Monday, September 26, 2022

ಗುರುಶಿಷ್ಯರು (2022, Kannada)



ಅಲ್ಲೊಬ್ಬ ಎದುರಿನ ಪಾಳಯದಾತ ತನ್ನ ಹುಡುಗರಿಗೆ ಹೇಳುತ್ತಿರುತ್ತಾನೆ.

"ಅವರನ್ನು ಹೇಗಾದರೂ ಮಾಡಿ ಸೋಲಿಸಲೇಬೇಕು. ಸೋಲಿಸುವ ದಾರಿ ಹುಡುಕಿ"

ಇತ್ತಲಿನ ಪಾಳಯದ ಗುರು ತನ್ನ ಹುಡುಗರಿಗೆ ಹೇಳುತ್ತಿರುತ್ತಾನೆ

"ಗೆಲ್ಲುವ ದಾರಿ ಹುಡುಕಿ"

ಎರಡೂ ಒಂದೇ ಅನ್ನಿಸಿದರೂ ಒಂದೇ ಅಲ್ಲ! ಈ ಸಿನಿಮಾ ಕೂಡ ಅಷ್ಟೇ. ಉಳಿದ ಸಿನಿಮಾಗಳನ್ನು ಸೋಲಿಸಲು ಬಂದಿರುವ ಚಿತ್ರವಲ್ಲ. ಬದಲಿಗೆ ತಾನು ಯಾಕೆ ವಿಭಿನ್ನ, ವಿಶಿಷ್ಟವೆಂದು ತೋರಿಸಿ ಗೆಲ್ಲಲು ಬಂದಿರುವ ಸಿನಿಮಾ!

ಇನ್ನೊಂದು ಡೈಲಾಗಿದೆ. "ಅವಕಾಶ ಸಿಗದಿದ್ದರೆ ಅದು ಸೋಲಲ್ಲ. ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳದಿದ್ದರೆ ಅದು ನಿಜವಾದ ಸೋಲು" ಅಂತ! ಈ ಸಿನಿಮಾ ಕೂಡ ಅಷ್ಟೇ... ಅವಕಾಶ ಸಿಕ್ಕಾಗಲೆಲ್ಲ ನೋಡುಗರ ಎದೆಯಲ್ಲಿ ಮೌಲ್ಯಗಳನ್ನು ತುಂಬುವ ಕೆಲಸ ಮಾಡುತ್ತದೆ. "ಕೆಳಗೆ ಬಿದ್ದ ಎದುರಾಳಿಯನ್ನು ಸೋಲಿಸುವುದು ಕ್ರೀಡಾ ಮನೋಭಾವವಲ್ಲ" ಎಂದು ಅತ್ತ ಎದುರು ತಂಡದಿಂದಲೂ ಚಪ್ಪಾಳೆ ಬೀಳುತ್ತದೆ. ಇತ್ತ ಪ್ರೇಕ್ಷಕನ ಕೈ ಕೂಡ ಚಪ್ಪಾಳೆ ತಟ್ಟುತ್ತದೆ. ಹೀಗೆ ಎಲ್ಲೂ ಋಣಾತ್ಮಕ ಚಿಂತನೆಗಳಿಗೆ ಅವಕಾಶವನ್ನೇ ಕೊಡುವುದಿಲ್ಲ. ಬೀಳುವ ಸಮಯ ಬಂದಾಗಲೂ ತನ್ನದೇ ಸಾಮರ್ಥ್ಯದಿಂದ ಎದ್ದು ನಿಲ್ಲುತ್ತದೆ. ಬೇಸರದಲ್ಲಿ ಕುಳಿತ ಪ್ರೇಕ್ಷಕನು ಮುಷ್ಟಿ ಬಿಗಿ ಹಿಡಿದು "ಕಮಾನ್" ಎಂದು ಎದ್ದು ನಿಲ್ಲುತ್ತಾನೆ.

ನೀವು ಇದೊಂದು ಲವ್ ಸ್ಟೋರಿ ಅಂದುಕೊಂಡರೆ ಅದು ಅದೇ! ಅಥವಾ, ಕ್ರೀಡೆಯ ಬಗ್ಗೆ ಅಂದುಕೊಂಡರೆ ಅದೂ ಹೌದು! ಮಕ್ಕಳ ಸಿನಿಮಾ ಅಂದುಕೊಂಡರೆ ಅದೂ ಹೌದು! ಗುರು-ಶಿಷ್ಯರ ಸಂಬಂಧದ ಕಥೆ ಎಂದುಕೊಂಡರೆ ಅದೂ ಹೌದು. ಸ್ಪೂರ್ತಿ ತುಂಬುವ ಸಿನಿಮಾ ಅಂದುಕೊಂಡರೆ ಅದೂ ಹೌದು. ಮತ್ಯಾವುದು ಅಂತ ಕೇಳಿದರೆ ಇದೆಲ್ಲವೂ ಹೌದು. ಕಥೆಗಾರ ಈ ಎಲ್ಲ ಫ್ಲೇವರ್'ಗಳನ್ನು ತನ್ನ ಸಿನಿಮಾದಲ್ಲಿ ತರಲು ಕಷ್ಟಪಟ್ಟಿದ್ದಾನೆ.

