ಕೆಲವೊಮ್ಮೆ ಎರಡೂವರೆ ಗಂಟೆಯ ಸಿನಿಮಾ ಹೇಳದ ವಿಷಯವೊಂದನ್ನು ಕಿರುಚಿತ್ರವೊಂದು ಸಮರ್ಥವಾಗಿ ಹೇಳಿಬಿಡುತ್ತದೆ. ಅಥವ ಕಿರುಚಿತ್ರವೊಂದರಲ್ಲಿ ಹೇಳಬಹುದಾದ ಕಥೆಯನ್ನು ಎರಡೂವರೆ ಗಂಟೆ ಸಿನಿಮಾದೊಳಗೆ ಹಾಕಿ ರಬ್ಬರಿನಂತೆ ಎಳೆದು ಪ್ರೇಕ್ಷಕನ ತಾಳ್ಮೆ ಪರೀಕ್ಷಿಸಲಾಗುತ್ತದೆ.
ಸಿನಿಮಾ ನಿರ್ದೇಶಕನೊಬ್ಬನಿಗೆ ತಾನು ಹೇಳುವ ಕಥಾವಸ್ತುವನ್ನು ಎಷ್ಟು ಅವಧಿಯೊಳಗೆ ಸಮರ್ಥವಾಗಿ ಹೇಳಬಲ್ಲೆ ಎಂಬ ಸ್ಪಷ್ಟತೆ ಇದ್ದರೆ ಅದೇ ಆತನ ಮೊದಲ ಯಶಸ್ಸು. "ದಿ ಬೆಸ್ಟ್ ಆ್ಯಕ್ಟರ್" ಸಿನಿಮಾ ಇದಕ್ಕೊಂದು ಉತ್ತಮ ಉದಾಹರಣೆ.
ಈ ಹಿಂದೆಯೇ ಈ ಸಿನಿಮಾ ನೋಡಿ ಬರೆದಿದ್ದೆ. ಇದೀಗ ಯೂಟ್ಯೂಬ್'ನಲ್ಲಿ ಮತ್ತೊಮ್ಮೆ ಬಿಡುಗಡೆಯಾದ್ದರಿಂದ ಇನ್ನೊಮ್ಮೆ ನೋಡುವ ಮನಸ್ಸಾಯಿತು. ಹಾಗಾಗಿ ಇದರ ಬಗ್ಗೆ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದೇನೆ. ಇದೊಂದು ಕನ್ನಡದ ಮೈಕ್ರೋ ಮೂವಿ. ಇದರ ಅವಧಿಯೇ ಕೇವಲ 44 ನಿಮಿಷಗಳು. ಆದರೆ ಎರಡೂವರೆ ಗಂಟೆಯ ಸಿನಿಮಾ ನೋಡಿದಾಗ ಸಿಗುವಾಗಿನ ತೃಪ್ತಿ ಈ ಮೈಕ್ರೋಮೂವಿ ನೋಡಿದಾಗ ಸಿಗುತ್ತದೆ.
ಎಲ್ಲರಿಗೂ ಕಲಾವಿದರಾಗಬೇಕೆಂಬ ಆಸೆಯಿರುತ್ತದೆ. ಅದರೆ ಒಳಗೆ ಪ್ರತಿಭೆಯಿದ್ದೂ ಎದೆಯೊಳಗೆ ಸಾಧಿಸಬೇಕೆಂಬ ಛಲವಿದ್ದೂ, ಹೊರಗಿನ ಪ್ರಪಂಚ ಆ ಆಸೆಗೆ ತಣ್ಣೀರೆರಚುವ, ತನಗೆ ತಾನು ಧೈರ್ಯ ಹೇಳಿಕೊಂಡು ಮುಂದೆ ಸಾಗಿದರೂ ಮತ್ತೆ ಹೊರಗಿನ ಪ್ರಪಂಚ "ನೀ ಬಣ್ಣ ಹಚ್ತೀನಿ ಅಂದ್ರೆ ಧರ್ಮಕ್ಕೂ ಸೇರಿಸಿಕೊಳ್ಳೋರು ಯಾರು ಇಲ್ಲ! " ಎಂದು ಹೀಯಾಳಿಸಿ, ಚಿಗುರುತ್ತಿರುವ ಆಕಾಂಕ್ಷೆಗೆ ಕೊಡಲಿಯೇಟು ಕೊಡುವ ವಸ್ತುವನ್ನಾಧರಿಸಿದ ಸಿನಿಮಾ. ಈ ಸಿನಿಮಾದಲ್ಲಿ ಗಿಡಗಳ ಮುಂದೆ ಕೂತು ತನ್ನ ಕಲೆಯನ್ನು ಅವುಗಳಿಗೆ ಪ್ರದರ್ಶಿಸುವ ಮಾಬ್ಲಣ್ಣನ ದೃಶ್ಯ ಪ್ರೋತ್ಸಾಹ ಕೊಡದ ಇಡೀ ಸಮಾಜಕ್ಕೆ ಹಿಡಿದ ಕನ್ನಡಿಯಂತಿದೆ.
