Friday, August 19, 2022

Jogi movie Celebrating 17 years!






"ಜೋಗಿ" ಸಿನಿಮಾ ರಾಜ್ಯದಾದ್ಯಂತ ಎಲ್ಲ ಚಿತ್ರಮಂದಿರಗಳಲ್ಲಿ ಭರ್ತಿ ಪ್ರದರ್ಶನ ಕೊಡುತ್ತಿದ್ದ ವೇಳೆ ಕೊಳ್ಳೇಗಾಲದ ಚಿತ್ರಮಂದಿರವೊಂದಕ್ಕೆ ಶಿವರಾಜ್‍ಕುಮಾರ್ ಆಗಮಿಸಿದ್ದರು. ಅಭಿಮಾನಿಗಳು "ಶಿವಣ್ಣನಿಗೆ ಜೈ" ಅನ್ನಲಿಲ್ಲ. "ನಮ್ ಜೋಗಿ ಮಾದೇಸಂಗೆ ಜೈ" ಅಂದರು. ಶಿವರಾಜ್‍ಕುಮಾರ್ ಅತ್ತ ನೋಡಿ ಪ್ರೀತಿಯಿಂದ ಕೈತೋರಿ ಅಭಿಮಾನಿಗಳೆಲ್ಲರ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದರು. ಜನಮಾನಸದಲ್ಲಿ ಒಬ್ಬ ನಾಯಕನಟನ ಪಾತ್ರ ಹೇಗೆ ದಾಖಲಾಗುತ್ತದೆ ಅನ್ನುವುದು ಎಂದೆಂದಿಗೂ ಅಚ್ಚರಿಯ ಸಂಗತಿಯೇ.


"ಜೋಗಿ" ಮೇಲ್ನೋಟಕ್ಕೆ ಒಂದು ರೌಡಿಯಿಸಂ ಕಥೆ ಸಿನಿಮಾ ಅನ್ನಿಸಬಹುದು. ನೋಡಿದ ಮೇಲೆ ತಾಯಿ-ಸೆಂಟಿಮೆಂಟ್ ಕಥೆ ಇರುವ ಸಿನಿಮಾ ಅನ್ನಿಸಬಹುದು. ಅದು ಇಡೀ ಸಿನಿಮಾವನ್ನು ಒಂದೆರಡು ಪದಗಳಲ್ಲಿ ಹೇಳಬಯಸುವವರು ಕೊಟ್ಟುಬಿಡುವ ಟ್ಯಾಗ್! ಆದರೆ ಆ ಸಿನಿಮಾದಲ್ಲಿ ಅದಕ್ಕೂ ಮೀರಿದ ನಮ್ಮ ಮಣ್ಣಿನ ವಿಷಯಗಳನ್ನು ಹೇಳುವ ಕುಸುರಿಯಿದೆ. ಇಲ್ಲದಿದ್ದರೆ ಜೋಗಿಯನ್ನೇ ಹಿಂಬಾಲಿಸಿಕೊಂಡು ಬಂದ ಅದೇ ಮದರ್-ಸೆಂಟಿಮೆಂಟಿನ, ರೌಡಿಯಿಸಂ ಕಥೆಯುಳ್ಳ ಅನೇಕ ಸಿನಿಮಾಗಳು ಜೋಗಿಯಂತೆಯೇ ಸೂಪರ್ ಹಿಟ್ ಆಗಬೇಕಿತ್ತು. ಹಾಗಾಗಲಿಲ್ಲ.