ಹಾಸ್ಯನಟ ಎಂಬ ಬಿರುದು ಗಳಿಸುವಷ್ಟೇ ಕಷ್ಟ ಅದರಿಂದ ಬಿಡಿಸಿಕೊಂಡು ಹೊರಬರುವುದು. ಶರಣ್ ಈ ಸಿನಿಮಾದಲ್ಲಿ ಪಾತ್ರಕ್ಕೆ ಬೇಕಾದ್ದನ್ನಷ್ಟೇ ಮಾಡಿ, ತನ್ನೆಲ್ಲ ಹಾವಭಾವಗಳನ್ನು ಮೀರಿ ಕಲಾವಿದರಾಗಿ ಕಾಣಿಸಿಕೊಳ್ಳುತ್ತಾರೆ. ಮುಂದೆ ಅವರು ಯಾವುದೇ ಪಾತ್ರಕ್ಕೆ ತಕ್ಕ ಹಾಗೆ ಹೊಂದಿಕೊಳ್ಳಲಿ ಅನ್ನುವುದು ನನ್ನ ಆಶಯ. ನಿಶ್ವಿಕಾಗೆ ಬರೀ ಹೀರೋ ಹಿಂದೆ ಸುತ್ತುವುದಷ್ಟೇ ಕೆಲಸವಲ್ಲ. ದತ್ತಣ್ಣ ಅವರದು ಗುರುವಿನ ಪಾತ್ರದಲ್ಲಿ ಮನಸ್ಸಿಗೆ ಹತ್ತಿರವಾಗುವ ನಟನೆ. ಅಪೂರ್ವ ಕಾಸರವಳ್ಳಿ, ಸುರೇಶ್ ಹೆಬ್ಳೀಕರ್, ಮಹಾಂತೇಶ್ ಹೀರೇಮಠ್ ಅವರುಗಳ ಪಾತ್ರ, ನಟನೆ ಎರಡೂ ಸೂಪರ್.

ಇವರೆಲ್ಲರ ಕೆಲಸಕ್ಕಿಂತ ನೋಡುವವರಿಗೇ ಸುಸ್ತು ಮಾಡುವುದು ಮಾತ್ರ ಆ ಹುಡುಗರದ್ದು. ಈ ಸಿನಿಮಾದಲ್ಲಿ ಅದೇನು ನಟಿಸಿದ್ದಾರೋ ಅದು ಒತ್ತಟ್ಟಿಗಿರಲಿ. ಆದರೆ ಖೋಖೋ ಆಟ ಆಡಲು ಬಿಟ್ಟರೆ ಗ್ಯಾರಂಟಿ ಒಂದು ಮಟ್ಟಕ್ಕೆ ಅದ್ಭುತವಾಗಿ ಆಡಬಲ್ಲರು. ಅಷ್ಟು ಸಶಕ್ತವಾಗಿ ಅವರಿಗೆ ತಾಲೀಮು ನೀಡಲಾಗಿದೆ. ಅದೆಷ್ಟು ಬಿದ್ದರೋ? ಅದೆಷ್ಟು ಬೆವರು ಸುರಿಸಿದರೋ? ಅದೆಷ್ಟು ಮೈಕೈ ಗಾಯ ಮಾಡಿಕೊಂಡರೋ? ಈ ಸಿನಿಮಾದ ಪಯಣ ಅಷ್ಟೊಂದು ಸುಲಭದ್ದಾಗಿರಲಿಲ್ಲ ಎಂದು ಸಿನಿಮಾ ನೋಡುವಾಗಲೇ ಊಹಿಸಬಹುದು. ಈ ಸಿನಿಮಾಗಾಗಿ ತಮ್ಮನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡಿರುವ ಅವರೆಲ್ಲರ ಸಿನಿ ಭವಿಷ್ಯಕ್ಕೆ ಶುಭ ಕೋರೋಣ.

