Tuesday, February 5, 2013

ನಾ ಕಂಡ ಹೀರೋಗಳು-1

ಪಂಜು ವೆಬ್ ಸೈಟ್ ನ ಮೊದಲ ಸಂಚಿಕೆಯಲ್ಲೇ ಪ್ರಕಟವಾದ ನನ್ನ ಲೇಖನ.
ಲಿಂಕ್: http://www.panjumagazine.com/?p=70

===========================================================
ನಾನಾಗ ಒಂಭತ್ತನೆಯ ತರಗತಿಯಲ್ಲಿ ಓದುತ್ತಿದ್ದೆ. ಆ ವರ್ಷದಲ್ಲಿ ನಡೆದ ರಾಷ್ಟ್ರ ಮಟ್ಟದ ಭಾರತೀಯ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಮೊದಲು ಜಿಲ್ಲಾ ಮಟ್ಟದ ಸ್ಪರ್ಧೆ ಮೈಸೂರಿನಲ್ಲಿ ನಡೆದಿತ್ತು. ನಮ್ಮ ವಿಜ್ಞಾನ ಮಾಸ್ತರರಾಗಿದ್ದ ನಾಗೇಂದ್ರರವರ ಮಾರ್ಗದರ್ಶನದಲ್ಲಿ ಭಾಗವಹಿಸಿದ್ದ ನಾನು, ಗ್ರಾಮೀಣ ವಿಭಾಗದಿಂದ ರಾಜ್ಯ ಮಟ್ಟದ ಸಮಾವೇಶಕ್ಕೆ ಆಯ್ಕೆಯಾಗಿದ್ದೆ.
ಬರೀ ೧೫ ದಿನಗಳ ಕಾಲಾವಕಾಶವಿದ್ದುದರಿಂದ ನಾನು ನಮ್ಮ ಮಾಸ್ತರರ ಕೊಳ್ಳೇಗಾಲ ನಿವಾಸದಲ್ಲಿಯೇ ಬೀಡು ಬಿಟ್ಟು ಹಗಲಿರುಳು ಶ್ರಮಿಸಿದ್ದೆ. ರಾಜ್ಯಮಟ್ಟದ ಸಮಾವೇಶಕ್ಕೆ ಅರಸೀಕೆರೆ ಮದುವೆ ಹೆಣ್ಣಿನಂತೆ ಅಲಂಕಾರಗೊಂಡಿತ್ತು. ಬೆಳಿಗ್ಗೆಯೇ ಕೊಳ್ಳೇಗಾಲ ಬಿಟ್ಟ ನಾವು ಮಧ್ಯಾಹ್ನವೇ ಅರಸೀಕೆರೆ ತಲುಪಿದ್ದೆವು. ಪ್ರತಿ ಜಿಲ್ಲೆಯವರಿಗೊಂದು ಕೊಂಚ ವಿಶಾಲವೆನಿಸುವಷ್ಟು ಜಾಗವಿದ್ದ ಕೊಠಡಿಯನ್ನು ತಂಗಲು ವ್ಯವಸ್ಥೆ ಮಾಡಲಾಗಿತ್ತು. ಬಿಸಿಲ ಝಳವಿದ್ದುದರಿಂದ ಆ ಕೊಠಡಿಯಲ್ಲಿ ಮಲಗಿಕೊಂಡ ಕೂಡಲೇ ಅದ್ಯಾವಾಗ ನಿದ್ರೆ ಹತ್ತಿತೆಂದೇ ತಿಳಿಯಲಿಲ್ಲ.

ಸಂಜೆ ಏಳುವಷ್ಟರಲ್ಲಿ ಮೈಸೂರು ಜಿಲ್ಲೆಯ ನಗರ ವಿಭಾಗಗಳಿಂದ ಬರಬೇಕಿದ್ದ ಅಭ್ಯರ್ಥಿಗಳೆಲ್ಲ ತಮ್ಮ ಮಾರ್ಗದರ್ಶಕರ ಜತೆ ಬಂದು ಕೊಠಡಿ ಸೇರಿಯಾಗಿತ್ತು. ನಾಗೇಂದ್ರ ಮಾಸ್ತರರು ಎದ್ದವರೇ ಮುಖ ತೊಳೆದು ಫ್ರೆಶ್ ಆಗಿ ಬರಲು ಹೊರಟರು. ನಾನು ಕೊಠಡಿಯಲ್ಲೇ ಉಳಿದೆ. ಪಕ್ಕದಲ್ಲಿ ಕುಳಿತು ಮೈಸೂರು ಜಿಲ್ಲೆಯಿಂದ ಬಂದ ಸಹ ಅಭ್ಯರ್ಥಿಗಳನ್ನು ನಿಧಾನವಾಗಿ ಗಮನಿಸತೊಡಗಿದೆ. ಬಂದವರೆಲ್ಲ ನಗರ ಪ್ರದೇಶದವರೇ ಆಗಿದ್ದು ನೋಡಲಿಕ್ಕೆ ಬಹಳ ನೀಟಾಗಿ ಡ್ರೆಸ್ ಮಾಡಿಕೊಂಡಿದ್ದರು. ಅದ್ಯಾವುದೋ ಸಿಕ್ಕ ಪ್ಯಾಂಟ್, ಶರ್ಟನ್ನು ಸಿಕ್ಕಿಸಿಕೊಂಡು ಬಂದಿದ್ದ ನನಗೆ ಏನೋ ಒಂದು ತರಹದ ಕೀಳರಿಮೆ ಕಾಡತೊಡಗಿತ್ತು.

 


ಆ ಟೀಚರ್ ಗಳು ಬಹಳ ನಿರರ್ಗಳವಾಗಿ ಮಾತನಾಡುತ್ತಿದ್ದರು. ಅವರ ಶಿಷ್ಯರುಗಳು ಕೂಡ!! ನಾ ಎದ್ದಿದ್ದನ್ನು ನೋಡಿ ಆಲ್ಲಿದ್ದ ಟೀಚರ್ ಗಳಲ್ಲೊಬ್ಬರು ಬನ್ನಿ ಎಲ್ಲರೂ ಪರಿಚಯಿಸಿಕೊಳ್ಳೋಣ ಎಂದು ಸೂಚಿಸಿದರು. ಯಾಕೋ ಸಂಕೋಚದಿಂದ ಎದ್ದು ನಿಂತು ಅವರ ಬಳಿಗೆ ಹೋದೆ. ಪ್ರತಿಯೊಬ್ಬರೂ ಇನ್ನೊಬ್ಬರಿಗೆ ಶೇಕ್ ಹ್ಯಾಂಡ್ ಕೊಡುವುದು ನಂತರ ಅವರ, ಶಾಲೆಯ ಮತ್ತು ಕುಟುಂಬದ ಹಿನ್ನೆಲೆಯನ್ನು ಹೇಳಬೇಕಿತ್ತು. ಆ ಹುಡುಗಿ ಓದುತ್ತಿರೋದು ಮರಿಮಲ್ಲಪ್ಪ ಸ್ಕೂಲಿನಲ್ಲಿ. ಅವರ ಅಪ್ಪ ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್ ನಲ್ಲಿ ಬ್ಯಾಂಕ್ ಮ್ಯಾನೇಜರ್. ಆ ಹುಡುಗ ಸೈಂಟ್  ಜೋಸೆಫ್ ಸ್ಕೂಲ್, ಅಪ್ಪ ಬೆಂಗಳೂರಿನಲ್ಲಿ ಸಿವಿಲ್ ಇಂಜಿನಿಯರ್ ಆಗಿದ್ದಾರೆ. ಹೀಗೆ ನಾಲ್ಕೈದು ಹುಡುಗರ ಪರಸ್ಪರ ಪರಿಚಯವಾದ ತರುವಾಯ ನನ್ನ ಸರದಿ ಬಂತು.
ಏನಂತ ತಾನೇ ಹೇಳಲಿ? ನನಗೆ ಯಾವಾಗಲೂ ನನ್ನ ಬಗ್ಗೆ ಕೀಳರಿಮೆಯಿತ್ತು. ಮೊದಲಿಗೆ ನಾನು ಕನ್ನಡ ಮಾಧ್ಯಮದ ಸರಕಾರೀ ಪ್ರೌಢಶಾಲೆಯಲ್ಲಿ ಓದುತ್ತಿದ್ದೇನೆ. ನಮ್ಮಪ್ಪ ಕೇವಲ ಒಬ್ಬ ವ್ಯವಸಾಯಗಾರರಷ್ಟೇ!! ಅದನ್ನು ಹೇಗೆ ಹೇಳಿಕೊಳ್ಳುವುದು? ಅದೇನು ಇಂಜಿನೀರ್ ಅಥವಾ ಬ್ಯಾಂಕ್ ಮ್ಯಾನೇಜರ್ ನಷ್ಟು ಹೇಳಿಕೊಳ್ಳಬಲ್ಲ, ಜೊತೆಗೆ ಅಷ್ಟೊಂದು ಸಂಬಳ ಬರಿಸುವ ಕೆಲಸವಲ್ಲ.

ವರ್ಷವಿಡೀ ಕಷ್ಟಪಟ್ಟು ವ್ಯವಸಾಯ ಮಾಡಿದ ಮೇಲೆ ಬಂದರೆ ಬಂತು, ಇಲ್ಲದಿದ್ದರೆ ಇಲ್ಲ ಎನ್ನುವ ಪರಿಸ್ಥಿತಿ. ಕಡೆಗೆ ಧೈರ್ಯ ಮಾಡಿ ಕೈ ಕುಲುಕಿದವನೇ "ನನ್ನ ಹೆಸರು ಸಂತೋಷ್, ಲೊಕ್ಕನಹಳ್ಳಿ ಎನ್ನುವ ಗ್ರಾಮದಲ್ಲಿ ಸರಕಾರೀ ಪ್ರೌಢಶಾಲೆಯೊಂದರಲ್ಲಿ ಒಂಭತ್ತನೇ ತರಗತಿ ಓದುತ್ತಿದ್ದೇನೆ" ಎಂದು ಹೇಳಿ ಬೇಗನೆ ಆ ವಾಕ್ಯ ಮುಗಿಸಿ ಹಿಂದೆ ಬರಲು ರೆಡಿಯಾದೆ!

ಅಷ್ಟು ಹೊತ್ತಿಗೆ ಸುಮ್ಮನೆ ಕೇಳಿಸಿಕೊಳ್ಳುತ್ತಿದ್ದ ಆ ಟೀಚರ್ ನನ್ನನ್ನು ಹೋಗದಂತೆ ಮತ್ತೆ ಕರೆದು "ಯಾಕಪ್ಪಾ ನಿಮ್ಮ ತಂದೆಯವರ ಕೆಲಸ ಹೇಳಲೇ ಇಲ್ಲ" ಅಂದುಬಿಟ್ಟರು. ಕಡೆಗೆ ಬೇರೆ ವಿಧಿಯಿಲ್ಲದೇ "ಏನೂ ಕೆಲಸ ಅಂತ ಏನಿಲ್ಲ ಮೇಡಂ, ನಮ್ಮಪ್ಪ ಕೇವಲ ಇರೋ ಚಿಕ್ಕ ಭೂಮಿಯಲ್ಲಿ ಬೇಸಾಯ ಮಾಡ್ತಾರೆ" ಎಂದು ಕೇವಲ ಆಯಮ್ಮನಿಗೆ ಕೇಳಿಸುವಷ್ಟು ಮಾತ್ರ ಹೇಳಿ ಹೊರಡಲನುವಾದೆ. ತಕ್ಷಣ ಮತ್ತೊಂದು ಪ್ರಶ್ನೆ…"ಏನು ಬೆಳೆಯುತ್ತೀರ", ನನ್ನ ಶಾರ್ಟ್ ಅಂಡ್ ಸ್ವೀಟ್ ಉತ್ತರ "ಜೋಳ". ಆ ಟೀಚರ್ ಗೆ ನನ್ನ ಮುಜುಗರ, ನಾ ಉತ್ತರಿಸುತ್ತಿದ್ದ ಧಾಟಿಯಲ್ಲಿಯೇ ಅರ್ಥವಾಗಿ ಹೋಯಿತು. ನನ್ನ ಹತ್ತಿರ ಬಂದವರೇ ನನ್ನ ಬೆನ್ನು ತಟ್ಟಿ, ಕೈಹಿಡಿದು ಹೇಳತೊಡಗಿದರು!!

 


"ಸಂತೋಷ್ ಮುಜುಗರ ಬೇಡಪ್ಪ, ಈ ದೇಶದ ಬೆನ್ನೆಲುಬು ರೈತ. ಇಲ್ಲಿರುವ ಕೋಟ್ಯಾಂತರ ಜನಗಳಲ್ಲಿ ಯಾರು ಬೇಕೆಂದರೂ ಇಂಜಿನಿಯರ್ ಆಗಬಹುದು. ಡಾಕ್ಟರ್ ಆಗಬಹುದು. ಅದಕ್ಕೆ ಕೇವಲ ವಿದ್ಯೆ ಬುದ್ದಿಯಿದ್ದರೆ ಸಾಕು. ಆದರೆ ರೈತರಾಗಲು ಮನಸ್ಸಿರಬೇಕು,ಉಳೋಕೆ ಭೂಮಿಯಿರಬೇಕು.ಆ ಭೂತಾಯಿಯನ್ನು ಮನಸಾರೆ ಭಕ್ತಿ ಭಾವದಿಂದ ಆಲಂಗಿಸಬೇಕು. ಅದಕ್ಕಿಂತಲೂ ದಣಿವಾದ ಮೇಲೂ ಉಳುವೆನೆನ್ನುವ ಛಲ ಬೇಕು. ಮಳೆರಾಯ ಬರುವನೆನ್ನುವ ನಂಬಿಕೆ ಬೇಕು. ಕೊನೆಗೆ ಉತ್ತು ಬಿತ್ತು ಫಸಲು ಬಂದ ಮೇಲೂ ಕೈಗೆ ಹಣ ಬರುವ ತನಕ ತಾಳ್ಮೆ ಬೇಕು. ಆದರೂ ರೈತನಿಗೆ ಸಿಗೋದು ಕೇವಲ ಬಿಡಿಗಾಸಷ್ಟೇ. ಆದರೂ ಮತ್ತೊಮ್ಮೆ ಆ ದುಡ್ಡಿನಲ್ಲಿ ಸಿಗುವ ಸಂತೋಷಕ್ಕೆ ದೇಹವನೊಡ್ಡದೇ, ಮತ್ತೊಮ್ಮೆ ನೇಗಿಲು ಕಟ್ಟಿ ಉಳಲು ಹೊರಡುತ್ತಾನೆ. ಹೀಗೆ ಇಡೀ ಜಗತ್ತಿಗೆ ದುಡಿಮೆಯೆಂದರೇನು ಅನ್ನುವುದನ್ನು ತೋರಿಸಿಕೊಡುತ್ತಾನೆ.
ಇಂಜಿನಿಯರ್, ಡಾಕ್ಟರ್ ಗಳು ಒಂದು ದಿನ ಕೆಲಸ ಮಾಡದೇ ಕುಳಿತರೂ ಏನೂ ಆಗುವುದಿಲ್ಲ, ಆದರೆ ಒಬ್ಬ ರೈತ ತನ್ನ ಕೆಲಸ ಮಾಡದೇ ಕೈಕಟ್ಟಿ ಕುಳಿತುಬಿಟ್ಟರೆ, ಇಡೀ ಜಗತ್ತಿಗೆ ಉಣ್ಣೋಕೆ ಅನ್ನದಗಳೂ ಇರುವುದಿಲ್ಲ. ಯಾರ ಹಂಗಿನಲ್ಲೂ ಬದುಕದೇ, ಕೇವಲ ಭೂತಾಯಿ ವರುಣರಾಯನನ್ನು ಮಾತ್ರ ನಂಬಿ ಬಾಳುವ ಏಕೈಕ ಸ್ವಾಭಿಮಾನಿ ರೈತ. ನಿಮ್ಮಿಂದ ನಾವು, ಆದರೆ ನಮ್ಮಿಂದ ನೀವಲ್ಲ. ಇಂದು ಆ ನಗರ ಪ್ರದೇಶಗಳಲ್ಲಿ ಕೋಟ್ಯಾಂತರ ಜನ ತಿನ್ನುವ ಪ್ರತೀ ಅನ್ನದಗಳಿನ ಹಿಂದೆ ನಿಮ್ಮ ನಿಸ್ವಾರ್ಥ ಪರಿಶ್ರಮವಿದೆ. ಕೃಷಿಯ ಬಗ್ಗೆ, ನಮ್ಮೆಲ್ಲ ದೇಶದ ರೈತರ ಬಗ್ಗೆ ನನಗೆ ಹೆಮ್ಮೆಯಿದೆ. ಅದಕ್ಕಾಗಿ ನಿಮ್ಮ ತಂದೆಗೆ ನಾನು ಕೃತಜ್ಞತೆ ಅರ್ಪಿಸಬಯಸುತ್ತೇನೆ. ಇನ್ನೆಂದಿಗೂ ನಿಮ್ಮ ತಂದೆಯ ಕೆಲಸದ ಬಗ್ಗೆ ನಿನಗೆ ಮುಜುಗರ ಬೇಡ."

ಈ ಮಾತನ್ನು ಕೇಳಿದ ನನಗೆ ಅರಿವಿಲ್ಲದೆಯೇ ರೋಮಾಂಚನವಾಯಿತು. ಇದುವರೆಗೂ ಅರ್ಥವಾಗಿರದಿದ್ದ ನಮ್ಮ ತಂದೆಯವರ ಕೃಷಿಯ ವಿಶೇಷತೆ ಈಗ ಅರ್ಥವಾಗಿ ಮನಸ್ಸಿನಲ್ಲಿಯೇ ಖುಷಿಪಟ್ಟೆ.ಗೊತ್ತಿದ್ದೂ ಗೊತ್ತಿರದಂತಿದ್ದ ನನ್ನ ಕಣ್ಣ ತೆರೆಸಿದ ಆ ಟೀಚರನ್ನು ನಾ ನನ್ನ ಜೀವನದಲ್ಲಿ ಮರೆಯಲಾರೆ. ಅದೇ ಕೊನೆ!! ಈಗ ಯಾರೇ "What is your Father?" ಎಂದು ಕೇಳಿದರೆ ಮುಜುಗರವಿಲ್ಲದೆಯೇ ಎದೆತಟ್ಟಿ "He is an agriculturist!!" ಎಂದು ಹೇಳುತ್ತೇನೆ. ಅದ್ಯಾಕೋ ಆವಾಗಲೆಲ್ಲ ಆ ಅರಸಿಕೆರೆಯ ಆ ಟೀಚರ್ ನೆನಪಿಗೆ ಬರುತ್ತಾರೆ!! ಆಗ ನನ್ನನ್ನು ನಾನು ಕೇಳಿಕೊಳ್ಳುತ್ತೇನೆ…. ಹೀರೋಗಳನ್ನು ನೋಡೋಕೆ ಕೇವಲ ಸಿನಿಮಾಗಳಿಗೆ ಹೋಗಬೇಕಾ ಅಂತ!!
–ಸಂತು



ಗುಟ್ಟು

"Kiyoshi Jewelers" ನಡೆಸುತ್ತಿರುವ "Valentine Couple Contest"ಗೆ ನನ್ನ ಮತ್ತು ನನ್ನ ಮಡದಿಯ ಭಾವಚಿತ್ರವನ್ನು ನನ್ನ ಒಂದು ಪುಟ್ಟ ಕವನದೊಂದಿಗೆ ಕಳುಹಿಸಿದ್ದೆ.
ಅದರ ನೆನಪಿಗಾಗಿ...
=============================================
 
ಒಬ್ಬನೇ ಬರಡು ಭೂಮಿಯ ಮೇಲೆ
ಉತ್ತು ಬಿತ್ತುವುದರಲ್ಲಿದ್ದೆ.
ಆಕೆ ಸಿಕ್ಕಳು, ಪ್ರೀತಿಮಳೆ ಸುರಿಸಿದಳು
ಈಗ ಬಾಳಭೂಮಿಯ ತುಂಬೆಲ್ಲ ನಗುವ ಹೂಗಳು!!

ನನ್ನ ಅವಳ ಗೆಳೆತನಕ್ಕೀಗ
ಬರೇ ಹನ್ನೊಂದು ವರ್ಷ!!
ನಮ್ಮಿಬ್ಬರ ಮಡಿಲಲ್ಲಿ ಪುಟ್ಟಿಯೊಬ್ಬಳಿದ್ದಾಳೆ
ತುಂಬಿರುವಳು ಬಾಳಿನಲಿ ಹರುಷ!

ಎಲ್ಲ ಹೇಳಿದರೇನು, ಪ್ರೀತಿಯಿಲ್ಲದಿದ್ದರೂ
ಇಲ್ಲಿ ಬದುಕಬಹುದು, ಅದು ಸುಳ್ಳಲ್ಲ!!
ಪ್ರಾಣವಿಲ್ಲದ ದೇಹ ಎಷ್ಟು ದಿನವಿದ್ದರೇನು
ಅದ ಜೀವನವೆಂದು ಕರೆವರಾರಿಲ್ಲ!!

ಕಳೆದಿಷ್ಟೂ ದಿನಗಳ ಜರಡಿ ಹಿಡಿದರೆ
ಕೆಳಗೆ ಸುರಿದದ್ದೆಲ್ಲ ಕೆಲವೇ ಹೊಟ್ಟು!.
ಮೇಲೆ ನೋಡಿ, ಉಳಿದದ್ದೆಲ್ಲ ಸಕ್ಕರೆ
ಅವಳ ಪ್ರೀತಿಯೇ ಇದರ ಗುಟ್ಟು!!

ಪ್ರೇಮರಾಗದಲಿ ಅಪಸ್ವರವೂ ಇಂಪು
ಹಾಡುವ ಸಾಲೆಲ್ಲ ಮುಗಿದ ಮೇಲೂ!
ಒಂದೊಂದು ಸ್ವರಗಳೂ ಕಾಡುತಲಿರುತಾವೆ
ಈ ದೇಹ ಇಲ್ಲಿಂದ ಅಳಿದ ಮೇಲೂ!!

====================================

Saturday, February 2, 2013

"ಚಿಕ್ಕ" ಮಕ್ಕಳಾ?

Poorvi and Me


ಮಕ್ಕಳು ಅಂತ ಅನ್ನುವಾಗ "ಚಿಕ್ಕ" ಅಂತ ಒಂದು ಪದ ಸೇರಿಸಿ ಚಿಕ್ಕಮಕ್ಕಳು ಅಂತ ಕರೆದುಬಿಟ್ಟಿರುತ್ತೇವೆ. ಅದು ಅವುಗಳ ವಯಸ್ಸು,ಆಕಾರವನ್ನು ಗಮನದಲ್ಲಿಟ್ಟುಕೊಂಡೋ ಅಥವಾ ಅವುಗಳ ಬುದ್ಧಿಶಕ್ತಿಯನ್ನು ಗಮನದಲ್ಲಿಟ್ಟುಕೊಂಡೋ ಅಂತ ಗೊತ್ತಾಗುವುದಿಲ್ಲ. ಕೆಲವರಂತೂ ಮಕ್ಕಳಿಗೆ ಲಾಜಿಕಲ್ ಆಗಿ ಯೋಚನೆ ಮಾಡುವುದಕ್ಕೆ ಬರುವುದಿಲ್ಲ ಅಂತ ಹೇಳುತ್ತಿರುತ್ತಾರೆ. ಅಂಥವರಿಗೆಲ್ಲ ತಮ್ಮ ಅಭಿಪ್ರಾಯ ತಪ್ಪು ಅಂತ ಗೊತ್ತಾಗುವುದೇ ಅವರ ಮನೆಯೊಳಗೆ ಒಂದು ಮಗು ಪ್ರವೇಶ ಕೊಟ್ಟಾಗ!!

======================================================

ಯಾವುದೇ ಕುತೂಹಲವಿದ್ದರೂ ನಾನು ಅದನ್ನು ನನ್ನ ಮಗಳು ಪೂರ್ವಿಯಿಂದಲೇ ಬಗೆಹರಿಸಿಕೊಳ್ಳಬಯಸುತ್ತೇನೆ.
ಎರಡು ತಿಂಗಳ ಹಿಂದೆ ನನಗೆ ಆ ಪ್ರಶ್ನೆ ಮನಸ್ಸಿನಲ್ಲಿ ಮೂಡಿ ಅವಳನ್ನೇ ಕೇಳಬೇಕೆನಿಸಿತು.

