Tuesday, March 19, 2019

Timil Movie: ಪರಿಯೇರುಮ್ ಪೆರುಮಾಳ್





ರಜನೀಕಾಂತ್ ಅಭಿನಯದ ಕಬಾಲಿ ಚಿತ್ರ ಬಿಡುಗಡೆಯಾದಾಗ ನಾನು ಮಲೇಷ್ಯಾದಲ್ಲಿದ್ದೆ. ಇಲ್ಲಿಗಿಂತ ಒಂದು ದಿನ ಮೊದಲೇ ಅಲ್ಲಿ ಬಿಡುಗಡೆಯಾಗಿತ್ತು. ಅದ್ಯಾವ ಪರಿ ಜನ ಆ ಸಿನಿಮಾ ನೋಡಲು ಮುಗಿಬಿದ್ದಿದ್ದರು ಅಂತೀರಿ. ಆ ಕಥೆಯೂ ಮಲೇಷ್ಯಾ ತಮಿಳಿಯನ್ನರ ಮೇಲೆ ನಡೆಯುವ ದೌರ್ಜನ್ಯವನ್ನು ಹೇಳುತ್ತದಲ್ಲ. ಆದರೆ ನನಗೆ ರಜನೀಕಾಂತ್ ಸಿನಿಮಾ ನೋಡಿದ ಹಾಗಾಗಲಿಲ್ಲ. ಕಾರಣ ರಜನೀಕಾಂತ್ ಇದ್ದರೂ ನಿರ್ದೇಶಕ ತಾನಂದುಕೊಂಡದ್ದನ್ನು ದೃಶ್ಯರೂಪದಲ್ಲಿ ತೋರಿಸಲು ಸೋತಿದ್ದ.

ಆದರೆ ಅದೇ ನಿರ್ದೇಶಕ, ತನ್ನ ಮುಂದಿನ ಸಿನಿಮಾ ಕಾಲಾದಲ್ಲಿ ಈ ತಪ್ಪನ್ನು ಮಾಡಲಿಲ್ಲ. ರಜನೀಕಾಂತ್ ಸಿನಿಮಾದೊಳಗೆ ತಾನು ಹೇಳಬೇಕಾದ್ದನ್ನು ಹೇಳಿದ್ದ. ಆದರೆ ಇನ್ನೂ ಬೇರೆ ರೀತಿಯಲ್ಲಿ ಹೇಳಬಹುದು ಅಂತ ನನಗನ್ನಿಸಿತ್ತು. ಆ ಸಿನಿಮಾದಲ್ಲಿ ಬರುವ ಅನೇಕ ವಿಷಯಗಳು ಸಿನಿಮಾ ಭಾಷೆಯನ್ನು ಅರಿತಿರುವ ಮಂದಿಗಷ್ಟೇ ಅರ್ಥವಾಗಲು ಸಾಧ್ಯ ಅನ್ನಿಸಿತ್ತು.

