Monday, November 11, 2019

Malayalam Movie....... ಜಲ್ಲಿಕಟ್ಟು (2019)








ಜಲ್ಲಿಕಟ್ಟು (2019) review

ನಾನು ನೋಡಿದ್ದು ಕೆಲವೇ ಕೆಲವು ಮಲಯಾಳಂ ಸಿನಿಮಾಗಳು. ಅವುಗಳಲ್ಲಿ ಇದೂ ಒಂದು! ನೋಡಿದ ತಕ್ಷಣ ಮಲಯಾಳಂ ಸಿನಿಮಾಗಳೆಡೆಗಿನ ನನ್ನ ದೃಷ್ಟಿಕೋನವನ್ನು ಸಂಪೂರ್ಣವಾಗಿ ಬದಲಾಯಿಸಿತು.

ಆತ ಒಬ್ಬ ಮಾಂಸದ ವ್ಯಾಪಾರಿ. ದಿನವೂ ಬೆಳಕು ಹರಿಯುವ ಮುನ್ನವೇ ಒಂದು ಎಮ್ಮೆಯನ್ನು ಕಡಿದು ಮಾಂಸವನ್ನು ಮಾರುತ್ತಾನೆ. ಆತ ಕೊಡುವ ಮಾಂಸಕ್ಕಾಗಿಯೇ ದಿನವೂ ನೂರಾರು ಜನ ಕಾಯುತ್ತಾರೆ.

ಅದೊಂದು ದಿನ ಆತ ಕಡಿಯಬೇಕೆಂದಿದ್ದ ಎಮ್ಮೆ ಕೆರಳಿ ತಪ್ಪಿಸಿಕೊಂಡು ದಿಕ್ಕಾಪಾಲಾಗಿ ಓಡುತ್ತದೆ. ಅಷ್ಟೇ ಅಲ್ಲ. ಅದ್ಯಾವ ಪರಿ ವ್ಯಗ್ರವಾಗಿ ಓಡುತ್ತದೆಂದರೆ ಎದುರಿಗೆ ಸಿಕ್ಕ ಸಿಕ್ಕ ಜನರನ್ನು, ವಸ್ತುಗಳನ್ನು, ಗಿಡಗಳನ್ನು ನೋಡದೇ ಧ್ವಂಸ ಮಾಡುತ್ತ ಸಾಗುತ್ತದೆ.

ಇದನ್ನು ಹಿಡಿಯಬೇಕೆಂದು ಇಡೀ ಊರಿಗೆ ಊರೇ ಆಯುಧಗಳನ್ನು ಹಿಡಿದು ಎಮ್ಮೆ ಅಡಗಿರಬಹುದಾದ ಕಾಡಿನಂತಿರುವ ಆ ಜಾಗದಲ್ಲಿ ನುಗ್ಗುತ್ತಾರೆ!

ಮುಂದೇನು ಅನ್ನುವುದೇ ಸಿನಿಮಾದ ಕಥೆ.

ಇಲ್ಲಿ ಹೇಳುವಾಗ ಕಥೆ ಇಷ್ಟೇನಾ ಅನ್ನಿಸುತ್ತದೆಯಾದರೂ ಸಿನಿಮಾ ನೋಡುವವರ ಪಾಲಿಗೆ ಆ ಕಥೆ ಹೇಳುವ ವಿಷಯಗಳು ಸಾವಿರಾರು!

ನಾಗರೀಕತೆ ಅನ್ನುವುದು ಪ್ರಾಣಿ ಮನುಷ್ಯನ ಪಾಲಿಗೆ ಒಟ್ಟಿಗೆ ಶುರುವಾಯಿತಾದರೂ, ಮನುಷ್ಯ ಮಾತ್ರ ನಾನು ಮಾತ್ರ ಇಲ್ಲಿ ನೆಲೆಯೂರಬೇಕು, ಬೇರೆಯದೆಲ್ಲ ತನ್ನ ಭೋಗಕ್ಕೆ ಅನ್ನುವ ವಿಷಯವಾಗಿರಬಹುದು.

ಎಮ್ಮೆ ಹಿಡಿಯುವ ವಿಷಯಕ್ಕೂ, ಶಿಲಾಯುಗದ ಮನುಷ್ಯನ ಬೇಟೆಯಾಡುವ ಪ್ರವೃತ್ತಿಗೂ ತಳುಕು ಹಾಕುತ್ತ ....ಕಡೆಗೆ ಆ ಎಮ್ಮೆಯನ್ನು ಕಟ್ಟಿ ಹಾಕುವುದು ಕೇವಲ ತನ್ನ ಆಹಾರದ ಅಗತ್ಯಕ್ಕಾಗಿ ಅಲ್ಲ. ಅದು ತನ್ನ ಅಹಂ ಅನ್ನು ಇತರರಿಗೆ ತೋರ್ಪಡಿಸಲು ಅನ್ನುವ ವಿಷಯವಾಗಿರಬಹುದು. ಎಲ್ಲವನ್ನು ದೃಷ್ಟಾಂತಗಳಲ್ಲಿಯೇ ಹೇಳಲಾಗಿದೆ. ಇನ್ನೂ ಹೇಳಬೇಕೆಂದರೆ ಅಲ್ಲಿ ಬರುವ ಕೆಲವರು ಎಮ್ಮೆಯನ್ನು ಹಿಡಿಯಲು ಬಂದಿರುವುದಿಲ್ಲ‌. ಅವರ ಉದ್ದೇಶವೇ ಬೇರೆಯಿರುತ್ತದೆ.

ಈ ಸಿನಿಮಾವನ್ನು ನೀವು ಮನರಂಜನೆಗಾಗಿ ನೋಡಬಹುದು. ಸಿನಿಮಾ ಮಾಧ್ಯಮವನ್ನು ಅಭ್ಯಸಿಸಲು ನೋಡಬಹುದು. ಆದರೆ ಎಲ್ಲೂ ಇದು ಒಂದು ವರ್ಗಕ್ಕೆ ಮಾತ್ರ ಅಂತ ಸೀಮಿತಗೊಳಿಸಿಲ್ಲ.

ನಾನು ಇತ್ತೀಚೆಗೆ ನೋಡಿದ ಸಿನಿಮಾಗಳಲ್ಲೆಲ್ಲ, ಅಂದುಕೊಂಡದ್ದನ್ನು ಕಾವ್ಯಾತ್ಮಕವಾಗಿ ತೆಗೆದ best climax ಈ ಸಿನಿಮಾದಲ್ಲಿದೆ ಅಂತ ಖಂಡಿತ ಹೇಳಬಲ್ಲೆ. ಈಗಲೂ ಆ ದೃಶ್ಯ ತೆಗೆಯುವ ಮುನ್ನ ನಿರ್ದೇಶಕನಿಗಿರಬೇಕಾದ clarityಯ ಬಗ್ಗೆ imagine ಮಾಡಿಕೊಂಡರೂ ವ್ಹಾವ್ ಅನ್ನಿಸದೇ ಸುಮ್ಮನಿರಲಾಗದು.

ಸಿನಿಮಾ ಮುಗಿದ ಮೇಲೆ ಇಡೀ ಚಿತ್ರವನ್ನೊಮ್ಮೆ ನೆನಪಿಸಿಕೊಂಡರೆ ಏಕೆ ಈ ಸಿನಿಮಾಗೆ "ಜಲ್ಲಿಕಟ್ಟು" ಎಂಬ ಹೆಸರಿದೆ ಅನ್ನುವುದು ಅರಿವಾಗುತ್ತದೆ. ಅಲ್ಲೂ ಮನುಷ್ಯನ-ಪಶುವಿನ ನಡುವಿನ ಪಂದ್ಯ. ಅದು ಆಹಾರಕ್ಕಾಗಿಯಷ್ಟೇ ಅಲ್ಲ. ಅಲ್ಲಿ ಸಾವಿರಾರು ರಾಜಕೀಯಗಳಿವೆ. ಮದವೇರಿದ ಪಶುವನ್ನು ಮಟ್ಟ ಹಾಕಿ ಊರವರ ಮುಂದೆ ಮೀಸೆ ತಿರುವಿಕೊಳ್ಳಲು ಕಾಯುತ್ತಿರುವ ಸುಳ್ಳೇ ಪುರುಷತ್ವಗಳು ಎಲ್ಲೆಲ್ಲೂ ಇವೆ. ಆದರೆ ಆ ಪಂದ್ಯಕ್ಕೆ ಸಿಗುವ ಕ್ರೀಡಾಂಗಣ ಮಾತ್ರ ಈ ಸಿನಿಮಾದಷ್ಟು ದೊಡ್ಡದು. ಅದಕ್ಕೆ ಎಲ್ಲೆಯಿಲ್ಲ!

