Saturday, July 21, 2012

ಅನುಕರಣೆ- ನಮ್ಮ ಕಾಡುವ ಪೆಡಂಭೂತ


ಆತನೊಬ್ಬ ವೇದಿಕೆಯ ಮೇಲೆ ನಿಂತು ಕನ್ನಡದ ಮೇರು ನಟರ ಜನಪ್ರಿಯ ಸಂಭಾಷಣೆಗಳನ್ನು ಹೇಳುತ್ತಿದ್ದಾನೆ.
ಅದೊಂದು ದೊಡ್ಡ ಸಭೆ. ಸಾವಿರಾರು ಜನರಿದ್ದಾರೆ. ಈತನ ಮಿಮಿಕ್ರಿಗೆ ಯಾವೊಬ್ಬನ ಪ್ರತಿಕ್ರಿಯೆಯೂ ಇಲ್ಲ.
ಮೇರು ನಟರ ಹೆಸರನ್ನು ಹೇಳುವಾಗ ಚಪ್ಪಾಳೆ ಹೊಡೆದ ಜನ ಅವರ ಡೈಲಾಗ್ ಹೇಳಿದಾಗ ಮಾತ್ರ ಸುಮ್ಮನಿದ್ದಾರೆ.

ಹೌದು. ಇದೇ.. ನಾನು ಸರಿ.
ನೆನಪಾಗುತ್ತಿದೆ. ಇದೇ ಡೈಲಾಗ್-ಗಳನ್ನು ಮೊನ್ನೆಯೆಲ್ಲೋ ಬೇರೊಂದು ಕಾರ್ಯಕ್ರಮದಲ್ಲಿ ನೋಡಿದ್ದೆ.
ಮಿಮಿಕ್ರಿ ದಯಾನಂದ್ ಅವರು ಇದೇ ಸಂದರ್ಭವನ್ನು ಹೇಳುತ್ತಾ ನಟರ ಅನುಕರಣೆ ಮಾಡುವಾಗ ಜನರ ಕರತಾಡನ ಮುಗಿಲು ಮುಟ್ಟುವಂತಿತ್ತು.
ಅವರು ಡೈಲಾಗ್ ಹೇಳುತ್ತಿದ್ದರೆ ಶಂಕರ್ ನಾಗ್, ರಾಜಣ್ಣ, ವಿಷ್ಣು ಎಲ್ಲರೂ ನಮ್ಮ ಮುಂದೆಯೇ ಇದ್ದಾರೇನೋ ಅನ್ನುವಂತೆ ಜನ ಹುಚ್ಚೆದ್ದು ಕುಣಿಯುತ್ತಿದ್ದರು.
ಅವರ ಹಾವ ಭಾವ ದಿವಂಗತ ನಟರನ್ನು ಸಭೆಗೆ ಎಳೆದು ತರುತ್ತ ಜನಗಳನ್ನು ಮೋಡಿ ಮಾಡಿ, ಜನಗಳು "ಒನ್ಸ್ ಮೊರ್". ಎಂದು ಕೂಗುತ್ತಿದ್ದರು.

ಇಲ್ಲೇಕೆ ಹೀಗಾಯ್ತು?
ಈ ಆಸಾಮಿ ಮಿಮಿಕ್ರಿ ದಯಾನಂದ್ ಗಿಟ್ಟಿಸಿದ ಚಪ್ಪಾಳೆಯನ್ನೇ ತನ್ನ ತಲೆಯಲ್ಲಿಟ್ಟುಕೊಂಡು ಅವರ ಕಾನ್ಸೆಪ್ಟ್ ಕದ್ದುಬಿಟ್ಟನಾ?
ನಾನು ಇಲ್ಲಿ ಹೇಳುತ್ತಿರುವುದು ಮಿಮಿಕ್ರಿ ದಯಾನಂದ್ ರ ಅನುಕರಣೆಯನ್ನಲ್ಲ.
ಅವರ ಜನಪ್ರಿಯತೆಯನ್ನು ತಲೆಯಲ್ಲಿ ತುಂಬಿಕೊಂಡು ನಾನೇ ದಯಾನಂದ್ ಎನ್ನುವಂತೆ ದಯಾನಂದ್ ರ ಅನುಕರಣೆ ಮಾಡಹೊರಟಿದ್ದು.

ಏಕೆಂದರೆ ಮಿಮಿಕ್ರಿ ಮಾಡುವವನು ಆ ನಟರ ದೃಷ್ಟಿ, ಹಾವ ಭಾವ, ಧ್ವನಿ ಪ್ರತಿಯೊಂದನ್ನು ನೂರಾರು ಬಾರಿ ಅಭ್ಯಾಸ ಮಾಡಬೇಕಾಗುತ್ತದೆ.
ಅಷ್ಟೇ ಅಲ್ಲ ಆ ನಟನ ಡೈಲಾಗ್ ಬಾಯಿಪಾಠ ಮಾಡಬೇಕು.
ಆ ಸಿನಿಮಾದಲ್ಲಿ ಆತ ಹೇಳಿದ ಪರಿಯಲ್ಲೇ ಈತನೂ ಹೇಳಬೇಕು.
ಅಷ್ಟೇ ಅಲ್ಲ, ಕಾರ್ಯಕ್ರಮದಲ್ಲಿ ಸಭಿಕರೆದುರು ಮಿಮಿಕ್ರಿಯನ್ನು ಮಾಡಿ ತೋರಿಸುವಾಗ ಸ್ವಲ್ಪ ಸಮಯದಲ್ಲೇ ಮೂರ್ನಾಲ್ಕು ನಟರ ಮಿಮಿಕ್ ಮಾಡಬೇಕಾಗಿರುತ್ತದೆ.
ಹಾಗಾಗಿ ತಕ್ಷಣದಲ್ಲಿ ಒಬ್ಬೊಬ್ಬ ನಟರ ಧ್ವನಿಯಿಂದ ಇನ್ನೊಬ್ಬ ನಟರ ಧ್ವನಿಗೆ ಜಿಗಿಯಬೇಕು.
ಈ ಮೇಲಿನ ಯಾವುದೇ ವಿಷಯದಲ್ಲಿ ಕೊಂಚ ಎಡವಟ್ಟಾದರೂ ಮಿಮಿಕ್ರಿ ದೊಡ್ಡ ಕಾಮೆಡಿಯಾಗಿಬಿಡುತ್ತದೆ.

ಹೌದು.ಪ್ರತಿ ಮನುಷ್ಯನ ಜೀವನದಲ್ಲಿ ಈ ವಿಷಯ ಪ್ರತೀ ಹಂತದಲ್ಲಿ ಕಾಡುತ್ತಿರುತ್ತದೆ.

ಸಚಿನ್ ಶತಕ ಬಾರಿಸಿದ ಮರುಕ್ಷಣ ತನ್ನ ಬ್ಯಾಟನ್ನು ಗಾಳಿಯಲ್ಲಿ ಆಡಿಸುತ್ತಾನೆ.
ಕಿಕ್ಕಿರಿದು ತುಂಬಿದ ಸ್ಟೇಡಿಯಮ್ ನಲ್ಲಿನ ಜನಗಳ ಕೂಗು ಇಡೀ ದೇಶಕ್ಕೆ ಕೇಳಿಸುತ್ತಿರುತ್ತದೆ.
ಮರುದಿನ ಈತ ಬ್ಯಾಟೊಂದನ್ನು ಹಿಡಿದು ಮೈದಾನಕ್ಕೆ ಕ್ರಿಕೆಟ್ ಕಲಿಯಲೆಂದು ಹೊರಡುತ್ತಾನೆ, ಸಚಿನ್ ರೀತಿಯೇ!!
ನಾಲ್ಕು ದಿನಗಳ ನಂತರ ಬ್ಯಾಟು ಮೂಲೆ ಸೇರಿರುತ್ತದೆ.
ಮತ್ತೊಮ್ಮೆ ಅದರ ನೆನಪಾಗುವುದು ಸಚಿನ್ ಇನ್ನೊಮ್ಮೆ ಶತಕ ಬಾರಿಸಿದಾಗಲೇ!

ಅಶ್ವಥ್ ಮೈಕ್ ಹಿಡಿದು ನಿಂತರೆ ಎದುರಿರುವವನು ತನ್ನ ಮೈಮರೆಯಬೇಕು.
ಒಮ್ಮೆ ಅದ ನೋಡಿ ಈತನೂ ರೇರ್ರೆರೆರೆರೇರಾ ಎಂದು ಹಾಡಲು ತೊಡಗುತ್ತಾನೆ.
ಯಾರೋ ಒಬ್ಬರು ಬರೆದ ಅರ್ಥಗರ್ಭಿತ ಕವನಕ್ಕೆ ಮರುಳಾಗಿ ಈತನೂ ಕವನ ಬರೆಯುತ್ತೇನೆಂದು ಹೊರಡುತ್ತಾನೆ.
ಕನ್ನಡದ ಪದಗಳ ಬಗ್ಗೆ ಒಲವು ಮತ್ತು ಅರಿವೇ ಇಲ್ಲದ ವ್ಯಕ್ತಿಯೊಬ್ಬ ಎದ್ದು ನಿಂತು ನಾ ಕನ್ನಡದಲ್ಲಿ ಕವಿತೆಯ ಬರೆಯುತ್ತೇನೆ ಎಂದು ಹೇಳಿದರೆ,
ಎದುರಿಗಿರುವವನ ಸ್ಥಿತಿ ಹೇಗಿರಬೇಡ ನೀವೇ ಯೋಚಿಸಿ.
ಈ ರೀತಿಯ ಸಾವಿರಾರು ಉದಾಹರಣೆಗಳನ್ನು ನಾವು ಕೊಡಬಹುದು.

ಪ್ರಸಿದ್ಧ ವ್ಯಕ್ತಿಗಳ ಅನುಕರಣೆ ವಿಷಯ ಹಾಗಿರಲಿ.
ಪಕ್ಕದ ಮನೆಯವರ ಮಗ ಡಾಕ್ಟರ್ ಅದನೆಂದು ತಿಳಿದು, ತಮ್ಮ ಮಗನಿಗೆ ಇಷ್ಟವಿಲ್ಲದ ಸೈನ್ಸ್ ಕೊಡಿಸಿಬಿಟ್ಟಿರುತ್ತಾರೆ.
ಮೊದಲ ವರ್ಷದ PUC ನಲ್ಲೇ ಮಗ 5-6 ಸಬ್ಜೆಕ್ಟುಗಳಲ್ಲಿ ಫೇಲಾಗಿರುತ್ತಾನೆ.
ಇದು ಬೇಕಿತ್ತಾ?

ಆಮೀರ್ ಖಾನ್ ನ ಎಯ್ಟ್ ಪ್ಯಾಕ್ ದೇಹ ನೋಡಿ ಈತನೂ ಜಿಮ್ ಕಡೆಗೆ ಧಾವಿಸುತ್ತಾನೆ.
ರಘುಧೀಕ್ಷಿತ್ ಗಿಟಾರ್ ಹಿಡಿದು ಹಾಡುವ ಭಂಗಿಗೆ ಬೆರಗಾಗಿ, ಇವನೂ ಗಿಟಾರ್ ಕಲಿಯಲೆಂದು ಅಪ್ಪನಿಗೆ ಜೋತುಬಿದ್ದು ದುಬಾರಿಯ ಗಿಟಾರ್ಒಂದನ್ನು ಕೊಡಿಸಿಕೊಂಡು, ಕಲಿಯಲೆಂದು ಸಂಗೀತ ಶಾಲೆಗೆ ಹೊರಡುತ್ತಾನೆ.
ನಾಲ್ಕೂ ದಿನವೂ ಆಗಿಲ್ಲ ಆಗಲೇ ಎಲ್ಲರೆದುರು ಹಾಡೋಕೆ ಶುರು ಮಾಡುತ್ತಾನೆ.
ಯಾತನೆಯಾದರೂ ನೆರೆಯವರು ಅದ್ಭುತ ಎಂದು ಸುಳ್ಳು ಹೊಗಳಿಕೆ ನೀಡುತ್ತಾರೆ.

ನಾವು ಇಲ್ಲಿ ತಿಳಿದುಕೊಳ್ಳಬೇಕಾದ ವಿಷಯವೊಂದಿದೆ.
ಯೂರೋಪಿನ ದೇಶವೊಂದರ ಪ್ರಾಹ ನಗರದಲ್ಲಿ ಐತಿಹಾಸಿಕ ಸೇತುವೆಯೊಂದಿದೆ.
ನಾನು ಹೀಗೆಯೇ ಅಲ್ಲಿ ವಾಕಿಂಗ್ ಹೋಗುವಾಗ ದಾರಿಯಲ್ಲಿ ಕೆಲವು ಭಿಕ್ಷುಕರಿರುತ್ತಾರೆ.
ಕೈಯಲ್ಲೊಂದು ವೈಯೊಲಿನ್ ಹಿಡಿದು ಇಬ್ಬಿಬ್ಬರು ಒಟ್ಟೊಟ್ಟಿಗೆ ಬಾರಿಸತೊಡಗುತ್ತಾರೆ.
ಅವರೆಷ್ಟು ಚೆನ್ನಾಗಿ ಬಾರಿಸುತ್ತಿರುತ್ತಾರೆಂದರೆ ಇವರೇನಾದರೂ ನಮ್ಮ ದೇಶದಲ್ಲಿದ್ದರೆ ಇಷ್ಟು ಹೊತ್ತಿಗೆ ದೊಡ್ಡ ಸಂಗೀತ ನಿರ್ದೇಶಕರಾಗುತ್ತಿದ್ದರೇನೋ ಎನಿಸುತ್ತದೆ. ಸ್ವಲ್ಪ ಹೊತ್ತಿಗಾಗಲೇ ಅವರ ಮುಂದೆ ಇಟ್ಟ ಟೋಪಿಗಳು ಜನಗಳು ಹಾಕುವ ಚಿಲ್ಲರೆಗಳಿಂದ ತುಂಬಿ ಹೋಗುತ್ತವೆ.

