹಾಗಲ್ಲ. ಹೊಸ ಮೇಷ್ಟ್ರು ಎಲ್ಲರಿಗೂ ಬಿಸಿ ಮುಟ್ಟಿಸಿದ್ದರು.ಅದೇ ನಾಳೆ ಎಲ್ಲರೂ ಅಪ್ಪ ಅಮ್ಮನಿಂದ ಸಾಲ ಮಾಡಿಸಿಯಾದರೂ ಪುಸ್ತಕ ಕೊಂಡು ತರಗತಿಯೊಳಗೆ ಕಾಲಿಟ್ಟಿದ್ದರು. ಆ ಬದಲಾವಣೆ ತಂದ ಮೇಷ್ಟ್ರ ಹೆಸರು “ಜಯಣ್ಣ”.

ಜಯಣ್ಣ ಮೇಷ್ಟ್ರು ಬಂದಾಗಿನಿಂದ ಮಕ್ಕಳ ಶಿಸ್ತು ಕೊಂಚ ಸುಧಾರಿಸಿತು. ಮುಂದಿನ ಪಿರಿಯಡ್ ಸಮಾಜವೆಂದರೆ ಇಡೀ ಕ್ಲಾಸು ನಿಶ್ಶಬ್ದ. ನಂತರದ ದಿನಗಳಲ್ಲಿ ನಿಜಕ್ಕೂ ಆ ಮೇಷ್ಟ್ರ “ಹವಾ” ಯಾವ ಮಟ್ಟಕ್ಕೆ ತಲುಪಿತ್ತೆಂದರೆ,ಒಂದು ದಿನ ಶಾಲೆ ಮುಗಿಸಿ ಮನೆಗೆ ಬಂದ ನನ್ನ ತಮ್ಮ, ನಮ್ಮಮ್ಮನಿಗೆ “ನಮ್ಮ ಜಯಣ್ಣ ಮೇಷ್ಟ್ರ ಬಗ್ಗೆ ನಿಂಗೆ ಗೊತ್ತಿಲ್ಲ. ಹೆಂಗ್ ಹೊಡಿತಾರೆ ಗೊತ್ತಾ? ದೊಣ್ಣೆ ಹಿಡ್ಕೊಂಡ್ ಬಂದ್ರೆ ನೀನೂ ಓಡಬೇಕು!!” ಅಂತ ಹೇಳಿದ್ದ.

======================================================

ಶಾಲೆ ಮುಗಿಸಿ ಕಾಲೇಜಿಗೆಂದು ಮೈಸೂರಿಗೆ ಕಾಲಿಟ್ಟಿದ್ದೆ. ಆಗ ತಾನೇ 10ನೇ ತರಗತಿ ಮುಗಿಸಿ ಶಾಲೆಯಿಂದ ಹೊರಬಂದ ಮಕ್ಕಳಿಗೆ ಅದೇನೋ ಹೊಸ ತರಹದ ಹುಮ್ಮಸ್ಸು.ಅದೇನೋ ಆ ಚಿಕ್ಕಮಕ್ಕಳು ಎಂಬ ಹಣೆಪಟ್ಟಿ ಕಳಚಿ ಕಾಲೇಜು-ಹುಡುಗರು ಎಂಬ ಹೊಸ ಹೆಸರು ಬಂದೊಡನೆ ಹಕ್ಕಿಗಳಿಗೆ ರೆಕ್ಕೆ ಬಂದ ಹಾಗಾಗಿಬಿಡುತ್ತದೆ ಮನಸು.ಯಾರಾದರೂ ಲೆಕ್ಚರರ್ ಕ್ಲಾಸಿನಲ್ಲಿ ಗಲಾಟೆ ಮಾಡುತ್ತಿದ್ದ ಅಂತ ಗದರಿಸಿದರೆ, “ಏನಪ್ಪಾ ಜಾಸ್ತಿ ಮಾತಾಡ್ತಿದ್ದೀಯ, ಹೊರಗಡೆ ಬಾ ನೋಡ್ಕೊತ್ತೀನಿ” ಅಂತ ಅವರನ್ನೇ ಗದರಿಸಿದ ಸಹಪಾಠಿಗಳೂ ಇದ್ದರು.