"ನಿರ್ಮಾಪಕನಿಗೆ ಸಿನಿಮಾದ ವ್ಯಾಕರಣ, ಅಭಿರುಚಿ ಚೆನ್ನಾಗಿದ್ದರೆ ಒಂದು ಕೆಟ್ಟ ಸ್ಕ್ರಿಪ್ಟ್ ಸಿನಿಮಾ ಆಗೋದು ತಪ್ಪುತ್ತೆ, ಒಂದು ಒಳ್ಳೆ ಸ್ಕ್ರಿಪ್ಟ್ ಕಸದ ಬುಟ್ಟಿ ಸೇರೋದು ತಪ್ಪುತ್ತೆ" ಅನ್ನುವ ಪಂಚಿಂಗ್ ಡೈಲಾಗೊಂದು ಈ ಸಿನಿಮಾದಲ್ಲಿದೆ. ಈ ಸಿನಿಮಾದ ನಿರ್ಮಾತೃಗಳಿಗೆ ಒಳ್ಳೆಯ ಅಭಿರುಚಿಯಿದ್ದುದರಿಂದಲೇ ಇಂಥ ಒಳ್ಲೆಯ ಸ್ಕ್ರಿಪ್ಟ್ ಸಿನಿಮಾ ಆಯಿತು ಎಂದು ಧೈರ್ಯವಾಗಿ ಹೇಳಬಹುದು.
"ಹಣ ಏನು ಬೇಕಾದರೂ ಸೃಷ್ಟಿ ಮಾಡುತ್ತೆ, ಸೃಜನಶೀಲತೆಯೊಂದನ್ನು ಬಿಟ್ಟು!"
"ಒಂದು ಹೆಣ್ಣು ತನ್ನ ಮಗುವಿಗೆ ಜನ್ಮ ಕೊಡುವಾಗ ಅನುಭವಿಸೋ ನೋವನ್ನು ನಟಿಸೋದು ಕಷ್ಟ"
ಇದಿಷ್ಟೇ ಅಲ್ಲ. ಸಂಭಾಷಣೆ ಕಡಿಮೆ ಇದ್ದರೂ ಸನ್ನಿವೇಶಕ್ಕೆ ತಕ್ಕ ಹಾಗೆ ಬರೆದ ಭಾಸ್ಕರ್ ಬಂಗೇರ (Bhaskar Bangera) ಅವರ ಇದೇ ಥರದ ಅನೇಕ ತೂಕದ ಸಾಲುಗಳಿವೆ. ಖುಶಿಯೆಂದರೆ ಕಥೆ ಯಾವ ಪರಿಸರದ ಹಿನ್ನೆಲೆಯಲ್ಲಿ ನಡೆಯುತ್ತದೋ ಅದೇ ಪರಿಸರದ ಕುಂದಾಪ್ರ ಕನ್ನಡವನ್ನು ಸಂಭಾಷಣೆಯಲ್ಲಿ ಬಳಸಿಕೊಂಡಿರುವುದು. ಈ ಕಾರಣದಿಂದಲೇ ಒಂದು ಕಥೆ ನಮ್ಮದಾಗುವುದು!
