Wednesday, December 28, 2022

Jaya Jaya Jaya Jaya Hey (Malayalam, 2022)

 


Jaya Jaya Jaya Jaya Hey (Malayalam, 2022)

ಅವಳು ಹೆಣ್ಣು. ಅದಕ್ಕಾಗಿಯೇ ಅವಳನ್ನು ಅವಳು ಕಾಪಾಡಿಕೊಳ್ಳುವ ಶಕ್ತಿಯಿದ್ದರೂ ಹೆಣ್ಣೆಂಬ ಕಾರಣಕ್ಕೆ ಅವಳ ರಕ್ಷಣೆಗೆ ನಾವು (ಪುರುಷಪ್ರಧಾನ ಸಮಾಜ) ನಿಲ್ಲುತ್ತೀವಿ. ಅವಳಿಗೆ ತನಗೇನು ಬೇಕು ಅಂತ ಗೊತ್ತು. ಆದರೂ ಅವಳಿಗೇನು ಬೇಕು ಅಂತ ನಾವು ನಿರ್ಧರಿಸ್ತೀವಿ. ಅವಳಿಗೆ ಯಾರ ಜೊತೆ ಮಾತನಾಡಬೇಕು, ಹೇಗೆ ಮಾತನಾಡಬೇಕು ಅಂತ ಕಲಿತುಕೊಳ್ಳಬಲ್ಲಳು. ಆದರೂ ಆಕೆ ಹೆಣ್ಣು ಎಂಬ ಕಾರಣದಿಂದ ನಾವೇ ಅವಳು ಯಾರೊಂದಿಗೆ ಮಾತನಾಡಬೇಕು ಅನ್ನುವುದನ್ನು ಡಿಸೈಡ್ ಮಾಡ್ತೀವಿ. ನಮಗೆ ಗೊತ್ತಿರದಿದ್ದರೂ ಅನೇಕ ವಿಷಯಗಳಲ್ಲಿ ಅವಳಿಗಿಂತ ಮುಂದೆ ಹೋಗಿ ಅವಳಿಗಾಗಿ ಕೆಲವು ಕಟ್ಟುಪಾಡುಗಳನ್ನು ವಿಧಿಸುತ್ತೇವೆ. ಏಕೆಂದರೆ ಆಕೆ ಹೆಣ್ಣಲ್ಲವೇ. ನಾವು ಮಾಡುವುದೆಲ್ಲ ಅವಳಿಗಾಗಿ ತಾನೇ? ಹಾಗಾಗಿ ಅವಳಿಗೆ ಅವುಗಳಿಂದ ತೊಂದರೆಯಾಗುತ್ತಿದ್ದರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಕಡೆಗೆ ನಾವು ತೆಗೆದುಕೊಂಡ ನಿರ್ಧಾರಗಳು ಅವಳಿಗೆ ಕುತ್ತಾದರೂ ಅದಕ್ಕೆ ಹೆಚ್ಚು ನೊಂದುಕೊಳ್ಳುವುದಿಲ್ಲ. ಏಕೆ ಹೇಳಿ? ಅವೆಲ್ಲ ಅವಳ ಒಳಿತಿಗಾಗಿ ತೆಗೆದುಕೊಂಡ ನಿರ್ಧಾರಗಳು ತಾನೇ?

ಇವೆಲ್ಲವನ್ನೂ ಮಾಡುವಾಗ ಅವಳಿಗೆ ಸಿಗಬೇಕಾದ ಸಮಾನತೆ, ಸ್ವಾತಂತ್ರ್ಯತೆ, ನ್ಯಾಯದ ಬಗ್ಗೆ ಕಿಂಚಿತ್ತೂ ಯೋಚಿಸಿರುವುದಿಲ್ಲ. ಏಕೆಂದರೆ ಇವೆಲ್ಲವನ್ನೂ ಕಿತ್ತುಕೊಂಡೇ ಉಳಿದ ಒಳಿತಿನ ಬಗ್ಗೆ ಯೋಚಿಸುತ್ತೇವೆ. ಎಷ್ಟು ಹಾಸ್ಯಾಸ್ಪದ ಅಲ್ಲವೇ?

ಹೊರಗೆ ಹೋಗಿ ಸಂಪಾದನೆ ಮಾಡುತ್ತೇವೆ ಅನ್ನೋ ಕಾರಣಕ್ಕೆ ಮನೆಯೊಳಗಿನ ಹೆಂಡತಿ ಗಂಡನಿಗೆ ತಗ್ಗಿ ಬಗ್ಗಿ ನಡೆಯಬೇಕು. ನಾಲ್ಕು ಬಿಗಿದರೂ ಆಕೆ ಮರುಮಾತಾಡದೆ ಸಹಿಸಿಕೊಳ್ಳಬೇಕು. ಮನೆಯನ್ನೂ ಸಂಭಾಳಿಸಿ, ಹೊರಗೆ ಕೆಲಸವನ್ನೂ ಮಾಡುತ್ತೇನೆ ಅಂದಳಾ? ಮುಗೀತು. ಏಕೆಂದರೆ ನಮ್ಮ ಪುರುಷ ಅಹಮ್ಮಿನ ಬುಡಕ್ಕೇ ಅದು ಕೊಡಲಿಯೇಟು ನೀಡುತ್ತದೆ. ನಿನ್ನ ದುಡ್ಡಿನಲ್ಲಿ ನಾನು ತಿನ್ನಬೇಕಾ ಅಂತ! ಜೊತೆಗೆ ಅವಳಿಗೆ ಆರ್ಥಿಕ ಸ್ವಾತಂತ್ರ್ಯ ಸಿಕ್ಕರೆ ಮುಗೀತು. ನನ್ನ ನಿಯಂತ್ರಣಕ್ಕೆ ಎಲ್ಲಿ ಸಿಕ್ಕಾಳು? ಅಲ್ಲವೇ?! ಎಲ್ಲ ವಿಷಯಗಳಲ್ಲೂ ಅವಳನ್ನು ಕಟ್ಟಿಹಾಕಿ ಕಡೆಗೊಮ್ಮೆ ಅವಳಿಗೆ ಏನೂ ಬರುವುದಿಲ್ಲವೆಂದು ಹಣೆಪಟ್ಟಿ ಕಟ್ಟಿದರಾಯಿತು.

