Wednesday, September 21, 2022

ವೆಂದು ತಣಿಂದದು ಕಾಡು (Tamil, 2022)




ಹಳ್ಳಿಯಲ್ಲಿ ಓದಿಕೊಂಡ ಹುಡುಗನೊಬ್ಬ ಕೆಲಸ ಸಿಗದೆ ಏನು ಬೇಕಾದರೂ ಮಾಡಬಲ್ಲೆ ಅನ್ನುವ ಸ್ಥಿತಿಯಲ್ಲಿದ್ದಾಗ ಅಲ್ಲಿಯೂ ಅವನನ್ನು ಉಳಿಯಗೊಡದಂಥ ಪರಿಸ್ಥಿತಿ ಎದುರಾಗುತ್ತದೆ. ಆಗ ಆತನ ತಾಯಿ ಆತನನ್ನು ಆ ಊರಿಂದಲೇ ಬಹುದೂರ ಹೋಗುವಂತೆ ದಾರಿಯೊಂದನ್ನು ಹುಡುಕುತ್ತಾಳೆ. ಆತ ಮುಂದೇನಾಗುತ್ತಾನೆ ಅನ್ನುವ ರೋಚಕ ಕಥೆಯೇ "ವೆಂದು ತಣಿಂದದು ಕಾಡು"

ಗ್ಯಾಂಗ್‍ಸ್ಟರ್ ಸಿನಿಮಾಗಳ ಕಥೆಯ ಫಾರ್ಮ್ಯಾಟ್ ಎಲ್ಲ ಒಂದು ರೀತಿಯಲ್ಲಿ ಒಂದೇ ರೀತಿಯದ್ದಾಗಿರುತ್ತದೆ. ಆದರೆ ಆ ಕಥೆಯನ್ನು ಹೆಣೆದು ತೋರಿಸುವ ರೀತಿ ಹೇಗೆ ಅನ್ನುವುದರ ಮೇಲೆ ಆ ಸಿನಿಮಾ ಹೇಗಿದೆ ಅನ್ನುವುದು ನಿರ್ಧಾರವಾಗುತ್ತದೆ. ಆ ದೃಷ್ಟಿಯಲ್ಲಿ ನೋಡಿದರೆ "ವೆಂದು ತಣಿಂದದು ಕಾಡು" ಜಿ.ವಿ.ಮೆನನ್ ಅವರ ಸಿನಿಮಾ. ಸಾವಧಾನವಾಗಿ ಸಾಗುತ್ತಲೇ ಎಲ್ಲ ದೃಶ್ಯಗಳನ್ನು ಮನೋಜ್ಞವಾಗಿ ಕಟ್ಟಿಕೊಡುವುದು ಅವರ ಕಥೆ ಹೇಳುವ ರೀತಿ. ಇಲ್ಲಿ ಎಲ್ಲ ಕಡೆ ಅದಕ್ಕೆ ಅವಕಾಶವಿಲ್ಲ. ಕೆಲವು ಕಡೆ ಅದು ಓಡಬೇಕು. ಕೆಲವು ಕಡೆ ಉಸಿರೆಳೆದುಕೊಳ್ಳಬೇಕು. ಹಾಗಾಗಿಯೇ ಎಲ್ಲಿ ಅವಕಾಶ ಸಿಗುತ್ತದೋ ಅಲ್ಲೆಲ್ಲ ತಮ್ಮ ಕೈಚಳಕ ತೋರಿಸಿಬಿಡುತ್ತಾರೆ.

ಮುಂಬೈಯ ಮನೆಮಾಳಿಗೆಯೊಂದರಲ್ಲೇ ಮೂವತ್ತೈದು ಜನ ಮಲಗಿಕೊಳ್ಳುವ ಆ ದೃಶ್ಯಗಳು ನೈಜವಾಗಿ ಮೂಡಿಬಂದಿವೆ. ಮುಂಬೈ ನಗರದ ಧಾವಂತ, ಅಲ್ಲಿಯ ಜನಜೀವನ, ಅಲ್ಲಿಯ ಭೂಗತ ಜಗತ್ತು, ಹೊರರಾಜ್ಯಗಳಿಂದ ಹೋಗುವ ನಿರೋದ್ಯೋಗಿ ಯುವಕರನ್ನು ತನ್ನ ಜಾಲದಲ್ಲಿ ಬಂಧಿಸಿಬಿಡುವಿಕೆ, ಅಲ್ಲಿಯೂ ಇರಲಾರದೆ ಇತ್ತ ಊರಿಗೆ ವಾಪಸ್ಸು ಬರಲಾರದ ಅಸಹಾಯಕತೆ-ಒಂಟಿತನ ಎಲ್ಲವನ್ನೂ ಸಿನಿಮಾದಲ್ಲಿ ಮನಸ್ಸಿಗೆ ನಾಟುವಂತೆ ತೋರಿಸಲಾಗಿದೆ. ಅತ್ತ ಭೂಗತ ಜಗತ್ತನ್ನು ತೋರಿಸುವಾಗಲೂ ಎಲ್ಲೆಲ್ಲಿ ಅವಕಾಶವಿದೆಯೋ ಅಲ್ಲಿ ಮನರಂಜನೆಯನ್ನು ಬಡಿಸುವುದನ್ನು ಮರೆತಿಲ್ಲ. ಎಲ್ಲಿಯೂ ಬೋರ್ ಹೊಡೆಸದಂತೆ ಚಿತ್ರಕಥೆ ಹೆಣೆಯಲಾಗಿದೆ. ಹೊಡೆದಾಟದ ದೃಶ್ಯಗಳಲ್ಲಿ, ಮಧ್ಯೆ ಅಲ್ಲಲ್ಲಿ ಬರುವ ಪ್ರೀತಿಯ ಕಥೆ, ಹಾಡುಗಳು ಹೀಗೆ ಅನೇಕ ಕಡೆ ಲಾಂಗ್-ಟೇಕ್ ಬಳಸಲಾಗಿದೆ. ಒಂದು ಹಾಡಿನಲ್ಲಂತೂ ಅಷ್ಟೂ ಹೊತ್ತಿನ ಸಾಹಿತ್ಯವನ್ನು ಕಲಾವಿದರು ಹೇಗೆ ನೆನಪಿಟ್ಟುಕೊಂಡು ನಟಿಸಿದರು ಅನ್ನುವಷ್ಟು ಸುದೀರ್ಘವಾದ ಶಾಟ್ ಇದೆ.

ಆರಂಭದಿಂದಲೂ ಗಂಭೀರವಾಗಿ ಸಾಗುವ ಸಿನಿಮಾದ ಮಧ್ಯೆ ಇದ್ದಕ್ಕಿದ್ದಂತೆ ಬರುವ "ಹೇ ಮಲ್ಲಿ ಪೂ ವಚ್ಚಿ ವಚ್ಚಿ ವಾಡುದೆ" (ಮಲ್ಲಿಗೇ ಹೂ ಮುಡಿದು ಮುಡಿದು ಬಾಡುತಿದೆ) ಹಾಡು ಸಿನಿಮಾ ನೋಡುತ್ತಿದ್ದವರನ್ನು ಎದ್ದುನಿಂತು ಕುಣಿಯುವಂತೆ ಮಾಡುತ್ತದೆ. ಎಆರ್ ರೆಹಮಾನ್ ಅವರ ಸಂಗೀತ ಇದಕ್ಕೆ ಮುಖ್ಯ ಕಾರಣ. ಸಿನಿಮಾದುದ್ದಕ್ಕೂ ಅವರ ಹಿನ್ನೆಲೆ ಸಂಗೀತವೂ ಕಡಿಮೆಯೇನಿಲ್ಲ.
ಈ ಸಿನಿಮಾದ ನಾಯಕನಟ ಸಿಂಬು aka ಸಿಲಂಬರಸನ್ ಅವರಿಗೆ ಈ ಸಿನಿಮಾದಲ್ಲಿ ಯಾವುದೇ ರೀತಿಯ ಬಿಲ್ಡಪ್ ಇಲ್ಲ. ಅವರ ಲುಕ್ ಕೂಡ ಸಾಮಾನ್ಯ ಹುಡುಗನೊಬ್ಬನಂತೆಯೇ ಇದೆ. ಆದರೆ ಈ ಪಾತ್ರಕ್ಕಾಗಿ ಮಾಡಿರುವ ಅವರ ಶ್ರಮ ಎದ್ದು ಕಾಣುತ್ತದೆ. "ಮಾನಾಡು" ಸಿನಿಮಾದ ಯಶಸ್ಸಿನ ನಂತರ ಮತ್ತೆ ಈ ಸಿನಿಮಾಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿರುವುದು ಖುಶಿಯ ವಿಚಾರ. ಇದು ಈ ಸಿನಿಮಾದ ಮೊದಲ ಭಾಗವಷ್ಟೇ. ಮುಂದಿನ ಭಾಗದ ನಿರ್ಮಾಣ ಪ್ರಗತಿಯಲ್ಲಿದೆ.

ಸಿನಿಮಾದ ಅಂತ್ಯದಲ್ಲಿ ಮುಂದಿನ ಭಾಗಕ್ಕೆ ಪೂರಕವಾಗುವಂತೆ ಕೆಲವಷ್ಟು ದೃಶ್ಯಗಳಿವೆ. ಅವನ್ನು ಧಾವಂತದಲ್ಲಿ ಮುಗಿಸಿ ತುರುಕಿದಂತೆ ಕಾಣುವುದರಿಂದ ಸಿನಿಮಾ ಅಲ್ಲಿಗೇ ಮುಗಿದಿರಬೇಕಿತ್ತು ಅನ್ನಿಸುತ್ತದೆ. ಇಲ್ಲದಿದ್ದರೆ ಇಡೀ ಸಿನಿಮಾ ಒಂದೇ ರೀತಿಯ ಫೀಲ್ ಕೊಡುತ್ತಿತ್ತು. ಆದರೂ ಎರಡನೆಯ ಭಾಗಕ್ಕೆ ಕಾಯುವಂತೆ ಮಾಡುತ್ತದೆ.

-Santhosh Kumar LM
21-Sep-2022