ಈ ಸಿನಿಮಾದುದ್ದಕ್ಕೂ ಸಿಕ್ಕಾಪಟ್ಟೆ ಭಾವಗಳ ಏರಿಳಿತಗಳಿವೆ. ಜೊತೆಗೆ ಶರಣ್ ಎಂಬ ಹೈ-ಎನರ್ಜಿ ಹಾಸ್ಯನಟನ ಉಪಸ್ಥಿತಿಯಿದೆ. ಹಾಗಾಗಿ ಅತ್ತ ನಗಿಸಬೇಕು, ಇತ್ತ ಉತ್ಸಾಹ ತುಂಬಬೇಕು. ಇನ್ನೊಂದು ದಿಕ್ಕಿನಿಂದ ಸವಾಲೆಸೆಯಬೇಕು. ಅಂತಹ ಮಾತು ಕಟ್ಟುವ ಕಠಿಣ ಸವಾಲನ್ನು ಸ್ವೀಕರಿಸಿ ಗೆದ್ದಿದ್ದಾರೆ ಸಂಭಾಷಣೆಕಾರ ಮಾಸ್ತಿ. ಕೆಲ ಕಡೆ ಮನಸ್ಸು ಹಗುರಾಗುವಷ್ಟು ನಗು ತರಿಸುವ ಸಾಲುಗಳಿದ್ದರೆ, ಸಿನಿಮಾದ ಬಹುತೇಕ ಕಡೆ ಚಪ್ಪಾಳೆ ತಟ್ಟಿಸಿಕೊಳ್ಳುವ, ಗೆಲ್ಲುವ, ಬದುಕುವ, ಕಷ್ಟ ಎದುರಿಸುವ, ಪ್ರೇರಣೆ ನೀಡುವ ಮಾತುಗಳಿವೆ. ಕೆಲ ಡೈಲಾಗುಗಳನ್ನು ನೀವು ಜನರ ಮಧ್ಯೆಯೇ ಕೂತು ಎಂಜಾಯ್ ಮಾಡಬೇಕು. ಬಹು ಮುಖ್ಯವಾಗಿ ಕಥೆಯ ಜೊತೆಯಲ್ಲೇ ಹಾಸ್ಯ ಬಂದಿದೆಯೇ ಹೊರತು, ಅದಕ್ಕಾಗಿಯೇ ಸಂದರ್ಭಗಳನ್ನು ಸೃಷ್ಟಿಸಿಲ್ಲ.

ಸಿನಿಮಾ ಬಿಡುಗಡೆಯಾಗುವ ಮೊದಲೇ ಗೆದ್ದಿದ್ದದ್ದು ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್. ಬಿಡುಗಡೆಯಾಗಿದ್ದು ಮೂರು ಹಾಡುಗಳು ನಾಲಿಗೆಯ ಮೇಲೆ ಹರಿದಾಡುವಷ್ಟು ಎಲ್ಲ ಕಡೆ ಕೇಳಿ ಬರುತ್ತಿದ್ದವು. ಆಗಲೇ ಈ ಸಿನಿಮಾದ ಪ್ರಚಾರ ಅರ್ಧ ಮುಗಿದಂತಿತ್ತು. ಸಿನಿಮಾ ನೋಡುವಾಗ ಕೆಲವು ಹೈವೋಲ್ಟೇಜ್ ದೃಶ್ಯಗಳಲ್ಲಿ ಅವರ ಹಿನ್ನೆಲೆ ಸಂಗೀತ ನಮ್ಮನ್ನು ಮಂತ್ರಮುಗ್ಧರನ್ನಾಗಿ ಮಾಡುತ್ತದೆ.

ಅದೊಂದು ದೃಶ್ಯವಿದೆ. "ನಮ್ಮನ್ನು ಊರವರು ಹೊರಗಿಟ್ಟರೂ, ಆ ಊರಿಗಾಗಿ ನಾವು ಏನು ಬೇಕಾದರೂ ಮಾಡಲು ಸಿದ್ಧ" ಅನ್ನುವ ಡೈಲಾಗು ನನಗೆ ಅದೆಷ್ಟು "ವ್ಹಾವ್" ಅನ್ನಿಸಿತು ಅಂದರೆ, ಸಿನಿಮಾವನ್ನೇನಾದರೂ ಒಂದೆರಡು ನಿಮಿಷ ನಿಲ್ಲಿಸುವ ಅವಕಾಶವಿದ್ದರೆ ನಿಲ್ಲಿಸಿ, ಮನಸಾರೆ ಚಪ್ಪಾಳೆ ಹೊಡೆದು ನಂತರ ಮುಂದುವರೆಸುತ್ತಿದ್ದೆ. ಅದು ನಿರ್ದೇಶಕ ಜಡೇಶ್ ಹಂಪಿ ಅವರ ಕೈಚಳಕವೋ, ಅಥವಾ ಮಾಸ್ತಿಯವರ ಕೈಚಳಕವೋ... ಆದರೆ ನಿಮ್ಮೆಲ್ಲ ಸಿನಿಮಾಗಳಲ್ಲಿ ಅವಕಾಶ ಸಿಕ್ಕುವಾಗೆಲ್ಲ ಹೀಗೆ ಕೆಲ ವಿಚಾರಗಳನ್ನು ಹೇಳುವ ಸಂವೇದನೆ ನಿಮ್ಮಲ್ಲಿ ಸದಾ ಜಾಗೃತವಾಗಿರಲಿ ಎಂದು ಆಶಿಸುತ್ತೇನೆ.