ನಾವೆಲ್ಲ ಮುಂದಿನ ಪೀಳಿಗೆಯಲ್ಲಿದ್ದೇವೆ. ಎಲ್ಲೂ ಹೀಗೆ ನಡೆಯುತ್ತಿಲ್ಲ ಅಂದುಕೊಂಡರೆ ಅದು ಭ್ರಮೆಯಷ್ಟೇ. ಅನೇಕ ಕಡೆ ಇಷ್ಟಿಲ್ಲದಿದ್ದರೂ ಇದರ ಅರ್ಧದಷ್ಟಾದರೂ ಅವಳು ಹಾಗೇ ಇದ್ದಾಳೆ. ಅನೇಕ ಮನೆಗಳಲ್ಲಿ ಅವಳಿಗೆ ತನ್ನ ಮನೆಯವರಿಂದಲೇ ಸ್ವಾತಂತ್ರ್ಯ ಸಿಗದೆ "ಮದುವೆಯಾದರೆ ಸಾಕು" ಅಂತ ತಾನೇ ಅಂದುಕೊಂಡಿರುತ್ತಾಳೆ. ಮುಂದೆ ಅವಳು ಮದುವೆಯಾದ ಮನೆಯಲ್ಲೂ ಹೀಗೇ ಆದರೆ?

ಹೀಗೊಂದು ಕಥೆಯನ್ನು ಸಿನಿಮಾದಲ್ಲಿ ಅಳವಡಿಸಿಕೊಳ್ಳೋಣ ಅಂದುಕೊಂಡರೆ ಅದೆಷ್ಟು ಗೋಳಿನ ಸಿನಿಮಾವಾದೀತು ತಾನೇ? ಖಂಡಿತ ಇಲ್ಲ. ನಮ್ಮೆಲ್ಲ ಊಹೆಯನ್ನು ಮೀರಿ ಎರಡೂವರೆ ಘಂಟೆ ಪೂರ್ತಿ ನಕ್ಕು ನಗಿಸುವ ಕಥೆಯನ್ನಿಟ್ಟು ಸಿನಿಮಾ ಮಾಡಿದ್ದಾರೆ ನಿರ್ದೇಶಕ ವಿಪಿನ್ ದಾಸ್ (Vipin Das). ಮೇಲೆ ಮೇಲೆ ಪ್ರತೀ ದೃಶ್ಯದಲ್ಲೂ ನಾವು ನಗುತ್ತಿದ್ದರೆ ನಮ್ಮೊಳಗಿನ ಅವನು ತನ್ನ ಮೇಲೆ ತಾನೇ ನಾಚಿಕೆಪಟ್ಟುಕೊಳ್ಳುತ್ತಾನೆ. ಅನೇಕ ಸಲ ಗಂಭೀರವಾಗಿ ಹೇಳಲಾಗದ ವಿಷಯಗಳನ್ನು ಹಾಸ್ಯದ ಮೂಲಕವೇ ಮನಮುಟ್ಟುವಂತೆ ಹೇಳಬಹುದು. ಅದಕ್ಕೊಂದು ಒಳ್ಳೆಯ ಉದಾಹರಣೆ "ಜಯ ಜಯ ಜಯ ಜಯ ಹೇ" ಸಿನಿಮಾ.

ಇಷ್ಟರವರೆಗೂ ಬರೆದಿದ್ದೆಲ್ಲ ಈ ಸಿನಿಮಾದ ಪೂರ್ತಿ ಕಥೆಯಲ್ಲ. ಬರೀ ಆರಂಭ ಅಷ್ಟೇ. ಮೊದಲ ಇಪ್ಪತ್ತು ನಿಮಿಷ ಯಾವುದೋ ಗೋಳಿನ, ಸಾಮಾಜಿಕ ಸಂದೇಶವುಳ್ಳ ಸಿನಿಮಾ ನೋಡುತ್ತೀವೇನೋ ಅನ್ನುವ ಭಾಸವಾಗುತ್ತಿರುವಂತೆಯೇ ಇದ್ದಕ್ಕಿದ್ದ ಹಾಗೆ ಸಿನಿಮಾ ತನ್ನ ದಿಕ್ಕು ಬದಲಿಸುತ್ತದೆ. ಅಲ್ಲಿಂದ ನಿಜವಾದ ಮನರಂಜನೆ. ಇಲ್ಲಿರುವ ಹಾಸ್ಯವೂ ಅಷ್ಟೇ. ಸಿಲ್ಲಿ ಅನ್ನಿಸುವುದಿಲ್ಲ. ಸಿನಿಮಾದೊಳಗಿನ ಪಾತ್ರಧಾರಿ ನಗದಿದ್ದರೂ ಅವನನ್ನು ನೋಡುತ್ತಿರುವ ನಾವು ಮಾತ್ರ ಬಿದ್ದೂ ಬಿದ್ದೂ ನಗುತ್ತಿರುತ್ತೇವೆ. ಸಿನಿಮಾ ನೋಡುವಾಗ ನಕ್ಕೂ ನಕ್ಕೂ, ಸಿನಿಮಾ ಮುಗಿದ ಮೇಲೆ ಅದರೊಳಗಿನ ವಿಷಯದ ಬಗ್ಗೆ ಮತ್ತೆ ಮತ್ತೆ ಯೋಚಿಸುತ್ತೇವೆ. ಅದು ಸಿನಿಮಾ ಗೆದ್ದ ಸೂಚನೆ.

