Sunday, April 11, 2021

ಕರ್ಣನ್ (ತಮಿಳು, 2021)

 


ಕರ್ಣನ್ (ತಮಿಳು, 2021)

ಮಾರಿ ಸೆಲ್ವರಾಜ್ ಅನ್ನುವ ನಿರ್ದೇಶಕನ "ಪರಿಯೇರುಮ್ ಪೆರುಮಾಳ್" ಸಿನಿಮಾವನ್ನು ಈ ಹಿಂದೆ ನೋಡಿದ್ದೆವು. ಮತ್ತೊಮ್ಮೆ ಅದೇ ನಿರ್ದೇಶಕ ತನ್ನ ಸಿನಿಮಾಗಳ ವ್ಯಾಪ್ತಿ ಮನರಂಜನೆಯಿಂದಾಚೆಗೂ ಬಹು ವಿಸ್ತಾರವಾದದ್ದು ಅನ್ನುವ ಸಂದೇಶವನ್ನು "ಕರ್ಣನ್" ಸಿನಿಮಾದ ಮೂಲಕ ಸ್ಪಷ್ಟಪಡಿಸುತ್ತಾರೆ.

ಸಿನಿಮಾದ ಮಧ್ಯೆ ಕಥೆಗೆ ಪೂರಕವಾದಂತಹ ರೂಪಕಗಳನ್ನು ತೋರಿಸಿ ಕೇವಲ ಸಿನಿಮಾ ಪಂಡಿತರಿಂದಷ್ಟೇ ಅವುಗಳನ್ನು ಗುರುತಿಸಲ್ಪಡುವುದು ಮಾರಿ ಸೆಲ್ವರಾಜ್'ಗೆ ಬೇಕಿಲ್ಲ. ಆತನಿಗೆ ತನ್ನ ರೂಪಕಗಳು ಸಾಮಾನ್ಯ ಪ್ರೇಕ್ಷಕನಿಗೂ ಅರ್ಥವಾಗಬೇಕು. ಹಾಗಾದಾಗಲಷ್ಟೇ ಜನಸಾಮಾನ್ಯರ ಮಧ್ಯದಲ್ಲೊಂದು ವಿಚಾರವನ್ನು ಹುಟ್ಟಿಹಾಕಲು ಸಾಧ್ಯ ಎಂಬ ಸ್ಪಷ್ಟತೆಯಿದೆ. "ಪರಿಯೇರುಮ್ ಪೆರುಮಾಳ್" ಸಿನಿಮಾದಲ್ಲಿ ಹಗೆ ಸಾಧಿಸಲು ನಾಯಕನ ಪ್ರೀತಿಯ ಕಪ್ಪು ಬಣ್ಣದ ನಾಯಿಯೊಂದನ್ನು ರೈಲಿನ ಹಳಿಗಳಿಗೆ ಕಟ್ಟಿ ಹಾಕಿ ಬಲಿ ತೆಗೆದುಕೊಳ್ಳುವಾಗ ಪ್ರೇಕ್ಷಕನಿಗೆ ಅಲ್ಲಿ ನಾಯಿಯಷ್ಟೇ ಕಾಣುವುದಿಲ್ಲ. ಆ ಕಪ್ಪು ನಾಯಿ ಒಂದು ಸಮುದಾಯವನ್ನೇ ಪ್ರತಿನಿಧಿಸುತ್ತದೆ.