ನಾನು ಮತ್ತು ನನ್ನ ಮಡದಿ ಆಟವಾಡುತ್ತಿದ್ದ ಪೂರ್ವಿಯನ್ನು ಹತ್ತಿರ ಕರೆದೆವು.
ನಾನು ಕೇಳಿದೆ "ಪೂರ್ವಿ ಬಂಗಾರಿ, ನೀನು ದೊಡ್ಡವಳಾದ ಮೇಲೆ ಏನಾಗುತ್ತೀಯ?", ಅದು ನೇರ ಮತ್ತು ಇದ್ದಕ್ಕಿದಂತೆ ಅವಳತ್ತ ಎಸೆದ ಪ್ರಶ್ನೆ.
ಒಂದು ಚೂರು ಯೋಚನೆ ಮಾಡದೆ ಒಂದೇ ಕ್ಷಣದಲ್ಲಿ ಉತ್ತರಿಸಿದಳು, "ಪಪ್ಪಾ, ನಾನು ದೊಡ್ಡವಳಾದ ಮೇಲೆ lipstick ಹಚ್ಚಿಕೊತೀನಿ!!"
ತಡೆಯಲಾಗಲಿಲ್ಲ, ಗೊಳ್ ಎಂದು ನಕ್ಕುಬಿಟ್ಟೆವು. ಅವಳೂ ನಮ್ಮ ಜೊತೆ ನಕ್ಕಳು, ಕಾರಣ ತಿಳಿಯದೇ!

ಕೊನೆಗೆ ಅರ್ಥವಾಯಿತು.
ಅವರಮ್ಮನ ಬ್ಯಾಗ್ನಲ್ಲಿ Lipstick ಕಂಡಾಗಲೆಲ್ಲ ನಾನೂ ಹಚ್ಚಿಕೊಳ್ಳುತ್ತೇನೆ ಅಂತ ಹಠ ಮಾಡುತ್ತಾಳೆ.
ಅದಕ್ಕೆ ಅವರಮ್ಮನ ಒಂದೇ ಉತ್ತರ, "ಚಿಕ್ಕಮಕ್ಕಳೆಲ್ಲ ಹಚ್ಚಿಕೊಳ್ಳಬಾರದು,ನೀನು ದೊಡ್ದವಳಾದ ಮೇಲೆ ಹಚ್ಚಿಕೊಳ್ಳುವಿಯಂತೆ!!".

======================================================


ಬೆಂಗಳೂರಿನಿಂದ ಮೂರೂವರೆ ಘಂಟೆಯ ಪ್ರಯಾಣ ಮಾಡಿದರೆ ನನ್ನ ಊರು ಸಿಗುತ್ತದೆ. ಕೆಲಸಕ್ಕೆ ಸೇರಿದ ಮೇಲೆ ಇತ್ತೀಚಿಗೆ ಎರಡು ತಿಂಗಳಿಗೊಮ್ಮೆ ಊರಿಗೆ ಹೋಗುತ್ತೇನೆ. ನಾ ಹೋಗುವ ಸಮಯದಲ್ಲೇ ನಮ್ಮ ಜೊತೆ ಕಾಲ ಕಳೆಯಲು ನನ್ನ ಅಕ್ಕ ಕೂಡ ಅವರ ಕುಟುಂಬದ ಜೊತೆಗೆ ಹಾಜರಿಯಿರುತ್ತಾಳೆ. ನನ್ನ ಅಕ್ಕನ ಮಗನ ಹೆಸರು ನೂತನ್. ಪೂರ್ವಿ ಮತ್ತು ನೂತನ್ ಇಬ್ಬರಿಗೂ ಹೆಚ್ಚು ಕಡಿಮೆ ಒಂದೇ ವಯಸ್ಸಿನವರು (3 ವರ್ಷ), ನೂತನ್ ಕೇವಲ ಕೆಲವೇ ತಿಂಗಳುಗಳಲ್ಲಿ ಪೂರ್ವಿಗಿಂತ ದೊಡ್ಡವನು. ಮಕ್ಕಳು ತನ್ನ ಓರಗೆಯ ಇನ್ನಿತರ ಮಕ್ಕಳನ್ನು ಇಷ್ಟಪಡುವಷ್ಟು ಇನ್ನಾರನ್ನೂ ಇಷ್ಟಪಡುವುದಿಲ್ಲ. ಪೂರ್ವಿ ಬರುತ್ತಾಳೆಂದರೆ ನೂತನ್ ಗೆ ಎಲ್ಲಿಲ್ಲದ ಸಂಭ್ರಮವಿರುತ್ತದೆ. ಇಬ್ಬರೂ ಆಟವಾಡುತ್ತಾ ಕುಳಿತರೆ ಇಡೀ ಜಗತ್ತನ್ನೇ ಮರೆತುಬಿಟ್ಟಿರುತ್ತಾರೆ. ಆಗಾಗ ಜಗಳವಾಡುತ್ತಾರೆ ಕೂಡ.

ಹೊಸಬಟ್ಟೆಯ ಬೆಲೆ ಗೊತ್ತಾಗಲೆಂದು ಹಾಕಿರುತ್ತಾರಲ್ಲ ಆ PrcieTag ಒಂದು ನೂತನ್ ಕೈಗೆ ಸಿಕ್ಕಿತ್ತು, ಅದರಲ್ಲಿ ಒಂದು ಹೂವಿನ ಚಿತ್ರವಿದ್ದ ಕಾರಣ ಅದನ್ನು ತನ್ನ ಕೈಲಿ ಹಿಡಿದುಕೊಂಡಿದ್ದ. ಪೂರ್ವಿ ನೋಡಿದ್ದೇ ತಡ ಅದು ತನಗೆ ಬೇಕೆಂದು ರಂಪಾಟ ಮಾಡಿಬಿಟ್ಟಳು. ಅತ್ತಿದ್ದು, ಕಿತ್ತಾಡಿದ್ದು ಎಲ್ಲ ಆಯಿತು. ನೂತನ್ ಅವಳಿಗೆ ಅದನ್ನು ಕೊಡಲೇ ಇಲ್ಲ. ಕೊನೆಗೆ ನಾವೇ ಅಲ್ಲೆಲ್ಲೋ ಬಿದ್ದಿದ್ದ ಇನ್ನೊಂದು PrcieTag ತಂದು ಪೂರ್ವಿಗೆ ಕೊಡುವಷ್ಟರಲ್ಲಿ ಸಾಕಾಗಿತ್ತು. ಆದರೂ ನೂತನ್ ಕೈಲಿದ್ದ PrcieTag ಬೇಕಿತ್ತು ಅನ್ನುವಂತೆ ಪೂರ್ವಿ ಮುಖ ಮಾಡಿಕೊಂಡಿದ್ದಳು.

ಸೋಮವಾರದ ಬೆಳಗ್ಗೆಯೇ ಕಾರಿನಲ್ಲಿ ಹೊರಟು ನಿಂತೆವು. ನಾವು ಹೊರಡುತ್ತೇವೆಂದರೆ ಸಾಕು ನಮ್ಮ ಅಪ್ಪಅಮ್ಮನವರ ಮುಖ ಇದ್ದಕ್ಕಿದ್ದಂತೆ ಚಿಕ್ಕದಾಗಿಬಿಡುತ್ತದೆ. ಒಂದೆರಡು ದಿನಗಳಿಂದ ಓಡಾಡಿಕೊಂಡಿದ್ದ ಪೂರ್ವಿ ಹೊರಡುವಾಗ ಮೌನವಾಗಿಬಿಡುತ್ತಾರೆ. ಎಲ್ಲರೂ ಪೂರ್ವಿಯನ್ನು ಎತ್ತಿ ಮುದ್ದಾಡಿ ಕಳಿಸಿಕೊಡುವ ಸಮಯ. ನೂತನ್ ಸಪ್ಪೆ ಮುಖದಿಂದ ಅಮ್ಮನ ಹೆಗಲ ಮೇಲೆ
ಮಲಗಿದ್ದ.

ಎಲ್ಲರೂ ನೂತನ್ ಗೆ ಹೇಳಿದರು. "ನೂತನ್, ShakeHand ಕೊಡು, ಪೂರ್ವಿಗೆ Bye ಹೇಳು!!"
ಸಪ್ಪೆ ಮುಖದಿಂದಲೇ "Bye ಪೂರ್ವಿ" ಅಂತ ಹೇಳಿ ಮತ್ತೆ ಅವರಮ್ಮನ ಭುಜದ ಮೇಲೆ ಮಲಗಿಕೊಂಡ.
ಕಾರಿನ ಇಂಜಿನ್ ಸ್ಟಾರ್ಟ್ ಮಾಡಿ ಇನ್ನೇನು ಮುಂದೆ ಹೊರಡಬೇಕು.ತಕ್ಷಣ ಅದೇನು ನೆನಪಾಯಿತೋ ಹತ್ತಿರ ಓಡಿ ಬಂದವನೇ, ಜೇಬಿಂದ ಅದೇನನ್ನೋ ತೆಗೆದು "ತಗೋ ಇಟ್ಟುಕೋ" ಎಂದು ಕೊಟ್ಟ.

 ಪೂರ್ವಿ ಅದನ್ನು ಖುಷಿಯಿಂದ ತೆಗೆದುಕೊಂಡವಳೇ "Thank you, Bye" ಎನ್ನುತ್ತಾ ಮುಗುಳ್ನಕ್ಕಳು. ಅವನ ಮುಖದಲ್ಲೂ ಮುಗುಳ್ನಗು ಮಿಂಚಿ ಮರೆಯಾಯಿತು. ಅವನು ಅವಳಿಗೆ ಕೊಟ್ಟದ್ದು, ನೆನ್ನೆ ತಾನೇ ಘಂಟೆಗಟ್ಟಲೆ ಜಗಳವಾಡಲು ಕಾರಣವಾದ ಅದೇ "PriceTag"!! ನಿಂತಿದ್ದ  ಎಲ್ಲರಿಗೂ ಏನೆಂದು ಹೇಳಬೇಕೆಂದೇ ತಿಳಿಯಲಿಲ್ಲ.
 ಈ ಚಿಕ್ಕ-ಮಕ್ಕಳ ದೊಡ್ಡ-ಮನಸ್ಸು ಬಹಳ ಮೆಚ್ಚುಗೆಯಾಗಿ, ಹೃದಯ ತುಂಬಿ ಬಂತು!!


======================================================


ಮೊನ್ನೆ ಕಾರ್ಯದ ನಿಮಿತ್ತ Czech Republic ದೇಶಕ್ಕೆ ತತ್ ಕ್ಷಣ ಒಬ್ಬನೇ ಹೊರಡಬೇಕಾಗಿ ಬಂದಾಗ ಬಟ್ಟೆ ಬರೆಯನ್ನೆಲ್ಲ ಪ್ಯಾಕ್ ಮಾಡಿಕೊಳ್ಳುತ್ತಿದ್ದೆ.
ಪೂರ್ವಿ ಹತ್ತಿರ ಬಂದವಳೇ "ಪಪ್ಪಾ, ನನ್ನನ್ನೂ ಜೊತೆ ಕರ್ಕೊಂಡು ಹೋಗು, ಪಪ್ಪಾ " ಅಂತ ಕೇಳಿದಳು.
ನಾನಂದೆ, "ಬೇಡ ಬಂಗಾರಿ, ನಾನು ಒಬ್ಬನೇ ಹೋಗ್ತಾ ಇದ್ದೀನಿ".
ಪೂರ್ವಿ,"ಇಲ್ಲ ಪಪ್ಪಾ, ನಾನೂ ಜೊತೆಗೆ ಬರ್ತೀನಿ. ಪ್ಲೀಸ್. ನೀನು ನನಗೆ ಚಾಕಲೇಟ್, ಐಸ್ ಕ್ರೀಂ, ಚಿಪ್ಸ್, ಎಳನೀರು ಏನನ್ನೂ ಕೊಡಿಸು ಅಂತ ಕೇಳಲ್ಲ....ಪ್ಲೀ....ಸ್"

ಸುಮ್ಮನೆ ಅವಳು ಏನೇನೋ ಬೇಕೆಂದು ಹಠ ಮಾಡಿದಾಗಲೆಲ್ಲ , "ನೀನು ಹಠ ಮಾಡಿದರೆ ಯುರೋಪ್ ಗೆ ಕರ್ಕೊಂಡು ಹೋಗಲ್ಲ ನೋಡು" ಅಂತ ನಾನೇ ಅವಳಿಗೆ ಹೇಳುತ್ತಿದ್ದ ಮಾತುಗಳು ನೆನಪಾಗಿ ಬೇಸರವಾಗಿತ್ತು. ಅವಳನ್ನು ಬಿಟ್ಟು ಏರ್ ಪೋರ್ಟ್ ಗೆ ಹೊರಡುವ ಸಂದರ್ಭದಲ್ಲಿ ಕಣ್ಣೀರು ತುಂಬಿ ಬಂದಿತ್ತು.

======================================================


ಈಗಾಗಲೇ ನೀವೆಲ್ಲರೂ ನಾನು ಅವಳ ಜೊತೆ ಹಾಡುವ ವೀಡಿಯೊ ತುಣುಕೊಂದನ್ನು ನೋಡಿರುತ್ತೀರಿ. (ಇಲ್ಲದಿದ್ದರೆ ಈ ಕೆಳಕಂಡ ಲಿಂಕಿನಲ್ಲಿ ಒಮ್ಮೆ ನೋಡಿಬಿಡಿ.)

http://www.youtube.com/watch?v=vqawNp5Jse8

ನಾ ಅವಳ ಜೊತೆ ಕುಳಿತುಕೊಂಡು ಈ ಹಾಡು ಹಾಡಿ ಸುಮಾರು ಎರಡು ತಿಂಗಳಾಗಿದೆ. ನಾ ಪಕ್ಕದಲ್ಲಿ ಮಲಗಿರುವಾಗ ಭಾವಗೀತೆಗಳನ್ನು ಹಾಡುತ್ತಿದ್ದರೆ ಸುಮ್ಮನೆ ಕೇಳಿಸಿಕೊಳ್ಳುತ್ತಾ ಮಲಗಿಬಿಡುತ್ತಾಳೆ. ಇಂದು ಈ ಲೇಖನ ಬರೆಯುವುದಕ್ಕೆ ಕೊಂಚ ಮುಂಚೆ Czech Republic ನಿಂದ ಮನೆಗೆ ಫೋನ್ ಮಾಡಿದಾಗ ಆಕೆ ಇನ್ನೂ ಎಚ್ಚರವಾಗಿಯೇ ಇದ್ದಳು.ರಾತ್ರಿ ಹನ್ನೊಂದಾಗಿದ್ದರೂ ಮಲಗಿರಲಿಲ್ಲ. ಅವಳೊಂದಿಗೆ ಏನೇನೋ ಮಾತನಾಡಿದ ಮೇಲೆ ಕೊನೆಗೆ "ಪಪ್ಪಾ,ನನಗೆ ಏನನ್ನಾದರೂ ಹಾಡು"ಎಂದಳು."ನಾಕುತಂತಿ" ಹಾಡಿದೆ. ಹಾಡು ಮುಗಿಯುವುದರಲ್ಲಿ ಅಕೆಯ ಕಣ್ಣಿಗೆ ನಿದ್ರೆ ಹತ್ತಿತ್ತು.

ಎದುರಿದ್ದಾಗ ಮಕ್ಕಳು ಹಠ ಹಿಡಿದಾಗ ಸಹನೆ ಕಳೆದುಕೊಂಡು, ಅವುಗಳ ತರಲೆಗಳನ್ನು ನೋಡಿ ಬೇಸತ್ತು ಹೋಗಿರುತ್ತೇವೆ . ಅವುಗಳು ಎದುರಿಲ್ಲದಿದ್ದಾಗ ಅವುಗಳ ಗೈರುಹಾಜರಿಯಿಂದ ಉಂಟಾಗುವ ಒಂಟಿತನದ ಭಾವ ಇದೆಯಲ್ಲ, ಅದನ್ನು ಆ ಕಷ್ಟ ಅನುಭವಿಸಿದವನೇ ಬಲ್ಲ!!

ನಿಮ್ಮವನು
ಸಂತು.

Friday, February 1, 2013

ಹಿಂಗಿದ್ರು ನಮ್ ಮೇಷ್ಟ್ರು!

(ದಿನಾಂಕ 31-ಜನವರಿ-೨೦೧೩ ರಂದು ಅವಧಿಯಲ್ಲಿ ಪ್ರಕಟವಾದ ನನ್ನ ಲೇಖನ.
 http://avadhimag.com/?p=73186)

ಆರನೇ ಕ್ಲಾಸು ನಡೆಯುತ್ತಿತ್ತು.ಸಮಾಜ ವಿಜ್ಞಾನಕ್ಕೆ ಯಾರೂ ಇಲ್ಲದ ಕಾರಣ ನಮ್ಮ ಶಾಲೆಯ ಮುಖ್ಯೋಪಧ್ಯಾಯರೇ ಆ ವಿಷಯವನ್ನೂ ತೆಗೆದುಕೊಳ್ಳುತ್ತಿದ್ದರು.ವಿದ್ಯಾರ್ಥಿಗಳು ಅಷ್ಟೊಂದು ಸೀರಿಯಸ್ ಆಗಿ ಕುಳಿತುಕೊಳ್ಳುತ್ತಿರಲಿಲ್ಲ.ಸ್ವಲ್ಪ ದಿನಗಳಲ್ಲೇ ಇದ್ದಕ್ಕಿದ್ದಂತೆ ಹೊಸ ಉಪಾಧ್ಯಾಯರ ನೇಮಕವಾಯಿತು. ಎಲ್ಲ ವಿದ್ಯಾರ್ಥಿಗಳಿಗೂ ಹೊಸ ಮೇಷ್ಟ್ರು ಹೇಗಿರುತ್ತಾರೋ ಅನ್ನುವ ಕುತೂಹಲ. ಆ ಕುತೂಹಲ ಬಹಳಷ್ಟು ದಿನ ಉಳಿಯಲಿಲ್ಲ. ನಮ್ಮ ತರಗತಿಗೂ ಅವರನ್ನೇ ಪಾಠ ಮಾಡಲು ನೇಮಕ ಮಾಡಲಾಯಿತು.

ಕ್ಲಾಸಿನಲ್ಲಿ ಇದ್ದುದರಲ್ಲೇ ನಾನು ಕೊಂಚ ಚೆನ್ನಾಗಿ ಓದುತ್ತಿದ್ದೆ. ಅಪ್ಪ ಅಮ್ಮನಿಂದ ಯಾವತ್ತೂ ಓದಿನ ವಿಷಯಕ್ಕೆ ಹೀಗೆಯೇ ಮಾಡಬೇಕು ಅಂತ ಹೇಳಿಸಿಕೊಂಡವನಲ್ಲ. ಎಂದಿಗೂ ಯಾರಿಂದಲೂ ಬೈಸಿಕೊಳ್ಳದ ನಾನು ಅವತ್ತು ಮಾತ್ರ ದೊಣ್ಣೆಯಿಂದ ಪಟಾರನೆ ಏಟು ತಿಂದಿದ್ದೆ. ಮೊದಲ ಬೆತ್ತದೇಟು ಕಣ್ಣಲ್ಲಿ ನೀರು ತರಿಸಿತ್ತು. ಮನೆಗೆ ಹೋಗಿ ಏನೂ ಆಗಿಲ್ಲದವನಂತೆ ಸುಮ್ಮನಿದ್ದೆ. ಎಲ್ಲರಿಂದಲೂ ಬಹಳ ಹೊತ್ತು ಮುಚ್ಚಿಡಲಾಗಲಿಲ್ಲ. ಅಜ್ಜಿ ಕೆಂಪಾಗಿದ್ದ ನನ್ನ ಕೈ ನೋಡಿ “ಯಾವನ ಅವ ನನ್ ಕೂಸುನ್ ಕೈಗ್ ಹೊಡದೌನು? ಅವನ್ಗೇನು ಎದೆ ಸಿರ ಮುರದೋಗಿದ್ದ?” ಅಂತ ಹೊಡೆದ ಮೇಷ್ಟ್ರಿಗೆ ಬೈದಿದ್ದರು.
(ಯಾರು ನನ್ನ ಕೂಸಿನ ಕೈಗೆ ಹೊಡೆದಿದ್ದು, ಅವನಿಗೇನು ಎದೆ ಶಿರ ಮುರಿದು ಹೋಗಿದೆಯ?– ಕೊಳ್ಳೇಗಾಲದ ನಮ್ಮ ಭಾಷೆ!!)

ಅಷ್ಟಕ್ಕೂ ಆ ಮೇಷ್ಟ್ರು ನನಗೆ ಏಟು ಕೊಟ್ಟಿದ್ದು ನನ್ನ ಬಳಿ ಪಠ್ಯಪುಸ್ತಕ ಇಲ್ಲವೆಂದಿದ್ದಕ್ಕೆ. ಶಾಲೆ ಶುರುವಾಗಿ ಒಂದೂವರೆ ತಿಂಗಳಾದರೂ ಇನ್ನೂ ಪಠ್ಯಪುಸ್ತಕ ಕೊಂಡಿರಲಿಲ್ಲ. ಕೊಳ್ಳಲು ಹಣವೂ ಇರಲಿಲ್ಲ. ಬರೀ ಮೇಷ್ಟ್ರು ಮಾಡುವ ಪಾಠ ಕೇಳಿ,ಅವರು ಕೊಡುತ್ತಿದ್ದ ನೋಟ್ಸ್ ನಿಂದಲೇ ಓದಿಕೊಳ್ಳುತ್ತಿದ್ದೆವು.ಆದರೆ ಈಗ ಹಾಗಲ್ಲ. ಹೊಸ ಮೇಷ್ಟ್ರು ಎಲ್ಲರಿಗೂ ಬಿಸಿ ಮುಟ್ಟಿಸಿದ್ದರು.ಅದೇ ನಾಳೆ ಎಲ್ಲರೂ ಅಪ್ಪ ಅಮ್ಮನಿಂದ ಸಾಲ ಮಾಡಿಸಿಯಾದರೂ ಪುಸ್ತಕ ಕೊಂಡು ತರಗತಿಯೊಳಗೆ ಕಾಲಿಟ್ಟಿದ್ದರು. ಆ ಬದಲಾವಣೆ ತಂದ ಮೇಷ್ಟ್ರ ಹೆಸರು “ಜಯಣ್ಣ”.

ಜಯಣ್ಣ ಮೇಷ್ಟ್ರು ಬಂದಾಗಿನಿಂದ ಮಕ್ಕಳ ಶಿಸ್ತು ಕೊಂಚ ಸುಧಾರಿಸಿತು. ಮುಂದಿನ ಪಿರಿಯಡ್ ಸಮಾಜವೆಂದರೆ ಇಡೀ ಕ್ಲಾಸು ನಿಶ್ಶಬ್ದ. ನಂತರದ ದಿನಗಳಲ್ಲಿ ನಿಜಕ್ಕೂ ಆ ಮೇಷ್ಟ್ರ “ಹವಾ” ಯಾವ ಮಟ್ಟಕ್ಕೆ ತಲುಪಿತ್ತೆಂದರೆ,ಒಂದು ದಿನ ಶಾಲೆ ಮುಗಿಸಿ ಮನೆಗೆ ಬಂದ ನನ್ನ ತಮ್ಮ, ನಮ್ಮಮ್ಮನಿಗೆ “ನಮ್ಮ ಜಯಣ್ಣ ಮೇಷ್ಟ್ರ ಬಗ್ಗೆ ನಿಂಗೆ ಗೊತ್ತಿಲ್ಲ. ಹೆಂಗ್ ಹೊಡಿತಾರೆ ಗೊತ್ತಾ? ದೊಣ್ಣೆ ಹಿಡ್ಕೊಂಡ್ ಬಂದ್ರೆ ನೀನೂ ಓಡಬೇಕು!!” ಅಂತ ಹೇಳಿದ್ದ.

======================================================

ಶಾಲೆ ಮುಗಿಸಿ ಕಾಲೇಜಿಗೆಂದು ಮೈಸೂರಿಗೆ ಕಾಲಿಟ್ಟಿದ್ದೆ. ಆಗ ತಾನೇ 10ನೇ ತರಗತಿ ಮುಗಿಸಿ ಶಾಲೆಯಿಂದ ಹೊರಬಂದ ಮಕ್ಕಳಿಗೆ ಅದೇನೋ ಹೊಸ ತರಹದ ಹುಮ್ಮಸ್ಸು.ಅದೇನೋ ಆ ಚಿಕ್ಕಮಕ್ಕಳು ಎಂಬ ಹಣೆಪಟ್ಟಿ ಕಳಚಿ ಕಾಲೇಜು-ಹುಡುಗರು ಎಂಬ ಹೊಸ ಹೆಸರು ಬಂದೊಡನೆ ಹಕ್ಕಿಗಳಿಗೆ ರೆಕ್ಕೆ ಬಂದ ಹಾಗಾಗಿಬಿಡುತ್ತದೆ ಮನಸು.ಯಾರಾದರೂ ಲೆಕ್ಚರರ್ ಕ್ಲಾಸಿನಲ್ಲಿ ಗಲಾಟೆ ಮಾಡುತ್ತಿದ್ದ ಅಂತ ಗದರಿಸಿದರೆ, “ಏನಪ್ಪಾ ಜಾಸ್ತಿ ಮಾತಾಡ್ತಿದ್ದೀಯ, ಹೊರಗಡೆ ಬಾ ನೋಡ್ಕೊತ್ತೀನಿ” ಅಂತ ಅವರನ್ನೇ ಗದರಿಸಿದ ಸಹಪಾಠಿಗಳೂ ಇದ್ದರು.