ನಿಜವಾಗಿ ಈ ಸಿನಿಮಾದ ಛಾಯಾಗ್ರಾಹಕನೇ ನಿಜವಾದ ಹೀರೋ. ಚಿತ್ರದ ಬಹುಪಾಲು ದೃಶ್ಯಗಳು ಕತ್ತಲೆಯಲ್ಲೇ ನಡೆಯುತ್ತವೆ. ನೂರಾರು ಜನಗಳು ಹಿಡಿದ ಪಂಜು, ಬ್ಯಾಟರಿ, ಪೆಟ್ರೋಮಾಸ್ ಲೈಟ್ನಂತಹ ಬೆಳಕಿನಲ್ಲೇ ನಡೆಯುವ ರೋಚಕ
ದೃಶ್ಯಗಳನ್ನು ನೈಜವಾಗಿ ಚಿತ್ರೀಕರಿಸಲಾಗಿದೆ.

ಹಿನ್ನೆಲೆ ಸಂಗೀತವೂ ವಿಭಿನ್ನವೇ. ಕೇಳುತ್ತಿದ್ದರೆ ಶಿಲಾಯುಗದಲ್ಲಿ ಬೇಟೆಯಾಡಲು ಹೊರಡುವ ಜನಗಳು ಕೂಗುವ ಶಬ್ದದಂತೆ ಭಾಸವಾಗುತ್ತದೆ. ಅದನ್ನು ಕೇಳುವಾಗ ಈ ಸಿನಿಮಾವನ್ನು ಥಿಯೇಟರ್‌ನಲ್ಲಿ ನೋಡಬೇಕಿತ್ತು ಅನಿಸಿದ್ದು ಸುಳ್ಳಲ್ಲ.

ಹಾಡುಗಳಿಗೆ ಜೋತು ಬೀಳದೆ, ಅನವಶ್ಯಕ ಸಂಭಾಷಣೆಗೆ ಜೋತು ಬೀಳದೆ ಕೇವಲ ತನ್ನ ಕಥೆಯ ಮೇಲೆ, ನಿರೂಪಣಾ ಶೈಲಿಯ ಮೇಲೆ ನಂಬಿಕೆಯಿಟ್ಟು ಕೇವಲ 90ನಿಮಿಷಗಳ ಸಿನಿಮಾದಲ್ಲಿ ನೂರಾರು ವಿಷಯಗಳನ್ನು ಯಶಸ್ವಿಯಾಗಿ ಈ ಸಿನಿಮಾದ ಮೂಲಕ ಹೇಳಿದ ನಿರ್ದೇಶಕ Lio Jose ಗೆ ಒಂದು ಶಹಬ್ಬಾಸ್ ಹೇಳಲೇಬೇಕು.

ಒಂದಂತೂ ಹೇಳಬಲ್ಲೆ. ಅನೇಕ ನಿರ್ದೇಶಕರಿಗೆ ಈ ಸಿನಿಮಾ ಸ್ಫೂರ್ತಿಯಾಗಬಲ್ಲದು! ಸಿದ್ಧಸೂತ್ರಗಳಿಗೆ ಜೋತು ಬೀಳದೆ ತನ್ನದೇ ಅಂತ ಹೇಳಿಕೊಳ್ಳುವಷ್ಟು ಸಿನಿಮಾ ಮಾಡುವ ಸ್ವಾತಂತ್ರ್ಯ ಎಲ್ಲ ನಿರ್ದೇಶಕರಿಗೂ ಸಿಗಲಿ ಅನ್ನುವುದು ನನ್ನ ಆಶಯ.

ಹೇಳಲು ಅನೇಕ ವಿಷಯಗಳಿವೆ. ಆದರೆ ನೀವು ಸಿನಿಮಾ ನೋಡಲಿ ಎಂಬ ಕಾರಣದಿಂದ ಇಷ್ಟಕ್ಕೆ ನಿಲ್ಲಿಸುತ್ತಿದ್ದೇನೆ. ಈ ಸಿನಿಮಾ ನೋಡಿ. ಅಮೇಜಾನ್ ಪ್ರೈಮ್‌ನಲ್ಲಿದೆ. 90 ನಿಮಿಷಗಳಷ್ಟೇ. ವಿಭಿನ್ನ ಸಿನಿಮಾವೊಂದನ್ನು ನೋಡಿದೆ ಅಂತ ನಿಮಗನ್ನಿಸದಿದ್ದರೆ ಕೇಳಿ.

-Santhosh Kumar LM
05-Nov-2019

No comments:

Post a Comment

Please post your comments here.