Wednesday, April 7, 2021

ಮಂಡೇಲಾ (ತಮಿಳು, ೨೦೨೧)



ಮಂಡೇಲಾ (ತಮಿಳು, ೨೦೨೧)





ಸಿನಿಮಾ ಅನ್ನೋದು ಸಂದೇಶವೊಂದನ್ನು ಕೊಡಲೇಬೇಕಾ? ಕೊಡುತ್ತೇವೆ ಅಂದುಕೊಂಡು ಬರುವ ಸಿನಿಮಾಗಳು ಬಹುತೇಕ ಅದರತ್ತ ಮಾತ್ರ ಗಮನ ಹರಿಸಿ ಮಾಮೂಲಿ ಸಿನಿಮಾ ಕೊಡಬಹುದಾದ ಅನುಭವದಿಂದ ನಮ್ಮನ್ನು ವಂಚಿತರನ್ನಾಗಿ ಮಾಡುತ್ತವೆ. ಸಿನಿಮಾ ಸಿನಿಮಾವಾಗಿಯೂ ಗೆಲ್ಲಬೇಕು. ಜೊತೆಗೆ ಅದು ಕೊಡಮಾಡುವ ಸಂದೇಶವೂ ಪರಿಣಾಮಕಾರಿಯಾಗಿರಬೇಕು.


ಇಷ್ಟೆಲ್ಲ ಹೇಳಿದ ಮೇಲೆ ನಾನೊಂದು ಗಂಭೀರ ಸಿನಿಮಾದ ಬಗ್ಗೆ ಮಾತನಾಡುತ್ತೇನೆ ಅಂದುಕೊಂಡರೆ ಅದು ತಪ್ಪು. 2016ರಲ್ಲಿ ಜೋಕರ್ ಅನ್ನುವ ಸಾಮಾಜಿಕ ಸಂದೇಶವನ್ನು ಸಾರುವ ತಮಿಳು ಸಿನಿಮಾವೊಂದು ಬಿಡುಗಡೆಯಾಗಿ ಪ್ರಶಂಸೆಗೆ ಪಾತ್ರವಾಗಿತ್ತು. ಇದೀಗ "ಮಂಡೇಲಾ" ಅನ್ನುವ ಇನ್ನೊಂದು ಚಿತ್ರ ಅದಕ್ಕಿಂತಲೂ ಚೆನ್ನಾಗಿ ಮೂಡಿ ಬಂದಿದೆ.


ಇಡೀ ಚಿತ್ರದ ಹೈಲೈಟ್ ಅದರ ಕಥೆಯಷ್ಟೇ. ಒಂದು ಗ್ರಾಮಪಂಚಾಯಿತಿ ಚುನಾವಣೆಯ ಪುಟ್ಟ ಎಳೆಯೊಂದನ್ನು ಇಟ್ಟುಕೊಂಡೇ ಇಡೀ ಸಿನಿಮಾದ ಎಲ್ಲ ದೃಶ್ಯಗಳನ್ನು ಹೆಣೆಯಲಾಗಿದೆ. ಎಲ್ಲಿಯೂ ಯಾವುದೇ ವಿಷಯ ಹೆಚ್ಚು-ಕಡಿಮೆ ಅನ್ನಿಸುವುದಿಲ್ಲ. ಸಿನಿಮಾದ ಕಥಾನಾಯಕ ಒಬ್ಬ ಕ್ಷೌರಿಕ. ಆ ಪಾತ್ರದಲ್ಲಿ 'ಯೋಗಿ ಬಾಬು" ಅನ್ನುವ ಹಾಸ್ಯ ನಟ ಎಲ್ಲರೂ ನಾಚುವಂತೆ ಅಭಿನಯಿಸಿದ್ದಾರೆ.