ಚಿಕ್ಕಮಕ್ಕಳನ್ನು ಬೇಕಾದರೂ ಜೊತೆಯಲ್ಲಿ ಕೂರಿಸಿಕೊಂಡು ನೋಡುವ ರೀತಿ ಸಿನಿಮಾ ಕಟ್ಟಿಕೊಡಲಾಗಿದೆ. ಈ ಸಿನಿಮಾದ ವಿಶೇಷವೆಂದರೆ ಇದರ ಸಬ್ಜೆಕ್ಟ್ ಮೆಸೇಜ್ ಕೊಡುವಂತಿದ್ದರೂ ಇಡೀ ಕುಟುಂಬದ ಸಮೇತ ಕುಳಿತು ಮನಬಂದಂತೆ ನಗುತ್ತ ನೋಡುವಂತೆ ಕಥೆ ಹೆಣೆಯಲಾಗಿದೆ. ದರ್ಶನ ರಾಜೇಂದ್ರನ್ (Darshana Rajendran) ಮತ್ತು ಬ್ಯಾಸಿಲ್ ಜೋಸೆಫ್ (Basil Joseph) ಅವರದು ಸಂಪೂರ್ಣ ಮೈಮರೆಸುವ ಅಭಿನಯ. ಈ ಚಿತ್ರಕಥೆ ಬರೆದ ರೀತಿ, ಅದನ್ನು ಕಾರ್ಯಗತಗೊಳಿಸಿರುವ ರೀತಿ ನಿಜಕ್ಕೂ ಖುಶಿಕೊಡುವಂಥದ್ದು. ಎಲ್ಲರೂ ನೋಡಲೇಬೇಕಾದ, ನೋಡಿ ಆನಂದಿಸಬೇಕಾದ, ಮುಗಿದ ಮೇಲೆ ಅಲೋಚಿಸಬೇಕಾದ ಸಿನಿಮಾ.

ಖಂಡಿತವಾಗಿ ಈ ವರ್ಷದ ಮಿಸ್ ಮಾಡಿಕೊಳ್ಳಬಾರದ ಸಿನಿಮಾಗಳ ಪಟ್ಟಿಯಲ್ಲಿ ಇದೂ ಸೇರಿಕೊಳ್ಳುತ್ತದೆ. ನೋಡಬೇಕೆನ್ನುವವರಿಗೆ Hotstar ನಲ್ಲಿದೆ. ನೋಡಿ!

-Santhoshkumar LM
28-Dec-2022







Friday, December 2, 2022

ಧರಣಿ ಮಂಡಲ ಮಧ್ಯದೊಳಗೆ (Kannada, 2022)

ಪ್ರೀತಿಯಿದೆಕೋ, ನೀತಿಯಿದೆಕೋ
ಹಲವು ಕಥೆಗಳ ಸುರುಳಿಯಿದೆಕೋ
ಪ್ರೇಕ್ಷಕಪ್ರಭು ನೀನಿದೆಲ್ಲವನುಂಡು ಸಂತಸದಿಂದಿರು.........


-ಧರಣಿ ಮಂಡಲ ಮಧ್ಯದೊಳಗೆ!



🍀🍀🍀🍀🍀🍀🍀


ಧರಣಿ ಮಂಡಲ ಮಧ್ಯದೊಳಗೆ! (ಕನ್ನಡ, 2022)


ಈ ಸಿನಿಮಾದಲ್ಲಿ ನೂರಾರು ಪಾತ್ರಗಳಿವೆ. ಯಾವ ಪಾತ್ರದ ಹೆಸರನ್ನೂ ನಾವು ನೆನಪಿನಲ್ಲಿಟ್ಟುಕೊಳ್ಳುವ ಅಗತ್ಯವಿಲ್ಲ. ಏಕೆಂದರೆ ಕಥೆಯೇ ಯಾವುದೇ ಗೊಂದಲವಿರದಂತೆ ಎಲ್ಲವನ್ನೂ ಸ್ಪಷ್ಟವಾಗಿ ಹೇಳಿ ಮುಗಿಸುತ್ತದೆ. ಅಷ್ಟು ಪಾತ್ರಗಳಿದ್ದರೂ ಈ ಸಿನಿಮಾದ ಹೀರೋ ಯಾರೆಂದರೆ ನೀವು ಯಾರೆಂದು ಹೇಳಲಾಗುವುದಿಲ್ಲ. ಇಲ್ಲಿ ಯಾರೂ ಹೀರೋ ಅಲ್ಲ. ಆದರೆ ಪ್ರಮುಖ ಎನಿಸುವ ಅನೇಕ ಪಾತ್ರಗಳಿವೆ. ವ್ಹಾವ್ ಅನ್ನಿಸುವ ಸಿನಿಮಾವೊಂದರ ಭಾಗವಾಗಿದ್ದಕ್ಕೆ ಕಾರಣರಾದ ಎಲ್ಲ ಕಲಾವಿದರಿಗೆ ನಾವು ಮೆಚ್ಚುಗೆ ಸೂಚಿಸಬೇಕು.