ಈ ಸಿನಿಮಾವನ್ನು ಕೆಲ ಬಾಲಿವುಡ್ ಸಿನಿಮಾಗಳಿಗೆ ಹೋಲಿಸಲು ಮನಸ್ಸಾಗದು. ಬಹುಶಃ ಅದು ಈ ಸಿನಿಮಾಗೆ ಮಾಡುವ ಅವಮಾನವಾಗಬಹುದು. ಜನಪ್ರಿಯ ಅನ್ನಿಸಿಕೊಂಡ ಬಾಸ್ಕೆಟ್'ಬಾಲ್, ಫುಟ್ಬಾಲ್, ಕ್ರಿಕೆಟ್ ಆಟಗಳ ಮಧ್ಯೆ ನಮ್ಮವೇ ಅನ್ನಿಸಿಕೊಂಡ ಖೋಖೋ ರೀತಿಯ ಆಟಗಳು ನೇಪಥ್ಯಕ್ಕೆ ಸರಿದಿದ್ದರ ಬಗ್ಗೆ, ಅದನ್ನು ಆಡಿ ಚಾಂಪಿಯನ್ ಆದವರು ನಂತರ ಏನೂ ಇಲ್ಲ ಅನ್ನುವಂತಾಗಿದ್ದರ ಬಗ್ಗೆ ಸಿನಿಮಾ ವಿಷಾದ ವ್ಯಕ್ತಪಡಿಸುತ್ತದೆ. ಈ ಮೂಲಕ ದೇಸೀ ಕ್ರೀಡೆಗಳ ಬಗ್ಗೆ, ಆ ಆಟಗಾರರ ಬಗ್ಗೆ ನಮ್ಮೆಲ್ಲರ ಹಾಗೂ ಸಂಬಂಧಪಟ್ಟವರ ಗಮನ ಸೆಳೆಯುವಂತೆ ಈ ಸಿನಿಮಾ ಮಾಡಬಲ್ಲದು.

ಒಂದು ಚಂದದ ಸಿನಿಮಾ ಮುಗಿದ ಬಳಿಕವೂ ನಿಮಗೆ ಅದರ ಹೀರೋ ಯಾರು ಅಂತ ಹೇಳಲು ಕಷ್ಟವಾದರೆ ಅದಕ್ಕೆ ಕಾರಣ ಆ ಸಿನಿಮಾದ ಎಲ್ಲರೂ ಕೇವಲ ಪಾಲುದಾರರಾಗಿ ಕೆಲಸ ಮಾಡಿದ್ದಾರೆ ಅಂತರ್ಥ. ಗುರುಶಿಷ್ಯರು ಅದಕ್ಕೊಂದು ಉತ್ತಮ ಉದಾಹರಣೆ.