ಹೇಳಬೇಕು ಅಂತ ಅನ್ನಿಸಿದ್ದನ್ನು ಸಿನಿಮಾದೊಳಗೆ ಕಷ್ಟಪಟ್ಟು ತುರುಕಲಾಗುವುದಿಲ್ಲ. ಹಾಗೆ ಮಾಡಿದರೂ ಒಟ್ಟಾರೆ ಸಿನಿಮಾ ನೋಡುವಾಗ ತನ್ನ ಮೂಲ ಉದ್ದೇಶವನ್ನೇ ಮರೆತಿರುತ್ತದೆ. ಹಾಗಾದಾಗಲೇ ಪ್ರೇಕ್ಷಕ ನಿರಾಸೆಗೊಂಡು "ಇವನೇನೋ ಬೇಕು ಅಂತ ಈ ಥರ ಸಿನಿಮಾ ತೆಗೆದಿದ್ದಾನೆ" ಅಂತ ಬೈಕೊಂಡು ಹೋಗುತ್ತಾನೆ. ಆದರೆ ಅದೇ ಪ.ರಂಜಿತ್ ನಿರ್ಮಾಣದಲ್ಲಿ ಬಂದ "ಪರಿಯೇರುಮ್ ಪೆರುಮಾಳ್" ಸಿನಿಮಾದಲ್ಲಿ ನಾನಂದುಕೊಂಡ ನಿರೀಕ್ಷೆಗಳಿಗೆಲ್ಲ ಉತ್ತರ ಸಿಕ್ಕಿತು. ಕಡೆಯವರೆಗೂ ನಮ್ಮನ್ನು ಹಿಡಿದಿಟ್ಟುಕೊಳ್ಳುವ ಕಥೆ. ಮಾರಿ ಸೆಲ್ವರಾಜ್ ನಿರ್ದೇಶನದ್ದು. ಜಾತಿಸಮಸ್ಯೆಯ ಬಗ್ಗೆ ಹೇಳುತ್ತ ಇನ್ನೇನೋ ಆಗಬಹುದಿದ್ದ ಸಿನಿಮಾವನ್ನು ಕಮರ್ಶಿಯಲ್ ಅನ್ನುವ ರೀತಿಯಲ್ಲೇ ಹೇಳುವಲ್ಲಿ ಸಫಲರಾಗುತ್ತಾರೆ. ಅವರ ಉದ್ದೇಶ ವಾಸ್ತವಕ್ಕೆ ಕನ್ನಡಿ ಹಿಡಿಯುವುದಷ್ಟೇ. ಮುಂದೇನಾಗಬೇಕು ಅನ್ನುವ ಪರಿಹಾರವಲ್ಲ. ಕುರುಡನಂತಿರುವ ಸಮಾಜಕ್ಕೆ ಕಡೇಪಕ್ಷ ಹೀಗಾದರೂ ತೋರಿಸಿದರೆ, ಅದರಿಂದ ಮನುಷ್ಯತ್ವದ ಕಿಡಿಯೊಂದು ಹೊತ್ತಿಕೊಂಡು ಆ ಸಮಸ್ಯೆಯ ಪರಿಹಾರದತ್ತ ಮನಸ್ಸು ಮಾಡಿದರೆ ಅದಕ್ಕಿಂತ ಬೆಳವಣಿಗೆ ಇನ್ನೊಂದಿಲ್ಲ. ಇಂಥ ಸಿನಿಮಾಗಳು ಬರಬೇಕು. ಮತ್ತು ಹೀಗೆಯೇ ಇರಬೇಕು.

ಕಥೆಯಲ್ಲಿ ಅನಾವಶ್ಯಕ ಸಂಭಾಷಣೆಗಳಿಲ್ಲ. ಸಂಭಾಷಣೆಯನ್ನೂ ಕೋಪವನ್ನೂ ಕೇವಲ ದೃಶ್ಯದಲ್ಲಿ ತೋರಿಸುವುದಷ್ಟೆ ಇಲ್ಲಿಯ ನಿರ್ದೇಶಕನ ಗುರಿ. ಅದರಲ್ಲಿ ಆತ ಗೆಲ್ಲುತ್ತಾನೆ ಕೂಡ. ನಾಯಕನ ಪ್ರೀತಿಯ ನಾಯಿಯನ್ನು ಕೊಂದಾಗಲೂ ಆತ ಮಾತಿನಲ್ಲಿ ಬೈಯುತ್ತ ಕೂರುವುದಿಲ್ಲ.ಆದರೆ ಅಲ್ಲೊಂದು ಅಗ್ನಿಪರ್ವತ ಕೋಪವನ್ನು ತನ್ನೊಳಗೆ ಹಿಡಿದಿಟ್ಟುಕೊಳ್ಳುತ್ತದೆ. ಸಿನಿಮಾ ನೋಡಲು ಕೂತ ಈ ಮೊದಲ ದೃಶ್ಯದಲ್ಲೇ ಇಡೀ ಚಿತ್ರ ನೋಡಲು ಬೇಕಾದ ಮನಸ್ಥಿತಿಯನ್ನು ಅಲ್ಲಿ ಸೃಷ್ಟಿಸಲಾಗುತ್ತದೆ. ಆತನನ್ನು ಕಾಲೇಜಿನಲ್ಲಿ ಇಂಗ್ಲೀಷಿನಲ್ಲಿ ಹೇಳುವ ನೋಟ್ಸನ್ನು ಬರೆದುಕೊಳ್ಳುತ್ತಿಲ್ಲ ಅಂತ ಕೋಪದಲ್ಲಿ ಹೊರಗೆ ಕಳಿಸುವಾಗಲೂ, ಆತ ಅವಮಾನದಲ್ಲೂ ಕೆಟ್ಟದಾಗಿ ಕೂಗಾಡುವುದಿಲ್ಲ. ಬದಲಿಗೆ ಬೇರೆಯವರ ನೋಟ್ಸನ್ನೂ ಒಮ್ಮೆ ಪರೀಕ್ಷಿಸಿ ಅಂತ ಅವಲತ್ತುಕೊಳ್ಳುತ್ತಾನೆ. ಆತನ ಉದ್ದೇಶ ಸತ್ಯವನ್ನು ತೋರಿಸುವುದಷ್ಟೇ ಹೊರತು ಆ ಉಪನ್ಯಾಸಕರ ಮೇಲೆ ಕೂಗಾಡುವುದಲ್ಲ. ಸಿನಿಮಾದ ಮುಖ್ಯ ದೃಶ್ಯವೊಂದರಲ್ಲಿ ಆತ ಏಕೆ ಮಾತನಾಡಲು ಹಿಂಜರಿಯುತ್ತೇನೆ(ವೆ) ಅಂತ ಹೇಳುತ್ತಾನೆ. ಪ್ರೇಕ್ಷಕ ಅದು ಕೇವಲ ಆ ದೃಶ್ಯಕ್ಕಷ್ಟೇ ಹೇಳುವ ಸಂಭಾಷಣೆಯಲ್ಲ ಅಂತ ಅರ್ಥೈಸಿಕೊಳ್ಳುವಷ್ಟು ಸುಲಭ ಮತ್ತು ಪರಿಣಾಮಕಾರಿಯಾಗಿದೆ.

