Saturday, September 11, 2021

ಮೇರ್ಕು ತೊಡರ್ಚಿ ಮಲೈ




ಮೇರ್ಕು ತೊಡರ್ಚಿ ಮಲೈ
( spoiler alert: ಸಿನಿಮಾ ಈಗಾಗಲೇ ನೋಡಿದವರಿಗಾಗಿ.....ಮತ್ತು ನೋಡುವ ಯಾವುದೇ ಪ್ಲಾನ್ ಇಲ್ಲದವರಿಗಾಗಿ)

ಕೆಲವು ಸಿನಿಮಾಗಳು ಹಾಗೆಯೇ. ಯಾವುದೋ ಒಂದು ವಿಷಯದ ಟ್ರ್ಯಾಕಿನಲ್ಲಿ ಸಾಗುತ್ತಿರುತ್ತವೆ. ಇನ್ನೇನು ಸಿನಿಮಾ ಮುಗಿಯುವ ಸಮಯ ಬಂತು ಅಂದಾಗ ಥೇಟ್ ಸಾಂಬಾರಿಗೆ ಹಾಕುವ ಒಗ್ಗರಣೆಯಂತೆ "ಅದೊಂದು" ವಿಶೇಷವಾದ ದೃಶ್ಯದೊಂದಿಗೆ ಮುಗಿದುಬಿಡುತ್ತವೆ. "ಹಾಳಾದ ಸಿನಿಮಾ" ಅಂತ ವೀಕ್ಷಕನೂ ಬೈದುಕೊಳ್ಳುತ್ತಾನೆ. ಏಕೆಂದರೆ ಸಿನಿಮಾ ಮುಗಿದು ಕೆಲ ದಿನಗಳಾದರೂ ಆ ಒಂದು ದೃಶ್ಯ ಮನಸ್ಸಿನೊಳಗೆ ಗಿರಕಿ ಹೊಡೆಯುತ್ತಲೇ ಇರುತ್ತದೆ. ಆ ಒಂದು ದೃಶ್ಯ ಸಿನಿಮಾದ ಕಥೆಯನ್ನು ಬರೆಯುವಾಗಲೇ ಬರೆದದ್ದೋ ಅಥವಾ ಇನ್ಯಾವಾಗಲೋ ಸಿನಿಮಾದ ಅಂತ್ಯ ಕೊಂಚ ಜಾಸ್ತಿ ಪರಿಣಾಮ ಬೀರಬೇಕೆಂದು ನಿರ್ದೇಶಕ ಮಾಡುವುದೋ ಗೊತ್ತಾಗುವುದೇ ಇಲ್ಲ.

ಮೇರ್ಕು ತೊಡರ್ಚಿ ಮಲೈ..... ಈ ಸಿನಿಮಾದ ಕಥೆಯ ಎಳೆಯೇ ಜಮೀನಿಲ್ಲದ ಶ್ರಮಿಕನೊಬ್ಬ ಜಮೀನನ್ನು ಖರೀದಿಸಲು ಹಂಬಲಿಸಿ ಅದಕ್ಕಾಗಿ ಇನ್ನಿಲ್ಲದ ಪ್ರಯತ್ನ ಮಾಡುವುದು.

ಅದು ಪಶ್ಚಿಮ ಘಟ್ಟಗಳು ಮತ್ತು ಬಯಲು ಸೀಮೆ ಸೇರುವ ಜಾಗ. ಘಟ್ಟಗಳನ್ನು ಹತ್ತಲು ಸುಲಭದ ರಸ್ತೆಗಳು ಇಲ್ಲದ ಕಾರಣ, ಮೇಲಿನ ಎಸ್ಟೇಟಿಗೆ ಮತ್ತು ಕೆಳಗಿನ ಊರುಗಳಿಗಿರುವ ಸಂಪರ್ಕವೆಂದರೆ ಕಾಲ್ನಡಿಗೆಯಲ್ಲೇ ಹತ್ತಿಳಿದು ಸಾಮಾನುಗಳನ್ನು ತಲುಪಿಸುವ ಆ ಊರಿನ ಶ್ರಮಿಕ ಯುವಕರು. ರಂಗಸ್ವಾಮಿ ಕೂಡ ಅವರಲ್ಲೊಬ್ಬ. ಪ್ರತಿದಿನ ಬೆಟ್ಟ ಹತ್ತಿ ಅತ್ತಲಿಂದ ಏಲಕ್ಕಿಯ ಮೂಟೆಗಳನ್ನು ಹೊತ್ತು ಇಳಿದು ಅದರಿಂದ ಬಂದ ಕೂಲಿಯಿಂದಲೇ ಜೀವನ ಸಾಗಿಸುವುದು ರಂಗಸ್ವಾಮಿ ಸೇರಿದಂತೆ ಅಲ್ಲಿನ ಬಹುತೇಕರ ಜೀವನೋಪಾಯ.