ನಾನು ಇಲ್ಲಿ ಹೇಳುತ್ತಿರುವ ವಿಷಯವೊಂದನ್ನು ತಾವು ಸೂಕ್ಷ್ಮವಾಗಿ ಗಮನಿಸಬೇಕು.
ಇನ್ನೊಬ್ಬರ ಕೌಶಲ್ಯವನ್ನು ನೋಡಿ ಪ್ರೇರಿತರಾಗುವುದು ಬೇರೆ.
ಆದರೆ ಆ ಕೌಶಲ್ಯವನ್ನು ಹೊಂದಿರುವವರ ಜನಪ್ರಿಯತೆಯನ್ನು ನೋಡಿ ಅತಿ ಸ್ವಲ್ಪ ಸಮಯದಲ್ಲಿ ಅವರಂತೆ ಆಗಬೇಕೆಂದು ಮನಸ್ಸಿನಲ್ಲಿ ಹೇಳಿಕೊಳ್ಳುತ್ತಾ ಅವರನ್ನೇ ಅನುಕರಿಸತೊಡಗುವುದು.

ಇದು ದೊಡ್ಡ ಅಪಾಯ.
ಯಾಕೆಂದರೆ ಈ ರೀತಿ ಬರೇ ಅನುಕರಣೆ ಮಾಡುತ್ತಾ ಹೊರಟ ಪ್ರತಿಶತ 99 ಜನ ಬೇಗನೆ ಈ ಕಾರ್ಯಕ್ಕೆ ತಿಲಾಂಜಲಿ ಹಾಡುತ್ತಾರೆ.
ಕಾರಣ ಯಾವುದೇ ಕಲಿಕೆಯ ಆರಂಭಕ್ಕೂ ಮತ್ತು ಆ ಕೌಶಲ್ಯವನ್ನು ಪಡೆದು ಜನಪ್ರಿಯತೆ ಗಳಿಸುವ ಹಂತಕ್ಕೂ ನಡುವೆ ಬಹಳ ದೊಡ್ಡ ಅಂತರವಿರುತ್ತದೆ.
ಅದರ ಅರಿವು ನಮಗೆ ಆರಂಭದಲ್ಲಾಗಿರುವುದಿಲ್ಲ.
ಬ್ಯಾಟ್ ಹಿಡಿದು ಬಿಸಿಲಿನಲ್ಲಿ ಮೂರ್ನಾಲ್ಕು ದಿನ ಬೆವರಿಲಿಸಿದಾಗಲೇ ಇಳಿದುಹೋಗಿರುತ್ತದೆ.

ಇತ್ತೀಚೆಗೆ ನಾ ಓದಿದ ಪತ್ರಿಕೆಯೊಂದರಲ್ಲಿ ಯಶಸ್ಸಿನ ಸೂತ್ರಗಳ ಬಗ್ಗೆ ಕೊಡಲಾಗಿತ್ತು.
ಯಾವುದೇ ವ್ಯಕ್ತಿ ಯಾವುದೇ ವಿಷಯದಲ್ಲಿ ಅತ್ಯುನ್ನತ ಪರಿಣಿತನಾಗಬೇಕೆಂದರೆ ಕನಿಷ್ಟ ಪಕ್ಷ ಹತ್ತು ಸಾವಿರ ಘಂಟೆಗಳ ಶ್ರಮವನ್ನು ಮನಸಾರೆ ಹಾಕಬೇಕು ಎಂಬುದು. ದಿನಕ್ಕೊಮ್ಮೆ 4 ಘಂಟೆಗಳ ಲೆಕ್ಕಾಚಾರದಲ್ಲಿ ಅದೆಷ್ಟು ವರ್ಷ ಕಾಯಬೇಕು ಎನ್ನುವ ಲೆಕ್ಕಾಚಾರ ಪಕ್ಕಕ್ಕಿರಲಿ. ಕೊನೇಪಕ್ಷ ಅದಕ್ಕೆ ಬೇಕಾಗುವ ಶ್ರದ್ಧೆಯ ಅವಶ್ಯಕತೆಯ ಅರಿವು ನಮಗಾಗಬೇಕು.

ಪ್ರತಿ ವ್ಯಕ್ತಿಗೂ ತನ್ನದೇ ಆದ ವಿಶಿಷ್ಟ ಪ್ರತಿಭೆಯನ್ನು ದೇವರು ನಮಗೆ ಕೊಟ್ಟಿರುತ್ತಾನೆ.
ಅದರ ಅರಿವು ನಮಗಾದಾಗ ಅದಕ್ಕೆ ಜೋಪಾನವಾಗಿ ನೀರುಣಿಸಿ ನಿರಂತರ ಪರಿಶ್ರಮ ಮತ್ತು ಶ್ರದ್ಧೆಯಿಂದ ಬೆಳೆಸುವ ಕಾರ್ಯ ನಮ್ಮದಾಗಬೇಕು.
ಆಗ ಯಶಸ್ಸು, ಜನಗಳ ಕರತಾಡನ, ತನ್ನಂತಾನೆ ಹಿಂದೆ ಓಡಿ ಬರುತ್ತದೆ.

ಪ್ರತಿಯೊಂದನ್ನು ನಮ್ಮ ಸ್ವಂತದ್ದಾಗಿಯೇ ಪಡೆಯೋಣ.
ಅಲ್ಲಿಯವರೆಗೂ ಸಚಿನ್ ನ ಬ್ಯಾಟು, ರಘುಧೀಕ್ಷಿತ್ ರ ಗಿಟಾರ್, ಅಶ್ವಥ್ ರ ತೆರೆರೇರಾ, ಆಮೀರ್ ನ ದಷ್ಟಪುಷ್ಟ ದೇಹ ಅವರ ಬಳಿಯೇ ಇರಲಿ.
ನೀವೇನಂತೀರಿ??


ನಿಮ್ಮ ಗೆಳೆಯ,
ಸಂತು

Friday, July 13, 2012

ಸಿಹಿ!!

ಆ ಮೊದಲ ರಾತ್ರಿಯಲ್ಲಿ,
ಬಹಳ ಸಿಹಿಯಾಗಿತ್ತು.
ಗೊತ್ತಿಲ್ಲ.
ಆ ನಿನ್ನ ತುಟಿಯೋ,
ಅಥವಾ
ನೀ ತಂದ ಹಾಲೋ!!


ಅಂದು ನಾ ಬರೆದ ಪ್ರೇಮಪತ್ರವನ್ನೇಕೋ,
ಇಂದು ಗೆದ್ದಲು ತಿನ್ನುತ್ತಿದೆ.
ಪಾಪ ಅದಕ್ಕೆ ಗೊತ್ತಿಲ್ಲ,
ಆ ಅಕ್ಷರಗಳಿಂದ,
ದೊಡ್ಡ ಪ್ರೇಮವೃಕ್ಷವೊಂದಾಗಲೇ ಬೆಳೆದು ನಿಂತಿದೆಯೆಂದು!!


ಯುಗಾದಿಯಂದು ನಾ ಬೇವು ಬೆಲ್ಲ
ತಿನ್ನುವುದಿಲ್ಲ.
ಮನೆಯಲ್ಲಿಯೇ ನಡೆಯುತ್ತದೆ,
ನಿತ್ಯ ಯುಗಾದಿ.
ಏನಾದರೊಂದು ಅವಳಿಗೆ ತಂದರೆ,
ಅಥವಾ ಮರೆತು ಬಂದರೆ!!


--ಸಂತು 

Saturday, June 30, 2012

ನನ್ನ ಕ್ಯಾಮೆರಾ ಕಣ್ಣಲ್ಲಿ-1

Place :Prague, czech Republic
 Date:29 June 2012

ಮರದ ಹಿಂದೆ ಬಚ್ಚಿ ಕುಳಿತು ಸೂರ್ಯನೊಂದಿಗೆ ಗಡಿಯಾರದ ಕಣ್ಣಾಮುಚ್ಚಾಲೆಯಾಟ..

Saturday, June 2, 2012

ಹೀಗೂ ಉಂಟು!!


ಕಣ್ಣಾಮುಚ್ಚಾಲೆಯಾಡುತ್ತಾನೆ
ಮೋಡದೊಳಗೆ ಸೇರಿ ರವಿಯೂ,
ನಾ ಕ್ಯಾಮೆರಾವನೆತ್ತಿಕೊಂಡಾಗ..

ಆಕೆ ಮುನಿಸಿಕೊಂಡಾಗ
ಪಾತ್ರೆಗಳೂ ಮಾತನಾಡುತ್ತವೆ.

ಅಕ್ಕಿ ಮುಗಿದಾಗಲೇ ಯಾಕೋ
ಹಸಿವು ಹೆಚ್ಚಾಗುತ್ತದೆ.

ಹಾವೂ ವಿಷವುಗುಳುತ್ತದೆ
ಬಾಯಿಗೇಕೋ ರುಚಿಯೆನಿಸದೇ.

ಪಕ್ಕದ ಛತ್ರದ ಮಂಗಳವಾದ್ಯಗಳೂ
ನಿದ್ರೆ ಹಾಳು ಮಾಡುತ್ತವೆ
ಬೆಳಗಿನ ನಿದ್ರೆ ಅಮಂಗಳವೆಂದು ಹೇಳುತ್ತಾ.

ಸಮುದ್ರವೇಕೋ ನೀರು ಕುಡಿಯುತ್ತಲೇ ಇದೆ,
ತನ್ನೊಡಲೊಳಗಿರುವ ನೀರು
ದಾಹವ ತೀರಿಸುತ್ತಿಲ್ಲವೆಂಬಂತೆ.

ಹಸಿದ ಹೊಟ್ಟೆಯವನ ಬಾಯಲ್ಲಿ
ಎಂಜಲೆಲೆಯ ಮೇಲಿನ ಮೈಸೂರು ಪಾಕೂ ನೀರೂರಿಸುತ್ತದೆ.

ತಲೆನೋವು ಮಾಯವಾಗುತ್ತದೆ
ಬರೀ ಅವಳ ಸ್ಪರ್ಶದಿಂದ, ಅಮೃತಾಂಜನವಿಲ್ಲದೆಯೇ.

ಅವ ಆ ನಿಷೇಧವಿರುವ ಜಾಗದಲ್ಲೇ ಉಗುಳುತ್ತಾನೆ,
ಆ ಫಲಕವ ಬರೆದವನ ನೆನೆಸಿಕೊಳ್ಳುತ್ತ.

ಮುಟ್ಟಿದೊಡನೆ ನೀರಲ್ಲಿದ್ದ ಚಂದಿರ
ಕಣ್ಮರೆಯಾಗಿ ಸೇರುತ್ತಾನೆ ನೀಲಾಕಾಶ.

ಕುಡಿದು ಓಡಿಸುವವನ ಗಾಡಿಯೂ
ತೂರಾಡುತ್ತಲೇ ಬರುತ್ತದೆ!!
 -ಸಂತು                
                                                

                                                                          
ಸ್ನೇಹಿತರೆ,
ನಮ್ಮ ಸುತ್ತಮುತ್ತಲ ಕ್ರಿಯೆಗಳನ್ನು ಇದ್ದಂತೆಯೇ ನೋಡದೇ ಬೇರೆಯದೇ ದೃಷ್ಟಿಕೋನದಿಂದ ನೋಡುವ ಚಿಕ್ಕಪ್ರಯತ್ನ.
ಪ್ರತಿ ಸಾಲುಗಳನ್ನು ಎರಡೆರಡು ಬಾರಿ ಓದಿದರೆ ಸೂಕ್ಷ್ಮ ಅರಿವಿಗೆ ಬರುತ್ತದೆ.ಧನ್ಯವಾದಗಳು.





Thursday, May 17, 2012

ನೀ ಅತ್ತಾಗ.








ಕಣ್ಣಲ್ಲಿ ನೀರು, ಕಿವಿತಮಟೆಯೊಡೆಯುವಷ್ಟು ಅಳು,
ಅದರೂ ಯಾರೊಬ್ಬರೂ ಅಳಲಿಲ್ಲ.
ಮುಖಗಳಲ್ಲಿ ಮಂದಹಾಸ, ಎದೆ ಬಿರಿಯುವಷ್ಟು ಸಂತೋಷ.
ಅವರಾರನ್ನೂ ಅಲ್ಲಿ ತಡೆವರಾರಿಲ್ಲ.

ಮೈಯ ಕಣಕಣದಲ್ಲಿ ಪುಷ್ಪಗಂಧವು ಸೂಸಿ,
ಚುಂಬಿಸಿದ ತುಟಿಗಳಿಗೂ ಲೇಪನವಾಯ್ತು.
ಕಂಪಿಸಿಹ ಕೈಗಳಿಗು, ಕಂದ ನಗುವುದ ನೋಡಿ,
ಜಗವನೆತ್ತುವ ಶಕುತಿ ಬಂದಾಯ್ತು.

ಮುನಿಸಿಕೊಂಡವರೆಲ್ಲ ಅಲ್ಲಲ್ಲಿ ಮುಗುಳ್ನಕ್ಕು,
ನಡುವಿನಂತರವೆಲ್ಲ ಮಾಯವಾಯ್ತು.
ಕಂದ ನೋಡಿದ ಒಡನೆ, ಕಳೆದ ದಿನಗಳ ಮರೆತು,
ಮನದ ಬೆಂಕಿಗೆ ಪೂರ ನೀರು ಬಿತ್ತು.