ಅಂತಹ ವಾತಾವರಣದಲ್ಲಿ ನವಯುವಕರ ಚಳಿಬಿಡಿಸಲೆಂದು ಬಂದ ಸಿಪಾಯಿಯೆಂದರೆ ಪ್ರೊಫೆಸರ್ ಸಾಂಬಶಿವಯ್ಯ. ಸೇನೆಯಿಂದ ನಿವೃತ್ತಿ ಪಡೆದು ಬಂಡ ನಂತರ ನಮ್ಮ ಕಾಲೇಜಿಗೆ ಪ್ರೊಫೆಸರ್ ಆಗಿ ಕಾರ್ಯ ಸಲ್ಲಿಸುತಿದ್ದರು.ಮೊದಲೇ ಮಿಲಿಟರಿ ಮ್ಯಾನ್. ಆರಡಿ ದೇಹದ, ಕಂಚಿನ ಕಂಠದ ಸಾಂಬ ಶಿವಯ್ಯ ನಡೆದು ಬರುತ್ತಿದ್ದರೆ ಪ್ರತಿಯೊಬ್ಬರಿಗೂ ಭಯವಾಗುತ್ತಿತ್ತು. ಕಾಲೇಜಿನೊಳಕ್ಕೆ ನಡೆದು ಬರುತ್ತಿದ್ದರೆ, ಹೆಚ್ಚು ಕಡಿಮೆ ಒಂದು ಫರ್ಲಾಂಗ್ ನಷ್ಟು ಕಾಣುವ ಕಾರಿಡಾರಿನಲ್ಲಿ ಒಬ್ಬನೇ ಒಬ್ಬ ವಿದ್ಯಾರ್ಥಿಯೂ ಕಾಣಿಸಿಕೊಳ್ಳುತ್ತಿರಲಿಲ್ಲ. ಯಾಕೆಂದರೆ ಬೋರೆನಿಸುವ ಪಿರಿಯಡ್ಡುಗಳನ್ನೂ ಅಟೆಂಡ್ ಮಾಡಿಸದೆ ಬಿಡುತ್ತಿರಲಿಲ್ಲ ಅಸಾಮಿ.ಭೌತಶಾಸ್ತ್ರವನ್ನು ಎಲ್ಲ ಪಿಯುಸಿ ತರಗತಿಗಳಿಗೆ ಪಾಠ ಮಾಡುತ್ತಿದ್ದ ಅವರ ಕೈಯಲ್ಲಿ, ಯಾವಾಗಲೂ ಒಂದು ಪುಸ್ತಕ ಮತ್ತು ನಾಲ್ಕಡಿ ಉದ್ದದ ಕೋಲು! ಎಲ್ಲಾದರೂ ಯಾವುದೇ ವಿದ್ಯಾರ್ಥಿ ಪಿರಿಯಡ್ ಬಂಕ್ ಮಾಡಿ ಹೊರಟು ಸಿಕ್ಕಿಹಾಕಿಕೊಂಡರೆ ಮುಗಿಯಿತು. ಹಣ್ಣುಗಾಯಿ ನೀರುಗಾಯಿ!! ತಪ್ಪಿಸಿಕೊಂಡರೂ ಅವರ ಐಡಿ ಕಾರ್ಡ್ ನಂಬರ್ ಬರೆದುಕೊಂಡು ಅವರಪ್ಪ ಅಮ್ಮನಿಗೆ ಒಂದು ಲೆಟರ್ ಬರೆದುಬಿಡುತ್ತಿದ್ದರು. ಅವರೇ ಎನ್ ಸಿ ಸಿ ಗೆ ಮುಖ್ಯಸ್ಥರಾಗಿದ್ದರಿಂದ ಎಲ್ಲಿ ತಪ್ಪಿಸಿಕೊಂಡರೂ ಅಲ್ಲಿ ಬಿಡುತ್ತಿರಲಿಲ್ಲ. ಕ್ಲಾಸಿನಲ್ಲಿ ಅವರು ಪಾಠ ಮಾಡುವಾಗ ಸೂಜಿ ಬಿದ್ದರೂ ಶಬ್ದ ಸ್ಪಷ್ಟ. ಅಷ್ಟೊಂದು ನಿಶ್ಶಬ್ದ.ಅವರ ಉಪಟಳ ತಡೆಯಲಾಗದೆ ಒಬ್ಬ ಹುಚ್ಚು ವಿದ್ಯಾರ್ಥಿ ಅವರಿಗೆ ಬುದ್ಧಿ ಕಲಿಸಬೇಕೆಂದು ಅವರ ಮನೆ ವಿಳಾಸ ಹುಡುಕಿ ಹಾವೊಂದನ್ನು ದಪ್ಪ ಬಾಕ್ಸಿನಲ್ಲಿಟ್ಟು ಕೊರಿಯರ್ ಮಾಡಿದ್ದನಂತೆ!!

ಆಮೇಲೇನಾಯಿತು ಎಂಬುದು ಇಲ್ಲಿ ಮುಖ್ಯವಲ್ಲ!!

ಮನೆಯಲ್ಲಿ ಎಲ್ಲ ಮಕ್ಕಳು ಅಪ್ಪ ಅಮ್ಮಂದಿರಿಗೆ ಆ ಪ್ರೊಫೆಸರ್ ರ ವಿಷಯವನ್ನು ಹೇಳಿದ್ದರೂ, ಎಲ್ಲ ತಂದೆತಾಯಿಗಳೂ ತಮ್ಮ ಮಕ್ಕಳ 2ನೇ ವರ್ಷದ ಪಿಯುಸಿಗೆ ಅವರ ಬಳಿಯೇ ಭೌತಶಾಸ್ತ್ರಕ್ಕೆ ಟ್ಯೂಶನ್ ಕಲಿಸಲು ನಾ ಮುಂದು ತಾ ಮುಂದು ಎಂಬಂತೆ ವ್ಯವಸ್ಥೆ ಮಾಡುತ್ತಿದ್ದರು. ಅವರ ಬಳಿ ಟ್ಯೂಶನ್ ಗೆ ವರ್ಷದ ಮುಂಚೆಯೇ ನೋಂದಣಿಯಾಗಿಬಿಡುತ್ತಿತ್ತು. ಯಾಕೆಂದರೆ ಅವರ ಬಳಿ ಟ್ಯೂಶನ್ ಗೆ ಹೋದವರಿಗೆ ಭೌತಶಾಸ್ತ್ರದಲ್ಲಿ ಫೇಲಾಗುವ ಅಥವಾ ಕಡಿಮೆ ಅಂಕ ಪಡೆಯುವ ಭಯವಿರುತ್ತಿರಲಿಲ್ಲ.

======================================================

ನಮ್ಮ ಬಾಲ್ಯದ ಶಾಲೆಯನ್ನು ನೆನಪಿಸಿಕೊಳ್ಳುವಾಗ ತುಂಬಾ ನೆನಪಿಗೆ ಬಂದವರೆಂದರೆ ಇದೇ ಜಯಣ್ಣ ಮೇಷ್ಟ್ರು.ಕೆಲವು ಹಳ್ಳಿಯ ಹುಡುಗರು ಎಷ್ಟು ಮೊಂಡರಿರುತ್ತಾರೆ ಎಂದರೆ ಅವರಿಗೆ ಅಷ್ಟು ಶಿಸ್ತು ಕಲಿಸದಿದ್ದರೆ ಜಪ್ಪಯ್ಯ ಎಂದರೂ ಕಲಿಯುವುದಿಲ್ಲ.ಬರೀ ಹೊಡೆಯುವ ವಿಷಯದಲ್ಲಿ ಜಯಣ್ಣ ಮೇಷ್ಟ್ರು ಕೊಂಚ ಒರಟುತನ ತೋರಿಸುತ್ತಿದ್ದರೆ ವಿನಹ ಪಾಠದಲ್ಲಿ ಮಾತ್ರ ಬಹಳ ಶಿಸ್ತು.ಆ ಶಾಲೆಯಲ್ಲಿ ಓದುವ ಸಮಯದಲ್ಲಿ ಅವರ ದೊಣ್ಣೆಗೆ ಹೆದರಿ ಅವರಿಗೆ ಬಹಳ ಶಾಪ ಹಾಕುತ್ತಿದ್ದುದು ನಿಜ.ಆದರೆ ಒಂದು ಬಾರಿ ಶಾಲೆಯನ್ನು ಬಿಟ್ಟು ಹೊರಗೆ ಬಂದ ಮೇಲೆ ಅದೇ ಜಯಣ್ಣ ಮೇಷ್ಟ್ರು ಯಾಕೋ ಮನಸ್ಸಿನಲ್ಲಿ ತುಂಬಾ ಕಾಡತೊಡಗುತ್ತಾರೆ. ಶಾಲೆ ಬಿಟ್ಟ ಮರುಘಳಿಗೆ ನಮಗನ್ನಿಸುವುದು ಅವರು ಕಲಿಸಿದ ಶಿಸ್ತಿನಿಂದಲೇ ಅಲ್ಲವೇ ಇವೆಲ್ಲ ಸಾಧಿಸಲಿಕ್ಕೆ ಆಗಿದ್ದು ಅಂತ.

ಮೊನ್ನೆ ಮೊನ್ನೆ ಊರಿಗೆ ಹೋಗಿದ್ದಾಗ ನಾನು ಜಯಣ್ಣ ಮೇಷ್ಟ್ರ ಬಗ್ಗೆ ಪ್ರಸ್ತಾಪಿಸಿದಾಗ ಅವರು ಬಹಳ ವರ್ಷಗಳ ಹಿಂದೆಯೇ ಬೇರೆ ಊರಿಗೆ ವರ್ಗವಾಗಿ ಹೋಗಿದ್ದಾರೆ. ಅವರಿಗೆ ಕೊಂಚ ವಯಸ್ಸಾಗಿ ಕಣ್ಣು ಅಷ್ಟೊಂದು ಸರಿಯಾಗಿ ಕಾಣುತ್ತಿಲ್ಲ. ಮುಂಚಿನಷ್ಟು ಹುರುಪಿಲ್ಲ,ಬಹಳ ಸೊರಗಿ ಹೋಗಿದ್ದಾರೆ ಅಂತ ಹೇಳಿದರು. ಯಾಕೋ ಮನಸ್ಸಿಗೆ ಬಹಳ ನೋವಾಯಿತು.
ಕಾಲೇಜಿನ ಬಿಸಿರಕ್ತಗಳ ಸೊಕ್ಕಡಗಿಸಿದ್ದ ಸಾಂಬಶಿವಯ್ಯನವರು ಈಗ ಅದೇ ಕಾಲೇಜಿನ ಪ್ರಿನ್ಸಿಪಾಲರಾಗಿದ್ದಾರೆ ಅಂತ ಕೇಳಿ ಸಂತೋಷವಾಯಿತು.ದೇವರು ಅವರೆಲ್ಲರನ್ನೂ ಚೆನ್ನಾಗಿಟ್ಟಿರಲಿ.

ಖಂಡಿತ ಪ್ರತೀ ಶಾಲೆಯಲ್ಲಿ, ಕಾಲೇಜಿನಲ್ಲಿ ಇಂತಹ ಕೊಂಚ ಶಿಸ್ತಿನ, ಕೋಪಿಷ್ಠ ಆದರೆ ಬದಲಾವಣೆಗೆ ಕಾರಣರಾದ ಗುರುಗಳು ಒಬ್ಬರಾದರು ನಿಮಗೆ ಖಂಡಿತ ಸಿಗುತ್ತಾರೆ. ಈ ಲೇಖನ ಓದುವಾಗ ಖಂಡಿತ ನಿಮಗೆ ಅವರುಗಳ ಚಿತ್ರಪಟ ಮನಸ್ಸಿನಲ್ಲಿ ಮಿಂಚಿ ಮರೆಯಾಗಿರುತ್ತದೆ. ಜೊತೆಗೆ ಮತ್ತೊಮ್ಮೆ ಅವರ ಬಗ್ಗೆ ಗೌರವ ಮೂಡಿರುತ್ತದೆ.
ಹೌದಾ?…ಹಾಗಿದ್ದರೆ ನನ್ನ ಶ್ರಮ ಸಾರ್ಥಕ.

 ನಿಮ್ಮವನು
 ಸಂತು

Sunday, January 20, 2013

ಜನಪ್ರಿಯ (ಚುಟುಕಗಳು)



                                                                                                                                             (ಚಿತ್ರಕೃಪೆ:Google)
ಜನಪ್ರಿಯ


ನಮ್ಮ ನಿಮ್ಮೆಲ್ಲರ
ಜನಪ್ರಿಯ ನಾಯಕ
ಎಂದ ಮೇಲೂ
ನೆರೆದಿದ್ದ ಜನ
ಪಿಸುಗುಟ್ಟಿಕೊಂಡರಂತೆ,
ಯಾರವನು?

===============================

ಸಂಪಾದನೆ

ಕೆಲವರಿಗಂತೂ ಕಷ್ಟದ ಕೂಗು
ಕೇಳುವ ಕಿವಿಗಳಿರದಿದ್ದರೂ,
ಕೆರ ಕಾಯುವವನಿಗೆ
ಕಾಸು ಕೊಡುವ ಕರಗಳಿರುತ್ತವೆ.

ಅದಕಾಗಿಯೇ,
ದೇಗುಲದ ಮುಂದಿನ
ಕೆರ ಕಾಯುವವ
ಭಿಕ್ಷುಕನಿಗಿಂತ ಸಿರಿವಂತ!!

===============================

ನೆನಪು

ಹುಡುಗೀ,
ಹರಿದ ಪುಸ್ತಕದ
ಕಳೆದ ಪುಟಗಳೇ ನೀನು.
ಅಂತ್ಯವಿಲ್ಲದ ಕತೆಗೆ
ಬರೀ ಮುನ್ನುಡಿಯೇ ನೆನಪು!!

===============================

Sunday, January 13, 2013

ಕರಗಿ!! (ಚುಟುಕಗಳು)



 ಕರಗಿ!!

ಬಲಾತ್ಕಾರಕ್ಕೆ ಬಲಿಯಾದ
ಬಾಲೆಯ ಪರ
ಪ್ರತಿಭಟನೆಯಲ್ಲಿ,
ಹಚ್ಚಿದ್ದ
ಮೇಣದಬತ್ತಿಗಳೂ
ಕಣ್ಣೀರಿಡುತ್ತಿದ್ದವು....
ಕರಗಿ!!

====================================
  ಹೆಣ್ಣು ಹೆತ್ತಾಗ!!

"ಹೆಮ್ಮಾರಿ ಹೆತ್ತವ್ಳೆ ಹೆಣ್ಣ"
ಎಂದು ಅಮ್ಮಂಗೆ ಬೈದು,
ನನ್ನನ್ನು ನೋಡಲು ಬರದ ನಮ್ಮಪ್ಪ,
ಇಂದು ಮನೆ ಬಿಟ್ಟ ಮಗನನ್ನು
ನೋಡಿ ಹೇಳುತ್ತಿದ್ದಾನೆ,
"ಆವ ನನ್ನ ಪಾಲಿಗೆ ಸತ್ತ,
ಇರುವವಳೊಬ್ಬಳೇ ನನ್ನ ಮಗಳು!!"
====================================

ಹೋರಾಟ!! 

ಮಹಿಳೆಯರ
ಶೋಷಣೆಯ ವಿರುದ್ಧ
ಘೋಷಣೆ ಕೂಗಿ,
ಮನೆಗೆ ಬಂದ ಗಂಡ,
ಊಟ ರೆಡಿಯಿಲ್ಲವೆಂದು,
ಹೆಂಡತಿಗೆ ಬಡಿಗೆಯೆತ್ತಿಕೊಂಡ!!
====================================

Sunday, January 6, 2013

ದಾಂಪತ್ಯ

                                                                                                            (ಚಿತ್ರಕೃಪೆ:Google)


ಮುನಿಸಿಕೊಂಡ ಮೌನ ಮಾತಾಡಲಿಲ್ಲ,
ಮಾತು ಮಾತಾಡಿಸುವುದ ಮರೆಯಲಿಲ್ಲ.

ಕ್ಷಣಕ್ಷಣವೂ ಕಾಲದೂಡುವರು ಕಷ್ಟಸುಖಗಳಲ್ಲಿಯೇ,
ನೂರ್ಕಾಲವೂ ನಡೆಯುವರು ನೆಮ್ಮದಿಯಲ್ಲಿಯೇ.

ಬದುಕುತ್ತಾರಿಬ್ಬರೂ ಬವಣೆಗಳ ಬಂಧನದಿಂದಾಚೆ,
ಬಲ್ಲಿದರಾಗಲಿ ಬಡವರಾಗಲಿ ಬಾಹುಬಂಧನಗಳಿಂದೀಚೆ.

ಸಂಸಾರ ಸಾಗರದಲಿ ಸಮರಸವಿಬ್ಬರದೂ ಸೇರಿ,
ದೂರವಾಗದಿವರ ದಾಂಪತ್ಯಕ್ಕದೊಂದೇ ದಾರಿ.

ಮಾತು ಮಾತಾಡುವಾಗ ಮೌನ ಮೌನವಾಗಿರುತ್ತದೆ,
ಮೌನ ಮಾತಾಡುವಾಗ ಮಾತು ಮೌನವಾಗಿರುತ್ತದೆ!!

                                                                             --ಸಂತು

Sunday, December 30, 2012

ಸಜೆ

                                                                                                                           (ಚಿತ್ರಕೃಪೆ:Google)

ಚಿನ್ನದ ಸರ ಕಳುವಾಯಿತು,
ಪೊಲೀಸರು ಹಿಡಿದರು,
ಸರ ಮರಳಿ ಬಂತು.
ಅಪರಾಧಿಗೆ
ಒಂದು ವರ್ಷದ ಸಜೆ!!

ಅಲ್ಯಾರೋ ಶೀಲ ಕಳೆದುಕೊಂಡರು,
ಪೊಲೀಸರು ಹಿಡಿದರು,
ಕೋಟಿ ಜನ ಮಾತಾಡಿದರು.
ಸಂತ್ರಸ್ತೆಗೆ
ಜೀವನ ಪೂರ್ತಿ ಸಜೆ!!

("ಅವಧಿ"ಯಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸಿ ಸಂಚಿಕೆಗೆ ನಾ ಕಳಿಸಿದ ಪುಟ್ಟ ಕವನ:
http://avadhimag.com/?p=72633)

Monday, December 24, 2012

ಚೀಟ …..



ಚೀಟ .....
ಆಕೆಗೆ ಅರ್ಥವಾಗಲಿಲ್ಲ!!
ನನ್ನ ಸಹಪಾಠಿಯೊಬ್ಬ ಮತ್ತೊಮ್ಮೆ "ಚೀಟ" ಅಂತ ಸಂಬೋಧಿಸಿ ಕರೆದಾಗ ಹೊಸದಾಗಿ ಬಂದಿದ್ದ ಆ ಉಪಾಧ್ಯಾಯಿನಿಯೊಬ್ಬರು ಅಕ್ಷರಶಃ ಏನೆಂದು ತಿಳಿಯದೆ ದಂಗಾಗಿ ಹೋಗಿದ್ದರು!!
ಕೊನೆಗೆ ಬೇರೆ ಮಾಸ್ತರರೊಬ್ಬರು ಆತ ಕರೆದಿದ್ದು "ಟೀಚರ್" ಅಂತ ತಿಳಿಹೇಳಿದಾಗಲೇ ಆಕೆಗೆ ಅರ್ಥವಾಗಿದ್ದು!!

"ಟೀಚರ್" ಬರುಬರುತ್ತಾ "ಟೀಚ" ಆಗಿ, ಕೊನೆಗೆ "ಚೀಟ" ಅಂತ ಮಾರ್ಪಾಡಾಗಿತ್ತು!!
ಕೊನೆಗೂ ಆತ "ಟೀಚರ್"ನ್ನು ಕಲಿಯಲೇ ಇಲ್ಲ, ಅವರು ಕಲಿಸಿದ್ದನ್ನು ಕೂಡ!! ಅದು ಬೇರೆ ವಿಷಯ.
ನಾ ಕಲಿತ ನಮ್ಮೂರ ಶಾಲೆಯ ಹುಡುಗರ ಮುಗ್ಧತೆಗೆ ಇದೊಂದು ಉದಾಹರಣೆಯಷ್ಟೇ.

ವರ್ಷಕ್ಕೊಮ್ಮೆ ಉಚಿತ ಪುಸ್ತಕಗಳನ್ನು ಸರ್ಕಾರ ಕೊಡುತ್ತಿತ್ತು. ಅದು ಬರೇ ಒಂದನೇ ಮತ್ತು ಎರಡನೇ ತರಗತಿಗೆ ಮಾತ್ರ.
ಮುಂದಿನ ವಾರ ಹೊಸ ಪುಸ್ತಕ ಬರುತ್ತಿದೆಯೆಂದರೆ ಈಗಿಂದೀಗಲೇ ಮನಸ್ಸು ಬಕ ಪಕ್ಷಿಯಂತೆ ಕಾಯುತ್ತಿರುತ್ತಿತ್ತು!! ಉಚಿತ ಪುಸ್ತಕ ವಿತರಿಸಿದ ದಿನ ಊಟ, ನಿದ್ರೆ ಏನೂ ಬೇಡ. ಅಪ್ಪನಿಂದ ದುಡ್ಡು ತೆಗೆದುಕೊಂಡು ಶೆಟ್ಟರಂಗಡಿಯ ರಟ್ಟು ತಂದು ಜೋಪಾನವಾಗಿ ಆ ಪುಸ್ತಕಕ್ಕೆ ಹೊರಕವಚ ಹಾಕಿ, ಓದಲು ಕುಳಿತುಬಿಡುತ್ತಿದ್ದೆವು. ಇಡೀ ಪುಸ್ತಕದಲ್ಲಿಯ ಚಿತ್ರಗಳನ್ನು ನೋಡಿ, ನಂತರ ಎಲ್ಲ ಪಾಠ ಓದಿ ಮುಗಿಸಿದ ನಂತರವಷ್ಟೇ ಉಳಿದ ಪ್ರಪಂಚ ಅರಿವಿಗೆ ಬರುತ್ತಿದ್ದುದು!!

ನಿಮಗೆ ಗೊತ್ತಾ?
ಐದನೇ ಕ್ಲಾಸಿಂದ ಆರನೇ ಕ್ಲಾಸಿಗೆ ಹೋಗಬೇಕಾದರೆ ನಮ್ಮೂರ ಶಾಲೆಯಲ್ಲಂತೂ ಬಹಳ ಸುಲಭವಿತ್ತು. ಬರೀ ಹಿಂದೆ ತಿರುಗಿ ಕುಳಿತರೆ ಸಾಕು!! ಗಾಬರಿಯಾಗಬೇಡಿ. ಕೇವಲ ಒಂದೇ ಕೊಠಡಿಯಲ್ಲಿ ಐದನೇ ಮತ್ತು ಆರನೇ ತರಗತಿಗಳು ನಡೆಯುತ್ತಿದ್ದವು. ಗುಡುಗು ಮಳೆ ಸುರಿದು ಹೆಂಚುಗಳು ಹಾರಿಹೋಗಿ ಮಳೆ ಬಂದ ದಿನ ಐದನೇ ತರಗತಿಯ ಕೊಠಡಿಯೆಲ್ಲ ಜಲಾವೃತಗೊಂಡಿತ್ತು. ಸುತ್ತ ಹಸಿರು ಬೆಟ್ಟಗಳಿಂದ ಕೂಡಿದ್ದ ನಮ್ಮೂರಿನಲ್ಲಿ ಅದ್ಯಾವುದೋ ಕಾಲದಲ್ಲಿ ಗಾಳಿ ಬೀಸಲು ಶುರು ಮಾಡಿದರೆ ಮುಗಿಯಿತು, ಕೊಠಡಿಗಳ ಹೆಂಚುಗಳು ನಿಲ್ಲುವುದಿಲ್ಲ. ಹೆಂಚುಗಳೇನಾದರೂ ಅಪ್ಪಿತಪ್ಪಿ ಪುಟ್ಟ ಮಕ್ಕಳ ತಲೆಮೇಲೆ ಬಿದ್ದರೇನು ಗತಿ!!  ಆದ್ದರಿಂದ ಒಂದಷ್ಟು ತಿಂಗಳುಗಳ ಮಟ್ಟಿಗೆ ಐದನೇ ತರಗತಿಯ ಮಕ್ಕಳನ್ನು ಆರನೇ ತರಗತಿಯ ಕೊಠಡಿಯೊಳಗೇ ಕೂರಿಸಿ ಪಾಠ ಮಾಡಲು ವ್ಯವಸ್ಥೆ ಮಾಡಲಾಗಿತ್ತು.