ಚಿತ್ರದಲ್ಲಿ ಬರೀ ಕಾಲೇಜು ಜೀವನವನ್ನಷ್ಟೇ ತೋರಿಸದೆ, ಅಲ್ಲಲ್ಲಿ ಊರಿನಲ್ಲಿ ನಡೆಯುವ ಜಾತಿಜಗಳಗಳ ಹತ್ಯೆಗಳ ವಿವಿಧ ಮುಖಗಳನ್ನು ಮಧ್ಯೆ ಮಧ್ಯೆ ತೋರಿಸುತ್ತ ತಾನು ಹೇಳುವ ವಿಷಯದ ತೀವ್ರತೆಯನ್ನು ಹೆಚ್ಚುಮಾಡುತ್ತಾರೆ. ಚಿತ್ರದ ಅನೇಕ ದೃಶ್ಯಗಳನ್ನು ಅದು ಹೇಳುವ ಸಂದೇಶಗಳನ್ನು ಒಂದೊಂದಾಗಿ ಚರ್ಚಿಸಬಹುದು. ಆದರೆ ಇವೆಲ್ಲ ಅಂಶಗಳಿದ್ದೂ ಒಟ್ಟಾರೆಯಾಗಿಯೂ ಇದು ಸಂಪೂರ್ಣ ಸಿನಿಮಾದಂತೆ ಭಾಸವಾಗುತ್ತದೆ.

ಕಬಾಲಿಯಲ್ಲಿ ನಾಯಕ ಹಾಕಿಕೊಳ್ಳುವ ಬಟ್ಟೆಯ ಬಗ್ಗೆಯೂ ಸಾಂಕೇತಿಕವಾಗಿ ತೋರಿಸಿದ್ದೇವೆ ಅಂತ ನಿರ್ದೇಶಕ ಹೇಳಿದ್ದರು. ಹಾಗೆ ಹೇಳಿದ್ದರೂ ನಮಗೆ ಮನಸ್ಸಿಗೆ ಅವು ಅಷ್ಟೊಂದು ತಾಕುವುದಿಲ್ಲ. ಆದರೆ ಇಲ್ಲಿ ಹಾಗೆ ತೋರಿಸುವ ಕಡೆಯ ದೃಶ್ಯದ ಎರಡು ಲೋಟಗಳ ರೂಪಕಗಳು, ಪೆರುಮಾಳ್ ರೈಲಿನ ಹಳಿಯ ಮೇಲೆ ಬಿದ್ದಿದ್ದಾಗ ಅವನ ನಾಯಿ ಕರುಪ್ಪಿಯಂತೆ ಬರುವ ರೂಪಕಗಳು, ತಾನು ಮುಂದಿನ ಬೆಂಚಿಗಾಗಿ ಆ ಹುಡುಗರ ಮಧ್ಯೆ ಜಗಳ ನಡೆದಾಗ ಪೆರುಮಾಳ್ "ಯಾಕೆ, ನಾವು ಮುಂದೆ ಬರಬಾರದೇ?" ಅಂತ ಕೇಳುವಾಗ ಆತ ಬೆಂಚಿನ ಬಗ್ಗೆ ಹೇಳುತ್ತಿಲ್ಲ ಅನ್ನುವಂತಹ ವಿಷಯಗಳು, ......ಸಾಮಾನ್ಯ ಪ್ರೇಕ್ಷಕನಾಗಿಯೇ ಅರ್ಥೈಸಿಕೊಳ್ಳಬಹುದು.