ಕೋಟಿ ಕಂಡವರೆಷ್ಟೋ, ಜಗವ ಗೆದ್ದವರೆಷ್ಟೋ,
ಇಂತಿಪ್ಪ ಸಂತಸವ ಕಂಡಿರುವರೇನು?
ಕಂದ ಬಿಡಿಸಿದ ಗೋಡೆಚಿತ್ರವಿಲ್ಲದಿರೆ,
ಮಹಲುಗಳ ಕಟ್ಟಿಯೂ ಔಚಿತ್ಯವೇನು?

ಸಾಕಬೇಕೆಂದವರಾರು, ಬೆಳೆಯಬೇಕೊಟ್ಟಿಗೆ,
ಕ್ಷಣಕ್ಷಣವೂ ಕರಗುತಿರೆ ಕರ್ಪೂರದಂತೆ.
ಸಿರಿತನವೋ ಬಡತನವೋ ,ಹೊನ್ನು ಬಾಧಿಸಲೇಕೆ,
ಕಂದನೇ ಮನೆಯ ಭಾಗ್ಯವಂತೆ!!

ಮುಗಿಲೊಳಗೆ ಮನೆಯೊಳಗೆ ಮಡಿಲೊಳಗೆ ಮಗುವಾಗಿ,
ಬೆಳಗುತಿರು ಈ ಮನವ ಚಂದ್ರನಂತೆ.
ಬಂಧುಬಳಗಕ್ಕೆಲ್ಲ ನೀನೇ ಸೇತುವೆಯಾಗು,
ಸಂತಸವ ಹರಿಸುತಿರು ಕರಗದಂತೆ.
                                                    ರಚನೆ,
-ಸಂತು 


Saturday, May 12, 2012

Why to Learn from Others’ Life, when we have our own??!!



After introspecting for a long time, I came to a conclusion that I should write this here.
After all, only some people will make their mind to speak out the mistakes committed in their life. Very few people learn from their past experiences.

Almost this has happened 1 year ago.
I have come from a small village where finishing an Engineering degree is a big achievement!!
So in this condition getting an opportunity to fly abroad is a "big Dream Come True" kind of situation for me.

This message has passed all over from my relatives to all my friends.
Everyone started calling me to say best wishes.
My wife started preparing Chutney powder, Sambar powder, Puliyogare masala, Pickles which would help me preparing the food easily in the other country. I also started getting the bag ready with shirts Ironed, getting the camera, browsing the web to get more information about that country.

However the guys who had travelled earlier to this country had given every information right from shampoo, soap to what is easily available and what is not available.

Meanwhile all the documents and other formalities were happening in parallel. I was excited and waiting to see the new office, new country, new people and all new things which may come in my way!! :)

I got a call from my office to attend a VISA interview.

UFFFF!! One more air trip within India before going to other country. OK, let me experience that as well..

------------*------------*------------*------------*------------*
The day came. Kingfisher Airlines threw me from Bangalore to Bombay.

There near the embassy we did not have a chair also.

“Come on buddy, this is my country. Your embassy building is in my country.
You need to respect me for at least that matter”.

 After waiting for 3 hours we were allowed to enter inside.
The room was silent, there were number of people.
After waiting for another 30 minutes I got my turn to attend the interview.
That was the first time in my life I got to attend a VISA interview.
It just looks like a Prison Cell, two foreign guys are sitting in other side of the Grills and I am this side.
Even a small insect can’t enter inside. Communication happens with the help of mike and a Laud speaker installed in that room.
I felt just like, I am standing in a court and some strict lawyers are there to ask me some serious questions.

Question came on my way: Saaantoosh (my name was pronounced in that way) why do you need VISA.
I wanted to say- What are you sitting here for??!!
 But I could not!!

For No Reason, My legs started trembling.
I just recalled what to say............without my control words came out of my mind.

"I Need VISA for Business Interviews!!!!"

OH................I couldn’t believe myself, what I am saying.
The only word, which that guy did not want to hear, has come out from me involuntarily.
At least for 50 times I had by-hearted what I wanted to say. But as usual, it was a flop show.

His eyes gone bigger!!, Asked me again "Business INTERVIEWS"??!!

I tried correcting myself "No sir, I wanted to say...I need VISA for Business Meetings..."

Again that question series continued,” What kind of Business Meetings"

He is very much sure that I am not confident. Even I too!!

That Interview was supposed to be finished in 5 minutes, but prolonged for another 20 minutes. He asked same questions 4-5 times.
Finally he sighed, "OK, You can go now, we will get back to you"

I knew 100%, what will be the fate of my VISA.

------------*------------*------------*------------*------------*
I could not say anything to anyone.

After 2 days I got a mail that my VISA application has been rejected.
Though it was not a surprise for me, I started saying everyone “Don’t know Y".
People who are unaware of this result started annoying me by asking "When are you flying"!!
For 2-3 days I just thought what and all happened.

I realized my mistake.
Very often we will forget our responsibilities when the opportunity comes our way.
We just go with the celebration and forget the actions that we need to do.
I simply wasted all my precious time by preparing for unwanted things.
But I did not think about the crucial things that can go wrong at an important stage.

If we look at great personalities we will see them only in action, but in case of celebrations they will sit quite, and leave the rest to the world.
But we will do the exact opposite of it.

This taught me a good lesson in my life.
------------*------------*------------*------------*------------*
My close friend and my manger told me just one sentence.
"Be sure that you will not make the same mistakes this time".

No, Never.

The same situation did not come to me later. I was well prepared.
I got my VISA.

I was just getting ready to take my flight.
My daughter came and hugged me, giving me a sweet kiss.

“Yes, it is time to look at India from outside world!!"

I told myself "Thanks a lot my dear life, for teaching me such a good lesson".

Yours,  
Santhu  

Saturday, December 24, 2011

ಅಮ್ಮ ನಿನ್ನ ತೋಳಿನಲ್ಲಿ....

 
 
 
ಮನೆ ಮುಂದೆ ಕಾರಿನ ಹಾರ್ನ್ ಆದೊಡನೆ ಕಾತರದಲ್ಲಿದ್ದ ಅಮ್ಮನ ಮುಖದ ಮೇಲೆ ಹರುಷದ ನಗೆ.
ಕಾರು ಬಾಗಿಲು ತೆಗೆದು ನೆಲಕ್ಕಡಿಯಿಟ್ಟ ಮಗನ ಕಂಗಳಲ್ಲಿ ಆಯಾಸ.
ಕಾರಿನ ಹಿಂಬದಿಯ ಬಾಗಿಲಿಂದ ಹೊರಬಂದ ಸೊಸೆಯ ಕೈಯಲ್ಲಿ ಮುದ್ದು ಕಂದಮ್ಮ.
 
ಅಮ್ಮನ ಮನದಲ್ಲಿ ಒಂದು ಕ್ಷಣ ಅವರ ನೆನಪಾಯ್ತು.
-------------------*-------------------*-------------------*-------------------*-------------------*-------------------*
ಅಯ್ಯೋ ಅವರಿದ್ದಿದ್ದರೆ....ಎಷ್ಟು ಚೆಂದವಿರುತ್ತಿತ್ತು.
ಬಾಳು ಪೂರ ಸವೆದ ಚಪ್ಪಲಿಯ ಧರಿಸಿಯೇ ಮಗನಿಗೆಂದೇ ಶಾಲೆಗಾಗಿ ಅಂದದ ಬೂಟು ಕೊಡಿಸಿದ್ದರು.
ಸಾವಿರ ಬಾರಿ ಹೆಂಡತಿ ಬೇಡವೆಂದು ಹೇಳಿದ್ದರೂ ಬಿಡದ ಕುಡಿತ, ಮಗ ಹುಟ್ಟಿ ಅವನ ಶಾಲೆಯ ಫೀಸು ಕಟ್ಟಲಾರದೆ ಹೋದಾಗಲೇ ತಾನಾಗಿಯೇ ಬೇಡವೆಂದು ಬಿಟ್ಟು ಹೋಗಿತ್ತು. ಸೋಮಾರಿಯಲ್ಲದಿದ್ದರೂ ಅವಶ್ಯಕತೆಗಷ್ಟು ಮಾತ್ರ ಕೆಲಸಕ್ಕೆ ಹೋಗುತ್ತಿದ್ದ ಅಪ್ಪ ಇದೀಗ ಮಗನ ವಿಧ್ಯಾಭ್ಯಾಸಕ್ಕೆಂದೇ ಹಗಲು-ರಾತ್ರಿ ಕೆಲಸ ಮಾಡಲಾರಂಭಿಸಿದ.ಸುಮ್ಮನೆ ನಡೆಯುತ್ತಿದ್ದ ಜೀವನ ಮಗ ಬಂದೊಡನೆ ದಾಪುಗಾಲು ಹಾಕಿ ಓಡಲಾರಂಭಿಸಿತು.
ಅವನ ಆಟ ಪಾಠ ದಿನ ನಿತ್ಯದ ತುಂಟತನಗಳ  ನೋಡಿಯೇ ಹೊಟ್ಟೆ  ತುಂಬಿಸಿಕೊಂಡಿದ್ದರು ದಂಪತಿಗಳು. ಪಕ್ಕದ ಪಟ್ಟಣಕ್ಕೆ ಮುಂದಿನ ವಿಧ್ಯಾಭ್ಯಾಸಕ್ಕೆಂದು ಆತ ಹೊರಟಾಗಲೇ ಅವರಿಗನ್ನಿಸಿದ್ದು, ಅವ ಇಷ್ಟೊಂದು ದೊಡ್ದವನಾಗಿಬಿಟ್ಟ ಎಂದು.
ಕೆನೆ ಮೊಸರು ಮಗನಿಗಾಗಿಯೇ ತೆಗೆದಿಡುತ್ತಿದ್ದ ಅಮ್ಮನ ಮನಸ್ಸೀಗ ಬರಿ ಖಾಲಿ ಖಾಲಿ.
ಎಡಗಣ್ಣು ಅದುರಿದರೆ, ಗೌಳಿ ಕೂಗಿದರೆ ಮನದಲ್ಲೇನೋ ದುಗುಡ.
ಇತರರು ತಮ್ಮ ಮಗ ತಪ್ಪು ದಾರಿಯ ಹಿಡಿದ ಕತೆಯ ಹೇಳಿದರೆ ಇಲ್ಲೇನೋ ಆಗುತ್ತಿದೆಯೋ ಅನ್ನುವ ಕಲ್ಪನೆ.
ಹಬ್ಬ ಹರಿದಿನ ಬಂದರೆ ಮಗನಿಲ್ಲದ ಹಬ್ಬವೇಕೆ ಅನ್ನುವ ತ್ಯಾಗ ಮನೋಭಾವನೆ.ಅದರೂ ಮಗನ ಮೇಲೆ ಎಂಥದೋ ನಂಬಿಕೆ.
ಇನ್ನೇನು ಮಗನ ಪರೀಕ್ಷೆಗಳು ಹತ್ತಿರವಾಗುತ್ತಿವೆಯೆಂದಾಗಲೇ ಅಪ್ಪ ವಿಧಿವಶರಾಗಿದ್ದರು.
ನಿರ್ಮಲ ಅಕಾಶದಂತಿದ್ದ ಬದುಕಿನಲ್ಲಿ ಕಾರ್ಮುಗಿಲ ಛಾಯೆ ಬಂದೆರಗಿತ್ತು.
ಅಮ್ಮನಿಗಂತು ಈಗ ಬರಿ ಮಗನೇ ಪ್ರಪಂಚವಾಗಿದ್ದ.
 
ಪರೀಕ್ಷೆ ಮುಗಿದು ಮಗ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದದ್ದೇ  ಅವಳಿಗೆ ಬದುಕಿನ ಅತ್ಯಂತ ಆನಂದದ ಕ್ಷಣವಾಗಿತ್ತು.
ಪಕ್ಕದ ಮನೆಮಂದಿಗೆಲ್ಲ ಸಕ್ಕರೆ ಹಂಚಿ ಹೆಮ್ಮೆಯಿಂದ ಮಗನ ಗುಣಗಾನ ಮಾಡಿದ್ದಳು.
ಯೋಗಕ್ಷೇಮದ ಬಗ್ಗೆ ಆಗಾಗ ಮಗನಿಂದ ಪತ್ರಗಳು ಬರುತ್ತಲಿದ್ದವು.
 
ಈಕೆಗೆ ದಿನಗೂಲಿಯೊಂದೇ ಜೀವನ ಸಾಗಿಸುವ ಏಕೈಕ ದಾರಿಯಾಯಿತು.
ಆಕೆಯ ಒಂದೊಂದು ಬೆವರ ಹನಿಯೂ ಮಗನ ಜೀವನದ ಹರುಷವನ್ನು ಬಯಸುತ್ತಲಿದ್ದವು.
  
ವರುಷಗಳು ಕಳೆದವು. ಮನೆಗೆ ಮಗ ಮೊದಲ ಸಂಬಳದೊಡನೆ ಬಂದಿಳಿದಿದ್ದ.
ಹರುಷ ತಡೆಯಲಾಗದೇ ಆನಂದಭಾಷ್ಪ ಸುರಿಸಿದ್ದಳು.
ಮಗನ ಬಾಚಿ ತಬ್ಬಿ ಮುತ್ತುಗಳ ಸುರಿಸಿದವಳಿಗೆ ಸ್ವರ್ಗಕ್ಕೆ ಮೂರೇ ಗೇಣು.
ಆಕೆಯ ಜೀವನದ ಒಂದು ಸದುದ್ದೇಶ ಆಗ ತಾನೆ ಈಡೇರಿತ್ತು.
 