ಕ್ರೀಡೆಯ ಬಗೆಗಿನ ಸಿನಿಮಾ ಅಂದುಕೊಂಡರೂ ಇದು ನಾವಂದುಕೊಂಡಷ್ಟು ಸುಲಭವಲ್ಲ. ಆ ಕ್ರೀಡೆಯ ಬಗ್ಗೆ ನಿರ್ದೇಶಕ ಮತ್ತು ಆತನ ತಂಡ ಒಳ್ಳೆಯ ರೀಸರ್ಚ್ ಮಾಡಿರಬೇಕು. ಆ ಆಟದ ಒಳ-ಹೊರಗನ್ನು ಅಭ್ಯಯಿಸಿರಬೇಕು. ಸಿನಿಮಾದುದ್ದಕ್ಕೂ ಅನೇಕ ಪಂದ್ಯಗಳು ನಡೆಯುವುದರಿಂದ ಪ್ರತೀ ಪಂದ್ಯಕ್ಕೂ ಅವವೇ ದೃಶ್ಯಗಳನ್ನು ಹಾಕಲಾಗದು. ಪ್ರತೀ ಪಂದ್ಯವನ್ನೂ ಬೇರೆ ಬೇರೆ ರೀತಿಯ ಸನ್ನಿವೇಶಗಳ ಮೂಲಕ ರೋಚಕವಾಗಿಡಬೇಕು. ಈ ದೃಶ್ಯಗಳನ್ನು ಮನಸ್ಸಿಗೆ ನಾಟುವಂತೆ ಚಿತ್ರೀಕರಿಸಲಾಗಿದೆ. ಮಾಮೂಲಿ ಸಿನಿಮಾಗಳ ಚಿತ್ರೀಕರಣಕ್ಕೂ ಕ್ರೀಡೆಗಳ ಬಗೆಗಿನ ಸಿನಿಮಾಗಳ ಚಿತ್ರೀಕರಣಕ್ಕೂ ವ್ಯತ್ಯಾಸವಿದೆ. ಈ ಸಿನಿಮಾದಲ್ಲಿ ಬರುವ ಖೋಖೋ ಆಟಗಳು ನಿಮ್ಮನ್ನು ಮೈಮರೆಸಿದವು ಅಂದರೆ ಕ್ಯಾಮೆರಾ ಹಿಂದೆ ನಿಂತ ಅರೂರ್ ಸುಧಾಕರ್ ಶೆಟ್ಟಿ ಅವರಿಗೆ ಒಂದು ಶಹಬ್ಬಾಷ್ ಹೇಳಲೇಬೇಕು.

ಹೆಚ್ಚು-ಕಡಿಮೆ ಎರಡೂ-ಮುಕ್ಕಾಲು ತಾಸಿನ ಸಿನಿಮಾ ಒಂದು ಕ್ಷಣ ಕೂಡ ಬೇಸರವಾಗದಂತೆ ನೋಡಿಸಿಕೊಳ್ಳುತ್ತದೆ ಅಂದರೆ ಅದಕ್ಕಿಂತ ಬೇರೇನೂ ಹೇಳುವುದು ಬೇಕಿಲ್ಲ. ಸಿನಿಮಾದ ಕಥೆ ಹೇಳುತ್ತಲೇ ಅನೇಕ ವಿಚಾರಗಳನ್ನು ಹೇಳಲು ಪ್ರಯತ್ನಿಸುವ ಜಡೇಶ್ ಕೆ ಹಂಪಿ ಅವರ ಬಗ್ಗೆ ನನಗೆ ಅಪಾರ ಮೆಚ್ಚುಗೆ. ಇವರು ಇನ್ನಷ್ಟು ಒಳ್ಳೆಯ ಸಿನಿಮಾಗಳನ್ನು ನಮಗೆ ಕೊಡಬಲ್ಲರು ಎಂಬ ಭರವಸೆ ಮೂಡಿಸುತ್ತಾರೆ. ಈ ನಿರ್ದೇಶಕನ ಬಗ್ಗೆ "ಜಂಟಲ್ ಮ್ಯಾನ್" ಸಿನಿಮಾದಿಂದ ಹುಟ್ಟಿಕೊಂಡ ನಂಬಿಕೆ ಈ ಸಿನಿಮಾದಲ್ಲೂ ಮುಂದುವರೆದು ಮುಂದಿನ ದಿನಗಳಲ್ಲಿ ಇವರ ಸಿನಿಮಾಗಳಿಗೆ ಖಂಡಿತವಾಗಿ ಪ್ರೇಕ್ಷಕರು ಕಾಯಬಲ್ಲರು.

ಒಳ್ಳೆಯ ನಿರ್ದೇಶಕನನ್ನು, ಒಳ್ಳೆಯ ಪಾತ್ರವರ್ಗವನ್ನು, ಒಳ್ಳೆಯ ಕಥೆಯನ್ನು ಆಯ್ದುಕೊಂಡು ಇಂಥದ್ದೊಂದು ಒಳ್ಳೆಯ ಸಿನಿಮಾವನ್ನು ತಮ್ಮ ನಿರ್ಮಾಣ ಸಂಸ್ಥೆಯ ಮೂಲಕ ನೀಡಿದ ತರುಣ್ ಸುಧೀರ್ ಅವರಿಗೆ ಅಭಿನಂದನೆಗಳು... ಇನ್ನು ಮುಂದೆಯೂ ಅವರ ನಿರ್ಮಾಣದಲ್ಲಿ ಒಳ್ಳೆಯ ಸಿನಿಮಾಗಳನ್ನು ಪ್ರೇಕ್ಷಕ ಕಾಣುವಂತಾಗಲಿ.

-Santhosh Kumar LM
26-Sep-2022



No comments:

Post a Comment

Please post your comments here.