ಈ ಸಿನಿಮಾದಲ್ಲೂ ಅಷ್ಟೇ. ಪೊಲೀಸ್ ಸ್ಟೇಷನ್ನಿನೊಳಗೆ ಚಿಟ್ಟೆಯೊಂದು ಹಾರುವಾಗಿನ ಹರ್ಷವನ್ನು, ತಕ್ಷಣವೇ ಆ ಮುಗ್ಧರು ಪೊಲೀಸರ ಲಾಠಿಯೇಟಿಗೆ ಚೀರಾಡುವಾಗ ಅದೇ ಚಿಟ್ಟೆ ಮೂಲೆಯಲ್ಲಿ ರೆಕ್ಕೆ ಬಡಿಯುತ್ತಲೇ ಒದ್ದಾಡುವುದನ್ನು ಅರ್ಥೈಸಿಕೊಳ್ಳಲು ನಾವು ಏನೇನನ್ನೋ ಕಲಿತಿರಬೇಕಿಲ್ಲ. ಕುದುರೆಯಷ್ಟು ವೇಗವಿಲ್ಲದಿದ್ದರೂ ಅದರಂತೆ ಕತ್ತೆಯೂ ಓಡಬಲ್ಲುದು. ಆ ಸಾಮರ್ಥ್ಯವಿದ್ದರೂ ಹದ್ದು ಮೀರಬಾರದೆಂಬ ಕಾರಣಕ್ಕೆ ಕತ್ತೆಯ ಕಾಲುಗಳಿಗೆ ಹಗ್ಗ ಬಿಗಿಯಲಾಗಿದೆ. ಆ ಹಗ್ಗ ಬಿಚ್ಚಿದ ತಕ್ಷಣ ಅದು ಕುದುರೆಯಂತೆ ಓಡುತ್ತದೆ. ಇದು ಭೌತಿಕ ವಿಷಯಗಳಿಗಷ್ಟೇ ಸೀಮಿತವಾಗಬೇಕಿಲ್ಲ. ನಮ್ಮ ಮನಸ್ಸಿನ ಕಾಲುಗಳಿಗೂ ನಾವೇ ಹಗ್ಗ ಬಿಗಿದುಕೊಂಡಿದ್ದೇವೆ. ಬದಲಾವಣೆ ಬೇಕೆಂದರೆ ಮೊದಲು ನಾವೇ ಮೊದಲು ಆ ಹಗ್ಗವನ್ನು ಕಿತ್ತೊಗೆಯಬೇಕು.

ನಾವೂ ಅದೆಷ್ಟೋ ಸಮಸ್ಯೆಗಳನ್ನು "ಅದೇ ನಮ್ಮ ಹಕ್ಕು" ಅಂತ ಸ್ವೀಕರಿಸಿಬಿಟ್ಟಿದ್ದೇವೆ. ಅವುಗಳಿಗೆ ಪರಿಹಾರವಿದೆ ಎಂಬುದರ ಅರಿವೂ ನಮಗಿಲ್ಲ. ಅವುಗಳಿಂದ ಹೊರಬರುವ ಬಗೆಯಾದರೂ ಹೇಗೆ? ಸಿನಿಮಾದಲ್ಲಿ ಕರ್ಣನ್ ಅನ್ನುವ ನಾಯಕ ಮುಂದೆ ಬರುತ್ತಾನೆ. ಅಂತಹ ಪ್ರತಿ ವಾತಾವರಣದಲ್ಲಿ ಕರ್ಣನ್ ಹುಟ್ಟಿಕೊಳ್ಳಲು ಸಾಧ್ಯವೇ? ಆ ಸಣ್ಣ ಕಿಡಿಯನ್ನು ಹುಟ್ಟುಹಾಕುವ ಪ್ರಯತ್ನವನ್ನು ಕರ್ಣನ್ ಮಾಡುತ್ತದೆ. ಇದು ತಮಿಳುನಾಡಿನ ಕೊಡಿಯಾಂಗುಲಂ ನೈಜ ಕಥೆಯನ್ನೇ ಆಧರಿಸಿ ತಯಾರಿಸಿದ ಸಿನಿಮಾ. ಆ ಹಿನ್ನೆಲೆಯನ್ನುಅರ್ಥ ಮಾಡಿಕೊಂಡು ಸಿನಿಮಾ ನೋಡಿದರೆ ನಿಜಕ್ಕೂ ಖುಶಿಯಾಗುತ್ತದೆ.