ಪೂರ್ವಕ್ಕೊಂದು ಬ್ಲಾಕ್ ಬೋರ್ಡು. ಪಶ್ಚಿಮಕ್ಕೊಂದು ಬ್ಲಾಕ್ ಬೋರ್ಡು!!
ಐದನೇ ತರಗತಿಯ ಮಕ್ಕಳು ಕೊಠಡಿಯ ಅರ್ಧಭಾಗಕ್ಕೆ ಕುಳಿತು ಪಶ್ಚಿಮಕ್ಕೆ ಮುಖ ಹಾಕಿ ಕೂರಬೇಕು. ಹಾಗೆಯೇ ಆರನೆಯ ತರಗತಿಯ ಮಕ್ಕಳು ಕೊಠಡಿಯ ಇನ್ನರ್ಧಭಾಗಕ್ಕೆ ಕುಳಿತು ಪೂರ್ವಕ್ಕೆ ಮುಖ ಹಾಕಿ ಕೂರಬೇಕು.ಕೂರಲಿಕ್ಕೆ ಹಲಗೆಗಳೇ ಆಧಾರ. ಏಕಾಗ್ರತೆ ಅಂದರೆ ಅದು!!  ಬೇರೆ ಮಾಸ್ತರರು ಆರನೇ ಕ್ಲಾಸಿಗೆ ಯಾವ ಪಾಠ ಮಾಡುತ್ತಿದ್ದಾರೆ ಎನ್ನುವುದರ ಬಗ್ಗೆ ಕಿವಿಯಲ್ಲಿ ಕೇಳಿಸಿಕೊಳ್ಳದೆ, ಬರೀ ನಮ್ಮ ಐದನೇ ಕ್ಲಾಸಿನ ಮಾಸ್ತರರ ದನಿಯನ್ನು ಮಾತ್ರ ಆಲಿಸಬೇಕು. ಏಳನೇ ತರಗತಿಗೆ ಹೋಗುವುದೆಂದರೆ ಬಡ್ತಿ ಪಡೆದಂತೆ! ಏಕೆಂದರೆ ಕುಳಿತುಕೊಳ್ಳುವುದಕ್ಕೆ ಮುಂಚಿನಂತೆ ಹಲಗೆಗಳಿರಲಿಲ್ಲ, ಹೊಸ ಬೆಂಚುಗಳನ್ನು ಹಾಕಲಾಗಿತ್ತು!!

ತರಗತಿಯಲ್ಲಿದ್ದ ವಿದ್ಯಾರ್ಥಿಗಳನ್ನು ಆರು ಗುಂಪುಗಳನ್ನಾಗಿ ವಿಂಗಡಿಸಲಾಗಿತ್ತು.ತರಗತಿಯ ಬಾಗಿಲ ಹಿಂದೆ ಆ ಗುಂಪುಗಳ ಪಟ್ಟಿಯೊಂದನ್ನು ತಯಾರಿಸಿ ಅಂಟಿಸಲಾಗಿತ್ತು. ವಾರದ ಆರು ದಿನಗಳಲ್ಲಿ ದಿನಕ್ಕೊಂದು ಗುಂಪಿನಂತೆ ಪ್ರತಿ ಗುಂಪಿನ ಸದಸ್ಯರು ತರಗತಿಯ ಕೋಣೆಯ ಶುಚಿತ್ವ ಕಾಪಾಡಬೇಕು!! ಇಬ್ಬರು ಸದಸ್ಯರು ಹಲಗೆಗಳನ್ನು ಎತ್ತಿ ನಿಲ್ಲಿಸುವುದು, ನಂತರ ಮುಂಚಿನಂತೆ ಮಲಗಿಸುವುದನ್ನು ಮಾಡಿದರೆ,ಉಳಿದ ಸದಸ್ಯರು ಕಸ ಗುಡಿಸುತ್ತಿದ್ದರು. ಇನ್ನಷ್ಟು ಜನ ಪಕ್ಕದ ಬೋರ್ವೆಲ್ ನಿಂದ ಕೊಡಗಳಲ್ಲಿ ನೀರು ತಂದರೆ, ಉಳಿದವರು ಆ ನೀರನ್ನು ಶಾಲೆಯ ಮುಂದಿನ ಆವರಣದಲ್ಲಿ ನೀರು ಸಿಂಪಡಿಸಿ ಧೂಳು ಏಳದ ಹಾಗೆ ಮಾಡಬೇಕಿತ್ತು. ಇವೆಲ್ಲವೂ ಬೆಳಗಿನ 10 ಘಂಟೆಯ ಬೆಲ್ ಹೊಡೆಯುವುದರೊಳಗೆ ಮುಗಿಯಬೇಕು.

ದಿನಗಳೆದಂತೆ ಮಾಸ್ತರರು ಬರೆಯಲು ಬಳಸುತ್ತಿದ್ದ ಕಪ್ಪು ಹಲಗೆ ತನ್ನ ಬಣ್ಣ ಕಳೆದುಕೊಂಡು ಅವರೇನು ಬರೆಯುತ್ತಾರೋ ಅರ್ಥವಾಗುತ್ತಿರಲಿಲ್ಲ. ತಿಂಗಳಿಗೊಂದು ಬಾರಿ ಶಾಲೆಯ ಪಕ್ಕದ ಪೊದೆಗಳಲ್ಲಿ ಬೆಳೆದ ಯಾವುದೋ ಸೊಪ್ಪು ಕಿತ್ತು  ತಂದು, ಅದಕ್ಕೆ ಕೊಂಚ ಇದ್ದಲು, ನೀರು ಹಾಕಿ ಚೆನ್ನಾಗಿ ಅರೆದು ಅದನ್ನು ಆ ಕಪ್ಪು ಹಲಗೆಗೆ ಚೆನ್ನಾಗಿ ಉಜ್ಜಿ ಕೊಂಚ ಒಣಗಲು ಬಿಟ್ಟರೆ....ವ್ಹಾವ್, ಕಪ್ಪು ಹಲಗೆ ಆಗ ತನ್ನ ನಿಜವಾದ ಹೊಳಪು ತೋರಿಸುತ್ತಿತ್ತು.ಈ ಕೆಲಸದ ಜವಾಬ್ದಾರಿಯನ್ನು ಆ ತರಗತಿಯ ಲೀಡರ್ ವಹಿಸಿಕೊಳ್ಳಬೇಕಿತ್ತು. ಇವತ್ತಿನ ಟೀಮ್ ಬಿಲ್ಡಿಂಗ್, ಕೋ-ಆರ್ಡಿನೇಷನ್ ಎಂದು ನೂರಾರು ಮೈಲಿ ನಮ್ಮನು ಕರೆದುಕೊಂಡು ಹೋಗಿ ಕಲಿಸುವ ಪಾಠಗಳನ್ನು, ಅವತ್ತಿಗೆ ಕೇವಲ ತರಗತಿಗಳನ್ನು ಶುಚಿ ಮಾಡುವ ಚಟುವಟಿಕೆಯಲ್ಲಿಯೇ ನಮ್ಮ ಮಾಸ್ತರುಗಳು ಕಲಿಸಿಬಿಟ್ಟರು ಅನಿಸುತ್ತದೆ.

ಈಗ ಬಹಳಷ್ಟು ವರ್ಷಗಳು ಕಳೆದು ಹೋಗಿವೆ. ಇಂದು ಅದೇ ಶಾಲೆ ವರ್ಣರಂಜಿತವಾಗಿ ಬದಲಾಗಿದೆ. ಸುತ್ತ ಬೆಳೆದಿದ್ದ ಮುಳ್ಳು ಪೊದೆಗಲೆಲ್ಲ ಮಾಯವಾಗಿ ಈಗ ಕಾಂಪೌಂಡು ತಲೆಯೆತ್ತಿದೆ. ಮುಂಚಿದ್ದ ಹಲಗೆಗಳೆಲ್ಲ ಹೋಗಿ ಬೆಂಚುಗಳು ಬಂದಾಗಿವೆ.ಸರಕಾರ ಮಕ್ಕಳನ್ನು ಶಾಲೆಗೆಳೆದು ತರಲು ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಮುಂಚಿನಂತೆ ಸೂರ್ಯ ಇಣುಕಲು ಶಾಲಾ ಕೊಠಡಿಯೊಳಗೆ ಒಡೆದ ಹೆಂಚುಗಳಿಲ್ಲ. ಸರಕಾರವೇ ಶಾಲಾ ಕೊಠಡಿಗಳನ್ನು ಸ್ವಚ್ಛಗೊಳಿಸಲು ಕೆಲಸಗಾರರನ್ನು ನೇಮಿಸಿದೆ. ಆಟಪಾಠಗಳ ಕಡೆಗೆ ಮಕ್ಕಳ ಗಮನವನ್ನು ಸೆಳೆಯಲು ನಾನಾ ಕಸರತ್ತುಗಳು ನಡೆಯುತ್ತಿವೆ. ಬಿಸಿಯೂಟ, ಉಚಿತ ಮೊಟ್ಟೆ, ಹಾಲು, ಅಕ್ಕಿ, ಪುಸ್ತಕ, ಸಮವಸ್ತ್ರ, ಬೈಸಿಕಲ್ಲು ಎಲ್ಲ ಯೋಜನೆಗಳನ್ನೂ ನೋಡಿಯಾಗಿದೆ. ನಮಗೆ ವಿದ್ಯಾರ್ಜನೆ ಮಾಡಿದ ಆ ಶಾಲೆಯನ್ನು ಈಗ ನೋಡಿದರೆ ಯಾವುದೋ ಆ ಬಿಡಿಸಲಾಗದ ನಂಟಿನ ನೆನಪಾಗುತ್ತದೆ. ಯಾವುದೇ ಸ್ಥಿತಿಯಲ್ಲಿದ್ದರೂ ನಮ್ಮನ್ನು ವಿದ್ಯಾವಂತರನ್ನಾಗಿ ಮಾಡಿ ಇಂದು ತಾನೇನು ಮಾಡಿಲ್ಲವೆಂಬಂತೆ ಮೌನವಾಗಿ ಕುಳಿತು ತನ್ನ ಸೇವೆಯನ್ನು ಇತರ ಕಂದಮ್ಮಗಳಿಗೂ ಮುಂದುವರೆಸಿರುವ ಆ ಶಾಲೆಯ ಬಗ್ಗೆ ಮನದೊಳಗೇ ಅಪಾರ ಗೌರವ ಮೂಡುತ್ತದೆ.

ಮೊನ್ನೆ ಊರಿಗೆ ಹೋಗಿದ್ದಾಗ ಅದರ ಹೊಸರೂಪವನ್ನು ನೋಡಿದ ನನಗೆ ಫೋಟೋ ಕ್ಲಿಕ್ಕಿಸದೆ ಇರಲು ಮನಸ್ಸಾಗಲಿಲ್ಲ.

ನಿಮ್ಮವನು,
-ಸಂತು

Friday, December 21, 2012

ನನ್ನವ್ವ!!

                                                                                                                                (ಚಿತ್ರಕೃಪೆ :Google)


ಬರೀ ಮಾಯನ್ನರಿಗಷ್ಟೇ
ತನ್ನ ಮನದ ದುಗುಡ
ಹೇಳಿಕೊಳ್ಳುವವಳಲ್ಲ ನನ್ನವ್ವ!!
ಜ್ಯೋತಿಷಿಗಳು ಕಿವಿಯೂದಲಿ,
ಸಾವಿರ ಜನ ಕೋಟಿ ಮಾತಾಡಲಿ!!
ತನ್ನ ಮನೆಗೆ ಬೆಂಕಿಯಿಟ್ಟು
ಮಕ್ಕಳನ್ನೆಲ್ಲ ಕೊಲ್ಲುವಷ್ಟು
ಕಟುಕಳಲ್ಲ ಆಕೆ!!
ಮುನಿಸಿದ್ದರೆ ಆಗಾಗ
ಮೈಯೊದರುತ್ತಾಳೆ!!
ನಿಜಕ್ಕೂ ಕೋಪ ಬಂದರೆ
ಕೋಳಿ ಕೇಳಿ ಕಾರ ಅರೆಯುವುದಿಲ್ಲ,
ನನ್ನ ಹಡೆದವ್ವ!!

                                                                 -ಸಂತು

Monday, December 17, 2012

ಕಣ್ಣೀರು (ಚುಟುಕಗಳು-2)




ಮಗಳ ಹೆರಿಗೆಯಲ್ಲಿ,
ಸುಮ್ಮನಿದ್ದ
ಅಪ್ಪ,
ಪುಟ್ಟ ಮೊಮ್ಮಗಳ
ಕಿವಿ
ಚುಚ್ಚುವಾಗ
ಹಾಕಿದ
ಕಣ್ಣೀರು!!
----------------------------------

ಅದೇಕೋ,
ಮೌನದಲ್ಲಿಯ
ನಿಶ್ಚಲ
ಜಡ ವಸ್ತುಗಳೂ,
ಅಂತರಂಗದಲ್ಲಿ
ಹುಚ್ಚೆದ್ದು
ಕುಣಿಯುತ್ತವೆ!!
----------------------------------

ಸಾವ ಮನೆಗೆ,
ಹೊರಟ ನೆಂಟನೊಬ್ಬನ  ಹೆಂಡತಿ
ತಡೆದು ಹೇಳಿದಳು,
ಉಂಡು ಹೋಗಿ,
ಬರುವುದು
ಹೊತ್ತಾಗಬಹುದು!!
----------------------------------

                                                                                  --ಸಂತು

Saturday, December 15, 2012

ಚಿಗುರ ಚಿವುಟಬೇಕೆ??!!




                                                                                                           
                                                                                                                                                               (ಚಿತ್ರಕೃಪೆ: Google)
2001ನೇ ಇಸವಿ. ಮೈಸೂರಿನಿಂದ ಬೆಂಗಳೂರಿಗೆ ಬಂದಿದ್ದೆನಾದ್ದರಿಂದ ಎಲ್ಲವೂ ಹೊಸತು.
ಹೊಸ ಸ್ಥಳ, ಹೊಸ ಕೋರ್ಸು, ಹೊಸ ಮನೆ, ಹೊಸ ರುಚಿ, ಹೊಸ ಜನಗಳ ಒಡನಾಟ, ಒಟ್ಟಿನಲ್ಲಿ ಹೊಸ ಜೀವನ ಶುರುವಾಗಿತ್ತು.

ಅದೇಕೋ ಕೊಂಚ ಸಂಕೋಚ ಮತ್ತು ಆತ್ಮ ವಿಶ್ವಾಸದ ಕೊರತೆ.
ಎಲ್ಲಿ ನನ್ನನ್ನು ಹಳ್ಳಿಯವನು ಅಥವಾ ಮಾತನಾಡೋಕೆ ಇಂಗ್ಲಿಷ್ ಬರುವುದಿಲ್ಲ ಅಂತ ಹೀಯಾಳಿಸಿಬಿಡುತ್ತಾರೇನೋ ಅನ್ನುವ ಆತಂಕ. ಕಾಲೇಜಿಗೆ ಸೇರಿದ ಬಹಳಷ್ಟು ತಿಂಗಳುಗಳ ಕಾಲ ನಮ್ಮ ಗುಂಪಿನ ಹತ್ತಿರದ ಹುಡುಗರೊಡನೆ ಮಾತನಾಡುತ್ತಿದ್ದೆ ಹೊರತು ಬೇರಾರ ಜೊತೆಯಲ್ಲೂ ಮಾತನಾಡುತ್ತಿರಲಿಲ್ಲ. ಇಂಗ್ಲಿಷ್ ಭಾಷೆ ಹಳ್ಳಿಯ ಹುಡುಗರನ್ನು ಅದೆಷ್ಟು ಪೇಚಾಟಕ್ಕೆ ಸಿಕ್ಕಿಸಿಬಿಡುತ್ತದೆ ಅನ್ನುವುದು ಆ ಹುಡುಗರಿಗೆ ಮಾತ್ರ ಗೊತ್ತು.
ಅದರ ಬಗ್ಗೆ ಬೇರೊಂದು ಸಲ ಮಾತನಾಡೋಣ.

ಚಿಕ್ಕಂದಿನಿಂದಲೂ ನಾನು ಆಟಗಳಲ್ಲಿ ಕೊಂಚ ಕಮ್ಮಿ ಆಸಕ್ತಿ ತೋರಿದವನು.
ಆದರೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ (ಅಂದರೆ ಎಲ್ಲಿ ದೈಹಿಕ ಶ್ರಮ ಇಲ್ಲವೋ ಅಂತಹ ಚಟುವಟಿಕೆಗಳಲ್ಲಿ !! )ಬಹಳ ಹುರುಪಿನಿಂದ ಪಾಲ್ಗೊಳ್ಳುತ್ತಿದ್ದೆ. ನನಗೆ ಬಹಳ ಸಂತೋಷ ಕೊಡುವ ಕಾರ್ಯಕ್ರಮಗಳೆಂದರೆ- ಹಾಡುವುದು, ಅಭಿನಯ ಮತ್ತು ಮಿಮಿಕ್ರಿ!! ಬಹಳಷ್ಟು ಬಾರಿ ವಾರ್ಷಿಕೋತ್ಸವಗಳಲ್ಲಿ ಭಾಗವಹಿಸಿ ಇವುಗಳನ್ನೆಲ್ಲ ಮಾಡಿದ್ದೆನಾದರೂ ಹತ್ತನೇ ತರಗತಿಯ ನಂತರದ ನಗರ ಜೀವನ ಇವಕ್ಕೆಲ್ಲ ಕೊಂಚ ಬ್ರೇಕ್ ಹಾಕಿತ್ತು.

ಬಹಳ ಅಂತರ್ಮುಖಿಯಾಗಿದ್ದ ನಾನು ಇಂಜಿನಿಯರಿಂಗ್ ನ 2ನೇ ವರ್ಷದ ನಂತರ ಕೊಂಚ ಹೊಸ ವಾತಾವರಣಕ್ಕೆ ಹೊಂದಿಕೊಳ್ಳತೊಡಗಿದೆ. ಎಲ್ಲರೂ ಗೆಳೆಯರಾಗತೊಡಗಿದರು. ನಮಗೆ ಪಾಠ ಮಾಡುತ್ತಿದ್ದ ಕನಕವಳ್ಳಿ ಎನ್ನುವ ಟೀಚರ್ ಒಬ್ಬರು ತಮ್ಮ ತರಗತಿಗಳಲ್ಲಿ, ಬಹಳಷ್ಟು ಸಮಯ ಪಾಠಕ್ಕಿಂತ ಟೈಮ್ ಪಾಸ್ ಮಾಡುತ್ತಿದ್ದುದೇ ಹೆಚ್ಚು!! :) ಯಾರಿಂದಲೋ ನಾನು ಮಿಮಿಕ್ರಿ ಮಾಡುತ್ತೇನೆ ಅನ್ನುವ ವಿಷಯ ನಮ್ಮ ಕ್ಲಾಸಿನಲ್ಲಿ ಗೊತ್ತಾಗಿ ಹೋಯಿತು. ದಿನವೂ ನಾನು ಮಿಮಿಕ್ರಿ ಮಾಡಬೇಕೆಂದು ಒತ್ತಡ ಶುರುವಾಯಿತು.

ಕನ್ನಡವೇ ಮಾತನಾಡದಿದ್ದ ಹುಡುಗಿಯರು ಅದೆಲ್ಲಿ ನನ್ನ ಮಿಮಿಕ್ರಿ ಇಷ್ಟಪಡುತ್ತಾರೆ ಅಂತ ಸುಮ್ಮನಿದ್ದೆ.
ದಿನದಿನವೂ ಏನಾದರೊಂದು ನೆಪ ಹೇಳಿ ತಪ್ಪಿಸಿಕೊಳ್ಳುತ್ತಿದ್ದೆ.ಇನ್ನೇನು ಇಂಟರ್ನಲ್ ಪರೀಕ್ಷೆಗಳು ಶುರುವಾಗಬೇಕೆಂದಿದ್ದಾಗ ಅದೇ ಟೀಚರ್ ತಾವು 3 ತಿಂಗಳು ರಜದಲ್ಲಿ ಹೋಗುತ್ತಿರುವುದಾಗಿ ಹೇಳಿದರು. ಕೊನೆಯ ದಿನ ರಜಕ್ಕೆ ಹೋಗುವ ಮುನ್ನ ನಾನು ಮಿಮಿಕ್ರಿ ಮಾಡಲೇಬೇಕೆಂದು ಪೂರ್ತಿ ಒತ್ತಡ ಹಾಕಿಬಿಟ್ಟರು.ಸರಿ, ಮಾಡದೆ ಬೇರೆ ವಿಧಿಯಿಲ್ಲ.

ಎದ್ದು ನಿಂತು ಧೈರ್ಯವಹಿಸಿ ಕೊನೆಗೂ ಕನ್ನಡದ ರಿಯಲ್ ಸ್ಟಾರ್ ಉಪೇಂದ್ರರ ಎರಡು ಡೈಲಾಗ್ ಗಳನ್ನು ಸಂದರ್ಭ ಸಹಿತ ಅನುಕರಣೆ ಮಾಡಿದೆ.ಅದ್ಯಾವ ಪರಿ ಕ್ಲಾಸಿನಲ್ಲಿ ಕೂತಿದ್ದವರೆಲ್ಲ ಚಪ್ಪಾಳೆ ಹೊಡೆದು ಎಂಜಾಯ್ ಮಾಡಿದರೆಂದರೆ ನಾನು ಅಂತಹದ್ದೊಂದು ಪ್ರತಿಕ್ರಿಯೆಯನ್ನು ಎದುರು ನೋಡಿರಲಿಲ್ಲ.ನಂತರ ಬಹಳಷ್ಟು ಜನ ನನ್ನ ಬಳಿಗೆ ಬಂದು ಅಭಿನಂದಿಸಿದರು.

ಸಮಯ ಕಳೆದಿದ್ದೆ ಗೊತ್ತಾಗಲಿಲ್ಲ.ಇಂಜಿನಿಯರಿಂಗ್ ನ ಕೊನೆಯ ವರ್ಷ. ಕಾಲೇಜಿನ ವಾರ್ಷಿಕೋತ್ಸವದ ಸಿದ್ಧತೆ ಭರದಿಂದ ಸಾಗಿತ್ತು.ನಮ್ಮ ಕ್ಲಾಸಿನವರ ಒತ್ತಾಯದ ಮೇರೆಗೆ ನನ್ನ ಹೆಸರನ್ನು ಮಿಮಿಕ್ರಿಗೆ ಕೊಡಲಾಯಿತು. ಆಡಿಷನ್ ಶುರುವಾಯಿತು. ಅದೇಕೋ ನನ್ನ ಮನಸ್ಸಿನಲ್ಲಿ ಏನನ್ನಿಸಿತೋ ನಮ್ಮ ಆಡಿಷನ್ ಮಾಡುತ್ತಿದ್ದ ನಮ್ಮ ಕಾಲೇಜಿನ ಆಡಳಿತ ಮಂಡಳಿಯಲ್ಲೊಬ್ಬರಿಗೆ ವಿನಂತಿಸಿಕೊಂಡೆ.ಮಿಮಿಕ್ರಿಯನ್ನು ಎಲ್ಲರೆದುರು ಈಗ ಆಡಿಷನ್ ಕೊಟ್ಟರೆ ನಂತರ ಅದನ್ನು ನೋಡಲು ಅಂತಹ ಉತ್ಸಾಹವಿರುವುದಿಲ್ಲ. ಆದ್ದರಿಂದ ಕ್ಲಾಸಿನ ಒಳಗೆ ಆಡಿಷನ್ ಕೊಡುವೆ ಎಂದು ಹೇಳಿ ಕ್ಲಾಸಿನ ಒಳಗೆ ಕರೆತಂದೆ. ಬರೋಬ್ಬರಿ 10 ನಿಮಿಷ ನಾನು ಬಹಳ ಇಷ್ಟಪಟ್ಟ ನಟರುಗಳೆಲ್ಲರ ಮಿಮಿಕ್ರಿಗಳನ್ನೆಲ್ಲ ಮಾಡಿ ತೋರಿಸಿದೆ.

ಅವುಗಳನ್ನೆಲ್ಲ ನೋಡಿದ ಆ ಮನುಷ್ಯ ಹೇಳಿದ ಮಾತೆಂದರೆ ..
ಯಾವ ಸಂಭಾಷಣೆಯೂ ಸಭ್ಯವಾಗಿಲ್ಲ, ಮಿಮಿಕ್ರಿ ಬಹಳ ಚೆನ್ನಾಗಿದೆಯಾದರೂ ಯಾವುದರಲ್ಲೂ ಪೌರಾಣಿಕ ಸಂಭಾಷಣೆಗಳಿಲ್ಲ.
ನಂತರ ನನಗೆ ಅರ್ಥವಾಗಿದ್ದು ಆ ಪುಣ್ಯಾತ್ಮನಿಗೆ ಬೇಕಾಗಿದ್ದುದು ಬರೀ ಪೌರಾಣಿಕವಷ್ಟೇ.
ನಂಗೆ ಉದಾಹರಣೆ ಕೊಟ್ಟದ್ದು ತೆಲುಗಿನ ಬಹಳ ಹಳೆ ನಟರ ಸಂಭಾಷಣೆಗಳನ್ನು.
"ಇನ್ನೂ ಮೂರ್ನಾಲ್ಕು ದಿನಗಳ ಸಮಯವಿದೆ, ಯಾವುದಾದರೂ ಪೌರಾಣಿಕ ಚಿತ್ರದ ಸಂಭಾಷಣೆ ಕಲಿತು ಬಾ" ಅಂದ.
ಅಹಂ ಅನ್ನುವುದು ಕೆಲವು ಬಾರಿ ಅದೆಷ್ಟು ನಮ್ಮನ್ನು ನಿಷ್ಠುರ ಮಾಡುತ್ತದೆಂದರೆ, "ನಂಗೆ ಬರೋದೆ ಇಷ್ಟು, ಬೇಕಿದ್ದರೆ ಮಾಡುತ್ತೇನೆ, ಇಲ್ಲ ಅಂದ್ರೆ ಬೇಡ ಬಿಡಿ" ಅಂತ ಖಡಾಖಂಡಿತವಾಗಿ ಹೇಳಿ ಹೊರ ಬಂದುಬಿಟ್ಟೆ.

