Tuesday, March 24, 2020

ಮಾಫಿಯಾ- ಚಾಪ್ಟರ್ 1.....(2020) (Tamil Cinema)



ಮಾಫಿಯಾ- ಚಾಪ್ಟರ್ 1

ಕಾರ್ತಿಕ್ ನರೇನ್! ತನ್ನ ಇಪ್ಪತ್ತೆರಡನೆಯ ವಯಸ್ಸಿಗೆ "ದುರುವಂಗಳ್ ಪದಿನಾರು" ಅನ್ನುವ ರೋಚಕ ಸಸ್ಪೆನ್ಸ್ ಥ್ರಿಲ್ಲರ್ ಕಥೆಯುಳ್ಳ ತಮಿಳು ಸಿನಿಮಾವೊಂದನ್ನು ಕೊಟ್ಟು ಎಲ್ಲರಿಂದಲೂ ಪ್ರಶಂಸೆ ಗಳಿಸಿದವ. ಆ ಸಿನಿಮಾ ನೋಡಿದರೆ ನೀವು ನಿಜವಾಗಿಯೂ ಅಷ್ಟು ಚಿಕ್ಕವ ಅಷ್ಟು ಅಚ್ಚುಕಟ್ಟಾದ ಸಿನಿಮಾ ನಿರ್ದೇಶಿಸಿದ್ದಾನೆ ಅಂದು ನಂಬಲಾರಿರಿ. ದೃಶ್ಯಗಳ ಪ್ರತೀ ಪುಟ್ಟ ಪುಟ್ಟ Detail ಗಳಿಗೆ ಎಷ್ಟು ಮಹತ್ವ ಕೊಡುತ್ತಾನೆ ಅಂತ ಆ ಸಿನಿಮಾದಲ್ಲಿ ತಿಳಿಯುತ್ತದೆ. ಅಷ್ಟೇ ಅಲ್ಲ. ಅನೇಕ ಯುವ ನಿರ್ದೇಶಕರುಗಳಿಗೆ ಆ ಸಿನಿಮಾ ಪ್ರೇರಣೆಯಾಗಿದೆ.

ಆತನ ಮುಂದಿನ ಸಿನಿಮಾ ಕಳೆದ ತಿಂಗಳು ಬಿಡುಗಡೆಯಾದ "ಮಾಫಿಯಾ-ಚಾಪ್ಟರ್ 1". ಮಾದಕ ದ್ರವ್ಯಗಳ ಸಾಗಣೆಯನ್ನು ತಡೆಗಟ್ಟಿ ನಗರವನ್ನು ಮಾದಕ ವಸ್ತುಗಳ ರಹಿತ ನಗರವನ್ನಾಗಿಸಿ ಅದರ ಮೂಲಕವೇ ಆಗಬಹುದಾದ ಅಪರಾಧವನ್ನು ತಡೆಗಟ್ಟಬೇಕು ಅನ್ನುವ ಇರಾದೆ ಹೊಂದಿದ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋದ ಅಧಿಕಾರಿ ಆರ್ಯನ್. ಸಹಜವಾಗಿಯೇ ಕೋಟ್ಯಾಂತರ ರೂಪಾಯಿ ವ್ಯವಹಾರವುಳ್ಳ ಈ ದಾರಿಯಲ್ಲಿ ಆತ ಎದುರಿಸುವ ಸವಾಲುಗಳೇನು ಅನ್ನುವುದೇ ಈ ಸಿನಿಮಾದ ಕಥೆ.

ಈ ಸಿನಿಮಾದಲ್ಲೂ ಅಷ್ಟೇ. ಕಥೆಯಲ್ಲಿ ಹೊಸತು ಅನ್ನುವುದು ಅಂಥದ್ದೇನಿಲ್ಲ ಅನಿಸಿದರೂ ಪ್ರೇಕ್ಷಕನಿಗೆ ಆ ಸಿನಿಮಾ ಕೊಡುವ ಅನುಭವವೇ ಬೇರೆ. ಎಲ್ಲೂ ಕಥೆ ಜಾಳು ಜಾಳು ಎನಿಸಿಕೊಳ್ಳುವುದಿಲ್ಲ. ನಾಯಕನಾಗಿ ಅರುಣ್ ವಿಜಯ್ ಮತ್ತು ಮಾಫಿಯಾ ಡಾನ್'ನ ಪಾತ್ರದಲ್ಲಿ ಪ್ರಸನ್ನ ಇಬ್ಬರದೂ ಪೈಪೋಟಿಯಿದ್ದಂತೆ ಅದ್ಭುತ ಅಭಿನಯ. ಹಿನ್ನೆಲೆ ಸಂಗೀತವೇ ಮಾದಕ ದ್ರವ್ಯಗಳ ಸಾಮ್ರಾಜ್ಯದ ಅಮಲನ್ನು ಕೊಡುತ್ತದೆ.

ಕಥೆ ಮುಗಿಯಿತು ಎನ್ನುವಾಗ ಖುದ್ಧು ಖಳನಾಯಕನೇ "ನೀನೀಗ ಮುಗಿಸುತ್ತಿರುವುದು ಕೇವಲ ಒಂದು ತುಣುಕನ್ನಷ್ಟೇ. ದೊಡ್ಡ ದೊಡ್ಡ ದೊರೆಗಳೇ ನಿನಗೆ ಪಾಠ ಕಲಿಸಲು ಕಾಯುತ್ತಿದ್ದಾರೆ" ಅಂದು ಮುಂದಿನ ಕಥೆಗೆ ಒಳ್ಳೆಯ ಪೀಠಿಕೆ ಹಾಕಿಕೊಡುತ್ತಾನೆ. ಆಗಲೇ ಮುಂದಿನ ಸಿನಿಮಾಗೆ ನಿರ್ದೇಶಕ ಖಳನಾಯಕ ಯಾರಿರಬಹುದೆಂದು ಪರಿಚಯವನ್ನೂ ಮಾಡುತ್ತಾರೆ. ಮುಂದಿನ ಚಾಪ್ಟರ್'ನಲ್ಲಿ ಸಿನಿಮಾ ಇನ್ನೂ ರೋಚಕವಾಗಿರುವುದರಲ್ಲಿ ಯಾವುದೇ ಅನುಮಾನವಿಲ್ಲ.

ನೋಡಿರದಿದ್ದರೆ ನೋಡಿ. ಅಮೇಜಾನ್ ಪ್ರೈಮ್'ನಲ್ಲಿದೆ.

-Santhosh Kumar LM
24-Mar-2020


Sunday, March 22, 2020

Contagion (2011).... English...Movie

2020ರಲ್ಲಿ ಏನಾಗುತ್ತದೆ ಅಂತ ಹೇಳಲು ಈ ಸಿನಿಮಾ ಮಾಡಿದ್ದರಾ?





http://avadhimag.com/?p=226435




Contagion (2011) (English, Action, Drama, Sci-Fi Thriller)




Height of Coincidence ಅಂದರೆ ಏನೆಂದು ಈ ಸಿನಿಮಾ ನೋಡಿಯೇ ಅರಿಯಬೇಕು! ಈ ಸಿನಿಮಾದ ನಿರ್ದೇಶಕರು ಏನಾದರೂ Time-Travel ಮಾಡಿ ಹತ್ತು ವರ್ಷ ಮುಂದಕ್ಕೆ ಹೋಗಿ 2020ರಲ್ಲಿ ಏನಾಗುತ್ತದೆ ಅಂತ ತಿಳಿದುಕೊಂಡು, ವಾಪಸ್ಸು ಹೋಗಿ ಈ ಸಿನಿಮಾ ಮಾಡಿದ್ದರಾ? ಗೊತ್ತಿಲ್ಲ. ಅಥವಾ ಯಾವುದಾದರೂ ವಿಶ್ವವಿಖ್ಯಾತ ಜ್ಯೋತಿಷಿಯನ್ನು ಭೇಟಿಯಾಗಿ ಮುಂದೇನಾಗಬಹುದು ಅನ್ನುವ ವಿಚಾರ ತಿಳಿದುಕೊಂಡು ಈ ಸಿನಿಮಾ ಮಾಡಿದ್ರಾ? ಗೊತ್ತಿಲ್ಲ.




ಹೀಗೆ ನಿಮಗೂ ಅನ್ನಿಸಬೇಕು ಅನ್ನುವ ಅನಿಸಿಕೆಯಿದ್ದರೆ 2011 ಬಿಡುಗಡೆಯಾದ ಇಂಗ್ಲೀಷ್ ಸಿನಿಮಾ Contagion ಅನ್ನು ನೋಡಲೇಬೇಕು. ನೋಡಿದ ಮೇಲೆ ಈಗ ನಡೆಯುತ್ತಿರುವ ಕೊರೋನಾ ವಿಪತ್ತಿನ ಬಗ್ಗೆ ಒಂದು ಒಳನೋಟ ಸಿಗಬಹುದು.




ಹಾಂಗ್-ಕಾಂಗ್ ಬಿಸಿನೆಸ್ ಟ್ರಿಪ್ ಮುಗಿಸಿ ಹೊರಡುವ ಬೆಥ್ ಎಮ್ಹೋಫ್ ಎನ್ನುವಾಕೆ ತನ್ನೂರು ಮಿನ್ನಿಯಾಪೋಲಿಸ್ ಸೇರುವ ಮೊದಲು ಚಿಕಾಗೊ ವಿಮಾನ ನಿಲ್ದಾಣದಲ್ಲಿ ಕೆಲಘಂಟೆಗಳ ಕಾಲ ಲೇ-ಓವರ್ ತೆಗೆದುಕೊಳ್ಳುತ್ತಾಳೆ. ಆಕೆಯ ಉದ್ದೇಶ ಆ ಸಮಯದಲ್ಲಿ ತನ್ನ ಮಾಜಿ ಪ್ರಿಯಕರನನ್ನು ಭೇಟಿ ಮಾಡುವುದಾಗಿರುತ್ತದೆ. ನಂತರ ಮಿನ್ನಿಯಾಪೋಲಿಸ್'ಗೆ ತಲುಪಿದ ಎರಡೇ ದಿನಗಳಲ್ಲಿ ಬೆಥ್ ತೀವ್ರ ಅನಾರೋಗ್ಯಕ್ಕೆ ಒಳಗಾಗುತ್ತಾಳೆ. ಆಕೆಯ ಪತಿ ಮಿಚ್ ಅವಳನ್ನು ತಕ್ಷಣವೇ ಆಸ್ಪತ್ರೆಗೆ ಕೊಂಡೊಯ್ಯುತ್ತಾನಾದರೂ ಕೆಲವೇ ಕ್ಷಣಗಳಲ್ಲಿ ಆಕೆಯ ಜೀವ ಹೋಗಿರುತ್ತದೆ. ಅಲ್ಲಿಂದ ಮಿಚ್ ಮನೆಗೆ ಬರುವುದರೊಳಗೆ ಮಗನೂ ಸಹ ಪ್ರಾಣ ಕಳೆದುಕೊಂಡಿರುತ್ತಾನೆ. ತಕ್ಷಣವೇ ಕಾರ್ಯಪ್ರವೃತ್ತರಾಗುವ ಆರೋಗ್ಯ ಇಲಾಖೆ ಆತನನ್ನು quarantine ನಲ್ಲಿರಿಸಿ ತಪಾಸಣೆ ನಡೆಸಿದಾಗ ಆತನಿಗಿರುವ ರೋಗನಿರೋಧಕ ಶಕ್ತಿಯಿಂದಾಗಿ ಈ ಸೋಂಕು ತಗುಲಿಲ್ಲ ಎಂದು ಖಾತ್ರಿಯಾಗುತ್ತದೆ.




ಬೆಥ್'ಳ ಬಿಸಿನೆಸ್ ಟ್ರಿಪ್ ಬಗ್ಗೆ ತಿಳಿದ ಆರೋಗ್ಯ ಇಲಾಖೆ ಆಕೆ ಅಲ್ಲಿ ಯಾರನ್ನೆಲ್ಲ ಭೇಟಿಯಾದಳು ಎಂದು ಸೋಂಕಿನ ಮೂಲ ಪತ್ತೆ ಹಚ್ಚಲು ಶುರುಮಾಡುತ್ತದೆ. ಇನ್ನೊಂದು ಎಳೆಯಲ್ಲಿ ಈ ವೈರಸ್'ಗೆ ಔಷಧ ಕಂಡು ಹಿಡಿಯಲು ಇನ್ನೊಂದು ತಂಡ ಹೊರಡುತ್ತದೆ. ಮತ್ತೊಂದು ತಂಡ ಸೋಂಕು ತಗುಲಿದವರನ್ನು ಸಂಪರ್ಕಿಸಿ ಅವರು ಭೇಟಿ ಮಾಡಿದವರ ಮಾಹಿತಿ ಸಂಗ್ರಹಿಸಿ, ಅವರಿಂದ ಇನ್ನಷ್ಟು ಜನರಿಗೆ ಸೋಂಕು ಹರಡದಂತೆ ತಡೆಯಲು ಪ್ರಯತ್ನಿಸುತ್ತದೆ. ಮುಂದೆ ಏನೆಲ್ಲ ಜರುಗುತ್ತದೆ ಅನ್ನುವ ವಿವರವಾದ ಕಥೆಯೇ ಈ ಸಿನಿಮಾ "Contagion"




ಈ ಸಿನಿಮಾ ಬಗ್ಗೆ Height of Coincidence ಅಂತ ಯಾಕೆ ಪ್ರಸ್ತಾಪ ಮಾಡಿದೆ ಅಂದರೆ,




-ಈ ಸಿನಿಮಾ ಕೂಡ ಒಂದು ವೈರಸ್ ಇಡೀ ಪ್ರಪಂಚವನ್ನು ಗೋಳು ಹೊಯ್ದುಕೊಳ್ಳುವ ಕಥೆಯ ಕುರಿತದ್ದು

- ಕಥೆಯ ಅರಂಭ ಕೂಡ ಹಾಂಕ್'ಕಾಂಗ್ ಅಂದರೆ ಏಷ್ಯಾದಿಂದಲೇ ಶುರುವಾಗುತ್ತೆ

- ಇಲ್ಲಿ ವಿವರಿಸುವ ವೈರಸ್ ಕೂಡ ಗಾಳಿಯ ಮೂಲಕ ಹರಡುವುದಿಲ್ಲ. ಬದಲಿಗೆ ಸೋಂಕಿನ ವ್ಯಕ್ತಿ ಕೆಮ್ಮಿದಾಗ/ಸೀನಿದಾಗ ಆತನಿಂದ ಹೊರಬೀಳುವ ಹನಿಗಳು ಯಾವುದಾದರೂ ವಸ್ತುವಿನ ಮೇಲ್ಮೈ ಮೇಲಿದ್ದಾಗ, ಅದನ್ನು ಮುಟ್ಟುವ ಮತ್ತು ನಂತರ ತಮ್ಮ ಮುಖ-ಕಣ್ಣು-ಮೂಗು-ಬಾಯಿಗಳನ್ನು ಮುಟ್ಟಿಕೊಳ್ಳುವ ಇತರೆ ಆರೋಗ್ಯಕರ ವ್ಯಕ್ತಿಗಳಿಗೆ ಈ ಸೋಂಕು ಸುಲಭವಾಗಿ ಹರಡುತ್ತದೆ.

- ಈ ಸೋಂಕಿಗೆ ಕಾರಣ ಕೂಡ ಪ್ರಾಣಿಗಳಿಂದಲೇ ಅಂದರೆ ಹಂದಿ ಮತ್ತು ಬಾವಲಿಯಿಂದ ಮನುಷ್ಯನಿಗೆ ಹರಡಿದ ವೈರಸ್ ಆಗಿರುತ್ತದೆ.

- ಈ ವೈರಸ್ ಕೂಡ ದೇಶದಿಂದ ದೇಶಕ್ಕೆ ವಿಮಾನದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಂದಲೇ ಹರಡುತ್ತದೆ.

- ಮೊದಲಿಗೆ ಈ ವೈರಸ್'ನ ಗುಣಲಕ್ಷಣಗಳನ್ನು ಪತ್ತೆ ಮಾಡುವಾಗಲೇ ಅದಕ್ಕಾಗಿಯೇ ಬಂದ ವೈದ್ಯಾಧಿಕಾರಿಗೂ ಕೂಡ ತಗುಲುತ್ತದೆ.

- ವಿಶ್ವ ಆರೋಗ್ಯ ಸಂಸ್ಥೆ (WHO) ತಕ್ಷಣವೇ ಪ್ರತಿಕ್ರಿಯಿಸಿ ಈ ಸೋಂಕಿನ ಕಾರಣ ಮತ್ತು ಲಸಿಕೆ ಕಂಡು ಹಿಡಿಯಲು ಪ್ರಯತ್ನಿಸುವುದು.

- ದೊಡ್ಡ ದೊಡ್ಡ ನಗರಗಳ ಎಲ್ಲ ನಾಗರಿಕರಿಗೆ ದಿಗ್ಬಂಧನ (quarantine) ವಿಧಿಸುವುದು.

- ಸೋಂಕು ತಗುಲಿದವರನ್ನು ಸಂಪರ್ಕಿಸಿ ಅವರು ಭೇಟಿ ಮಾಡಿದವರ ಮಾಹಿತಿ ಸಂಗ್ರಹಿಸಿ, ಅವರಿಂದ ಇನ್ನಷ್ಟು ಜನರಿಗೆ ಸೋಂಕು ಹರಡದಂತೆ ತಡೆಯಲು ಪ್ರಯತ್ನಿಸುವುದು. ಇದನ್ನು Contact Tracing ಅನ್ನುತ್ತಾರೆ

- ವೈರಸ್'ನ ಕುರಿತಾದ ಬಯೋಲಾಜಿಕಲ್ ವಾರ್ಫೇರ್ ನ ಬಗ್ಗೆ ಊಹಾಪೋಹ

- ಲಸಿಕೆ/ಮದ್ದನ್ನು ತಾವೇ ಕಂಡು ಹಿಡಿದೆವೆಂದು ಹೇಳಿಕೊಳ್ಳುವ ತವಕ

- ಪರಿಸ್ಥಿತಿಯ ಲಾಭ ಪಡೆದು ಗಾಳಿಸುದ್ದಿ ಹಬ್ಬಿಸಿ ತಮ್ಮ ಔಷಧ ಹೆಚ್ಚು ಮಾರಾಟವಾಗುವಂತೆ ನೋಡಿಕೊಳ್ಳುವುದು.




ಹೀಗೆ ನೂರಾರು ವಿಷಯಗಳಿವೆ. ಅಷ್ಟೇ ಅಲ್ಲ ಇದರ ಹೊರತಾಗಿ ಈ ಬಗೆಯ ವೈರಸ್ ಸೋಂಕಿನ ಸಮಸ್ಯೆ ತಾರಕಕ್ಕೇರಿದಾಗ ಆಗುವ ಪರಿಣಾಮಗಳೇನು? ಆಹಾರಕ್ಕಾಗಿ ಹೊಡೆದಾಟ, ಔಷಧಕ್ಕಾಗಿ ಹೊಡೆದಾಟ ಹೀಗೆ ಅನೇಕ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಲಾಗಿದೆ. ಈ ಸಿನಿಮಾ ನೋಡುವಾಗ ಸೋಂಕಿನ ತೀವ್ರತೆ ಮತ್ತು ವೈದ್ಯರ ಕಷ್ಟ ನಮಗರ್ಥವಾಗಬಹುದು. ವೈದ್ಯಲೋಕವೇ ಒಪ್ಪಿಕೊಳ್ಳುವ ಹಾಗೆ ವಾಸ್ತವಕ್ಕೆ ಹತ್ತಿರವಾಗುವಂತೆ ಲಸಿಕೆ ಕಂಡುಹಿಡಿಯುವ ಪ್ರಕ್ರಿಯೆಯನ್ನು ತೋರಿಸಲಾಗಿದೆ.




ನಿಮಗೆ ಗೊತ್ತಿರಲಿ. ಕೊರೋನಾ ಸಮಸ್ಯೆ ಶುರುವಾದ ಮೇಲೆ ಅಂತರ್ಜಾಲದಲ್ಲಿ ಹುಡುಕಾಡಿದ ಸಿನಿಮಾಗಳ ಪೈಕಿ Steven Soderberg ನಿರ್ದೇಶನದ ಈ ಸಿನಿಮಾ " Contagion" ಮೊದಲ ಸ್ಥಾನದಲ್ಲಿದೆ.




ತಪ್ಪದೇ ನೋಡಿ. ನೋಡಬೇಕೆನ್ನುವವರಿಗೆ ಅಮೇಜಾನ್ ಪ್ರೈಮ್'ನಲ್ಲಿ ಸಿಗುತ್ತದೆ.






-ಸಂತೋಷ್ ಕುಮಾರ್ ಎಲ್.ಎಂ.

ಬೆಂಗಳೂರು

Thursday, March 19, 2020

ನನ್ನ ಪ್ರಕಾರ(2019)....Kannada Cinema

Image may contain: 4 people, glasses and text

ಪೋಸ್ಟರ್ ನೋಡಿ ಸಿನಿಮಾದ ಗುಣಮಟ್ಟವನ್ನು ನಿರ್ಧರಿಸಬಾರದು ಅಂತ ಅದಕ್ಕೆ ಹೇಳೋದು, ದಿಯಾ, ಲವ್ Mocktail ಸಿನಿಮಾಗಳು ಜನಗಳನ್ನು OTT platformಗಳ ಮೂಲಕ ತಲುಪಿದ ಮೇಲೆ ಮುಂಚೆಗಿಂತಲೂ ಸದ್ದು ಮಾಡುತ್ತಿವೆ.

ದಿಯಾ, ಲವ್ Mocktail ಗಳಂತಹ ಸಿನಿಮಾಗಳು ಲವ್ ಸ್ಟೋರಿಗಳನ್ನು ಇಷ್ಟಪಡುವವರಿಗಾದರೆ, ಥ್ರಿಲ್ಲರ್ ಸಿನಿಮಾಗಳನ್ನು ಇಷ್ಟಪಡುವವರಿಗಾಗಿಯೇ ಇರುವ ಸಿನಿಮಾ "ನನ್ನ ಪ್ರಕಾರ". ಇದೂ ಪ್ರೈಮ್'ನಲ್ಲಿದೆ ನೋಡಿ.

ಇದೊಂದು ಸಸ್ಪೆನ್ಸ್, ಥ್ರಿಲ್ಲರ್, ಮರ್ಡರ್-ಮಿಸ್ಟ್ರಿ ಸಿನಿಮಾ. ಕಥೆಯನ್ನು ಅಚ್ಚುಕಟ್ಟಾಗಿ ಹೆಣೆಯಲಾಗಿದೆ. ಒಂದು ಕೊಲೆ, ದಾರಿ ತಪ್ಪಿಸುವ ವಿಷಯಗಳು, ಸಂಶಯಪಟ್ಟು ಇನ್ನೆಲ್ಲೋ ಸಾಗುವ ಕಥೆ, ಇವನೇ ಅಂತ ನೋಡಿದರೆ ಆತ ಅಪರಾಧಿಯಲ್ಲ, ಒಂದು ಕೊಲೆಗೆ ಸಂಬಂಧಪಟ್ಟ ಎಲ್ಲ ವ್ಯಕ್ತಿಗಳು ಸಿಕ್ಕ ಮೇಲೂ ಅಪರಾಧ ಹೇಗೆ ನಡೆದಿರಬಹುದು ಅಂತಲೂ ಸರಿಯಾಗಿ ಅರ್ಥವಾಗದಿರುವಿಕೆ....ಹೀಗೆ ಒಂದು ಮರ್ಡರ್ ಮಿಸ್ಟ್ರಿ ಸಿನಿಮಾಗೆ ಬೇಕಾಗುವ ಎಲ್ಲ ವಿಷಯಗಳು ಇದರಲ್ಲಿವೆ.

ಅದರಲ್ಲೂ ಕಥೆ ಒಂದು ಜಾಗದಲ್ಲಂತೂ ಏನಾಗುತ್ತಿದೆ ಅಂತಲೇ ತಿಳಿಯುವುದಿಲ್ಲ. ಪ್ರಕರಣವನ್ನು ಬೇಧಿಸಲು ಹೊರಡುವ ಅಶೋಕ್ ಜೊತೆ ನಮಗೂ ಅದೆಷ್ಟು ಕ್ಲಿಷ್ಟಕರ ಅಂತ ಅನ್ನಿಸುತ್ತದೆ. ಈ ಸನ್ನಿವೇಶದಲ್ಲಿ ಪ್ರೇಕ್ಷಕನನ್ನೂ ಚಿಂತನೆಗೆ ಹಚ್ಚುವ ಕಥನ ಶೈಲಿ ತಮಿಳಿನ ಸೂಪರ್ ಹಿಟ್ ಚಿತ್ರ "ದುರುವಂಗಳ್ ಪದಿನಾರು" ನೆನಪಾಯಿತು. ಅಷ್ಟರಮಟ್ಟಿಗೆ ಕಥೆ ತುಂಬಾ ಇಷ್ಟವಾಯಿತು.

ಕಥಾ ನಿರೂಪಣೆ ಇನ್ನಷ್ಟು ಗಂಭೀರವಾಗಿ, ಬಿಗಿಯಾಗಿದ್ದರೆ ಸಿನಿಮಾದ Output ಇನ್ನೂ ಚೆನ್ನಾಗಿರುತ್ತಿತ್ತು. ಅಶೋಕ್ ಪಾತ್ರದಲ್ಲಿ ಕಿಶೋರ್ ಸಕ್ಕತ್. ಅವರೊಬ್ಬರೇ ಸಾಕು ಸಿನಿಮಾವನ್ನು ಹೊತ್ತೊಯ್ಯಲು. ಅವರ ಪತ್ನಿಯ ಪಾತ್ರದಲ್ಲಿ ಪ್ರಿಯಾಮಣಿ ನಟಿಸಿದ್ದಾರೆ. ಆ ಪಾತ್ರದಿಂದ ಕಥೆಗೆ ತಿರುವು ಸಿಗುತ್ತದಾದರೂ ಅಷ್ಟೊಂದು ಅವಕಾಶವಿಲ್ಲ. ಆ ಪಾತ್ರಕ್ಕೆ ಜನಪ್ರಿಯರಾದ ಪ್ರಿಯಾಮಣಿ ಬದಲಾಗಿ ಇನ್ನಾರಾದರೂ ಅವಕಾಶಕ್ಕಾಗಿ ಕಾಯುತ್ತಿರುವ ಪ್ರತಿಭೆಗಳಿಗೆ ಕೊಡಬಹುದಿತ್ತು. ಬಹುಶಃ ಸಿನಿಮಾದ ಪ್ರಚಾರಕ್ಕೆ ಸುಲಭವಾಗಲಿ ಅಂತಿರಬಹುದಾ ಗೊತ್ತಿಲ್ಲ.

ಮೊದಲರ್ಧ ತಾಸಿನ ಸಿನಿಮಾದಲ್ಲಿ ಯಾಕೋ ಪಾತ್ರಧಾರಿಗಳ ನಟನೆ ಸಹಜವಾಗಿಲ್ಲ ಅನ್ನಿಸಿತು. ಇನ್ನೇನು ಬೋರ್ ಹೊಡೆಸಲು ಶುರು ಅನ್ನುವಷ್ಟರಲ್ಲಿ ಮತ್ತೆ ಕಥೆ TakeOff ತೆಗೆದುಕೊಂಡಿತು. ಅಲ್ಲಿ ಮಯೂರಿ ಚೆನ್ನಾಗಿ ನಟಿಸಿದ್ದಾರೆ. ಇಂಥ ಕಥೆಗಳ ಕನ್ನಡ ಸಿನಿಮಾಗಳು ಬರುತ್ತಿರುವುದು ಖುಶಿಯ ವಿಚಾರ. ನಿರ್ದೇಶಕರು ಇದೇ Genreನ ಮುಂದಿನ ಸಿನಿಮಾಗಳನ್ನು ಇನ್ನಷ್ಟು ಅಚ್ಚುಕಟ್ಟಾಗಿ ಮಾಡುತ್ತಾರೆಂಬುದರಲ್ಲಿ ಅನುಮಾನವೇ ಇಲ್ಲ.

ಇಷ್ಟವಾಯಿತು. ನೋಡಿರದಿದ್ದರೆ ಖಂಡಿತ ನೋಡಿ. ಅಮೇಜಾನ್ ಪ್ರೈಮ್'ನಲ್ಲಿದೆ.

-Santhosh Kumar LM
19-Mar-2020

Friday, March 13, 2020

Mardaani-2.....Hindi Movie

Image result for mardaani 2

ಇಷ್ಟವಾಯ್ತು.....
ಹಾಡುಗಳಿಲ್ಲ, ಬೋರಿಂಗ್ ಅನ್ನುವ ಯಾವುದೇ ಅಂಶಗಳಿಲ್ಲ.
ಹೀರೋ(-ಇನ್) ಬಿಲ್ಡಪ್ಪುಗಳಿಲ್ಲ. ಕಥೆಯೇ ಈ ಸಿನಿಮಾದ ಜೀವಾಳ.