-------------------------------
ಕೊಡಿಯಾಂಗುಲಂ ಘಟನೆಯ ಬಗೆಗಿನ ಒಂದು ಪುಟ್ಟ ಬರಹ ಓದಿ.

ಆ ಘಟನೆಯಾದ ನಂತರ ಅಲ್ಲಿಗೆ ಭೇಟಿ ನೀಡಿದ ಪೊಲೀಸ್ ಮಹಾನಿರ್ದೇಶಕರಾದ ವಿ.ವೈಕುಂಠ ಅನ್ನುವವರೊಡನೆ ನಡೆದ ಸಂದರ್ಶನದಲ್ಲಿ ಅವರು ಹೇಳಿದ ಮಾತುಗಳು ಇಂತಿವೆ:

"ಅಂದು ಕೊಡಿಯಾಂಗುಲಂ ಗ್ರಾಮಕ್ಕೆ ಭೇಟಿ ನೀಡಿದಾಗ ನಾ ನೋಡಿದ್ದು ಹೃದಯ ವಿದ್ರಾವಕವಾಗಿತ್ತು. ಯಾರೋ ಗ್ರಾಮಸ್ಥರು ತಮ್ಮ ಮೇಲೆ ದಾಳಿ ಮಾಡಿದ್ದಕ್ಕೆ ಪ್ರತಿದಾಳಿ ನಡೆಸಲು ಎಂಬ ನೆಪದಲ್ಲಿ ಪೊಲೀಸರು ಅಲ್ಲಿಗೆ ಹೋಗಿದ್ದರು. ವರದಿಯ ಪ್ರಕಾರ ಆ ವಲಯದ ಮೇಲ್ಜಾತಿಯೊಬ್ಬನ ಕೊಲೆಯ ವಿಷಯದಲ್ಲಿ ಆರೋಪಿಯನ್ನು ಬಂಧಿಸಲು ಅಲ್ಲಿಗೆ ಹೋಗಲಾಗಿತ್ತು. ಬುದ್ಧಿಹೀನರಾಗಿ ಹಿಂಸೆಗಿಳಿದ ಪೊಲೀಸರು ಹೆಂಗಸರು, ವೃದ್ಧರು, ಮಕ್ಕಳೆನ್ನದೆ ಅವರ ಮೇಲೆರಗಿದ್ದರು. ಮನೆಗಳೊಳಗೆ ನುಗ್ಗಿ ದಾಂಧಲೆ ಮಾಡಿದರು. ಇಟ್ಟಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದರು. ಟಿವಿಗಳನ್ನು ಒಡೆದು ಹಾಕಿದರು. ಅಕ್ಕಿ ಚೀಲಗಳನ್ನು ಹರಿದು ಹಾಕಿ ರಸ್ತೆಗೆ ಸುರಿದರು. ಇನ್ನೂ ಅಮಾನವೀಯ ಅಂದರೆ ಜನರು ಕುಡಿಯುವ ನೀರಿಗಾಗಿ ಅವಲಂಬಿಸಿದ್ದ ಬಾವಿಗೆ ಡೀಸೆಲ್ ಸುರಿದರು. ಬೀರುಗಳಲ್ಲಿದ್ದ ಬಟ್ಟೆಗಳನ್ನು ಹೊರ ಚೆಲ್ಲಿದರು. ಕೈಗೆ ಸಿಕ್ಕ ವಿದ್ಯಾರ್ಥಿಗಳ ಯೂನಿವರ್ಸಿಟಿ ಡಿಗ್ರೀ ಸರ್ಟಿಫಿಕೇಟುಗಳನ್ನು ಅವರ ಕಣ್ಣೆದುರೇ ಹರಿದು ಬಿಸಾಡಿದರು. ನಾ ಅಲ್ಲಿಗೆ ಹೋದಾಗ ಅಲ್ಲಿನ ಜನರು ಅತ್ತು ಗೋಳಾಡಿ ತಮ್ಮ ಕಷ್ಟಗಳನ್ನು ಹೇಳಿಕೊಂಡಾಗ ನಾ ನಡುಗಿ ಹೋದೆ. ನನ್ನ ಮೂವತ್ತು ವರ್ಷಗಳ ಪೊಲೀಸ್ ಜೀವನದಲ್ಲಿ ನನ್ನ ಇಲ್ಲಾಖೆಯ ಪೊಲೀಸರಿಂದಲೇ ನಡೆದ ಇಂಥ ಅಮಾನವೀಯ ಕೃತ್ಯವನ್ನು ಎಂದೂ ಕಂಡಿರಲಿಲ್ಲ. ಪ್ರತಿ ಗ್ರಾಮಸ್ಥನೂ ತಾನಾಗಿಯೇ ನಿಂತು ಅಲ್ಲಿ ನಡೆದ ಪೊಲೀಸ್ ದೌರ್ಜನ್ಯವನ್ನು ಹೇಳಿದಾಗ ನನಗೆ ನಂಬದೇ ವಿಧಿಯಿರಲಿಲ್ಲ. ಆದರೂ ನಾನು ನಡೆದ ಸತ್ಯವನ್ನು ಮನವರಿಕೆ ಮಾಡಿಕೊಳ್ಳಬೇಕಿತ್ತು. ಹಾಗಾಗಿ ಸಂಬಂಧಪಟ್ಟ ಪೊಲೀಸ್ ಅಧೀಕ್ಷಕರನ್ನು (superintendent of police) ಪಕ್ಕಕ್ಕೆ ಕರೆದುಕೊಂಡು ಹೋಗಿ ಅದೇ ಗ್ರಾಮದ ಮರವೊಂದರ ನೆರಳಲ್ಲಿ ನಿಜವಾಗಿ ನಡೆದ ವಿಷಯವೇನೆಂದು ಕೇಳಿದೆ. ಪೊಲೀಸ್ ಉಪನಿರ್ದೇಶಕರ ಸಮ್ಮುಖದಲ್ಲಿಯೇ S.P. ಯವರು ಹಾಗೆ ನಡೆದದ್ದು ಸತ್ಯ ಎಂದು ಎಲ್ಲವನ್ನೂ ಒಪ್ಪಿಕೊಂಡರು"