ಅಂತಹ ವಾತಾವರಣದಲ್ಲಿ ನವಯುವಕರ ಚಳಿಬಿಡಿಸಲೆಂದು ಬಂದ ಸಿಪಾಯಿಯೆಂದರೆ ಪ್ರೊಫೆಸರ್ ಸಾಂಬಶಿವಯ್ಯ. ಸೇನೆಯಿಂದ ನಿವೃತ್ತಿ ಪಡೆದು ಬಂಡ ನಂತರ ನಮ್ಮ ಕಾಲೇಜಿಗೆ ಪ್ರೊಫೆಸರ್ ಆಗಿ ಕಾರ್ಯ ಸಲ್ಲಿಸುತಿದ್ದರು.ಮೊದಲೇ ಮಿಲಿಟರಿ ಮ್ಯಾನ್. ಆರಡಿ ದೇಹದ, ಕಂಚಿನ ಕಂಠದ ಸಾಂಬ ಶಿವಯ್ಯ ನಡೆದು ಬರುತ್ತಿದ್ದರೆ ಪ್ರತಿಯೊಬ್ಬರಿಗೂ ಭಯವಾಗುತ್ತಿತ್ತು. ಕಾಲೇಜಿನೊಳಕ್ಕೆ ನಡೆದು ಬರುತ್ತಿದ್ದರೆ, ಹೆಚ್ಚು ಕಡಿಮೆ ಒಂದು ಫರ್ಲಾಂಗ್ ನಷ್ಟು ಕಾಣುವ ಕಾರಿಡಾರಿನಲ್ಲಿ ಒಬ್ಬನೇ ಒಬ್ಬ ವಿದ್ಯಾರ್ಥಿಯೂ ಕಾಣಿಸಿಕೊಳ್ಳುತ್ತಿರಲಿಲ್ಲ. ಯಾಕೆಂದರೆ ಬೋರೆನಿಸುವ ಪಿರಿಯಡ್ಡುಗಳನ್ನೂ ಅಟೆಂಡ್ ಮಾಡಿಸದೆ ಬಿಡುತ್ತಿರಲಿಲ್ಲ ಅಸಾಮಿ.ಭೌತಶಾಸ್ತ್ರವನ್ನು ಎಲ್ಲ ಪಿಯುಸಿ ತರಗತಿಗಳಿಗೆ ಪಾಠ ಮಾಡುತ್ತಿದ್ದ ಅವರ ಕೈಯಲ್ಲಿ, ಯಾವಾಗಲೂ ಒಂದು ಪುಸ್ತಕ ಮತ್ತು ನಾಲ್ಕಡಿ ಉದ್ದದ ಕೋಲು! ಎಲ್ಲಾದರೂ ಯಾವುದೇ ವಿದ್ಯಾರ್ಥಿ ಪಿರಿಯಡ್ ಬಂಕ್ ಮಾಡಿ ಹೊರಟು ಸಿಕ್ಕಿಹಾಕಿಕೊಂಡರೆ ಮುಗಿಯಿತು. ಹಣ್ಣುಗಾಯಿ ನೀರುಗಾಯಿ!! ತಪ್ಪಿಸಿಕೊಂಡರೂ ಅವರ ಐಡಿ ಕಾರ್ಡ್ ನಂಬರ್ ಬರೆದುಕೊಂಡು ಅವರಪ್ಪ ಅಮ್ಮನಿಗೆ ಒಂದು ಲೆಟರ್ ಬರೆದುಬಿಡುತ್ತಿದ್ದರು. ಅವರೇ ಎನ್ ಸಿ ಸಿ ಗೆ ಮುಖ್ಯಸ್ಥರಾಗಿದ್ದರಿಂದ ಎಲ್ಲಿ ತಪ್ಪಿಸಿಕೊಂಡರೂ ಅಲ್ಲಿ ಬಿಡುತ್ತಿರಲಿಲ್ಲ. ಕ್ಲಾಸಿನಲ್ಲಿ ಅವರು ಪಾಠ ಮಾಡುವಾಗ ಸೂಜಿ ಬಿದ್ದರೂ ಶಬ್ದ ಸ್ಪಷ್ಟ. ಅಷ್ಟೊಂದು ನಿಶ್ಶಬ್ದ.ಅವರ ಉಪಟಳ ತಡೆಯಲಾಗದೆ ಒಬ್ಬ ಹುಚ್ಚು ವಿದ್ಯಾರ್ಥಿ ಅವರಿಗೆ ಬುದ್ಧಿ ಕಲಿಸಬೇಕೆಂದು ಅವರ ಮನೆ ವಿಳಾಸ ಹುಡುಕಿ ಹಾವೊಂದನ್ನು ದಪ್ಪ ಬಾಕ್ಸಿನಲ್ಲಿಟ್ಟು ಕೊರಿಯರ್ ಮಾಡಿದ್ದನಂತೆ!!