ಇಂಜಿನಿಯರಿಂಗ್ ಮುಗಿದು ಜೀವನ ಕೆಲಸಕ್ಕೆ ನನ್ನನ್ನು ಶುರುಹಚ್ಚಿತು. ನಾನು ಕೆಲಸ ಮಾಡಿದ ಮೊದಲ ಕಂಪನಿಯಲ್ಲಿ ಮತ್ತು ಎರಡನೆಯ ಕಂಪನಿಯಲ್ಲಿ ಮತ್ತದೇ ಮಿಮಿಕ್ರಿಗಳ ಪ್ರದರ್ಶನ. ತರಬೇತಿಯ ಸಮಯದಲ್ಲಿ ಕೊಟ್ಟ ಕಾರ್ಯಕ್ರಮಕ್ಕೆ ಎಲ್ಲರಿಂದಲೂ ಬಹಳಷ್ಟು ಅಭಿನಂದನೆ ಸಿಕ್ಕಿತು. ಕನ್ನಡ ಬರದಿದ್ದ ಬೇರೆ ರಾಜ್ಯದವರೆಲ್ಲ ಅದೆಷ್ಟು ಖುಷಿಪಟ್ಟರೆಂದರೆ, "ನಿನ್ನ ಮಿಮಿಕ್ರಿ ನೋಡಿದ ಮೇಲೆ ನಿಮ್ಮ ಉಪೇಂದ್ರನ ಚಿತ್ರ ನೋಡಬೇಕು ಅಂತ ಆಸೆಯಾಗಿದೆ" ಅಂತ ಹೇಳಿ ಹೋದರು!!
ಕೆಲವರಂತೂ ನನ್ನನ್ನು ಕೆಲ ದಿನಗಳ ಕಾಲ ಉಪ್ಪಿ ಅಂತಲೇ ಕರೆಯುತ್ತಿದ್ದರು.

ಅದಿರಲಿ. ನನ್ನ ಮಿಮಿಕ್ರಿ ಕತೆಯ ಬಗ್ಗೆ ಅಲ್ಲ ನಾನು ನಿಮಗೆ ಹೇಳಹೊರಟಿದ್ದು!!
ನನ್ನ ಕ್ಲಾಸಿನವರಿಗೆ ಕಾಣದ, ನನ್ನ ಕಂಪನಿಯವರು ನೋಡದ ಅ ಮಿಮಿಕ್ರಿ ಸಂಭಾಷಣೆಯಲ್ಲಿನ ಅಸಭ್ಯತೆ ಆತನಿಗೆ ಕಂಡಿದ್ದಾದರೂ ಎಲ್ಲಿ?! ಅದೇಕೋ ಕೆಲವರು ಕೆಲಸಮಯ ಸುಮ್ಮನೆ ಏನಾದರೊಂದು ಹೇಳಿ ಇನ್ನೊಬ್ಬರ ನೆನಪಿನ ಪುಟಗಳಲ್ಲಿ ಉಳಿದುಬಿಡುತ್ತಾರೆ. ಅವರಿಗೆ ತಮ್ಮ ಆದರ್ಶವೇ ಇತರರಿಗೂ ಮಾದರಿಯಾಗಬೇಕೆಂಬ ಹುಚ್ಚು ತಲೆಯಲ್ಲಿ ಮನೆಮಾಡಿರುತ್ತದೆ. ಅದನ್ನು ಇಡೀ ಪ್ರಪಂಚವೇ ಪರಿಪಾಲಿಸಬೇಕು ಅನ್ನುವ ಭ್ರಮೆಯಲ್ಲಿ ಓಡಾಡುತ್ತಿರುತ್ತಾರೆ.
ಅಂತಹವರು ಹೊಸ ಪ್ರಪಂಚಕ್ಕೆ ಎಂದಿಗೂ ಹೊಂದಿಕೊಳ್ಳುವುದಿಲ್ಲ, ನನ್ನ ಮಿಮಿಕ್ರಿಯನ್ನು ಅಸಭ್ಯವೆಂದ ಆ ಪುಣ್ಯಾತ್ಮನ ಹಾಗೆ.
ಆತ ಭಾಷಣಕ್ಕೆ ಬಂದರೆ ಎಂತಹ ರಸವತ್ತಾದ ವಿಷಯವನ್ನು ಘಂಟೆಗಳ ಕಾಲ ಮಾತನಾಡಿ ಬೋರು ಹೊಡೆಸುತ್ತಿದ್ದನೆಂದರೆ,ಆತ ಭಾಷಣಕ್ಕೆ ನಿಂತರೆ ಸಾಕು ಎಲ್ಲರೂ ಅವನಿಗೆ ಹಿಡಿಶಾಪ ಹಾಕುತ್ತಿದ್ದರು. ಪಾಪ ಅವನಿಗೆ ಅದು ಗೊತ್ತಿರಲಿಲ್ಲ !!

ಅದಾಗಿ ವರ್ಷಗಳೇ ಕಳೆದಿವೆ.
ಈಗಲೂ ಯಾರಾದರೂ ಹೊಸದಾಗಿ ಏನಾದರೊಂದು ಪ್ರಯತ್ನ ಮಾಡಿದರೆ ನಾನು ಯಾವಾಗಲೂ ಅವರನ್ನು ಹುರಿದುಂಬಿಸುತ್ತೇನೆ. ಒಂದು ಕವನ ಬರೆದು ತೋರಿಸಿದರೆ ಅವರ ಸಾಹಿತ್ಯ ಪ್ರೇಮಕ್ಕೆ ಶಹಬ್ಬಾಷ್ ಹೇಳಬೇಕೇ ಹೊರತು, ಅದರಲ್ಲಿಯ ಒಂದು ದೋಷ ಹುಡುಕಿ "ಮೊದಲು ಕನ್ನಡ ಕಲಿ" ಅಂತ ಹೇಳುವುದಲ್ಲ.
ಯಾರಿಗೆ ಗೊತ್ತು, ನಾಳೆ ಆತನೇ ಆ ಕ್ಷೇತ್ರದಲ್ಲಿ ಬಹಳಷ್ಟು ಬೆಳೆದು ಹೆಮ್ಮರವಾಗಿ ನಿಲ್ಲಬಹುದು.

ಆದರೆ ಬೆಳೆಯುವ ಮುನ್ನವೇ ಚಿಗುರನ್ನು ಚಿವುಟುವ ಕಾರ್ಯಕ್ಕೆ ನಾವು ಮುಂದಾಗಬಾರದು ಅಲ್ಲವೇ? ಏನಂತೀರಿ?

                                                                                                                          ನಿಮ್ಮವನು,
                                                                                                                          -ಸಂತು



Saturday, December 8, 2012

ಚಳಿಯಿದೆ!!



(ಚಿತ್ರಕೃಪೆ:Google)
 
[ czech republic ನ ರೂಮೊಂದರಲ್ಲಿ -10° temperature ನಲ್ಲಿ ಚಳಿ ತಡೆಯದಾದಾಗ ಉಕ್ಕಿ ಬಂದ ಸಾಲುಗಳು:-) ]

ಬಹಳ ಚಳಿಯಿದೆ,
ಪಕ್ಕದಲ್ಲಿ ಅವಳಿಲ್ಲ!!

ತುಂಬಿದ ಬಾಟಲಿಯಿದೆ,
ಹಂಚಿಕೊಳ್ಳಲು ಗ್ಲಾಸಿಲ್ಲ!!

ನಮ್ಮೂರ ಬಜ್ಜಿಯ ನೆನಪಿದೆ,
ಇಲ್ಲಿ ಮಾಡಲು ಮಿರ್ಚಿಯಿಲ್ಲ!!

ಸಾವಿರ ಮಾತು ಕಾಯುತಲಿವೆ,
ಯಾವ ಕಿವಿಗಳಿಗೂ ಬಿಡುವಿಲ್ಲ!!

ಮನಸ್ಸೇಕೋ ಕುಣಿಯುತ್ತಿದೆ,
ಜೊತೆ ಹೆಜ್ಜೆಹಾಕಲು ಪಾದ ತಯಾರಿಲ್ಲ.

ಅಶ್ವತ್ಥರ ಗಾನವಿದೆ,
ನಿಲ್ಲಿಸಲು ಮನಸ್ಸಾಗುತ್ತಿಲ್ಲ!!

ಎಲ್ಲಕ್ಕೂ ಮುನ್ನ, ನನ್ನ-ಅವಳ ಕತೆಯಿದೆ,
ಎಷ್ಟು ಸಲ ಓದಿದರೂ ಬೇಸರವಿಲ್ಲ!!

                                                    -ಸಂತು

Tuesday, December 4, 2012

ಹೊರಗಿನವರದ್ದು ಮಾತ್ರ ಉಪಕಾರವೇ?


ಊಟ ಮಾಡುತ್ತಿರುವಾಗ ಏನಾದರೂ ಕೆಮ್ಮಿದರೆ,
ಏನಾದರೂ ನಮ್ಮ ಗೆಳೆಯರೋ ಅಥವಾ ಸಹೋದ್ಯೋಗಿಗಳೋ ಒಂದು ಲೋಟ ನೀರು ತಂದು ಕೊಟ್ಟರೆ ಸಾಕು.
 "ಥ್ಯಾಂಕ್ಸ್ ರೀ, ತುಂಬಾ ಥ್ಯಾಂಕ್ಸ್" ಅಂತ ಹಲವು ಬಾರಿ ಹೇಳಿರುತ್ತೇವೆ.
ಅದೇ ನಮ್ಮ ಮನೆಯಲ್ಲಿ ಅಂತಹ ಸಾವಿರಾರು ಉಪಕಾರಗಳು ನಡೆದಿರುತ್ತವೆ.

ಉದಾಹರಣೆಗೆ, ಕಛೇರಿ ಮುಗಿಸಿ ಮನೆಗೆ ಬರುವವರೆಗೆ ಹಸಿವಿದ್ದರೂ ಊಟಕ್ಕಾಗಿ ಕಾಯುವ ಮಡದಿ.
ಮಗನ ಫೀಸು ಕಟ್ಟಬೇಕೆಂದು ಹಬ್ಬಗಳಿಗೂ ಯಾವುದೇ ಹೊಸಬಟ್ಟೆ ಕೊಳ್ಳದ ಅಪ್ಪ.
ಮಗ ಊಟ ಮಾಡಲಿ ಅಂತ ಮೊಸರು, ತುಪ್ಪ ತಿನ್ನದೇ ಎತ್ತಿಡುವ ಅಮ್ಮ!!
ಕೊಂಚ ತಲೆನೋವಿದೆ ಎಂದ ಮಾತ್ರಕ್ಕೆ ಅದೆಷ್ಟೇ ದೂರವಿದ್ದರೂ ನಡೆದು ಹೋಗಿ ಮಾತ್ರೆ ತರುವ ತಮ್ಮ.
ಊರಿಗೆ ಹೊರಡುತ್ತಾರೆಂದು ಬೆಳಗಾಗುವ ಮೊದಲೇ ಕಾರು ತೊಳೆದು ಅಚ್ಚರಿ ತೋರುವ ಬಾವ!!
ವಿದೇಶಕ್ಕೆ ಹೋಗುತ್ತಾರೆಂದು ನಾವು ಕೇಳದಿದ್ದರೂ ಚಿತ್ರಾನ್ನದ ಗೊಜ್ಜು ಮಾಡಿ ಕೊಡುವ ಅತ್ತೆ.
ಹೀಗೆ ಹೇಳುತ್ತಾ ಹೋದರೆ ನಮ್ಮ ಮನೆಯವರ ಬಗ್ಗೆ ಪುಟಗಟ್ಟಲೆ ಬರೆದುಬಿಡಬಹುದು.

ಹೀಗೆ ಎಷ್ಟೋ ಸಲ ಇಂತಹ ಅನೇಕ ತ್ಯಾಗಗಳು, ಉಪಕಾರಗಳು ನಮ್ಮ ಕಣ್ಣ ಮುಂದೆ ನಡೆದಿದ್ದರೂ ಕುರುಡರಂತೆ ಸುಮ್ಮನಿದ್ದುಬಿಡುತ್ತೇವೆ.
ಮಧ್ಯಾಹ್ನದ ಊಟದ ಡಬ್ಬಿ ಮರೆತಿದ್ದಾನೆಂದು, ಕಾಲೇಜಿನವರೆಗೆ ಬಂದು ಕೆಲಸದ ಮದ್ಯದಲ್ಲೂ ಅಪ್ಪ ಡಬ್ಬಿ ಕೊಟ್ಟು ಹೋದರೆ,
ಯಾಕೆ ಬಂದೆ ಅಂತ ಪ್ರಶ್ನೆ ಹಾಕುತ್ತೇವೆಯೇ ಹೊರತು ಅವರ ಶ್ರಮಕ್ಕೆ ಮನಸ್ಸಿನಲ್ಲಿ ಒಂದು ಕೃತಜ್ಞತಾ ಭಾವ ಮೂಡಿರುವುದಿಲ್ಲ.

ನಾನು ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಓದುತ್ತಿದ್ದ ಸಮಯದಲ್ಲಿ ಒಬ್ಬನೇ ಒಂದು ಬಾಡಿಗೆ ಮನೆಯಲ್ಲಿ ವಾಸವಾಗಿದ್ದೆ.
ಒಂದು ದಿನ ಅದೆಂತಹ ಜ್ವರ ಬಂದಿತ್ತೆಂದರೆ 24 ಘಂಟೆಗಳ ಕಾಲ ಊಟ,ತಿಂಡಿ ಇಲ್ಲದೇ ಪ್ರಜ್ಞೆಯೇ ಇಲ್ಲದವನಂತೆ ಬಿದ್ದುಕೊಂಡಿದ್ದೆ.
ಅಂದೇನೋ ಜಮೀನಿನ ಕೆಲಸದಲ್ಲಿ ಮಗ್ನರಾಗಿದ್ದ ಅಪ್ಪ ಅಮ್ಮ ಫೋನು ಮಾಡಿರಲಿಲ್ಲ.
ಅವತ್ತು ನನಗರ್ಥವಾಗಿದ್ದು, ಬಂಧು-ಬಳಗವೆನ್ನುವವರು ನಮ್ಮ ಯೋಗಕ್ಷೇಮ ವಿಚಾರಿಸಿಕೊಳ್ಳಲು ಇಲ್ಲದಿದ್ದರೆ ನಮ್ಮ ಪಾಡು ಹೇಗಿರುತ್ತದೆಂದು!!

ಏನಾಯಿತು ಬಿಡು, ಏನು ಸುಮ್ಮನೆ ಮಾಡುತ್ತಾರೆಯೇ? ಮನೆಯವರಲ್ಲವೇ? ಅಂತ ನಮ್ಮ ಮನಸ್ಸಿಗೆ ಯಾವತ್ತಾದರೂ ಅನ್ನಿಸುತ್ತಾ?
ಹಾಗಿದ್ದರೆ ಬಹುಶಃ, ಆ ರೀತಿಯ ಪ್ರೀತಿ ತೋರಿಸುವವರನ್ನು,ನಮ್ಮ ಖುಷಿಗೋಸ್ಕರ ಕಷ್ಟಪದುವವರನ್ನು ನಾವು ಕಳೆದುಕೊಂಡಾಗಲೇ ಅದರ ಬೆಲೆ ಗೊತ್ತಾಗುವುದು.
ಕೊಂಚ ನಮ್ಮ ಬಗ್ಗೆ ನಾವೇ ಈ ರೀತಿಯ ಪ್ರಶ್ನೆ ಕೇಳಿಕೊಂಡಾಗ ಅದರ ಅರಿವು ನಮಗಾಗುತ್ತದೆ.

ಟೈಮಿಗೆ ಸರಿಯಾಗಿ ರುಚಿರುಚಿಯಾಗಿ ಊಟ ಮಾಡಿಕೊಡುವ ಹೆಂಡತಿಯ ಮೇಲೆ ಖಾರ ಇಲ್ಲ,ಉಪ್ಪಿಲ್ಲ, ಹುಳಿ ಜಾಸ್ತಿಯಾಯ್ತು ಅಂತ ಸುಳ್ಳೇ ದರ್ಪ ತೋರುತ್ತೇವೆ!!
ಬೇರೆ ಯಾವುದೋ ಊರಿಗೆ ಒಬ್ಬಂಟಿಯಾಗಿ ಹೋಗಿ, ಅಲ್ಲಿಯ ಊಟಕ್ಕೆ ನಾಲಿಗೆ ಹೊಂದಿಕೊಳ್ಳದೆ,
ಎಂಟ್ಹತ್ತು ಬಾರಿ ಪುಳಿಯೋಗರೆ ತಿನ್ನುವಷ್ಟರ ಹೊತ್ತಿಗೆ ಹೆಂಡತಿಯ ಮೇಲೆ ತೋರುತ್ತಿದ್ದ ದರ್ಪ ಮುಕ್ಕಾಲು ಇಳಿದು ಹೋಗಿರುತ್ತದೆ:)

ಸರಿನಪ್ಪ, ಈಗೇನು ಮಾಡೋಣ? ಏನೂ ಬೇಡ.
ಅವರು ನಿಮಗಾಗಿ ಮಾಡುತ್ತಿರುವ ಈ ರೀತಿಯ ಸಹಾಯಗಳನ್ನು ಮನಸ್ಸಿನಲ್ಲೇ ಯೋಚಿಸಿ.
ಯಾವತ್ತಾದರೊಂದು ದಿನ ಅದರ ಬಗ್ಗೆ ಮಾತನಾಡಿ, ಅವರ ಸೇವೆಗಳಿಗೆ, ಪ್ರೀತಿಗೆ ಒಂದು ಥ್ಯಾಂಕ್ಸ್ ಹೇಳಿ.
ಯಾವತ್ತೋ ಒಂದು ದಿನ ಅಚಾನಕ್ಕಾಗಿ ಅವರುಗಳಿಗೆ ಚಿಕ್ಕದೊಂದು surprise ಕೊಡಿ.
ಅವರು ನಿರೀಕ್ಷಿಸಿರದ ಹಬ್ಬದಲ್ಲಿ ಅವರಿಗಾಗಿ ಒಂದು ಚಿಕ್ಕ ಉಡುಗೊರೆ ತಂದುಕೊಡಿ.
ಉಡುಗೊರೆ ದುಬಾರಿಯದ್ದೇ ಆಗಿರಬೇಕಿಲ್ಲ, ಅದರಲ್ಲಿ ನಿಮ್ಮ ದುಬಾರಿ ಪ್ರೀತಿಯಿರಬೇಕು ಅಷ್ಟೇ:)

ಇದು ಕೇವಲ ಉಡುಗೊರೆ ಪಡೆದವರಿಗಷ್ಟೇ ಸಂತೋಷ ಕೊಡುವುದಿಲ್ಲ.
ಉಡುಗೊರೆ ಕೊಟ್ಟ ನಿಮ್ಮ ಮನಸ್ಸೂ ನಿಮಗೊಂದು ಥ್ಯಾಂಕ್ಸ್ ಹೇಳುತ್ತದೆ, ಇವತ್ತು ಸರಿಯಾದ ಕೆಲಸ ಮಾಡಿದ್ದೀಯ ಅಂತ ಹೇಳುತ್ತಾ..!!

                                                                                                                            -ಸಂತು

Monday, November 26, 2012

ಎಲೆ ಮರೆ ಕಾಯಿಗಳ ಜೊತೆ ಮಾತುಕತೆ, ಎಲೆ ಮರೆ ಕಾಯಿ ೫೬

ಗೆಳೆಯ ನಟ್ಟು, ನನ್ನ ಬರಹಗಳನ್ನು ನೋಡಿ ಇತರರಿಗೆ ಪರಿಚಯಿಸಿದ ರೀತಿ ನಿಜಕ್ಕೂ ನನಗೆ ಬಹಳ ರೋಮಾಂಚನವನ್ನುಂಟು ಮಾಡಿತು.
ಅವರ ಬ್ಲಾಗಿನಿಂದ ಇಡೀ ಲೇಖನವನ್ನು ಕದ್ದು ತಂದು ನನ್ನ ಬ್ಲಾಗಿನಲ್ಲಿ ಮರುಪ್ರಕಟಿಸುತ್ತಿದ್ದೇನೆ.
ಇದು ಕೇವಲ ನನ್ನ ನೆನಪಿಗಾಗಿ ಮತ್ತು ಸಂಗ್ರಹಕ್ಕಾಗಿ ಮಾತ್ರ.
 

 ಈ ಲೇಖನದ ಮೂಲ ಆವೃತ್ತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.

http://smnattu.blogspot.cz/2012/09/blog-post_14.html#links


ಆಕೆ ಮುನಿಸಿಕೊಂಡಾಗ 
ಪಾತ್ರೆಗಳೂ ಮಾತನಾಡುತ್ತವೆ.

ಅಕ್ಕಿ ಮುಗಿದಾಗಲೇ ಯಾಕೋ 
ಹಸಿವು ಹೆಚ್ಚಾಗುತ್ತದೆ.

ಕುಡಿದು ಓಡಿಸುವವನ ಗಾಡಿಯೂ
ತೂರಾಡುತ್ತಲೇ ಬರುತ್ತದೆ!!

ಕೆಲವು ಭಾವಗಳೇ ಹಾಗೆ ತಮ್ಮೊಳಗೆ ಮತ್ತೊಂದು ಭಾವವನ್ನು ನಮಗೆ ಕಂಡೂ ಕಾಣದಂತೆ ಅಡಗಿಸಿಕೊಂಡಿರುತ್ತವೆ. ಉದಾಹರಣೆಗೆ ಹುಸಿ ಕೋಪದೊಳಗಿನ ಪ್ರೀತಿ, ಹಸಿದವನ ಒಳಗಿರುವ ಜೀವನ ಮುಖಿ, ಮುಗುಳ್ನಗುವಿನ ಹಿಂದಿರುವ ಕುಹಕ, ಹೀಗೆ ಹುಡುಕುತ್ತಾ ಹೋದರೆ ಒಂದು ಭಾವದೊಳಗಿನ ಮತ್ತೊಂದು ಒಳ ಭಾವ ಅಥವಾ ಒಳಾರ್ಥ ನಮಗೆ ಗೋಚರಿಸುತ್ತಾ ಹೋಗುತ್ತದೆ. ಹೆಚ್ಚು ಸಲ ಹೊರ ಭಾವವನ್ನು ಮಾತ್ರ ಅರ್ಥೈಸಿಕೊಂಡು ಆ ಭಾವದ ಒಳಾರ್ಥವನ್ನು ಅರ್ಥ ಮಾಡಿಕೊಳ್ಳುವಲ್ಲಿ ನಾವು ವಿಫಲರಾಗುತ್ತೇವೆ. ಆ ವಿಫಲತೆಯನ್ನು ಜನ ಮೂರ್ಖತನ ಎಂದು ಕರೆದುಬಿಡುತ್ತಾರೆ. ಗೆಳೆಯನೊಬ್ಬನ ಬ್ಲಾಗಿನಲ್ಲಿ ಮೇಲಿನ ಚಂದದ ಎರಡು ಸಾಲುಗಳ ಚುಟುಕಗಳ ಓದುತ್ತಲೇ ಯಾಕೋ ಹೀಗೊಂದು ಭಾವಗಳ ಕುರಿತ ಭಾವನಾ ಲಹರಿ ನನ್ನಲ್ಲಿ ಮೂಡುತ್ತಾ ಹೋಯಿತು. ಅಂದ ಹಾಗೆ ಈ ಗೆಳೆಯನ ಬ್ಲಾಗಿನ ಹೆಸರು "ಫ್ರೊಮ್ ಮೈ ಹಾರ್ಟ್"

"ಮದುವೆಗೆ ಮುಂಚೆ ಅಷ್ಟೇ ಇದೆಲ್ಲ, ಆಮೇಲೆ ..... ಏನಿಲ್ಲ. ಬರೀ ಬೊಗಳೆ ಪ್ರಪಂಚ. ಈ ಕರ್ಮಕ್ಕೆ ಲವ್ ಮ್ಯಾರೇಜ್ ಬೇರೆ ಯಾಕೆ ಬೇಕಿತ್ತೋ? ಪರಿಚಯವಾದ ದಿನಗಳಲ್ಲಿ ಅಟ್ ಲೀಸ್ಟ್ 10 ಗಂಟೆ ಫೋನಿನಲ್ಲೇ ಪ್ರಪಂಚ. ಕೂತಿದ್ದರೂ ನಿಂತಿದ್ದರೂ smsಗಳ ಮೇಲೆ sms. ಆ ಪ್ರೀತಿ ಮಾತು, ಆಗ ನೋಡುತ್ತಾ ಇದ್ದ ಮೂವೀಸ್, ಆಡ್ತಾ ಇದ್ದ ಹರಟೆ, ಭೇಟಿ ಆಗ್ತಾ ಇದ್ದ ದೇವಸ್ಥಾನ, ಬರೀತಾ ಇದ್ದ ಲೆಟರ್, ಕಳಿಸ್ತಾ ಇದ್ದ ಇ ಮೇಲ್, ಗ್ರೀಟಿಂಗ್ಸ್, ಆಗಾಗ ಕೊಡ್ತಾ ಇದ್ದ ಗಿಫ್ಟ್ಸ್.... ಪ್ರತಿಯೊಂದು ಹೇಗೆ ಮದುವೆ ಆದ ತಕ್ಷಣ ಮಾಯ ಆಗೋಯ್ತು ನೋಡು. ಎಲ್ಲಾ ಗಂಡಸರದ್ದು ಇದೇ ರಾಮಾಯಣ ಅಂತ ಕಾಣ್ಸುತ್ತೆ , ಬರೀ ಹುಡುಗಿರನ್ನ ಪಟಾಯಿಸೋಕೆ ಅಷ್ಟೆಲ್ಲಾ ಮಾಡ್ತಾರೆ ಅಂತ ಅನ್ಸುತ್ತೆ . ಹಿಂಗೆ ಇದ್ದಿದ್ರೆ ಮದುವೆ ಆಗದೇನೆ ಇರ್ಬೋದಿತ್ತು. ಈಗ ಸಾಲದ್ದಕ್ಕೆ ಮಗು ಬೇರೆ ಕೇಡು."

