Don't F**K with Cats: Hunting An Internet Killer (Netflix Documentary Series)
ಮೂರ್ನಾಲ್ಕು ವರ್ಷಗಳ ಹಿಂದೆ ಇಂಟರ್ನೆಟ್ಟಿನಲ್ಲಿ ವೀಡಿಯೋ ಒಂದು ವೈರಲ್ ಆಗಿತ್ತು, ನೆನಪಿದೆಯೇ? ಮಗನೊಬ್ಬ ಹೆತ್ತಮ್ಮನಿಗೆ ಪೊರಕೆಯಿಂದ ಥಳಿಸುತ್ತಿದ್ದ. ಆತನ ಸಹೋದರಿ ಅವನಿಗೆ ಗೊತ್ತಿಲ್ಲದಂತೆ ಅದನ್ನು ರೆಕಾರ್ಡ್ ಮಾಡಿಕೊಂಡಿದ್ದಳು. ಕೇವಲ ಸಿಗರೇಟು ಸೇದುವುದಕ್ಕೆ ಮತ್ತು ಇನ್ನಿತರ ವಿಷಯಗಳ ಬಗ್ಗೆ ಆತನಿಗೆ ಬುದ್ಧಿವಾದ ಹೇಳಿದ್ದಕ್ಕೆ ಆತ ಕೋಪಗೊಂಡು ಅಮ್ಮನಿಗೆ ಬೈಯುತ್ತ ಥಳಿಸುತ್ತಿದ್ದ.
ಆ ವೀಡಿಯೋ ನೋಡಿ ಬೈದುಕೊಂಡವರೆಷ್ಟೋ ಜನ? ಅದನ್ನು ನೋಡಿದಾಗ ನನಗೆ ಅದೆಷ್ಟು ಕೋಪ ಬಂದಿತ್ತೆಂದರೆ ಆತ ಎದುರಿಗೆ ಸಿಕ್ಕಿದ್ದರೆ ಅದೇನು ಮಾಡುತ್ತಿದ್ದೆನೋ? ಸೋಷಿಯಲ್ ಮೀಡಿಯಾಗಳಲ್ಲಿ ಈ ಬಗೆಯ ವೀಡಿಯೋಗಳು ಬಂದಾಗ ನಮ್ಮ ಸಹನೆಯ ಕಟ್ಟೆಯೊಡೆಯುವುದು ಸಾಮಾನ್ಯ. ನಮ್ಮ ಮನಸ್ಸಿನ ಮೇಲೆ ಅವುಗಳು ಬೀರುವ ಪರಿಣಾಮ ಬೇರೆ ಬೇರೆ ರೀತಿಯದ್ದಾಗಿರುತ್ತದೆ.
2010ರ ಆಸುಪಾಸಿನಲ್ಲಿ ಇಂಟರ್ನೆಟ್ಟಿನಲ್ಲಿ ಫೇಕ್ ಪ್ರೊಫೈಲಿನ ಅಕೌಂಟಿನಲ್ಲಿ ವೀಡಿಯೋವೊಂದು ಕಾಣಿಸಿಕೊಳ್ಳುತ್ತದೆ. ಅಪರಿಚಿತ ವ್ಯಕ್ತಿಯೊಬ್ಬ ಎರಡು ಪುಟ್ಟ ಬೆಕ್ಕಿನ ಮರಿಗಳನ್ನು ವ್ಯಾಕ್ಯೂಮ್ ಕವರೊಂದಕ್ಕೆ ಹಾಕಿ ಉಸಿರುಗಟ್ಟಿ ಸಾಯಿಸುತ್ತಾನೆ. ಇಂಥ ಕ್ರೂರ ಮನಸ್ಥಿತಿಯ ದೃಶ್ಯವೊಂದು ಬಂದ ತಕ್ಷಣ ವೈರಲ್ ಆಗುತ್ತದೆ. ನೋಡಿದವರ ರಕ್ತ ಕುದಿಯುತ್ತದೆ. ಪ್ರಾಣಿಪ್ರಿಯರು ಇಂಥ ಕ್ರೂರಿಗೆ ಮರಣದಂಡನೆ ಸಿಗಬೇಕು ಅಂತ ಶಾಪ ಹಾಕುತ್ತಾರೆ. ಆ ಪುಟ್ಟ ಬೆಕ್ಕಿನ ಮರಿಗಳನ್ನು ನೋಡಿದರೆ ಕೈಗಳಲ್ಲಿ ಹಿಡಿದು ಮೈ ಸವರಿ ಮುತ್ತು ಕೊಡಬೇಕು ಅನ್ನುವಷ್ಟರ ಮಟ್ಟಿಗೆ ಮುದ್ದಾಗಿರುತ್ತವೆ. ಆದರೆ ಅಂಥ ಮೂಕ ಪ್ರಾಣಿಗಳನ್ನು ಉಸಿರುಗಟ್ಟಿಸಿ ಕೊಂದು ಅದರಿಂದ ಖುಶಿಪಡುವ ವಿಕೃತ ಮನಸ್ಥಿತಿಯವರು ನಮ್ಮ ಮಧ್ಯದಲ್ಲಿ ಇದ್ದಾರೆಯೇ ಅನ್ನುವುದೇ ನೋಡಿದವರಿಗೆ ನಂಬಲಸಾಧ್ಯವಾಗಿರುತ್ತದೆ.