ರಂಗಸ್ವಾಮಿಗೆ ಪುಟ್ಟ ಜಮೀನನ್ನು ಕೊಂಡು ಕೃಷಿಕನಾಗಬೇಕೆನ್ನುವ ಮಹದಾಸೆ. ಹಾಗಾಗಿ ಪುಟ್ಟ ಪುಟ್ಟ ಉಳಿತಾಯ ಮಾಡುತ್ತಿರುತ್ತಾನೆ. ಕಷ್ಟಪಟ್ಟದ್ದಕ್ಕೆ ಉತ್ತರವೆಂಬಂತೆ, ಜೊತೆಗೆ ಇನ್ನೊಬ್ಬ ಸಹೃದಯರ ಸಹಾಯದಿಂದ ಆ ಪುಟ್ಟ ಜಮೀನಿಗೆ ಒಡೆಯನಾಗುತ್ತಾನೆ. ಅವನ ಕುಟುಂಬದಲ್ಲಿ ಅದೇ ಮೊದಲ ಬಾರಿಗೆ ಸಂತೋಷ ಮನೆಮಾಡುತ್ತದೆ. ಜಮೀನಿನಲ್ಲಿ ಕೃಷಿ ಮಾಡಿ ಬಂದ ಹಣವನ್ನು ಸ್ವಲ್ಪ ಸ್ವಲ್ಪ ಕೊಟ್ಟು ಸಾಲ ತೀರಿಸುತ್ತಾನೆ. ಎಲ್ಲವೂ ಚೆನ್ನಾಗಿದೆ ಅಂದುಕೊಂಡಿರುವಾಗ ಅದೊಂದು ದಿನ ಮಳೆ ಬಂದು ಬೆಳೆಯನ್ನೆಲ್ಲ ಕೊಚ್ಚಿಕೊಂಡು ಹೋಗುತ್ತದೆ. ಅದೇ ಸಮಯದಲ್ಲಿ ಅಲ್ಲಿ ನಡೆಯುವ ರಾಜಕೀಯ ವಿದ್ಯಮಾನಗಳಿಂದ ಜೈಲು ಸೇರುತ್ತಾನೆ. ಜೈಲುವಾಸ ಮುಗಿಸಿ ಮತ್ತೆ ಮನೆ ಸೇರುವ ವೇಳೆಗೆ ಐದಾರು ವರ್ಷಗಳಿಂದ ಕೃಷಿಗಾಗಿ ತೆಗೆದುಕೊಂಡಿದ್ದ ಬೀಜ, ಗೊಬ್ಬರ, ಕೀಟನಾಶಕ ಇತ್ಯಾದಿಗಳ ಸಾಲ ಕೈ ಮೀರಿ ಹೋಗಿರುತ್ತದೆ.