ಪುಟ್ಟ ಹಳ್ಳಿಯಿಂದ ಸಮುದಾಯವೊಂದರಿಂದ ಓದಲು ಬರುವ ಹುಡುಗನನ್ನು ಅವನ ಸುತ್ತಲಿನ ಘಟನೆಗಳು, ಸಮಾಜ ಹೇಗೆಲ್ಲ ಕಾಡುತ್ತವೆ ಅನ್ನುವುದನ್ನು ಗೋಳು ಅನ್ನುವ ಹಾಗೆ ತೋರಿಸದೆ, ಲಘು ಹಾಸ್ಯದಿಂದಲೇ ತೋರಿಸಲಾಗಿದೆ. ಆದರೆ ಎಲ್ಲಿಯೂ ಆ ಸಮಸ್ಯೆಗಳು ಅವಾಸ್ತವಿಕ ಅನ್ನಿಸುವುದಿಲ್ಲ. ಡಾಕ್ಯುಮೆಂಟರಿ ಅನ್ನುವಂತಹ ವಿಷಯವನ್ನು ಸಿನಿಮಾ ಆಗಿ ಮಾರ್ಪಡಿಸಲು ಈ ಬಗೆಯ ದೃಶ್ಯಗಳು ಅವಶ್ಯಕ. ಜತೆಗೆ ಸಿನಿಮಾ ನೋಡುವಾಗ ಇದ್ಯಾವುದೋ ದೇಶದ ಸಿನಿಮಾದ ಹಾಗೆ ಅನ್ನಿಸುವುದಿಲ್ಲ. ನಮ್ಮ ಬೀದಿಯಲ್ಲೇ ನಡೆಯುತ್ತಿದೆ ಅನ್ನಿಸುತ್ತದೆ. ಅದಕ್ಕೆ ಕಾರಣ ನಿರ್ದೇಶಕ ತನ್ನದೇ ಸುತ್ತಲಿನ ವಾತಾವರಣವನ್ನು ಕಟ್ಟಿಕೊಡುವ ರೀತಿ. ಈ ಸಿನಿಮಾದಲ್ಲಿ ಬರುವ ಆ ಖಳ, ನಾಯಕನ ತಂದೆ, ನಾಯಕಿ, ಅವರ ಮೆಚ್ಚಿನ ಉಪನ್ಯಾಸಕರು, ಪ್ರಿನ್ಸಿಪಾಲರು, ಪ್ರೀತಿಯ ನಾಯಿ ಕರುಪ್ಪಿ......ಎಲ್ಲರ ಪಾತ್ರಗಳು ಮನಸ್ಸಿನಲ್ಲಿ ಉಳಿಯುತ್ತವೆ. ಮತ್ತು ಅವುಗಳನ್ನು ಚಿತ್ರಿಸಿರುವ ರೀತಿಯೂ ವಿಭಿನ್ನ.

ಮುಕ್ತಾಯಕ್ಕೂ ಮುನ್ನ ನಾಯಕ ಹುಡುಗಿಯ ತಂದೆಗೆ ಹೇಳುತ್ತಾನೆ " ನೀವು ನೀವಾಗಿಯೇ ಇರುವವರೆಗೂ, ನಾನು ಯಾವಾಗಲೂ ನಾನಾಗಿಯೇ ಇರಬೇಕು ಅಂತ ಎದುರು ನೋಡುವವರೆಗೂ ಇಲ್ಲಿ ಯಾವುದೂ ಬದಲಾಗದು" ಅಂತ ಹೇಳುತ್ತಾನೆ. ಅದೊಂದು ಡೈಲಾಗ್ ಹಾಗೆಯೇ ಮನಸ್ಸಿನಲ್ಲಿ ಉಳಿಯುತ್ತದೆ.

-----------------------

ಸಿನಿಮಾ ನೋಡುವಾಗ "ವ್ಹಾ" ಅನ್ನಿಸಿದ ಸೂಪರ್ ಸೀನ್:

ಪೆರುಮಾಳ್ ಲಾ ಕಾಲೇಜಿಗೆ ಅಡ್ಮಿಷನ್'ಗೆಂದು ತನ್ನ ತಾಯಿಯೊಂದಿಗೆ ಹಳ್ಳಿಯಿಂದ ನಗರಕ್ಕೆ ಬರುತ್ತಾನೆ. ಆತ ಮುಗ್ಧ.

"ಗುಡ್, ಈ ಕಾಲೇಜಿನಲ್ಲಿ ಸೀಟು ಸಿಗೋದೆ ಕಷ್ಟ. ಎಷ್ಟು ಜನ ಕಷ್ಟಪಡುತ್ತಾರೆ?! ನಿನಗೆ ಸೀಟು ಸಿಕ್ಕಿದೆ" ಅಂತ ಸಂತೋಷದ ವಿಷಯವನ್ನು ಹೇಳುವ ಪ್ರಿನ್ಸಿಪಾಲರು "ಓದಿದ ಮೇಲೆ ಏನಾಗಬೇಕು ಅಂದುಕೊಂಡಿದ್ದೀಯ?" ಅಂತ ಕೇಳ್ತಾರೆ.

ಆಗ ಅವನು ತಡವರಿಸದೆ "ಡಾಕ್ಟರ್" ಅನ್ನುತ್ತಾನೆ.

ಪ್ರಿನ್ಸಿಪಾಲ್'ಗೆ ಶಾಕ್! ಒಳಗೊಳಗೆ ಅವನ ಪೆದ್ದುತನದ ಬಗ್ಗೆ ನಗುತ್ತ "ಸರಿ ಹೊರಡಿ" ಅನ್ನುತಾರೆ. ಅವರ ತಾಯಿ ಆ ಕೊಠಡಿಯಿಂದ ಹೊರಗೆ ಹೋದ ಮೇಲೆ ಅವನನ್ನು ಮತ್ತೆ ಒಳಗೆ ಕರೆದು, "ಲೇ, ನೀನು ಸೇರಿಕೊಳ್ಳುತ್ತ ಇರೋದು ಲಾ ಕಾಲೇಜು. ಇಲ್ಲಿ ಓದಿಯಾದ ಮೇಲೆ ಲಾಯರ್ ಆಗೋದು. ಡಾಕ್ಟರಲ್ಲ" ಅನ್ನುತ್ತ ಹೇಳುತ್ತಾರೆ.

ಮಧ್ಯೆಯೇ ಅವರ ಮಾತನ್ನು ತಡೆದ ಪೆರುಮಾಳ್,
" ಸರ್, ನಾನು ಹೇಳಿದ್ದು ಬರೀ ಡಾಕ್ಟರ್ ಅಲ್ಲ.
ಡಾಕ್ಟರ್ ಬಿ.ಆರ್. ಅಂಬೇಡ್ಕರ್" ಅನ್ನುತ್ತಾನೆ!!
------------------------------
ಇದೊಂದು ಗೋಳಿನ ಸಿನಿಮಾ ಅಲ್ಲ. ಆದರೆ ಖಂಡಿತ ನಮ್ಮ ಕಣ್ತೆರೆಸುವ ಸಿನಿಮಾ. ನೋಡುವಾಗ ಅನ್ನಿಸಿದ್ದನ್ನು ಬಿಡಿಬಿಡಿಯಾಗಿ ಹೇಳಿದ್ದೇನೆ.. ಮಿಸ್ ಮಾಡದೇ ನೋಡಿ.

Amazon Prime ನಲ್ಲಿದೆ
------------------------------

ಸಂತೋಷ್ ಕುಮಾರ್ ಎಲ್.ಎಂ.
01-Mar-2019

No comments:

Post a Comment

Please post your comments here.