ನೀವು ನಂಬಲೇಬೇಕು. ಜೋಗಿ ಸಿನಿಮಾ ಬಂದ ಮೇಲೆಯೇ ಅನೇಕ ಜನರಿಗೆ ನಮ್ಮ ರಾಜ್ಯದಲ್ಲೊಂದು "ಮಹದೇಶ್ವರ ಬೆಟ್ಟ" (ನಮಗೆ ಮಾದಪ್ಪನ ಬೆಟ್ಟ, ಕೆಲವರಿಗೆ ಮಾದೇಸುರುನ್ ಬೆಟ್ಟ) ಎಂಬ ಸ್ಥಳವಿದೆ ಅಂತ ಗೊತ್ತಾಯಿತು! ಅದಕ್ಕೂ ಮುನ್ನ ಅನೇಕ ಗೆಳೆಯರು ನಮ್ಮ ದೇವರಮನೆಯಲ್ಲಿನ ಮಾದಪ್ಪನ ಫೋಟೋ ನೋಡಿ ನನ್ನ ಬಳಿ ಬಂದು "ಮಹದೇಶ್ವರ/ಮಾದಪ್ಪ ಅಂದರೆ ಯಾವ ದೇವರು" ಅಂತ ಕೇಳಿದ್ದಾರೆ. ಜೋಗಿ ಬಂದ ಮೇಲೆ ಮೊದಲಿಗಿಂತಲೂ ಬೆಟ್ಟಕ್ಕೆ ಬರುವ ಜನರು ಹೆಚ್ಚಾದರು. ಒಂದು ಸಿನಿಮಾ ಪರೋಕ್ಷವಾಗಿ ಉಂಟು ಮಾಡುವ ಪ್ರಭಾವ ಹೀಗೆ ಬೇರೆ ಬೇರೆ ರೀತಿಯದ್ದಾಗಿರುತ್ತದೆ!


ಒಂದು ಸಿನಿಮಾದ ಕಥೆ ಒಂದು ಭಾಗದಲ್ಲಿ ನಡೆಯುತ್ತದೆ ಅನ್ನುವುದಾದರೆ ಅದರ ಸಂಭಾಷಣೆ, ಸಾಹಿತ್ಯ, ಕಥೆ, ಚಿತ್ರಕಥೆ ಎಲ್ಲವನ್ನೂ ಆ ಭಾಗದ ಪ್ರತಿಭೆಗಳೇ ಬರೆದರೆ ಚೆಂದ ಅಂತ ನನ್ನ ನಂಬಿಕೆ. ಇದು ಅನೇಕ ಬಾರಿ ಸಾಬೀತಾಗಿದೆ. ಬೇರೆ ಭಾಗದವರು ಬರೆದಾಗ ಬರದ ಕೆಲವು ಸೂಕ್ಷ್ಮ ಸಂಗತಿಗಳು ಅದೇ ಮಣ್ಣಿನ ಜನ ಬರೆದಾಗ ಮಾತ್ರ ಮೂಡಿ ಬರುತ್ತವೆ. ಇದು ಪ್ರಾಮಾಣಿಕವಾಗಿ ನಡೆದಾಗ ಪ್ರಪಂಚದ ಬೇರೆ ಬೇರೆ ಭಾಗಗಳ ಜನರಿಗೆ ಈ ಪ್ರದೇಶದ ಸಂಸ್ಕೃತಿಯ, ಸ್ಥಳೀಯತೆಯ ಪರಿಚಯವಾಗುತ್ತದೆ.