ಮೊನ್ನೆಯಷ್ಟೇ ತಮಿಳಿನ ಲೋಕೇಶ್ ಕನಕರಾಜ್ ಚೊಚ್ಚಲ ನಿರ್ದೇಶನದ ಸಿನಿಮಾ ಮಾನಗರಮ್(೨೦೧೭) ನೋಡಿದೆ. ಅಲ್ಲಿನ ಚಿತ್ರಕಥೆ ಹೆಣೆದ ರೀತಿ ವ್ಹಾವ್ ಅನ್ನಿಸಿತ್ತು. ಈ ಥರದ ಸಿನಿಮಾ ನಮ್ಮಲ್ಲಿ ಬರಲಿ ಅಂದುಕೊಳ್ಳುವಷ್ಟರಲ್ಲಿ ಉತ್ತರವಾಗಿ "ಧರಣಿ ಮಂಡಲ ಮಧ್ಯದೊಳಗೆ" ಸಿನಿಮಾ ಬಂದಿದೆ. ಕಾಕತಾಳೀಯವೆಂಬಂತೆ ಈ ಸಿನಿಮಾದ ನಿರ್ದೇಶಕ ಶ್ರೀಧರ್ ಶಿಕಾರಿಪುರ ಅವರಿಗೂ ಇದು ಚೊಚ್ಚಲ ನಿರ್ದೇಶನದ ಸಿನಿಮಾ. ಸಿನಿಮಾ ನೋಡಿದ ಮೇಲೆ ಹಾಗೆಂದು ನಂಬಲು ಸಾಧ್ಯವಾಗುವುದಿಲ್ಲ. ಏಕೆಂದರೆ ಈ ಸಿನಿಮಾದ ಚಿತ್ರಕಥೆಯನ್ನೊಮ್ಮೆ ನೆನಪಿಸಿಕೊಂಡರೆ ಅದನ್ನು ಹೆಣೆಯಲು ಅದೆಷ್ಟು ಮೆದುಳಿಗೆ ಕೆಲಸ ಕೊಟ್ಟಿರಬಹುದು ಅಂತ ಅಚ್ಚರಿಯಾಗುತ್ತದೆ. ಹೈಪರ್'ಲಿಂಕ್ ಚಿತ್ರಕಥೆಯ ಮಾದರಿಯಲ್ಲಿ ಚಿತ್ರಕಥೆ ಬರೆದಿರುವ ಸಿನಿಮಾ ಇದು. ನಿರ್ದೇಶಕರ ಜೊತೆಗೆ ಇಂಥದ್ದೊಂದು ಕುತೂಹಲಕಾರಿ ಚಿತ್ರಕಥೆಗೆ ಸೂಕ್ತ ಅನ್ನಿಸಿಕೊಳ್ಳುವ ಸಂಗೀತ ಕೊಟ್ಟಿರುವ ರೊನಾಡ ಬಕ್ಕೇಶ್, ಮತ್ತು ಅಷ್ಟೆಲ್ಲ ಸಂಕೀರ್ಣವಾದ ಚಿತ್ರಕಥೆಯನ್ನು ಸರಿಯಾಗಿ ಜೋಡಿಸಿರುವ ಸಂಕಲನಕಾರ ಉಜ್ವಲ್ ಚಂದ್ರ ಅವರಿಗೆ ಅಭಿನಂದನೆಗಳು.


ಒಂದಷ್ಟು ಕಥೆಗಳು ಒಟ್ಟೊಟ್ಟಿಗೆ ಶುರುವಾಗುತ್ತವೆ. ಮೊದಲ ನಲ್ವತ್ತು ನಿಮಿಷಗಳಲ್ಲಿ ಒಂದಾದ ಮೇಲೆ ಒಂದೊಂದು ಕಥೆಗಳು ಪರಿಚಯವಾಗುತ್ತ ಹೋದಂತೆ "ಏನಾಗ್ತಾ ಇದೆ. ಒಂದಕ್ಕೊಂದಕ್ಕೆ ಲಿಂಕೇ ಇಲ್ಲ" ಅಂತ ಮೂಗುಮುರಿಯುವ ಹೊತ್ತಿಗೆ ಒಮ್ಮೆಲೇ ಒಂದು ಜಾಗದಲ್ಲಿ ಅವೆಲ್ಲವನ್ನು ಒಟ್ಟಿಗೆ ಸೇರಿಸುತ್ತಾನೆ ನಿರ್ದೇಶಕ. ನೋಡುವಾಗ ಇದಕ್ಕಿದ್ದಂತೆ "ವ್ಹಾವ್" ಅನ್ನಿಸುತ್ತದೆ. ನಂತರದ್ದು ಸಿನಿಮಾ ಮುಗಿಯುವವರೆಗೆ ಸಂಪೂರ್ಣ ಥ್ರಿಲ್ಲರ್ ಪಯಣ. ಅವೆಲ್ಲ ಕಥೆಗಳನ್ನು ಹೇಳುವಾಗ ಅವೆಲ್ಲವೂ ಒಂದೇ ವಿಷಯದಲ್ಲಿ ಸಂಧಿಸುವಾಗ, ಅಥವ ಒಂದೇ ಜಾಗದಲ್ಲಿ ಸಂಧಿಸುವಾಗ ಚಿತ್ರಕಥೆ ಬರೆದವರ ಬಗ್ಗೆ ಮೆಚ್ಚುಗೆಯಾಗದೆ ಇರದು. ಶ್ರೀಧರ್ ಶಿಕಾರಿಪುರ, ನಿಮ್ಮ ಕೆಲಸ ಹೀಗೇ ಮುಂಂದುವರೆಯಲಿ. ಸಿನಿಮಾ ಮುಗಿದ ಮೇಲೊಮ್ಮೆ ಮೆಲುಕು ಹಾಕಿ ನೋಡಿದರೆ ಕಥೆಯಲ್ಲಿ ಬರುವ ಪ್ರತಿ ಪಾತ್ರಗಳು ಒಂದನ್ನೊಂದು ಎಲ್ಲಿಯಾದರೂ ಸಂಧಿಸುತ್ತವೆ.


ಮಧ್ಯಂತರಕ್ಕೆ ಮುನ್ನ ಒಂದು ದೃಶ್ಯವಿದೆ. ಮೊದಲ ಬಾರಿಗೆ ಡ್ರಗ್ಸ್'ನ ಬಳಸುವ ಯುವಕನೊಬ್ಬನ ಅನುಭವ ಹೇಳುವಂಥದ್ದು. ಅಲ್ಲಿನ ಕಥೆಯನ್ನು ನಿರೂಪಿಸಿರುವ ರೀತಿಗೆ ನಿಜಕ್ಕೂ ಹ್ಯಾಟ್ಸಾಫ್ ಹೇಳಲೇಬೇಕು. ನಿರ್ದೇಶಕರು ಅಕ್ಷರಶಃ ಆ ದೃಶ್ಯವನ್ನು ನಮಗೆ ಕಟ್ಟಿಕೊಟ್ಟಿದ್ದಾರೆ. ಆ ದೃಶ್ಯದಲ್ಲಿ ಸಿದ್ದು ಮೂಲಿಮನಿ ಅನ್ನುವ ಹುಡುಗ ತನ್ನ ಅದ್ಭುತ ಅಭಿನಯದಿಂದ ಗಮನ ಸೆಳೆಯುತ್ತಾನೆ. ಆ ದೃಶ್ಯ ಮುಗಿಯುವ ಹೊತ್ತಿಗೆ ಎಲ್ಲಿಗೋ ಹೋಗಿ ಬಂದಂತೆ ಭಾಸವಾಗುತ್ತದೆ. ಗುಲ್ಟೂ ಸಿನಿಮಾ ನೋಡಿದ್ದಾಗಲೇ ನವೀನ್ ಶಂಕರ್ ಇಷ್ಟವಾಗಿದ್ದರು. ಈ ಸಿನಿಮಾದಲ್ಲಿ ಅವರನ್ನು ನೋಡಿದ ಮೇಲೆ ಅವರ ಸ್ಕ್ರಿಪ್ಟ್ ಆಯ್ಕೆಗಳ ಬಗ್ಗೆ ಮೆಚ್ಚುಗೆಯಾಗುತ್ತದೆ. ಏಕೆಂದರೆ ತನಗೆ ಕಥೆಯಲ್ಲಿ ಏನಿದೆ ಅಂತ ಹೋಗುವುದಕ್ಕಿಂತ ಕಥೆಗೆ ತಾನೇನು ಕೊಡುಗೆ ನೀಡಬಲ್ಲೆ ಅನ್ನುವ ಕಲಾವಿದರು ಈಗ ನಮ್ಮೆಲ್ಲರಿಗೂ ಬೇಕು. ಖಳನ ಪಾತ್ರಗಳಲ್ಲೇ ಕಾಣಿಸಿಕೊಳ್ಳುತ್ತಿದ್ದ ಯಶ್ ಶೆಟ್ಟಿಗೆ ಇಲ್ಲಿ ಬೇರೆಯದೇ ಛಾಯೆಯಿರುವ ನಮಗೆಲ್ಲರಿಗೂ ಇಷ್ಟವಾಗುವ ಪಾತ್ರವಿದೆ. ಸಿನಿಮಾದಲ್ಲಿ ಇಷ್ಟವಾದ ಮತ್ತೊಂದು ಅಬ್ಬರಿಸಿ ಭಯಪಡಿಸುವ ಖಳನ ಪಾತ್ರ ಬಾಲ ರಾಜ್ವಾಡಿಯವರದು. ಈಗಾಗಲೇ ಹೇಳಿದಂತೆ ಈ ಸಿನಿಮಾದಲ್ಲಿ ನವೀನ್ ಶಂಕರ್, ಐಶಾನಿ ಶೆಟ್ಟಿ, ಯಶ್ ಶೆಟ್ಟಿ, ಸಿದ್ದು ಮೂಲಿಮನಿ, ಪ್ರಕಾಶ್ ತುಮಿನಾಡ್, ಬಾಲ ರಾಜ್ವಾಡಿ, ಮೋಹನ್ ಜುನೇಜ, ಕರಿಸುಬ್ಬು, ಮಹಂತೇಶ್ ಹೀರೇಮಠ್ ಸೇರಿದಂತೆ ಅನೇಕ ನಟರಿದ್ದಾರೆ. ಸಿನಿಮಾ ಕಥೆಯೇ ಮುಖ್ಯವಾದ ಮೇಲೆ ನಿರ್ದೇಶಕ ಸೇರಿದಂತೆ ಉಳಿದವರೆಲ್ಲರೂ ಅದನ್ನು ಮತ್ತಷ್ಟು ಚಂದಗೊಳಿಸಲು ಶ್ರಮಿಸುವ contributors ಅಷ್ಟೇ!


ಸಿನಿಮಾದ ನೆಗೆಟಿವ್ ಅಂತ ಏನೂ ನನಗನ್ನಿಸಲಿಲ್ಲ. ಹಾಸ್ಯ ದೃಶ್ಯಗಳು ಇನ್ನಷ್ಟು ನಗಿಸುವಷ್ಟು ಚೆನ್ನಾಗಿರಬಹುದಿತ್ತು ಅನ್ನಿಸಿದ್ದು ಬಿಟ್ಟರೆ ಉಳಿದದ್ದೇನೂ ಇಲ್ಲ. ವೇಗವಾಗಿ ಸಾಗುವ ಚಿತ್ರಕಥೆ ಉಳಿದದ್ದೆಲ್ಲವನ್ನು ಹಿಂದೆ ಹಾಕುತ್ತದೆ. ಈ ಸಿನಿಮಾದ ಚಿತ್ರಕಥೆ ಹೇಗಿದೆ ಎಂದರೆ ಒಂದೆರಡು ದೃಶ್ಯ ಮಿಸ್ ಮಾಡಿಕೊಂಡರೂ ಒಂದಕ್ಕೊಂದು ಕನೆಕ್ಟ್ ಆಗುವುದಿಲ್ಲ. ಹಾಗಾಗಿ ಸಂಪೂರ್ಣ ಸಿನಿಮಾವನ್ನು ಥಿಯೇಟರಿನಲ್ಲಿ ಕೂತು ಎಂಜಾಯ್ ಮಾಡಬಹುದು ಅನ್ನುವುದಕ್ಕೆ ಸರಿಯಾದ ಸಿನಿಮಾ "ಧರಣಿ ಮಂಡಲ ಮಧ್ಯದೊಳಗೆ"!


ಇದು ಬಹುತೇಕ ಹೊಸ ಹುಡುಗರೇ ಮಾಡಿರುವ ಸಿನಿಮಾ. ಅದ್ಯಾವ ರಿಯಾಯಿತಿಯನ್ನೂ ನಾವಿವರಿಗೆ ಕೊಡುವ ಅವಶ್ಯಕತೆಯಿಲ್ಲ. ಏಕೆಂದರೆ ಇದರ ಗುಣಮಟ್ಟ ಆ ಮಟ್ಟಕ್ಕಿದೆ. ಈ ಸಿನಿಮಾವನ್ನು ಪ್ರೋತ್ಸಾಹಿಸುವುದೂ ಬೇಕಿಲ್ಲ! ಏಕೆಂದರೆ ಒಂದು ವಿಭಿನ್ನ ಚಿತ್ರಕಥೆ ಇರುವ ಕ್ರೈಮ್ ಥ್ರಿಲ್ಲರ್ ಸಿನಿಮಾ ಬೇಕೆಂದರೆ ಈ ಸಿನಿಮಾ ನೋಡಹೋದರೆ ಸಾಕು. ಸಂಪೂರ್ಣ ತೃಪ್ತಿಯಿಂದ ಹೊರಬರುತ್ತೇವೆ. ಯಾರ ಹೆಸರನ್ನೂ ಹೇಳದೇ ಬರೀ ಸಿನಿಮಾದ ಗುಣಮಟ್ಟವನ್ನಷ್ಟೇ ನಂಬಿಕೊಂಡು ಹೋಗಬಹುದಾದ ಸಿನಿಮಾ ಇದು. ಕ್ರೈಮ್ ಥ್ರಿಲ್ಲರ್'ಗಳನ್ನು ಇಷ್ಟಪಡುವವರು ಮಿಸ್ ಮಾಡಬಾರದ ಕನ್ನಡ ಸಿನಿಮಾ.


ಇಂದೇ ಚಿತ್ರಮಂದಿರದಲ್ಲಿ ನೋಡಿ ಬನ್ನಿ.


-Santhoshkumar Lm


#santhuLm
02-Dec-2022


Monday, September 26, 2022

ಗುರುಶಿಷ್ಯರು (2022, Kannada)



ಅಲ್ಲೊಬ್ಬ ಎದುರಿನ ಪಾಳಯದಾತ ತನ್ನ ಹುಡುಗರಿಗೆ ಹೇಳುತ್ತಿರುತ್ತಾನೆ.

"ಅವರನ್ನು ಹೇಗಾದರೂ ಮಾಡಿ ಸೋಲಿಸಲೇಬೇಕು. ಸೋಲಿಸುವ ದಾರಿ ಹುಡುಕಿ"

ಇತ್ತಲಿನ ಪಾಳಯದ ಗುರು ತನ್ನ ಹುಡುಗರಿಗೆ ಹೇಳುತ್ತಿರುತ್ತಾನೆ

"ಗೆಲ್ಲುವ ದಾರಿ ಹುಡುಕಿ"

ಎರಡೂ ಒಂದೇ ಅನ್ನಿಸಿದರೂ ಒಂದೇ ಅಲ್ಲ! ಈ ಸಿನಿಮಾ ಕೂಡ ಅಷ್ಟೇ. ಉಳಿದ ಸಿನಿಮಾಗಳನ್ನು ಸೋಲಿಸಲು ಬಂದಿರುವ ಚಿತ್ರವಲ್ಲ. ಬದಲಿಗೆ ತಾನು ಯಾಕೆ ವಿಭಿನ್ನ, ವಿಶಿಷ್ಟವೆಂದು ತೋರಿಸಿ ಗೆಲ್ಲಲು ಬಂದಿರುವ ಸಿನಿಮಾ!

ಇನ್ನೊಂದು ಡೈಲಾಗಿದೆ. "ಅವಕಾಶ ಸಿಗದಿದ್ದರೆ ಅದು ಸೋಲಲ್ಲ. ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳದಿದ್ದರೆ ಅದು ನಿಜವಾದ ಸೋಲು" ಅಂತ! ಈ ಸಿನಿಮಾ ಕೂಡ ಅಷ್ಟೇ... ಅವಕಾಶ ಸಿಕ್ಕಾಗಲೆಲ್ಲ ನೋಡುಗರ ಎದೆಯಲ್ಲಿ ಮೌಲ್ಯಗಳನ್ನು ತುಂಬುವ ಕೆಲಸ ಮಾಡುತ್ತದೆ. "ಕೆಳಗೆ ಬಿದ್ದ ಎದುರಾಳಿಯನ್ನು ಸೋಲಿಸುವುದು ಕ್ರೀಡಾ ಮನೋಭಾವವಲ್ಲ" ಎಂದು ಅತ್ತ ಎದುರು ತಂಡದಿಂದಲೂ ಚಪ್ಪಾಳೆ ಬೀಳುತ್ತದೆ. ಇತ್ತ ಪ್ರೇಕ್ಷಕನ ಕೈ ಕೂಡ ಚಪ್ಪಾಳೆ ತಟ್ಟುತ್ತದೆ. ಹೀಗೆ ಎಲ್ಲೂ ಋಣಾತ್ಮಕ ಚಿಂತನೆಗಳಿಗೆ ಅವಕಾಶವನ್ನೇ ಕೊಡುವುದಿಲ್ಲ. ಬೀಳುವ ಸಮಯ ಬಂದಾಗಲೂ ತನ್ನದೇ ಸಾಮರ್ಥ್ಯದಿಂದ ಎದ್ದು ನಿಲ್ಲುತ್ತದೆ. ಬೇಸರದಲ್ಲಿ ಕುಳಿತ ಪ್ರೇಕ್ಷಕನು ಮುಷ್ಟಿ ಬಿಗಿ ಹಿಡಿದು "ಕಮಾನ್" ಎಂದು ಎದ್ದು ನಿಲ್ಲುತ್ತಾನೆ.

ನೀವು ಇದೊಂದು ಲವ್ ಸ್ಟೋರಿ ಅಂದುಕೊಂಡರೆ ಅದು ಅದೇ! ಅಥವಾ, ಕ್ರೀಡೆಯ ಬಗ್ಗೆ ಅಂದುಕೊಂಡರೆ ಅದೂ ಹೌದು! ಮಕ್ಕಳ ಸಿನಿಮಾ ಅಂದುಕೊಂಡರೆ ಅದೂ ಹೌದು! ಗುರು-ಶಿಷ್ಯರ ಸಂಬಂಧದ ಕಥೆ ಎಂದುಕೊಂಡರೆ ಅದೂ ಹೌದು. ಸ್ಪೂರ್ತಿ ತುಂಬುವ ಸಿನಿಮಾ ಅಂದುಕೊಂಡರೆ ಅದೂ ಹೌದು. ಮತ್ಯಾವುದು ಅಂತ ಕೇಳಿದರೆ ಇದೆಲ್ಲವೂ ಹೌದು. ಕಥೆಗಾರ ಈ ಎಲ್ಲ ಫ್ಲೇವರ್'ಗಳನ್ನು ತನ್ನ ಸಿನಿಮಾದಲ್ಲಿ ತರಲು ಕಷ್ಟಪಟ್ಟಿದ್ದಾನೆ.

ಹಾಸ್ಯನಟ ಎಂಬ ಬಿರುದು ಗಳಿಸುವಷ್ಟೇ ಕಷ್ಟ ಅದರಿಂದ ಬಿಡಿಸಿಕೊಂಡು ಹೊರಬರುವುದು. ಶರಣ್ ಈ ಸಿನಿಮಾದಲ್ಲಿ ಪಾತ್ರಕ್ಕೆ ಬೇಕಾದ್ದನ್ನಷ್ಟೇ ಮಾಡಿ, ತನ್ನೆಲ್ಲ ಹಾವಭಾವಗಳನ್ನು ಮೀರಿ ಕಲಾವಿದರಾಗಿ ಕಾಣಿಸಿಕೊಳ್ಳುತ್ತಾರೆ. ಮುಂದೆ ಅವರು ಯಾವುದೇ ಪಾತ್ರಕ್ಕೆ ತಕ್ಕ ಹಾಗೆ ಹೊಂದಿಕೊಳ್ಳಲಿ ಅನ್ನುವುದು ನನ್ನ ಆಶಯ. ನಿಶ್ವಿಕಾಗೆ ಬರೀ ಹೀರೋ ಹಿಂದೆ ಸುತ್ತುವುದಷ್ಟೇ ಕೆಲಸವಲ್ಲ. ದತ್ತಣ್ಣ ಅವರದು ಗುರುವಿನ ಪಾತ್ರದಲ್ಲಿ ಮನಸ್ಸಿಗೆ ಹತ್ತಿರವಾಗುವ ನಟನೆ. ಅಪೂರ್ವ ಕಾಸರವಳ್ಳಿ, ಸುರೇಶ್ ಹೆಬ್ಳೀಕರ್, ಮಹಾಂತೇಶ್ ಹೀರೇಮಠ್ ಅವರುಗಳ ಪಾತ್ರ, ನಟನೆ ಎರಡೂ ಸೂಪರ್.

ಇವರೆಲ್ಲರ ಕೆಲಸಕ್ಕಿಂತ ನೋಡುವವರಿಗೇ ಸುಸ್ತು ಮಾಡುವುದು ಮಾತ್ರ ಆ ಹುಡುಗರದ್ದು. ಈ ಸಿನಿಮಾದಲ್ಲಿ ಅದೇನು ನಟಿಸಿದ್ದಾರೋ ಅದು ಒತ್ತಟ್ಟಿಗಿರಲಿ. ಆದರೆ ಖೋಖೋ ಆಟ ಆಡಲು ಬಿಟ್ಟರೆ ಗ್ಯಾರಂಟಿ ಒಂದು ಮಟ್ಟಕ್ಕೆ ಅದ್ಭುತವಾಗಿ ಆಡಬಲ್ಲರು. ಅಷ್ಟು ಸಶಕ್ತವಾಗಿ ಅವರಿಗೆ ತಾಲೀಮು ನೀಡಲಾಗಿದೆ. ಅದೆಷ್ಟು ಬಿದ್ದರೋ? ಅದೆಷ್ಟು ಬೆವರು ಸುರಿಸಿದರೋ? ಅದೆಷ್ಟು ಮೈಕೈ ಗಾಯ ಮಾಡಿಕೊಂಡರೋ? ಈ ಸಿನಿಮಾದ ಪಯಣ ಅಷ್ಟೊಂದು ಸುಲಭದ್ದಾಗಿರಲಿಲ್ಲ ಎಂದು ಸಿನಿಮಾ ನೋಡುವಾಗಲೇ ಊಹಿಸಬಹುದು. ಈ ಸಿನಿಮಾಗಾಗಿ ತಮ್ಮನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡಿರುವ ಅವರೆಲ್ಲರ ಸಿನಿ ಭವಿಷ್ಯಕ್ಕೆ ಶುಭ ಕೋರೋಣ.

ಈ ಸಿನಿಮಾದುದ್ದಕ್ಕೂ ಸಿಕ್ಕಾಪಟ್ಟೆ ಭಾವಗಳ ಏರಿಳಿತಗಳಿವೆ. ಜೊತೆಗೆ ಶರಣ್ ಎಂಬ ಹೈ-ಎನರ್ಜಿ ಹಾಸ್ಯನಟನ ಉಪಸ್ಥಿತಿಯಿದೆ. ಹಾಗಾಗಿ ಅತ್ತ ನಗಿಸಬೇಕು, ಇತ್ತ ಉತ್ಸಾಹ ತುಂಬಬೇಕು. ಇನ್ನೊಂದು ದಿಕ್ಕಿನಿಂದ ಸವಾಲೆಸೆಯಬೇಕು. ಅಂತಹ ಮಾತು ಕಟ್ಟುವ ಕಠಿಣ ಸವಾಲನ್ನು ಸ್ವೀಕರಿಸಿ ಗೆದ್ದಿದ್ದಾರೆ ಸಂಭಾಷಣೆಕಾರ ಮಾಸ್ತಿ. ಕೆಲ ಕಡೆ ಮನಸ್ಸು ಹಗುರಾಗುವಷ್ಟು ನಗು ತರಿಸುವ ಸಾಲುಗಳಿದ್ದರೆ, ಸಿನಿಮಾದ ಬಹುತೇಕ ಕಡೆ ಚಪ್ಪಾಳೆ ತಟ್ಟಿಸಿಕೊಳ್ಳುವ, ಗೆಲ್ಲುವ, ಬದುಕುವ, ಕಷ್ಟ ಎದುರಿಸುವ, ಪ್ರೇರಣೆ ನೀಡುವ ಮಾತುಗಳಿವೆ. ಕೆಲ ಡೈಲಾಗುಗಳನ್ನು ನೀವು ಜನರ ಮಧ್ಯೆಯೇ ಕೂತು ಎಂಜಾಯ್ ಮಾಡಬೇಕು. ಬಹು ಮುