ಅನೇಕ ಸಲ ಈ ಸಿನಿಮಾ ಸಿಕ್ಕಾಪಟ್ಟೆ ಗಂಭೀರ ಕಥೆಯುಳ್ಳದ್ದು ಅಂತ ಹೋಗುತ್ತೇವೆ. ನೋಡಿದರೆ ಸಿಲ್ಲಿ ಸಿಲ್ಲಿ ಅನಿಸುವಷ್ಟು ಕಾಮಿಡಿಯಾಗಿರುತ್ತದೆ. ಕೆಲವು ಸಿನಿಮಾಗಳ ಹೆಸರನ್ನು ನೋಡಿ ಇದು ತಿಳಿಹಾಸ್ಯವಿರಬಹುದಾದ ಸಿನಿಮಾ ಅಂದುಕೊಳ್ಳುತ್ತೇವೆ. ಆದರೆ ಆ ಸಿನಿಮಾ ನಗಿಸುತ್ತಲೇ ಗಂಭೀರವಾದ ವಿಷಯವೊಂದನ್ನು ಹೇಳುತ್ತಿರುತ್ತದೆ. ತಮಿಳಿನ "ಜೋಕರ್" ಈ ಎರಡನೇ ಧಾಟಿಯ ಸಿನಿಮಾ.
ಶಂಕರ್ ಸಿನಿಮಾ 'ಅನ್ನಿಯನ್' ಅನ್ನು ನೀವು ನೋಡಿರಬಹುದು. ಅಲ್ಲಿ ಸಮಾಜದಲ್ಲಿ ನಡೆಯುವ ಚಿಕ್ಕಪುಟ್ಟ ಭ್ರಷ್ಟಾಚಾರಗಳೇ ನಾಯಕನ ಮನಸ್ಸಿಗೆ ನಾಟಿ ಆ ಸಣ್ಣ ಅಪರಾಧಗಳನ್ನು ಮಾಡಿದವರನ್ನೇ ಅಟ್ಟಾಡಿಸಿಕೊಂಡು ಹೊಡೆಯುತ್ತಾನೆ. ಎದುರಾಳಿ ಅದ್ಯಾವ ಪ್ರಭಾವೀ ಶಕ್ತಿಶಾಲಿ ವ್ಯಕ್ತಿಯಾಗಿರಲಿ. ಸೂಪರ್-ಹೀರೋನಂತೆ ಎಲ್ಲಿಂದಲೋ ಬಂದು ದಾಳಿಮಾಡಿ ಹಣ್ಣುಗಾಯಿ ನೀರುಗಾಯಿ ಮಾಡುತ್ತಾನೆ. ನಿರ್ದೇಶಕ ಶಂಕರ್'ಗೆ ಸತ್ಯಾಗ್ರಹ ಮಾಡಿಸುವುದರಲ್ಲಿ ಆಸಕ್ತಿಯಿಲ್ಲ. ಅಷ್ಟು ವ್ಯವಧಾನವೂ ಇಲ್ಲ. ಅವನಿಗೆ ಬೇಕಾಗಿರುವುದು ಈ ಕ್ಷಣದ ಪರಿಹಾರ. ಅದಕ್ಕೆ ಆತ ಹೀರೋನ ಕೈಗೆ ಯಾವ ಆಯುಧವನ್ನಾದರೂ ಕೊಡಬಲ್ಲ.
ಆದರೆ ಜೋಕರ್ ಸಿನಿಮಾದ ಹೀರೋ ಆ ಬಗೆಯ ಸೂಪರ್ ಹೀರೋ ಅಲ್ಲ. ಆತ ಒಬ್ಬ ಸಾಮಾನ್ಯ ಮನುಷ್ಯ. ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾಮಾನ್ಯ ಮನುಷ್ಯನೇ ಸೂಪರ್ ಹೀರೋ ಎಂಬ ಸತ್ಯವನ್ನು ಅರಿತುಕೊಂಡವ. ತಾನೇ ಈ ವ್ಯವಸ್ಥೆಯ ಆಧಾರಸ್ಥಂಭವೆಂಬಂತೆ ಪ್ರತಿಯೊಂದನ್ನು ಹಿಂಜರಿಕೆಯಿಲ್ಲದೆಯೇ ಪ್ರಶ್ನಿಸಬಲ್ಲವ. ಅನ್ಯಾಯವಾದಲ್ಲಿ ಕಾನೂನಾತ್ಮಕವಾಗಿಯೇ ಅದಕ್ಕೊಂದು ಪರಿಹಾರ ಹುಡುಕಬಲ್ಲೆ ಅಂತ ಹೊರಡುವವ. ಕಿತ್ತುಹೋದ ರಾಜಕೀಯ ವ್ಯವಸ್ಥೆಯಲ್ಲಿ ಏನೂ ಆಗದಿದ್ದಾಗ ಜನರ ಕಣ್ತೆರೆಸಲು ಮತ್ತು ಜನಪ್ರತಿನಿಧಿಗಳ ನಿದ್ರೆಗೆಡಿಸಲು ಗಾಂಧೀತತ್ವವನ್ನು ಬಳಸಬಹುದು ಎಂಬ ವಿಶ್ವಾಸವುಳ್ಳವ. ಒಟ್ಟಿನಲ್ಲಿ ಏನಾದರೂ ತಪ್ಪು ಎಂದು ಕಂಡುಬಂದಲ್ಲಿ ಹಿಂದೆಮುಂದೆ ನೋಡದೇ ಮುನ್ನುಗ್ಗುವವ.