ಆ ಸಿನಿಮಾದ ಮೊದಲ ದೃಶ್ಯದಲ್ಲೇ ಜೋಗಿಯ ಮನೆಯನ್ನು ಪರಿಚಯಿಸುವ ದೃಶ್ಯವಿದೆ. ಮರದ ಕಂಬಗಳಿರುವ ಹಜಾರದ ಮನೆ, ಅಲ್ಲಲ್ಲಿ ನೇತುಹಾಕಿದ ಬಟ್ಟೆಗಳು, ಅಲ್ಲೇ ಮಂಚ, ಅದರ ಮೇಲೆ ಮಲಗಿರುವ ಅಪ್ಪ (ರಮೇಶ್ ಭಟ್). ಮಂಚದ ಮೇಲೆಯೇ ಕುಳಿತ ಕೋಳಿ! ಆ ಮನೆಯ ಒಂದು ಬದಿಯಲ್ಲಿ ಪುಟ್ಟ ಅಡುಗೆ ಮನೆ, ಗೋಡೆಗೆ ಮೆತ್ತಿದ ಮಸಿ, ಮೂಲೆಯಲ್ಲಿಟ್ಟ ರಾಗಿ ವಾಡೆ(ದೊಡ್ಡ ಮಣ್ಣಿನ ಮಡಕೆ), ನೀರಿನ ಹಂಡೆ, ಗೋಡೆಯ ಸಣ್ಣ ಗೂಡಿನಲ್ಲಿಟ್ಟ ಎಣ್ಣೆ ಬಾಟಲಿ, ಡಬ್ಬಗಳು, ರುಬ್ಬುವ ಕಲ್ಲು,ಟ್ರಂಕುಗಳು, ಹಳೆಯ ಮರದ ಪೆಟ್ಟಿಗೆಗಳು, ಗೋಡೆಗೆ ನೇತುಬಿಟ್ಟ ಕ್ಯಾಲೆಂಡರು, ಸೌದೆ ಒಲೆಯನ್ನು ಕೊಳವೆಯಲ್ಲಿ ಊದುತ್ತ ಅಡುಗೆ ಮಾಡುತ್ತಿರುವ ತಾಯಿ (ಅರುಂಧತಿ ನಾಗ್), ಒಲೆಯಿಂದ ಏಳುವ ಹೊಗೆ, ಒಂದೆಡೆ ದೇವರ ಮನೆ. ದೇವರ ಮನೆಯ ಗೋಡೆಯ ತುಂಬ ನೇತುಹಾಕಿದ ಬೇರೆ ಬೇರೆ ದೇವರುಗಳ ಫೋಟೋಗಳು, ಒಂದೆಡೆ ನೇತುಹಾಕಿದ ಮೊರ........ಇತ್ಯಾದಿ.


ಇವೆಲ್ಲದರ ಜೊತೆಗೆ "ಅದ್ಯಾಕುಡಾ ಮಾದೇಸ? ಕೂಸೆ?" ಅಂತ ಕೊಳ್ಳೇಗಾಲದ/ಚಾಮರಾಜನಗರದ ಸೊಗಡಿನ ಕನ್ನಡ ಮಾತನಾಡುತ್ತಿದ್ದರೆ ಈ ಊರು ಸಿಂಗಾನಲ್ಲೂರು ಅಂತ ಹೇಳುವ ಅವಶ್ಯಕತೆ ಇದೆಯೇ ನೀವೇ ಹೇಳಿ?! ಇದೇ ಕಾರಣಕ್ಕೆ ಆ ಪ್ರದೇಶದ ಪ್ರತಿಭೆಗಳು ಬರೆದಾಗ ಸ್ವಾಭಾವಿಕವಾಗಿ ಮೂಡುವ ದೃಶ್ಯ ಹೇಗಿರುತ್ತದೆ ಅಂತ ಹೇಳಿದ್ದು. ಈ ಸಿನಿಮಾದ ಸಂಭಾಷಣೆ ಬರೆದಿರುವುದು ಮಳವಳ್ಳಿ ಸಾಯಿಕೃಷ್ಣ ಅವರು.


ಇದೇ ಸಿನಿಮಾದ ಮತ್ತೊಂದು ದೃಶ್ಯದಲ್ಲಿ ತೀರಿಕೊಂಡ ಹಿರಿಯರಿಗೆ ವರ್ಷಕ್ಕೊಮ್ಮೆ ಎಡೆಯಿಕ್ಕುವ ದೃಶ್ಯವೊಂದಿದೆ. ಆ ಆಚರಣೆಗೆ ದ್ಯಾವರಗುಡ್ಡ/ಜೋಗಯ್ಯನನ್ನು ಕರೆಸುತ್ತಾರೆ. ಅವರಿಗೆ ಯಾವ ಮಂತ್ರವೂ ಗೊತ್ತಿಲ್ಲ. ಆದರೆ ತೀರಿಕೊಂಡವರ ಹೆಸರನ್ನು ಕೂಗುತ್ತ "ನಮಗೆ ಬಂದ ಹಾಗೆ ಭಕ್ತಿಯಿಂದ ಇದನ್ನೆಲ್ಲ ಅರ್ಪಿಸುತ್ತಿದ್ದೇವೆ. ಎಷ್ಟಾದರೂ ನಾವು ನಿಮ್ಮ ಮಕ್ಕಳು. ಚಿಕ್ಕಪುಟ್ಟ ತಪ್ಪಿದ್ದರೆ ಹೊಟ್ಟೆಗಾಕ್ಕೊಂಡು ನಾವು ಮಾಡಿದ್ದನ್ನು ಅರ್ಪಿಸಿಕೊಳ್ಳಿ. ಮನೆಮಕ್ಕಳನ್ನು ಆಶೀರ್ವದಿಸಿ" ಅಂತ ಕೇಳಿಕೊಳ್ಳುವ ಸಂಭಾಷಣೆಯಿದೆ. ಅದೇ ಮಣ್ಣಿನ ಘಮಲು ಗೊತ್ತಿಲ್ಲದ ಯಾವ ಬರಹಗಾರನು ಆ ಥರದ ಸಂಭಾಷಣೆಯನ್ನು ಬರೆಯಲಾರ ಅನ್ನುವುದು ನನ್ನ ದೃಢವಾದ ನಂಬಿಕೆ. ಸಾಧ್ಯವಾದರೆ ಆ ದೃಶ್ಯವನ್ನು ಮತ್ತೊಮ್ಮೆ ನೋಡಿ, ಸಂಭಾಷಣೆಯನ್ನು ಅದರೊಳಗಿನ ಸತ್ವವನ್ನು ದಯವಿಟ್ಟು ಗಮನಿಸಿ.


ಇದು ಸಂಭಾಷಣೆಗಳ ಸತ್ವವಾದರೆ, ಹಾಡಿನ ಸಾಹಿತ್ಯದ್ದೇ ಮತ್ತೊಂದು ತೂಕ. ಸಿನಿಮಾದ ದೃಶ್ಯ ಬೆಂಗಳೂರಿನಿಂದ ಚಾಮರಾಜನಗರ ಪ್ರಾಂತ್ಯಕ್ಕೆ ಶಿಫ಼್ಟ್ ಆಗುವಾಗ ಬರುವ ಹಾಡೇ "ಏಳುಮಲೆ ಮೇಲೇರಿ". ಆ ಹಾಡಿನ Placement ತುಂಬಾ ಚೆನ್ನಾಗಿದೆ. ಒಂದೇ ಗುಕ್ಕಿನಲ್ಲಿ ನಮ್ಮ ಮೂಡ್ ಬೆಂಗಳೂರಿನಿಂದ ಚಾಮರಾಜನಗರಕ್ಕೆ ಶಿಫ್ಟ್ ಆಗಿಬಿಡುತ್ತದೆ.


ಮಾದಪ್ಪನ ಬೆಟ್ಟದ ಮುಖ್ಯ ಗೋಪುರದ ಮುಂಭಾಗ. "ಅಕ್ಕಯ್ಯ ನೋಡುಬಾರೆ" ಅನ್ನುವಾಗಲೇ ಗಂಗೆಯನ್ನು ಹೊತ್ತು ತರುವ ಹೆಣ್ಣುಮಕ್ಕಳು ಮಾದಪ್ಪನಿಗೆ "ಹಾಲರವಿ" ತರೋದನ್ನು ನೆನಪಿಸುತ್ತಾರೆ. ಅಲ್ಲಲ್ಲಿ ಹೊಡೆಯುವ "ಈಡುಗಾಯಿ"ಗಾಗಿ ಒಬ್ಬರ ಮೇಲೆ ಒಬ್ಬರು ಬಿದ್ದು ಬಾಚಿಕೊಳ್ಳೋದನ್ನು ತೋರಿಸಲಾಗುತ್ತದೆ. ಎತ್ತ ನೋಡಿದರತ್ತ ಜನಜಂಗುಳಿ. ಮಾದಪ್ಪನ ಬೆಟ್ಟ ಅಂದರೆ ಅಮಾವಾಸ್ಯೆಯ ದಿನ ನಡೆಯುವ ಎಣ್ಣೆಮಜ್ಜನ ಸೇವೆಗೆ ಸಿಕ್ಕಾಪಟ್ಟೆ ಜನ ಇರುತ್ತಾರೆ. ಕಾಲಿಡಲು ಜಾಗವಿರುವುದಿಲ್ಲ. ಅದರಲ್ಲೂ ಹಬ್ಬ, ಜಾತ್ರೆ, ತೇರು, ಎಣ್ಣೆಮಜ್ಜನ ಸೇವೆ ಒಟ್ಟಿಗೆ ಬಂತೆಂದರೆ ಅದೆಷ್ಟು ಜನ ಇರುತ್ತಾರೆ ಎಂದರೆ ಚಾಮರಾಜನಗರದ ಬೇರೆ ಬೇರೆ ಕಡೆಗೆ ಹೋಗುವ ಪ್ರೈವೇಟ್ ಬಸ್ಸುಗಳೆಲ್ಲವನ್ನು ಕ್ಯಾನ್ಸಲ್ ಮಾಡಿ ಬರೀ ಬೆಟ್ಟದ ಕಡೆ ಬಿಟ್ಟಿರುತ್ತಾರೆ. ಕೊಳ್ಳೇಗಾಲಕ್ಕೆ ಬರುವ ಪ್ರತೀ ಬೆಟ್ಟದ ಬಸ್ಸು ಕೆಲವೇ ನಿಮಿಷಗಳಲ್ಲಿ ಭರ್ತಿಯಾಗುತ್ತದೆ. ಇಂಥದ್ದೇ ದಿನದಲ್ಲಿ ಈ ಹಾಡಿನ ಚಿತ್ರೀಕರಣ ಮಾಡಿರುವುದು ಈ ಹಾಡಿನ ವಿಶೇಷ! ಹಾಡಿನಲ್ಲಿ ತೇರು, ಜನಜಂಗುಳಿ ಎಲ್ಲವನ್ನೂ ಕಾಣಬಹುದು.


ಮಹದೇಶ್ವರ ಅಂತ ಈಗೀಗ ಎಲ್ಲ ಕಡೆ ಬಳಸಿದರೂ ಅತ್ತಲಿನ ಎಲ್ಲರೂ ಹೇಳುವುದು ಮಾದಯ್ಯ, ಮಾದಪ್ಪ, ಮಾದೇಸ್ವರ ಅಂತಲೇ! ಈ ಹಾಡಿನ ಸಾಹಿತ್ಯದಲ್ಲೂ ಮಾದಯ್ಯ, ಮಾದಪ್ಪ ಅಂತಲೇ ಬಳಸುತ್ತಾರೆ. ಮಾದಪ್ಪ ಪುಟ್ಟ ಹುಡುಗನ ರೂಪ ಹೊಂದಿರುವ ಚಲುವ. ಆತನ ಭಕ್ತರಿಗೆ ಆತ "ಮುದ್ದು ಮಾದಪ್ಪ". ದೇವರಾದರೂ ಮಗು ಮಗುವೇ ತಾನೇ? ಆತ ಆಡುವ ಎಲ್ಲ ತುಂಟಾಟ, ಚೆಲ್ಲಾಟಗಳಿಂದ ಆತನ ಭಕ್ತರಿಗೆ ಆತ "ಚೆಲ್ಲಾಟಗಾರ ಮಾದಪ್ಪ".





ಸಾಹಿತ್ಯ:
ಅಕ್ಕಯ್ಯ ನೋಡು ಬಾರೆ ಈ ಚೆಲುವನಾ
ಚಿಕ್ಕವಳೇ ನೋಡು ಬಾರೇ
ಚಿಕ್ಕವಳೇ ನೋಡು ಬಾರೇ
ಚೆಲುವಯ್ಯನ ನೋಡು ಬಾರೇ ಈ ಕಂದನ
ನಲಿನಲಿದು ನೋಡು ಬಾರೇ
ಕುಣಿಕುಣಿದು ನೋಡು ಬಾರೇ
ಉಘೇ.. ಉಘೇ.. ಉಘೇ.. ಉಘೇ.. ಉಘೇ..