ದಿಟ್ಟ ಮನೋಭಾವದ ಹೆಣ್ಣುಮಕ್ಕಳನ್ನು ಕಂಡರೆ ಕೆಂಡಕಾರುವ ಆ ವಿಕೃತ ಮನಸ್ಸಿನ ಬಾಲಾಪರಾಧಿ. ಆತನಿಂದಾಗುವ ಅಪಹರಣ ಮತ್ತು ಅತ್ಯಾಚಾರ. ಆತನನ್ನು ಹಿಡಿಯಲು ಹೊರಡುವ ದಿಟ್ಟ ಪೊಲೀಸ್ ಅಧಿಕಾರಿ ನಾಯಕಿ. ಆಕೆಯ ದಿಟ್ಟತನದಿಂದಲೂ ವಿಚಲಿತನಾಗುವ ಖಳ. ಇದೀಗ ಇವರಿಬ್ಬರ ಮಧ್ಯೆಯೇ ಕಣ್ಣಾಮುಚ್ಚಾಲೆಯಾಟ. ಕಣ್ಣಮುಂದೆಯೇ ನಿಂತು ಆಟವಾಡಿಸುವ ಚತುರ ಖಳ! ಹೀಗೆ ಕೊನೆಯವರೆಗೆ ಸಾಗುವ ಕಥೆಗೊಂದು ಅಂತ್ಯ.


ಅತ್ಯಾಚಾರಿಗಳ ಬೆನ್ನಟ್ಟಿ ಹೋಗುವ ಕಥೆಗಳಿರುವ ಅನೇಕ ಸಿನಿಮಾಗಳು ಬಂದಿವೆ. ಆದರೆ ಇಲ್ಲಿ ಕೊಂಚ ಧೈರ್ಯದಿಂದ ಮುಂದೆ ಬಂದರೂ ಹೆಣ್ಣುಮಕ್ಕಳ ನಡತೆಯನ್ನೇ ಕೆಟ್ಟದಾಗಿ ಕಾಣುವ ಸಮಾಜದ ಬಗ್ಗೆ ಹೇಳುತ್ತಾರೆ. ಇಡೀ ಸಿನಿಮಾದಲ್ಲಿ ನಮ್ಮ ಗಮನ ಸೆಳೆಯುವುದು ಖಳ ಪಾತ್ರಧಾರಿ ವಿಶಾಲ್ ಜೇತ್ವಾ. ಅವರಿಗೆ ಒಳ್ಳೆಯ ಭವಿಷ್ಯವಿದೆ.


ನೋಡಿರದಿದ್ದರೆ ನೋಡಿ. ಪ್ರೈಮ್'ನಲ್ಲಿದೆ.


-Santhosh Kumar LM
13-Mar-2020

Thursday, March 12, 2020

ಪ್ಯಾರಾಸೈಟ್ (2019).....Korean Movie





ಕೊರಿಯನ್ ಸಿನಿಮಾ ಪ್ಯಾರಾಸೈಟ್ ನೋಡಲು ಶುರುವಾದಾಗ ಇದು ಸಾಮಾನ್ಯವಾದ ಕಾಮಿಡಿ ಸಿನಿಮಾ ಅನ್ನಿಸಿತು. ಆದರೆ ಮಧ್ಯದಲ್ಲಿ ಇದ್ದಕ್ಕಿದ್ದಂತೆ ಥ್ರಿಲ್ ಕೊಡುವ ಅಂಶಗಳು ಶುರುವಾದ ಮೇಲೆ ಇದು ಬೇರೆಯದೇ ರೀತಿಯ ಸಿನಿಮಾ ಅಂತ ಸ್ಪಷ್ಟವಾಯಿತು.

ಸಿನಿಮಾ ಇಷ್ಟವಾಯಿತು. ಗಮನ ಸೆಳೆದಿದ್ದು ಎಂದರೆ ನಮ್ಮೊಳಗೆ ಕಾಣುವ ಸಮಸ್ಯೆಯೊಂದನ್ನು ಗೋಳು ಹೊಯ್ದುಕೊಳ್ಳುವ ಹಾಗೆ ಹೇಳದೆ ಕಾಮಿಡಿಯಲ್ಲಿ ಹೇಳುತ್ತ ಹೋಗಿ, ಕಡೆಗೆ ಗಂಭೀರ ವಿಷಯವೊಂದನ್ನು ಹೇಳುವುದಿದೆಯಲ್ಲ. ಅದು ನಿಜವಾಗಿ ಕೃತಿಯೊಂದನ್ನು ಗೆಲ್ಲಿಸುತ್ತದೆ. ಇದೇ ಕಾರಣಕ್ಕಾಗಿ ಅಲ್ಲಿನ ಪರಿಸರವನ್ನು ತೋರಿಸುತ್ತ ಕಥೆ ಹೇಳುವ ಪ್ಯಾರಾಸೈಟ್ ಇಷ್ಟವಾದದ್ದು.

ಈ ಸಿನಿಮಾದಲ್ಲಿ ಶ್ರೀಮಂತನಾದ ಪಾರ್ಕ್, ಕೆಲಸದಾಳು ಕಿಮ್'ನಿಂದ ಬರುವ ವಾಸನೆಯ ಬಗ್ಗೆ ಹೇಳುವಾಗ ಸಿನಿಮೀಯ ಅನಿಸಿಕೊಳ್ಳುತ್ತದೆ. ಆದರೆ ಯೋಚಿಸಿ ನೋಡಿದರೆ ಅದು ಕೊರಿಯಾದಲ್ಲಷ್ಟೇ ಅಲ್ಲ. ಪ್ರಪಂಚದ ಎಲ್ಲ ದೇಶಗಳಲ್ಲೂ ಇವೆ. ನಮ್ಮಲ್ಲೇ ನೋಡಿ. ಬಿಎಂಟಿಸಿ ಬಸ್ಸಿನಲ್ಲಿ ಪ್ರಯಾಣ ಮಾಡುವ ಕೆಲಸಗಾರರ ಬೆವರಿನ ವಾಸನೆಯ ಬಗ್ಗೆ ಕೆಲವರು ಅಸಹ್ಯಪಟ್ಟುಕೊಳ್ಳುವುದನ್ನು ನೋಡಿದ್ದೇನೆ. ಅವರಿಗೆ ಬೇರೆ ಆಯ್ಕೆಯಾದರೂ ಏನಿದೆ. ಆತ ಊಬರ್/ಓಲಾ ಕ್ಯಾಬ್'ನಲ್ಲಿ ಪ್ರಯಾಣಿಸಲು ಶಕ್ತನಲ್ಲ. ಇರುವುದರಲ್ಲಿ ಕಡಿಮೆ ಬೆಲೆಯ ಬಿಎಂಟಿಸಿಯಷ್ಟೇ ಅವನ ಪಾಲಿಗೆ. ಬೆಳಗಿನಿಂದ ಕೂಲಿ ಮಾಡಿ ಬೆವರು ಸುರಿಸಿ ಸಂಜೆ ಮನೆಗೆ ಮರಳುವಾಗ ಆತನ ಮೈಯಿಂದ ಬೆವರಿನ ವಾಸನೆಯ ಬದಲಿಗೆ ಪರಿಮಳ ಹೊರಡಲಿ ಅನ್ನುವುದು ಎಷ್ಟು ಅವಾಸ್ತವಿಕ ಅನ್ನಿಸುತ್ತೆ ಯೋಚಿಸಿ. ಪ್ಯಾರಾಸೈಟ್'ನಲ್ಲೂ ಅಷ್ಟೇ. ಅಲ್ಲಿ ಆ ವಾಸನೆಗೆ ಕಾರಣ ಅವರು ವಾಸ ಮಾಡುವ ಕೆಳಮಾಳಿಗೆ ಅನ್ನುವ ವಾಸ್ತವ ಮನಸ್ಸಿಗೆ ನೋವು ತರುತ್ತದೆ.

ನಮ್ಮಲ್ಲಿ ಈ ಬಗೆಯ ಸಮಸ್ಯೆಗಳ ವಿಷಯಗಳಿಲ್ಲವೇ? ನೂರಾರು ಇವೆ. ಆದರೆ ಸಮಸ್ಯೆಯೊಂದನ್ನೇ ತೋರಿಸದೆ, ಅದನ್ನು ಸಿನಿಮಾದ ಕಥೆಯಲ್ಲಿ ಹದವಾಗಿ ಬೆರೆಸಿ ಈ ಬಗೆಯಲ್ಲಿ ಕೊಡಲು ನಿರ್ದೇಶಕರು ಮನಸ್ಸು ಮಾಡಬೇಕಷ್ಟೇ.

ಈ ಸಿನಿಮಾ ಆಸ್ಕರ್'ಗೆ ಎಷ್ಟು ಅರ್ಹ ಅಂತ ತಲೆಕೆಡಿಸಿಕೊಳ್ಳಬೇಕಿಲ್ಲ. ಇಂಗ್ಲೀಷ್ ಅಲ್ಲದ ಸಿನಿಮಾವೊಂದು ಮೊದಲ ಬಾರಿಗೆ ನಾಲ್ಕು ಆಸ್ಕರ್ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡು ಪ್ರಪಂಚದ ಗಮನ ಸೆಳೆಯಿತಲ್ಲ. ಅದು ಈ ಸಲದ ಆಸ್ಕರ್ ಪ್ರಶಸ್ತಿಯ ವಿಶೇಷತೆ. ಮುಂದಿನ ವರ್ಷಗಳಲ್ಲಿ ಉಳಿದ ದೇಶದ ಭಾಷೆಗಳ ಸಿನಿಮಾಗಳೂ ಪ್ರಶಸ್ತಿಗಳನ್ನು ಬಾಚಿಕೊಳ್ಳಲು ಇದು ಆರಂಭವಷ್ಟೇ ಅಂದುಕೊಳ್ಳೋಣ.

ಆಸ್ಕರ್ ಬಂದಿದೆ. ಕಲಾತ್ಮಕ ಸಿನಿಮಾಗಳನ್ನು ನೋಡುವವರು ಇದನ್ನು ಮೆಚ್ಚಿದ್ದಾರೆ, ನಮಗಿಷ್ಟವಾಗುತ್ತದೋ ಇಲ್ಲವೋ ಅಂದುಕೊಂಡು ಸುಮ್ಮನಾಗದಿರಿ. ಸಬ್'ಟೈಟಲ್ ಓದಿ ಸಿನಿಮಾ ನೋಡುವ ಅಭ್ಯಾಸ ನಿಮಗಿದ್ದರೆ ಖಂಡಿತ ನೋಡಿ. ಇಷ್ಟವಾಗುತ್ತದೆ.

#Santhosh Kumar LM
12-Mar-2020

Friday, February 7, 2020

ತೇಜೋ-ತುಂಗಭದ್ರಾ By Vasudhendra



ಇದು ಇತಿಹಾಸದ ಪುಸ್ತಕವಲ್ಲ. ಎಲ್ಲಿಯೂ ಯಾವ ಇಸವಿಯಲ್ಲಿ ಏನಾಯಿತು ಅನ್ನುವ ಪಠ್ಯವನ್ನು ಎಲ್ಲೂ ಹೇಳಿಲ್ಲ. ಆ ಬಗೆಯ ಪುಸ್ತಕವನ್ನು ನೀವು ಎದುರು ನೋಡುತ್ತಿದ್ದರೆ ದಯವಿಟ್ಟು ಈ ಪುಸ್ತಕ ನಿಮಗೆ ಸರಿಯಾದ ಆಯ್ಕೆಯಲ್ಲ. ಆದರೆ ಒಂದು ಕಾಲಮಾನವನ್ನು ತನ್ನ ಕೃತಿಗೆ ಆಯ್ದುಕೊಂಡು, ಆ ಕಾಲಮಾನದಲ್ಲಿ ಬರುವ ಇತಿಹಾಸದ ಘಟನೆಗಳಿಗೆ ಲೇಖಕ ತನ್ನ ಕಾಲ್ಪನಿಕ ಕಥೆಯನ್ನು ಹೆಣೆದಿರುವಂತಹ ರೋಚಕ ಕಥೆ ಇದರೊಳಗಿದೆ.



ಈ ಕಾದಂಬರಿಯಲ್ಲಿ ಒಂದೇ ಸಮುದ್ರದ ಎರಡು ದಡಗಳಿವೆ. ಒಂದು ಪೋರ್ಚುಗಲ್ ದೇಶದ ಲಿಸ್ಬನ್'ನತ್ತ ಚಾಚಿಕೊಂಡಿದ್ದರೆ ಇನ್ನೊಂದು ಭಾರತದ ಗೋವಾದಲ್ಲಿದೆ. ಕಥೆಯ ಪಾತ್ರಗಳು ಆ ದಡದಿಂದ ಈ ದಡಕ್ಕೆ ಪ್ರಯಾಣಿಸಬೇಕು. ಅದಕ್ಕೆ ಇತಿಹಾಸದ ಮಹತ್ತರವಾದ ಪ್ರಯಾಣವೊಂದರ ಸಾಕ್ಷಿಯಿದೆ. ಆ ಪ್ರಯಾಣದ ಮುಂಚಿನ ಕೆಲವರ್ಷಗಳಲ್ಲಿ ಲಿಸ್ಬನ್ ನಲ್ಲಿ ಅನೇಕ ಘಟನೆಗಳಾಗಿವೆ. ಅದೇ ರೀತಿ ಪ್ರಯಾಣ ನಡೆಯುವಾಗಲೂ ಮತ್ತು ಪ್ರಯಾಣ ಮುಗಿದ ತರುವಾಯವೂ ಇತ್ತ ಭಾರತದಲ್ಲೂ ಅನೇಕ ಗುರುತಿಟ್ಟುಕೊಳ್ಳಬೇಕಾದ ಘಟನೆಗಳಿವೆ. ಇವೆಲ್ಲವನ್ನೂ ಬಳಸಿಕೊಂಡು ಆ ಸಮಯದಲ್ಲಿ ಎರಡೂ ದೇಶಗಳಲ್ಲಿ ನಡೆದ ಸಾಮಾಜಿಕ ಜೀವನದ ಅನೇಕ ವಿಷಯಗಳನ್ನು ಬಳಸಿಕೊಂಡು ಈ ಕಥೆಯನ್ನು ಹೆಣೆಯಲಾಗಿದೆ. ಇದೇ ಈ ಕಾದಂಬರಿಯ ಕಥೆ ಹೆಣೆದ ತಂತ್ರ.



ಬಹುಶಃ ಈ ಕಾದಂಬರಿಯಲ್ಲಿ ಹೇಳುವ ಹಾಗೆ ಸಾಮಾಜಿಕ ವಿಷಯಗಳನ್ನು ನನ್ನ ಹೈಸ್ಕೂಲಿನ ಸಮಾಜ ಪಠ್ಯದಲ್ಲಿ ಹೇಳಿದ್ದರೆ ನನಗೆ ಆ ಪುಸ್ತಕ ಇನ್ನೂ ಹೆಚ್ಚು ಅರ್ಥವಾಗುತ್ತಿತ್ತೇನೋ! ಉಪ್ಪಿಟ್ಟು ಇಷ್ಟವಿಲ್ಲ ಅಂದಾಗ ಅಮ್ಮ ಅದಕ್ಕೆ ಘಮ್ಮೆನ್ನುವ ಅವರೇಕಾಳು ಹಾಕಿ "ಈಗ ನೋಡು" ಅನ್ನುವಂತಿದೆ ಈ ಕಥಾತಂತ್ರ. ಒಂದೊಂದೇ ಅವರೇಕಾಳನ್ನು ಉಪ್ಪಿಟ್ಟಿನ ಜೊತೆ ತಿನ್ನುತ್ತ ಕಡೆಗೆ ನೋಡಿದರೆ ತಟ್ಟೆ ಖಾಲಿ. ಬಹುಶಃ ಅನೇಕ ಕಡೆ ಈ ಕಾದಂಬರಿ ರೋಚಕವೆನಿಸುವ ಕಥೆ ಹೇಳಿರುವುದರಿಂದಲೇ ಏನೋ 450 ಪುಟಗಳಿದ್ದರೂ ನನಗೆ ತನ್ನಷ್ಟಕ್ಕೆ ತಾನೇ ಓದಿಸಿಕೊಂಡು ಹೋಯಿತು. ಇಲ್ಲೇ ಒಂದು ಕೃತಿಯಾಗಿ ಇದರ ಗೆಲುವಿದೆ. ನಮಗೆ ಗೊತ್ತೇ ಇರದ ಅನೇಕ ಬೆಚ್ಚಿಬೀಳಿಸುವ ವಿಷಯಗಳನ್ನು ಕಥನದ ಭಾಗವಾಗಿಯೇ ಲೇಖಕರು ನಮಗೆ ಪರಿಚಯ ಮಾಡಿಕೊಡುತ್ತಾರೆ.


ನೆನಪಿಡಿ. ಇತಿಹಾಸವೆಂದರೆ ನಮಗೆ ಕಣ್ಮುಂದೆ ಬರುವುದೇ ರಾಜ, ಅವನಿಗಿದ್ದ ರಾಣಿಯರು, ಅವನ ಸಾಮ್ರಾಜ್ಯದ ವಿಸ್ತಾರ, ಯಾವ ಇಸವಿಯಲ್ಲಿ ಯಾವ ಯುದ್ಧ ಗೆದ್ದ, ಎಷ್ಟು ಸಂಪತ್ತು ಗಳಿಸಿದ. ಮತ್ತು ಬಹುತೇಕ ವಿವರಗಳಲ್ಲಿ ಆತನ ಸಾಮ್ರಾಜ್ಯ ಸುಭಿಕ್ಷವಾಗಿತ್ತು ಅನ್ನುವ ಸಾಲಿನೊಂದಿಗೆ ಕೊನೆಗೊಳ್ಳುತ್ತದೆ. ಈ ಕಾದಂಬರಿಯಲ್ಲಿ ರಾಜರ ಬಗ್ಗೆ ಗುಣಗಾನವಿಲ್ಲ. ರಾಜರು ಪಾತ್ರಗಳಾಗಿ ಬರುತ್ತಾರಾದರೂ ಕಥೆಯ ಯಾವುದೋ ಒಂದು ಭಾಗದಲ್ಲಿ ಮೂಲಕಥೆಗೆ ತಿರುವು ಕೊಟ್ಟು ಹೋಗುತ್ತಾರೆ. ಆದರೆ ಅವರ ಆಳ್ವಿಕೆಯ ಸಮಯದ ಸಾಮಾಜಿಕ ನಂಬಿಕೆಗಳು, ಆಚರಣೆಗಳು, ವಿವಿಧ ಮಹತ್ತರ ಘಟನೆಗಳು ಹೇಗೆ ಜನಸಾಮಾನ್ಯರ ಜೀವನದಲ್ಲಿ ಪರಿಣಾಮ ಬೀರಿದವು ಅನ್ನುವುದನ್ನು ಕಥೆ ಓದುತ್ತಲೇ ತಿಳಿಯಬಹುದು. ಮತ್ತೊಮ್ಮೆ ಹೇಳುವುದಾದರೆ ಇವೆಲ್ಲ ಘಟನೆಗಳನ್ನು ಪಾಠ ಹೇಳುವಂತೆ ಎಲ್ಲೂ ಹೇಳಿಲ್ಲ. ಕಥೆಯ ಭಾಗವಾಗಿಯೇ ಅವು ಚಿತ್ರಿತವಾಗಿವೆ. ಪುಸ್ತಕದ ಪ್ರತೀ ಪುಟದಲ್ಲು ಗುರುತಿಟ್ಟುಕೊಳ್ಳಬಲ್ಲ ಅನೇಕ ಸಾಲುಗಳಿವೆ. ಅಲ್ಲಿ ಪಾತ್ರಗಳ ನಡುವೆ ವಿಚಾರವೊಂದರ ಬಗ್ಗೆ ತರ್ಕ ನಡೆಯುತ್ತದೆ. ಆ ಸಾಲುಗಳು ಕಥೆಗೂ ಚಂದ ಕಾಣುತ್ತದೆ. ಕಥೆಯ ಹೊರಗೂ ಓದಲು ಅರ್ಥ ಕೊಡುವಂತಿವೆ.


ಈ ಕಾದಂಬರಿಯಲ್ಲಿ ಬರುವ ಅನೇಕ ವಿಷಯಗಳನ್ನು ಪ್ರಸ್ತುತ ಪ್ರಪಂಚಕ್ಕೂ ತಳುಕು ಹಾಕಿಕೊಳ್ಳಬಹುದು.

*******************************************************************************************


ಗ್ಯಾಬ್ರಿಯಲ್ ಈ ಕಥೆಯಲ್ಲಿರುವ ಅನೇಕ ನಾಯಕರುಗಳಲ್ಲಿ ಒಬ್ಬ ನಾಯಕ. ಆತ ಚಿಕ್ಕವನಾಗಿದ್ದಾಗ ಮೊದಲೇ ಕ್ರಿಶ್ಚಿಯನ್ನರು ಯಹೂದಿಗಳನ್ನು ಅಧರ್ಮೀಯರು ಎಂದು ಶತ್ರುಗಳು ಎಂಬಂತೆ ನೋಡುತ್ತಿದ್ದ ಹೊತ್ತು. ಅದೊಮ್ಮೆ "ತಾನು ಯಹೂದಿಯರನ್ನು ಕಣ್ಣಾರೆ ನೋಡಬೇಕು" ಎಂದು ಆಸೆಪಟ್ಟು ತನ್ನ ಚಿಕ್ಕಪ್ಪನೊಡನೆ ಆ ಜನರು ವಲಸೆ ಬರುತ್ತಿದ್ದ ಶಿಬಿರಗಳತ್ತ ಹೋಗುತ್ತಾನೆ. ಆಗ ಆತನಿಗೆ ಗೊತ್ತಾಗುತ್ತದೆ ಅವರೆಲ್ಲರೂ ತಮ್ಮಂತೆಯೇ ಕಾಣುವ ಮನುಷ್ಯರು ಅಂತ.


-೦-೦-೦-೦-೦-೦-೦-೦-೦-೦-೦-೦-೦೦-೦-೦-೦-೦



ಭಾರತೀಯ ಮಸಾಲೆ ಪದಾರ್ಥಗಳಿಗೆ ಪೋರ್ಚುಗಲ್ ದೇಶದಲ್ಲಿ ಚಿನ್ನದ ಬೆಲೆಯಿರುತ್ತದೆ. ಇಡೀ ಪ್ರಪಂಚವೇ ಸಂಪದ್ಭರಿತ ಭಾರತದ ಮೇಲೆ ಕಣ್ಣಿಟ್ಟಿರುತ್ತದೆ.


-೦-೦-೦-೦-೦-೦-೦-೦-೦-೦-೦-೦-೦೦-೦-೦-೦-೦


ಯಹೂದಿಗಳನ್ನು ಎಲ್ಲರೂ ದ್ವೇಷಿಸಿದರೂ ಪೋರ್ಚುಗಲ್ ರಾಜ ತನ್ನ ದೇಶದೊಳ್ಳಕ್ಕೆ ಬಿಟ್ಟುಕೊಳ್ಳುತ್ತಾನೆ. ಅದು ಅವರ ಮೇಲಿನ ಪ್ರೀತಿಯಿಂದಲ್ಲ. ಆದರೆ ಬುದ್ಧಿವಂತರಾದ ಯಹೂದಿಗಳು ವ್ಯಾಪಾರಸ್ಥರು. ಅವರು ಬಂದರೆ ದೇಶದ ಆದಾಯ ಹೆಚ್ಚಿ ಉದ್ಧಾರವಾಗುತ್ತದೆ ಎಂಬ ಸ್ವಾರ್ಥದ ಕಾರಣಕ್ಕೆ!

-೦-೦-೦-೦-೦-೦-೦-೦-೦-೦-೦-೦-೦೦-೦-೦-೦-೦

ಅದಾಗ ತಾನೇ ಮುದ್ರಣದ ತಂತ್ರಜ್ಞಾನ ದೇಶದೊಳಗೆ ಕಾಲಿಟ್ಟು ಕೈಬರಹದಿಂದಲೇ ಜೀವನ ಮಾಡುತ್ತಿದ್ದ ಅನೇಕರು ಅದನ್ನು ದ್ವೇಷಿಸುತ್ತಾರೆ. ತಮ್ಮ ಕೆಲಸ ಕಳೆದುಕೊಳ್ಳುವ ಭಯದಿಂದ!

-೦-೦-೦-೦-೦-೦-೦-೦-೦-೦-೦-೦-೦೦-೦-೦-೦-೦



ಯಹೂದಿಗಳು ಬುದ್ಧಿವಂತರು ಹೌದು. ಆದರೆ ಮುದ್ರಣಕ್ಕೆ ಸಂಬಂಧಿಸಿದ ಶ್ರಮದ ಕೆಲಸಗಳನ್ನು ಮಾಡಲು ಆಫ್ರಿಕಾದ ಗುಲಾಮರನ್ನು ಬಳಸಿಕೊಳ್ಳುತ್ತಾರೆ.


-೦-೦-೦-೦-೦-೦-೦-೦-೦-೦-೦-೦-೦೦-೦-೦-೦-೦


ಯಹೂದಿಗಳಲ್ಲೂ ಗಂಡು ಮಗು ಹುಟ್ಟಿದರಷ್ಟೇ ಸಂಭ್ರಮ. ಮನೆಯಲ್ಲಿ ಸಡಗರ, ಹಬ್ಬದ ವಾತಾವರಣ. ಹೆಣ್ಣು ಮಗು ಹುಟ್ಟಿದರೆ ತಮ್ಮ ವ್ಯವಹಾರಕ್ಕೆ ಉಪಯೋಗವಾಗಲಾರಳು ಅನ್ನುವ ಲೆಕ್ಕಾಚಾರ.



-೦-೦-೦-೦-೦-೦-೦-೦-೦-೦-೦-೦-೦೦-೦-೦-೦-೦


ಯಹೂದಿಗಳನ್ನು ಪೋರ್ಚುಗಲ್ಲಿನ ಜನಸಾಮಾನ್ಯರು ದ್ವೇಷಿಸುವುದಿಲ್ಲ. ಆದರೆ ಸ್ವತಃ ಅಧಿಕಾರದಲ್ಲಿದ್ದ ರಾಣಿಯೇ ಯಹೂದಿಗಳನ್ನು ಕೊಲ್ಲಿ ಅಂದರೆ ಈಗಾಗಲೇ ಯಹೂದಿಗಳ ವ್ಯವಹಾರ-ಸಂಪತ್ತನ್ನು ನೋಡಿ ಹೊಟ್ಟೆಕಿಚ್ಚುಪಡುವ ಜನಸಾಮಾನ್ಯರು ಸುಮ್ಮನೆ ಬಿಟ್ಟಾರೆಯೇ?



-೦-೦-೦-೦-೦-೦-೦-೦-೦-೦-೦-೦-೦೦-೦-೦-೦-೦



ಯಹೂದಿಗಳು ಬದುಕುಳಿಯಬೇಕೆಂದರೆ ಮತಾಂತರ ಹೊಂದಬೇಕಾದ, ಅಥವಾ ಸಾಧ್ಯವಿಲ್ಲವೆಂದರೆ ತಮ್ಮೆಲ್ಲ ಸಂಪತ್ತನ್ನು ಅಲ್ಲೇ ಬಿಟ್ಟು ದೇಶಾಂತರ ಹೋಗಬೇಕಾದ ಸಂದರ್ಭ. ಈ ಇಕ್ಕಟ್ಟಿನ ಸಂದರ್ಭದಲ್ಲಿ ಪ್ರಶ್ನೆಯೊಂದು ಎದುರಾಗುತ್ತದೆ "ಧರ್ಮ ಮುಖ್ಯವೇ? ಅಥವ ಬದುಕೇ". ಯಹೂದಿಗಳು ಆಯ್ಕೆ ಮಾಡಿಕೊಂಡದ್ದು ಏನು? ಈ ಸಂದರ್ಭ ನಮ್ಮನ್ನು ಆತ್ಮಾವಲೋಕನಕ್ಕೆ ಹಚ್ಚುತ್ತದೆ.


-೦-೦-೦-೦-೦-೦-೦-೦-೦-೦-೦-೦-೦೦-೦-೦-೦-೦



ಮತಾಂತರ ಒಂದೇ ಅಂತಿಮವಲ್ಲ. ಏಕೆಂದರೆ ಮೂಲ ಧರ್ಮದಲ್ಲೇ ಇದ್ದವರು ನೇರವಾಗಿ ಮತಾಂತರ ಹೊಂದಿದವರನ್ನು ತಮ್ಮವರೆಂದು ಎಷ್ಟು ಮನಃಪೂರ್ವಕವಾಗಿ ಒಪ್ಪಿಕೊಳ್ಳಬಹುದು?



-೦-೦-೦-೦-೦-೦-೦-೦-೦-೦-೦-೦-೦೦-೦-೦-೦-೦



ಭಾರತದ ಅತೀ ದುಬಾರಿ ಸುವಾಸನೆಭರಿತ ಮಸಾಲೆ ಪದಾರ್ಥಗಳ ಮೇಲೆ ಪ್ರಪಂಚದ ಕಣ್ಣಿರುವಾಗ ಜೀವ ಕೊಟ್ಟಾದರೂ ಸರಿ. ಭಾರತಕ್ಕೆ ಅಪಾಯಕಾರಿ ನೌಕೆಯಲ್ಲಿ ಪ್ರಯಾಣಿಸಿ ಹೋಗಿಬರುತ್ತೇವೆನ್ನುವ ಎಲ್ಲ ರಾಷ್ಟ್ರಗಳ ಜನಗಳು. ಭಾರತದ ಈ ಆಕರ್ಷಣೆಯಿಂದ ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಳ್ಳುತ್ತೇವೆ ಎಂದು ಅಲ್ಲಿನ ಜನಗಳು ಭಾರತವನ್ನೇ ದ್ವೇಷಿಸುವ ಪರಿ.

ಗಮನಿಸಿ. ಕೆಲ ವರ್ಷಗಳ ಹಿಂದೆ ಭಾರತೀಯ ಸಾಫ್ಟ್ವೇರ್ ಜಗತ್ತಿನಲ್ಲೂ ಅಮೇರಿಕಾ ಕೈತುಂಬಾ ಹಣವನ್ನು ಕೊಟ್ಟು ಭಾರತೀಯ ನೌಕರರನ್ನು ತನ್ನತ್ತ ಸೆಳೆಯುತ್ತಿದ್ದಾಗ ಅದೆಷ್ಟು ಜನ ಅಮೇರಿಕಾವನ್ನು ದ್ವೇಷಿಸುತ್ತಿದ್ದರು?


-೦-೦-೦-೦-೦-೦-೦-೦-೦-೦-೦-೦-೦೦-೦-೦-೦-೦



ಪೋರ್ಚುಗೀಸ್ ದೇಶದಲ್ಲಿ ರಾಜ ಒಂದು ಹಿಡಿ ಮೆಣಸು ಎಸೆದರೆ ಇಡೀ ಜನಸಮೂಹ ಅದರ ಒಂದೇ ಕಾಳನ್ನು ಕಸಿಯುವ ಭರದಲ್ಲಿ ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಉಂಟಾಗುತ್ತದೆ. ಅದು ಆ ದೇಶದಲ್ಲಿ ಆಗ ಮೆಣಸಿಗಿದ್ದ ಬೆಲೆ.


ಅದೇ ಸಮಯದಲ್ಲಿ ವಿಜಯನಗರ ಸಾಮ್ರಾಜ್ಯದಲ್ಲಿ ತೆಂಬಕೇಶ್ವರನ ತೇರಿಗೆ ಕೈಮುಗಿಯುತ್ತ ಜನ ರಾಶಿ ರಾಶಿ ಮೆಣಸನ್ನು ಎರಚುತ್ತಾರೆ. ಇಡೀ ಬೀದಿಗಳಲ್ಲೆಲ್ಲ ಮೆಣಸು. ಮರುದಿನ ಕಸಗುಡಿಸುವವರು ಅವನ್ನೆಲ್ಲ ತಿಪ್ಪೆಗೆ ಸುರಿದು ಹಾದಿಬೀದಿಗಳನ್ನು ಸ್ವಚ್ಚಗೊಳಿಸುತ್ತಾರೆ. ವಿಪರ್ಯಾಸ ಅನ್ನಿಸುವ ಎರಡೂ ದೇಶದ ಪರಿಸ್ಥಿತಿಗಳನ್ನು ಗಮನಿಸಿ


-೦-೦-೦-೦-೦-೦-೦-೦-೦-೦-೦-೦-೦೦-೦-೦-೦-೦


ಪ್ರಪಂಚದ ಯಾವುದೇ ದೇಶದ ಯಾವುದೇ ಕಾಲಮಾನವಿರಲಿ. ಯುದ್ಧ ಎನ್ನುವುದು ಬಂದಾಕ್ಷಣ ವ್ಯಾಪಾರಿಗಳಿಗೆ ಅದು ವ್ಯಾಪಾರದ ಸಂಗತಿಯೇ. ಯುದ್ಧ ಹೆಚ್ಚಾದಷ್ಟು ಅವರಿಗೆ ಲಾಭವೇ



-೦-೦-೦-೦-೦-೦-೦-೦-೦-೦-೦-೦-೦೦-೦-೦-೦-೦


ಅತ್ತ ಲಿಸ್ಬನ್ ನಲ್ಲಿರಲಿ, ಇತ್ತ ವಿಜಯನಗರ ಸಾಮ್ರಾಜ್ಯದಲ್ಲಿರಲಿ. ಎರಡೂ ಕಡೆ ಕೇವಲ ಗಂಡು ಸಂತಾನಕ್ಕೆ ಮಾತ್ರ ಹಾತೊರೆಯುತ್ತಿದ್ದ ಜನ. ಲಿಂಗ ತಾರತಮ್ಯತೆಗೆ ದೇಶದ ಹಂಗಿಲ್ಲ!



-೦-೦-೦-೦-೦-೦-೦-೦-೦-೦-೦-೦-೦೦-೦-೦-೦-೦


ವಿಜಯನಗರ ಸಾಮ್ರಾಜ್ಯದ ತೆಂಬಕಸ್ವಾಮಿಗೆ ಪ್ರಾಣಿಗಳನ್ನು ಬಲಿ ಕೊಡುವ ರೀತಿ ಮತ್ತು ಅಚಾನಕ್ಕಾಗಿ ಭಕ್ತಳೊಬ್ಬಳು ತನ್ನ ಕಿರುಬೆರಳನ್ನು ಬಲಿ ಕೊಡುವ ಭಯಾನಕ ದೃಶ್ಯ



-೦-೦-೦-೦-೦-೦-೦-೦-೦-೦-೦-೦-೦೦-೦-೦-೦-೦



ಯಾವುದೇ ದೇಶದ ಯಾವುದೇ ರಾಜನಾದರೂ ಅವನ ನಂಬಿಕೆಯ ಮೇಲಷ್ಟೇ ಅಲ್ಲಿನ ನಿರ್ಣಯಗಳು ನಡೆಯುತ್ತವೆ.
ಉದಾ:ಕೃಷ್ಣದೇವರಾಯನೂ ತಾನು ವಿಷ್ಣುವನ್ನು ಪೂಜಿಸುತ್ತಿದ್ದರಿಂದ ಶೈವ ಹೆಸರಾದ ತೆಂಬಕಪುರಕ್ಕೆ ವೈಷ್ಣವಪುರ ಎಂದು ನಾಮಕರಣ ಮಾಡುವ ನಿರ್ಧಾರ ತೆಗೆದುಕೊಳ್ಳುವಿಕೆ.
ಈ ಘಟನೆಗಳು ಈಗ ನಡೆಯುತ್ತಿಲ್ಲವೇ?


-೦-೦-೦-೦-೦-೦-೦-೦-೦-೦-೦-೦-೦೦-೦-೦-೦-೦



ಮಲ ಹೊರುವ ಪದ್ಧತಿ


-೦-೦-೦-೦-೦-೦-೦-೦-೦-೦-೦-೦-೦೦-೦-೦-೦-೦



ಅಲ್ಲೆಲ್ಲೋ ಉತ್ತರ ಭಾರತದಲ್ಲಿಯಷ್ಟೇ ಸತೀಸಹಗಮನ ಪದ್ಧತಿಯನ್ನು ಕೇಳಿದ್ದ ನಮಗೆ ಬೆಚ್ಚಿಬೀಳಿಸುವುದು ವಿಜಯನಗರ ಸಾಮ್ರಾಜ್ಯದಲ್ಲೇ ಈ ಪದ್ಧತಿ ಜಾರಿಯಲ್ಲಿತ್ತು ಅನ್ನುವುದು. ಇದರ ಬಗ್ಗೆ ಬೇರೇನೂ ಹೇಳಲಾರೆ. ಕಾದಂಬರಿಯಲ್ಲಿಯೇ ನೀವು ಓದಬೇಕು. ಬರೀ ಹೆಂಡತಿಯೊಬ್ಬಳು ಗಂಡನೊಡನೆ ಚಿತೆಗೆ ಹಾರುವುದನ್ನು ಮಾತ್ರ ಅರಿತಿದ್ದ ನಮಗೆ ಅದರ ಬಗೆಗಿನ ವಿವರಗಳು, ವಾತಾವರಣ, ಮಕ್ಕಳ ಮೇಲೆ ಅದು ಸೃಷ್ಟಿಸುವ ಪರಿಣಾಮ ಭಯಾನಕ!


-೦-೦-೦-೦-೦-೦-೦-೦-೦-೦-೦-೦-೦೦-೦-೦-೦-೦


ವಿಜಯನಗರ ಸಾಮ್ರಾಜ್ಯಾಧಿಪತಿಯಾಗಿದ್ದ ಕೃಷ್ಣದೇವರಾಯ ಸಾಮಾನ್ಯ ಮಹಿಳೆಯಾಗಿದ್ದ ಗುಣಸುಂದರಿಯೊಂದಿಗೆ ಸಾಹಿತ್ಯಿಕ ಚರ್ಚೆಯಲ್ಲಿ ತೊಡಗುವುದು. ಮತ್ತು ತಾನು ಆಕೆಯ ಟೀಕೆಯನ್ನು ಮನಸಾ ಸ್ವೀಕರಿಸುವುದು



-೦-೦-೦-೦-೦-೦-೦-೦-೦-೦-೦-೦-೦೦-೦-೦-೦-೦



ಭಾರತಕ್ಕೆ ವಿದೇಶೀಯರಿಂದ ಕಾಗದ ಬಳಕೆಯ ಪರಿಚಯ


-೦-೦-೦-೦-೦-೦-೦-೦-೦-೦-೦-೦-೦೦-೦-೦-೦-೦



ಅಟ್ಟಹಾಸಗೈಯುವ ಪ್ಲೇಗ್ ರೋಗ


-೦-೦-೦-೦-೦-೦-೦-೦-೦-೦-೦-೦-೦೦-೦-೦-೦-೦


ಜಾತಿಪದ್ಧತಿಯ ಆಚರಣೆ, ಮತ್ತು ಈ ವ್ಯವಸ್ಥೆಯನ್ನು ಅರಿಯದ ವಿದೇಶೀಯರು



-೦-೦-೦-೦-೦-೦-೦-೦-೦-೦-೦-೦-೦೦-೦-೦-೦-೦


ಕಾಲ-ದೇಶಗಳ ಗಡಿಯಿಲ್ಲದೆ ಎಲ್ಲ ಸ್ಥಳಗಳಲ್ಲೂ ಕಸಿಯಲಾಗುತ್ತಿದ್ದ ಸ್ತ್ರೀಯರ ಹಕ್ಕು. ಪೋರ್ಚುಗೀಸರ ನೌಕೆಗಳಲ್ಲಿ ಸ್ತ್ರೀಯರ ಪ್ರಯಾಣವನ್ನು ನಿಷೇಧಿಸುವಿಕೆ!



-೦-೦-೦-೦-೦-೦-೦-೦-೦-೦-೦-೦-೦೦-೦-೦-೦-೦



ಕ್ರಿಶ್ಚಿಯನ್ ಧರ್ಮಾಧಿಕಾರಿಯೆ ಆದೇಶ ಕೊಟ್ಟಾಗ ಅಲ್ಲಿ ನಡೆಯುವ ಯಹೂದಿಗಳ ಮಾರಣಹೋಮ


-೦-೦-೦-೦-೦-೦-೦-೦-೦-೦-೦-೦-೦೦-೦-೦-೦-೦


ನಾವೆಗಳಲ್ಲಿ ಕಾಮವನ್ನು ಹತ್ತಿಕ್ಕಲು ಅಲ್ಲಿ ನಡೆಯುತ್ತಿದ್ದ ಸಲಿಂಗಕಾಮ



-೦-೦-೦-೦-೦-೦-೦-೦-೦-೦-೦-೦-೦೦-೦-೦-೦-೦



ತೆಂಬಕೇಶ್ವರನಿಗೆ ನಡೆಯುವ ಸಿಡಿಯಾಟದ ಸೇವೆ! ಇವತ್ತಿಗೂ ಇದು ತಮಿಳುನಾಡಿನಲ್ಲಿ ನಡೆಯುತ್ತಿಲ್ಲವೇ?


-೦-೦-೦-೦-೦-೦-೦-೦-೦-೦-೦-೦-೦೦-೦-೦-೦-೦



ಸಿಕ್ಕಿಬೀಳುವ ಗೂಢಾಚಾರರಿಗೆ ವಿಜಯನಗರದಲ್ಲಿ ಸಿಗುತ್ತಿದ್ದ ಆನೆಯಿಂದ ತುಳಿಸಿ ಕೊಲ್ಲುವ ಶಿಕ್ಷೆ


-೦-೦-೦-೦-೦-೦-೦-೦-೦-೦-೦-೦-೦೦-೦-೦-೦-೦


ಆಗ ತಾನೇ ಮೆಣಸಿಗೆ ಪರ್ಯಾಯವಾಗಿ ಮೆಣಸಿನಕಾಯಿ ಪರಿಚಯವಾಗುವ ಸಂದರ್ಭ



-೦-೦-೦-೦-೦-೦-೦-೦-೦-೦-೦-೦-೦೦-೦-೦-೦-೦


ವಿಜಯನಗರ ಸಾಮ್ರಾಜ್ಯದಲ್ಲಿ ರಾಜರ ಒಳಿತಿಗಾಗಿ ವಿವಿಧ ಸಂದರ್ಭಗಳಲ್ಲಿ ನಡೆಯುತ್ತಿದ್ದ ಲೆಂಕಸೇವೆ. ಇದೇ ಕಾದಂಬರಿಯ ಹೈಲೈಟು. ಓದುವಾಗ ಮೈನಡುಗುವುದು ಖಾತ್ರಿ!

-೦-೦-೦-೦-೦-೦-೦-೦-೦-೦-೦-೦-೦೦-೦-೦-೦-೦



ಸಮುದ್ರದ ಮೇಲೆ ಆಹಾರ ಸೇವಿಸಬಾರದೆನ್ನುವ ನಂಬಿಕೆಯ ಕಾರಣಕ್ಕೆ ನೌಕಾದಳವನ್ನು ಹೆಚ್ಚು ಬಲಪಡಿಸದ ಅಂದಿನ ರಾಜರ ಮನಸ್ಥಿತಿ. ಇದೇ ಕಾರಣದಿಂದಾಗಿ ವಿದೇಶೀ ವ್ಯಾಪಾರಿಗಳು ದೇಶದೊಳಕ್ಕೆ ಕಾಲಿಟ್ಟಿದ್ದು


-೦-೦-೦-೦-೦-೦-೦-೦-೦-೦-೦-೦-೦೦-೦-೦-೦-೦


ಅನಿರೀಕ್ಷಿತವಾಗಿ ಕಥೆಯೊಳಕ್ಕೆ ಭೇಟಿಕೊಡುವ, ಮತ್ತು ಇಡೀ ಕಥೆಯ ಸಾರಾಂಶವನ್ನು ತನ್ನ "ಲೊಳಲೊಟ್ಟೆ" ಎಂಬ ಕೀರ್ತನೆಯೊಳಗೆ ಹೇಳಿ ಹೊರಡುವ ಪುರಂದರದಾಸರು



-೦-೦-೦-೦-೦-೦-೦-೦-೦-೦-೦-೦-೦೦-೦-೦-೦-೦



ಗೋವಾದೊಳಗೆ ನಡೆಯುವ ಸಾಮೂಹಿಕ ಮತಾಂತರ


-೦-೦-೦-೦-೦-೦-೦-೦-೦-೦-೦-೦-೦೦-೦-೦-೦-೦


ಮತ್ತೊಮ್ಮೆ ಕಥೆಯ ಕೊನೆಯಲ್ಲಿ ಬರುವ "ಜೀವ(ನ) ಮುಖ್ಯವೋ, ಧರ್ಮ ಮುಖ್ಯವೋ" ಪ್ರಶ್ನೆ


*******************************************************************************************


ಗೆಳೆಯರೇ ಇಲ್ಲೆಲ್ಲೂ ನಾ ಮೂಲ ಕಥೆಯನ್ನು ಹೇಳೇ ಇಲ್ಲ. ಈ ಮೇಲಿನ ಅಂಶಗಳೆಲ್ಲ ಮೂಲ ಕಥೆಯೊಳಗೆ ಬರುವ ನೂರಾರು ವಿಷಯಗಳು. ಬರೀ ಈ ರಾಜ ಸತ್ತ, ಆ ರಾಜ ಯುದ್ಧ ಗೆದ್ದ ಅನ್ನುವ ಕಥೆಗಳನ್ನು ಓದಿದ್ದ ನಮಗೆ ರಾಜಾಧಿಪತ್ಯ ನಡೆಯುವಾಗ ಜನಸಾಮಾನ್ಯರ ಜೀವನ ಹೇಗಿತ್ತು ಅನ್ನುವ ವಿಷಯಗಳನ್ನು ಕುತೂಹಲಕಾರಿ ಕಥೆಯೊಂದಿಗೆ ನಮಗೆ ಉಣಬಡಿಸುವ "ತೇಜೋ ತುಂಗಭದ್ರಾ" ಕಾದಂಬರಿಯನ್ನು ನೀವು ಓದಲೇಬೇಕು.


ಕೃತಿಯ ಬಗ್ಗೆ ಎಲ್ಲೂ ಪ್ರಶ್ನೆಯೇ ಇಲ್ಲವೇ? ಅಂತ ಕೇಳಿದರೆ. ಒಂದೆರಡು ವಿಷಯಗಳ ಬಗ್ಗೆ ತಕರಾರಿದೆ.


1. ಮಾಪಳನಾಯಕ ಹಂಪಮ್ಮಳಿಗಾಗಿ ಕುಸ್ತಿ ಮಾಡುತ್ತಾನೆ. ಅದು ಭೀಮಕುಸ್ತಿ ಅಂದರೆ ಒಬ್ಬ ಪಟು ಇನ್ನೊಬ್ಬನ ಜೀವ ತೆಗೆಯಬಹುದು. ಇದು ತಿಳಿದಿದ್ದರೂ ಮಾಪಳನಾಯಕನ ಹೆಂಡತಿಯಾದ ತೆಂಕಮ್ಮನಿಗೆ ತನ್ನ ಗಂಡ ಕುಸ್ತಿಯಲ್ಲಿ ಭಾಗವಹಿಸುವುದರ ಬಗ್ಗೆ ಯಾವ ನಿಲುವಿತ್ತು ಅನ್ನುವುದರ ಬಗ್ಗೆ ಸ್ಪಷ್ಟ ಚಿತ್ರಣವಿಲ್ಲ.


2. ಕೇಶವನ ಅಪರಾಧಿಪ್ರಜ್ಞೆಯ ಬಗ್ಗೆ ಉಲ್ಲೇಖವಿದೆ. ಆದರೆ ಆತ ಪುಟ್ಟ ಮಗು ಈಶ್ವರಿಯ ಮೇಲೆ ಕೈ ಮಾಡುವುದು ಹಂಪಮ್ಮನಿಗೆ ತಿಳಿಯುವುದೇ ಇಲ್ಲ. ಹೀಗಾಗಿ ಲೆಂಕಸೇವೆಯ ನಂತರದ ಪುಟ್ಟ ಮಗು ಈಶ್ವರಿಯ ಪ್ರತಿಕ್ರಿಯೆಯನ್ನೇ ತಪ್ಪೆನ್ನುವಂತೆ ಚಿತ್ರಿತವಾಗುತ್ತದೆ. ಸರಿಯೇ?



ಎಲ್ಲ ವಿವರಗಳಿಗಿಂತ ಮುಂಚೆ, ಓದಿಸಿಕೊಳ್ಳುವ ಕೃತಿಯಾಗಿ ಪುಸ್ತಕವೊಂದು ಗೆಲ್ಲಬೇಕು. ಆ ವಿಷಯದಲ್ಲಿ ಈ ಕಾದಂಬರಿಯ ಕರ್ತೃ ವಸುಧೇಂದ್ರರವರು ಈಗಾಗಲೇ ಗೆದ್ದಿದ್ದಾರೆ. ಈ ಪುಸ್ತಕ ಓದಿದ ಮೇಲೆ ಪ್ರತಿಯೊಬ್ಬರಿಗೂ ಅನ್ನಿಸುವ ಪ್ರಶ್ನೆ. ಈ ವಿವರಗಳನ್ನು ಕಲೆಹಾಕಲು ಲೇಖಕರು ಅದೆಷ್ಟು ಸಂಬಂಧಪಟ್ಟ ಕೃತಿಗಳ ಅಧ್ಯಯನ ಮಾಡಿರಬೇಕು ಎಂಬುದು.


ಈಗಾಗಲೇ ಖ್ಯಾತ ವಿಮರ್ಶಕರು ಇದನ್ನು ಶ್ರೇಷ್ಠ ಕೃತಿ ಎಂದು ಹೇಳಿದ್ದಾರೆ. ನಾನು ಹೇಳುವುದೇನಿದೆ. ಅದನ್ನೇ ಮತ್ತೊಮ್ಮೆ ಹೇಳಬಲ್ಲೆ. ವಿನಂತಿಯೊಂದನ್ನು ಲೇಖಕರಿಗೆ ಮಾಡಬಲ್ಲೆ. ಈ ಬಗೆಯ ಕೃತಿಗಳ ಸೃಷ್ಟಿ ಎಲ್ಲರಿಂದಲೂ ಸಾಧ್ಯವಲ್ಲ. ಆ ಶ್ರಮ, ಬದ್ಧತೆ ಎಲ್ಲರಿಗೂ ಸಾಧ್ಯವಿಲ್ಲ. ನೀವೀಗಾಗಲೇ ಅದಕ್ಕೆ ಕೈಹಾಕಿದ್ದೀರ. ಇದೊಂದರೊಂದಿಗೆ ನಿಲ್ಲಿಸಬೇಡಿ. ಇನ್ನಷ್ಟು ಬರಲಿ. ಚರಿತ್ರೆಯನ್ನು ಸಾಮಾನ್ಯರ ದೃಷ್ಟಿಯಿಂದಲೂ ನೋಡುವಂತಾಗಲಿ ಅನ್ನುವುದಷ್ಟೇ ಆಶಯ.

-------------------
ಈ ಕಾದಂಬರಿಯ ಆಯ್ದ ಸಾಲುಗಳು::

1. ಧರ್ಮಗಳ ವಿಷಯ ಗೇಬ್ರಿಯಲ್'ಗೆ ಯಾವತ್ತೂ ಸಂಕೀರ್ಣವೆನಿಸುತ್ತೆ. ಇಡೀ ಜಗತ್ತಿಗೆ ಒಂದೇ ಧರ್ಮವಿದ್ದರೆ ಚೆನ್ನಾಗಿತ್ತು. ಹೀಗೆ ಒಬ್ಬರನ್ನೊಬ್ಬರು ಅಧರ್ಮಿಗಳೆಂದು ಜರಿದು ಬಡಿದಾಡುವ ಸಂದರ್ಭ ಇರುತ್ತಿರಲಿಲ್ಲ ಎಂದು ಕೆಲವೊಮ್ಮೆ ಅನ್ನಿಸುತ್ತದೆ ಆದರೆ ಹಿಂದೆಯೇ ಧರ್ಮವಲ್ಲದಿದ್ದರೆ ಜನರು ಬೇರೆಯದಕ್ಕೆ ಜಗಳವಾಡುತ್ತಿದ್ದರಲ್ಲವೆ ಎಂದು ಹೊಳೆಯುತ್ತದೆ. ಈ ಮಾನವ ದ್ವೇಷದಲ್ಲಿ ಧರ್ಮದ ಪಾತ್ರವೆಷ್ಟು. ಮನುಷ್ಯರ ಪಾತ್ರವೆಷ್ಟು? ಬಹುಶಃ ಜಗಳವಾಡುವುದು ಮನುಷ್ಯರ ಹುಟ್ಟುಗುಣವೆ? ಹಸಿವೆ, ನಿದ್ದೆ, ನೀರಡಿಕೆಗಳಿಗೆ ದೇಹವನ್ನು ತೃಪ್ತಿಪಡಿಸಿದಂತೆ ಜಗಳವಾಡಿಯೂ ಅದನ್ನು ತೃಪ್ತಿಪಡಿಸಬೇಕೇ?


2. ಪಾಪಪ್ರಜ್ಞೆಯೆನ್ನುವುದು ಹೊರಗಿನಿಂದ ಬಲವಂತವಾಗಿ ತುಂಬುವಂತಹದ್ದಲ್ಲ. ಯಾವುದೋ ಪಾದ್ರಿಯೋ, ಧಾರ್ಮಿಕ ಗ್ರಂಥವೋ, ಕಾನೂನೋ ಜೀವಿಯೊಂದರಲ್ಲಿ ನೀತಿ-ಅನೀತಿಗಳ ವಿವರಗಳನ್ನು ಕಟ್ಟಿಕೊಡಬೇಕಾಗಿಲ್ಲ. ಸೂಕ್ಷ್ಮನಾದ ವ್ಯಕ್ತಿಗೆ ಆಂತರಿಕವಾಗಿಯೇ ಅದರ ಅರಿವಾಗುತ್ತದೆ. ಸರಿ-ತಪ್ಪುಗಳು ಸ್ಪಷ್ಟವಾಗಿ ಗೋಚರಿಸತೊಡಗುತ್ತವೆ.

3. ತನ್ನದಲ್ಲದ ನೆಲದಲ್ಲಿ ಮನುಷ್ಯ ಬದುಕಿಯಾನೆ ಹೊರತು, ಸಸ್ಯಗಳು ಹೇಗೆ ಬದುಕಿಯಾವು?

------------------.


-Santhosh Kumar LM
06-Feb-2020

Friday, January 31, 2020

Stalingrad (2013)...Russian Movie

Stalingrad (2013)....War, Action, Drama
Language: Russian, German




ಯುದ್ಧದ ಮುಖ ಕರಾಳ. ಅದರ ಕರಾಳತೆಯನ್ನು ತೋರಿಸುವ ಪ್ರಯತ್ನವೇ ಬಹುತೇಕ ಸಿನಿಮಾಗಳಲ್ಲಿ ಆಗಿದ್ದರೂ ಅದಕ್ಕೆ ಬೇರೊಂದು ಆಯಾಮ ಕೊಟ್ಟು ವಿವರಗಳನ್ನು ಪ್ರೇಕ್ಷಕನ ಮುಂದಿಡುವ ಪ್ರಯತ್ನಗಳು ವಿರಳವೇ. ಒಂದಷ್ಟು ಯುದ್ಧದ ಸಿನಿಮಾಗಳನ್ನು ನೋಡಿದರೆ ಅಲ್ಲಿ ಆ ಕಥೆಗಾರ ತನ್ನ ದೇಶದ ಸೈನಿಕರ ಶೌರ್ಯವನ್ನೇ ಪರೋಕ್ಷವಾಗಿ ಹೊಗಳಿ ಉಳಿದವಕ್ಕೆ ಕಡಿಮೆ ಪ್ರಾಶಸ್ತ್ಯ ನೀಡಿರುತ್ತಾನೆ. ಭಾರತೀಯ ಸಿನಿಮಾಗಳಲ್ಲಿ ಪ್ರೇಮಕಥೆಯನ್ನು ಮೂಲ ಕಥೆಯಾಗಿಸಿ ಉಳಿದ ಸಮಸ್ಯೆಗಳನ್ನು ಜೊತೆಜೊತೆಯಲ್ಲಿಯೇ ಪರಿಣಾಮಕಾರಿಯಾಗಿ ಹೇಳುವುದನ್ನು ಮಣಿರತ್ನಂರ ಸಿನಿಮಾಗಳಲ್ಲಿ ಕಾಣಬಹುದು.


ಇತ್ತೀಚೆಗೆ ನಾ ನೋಡಿದ ಇಂಥದ್ದೊಂದು ಸಿನಿಮಾ, ರಷ್ಯನ್ ಭಾಷೆಯ "ಸ್ಟಲಿಂಗ್ರಾಡ್". ವಿಮರ್ಶೆಗಳು, ರೇಟಿಂಗ್'ಗಳು ಈ ಸಿನಿಮಾ ಅಷ್ಟೇನೂ ಚೆನ್ನಾಗಿಲ್ಲ ಅಂತ ಹೇಳಿದ್ದರೂ ನೋಡಿದಾಗ ಚೆನ್ನಾಗಿದೆ ಅನ್ನಿಸಿದ್ದು ಸುಳ್ಳಲ್ಲ. ಇದು ಐಮ್ಯಾಕ್ಸ್ ಫಾರ್ಮ್ಯಾಟಿನಲ್ಲಿ ಬಂದ ಮೊದಲ ರಷ್ಯನ್ ಚಿತ್ರ. ವಿಮರ್ಶಕರಿಗೆ ಯುದ್ಧದ ಜೊತೆಗೆ ಇತರೆ ವಿಷಯಗಳನ್ನು ತುರುಕಿದ್ದು ಇಷ್ಟವಾದಂತೆ ಕಂಡಿಲ್ಲ. ಜೊತೆಗೆ ರಷ್ಯನ್ ಸಿನಿಮಾ ಆದ್ದರಿಂದ ಹೆಚ್ಚಾಗಿ ರಷ್ಯನ್ ಸೈನಿಕರ ಬಗ್ಗೆಯೇ ವಿವರ ಹೇಳಿರುವುದು ಸಹಜ ಕೂಡ. ಅದೂ ಕೂಡ ಅನೇಕರ ವಿಮರ್ಶೆಗಳಲ್ಲಿ ವ್ಯಕ್ತವಾಗಿದೆ.