ಒಂದೇ ಚಿತ್ರದಲ್ಲಿ ವೋಟು ರಾಜಕಾರಣ, ಮತದಾನದ ಬಗೆಗಿನ ಅರಿವು, ಒಂದು ಮತದ ಮೌಲ್ಯ, ಪಕ್ಷಗಳ ಓಲೈಸುವಿಕೆ, ಭ್ರಷ್ಟಾಚಾರ, ಜಾತೀಯತೆ, ದೇಶದ ನಾಗರಿಕನೊಬ್ಬನಿಗಿರುವ ಅಧಿಕಾರ ಇತ್ಯಾದಿ ವಿಷಯಗಳನ್ನು ಕೊಂಚವೂ ಬೇಸರವಾಗದಂತೆ ಮನಮುಟ್ಟುವ ಹಾಗೆ ಹೇಳಿದ್ದಾರೆ. ಆದರೆ ಇವೆಲ್ಲ ವಿಷಯಗಳನ್ನು ನಮಗೆ ಬೋಧಿಸಿದಂತೆ ಎಲ್ಲಿಯೂ ಅನ್ನಿಸುವುದಿಲ್ಲ. ಏಕೆಂದರೆ ಕಥೆಯಲ್ಲಿಯೂ ಈ ವಿಷಯಗಳನ್ನು ನೇರವಾಗಿ ಚರ್ಚಿಸುವುದಿಲ್ಲ. ಆದರೆ ನೋಡುಗನ ಮನಸ್ಸಿನಲ್ಲಿ ಮಾತ್ರ ಈ ವಿಷಯಗಳು ಮನದಟ್ಟಾಗುತ್ತ ಸಾಗುತ್ತದೆ.


ಒಂದು ದೃಶ್ಯದಲ್ಲಿ ಅಂಚೆ ಕಛೇರಿಯಲ್ಲಿ ಖಾತೆಯೊಂದನ್ನು ತೆರೆಯೋಣ ಅಂತ ಹೋಗುವ ನಾಯಕನಿಗೆ ಅದಕ್ಕೆ ಆಧಾರ್ ಕಾರ್ಡ್ ಕಡ್ಡಾಯ ಅಂತ ಅರಿವಾಗುತ್ತದೆ. ನಾಯಕನ ಜೊತೆಗಿದ್ದ ಹುಡುಗ ಕೇಳುತ್ತಾನೆ. "ಆಧಾರ್ ಯಾಕೆ ಬೇಕು" ಅಂತ. ಅದಕ್ಕೆ "ಇಲ್ಲದಿದ್ದರೆ ಇವನು ನಮ್ಮ ದೇಶದವನೇ ಅಂತ ಹೇಳೋದು ಹೇಗೆ?" ಅಂತ ಪ್ರತಿಕ್ರಿಯೆ ಬರುತ್ತೆ. ತಕ್ಷಣವೇ ಆ ಹುಡುಗ "ನೋಡಿದ್ರೆ ಗೊತ್ತಾಗಲ್ವಾ ಮೇಡಂ. ಈ ನನ್ಮಗನ ಮೂತಿ ಇನ್ನೇನು ಫಾರಿನ್ನೋನ ಥರಾ ಕಾಣುತ್ತಾ?" ಅಂತ. ಈ ಸಂಭಾಷಣೆಯನ್ನು ಸಿನಿಮಾದೊಳಗೆ ಹಾಸ್ಯದ ರೀತಿ ಹೇಳುವುದಿಲ್ಲ. ಗಂಭೀರವಾಗಿಯೇ ಇರುತ್ತದೆ. ಆದರೆ ನೋಡುವ ನಮಗೆ ಮಾತ್ರ ಫಕ್ಕನೆ ನಗು ತರಿಸುತ್ತದೆ. ಸಿನಿಮಾ ಮುಂದುವರಿಯುತ್ತದೆ. ಇದೇ ರೀತಿ ಸಿನಿಮಾ ಪೂರ್ತಿ ನಗಿಸುವ, ಕಣ್ಣೊದ್ದೆ ಮಾಡುವ, ಚಿಂತನೆಗೆ ದೂಡುವ ಅನೇಕ ದೃಶ್ಯಗಳಿವೆ. ಕೊಂಚವೂ ವಿಷಯಗಳು ಮೂಲ ಎಳೆಯನ್ನು ಬಿಟ್ಟು ಅತ್ತಿತ್ತ ಕದಲುವುದಿಲ್ಲ.