ದಿನಗಳು ಕಳೆದವು. ಅಮ್ಮನ ಮನದಲ್ಲೇಕೋ ತಳಮಳ ಶುರುವಾಯಿತು.
ದಿನಕೊಂದು ಇದ್ದ ಪತ್ರ ವಾರಕ್ಕೆ, ಬರುಬರುತ್ತಾ ತಿಂಗಳಿಗೊಂದು ಆಗತೊಡಗಿತು.
ಮಗನೇಕೋ ದೂರವಾಗತೊಡಗಿದ. ಅಮ್ಮನಿಗಂತೂ ಬಾಯಿಗಿಟ್ಟ ತುತ್ತೂ ರುಚಿಸುತ್ತಿಲ್ಲ.
ಮಗನ ನೆನಪಿನಲ್ಲೇ ದೇಹ ಕೃಶವಾಗುತ್ತ ಬಂತು.
 
ಕೊನೆಗೊಮ್ಮೆ 3-4 ವರ್ಷಗಳ ನಂತರ ಮಗನಿಂದ ಪತ್ರ ಬಂತು.
"ಅಮ್ಮ, ಬಹಳ ದಿನಗಳಿಂದ ಹೇಳಬೇಕಿದ್ದ ವಿಷಯವೊಂದನ್ನು ಈಗ ಹೇಳಲೇಬೇಕೆನಿಸುತ್ತಿದೆ,
ಹೇಗೆ ಶುರು ಮಾಡುವುದೆಂದು ನನಗೆ ಗೊತ್ತಿಲ್ಲ.
ಹುಡುಗಿಯೊಬ್ಬಳನ್ನು ನಾನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದೆ.
ಕಾರಣಾಂತರಗಳಿಂದ ಅವಳನ್ನು ತಕ್ಷಣವೇ ಮದುವೆಯಾಗಬೇಕಾಗಿ ಬಂತು.
ನಿನ್ನ ಅನುಮತಿಯ ಪಡೆಯದಲೇ ನನ್ನ ಮದುವೆಯಾಗಿ ಹೋಯ್ತು.
ಈಗ ಅವಳು ತುಂಬು ಗರ್ಭಿಣಿ. ಸ್ವಲ್ಪದರಲ್ಲೇ ನೀನು ಅಜ್ಜಿಯಾಗಲಿದ್ದೀಯ.
ನಿನ್ನನ್ನು ನೋಡಬೇಕೆಂದು ಮನಸಿಗನ್ನಿಸುತ್ತಿದೆ.
ಸ್ವಲ್ಪ ದಿನಗಳು ಕಾಯಿ, ಒಂದು ತಿಂಗಳ ರಜೆ ಹಾಕಿ ನಿನ್ನ ಮಗ ನಿನ್ನನ್ನು ಕಾಣಲು ಬರುತ್ತಾನೆ.
 
ಇಂತಿ ನಿನ್ನ ಮಗ,..
 "
 ಅಮ್ಮನಿಗೆ ಹೋದ ಜೀವ ಮರಳಿ ಬಂದಂತಾಯ್ತು.
ಮರಳುಭೂಮಿಯಲ್ಲಿ ಬಾಯಾರಿ ಬಸವಳಿದು ನೀರ ಕಾಣದೆ ಗುಂಡಿ ತೋಡಿದಾಗ ಓಯಸಿಸ್ ಚಿಮ್ಮಿದರೆ ಸಿಗುತ್ತದಲ್ಲ ಅಂಥ ಅನುಭವ.
 
"ಅಯ್ಯೋ ಕಂದ,
ಎಲ್ಲಿದ್ದೆಯೋ ಇಷ್ಟು ದಿನ?
ಅಮ್ಮನಿಗೆ ಹೇಳದೆ ಮದುವೆಯಾಗೋ ಅವಸರ ಏನಿತ್ತೋ?
ಅದ್ಯಾವುದೋ ಕಾರಣ ನಿನ್ನನ್ನು ಮದುವೆಯಾಗಲಿಕ್ಕೆ ಪ್ರೇರೇಪಿಸಿದ್ದರೆ ನಾನೇನು ನಿನ್ನನ್ನು ಮದುವೆಯಾಗಬೇಡ  ಅಂತ ಹೇಳಿರುತ್ತಿದ್ದೆನೇನೋ ಹುಚ್ಚ.
ಒಂದೇ ಒಂದು ಮಾತು ಹೇಳಿದ್ದಿದ್ದರೆ ನಾನೇ ಓಡೋಡಿ ಬಂದು ನಿನ್ನ ಮದುವೆ ಮಾಡಿಸುತ್ತಿದ್ದೆನಲ್ಲೋ!!
ಹೋಗಲಿ ಬಿಡು. ನನ್ನ ಆಯ್ಕೆಯ ಬಗ್ಗೆ ನಿನಗೆ ಎಲ್ಲೋ ತಾತ್ಸಾರವಿರಬಹುದು.
ಅಷ್ಟು ಬೇಗ ಈ ಅಮ್ಮ ಹಳೆಯ ಮುದುಕಿಯಾಗಿ ಹೋದಳಾ?
ನೀ ಅತ್ತಾಗ ಹಾಲುಕೊಟ್ಟ,
ಎಡವಿದಾಗ ಎತ್ತಿ ನಿಲ್ಲಿಸಿದ,
ಬೇರೆಯವರು ಬೈದಾಗ ಅವರನ್ನೇ ಗದರಿಸಿದ,
ನಿನ್ನ ಕಣ್ಣಲ್ಲಿ ನೀರು ಬಂದಾಗ ನಿನ್ನನ್ನೆತ್ತಿ ಎದೆಗಾನಿಸಿದ,
ಹಸಿವೆಯೆಂದಾಗ ನನ್ನ ತಟ್ಟೆಯಲ್ಲಿದ್ದ ಗಂಜಿಯನ್ನೇ ಕುಡಿಸಿದ,
ಬಿದ್ದು ಗಾಯ ಮಾಡಿಕೊಂಡಾಗ ನಾನುಟ್ಟ ಸೀರೆಯನ್ನೇ ಹರಿದು ಕಟ್ಟಿದ,
ತುತ್ತು ತಿನ್ನದಿದ್ದಾಗ ಚಂದಮಾಮನ ತೋರಿಸಿ ತಿನ್ನಿಸಿದ,
ನೀನೋದಲು ಕುಳಿತಾಗ ಜೊತೆಗೇ ನಿದ್ರೆಗೆಟ್ಟ,  
ನೀ ಗೆದ್ದು ಬಹುಮಾನ ತಂದಾಗ ಆನಂದ ಭಾಷ್ಪ ಸುರಿಸಿದ,
ನೀ ಹುಷಾರಿಲ್ಲದೆ ಮಲಗಿದಾಗ ಊಟವೇ ಬೇಡವೆಂದು ಮಲಗಿದ ಈ ಅಮ್ಮ...
 ನೀ ಮದುವೆಯಾಗಬೇಕೆನಿಸಿದಾಗ ಮಾತ್ರ ನೆನಪಾಗಲಿಲ್ಲವೇನೋ?
 "
.....ಹಾಗೆಂದು ಹೇಳಬೇಕೆನಿಸಿತು, ಆದರೆ ಹೇಳಲಿಲ್ಲ.
ಅಮ್ಮನಿಗೆ ಎಂದೆಂದಿಗೂ ಮಗನ ಸಂತೋಷವೇ ಮುಖ್ಯ. 
 
"ಬಾ ಮಗನೇ, ನಿನಗಾಗಿಯೇ ಮತ್ತು ನಿನಗಾಗಿ ಮಾತ್ರ ಕಾದಿರುವ ಅಮ್ಮ" ಎಂದು ಮಾತ್ರ ಬರೆದಳು.
ಬಂದಿದ್ದ ವಿಳಾಸವನ್ನು ಹುಡುಕಿಕೊಂಡು ಹೋಗಬೇಕೆಂದುಕೊಂಡಳು. ಮನದ ಮೂಲೆಯಲ್ಲೊಂದು ಯೋಚನೆ ಬೇಡವೆಂದು ಹೇಳಿತು.
 
ಸ್ವಲ್ಪ ದಿನಗಳ ಬಳಿಕ ಮಗನಿಗೆ ಮುದ್ದಾದ ಮಗನೊಬ್ಬ ಜನಿಸಿದ.
 
ಅದೇಕೋ ಇದ್ದಕ್ಕಿದ್ದ ಹಾಗೆ ಅಮ್ಮನ ನೋಡಬೇಕೆನ್ನುವ ತವಕ ದಿನೇ ದಿನೇ ಜಾಸ್ತಿಯಾಗತೊಡಗಿತು.
 -------------------*-------------------*-------------------*-------------------*-------------------*-------------------*-------------------*
 
"ಹೇ ನೋಡಿಕೊಂಡು ಹೆಜ್ಜೆಹಾಕಮ್ಮ, ಕೈಯಲ್ಲಿ ಮಗು ಇದೆ"
ಪಕ್ಕದ ಮನೆಯ ಶಾಂತಕ್ಕ ಜೋರಾಗಿ ಕೂಗಿದಾಗಲೇ ಅಮ್ಮನಿಗೆ ಎಚ್ಚರವಾದದ್ದು.

ಓಡಿ ಹೋಗಿ ಮಗನನ್ನು ಆಲಂಗಿಸಿಕೊಂಡಳು ಅಮ್ಮ.
ಬೆಚ್ಚಗಿನ ಸ್ಪರ್ಶ.
ಮಗನ ಮನಸ್ಸಿನಲ್ಲಿ, ಹಿಂದೆ ತಾನು ಮಗುವಾಗಿದ್ದಾಗ ಏನಾದರೂ ಬಿದ್ದರೆ ಓಡಿಬಂದು ಎತ್ತಿ ಎದೆಗಾನಿಸಿಕೊಳ್ಳುತ್ತಿದ್ದ ಅದೇ ಅಮ್ಮನ ನೆನಪಾಯ್ತು.
ಅದೇ....ಸ್ಪರ್ಶ.

"ಛೇ ಅಮ್ಮ, ಇಷ್ಟು ದಿನ ನಿನ್ನಿಂದ ನಾನೇಕೆ ಇಷ್ಟು ದೂರ ಉಳಿದುಬಿಟ್ಟೆ. ಎಂತಹ ದೊಡ್ಡ ತಪ್ಪು ಮಾಡಿದೆ.
ನೀ ನನ್ನ ಜತೆಗಿದ್ದರೆ ಸಾಕು, ಅದೆಂತಹ ಹೇಳಲಾಗದ ಉತ್ಸಾಹ, ವಿಶ್ವಾಸ ಬಂದುಬಿಡುತ್ತದೆ ಈ ನನ್ನ ಮನಸ್ಸಿಗೆ.
ಈ ಸಲ ಅದೆಷ್ಟೇ ಕಷ್ಟವಾದರೂ ಸರಿ. ನೀ ನನ್ನ ಬಗ್ಗೆ ಬೇಸರಿಸಿಕೊಂಡರೂ ಸರಿ.
ನಿನ್ನನ್ನು ನಾನಿರುವ ಪಟ್ಟಣಕ್ಕೆ ಕರೆದುಕೊಂಡು ಹೋಗದೇ ಬಿಡುವುದಿಲ್ಲ.
ನನಗೆ ಗೊತ್ತು ನೀನು ಅಪ್ಪನಿದ್ದ ಈ ಮನೆಯನ್ನು ಬಿಟ್ಟು ಆ ದೂರದ ಪಟ್ಟಣಕ್ಕೆ ಬರಲಾರೆ ಎಂದು.
ಆದರೆ ನಾನು ನಿನ್ನನ್ನು ಬಿಟ್ಟಿರಲಾರೆ, ಇಲ್ಲಿರುವ ಒಂದು ತಿಂಗಳಲ್ಲಿ ನಿನ್ನ ಮನಸ್ಸು ಬದಲಾಯಿಸುವ ಪ್ರಯತ್ನ ಮಾಡುತ್ತೇನೆ!!"

ಮತ್ತೊಮ್ಮೆ ಪಕ್ಕದ ಮನೆಯ ಶಾಂತಕ್ಕನ ಧ್ವನಿ.
"ಮೊದಲನೇ ಸಲ ಗಂಡ-ಹೆಂಡತಿ-ಮಗು ಮನೆಗೆ ಬರ್ತಿದ್ದೀರ,
ಮುತ್ತೈದೇರು ಆರತಿ ಎತ್ತಿ ಮನೆ ತುಂಬಿಸ್ಕೋಬೇಕು.
ಒಂದ್ನಿಮಿಷ ಇರಿ,
 ನಾನು ಆರತಿ ತರ್ತೀನಿ"
ಶಾಂತಕ್ಕ ಓಡಿಹೋಗಿ ಮನೆಯೊಳಗಿಂದ ಆರತಿ ತಂದು ಬೆಳಗತೊಡಗಿದರು.

ಅಮ್ಮನ ನೋಟ ಇದೀಗ ಸೊಸೆಯ ಕಡೆಗೆ.
"ವಾವ್, ಎಂತಹ ಸುಂದರ ಲಕ್ಷಣ ಮುಖ.
ಮೊದಲ ಬಾರಿಗೆ ಲಕ್ಷ್ಮಿಯೇ ನಡೆದು ಈ ಮನೆಗೆ ಬಂದಿದ್ದಾಳೆ.
ಅಯ್ಯೋ ಮಗನೇ, ಈ ಮನೆಮಗಳನ್ನ ಮದುವೆಯಾಗೋದು ಹೇಳೋಕೆ ನನ್ನ ಹತ್ತಿರ ಸಂಕೋಚಪಟ್ಟೆಯ, ದಡ್ಡ!!"

