ಓದುವ ಮುನ್ನ..
ಇಲ್ಲಿ ಬರೆದಿರುವ ಯಾವುದೇ ಘಟನೆಗಳು ನಿಜವಾಗಿಯೂ ಎಲ್ಲಿಯೂ ನಡೆದಂಥವಲ್ಲ. ಆದರೆ ಇಲ್ಲಿನ ಪ್ರತಿಯೊಂದು ಘಟನೆಗಳು ನಮ್ಮ ನಿಮ್ಮೆಲ್ಲರ ಜೀವನದಲ್ಲಿ ನಡೆಯುವಂಥವು. ಅಥವಾ ನಮ್ಮ ಸುತ್ತಮುತ್ತಲ ಬಂಧು ಮಿತ್ರರ ಬಳಗದಲ್ಲಿ ನಡೆಯುವುದನ್ನು ನಾವು ನೋದಿರುವಂತಹವು.
ಇಲ್ಲನ ಎಲ್ಲ ಘಟನೆಗಳಲ್ಲೂ ಒಂದಕ್ಕೊಂದಕ್ಕೆ ಏನೂ ಸಂಬಂಧವಿಲ್ಲ. ಆದರೆ ಪ್ರತೀ ಘಟನೆಯ ಕೊನೆಯ ಸಾಲು ಮುಗಿದ ನಂತರ ಇನ್ನೇನೋ ಹೇಳಬೇಕೆನಿಸುತ್ತದೆ. ಆದರೆ ಆ ಪ್ರಯತ್ನವನ್ನು ಅಲ್ಲಿಗೆ ನಿಲ್ಲಿಸಿ ಉಳಿದದ್ದನ್ನು ಅಥವಾ ಉಂಟಾಗುವ ಅನುಭವವನ್ನು ಕೇವಲ ಓದುಗನ ಸುಪರ್ದಿಗೆ ವಹಿಸಿರುತ್ತೇನೆ.
ನಿಮ್ಮವನು,
ಸಂತು.
------------------------------------------
ಗುಡಿಸಲಲ್ಲಿದ್ದರೂ ಹೊಟ್ಟೆಪಾಡಿಗೆಂದು ಕೂಲಿ ಮಾಡುತ್ತಿರುತ್ತಾನೆ ಅಪ್ಪ. ಬಿಸಿಲ ಝಳದಲ್ಲಿ ಮೈ ಬೆವರುತ್ತಿರುತ್ತದೆ. ನಡುಮಧ್ಯಾಹ್ನ ಕಲ್ಲಂಗಡಿ ಹಣ್ಣು ಮಾರುವ ಹುಡುಗ ರಸ್ತೆಯಲ್ಲಿ ಕೂಗುತ್ತ ಬರುತ್ತಾನೆ. ಮನಸ್ಸು ಬೇಕೆಂದರೂ ಹೃದಯ ಬೇಡವೆನ್ನುತ್ತದೆ.
ಸಂಜೆ ಮನೆಸೇರಿ ಕೂಲಿ ಹಣ 50 ರುಪಾಯಿಯ ನೋಟನ್ನು ಹೆಂಡತಿಗೆ ಕೊಡುತ್ತಾನೆ. ಓಡಿಬಂದ ಮಗು ಮಡಿಲೇರಿ ಹೊರಗೆ ಹೋಗೋಣವೆನ್ನುತ್ತದೆ.ನಂತರ ಬೀದಿ ಬದಿಯ ಗೋಬಿಮಂಚೂರಿಯನ್ನು ನೋಡಿ ಬೇಕೆಂದು ಬೆರಳು ಮಾಡಿ ತೋರಿಸಿ ಪಟ್ಟು ಹಿಡಿಯುತ್ತದೆ ಮಗು.
ತಂದ ಗೋಬಿ ಮಂಚೂರಿ ತಟ್ಟೆಯಿಂದ ಬರೇ ಒಂದೇ ಒಂದು ತುಣುಕನ್ನು ಬಾಯಿಗಿರಿಸಿ ಬೇಡವೆಂಬಂತೆ ಕಸದ ಬುಟ್ಟಿಗೆಸೆಯುತ್ತದೆ.