ಸಿನಿಮಾದ ನಿಜವಾದ ಹೀರೋ ಛಾಯಾಗ್ರಹಣ! ನದಿ, ಬಲೆ ಬೀಸುವ ಮೀನುಗಾರರು, ಹಸಿರು, ತುಳಿಯುವ ಸೈಕಲ್ಲಿಗೆ ಜಾಗ ಬಿಡುವ ಭೂಮಿ, ಬಿಸಿನೀರೊಲೆಯ ಹೊಗೆ, ಬೀಡಿ ಸೇದುವ ವೇಷತೊಟ್ಟ ಯಕ್ಷಗಾನ ಕಲಾವಿದ, ಹೀಗೆ ಪ್ರತೀ ದೃಶ್ಯವೂ ಕಟ್ಟನ್ನು ಹಾಕಿ ಗೋಡೆಗೆ ನೇತುಹಾಕುವಷ್ಟು ಸುಂದರವಾಗಿಯೂ ಹೊಸದಾಗಿಯೂ ಇವೆ. ಹಾಗಾಗಿಯೇ ಇದೇ ವಿಭಾಗಕ್ಕೆ ಪ್ರಶಸ್ತಿಗಳು ಬಂದಿರುವುದರಲ್ಲಿ ಅಚ್ಚರಿಯೇನಿಲ್ಲ. ಎರಡು ಮೂರು ದೃಶ್ಯಗಳಲ್ಲಿ ಬಳಸುವ ಟ್ರಾನ್ಸಿಷನ್ ಎಫೆಕ್ಟ್ ಕ್ಯಾಮೆರಾದ್ದೋ ಅಥವಾ ಸಂಕಲನಕಾರನದ್ದೋ ಅನ್ನುವಷ್ಟು ವಿಭಿನ್ನವಾಗಿದ್ದು ಅಚ್ಚರಿಯುಂಟು ಮಾಡುತ್ತವೆ.
ಸಂಚಾರಿ ವಿಜಯ್ ನಟನೆಯಲ್ಲಿ ಲವಲವಿಕೆಯಿದೆ. ಬಾಲಕಲಾವಿದರ ದಂಡೇ ಸಿನಿಮಾದ ಅನೇಕ ದೃಶ್ಯಗಳಲ್ಲಿದೆ.
ಆದರೆ ಸಿನಿಮಾ ಮುಗಿಯುವಾಗ ನಮ್ಮ ಮನಸ್ಸನ್ನು ಗೆಲ್ಲುವುದು ಮಾಬ್ಲಣ್ಣನ ಪಾತ್ರದ ಮಾಧವ ಕಾರ್ಕಡರವರು.
"ನಂಗೂ ಬಣ್ಣ ಅಂದರೆ ಇಷ್ಟ" ಅಂತ ಮಗನೊಂದಿಗೆ ಮಗುವಾಗುವ,
ಬಣ್ಣ ಹುಡುಕುತ್ತ ಚಿಕ್ಕಮಗುವಿನ ಕಾತುರ ತೋರುವ,
ಬೆರ್ಚಪ್ಪನ ಮುಖದ ಮೇಲಿನ ಬಣ್ಣವನ್ನೂ ನೋಡಿ ಅಸೂಯೆಪಡುವ,
ಅದೇ ಮರುಕ್ಷಣ ಬಣ್ಣ ಹಚ್ಚೇ ತೀರುವೆನೆಂದು ಬೆರ್ಚಪ್ಪನಿಗೆ ಸವಾಲು ಹಾಕುವ,
" ಕತ್ತಲಿಂದ ಬೆಳಕಿಗೆ ಬರ್ತಾರೆ ಅಂದ್ರೆ ಹೆಚ್ಚಿನ ಜನರು ದೀಪ ನಂದಿಸೋಕೆ ಯೋಚನೆ ಮಾಡ್ತಾರೆ... ಆದರೆ ನಮ್ಮೊಳಗೊಂದು ಕಿಚ್ಚಿದ್ದರೆ ಯಾರೇನೂ ಮಾಡೋಕೆ ಸಾಧ್ಯವಿಲ್ಲ" ಅಂತ ಒಳಗಿನ ಕಿಚ್ಚು ತೋರುವ,
"ನನಗೆ ಬಣ್ಣ ಯಾರೂ ಕೊಡುವವರಿಲ್ಲ...ನನಗೆ ನಾನೇ" ಅಂತ ಮರುಕಪಡುವ
ಬಣ್ಣ ಸಿಕ್ಕಾಗಿನ ಅದೇ ಮಗುವಿನ ಮೊಗದ ಹೊಳಪ ತೋರುವ ಅಭಿನಯದಲ್ಲಿ ಅವರು ನಮ್ಮನ್ನು ಮಂತ್ರಮುಗ್ಧನನ್ನಾಗಿ ಮಾಡುತ್ತಾರೆ.