ಜಪಾನಿನಲ್ಲಿ 2011ರಲ್ಲಿ ಸುನಾಮಿಯ ಹೊಡೆತಕ್ಕೆ ಸಿಕ್ಕು ಕಟ್ಟಡಗಳ ಅವಶೇಷಗಳಡಿಯಲ್ಲಿ ಸಿಲುಕಿದ ಜರ್ಮನ್ ವಿದ್ಯಾರ್ಥಿಗಳನ್ನು ರಷ್ಯನ್ ಸೈನಿಕರು ಕಾಪಾಡುವಾಗ ಆ ರಕ್ಷಣೆಯ ಸಂದರ್ಭದಲ್ಲಿ ಅವರಿಗೆ ವಿಶ್ವಾಸ ತುಂಬಲು ಆ ರಷ್ಯನ್ ಸೈನಿಕನೊಬ್ಬ ತನ್ನದೇ ದೇಶದಲ್ಲಿ ನಡೆದ ರಷ್ಯನ್-ಜರ್ಮನ್ ನಡುವಿನ ಸ್ಟಾಲಿಂಗ್ರಾಡ್ ಯುದ್ಧದ ಬಗೆಗಿನ ಕಥೆಯನ್ನು ಹೇಳುತ್ತಾನೆ.


1942-1943ನೆಯ ಇಸವಿಯಲ್ಲಿ ಎರಡನೆಯ ಮಹಾಯುದ್ಧದ ಸಂದರ್ಭದಲ್ಲಿ ಜರ್ಮನ್ ಪಡೆ ರಷ್ಯಾದ ಸ್ಟಲಿಂಗ್ರಾಡ್ ನಗರವನ್ನು (ಈಗ ಅದು ವೋಲ್ಗೋಗ್ರಾಡ್ ಎಂದು ಮರುನೇಮಕಗೊಂಡಿದೆ) ವಶಪಡಿಸಿಕೊಳ್ಳಲು ಧಾವಿಸುತ್ತದೆ. ಆಗ ಇತ್ತಲಿಂದ ರಷ್ಯನ್ ಸೈನಿಕರು ಸಹ ಅರ್ಧ ಶಿಥಿಲಗೊಂಡ ಕಟ್ಟಡವೊಂದರಲ್ಲಿ ಕುಳಿತು ಜರ್ಮನ್ ಪಡೆಯನ್ನು ಎದುರಿಸುತ್ತಾರೆ. ಈ ಯುದ್ಧದಲ್ಲಿ ಎರಡೂ ಸೈನ್ಯಕ್ಕೆ ಸೇರಿದ ಲಕ್ಷಾಂತರ ಸೈನಿಕರು, ಸ್ಥಳೀಯರು ಪ್ರಾಣ ಕಳೆದುಕೊಳ್ಳಬೇಕಾಗುತ್ತದೆ. ಆ ಸನ್ನಿವೇಶದ ಕಥೆಯೇ ಈ ಸಿನಿಮಾ.


ಆದರೆ ಸಿನಿಮಾ ಯುದ್ಧದ ಇನ್ನೊಂದು ಮುಖವನ್ನು ಸಹ ತೋರಿಸುತ್ತದೆ. ರಷ್ಯನ್ ಸೈನಿಕರು ಕಾಯುತ್ತಿದ್ದ ಕಟ್ಟಡದಲ್ಲಿಯೇ "ಕಾತ್ಯ" ಅನ್ನುವಾಕೆ ವಾಸವಿರುತ್ತಾಳೆ. ಆಕೆ ತನ್ನ ಪೋಷಕರನ್ನು ಸ್ವಲ್ಪ ದಿನಗಳ ಹಿಂದಷ್ಟೇ ಕಳೆದುಕೊಂಡಿರುತ್ತಾಳೆ. ಯುದ್ಧದ ಸಂದರ್ಭದಲ್ಲಿ ಆಕೆಯನ್ನು ಅಲ್ಲಿಂದ ಸ್ಥಳಾಂತರಿಸಲು ಪ್ರಯತ್ನಿಸಲಾಗುತ್ತದಾದರೂ ಆಕೆ ತನ್ನ ಮನೆಯನ್ನು ಬಿಟ್ಟು ಹೊರಡದೆ ಅಲ್ಲೇ ಕೂರುತ್ತಾಳೆ. ಅಲ್ಲಿ ಕುಳಿತ ಸೈನಿಕರು ಮತ್ತು ಅವಳ ಮಧ್ಯೆ ಬಾಂಧವ್ಯವೊಂದು ಶುರುವಾಗುತ್ತದೆ. ಅವಳನ್ನು ಕಾಪಾಡುತ್ತಲೇ ಆ ಸೈನಿಕರು ವೈರಿಗಳನ್ನು ಎದುರಿಸುತ್ತಾರೆ.


ಇತ್ತ ಜರ್ಮನ್ ಸೈನಿಕ ಕಾಹ್ನ್ ಸಹ ತನ್ನ ತೀರಿಹೋದ ಹೆಂಡತಿಯನ್ನೇ ಹೋಲುವ ರಷ್ಯನ್ ಮಹಿಳೆ ಮಾಷಾಳನ್ನು ನೋಡಿದ ತಕ್ಷಣವೇ ಪ್ರೇಮದಲ್ಲಿ ಬೀಳುತ್ತಾನೆ. ಮೊದಮೊದಲಿಗೆ ಆಕೆ ತಿರಸ್ಕಾರ ತೋರಿದರೂ ಆತ ತೋರುವ ಪ್ರಾಮಾಣಿಕ ಕಾಳಜಿ ಮತ್ತು ಪ್ರೀತಿಗೆ ಸೋಲುತ್ತಾಳೆ. ಪರಸ್ಪರರ ಭಾಷೆಗಳು ಅರ್ಥವಾಗದಿದ್ದರೂ ಅವರಿಬ್ಬರಲ್ಲಿ ಪ್ರೀತಿ ಮೂಡುತ್ತದೆ. ಅಷ್ಟರಲ್ಲಿ ಅಲ್ಲಿಗೆ ಬರುವ ಜರ್ಮನ್ ಮೇಲಧಿಕಾರಿಗೆ ಈ ವಿಷಯ ತಿಳಿದು ತನ್ನ ವಿರೋಧಿ ರಾಷ್ಟ್ರವಾದ ರಷ್ಯಾದವಳಾದ್ದರಿಂದ ಆಕೆಯ ಸಂಗವನ್ನು ಬಿಟ್ಟು ರಷ್ಯನ್ ಸೈನಿಕರು ಕುಳಿತ ಕಟ್ಟಡವನ್ನು ಸುತ್ತುವರೆದು ವಶಪಡಿಸಿಕೊಳ್ಳುವಂತೆ ಆಜ್ಞೆ ಮಾಡುತ್ತಾನೆ. ಕಡೆಯ ದೃಶ್ಯದ ಹೊತ್ತಿಗೆ ಎಲ್ಲವೂ ನಾಮಾವಶೇಷವಾಗುವುದರೊಂದಿಗೆ ಸಿನಿಮಾ ಮುಗಿಯುತ್ತದೆ.


-Santhosh Kumar LM
31-Jan-2020

Friday, January 10, 2020

Kolaigaran (2019)....Tamil movie









ಕೊಲೈಗಾರನ್ (2019) [ತಮಿಳು Murder Mystery, Thriller]

ಅರ್ಜುನ್ ಸರ್ಜಾ, ವಿಜಯ್ ಆಂಟನಿ ನಟಿಸಿದ ಚಿತ್ರ.

ಫ್ಲಾಟ್ ಒಂದರಲ್ಲಿ ಅಮ್ಮ-ಮಗಳು ವಾಸವಿದ್ದಾರೆ. ಅದೇ ಎದುರಿನ ಫ್ಲಾಟ್'ನಲ್ಲಿ ಪ್ರಭಾಕರನ್ ವಾಸವಿದ್ದಾನೆ. ಆತ ಯಾರೊಂದಿಗೂ ಹೆಚ್ಚು ಮಾತನಾಡಲಾರ.


ಅದೊಂದು ದಿನ ಅದೇ ಊರಿನ ನಿರ್ಜನ ಪ್ರದೇಶವೊಂದರಲ್ಲಿ ಶವವೊಂದು ದೊರಕುತ್ತದೆ. ನೋಡಲಾಗಿ ಅದರ ಮುಖವನ್ನು ಗುರುತು ಹಿಡಿಯಲಾಗದಂತೆ ಜಜ್ಜಿ ನಂತರ ಸುಟ್ಟುಹಾಕಲಾಗಿರುತ್ತದೆ.

ಆ ಕೇಸನ್ನು ಕೈಗೆತ್ತಿಕೊಳ್ಳುವ ಡಿಸಿಪಿ ಕಾರ್ತಿಕೇಯನ್ ಬಹುಬೇಗನೆ ಆ ಶವ ಯಾರದೆಂದು ಕಂಡುಹಿಡಿಯುತ್ತಾರೆ. ಜೊತೆಗೆ ಕೊಲೆಯ ಹಿನ್ನೆಲೆಯನ್ನು ಕಂಡುಹಿಡಿಯುತ್ತಾರೆ. ಆದರೆ ಕೊಲೆ ಹೇಗಾಗಿರಬಹುದು ಅನ್ನುವ ಚಿತ್ರಣ ಸರಿಯಾಗಿ ದೊರಕುವುದಿಲ್ಲ. ಅದೊಂದು ದಿನ ಕೊಲೆಗಾರನೇ ಬಂದು ತಾನೇ ಕೊಲೆ ಮಾಡಿದ್ದಾಗಿ ಒಪ್ಪಿಕೊಳ್ಳುತ್ತಾನೆ.

ಇದೇ ನಮಗೆ ಕ್ಲೈಮ್ಯಾಕ್ಸ್ ಅನ್ನಿಸುತ್ತದೆ. ಆದರೆ ಕಥೆ ಅಲ್ಲಿಗೆ ಮುಗಿಯುವುದಿಲ್ಲ. ಕೊಲೆ ಹೇಗಾಗಿರಬಹುದು, ನಿಜವಾಗಿ ಯಾರು ಮಾಡಿದರು, ಏಕೆ ಮಾಡಿದರು ಅನ್ನುವ ವಿಷಯವೇ ಪ್ರೇಕ್ಷಕನನ್ನು ಕೊನೆಯವರೆಗೂ ಹಿಡಿದು ಕೂರಿಸುತ್ತದೆ. ಸಿನಿಮಾ ಮುಗಿದ ಮೇಲಷ್ಟೇ ನಾವು ಒಂದನ್ನೊಂದು ಜೋಡಿಸಿ ಅರ್ಥೈಸಿಕೊಳ್ಳಲು ಸಾಧ್ಯವಾಗುವುದು. ಕೊಲೆಗಾರ ಯಾರೆಂದು ಹೇಳಿ ಕೊಲೆಯ ರೀತಿಯನ್ನು ಕಡೆಯವರೆಗೂ ಹೇಳದಿರುವುದು ಈ ಸಿನಿಮಾದಲ್ಲಿ ಹೊಸತು.

ಡಿಟೆಕ್ಟಿವ್ ಥ್ರಿಲ್ಲರ್ ಸಿನಿಮಾಗಳನ್ನು ನೋಡುವವರಿಗೆ ಈ ಸಿನಿಮಾ ಖುಶಿ ಕೊಡಬಲ್ಲುದು. ಕಥೆಯ ಸಂಕೀರ್ಣತೆ, ರಹಸ್ಯವನ್ನು ಕೊನೆಯವರೆಗೂ ಬಿಟ್ಟುಕೊಡದ ರೀತಿ "ದುರುವಂಗಳ್ ಪದಿನಾರು" ಸಿನಿಮಾವನ್ನು ನೆನಪಿಸುತ್ತದೆ.

ಜಪಾನೀ ಚಿತ್ರ "ಸಸ್ಪೆಕ್ಟ್ ಎಕ್ಸ್"ವನ್ನು ಆಧರಿಸಿಯೇ ಈ ಚಿತ್ರವನ್ನು ರಿಮೇಕ್ ಮಾಡಲಾಗಿದೆ. ಆದರೆ ಕಥೆಯನ್ನು ಅಗತ್ಯಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳಲಾಗಿದೆ.

" ಸಸ್ಪೆಕ್ಟ್ ಎಕ್ಸ್" ನೋಡಿರದಿದ್ದರೆ ಈ ಸಿನಿಮಾವನ್ನು ಧಾರಾಳವಾಗಿ ನೋಡಿ,
ಒಮ್ಮೆ ನೋಡಲು ಅಡ್ಡಿಯಿಲ್ಲ.

-Santhosh Kumar LM
10-Jan-2020

Tuesday, January 7, 2020

The Plan...Kannada Movie





The Plan (Kannada Thriller)-2015

ಕನ್ನಡದಲ್ಲಿ ಥ್ರಿಲ್ಲರ್ ಸಿನಿಮಾಗಳು ಬರುವುದೇ ಕಡಿಮೆಯೇನೋ ಅನ್ನಿಸಿಬಿಡುತ್ತದೆ. ಅಥವ ಇಲ್ಲಿಯ ಪ್ರೇಕ್ಷಕರಿಗೆ ಇಷ್ಟವಾಗುವುದಿಲ್ಲವೇ ಅಂತ ಪ್ರಶ್ನೆ ಕೇಳಿಕೊಂಡರೆ ರಂಗಿತರಂಗದಂತಹ ಅನೇಕ ಸಿನಿಮಾಗಳು ಕಣ್ಣೆದುರಿಗೆ ಬಂದು "ಹಾಗೇನಿಲ್ಲ" ಅಂತ ಉತ್ತರ ಕೊಡುತ್ತವೆ.

ಮೊನ್ನೆ ಸಹೋದ್ಯೋಗಿಯೊಬ್ಬರು ಈ ಸಿನಿಮಾವನ್ನು ನೋಡಿ ಎಂದು ಹೇಳಿದರು. ಹುಡುಕಿದರೆ Netflix ನಲ್ಲೇ ಇದೆ. ಏನೋ ಸುಮಾರಾಗಿರಬೇಕು ಅಂತ ನೋಡಲು ಕುಳಿತವನಿಗೆ ಸಿಕ್ಕಿದ್ದಂತೂ ಅಚ್ಚರಿಯೇ!

ಇಡೀ ಸಿನಿಮಾ ಕುತೂಹಲದಿಂದ ಒಂದು ಕ್ಷಣವೂ ಕಣ್ಮಿಟುಕಿಸದಂತೆ ನೋಡಿಸಿಕೊಳ್ಳುತ್ತೆ. ಒಂದೇ ಹಾಡು. ಚಿತ್ರಕಥೆಯ ಶೈಲಿಯೂ ಅಷ್ಟೇ, ಬೇರಾವುದೋ ಭಾಷೆಯ ಸಿನಿಮಾದಲ್ಲೂ ನೋಡಿದ್ದೇವೆ ಅನ್ನಿಸಿದರೂ ಕನ್ನಡಕ್ಕಿನ್ನೂ ಹೊಸತು.

ಗಂಭೀರ ಕೊಲೆಯ ಆರೋಪದಲ್ಲಿ ಹದಿನೈದು ದಿನಗಳ ಮಟ್ಟಿಗೆ ಜೈಲೊಂದಕ್ಕೆ ಬರುವ ವಿಚಾರಣಾಧೀನ ಖೈದಿಗಳು ತಾವು ಪ್ರಕರಣದಿಂದ ತಪ್ಪಿಸಿಕೊಳ್ಳಲು ಯಾವುದೇ ದಾರಿಯಿಲ್ಲ ಎಂಬ ಸತ್ಯ ಅರಿವಾದಾಗ ಆ ಜೈಲಿನಿಂದ ತಪ್ಪಿಸಿಕೊಳ್ಳುವುದೊಂದೇ ದಾರಿ ಎಂಬ ನಿರ್ಧಾರಕ್ಕೆ ಬರುತ್ತಾರೆ. ಅವರಿಗೆ ಪರೋಕ್ಷವಾಗಿ ಸಹಾಯ ಮಾಡುವಾತ ಅದೇ ದಿನ ಜೈಲರ್ ಆಗಿ ಬರುವ ಹೊಸ ಅಧಿಕಾರಿ (ಅನಂತ್ ನಾಗ್).

ಎಲ್ಲೂ ಬೋರೆನಿಸುವುದಿಲ್ಲ. ಮೂರು ಜನ ಹುಡುಗರೂ ಹೊಸಬರೇ. ಆದರೆ ಇಲ್ಲಿ ಅನಂತ್ ನಾಗ್, ರಮೇಶ್ ಭಟ್, ಪ್ರಮೋದ್ ಶೆಟ್ಟಿ, ಬಿಟ್ಟರೆ ಎಲ್ಲರೂ ಹೊಸಬರೇ. ಆದರೆ ಕಥೆ-ಚಿತ್ರಕಥೆಯೇ ಇಲ್ಲಿ ನಾಯಕ. ಈ ಸಿನಿಮಾ ಸೂಪರ್ ಹಿಟ್ ಆಗಬೇಕಿತ್ತು ಅನ್ನಿಸದೇ ಇರಲಾರದು.

ಇಂತಹ ಸಿನಿಮಾಗಳು ಕನ್ನಡದಲ್ಲಿ ಬರುತ್ತಿರಬೇಕು. ಇಂತಹ ಸಿನಿಮಾ ಬಂದರೆ, ಇದೇ ಬಗೆಯ ಮನರಂಜನೆ ಸಿಗುತ್ತದೆ ಎಂಬ ಖಾತ್ರಿ ಸಿಕ್ಕರೆ ಅದೆಷ್ಟೇ ಹೊಸಬರ ಚಿತ್ರವಾದರೂ ಥಿಯೇಟರಿಗೆ ಹೋಗುವುದಕ್ಕೆ ಹಿಂಜರಿಯಲಾರೆ.

ನೋಡಿರದಿದ್ದರೆ ಒಮ್ಮೆ ನೋಡಿ. (Netflix ನಲ್ಲಿದೆ)

-Santhosh Kumar LM
06-Jan-2020

Friday, January 3, 2020

One Cut Of The Dead (2017)...Japanese movie








One Cut Of The Dead (2017)

2017ರಲ್ಲಿ ಬಿಡುಗಡೆಯಾದ ಜಪಾನೀ ಭಾಷೆಯ ಚಿತ್ರ. ಬಹುಶಃ ಈ ಸಿನಿಮಾ ಮಾಡುವಾಗ ಸ್ವತಃ ಅದರ ನಿರ್ಮಾತೃಗಳಿಗೂ ಅದು ಇಷ್ಟು ಜನಪ್ರಿಯವಾಗುತ್ತದೆ ಅಂತ ಕನಸು-ಮನಸಿನಲ್ಲಿಯೂ ಎಣಿಸಿರಲಿಲ್ಲವೆಂದು ಕಾಣುತ್ತದೆ. ಏಕೆಂದರೆ ಈ ಸಿನಿಮಾ ಬಿಡುಗಡೆ ಮಾಡಿದ್ದೇ ಒಂದು ಥಿಯೇಟರಿನಲ್ಲಿ. ಅದೂ ಆರು ದಿನಗಳ ಪ್ರದರ್ಶನದ ಒಪ್ಪಂದದ ಮೇರೆಗೆ!

ನೋಡಿ. ಹೊಸ ಆಲೋಚನೆ, ಕೆಲಸದ ಗುಣಮಟ್ಟವಷ್ಟೇ ಅನೇಕ ಸಲ ಮುಖ್ಯವಾಗುತ್ತದೆ. ಅದಕ್ಕೆ ಹಾಕಿದ ಹಣವಲ್ಲ. ಇಪ್ಪತ್ತು ಲಕ್ಷ ರೂಪಾಯಿಗಿಂತಲೂ ಕಡಿಮೆ ಬಜೆಟ್ಟಿನ ಚಿತ್ರವೊಂದು ಜಪಾನೊಂದರಲ್ಲೇ ಇನ್ನೂರು ಕೋಟಿ ದುಡ್ಡು ಮಾಡಿತು. ಅದರ ಮೌಲ್ಯ ತಿಳಿದ ಪ್ರಸಿದ್ಧ ಹಂಚಿಕೆದಾರರೊಬ್ಬರು ವಿದೇಶಗಳಲ್ಲೂ ಬಿಡುಗಡೆ ಮಾಡಿದ್ದರಿಂದ ಅಲ್ಲೂ ಇನ್ನೂರು ಕೋಟಿಗಿಂತಲೂ ಹೆಚ್ಚು ಸಂಪಾದಿಸಿತು.

ಇಪ್ಪತ್ತು ಲಕ್ಷವೆಲ್ಲಿ? ನಾಲ್ಕುನೂರು ಕೋಟಿಯೆಲ್ಲಿ?! ಇದಕ್ಕೆ ಕಾರಣ ಸಿನಿಮಾದ ಹೊಸತು ಎನಿಸುವ ಕಥೆಯೊಂದನ್ನು ಕೊಟ್ಟಿದ್ದು ಅಷ್ಟೇ!!

ಇದೊಂದು Zombie Horror ಚಿತ್ರ...."ಅಂತ ಅಂದುಕೊಳ್ಳಿ" ಅಂತಲೇ ಇಲ್ಲಿ ಹೇಳುತ್ತೇನೆ. ಏಕೆಂದರೆ ಸಿನಿಮಾದೊಳಗೆ ನಾವೇ ನಂಬಲಾಗದ ಅನೇಕ ಆಶ್ಚರ್ಯಕರ ಸಂಗತಿಗಳು ತೆರೆದುಕೊಳ್ಳುತ್ತ ಹೋಗುತ್ತವೆ. ಎಲ್ಲವನ್ನು ನೋಡುವ ಮುನ್ನವೇ ಹೇಳಿದರೆ ಇಲ್ಲಿ ನಿಮ್ಮ ಕುತೂಹಲವನ್ನು ಕೊಂದಂತಾಗಬಹುದು.

ಒಂದು Zombie ಚಿತ್ರವನ್ನು ಚಿತ್ರೀಕರಿಸಲು ಹಳತಾದ ಬಂಗಲೆಯೊಳಕ್ಕೆ ತಂಡವೊಂದು ಬರುತ್ತದೆ. ಆ ಬಂಗಲೆ ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಯಾವುದೋ ಪ್ರಯೋಗಗಳಿಗೆ ಬಳಸಿಕೊಳ್ಳಲಾಗಿತ್ತು ಅನ್ನುವುದು ಗೊತ್ತಾಗುತ್ತದೆ. ಚಿತ್ರೀಕರಣ ಶುರುವಾಗುತ್ತದೆ. Zombie ಪಾತ್ರಧಾರಿ ಎದುರಿಗೆ ಬಂದಾಗ ಭಯಪಡುವ ದೃಶ್ಯ ನಿರ್ದೇಶಕನಿಗೆ ತೃಪ್ತಿ ಕೊಡುವುದಿಲ್ಲ. ಕೋಪಿಸಿಕೊಂಡವನೇ ಎಲ್ಲರ ಮೇಲೆ ಕೂಗಾಡಿ ಹೊರಗೆ ಹೋಗುತ್ತಾನೆ. ನಟಿ ಬೇಸರದಲ್ಲಿದ್ದರೆ ಎಲ್ಲರೂ ನಿರ್ದೇಶಕ ಮರಳಿ ಬರಲಿ ಎಂದು ಕಾಯುತ್ತಿರುತ್ತಾರೆ. ಇದ್ದಕ್ಕಿದ್ದ ಹಾಗೆ ರಕ್ತಸಿಕ್ತವಾದ ನಿಜವಾದ Zombieಯೇ ಅಲ್ಲಿ ಪ್ರತ್ಯಕ್ಷವಾಗುತ್ತದೆ. ಅಲ್ಲಿ ಕುಳಿತಿದ್ದವರೆಲ್ಲ ಓಡಲು ಶುರುವಿಟ್ಟುಕೊಂಡರೆ ಅದು ಹಿಂಬಾಲಿಸುತ್ತದೆ. ಅದನ್ನು ಎದುರಿಸುವಾಗ ಮತ್ತೊಂದು....!! ಎದೆ ಢವಢವ ಶುರುವಿಟ್ಟುಕೊಂಡರೆ......

ಹೀಗೆ ಆರಂಭವಾಗುವ ಸಿನಿಮಾ ಎಲ್ಲೆಲ್ಲೋ ಸಾಗುತ್ತದೆ. ಇದ್ದಕ್ಕಿದ್ದಂತೆ ಮಧ್ಯದಲ್ಲಿಯೇ ಸಿನಿಮಾ ಮುಗಿದ ಫೀಲ್.... ಎಂಡ್ ಕ್ರೆಡಿಟ್ಸ್ ಶುರುವಾಗುತ್ತದೆ.

ಇನ್ನೇನು ಮುಗಿಯಿತು ಅನ್ನುವಷ್ಟರಲ್ಲಿ ಅಲ್ಲೇ ಇನ್ನೊಂದು ಕಥೆ! ಎಲ್ಲವೂ ಅಯೋಮಯ. ಪ್ರೇಕ್ಷಕ ತಲೆಕೆಡಿಸಿಕೊಳ್ಳುತ್ತಾನೆ ಅನ್ನುವಷ್ಟರಲ್ಲಿ ನಿರಾಳ!

ಅದರ ಬಗ್ಗೆ ಹೆಚ್ಚಿಗೆ ಇಲ್ಲಿ ಹೇಳಬಾರದು. ಸಿನಿಮಾ ನೋಡಿ.

Zombie ಸಿನಿಮಾಗಳನ್ನು ನೋಡುವವರಿಗೆ ಎಲ್ಲ ಸಿನಿಮಾಗಳಂತೆ ಇದು ಸಾಮಾನ್ಯ ಅನ್ನಿಸಿದರೂ ಒಂದು ಘಟ್ಟ ಮುಗಿದ ನಂತರ ಬೇರೆಯದೆ ಅನ್ನಿಸಿಕೊಂಡು ಮನರಂಜನೆ ನೀಡುವುದು ಖಂಡಿತ. ನೋಡಿರದಿದ್ದರೆ ನೋಡಿ. ಮೊದಲ ನಲವತ್ತೈದು ನಿಮಿಷಗಳನ್ನು ಒಂದೇ ಶಾಟ್'ನಲ್ಲಿ ಚಿತ್ರೀಕರಿಸಿಕೊಳ್ಳಲಾಗಿದೆ! ಸಿನಿಮಾ ಮುಗಿದ ಮೇಲೆ ಅದರ ಚಿತ್ರೀಕರಣದ ಬಗ್ಗೆಯೂ ಖಂಡಿತ ತಲೆಕೆಡಿಸಿಕೊಳ್ಳುತ್ತೀರಿ!


ಭಾಷೆ ಯಾವುದಾದರೂ ಸರಿ ಅನ್ನುವ, ಹೊಸತನ್ನು ಬಯಸುವ ಸಿನಿಪ್ರಿಯರು ಈ ಸಿನಿಮಾ ನೋಡಬಹುದು. ಸಿನಿರಂಗದಲ್ಲೇ ಕೆಲಸ ಮಾಡುವವರು ಈ ಸಿನಿಮಾ ನೋಡಿದರೆ ಹೊಸಪ್ರಯತ್ನಗಳ ಬಗ್ಗೆ ನಂಬಿಕೆಯನ್ನು ಜೀವಂತವಾಗಿರಿಸಿಕೊಳ್ಳಬಹುದು.

-Santhosh Kumar LM

03-Jan-2020

ಅವನೇ ಶ್ರೀಮನ್ನಾರಾಯಣ (2019)







ಅವನೇ ಶ್ರೀಮನ್ನಾರಾಯಣ (2019)

ಈ ಸಿನಿಮಾವನ್ನು ನೀವಿನ್ನೂ ನೋಡಿರದಿದ್ದರೆ ಈ ಬರಹವನ್ನು ಮುಂದೆ ಓದಬೇಡಿ. ಸಿನಿಮಾ ನೋಡಿ ಬನ್ನಿ. ಖಂಡಿತವಾಗಿಯೂ ಇದು ಒಮ್ಮೆ ನೋಡಲೇಬಹುದಾದ ಸಿನಿಮಾ.

ಸಿನಿಮಾ ನೀವೀಗಾಗಲೇ ನೋಡಿದ್ದು ನಿಮಗೆ ಸಿಕ್ಕಾಪಟ್ಟೆ ಇಷ್ಟವಾಗಿದ್ದರೆ ನಾನು ಬರೆದಿರುವ ‌ಕೆಲವು ವಿಷಯಗಳು ನಿಮಗೆ ಅಸಮಾಧಾನ ತರಬಹುದು. ಕ್ಷಮೆಯಿರಲಿ.