ಹೀಗೆ ತನ್ನ ನಲ್ಮೆಯ ಸಂಗಾತಿಯ ಕೋಪವನ್ನು ಕುರಿತು ಬರೆಯುತ್ತಾ ಹೋಗುವ ಬರಹಗಾರ ಯಾಕೋ ಗೊತ್ತಿಲ್ಲ ಅವನ ಸರಳ ಬರಹದ ಶೈಲಿಯಿಂದ ನಮಗೆ ಹೆಚ್ಚು ಹೆಚ್ಚು ಹತ್ತಿರವಾಗಿಬಿಡುತ್ತಾನೆ. ಈ ಗೆಳೆಯನ ಬರಹಗಳನ್ನು ಓದಿದಾಗ ಹಸಿದು ಬೆಳೆದವನಿಗಷ್ಟೇ ಅನ್ನದ ಮತ್ತು ಪ್ರೀತಿಯ ಮಹತ್ವ ತಿಳಿದಿರುತ್ತದೆ ಎಂದೆನಿಸಿತ್ತದೆ.

ಕುಡಿಯಲೋದ ಕರುವನೆಳೆದು,
ಕಂಬದಲ್ಲಿ ಕಟ್ಟಿಹಾಕಿ,
ತಾಯಮೊಲೆಯ ಹಿಂಡಿ ಕರೆದು,
ಹಾಲು ತಂದು ಮೊಸರ ಮಾಡಿ,
ಮೊಸರ ಗಡಿಗೆ ಕೆಳಗೆ ಬೀಳೆ,
ವ್ಯರ್ಥವಾಯಿತೇ, ಇಲ್ಲ ಅರ್ಥವಾಯಿತೇ?

ಈ ಗೆಳೆಯನ ಮೇಲಿನ ಕವಿತೆಯ ಸಾಲುಗಳ ಓದಿದಾಗ ಆ ಸಾಲುಗಳಲ್ಲಿ ಒಂದು ಚಂದದ ಲಯ ತುಂಬಿದೆ ಎಂದೆನಿಸುತ್ತೆ ಅಲ್ಲವೇ ಗೆಳೆಯರೇ? ಬರೀ ಕವಿತೆಗಳಲ್ಲಿ ಅಷ್ಟೇ ಅಲ್ಲ ಬದುಕಿನಲ್ಲೂ ಸಹ ಲಯ ತಂದುಕೊಂಡು ಕೊಳ್ಳೇಗಾಲ ತಾಲ್ಲೂಕಿನ ಲೊಕ್ಕನಹಳ್ಳಿ ಎಂಬ ಪುಟ್ಟ ಹಳ್ಳಿಯಿಂದ ಝೆಕ್ ರಿಪಬ್ಲಿಕ್ ನ ಪ್ರಾಗ್ ಎಂಬ ಸುಂದರ ನಗರ ತಲುಪಿ ಅಲ್ಲಿಂದಲೇ ಕನ್ನಡ ಸಾಹಿತ್ಯ ಕೃಷಿಯಲ್ಲಿ ತೊಡಗಿರುವ ಈ ಗೆಳೆಯನ ಬದುಕು ನಿಜಕ್ಕೂ ನಮ್ಮೆಲ್ಲರಿಗೂ ಸ್ಪೂರ್ತಿದಾಯಕ. "ಹಾಯ್ ನಟ್ಟು, ನಮಸ್ಕಾರ, ಎಲೆಮರೆ ಕಾಯಿಗಾ!! ಮೈ ಗಾಡ್, ನಂಗೆ ಬಹಳ ಮುಜುಗರವಾಗ್ತಾ ಇದೆ. ನಾನು ಅಂತ ದೊಡ್ಡ ಬರಹಗಾರ ಏನಲ್ಲ, ನೀವು ಪರಿಚಯ ಮಾಡ್ತಾ ಇರೋ ವ್ಯಕ್ತಿಗಳಿಗೆ ಹೋಲಿಸಿದರೆ ನಂದೇನೂ ಇಲ್ಲ." ಎಂದು ಮುಜುಗರಪಡುತ್ತಲೇ ಇಂತಹುದೊಂದು ಚಂದದ ಪರಿಚಯವನ್ನು ಗೆಳೆಯ ಸಂತೋಷ್ ಕುಮಾರ್ ಎಲ್ ಎಮ್ ಅವರು ನಮ್ಮೊಡನೆ ಹಂಚಿಕೊಂಡಿದ್ದಾರೆ. ಸಹೃದಯಿಗಳೇ, ಇಂದಿನ ಎಲೆ ಮರೆ ಕಾಯಿಗಳ ಜೊತೆ ಮಾತುಕತೆಯಲ್ಲಿ ಗೆಳೆಯ ಸಂತೋಷನ ಪರಿಚಯ ಇಗೋ ನಿಮಗಾಗಿ....



"ನಮಸ್ಕಾರ ಗೆಳೆಯರೇ, ಹೇಳೋಕೆ ಹೇಳಿಕೊಳ್ಳುವಂಥ ಸಾಧನೆಯೇನೂ ಮಾಡಿಲ್ಲ. ಗೆಳೆಯ ನಟ್ಟುವಿನ ಒತ್ತಾಯದ ಮೇರೆಗೆ ಇದನ್ನು ಬರೆಯುತ್ತಿದ್ದೇನೆ ಅತೀ ಸಾಮಾನ್ಯ ಮಾಹಿತಿ ಬೇಕೆಂದರೆ ಈ ಕೆಳಗಿನವುಗಳ ಮೇಲೆ ಒಮ್ಮೆ ಕಣ್ಣಾಡಿಸಿ. ಹುಟ್ಟಿದ್ದು ಅಮ್ಮನೂರು ಹಾಸನ ಜಿಲ್ಲೆಯ ಆರಕಲಗೂಡಿನ ಬಬಗಳಲೆ ಗ್ರಾಮ. ಬೆಳೆದಿದ್ದು ಪೂರ್ತಿ ಈಗಿನ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಲೊಕ್ಕನಹಳ್ಳಿ. ಓದಿದ್ದು ಸರಕಾರಿ ಶಾಲೆ. ಹತ್ತರ ನಂತರ ಹೆಚ್ಚಿನ ವಿದ್ಯಾಭ್ಯಾಸಕ್ಕೆಂದು ನಗರಕ್ಕೆ ವಲಸೆ. ಮತ್ತೆ ತಿರುಗಿ ನೋಡಲಾಗಿಲ್ಲ. ಈಗ ಸದ್ಯಕ್ಕೆ ನನ್ನ ಇಂಜಿನಿಯರಿಂಗ್ ಪದವಿ ನೋಡಿ ಬಹುರಾಷ್ಟ್ರೀಯ ಕಂಪನಿಯೊಂದು ಕೆಲಸ ಕೊಟ್ಟಿದೆ. ಪ್ರೀತಿಸಿದವಳೊಟ್ಟಿಗೆ ಮದುವೆಯಾಗಿ ಸದ್ಯ ಮುದ್ದು ಬಂಗಾರಿಯೊಬ್ಬಳಿಗೆ ನಾನು ಪ್ರೀತಿಯ ತಂದೆಯಾಗಿದ್ದೇನೆ:)

ನನ್ನ ಹವ್ಯಾಸ: ಸಂಗೀತ, ಚಲನಚಿತ್ರ, ಮಿಮಿಕ್ರೀ, ಹಾಡುವುದು, ಪ್ರವಾಸ ಹಾಗೂ ಸಾಹಿತ್ಯ.

ಭೈರಪ್ಪ, ತೇಜಸ್ವಿ, ಕಾರಂತ, ದಿನಕರ ದೇಸಾಯಿ ಮುಂತಾದ ಕವಿಗಳ ಸಾಹಿತ್ಯದಲ್ಲಿ ಕಣ್ಣಾಡಿಸಿದ್ದೇನೆ, ಭಾರತೀಯ ಲೇಖಕ ಚೇತನ್ ಭಗತ್ ರವರ ಆಂಗ್ಲ ಸಾಹಿತ್ಯವನ್ನೂ ಓದಿದ್ದೇನೆ. ರವಿ ಬೆಳಗೆರೆಯವರ ಬರೆಯುವ ಶೈಲಿ ನನಗಿಷ್ಟ. ಸಾಹಿತ್ಯವೆಂಬುದು ಸಾಧ್ಯವಾದಷ್ಟು ಜನಗಳ ಮುಟ್ಟುವಂತಿರಬೇಕು ಎಂಬುದು ನನ್ನ ಅಭಿಪ್ರಾಯ. ಅದಕ್ಕಾಗಿಯೇ ಸರಳ ಭಾಷೆಯ, ಆದರೆ ಪರಿಣಾಮಕಾರಿ ಶಕ್ತಿಯುಳ್ಳ ಸಾಹಿತ್ಯವನ್ನು ಹೆಚ್ಚು ಇಷ್ಟಪಡುತ್ತೇನೆ. ಜೊತೆಗೆ ಬರೆಯುವಾಗಲೂ ಸರಳ ಭಾಷೆಯಲ್ಲೇ ಬರೆಯಲು ಪ್ರಯತ್ನ ಮಾಡುತ್ತೇನೆ. ಕನ್ನಡದ ಮೇಲಿನ ಪ್ರೀತಿ ನನ್ನನ್ನು ಬರೆಯಲು ಶುರು ಮಾಡಿದೆ.

ಮೈಸೂರಿನಲ್ಲಿ ಪ್ರಥಮ ವರ್ಷದ ಪಿಯುಸಿಯಲ್ಲಿ ನಾ ಓದುತ್ತಿದ್ದಾಗ ಹಾಗೆ ಸುಮ್ಮನೆ ಕುಳಿತಿರಲಾರದೇ (ಜೀವನದ ಪ್ರಪ್ರಥಮ) ಒಂದು ಚುಟುಕ ಬರೆದೆ.

ನಾನಂದುಕೊಂಡಂತೆಯೇ,
ಅಂದು,
ನನ್ನ ಪ್ರಿಯೆ,
ಪ್ರೇಮಪತ್ರವ ಕೊಟ್ಟಳು
ನನಗೊಂದು..!!
ಅಗ್ರಹಾರದಲ್ಲಿಯ,
ಆಕೆಯ,
ಪ್ರಿಯಕರನಿಗೆ,
ಕೊಟ್ಟು ಬರಲೆಂದು!!  

ಈ ಚುಟುಕ ನೋಡಿ ನಕ್ಕು, ಅಂದು ನನ್ನ ಗೆಳೆಯರು ಕೊಟ್ಟ ಷಹಬ್ಬಾಷ್ ಗಿರಿ ಎಷ್ಟೊಂದು ಉತ್ಸಾಹ ಕೊಟ್ಟಿತೆಂದರೆ, ಕೇವಲ ಒಂದಷ್ಟು ತಿಂಗಳುಗಳಲ್ಲೇ ಡೈರಿಯೊಂದರಲ್ಲಿ ಸುಮಾರು ಮುನ್ನೂರು ಕವನಗಳನ್ನು ಬರೆದೆ! ಮತ್ತೆ ವಿದ್ಯಾಭ್ಯಾಸದ ಗುಂಗಿನಲ್ಲಿ ನನ್ನ ಈ ಹವ್ಯಾಸವನ್ನು ಪಕ್ಕಕ್ಕಿರಿಸಬೇಕಾಯಿತು.ಈಗ ಮತ್ತೊಮ್ಮೆ ಬರೋಬ್ಬರಿ ಹನ್ನೆರಡು ವರ್ಷಗಳ ನಂತರ, ಅರಿವಿಲ್ಲದೇ ಆರಂಭಿಸಿದ ನನ್ನದೇ ಬ್ಲಾಗಿನ ಮುಖಾಂತರ ಮತ್ತೊಮ್ಮೆ ಸಾಹಿತ್ಯ ಪಯಣ ಶುರುವಾಗಿದೆ. ಫೇಸ್ ಬುಕ್ ನ "ಕನ್ನಡ ಬ್ಲಾಗ್" ಗೆಳೆಯರ ಒಡನಾಟದೊಂದಿಗೆ ಮತ್ತೊಮ್ಮೆ ಕಳೆದು ಹೋದ ಅಮೂಲ್ಯ ವಸ್ತು ಮತ್ತೊಮ್ಮೆ ಸಿಕ್ಕಂತಾಗಿದೆ. ಸಾಹಿತ್ಯಕ್ಕೆ ಹೆಚ್ಚು ಸಮಯ ಮೀಸಲಿಡಲಾಗದಿದ್ದರೂ ಸಮಯ ಸಿಕ್ಕಾಗಲೆಲ್ಲ ಹೊಸ ಪುಸ್ತಕಗಳ ಮೊರೆ ಹೋಗುತ್ತೇನೆ. ಓದುವ ಅಥವಾ ಬರೆಯುವ ಸಾಹಿತ್ಯದಲ್ಲಿ ನನ್ನನ್ನು ಬಹಳ ಕಾಡುವ ವಿಷಯಗಳೆಂದರೆ ಹಸಿವು,ಸಾವು,ಸಂಬಂಧ ಹಾಗೂ ಜೀವನ. ನಾ ಏನೇ ಬರೆದರೂ ಅವುಗಳು ನನ್ನ ಮನಸ್ಸಿನಲ್ಲಿ ಸ್ವಲ್ಪ ಸಮಯ ಬೀಡು ಬಿಡಲು ಅವಕಾಶ ಮಾಡಿ, ಕೊಂಚ ಗಿರಕಿ ಹೊಡೆಯಬಿಟ್ಟು ನಂತರವೇ ಹಾಳೆಗೆ ಗೀಚುತ್ತೇನೆ.

ಹೀಗೆಯೇ ಇನ್ನೊಂದಷ್ಟು ಬರೆಯುವ ಶಕ್ತಿ ತಾಯಿ ಕನ್ನಡಾಂಬೆ ಕೊಡಲಿ.

ಅರಿಯದಿಹ ಅಂತ್ಯದತನಕ
ಹುಟ್ಟಿನಿಂದ ಪರಿಪೂರ್ಣತೆಯೆಡೆಗೆ
ನಡೆಯುತಿಹ ಪಯಣವೇ ಜೀವನ

ಕನ್ನಡ ಬ್ಲಾಗ್ ಅತ್ಯಂತ ಆರೋಗ್ಯಕಾರಿ ಕನ್ನಡ ಸಾಹಿತ್ಯ ತಾಣ. ಇಲ್ಲಿ ಪ್ರತೀ ಕನ್ನಡ ಸಾಹಿತ್ಯಪ್ರಿಯರಿಗೆ ತುಂಬು ಹೃದಯದ ಸ್ವಾಗತ ಸಿಗುತ್ತದೆ. ಪ್ರತೀ ಸದಸ್ಯರು ಮುಕ್ತ ಮನಸ್ಸಿನಿಂದ ತಮ್ಮ ಸಾಹಿತ್ಯವನ್ನು ಪ್ರಕಟಿಸುವುದಾಗಲಿ ಮತ್ತು ಇನ್ನೊಬ್ಬರ ಸಾಹಿತ್ಯಕ್ಕೆ ಪ್ರೋತ್ಸಾಹ ನೀಡುವುದಾಗಲಿ ಮಾಡುತ್ತಾರೆ. ಈಗಾಗಲೇ ತನ್ನ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸಿಕೊಂಡಿರುವ ಕಬ್ಲಾ, ಮುಂದಿನ ದಿನಗಳಲ್ಲಿ ಅಂತರ್ಜಾಲದಲ್ಲಿಯ ಎಲ್ಲ ಕನ್ನಡಿಗರನ್ನು ಸೆಳೆಯುತ್ತದೆ ಅನ್ನುವುದು ನನ್ನ ಆಶಯ:) --ಸಂತು"

ಎಂದು ಮಾತು ಮುಗಿಸಿದ ಗೆಳೆಯ ಸಂತುವಿನ ಚಂದದ ಮಾತುಕತೆ ನಿಮಗೆ ಇಷ್ಟವಾಗಿದೆ ಎಂದುಕೊಳ್ಳುವೆ ಗೆಳೆಯರೇ.. ಸಂತೋಷ್ ಅವರ ಬ್ಲಾಗಿನ ಲಿಂಕ್ ಈ ಕೆಳಗಿನಂತಿದೆ.. ಪೋಸ್ಟ್ ಗಳು ಕಡಿಮೆ ಇವೆ ಎನಿಸಿದರೂ ಸಮಯವಿದ್ದಾಗ ಒಮ್ಮೆ ಕಣ್ಣಾಡಿಸಿ..

http://frommyheartsanthu.blogspot.in/
ಅವರ ಇಂಗ್ಲೀಷ್ ಬ್ಲಾಗ್ ಸಹ ಇದೆ ನೀವಲ್ಲಿ ಅವರಿರುವ ದೇಶದ ಫೋಟೋಗಳನ್ನು ನೋಡಬಹುದು :))
http://santhu-world.blogspot.in/

ಗೆಳೆಯರೇ, ಗೆಳೆಯ ಸಂತುವಿನ ಕವಿತೆಗಳ ಕೆಲವು ಆಯ್ದ ಸಾಲುಗಳು ನಿಮಗಾಗಿ..

ನುಡಿವ ನಾಲಗೆಯ ನಡೆಯ ಮೇಲೇಕೋ ನನಗನುಮಾನ. 
ಟೊಳ್ಳು ಪೊಳ್ಳು ಸುಳ್ಳು ನುಡಿದು,
ನನ್ನ ಕಳ್ಳನನ್ನಾಗಿಸುವ,
ನಾಲಗೆಯ ಮೇಲೆ ನನಗನುಮಾನ.
*****
ಇನ್ನೂ ನೆನಪಿದೆ ಅಮ್ಮ,
ನಿನ್ನುದರ ಸೀಳಿ ನಾ ಹೊರಬಂದಾಗ,
ಸಿಕ್ಕ ಮರುಹುಟ್ಟಿನಲೂ,
ನನ್ನ ನೋಡುವ ನಿನ್ನ ಕಾತರ.
*****
ಮತ್ತೆ ಸಿಗೋಣ

ಪ್ರೀತಿಯಿಂದ
ನಟರಾಜು :))

Saturday, November 10, 2012

ಕಳೆದ ಉಂಗುರ!!


(ಚಿತ್ರಕೃಪೆ:Google)
ಕಳೆದ ಉಂಗುರಕ್ಕೀಗ ಮೂರೇ ವಯಸ್ಸು,
ಬಂಗಾರದ ಬೆಲೆಯೀಗ ಬಾನೆತ್ತರಕ್ಕೆ,
ಖಾಲಿ ಕೈಬೆರಳ ನಡುವಿನಿಂದ ಇಣುಕಿ ನಕ್ಕ ನೆನಪು.
ಇನ್ಯಾರದೋ ಕೈಗಳಲ್ಲಿ ಬರುತಲಿದೆ ಹೊಳಪು.

ಹುಣ್ಣಿಮೆಯ ಹಾದಿಯಲಿ ನಾ ಕಾಲಿಟ್ಟ
 ಹೆಜ್ಜೆಗಳಧೂಳನ್ನೆತ್ತಿ ಹಣೆಗಿಟ್ಟು
 ಮುಂಗೈಗೆ ಮುತ್ತಿಟ್ಟ ಸವಿನೆನಪು.
ಇಂದು ಆಗಸದಲ್ಲಿ ಚಂದ್ರ ಗೈರು ಹಾಜರಿ,
ಜತೆಗೆ ಅವಳೂ!!

ಅಂದು ಅವಳಪ್ಪುಗೆಯಲ್ಲಿ
ನನಗಿತ್ತ ಉಂಗುರ, ಇದ್ದಕ್ಕಿದ್ದಂತೆ ಮಾಯ.
ಕಣ್ಣು ಕುರುಡೋ, ಹೃದಯ ಕುರುಡೋ.
ನನಗಿನಿತು ಸುಳಿವಿಲ್ಲ.

ಜೋಕಾಲಿಯಲ್ಲಿ ಕೈಗಳ ಬೆಸೆದು
ಮುಂಬರುವ ಕನಸುಗಳೊಡನೆ ಜೀಕುವಾಗ
ತೇಲುತ್ತಿದ್ದ ಜಗತ್ತು.
ಬರುಬರುತ್ತಲೇಕೋ ತಲೆಕೆಳಗೆ.
ಮೇಲೆಬಿದ್ದ ಆಕಾಶ.
ಮಂಜಾದ ಕಂಗಳಲಿ ಬರೀ ನಕ್ಷತ್ರ.

ಪ್ರೀತಿ ಜನನಕ್ಕಿರಲಿಲ್ಲ ಒಂದೂ ನೆಪ,
ಅಂತ್ಯದ ಬುಡಕ್ಕೀಗ ನೂರು ಕಾರಣಗಳ ಬುತ್ತಿ.
ಕವಿದ ಕತ್ತಲೆಯೆಲ್ಲ ಕಾಲನ ಕೈಚಳಕವಷ್ಟೇ.
ಮತ್ತೆ ಮತ್ತೆ ಹುಡುಕುತ್ತಿರುವೆ, ಕಳೆದ ಉಂಗೂರಕ್ಕೀಗ.
ಕಾಣಲಾರೆನೆಂಬುದಿದ್ದರೂ ಬಲು ಖಚಿತ.
                                                                       --ಸಂತು

Saturday, August 25, 2012

ನೆನಪಿದೆ ಅಮ್ಮ!!

                                                                                                                                                                         (ಚಿತ್ರಕೃಪೆ:Google)
ಇನ್ನೂ ನೆನಪಿದೆ ಅಮ್ಮ,
ನಿನ್ನುದರ ಸೀಳಿ ನಾ ಹೊರಬಂದಾಗ,
ಸಿಕ್ಕ ಮರುಹುಟ್ಟಿನಲೂ,
ನನ್ನ ನೋಡುವ ನಿನ್ನ ಕಾತರ.

ಇನ್ನೂ ನೆನಪಿದೆ ಅಮ್ಮ,
ನಿನ್ನೆದೆಯ ನಾ ಚೀಪುವಾಗ,
ನಾನೊದ್ದ ಕಾಲಿನ ನೋವಿಗೆ,
ನಿನ್ನ ತುಟಿಯಲ್ಲಿ ಮಿನುಗಿದ ನಗು.

ಇನ್ನೂ ನೆನಪಿದೆ ಅಮ್ಮ,
ಮೊಸರನ್ನವನಿಕ್ಕುತ ನೀ ತೋರಿದ,
ಮಾಳಿಗೆಯ ಅಚ್ಚರಿಯ ಚಂದಿರ,
ಎಣಿಸಿದ ನಕ್ಷತ್ರ.

ಇನ್ನೂ ನೆನಪಿದೆ ಅಮ್ಮ,
ನಾ ನಿನ್ನ ತೊದಲು ಕರೆದಾಗ,
ಬಳಿ ಓಡಿ ಬಂದು,
ನೀನಪ್ಪಿದ ಬಿಸಿ ಸ್ಪರ್ಶ.