ನಾಯಕ ಯೋಗಿ ಬಾಬು ಮೂಲತಃ ಪುಟ್ಟ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಒಬ್ಬ ಹಾಸ್ಯ ನಟ. ಅವರೇನು ಸಿಕ್ಸ್ ಪ್ಯಾಕ್ ಮಾಡಿಲ್ಲ. ನೋಡಲು ಇತರ ಹೀರೋಗಳಂತಿಲ್ಲ. ಅಂಥ ನಟನನ್ನು ಸಿನಿಮಾ ಮುಗಿಯುವ ಹೊತ್ತಿಗೆ ಮನಸ್ಸು ಹೀರೋ ಅಂತ ಒಪ್ಪಿಕೊಳ್ಳುವ ಹಾಗೆ ಮಾಡುತ್ತದಲ್ಲ. ಅದು ನಿಜವಾದ ಸಿನಿಮಾ ಕಥೆಯ ತಾಕತ್ತು. ಅವರನ್ನು ಈ ಸಿನಿಮಾ ಮತ್ತೊಂದು ಮಜಲಿಗೆ ಕರೆದೊಯ್ಯುತ್ತದೆ ಅನ್ನುವುದರಲ್ಲಿ ಸಂದೇಹವಿಲ್ಲ. ಯೋಗಿಬಾಬು ಇರುವ ಹಾಗೆಯೇ ಅವರನ್ನು ಸಿನಿಮಾಗೆ ಸೂಕ್ತವಾಗಿ ಬಳಸಿಕೊಳ್ಳಲಾಗಿದೆ. ಸಿನಿಮಾದಲ್ಲಿರುವ ಮುಕ್ಕಾಲು ಭಾಗ ಪಾತ್ರಧಾರಿಗಳ ಅರಿಚಯವಿಲ್ಲ. ಆದರೆ ಸಿನಿಮಾ ನೋಡುವಾಗ ಎಲ್ಲೂ ಯಾರೂ ಅಪರಿಚಿತವೆನಿಸುವುದೇ ಇಲ್ಲ.


ಬಹುಶಃ ನಾಯಕರಿಗಾಗಿ ಕಥೆ ಬರೆಯುವ ಬದಲು ಕಥೆ ಬರೆದು ಸೂಕ್ತವಾದ ನಟರನ್ನು ಆಯ್ದುಕೊಂಡರೆ ಈ ಬಗೆಯ ಸಿನಿಮಾಗಳು ಹೊರಮೂಡುತ್ತವೆ ಅಂತ ಖಡಾಖಂಡಿತವಾಗಿ ಹೇಳಬಹುದು. ಸಿನಿಮಾ ಸ್ಕ್ರಿಪ್ಟ್ ಮೇಲೆ ಕೆಲಸ ಮಾಡುವವರು ಈ ಬಗೆಯ ಸಿನಿಮಾಗಳನ್ನು ಹೆಚ್ಚು ಹೆಚ್ಚು ನೋಡಬೇಕು. ಕಾಕತಾಳಿಯವೇನೋ ಎಂಬಂತೆ ತಮಿಳುನಾಡಿನ ವಿಧಾನಸಭಾ ಚುನಾವಣೆ ನಡೆಯುವ ಸಮಯದಲ್ಲೇ ಈ ಸಿನಿಮಾ ಬಿಡುಗಡೆಯಾಗಿದೆ. ನೆಟ್'ಫ್ಲಿಕ್ಸ್ ನಲ್ಲಿದೆ. ಮರೆಯದೆ ನೋಡಿ.


-Santhosh Kumar LM
07-Apr-2021