The proof of the pudding is in the eating ಅನ್ನುವ ಮಾತೊಂದಿದೆ. ಅದರರ್ಥ ಯಾವುದೇ ವಿಚಾರ ಅರ್ಥವಾಗಬೇಕೆಂದರೆ ಅದನ್ನು ಸ್ವತಃ ಅನುಭವಿಸಿದಾಗಲಷ್ಟೇ ಅಂತ. ಹೀಗಾಗಿ ಗೆಳೆಯರು ಬಗೆಬಗೆಯ ಅಭಿಪ್ರಾಯ ಹೇಳಿದರೂ "ಅವನೇ ಶ್ರೀಮನ್ನಾರಾಯಣ" ಸಿನಿಮಾವನ್ನು ಚಿತ್ರಮಂದಿರದಲ್ಲಿಯೇ ನೋಡುವ ನಿರ್ಧಾರ ಮಾಡಿದೆ. ಏಕೆಂದರೆ ಈ ಸಿನಿಮಾವನ್ನು ಈಗ ನೋಡದೇ ನಂತರ ಅಮೇಜಾನ್ ಪ್ರೈಮ್‌ನಲ್ಲೋ ಅಥವಾ ನೆಟ್‌ಫ್ಲಿಕ್ಸ್‌ನಲ್ಲೋ ನೋಡುವ ಸಿನಿಮಾವಲ್ಲ. ಕೋಟಿ ಕೋಟಿ ಸುರಿದು, ಹಗಲು ರಾತ್ರಿಯೆನ್ನದೇ ವರ್ಷಾನುಗಟ್ಟಲೆ ಸಮಯ-ಬುದ್ಧಿ ವ್ಯಯಿಸಿದ ಸಿನಿಮಾವನ್ನು ನೋಡುವ ರೀತಿಯೂ ಅದಲ್ಲ. ಅದಿರಲಿ. ನನಗನ್ನಿಸಿದಂತೆ ಇದು great ಸಿನಿಮಾ ಅಲ್ಲ. ಹಾಗಂದ ಕ್ಷಣ ಇದು ಕೆಟ್ಟ ಸಿನಿಮಾ ಅಂತ ಧ್ವನಿಸುವ ಅಪಾಯವಿದೆ. ಹಾಗಾಗಿ ಕೊಂಚ ವಿವರವಾಗಿ ಬರೆಯುವ ಪ್ರಯತ್ನ ಮಾಡಿದ್ದೇನೆ‌. ಕೆಲ ವಿಷಯಗಳಲ್ಲಿ ಹೆಚ್ಚು ಆಸ್ಥೆ ವಹಿಸಿದ್ದರೆ KGFರೀತಿಯೇ ಇನ್ನೂ ಹೆಚ್ಚು ಸದ್ದು ಮಾಡುವ ಎಲ್ಲ ಸಾಧ್ಯತೆಯಿತ್ತು.

ನಿಂಬೆಹಣ್ಣನ್ನು ಡೆಲ್ಲಿಯಿಂದ ತರಿಸಿದೆ. ಕಡ್ಲೆಕಾಯಿ ಉತ್ತರಪ್ರದೇಶದ್ದು. ಎಣ್ಣೆ ಮಧ್ಯಪ್ರದೇಶದ್ದು. ಉಪ್ಪು ಕನ್ಯಾಕುಮಾರಿದು. ಕಡ್ಲೆಬೇಳೆ ತಿರುವನಂತಪುರದ್ದು. ಹಸಿಮೆಣಸಿನಕಾಯಿ ಕಾಶ್ಮೀರದ್ದು. ಸಾಸಿವೆ ಬಂಗಾಳದ್ದು.......ಇತ್ಯಾದಿ

ಹೀಗೆ ಯಾವ ಯಾವ ಪದಾರ್ಥಗಳನ್ನು ಎಲ್ಲೆಲ್ಲಿಂದ ಎಷ್ಟೆಷ್ಟು ಕಷ್ಟಪಟ್ಟು ತರಿಸಿದೆವು ಅಂತ ಯಾರಾದರೂ ಹೇಳುತ್ತಾರೆ ಅಂದುಕೊಳ್ಳೋಣ. ಅವೆಲ್ಲವೂ ಮುಖ್ಯವಾಗುತ್ತವಾ? ಇಲ್ಲ. ಚಿತ್ರಾನ್ನ ಮಾಡಿ ತಟ್ಟೆಯಲ್ಲಿ ಕೊಟ್ಟಾಗ ಅದರ ಮೊದಲ ತುತ್ತನ್ನು ತೆಗೆದು ಬಾಯಿಗಿಟ್ಟು ಆಸ್ವಾದಿಸುತ್ತೇವಲ್ಲ. ಆ ಕ್ಷಣದಲ್ಲಿ ಅದನ್ನು ತಿನ್ನುತ್ತಿರುವವನಿಗೆ ಅದರ ರುಚಿ ಹೇಗಿತ್ತು ಅನ್ನುವುದಷ್ಟೇ ಅಲ್ಲಿ ಮುಖ್ಯವಾಗುತ್ತದೆ.

ಈ ಸಿನಿಮಾದಲ್ಲಿ ಆಗಿದ್ದು ಅದೇ‌. ಸಿನಿಮಾ ಮುಗಿದು ಹೊರಬರುವಾಗ ಏನೋ ಮಿಸ್ ಆಯ್ತಲ್ಲ ಅಂತ ಅನ್ನಿಸುವುದು ಸಹಜ. ಆ ನಿಟ್ಟಿನಲ್ಲಿ ಅದಕ್ಕೆ ಕಾರಣಗಳೇನಿರಬಹುದು ಅನ್ನುವುದನ್ನು ಯೋಚಿಸಲು ಪ್ರಯತ್ನಪಟ್ಟಿದ್ದೇನೆ ಅಷ್ಟೇ. ಇದು "ಅವನೇ ಶ್ರೀಮನ್ನಾರಾಯಣ" ಸಿನಿಮಾದ ವಿಮರ್ಶೆಯಲ್ಲ. ಇದು ನನ್ನ ಅಭಿಪ್ರಾಯ ಅಷ್ಟೇ. ಹತ್ತನೇ ತರಗತಿಯಲ್ಲಿ ಫೇಲಾದವನನ್ನು, ಡಿಗ್ರಿಯಲ್ಲಿ ಫೇಲಾದವನನ್ನು, ಎಂಬಿಎ ಮಾಡಲು ಪರೀಕ್ಷೆ ಬರೆದು ಕಮ್ಮಿ ಮಾರ್ಕ್ಸ್ ತೆಗೆದುಕೊಂಡವರನ್ನು ಒಂದೇ ತಕ್ಕಡಿಯಲ್ಲಿ ತೂಗಿ ಎಲ್ಲರೂ ಒಂದೇ ಎಂದು ಹೇಳಲು ಹೇಗೆ ಸಾಧ್ಯವಿಲ್ಲವೋ, ಹಾಗೆಯೇ "ಅವನೇ,,,ಶ್ರೀ" ಸಿನಿಮಾವನ್ನು ಕೂಡ ಉಳಿದ ಸಿನಿಮಾಗಳಿಗೆ ಹೇಳುವಂತೆ ಒಂದೇ ವಾಕ್ಯದಲ್ಲಿ ಹೇಗಿದೆ ಎಂದು ಹೇಳಲು ಅಸಾಧ್ಯ. ಮೊನ್ನೆ ಈ ಸಿನಿಮಾದ ಪ್ರೀಮಿಯರ್ ಶೋ ನೋಡಿ ಬಂದ ಅನೇಕರಿಗೆ ಹೇಗಿದೆ ಎಂದು ಕೇಳಿದ್ದಕ್ಕೆ ಅವರು ಕೊಟ್ಟ ಉತ್ತರವೂ ಹೀಗೆಯೇ ಇತ್ತು. ಆಗಲೇ ಹೀಗಿರಬಹುದಾ ಅನಿಸಿತ್ತು.

ಕಾರಣ ನಮಗೆಲ್ಲರಿಗೂ ಗೊತ್ತಿದೆ. "ಅವನೇ ಶ್ರೀ.." ಎರಡು ತಿಂಗಳಲ್ಲಿ ಸ್ಕ್ರಿಪ್ಟ್ ಮುಗಿಸಿ, ನಲವತ್ತು ದಿನಗಳಲ್ಲಿ ಚಿತ್ರೀಕರಣ ಮಾಡಿ, ಒಂದು ತಿಂಗಳಲ್ಲಿ ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿಸಿ, ತರಾತುರಿಯಲ್ಲಿ ಬಂದ ಸಿನಿಮಾವಲ್ಲ. ಸಿನಿಮಾ ತಂಡದ ಮೂರುವರ್ಷಗಳ ಕಠಿಣ ಶ್ರಮ ನಮಗೆ ತೆರೆಯಲ್ಲಿ ಎದ್ದು ಕಾಣುತ್ತದೆ. ಅಮರಾವತಿಯೆಂಬ ಕಾಲ್ಪನಿಕ ನಗರ, ಅಲ್ಲಿ ನಡೆಯುವ ಕಥೆ, ಪಾತ್ರಧಾರಿಗಳ ನಟನೆ, ಉಡುಗೆ ಎಲ್ಲಕ್ಕೂ ಹಾಕಿದ ಶ್ರಮ ನಿಜಕ್ಕೂ ಎದ್ದು ಕಾಣುತ್ತದೆ. Presentation ವಿಚಾರಕ್ಕೆ ಬಂದರೆ ಈ ಸಿನಿಮಾ ಖಂಡಿತವಾಗಿಯೂ ಎತ್ತರದಲ್ಲಿ ನಿಲ್ಲುತ್ತದೆ.

ಹಾಗಂತ ಸಿನಿಮಾ ಒಂದು ಪ್ರಾಡಕ್ಟ್ ಆಗಿ ಇಷ್ಟವಾಗಲೇಬೇಕೇ? ಇಲ್ಲದೆಯೂ ಇರಬಹುದು. ಅದಕ್ಕೆ ಕಾರಣವೂ ಇರುತ್ತದೆ. ನಮಗೆ ಬೆಸ್ಟ್ ಅನ್ನಿಸುವ ಕಥೆ ಇನ್ನೊಬ್ಬನಿಗೆ ಸಾಧಾರಣ ಅನ್ನಿಸಬಹುದು. ಮೇಕಿಂಗ್ ಎಷ್ಟು ಚಂದವೇ ಇದ್ದರೂ ಕಥೆಯೂ ಅದಕ್ಕೆ ಜೀವಾಳವೇ. ಅದನ್ನು ಎಲ್ಲಿಯೂ ಅಲ್ಲಗೆಳೆಯುವಂತಿಲ್ಲ. ವೈಯಕ್ತಿಕವಾಗಿ ನನಗೆ ಕೊರತೆ ಅನ್ನಿಸಿದ್ದು ಕಥೆಯೇ. "ಅವನೇ ಶ್ರೀ.." ಸಿದ್ಧ ಮಾಡಿಕೊಂಡ ದೊಡ್ಡ ವೇದಿಕೆಗೆ ಅಯ್ದುಕೊಂಡ ಕಥೆ ತಕ್ಕುದಾಗಲಿಲ್ಲ. ಪರಿಪೂರ್ಣ ಅನಿಸಿಕೊಳ್ಳಲು ಮತ್ತು ಸಿನಿಮೀಯ ಅನುಭವ ನೀಡಲು ಆಯ್ದುಕೊಂಡ ಮತ್ತು ನಿರ್ಲಕ್ಷಿಸಿದ ವಿಷಯಗಳೇ ಕಥೆಯ ಪ್ರಮುಖ ಹಂತಗಳಲ್ಲಿ ಪ್ರೇಕ್ಷಕನಿಗೆ ರೋಮಾಂಚಕ ಅನುಭವಗಳನ್ನು ನೀಡಲು ವಿಫಲವಾದವು. ಯಾವುದೇ Genreನ ಕಮರ್ಷಿಯಲ್ ಸಿನಿಮಾಗಳಾಗಲಿ, ಅಲ್ಲಲ್ಲಿ ಆ ಬಗೆಯ ಅಂಶಗಳು ಇರಲೇಬೇಕು. ಅದು ನಾಯಕನ ಎಂಟ್ರಿ ದೃಶ್ಯದ ಮುನ್ನ ನಾವು ಪ್ರೇಕ್ಷಕನಿಗೆ ಕಟ್ಟಿಕೊಡುವ ಹಿನ್ನೆಲೆಯಿರಬಹುದು. ಅಥವಾ ನಿಧಿ ಸಿಕ್ಕಾಗಿನ ದೃಶ್ಯವಿರಬಹುದು, ಅಥವ ಅನಿರೀಕ್ಷಿತ ಸಂದರ್ಭದಲ್ಲಿ ದಿಢೀರ್ ಸಂಭವಿಸುವ ಘಟನೆಯಾಗಬಹುದು. "ಉಳಿದವರು ಕಂಡಂತೆ" ಸಿನಿಮಾದ (ರಿಶಬ್ ಶೆಟ್ಟಿ-ತಾರ) ಅಮ್ಮ-ಮಗ ಅನೇಕ ವರ್ಷಗಳ ನಂತರ ಮುಖಾಮುಖಿಯಾಗುವ ದೃಶ್ಯ, KGFನ ಮಣ್ಣಲ್ಲಿ ಬಿದ್ದ ಬ್ರೆಡ್‌ಅನ್ನು ನಾಯಕ ಕಾರು ನಿಲ್ಲಿಸಿ ಆ ತಾಯಿಗೆ ಎತ್ತಿಕೊಡುವ ಈ ಬಗೆಯ ದೃಶ್ಯಗಳನ್ನು ಮರೆಯಲು ಸಾಧ್ಯವೇ?

ಸಿನಿಮಾದ ಕಾಲಾವಧಿ ಮೂರು ಗಂಟೆಗೂ ಹೆಚ್ಚು, ಇದು ಖಂಡಿತವಾಗಿಯೂ ಜಾಸ್ತಿಯೇ. ಆದರೆ ಎಲ್ಲಿಯೂ ಬೋರ್ ಹೊಡೆಸುವುದಿಲ್ಲ ಅನ್ನುವಷ್ಟರ ಮಟ್ಟಿಗೆ ಸಿನಿಮಾದ ನಿರೂಪಣೆಯ ಬಗ್ಗೆ ನನ್ನ ಮೆಚ್ಚುಗೆಯಿದೆ. ರಕ್ಷಿತ್ ಶೆಟ್ಟಿಯವರಿಗೆ ತನ್ನ Strength & Weakness ಬಗ್ಗೆ ಅರಿವಿದೆ. ಮತ್ತು ತನ್ನ ಯಾವ ಮ್ಯಾನರಿಸಂ ಪ್ರೇಕ್ಷಕನಿಗೆ ಇಷ್ಟವಾಗಬಹುದೆಂದು ಗೊತ್ತಿದೆ. ಹಾಗಾಗಿ ಅದನ್ನೇ ಈ ಸಿನಿಮಾದಲ್ಲಿ ಅಳವಡಿಸಿಕೊಂಡಿದ್ದಾರೆ. ಅದು ಸರಿಯಾಗಿ ಕೆಲಸಮಾಡಿದೆ ಕೂಡಾ. "Hands-up" ಹಾಡು ಬಿಟ್ಟರೆ ಉಳಿದವು ಮನಸ್ಸಿಗೆ ನಾಟಲಿಲ್ಲ. ಆದರೆ ಸಿನಿಮಾ ಪೂರ್ತಿ ಅಮರಾವತಿಯ ಕಾಲ್ಪನಿಕ ಲೋಕದಲ್ಲಿ ತೇಲಿಸಿದ್ದು ಮಾತ್ರ ಚಿತ್ರದುದ್ದಕ್ಕೂ ತೇಲಿ ಬರುವ ಹಿನ್ನೆಲೆ ಸಂಗೀತ. ಪ್ರತೀ ಚಿತ್ರದಲ್ಲಿ ಉತ್ತಮ್ಮ ಹಿನ್ನೆಲೆ ಸಂಗೀತವನ್ನು ಆಸ್ವಾದಿಸುತ್ತ ಇದೀಗ ನಮ್ಮ expectation ಕೂಡ ಹಾಗೆಯೇ ಬೆಳೆಯುತ್ತಿದೆ ಅನ್ನುವುದಕ್ಕೆ ಈಗ ನಮಗೆ ಸಿಗುತ್ತಿರುವ ಹಿನ್ನೆಲೆ ಸಂಗೀತದ ಗುಣಮಟ್ಟವೇ ಸಾಕ್ಷಿ.

ಅಮರಾವತಿಯ ಕೋಟೆಯನ್ನು, ಕೋಟೆಯೊಳಗಿನ ನಾಯಕನನ್ನು, ಹೊಡೆದಾಟದ ದೃಶ್ಯಗಳನ್ನು ಅದ್ಭುತವಾಗಿ ತೋರಿಸಿರುವ ಕ್ಯಾಮೆರಾ ಕೆಲಸ ಶ್ಲಾಘನೀಯ. ಅಮರಾವತಿಯ ಪ್ರಪಂಚವನ್ನೇ ಕಟ್ಟಿಕೊಟ್ಟ ಕಲಾನಿರ್ದೇಶನದ ವಿಭಾಗಕ್ಕೂ ಕ್ರೆಡಿಟ್ ಸಲ್ಲಬೇಕು. ಕಡೆಯ ಹೊಡೆದಾಟದ ದೃಶ್ಯದಲ್ಲಿ ಸಿಗುವ ನೈಜತೆ, ಥ್ರಿಲ್ ಮೊದಲ ಬಾರ್'ನೊಳಗಿನ ಹೊಡೆದಾಟದ ದೃಶ್ಯದಲ್ಲಿ ಸಿಗಲಿಲ್ಲ. ಇಂಥ ದೃಶ್ಯಗಳಲ್ಲಿ ಲೋಪವನ್ನೆಲ್ಲ ಮುಚ್ಚಿಹಾಕಿದ್ದು ಮಾತ್ರ ರಕ್ಷಿತ್-ಅಚ್ಯುತ್ ಜೋಡಿಯ ನಕ್ಕುನಗಿಸುವ ತಿಳಿಹಾಸ್ಯ.

ಮತ್ತದೇ ಬರವಣಿಗೆಯ ವಿಭಾಗಕ್ಕೆ ಬಂದರೆ ನಾಟಕ ತಂಡ, ಅವರ ಹಿನ್ನೆಲೆ, ನಿಧಿಯ ರಹಸ್ಯ, ಸಮುದ್ರಮಂಥನದ ನಾಟಕ, ನಿಧಿಯನ್ನು ಪತ್ತೆ ಹಚ್ಚುವಿಕೆ ಇವೆಲ್ಲವೂ ಒಗಟಿನ ರೀತಿಯಲ್ಲೇ ಇದ್ದರೂ ಅವನ್ನು ಬಿಡಿಸಿದಾಗಲೂ ಏನೋ ಹೊಸದು ಅನ್ನಿಸಿಕೊಳ್ಳಲಿಲ್ಲ. ಆ ಭಾಗವೂ ರಸಾನುಭವ ಕೊಡುವಲ್ಲಿ ವಿಫಲವಾಯಿತು.

ಇವೆಲ್ಲದರ ಮಧ್ಯೆ ನಾವೂ ಸಿನಿಮಾದ ಹೀರೋಗಳೇ ಅನಿಸಿಕೊಂಡವರು ಮಾತ್ರ ಖಳನಟರಾದ ಬಾಲಾಜಿ ಮನೋಹರ್ ಮತ್ತು ಪ್ರಮೋದ್ ಶೆಟ್ಟಿ. ಕನ್ನಡ ಚಿತ್ರರಂಗ ಇವರನ್ನು ಹೀಗೆಯೇ ಹೆಚ್ಚು ಅವಕಾಶ ನೀಡಿ ಬಳಸಿಕೊಳ್ಳುವಂತಾಗಲಿ.

ಯಾವುದೇ ಕನ್ನಡ ಸಿನಿಮಾದ ಬಗ್ಗೆ ಕನ್ನಡ ಪ್ರೇಕ್ಷಕರಾಗಿ ದ್ವೇಷ ನಮಗೇಕಿರಬೇಕು? ನಮ್ಮ ಕನ್ನಡ ಸಿನಿಮಾ...ಅದರ ಬಗ್ಗೆ ನಮ್ಮ expectation ಹೆಚ್ಚಿರಬೇಕು. ಅದಕ್ಕೆ ತಕ್ಕುದಾದ ಸಿನಿಮಾಗಳನ್ನು ಚಿತ್ರರಂಗದವರು ಮಾಡಬೇಕು. ಮತ್ತು ಆ ಸಿನಿಮಾಗಳು ಜಗತ್ತನ್ನು ಮುಟ್ಟಬೇಕು. ಎಲ್ಲ ಕಡೆ ನಮ್ಮ ಎದೆತಟ್ಟಿಕೊಳ್ಳುತ್ತ "ನಮ್ಮ ಸಿನಿಮಾ ನೋಡಿ" ಅಂತ ಹೇಳಬೇಕೆನ್ನುವುದು ದೂರದಾಸೆ. ಆ ಬಗೆಯ ಅನಿಸಿಕೆಯನ್ನು ಅತ್ತ ಕಡೆ ಗುರಿಯಿಟ್ಟವರಿಗಷ್ಟೇ ಹೇಳಲು ಸಾಧ್ಯವಲ್ಲವೇ? ಹಾಗಾಗಿಯೇ ಈ ಅಭಿಪ್ರಾಯ "ಅವನೇ ಶ್ರೀ.." ತಂಡಕ್ಕೆ.

ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಚೆನ್ನಾಗಿ ಸಂಪಾದಿಸಲಿ. ಮತ್ತೆ ಇದೇ ಚಿತ್ರತಂಡ ಇನ್ನೂ ದೊಡ್ಡ ಸಾಹಸಗಳಿಗೆ ಕೈಹಾಕಲಿ ಎಂಬ ಹಾರೈಕೆಯೊಂದಿಗೆ.....

-Santhosh Kumar LM
30-Dec-2019

Friday, December 20, 2019

Truth And Justice (2019)- Estonian Movie



Truth and Justice (2019)

ಸದ್ಯಕ್ಕೆ ಈ ವರ್ಷದ ಆಸ್ಕರ್ ಪ್ರಶಸ್ತಿಗೆ " Best Foreign Language Film " ವಿಭಾಗದಲ್ಲಿ ಆಯ್ಕೆಗೊಂಡಿರುವ ಈಸ್ಟೋನಿಯ ದೇಶದ ಚಿತ್ರ.  ಈಸ್ಟೋನಿಯಾ ಭಾಷೆಯಲ್ಲಿಯೇ ಸಿನಿಮಾ ಇದೆ. ಸಂಭಾಷಣೆ ಅರ್ಥೈಸಿಕೊಳ್ಳಲು ಸಬ್ ಟೈಟಲ್'ನ ಸಹಾಯ ಬೇಕು.

ಹತ್ತೊಂಭತ್ತನೆಯ ಶತಮಾನದ ಕೊನೆಯ ಭಾಗದಲ್ಲಿ ನಡೆವ ಕಥೆಯನ್ನು ಹೊಂದಿರುವ ಈ ಸಿನಿಮಾ ಕಾದಂಬರಿ ಆಧಾರಿತ. ಐದು ಕಾದಂಬರಿಗಳಿರುವ ಈ   "Truth and Justice" ಸರಣಿಯನ್ನು ಬರೆದವರು A.H.Tammsaare, 1926 ರಲ್ಲಿ. ಈ ಸಿನಿಮಾ ಆ ಸರಣಿಯ ಮೊದಲನೆಯ ಕಾದಂಬರಿಯನ್ನು ಆಧರಿಸಿದೆ.

ಈಸ್ಟೋನಿಯಾ ದೇಶದಲ್ಲಿ ವರ್ಷಕ್ಕೆ ನಿರ್ಮಾಣವಾಗುವುದೇ ಐದಾರು ಸಿನಿಮಾಗಳು. ಅವುಗಳಲ್ಲೇ ಇಂಥದ್ದೊಂದು ಸಿನಿಮಾ ತಯಾರಾಗಿ ಅದು ಆಸ್ಕರ್'ವರೆಗೆ ಬಂದು ನಿಂತಿರುವುದು ಅದು ನಿಜಕ್ಕೂ ಅಚ್ಚರಿಯ ಸಾಧನೆ.

ಕಡಿಮೆ ಬೆಲೆಯಲ್ಲಿ ಜೌಗು ನೆಲದ ಜಮೀನೊಂದನ್ನು ಕೊಂಡು ಅಲ್ಲಿ ನೆಲೆಸಲು ಪತ್ನಿಯ ಜೊತೆ ಬರುವ ನಾಯಕ, ಅದರಲ್ಲಿ ಬೇಸಾಯ ಶುರುಮಾಡಿ ಒಳ್ಳೆಯ ಫಸಲನ್ನು ತೆಗೆಯಲು ಹೆಣಗುವುದು....
ಮುಂದೆ ತನ್ನ ಆಸ್ತಿಗೆ ಹಕ್ಕುದಾರನಾಗಲು ಗಂಡು ಮಗನೇ ಬೇಕೆನ್ನುವುದು
ಕಿರುಕುಳ ಕೊಡುವ ಪಕ್ಕದ ಜಮೀನಿನವ....

ಹೀಗೆ ಅನೇಕ ಎಳೆಗಳು ಒಟ್ಟೊಟ್ಟಿಗೆ ಸಾಗುತ್ತಲೇ ಮೂಲಕಥೆಯನ್ನು ಹೇಳುತ್ತ ಅಲ್ಲಿಯ ಜೀವನವನ್ನು ಮತ್ತು ಆ ಕಾಲಘಟ್ಟದ ಅವರ ಸಂಸ್ಕೃತಿಯನ್ನು ನಮಗೆ ಕಟ್ಟಿಕೊಡುತ್ತವೆ. ಕಥೆಯ ಬಗ್ಗೆ ಜಾಸ್ತಿ ಹೇಳುವುದು ಬೇಡ.

ಆದರೆ ನೋಡುವಾಗ ನಮಗೆ ತಕ್ಷಣಕ್ಕೆ ಮನದಟ್ಟಾಗುವುದು ಸಿನಿಮಾ ತಂಡದ ಶ್ರಮ. ಇಡೀ ಸಿನಿಮಾದ ಕಥೆ ಅನೇಕ ದಶಕಗಳನ್ನು, ಮತ್ತು ಬೇರೆ ಬೇರೆ ಋತುಗಳನ್ನು ಕಾಣುತ್ತದೆ. ಪ್ರತೀ ಋತುವಿನಲ್ಲೂ ವ್ಯವಸಾಯದ ಬೇರೆ ಬೇರೆ ಕೆಲಸಗಳನ್ನು, ಹಾಗೆ ಬೇರೆ ಬೇರೆ ಕಾಲಘಟ್ಟದಲ್ಲಿಯ ಕಥೆಯನ್ನು ಆ ಪಾತ್ರಗಳ ಬೇರೆ ಬೇರೆ ವಯಸ್ಸಿನ ವೇಷದೊಂದಿಗೆ ತಯಾರು ಮಾಡಿ ಅವರಿಂದ ನಟನೆ ತೆಗೆಯುವುದಿದೆಯಲ್ಲ. ಅದು ದುಸ್ಸಾಹಸವೆನಿಸುತ್ತದೆ. ಪಾತ್ರಗಳಿರಲಿ. ಒಂದೇ ನೆಲದಲ್ಲಿ ಮಳೆ, ಬಿಸಿಲು, ಹಿಮ ಹೀಗೆ ಬೇರೆ ಬೇರೆ ಹವಾಮಾನವಿದ್ದಾಗಲೂ ಅದನ್ನು ಕಥೆಗೆ ತಕ್ಕಂತೆ ಬೆಳೆಯನ್ನು, ಕೆಸರನ್ನು, ಫಸಲನ್ನು ತಯಾರು ಮಾಡಿ ದೃಶ್ಯ ಕಟ್ಟುವುದಿದೆಯಲ್ಲ ಆ ಶ್ರಮ ಸಿನಿಮಾ ನೋಡುವಾಗಲೇ ನಮಗೆ ಗೊತ್ತಾಗುತ್ತದೆ.

ಸಿನಿಮಾ ಎರಡೂ ಮುಕ್ಕಾಲು ಗಂಟೆಯಿದೆ. ಅದ್ಭುತ ಹಿನ್ನೆಲೆ ಸಂಗೀತದೊಂದಿಗೆ ಅಲ್ಲಲ್ಲಿ  ನಿಶಬ್ಧವಿದೆ. ಕೆಲವು ದೃಶ್ಯಗಳಲ್ಲಿ ತೀವ್ರತೆಯಿದೆ. ಅವೆಲ್ಲವನ್ನು ಸಿನಿಮಾ ನೋಡಿಯೇ ಅರ್ಥೈಸಿಕೊಳ್ಳಬೇಕು, ಅನುಭವಿಸಬೇಕು.

ಪ್ರಪಂಚದ ಬೇರೆ ಬೇರೆ ಭಾಷೆಯ ಸಿನಿಮಾಗಳನ್ನು ನೋಡುವ ಅಭ್ಯಾಸವಿದ್ದರೆ ನೋಡಿ. ನಿಮಗೆ ಖಂಡಿತ ಇಷ್ಟವಾಗಬಹುದು.

-Santhosh Kumar LM
20-Dec-2019

Wednesday, December 18, 2019

ಗಂಟುಮೂಟೆ (2019)









ಗಂಟುಮೂಟೆ (2019)

ಹೆಣ್ಣುಮಗಳೊಬ್ಬಳು ಯಾರಿಗೂ ಹೇಳದ ಹೊಟ್ಟೆಯೊಳಗಿನ ಗುಟ್ಟೊಂದನ್ನು ಮುಂದೊಮ್ಮೆ ಅತ್ಮೀಯನೊಬ್ಬನಿಗೆ ಹೇಳಿದಂತೆ ಕಥೆ ಹೆಣೆಯಲಾಗಿದೆ. ಎಲ್ಲ ಸಿನಿಮಾ-ಕಥೆಗಳಲ್ಲಿ "ಅದು ನಮಗೆ ಕೊಡುವ ಸಂದೇಶವೇನು?" ಅಂತ ಕೇಳುವ ಅವಶ್ಯಕತೆಯಿಲ್ಲ. ಕೆಲವು‌ ಕಥೆಗಳನ್ನು ಕಟ್ಟುವಾಗ ಅದರ ಬಗ್ಗೆ ಯೋಚಿಸಿರುವುದೂ ಇಲ್ಲ. It's fair!

ಸಮಸ್ಯೆಯಾಗುವುದು ಸಿನಿಮಾವೊಂದು ಸಾಮಾನ್ಯ ಮನರಂಜನೆಯನ್ನಾದರೂ ಕೊಡದೆ ಹೋದಾಗ! ಆದರೆ ಗಂಟುಮೂಟೆ ಸಿನಿಮಾ ಆ ಬಗೆಯ ದ್ರೋಹವನ್ನೇನೂ ಮಾಡುವುದಿಲ್ಲ. ಮೊದಲನೆಯ ದೃಶ್ಯದಿಂದಲೇ ನಮ್ಮನ್ನು ತನ್ನೊಳಗೆ ಹಿಡಿದಿಟ್ಟುಕೊಳ್ಳುತ್ತದೆ. ಅಷ್ಟರ ಮಟ್ಟಿಗೆ ಅದು ಚಿತ್ರದ ಯಶಸ್ಸೇ!


ಕಥೆಯಲ್ಲಿ ಹೊಸತೇನಿಲ್ಲ. ಹದಿಹರೆಯದ ವಯಸ್ಸಿನ ಆಕರ್ಷಣೆ, ಪ್ರೇಮ, ತೊಳಲಾಟ, ಯಾವುದು ಸರಿ-ತಪ್ಪು ತಿಳಿಯದ ದ್ವಂದ್ವ, ಕಡೆಗೆ ಅದರಿಂದ ಉಂಟಾಗುವ ಪರಿಣಾಮಗಳು ಇವುಗಳ ಬಗ್ಗೆ ಅನೇಕ ಸಿನಿಮಾಗಳಲ್ಲಿ ನೋಡಿದ್ದೇವೆ. ಆದರೆ ಈ ಸಿನಿಮಾ ಅದೇ ಕಥೆಯನ್ನು ಹೇಳುವುದರಲ್ಲಿ ಹೊಸತೆನಿಸುತ್ತದೆ. ಏನಾಗಬಹುದು ಎಂದು ನಾವು ಊಹಿಸಬಲ್ಲೆವಾದರೂ ಆ ಹುಡುಗಿಯ ಮೂಲಕವೇ ಕಥೆ ಹೇಳಿಸಿರುವುದು ವಿಭಿನ್ನ ಅನುಭವ ನೀಡುತ್ತದೆ. ಬಹುಶಃ ಇದೇ ಸಿನಿಮಾವನ್ನು ಪುರುಷರೊಬ್ಬರು ನಿರ್ದೇಶಿಸಿದ್ದರೆ ಕಥೆಗೆ ಬೇರೆಯದೇ ಬಗೆಯ ಧಾಟಿ ಇರುತ್ತಿತ್ತು ಅನಿಸುವುದು ಸಹಜ. ಏಕೆಂದರೆ ಹಸಿಬಿಸಿ ದೃಶ್ಯಗಳನ್ನು ಕೇವಲ ಚುಂಬನಕ್ಕೆ ಸೀಮಿತವಾಗಿಸಿ ಅವನ್ನೂ ಸಹ ಸಹ್ಯವಾಗುವಂತೆಯೇ ಚಿತ್ರಿಕರಿಸಲಾಗಿದೆ. ನನಗೆ ಇಷ್ಟವಾದದ್ದು ಹಾಡುಗಳ ಮೂಲಕ ಹೇಳಬಹುದಾದ ಸಂದರ್ಭಗಳಲ್ಲಿ ಕವಿತೆಯ ಸಾಲುಗಳನ್ನು ಬಳಸಿರುವುದು ವಿಭಿನ್ನ ಪ್ರಯತ್ನ‌, ಚೆನ್ನಾಗಿ appeal ಆಗುತ್ತದೆ.

ಪ್ರಶ್ನೆಯೇ ಇಲ್ಲ. ತೇಜು ಬೆಳವಾಡಿಯದು ಕಾಡುವ ಅಭಿನಯ. ಆದರೆ ಅವರೊಟ್ಟಿಗೆ ಮಧು ಪಾತ್ರ ಮಾಡಿದ ನಿಶ್ಚಿತ್ ಸಹ ತುಂಬಾ ಇಷ್ಟವಾದರು. ಅವರ ಬಗ್ಗೆ ಹೆಚ್ಚು ಸುದ್ದಿ ಬರದಿದ್ದುದು ನನಗೆ ಅಚ್ಚರಿಯೇ!! ಮೊದಲನೇ ಬಾರಿ ರಿಸಲ್ಟ್ ಬಂದಾಗ ಈಕೆ ಕ್ಲಾಸಿಗೆ ಮೊದಲನೆಯವಳಾಗಿ ಪಾಸಾಗಿ ಆತ ಫೇಲಾಗಿ ಅತ್ತ ನಿಂತು ಸಿಗರೇಟು ಸೇದುತ್ತಿರುವಾಗ ಅವರಿಬ್ಬರ ನಡುವೆ ನಡೆಯುವ ಸಂಭಾಷಣೆ, gradually ಅವನ ಮನಸ್ಸಿಗಾಗಿರುವ ನೋವನ್ನು ಹೇಳುವಿಕೆ ಇಷ್ಟವಾಯಿತು.

smoking ದೃಶ್ಯಗಳು, ಚುಂಬನದ ದೃಶ್ಯಗಳನ್ನು ಕಡಿಮೆ ಬಳಸಿಕೊಳ್ಳಬಹುದಿತ್ತು. ಪ್ರತೀ ದೃಶ್ಯದಲ್ಲಿ Smoking ಮಾಡುವಾಗಲಂತೂ ಆತನ ಗೆಳತಿಯರು ಬೇಡವೆನ್ನದೆ ಏನೂ ಆಗೇ ಇಲ್ಲ ಅನ್ನುವ ಥರ ಡೈಲಾಗ್ ಹೇಳಿದ್ದು accept ಮಾಡಿಕೊಳ್ಳಲಾಗಿಲ್ಲ. (ಬಹುಶಃ ಇದೇ ದೃಶ್ಯಗಳ ಬಗ್ಗೆ ಕೆಲ ಗೆಳೆಯರು ಅಸಹನೆ ತೋರಿರಬಹುದಾ? ಗೊತ್ತಿಲ್ಲ) . ಮಧು ಸಾವಿನ, ನಂತರದ ದೃಶ್ಯಗಳಲ್ಲಿ ಇನ್ನಷ್ಟು ತೀವ್ರತೆ ಇದ್ದಿದ್ದರೆ ಸಿನಿಮಾ ಇನ್ನೂ ಚೆನ್ನಾಗಿ ತಲುಪುತ್ತಿತ್ತು ಅನಿಸಿತು. ಪ್ರ್ಯಾಕ್ಟಿಕಲ್ ಆಗಿ ಯೋಚಿಸುವ ಗಣಿತದ ಮೇಷ್ಟ್ರಿನ ಪಾತ್ರವನ್ನು ಇನ್ನೂ ಹೆಚ್ಚು ಬಳಸಿಕೊಳ್ಳಬಹುದಿತ್ತು.

ಸಿನಿಮಾ ಥಿಯೇಟರ್‌ನಲ್ಲಿ ಗಾಂಧೀಕ್ಲಾಸಿನಲ್ಲಿ ಕುಳಿತು ಆಕೆ‌ ಸಿನಿಮಾ ನೋಡುವಾಗ ಒಬ್ಬಾತನ ಅಸಭ್ಯ ನಡವಳಿಕೆ ತೋರಿದಾಗ, ಆಕೆ ಬಾಲ್ಕನಿಗೆ ಬಂದು ಸಿನಿಮಾ ಕುಳಿತು ನೋಡುವುದು ಗಾಂಧೀಕ್ಲಾಸಿನ ಜನರ ಬಗೆಗೆ ಬೇರೆಯದೇ generalized comment ಹೇಳುತ್ತದೆ. ಅದು ಉದ್ದೇಶಪೂರ್ವಕ ಅಲ್ಲದಿರಬಹುದು. ಆದರೆ ಅಷ್ಟು ತಕ್ಷಣಕ್ಕೆ ಅನಿಸದಿದ್ದರೂ ಕೆಲ ಪ್ರೇಕ್ಷಕರು ಸೂಕ್ಷ್ಮವಾಗಿ ಇಂಥವುಗಳನ್ನು ಗಮನಿಸುತ್ತಾರೆ ಅನ್ನುವುದನ್ನು ನಿರ್ದೇಶಕರು ಮರೆಯಬಾರದು.

"ಗಂಟುಮೂಟೆ", ಖಂಡಿತ ಒಮ್ಮೆ ನೊಡಬಹುದಾದ ಸಿನಿಮಾ. ನನಗಿಷ್ಟವಾಯಿತು.

-Santhosh Kumar LM
17-Dec-2019

Tuesday, December 3, 2019

A Write up On two Tamil movies









ನನಗೆ ಮನರಂಜನೆಗೋಸ್ಕರವೇ ಅಂತ ತೆಗೆದ ಸಿನಿಮಾ ಬೇಡ. ವಿಭಿನ್ನವಾಗಿರುವ ಸಿನಿಮಾ ಬೇಕು ಅಂತ ಕೇಳುವ 'ವಿಭಿನ್ನತೆಯನ್ನು ಇಷ್ಟಪಡುವ ಸಿನಿಮಾ ಪ್ರೇಕ್ಷಕ' ನೀವಾಗಿದ್ದರೆ ಎರಡು ತಮಿಳು ಸಿನಿಮಾಗಳನ್ನು ಹೇಳುತ್ತೇನೆ. ನೀವು ನೋಡಲೇಬೇಕು. ಇವೆರಡೂ ಸಿನಿಮಾಗಳಲ್ಲಿ ಸಾಮ್ಯತೆಯಿದೆ. ಮನರಂಜನೆ ಕೇಳುತ್ತೀರೋ? ಅಷ್ಟು ಸಿಗಲಾರದು. ಆದರೆ ವಿಭಿನ್ನ ಕಥಾನಿರೂಪಣೆ ಈ ಎರಡು ಸಿನಿಮಾಗಳಲ್ಲೂ ಸಿಗುತ್ತದೆ.

1. ಕರ್ಮ (2015)
2. ಒತ್ತ ಸೆರಪ್ಪು size-7 (2019)

ಪಾರ್ಥಿಬನ್ ನಟಿಸಿದ ಇತ್ತೀಚೆಗಷ್ಟೇ ಬಿಡುಗಡೆಯಾದ ಒತ್ತ ಸೆರಪ್ಪು ಸಿನಿಮಾ ಎಲ್ಲೆಡೆ ಸಿನಿಪ್ರಿಯರ ಪ್ರಶಂಸೆಗೆ ಕಾರಣವಾಗಿದೆ. ಆದರೆ ಇದೇ ಬಗೆಯ ವಿಚಾರವಿದ್ದ ಸಿನಿಮಾ "ಕರ್ಮ" 2015 ರಲ್ಲಿಯೇ ಬಿಡುಗಡೆಯಾಗಿತ್ತು(ಥಿಯೇಟರಿನಲ್ಲಲ್ಲ, ಬೇರೆ ಮಾಧ್ಯಮಗಳ ಮೂಲಕ). ಆಗ ಆ ಸಿನಿಮಾಗೆ ಅಷ್ಟು ಜನಪ್ರಿಯತೆ ಸಿಗಲಿಲ್ಲ.

ಎರಡೂ ಸಿನಿಮಾಗಳಲ್ಲಿ ಇರುವ ವಿಶೇಷವೆಂದರೆ ಈ ಸಿನಿಮಾಗಳಲ್ಲಿ ಇರುವುದು ಒಂದೇ ಪಾತ್ರ. ನಾಯಕ ಪಾತ್ರವೇ ಹೆಚ್ಚು-ಕಡಿಮೆ ಎರಡು ಘಂಟೆಗಳ ಕಾಲ ನಮ್ಮನ್ನು ಹಿಡಿದು ಕೂರಿಸುತ್ತದೆ.

ಕರ್ಮ ಸಿನಿಮಾದಲ್ಲಿ ಪೊಲೀಸನೊಬ್ಬ (ತನ್ನ ಹೆಂಡತಿಯನ್ನು ಕಳೆದುಕೊಂಡ) ವ್ಯಕ್ತಿಯೊಬ್ಬನನ್ನು ವಿಚಾರಣೆ ಮಾಡುವುದು. ಇವರಿಬ್ಬರ ಸಂಭಾಷಣೆಯೇ ಕಥೆ. ಅದರಲ್ಲಿ ಗಮನಿಸಬೇಕಾದ್ದೆಂದರೆ ಪೊಲೀಸ್ ಮತ್ತು ಆ ವ್ಯಕ್ತಿ ಇಬ್ಬರ ಪಾತ್ರ ನಿರ್ವಹಿಸಿದ್ದೂ R Arvind ಒಬ್ಬನೇ! ಸಿನಿಮಾ ನೋಡಿದ ಮೇಲೆ ಆ ಎರಡೂ ಪಾತ್ರಗಳ ಪಾತ್ರಧಾರಿ ಒಬ್ಬನೇ ಎಂದರೆ ನೀವು ನಂಬಲಾರಿರಿ. ಪತ್ತೇದಾರಿ ಕಥೆಗಳನ್ನು ಇಷ್ಟಪಡುವವರಿಗೆ ಈ ಸಿನಿಮಾ ಇಷ್ಟವಾಗುತ್ತದೆ.

ಒತ್ತ ಸೆರಪ್ಪು ಸಿನಿಮಾದಲ್ಲಿ ಠಾಣೆಯೊಳಗೆ ವಿಚಾರಣಾಧೀನ ಖೈದಿಯೊಬ್ಬನನ್ನು ಕೂರಿಸಿಕೊಂಡು ಆತ ಮಾಡಿದ ಅಪರಾಧಗಳ modus of operandi ಬಗ್ಗೆ ತಿಳಿದುಕೊಳ್ಳುವಾಗ ಬಯಲಾಗುವ ಸತ್ಯಗಳು, ಮತ್ತು ಆ ಮೂಲಕ ನಮಗೆ ಹೇಳುವ ಕಥೆ. ಇಲ್ಲಿ ಕ್ಯಾಮೆರಾ ಕೇವಲ ಖೈದಿಯ ಮುಖದೆಡೆಗಿರುತ್ತದೆ. ಉಳಿದ ಪಾತ್ರಗಳ ಸಂಭಾಷಣೆಗಳಷ್ಟೇ ನಮಗೆ ಕೇಳುತ್ತವೆ. ಖೈದಿಯ ಪಾತ್ರದಲ್ಲಿ ಪಾರ್ಥಿಬನ್ ಇಡೀ ಸಿನಿಮಾವನ್ನು ತನ್ನ ಹೆಗಲ ಮೇಲೆ ಹೊತ್ತು ನಡೆಸುತ್ತಾರೆ. ಕರ್ಮ ಸಿನಿಮಾದಂತೆ ಇಲ್ಲಿ ಕೇವಲ ಸಂಭಾಷಣೆಯಿಲ್ಲ, ಪಾರ್ಥಿಬನ್'ನ ಅದ್ಭುತ ಏಕಪಾತ್ರಾಭಿನಯವಿದೆ. ಯಾವುದೋ ಮಾನಸಿಕ ಖಾಯಿಲೆಯಿರುವ ವ್ಯಕ್ತಿಯಾಗಿ ಪ್ರತೀ ದೃಶ್ಯವನ್ನು ಹೇಳುವಾಗ ಆತ ಸಂಭಾಷಣೆ ಹೇಳುವ ರೀತಿ, ಆಂಗಿಕ ಅಭಿನಯ, ಧ್ವನಿಯ ಏರಿಳಿತ ಎಲ್ಲದರಲ್ಲೂ ಚಪ್ಪಾಳೆ ಗಿಟ್ಟಿಸುತ್ತಾರೆ. ಎರಡು ಘಂಟೆಗಳ ಕಾಲ ಒಬ್ಬನೇ ವ್ಯಕ್ತಿ ಪ್ರೇಕ್ಷಕನನ್ನು ಹಿಡಿದಿಡುವುದು ಸುಮ್ಮನೆ ಮಾತಲ್ಲ. Sound Designing, ಕತ್ತಲೆಯ ಕೋಣೆಯೊಳಗೆ ತೆಗೆದಿರುವುದರಿಂದ ನಿಜಕ್ಕೂ ಸವಾಲೇ. ಯಾವುದಾದರೊಂದು ವಿಭಾಗದಲ್ಲಿ ಈ ಸಿನಿಮಾ ಕೂಡ ಪ್ರಶಸ್ತಿ ಗಳಿಸುವುದನ್ನು ನಾವು ಎದುರು ನೋಡಬಹುದು.

ಬರೀ ಸಂಭಾಷಣೆಯೇ ಈ ಎರಡೂ ಸಿನಿಮಾಗಳ ಜೀವಾಳವಾದ್ದರಿಂದ, ಸಂಭಾಷಣೆ ಇಷ್ಟಪಡದ ಹೆಚ್ಚುಹೆಚ್ಚು ಬೇರೆ ಬೇರೆ ದೃಶ್ಯಗಳಿರಬೇಕು ಅಂತ ಆಶಿಸುವವರಿಗೇ ಇವೆರಡು ಸಿನಿಮಾಗಳು ಬೇಸರ ಮೂಡಿಸಬಲ್ಲವು.

ಆದರೆ ಈಗಾಗಲೇ ಹೇಳಿದಂತೆ ವಿಭಿನ್ನ ಸಿನಿಮಾಗಳನ್ನು ಇಷ್ಟಪಡುವವರಿಗೆ ಇವೆರಡೂ ನೋಡಬೇಕಾದ ಸಿನಿಮಾಗಳೇ..

-Santhosh Kumar LM
03-Dec-2019

Monday, December 2, 2019

ಕಾಳಿದಾಸ ಕನ್ನಡ ಮೇಷ್ಟ್ರು (2019)

ಬಿಡುಗಡೆಯಾದ ವಾರದ ನಂತರವೂ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿರುವ ಕನ್ನಡ ಚಿತ್ರ. ನಿನ್ನೆ GT world mallನಲ್ಲಿ ಸಂಜೆಯ ಪ್ರದರ್ಶನ ಹೆಚ್ಚು-ಕಡಿಮೆ houseful ಆಗಿತ್ತು.

ಸಂದೇಶವೊಂದನ್ನು ಸಮಾಜಕ್ಕೆ ದಾಟಿಸಲೆಂದೇ ಮಾಡಿರುವ ಚೆಂದದ ಚಿತ್ರ. ಹಾಗಂತ ಇದಕ್ಕೆ ಜಗ್ಗೇಶ್ ಏಕೆ ಅನ್ನಿಸಬಹುದು. ಮೊದಲರ್ಧದಲ್ಲಿ ಕಥೆಯ ಭಾಗವಾಗಿಯೇ ಹಾಸ್ಯ ಬಳಕೆಯಾಗಿದೆ. ಆದ್ದರಿಂದ ಸಿನಿಮಾ ಅರ್ಧ ಮುಗಿಯುವುದೇ ಗೊತ್ತಾಗುವುದಿಲ್ಲ. ಹಾಸ್ಯವೂ ಅಷ್ಟೇ, ಎಲ್ಲೂ ತುರುಕಲಾಗಿದೆ ಅನ್ನಿಸುವುದಿಲ್ಲ. ಜಗ್ಗೇಶ್‌ನ ಮ್ಯಾನರಿಸಂ ಸಿಕ್ಕಾಪಟ್ಟೆ ನಗು ತರಿಸುತ್ತದೆ.

ದ್ವಿತೀಯಾರ್ಧದಲ್ಲಿ ಕಥೆ ಬೇರೊಂದು ತಿರುವು ಪಡೆದು ಇದ್ದಕ್ಕಿದ್ದಂತೆ ಗಂಭೀರವಾಗುತ್ತದೆ. ಇಲ್ಲಿ ನನಗಿಷ್ಟವಾದದ್ದು ನಿರ್ದೇಶಕನ ಸಂದೇಶ ಹೇಳುತ್ತಿರುವ clarityಯ ಬಗ್ಗೆ. ಎಷ್ಟೋ ಸಲ ಖಾಸಗಿ ಶಾಲೆಗಳನ್ನು ವಿರೋಧಿಸುವುದೇ ಅನೇಕ ಸಿನಿಮಾಗಳ ಉದ್ದೇಶವಾಗಿರುತ್ತದೆ. ಆದರೆ ಈ ಸಿನಿಮಾದಲ್ಲಿ ಸಮಾನ ಶಿಕ್ಷಣ, ಉಚಿತ ಶಿಕ್ಷಣ, ಖಾಸಗಿ ಶಾಲೆಗಳ ಕಡಿವಾಣ, ಸರ್ಕಾರಿ ಶಾಲೆಗಳ ಪುನರುಜ್ಜೀವನಗೊಳಿಸುವಿಕೆ, ಮಾತೃಭಾಷಾ ಶಿಕ್ಷಣ, ಮುಂದಿನ ಜೀವನಕ್ಕೆ ಬೇಕಾದ ಕೌಶಲ್ಯ ನೀಡುವ ಶಿಕ್ಷಣ, ಮಕ್ಕಳಿಗೆ ಶಾಲೆಯೆನ್ನುವುದು ಹೊರೆಯಾಗದಂತೆ ಮಾಡುವಿಕೆ, ಡೊನೇಶನ್ ಹಾವಳಿಗೆ ಕಡಿವಾಣ,.... ಅನೇಕ ವಿಷಯಗಳ ಬಗ್ಗೆ ಹೇಳುತ್ತಾರೆ. ಹೇಳುವ ರೀತಿಯಲ್ಲಿ ಯಶಸ್ವಿಯಾಗುತ್ತಾರೆ ಕೂಡ. ಮಕ್ಕಳನ್ನು ಮಾರ್ಕ್ಸ್ ತರುವ ಯಂತ್ರಗಳಂತೆ ಕಾಣುವ ತಂದೆ ತಾಯಿಗಳಿಗಂತೂ ಈ ಸಿನಿಮಾ‌ ನೋಡುವಾಗ ತಮ್ಮನ್ನು ತಾವು ಅವಲೋಕಿಸಿಕೊಳ್ಳುವಂತೆ ಮಾಡುತ್ತದೆ.

ಜಗ್ಗೇಶ್ ಕೈಯಲ್ಲಿ ಡಬ್ಬಲ್ ಮೀನಿಂಗ್ ಡೈಲಾಗುಗಳನ್ನು ಹೇಳಿಸದೇ ಹೊಟ್ಟೆ ಹುಣ್ಣಾಗುವಂತೆ ನಕ್ಕುನಗಿಸುವುದು ನಿಜಕ್ಕೂ ಸವಾಲು. ಆ ಸವಾಲಿನಲ್ಲಿ ನಿರ್ದೇಶಕ ಗೆದ್ದಿದ್ದಾರೆ.

ದ್ವಿತೀಯಾರ್ಧದಲ್ಲಿ ಹಾಸ್ಯ ಕಡಿಮೆಯಾಯಿತು ಅನ್ನುವ ದೃಷ್ಟಿಯಿಂದ ಕೆಲವು ಹಾಸ್ಯ ದೃಶ್ಯಗಳನ್ನು ಕಥೆಯ ಮಧ್ಯೆ ತುರುಕಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ನನಗೆ ಕಿರಿಕಿರಿಯಾಗಿದ್ದು ಗಂಭೀರವಾದ ಸನ್ನಿವೇಶದಲ್ಲಿ ಬರುವ ತಬಲ ನಾಣಿಯ ಹಾಸ್ಯದ ದೃಶ್ಯಗಳು. ಅವಿಲ್ಲದಿದ್ದರೂ ಸಿನಿಮಾಗೆ ಕೊರತೆಯಾಗುತ್ತಿರಲಿಲ್ಲ.

ಸಿನಿಮಾ logical solution ಅಂತ ಏನನ್ನೂ ಇಲ್ಲಿ ಕೊಡುವುದಿಲ್ಲ. ಆದರೆ ಸದ್ಯದ ಸಮಸ್ಯೆ ಹೇಳುತ್ತ, ಮುಂದೆ ಹೀಗಾದರೆ ಎಷ್ಟು ಚೆಂದ ಅನ್ನುವ ಕಲ್ಪನೆ ಕೊಟ್ಟು ಮುಕ್ತಾಯವಾಗುತ್ತದೆ. ಅದನ್ನು ಹೇಗೆ ಸಾಧಿಸಬೇಕೆನ್ನುವುದು ನಮ್ಮ ಆಲೋಚನೆಗೆ ಬಿಟ್ಟಿದ್ದು.

ಏನೇ ಇರಲಿ. ಶಿಕ್ಷಣ ವ್ಯವಸ್ಥೆಯ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಕಥೆಯನ್ನು ಹಾಸ್ಯದ ಮೂಲಕ ಹೇಳುವ ಪ್ರಯತ್ನವೇ ಬೆನ್ನು ತಟ್ಟುವಂಥದ್ದು. ನಟ ಜಗ್ಗೇಶ್, ನಿರ್ದೇಶಕ ಕವಿರಾಜ್ ಸೇರಿದಂತೆ ಇಡೀ ಚಿತ್ರತಂಡಕ್ಕೆ ಅಭಿನಂದನೆಗಳು.

ಖಂಡಿತವಾಗಿ ಬೋರ್ ಹೊಡೆಸದ ಸಿನಿಮಾ. ನೋಡಿರದಿದ್ದರೆ ಒಮ್ಮೆ ನೋಡಿ.

-Santhoshkumar LM
02-Dec-2019

Monday, November 11, 2019

Malayalam Movie....... ಜಲ್ಲಿಕಟ್ಟು (2019)








ಜಲ್ಲಿಕಟ್ಟು (2019) review

ನಾನು ನೋಡಿದ್ದು ಕೆಲವೇ ಕೆಲವು ಮಲಯಾಳಂ ಸಿನಿಮಾಗಳು. ಅವುಗಳಲ್ಲಿ ಇದೂ ಒಂದು! ನೋಡಿದ ತಕ್ಷಣ ಮಲಯಾಳಂ ಸಿನಿಮಾಗಳೆಡೆಗಿನ ನನ್ನ ದೃಷ್ಟಿಕೋನವನ್ನು ಸಂಪೂರ್ಣವಾಗಿ ಬದಲಾಯಿಸಿತು.

ಆತ ಒಬ್ಬ ಮಾಂಸದ ವ್ಯಾಪಾರಿ. ದಿನವೂ ಬೆಳಕು ಹರಿಯುವ ಮುನ್ನವೇ ಒಂದು ಎಮ್ಮೆಯನ್ನು ಕಡಿದು ಮಾಂಸವನ್ನು ಮಾರುತ್ತಾನೆ. ಆತ ಕೊಡುವ ಮಾಂಸಕ್ಕಾಗಿಯೇ ದಿನವೂ ನೂರಾರು ಜನ ಕಾಯುತ್ತಾರೆ.

ಅದೊಂದು ದಿನ ಆತ ಕಡಿಯಬೇಕೆಂದಿದ್ದ ಎಮ್ಮೆ ಕೆರಳಿ ತಪ್ಪಿಸಿಕೊಂಡು ದಿಕ್ಕಾಪಾಲಾಗಿ ಓಡುತ್ತದೆ. ಅಷ್ಟೇ ಅಲ್ಲ. ಅದ್ಯಾವ ಪರಿ ವ್ಯಗ್ರವಾಗಿ ಓಡುತ್ತದೆಂದರೆ ಎದುರಿಗೆ ಸಿಕ್ಕ ಸಿಕ್ಕ ಜನರನ್ನು, ವಸ್ತುಗಳನ್ನು, ಗಿಡಗಳನ್ನು ನೋಡದೇ ಧ್ವಂಸ ಮಾಡುತ್ತ ಸಾಗುತ್ತದೆ.

ಇದನ್ನು ಹಿಡಿಯಬೇಕೆಂದು ಇಡೀ ಊರಿಗೆ ಊರೇ ಆಯುಧಗಳನ್ನು ಹಿಡಿದು ಎಮ್ಮೆ ಅಡಗಿರಬಹುದಾದ ಕಾಡಿನಂತಿರುವ ಆ ಜಾಗದಲ್ಲಿ ನುಗ್ಗುತ್ತಾರೆ!

ಮುಂದೇನು ಅನ್ನುವುದೇ ಸಿನಿಮಾದ ಕಥೆ.

ಇಲ್ಲಿ ಹೇಳುವಾಗ ಕಥೆ ಇಷ್ಟೇನಾ ಅನ್ನಿಸುತ್ತದೆಯಾದರೂ ಸಿನಿಮಾ ನೋಡುವವರ ಪಾಲಿಗೆ ಆ ಕಥೆ ಹೇಳುವ ವಿಷಯಗಳು ಸಾವಿರಾರು!

ನಾಗರೀಕತೆ ಅನ್ನುವುದು ಪ್ರಾಣಿ ಮನುಷ್ಯನ ಪಾಲಿಗೆ ಒಟ್ಟಿಗೆ ಶುರುವಾಯಿತಾದರೂ, ಮನುಷ್ಯ ಮಾತ್ರ ನಾನು ಮಾತ್ರ ಇಲ್ಲಿ ನೆಲೆಯೂರಬೇಕು, ಬೇರೆಯದೆಲ್ಲ ತನ್ನ ಭೋಗಕ್ಕೆ ಅನ್ನುವ ವಿಷಯವಾಗಿರಬಹುದು.

ಎಮ್ಮೆ ಹಿಡಿಯುವ ವಿಷಯಕ್ಕೂ, ಶಿಲಾಯುಗದ ಮನುಷ್ಯನ ಬೇಟೆಯಾಡುವ ಪ್ರವೃತ್ತಿಗೂ ತಳುಕು ಹಾಕುತ್ತ ....ಕಡೆಗೆ ಆ ಎಮ್ಮೆಯನ್ನು ಕಟ್ಟಿ ಹಾಕುವುದು ಕೇವಲ ತನ್ನ ಆಹಾರದ ಅಗತ್ಯಕ್ಕಾಗಿ ಅಲ್ಲ. ಅದು ತನ್ನ ಅಹಂ ಅನ್ನು ಇತರರಿಗೆ ತೋರ್ಪಡಿಸಲು ಅನ್ನುವ ವಿಷಯವಾಗಿರಬಹುದು. ಎಲ್ಲವನ್ನು ದೃಷ್ಟಾಂತಗಳಲ್ಲಿಯೇ ಹೇಳಲಾಗಿದೆ. ಇನ್ನೂ ಹೇಳಬೇಕೆಂದರೆ ಅಲ್ಲಿ ಬರುವ ಕೆಲವರು ಎಮ್ಮೆಯನ್ನು ಹಿಡಿಯಲು ಬಂದಿರುವುದಿಲ್ಲ‌. ಅವರ ಉದ್ದೇಶವೇ ಬೇರೆಯಿರುತ್ತದೆ.

ಈ ಸಿನಿಮಾವನ್ನು ನೀವು ಮನರಂಜನೆಗಾಗಿ ನೋಡಬಹುದು. ಸಿನಿಮಾ ಮಾಧ್ಯಮವನ್ನು ಅಭ್ಯಸಿಸಲು ನೋಡಬಹುದು. ಆದರೆ ಎಲ್ಲೂ ಇದು ಒಂದು ವರ್ಗಕ್ಕೆ ಮಾತ್ರ ಅಂತ ಸೀಮಿತಗೊಳಿಸಿಲ್ಲ.

ನಾನು ಇತ್ತೀಚೆಗೆ ನೋಡಿದ ಸಿನಿಮಾಗಳಲ್ಲೆಲ್ಲ, ಅಂದುಕೊಂಡದ್ದನ್ನು ಕಾವ್ಯಾತ್ಮಕವಾಗಿ ತೆಗೆದ best climax ಈ ಸಿನಿಮಾದಲ್ಲಿದೆ ಅಂತ ಖಂಡಿತ ಹೇಳಬಲ್ಲೆ. ಈಗಲೂ ಆ ದೃಶ್ಯ ತೆಗೆಯುವ ಮುನ್ನ ನಿರ್ದೇಶಕನಿಗಿರಬೇಕಾದ clarityಯ ಬಗ್ಗೆ imagine ಮಾಡಿಕೊಂಡರೂ ವ್ಹಾವ್ ಅನ್ನಿಸದೇ ಸುಮ್ಮನಿರಲಾಗದು.

ಸಿನಿಮಾ ಮುಗಿದ ಮೇಲೆ ಇಡೀ ಚಿತ್ರವನ್ನೊಮ್ಮೆ ನೆನಪಿಸಿಕೊಂಡರೆ ಏಕೆ ಈ ಸಿನಿಮಾಗೆ "ಜಲ್ಲಿಕಟ್ಟು" ಎಂಬ ಹೆಸರಿದೆ ಅನ್ನುವುದು ಅರಿವಾಗುತ್ತದೆ. ಅಲ್ಲೂ ಮನುಷ್ಯನ-ಪಶುವಿನ ನಡುವಿನ ಪಂದ್ಯ. ಅದು ಆಹಾರಕ್ಕಾಗಿಯಷ್ಟೇ ಅಲ್ಲ. ಅಲ್ಲಿ ಸಾವಿರಾರು ರಾಜಕೀಯಗಳಿವೆ. ಮದವೇರಿದ ಪಶುವನ್ನು ಮಟ್ಟ ಹಾಕಿ ಊರವರ ಮುಂದೆ ಮೀಸೆ ತಿರುವಿಕೊಳ್ಳಲು ಕಾಯುತ್ತಿರುವ ಸುಳ್ಳೇ ಪುರುಷತ್ವಗಳು ಎಲ್ಲೆಲ್ಲೂ ಇವೆ. ಆದರೆ ಆ ಪಂದ್ಯಕ್ಕೆ ಸಿಗುವ ಕ್ರೀಡಾಂಗಣ ಮಾತ್ರ ಈ ಸಿನಿಮಾದಷ್ಟು ದೊಡ್ಡದು. ಅದಕ್ಕೆ ಎಲ್ಲೆಯಿಲ್ಲ!

ನಿಜವಾಗಿ ಈ ಸಿನಿಮಾದ ಛಾಯಾಗ್ರಾಹಕನೇ ನಿಜವಾದ ಹೀರೋ. ಚಿತ್ರದ ಬಹುಪಾಲು ದೃಶ್ಯಗಳು ಕತ್ತಲೆಯಲ್ಲೇ ನಡೆಯುತ್ತವೆ. ನೂರಾರು ಜನಗಳು ಹಿಡಿದ ಪಂಜು, ಬ್ಯಾಟರಿ, ಪೆಟ್ರೋಮಾಸ್ ಲೈಟ್ನಂತಹ ಬೆಳಕಿನಲ್ಲೇ ನಡೆಯುವ ರೋಚಕ
ದೃಶ್ಯಗಳನ್ನು ನೈಜವಾಗಿ ಚಿತ್ರೀಕರಿಸಲಾಗಿದೆ.

ಹಿನ್ನೆಲೆ ಸಂಗೀತವೂ ವಿಭಿನ್ನವೇ. ಕೇಳುತ್ತಿದ್ದರೆ ಶಿಲಾಯುಗದಲ್ಲಿ ಬೇಟೆಯಾಡಲು ಹೊರಡುವ ಜನಗಳು ಕೂಗುವ ಶಬ್ದದಂತೆ ಭಾಸವಾಗುತ್ತದೆ. ಅದನ್ನು ಕೇಳುವಾಗ ಈ ಸಿನಿಮಾವನ್ನು ಥಿಯೇಟರ್‌ನಲ್ಲಿ ನೋಡಬೇಕಿತ್ತು ಅನಿಸಿದ್ದು ಸುಳ್ಳಲ್ಲ.

ಹಾಡುಗಳಿಗೆ ಜೋತು ಬೀಳದೆ, ಅನವಶ್ಯಕ ಸಂಭಾಷಣೆಗೆ ಜೋತು ಬೀಳದೆ ಕೇವಲ ತನ್ನ ಕಥೆಯ ಮೇಲೆ, ನಿರೂಪಣಾ ಶೈಲಿಯ ಮೇಲೆ ನಂಬಿಕೆಯಿಟ್ಟು ಕೇವಲ 90ನಿಮಿಷಗಳ ಸಿನಿಮಾದಲ್ಲಿ ನೂರಾರು ವಿಷಯಗಳನ್ನು ಯಶಸ್ವಿಯಾಗಿ ಈ ಸಿನಿಮಾದ ಮೂಲಕ ಹೇಳಿದ ನಿರ್ದೇಶಕ Lio Jose ಗೆ ಒಂದು ಶಹಬ್ಬಾಸ್ ಹೇಳಲೇಬೇಕು.

ಒಂದಂತೂ ಹೇಳಬಲ್ಲೆ. ಅನೇಕ ನಿರ್ದೇಶಕರಿಗೆ ಈ ಸಿನಿಮಾ ಸ್ಫೂರ್ತಿಯಾಗಬಲ್ಲದು! ಸಿದ್ಧಸೂತ್ರಗಳಿಗೆ ಜೋತು ಬೀಳದೆ ತನ್ನದೇ ಅಂತ ಹೇಳಿಕೊಳ್ಳುವಷ್ಟು ಸಿನಿಮಾ ಮಾಡುವ ಸ್ವಾತಂತ್ರ್ಯ ಎಲ್ಲ ನಿರ್ದೇಶಕರಿಗೂ ಸಿಗಲಿ ಅನ್ನುವುದು ನನ್ನ ಆಶಯ.

ಹೇಳಲು ಅನೇಕ ವಿಷಯಗಳಿವೆ. ಆದರೆ ನೀವು ಸಿನಿಮಾ ನೋಡಲಿ ಎಂಬ ಕಾರಣದಿಂದ ಇಷ್ಟಕ್ಕೆ ನಿಲ್ಲಿಸುತ್ತಿದ್ದೇನೆ. ಈ ಸಿನಿಮಾ ನೋಡಿ. ಅಮೇಜಾನ್ ಪ್ರೈಮ್‌ನಲ್ಲಿದೆ. 90 ನಿಮಿಷಗಳಷ್ಟೇ. ವಿಭಿನ್ನ ಸಿನಿಮಾವೊಂದನ್ನು ನೋಡಿದೆ ಅಂತ ನಿಮಗನ್ನಿಸದಿದ್ದರೆ ಕೇಳಿ.

-Santhosh Kumar LM
05-Nov-2019

ಅಸುರನ್....ASURAN (2019)








"ಅಸುರನ್" ಸಿನಿಮಾ ಬಗ್ಗೆ ಎಲ್ಲ ಬರುದ್ ಬಿಸಾಕವ್ರೆ. ನಮಗೆ ಬರೆಯೋಕೆ ಏನು ಉಳಿಸಿಲ್ಲ.


Brilliant Screenplay. ಒಂದು ಮಸ್ತ್ ಸಿನಿಮಾ ನೋಡಿದ ಹಾಗಾಯಿತು. ನನ್ನ ಪಾಲಿನ ಸಿನಿಮಾ ಅನುಭವ ಕೂಡ ಹೀಗೆಯೇ ಇರಬೇಕು. ನಿರ್ದೇಶಕ ಸಿನಿಮಾ ತೋರಿಸುತ್ತಲೇ ನನಗರಿವಿಲ್ಲದಂತೆ ತನ್ನ ಸಂದೇಶ ಹೇಳಬೇಕು. ಇಲ್ಲದಿದ್ದರೆ ನಾನ್ಯಾಕೆ ಆ ಸಿನಿಮಾ ನೋಡಲಿ. ಅದನ್ನು ಪತ್ರಿಕೆಯ ಲೇಖನವೋ, ಸಾಕ್ಷ್ಯಚಿತ್ರವೋ ಮಾಡಬಲ್ಲುದು!


ಅಮೇಜಾನ್ ಪ್ರೈಮ್'ಗೆ ಒಂದು ವರ್ಷದ subscription fee ಕೊಟ್ಟಿದ್ದಕ್ಕೂ ಸಾರ್ಥಕ ಆಗೋಯ್ತು.


ಹೋದ ವಾರ "ಜಲ್ಲಿಕಟ್ಟು", ಈ ವಾರ "ಅಸುರನ್"....ಎರಡೂ ಸಿಕ್ಕಾಪಟ್ಟೆ ಇಷ್ಟ ಆದವು.


ನೋಡಿರದಿದ್ದರೆ ಖಂಡಿತ ನೋಡಿ. ಕೆಲವು ದೃಶ್ಯಗಳಲ್ಲಿ ಹಿಂಸೆ ಜಾಸ್ತಿಯಿರುವುದರಿಂದ ಪುಟ್ಟ ಮಕ್ಕಳಿಲ್ಲದಾಗ ನೋಡುವುದೊಳ್ಳೆಯದು.


----------------


ಮೊದಲಿಗೆ ಒಂದು ಸಿನಿಮಾ ಆಗಿಯೇ ಅಸುರನ್ ನಮ್ಮನ್ನು ಹಿಡಿದು ಕೂರಿಸಿಕೊಳ್ಳುತ್ತೆ. ಜಾತಿ ಸಮಸ್ಯೆ ಅನ್ನುವುದನ್ನು ನೇರವಾಗಿ ಹೇಳದೇ ನೂರಾರು ಜಮೀನಿರುವ ಜಮೀನ್ದಾರರ, ಮತ್ತು ಒಂದೆರಡು ಎಕರೆ ಜಮೀನಿನಲ್ಲೇ ವ್ಯವಸಾಯ ಮಾಡಿ ಜೀವನ ಸಾಗಿಸುವವರ ಮಧ್ಯದ ಸಂಘರ್ಷದ ರೀತಿಯಲ್ಲೇ ಚಿತ್ರೀಕರಿಸಲಾಗಿದೆ. ಉದಾ: ನಾಯಿ ಸತ್ತಾಗಲಿನ ದೃಶ್ಯ, ವಿದ್ಯುತ್ ಬೇಲಿ ಹಾಕಿರುವುದನ್ನು ಪ್ರಶ್ನಿಸುವಾಗಿನ ದೃಶ್ಯ, ಅಕ್ರಮವಾಗಿ ಇನ್ನೊಬ್ಬರ ಬಾವಿಯಿಂದ ನೀರು ಎಳೆಯುವಾಗ ನಡೆಯುವ ಜಗಳ...

ಧನುಷ್ ಇಲ್ಲಿ ನಟಿಸಿರುವುದು ಶಿವಸಾಮಿಯ ಪಾತ್ರ. ಶಿವಸಾಮಿ ಮತ್ತು ಅವನ ಬಳಗ ವಾಸಿಸುವ ಊರಿನಿಂದ ಬೇರೆಯದೆ ಕಡೆ ಇರುವ ಗುಡಿಸಲುಗಳು, ಶಿವಸಾಮಿ ಮಗನಿಗಾಗಿ ಊರವರ ಕಾಲಿಗೆರಗುವುದು, "ನಮ್ಮೆದುರು ಚಪ್ಪಲಿ ಹಾಕಿ ನಡೆಯುವೆಯಾ?" ಅನ್ನೋ ಥರದ ಅನೇಕ ದೃಶ್ಯಗಳಲ್ಲಿ ಆತ ಹೇಳುತ್ತಿರುವುದು ಜಾತಿಸಮಸ್ಯೆಯ ಬಗ್ಗೆ ಅನ್ನುವುದು ಅರ್ಥವಾಗದೆ ಇರುವುದಿಲ್ಲ.


ಎಲ್ಲಕ್ಕಿಂತ ಹೆಚ್ಚಾಗಿ ಈ ಥರದ ಚಿತ್ರದಲ್ಲೂ ಪ್ರೇಕ್ಷಕನಿಗೆ ಸಂದೇಶ ಹೇಳುತ್ತಲೇ ರೋಚಕ ಚಿತ್ರಕಥೆ ಹೆಣೆದ ರೀತಿ ಸಿನಿಮಾ ಮಾಧ್ಯಮವನ್ನು ನಿರ್ದೇಶಕರು ಎಷ್ಟು ಗಂಭೀರವಾಗಿ ತೆಗೆದುಕೊಂಡಿದ್ದಾರೆ ಅನ್ನುವುದನ್ನು ತೋರಿಸುತ್ತದೆ.


ಧನುಷ್ ಮೂರು ಮಕ್ಕಳ ತಂದೆಯಂಥ ಪಾತ್ರಕ್ಕೆ ಒಪ್ಪಿಗೆ ಸೂಚಿಸಿದ್ದೇ ಆಶ್ಚರ್ಯವೆನಿಸುತ್ತದೆ. ಪ್ರತೀ ಪಾತ್ರಗಳ ಭಾವತೀವ್ರತೆಯ ಬಗ್ಗೆಯೂ ತುಂಬಾ ಸ್ಪಷ್ಟತೆ ಇದೆ. ದೊಡ್ಡಮಗನಿಗೆ ಬಿಸಿರಕ್ತ, ಕೋಪ. ಚಿಕ್ಕಮಗನಿಗೆ ರೋಷ, ಆದರೆ ಅಪ್ಪನ ಬಗ್ಗೆ ಅಸಮಾಧಾನ, ಚಿಕ್ಕ ಮಗಳಿಗೆ ಅಮಾಯಕತೆ, ಹೆಂಡತಿಯ ಕೋಪ/ಅಸಹನೆ.... ಇವೆಲ್ಲ ಪಾತ್ರಗಳಿಗೂ ಒಳ್ಳೆಯ ಸ್ಕೋಪ್ ಇದ್ದಾಗ್ಯೂ ನಮಗೆ ಇಷ್ಟವಾಗುವ ಪಾತ್ರ ಧನುಷ್. ಬಹುಶಃ ಬೇರೆ ನಟರಾಗಿದ್ದರೆ ಇಂತಹ ಪಾತ್ರಗಳಿಗೆ ಒಪ್ಪುತ್ತಿದ್ದರಾ? ಗೊತ್ತಿಲ್ಲ. ಧನುಷ್'ಗೆ ಈ ಸಿನಿಮಾದಿಂದಾಗಿ ಇನ್ನೊಂದು ಪ್ರಶಸ್ತಿ ಕಾಯುತ್ತಿದೆಯೇ..... ಸಿಗಲಿ. ಒಳ್ಳೆಯದು.


ಮುಕ್ಕಾಲು ಘಂಟೆ ಸಿನಿಮಾ ನೋಡಿದ ಮೇಲೆ ಉಳಿದ ಭಾಗವನ್ನು ನಾಳೆ ನೋಡೋಣವೆಂದು ಸುಮ್ಮನಾದರೂ, ನೋಡದೆ ಇರಲಾಗಲಿಲ್ಲ. ಒಂದೇ ಗುಕ್ಕಿನಲ್ಲಿ ನೋಡುವ ತನಕ ಬಿಡಲಿಲ್ಲ. ಅಷ್ಟು ಚೆನ್ನಾಗಿದೆ ಸಿನಿಮಾ... ನೇಟಿವಿಟಿ ಅನ್ನುವುದನ್ನು ಸಿನಿಮಾಗೆ ಹೇಗೆ ಅಳವಡಿಸಿಕೊಳ್ಳುತ್ತಾರೆ ಅನ್ನುವುದಕ್ಕೆ ಇದೊಂದು ಸಿನಿಮಾ ಮತ್ತೊಂದು ಉದಾಹರಣೆ.


ವೈಯಕ್ತಿಕವಾಗಿ ನನಗೆ ಈ ಸಿನಿಮಾ ಕ್ರೌರ್ಯ ಅನಿಸಲಿಲ್ಲ. ಧನುಷ್ ಭರ್ಜಿ ಎತ್ತಿ ಚುಚ್ಚುವಾಗ ಯಾವುದು ನಮಗೆ ಕ್ರೌರ್ಯ ಅನಿಸುತ್ತದೆಯೋ........


ಅದೇ ಕ್ರೌರ್ಯ....


ಅವನ ಮಗನನ್ನು ಮರಕ್ಕೆ ನೇತುಹಾಕಿ ಪ್ರಾಣಿಯನ್ನು ಕೊಲ್ಲುವಂತೆ (ಅದೇ ಉಪಮೆಯೂ ಇರಬೇಕು) ಕೊಲ್ಲುತ್ತಾರಲ್ಲ ಚಪ್ಪಲಿ ಹಾಕಿ ತಲೆಯೆತ್ತಿ ನಡೆದಳು ಅಂದ ಮಾತ್ರಕ್ಕೆ ಹುಡುಗಿಯೊಬ್ಬಳಿಗೆ ಅವಮಾನ ಮಾಡುತ್ತಾರಲ್ಲ. ತಮಗೆ ಅವಮಾನ ಮಾಡಿದ ಅಂದ ಕಾರಣಕ್ಕೆ ಗುಡಿಸಲಿಗೆ ಬೆಂಕಿ ಹಚ್ಚಿ ಸಜೀವ ದಹನ ಮಾಡುತ್ತಾರಲ್ಲ.


ಆಗಲೂ ನಮಗೆ ಅನ್ನಿಸಲೇಬೇಕು. ಯಾರೇನೇ ಅಂದರೂ ಶಾಂತಮೂರ್ತಿಯಾಗಿ ನಿಲ್ಲುವ ಶಿವಸಾಮಿ ಕೂಡ ಆಯುಧ ಹಿಡಿದು ನಿಲ್ಲುವುದು, ತನ್ನ ಕುಟುಂಬದೆದುರಿಗೆ ಸಾವು ಕಾಲು ಕೆರೆದು ನಿಂತಿದೆ ಅಂದಾಗಲೇ! ಇಷ್ಟೆಲ್ಲ ಆಗಿಯೂ ಶಿವಸಾಮಿ ಕಡೆಯ ದೃಶ್ಯದಲ್ಲಿ ಹೇಳುವುದೂ ಅದೇ. ಹಿಂಸೆ ಪರಿಹಾರವಲ್ಲ. ಅಕ್ಷರವಷ್ಟೇ ನಮ್ಮನ್ನೆಲ್ಲ ಕಾಪಾಡಬಲ್ಲುದು ಅಂತ.


Santhosh Kumar LM
11-Nov-2019

Monday, September 30, 2019

English movie : ಆಲ್ಫಾ

ಆಲ್ಫಾ....ALPHA (2018)

ಇಂಗ್ಲೀಷ್ ಭಾಷೆಯ ಚಿತ್ರ ಅಂತಲೇ ಹೇಳುತ್ತದಾದರೂ ಇದರಲ್ಲಿ ಮಾತನಾಡುವುದೆಲ್ಲ ಒಂದು ಬುಡಕಟ್ಟು ಜನಾಂಗದ ಭಾಷೆ. ಇದನ್ನು ಅರ್ಥ ಮಾಡಿಕೊಳ್ಳಲು ಸಬ್-ಟೈಟಲ್'ನ ಸಹಾಯ ಪಡೆಯಲೇಬೇಕು.


ಸಾವಿರಾರು ವರ್ಷಗಳ ಹಿಂದೆ ಬುಡಕಟ್ಟು ಜನಾಂಗದ ಗುಂಪೊಂದು ತಾನು ವಾಸವಿದ್ದ ಜಾಗದಿಂದ ಬಹಳ ದೂರಕ್ಕೆ ಬೇಟೆಗೆಂದು ಪ್ರಯಾಣ ಶುರು ಮಾಡುತ್ತದೆ. ಮುಂದೆ ಬರುವ ಚಳಿಗಾಲದಲ್ಲಿ ಅಲ್ಲಿ ಒಂದು ಹೆಜ್ಜೆ ಎತ್ತಿಡಲೂ ಸಹ ಸಾಧ್ಯವಿಲ್ಲ. ಹಾಗಾಗಿ ಪ್ರತೀ ವರ್ಷ ಆ ಚಳಿಗಾಲ ಶುರುವಾಗುವ ಮೊದಲೇ ಬಹಳ ದೂರಕ್ಕೆ ಹೋಗಿ ಕಾಡುಕೋಣಗಳನ್ನು ಬೇಟೆಯಾಡಿ, ಆಹಾರವನ್ನು ಶೇಖರಿಸಿಡುವುದನ್ನು ಆ ಜನಾಂಗ ಹಿಂದಿನಿಂದಲೂ ರೂಢಿಸಿಕೊಂಡು ಬಂದಿದೆ.


ಆ ಗುಂಪಿಗೆ ನಾಯಕ ತಾವ್. ಈ ಬಾರಿ ಹೊರಡುವಾಗ ತನ್ನ ಮಗ ಕೆಡಾನನ್ನು ಕೂಡ ಜೊತೆ ಬರಲು ಹೇಳುತ್ತಾನೆ. ಅವನ ಹೆಂಡತಿ ಮಗನಿಗೆ ಇನ್ನೂ ಧೈರ್ಯವಿಲ್ಲವೆಂದು, ಇನ್ನೂ ಬೇಟೆಯಾಡುವ ಸಾಮರ್ಥ್ಯ ಹೊಂದಿಲ್ಲವೆಂದು ಅವನನ್ನು ಕರೆದುಕೊಂಡು ಹೋಗದಿರಲು ಬೇಡಿಕೊಳ್ಳುತ್ತಾಳೆ. ಆದರೆ ಅವಳಿಗೆ ಧೈರ್ಯ ತುಂಬುವ ತಾವ್ ಈಗಿನಿಂದಲೇ ಮಗನಿಗೆ ನಾಯಕತ್ವವನ್ನು ಕಲಿಸಬೇಕು. ಅದಕ್ಕೆ ಇದೇ ಸೂಕ್ತ ಸಮಯ ಎಂದು ಹೊರಡುತ್ತಾನೆ.


ಕೆಡಾಗೆ ಭಯ, ಮೃದು ಸ್ವಭಾವದ ಹುಡುಗ. ಹಿಂಸೆ ಅನ್ನುವುದೆಲ್ಲ ಆಗದು. ಅವನ ಅಪ್ಪ ಒಂದು ಕಾಡುಹಂದಿಯನ್ನು ಗಾಯಗೊಳಿಸಿ ಅದನ್ನು ಕೊಲ್ಲು ಎಂದಾಗಲೂ ಹಿಂದೆ ಮುಂದೆ ನೋಡುತ್ತಾನೆ. ಒಳಗೊಳಗೆ ಮಗನಿಗೆ ಧೈರ್ಯ ತುಂಬುತ್ತಿರುತ್ತಾನೆ. ಅದೊಂದು ರಾತ್ರಿ ಬಿಡಾರ ಹೂಡಿ ಎಲ್ಲರೂ ಒಟ್ಟಿಗೆ ಕುಳಿತಾಗಲೇ ಮಿಂಚಿನವೇಗದಲ್ಲಿ ಇವರ ಮೇಲೆರಗುವ ಸಿಂಹವೊಂದು ಇವನ ಜೊತೆಯಲ್ಲಿದ್ದ ಇನ್ನೊಬ್ಬ ಹುಡುಗನನ್ನು ಹೊತ್ತೊಯ್ಯುತ್ತದೆ. ಅಸಹಾಯಕರಾಗಿ ನೋಡುವ ಎಲ್ಲರ ಮಧ್ಯೆ ಕೆಡಾಗೆ ಇನ್ನೂ ಭಯ ಹೆಚ್ಚಾಗುತ್ತದೆ.


ಇದೀಗ ನೂರಾರು ಮೈಲಿ ದೂರ ಕ್ರಮಿಸಿದ ಮೇಲೆ ಕಾಡೆಮ್ಮೆಗಳ ಹಿಂಡು ಮೇಯುವ ಜಾಗ ತಲುಪುತ್ತಾರೆ. ಅಲ್ಲಿ ಮುಂದೆ ನಡೆಯುವುದು ಮೈನವಿರೇಳಿಸುವ ಕಾಡೆಮ್ಮೆಗಳ ಬೇಟೆಯ ದೃಶ್ಯ. ಇನ್ನೇನು ಎಲ್ಲ ಸುಸೂತ್ರ ಅನಿಸಿಕೊಳ್ಳುವಾಗ ಕಾಡುಕೋಣವೊಂದು ಮರಳಿ ಬಂದು ಕೆಡಾನನ್ನು ಎಲ್ಲರೆದುರೇ ಪ್ರಪಾತಕ್ಕೆ ಒಗೆಯುತ್ತದೆ. ತಾವ್ ಹಿಂದೆಯೇ ನೆಗೆಯಲು ನಿಲ್ಲುತ್ತಾನಾದರೂ ಎಲ್ಲರೂ ಅವನನ್ನು ನಿಯಂತ್ರಿಸಿ ನಿನ್ನ ಮಗ ತೀರಿಕೊಂಡ ಎಂದು ಮನದಟ್ಟು ಮಾಡುತ್ತಾರೆ. ನಂತರ ಅಲ್ಲೇ ಕಲ್ಲುಗಳ ಗುಡ್ಡೆಯನ್ನು ನಿರ್ಮಿಸಿ ಮಗನ ಆತ್ಮಕ್ಕೆ ಶಾಂತಿಕೋರಿ, ನಂತರ ಆಹಾರವನ್ನು ಸಂಗ್ರಹಿಸಿ ಒಲ್ಲದ ಮನಸ್ಸಿನಿಂದಲೇ ಮನೆಯತ್ತ ಹೆಜ್ಜೆ ಹಾಕುತ್ತಾರೆ.


-------------


ಇತ್ತ ಪ್ರಪಾತಕ್ಕೆ ಬಿದ್ದ ಕೆಡಾ ಪೂರ್ತಿ ಕೆಳಗೆ ಬೀಳದೆ ಮಧ್ಯದಲ್ಲಿಯೇ ಕಾಲು ಮುರಿದುಕೊಂಡು ಬಿದ್ದು ಪ್ರಜ್ಞೆ ತಪ್ಪಿರುತ್ತಾನೆ. ರಣಹದ್ದೊಂದು ಶವವೆಂದು ತಿಳಿದು ಕುಕ್ಕಲು ಬಂದಾಗಲೇ ಈತನಿಗೆ ಎಚ್ಚರವಾಗಿ ಅದನ್ನು ಓಡಿಸುವುದು. ಮುಂದೆ ಭೀಕರ ಮಳೆ ಶುರುವಾಗಿ ಪ್ರವಾಹ ಶುರುವಾಗುತ್ತದೆ. ಇಳಿಯುವ ಪ್ರಯತ್ನ ಮಾಡುತ್ತಾನಾದರೂ ಕೈಜಾರಿ ಪ್ರವಾಹದೊಳಕ್ಕೆ ಬೀಳುತ್ತಾನೆ. ಎಚ್ಚರವಾದಾಗ ಇನ್ನೆಲ್ಲೋ ಬಂದು ಸೇರಿರುತ್ತಾನೆ.


ಒಮ್ಮೆಲೇ ಭಯವಾಗುವ ಕೆಡಾಗೆ ಮೇಲೆ ಬಂದು ನೋಡಿದರೆ ಅಪ್ಪ ಮತ್ತು ತನ್ನ ಬಳಗ, ತನ್ನನ್ನು ಸತ್ತನೆಂದು ತಿಳಿದು ವಾಪಸ್ಸಾಗಿರುವುದು ತಿಳಿಯುತ್ತದೆ. ಆಗಲೇ ತೋಳಗಳ ಹಿಂಡೊಂದು ಈತನ ಬೆನ್ನಟ್ಟುತ್ತದೆ. ಈತ ಹತ್ತಿರದಲ್ಲೇ ಇದ್ದ ಮರವೊಂದರ ಆಶ್ರಯ ಪಡೆಯುತ್ತಾನೆ. ಆ ಕಾದಾಟದಲ್ಲಿ ಒಂದು ತೋಳವನ್ನು ಗಾಯಗೊಳಿಸಿ ಕೆಳಗೆ ಬೀಳಿಸುತ್ತಾನೆ. ಬೆಳಗಿನ ಹೊತ್ತಿಗೆ ಎಲ್ಲ ತೋಳಗಳೂ ಹೊರಟು ಹೋಗಿರುತ್ತವೆ.......ಗಾಯಗೊಂಡ ತೋಳವನ್ನು ಬಿಟ್ಟು!


ಕೆಳಗಿಳಿದು ಅದನ್ನು ಸಾಯಿಸುವ ಮನಸ್ಸು ಮಾಡುತ್ತಾನಾದರೂ ಕಡೆಗೆ ಅದರ ಗಾಯ ನೋಡಿ, ಭಯದಿಂದಲೇ ಅದಕ್ಕೆ ಮದ್ದು ಹಚ್ಚಿ ಸುಶ್ರೂಷೆ ಮಾಡುತ್ತಾನೆ. ಜೊತೆಗೆ ಅಲ್ಲಿ ಸಿಕ್ಕ ನೀರು ಮತ್ತು ಆಹಾರವನ್ನು ಅದಕ್ಕೂ ನೀಡಿ ಉಪಚರಿಸುತ್ತಾನೆ. ಸದ್ಯ ಇಬ್ಬರೂ ಅವರ ಅಪ್ಪ-ಅಮ್ಮನಿಂದ ದೂರವಿದ್ದಾರೆ. ಈ ಅಂಶದಿಂದಲೇ ಈ ಸಂದರ್ಭದಲ್ಲಿ ಗೊತ್ತಿಲ್ಲದ ಹಾಗೆ ಆ ತೋಳಕ್ಕೂ ಕೆಡಾಗೂ ಗೊತ್ತಿಲ್ಲದ ಸ್ನೇಹವೇರ್ಪಡುತ್ತದೆ.


ಮುಂದೆ ಮನೆಯ ದುರ್ಗಮ ದಾರಿ ಹಿಡಿದು ಹೊರಡುವ ಕೆಡಾಗೆ ಆ ತೋಳವೇ ಜೊತೆಯಾಗುತ್ತದೆ. ಆತ ಮತ್ತೆ ಮನೆ ಸೇರುತ್ತಾನೆಯೇ? ಆ ಮುಂದಿನ ಪಯಣವೇ "Apha" ಸಿನಿಮಾದ ಕಥೆ.


--------------


ಅನಿವಾರ್ಯ ಪರಿಸ್ಥಿತಿಯಲ್ಲಿ ಮನುಷ್ಯನ-ಮೃಗದ ಮಧ್ಯದಲ್ಲೊಂದು ಸಂಬಂಧವೇರ್ಪಡುವ ಇದೇ ಬಗೆಯ ಕಥೆಯುಳ್ಳ "Life Of Pi" ಸಿನಿಮಾ ನೋಡಿದವರಿಗೆ ಇದು ಅದೇ ಬಗೆಯದು ಅನ್ನಿಸಬಹುದು. ಆದರೆ ಎಲ್ಲೂ ಬೋರ್ ಹೊಡೆಸದೆ ನೋಡಿಸಿಕೊಳ್ಳುವ ಸಿನಿಮಾ. ಅಮೇಜಾನ್ ಪ್ರೈಮ್'ನಲ್ಲಿದೆ ಒಮ್ಮೆ ನೋಡಿ.


ಸಂತೋಷ್ ಕುಮಾರ್ ಎಲ್. ಎಂ.
30-Sep-2019

Wednesday, September 25, 2019

Tamil movie : ಮನುಸಂಗಡ

ಮನುಸಂಗಡ (Manusangada)
(ಮನುಷ್ಯರೇ ಕಣ್ರೋ...(ನಾವೂ))....
ತಮಿಳು ಸಿನಿಮಾ (2018)
------------------------------

ಕೊಳಪ್ಪನ್ ಇದೀಗ ಚೆನ್ನೈನಲ್ಲಿ ಕೆಲಸ ಮಾಡುತ್ತಿದ್ದಾನೆ. ಅದೊಂದು ಮಧ್ಯರಾತ್ರಿ ಊರಿನಿಂದ ತಂದೆ ತೀರಿಕೊಂಡ ಸುದ್ದಿ ಬರುತ್ತದೆ. ತಕ್ಷಣವೇ ಬಸ್ಸಿನಲ್ಲಿ ಹೊರಟು ತನ್ನ ಹಳ್ಳಿಗೆ ಬರುತ್ತಾನೆ.

ಒಂದೆಡೆ ಅಪ್ಪನನ್ನು ಕಳೆದುಕೊಂಡ ದುಃಖ ಮನಸ್ಸನ್ನು ಆವರಿಸಿದ್ದರೆ ಇನ್ನೊಂದು ಕಡೆ ಆತಂಕ. ಅದಕ್ಕೆ ಕಾರಣ, ಆ ಹಳ್ಳಿಯಲ್ಲಿ ಕಾಲಾನುಕಾಲದಿಂದ ಜಾತಿ ಕಲಹವಿದೆ. ಕೊಳಪ್ಪನ್ ದಲಿತ ಸಮುದಾಯಕ್ಕೆ ಸೇರಿದವನು.
ಆ ಹಳ್ಳಿಯಲ್ಲಿ ಶವವನ್ನು ಹೊತ್ತು ಹೋಗಲು ಇರುವುದೊಂದೇ ಸಾಮಾನ್ಯ ದಾರಿ. ಅಲ್ಲಿ ಮೇಲ್ಜಾತಿಯವರ ಮನೆಗಳಿವೆ. ಇನ್ನೊಂದು ದಾರಿಯನ್ನು ದಾರಿ ಅಂತ ಕರೆಯಲೇ ಸಾಧ್ಯವಿಲ್ಲ. ಕಲ್ಲು ಮುಳ್ಳುಗಳೇ ತುಂಬಿವೆ. ಸಾಮಾನ್ಯ ದಾರಿಯಲ್ಲಿ ಶವ ಹೊತ್ತು ಹೋಗಲು ಮೇಲ್ಜಾತಿಯವರು ಬಿಡುವುದಿಲ್ಲ. ಹಿಂದೆಯೂ ಅನೇಕ ಬಾರಿ ಇದೇ ವಿಷಯಗಳಿಗೆ ಹೊಡೆದಾಟವಾಗಿ ಆ ಕ್ಷೇತ್ರದ ಶಾಸಕರೆಲ್ಲ ಬರುತ್ತಾರಾದರೂ ಅವರ ಸಂಧಾನವೆಲ್ಲ "ಇದೊಂದು ಬಾರಿ ಆ ಇನ್ನೊಂದು ದಾರಿಯಲ್ಲಿಯೇ ಹೋಗಿಬಿಡಿ" ಅನ್ನುವ ಹೇಳಿಕೆಗಳಲ್ಲೇ ಮುಗಿಯುತ್ತವೆ.

"ಸಾಯುವವರೆಗೂ ಅವರ ಮನೆಗಳಲ್ಲೇ ಜೀತ ಮಾಡಿದ ನಮ್ಮಪ್ಪ, ಆತ ತೀರಿಕೊಂಡ ತಕ್ಷಣ ಅವನ ಶವವೂ ಸಾಗಬಾರದ ಹಾಗೆ ಹೇಗೆ ಅನಿಷ್ಟವಾಗಿ ಹೋದ" ಅಂತ ಕೊಳಪ್ಪ ತನಗೇ ಪ್ರಶ್ನೆ ಹಾಕಿಕೊಳ್ಳುತ್ತಾನೆ. ಹೀಗಾಗಿ ಈ ಬಾರಿ ಕೊಳಪ್ಪನ್ ಮತ್ತು ಅವನ ಗೆಳೆಯರು ಶವಯಾತ್ರೆ ಸಾಮಾನ್ಯ ದಾರಿಯಲ್ಲಿಯೇ ಸಾಗಬೇಕು ಅನ್ನುವ ಮನಸ್ಸು ಮಾಡುತ್ತಾರೆ. ಪೊಲೀಸರು ಮತ್ತು ಆ ಊರಿನ RDO ಸಹಾಯ ಕೇಳುತ್ತಾರಾದರೂ ಯಾವುದೇ ಸಹಾಯವಾಗುವುದಿಲ್ಲ.  ಹೀಗಾಗಿ ಅದೇ ಊರಿನ ದಲಿತ ನಾಯಕನೊಬ್ಬ ಸೂಕ್ತ ಕಾನೂನಿನ ಸಹಾಯ ಪಡೆಯಲು ಸಹಕಾರ ನೀಡುತ್ತಾನೆ.

ಅತ್ತ ಮನೆಯ ಮುಂದೆ ಶವವಿಟ್ಟಿದ್ದರೂ ಇತ್ತ ಉಚ್ಛ ನ್ಯಾಯಾಲಯದಲ್ಲಿ writ ಅರ್ಜಿ ಸಲ್ಲಿಸಿ ತಕ್ಷಣವೇ ಆದೇಶ ಪಡೆಯುತ್ತಾರೆ. ನ್ಯಾಯಾಲಯ ತನ್ನ ಆದೇಶದಲ್ಲಿ ಸ್ಥಳೀಯ ಪೊಲೀಸ್ ಠಾಣೆಯ ಇನ್ಸ್ಪೆಕ್ಟರುಗಳಿಗೂ, RDO ಗಳಿಗೂ, ಸ್ವತಃ ತಾವೇ ನಿಂತು ಕೊಳಪ್ಪನ್ ತಂದೆಯ ಶವಯಾತ್ರೆ ಸಾಮಾನ್ಯ ದಾರಿಯಲ್ಲಿಯೇ ನಡೆದು,  ಸಂಸ್ಕಾರವಾಗುವಂತೆ ಸೂಕ್ತ ರಕ್ಷಣೆ ಕೊಟ್ಟು ನೋಡಿಕೊಳ್ಳಬೇಕು ಅಂತ ಹೇಳಿರುತ್ತದೆ. ಕೊಳಪ್ಪನ್ ಮುಖದಲ್ಲಿ ಸಂತೋಷ ಕಾಣುತ್ತದೆ.

ಕೊಳಪ್ಪನ್ ಅಂದುಕೊಂಡಂತೆಯೇ ಶವಯಾತ್ರೆ, ಶವಸಂಸ್ಕಾರ ನಡೆಯುತ್ತದೆಯೇ? ನ್ಯಾಯಾಲಯದ ಆದೇಶ ಏನಾಯಿತು? ಅನ್ನುವುದೇ ಮುಂದಿನ ಕಥೆ.

2016ರಲ್ಲಿ ನಡೆದ ನೈಜ ಘಟನೆಯೊಂದನ್ನು ಆಧರಿಸಿಯೇ ಈ ಸಿನಿಮಾದ ಕಥೆ ಹೆಣೆಯಲಾಗಿದೆ. ಇಡೀ ಸಿನಿಮಾ ನಮ್ಮನ್ನು ವಿಷಾದದಲ್ಲಿಯೇ ಕರೆದೊಯ್ಯುತ್ತದೆ. ಮನೆಯ ಮುಂದೆಯೇ ಮೂರು ದಿನ ಇಟ್ಟ ಶವ, ಅಲ್ಲಿಯ ವಾತಾವರಣ ಎಲ್ಲವನ್ನು ಎಷ್ಟು ನೈಜವಾಗಿ ಚಿತ್ರಿಸಲಾಗಿದೆಯೆಂದರೆ ನಮ್ಮ ಮುಂದೆಯೇ ನಡೆಯುತ್ತಿದೆಯೇನೋ ಅನ್ನುವ ಭಾವ ಮೂಡುತ್ತದೆ. ಉದ್ದೇಶಪೂರ್ವಕವಾಗಿ ಸಿನಿಮಾದ ಗತಿಯನ್ನು ನಿಧಾನ ಮಾಡಿರುವುದು ಆ ಮೂರ್ನಾಲ್ಕು ದಿನ ಶವವಿಟ್ಟು ಕಾಯುವ ಸನ್ನಿವೇಶಗಳ ಕರಾಳತೆಯನ್ನು ಹಾಗೆಯೇ ಪ್ರೇಕ್ಷಕನಿಗೆ ತೋರಿಸಲು ಅನ್ನಿಸುತ್ತದೆ. ಕಡೆಯ ದೃಶ್ಯವಂತೂ ನಿಮ್ಮ ಕರುಳು ಹಿಂಡುವುದು ಗ್ಯಾರಂಟಿ.

90 ನಿಮಿಷಗಳ ಈ ಸಿನಿಮಾ ಯಾವುದೇ ಪರಿಹಾರವನ್ನು ಹೇಳುವುದಿಲ್ಲ. ಆದರೆ ಮನಸ್ಸಿನಲ್ಲಿ ಪ್ರಶ್ನೆಯನ್ನಂತೂ ಹುಟ್ಟುಹಾಕುತ್ತದೆ. ಕಾನೂನು ತುಳಿತಕ್ಕೊಳಗಾದವರ ಪರವಾಗಿದ್ದರೂ ಅದನ್ನು ಕಾರ್ಯಗತಗೊಳಿಸುವವರು ಮೇಲ್ವರ್ಗದವರ ಪರವಾಗಿದ್ದಾಗ ಏನಾಗಬಹುದು ಎಂಬುದರ ಚಿತ್ರಣವೇ "ಮನಸಂಗಡ".

ಅನೇಕ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಪ್ರಶಸ್ತಿ ಪಡೆದು ಮೆಚ್ಚುಗೆ ಗಳಿಸಿದ ಈ ಚಿತ್ರದ ನಿರ್ದೇಶಕ ಅಮ್ಷನ್ ಕುಮಾರ್.

ನೋಡಬೇಕೆನ್ನುವವರು... Netflix ನಲ್ಲಿದೆ ನೋಡಿ.

ಸಂತೋಷ್ ಕುಮಾರ್ ಎಲ್.ಎಂ
25-Sep-2019

Thursday, March 21, 2019

Tamil movie : ಕುಟ್ರಮೇ ದಂಡನೈ



ಅನವಶ್ಯಕ ಹೀರೋಯಿಸಮ್ಮು, ಸಿನಿಮಾದ ಕಥೆಗೆ ಬೇಕಿಲ್ಲದ ನಾಯಕಿಯನ್ನು ಒಲಿಸಿಕೊಳ್ಳುವ ದೃಶ್ಯಗಳು, ಬೇಡದ ಪಾತ್ರಗಳು.ಹಾಡುಗಳು. ಫೈಟುಗಳು. ಎಲ್ಲದರಿಂದ ಚಿಕ್ಕದಿರಬೇಕಿದ್ದ ಸಿನಿಮಾ ಎರಡೂವರೆ ಗಂಟೆಯಾಗಿ ಸಿಕ್ಕಾಪಟ್ಟೆ Lengthy ಅನಿಸುತ್ತಿದೆಯಾ? ಈ ಬಗೆಯ ಬೋರಿಂಗ್ ಅಂಶಗಳಿಲ್ಲದ ಕುತೂಹಲಭರಿತ ಕಥೆಯಿರುವ ಪುಟ್ಟ, ಆದರೆ ಸಂಪೂರ್ಣ ತೃಪ್ತಿ ಕೊಡುವ ಸಿನಿಮಾವೊಂದು ಬೇಕಿದೆಯೇ?

ಹಾಗಿದ್ದರೆ ನೀವು ನೋಡಲೇಬೇಕಾದ ಸಿನಿಮಾ......ತಮಿಳಿನ "ಕುಟ್ರಮೇ ದಂಡನೈ" (ಅಪರಾಧವೇ ಶಿಕ್ಷೆ).

ಸಿನಿಮಾದ ಮುಖ್ಯ ಪಾತ್ರ ರವಿ. ಆತ ಪುಟ್ಟ ಏಜೆನ್ಸಿಯೊಂದರಲ್ಲಿ ಸಣ್ಣ ಸಂಬಳಕ್ಕೆ ಕೆಲಸ ಮಾಡುತ್ತಿದ್ದಾನೆ. ಕ್ರೆಡಿಟ್ ಕಾರ್ಡ್ ಬಿಲ್ ಕಟ್ಟದವರ ಮನೆಗಳಿಗೆ ಹೋಗಿ ಅವರಿಂದ ಹಣವನ್ನು ಪಡೆದುಬರುವುದು ಆತನ ಕೆಲಸ. ಆತ ಅನಾಥ. ಈಗಿರುವ ದೊಡ್ಡ ಸಮಸ್ಯೆಯೆಂದರೆ ಆತನಿಗೆ ಕಣ್ಣು ಸರಿಯಾಗಿ ಕಾಣಿಸುತ್ತಿಲ್ಲ. ಆತ ಟನ್ನಲ್ ವಿಷನ್ ಸಮಸ್ಯೆಯಿಂದ ಬಳಲುತ್ತಿದ್ದಾನೆ. ಸಾಮಾನ್ಯರಿಗೆ ಕಾಣುವಂತೆ ಆತನಿಗೆ ಪೂರ್ತಿ ದೃಷ್ಟಿ ಇಲ್ಲ. ಏನನ್ನು ನೋಡಿದರೂ ಅದರ ಮಧ್ಯಭಾಗವಷ್ಟೇ ಬಾಗಿಲ ಕೀಲಿಕೈ ಕಿಂಡಿಯಲ್ಲಿ ನೋಡಿದರೆ ಎಷ್ಟು ಕಾಣುತ್ತದೋ, ಅಷ್ಟು ಕಾಣುತ್ತಿದೆ. ಬರುಬರುತ್ತ ಆ ಕಿಂಡಿಯೂ ಚಿಕ್ಕದಾಗುತ್ತಿದೆ. ಆಸ್ಪತ್ರೆಯಲ್ಲಿ ತೋರಿಸಿದಾಗ ಅವರು "ಇದು ಗಂಭೀರ ಸಮಸ್ಯೆ, ಇದು ಇನ್ನೂ ಜಾಸ್ತಿಯಾಗುತ್ತ ಹೋಗಿ ಕೆಲವೇ ವರ್ಷಗಳಲ್ಲಿ ನೀವು ಸಂಪೂರ್ಣ ಕುರುಡಾಗಬಹುದು. ಹಾಗಾಗುವ ಮುನ್ನವೇ ಕಣ್ಣಿನ ಕಸಿ ಮಾಡಿಸಿಕೊಳ್ಳಿ" ಅಂತ ಸಲಹೆ ನೀಡುತ್ತಾರೆ. ಮೊದಲೇ ಬಡವ. ಅವನಿಗೆ ಅಷ್ಟು ಲಕ್ಷಾಂತರ ಹಣ ಎಲ್ಲಿಂದ ಬರಬೇಕು.

ಒಂದು ದಿನ ಮನೆಗೆ ಬಂದಾಗ ಆತ ವಾಸವಿರುವ ಕಟ್ಟಡದ ಇನ್ನೊಂದು ಮನೆಯಲ್ಲಿ ಒಬ್ಬಾಕೆಯ ಕೊಲೆಯಾಗಿರುತ್ತದೆ. ಅಲ್ಲಿಂದ ಒಬ್ಬ ವ್ಯಕ್ತಿ ಬರುವುದನ್ನು ಈತ ನೋಡಿಬಿಡುತ್ತಾನೆ. ಆತ ನೋಡಿದ್ದನ್ನು ಎಲ್ಲಿಯೂ ಹೇಳದಂತೆ ಸುಮ್ಮನಿರಲು ಅವನಿಗೆ ಅತ್ತಲಿನ ವ್ಯಕ್ತಿ ಆಫರ್ ಮಾಡುವ ದುಡ್ಡೂ ಲಕ್ಷ ಲಕ್ಷ......

ಮುಂದೇನಾಗಬಹುದು ಊಹಿಸಿಕೊಳ್ಳಿ! ಇದು ಆರಂಭವಷ್ಟೇ. ಕಥೆ ಇನ್ನೂ ಏನೇನೋ ಇದೆ.... ....ಸಿನಿಮಾದ ಒಂದೊಂದು ದೃಶ್ಯವೂ ಮುಖ್ಯ. ಕಡೆಯ ದೃಶ್ಯದವರೆಗೂ ಮಿಸ್ ಮಾಡಿಕೊಳ್ಳಬಾರದ ಅನೇಕ ಪ್ರಮುಖ ವಿಷಯಗಳಿವೆ. ನೀವು ಸಿನಿಮಾ ನೋಡಲು ಶುರುಮಾಡಿದರೆ ಕಡೆಯವರೆಗೂ ಅತ್ತಿತ್ತ ಅಲುಗಾಡುವುದಿಲ್ಲ. ಅಷ್ಟು ಥ್ರಿಲ್ಲಿಂಗ್ ಆಗಿದೆ. ಸಿನಿಮಾ ಮುಗಿದ ಮೇಲೂ ಮತ್ತೆ ಅದರ ಬಗ್ಗೆ ಯೋಚಿಸುತ್ತೇವೆ. ಕಥೆಯನ್ನು ಹಾಗೆ ಹೆಣೆಯಲಾಗಿದೆ.

ಸಿನಿಮಾದ ಕ್ಯಾಮೆರಾ ಕೆಲಸ ಹೇಗಿದೆಯೆಂದರೆ ಸಿನಿಮಾ ಮುಗಿದ ಮೇಲೂ. ಪ್ರತಿಯೊಬ್ಬರೂ ಅತ್ತಿತ್ತ ನೋಡಿ ನನಗೂ ಎಲ್ಲವೂ ಕಾಣಿಸುತ್ತಿದೆಯೇ ಅಥವಾ "ಟನಲ್ ವಿಷನ್" ಸಮಸ್ಯೆ ನನಗೂ ಇದೆಯಾ ಅಂತ ಒಮ್ಮೆಯಾದರೂ ಯೋಚಿಸುತ್ತೇವೆ. ಸಿನಿಮಾ ನಮ್ಮನ್ನು ಆವರಿಸಿಕೊಳ್ಳುವುದೆಂದರೆ ಹೀಗೆಯೇ. ಆತನ ಕಣ್ಣಿನ ಸಮಸ್ಯೆಯಿಂದ ಲಿಫ್ಟ್'ನಲ್ಲಿ ಎದುರಾಗುವ ಪಕ್ಕದ ಮನೆಯಾಕೆಯ ಜೊತೆಗಿನ ಮಿಸ್-ಕಮ್ಯೂನಿಕೇಶನ್, ಆತ ಬೈಕು ಓಡಿಸುವಾಗಿನ ಸಮಸ್ಯೆ, ಪೊಲೀಸು ಎದುರು ಬಂದಾಗ ಅಕ್ಕಪಕ್ಕದವರು ಕಾಣದಿರುವುದು ಎಲ್ಲ ಸೂಕ್ಷ್ಮಗಳನ್ನು ತೋರಿಸಿರುವ ರೀತಿ ನಮಗೇ ಆ ಸಮಸ್ಯೆಯಿದೆಯೇನೋ ಅನ್ನಿಸುವಷ್ಟು ಆ ಸಿನಿಮಾದೊಳಗೆ ಹೋಗಿಬಿಡುತ್ತೇವೆ.

ಸಿನಿಮಾ ಇರುವುದೇ ತೊಂಭತ್ತು ನಿಮಿಷ! "ಕಾಕ ಮುಟ್ಟೈ" ಸಿನಿಮಾಗಾಗಿ ನ್ಯಾಷನಲ್ ಅವಾರ್ಡ್ ಗೆದ್ದ ನಿರ್ದೇಶಕ ಮಣಿಕಂಡನ್ ಈ ಚಿತ್ರದ ನಿರ್ದೇಶಕರು. ಅನವಶ್ಯಕ ಎನಿಸುವ ಸಂಭಾಷಣೆಗಳಾಗಲೀ, ಒಂದು ದೃಶ್ಯವಾಗಲಿ ಎಲ್ಲೂ ಇಲ್ಲ. ಹಾಡು ಇಲ್ಲ. ಆದರೆ ಕ್ಷಣಕ್ಷಣಕ್ಕೂ ಕುತೂಹಲ ಮಿಶ್ರಿತ ಭಯವನ್ನು ತನ್ನ ಹಿನ್ನೆಲೆ ಸಂಗೀತದಲ್ಲೇ ಹೇಳುವ ಇಳಯರಾಜ ಅವರ ಕೈಚಳಕವಿದೆ! ಕಲಾವಿದರೆಲ್ಲರೂ ತಮ್ಮ ಪಾತ್ರದೊಳಗೆ ಜೀವಿಸಿದ್ದಾರೆ. ಒಬ್ಬಳು ಕಾಲ್ ಸೆಂಟರಿನ ಉದ್ಯೋಗಿ, ಬೈಕಿನಲ್ಲಿ ಕಲೆಕ್ಷನ್ನಿಗೆಂದು ಹೋಗುವ ಕಣ್ಣಿನ ಸಮಸ್ಯೆಯ ಹುಡುಗ, ಕಡಿಮೆ ಸಂಬಳ ದುಡಿದು ತರುವ ಕುಟುಂಬಗಳಿರುವ ಕಟ್ಟಡ ಎಲ್ಲದರ ಆಯ್ಕೆಗೆ ನಿರ್ದೇಶಕನಿಗೆ ಹ್ಯಾಟ್ಸಾಫ್ ಹೇಳಲೇಬೇಕು.

ಸಿನಿಮಾ ನೋಡಿ......ಇಷ್ಟವಾಗದಿದ್ದರೆ ಕೇಳಿ!


(ತಮಿಳು ಅರ್ಥವಾಗುವವರು ಯೂಟ್ಯೂಬ್ ನಲ್ಲಿ ಈ ಸಿನಿಮಾ ನೋಡಬಹುದು. ಸಬ್-ಟೈಟಲ್ ಇಲ್ಲ. https://www.youtube.com/watch?v=eDczdDF9-Gk)

ಸಂತೋಷ್ ಕುಮಾರ್ ಎಲ್.ಎಂ
21-Mar-2019