ಎಲ್ಲರೂ ಮನಸ್ಸಿನಲ್ಲಿಯೇ ಬೈದು, ಶಾಪ ಹಾಕಿ ಸುಮ್ಮನಾದರೆ ಅಷ್ಟು ಹೊತ್ತಿಗಾಗಲೇ ಇಂಟರ್ನೆಟ್ಟನ್ನು ಅರೆದು ಕುಡಿದ ಕೆಲವು ಇಂಟರ್ನೆಟ್ ಜೀಕ್‍ಗಳು ಇನ್ನೊಂದು ಹೆಜ್ಜೆ ಮುಂದಿಡುತ್ತಾರೆ. ಆ ವಿಕೃತ ಮನುಷ್ಯನನ್ನು ಹಿಡಿದು ಬುದ್ಧಿ ಕಲಿಸಲೇಬೇಕೆಂದು ಮನಸ್ಸು ಮಾಡುತ್ತಾರೆ. ಈ ವೀಡಿಯೋ ನೋಡಿ ತಾಳ್ಮೆಗೆಟ್ಟ ನಂಬಿಕಸ್ಥ ಜನರೆಲ್ಲ ಫೇಸ್ಬುಕ್ಕಿನಲ್ಲಿ ಒಂದು ಗ್ರೂಪ್ ಮಾಡಿಕೊಂಡು ತಮಗೆ ತಿಳಿದ ಮಟ್ಟಿಗೆ ಆ ಕ್ರೂರಿಯನ್ನು ಹುಡುಕಲು ಶುರುಮಾಡುತ್ತಾರೆ. ಆದರೆ ಅದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ವೀಡಿಯೋದಲ್ಲಿ ಅಸ್ಪಷ್ಟವಾಗಿ ಕಾಣುತ್ತಿದ್ದ ಆತನ ಮುಖ ಬಿಟ್ಟರೆ, ಆತ ಎಲ್ಲಿಯವನು? ಅವನ ಹೆಸರೇನು? ಎಲ್ಲಿ ಆ ವೀಡಿಯೋ ತೆಗೆದದ್ದು? ಅದು ಇತ್ತೀಚಿನದಾ, ಹಳೆಯ ವೀಡಿಯೋನಾ? ಹೀಗೆ ಅನೇಕ ಪ್ರಶ್ನೆಗಳಿಗೆ ಉತ್ತರವಿರಲಿಲ್ಲ. ಪೊಲೀಸರಿಗೆ ದೂರು ಕೊಡಲು ಅವನ ವಿವರಗಳಿಲ್ಲ. ಹಾಗಾಗಿ ಇವರೇ ಸಾಧ್ಯವಾದಷ್ಟು ವಿವರ ಕಲೆ ಹಾಕಬೇಕೆಂದು ಪ್ರಯತ್ನಿಸುತ್ತಾರೆ.
ಅಷ್ಟು ಹೊತ್ತಿಗಾಗಲೇ ಮತ್ತೊಂದು ವೀಡಿಯೋ ಬಿಡುಗಡೆಯಾಗುತ್ತದೆ.....ಆ ವೀಡಿಯೋದಲ್ಲಿ ಸಹ ಒಂದು ಬೆಕ್ಕಿನಮರಿಯನ್ನು.........