"ಚಿಲ್ಲರೆ ಇದ್ದರೆ ಕೊಟ್ಟುಬಿಡಿ ಸಾರ್, ಬರೀ 35 ರೂಪಾಯಿಯಷ್ಟೇ" ಹೇಳುತ್ತಾನೆ ಗೋಬಿ ಮಂಚೂರಿ ಅಂಗಡಿಯ ಹುಡುಗ,
ಯೋಚಿಸಲಾರಂಭಿಸುತ್ತದೆ ಗಂಡ-ಹೆಂಡತಿಯ ಮನಸ್ಸು, ರಾತ್ರಿಯೂಟಕ್ಕೆ ಮನೆಯಲ್ಲಿ ಅಕ್ಕಿಯೂ ಖಾಲಿಯಗಿದೆಯೆಂದು........
------------------------------------------
Coffee Day ನಲ್ಲಿ ಕೂತವರಲ್ಲಿದ್ದ ಲಲನೆಯೊಬ್ಬಳು ಹೀಗೆನ್ನುತ್ತಾಳೆ.
"ನೀವ್ ಏನೇ ಹೇಳಿ ಮೇಡಂ, ನಮ್ಮಿಂದಾನೆ ನಮ್ Languageಗೆ Insult ಆಗ್ತಾ ಇರೋದು. ನಮ್ officeನಲ್ಲೇ ನೋಡಿ, ನಮ್ colleagues ಎಲ್ಲ ಕನ್ನಡ language ಬರೋವ್ರು ಕೂಡ English ನಲ್ಲೇ ಪ್ರತಿಯೊಂದನ್ನು communicate ಮಾಡ್ತಾರೆ.ಈ ತರಹದ Attitude ನಮ್ stateಗೆ ತುಂಬ Problem Create ಮಾಡ್ತಾ ಇದೆ.
ಅಲ್ಲಾರಿ ನಮ್ Languageಗೆ ನಾವು Localitesಯೇ correctಆಗಿ Support ಮಾಡಿಲ್ಲಾಂದ್ರೆ, ಇನ್ನೇನು Outsiders Support ಮಾಡಬೇಕು ಅಂತ Expect ಮಾಡೋಕಾಗುತ್ತ?
ನೀವೇನೇ ಹೇಳಿ, ನಾನಂತು Always ಕನ್ನಡಾನೇ ಮಾತಾಡೋದು!!"
------------------------------------------
ಆತನಿಗೆ ಅವಳೆಂದರೆ ಪ್ರಾಣ. ಓದಿನಿಂದ ಹಿಡಿದು ಅವಳಿಗೆ ಕೆಲಸ ಸಿಕ್ಕುವವರೆಗೆ ಜೀವಕ್ಕೆ ಜೀವ ಕೊಟ್ಟು ಸಹಾಯ ಮಾಡುತ್ತಾನೆ. ಪ್ರಪಂಚವನ್ನೇ ತನ್ನ ಮಾತಿನಿಂದ ಒಲಿಸಿಕೊಳ್ಳುವ ಆ ಹುಡುಗನಿಗೆ, ತಾನು ಪ್ರೀತಿಸಿದ ಅವಳಿಗೆ ತನ್ನ ಪ್ರೀತಿಯನ್ನು ಹೇಳಿಕೊಳ್ಳಲಾಗಲಿಲ್ಲ. ದಿನಗಳು ಉರುಳುತ್ತಲೇ ಇವೆ.
ಅವಳೊಂದು ದಿನ ತನ್ನ ಮದುವೆಯ ಆಮಂತ್ರಣ ಪತ್ರಿಕೆಯನ್ನು ತಂದು ಆತನ ಕೈಗಿಡುತ್ತಾಳೆ.
ಈತನಿಗೆ ಜೀವನದಲ್ಲಿ ಆಕಾಶವೇ ಕಳಚಿ ಮೇಲೆ ಬಿದ್ದಂತಾಗುತ್ತದೆ.ಈತ ಪ್ರತಿಕ್ರಿಯಿಸುವುದಿಲ್ಲ.
ಗಡ್ಡ ಬೆಳೆದು, ಜೀವನ ನಶ್ವರವಾಗಿ ದುಶ್ಚಟಗಳಿಗೆ ದಾಸನಾಗುತ್ತಾನೆ.