ಆಮೇಲೇನಾಯಿತು ಎಂಬುದು ಇಲ್ಲಿ ಮುಖ್ಯವಲ್ಲ!!

ಮನೆಯಲ್ಲಿ ಎಲ್ಲ ಮಕ್ಕಳು ಅಪ್ಪ ಅಮ್ಮಂದಿರಿಗೆ ಆ ಪ್ರೊಫೆಸರ್ ರ ವಿಷಯವನ್ನು ಹೇಳಿದ್ದರೂ, ಎಲ್ಲ ತಂದೆತಾಯಿಗಳೂ ತಮ್ಮ ಮಕ್ಕಳ 2ನೇ ವರ್ಷದ ಪಿಯುಸಿಗೆ ಅವರ ಬಳಿಯೇ ಭೌತಶಾಸ್ತ್ರಕ್ಕೆ ಟ್ಯೂಶನ್ ಕಲಿಸಲು ನಾ ಮುಂದು ತಾ ಮುಂದು ಎಂಬಂತೆ ವ್ಯವಸ್ಥೆ ಮಾಡುತ್ತಿದ್ದರು. ಅವರ ಬಳಿ ಟ್ಯೂಶನ್ ಗೆ ವರ್ಷದ ಮುಂಚೆಯೇ ನೋಂದಣಿಯಾಗಿಬಿಡುತ್ತಿತ್ತು. ಯಾಕೆಂದರೆ ಅವರ ಬಳಿ ಟ್ಯೂಶನ್ ಗೆ ಹೋದವರಿಗೆ ಭೌತಶಾಸ್ತ್ರದಲ್ಲಿ ಫೇಲಾಗುವ ಅಥವಾ ಕಡಿಮೆ ಅಂಕ ಪಡೆಯುವ ಭಯವಿರುತ್ತಿರಲಿಲ್ಲ.

======================================================

ನಮ್ಮ ಬಾಲ್ಯದ ಶಾಲೆಯನ್ನು ನೆನಪಿಸಿಕೊಳ್ಳುವಾಗ ತುಂಬಾ ನೆನಪಿಗೆ ಬಂದವರೆಂದರೆ ಇದೇ ಜಯಣ್ಣ ಮೇಷ್ಟ್ರು.ಕೆಲವು ಹಳ್ಳಿಯ ಹುಡುಗರು ಎಷ್ಟು ಮೊಂಡರಿರುತ್ತಾರೆ ಎಂದರೆ ಅವರಿಗೆ ಅಷ್ಟು ಶಿಸ್ತು ಕಲಿಸದಿದ್ದರೆ ಜಪ್ಪಯ್ಯ ಎಂದರೂ ಕಲಿಯುವುದಿಲ್ಲ.ಬರೀ ಹೊಡೆಯುವ ವಿಷಯದಲ್ಲಿ ಜಯಣ್ಣ ಮೇಷ್ಟ್ರು ಕೊಂಚ ಒರಟುತನ ತೋರಿಸುತ್ತಿದ್ದರೆ ವಿನಹ ಪಾಠದಲ್ಲಿ ಮಾತ್ರ ಬಹಳ ಶಿಸ್ತು.ಆ ಶಾಲೆಯಲ್ಲಿ ಓದುವ ಸಮಯದಲ್ಲಿ ಅವರ ದೊಣ್ಣೆಗೆ ಹೆದರಿ ಅವರಿಗೆ ಬಹಳ ಶಾಪ ಹಾಕುತ್ತಿದ್ದುದು ನಿಜ.ಆದರೆ ಒಂದು ಬಾರಿ ಶಾಲೆಯನ್ನು ಬಿಟ್ಟು ಹೊರಗೆ ಬಂದ ಮೇಲೆ ಅದೇ ಜಯಣ್ಣ ಮೇಷ್ಟ್ರು ಯಾಕೋ ಮನಸ್ಸಿನಲ್ಲಿ ತುಂಬಾ ಕಾಡತೊಡಗುತ್ತಾರೆ. ಶಾಲೆ ಬಿಟ್ಟ ಮರುಘಳಿಗೆ ನಮಗನ್ನಿಸುವುದು ಅವರು ಕಲಿಸಿದ ಶಿಸ್ತಿನಿಂದಲೇ ಅಲ್ಲವೇ ಇವೆಲ್ಲ ಸಾಧಿಸಲಿಕ್ಕೆ ಆಗಿದ್ದು ಅಂತ.