-------------------------------

ಅಸುರನ್, ಪರಿಯೇರುಮ್ ಪೆರುಮಾಳ್ ಸಿನಿಮಾಗಳನ್ನು ಈ ಸಿನಿಮಾದೊಂದಿಗೆ ಹೋಲಿಸುವ ಅಗತ್ಯವಿಲ್ಲ. ಏಕೆಂದರೆ ಈ ಎರಡೂ ಸಿನಿಮಾಗಳನ್ನು ನೋಡುವಾಗಿನ ಮನಸ್ಥಿತಿ ಸಂಪೂರ್ಣ ಭಿನ್ನವಾಗಿರುತ್ತದೆ. ಒಂದಷ್ಟು ಕಥೆ ಹೇಳುವ ಬಗೆಗಿನ ಋಣಾತ್ಮಕ ವಿಷಯಗಳನ್ನು ಇಲ್ಲಿ ಚರ್ಚಿಸಬಹುದು. ಆದರೆ ಸಮಸ್ಯೆಗಳನ್ನು ಆಧಾರವಾಗಿಟ್ಟುಕೊಂಡು ಚಿತ್ರೀಕರಿಸಿದ ಸಿನಿಮಾವಾದ್ದರಿಂದ ಅವೆಲ್ಲವೂ ಗೌಣವಾಗುತ್ತವೆ.