ಅದೊಂದು ದಿನ ಸಾಲ ಕೊಟ್ಟಿದ್ದ ಆ ಅಂಗಡಿಯ ಮಾಲಿಕ ಇವನನ್ನು ಬರ ಹೇಳುತ್ತಾನೆ. ಲೆಕ್ಕ ನೋಡಿದರೆ ಈತನ ಸಾಲ ಜಮೀನಿನ ಬೆಲೆಗಿಂತ ಜಾಸ್ತಿಯಾಗಿರುತ್ತದೆ. ಹಾಗಾಗಿ ಈತನ ಜಮೀನಿನ ಪತ್ರಗಳಿಗೆ ಸಹಿ ಮಾಡಿಸಿಕೊಂಡು ವಾಪಸ್ಸು ಕಳುಹಿಸುತ್ತಾನೆ. ಆದರೆ ಕಳುಹಿಸುವ ಮುನ್ನ ಈತನ ಸ್ಥಿತಿಗೆ ಮರುಕಪಟ್ಟು ಆತನಿಗೊಂದು ಕೆಲಸ ಕೊಡಿಸುತ್ತಾನೆ.

-----

ಸಿನಿಮಾ ಮುಗಿಯುತ್ತದಾ?

ಇಲ್ಲ..... ರಂಗಸ್ವಾಮಿ ಮನೆಗೆ ಬರುತ್ತಾನೆ. ಮರುದಿನ ಬೆಳಿಗ್ಗೆ ಆ ಹೊಸ ಕೆಲಸದ ಮೊದಲ ದಿನ. ಇಲ್ಲಿಯೂ ನಿರ್ದೇಶಕ ಏನೂ ಗುಟ್ಟು ಬಿಟ್ಟುಕೊಡುವುದಿಲ್ಲ. ಹೊಸ ಕೆಲಸಕ್ಕೆಂದು ಕೊಟ್ಟ ನೀಲಿ ಬಣ್ಣದ ಯೂನಿಫಾರಂ ಅನ್ನು ತೊಟ್ಟು ಮನೆಯಿಂದ ಹೊರಬರುತ್ತಾನೆ. ಅಲ್ಲಿಗೆ ಆಗಲೇ ತುಂಬಿ ಕಿಕ್ಕಿರಿದಿದ್ದ ಟಾಟಾ ಸುಮೋ ಬರುತ್ತದೆ. ಇದ್ದ ಸ್ವಲ್ಪ ಜಾಗದಲ್ಲೇ ಈತನೂ ಅನುಸರಿಸಿಕೊಂಡು ಕೂರುತ್ತಾನೆ. ಆ ವಾಹನ ಆ ಮಾಲಿಕನಿಗೆ ಸೇರಿದ್ದು. ಟಾಟಾ ಸುಮೋ ಇವನನ್ನು ಅದೊಂದು ಜಾಗದಲ್ಲಿ ಇಳಿಸಿ ಹೊರಟುಹೋಗುತ್ತದೆ.

ಈತ ನಡೆಯುತ್ತ ಹೋಗಿ ಆ ಜಾಗದ ಮಧ್ಯದಲ್ಲಿ ಹಾಕಿದ್ದ ಖುರ್ಚಿಯಲ್ಲಿ ಕುಳಿತುಕೊಳ್ಳುತ್ತಾನೆ. ಇನ್ನು ಮುಂದೆ ಆ ಜಾಗವನ್ನು ಕಾಯುವುದೇ ಕೆಲಸ. ನಿಧಾನಕ್ಕೆ ಡ್ರೋನ್ ವ್ಯೂ ಮೇಲೆ-ಮೇಲೆ ಸಾಗುತ್ತದೆ. ಆಗ ನಮಗೆ ಗೊತ್ತಾಗುವುದು ಆ ಜಾಗ ಅವನ ಜಮೀನೇ!! ಆದರೆ ಒಂದೊಮ್ಮೆ ಹಸಿರಿನಿಂದ ಕಂಗೊಳಿಸುತ್ತಿದ್ದ ಆ ಜಾಗ ಈಗ ಬರಿಯ ಮೈದಾನವಾಗಿರುತ್ತದೆ. ಇನ್ನೂ ಮೇಲೆ ಮೇಲೆ ಹೋದಂತೆ ಬರಿ ಇವನ ಜಾಗವಷ್ಟೇ ಅಲ್ಲ. ಅಕ್ಕ ಪಕ್ಕದ ನೂರಾರು ಎಕರೆ ಜಮೀನುಗಳೂ ಬರೀ ಮೈದಾನವಾಗಿರುತ್ತವೆ. ಅಲ್ಲಿ ಯಾವುದೇ ಬೆಳೆ ಬೆಳೆದಿರುವುದಿಲ್ಲ ಅಂತ ಗೊತ್ತಾಗುತ್ತದೆ. ಏಕೆಂದರೆ ಕೊಂಡವನು ಕೃಷಿಕನಲ್ಲ!