ಮೊನ್ನೆ ಮೊನ್ನೆ ಊರಿಗೆ ಹೋಗಿದ್ದಾಗ ನಾನು ಜಯಣ್ಣ ಮೇಷ್ಟ್ರ ಬಗ್ಗೆ ಪ್ರಸ್ತಾಪಿಸಿದಾಗ ಅವರು ಬಹಳ ವರ್ಷಗಳ ಹಿಂದೆಯೇ ಬೇರೆ ಊರಿಗೆ ವರ್ಗವಾಗಿ ಹೋಗಿದ್ದಾರೆ. ಅವರಿಗೆ ಕೊಂಚ ವಯಸ್ಸಾಗಿ ಕಣ್ಣು ಅಷ್ಟೊಂದು ಸರಿಯಾಗಿ ಕಾಣುತ್ತಿಲ್ಲ. ಮುಂಚಿನಷ್ಟು ಹುರುಪಿಲ್ಲ,ಬಹಳ ಸೊರಗಿ ಹೋಗಿದ್ದಾರೆ ಅಂತ ಹೇಳಿದರು. ಯಾಕೋ ಮನಸ್ಸಿಗೆ ಬಹಳ ನೋವಾಯಿತು.
ಕಾಲೇಜಿನ ಬಿಸಿರಕ್ತಗಳ ಸೊಕ್ಕಡಗಿಸಿದ್ದ ಸಾಂಬಶಿವಯ್ಯನವರು ಈಗ ಅದೇ ಕಾಲೇಜಿನ ಪ್ರಿನ್ಸಿಪಾಲರಾಗಿದ್ದಾರೆ ಅಂತ ಕೇಳಿ ಸಂತೋಷವಾಯಿತು.ದೇವರು ಅವರೆಲ್ಲರನ್ನೂ ಚೆನ್ನಾಗಿಟ್ಟಿರಲಿ.

ಖಂಡಿತ ಪ್ರತೀ ಶಾಲೆಯಲ್ಲಿ, ಕಾಲೇಜಿನಲ್ಲಿ ಇಂತಹ ಕೊಂಚ ಶಿಸ್ತಿನ, ಕೋಪಿಷ್ಠ ಆದರೆ ಬದಲಾವಣೆಗೆ ಕಾರಣರಾದ ಗುರುಗಳು ಒಬ್ಬರಾದರು ನಿಮಗೆ ಖಂಡಿತ ಸಿಗುತ್ತಾರೆ. ಈ ಲೇಖನ ಓದುವಾಗ ಖಂಡಿತ ನಿಮಗೆ ಅವರುಗಳ ಚಿತ್ರಪಟ ಮನಸ್ಸಿನಲ್ಲಿ ಮಿಂಚಿ ಮರೆಯಾಗಿರುತ್ತದೆ. ಜೊತೆಗೆ ಮತ್ತೊಮ್ಮೆ ಅವರ ಬಗ್ಗೆ ಗೌರವ ಮೂಡಿರುತ್ತದೆ.
ಹೌದಾ?…ಹಾಗಿದ್ದರೆ ನನ್ನ ಶ್ರಮ ಸಾರ್ಥಕ.

 ನಿಮ್ಮವನು
 ಸಂತು