------------------
ಕಥೆ ಹೀಗೆ ಸಾಗುತ್ತದೆ. ಬಿಡುಗಡೆಯಾಗುವ ವೀಡಿಯೋದಲ್ಲಿ ಸಿಗುವ ಬೇರೆಲ್ಲರೂ ಇಗ್ನೋರ್ ಮಾಡಬಹುದಾದ ಪುಟ್ಟ ವಿವರಗಳನ್ನೂ ಸಹ ಇವರು ದಾಖಲಿಸಿಕೊಳ್ಳುತ್ತ ಆತನ ಬೆನ್ನು ಹತ್ತುತ್ತಾರೆ. ಗಮನಿಸಿ. ಇಲ್ಲಿ ಹುಡುಕಾಟ ಅಪರಾಧಿ-ಪೋಲಿಸ್ ಮಧ್ಯದ್ದಲ್ಲ. ಅಪರಾಧಿ-ಜನಸಾಮಾನ್ಯರ ಮಧ್ಯದ್ದು. ಅಪರಾಧಿ ಇವರಂದುಕೊಂಡಷ್ಟೇ ಹಿಂಸಾತ್ಮಕ ಮನಸ್ಥಿತಿಯವನಲ್ಲ, ಅದಕ್ಕಿಂತಲೂ ಜಾಸ್ತಿ.
ಇವರು ಇವರಿಗೆ ತಿಳಿದ ಇಂಟರ್ನೆಟ್ಟಿನ ದಾರಿಗಳ ಮೂಲಕ ಅವನನ್ನು ಹುಡುಕುತ್ತಿದ್ದರೆ, ಆತ ಅವನಿಗೆ ತಿಳಿದ ರೀತಿಯಲ್ಲಿ ಇವರನ್ನು ದಾರಿ ತಪ್ಪಿಸುತ್ತಿರುತ್ತಾನೆ. ಅದು ಏನಾಗುತ್ತದೆ ಅನ್ನುವುದೇ ಕಥೆ.
ಕ್ಷಮಿಸಿ ಇದು ಕಥೆಯಲ್ಲ, ನಿಜವಾಗಿ ನಡೆದದ್ದು. ಡಾಕ್ಯುಮೆಂಟರಿ ಆದರೂ ಸಿನಿಮಾ ನೋಡಿದಷ್ಟೇ ಕುತೂಹಲಕಾರಿಯಾಗಿದೆ. ವಿವರಗಳನ್ನು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ರೀತಿಯಲ್ಲಿಯೇ ಕೊಂಚಕೊಂಚವೇ ಅನಾವರಣಗೊಳಿಸುತ್ತ ಸಾಗುತ್ತಾರೆ. ಕೆನಡಾದಲ್ಲಿ 2012 ರಲ್ಲಿ ಲೂಕಾ ಮ್ಯಾಗ್ನೋಟ್ಟಾ ಅನ್ನುವ ಅಪರಾಧಿಯ ಸುತ್ತ ನಡೆದ ನೈಜ ಘಟನೆಗಳನ್ನೇ ಈ ಮೂರು ಕಂತುಗಳ ಡಾಕ್ಯುಮೆಂಟರಿ ಸರಣಿಯನ್ನಾಗಿ ಮಾಡಲಾಗಿದೆ. ಇಂಟರ್ನೆಟ್ ಪ್ರಪಂಚದಲ್ಲಿ ಈಗಾಗಲೇ ಅನುಭವವಿರುವವರಿಗೆ ಇದು ಸಕ್ಕತ್ ಮಜಾ ಕೊಡುತ್ತದೆ. ಅಪರಾಧಿಗಳನ್ನು ಹುಡುಕಿ ಹೊರಟಾಗ ಪುಟ್ಟ ಪುಟ್ಟ ವಿವರಗಳು ಅದೆಷ್ಟು ಮುಖ್ಯವಾಗಿರುತ್ತವೆ ಅನ್ನುವುದು ಈ ಸರಣಿ ನೋಡುವಾಗ ಅರಿವಾಗುತ್ತದೆ.
ಹಾಂ..... 2019ರಲ್ಲಿ Netflixನಲ್ಲಿ ಜನರು ಅತೀ ಹೆಚ್ಚು ವೀಕ್ಷಿಸಿದ ಐದು ಡಾಕ್ಯುಮೆಂಟರಿಗಳಲ್ಲಿ ಇದೂ ಒಂದು ಎಂಬ ಹೆಗ್ಗಳಿಕೆ ಪಡೆದಿದೆ.
Netflix ನಲ್ಲಿದೆ. ಅಸಕ್ತಿಯಿದ್ದರೆ ಮರೆಯದೆ ನೋಡಿ!
-Santhosh Kumar LM
18-Jul-2021
No comments:
Post a Comment
Please post your comments here.