ಊಟ ಮಾಡುತ್ತಿರುವಾಗ ಏನಾದರೂ ಕೆಮ್ಮಿದರೆ,
ಏನಾದರೂ ನಮ್ಮ ಗೆಳೆಯರೋ ಅಥವಾ ಸಹೋದ್ಯೋಗಿಗಳೋ ಒಂದು ಲೋಟ ನೀರು ತಂದು ಕೊಟ್ಟರೆ ಸಾಕು.
"ಥ್ಯಾಂಕ್ಸ್ ರೀ, ತುಂಬಾ ಥ್ಯಾಂಕ್ಸ್" ಅಂತ ಹಲವು ಬಾರಿ ಹೇಳಿರುತ್ತೇವೆ.
ಅದೇ ನಮ್ಮ ಮನೆಯಲ್ಲಿ ಅಂತಹ ಸಾವಿರಾರು ಉಪಕಾರಗಳು ನಡೆದಿರುತ್ತವೆ.
ಉದಾಹರಣೆಗೆ, ಕಛೇರಿ ಮುಗಿಸಿ ಮನೆಗೆ ಬರುವವರೆಗೆ ಹಸಿವಿದ್ದರೂ ಊಟಕ್ಕಾಗಿ ಕಾಯುವ ಮಡದಿ.
ಮಗನ ಫೀಸು ಕಟ್ಟಬೇಕೆಂದು ಹಬ್ಬಗಳಿಗೂ ಯಾವುದೇ ಹೊಸಬಟ್ಟೆ ಕೊಳ್ಳದ ಅಪ್ಪ.
ಮಗ ಊಟ ಮಾಡಲಿ ಅಂತ ಮೊಸರು, ತುಪ್ಪ ತಿನ್ನದೇ ಎತ್ತಿಡುವ ಅಮ್ಮ!!
ಕೊಂಚ ತಲೆನೋವಿದೆ ಎಂದ ಮಾತ್ರಕ್ಕೆ ಅದೆಷ್ಟೇ ದೂರವಿದ್ದರೂ ನಡೆದು ಹೋಗಿ ಮಾತ್ರೆ ತರುವ ತಮ್ಮ.
ಊರಿಗೆ ಹೊರಡುತ್ತಾರೆಂದು ಬೆಳಗಾಗುವ ಮೊದಲೇ ಕಾರು ತೊಳೆದು ಅಚ್ಚರಿ ತೋರುವ ಬಾವ!!
ವಿದೇಶಕ್ಕೆ ಹೋಗುತ್ತಾರೆಂದು ನಾವು ಕೇಳದಿದ್ದರೂ ಚಿತ್ರಾನ್ನದ ಗೊಜ್ಜು ಮಾಡಿ ಕೊಡುವ ಅತ್ತೆ.
ಹೀಗೆ ಹೇಳುತ್ತಾ ಹೋದರೆ ನಮ್ಮ ಮನೆಯವರ ಬಗ್ಗೆ ಪುಟಗಟ್ಟಲೆ ಬರೆದುಬಿಡಬಹುದು.
ಹೀಗೆ ಎಷ್ಟೋ ಸಲ ಇಂತಹ ಅನೇಕ ತ್ಯಾಗಗಳು, ಉಪಕಾರಗಳು ನಮ್ಮ ಕಣ್ಣ ಮುಂದೆ ನಡೆದಿದ್ದರೂ ಕುರುಡರಂತೆ ಸುಮ್ಮನಿದ್ದುಬಿಡುತ್ತೇವೆ.
ಮಧ್ಯಾಹ್ನದ ಊಟದ ಡಬ್ಬಿ ಮರೆತಿದ್ದಾನೆಂದು, ಕಾಲೇಜಿನವರೆಗೆ ಬಂದು ಕೆಲಸದ ಮದ್ಯದಲ್ಲೂ ಅಪ್ಪ ಡಬ್ಬಿ ಕೊಟ್ಟು ಹೋದರೆ,
ಯಾಕೆ ಬಂದೆ ಅಂತ ಪ್ರಶ್ನೆ ಹಾಕುತ್ತೇವೆಯೇ ಹೊರತು ಅವರ ಶ್ರಮಕ್ಕೆ ಮನಸ್ಸಿನಲ್ಲಿ ಒಂದು ಕೃತಜ್ಞತಾ ಭಾವ ಮೂಡಿರುವುದಿಲ್ಲ.
ನಾನು ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಓದುತ್ತಿದ್ದ ಸಮಯದಲ್ಲಿ ಒಬ್ಬನೇ ಒಂದು ಬಾಡಿಗೆ ಮನೆಯಲ್ಲಿ ವಾಸವಾಗಿದ್ದೆ.
ಒಂದು ದಿನ ಅದೆಂತಹ ಜ್ವರ ಬಂದಿತ್ತೆಂದರೆ 24 ಘಂಟೆಗಳ ಕಾಲ ಊಟ,ತಿಂಡಿ ಇಲ್ಲದೇ ಪ್ರಜ್ಞೆಯೇ ಇಲ್ಲದವನಂತೆ ಬಿದ್ದುಕೊಂಡಿದ್ದೆ.
ಅಂದೇನೋ ಜಮೀನಿನ ಕೆಲಸದಲ್ಲಿ ಮಗ್ನರಾಗಿದ್ದ ಅಪ್ಪ ಅಮ್ಮ ಫೋನು ಮಾಡಿರಲಿಲ್ಲ.
ಅವತ್ತು ನನಗರ್ಥವಾಗಿದ್ದು, ಬಂಧು-ಬಳಗವೆನ್ನುವವರು ನಮ್ಮ ಯೋಗಕ್ಷೇಮ ವಿಚಾರಿಸಿಕೊಳ್ಳಲು ಇಲ್ಲದಿದ್ದರೆ ನಮ್ಮ ಪಾಡು ಹೇಗಿರುತ್ತದೆಂದು!!
ಏನಾಯಿತು ಬಿಡು, ಏನು ಸುಮ್ಮನೆ ಮಾಡುತ್ತಾರೆಯೇ? ಮನೆಯವರಲ್ಲವೇ? ಅಂತ ನಮ್ಮ ಮನಸ್ಸಿಗೆ ಯಾವತ್ತಾದರೂ ಅನ್ನಿಸುತ್ತಾ?
ಹಾಗಿದ್ದರೆ ಬಹುಶಃ, ಆ ರೀತಿಯ ಪ್ರೀತಿ ತೋರಿಸುವವರನ್ನು,ನಮ್ಮ ಖುಷಿಗೋಸ್ಕರ ಕಷ್ಟಪದುವವರನ್ನು ನಾವು ಕಳೆದುಕೊಂಡಾಗಲೇ ಅದರ ಬೆಲೆ ಗೊತ್ತಾಗುವುದು.
ಕೊಂಚ ನಮ್ಮ ಬಗ್ಗೆ ನಾವೇ ಈ ರೀತಿಯ ಪ್ರಶ್ನೆ ಕೇಳಿಕೊಂಡಾಗ ಅದರ ಅರಿವು ನಮಗಾಗುತ್ತದೆ.
ಟೈಮಿಗೆ ಸರಿಯಾಗಿ ರುಚಿರುಚಿಯಾಗಿ ಊಟ ಮಾಡಿಕೊಡುವ ಹೆಂಡತಿಯ ಮೇಲೆ ಖಾರ ಇಲ್ಲ,ಉಪ್ಪಿಲ್ಲ, ಹುಳಿ ಜಾಸ್ತಿಯಾಯ್ತು ಅಂತ ಸುಳ್ಳೇ ದರ್ಪ ತೋರುತ್ತೇವೆ!!
ಬೇರೆ ಯಾವುದೋ ಊರಿಗೆ ಒಬ್ಬಂಟಿಯಾಗಿ ಹೋಗಿ, ಅಲ್ಲಿಯ ಊಟಕ್ಕೆ ನಾಲಿಗೆ ಹೊಂದಿಕೊಳ್ಳದೆ,
ಎಂಟ್ಹತ್ತು ಬಾರಿ ಪುಳಿಯೋಗರೆ ತಿನ್ನುವಷ್ಟರ ಹೊತ್ತಿಗೆ ಹೆಂಡತಿಯ ಮೇಲೆ ತೋರುತ್ತಿದ್ದ ದರ್ಪ ಮುಕ್ಕಾಲು ಇಳಿದು ಹೋಗಿರುತ್ತದೆ:)
ಸರಿನಪ್ಪ, ಈಗೇನು ಮಾಡೋಣ? ಏನೂ ಬೇಡ.
ಅವರು ನಿಮಗಾಗಿ ಮಾಡುತ್ತಿರುವ ಈ ರೀತಿಯ ಸಹಾಯಗಳನ್ನು ಮನಸ್ಸಿನಲ್ಲೇ ಯೋಚಿಸಿ.
ಯಾವತ್ತಾದರೊಂದು ದಿನ ಅದರ ಬಗ್ಗೆ ಮಾತನಾಡಿ, ಅವರ ಸೇವೆಗಳಿಗೆ, ಪ್ರೀತಿಗೆ ಒಂದು ಥ್ಯಾಂಕ್ಸ್ ಹೇಳಿ.
ಯಾವತ್ತೋ ಒಂದು ದಿನ ಅಚಾನಕ್ಕಾಗಿ ಅವರುಗಳಿಗೆ ಚಿಕ್ಕದೊಂದು surprise ಕೊಡಿ.
ಅವರು ನಿರೀಕ್ಷಿಸಿರದ ಹಬ್ಬದಲ್ಲಿ ಅವರಿಗಾಗಿ ಒಂದು ಚಿಕ್ಕ ಉಡುಗೊರೆ ತಂದುಕೊಡಿ.
ಉಡುಗೊರೆ ದುಬಾರಿಯದ್ದೇ ಆಗಿರಬೇಕಿಲ್ಲ, ಅದರಲ್ಲಿ ನಿಮ್ಮ ದುಬಾರಿ ಪ್ರೀತಿಯಿರಬೇಕು ಅಷ್ಟೇ:)
ಇದು ಕೇವಲ ಉಡುಗೊರೆ ಪಡೆದವರಿಗಷ್ಟೇ ಸಂತೋಷ ಕೊಡುವುದಿಲ್ಲ.
ಉಡುಗೊರೆ ಕೊಟ್ಟ ನಿಮ್ಮ ಮನಸ್ಸೂ ನಿಮಗೊಂದು ಥ್ಯಾಂಕ್ಸ್ ಹೇಳುತ್ತದೆ, ಇವತ್ತು ಸರಿಯಾದ ಕೆಲಸ ಮಾಡಿದ್ದೀಯ ಅಂತ ಹೇಳುತ್ತಾ..!!
-ಸಂತು
No comments:
Post a Comment
Please post your comments here.