ಇನ್ನೂ ನೆನಪಿದೆ ಅಮ್ಮ,
ಅಪ್ಪ ಬರೆದ ಬೆನ್ನ ಬಾಸುಂಡೆಗಳ,
ಮೇಲೆ ನೀ ಹಚ್ಚಿದ,
ಕಣ್ಣೀರ ಲೇಪನ.

ಇನ್ನೂ ನೆನಪಿದೆ ಅಮ್ಮ,
ಯಶಸ್ಸಿನುತ್ತುಂಗವನೇರಲು,
ನೀ ಗುಂಡಿಗೆಯಲ್ಲಿ ಬಿತ್ತಿದ,
ಉತ್ಸಾಹದ ಚಿಲುಮೆ.

ಇನ್ನೂ ನೆನಪಿದೆ ಅಮ್ಮ,
ನಾನವಳ ಕೈ ಹಿಡಿದಾಗ,
ನಿನ್ನ ಕಣ್ಣಂಚಿನಲಿ,
ಜಿನುಗಿದ ಆ ಮುತ್ತು ಹನಿ.

ಇನ್ನೂ ನೆನಪಿದೆ ಅಮ್ಮ,
ಇದ್ದಕಿದ್ದಂತೆ ನೀನೆದ್ದು,
ಹೊರಟು ನಿಂತಾಗ,
ಬೆಂಬಿಡದೆ ಕಾಡಿದ ಅಸಾಧ್ಯ ಯಾತನೆ.

Thursday, August 23, 2012

ಹಸಿವಿನ ಅಂತರಾಳದಲ್ಲಿ..

ಏನಪ್ಪಾ ಇದು, ಒಂದೇ ಸಮನೆ ಹಸಿವಾಗುತ್ತಿದೆ.
ಮಧ್ಯಾಹ್ನ ಊಟ ಮಾಡಿ ಇನ್ನೂ ಮೂರು ಘಂಟೆಗಳೂ ಕಳೆದಿಲ್ಲ.
ಈ ಕಂಪ್ಯೂಟರಿನ ಮುಂದೆ ಕೂತು ಕೀಲಿಮಣೆ ಒತ್ತೋಕೆ ಶುರು ಮಾಡಿದ್ರೆ, ಅಂತಹ ಊಟ ಕರಗುವಷ್ಟು ಮೈ ಬಗ್ಗೋ ಕೆಲಸಾನ
ಯಾವ ಸಾಫ್ಟ್‌ವೇರ್ ಇಂಜಿನಿಯರ್ ಮಾಡಲ್ಲ ಅನ್ನೋದು ನನ್ನ ವಾದ.
ಆದ್ರೂ ಈ ಹೊಟ್ಟೆ ಮಾತ್ರ ತಾಳ ಬಾರಿಸೋದು ನಿಲ್ಲಿಸ್ತಾ ಇಲ್ಲ.

"ಏನ್ ಗುರೂ, ಪಿಜ್ಜಾ ಆರ್ಡರ್ ಮಾಡ್ತಿಯಂತೆ" ಪಕ್ಕದಲ್ಲಿದ್ದ ನಿಖಿಲ್ ಧ್ವನಿ.
"ಅಯ್ಯೋ ಸುಮ್ನಿರಪ್ಪ, ಯಾವ್ ಖುಷಿಗೆ", ನನ್ನ ಪ್ರಶ್ನೆ.
"ಅದೇ ಕಣೋ ಮದುವೆಯಾದೆಯಲ್ಲ, ಐದು ವರ್ಷದ ಹಿಂದೆ, ಅದಕ್ಕೆ ಅನ್ಕೋ!!"
ನಾನೂ ಬಿಡಲಿಲ್ಲ "ಯಾಕಪ್ಪಾ, ಆಮೇಲೂ ಏನೇನೋ ಮಾಡಿದೆ, ಅದಕ್ಕೆಲ್ಲಾ ಬೇಡವೇ?"
ನಿಖಿಲ್,"ನಾನೇನು ಬೇಡ ಅಂತ ಹೇಳಿದೆನಾ? ನಾಳೆ ಪಿಜ್ಜಾ ಅದಕ್ಕೋಸ್ಕರ ಕೊಡಿಸು"

ಅಪ್ಪ, ಈ ಜನಗಳು ಬೇಕಾದ್ರೆ ಬೆಳಿಗ್ಗೆ ಆಗಿದ್ದಕ್ಕೆ, ಸಂಜೆ ಆಗಿದ್ದಕ್ಕೆ, ಕೋಳಿ ಕೂಗಿದ್ದಕ್ಕೆ, ಕ್ಷೌರ ಮಾಡಿಸಿದ್ದಕ್ಕೆ,....
ಯಪ್ಪಾ,ಯಾವುದಕ್ಕೆ ಬೇಕಾದ್ರೂ ಟ್ರೀಟ್ ಕೇಳ್ತಾರೆ.
ಅದ್ಯಾವ ಪುಣ್ಯಾತ್ಮ ಶುರು ಮಾಡಿದ್ನೋ ಈ ಪಾರ್ಟೀ ಅನ್ನೋ ಪದವನ್ನ.

"ಅದೇನಪ್ಪ ಒಂದು ಪಿಜ್ಜಾ ಕೊಡಿಸೋದಕ್ಕೆ ಅದೇನು ಗೊಣಗುತ್ತೀಯೋ?
ನಾನೇನು ಇಡೀ ಕಂಪನಿಗೆ ಕೊಡಿಸೋಕೆ ಹೇಳಿದೆನಾ?, ಬರೀ ನಮ್ 26 ಜನಗಳ ಟೀಮಿಗೆ ಅಷ್ಟೇ!!"
ನಿಖಿಲ್ ನಿಂದ ಮತ್ತೊಂದು ಶಾಕ್.

"ದೇವ್ರು, ನಾನೇನು ಕುಬೇರನ ವಂಶದವನಲ್ಲಪ್ಪ,
ಇಲ್ಲಿ ನಾನು ಯೋಚನೆ ಮಾಡುತ್ತಾ ಇರೋದು ಬರೀ 26 ಜನಗಳ ಚಿಕ್ಕ(!) ಟೀಮಿನ ವಿಷಯವಲ್ಲ,
ಆ 26 ಜನಗಳಲ್ಲಿ ಪ್ರತಿಯೊಬ್ಬರ ತಿನ್ನುವ ಕೆಪಾಸಿಟಿಯ ಬಗ್ಗೆ,
ನಂಗೂ ಮನೆ ಅಂತ ಒಂದಿದೆ, ಸ್ವಲ್ಪ ಸಂಬಳ ಮನೆಗೂ ಕೊಡ್ಬೇಕಪ್ಪ"

"ಈಗೇನು?, ಕಳೆದ ಐದಾರು ತಿಂಗಳಿನಿಂದ ನೀನೇನೂ ಟ್ರೀಟ್ ಕೊಡಿಸಿಲ್ಲ,
ಈಗ ಒಂದು ಪಿಜ್ಜಾ ಕೊಡಿಸೋಕೆ ಆಗೋಲ್ವೇ,ಸರಿ ಬಿಡು"
ಈತ ಅಷ್ಟೊಂದು ಸಲೀಸಾಗಿ ಬಿಡೋ ಆಸಾಮಿಯಲ್ಲ ಎನಿಸಿತು.

ನನಗೆ ಪಿಜ್ಜಾ ತಿನ್ನಬೇಕೆಂಬ ಆಸೆಯಾಗಿತ್ತೇನೋ ನಿಜ,
ಆದರೆ ಜತೆಗೆ ಇಡೀ ಟೀಮಿಗೆ ಪಿಜ್ಜಾ ತಿನ್ನಿಸಿ ಜೇಬಿಗೆ ಕತ್ತರಿ ಹಾಕಿಸಿಕೊಳ್ಳಬೇಕೆಂಬ ಮಹಾದಾಶೆಯಂತೂ ಇರಲಿಲ್ಲ.

"ಓಕೆ ದೇವ್ರು, ನಿಮ್ಮ ಕುದುರೇನೇ ಮುಂದೆ ಹೋಗ್ಲಿ, ಅದೇನು ಬೇಕೋ ಹೇಳಿ ಆರ್ಡರ್ ಮಾಡ್ತೀನಿ" ಕೊನೆಗೂ ನನ್ನೊಳಗಿಂದ ಸೋಲೊಪ್ಪಿಕೊಂಡ ಸ್ವರ.

"ಹೂಓಹೂಊಹೂಊ" ಇಡೀ ಟೀಮ್ ತಾವೇನೋ ಪ್ರಪಂಚವನ್ನೇ ಗೆದ್ದೆವೋ ಅನ್ನಿಸುವಷ್ಟು ಜೋರಾಗಿ ಕೂಗಿದರು.
"ಆಹಾಹ ನೋಡಿ, ಇನ್ನೊಬ್ರ ದುಡ್ಡಲ್ಲಿ ತಿನ್ನೋದು ಅಂದ್ರೆ ಮೃಷ್ಟಾನ್ನ ತಿಂದ ಹಾಗಾಗುತ್ತೇನೋ" ನಾನೊಮ್ಮೆ ಪೆಚ್ಚುಮೋರೆಯಲ್ಲಿ ಹೇಳಿದೆ.
ಯಾರೊಬ್ಬರೂ ಕೇಳಿಸಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ!!

ಸರಿ,ಒಬ್ಬೊಬ್ಬರೂ ಬಂದು ತಮತಮ್ಮ ಪಿಜ್ಜಾ ಆಯ್ಕೆಗಳನ್ನು ಹೇಳಿದ್ದಾಯ್ತು.
ಪಿಜ್ಜಾ ಸೆಂಟರಿಗೆ ಫೋನ್ ಮಾಡಿ ಆರ್ಡರ್ ಕೊಟ್ಟಿದ್ದಾಯ್ತು.
ಪಿಜ್ಜಾ ಎಲ್ಲಿಗೆ ತರಬೇಕು ಅಂತ ವಿಳಾಸ ಕೂಡ ಕೊಟ್ಟೆವು.
ಪಿಜ್ಜಾ ಸೆಂಟರಿನ ಅಂಗಡಿಯಾತ "ಆರ್ಡರ್ ಬರೋಕೆ ಗರಿಷ್ಟ ಅರ್ಧ ಘಂಟೆಯಾಗುತ್ತದೆ.
ದಯವಿಟ್ಟು ಕಾಯಿರಿ ಸಾರ್" ಅಂದು ಹೇಳಿ ಫೋನಿಟ್ಟ.

ಅಯ್ಯೋ ಈಗ ನೋಡಿ, ಮತ್ತೊಮ್ಮೆ ಮರೆತಿದ್ದ ಹಸಿವು ಮತ್ತೊಮ್ಮೆ ಬಾಯಿಬಡಿಯುತ್ತಿದೆ.

ಆ ಪಿಜ್ಜಾ ಅಂಗಡಿಯವನಿಗೇನು ಗೊತ್ತು,
ಅರ್ಧ ಘಂಟೆಯೆಂದರೆ 30 ನಿಮಿಷಗಳು,
ಅರ್ಥಾತ್ 30x60=1800 ಸೆಕೆಂಡುಗಳು.

ಅದರಲ್ಲೂ ಆರ್ಡರ್ ಕೊಟ್ಟ ಮೇಲೆ ಪಿಜ್ಜಾ ಬರೋ ತನಕ ಕಾಯೋದಿದೆಯಲ್ಲ ಅದು ಬಹಳ ಸಂಕಟದ ಸಮಯ.
ಅಲ್ಲ ಸ್ವಾಮಿ, ಕೊಡೋ ದುಡ್ಡು ಕೊಟ್ಟು ಮತ್ತೆ ಊಟಕ್ಕೆ ಕಾಯಬೇಕು ಅನ್ನೋದೆಲ್ಲ ಈಗಿನ ಕಾಲದಲ್ಲಿ ಶುರುವಾಗಿದೆಯಲ್ಲ.
ಊಟಕ್ಕೆ ಅಂತಹ ಬರ ಬಂದಿದೆಯಾ...

ಅಯ್ಯೋ ಬಿಡಿ, ಈಗ ಮತ್ತೆ ಪಿಜ್ಜಾ ವಿಷಯಕ್ಕೆ ಬರೋಣ.
ಅದೂ ಇದೂ ಮಾತನಾಡುತ್ತಾ ಹೇಗಾದರೂ ಸಮಯ ತಳ್ಳೋಣವೆಂದರೆ ಯಾವುದೂ ನೆನಪಿಗೆ ಬರುತ್ತಿಲ್ಲ.

ಮತ್ತೊಮ್ಮೆ ನಿಖಿಲ್ ನ ಆಗಮನ.
"ಗುರೂ, ನಿನ್ನ ಮದುವೆ ಸ್ಟೋರಿ ಹೇಳು. ಅಲ್ಲಿತನಕ ಟೈಮ್ ಪಾಸ್ ಮಾಡೋಣ"
"ಈ ಟೈಮಲ್ಲಿ ಅವೆಲ್ಲ ಬೇಕಾ, ಮೊದ್ಲು ಪಿಜ್ಜಾ ತಿನ್ನೋಣ"
"ಪಿಜ್ಜಾ ಬರಬೇಕಲ್ಲ"
"ಹೌದಲ್ವೇ, ಪಿಜ್ಜಾನೇನು ಈ ಪುಣ್ಯಾತ್ಮರು ಗಿಡದಲ್ಲಿ ಬೆಳಿತಾರ, ಅರ್ಧ ಘಂಟೆ ಬೇಕಂತೆ
ನೀನೇನೇ ಹೇಳು,ಈ ಪಿಜ್ಜಾ ಸೆಂಟರಿನವರಿಗಿರುವಷ್ಟು ದುರಹಂಕಾರ ಯಾರಿಗೂ ಇಲ್ಲ,
ಯಾರಿಗೆ ಇಷ್ಟವಾಗಲೀ ಬಿಡಲಿ, ವ್ಯಾಪಾರ ಜೋರಾಗಿ ಆಗುತ್ತಲ್ಲ ಅನ್ನೋ ಅಸಡ್ಡೆ,
ಅದಕ್ಕೆ ಹೊಟ್ಟೆ ತುಂಬಿದವನ ಮನೆಗೆ ಊಟಕ್ಕೆ ಹೋಗಬೇಡ ಅನ್ನೋದು"

"ಹೌದು ಗುರು, ಸರಿಯಾಗಿ ಹೇಳಿದೆ. ಇವರಿಗೆ ಸರಿಯಾಗಿ ಬುದ್ಧಿ ಕಲಿಸಬೇಕು.
ಏನಾದರೊಂದು ಮಾಡೋಣ"
"ಏನು ಮಾಡಬೇಕು, ನೀವೆಲ್ಲರೂ ಸೇರಿ ಒಂದು ಐಡಿಯಾ ಕೊಡಿ, ಅದನ್ನೇ ಮಾಡೋಣ"
ಅಷ್ಟೊತ್ತಿಗಾಗಲೇ ಪಿಜ್ಜಾ ಬರುವಿಕೆಯನ್ನು ಎದುರು ನೋಡುತ್ತಿದ್ದ ಎಲ್ಲರ ಪಿತ್ತ ನೆತ್ತಿಗೇರಿತ್ತು.

ಓಕೇ, ಈಗಾಗಲೇ 40 ನಿಮಿಷವಾಗಿದೆ.
ಇನ್ನು ಅವನು ಪಿಜ್ಜಾ ತಂದರೂ ತೆಗೆದುಕೊಳ್ಳೋದು ಬೇಡ!
ನಿರ್ಧಾರವಾಯಿತು.

ಇದರ ಮಧ್ಯೆ ಮತ್ತೊಂದು ಕ್ರಿಮಿನಲ್ ಐಡಿಯಾ.
ಈ ಪಿಜ್ಜಾ ಸೆಂಟರಿನವರನ್ನು ಹಾಗೆಯೇ ಬಿಟ್ಟು ಬಿಡಬಾರದು.
ಅವರಿಂದ ಒಂದಾದರೂ ಕ್ಷಮಾಪತ್ರ ಪಡೆಯಬೇಕು.
ಜೊತೆಗೆ ಇವರಿಗೆ ಸ್ವಲ್ಪ ದಿನ ನಮ್ಮನ್ನು ಮರೆಯೋಕೆ ಆಗಬಾರದು, ಆ ರೀತಿ ಪಾಠ ಕಲಿಸಬೇಕು.
ಏನು ಮಾಡೋದು?

ತಕ್ಷಣ ಅಲ್ಲಿಯವರೆಗೆ ಸುಮ್ಮನೇ ಕುಳಿತಿದ್ದ ಆಮೀರ ಎದ್ದು ಬಂದು ಒಂದು ಸೂಪರ್ ಐಡಿಯಾ ಕೊಟ್ಟ.

"ಗುರೂ, ನೋಡು, ಈ ಐಡಿಯಾ ಉಪಯೋಗಿಸಿದ್ರೆ ನೀ ಹೇಳಿದ್ದನ್ನೆಲ್ಲಾ ಮಾಡಬಹುದು,
ಪ್ರತೀ ಪಿಜ್ಜಾ ಸೆಂಟರಿನವರಿಂದಲೂ ಗ್ರಾಹಕರಿಗಾಗಿ ಒಂದು ಪಾಲಿಸಿ ಇದೆ.
ಯಾವುದೇ ವ್ಯಕ್ತಿ ಪಿಜ್ಜಾ ಆರ್ಡರ್ ಕೊಟ್ಟ ಮೇಲೆ, ಅದ್ಯಾವುದೇ ಸ್ಥಳದಲ್ಲಿದ್ದರೂ ಮುಂದಿನ 30 ನಿಮಿಷದೊಳಗೆ ಆರ್ಡರ್ ಡೆಲಿವೆರಿ ಕೊಡಬೇಕು.
ಕೇವಲ 10 ನಿಮಿಷ ತಡವಾದರೂ ಆತ ತಂದ ಪಿಜ್ಜಾಗೆ ಇಂತಿಷ್ಟು ಅಂತ ರಿಯಾಯಿತಿ ಅಥವಾ ಪೂರ್ತಿ ಪಿಜ್ಜಾ ಉಚಿತವಾಗಿ ಕೊಡಬೇಕು.
ಇದರಿಂದ ಗ್ರಾಹಕನಿಗೂ ಆ ಪಿಜ್ಜಾ ಕಂಪನಿಯ ಮೇಲೆ ನಂಬಿಕೆ ಹೋಗೋದಿಲ್ಲ, ಆ ಕಂಪನಿಗೂ ಆ ಗ್ರಾಹಕನನ್ನು ಕಳೆದುಕೊಳ್ಳೋ ಭೀತಿ ಇರೋದಿಲ್ಲ,
ಈಗಾಗಲೇ ಆರ್ಡರ್ ಕೊಟ್ಟು 40 ನಿಮಿಷವಾಗಿದೆ, ಈ ಅವಕಾಶವನ್ನು ಮಿಸ್ ಮಾಡ್ಕೋಬಾರದು, ಏನಂತೀಯ"

ನಿಖಿಲ್ ಓಡಿ ಬಂದವನೇ "ಸೂಪರ್ ಐಡಿಯಾ ಆಮೀರ್" ಎಂದು ಕೈಕೊಟ್ಟ.
"ಗುರೂ ಬಿಡಬೇಡ, ನಿನ್ನ ಮಾತಿನ ಶೈಲಿನ ಇಲ್ಲಿ ಉಪಯೋಗಿಸು" ಎಂದು ನನಗೆ ಹೇಳಿದ.

ನಂಗಂತೂ ಒಂದೇ ಸಲ ಹುಮ್ಮಸ್ಸು ಬಂತು.
"ಎಲ್ಲರಿಗೂ ಪುಕ್ಸಟ್ಟೆ ಪಿಜ್ಜಾ, ಟ್ರೀಟ್ ಮಾತ್ರ ನಂ ಹೆಸರಲ್ಲಿ" ಮನಸ್ಸು ಒಂದು ಬಾರಿ ಕುಣಿಯಿತು.

ಇದೀಗ ಮನದಲ್ಲೇ ಏನು ಮಾತನಾಡಬೇಕು ಅಂತ ತೀರ್ಮಾನಿಸಿ ಪಿಜ್ಜಾ ಹುಡುಗನ ಬರುವಿಕೆಗಾಗಿ ಕಾಯತೊಡಗಿದೆ.
ಕೊನೆಗೂ ಪಿಜ್ಜಾಸೆಂಟರಿನ ಸ್ಕೂಟರ್ ನಮ್ಮ ಗೇಟಿನ ಹೊರಗೆ 45 ನಿಮಿಷಗಳ ನಂತರ ಬಂತು.
ಅದ್ಯಾಕೋ ಪೆಚ್ಚುಮೋರೆ ಹಾಕಿಕೊಂಡು ಆ ಹುಡುಗ ನಿಂತಿದ್ದ.
ನಾ ಅವನ ಬಳಿಗೆ ಹೋದವನೇ ಒಂದೇ ಸಮನೆ ಬೈಯೋಕೆ ಶುರು ಮಾಡಿದೆ.

"ಸ್ವಲ್ಪನಾದ್ರೂ ಟೈಮ್ ಸೆನ್ಸ್ ಇಲ್ವಾ ನಿಮ್ಮ ಪಿಜ್ಜಾ ಸೆಂಟರಿನವರಿಗೆ,
ದುಡ್ಡೂ ಕೊಟ್ಟು ತಲೇನೂ ಬೋಳಿಸ್‌ಕೊಂಡ್ರಂತೆ ಅದೆಲ್ಲೋ,ಹಾಗಾಗಿದೆ ನಮ್ ಕತೆ.
ಇಲ್ಲೇನೂ ಧರ್ಮಕ್ಕೆ ಪಿಜ್ಜಾ ತರ್ತಿಯ, ದುಡ್ಡು ಕೊಡಲ್ವಾ?
ನಂಗೆ ಬೇಡ.
ವಾಪಸ್ ತೆಗೆದುಕೊಂಡು ಹೋಗು,
ನಿಮ್ ಮ್ಯಾನೇಜರ್ ಗೆ ನಂಗೆ ಒಂದು ಮೇಲ್ ಕಳ್ಸೋಕೆ ಹೇಳು.
ನಂಗೆ ಗೊತ್ತು ನಿಮ್ಮನ್ನ ಎಲ್ಲಿ ವಿಚಾರಿಸ್ಕೋಬೇಕು ಅಂತ.
ಬರೋಬ್ಬರಿ ಮುಕ್ಕಾಲು ಘಂಟೆ ಆದ ಮೇಲೆ ತಂದಿದ್ದಿಯಾ"

ಪಿಜ್ಜಾ ಸೆಂಟರಿನ ಹುಡುಗ ತಡಬಡಾಯಿಸಿದ.
"ಸರ್ ಅದು ಹಾಗಲ್ಲ,
ಇಲ್ಲಿಗೆ ಡೆಲಿವರಿ ಮಾಡಬೇಕಿದ್ದ ಹುಡುಗ ನಾನಲ್ಲ, ಅದು.."

ನಾನು ಬಿಡಲಿಲ್ಲ, "ಏನ್ ಅದು ಇದು, ಅವನೇನು ಕತ್ತೆ ಮೇಯಿಸೋಕೆ ಹೋಗಿದ್ದಾನ,
ನಿಮ್ಗೆ ಬಿಸ್ನೆಸ್ ಮಿತಿಮೀರಿ ಬೆಳೆದಿದೆ ಅಂತ ಸೊಕ್ಕು, ಅದಕ್ಕೆ ಅಸಡ್ಡೆ"

ಕೊನೆಗೂ ನನ್ನ ಕೋಪದ ಮಾತಿನ ಪರಿ ಅವನಿಗೆ ತಟ್ಟಿತು ಅನ್ನಿಸುತ್ತೆ.
"ಸರ್ ಒಂದು ನಿಮಿಷ, ನಮ್ ಮ್ಯಾನೇಜರ್ ಗೆ ಒಂದು ಫೋನ್ ಮಾಡ್ತೀನಿ ಇರಿ" ಎಂದವನೇ ಆತನ ಮ್ಯಾನೇಜರ್ ಗೆ ಫೋನ್ ಮಾಡಿ,
ಅದೇನೋ ಒಂದು ನಿಮಿಷ ಮಾತಾಡಿದ.
ನಂತರ "ಸರ್, ನೀವೀಗ ಈ ಪಿಜ್ಜಾಗೇ ಏನು ದುಡ್ಡು ಕೊಡಬೇಕಿಲ್ಲ, ದಯವಿಟ್ಟು ತೆಗೆದುಕೊಳ್ಳಿ,
ತಡವಾದದ್ದಕ್ಕೆ ಕ್ಷಮೆಯಿರಲಿ" ಎಂದು ಹೇಳಿ ಪಿಜ್ಜಾಗಳ ಪೊಟ್ಟಣಗಳನ್ನು ನನ್ನ ಕೈಗಿತ್ತ.