ಈ ಸಿನಿಮಾದಲ್ಲಿ ತೋರಿಸುವ ಸಮಸ್ಯೆ ಈಗಿಲ್ಲ ಅಂತ ಒಬ್ಬರ ವಿಮರ್ಶೆ ನೋಡಿ ನಗು ಬಂತು. ಇವತ್ತಿಗೂ ನಮ್ಮ ರಾಜ್ಯದ ಕೆಲವು ಗ್ರಾಮಗಳು ಮೂಲ ಸೌಕರ್ಯಗಳಿಂದ ವಂಚಿತರಾಗಿ ನಮಗೂ ಅದಕ್ಕೂ ಸಂಬಂಧವೇ ಇಲ್ಲ ಅನ್ನುವಂತೆ ಅಲ್ಲಿನ ಜನ ಇನ್ನಷ್ಟು ಸಮಸ್ಯೆಗಳ ನಡುವೆ ಬದುಕಿದ್ದಾರೆ. ಸಮಸ್ಯೆಯ ಆಳ ಅರ್ಥವಾಗುವುದು ಅದರೊಳಗಿದ್ದವರಿಗೆ ಅಥವ ಅದನ್ನು ಕಣ್ಣಾರೆ ಕಂಡವರಿಗಷ್ಟೇ.

ಬೇರೆ ಸಿನಿಮಾಗಳಂತೆ ಇಲ್ಲಿ ದೃಶ್ಯಗಳು ರಪ್ಪನೆ ಬಂದು ಮುಗಿದು ಹೋಗುವುದಿಲ್ಲ. ಮಾರಿ ಸೆಲ್ವರಾಜ್ ಸಿನಿಮಾ ಮಾದರಿಯೇ ಇದು ಅನ್ನುವಷ್ಟರ ಮಟ್ಟಿಗೆ ವಿವರವಾಗಿ, ಸಾವಧಾನವಾಗಿ ಕಥೆ ಹೇಳುವ ಶೈಲಿಯನ್ನು ಅವರು ಮೈಗೂಡಿಸಿಕೊಂಡಿದ್ದಾರೆ. ಬಹುಶಃ ಗೌತಮ್ ಮೆನನ್, ಸೆಲ್ವರಾಘವನ್, ವೆಟ್ರಿಮಾರನ್, ಪ ರಂಜಿತ್, ಮಿಸ್ಕಿನ್, ಮಣಿರತ್ನಂ ಇತ್ಯಾದಿ ನಿರ್ದೇಶಕರಂತೆಯೇ ಇನ್ನೊಂದೆರಡು ಸಿನಿಮಾಗಳ ಬಳಿಕ ಅವರ ಹೆಸರಿಲ್ಲದಿದ್ದರೂ ಸಿನಿಮಾದ ನಿರ್ದೇಶಕ ಇವರೇ ಅಂತ ಗುರುತಿಸುವಷ್ಟರ ಮಟ್ಟಿಗೆ ಅವರ ಶೈಲಿ ನಮಗೆ ಕರಗತವಾಗುತ್ತಿದೆ. ಅದಕ್ಕೆ ತಕ್ಕಂತೆ ಹಿನ್ನೆಲೆ ಸಂಗೀತ, ಛಾಯಾಗ್ರಹಣ, ಪಾತ್ರಧಾರಿಗಳ ನಟನೆ ಎಲ್ಲವೂ ಹೊಂದಿಕೊಂಡಿವೆ. ವಿಭಿನ್ನ ಸಿನಿಮಾಗಳನ್ನು ಇಷ್ಟಪಡುವವರು ಮಿಸ್ ಮಾಡದೇ ನೋಡಬೇಕಾದ ಸಿನಿಮಾ ಇದು. ನೋಡಿದ ಮೇಲೂ ಅದರ ಬಗ್ಗೆ ಯೋಚಿಸುವಂತೆ ಮಾಡುತ್ತದೆ.

-ಸಂತೋಷ್ ಕುಮಾರ್ ಎಲ್.ಎಂ.

#santhuLm
11-Apr-2021

1 comment:

  1. ಖಂಡಿತ ಮಿಸ್ ಮಾಡದೆ ಸಿನಿಮಾ ನೋಡಿ ಬಂದು ಮತ್ತೆ ಅಭಿಪ್ರಾಯ ದಾಖಲಿಸುವೆ ಸಾರ್.

    ReplyDelete

Please post your comments here.