ಬಲಗಾಲಿಟ್ಟು ಒಳಬಂದ ದಂಪತಿಗಳಿಗೆ  ಅಟ್ಟದ ಮೇಲಿದ್ದ ಚಾಪೆಯ ಹಾಸಿದಳು ಅಮ್ಮ.
ಅಡಿಗೆ ಮನೆಯ ಒಳಹೋಗಿ ಪಾನಕ ಮಾಡಿ ಮಗನಿಗೂ ಸೊಸೆಗೂ ಒಂದೊಂದು ಲೋಟ ಕೊಟ್ಟಳು.
ಒಂದೇ ಸಮನೆ ಗಟಗಟ ಕುಡಿದು ನಾಲಿಗೆಯ ಚಪ್ಪರಿಸಿ ಖಾಲಿ ಲೋಟವನ್ನು ಮಗ ಅಮ್ಮನ ಕೈಲಿತ್ತ.

ಊಟದ ಸಮಯವಾಗಿದೆಯೆಂದರಿತ ಅಮ್ಮ ಅಡಿಗೆಮನೆ ಕಡೆಗೆ ಹೆಜ್ಜೆಹಾಕಿದಳು.
ಒಂದೆರಡು ನಿಮಿಷವಾಗಿಲ್ಲ. ಪಿಸಪಿಸ ಮಾತು ಕಿವಿಗೆ ಬಿದ್ದು ಒಳಗಿಂದಲೇ ಕೊಂಚ ಇಣುಕಿ ನೋಡಿದಳು.
ಮಗ ಏನೋ ಒತ್ತಾಯ ಮಾಡುತ್ತಿದ್ದಾನೆ. ಸೊಸೆ ಮುಖ ಹಿಂಡುತ್ತಿದ್ದಳು. ಪಾನಕ ಮಾತ್ರ ಲೋಟದಲ್ಲಿ ಹಾಗೆಯೇ ಇದೆ....

 -------------------*-------------------*-------------------*-------------------*-------------------*-------------------*-------------------*

ಮಗು ಅತ್ತ ಸದ್ದಾಯ್ತು.
ಓಡಿಬಂದು ಅಮ್ಮ ಮೊಮ್ಮಗನನೆತ್ತಿ ಎದೆಗಾನಿಸಿಕೊಂಡು ಸಮಾಧಾನಪಡಿಸತೊಡಗಿದಳು.
ಎಂತಹ ಮುದ್ದುಮುಖ.. ಥೇಟ್ ಅವರ ತಾತನಂತೆಯೇ.
ಅವರಿದ್ದಿದ್ದರೆ ಈ ಕಂದನನ್ನು ನೋಡಿ ಎಷ್ಟೊಂದು ಖುಷಿಪಡುತ್ತಿದ್ದಾರೋ..
ಲಗುಬಗೆಯಿಂದ ನಡೆದು ಬಂದ ಸೊಸೆ ಪಟಕ್ಕನೆ ಮಗುವನ್ನು ಕಸಿದು ಪಕ್ಕ ಮಲಗಿಸಿಕೊಂಡು ಸಮಾಧಾನ ಮಾಡತೊಡಗಿದಳು.
 -------------------*-------------------*-------------------*-------------------*-------------------*-------------------*-------------------*
ಎರಡು ದಿನ ಕಳೆದಿವೆ ರಾತ್ರಿಯಾಗಿದೆ.
ಹಜಾರದಲ್ಲಿ ಮಲಗಿದ್ದಾಳೆ ಅಮ್ಮ.
ಪಕ್ಕದ ಚಿಕ್ಕ ರೂಮಿನಲ್ಲಿ ಸಂಭಾಷಣೆ ನಡೆಯುತ್ತಿದೆ.

"ಥೂ.. ಈ ದರಿದ್ರ ಊರಿನಲ್ಲಿ ಬೇಕಾದರೆ ನೀವಿರಿ.
ನಾನು ನನ್ನ ಮಗೂನ ಕರ್ಕೊಂಡು ನಾಳೆನೇ ಹೊರಡುತ್ತೇನೆ.
ಏನೀ ಊರು,ಒಬ್ಬರಾದರೂ ಕ್ಲೀನ್ ಇಲ್ಲ.
ಮನೆ ಅಂತೂ ಪೂರ್ತಿ ಗಲೀಜಾಗಿದೆ. ಬಚ್ಚಲ ಮನೇನೂ ಸರಿಯಿಲ್ಲ.
ಎಲ್ಲಿ ನೋಡಿದ್ರೂ ಧೂಳು ಧೂಳು.
ಚಳೀಗೆ ಒಂದು ಒಳ್ಳೇ ಹೊದಿಕೆ ಇಲ್ಲ.
ಬೇಜಾರಿಗೆ ಒಂದು ಟಿವಿ,ರೇಡಿಯೋ ಇಲ್ಲ. ಆಮೇಲೆ ಒಂದು ಫ್ರಿಡ್ಜ್, ಫ್ಯಾನ್ ಏನೇನೂ ಇಲ್ಲ.
ಮಗು ಅಂತೂ ರಾತ್ರಿ ಪೂರ ನಿದ್ರೆ ಮಾಡಿಲ್ಲ. ಸೊಳ್ಳೆ ಜಾಸ್ತಿ ಬೇರೆ.
ಅದ್ಯಾವುದೋ ಲೋಕಲ್ ಸೊಳ್ಳೆ ಬತ್ತಿ ಹಚ್ಚಿದಾರೆ.
ನನಗೆ ಅದರ ವಾಸನೇನೆ ತಡಕೊಳ್ಳೋಕೆ ಆಗ್ತಾ ಇಲ್ಲ.
ಮಗೂಗೆ ಇನ್ಫೆಕ್ಷನ್ ಆಗೋಲ್ವೇ ಈ ತರ ಮನೆ ಇಟ್ಕೊಂಡ್ರೆ.

ಮೊನ್ನೆ ನಾವು ಬಂದಾಗ ನಿಮ್ಮಮ್ಮನ ಕೈಲಿ ಕಡೇಪಕ್ಷ ಒಳ್ಳೇ ಅಡಿಗೆನಾದ್ರೂ ಮಾಡಿಟ್ಟಿರೋಕೆ ಆಗ್ತಿರ್ಲಿಲ್ವಾ?
ಅದೇನೋ ಪಾನಕ ಕೊಟ್ಟಿದ್ದಾರೆ. ಅದಂತೂ ಸಕ್ಕರೆ ಮಯ.
ನಿಮ್ಮಮ್ಮಂಗೆ ಮಗೂನಾ ಸರಿಯಾಗಿ ಎತ್ತಿಕೊಳ್ಳೋಕೂ ಬರಲ್ಲ.
ಮಗು ಬೇರೆ ಎಷ್ಟು ಅಳುತ್ತಾ ಇತ್ತು ಗೊತ್ತಾ, ನಿಮ್ಮಮ್ಮ ಅದಕ್ಕೆ ಸ್ನಾನ ಮಾಡಿಸ್‌ಬೇಕಾದ್ರೆ.
ನಂಗಂತೂ ಅಯ್ಯೋ ಅನ್ನಿಸಿಬಿಟ್ಟಿತಪ್ಪ.
ಮಗೂಗೆ ನೆಗಡಿ ಆಗಿದೆ, ಹಾಸ್ಪಿಟಲ್ ಗೆ ಕರ್ಕೊಂಡು ಹೋಗೋಣ ಅಂದ್ರೆ  ನಿಮ್ಮಮ್ಮ ಅದಕ್ಕೂ ಬಿಡಲಿಲ್ಲ.
ಅದ್ಯಾವುದೋ ಕೆಲಸಕ್ಕೆ ಬಾರದ ಕಷಾಯ ಕೊಟ್ಟಿದ್ದಾರೆ. ಏನು ಡಾಕ್ಟರ್ ಓದಿದಾರೆ ನಿಮ್ಮಮ್ಮ ಮನೇಲೆ ಔಷದಿ ಕೊಟ್ಟುಬಿಡೋಕೆ?

ಈ ಮನೇಲಿ ಚಪ್ಪಲಿನೂ ಹಾಕಿಕೊಂಡು ಓಡಾಡೋ ಹಾಗಿಲ್ಲ.
ಪೆಡೀಕ್ಯೂರ್ ಮಾಡಿಸಿದ ಪಾದಗಳೆಲ್ಲ ಹಾಳಾಗಿ ಹೋಗಿವೆ.
ಬೆಡ್ ಕಾಫಿನೂ ಇಲ್ಲ. ಪೂಜೆ ಮಾಡ್ಬಿಟ್ಟೆ ಅಂತೆ ಬಾಕಿ ಎಲ್ಲ ಶುರುವಾಗೋದು, ಏನು  ಮಡಿವಂತರೋ?

ನನಗಂತೂ ಯಾವುದೋ ಕೊಂಪೆಗೆ ಬಂದುಬಿಟ್ಟಿದ್ದೀನೇನೋ ಅನ್ನಿಸ್ತಿದೆ... ಸಾಕಪ್ಪ ಸಾಕು"
 -------------------*-------------------*-------------------*-------------------*-------------------*-------------------*-------------------*

ಬೆಳಗಾಯಿತು.

"ಅಮ್ಮ ನಮ್ಮ ಆಫೀಸಿನಿಂದ ನನಗೆ ಫೋನ್ ಕಾಲ್ ಬಂದಿದೆ.
ಯಾವುದೋ ಬಹಳ ಇಂಪಾರ್ಟೆಂಟ್ ಕೆಲಸ.
ನಾವು ಇವತ್ತೇ ಹೊರಡುತ್ತೇವೆ.
ನಮ್ಮ ಲೀವ್ ಗಳನ್ನೆಲ್ಲ ಕ್ಯಾನ್ಸಲ್ ಮಾಡಿದ್ದಾರಂತೆ. ಅರ್ಜೆಂಟ್ ಹೋಗ್‌ಬೇಕು.
ಮತ್ತೆ ಸಮಯ ಮಾಡ್ಕೊಂಡು ಬರ್ತೀವಿ"

ಒಲ್ಲದ ಮನಸ್ಸಿನಿಂದ ಮಗ ಹೇಳಿದ.
ಕಾರು ಭರ್ರನೆ ಧೂಳೆಬ್ಬಿಸಿಕೊಂಡು ಹೊರಟುಹೋಯಿತು.
ಅಮ್ಮನ ಕಣ್ಣಿನಿಂದ ಜಿನುಗಿದ ನೀರು ನೆಲದಲ್ಲಿ ಇಂಗಿ ಮಾಯವಾಯಿತು.

ಅಮ್ಮನಿಗೆ ಗೊತ್ತು... ಎಲ್ಲವೂ ಸರಿಯಾಗಿಲ್ಲವೆಂದು.
ಜತೆಜತೆಗೆ ಮಗನಿಗೆ ನಟನೆಯೂ ಸರಿಯಾಗಿ ಬರುವುದಿಲ್ಲವೆಂದು.....
 -------------------*-------------------*-------------------*-------------------*-------------------*-------------------*-------------------*



Saturday, December 17, 2011

ಗೋಜಲು



ಕಣ್ಣು ಮುಚ್ಚಿ ಗಾಢಾಂಧಕಾರದಲಿ,
ನಡೆಯುತಲಿರಲು ದೂರ ದೂರ.
ಮನದಲೇಕೋ ನಡುಕ,
ಸುತ್ತಮುತ್ತಲು ಗೋಜಲು, ಹೃದಯ ಭಾರ ಭಾರ.

ಅರಿವೆಗಳ ಅರಿವಿಲ್ಲ, ನಕಾಶೆಗಳ ಸುಳಿವಿಲ್ಲ,
ಗುರಿಯಂತೂ ಮೊದಲೇ ಇಲ್ಲ.
ಸವೆಯುತಲಿರುವ ಪಾದಗಳಿಗೆ ರಕ್ಷೆಗಳ ಹಂಗಿಲ್ಲ,
ಎದೆಯಲೇನೋ ವೇದನೆ,
ಹೇಳಲು ಪದಗಳಿಲ್ಲ.

ಕಷ್ಟಸುಖಗಳೇನೋ, ಬಂಧಗಳ ಬಂಧನವೇನೋ,
ಮಡಚಿಟ್ಟ ಹೊತ್ತಿಗೆಯಲ್ಲಿ ಬರೆದಿರುವುದೇನೋ.
ಎಲ್ಲಾಗುವುದು ಉದಯ, ಅಸ್ತವಾಗುವ ಸಮಯ,
ಕೇಳುವವರಾರಿಲ್ಲ, ಗಳಿಸಿಡುವುದೇನೋ.

ಕಂಡ ಕಣ್ಣುಗಳಿಲ್ಲ, ಹಿಂತಿರುಗಿ ಬಂದವರಿಲ್ಲ,
ಸ್ಪಷ್ಟ ಚಿತ್ರಗಳಂತೂ ಕಲ್ಪನೆಯಂತೆ.
ಹೊತ್ತು ಹೋದವರಿಲ್ಲ, ಗಳಿಸಿ ಬಂದವರಿಲ್ಲ,
ಕನಸು ನನಸುಗಳ ಬರೀ ಜಾತ್ರೆಯಂತೆ.

ಊಹಾ ಚಿತ್ರಗಳ ಕಂತೆಗಳೆದುರಲ್ಲಿ ,
ಹೆಗಲ ಮೇಲೇನೋ ಹೆಣಭಾರ.
ಚೈತನ್ಯವಿಲ್ಲ , ಅರೆಗಣ್ಣುಗಳಲ್ಲಿ,
ನೆತ್ತರುಕ್ಕುತಲಿದೆ ಧಾರಾಕಾರ.

ಅಳುನಗು ಕಷ್ಟಸುಖ, ನೋಡಿಯೂ ಇಲ್ಲ ನನ್ನ ಮುಖ,
ಮರೆತು ನಿಂತರೆ ಏಕೋ ದ್ವಂದ್ವವೆನಿಸಲಿಲ್ಲ.
ಶೂನ್ಯಲೋಕದ ಕಡೆಗೆ ತಾತ್ಸಾರ ದೃಷ್ಟಿಯನಿಟ್ಟೆ,
ಅಲ್ಲಿ ಯಾಕೋ......ಹುಟ್ಟಬೇಕೆನಿಸಲಿಲ್ಲ!!