ಈ ಸಿನಿಮಾದ ಕಥೆಗೆ ಸೂಕ್ತ ಕಲಾವಿದರಾದ ಮಾಧವ ಕಾರ್ಕಡ ಅವರನ್ನು ನಿರ್ದೇಶಕರು ಆಯ್ದುಕೊಂಡಿದ್ದಾರೆ.
ಗೆಳೆಯ, ಸಹೋದರ ನಾಗರಾಜ್ ಸೋಮಯಾಜಿ (Nagaraj Somayaji) ಅತ್ಮೀಯರೆಂದು ಇದೆಲ್ಲವನ್ನೂ ಹೇಳುತ್ತಿಲ್ಲ. ಯಾವುದೇ ಕೆಲಸವನ್ನು ಮಾಡಿದರೂ ಅಚ್ಚುಕಟ್ಟಾಗಿ ಮಾಡುತ್ತಾರೆ. ನಾಟಕವಿರಬಹುದು, ಸಿನಿಮಾವಿರಬಹುದು, ಅವರ ಫೋಟೋಗ್ರಫಿಯ ವೃತ್ತಿಜೀವನದಲ್ಲೇ ಇರಬಹುದು. ಮೊದಲ ಪ್ರಯತ್ನವಾದರೂ ಪ್ರತಿಯೊಂದರಲ್ಲೂ ಅವರ ಶ್ರದ್ಧೆ, ಶಿಸ್ತು ಎದ್ದು ಕಾಣುತ್ತದೆ. ಬಹುತೇಕರು ಮಾಡುವಂತೆ ಚೊಚ್ಚಲ ಕಿರುಚಿತ್ರಕ್ಕಾಗಿ ಯಾವುದೋ ಅದೇ ಹಳೆಯ ಪ್ರೇಮಕಥೆಗಳನ್ನು ತೆಗೆದುಕೊಳ್ಳದೆ ಶ್ರೀಧರ ಬನವಾಸಿಯವರ ಕಥೆಯನ್ನು ಆಧರಿಸಿ ಸಿನಿಮಾವಾಗಿಸಿದ್ದಾರೆ. ಮುಂದೆಯೂ ಸಾಹಿತ್ಯವನ್ನಾಧರಿಸಿದ ಸಿನಿಮಾಗಳು ಅವರಿಂದ ಮೂಡಿ ಬರಲಿ ಎಂದು ಆಶಿಸುತ್ತ ಅವರ ಮುಂದಿನ ಪ್ರಯತ್ನಗಳಿಗೆ ಶುಭ ಕೋರೋಣ.
ಕೊರೋನಾ ಟೈಮಿನಲ್ಲಿ ಮನೆಯಲ್ಲೇ ಕುಳಿತು ಏನು ಮಾಡಬೇಕೆಂದು ತೋಚದಿರುವ ಪರಿಸ್ಥಿತಿಯಲ್ಲಿ ಈ ಸಿನಿಮಾ ಯೂಟ್ಯೂಬಿನಲ್ಲಿ ಬಿಡುಗಡೆಯಾಗಿದೆ.
ನೋಡದಿದ್ದವರು ಒಮ್ಮೆ ನೋಡಿ. ಖಂಡಿತವಾಗಿಯೂ ನಿಮಗೆ ಇಷ್ಟವಾಗುತ್ತದೆ. ನೋಡಿ, ಇಷ್ಟವಾದರೆ ನಿಮ್ಮ ಗೆಳೆಯರೊಂದಿಗೆ ಹಂಚಿಕೊಳ್ಳಿ. ಚೊಚ್ಚಲ ಪ್ರಯತ್ನಕ್ಕೆ ಬೆನ್ನು ತಟ್ಟಿ.
-Santhosh Kumar LM
16-Apr-2020
Post a Comment
Please post your comments here.