ಇವನ್ನೆಲ್ಲ ಒಬ್ಬಾತ ಮಾಸ್ ಹೀರೋ ಆಗಿ ಮಾಡುತ್ತಾನೆ ಎಂದು ಊಹಿಸಿದರೆ ತಪ್ಪಾಗುತ್ತದೆ. ಒಬ್ಬಾತ ತಾನು ಈ ದೇಶದ ರಾಷ್ಟ್ರಪತಿ ಎಂದು ತನ್ನನ್ನು ತಾನು ಘೋಷಿಸಿಕೊಂಡು ಅದರಂತೆಯೇ ಹಾವಭಾವ ತೋರಿಸುತ್ತ ಛತ್ರಿಯಿರುವ ಟಿವಿಎಸ್ ಮೊಪೆಡ್ ಮೇಲೆ ಕೂತು ಗಾಂಭೀರ್ಯದಿಂದ ಹೊರಡುವಾಗ ನಕ್ಕು ಸಾಕಾಗುತ್ತೇವೆ. ಆ ಸಿನಿಮಾದೊಳಗೂ ಅವನ ಪರಿಪಾಟಲನ್ನು ನೋಡಿ ನಗುವವರೇ! ಆದರೆ ಒಂದೊಂದು ದೃಶ್ಯ ಮುಗಿದಂತೆ ಆ ಹಾವಭಾವದ ಹಿಂದಿನ ಗಂಭೀರತೆ ಅರ್ಥವಾಗತೊಡಗುತ್ತದೆ. ನಂತರ ಆ ವ್ಯಕ್ತಿಯ ಹಿನ್ನೆಲೆ ಗೊತ್ತಾದಾಗ ಮನಸ್ಸು ಆರ್ದ್ರವಾಗುತ್ತದೆ. ನಾವು ಊಹಿಸುವಂತೆಯೇ ನಗ್ನ ಸಮಾಜದ ಮಧ್ಯೆ ನಿಂತ ಬಟ್ಟೆ ತೊಟ್ಟವ ಎಲ್ಲರೆದುರು ತನ್ನನ್ನು ಸಮರ್ಥಿಸಿಕೊಳ್ಳಲಾಗದ ಪರಿಸ್ಥಿತಿಯಲ್ಲೂ ತನ್ನ ನಿಲುವನ್ನು ಬದಲಾಯಿಸಿಕೊಳ್ಳುವುದಿಲ್ಲ. ಕಡೆಗೆ ಆ ನಗ್ನ ಸಮಾಜ ಅವನನ್ನು ನೆಲಕ್ಕೆ ನೂಕಿ ಅವನ ಕಳೇಬರದ ಮೇಲೆ ನಡೆಯುತ್ತದೆ.
ಸಿನಿಮಾದ ಅಂತ್ಯದಲ್ಲಿ ನೋಡುಗ ದೊರೆಗಳು ಮುಖ ಒರೆಸಿಕೊಳ್ಳುವಂತೆ ವಸ್ತುವಿಷಯವನ್ನು ಹೇಳಲಾಗುತ್ತದೆ. ಸಿನಿಮಾದಿಂದ ಎದ್ದು ಬರುವಾಗ ನೋಡುಗ ಇನ್ನು ಮುಂದೆ ಸಮಾಜದ ಸಮಸ್ಯೆಯ ಬಗ್ಗೆ ಯಾರಾದರೂ ಸೊಲ್ಲೆತ್ತಿದರೆ ಅವರನ್ನು ಜೋಕರ್'ನಂತೆ ನೋಡುವುದಿಲ್ಲ ಅಂತ ಪ್ರತಿಜ್ಞೆ ಮಾಡುತ್ತಾನೆ. ಅದು ಈ ಸಿನಿಮಾವನ್ನು ಸಮರ್ಥವಾಗಿ ಹೇಳಿರುವ ರೀತಿ. ಪ್ರಶ್ನೆ ಮಾಡುವವರನ್ನು ಜೋಕರ್'ನನ್ನಾಗಿ ಮಾಡುವ ಕೆಟ್ಟ ಬೆಳವಣಿಗೆಗಳನ್ನು ಈ ಸಿನಿಮಾ ಸಂಪೂರ್ಣವಾಗಿ ಬೆತ್ತಲು ಮಾಡುತ್ತದೆ. ಸಿನಿಮಾದ ಕೊನೆಯಲ್ಲೇ ಆ ಸಿನಿಮಾದ ಶೀರ್ಷಿಕೆ ಅರ್ಥವಾಗುವುದು ಕೂಡ.
ಈ ಸಿನಿಮಾದಲ್ಲಿ ನನಗಿಷ್ಟವಾಗಿದ್ದು ಯಾವುದೇ ಅಜೆಂಡಾ ಅಂತ ಇಟ್ಟುಕೊಂಡು ಮಾಡಿದ ಸಿನಿಮಾವಲ್ಲ. ಕೆಲವು ನಿರ್ದೇಶಕರ ಕಥೆ ಹೇಳುವಿಕೆಯಲ್ಲೇ ಅವರು ಯಾವ ಪಕ್ಷದ ವಿರುದ್ಧ ಮಾತನಾಡುತ್ತಿದ್ದಾನೆ ಅಂತ ಹೇಳಬಹುದು. ಆದರೆ ಇಲ್ಲಿಯ ನಿರ್ದೇಶಕ ಕೇವಲ ಬಡವರ ಪರ, ನಿರ್ಗತಿಕರ ಪರ, ಪ್ರಜಾಪ್ರಭುತ್ವದ ಸರ್ವಶಕ್ತ ಮತದಾರ ಪ್ರಭುವಿನ ಪರ, ಅನ್ಯಾಯದ ವಿರುದ್ಧವಾಗಿ ಮಾತನಾಡುತ್ತನೆಯೇ ಹೊರತು ಅದಕ್ಕೆ ಯಾವ ಪಕ್ಷದವರು ಕಾರಣ ಅಂತ ಹೇಳುವುದರಲ್ಲಿ ತಲೆಕೆಡಿಸಿಕೊಂಡಿಲ್ಲ. ಏಕೆಂದರೆ ಅವ ಹೇಳುವ ಸಮಸ್ಯೆಗಳೂ ದಶಕಗಳಿಂದಲೇ ನಮ್ಮ ಮಧ್ಯೆ ಹೊಕ್ಕಿವೆ. ಪರಿಹರಿಸದಿದ್ದರೆ ಮುಂದೆಯೂ ಇರುತ್ತವೆ. ಈ ಬಗೆಯ ಸಿನಿಮಾಗಳು ಇನ್ನೂ ಮೂವತ್ತು ವರ್ಷಗಳ ನಂತರ ನೋಡಿದ ಮೇಲೂ ಪ್ರಶ್ನೆ ಮಾಡುವ ಮನೋಭಾವವನ್ನು ಜನಸಾಮಾನ್ಯರಲ್ಲಿ ತುಂಬಬೇಕು.
ಸಿನಿಮಾದಲ್ಲಿ ಕಥೆ, ಅದನ್ನು ಹೇಳಿರುವ ರೀತಿ, ಸಂಗೀತ, ನಿರ್ದೇಶನ, ಕಲಾವಿದರು, ಸಂಭಾಷಣೆ, ಛಾಯಾಗ್ರಹಣ ಎಲ್ಲವೂ ಚೆನ್ನಾಗಿದೆ. ಆರ್ಟ್ ಸಿನಿಮಾ ನೋಡಬೇಕು ಅನ್ನುವವರಿಗೂ, ಕಥೆಯಿರುವ ಸಿನಿಮಾ ನೋಡಬೇಕು ಅಂದುಕೊಳ್ಳುವವರಿಗೂ, ವಿಭಿನ್ನ ಸಿನಿಮಾದ ತುಡಿತದಲ್ಲಿರುವವರಿಗೂ ಇದು ಖಂಡಿತ ನೋಡಲೇಬೇಕಾದ ಸಿನಿಮಾ. ಈ ಸಿನಿಮಾದ ಬಗ್ಗೆ ಇರುವ ರೇಟಿಂಗ್ ಅನ್ನು ನೋಡಿದರೇ ಇದರ ತೂಕವನ್ನು ಅಳೆಯಬಹುದು. ಕೆಲವೆಡೆ ಎಳೆದಂತೆ ಅನ್ನಿಸಿದರೂ ಮುಗಿದ ಮೇಲೆ ಅನೇಕ ವಿಷಯಗಳ ಬಗ್ಗೆ ಚಿಂತನೆಗೆ ಹಚ್ಚುವ ಸಿನಿಮಾ.
ಸಾಧ್ಯವಾದರೆ ಒಮ್ಮೆ ನೋಡಿ.
ಸಂತೋಷ್ ಕುಮಾರ್ ಎಲ್.ಎಂ
19-Mar-2019
No comments:
Post a Comment
Please post your comments here.