ಆದರೂ ನಾನೇನೋ ಸಮಾಧಾನವಾಗದವನಂತೆ ನಟಿಸುತ್ತಾ,
"ಹೋಗಲಿ, ಆದರೆ ಅಷ್ಟಕ್ಕೇ ಸುಮ್ಮನಾಗುವವನಲ್ಲ ನಾನು,
ನಿಮ್ಮ ಮ್ಯಾನೇಜರ್ ನಿಂದ ಅಥವಾ ಅದ್ಯಾವನೋ ಡೆಲಿವೆರಿ ಮಾಡ್‌ಬೇಕಿತ್ತು ಅಂದೆಯಲ್ಲ ಅವನಿಂದ ಇನ್ನೆರಡು ದಿನಗಳಲ್ಲಿ ನನಗೊಂದು
ಕ್ಷಮೆ ಕೋರಿರೋ ಮೇಲ್ ಬೇಕು" ಎಂದೆ.

"ಆಯ್ತು ಸರ್ " ಎಂದ ಹುಡುಗ ಸ್ಕೂಟರ್ ಏರಿ ಮರೆಯಾದ.

ಅಷ್ಟು ಹೊತ್ತಿನವರೆಗೆ ಸುಮ್ಮನೇ ನನ್ನ ಹಿಂದೆ ನಿಂತಿದ್ದವರೆಲ್ಲ "ಹೋ" ಎಂದು ಖುಷಿಯಲ್ಲಿ ಕೂಗಿದರು.
"ಅದೇನು ಮಾತಾಡ್ತೀಯಾ ಗುರೂ,
ಹುಟ್ಟಿದಾಗ್ಲೇ ಆ ದೇವ್ರು ಮಾತಾಡೋ ಕಲೆ ನಿಂಗೆ ಕೊಟ್ಟವನೆ,
ನೋಡು ಬರೀ ಮಾತಲ್ಲೇ 5-6 ಸಾವಿರದ ಪಿಜ್ಜಾ ಫ್ರೀಯಾಗಿ ಕೊಡಿಸಿಬಿಟ್ಟೆಯಲ್ಲ, ಸೂಪರ್"

ನಂಗೆ ಗೆದ್ಡೆ ಎನ್ನುವ ಉತ್ಸಾಹದ ಜೊತೆಗೆ,
ನನ್ನ ಬುದ್ಧಿವಂತಿಕೆಯ ಬಗ್ಗೆ ನನಗೇ ಅಭಿಮಾನ ಹುಟ್ಟಿತ್ತು.
ಎಲ್ಲರೂ ಹೊಟ್ಟೆ ಬಿರಿಯುವಂತೆ, ತಂದ ಪಿಜ್ಜಾವನ್ನು ತಿಂದು ತೇಗಿದರು.
ತಿನ್ನುವಾಗ ಬರೀ ಉಚಿತ ಪಿಜ್ಜಾದ ಬಗ್ಗೆಯೇ ಮಾತು.

---------------------------------------------------------------------------------------------

ಈ ಘಟನೆ ನಡೆದು 4 ದಿನಗಳಾಗಿವೆ.ಪಿಜ್ಜಾ ವಿಷಯವಂತೂ ಮರೆತೇ ಹೋಗಿದೆ.
ಆಗ ನನ್ನ ಮೇಲ್‌ಬಾಕ್ಸ್ ಗೆ "ಪಿಜ್ಜಾ ಸೆಂಟರಿನಿಂದ ಕ್ಷಮಾಪಣೆ" ಎಂದು ಒಕ್ಕಣೆಯಿರುವ ಮೇಲೊಂದು ಬಂತು.

ಅದನ್ನು ತೆರೆದು ಓಡತೊಡಗಿದೆ.
"ಪ್ರಿಯ ಗ್ರಾಹಕ ಗುರೂಗೆ,
ಪಿಜ್ಜಾ ಸೆಂಟರಿನ ಡೆಲಿವರಿ ಹುಡುಗ ವೆಂಕಟೇಶ ಮಾಡುವ ವಂದನೆಗಳು.
ನನ್ನ ಸಹೋದ್ಯೋಗಿ ತಿಳಿಸಿದಂತೆ ತಾವೇ ಕೇಳಿದ ಕ್ಷಮಾಪಣಾ ಪತ್ರವನ್ನು ನಾನೀಗ ಬರೆದು ತಮ್ಮ ಮುಂದಿಡುತ್ತಿದ್ದೇನೆ.

ಇದೇ ಕಳೆದ ಸೋಮವಾರ ತಾವು ನೀಡಿದ ಪಿಜ್ಜಾ ಆರ್ಡರ್ ಡೆಲಿವರಿಯನ್ನು ನಾನು ಮಾಡಬೇಕಿತ್ತು.
ರೆಡಿಯಾಗಿದ್ದ ಪಿಜ್ಜಾವನ್ನು ನನ್ನ ಸ್ಕೂಟರಿನಲ್ಲಿಟ್ಟು ತಮ್ಮ ಆಫೀಸಿನ ಬಳಿ ಬರುತ್ತಿದ್ದೆ.
ದುರ್ವಿಧಿ ಯಾವ ಸಮಯದಲ್ಲಿ ಬೇಕಾದರೂ ನಮಗೆ ಅಘಾತ ನೀಡುತ್ತದೆ.
ನನಗೊಬ್ಬ ಎರಡೂವರೆ ವರ್ಷದ ಒಬ್ಬ ಮಗ.
ಆತ ಹುಟ್ಟಿದ ಒಂದೇ ವರ್ಷದಲ್ಲಿ ಮಾರುಕಟ್ಟೆಗೆ ತರಕಾರಿ ತರಲೆಂದು ಹೋದ ಆತನ ಅಮ್ಮ,
ಅರ್ಥಾತ್ ನನ್ನ ಮುದ್ದಿನ ಮಡದಿ ತಿರುಗಿ ಮನೆಗೆ ಬರಲಿಲ್ಲ.
ಬರುವ ದಾರಿಯಲ್ಲಿ ಆದ ಅಪಘಾತದಲ್ಲಿ ವಿಧಿ ಅವಳನ್ನು ನನ್ನಿಂದ ದೂರ ಮಾಡಿತು.
ನಂತರ ನನ್ನ ಮಗುವನ್ನು ನನ್ನ ತಾಯಿಯೇ ನೋಡಿಕೊಳ್ಳುತ್ತಿದ್ದರು.
ವಾರದ ಹಿಂದೆ ನನ್ನಮ್ಮ ಊಟ ಮಾಡಿಸುವಾಗ ಆಟವಾಡುತ್ತಿದ್ದ ನನ್ನ ಮುದ್ದು ಕಂದ, ಮಹಡಿಯಿಂದ ಬಿದ್ದು ತಲೆಗೆ ಗಂಭೀರ ಗಾಯ ಮಾಡಿಕೊಂಡಿತ್ತು.
ತುರ್ತು ನಿಗಾ ಘಟಕದಲ್ಲಿ ಆತನನ್ನು ಸೇರಿಸಲಾಗಿತ್ತು.
ಚಿಕಿತ್ಸೆಗೆ ದುಡ್ಡಿಲ್ಲದೇ ಅಂದು ಸಂಬಳದ ದಿನವಾದ್ದರಿಂದ ಕೆಲಸಕ್ಕೆ ಹಾಜರಾಗಿದ್ದೆ.

ನಿಮ್ಮ ಪಿಜ್ಜಾ ಡೆಲಿವೆರಿ ಮಾಡಬೇಕಾಗಿ ನಾನು ಹೊರಡಬೇಕಿತ್ತು.
ಆಗ ಆಸ್ಪತ್ರೆಯಿಂದ ನನ್ನ ತಾಯಿ ಕರೆ ಮಾಡಿ ಸಿಡಿಲ ವಾರ್ತೆಯನ್ನು ನನಗೆ ತಿಳಿಸಿದರು.
ನನ್ನ ಮುದ್ದು ಕಂದಮ್ಮನೂ ನನ್ನನ್ನು ಬಿಟ್ಟು ದೂರ ಆಗಲಿದ್ದ.
ಹೋಗುವ ಅವಸರದಲ್ಲಿ ನಾನು ನನ್ನ ಕೆಲಸವನ್ನು ಬೇರೆಯವರಿಗೆ ವಹಿಸಿ ತೆರಳಿದ್ದೆ.
ಅದಕ್ಕಾಗಿ ನಿಮಗೆ ಬರಬೇಕಿದ್ದ ಪಿಜ್ಜಾ ತಡವಾಯಿತು.

ತಡವಾಗಿದ್ದಕ್ಕೆ ನನ್ನ ಕಂಪನಿ ನಿಮಗೆ ತಲುಪಬೇಕಿದ್ದ ಪಿಜ್ಜಾವನ್ನು ನಿಮಗೆ ಉಚಿತವಾಗಿ ಕೊಟ್ಟಿದೆ.
ತಾವು ಪಿಜ್ಜಾವನ್ನು ತಿಂದು ಆನಂದಿಸಿದರೆಂದು ನಾವು ಭಾವಿಸುತ್ತೇವೆ.
ನಷ್ಟ ಭರಿಸಲಿಕ್ಕಾಗಿ ನನ್ನ ಸಂಬಳದಿಂದ ಆ ಹಣವನ್ನು ಹಿಡಿದುಕೊಳ್ಳಲಾಗಿದೆ.
ಇನ್ನು ಮುಂದೆ ತಮ್ಮ ಪಿಜ್ಜಾ ತಡವಾಗದಂತೆ ನಮ್ಮ ಕಂಪನಿ ಎಚ್ಚರ ವಹಿಸುತ್ತದೆ ಎಂಬುದನ್ನು ತಮಗೆ ತಿಳಿಸಲು ಇಚ್ಛಿಸುತ್ತೇನೆ.

ಇಂತಿ ವಂದನೆಗಳೊಂದಿಗೆ,
ವೆಂಕಟೇಶ,
ಡೆಲಿವೆರಿ ಬಾಯ್,
ಪಿಜ್ಜಾ ಸೆಂಟರ್"

ಎಲ್ಲರಿಗೂ ಅದರ ಬಗ್ಗೆ ಹೇಗೆ ಹೇಳುವುದು, ಅರ್ಥವಾಗಲಿಲ್ಲ.
ಹೊಟ್ಟೆಯೊಳಗೆ ಏನೋ ಕಲಕಿದಂತಾಯ್ತು.
ಜೊತೆಗೆ ಕಣ್ಣಂಚಿನಲ್ಲಿ ನೀರ ಹನಿಯೊಂದು ತೊಟ್ಟಿಕ್ಕಿತು.
---------------------------------------------

--ಪರಿಕಲ್ಪನೆ
ಸಂತು

(ಗೆಳೆಯರೇ,
ಇಲ್ಲಿ ಉಲ್ಲೇಖಿಸಿದ ಪಿಜ್ಜಾ ಸೆಂಟರ್ ಮತ್ತು ಪಾತ್ರಧಾರಿಗಳೆಲ್ಲ ಬರೀ ಕಲ್ಪನೆ ಮಾತ್ರ.
ಇಲ್ಲಿ ಕಾರ್ಪೊರೇಟ್ ವಾತಾವರಣದ ಪರಿಚಯ ಮಾಡಿಸಲಿಕ್ಕಾಗಿ ಕೆಲವು ಸಂಭಾಷಣೆಗಳಲ್ಲಿ ಆಂಗ್ಲ ಭಾಷೆಯನ್ನು
ಉದ್ದೇಶಪೂರ್ವಕವಾಗಿ ಬಳಸಲಾಗಿದೆ.
ವ್ಯಂಗ್ಯವಾಗಿಯೇ ಕತೆಯ ಹೇಳುತ್ತಾ ಕೊನೆಗೆ ಹೇಳಲೇಬೇಕಾದ ಗಂಭೀರ ವಿಷಯವನ್ನು ವಿಭಿನ್ನವಾಗಿ ಹೇಳುವ ಪ್ರಯತ್ನ ಮಾಡಿದ್ದೇನೆ.
ಜೊತೆಗೆ ನೀತಿಯೊಂದು ಅಪ್ರಸ್ತುತವಾಗಿ ನಮ್ಮ ತಲೆಯಲ್ಲಿ ಈ ಕತೆ ಮುಗಿಯುವಾಗ ಬಂದು ಹೋಗುತ್ತದೆ.
ತಮಗೆ ಇಷ್ಟವಾಗುತ್ತದೆಂಬ ನಂಬಿಕೆಯೊಂದಿಗೆ, -ಸಂತು )

Sunday, August 19, 2012

ವ್ಯರ್ಥ

(ಚಿತ್ರಕೃಪೆ: google)
ಕುಡಿಯಲೋದ ಕರುವನೆಳೆದು,
ಕಂಬದಲ್ಲಿ ಕಟ್ಟಿಹಾಕಿ,
ತಾಯಮೊಲೆಯ ಹಿಂಡಿ ಕರೆದು,
ಹಾಲು ತಂದು ಮೊಸರ ಮಾಡಿ,
ಮೊಸರ ಗಡಿಗೆ ಕೆಳಗೆ ಬೀಳೆ,
ವ್ಯರ್ಥವಾಯಿತೇ, ಇಲ್ಲ ಅರ್ಥವಾಯಿತೇ?

ನೆರೆಯ ಹೊರೆಯ ಹೊಟ್ಟೆಯುರಿಸಿ,
ಒಡವೆ ಕಾಸು ಗೂಡಲಿರಿಸಿ
ಪರರ ವ್ಯಥೆಗೆ ಕುರುಡನಾಗಿ,
ತನಗೆ ತಾನೇ ಮಿತ್ರನಾಗಿ,
ಕೊನೆಗೆ ಎದೆಗೆ ತೂತು ಬೀಳೆ,
ವ್ಯರ್ಥವಾಯಿತೇ, ಇಲ್ಲ ಅರ್ಥವಾಯಿತೇ?

ಪೈಸೆ ದುಡಿದು ಗಂಜಿ ಕುಡಿದು,
ಒಡೆದ ಮನಗಳೆಲ್ಲ ಬೆಸೆದು,
ಕಷ್ಟಸುಖದಿ ಭಾಗಿಯಾಗಿ,
ಎಲ್ಲ ಜನಗಳಣ್ಣನಾಗಿ,
ದೇಹವಳಿದು ಹೆಸರು ಉಳಿಯೇ,
ವ್ಯರ್ಥವಾಯಿತೇ, ಇಲ್ಲ ಅರ್ಥವಾಯಿತೇ?

Thursday, August 9, 2012

ಓಹ್ ಒಲಿಂಪಿಕ್!!

(ಚಿತ್ರಕೃಪೆ: google)
ಕೈಯಲ್ಲೊಂದು ಹಾಳೆ ಜತೆಗೆ ಪೆನ್ನು. ಏಕೋ ಏನೋ ಗೀಚಬೇಕೆನಿಸಿತು.
ಇದೇ ವಿಷಯ ಕಳೆದ ತಿಂಗಳಿನಿಂದ ತಲೆ ಕೊರೆಯುತ್ತಿದೆ.

"ಇಂಗ್ಲೆಂಡ್ ನಲ್ಲಿ ೨೦೧೨ರ ಒಲಿಂಪಿಕ್ ನಡೆಯುತ್ತಿದೆ.
ಕ್ಯೂಬ,ಉಕ್ರೇನ್, ಹಂಗೇರಿ,ಕಝಕ್ ಸ್ತಾನ್ ಈ ರಾಷ್ಟ್ರಗಳೆಲ್ಲ ಎಷ್ಟು ದೊಡ್ಡದಿವೆ?
ನಮ್ಮ ಭಾರತದ ಅರ್ಧದಷ್ಟಿವೆಯಾ?
ಕೊನೆಯ ಪಕ್ಷ ನಮ್ಮ ದೇಶದ ಯಾವುದಾದರೊಂದು ರಾಜ್ಯದಷ್ಟಿದೆಯಾ?
ಅವುಗಳ ಜನಸಂಖ್ಯೆಯಾದರೂ ಎಷ್ಟು?
ಇಡೀ ರಾಷ್ಟ್ರದ ಒಟ್ಟು ಜನಸಂಖ್ಯೆ ನಮ್ಮ ದೇಶದ ಯಾವುದಾದರೊಂದು ಮಹಾನಗರದ ಒಟ್ಟು ಜನಸಂಖ್ಯೆಗಿಂತ ಹೆಚ್ಚಿರಲಾರದು!!

ಆದರೂ ಆ ರಾಷ್ಟ್ರಗಳ ಕ್ರೀಡಾಪಟುಗಳ ಹುರುಪು ನೋಡಿ.
ಈಗಾಗಲೇ ಆ ದೇಶಗಳು ಒಂದಷ್ಟು ಚಿನ್ನ, ಬೆಳ್ಳಿ ಹಾಗೂ ಕಂಚು ಪದಕಗಳನ್ನು ಗೆದ್ದಾಗಿವೆ.
ಇನ್ನೂ ಗೆಲ್ಲುತ್ತಲೂ ಇವೆ.

ಇನ್ನು ಅಮೇರಿಕ ಹಾಗೂ ಚೀನಾ ದೇಶಗಳ ಜೊತೆ ಚಿನ್ನದ ಪದಕಗಳ ಹೋಲಿಕೆಯಂತೂ ಮಾಡ ಹೊರಟವ ಮೂರ್ಖನೇ ಸರಿ.
ಏನಾಗಿದೆ ನಮ್ಮ ಕ್ರೀಡಾಪಟುಗಳಿಗೆ?
ಒಂದೆರಡು ಬೆಳ್ಳಿ, ಒಂದೆರಡು ಕಂಚು!!
ಒಂದೊಂದು ರಾಜ್ಯದ ಜನಗಳು ಒಂದೊಂದು ಕ್ರೀಡೆಯಲ್ಲಿ ಪಳಗಿ ಒಲಿಂಪಿಕ್ ನಲ್ಲಿ   ಭಾಗವಹಿಸಿದರೂ ಯಾವ ಕ್ರೀಡೆಯಲ್ಲೂ ನಮ್ಮ ಭಾರತದವರು ಇಲ್ಲದೇ ಹೋಗುವುದಿಲ್ಲ. ಅಲ್ಲವೇ?
ಹೇಗಿದ್ದರೂ ಒಂದಷ್ಟು ಪದಕಗಳಂತೂ ಗ್ಯಾರಂಟಿ.

ಛೇ.
ಏನು ಮಾಡುತ್ತಿದ್ದಾರೆ ನಮ್ಮ ದೇಶದವರೆಲ್ಲ.ಎಲ್ಲ ಸೋಮಾರಿಗಳು.
ಏನಾಗಿದೆ ಇವರಿಗೆ ಧಾಡಿ?"

ಇನ್ನೇನು ನನ್ನ ಲೇಖನ ಮುಗಿಯಬೇಕಿತ್ತು.

"ಅಲ್ಲಪ್ಪಾ ಮಹಾರಾಯ, ಇನ್ನೊಂದು ಸಲ ನೀನೇನು ಬರೆದಿದ್ದೀಯಾ ಯೋಚಿಸಿ ಹೇಳು"
ಇದ್ಯಾರ ಧ್ವನಿ?
ಓಹ್ ನನ್ನ ಮನಸ್ಸು ಮಾತನಾಡುತ್ತಿದೆ!!

ನಾನೂ ಬಿಡಲಿಲ್ಲ, ಕೇಳಿದೆ "ಯಾಕಪ್ಪಾ, ನಾನೇನು ತಪ್ಪು ಬರೆದಿದ್ದೀನಿ"
ಮನಸು, "ಈ ದೇಶದ ಜನಗಳು ಸೋಮಾರಿ ಎಂದೆಯಾ? ಅದು ಸರೀನಾ?"
ನಾನು, "ಮತ್ತಿನ್ನೇನು ಏನಾಗುತ್ತೆ ಇವರ ಕೈಲಿ, ಕಷ್ಟದ ಕೆಲಸ ಯಾವುದೂ ಆಗಬಾರದು.
 ಏನೂ ಮಾಡದೇ ಚಿನ್ನದ ಪದಕ ಬಾ ಅಂದ್ರೆ ಬರುತ್ಯೆ?,
ನಾನೇನು ತಪ್ಪು ಹೇಳಿದೆ?
ನಂಗೂ ದೇಶದ ಮೇಲೆ ಭಕ್ತಿ ಇದೆ, ಪ್ರೀತಿ ಇದೆ.
ನಮ್ಮ ದೇಶದ ಹೆಸರು ಒಲಿಂಪಿಕ್ ಪದಕಗಳ ಪಟ್ಟಿಯಲ್ಲಿ ಚೀನಾ ಅಮೇರಿಕಗಳ ತರಹ ಅಗ್ರಸ್ತಾನದಲ್ಲಿ ಇರಬೇಕು ಅನ್ನೋ ಆಸೆ ಇದ್ದರೆ ಅದು ತಪ್ಪೇ"

ಮನಸು  ಯೋಚಿಸಿ ಹೇಳಿತು,"ಪುಣ್ಯಾತ್ಮ, ನಿಂದೆಲ್ಲ ವಾದವನ್ನು ಒಪ್ಪುತ್ತೀನಿ.
ನಂಗೂ ನಮ್ಮ ದೇಶದ ಹೆಸರು ಪದಕಗಳ ಪಟ್ಟಿಯಲ್ಲಿ ರಾರಾಜಿಸಬೇಕು ಅನ್ನೋ ಆಸೆ ಇದೆ.
ನಾನೂ ಈ ದೇಶದ ಅಪ್ಪಟ ಪ್ರೇಮಿ. ನಾನು ಕೂಡ ನಿನ್ನ ತರಹ ಯೋಚನೆ ಮಾಡುತ್ತೇನೆ.
ಇಷ್ಟೆಲ್ಲಾ  ರಾಜಕೀಯ ಪುಡಾರಿಗಳ ತರಹ ಭಾಷಣ ಬಿಗಿಯೋ ನೀನು,
ನೀನೇ ಯಾಕೆ ಆ ಕೆಲ್ಸ ಮಾಡಬಾರದು?
ನೀನೇ ಯಾಕೆ ಯಾವುದಾದರೊಂದು ಕ್ರೀಡೆಯಲ್ಲಿ ಪಳಗಿ ಒಲಿಂಪಿಕ್ ನಲ್ಲಿ ಸ್ಪರ್ಧಿಸಬಾರದು?
ಎಂಟು ಗಂಟೆಗೆ ಹೋಗಬೇಕಾದ ಆಫೀಸಿಗೆ, ಎಂಟೂವರೆಗೆ ಎದ್ದು ತಡಬಡಾಯಿಸಿಕೊಂಡು ಹೋಗುವ ಜಾಯಮಾನದವನು ನೀನು.
ಕೊನೆಯ ಪಕ್ಷ ಯಾವುದಾದರೊಂದು ಸ್ಪರ್ಧೆಯಲ್ಲಿ ಭಾಗವಹಿಸುತ್ತೇನೆಂದು ಎದೆ ತಟ್ಟಿ ಹೇಳಿನೋಡು.
ಕೊನೆಯ ಪಕ್ಷ ಒಲಿಂಪಿಕ್ ಬೇಡ, ನಿನ್ನದೇ ಏರಿಯಾದ ಆಟಗಾರರೊಂದಿಗೆ ಜಯಿಸಿ ನೋಡು.
ಆಗ ಗೊತ್ತಾಗುತ್ತದೆ, ನಿನಗೆ ಅದಕ್ಕೆ ಬೇಕಾದ ಶ್ರಮ!!
ಆ ಆಟಗಾರರೋ, ಕೊನೆಯ ಪಕ್ಷ ಬೆಳ್ಳಿ,ಕಂಚು ಪದಕಗಳನ್ನಾದರೂ ಪಡೆದಿದ್ದಾರೆ.
ನೀನೇನು ಮಾಡಿದ್ದೀಯಾ?
ಈಗ ಯೋಚಿಸು, ಬರೀ ತಪ್ಪು ಹುಡುಕುವುದರಲ್ಲಿ ಕಾಲ ಕಳೆಯುತ್ತೀಯೋ?
ಅಥವಾ ಇನ್ನೇನಾದರೂ ಸರಿಯಾದ ಕೆಲಸ ಮಾಡುತ್ತೀಯೋ.
ಯೋಚಿಸಿ ನೋಡು!!"

ಹೀಯಾಳಿಸಿ ಬರೆದಿದ್ದ ಹಾಳೆಯನ್ನು ಪರ್ರನೆ ಹರಿದು ಹಾಕಿ,
ಮತ್ತೊಂದು ಹೊಸ ಹಾಳೆಯ ಮೇಲೆ ಬರೆಯತೊಡಗಿದೆ....

"ಪದಕ ಗೆದ್ದ ಭಾರತಾಂಬೆಯ ಪುತ್ರರಿಗೆ ಅಭಿನಂದನೆಗಳು!!
ಅಮ್ಮನ ಕೀರ್ತಿ ಎತ್ತಿ ಹಿಡಿಯುವ ನಿಮ್ಮ ಈ ಕಾರ್ಯ ಹೀಗೆಯೇ ಸಾಗುತಿರಲಿ,
ಜೈ ಭಾರತ ಮಾತೆ".

ಮನಸ್ಸು ಮುಗುಳ್ನಗುತ್ತಿತ್ತು:)

                                                                                                              --ಪರಿಕಲ್ಪನೆ
                                                                                                             ಸಂತು.