ಐದಾರು ತಿಂಗಳು ಕಳೆದ ನಂತರ ಹುಡುಗ ಬಾರಿನಲ್ಲಿ ಒಬ್ಬನೇ ಕುಳಿತಿರಬೇಕಾದರೆ ಆತನ ಮೊಬೈಲಿಗೆ ಸಂದೇಶವೊಂದು ಬರುತ್ತದೆ.
"ಯಾಕೋ ಕಣೋ ಗೊತ್ತಿಲ್ಲ, ಏನೋ ಕಳಕೊಂಡಂತೆ ಅನ್ನಿಸುತ್ತಿದೆ. I Miss you So much .."!!!
------------------------------------------
ಬಡತನವೆಂದರೆ ಅದು. ಅಂದು ಕೂಲಿ ಮಾಡಿದರೆ ಅವತ್ತಿನ ಗಂಜಿ. ಇಲ್ಲದಿದ್ದರೆ ಉಪವಾಸ. ವರುಷಕ್ಕೊಂದು ಹಬ್ಬದಲ್ಲಿ ಮಾತ್ರ ಇಡ್ಲಿ, ದೋಸೆ,ಕೇಸರಿ ಬಾತ್..
ಪಕ್ಕದ ಮನೆಯವರ ಪರಿಚಯಸ್ಥರ ಮದುವೆ ಸಮಾರಂಭ. ಒಬ್ಬರೇ ಹೋಗಲು ಮನಸ್ಸೊಪ್ಪದ ಕಾರಣ ಈತನನ್ನೂ ಜೊತೆಯಲ್ಲಿ ಕರೆದೊಯ್ದಿರುತ್ತಾರೆ.
ಬಗೆಬಗೆಯ ತಿಂಡಿಗಳು.ಘಮ್ಮೆನಿಸುವ ಭೋಜ್ಯಗಳು.
ಸಿರಿವಂತರ ಗುಣ.ಪ್ರತಿಯೊಂದನ್ನು ರುಚಿ ನೋಡಿ ಎಲೆಯಲ್ಲೇ ಮುಕ್ಕಾಲು ಭಾಗ ಬಿಡುವ ಸ್ವಭಾವ.
ಈತನಿಗೆ ಭೀಕರ ಹಸಿವು. ಎಷ್ಟೋ ವರ್ಷಗಳಿಂದ ಕಾದಿದ್ದ ಹಸಿವೆಂಬಂತೆ ಊಟ ಮಾಡತೊಡಗುತ್ತಾನೆ.
ಪಕ್ಕದಲ್ಲೇ ಕೂತಿದ್ದವನು ಹೇಳುತ್ತಾನೆ, "ಸ್ವಾಮಿ ಬೇಗ ಮುಗಿಸಿ, ಊಟದ ಪಂಕ್ತಿ ಮುಗಿಯಿತು, ಎಲ್ಲರೂ ಹೋಗುತ್ತಿದ್ದಾರೆ"
------------------------------------------
ಯಾವುದೋ ನಗರ ಪ್ರದೇಶದಲ್ಲಿ ನಡೆಯುತ್ತಿರುವ ಸಮಾರಂಭ. ಮನೆ ತುಂಬ ನೆಂಟರು ಬಂದಿದ್ದಾರೆ.
ಹಳ್ಳಿಯಿಂದಲೂ ಬಂದಿದೆ ಒಂದು ಮಗು ತನ್ನಮ್ಮನ ಜತೆ.
ಅಮ್ಮ ಯಾವುದೋ ಕೆಲಸದಲ್ಲಿ ಮಗ್ನವಾಗಿದ್ದಾಳೆ.
ನಡೆದಾಡುತ್ತ ಹೀಗೆಯೇ, Style ಆಗಿ Dress ಮಾಡಿಕೊಂಡು ಆಟವಾಡುತ್ತಿದ್ದ ಒಂದಿಬ್ಬರು city ಮಕ್ಕಳ ಹತ್ತಿರ ಹೋಗುತ್ತದೆ ಮಗು. ಯಾರೂ ತನ್ನೊಡನೆ ಮಾತನಾಡುತ್ತಿಲ್ಲ.
ಆ ಆಟವಾಡುತ್ತಿದ್ದ ಮಕ್ಕಳ ತಾಯಂದಿರು ಸಂಭಾಷಣೆಯಲ್ಲಿ ತೊಡಗುತ್ತಾರೆ.
"ಓಹೋ ನಿಮ್ ಮಗುನ Modern English Public School ಗೆ ಸೇರಿಸಿದ್ದಿರ,
ನಮ್ ಮಗುನ St John's School ಗೆ ಸೇರಿಸಿದ್ದಿವಿ, ಎಷ್ಟೊಂದು ಖರ್ಚು ಅಲ್ವ..."
ಆಟವಾಡುತ್ತಿದ್ದ ಮಕ್ಕಳು "Twinkle Twinkle Little Star" ಹಾಡುತ್ತ ಕೈಲಿದ್ದ buiscut ನ್ನು ಬಾಯಿಗಿಡುತ್ತವೆ, ಮತ್ತೊಂದನ್ನು ಅಲ್ಲೇ ಇದ್ದ ನಾಯಿಗೆ ಬಿಸಾಡುತ್ತ...
ಹಳ್ಳಿ ಹುಡುಗನ ಬಾಯಲ್ಲಿ ನೀರೂರುತ್ತದೆ...
------------------------------------------
officeನ food courtನಲ್ಲಿ ಕುಳಿತ ಯುವತಿಯೊಬ್ಬಳು ತನ್ನ ಗೆಳತಿಗೆ ಹೇಳುತ್ತಿರುತ್ತಾಳೆ."ನಂಗೆ ನಮ್ ಪಪ್ಪ ಅಂದ್ರೆ ತುಂಬ ಇಷ್ಟ,
ನನಗೋಸ್ಕರ ಎಷ್ಟು ಕಷ್ಟಪಟ್ಟಿದ್ದಾರೆ.
ವಯಸ್ಸಾದ್ರೂ ಕೆಲಸಕ್ಕೆ ಹೋಗೋದನ್ನ ಬಿಟ್ಟಿಲ್ಲ,..
ಈಗಲೂ ವಯಸ್ಸಾಗಿ ಕೆಲಸಕ್ಕೆ ಹೋಗೋರನ್ನ ಕಂಡರೆ ನಂಗೆ ಎಷ್ಟು Respect ಗೊತ್ತಾ..."
ಸಂಭಾಷಣೆ ಮುಂದುವರೆಯುತ್ತದೆ.
ಅಷ್ಟರಲ್ಲಿ Table clean ಮಾಡುವ 50 ವರ್ಷದ ಹಿರಿಯರೊಬ್ಬರು ಅತ್ತ ಬರುತ್ತಾರೆ.
ತನ್ನ ಮುಂದಿನ table ಶುಚಿಯಾಗಿಲ್ಲ ಎಂಬುದನ್ನರಿತ ಅದೇ ಯುವತಿ ಆತನನ್ನು ಕರೆದು ಹೇಳುತ್ತಾಳೆ.
"table ಸ್ವಲ್ಪನೂ clean ಇಲ್ಲ, ಸ್ವಲ್ಪ ನೀಟಾಗಿ clean ಮಾಡು, ಏನ್ ಕಣ್ಣು ಕಾಣ್ಸೋಲ್ವೆ??"
------------------------------------------
ಆತನೊಬ್ಬ ಪ್ರಸಿದ್ಧ ಮಂತ್ರಿ ಮಹಾಶಯ.ಯಾವುದೋ ಸಮಾರಂಭಕ್ಕೆ ಇಂಜಿನಿಯರಿಂಗ್ ಕಾಲೇಜೊಂದಕ್ಕೆ ಬಂದು ವಿದ್ಯಾರ್ಥಿಗಳೆದುರು ಭಾಷಣ ಬಿಗಿಯುತ್ತಿರುತ್ತಾನೆ.
"ಈ ನನ್ನ ಜನಸೇವೆಯ ಬದುಕು ನಂಗೆ ಬಹಳ ತೃಪ್ತಿ ತಂದಿದೆ, ಈ ನನ್ನ 25 ವರ್ಷಗಳ ರಾಜಕೀಯ ಜೀವನದಲ್ಲಿ ಬಡವರಿಗೆ ಮಾಡಿದ ಸೇವೆಯೇ ಇಂದು ಈ ಸ್ಥಾನದಲ್ಲಿ ಇರುವಂತೆ ಮಾಡಿದೆ"
ಭಾಷಣ ಮುಂದುವರೆಯುತ್ತದೆ.