-ಸಂತು





















 
















Saturday, September 17, 2011

ಕಲಕುವ ಚಿತ್ರಗಳು

ಓದುವ ಮುನ್ನ..

ಇಲ್ಲಿ ಬರೆದಿರುವ ಯಾವುದೇ ಘಟನೆಗಳು ನಿಜವಾಗಿಯೂ ಎಲ್ಲಿಯೂ ನಡೆದಂಥವಲ್ಲ. ಆದರೆ ಇಲ್ಲಿನ ಪ್ರತಿಯೊಂದು ಘಟನೆಗಳು ನಮ್ಮ ನಿಮ್ಮೆಲ್ಲರ ಜೀವನದಲ್ಲಿ ನಡೆಯುವಂಥವು. ಅಥವಾ ನಮ್ಮ ಸುತ್ತಮುತ್ತಲ ಬಂಧು ಮಿತ್ರರ ಬಳಗದಲ್ಲಿ ನಡೆಯುವುದನ್ನು ನಾವು ನೋದಿರುವಂತಹವು.
ಇಲ್ಲನ ಎಲ್ಲ ಘಟನೆಗಳಲ್ಲೂ ಒಂದಕ್ಕೊಂದಕ್ಕೆ ಏನೂ ಸಂಬಂಧವಿಲ್ಲ. ಆದರೆ ಪ್ರತೀ ಘಟನೆಯ ಕೊನೆಯ ಸಾಲು ಮುಗಿದ ನಂತರ ಇನ್ನೇನೋ ಹೇಳಬೇಕೆನಿಸುತ್ತದೆ. ಆದರೆ ಆ ಪ್ರಯತ್ನವನ್ನು ಅಲ್ಲಿಗೆ ನಿಲ್ಲಿಸಿ ಉಳಿದದ್ದನ್ನು ಅಥವಾ ಉಂಟಾಗುವ ಅನುಭವವನ್ನು ಕೇವಲ ಓದುಗನ ಸುಪರ್ದಿಗೆ ವಹಿಸಿರುತ್ತೇನೆ.
ನಿಮ್ಮವನು,
ಸಂತು.

Thursday, February 24, 2011

ನೆನಪುಗಳ ಮೆಲುಕು

ಸುಮಾರು ವರ್ಷಗಳ ಹಿಂದಿನ ಮಾತು. ಆಗಿನ್ನೂ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದೆ. ನಮ್ಮದೊಂದು ಸರ್ಕಾರಿ ಶಾಲೆ. ಇಡೀ ನನ್ನಶಾಲಾ ಜೀವನದಲ್ಲಿ ನಾನು ಪಠ್ಯಪುಸ್ತಕಗಳನ್ನು ಹೊಸದಾಗಿ ಕೊಂಡು ಓದಲೇ ಇಲ್ಲ. ನನ್ನ ಹಿರಿಯ ಮಿತ್ರರೆಲ್ಲ ತಮ್ಮ ಪುಸ್ತಕಗಳನ್ನೆಲ್ಲನನಗೆ ಕೊಟ್ಟುಬಿಡುತ್ತಿದ್ದರು.
ಹಳೆಯ ಪುಸ್ತಕ, ಹೊಸ ವಿದ್ಯಾರ್ಥಿ!!!
ಊಟಕ್ಕೆ ತೊಂದರೆಯಿಲ್ಲದಿದ್ದರೂ ಮನೆಯಲ್ಲಿ ಹಣಕಾಸಿನ ವ್ಯವಹಾರ ಅಷ್ಟೇನೂ ಉತ್ತಮವಾಗಿರಲಿಲ್ಲ. ಆದಾಯವೇನಿದ್ದರೂ ವ್ಯವಸಾಯದಲ್ಲಿ. ಅದೂ ವರ್ಷಕೊಮ್ಮೆ. ವ್ಯವಸಾಯವೆಂಬುದಂತೂ ಹಳ್ಳಿಗರಿಗೆ ಲಾಟರಿಯಿದ್ದ ಹಾಗೆ. ಮಳೆ ಚೆನ್ನಾಗಿ ಕಾಲಕಾಲಕ್ಕೆ ಬಂದರೆ ಆ ವರ್ಷ ಬಂಪರ್. ಇಲ್ಲದಿದ್ದರೆ ಭಾರಿ ನಷ್ಟ. ಜತೆಗೆ ತಲೆ ಮೇಲೆ ಮತ್ತಷ್ಟು ಸಾಲ. ಮನೆಯಲ್ಲಿ ಸಂಪಾದನೆ ಮಾಡುವ ಬೇರೆ ಯಾವುದೇ ದಾರಿಯಿರಲಿಲ್ಲ. ಕಡೇಪಕ್ಷ ತರಕಾರಿ ತರಲೂ ಕೈಯಲ್ಲಿ ಕಾಸಿಲ್ಲದಂತಾಗಿ ಹೋಯಿತು. ಕಷ್ಟ ನುಂಗದೆ ಬೇರೆ ವಿಧಿಯಿರಲಿಲ್ಲ.

ನಮ್ಮ ಮನೆಯ ಹಿತ್ತಿಲಿನಲ್ಲಿ ಒಂದು ಸೀಬೇಕಾಯಿ ಮರವಿತ್ತು. ನೋಡಲು ಬಹಳ ಪುಟ್ಟದಾಗಿದ್ದರೂ ಸಮಯ ಬಂದಾಗ ಭಾರವಾಗುವಷ್ಟು ಸೀಬೆಹಣ್ಣು ಬಿಡುತ್ತಿತ್ತು. ಹಿತ್ತಿಲಿಗೆ ಯಾವಾಗಲೊಮ್ಮೆ ಹೋದರಂತೂ ಸೀಬೆಹಣ್ಣಿನ ಘಮ ತಲೆಗೆ ಹತ್ತುವಷ್ಟು ಬರುತ್ತಿತ್ತು. ಹಣ್ಣಿನ ಗೊಂಚಲುಗಳನ್ನು ನೋಡಿದರೇ ಸಾಕು, ಬಾಯಿ ತುಂಬ ನೀರು...

ಒಂದು ದಿನ ಹೀಗೆ.. ಏನೋ ಆಲೋಚನೆ ಬಂದಿದ್ದೇ ತಡ ಬೆಳಿಗ್ಗೆ ಬೇಗನೆ 6 ಗಂಟೆಗೆ ಎದ್ದು ಹಿತ್ತಲಿಗೆ ಹೋಗಿ ಮರಹತ್ತಿದೆ. ಹಣ್ಣಾಗಿ ಇನ್ನೇನು ಬೀಳುತ್ತವೇನೂ ಅನ್ನುವಂತಿದ್ದ ಹಣ್ಣುಗಳನ್ನೆಲ್ಲ ಕೊಯ್ದು ಪ್ಲಾಸ್ಟಿಕ್ ಕವರ್ ಗೆ ಹಾಕಿಕೊಂಡೆ. ಕವರ್ ಪೂರ ಭರ್ತಿ.
ಶಾಲೆ ಆರಂಭವಾಗೋದು 10 ಗಂಟೆಗೆ. 8 ಗಂಟೆಗೆಲ್ಲ ಶಾಲೆಯ ಆಟದ ಮೈದಾನದಲ್ಲಿ ಹಾಜರು. ಆಗಾಗಲೇ ಬಹಳಷ್ಟು ಶಾಲೆಯ ಹುಡುಗರು ಬಂದಿರುತ್ತಿದ್ದರು. ಅವರೆಲ್ಲರಿಗೂ ಸೀಬೆಹಣ್ಣುಗಳನ್ನು ಮಾರಲು ಶುರು ಮಾಡಿದೆ. ಬರೀ ಐವತ್ತು ಪೈಸೆ, 1 ರುಪಾಯಿಗೆಲ್ಲ. ಶಾಲೆ ಶುರುವಾಗುವುದರೊಳಗೆ ಕೊಯ್ದು ತಂದಿದ್ದ ಸೀಬೆಹಣ್ಣುಗಳೆಲ್ಲ ಖಾಲಿ. ನನ್ನ ಜೇಬು ಭರ್ತಿ. ಮನಸು ಬಹಳ ಹಗುರ.

ಶಾಲೆ ಮುಗಿಸಿ ಮನೆ ತಲುಪಿ ಅಮ್ಮನ ಕೈಗೆ ಸಂಪಾದಿಸಿದ ಚಿಲ್ಲರೆ ಹಣವನ್ನೆಲ್ಲ ಕೊಟ್ಟಾಗ ಏನೋ ಪ್ರಪಂಚವನ್ನೇ ಗೆದ್ದಷ್ಟೇ ಸಂಭ್ರಮ.... ಅಮ್ಮನ ಕಣ್ಣಲ್ಲಿ ನೀರು.
ಆ ಸಮಯದಲ್ಲಿ ಹಣಕ್ಕೆ ಬಹಳ ಬೆಲೆಯಿತ್ತು ಕೂಡ. ನನ್ನ ಅಲ್ಪ ಸಂಪಾದನೆಯೇ ಮನೆಯ ದಿನನಿತ್ಯದ ಖರ್ಚಿಗೆ ಬಳಕೆಯಾಗತೊಡಗಿತು. ಆವತ್ತೇ ನಾನು ಹಣದ ಬೆಲೆಯನ್ನು ಅರಿತಿದ್ದೂ ಕೂಡಾ..

ದಿನಗಳು, ತಿಂಗಳುಗಳು, ವರ್ಷಗಳು ಕಳೆದವು.

ಜೀವನ ಸೀಬೇಕಾಯಿ ಮಾರುತ್ತಿದ್ದ ಸರಕಾರೀ ಶಾಲೆಯ ಹುಡುಗನೊಬ್ಬನನ್ನು ಹಳ್ಳಿಯಿಂದ ಮೈಸೂರೆಂಬ ಪಟ್ಟಣಕ್ಕೆ,
ನಂತರ ಬೆಂಗಳೂರೆಂಬ ಮಹಾನಗರಿಯ ಇಂಜಿನಿಯರಿಂಗ್ ಕಾಲೇಜಿಗೆ ತಂದುಬಿಟ್ಟಿತು.

ಕೊನೆಗೆ ಸತತ ಪ್ರಯತ್ನದ ಸಲುವಾಗಿ ಇಂಜಿನಿಯರ್ ಆದೆ ಕೂಡಾ...
ಜೀವನ ಬಹಳ ಬದಲಾಯಿತು. ದೇವರು ನನ್ನನ್ನು, ನಮ್ಮ ಮನೆಯವರೆಲ್ಲರನ್ನು ಉತ್ತಮ ಸ್ಥಿತಿಗೆ ತಂದಿಟ್ಟ.

ಮೊನ್ನೆ ಮೊನ್ನೆ ಊರಿಗೆ ಹೋಗಿದ್ದೆ.
ಒಂದು ಕಾಲದಲ್ಲಿ ನಮ್ಮೆಲ್ಲರನ್ನೂ ಸಾಕಿದ್ದ ಅದೇ ಸೀಬೆಮರ ಇಂದು ಬಡಕಲಾಗಿ ಹೋಗಿತ್ತು.
ಎಲೆಗಳೆಲ್ಲ ಒಣಗಿದ್ದವು. ರೆಂಬೆಕೊಂಬೆಗಳಂತೂ ಕಳೆಗುಂದಿ ಕಡೆಗಾಲ ಸಮೀಪಿಸಿದ ವೃದ್ಧರಂತಾಗಿ ಹೋಗಿದ್ದವು.
ಎಲ್ಲ ಬರೀ ಖಾಲಿ ಖಾಲಿ..

ಹಿತ್ತಲಿನ ಮುಳ್ಳುಗಳನ್ನು ಸ್ವಚ್ಛ ಮಾಡಲು ಬಂದಿದ್ದ ನಮ್ಮ ಮನೆಯ ಕೆಲಸಗಾರನೊಬ್ಬ ನಮ್ಮನ್ನು ಕೇಳಿದ.

"ಸರ್, ಈ ಬಡಕಲು ಮರವನ್ನು ಯಾಕೆ ಇಟ್ಟುಕೊಂಡಿದ್ದಿರಾ,
ಹೇಳಿ, ಕಡಿದು ಹಾಕಿಬಿಡುತ್ತೀನಿ" ಅಂತ.

ಎಲ್ಲರೂ ಒಂದೇ ಉಸಿರಲ್ಲಿ "ಬೇಡ, ಬೇಡ " ಎಂದಷ್ಟೇ ಹೇಳಿದರು.
ಆತನಿಗೆ ತಲೆಬುಡ ಅರ್ಥವಾಗಲಿಲ್ಲ.

ಪಾಪ, ಅವನಿಗೇನು ಗೊತ್ತು,
"ಸಲಹಿದವರನ್ನು ಕಡಿಯುವುದು ಎಷ್ಟೊಂದು ಕ್ರೌರ್ಯದ ಕೆಲಸ" ಅಂತ........

ನಿಮ್ಮವನು,
ಸಂತು

Saturday, August 14, 2010

ಸ್ವಾತಂತ್ರ್ಯೋತ್ಸವವೂ ಹಬ್ಬವಾಗಬಾರದೇಕೆ ?



ಸುಮಾರು ೧೫ ವರ್ಷಗಳ ಹಿಂದಿನ ಮಾತು.

