Thursday, March 17, 2016

ನಾ ಓದಿದ ಪುಸ್ತಕ - ನೀಲು 2




ಹಾಡಲಾರದ, ಕುಣಿಯಲಾರದ

ನಾನು
ಕೂತು ಬಿಟ್ಟ ನಿಟ್ಟುಸಿರುಗಳೇ
ನನ್ನ ಪುಟ್ಟ ಕವನಗಳು
--ನೀಲು



ಇವತ್ತಿನ ಬೆಳ್ಳಂಬೆಳಕಲಿ
ನಿನ್ನೆಯ ನೆನಪುಗಳು
ಮತ್ತು
ನಾಳೆಯ ನಿರೀಕ್ಷೆಗಳು
ನಿನ್ನನ್ನು ನಿಗೂಢವಾಗಿ ಕೆಣಕದಿದ್ದರೆ,
ನೀನು ಕವಿಯಲ್ಲ
--ನೀಲು



ಕವನ ಕವಿಯ ಕೂಸಲ್ಲ
ಮುಗ್ಧತೆ ಹೊತ್ತು
ನೂರಾರು ವರ್ಷ
ಸಾಗಬೇಕಾಗಿರುವ
ಸಂಕೀರ್ಣ ಉನ್ಮಾದ
--ನೀಲು
--------------------------------------------------------------------


                                                        




--------------------------------------------------------------------


ಸಮಾಜದ ಹಂಗಿಗೆ ಒಳಗಾಗಿ ತನ್ನತನವನ್ನು ಬಿಟ್ಟು ಕೂರುವ ಹೆಣ್ಣುಮಗಳ ಮನಸ್ಸಿನೊಳಗಿರುವ ಜ್ವಾಲಮುಖಿಯ ಅರಿವು ನೀಲುವಿಗಿದೆ. ಅಲ್ಲಿಯೇ ಕೂತು ವಿಶಾಲ ಪ್ರಪಂಚದ ಸ್ವಾತಂತ್ರ್ಯದೊಡನೆ ಹೋಲಿಸುತ್ತ ಅವಳನ್ನು ನಾಲ್ಕು ಗೋಡೆಗಳ ಮಧ್ಯೆಯಿಂದ ಹೊರತರುವ ತುಡಿತ ನೀಲುವಿಗಿದೆ.

ನಾಗರೀಕತೆಯ ಹೆಸರಿನಲ್ಲಿ ಪ್ರಕೃತಿಯನ್ನು ಮರೆಯುತ್ತ, ಬೆಳೆಯುತ್ತಿದ್ದೇನೆಂಬ ಭ್ರಮೆಯಲ್ಲೇ ಚಿಕ್ಕವನಾಗುತ್ತ ಹೋಗುತ್ತಿರುವ ಮಾನವನ ಬುದ್ಧಿಭ್ರಮಣೆಯ ಬಗೆಗಿನ ಅನುಕಂಪ ಅನೇಕ ಕವನಗಳಲ್ಲಿದೆ. ಹಾಗೆಯೇ ಪ್ರಕೃತಿ ತನ್ನ ಪಾಡಿಗೆ ತಾನು ಮಾಡಬೇಕಾದ ಕರ್ತವ್ಯಗಳನ್ನು ಆನಂದದಿಂದ ನೇರವೇರಿಸುತ್ತ ಆ ಮೂಲಕ ಸಾರ್ಥಕ್ಯ ಅನುಭವಿಸುವುದನ್ನು ಸೂಕ್ಷ್ಮವಾಗಿ ನೋಡುವ ನೀಲು, ನಮಗೆ ಗೊತ್ತಿಲ್ಲದಂತೆಯೇ ಅತ್ತ ದಾರಿ ತೋರುತ್ತಾರೆ.

ನಾವೇನು ಹನಿಗವನ, ಚುಟುಕ, ಹನಿ, ಹಾಯ್ಕು ಅಂತ ಏನೇನು ಹೇಳುತ್ತೇವೆಯೋ ಅವೆಲ್ಲ ಪ್ರಕಾರಗಳು ಇಲ್ಲಿಯ ಅನೇಕ ಸಾಲುಗಳಲ್ಲಿ ಬಂದು ಹೋಗುತ್ತವೆ. ತಾನು ಯಾವುದರ ಬಗ್ಗೆ ಮಾತನಾಡುತ್ತಿದ್ದೇನೆ ಎಂಬ ಚೌಕಟ್ಟು ಹಾಕಿಕೊಳ್ಳದೇ ಎಲ್ಲದರತ್ತ ಕಣ್ಣು ಹಾಯಿಸುವ ವಿಶಾಲ ದೃಷ್ಟಿಕೋನ ನೀಲುವಿಗಿರುವುದು ಇಲ್ಲಿಯ ವಿಶೇಷ. ತಮಾಷೆಯನ್ನು ಗಂಭೀರವಾಗಿ, ಗಂಭೀರ ವಿಷಯಗಳನ್ನು ತಮಾಷೆಯಾಗಿ ಹೇಳುತ್ತ ಜಾಗತೀಕರಣ, ಪ್ರಕೃತಿಯೊಡನೆ ಸಂಬಂಧ, ಸಂಬಂಧಗಳ ನಡುವಿನ ಸೂಕ್ಷ್ಮ ಸಂಗತಿಗಳು, ಸ್ತ್ರೀ ಸಂವೇದನೆ, ಶಿಕ್ಷಣಕ್ಕೆ ಒತ್ತು, ಸಾಮಾಜಿಕ ಕಳಕಳಿ..ಇಂತಹ ಹಲವಾರು ವಿಷಯಗಳನ್ನು ನೇರವಾಗಿ ಮನದಟ್ಟಾಗುವಂತೆ ಹೇಳುವುದು ನೀಲುವಿಗೆ ಸಿದ್ಧಿಸಿದ ಕೌಶಲ್ಯ.

ಪ್ರಾಸಗಳ ಹಂಗಿಗೆ ಸಿಕ್ಕಿ ಒದ್ದಾಡುತ್ತಿರುವವರು ನೀಲು ಪದ್ಯವನ್ನು ಓದಲೇಬೇಕು. ಪುಸ್ತಕ ಮುಗಿಸುವಷ್ಟರಲ್ಲಿ ನೀಲುವಿನ ನಶೆಯಲ್ಲಿ ಪ್ರಾಸ ಕಣ್ಣಿಗೆ ಕಾಣಿಸದಷ್ಟು ಓಡಿ ಹೋಗಿರುತ್ತದೆ. ವಯುಕ್ತಿಕವಾಗಿ ಪ್ರಾಸವಿಲ್ಲದೇ ಕವಿತೆಯನ್ನು ಕೇವಲ ಅದರ ವಸ್ತುವಿನಿಂದಲೇ ಪರಿಣಾಮಕಾರಿಯಾಗಿ ಹೇಳಬಲ್ಲ ಸವಾಲನ್ನು ನಿಭಾಯಿಸುವುದನ್ನು ನೀಲುಕಾವ್ಯ ಹೇಳಿಕೊಟ್ಟದ್ದು ಸುಳ್ಳಲ್ಲ. ಹಾಗಾಗಿ ಇದನ್ನು ಪರಿಚಯಿಸಿದ ಗೆಳೆಯರಿಗೆ ಧನ್ಯವಾದ ಹೇಳಲೇಬೇಕು.

ಅನೇಕ ಪದ್ಯಗಳಲ್ಲಿ ಕವಿಗೆ ದಕ್ಕಿದಷ್ಟು ಸಾಕ್ಷಾತ್ಕಾರ ನಮಗೆ ಆ ಕ್ಷಣಕ್ಕೆ ಸಿಗುವುದಿಲ್ಲ ಎಂಬುದು ಓದುಗನಾಗಿ ನಾನೂ ಬೆಳೆಯಬೇಕು ಮತ್ತು ಮಾಗಬೇಕು ಎಂಬುದಕ್ಕೆ ಸಾಕ್ಷಿಯಷ್ಟೇ! ಈ ಕ್ಷಣಕ್ಕೆ ದಕ್ಕದ ಅನೇಕ ಹನಿಗಳ ಹೊಳವು ಮತ್ತೆ ಸ್ವಲ್ಪ ಹೊತ್ತಿನ ನಂತರ ಬೇರೆಯದೇ ರೀತಿಯಲ್ಲಿ ದೊರಕುವುದು ತುಟಿಯಂಚಿನಲ್ಲಿ ನಗೆಯ ಮೂಡಿಸದೇ ಇರಲಾರದು. ಅನೇಕ ವಿಷಯಗಳನ್ನು ಇದಕ್ಕಿಂತ ಸೂಕ್ಷ್ಮವಾಗಿ ಹೇಳಲು ಸಾಧ್ಯವೇ ಇಲ್ಲ ಅನಿಸುವಷ್ಟರ ಮಟ್ಟಿಗೆ ಹೆಚ್ಚೆಂದರೆ ಏಳೆಂಟು ಪದಗಳಲ್ಲಿ ಕಟ್ಟಿಕೊಡುವುದು ನೀಲು ಕಾವ್ಯದ ಹೆಗ್ಗಳಿಕೆ. ಕೆಲವು ಪದ್ಯಗಳಲ್ಲಿ ದೈಹಿಕ ಸುಖದ ಮತ್ತು ಪ್ರೇಮದ ನಡುವಿನ ವ್ಯತ್ಯಾಸಗಳನ್ನು ಸೂಕ್ಷ್ಮವಾಗಿ ಹೇಳಿದರೆ, ಇನ್ನು ಕೆಲವುಗಳಲ್ಲಿ ದೀರ್ಘ ಕಾಲದ ನಾಟಕೀಯ ಪ್ರೇಮದ ಬಗೆಗಿನ ವ್ಯಂಗ್ಯವಿದೆ.

ಪ್ರತೀ ಕವಿತೆಗಳು ಪುಟ್ಟದಾಗಿರುವುದರಿಂದ ಒಂದೇ ಬಾರಿ ಮುಗಿಸಿ ಎತ್ತಿಡದೇ ಸಮಯವಿದ್ದಾಗಲೆಲ್ಲ ಓದಬಹುದು. ಚಿಕ್ಕ ಮಕ್ಕಳು ಪೆಪ್ಪರಮೆಂಟನ್ನು ಚೀಪಿದಂತೆಯೇ ನೀಲುಕಾವ್ಯವನ್ನು ಒಂದೊಂದಾಗಿ ಅಸ್ವಾದಿಸಬಹುದು. ಪ್ರಕೃತಿಯಾಗಿ, ಗಂಡನಾಗಿ, ಹೆಂಡತಿಯಾಗಿ, ಯುವಕನಾಗಿ, ಪೋಲಿಯಾಗಿ, ತುಂಟನಾಗಿ, ಮಗುವಾಗಿ, ಪ್ರಾಣಿ ಪಕ್ಷಿಗಳಾಗಿ ಎಲ್ಲ ಭಾವಗಳನ್ನು ಅಕ್ಷರಗಳನ್ನಾಗಿಸುತ್ತ ನಗಿಸುತ್ತ ತನ್ನೊಡನೆ ಕೊಂಡೊಯ್ಯುವ ನೀಲುವಿನತ್ತ ಪ್ರೀತಿ ಒಮ್ಮೆಯಾದರೂ ಹುಟ್ಟದೆ ಇರಲಾರದು.

                                                                                                                   -ಸಂತು
----------------------------------



ನೀಲು ಕಾವ್ಯದ ಒಂದಷ್ಟು ಝಲಕುಗಳು ನಿಮಗಾಗಿ...............


ಹಣ್ಣಿನೊಂದಿಗೆ ಬೀಜ ನುಂಗಿದ
ಹಕ್ಕಿ
ಹಿಕ್ಕೆ ಹಾಕಿ ಹಾರಿ ಹೋಗಿ
ಬೀಜ ಗಿಡವಾದ ಬಗ್ಗೆ
ಹೆಮ್ಮೆಪಡದಿರುವಂತೆ
ನಮ್ಮ ಕ್ರಿಯೆ ಇರಲಿ
-ನೀಲು


ತನ್ನ ಕುಟುಂಬದ
ಮೂರು ಹೊಟ್ಟೆಗಳಿಗಾಗಿ
ರಾಶಿ ಬತ್ತವ ಬೆಳೆದ
ರೈತನ ನೋಡಿ
ಅಚ್ಚರಿಪಡುತ್ತ ಕೂತ
ಹಕ್ಕಿ
--ನೀಲು

ತಾಯಿಯ ಹೊಟ್ಟೆಯ
ಬೆಚ್ಚನೆಯ ಪ್ರೀತಿಯ ತೊರೆದು
ಜಗತ್ತಿನ ಸೆರೆಮನೆಗೆ ಬರುವ
ಮಗು, ಪಾಪ ಅಳುವುದು
--ನೀಲು


ಅನ್ನ ಬಟ್ಟೆಗೆ ಪರದಾಡುವ
ಬಡವರು ಕೊಂಡುಕೊಂಡ
ಸರಳ ಟಿ.ವಿಯ
ಗರುಕೆ ಕೂಡ
ಅವರಿಗೆ ಮೋಹಕ
--ನೀಲು

ಬಟ್ಟೆ ಬದಲಿಸುವಾಗ
ಕ್ಷಣ ಬೆತ್ತಲಾದ
ಯಜಮಾನನನ್ನು
ನಾಯಿ
ಅಪರಿಚಿತನ ನೋಡುವಂತೆ
ನೋಡಿತು
--ನೀಲು

ಅವಳ ಆಕರ್ಷಕ ಯೌವನ
ತಾಯಿಯಲ್ಲಿ ಆತಂಕ
ಅಜ್ಜಿಯಲ್ಲಿ ನಿಟ್ಟುಸಿರು
ಮತ್ತು ಇಡೀ ಕೇರಿಯಲ್ಲಿ
ಉಲ್ಲಾಸ ಮೂಡಿಸಿತು
--ನೀಲು

ಮೊನ್ನೆ ಓದಿದ ಕತೆಯೊಂದರಲ್ಲಿ
ಅಪರಿಚಿತನೊಬ್ಬ
ಅಪರಿಚಿತೆಯ
ತುಂಬು ಎದೆಯ ಮೇಲೆ ಕ್ಷಣಕಾಲ
ಇಡೀ ಜೀವನವ ಸ್ಪಂದಿಸಿದ್ದು
ಮರೆಯಲಾಗುತ್ತಿಲ್ಲ.
--ನೀಲು


ಬಟ್ಟೆ ತೊಟ್ಟ ನಾವು
ಅರಣ್ಯದ ಚಿಗರಿ ಮರಿಗೆ
ಎಷ್ಟು ಹಾಸ್ಯಾಸ್ಪದವಾಗಿ
ಕಾಣಬಹುದೆಂದು
ಊಹಿಸಿದ್ದೀರಾ?
--ನೀಲು



ಇವತ್ತು
ಸರ್ಕಾರ ಬಿತ್ತಿಬೆಳೆಯುವುದನ್ನು
ನಿರೀಕ್ಷಿಸುವ ಮನುಷ್ಯ
ನಾಳೆ
ಹುಲಿಸಿಂಹಗಳಿಂದ
ಶಾಸ್ತ್ರೀಯ ಸಂಗೀತ ಬಯಸುವವ
--ನೀಲು



ಬೆಟ್ಟ ಕಣಿವೆಗಳನ್ನು ಕಡಿದು
ಹೊಲ ಮಾಡಿದವನು
ಕೊನೆಗೂ ಆನಂದಗೊಂಡದ್ದು
ಕಾಡಿನ ಹಕ್ಕಿಗಳ
ಇಂಚರದಿಂದ
--ನೀಲು



ಕೊಂಬೆಯ ಮೇಲಿನ ಕಾಜಾಣದ
ಹಾಡುಗಳನ್ನು
ಧ್ವನಿ ಮುದ್ರಿಸಿಕೊಂಡು
ಮಾರಾಟ ಮಾಡುವವನೇ
ನಿಜವಾದ ಸಮಯಸಾಧಕ
--ನೀಲು



ದನ ಕಾಯುವ ಹುಡುಗ
ಪ್ರೇಮ ಕವನವ
ಅಂಚೆಗೆ ಹಾಕಿದ ದಿವಸ
ಇಲ್ಲಿ
ಅಕ್ಷರತೆ ಇದೆ ಅನ್ನಬಹುದು
--ನೀಲು



ಹೆಂಡತಿ ನೆರೆಮನೆಯ
ಅಂಗಿಗೆ
ಹೊಲಿಗೆ ಹಾಕುತ್ತಿದ್ದಾಗ
ಆತ ತನ್ನ
ಶ್ರೇಷ್ಠ ಕವನ ರಚಿಸಿದ
--ನೀಲು



ಕುಗ್ರಾಮದ ಏಕಾಂಗಿ ಕೋಮಲೆ
ಮತಗಟ್ಟೆಗೆ ಹೋಗಿ
ನೀಡಿದ ಮತ
ಅವಳ ನಿಟ್ಟುಸಿರಲ್ಲಿ
ಪರ್ಯಾವಸಾನಗೊಂಡರೆ,
ಅದು ಭ್ರಷ್ಟ ರಾಜಕೀಯ
--ನೀಲು



ಒಮ್ಮೆ ತಲೆ ಹಾರಿದರೆ
ಮತ್ತೆ ಚಿಗುರದ ತೆಂಗು
ಪ್ರೇಮ;
ಕಾಮ ನುಗ್ಗೆಯ ಮರದಂತೆ
ಕಡಿದಷ್ಟೂ ಚಿಗುರು
--ನೀಲು

No comments:

Post a Comment

Please post your comments here.