ಅಷ್ಟರಲ್ಲಿ ಅಂಗವಿಕಲ ವಿಧ್ಯಾರ್ಥಿಯೊಬ್ಬ ಭಾಷಣ ಮಾಡುತ್ತಿದ್ದಲ್ಲಿಗೆ ಕುಂಟುತ್ತ ಹೋಗಿ ತನ್ನ ಮನವಿ ಪತ್ರ ಕೈಗಿಡುತ್ತಾನೆ.
ಅಲ್ಲೇ ಅದನ್ನು ಓದಿದ ಮಂತ್ರಿ ಹೇಳುತ್ತಾರೆ.
"ಈ ಬಡ ಅಂಗವಿಕಲ ವಿದ್ಯಾರ್ಥಿ ಕಾಲೇಜಿಗೆ ಬರಲು ಸಹಾಯವಾಗುವಂತೆ ಏನಾದರೂ ವ್ಯವಸ್ಥೆ ಮಾಡಿ ಎಂದು ಕೇಳಿರುತ್ತಾರೆ,
ನಾನು ಇದೀಗಲೇ ಈತನಿಗೆ ಒಂದು ಅಂಗವಿಕಲರ ತ್ರಿಚಕ್ರದ ಸ್ಕೂಟರನ್ನು ನನ್ನ ವತಿಯಿಂದ ನೀಡುತ್ತೇನೆ"
ನೆರೆದಿದ್ದ ಜನಗಳ ಕರತಾಡನ ಮುಗಿಲು ಮುಟ್ಟುತ್ತದೆ.
ಅದೇ ನಾಳೆ ವಿಧಾನ ಸೌಧಕ್ಕೆ BMTC ಬಸ್ಸು ಹಿಡಿದು ಆ ಅಂಗ ವಿಕಲ ವಿದ್ಯಾರ್ಥಿ ಹೋಗುತ್ತಾನೆ.
ಸಿಕ್ಕಾಬಟ್ಟೆ ಜನಜಂಗುಳಿ.
ಮಂತ್ರಿಯ assistant ಬಹಳ ಹೊತ್ತು ಈತನನ್ನು ಕಾಯಿಸಿ, ನಂತರ ವಿಚಾರವನ್ನು ಒಳಗೆ ತಿಳಿಸುವುದಾಗಿ ಹೋಗುತ್ತಾನೆ.
ಸ್ವಲ್ಪ ಹೊತ್ತಿನ ನಂತರ ಆ ಮಂತ್ರಿಯ ಕೊಠಡಿಯಿಂದ ಮಾತಿನ ಸದ್ದು ಸ್ಪಷ್ಟವಾಗಿ ಕೇಳುತ್ತದೆ.
"ಅಯ್ಯೋ ಅವನನ್ನ ಹೋಗೋಕೆ ಹೇಳ್ರಿ. ಇನ್ಯಾವತ್ತಾದ್ರೂ ಬರಲಿ, ಬಂದುಬಿಡ್ತಾರೆ ಜೀವ ತಿನ್ನೋದಕ್ಕೆ.
ಕರ್ನಾಟಕದಲ್ಲಿ ಹುಡುಕಿಕೊಂಡು ಹೋದ್ರೆ ಇಂಥವರು ಲಕ್ಷಾಂತರ ಜನ ಸಿಕ್ತಾರೆ, ನಾವೇನ್ ಮಾಡೋಕಾಗುತ್ತೆ ನಮ್ ಕೆಲಸ ನಮಗೆ. ನಮ್ CM ಬೇರೆ ಯಾವ್ದೋ ಕಷ್ಟದಲ್ಲಿ ಸಿಕ್ಕಿ ಹಾಕ್ಕೊಂಡು ಸರ್ಕಾರನೇ ಬೀಳುತ್ತೇನೋ ಅನ್ನೋ ಭಯದಲ್ಲಿ ಇದ್ದಾರೆ.
ಇದರ ಮಧ್ಯದಲ್ಲಿ ಈ ಅನಿಷ್ಟಗಳು ಬೇರೆ.........."
ಅಂಗವಿಕಲ ಹುಡುಗನ ಕಣ್ಣಲ್ಲಿ ನೀರು ಜಿನುಗುತ್ತದೆ.
------------------------------------------
Soooperinda marketinda majestic sisya!!!!
ReplyDeleteThanks Kiran:)
ReplyDelete