ನಮ್ಮದೊಂದು ಸರ್ಕಾರಿ ಶಾಲೆ. ಸ್ವಾತಂತ್ರ ದಿನಾಚರಣೆ ಬಂತೆಂದರೆ ನಮಗೆ ಎಲ್ಲಿಲ್ಲದ ಸಡಗರ.
ಪಟ್ಟಣದ ಶಾಲೆಗಳ ಹಾಗೆ ಎಲ್ಲರೂ ಎಲ್ಲ ದಿನವೂ uniform ಧರಿಸಿ ಹೋಗುವುದೂ ಇಲ್ಲ, uniform ಹಾಕಲೇಬೇಕೆಂಬ ಕಡ್ಡಾಯವೂ ಇಲ್ಲ . ಹಾಗೊಂದು ನಿಯಮವಿದ್ದರೂ ಧರಿಸಲು ಎಲ್ಲರ ಬಳಿಯೂ uniform ಇರುವುದಿಲ್ಲ !!! :)

ಆದರೆ ಆ ದಿನದಂದು ಮಾತ್ರ ಪ್ರತಿಯುಬ್ಬರೂ ತಪ್ಪದೇ uniform ಹಾಕುತ್ತಾರೆ . ಒಗೆದು ಇಸ್ತ್ರಿ ಮಾಡಿದ ಬಿಳಿ uniform ತೊಟ್ಟು ಕೈಯಲ್ಲಿ ಪುಟ್ಟ ತ್ರಿವರ್ಣ ಧ್ವಜ ಹಿಡಿದು ಶಾಲೆಗೆ ಗಾಂಭೀರ್ಯದಿಂದ ಹೊರಟರೆ ಅದು ಒಂದು ರೀತಿಯ ಸಂತೋಷವೇ ಸರಿ.ಹಾಗೆಯೇ ನಗರಗಳ ಹಾಗೆ ಶಾಲೆಯನ್ನು ಹಾಗೂ ಸುತ್ತಲಿನ ಪರಿಸರವನ್ನು ಸ್ವಚ್ಚಗೊಳಿಸಲು ಅಂತ ವಿಶೇಷವಾಗಿ ಸಿಬ್ಬಂದಿಯೇನು ಇರುವುದಿಲ್ಲ. ಹಿಂದಿನ ದಿನವೇ ಪ್ರತಿಯೊಂದು ಕೆಲಸವನ್ನು ಶಾಲೆಯ ಹುಡುಗರೇ ಮಾಡಿ ಮುಗಿಸಿರುತ್ತಾರೆ.
ಒಂದು ವಾರದ ಮುಂಚೆಯಿಂದಲೇ ಕವಾಯತು (march fast) ಮಾಡುವುದನ್ನು ಅಭ್ಯಾಸ ಮಾಡಿಸಲಾಗಿರುತ್ತದೆ. ಪ್ರತೀ , ಮಾಸ್ತರರೂ ವಿಧ್ಯಾರ್ಥಿಗಳ ಮುನ್ನವೇ ಬೇರೆಯೂರುಗಳಿಂದ ಬಂದಿಳಿದಿರುತ್ತಾರೆ.

ಮೊದಲು ಕವಾಯತು ,ನಂತರ ಧ್ವಜಾರೋಹಣ , ಜತೆಜತೆಗೆ ಜನಗಣಮನ , ಧ್ವಜಗೀತೆ , ಹಾಡಿ ಮುಗಿಸುವ ಹೊತ್ತಿಗೆ ಪ್ರತಿ ಪುಟ್ಟ ಹೃದಯದಲ್ಲಿ ದೇಶಪ್ರೇಮ ಉಕ್ಕಿ ಹರಿದಿರುತ್ತದೆ.

ಕೊನೆಗೆ ಎಲ್ಲರ ಬಾಯಿಗೂ ಸಿಹಿ, ಅತಿಥಿಗಳಿಂದ ದೇಶಾಭಿಮಾನದ ಭಾಷಣ , ನಡುನಡುವೆ ಸಾಂಸ್ಕೃತಿಕ ಕಾರ್ಯಕ್ರಮ, ನೆರೆದ ಹಳ್ಳಿ ಜನರಿಂದ ಹರ್ಷೋದ್ಗಾರ , ಕರತಾಡನ.

ಕೊನೆಗೆ ಒಟ್ಟೊಟ್ಟಿಗೆ ಊರ ತುಂಬ ಮೆರವಣಿಗೆ , ಕೈ ಕೈ ಹಿಡಿದು ಹೋರಾಟ ಮಕ್ಕಳ ಬಾಯಿಂದ ದೇಶದ ಬಗ್ಗೆ ಘೋಷಣೆ ....

ಭಾರತ್ ಮಾತ ಕೀ ಜೈ.........ಮಹಾತ್ಮ ಗಾಂಧೀ ಕೀ ಜೈ........

ಮನೆಯಿಂದ ಹೊರಬಂದು ತಮ್ಮ ಮಕ್ಕಳ ನೋಡುವ ಜನರ ತುಟಿಯಲ್ಲಿ ಕಿರುನಗೆ , ತಡವಾಗಿ ಎದ್ದು ದಾರಿಬದಿಯ ಅಂಗಡಿಯಲ್ಲಿ ಟೀ ಕುಡಿಯುತ್ತ ನಿಂತ ಜನರ ಮನದಲ್ಲಿ ಏನೋ ಅಳುಕು , ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿ ತಾವು ಪಾಲ್ಗೊಳ್ಳಲಿಲ್ಲವೆಂದು ಅನಿಸಿದಾಗ ನಾಚಿಕೆ....

ಮಕ್ಕಳ ಮನಸ್ಸಿನಲ್ಲಂತೂ ಸ್ವಾತಂತ್ರ್ಯ ದಿನಾಚರಣೆ ಹಬ್ಬವೋ ಹಬ್ಬ. ........

......................ಮತ್ತೆ ವಾಸ್ತವಕ್ಕೆ ಬನ್ನಿ ,

ಏಕಾದರೂ ಈ Independence day, weekend ನಲ್ಲಿ ಬಂತು ಎನ್ನುವ ಬೇಸರ , ಇಲ್ಲದಿದ್ದರೆ ಒಂದು extra Holiday ನಾದ್ರೂ ಸಿಗ್ತಿತ್ತು ಅನ್ನೋ ಮನೋಭಾವ...

ಸ್ವಾತಂತ್ರ್ಯ ದಿನಾಚರಣೆಯಂತು ಶಾಲೆಯ ದಿನಗಳಲ್ಲಿ ಮಾತ್ರ ಬರುವ ಒಂದು ದಿನ ಎಂಬ ಅನಿಸಿಕೆ . ಅದರ ಆಚರಣೆಯಂತು ಕನಸು, ಅಥವಾ ಕಳೆದ ದಿನಗಳ ನೆನಪು.

ಈಗ Aug-15 ರ ದಿನ ಏಳುವಾಗಲೇ ಮಧ್ಯಾಹ್ನ ದಾಟಿರುತ್ತದೆ. ಎದ್ದ ಕೂಡಲೇ ಕೈಗೆ tv remote ಬಂದಿರುತ್ತದೆ. TV channelಗಳಲ್ಲಿ ಸ್ವಾತಂತ್ರ್ಯದ ಬಗ್ಗೆ ಹಿರಿಯರು,ರಾಜಕಾರಣಿಗಳು , ಸಿನಿಮಾ ತಾರೆಯರು ಏನು ಹೇಳುತ್ತಾರೆ ಎಂದು ನೋಡುನೋಡುತ್ತಲೇ ಆ ದಿನ ಮುಗಿದು ಹೋಗಿರುತ್ತದೆ.

ಎಂತಹ ವಿಪರ್ಯಾಸವಲ್ಲವೇ?

ಇದೆe ಬೆಂಗಳೂರಿನಲ್ಲಿ ನಮ್ಮ ಬೀದಿಯಲ್ಲಿರುವ ಮನೆಯಾತನೊಬ್ಬ Aug -15 ಬಂತೆಂದರೆ ಅಕ್ಕಪಕ್ಕದ ಮನೆಯ ಹಿರಿಯ ಕಿರಿಯರೆನ್ನೆಲ್ಲ ಸೇರಿಸಿ ತನ್ನ ಮನೆಯ ಮಹಡಿಯ ಮೇಲೆ ಬೆಳ್ಳಂಬೆಳಗ್ಗೆ ಧ್ವಜ ಹಾರಿಸಿ, ಪ್ರತಿಯೊಬ್ಬರ ಕೈಯಲ್ಲೂ ಧ್ವಜಕ್ಕೆ salute ಮಾಡಿಸಿ ,ಜನಗಣಮನ ಹಾಡಿಸಿ ಪ್ರತಿಯೊಬ್ಬರಿಗೂ ಸಿಹಿ ಹಂಚುತ್ತಾನೆ!!!!

"ಬರೀ aug-15 ರಂದೇ ಏಕೆ ನಾವು ದೇಶಪ್ರೇಮ ತೋರಿಸಬೇಕು, ವರ್ಷದ ಎಲ್ಲ ದಿನವೂ ನಾವು Independence Day ಆಚರಿಸುತ್ತೇವೆ" ಅಂತ ಉಡಾಫೆಯ ಮಾತು ಹೇಳುವ ಅನೇಕರು atleast ಒಂದು ಬಾರಿಯಾದರೂ ತಮ್ಮ lifeನಲ್ಲಿ ಜನಗಣಮನ ಹಾಡಿರುವುದಿಲ್ಲ.

ಇಂಥವರ ಮಧ್ಯದಲ್ಲೂ ಮನೆಯಲ್ಲೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಿಹಿಹಂಚಿ, ಹಬ್ಬದಂತೆ ಆಚರಿಸುವ "ಆ" ವ್ಯಕ್ತಿ ನನಗೆ ನಿಜವಾದ "ಹೀರೋ"ನಂತೆ ಕಾಣಿಸುತ್ತಾನೆ.

ನೀವೇನಂತೀರಿ,
Jai Hind,Jai Bharath matha....





ನಿಮ್ಮವನು
Santhu

Sunday, February 28, 2010

ಅದೊಂದು ದಿನ...



ಬರೋಬ್ಬರಿ 8 ತಾಸು ಕಂಪ್ಯೂಟರಿನ ಮುಂದೆ ಕೂತು ದಣಿದಿದ್ದ ದೇಹ ಮತ್ತು ಮನಸ್ಸು ಮನೆಗೆ ತಲುಪಿಸುವ ಕ್ಯಾಬಿನಲ್ಲಿ ಕುಳಿತ ತಕ್ಷಣ ಕಣ್ಣು ಮುಚ್ಚುವಂತೆ ಮಾಡಿತ್ತು. ಮಧ್ಯಾಹ್ನ ಫೋನಾಯಿಸಿದಾಗ ನನ್ನಾಕೆಯಾಡಿದ ಮಾತುಗಳು ಒಂದೊಂದಾಗಿ ಮನಸ್ಸಿನಲ್ಲಿ ಬರಲಾರಂಭಿಸಿದವು.
------*---------*---------*---------*-------*-------*--------*--------*-----*
ಮದುವೆಗೆ ಮುಂಚೆ ಅಷ್ಟೇ ಇದೆಲ್ಲ, ಆಮೇಲೆ ..... ಏನಿಲ್ಲ. ಬರೀ ಬೊಗಳೆ ಪ್ರಪಂಚ. ಕರ್ಮಕ್ಕೆ love marriage ಬೇರೆ ಯಾಕೆ ಬೇಕಿತ್ತೋ? ಪರಿಚಯವಾದ ದಿನಗಳಲ್ಲಿ atleast 10 ಗಂಟೆ ಫೋನಿನಲ್ಲೇ ಪ್ರಪಂಚ.
ಕೂತಿದ್ದರೂ ನಿಂತಿದ್ದರೂ ಮೇಲೆ smsಗಳ ಮೇಲೆ sms.
ಪ್ರೀತಿ ಮಾತು, ಆಗ ನೋಡುತ್ತಾ ಇದ್ದ movies , ಆಡ್ತಾ ಇದ್ದ ಹರಟೆ , ಭೇಟಿ ಆಗ್ತಾ ಇದ್ದ ದೇವಸ್ಥಾನ, ಬರೀತಾ ಇದ್ದ letter , ಕಳಿಸ್ತಾ ಇದ್ದ e -mails , greetings , ಆಗಾಗ ಕೊಡ್ತಾ ಇದ್ದ gifts .... ಪ್ರತಿಯೊಂದು ಅದು ಹೇಗೆ ಮದುವೆ ಆದ ತಕ್ಷಣ ಮಾಯ ಆಗೋಯ್ತು ನೋಡು. ಎಲ್ಲಾ ಗಂಡಸರದ್ದು ಇದೇ ರಾಮಾಯಣ ಅಂತ ಕಾಣ್ಸುತ್ತೆ , ಬರೀ ಹುಡುಗಿರನ್ನ ಪಟಾಯಿಸೋಕೆ ಅಷ್ಟೆಲ್ಲಾ ಮಾಡ್ತಾರೆ ಅಂತ ಅನ್ಸುತ್ತೆ . ಹಿಂಗೆ ಇದ್ದಿದ್ರೆ ಮದುವೆ ಆಗದೇನೆ ಇರ್ಬೋದಿತ್ತು. ಈಗ ಸಾಲದ್ದಕ್ಕೆ ಮಗು ಬೇರೆ ಕೇಡು.
ಈಗಂತೂ ನಿಂಗೆ ಆಫೀಸೇ ಪ್ರಪಂಚ , ಅಪ್ಪ, ಅಮ್ಮ , ಹೆಂಡತಿ, ಮಕ್ಕಳು ಎಲ್ಲ.
ಆಫೀಸಿನಲ್ಲೇ ಒಂದು ರೂಮು ಕೊಟ್ರೆ ಅಲ್ಲೇ ಮಲಗಿಬಿಡು, ನಿನಗ್ಯಾಕೆ ಸಂಸಾರ ಎಲ್ಲ?!!
Atleast ಊಟ ಮಾಡಿದ್ಯ ಅಂತ ಕೇಳಲಿಕ್ಕಾದರು ಒಂದು ಫೋನ್ ಬೇಡ್ವ? ಅಷ್ಟಕ್ಕೂ ನೀನೋಬ್ಬನೇನ ಕೆಲಸ ಮಾಡೋದು. ನಿಮ್ಮ ಮ್ಯಾನೇಜರ್ ಗಳಿಗೇನು ಮದ್ವೇನೆ ಆಗಿಲ್ವಾ? .............

ಅಮ್ಮಾ.... ಬೈಗುಳದ ಮೇಲೆ ಬೈಗುಳ , ಇವಳ ಬಾಯಿಗೆ ಯಾರಾದ್ರೂ ಬೆರಳು ಹಾಕ್ಕಿದ್ರೋ ಅಂತ ಮನಸ್ಸಲ್ಲೇ ಅಂದುಕೊಳ್ಳುತ್ತಾ ಕೇಳಿಸಿಕೊಳ್ಳುತ್ತಾ ಇದ್ದೆ.
ನಂಗೊತ್ತು ಮದ್ಯದಲ್ಲಿ ಏನಾದ್ರು ಹೇಳಿದ್ರೆ ಬೈಗುಳದ ಪಟ್ಟಿ ಇನ್ನೂ ಜಾಸ್ತಿ ಆಗುತ್ತೆ ಅಂತ.
ಇಂಥ timeನಲ್ಲಿನೇ ಗಾಂಧೀ ತಾತಂಗೆ thanks ಹೇಳ್ಬೇಕು ಅನ್ಸೋದು. ಕೆಟ್ಟದ್ದನ್ನ ಕೇಳಬಾರದು ಅಂತ ಹೇಳಿ ಕೊಟ್ಟಿದ್ದಾರಲ್ಲ ಅದಕ್ಕೆ!!!
ಬರೋಬ್ಬರಿ 10 ನಿಮಿಷ ಆದ ಮೇಲೆ ಅತ್ತ ಕಡೆಯಿಂದ "ಲಕ್ " ಅಂತ phone ನೆಲಕ್ಕೆ ಕುಕ್ಕಿದ ಸದ್ದು........ಬದುಕಿದೆಯಾ ಬಡಜೀವವೇ..!!! :)
ಮತ್ತೆ ಚೇರಿನಲ್ಲಿ ಕೂತೆನಾದರೂ ಮನಸ್ಸು ಮಾತ್ರ ಗಿರಾಕಿ ಹೊಡಿತಾನೆ ಇತ್ತು. ಎಷ್ಟೇ ಆದರೂ MNCಗಳ ಕತೆ ನೋಡಿ, ನೀವು ಸಾಯೋ ಒಂದು ಕ್ಷಣದ ಮುಂಚೆ ಅಲ್ಲಿದ್ರೂ ಕೆಲಸ ಮಾಡುತ್ತಾನೆ ಇರಬೇಕು.




------*---------*---------*---------*-------*-------*--------*--------*-----*








"ಯಾಕ್ ಸರ್ ಸೈಲೆಂಟ್ ಆಗಿ ಕೂತಿದ್ದೀರಾ ಇವತ್ತು? ನಿಮ್ಮ ಮ್ಯಾನೇಜರ್ ಏನಾದ್ರೂ ಬೈದ್ರಾ ? " ನನ್ನ cabmate ಪ್ರಶ್ನೆ. "ನನ್ನ ಹೆಂಡತಿನೇ ಕಣಪ್ಪ ನಂಗೆ ಮ್ಯಾನೇಜರ್, ಅವ್ಳು ಬೈದೆ ಇನ್ಯಾವ ನನ್ ಮಗ ಬೈತಾನೆ ನಂಗೆ?" ಹಾಗೆಂದು ಹೇಳಬೇಕೆಂದುಕೊಂಡವನು ಕೊನೆ ಕ್ಷಣದಲ್ಲಿ ಕಷ್ಟಪಟ್ಟು ತಡೆದುಕೊಂಡೆ.

ದಿನ ಪೂರ್ತಿ ನನ್ನ ಮೂಡ್ ಹಾಳು ಮಾಡಿದ ಆಕೇನ ಸರಿಯಾಗಿ ತರಾಟೆಗೆ ತಗೋಬೇಕು ಅಂತ ಯೋಚಿಸೋಕೆ ಶುರು ಮಾಡಿದೆ.

ಅಮ್ಮಣ್ಣಿ, ಕಾಲೇಜಿನಲ್ಲಿ ನಿಂಗೆ ಫೋನ್ ಮಾಡ್ತಾ ನಿನ್ ಹಿಂದೆ ಅಲಿತಿದ್ದಾಗ ದುಡ್ಡು ಕೊಡ್ತಾ ಇದ್ದೋರು ನಮ್ಮಪ್ಪ. ಆದ್ರೆ ಈಗ ಕಂಪನೀಲಿ ಸುಮ್ನೆ ಕೂರಿಸಿ ದುಡ್ಡು ಕೊಟ್ಟು ಕಳಿಸೋಕೆ ಅದೇನು ನಮ್ಮ ಮಾವನ ಮನೆ ಅಲ್ವಲ್ಲ .

ನೀನೆ ಸ್ವಲ್ಪ ಯೋಚನೆ ಮಾಡು. ಯಾವಾಗ್ಲೂ ನಿನ್ನ ಹಿಂದೆ ಫೋನ್ ಮಾಡ್ತಾ ಕೂತಿದ್ರೆ ನನ್ನ ಆಫೀಸ್ ಕೆಲಸ ಯಾರು ಮಾಡ್ತಾರೆ. ಮುಂಚೆನೇ ಅಲ್ಲಿ ನಮ್ಮ ಕೆಲಸದ ಪಾಡು ನಾಯಿಪಾಡು.
ಅದನ್ನ ಮುಗಿಸೋಕೆ ಬ್ರಹ್ಮ ಇನ್ಮೇಲೆ ದಿನಕ್ಕೆ 48 ಗಂಟೆ ಅಂತ ಮಾಡ್ಬೇಕು. ನಾನು ಸೇರಿದ ಮೇಲೆ ಬಂದು ಕೆಲಸಕ್ಕೆ ಸೇರಿದ juniors ಎಲ್ಲ ಕೆಲಸದಲ್ಲಿ ಒಳ್ಳೆ ಹೆಸರು ತಗೊಂಡು ವಿದೇಶಕ್ಕೆಲ್ಲ ಹೋಗಿ ಬಂದಿದ್ದಾರೆ.
ನಾನು family ಅಂತ ಯಾವಾಗಲು ನಿನ್ನ ಬಗ್ಗೆನೇ ಯೋಚನೆ ಮಾಡ್ತಾ ಕೂತಿದ್ರೆ ಯಾರು ಕೊಡ್ತಾರೆ ತಿನ್ನೋಕೆ ಅನ್ನ. ಇಷ್ಟು ದಿನ ಕೆಲಸ ಮಾಡಿದ್ರು ಸಾಲ ಅಂತ ಒಂಚೂರು ಕಮ್ಮಿ ಆಗಿಲ್ಲ . ಅಂಥದ್ದರಲ್ಲಿ ಕೆಲಸ ಏನಾದ್ರು ಹೋದ್ರೆ ಇನ್ಯಾರು ಕೈ ಹಿಡಿತಾರೆ. ನೀವಾದ್ರು ಹೆಂಗಸರು. ಕೆಲಸಕ್ಕೆ ಹೋಗಿ ಅಥವಾ ಬಿಡಿ ,ಯಾರು ಕೇಳಲ್ಲ. ನಮ್ಮ ಗಂಡು ಜನ್ಮ, ಕುಂತರೂ ಬೈತಾರೆ, ನಿಂತರೂ ಬೈತಾರೆ.

ನೋಡು ನನ್ನ life ನಲ್ಲಿ ನಂಗೆ priority, ಗುರಿ ಅಂತ ಏನೇನೋ ಇದೆ. ಅದನ್ನ ಸಾಧಿಸೋವರೆಗೂ ನೀನೆ ಅಲ್ಲ ನಿಮ್ಮಪ್ಪ, ನಿಮ್ಮಪ್ಪ, ಯಾರು ಹೇಳಿದ್ರು ಯಾರ ಮಾತೂ ಕೇಳೋನಲ್ಲ ನಾನು. ನನ್ ಗುರಿ ತಲುಪೋವರೆಗೂ ನನ್ ಪಾಡಿಗೆ ನನ್ ಕೆಲಸ ಮಾಡುತ್ತಾನೆ ಇರ್ತೀನಿ. ಮನಸ್ಸಿಗೆ phone ಮಾಡಬೇಕು ಅಂತ ಅನ್ಸಿದ್ರೆ ಮಾಡ್ತೀನಿ. ಅದು ಬಿಟ್ಟು ನೀನು ಇಷ್ಟು ಹೊತ್ತಿಗೇ phone ಮಾಡ್ಬೇಕು, ಇಷ್ಟು ಸಲ ದಿನಕ್ಕೆ phone ಮಾಡಲೇಬೇಕು ಅಂತ ನೀನು ಧಮಕಿ ಹಾಕಿದ್ರೆ ಕೇಳೋ ಮನುಷ್ಯಾನೇ ಅಲ್ಲ ನಾನು.

ಅಷ್ಟಕ್ಕೂನಿನ್ನ ಮದ್ವೆ ಅದ ಮೇಲೆ ನನ್ನ ಗೆಳೆಯರನ್ನ ಭೇಟಿ ಮಾಡೋದೇ ಬಿಟ್ಟುಬಿಟ್ಟಿದ್ದೀನಿ. ಅದನ್ನೆಲ್ಲ ಎಲ್ಲಿ ನೀನು ತಲೆಗೆ ಹಾಕೊಳ್ತಿಯೋ ದೇವರಿಗೆ ಗೊತ್ತು. ನಿನ್ ಬುದ್ದಿ ಎಲ್ಲ ಏನಿದ್ರು ಬಾವಿಯೊಳಗಿನ ಕಪ್ಪೆ ಹಾಗೆ ಅಷ್ಟೇ, ಪ್ರಪಂಚದ ಜ್ಞಾನನೇ ನಿನಗೆ ಇಲ್ಲ....

ನೀನು ಹೀಗೆ ಆಡ್ತಾ ಇರೋದ್ರಿಂದ office ನಲ್ಲಿ ಮಾಡೋ ಕೆಲಸಾನು ಮಾಡೋಕೆ ನಂಗೆ ಅಗ್ತಾ ಇಲ್ಲ. ಹಿಂಗೆ ಜಗಳ ಆಡ್ತಾ ಇರು, ಮಾಡೋ ಫೋನ್ ಅನ್ನು ಮಾಡಲ್ಲ ಅಷ್ಟೇನೇ..
------*---------*---------*---------*-------*-------*--------*--------*-----*




"ಸರ್ ಮನೆ ಬಂತು ಇಳ್ಕೋಳಿ ಸರ್" ಕ್ಯಾಬ್ ಡ್ರೈವರ್ ಅಂದ.
ತಟ್ಟನೆ ಯೋಚನಾ ಲಹರಿಯಿಂದ ಎದ್ದು, ಕ್ಯಾಬ್ ಇಳಿದೆ.

ಮನೆಯೊಳಗೇ ಕಾಲಿಟ್ಟವನಿಗೆ "ಮುಖ ತೊಳೆದುಕೊಂಡು ಬನ್ನಿ ಕಾಫಿ ಕೊಡುತ್ತೇನೆ " ಎಂದವಳ ಧ್ವನಿ ಕೇಳಿಸಿತು. ಅದೇ ಕಗ್ಗಂಟು ಮುಖ.
ಕಾಫಿ ಹೀರುತ್ತಾ ಕೂತವನು ಅಲ್ಲೇ ಇದ್ದ ತೊಟ್ಟಿಲ ಒಳಗೆ ಕಣ್ಣಾಯಿಸಿದೆ.

ದುಂಡು ಕಂಗಳ ಪುಟ್ಟಿಯ ಮುಗುಳ್ನಗು ನನ್ನನ್ನ ಅಯಸ್ಕಾಂತದಂತೆ ಬರಸೆಳೆಯಿತು.

ಎತ್ತಿ ಎದೆಗಾನಿಸಿಕೊಂಡವನ ಮುಖದ ಮೇಲೆಲ್ಲಾ ಪುಟ್ಟಿಯ ಪುಟ್ಟ ಕೈಯಾಟ.

"ಓಹೋ ನೋಡು, ಅವರಪ್ಪನ ಮಗಳೇ ಅವಳು, ಅವರು ಬರೋ ಸಮಯ ಅದ ತಕ್ಷಣ ಹೇಗೆ ಅಳೋದನ್ನೆಲ್ಲ ನಿಲ್ಲಿಸಿ ಕುಣಿಯೋಕೆ ಶುರು ಮಾಡಿದಾಳೆ,, " ಮತ್ತೆ ಅವಳಮ್ಮನ ಮೂದಲಿಕೆ.
ಕಿಲಕಿಲ ನಕ್ಕವಳ ಮೊಗದಲ್ಲಿ ಬಂಗಾರದ ಮಿಂಚು..
ಅವಳೊಟ್ಟಿಗೆ ಆಡುತ್ತ , ಮಾತನಾಡುತ್ತ ಮೂಕಭಾಷೆಗೆ ಪ್ರತಿಕ್ರಿಯಿಸುತ್ತಾ ಕುಳಿತೆ.





ಎಷ್ಟೇ ನೆನೆಸಿಕೊಂಡರೂ ಏನೋ ಮರೆತಿದ್ದು ನೆನಪಾಗಲೇ ಇಲ್ಲ ...............!!!!!??????!!!!!!!

ನಿಮ್ಮವನು,
Santhu