ಇನ್ನೂ ಮೇಲೆ ಮೇಲೆ ಹೋದಂತೆ ಇವನ ಜಮೀನು ಸೇರಿದಂತೆ ಆ ಎಲ್ಲ ಜಮೀನುಗಳಲ್ಲಿ ವಿಂಡ್‍ಮಿಲ್ ತಿರುಗುತ್ತಿರುವುದು ಕಾಣಿಸುತ್ತದೆ. ಹಿಂದೆ ಇದೇ ಜಾಗದಲ್ಲಿ ಈತ ನಡೆದು ಬೆಟ್ಟ ಹತ್ತುವಾಗ ಅಲ್ಲಿದ್ದ ಕಾಡು, ಹಸಿರೆಲ್ಲ ನಿರ್ನಾಮವಾಗಿ ಇಂದು ಅಭಿವೃದ್ಧಿಯ ಹೆಸರಲ್ಲಿ ಬರಿದಾಗಿರುತ್ತವೆ. ಜೀವನವೆಲ್ಲ ತುಂಡು ಜಮೀನು ಹೊಂದಬೇಕು, ಹಿಡುವಳಿದಾರನಾಗಬೇಕು, ಕೃಷಿ ಮಾಡಬೇಕು, ನಾಲ್ಕು ಕಾಸು ಸಂಪಾದಿಸಬೇಕು ಎಂದು ಬೆವರ ಬಸಿದಿದ್ದ ರಂಗಸ್ವಾಮಿ.... ಇಂದು ಹಸಿರೇ ಕಾಣದ ತನ್ನದೇ ಜಮೀನಿನಲ್ಲಿ ಸೆಕ್ಯುರಿಟಿ ಕೆಲಸ ಮಾಡುವ ಆ ದೃಶ್ಯ ಪ್ರೇಕ್ಷಕನ ಕರುಳ ಹಿಂಡುತ್ತದೆ.

ಇಲ್ಲಿ ಇಷ್ಟೆಲ್ಲ ವಿವರಿಸಿದೆನಲ್ಲ. ಆದರೆ ನಿರ್ದೇಶಕ ಇಷ್ಟೆಲ್ಲವನ್ನೂ ಅದೊಂದು ಡ್ರೋನ್ ಶಾಟ್'ನಲ್ಲಿ ಹೇಳಿಬಿಡುತ್ತಾನೆ. ಅಲ್ಲಿ ರಂಗಸ್ವಾಮಿ ಅಳುವುದಿಲ್ಲ, ಸಾಲು ಸಾಲು ಡೈಲಾಗು ಹೊಡೆಯುವುದಿಲ್ಲ...ಆದರೆ ಅಸಹಾಯಕನಾಗಿ ಕೂರುವ ಆತನ ಸ್ಥಿತಿಯೇ ಎಲ್ಲವನ್ನೂ ಹೇಳಿಬಿಡುತ್ತದೆ.

ದೃಶ್ಯಕಲೆ ನಿಜಕ್ಕೂ ಪರಿಣಾಮಕಾರಿ. ಆದರೆ ಅದನ್ನು ನಿರ್ದೇಶಕ ತನ್ನ ಕಥೆ ಹೇಳಲು ಹೇಗೆ ಬಳಸಿಕೊಳ್ಳಬಲ್ಲಅನ್ನುವುದರ ಮೇಲೆ ಎಲ್ಲವು ನಿರ್ಧರಿತವಾಗುತ್ತದೆ.

ನಿರ್ದೇಶಕ: ಲೆನಿನ್ ಭಾರತಿ
ಸಿನಿಮಾ: ಮೇರ್ಕು ತೊಡರ್ಚಿ ಮಲೈ(2016)

-Santhosh Kumar LM
11-Sep-2021