ಏಳು ಮಲೆ ಮ್ಯಾಲೇರಿ
ಕುಂತ ನಮ್ಮ ಮಾದೇವಾ
ನಾಗುಮಲೆ ಮ್ಯಾಲೇರಿ ನಿದ್ದೆ ಮಾಡೋ ಮಾದೇವಾ
ಈ ನಿದ್ದೆ ಸಾಕು ಮಾದೇವಾ..
ನೀ ಎದ್ದು ಬಾರೋ ಮಾದೇವಾ
ಬಿಡಿ ಬಿಡಿ ಎಲ್ಲಾ ದಾರಿ ಬಿಡಿ
ಬರೀ ಮಾತಿಗೆಲ್ಲಾ ಜಗ್ಗಲ್ಲಾ...


ಹಂಗೇ ಕುಣಿರೋ ಹಿಂಗೇ ಕುಣಿರೋ
ನಮ್ಮ ಮುದ್ದು ಮಾದಯ್ಯನ ಮುಂದೆ ಬಗ್ಗಿ ಕುಣಿರೋ
ಎದ್ದು ಕುಣಿರೋ ಬಿದ್ದೂ ಕುಣಿರೋ
ನಮ್ಮ ಮುದ್ದು ಮಾದಯ್ಯನ ಮುಂದೆ
ಬಗ್ಗಿ ಕುಣಿರೋ




ಕಾಡೆಲ್ಲಾ ತುಂಬೈತೆ ಹೂಗಂಧ..
ಕಾವೇರಿ ಹರಿದೈತೆ ಏನ್ ಚಂದ


ಕುಣಿದಾವೂ ಗುಬ್ಬಿ... ಮಾದೇವಾ
ತಂದ್ಯಾವೋ ಗುಟುಕು.. ಮಾದೇವಾ


ಮುದ್ದು ಮಾದಪ್ಪ
ನಿದ್ದೆ ಸಾಕಪ್ಪ
ಎದ್ದು ಬಾರಪ್ಪ ಮಾದೇವಾ


ನಲಿದ್ಯಾವೋ ನವಲೂ .. ಮಾದೇವಾ
ನುಲಿದ್ಯಾವೋ ನಾಗ.. ಮಾದೇವಾ


ಕೊಡುವಾಗಲೆಲ್ಲಾ ಕೊಡ್ತಾನೋ ನಮ್ಮಪ್ಪ ಶಿವಾ
ಅವನು ಒಲಿದರೆ ಕೊರಡು ಕೊನರಿ ಬಂಗಾರ ಬಾಳವ್ವಾ
ಅಕ್ಕರೆ ಮಾತಾಡಿ ಪೂಜೆ ಮಾಡಿ
ಅಂದವನೇ ಮಾದೇವಾ...




ಕೆಂಪಾದೋ ಸೊಂಪಾದೋ ಬಾನೆಲ್ಲಾ...
ಕಂಪಾದೋ ತಂಪಾದೋ ಮಾಳೆಲ್ಲ..


ಈ ಹಕ್ಕಿ ಹಾಡ .. ಕೇಳಯ್ಯಾ
ಆ ದುಂಬಿ ನಾದ ... ಕೇಳಯ್ಯಾ


ಚಂದ್ರ ಚಕೋರ
ಚೆಲ್ಲಾಟಗಾರ
ಚಂದ ಮಾಯ್ಕಾರ ಮಾದೇವ


ಕೇಳಯ್ಯಾ ದುಂಡು ಮಾದೇವಾ
ಎದ್ದೇಳೋ ಮಂಡೆ ಮಾದೇವಾ


ಕೊಡುವಾಗಲೆಲ್ಲಾ ಕೊಡ್ತಾನೋ ನಮ್ಮಪ್ಪ ಶಿವಾ
ಅವನು ಒಲಿದರೆ ಕೊರಡು ಕೊನರಿ ಬಂಗಾರ ಬಾಳವ್ವಾ
ಅಕ್ಕರೆ ಮಾತಾಡಿ ಪೂಜೆ ಮಾಡಿ
ಅಂದವನೇ ಮಾದೇವಾ...


(ಗಾಯಕರು: ಎಸ್.ಪಿ.ಬಾಲಸುಬ್ರಹ್ಮಣ್ಯಂ)




ಈ ಸಾಹಿತ್ಯದ ಸಾಲುಗಳಲ್ಲಿ ಬರುವ ಮಾಳೆಲ್ಲ, ಕೆಂಪಾದೋ, ಸೊಂಪಾದೋ, ದುಂಬಿನಾದ, ಮಂಡೆ ಮಾದೇವ, ಮಾಯ್ಕಾರ, ಏಳುಮಲೆ, ನಾಗಮಲೆ ಇವೆಲ್ಲ ಆ ಪ್ರಾಂತ್ಯದಲ್ಲಿ ಹೆಚ್ಚಾಗಿ ಬಳಸುವ ಪದಗಳು


<< ಅವನು ಒಲಿದರೆ ಕೊರಡು ಕೊನರಿ ಬಂಗಾರ ಬಾಳವ್ವಾ>>
ಮಾದಪ್ಪ ಒಲಿದರೆ ಕೊರಡು (ಒಣಗಿ ಬಿದ್ದ ಮರದ ತುಂಡು) ಕೂಡ ಕೊನರುತ್ತದೆ (ಚಿಗುರುತ್ತದೆ). ಅವನನ್ನು ನಂಬಿದರೆ ನಮ್ಮ ಬಾಳು ಬಂಗಾರವಾಗುತ್ತದೆ


(Ref:
ನೀನೊಲಿದರೆ ಕೊರಡು ಕೊನರುವುದಯ್ಯ
-ಬಸವಣ್ಣ)


 

ಕಾವೇರಿ (ನಮ್ಮ ರಾಜ್ಯದಿಂದ ಪಕ್ಕದ ತಮಿಳುನಾಡಿಗೆ ಹರಿಯುವ ಕಾವೇರಿ ನದಿ ಮಹದೇಶ್ವರ ಬೆಟ್ಟದ ಪಕ್ಕದಲ್ಲೇ ಹರಿದು ಮೆಟ್ಟೂರು ಸೇರುತ್ತದೆ) ಇದೇ "ಕಾರಣಕ್ಕೆ ಕಾವೇರಿ ಹರಿದೈತೆ ಏನ್ ಚಂದ" ಅನ್ನುವ ಸಾಲನ್ನು ಕಾಣಬಹುದಾಗಿದೆ.


 

ಉಘೇ ಉಘೇ
ಉಘೇ ಮಹಾಂತ್ ಮಲ್ಲಯ್ಯ


(ಮಾದಪ್ಪನಿಗೆ ಕೂಗುವ ಜೈಕಾರ)

 

ನಾಗುಮಲೆ = ನಾಗಮಲೆ ಮಹದೇಶ್ವರ ಬೆಟ್ಟದಿಂದ 15km ದೂರದಲ್ಲಿರುವ ಸ್ಥಳ. ಅಲ್ಲೇ ಮಾದಪ್ಪ ತಪಸ್ಸಿಗೆ ಕುಳಿತದ್ದು. ಅವರಿಗೆ ನೆರಳಾಗಲೆಂದು ಸರ್ಪವೊಂದು ಬಂದು ತನ್ನ ಹೆಡೆಯನ್ನು ಮಾದಪ್ಪನ ತಲೆಯ ಮೇಲೆ ತಂದು ನೆರಳು ನೀಡಿತಂತೆ.

 

ಹ್ಯಾಟ್ರಿಕ್ ಹೀರೋ ಶಿವರಾಜ್'ಕುಮಾರ್ ತಮ್ಮ ಎನರ್ಜಿಗೆ ಹೆಸರಾದವರು. ಈ ಹಾಡಿನಲ್ಲಿ ಸಿಕ್ಕಾಪಟ್ಟೆ ಕುಣಿದಿದ್ದಾರೆ. ಇಡೀ ಹಾಡಿನಲ್ಲಿ ಶಿವರಾಜ್'ಕುಮಾರ್ ಸೇರಿದಂತೆ ಎಲ್ಲ ಕಲಾವಿದರು ಬರಿಗಾಲಲ್ಲಿ ಕುಣಿದಿದ್ದಾರೆ. ಬಿಸಿಲಿನಲ್ಲೂ ನೂರಾರು ನೃತ್ಯಕಲಾವಿದರಿಂದ ಕುಣಿಸಲಾಗಿದೆ. ಬೆಟ್ಟದ ಬಿಸಿಲಿನ ಅರಿವಿರುವವರಿಗೆ ಗೊತ್ತಾಗುತ್ತದೆ ಆ ನೃತ್ಯ ಕಲಾವಿದರ ಕಾಲಿಗೆ ಬೊಬ್ಬೆ ಬಂದಿರಲೂಬಹುದೆಂದು.


ಈ ಹಾಡಿಗೆ ಬಳಸಲಾಗಿರುವ ಸಂಗೀತ ವಾದ್ಯಗಳ ಪೈಕಿ ಮುಖ್ಯವಾಗಿರುವುದು ಕಂಸಾಳೆ. ಮಾದಪ್ಪನಿಗೆ ಬಹಳ ಇಷ್ಟವಾದದ್ದು. ಗುರುಕಿರಣ್ ಅದೆಷ್ಟು ಚೆಂದ ಬಳಸಿಕೊಂಡಿದ್ದಾರೆ ನೋಡಿ.


ಹೀಗೆ ಚಂದದ ಚಿತ್ರವೊಂದು ಸುಮ್ಮನೆ ಹಾಗೇ ಹಿಟ್ ಆಗುವುದಿಲ್ಲ. ಪ್ರತೀ ವಿಷಯಗಳು ಸರಿಯಾಗಿ ಕೂಡಿ ಬಂದಾಗ ಇಂಥದ್ದೊಂದು ಚಂದದ ಸಿನಿಮಾ ಆಗುತ್ತದೆ. ಇಲ್ಲಿ ನಮ್ಮ ಮಣ್ಣಿನ ಘಮಲಿರುವ ಅನೇಕ ಅಂಶಗಳಿವೆ. ಇದೇ ಕಾರಣಕ್ಕೆ ಈ ಸಿನಿಮಾವನ್ನು ಬೇರೆ ಯಾವ ಭಾಷೆಯಲ್ಲೂ ರಿಮೇಕ್ ಮಾಡಿದಾಗ ಇದು ಅಲ್ಲಿನ ಸಿನಿಮಾ ಅನ್ನಿಸಿಕೊಳ್ಳಲಿಲ್ಲ.

ಕಡೆಯದಾಗಿ,
ಈ ಮೇಲಿನ ಹಾಡು ಸೇರಿದಂತೆ ಈ ಸಿನಿಮಾದ ಎಲ್ಲ ಹಾಡುಗಳ ಸಾಹಿತ್ಯ, ಕಥೆ, ಚಿತ್ರಕಥೆ ಬರೆದಿರುವುದು ನಿರ್ದೇಶಕ ಪ್ರೇಮ್. ಸಿನಿಮಾದ ಯಶಸ್ಸಿನ ಬಹುಭಾಗ ಇವರಿಗೆ ಸಲ್ಲಬೇಕು. ಇಂದು 19-Aug. ಜೋಗಿ ಸಿನಿಮಾ ಬಿಡುಗಡೆಯಾದದ್ದು 19-Aug-2005 ರಲ್ಲಿ. ಅಂದರೆ ಆಗಲೇ ಇಂದಿಗೆ 17 ವರ್ಷಗಳಾಯಿತಂತೆ. ನಿನ್ನೆಯಷ್ಟೇ ಬಿಡುಗಡೆಯಾಗಿ ಥಿಯೇಟರುಗಳಲ್ಲಿ ಬ್ಲ್ಯಾಕ್ ಟಿಕೆಟ್ ಕೊಂಡು ಸಿನಿಮಾ ನೋಡಿದ ಹಾಗಿದೆ.


ಅಂಥದ್ದೊಂದು ಸಿನಿಮಾ ಕೊಟ್ಟ ಜೋಗಿ ಸಿನಿಮಾ ತಂಡದವರಿಗೆ ಅಭಿನಂದನೆಗಳು.


ಧನ್ಯವಾದಗಳು.
-ಸಂತೋಷ್ ಕುಮಾರ್ ಎಲ್.ಎಂ (Santhoshkumar Lm)


#Jogi #17years


#santhuLm
19-Aug-2022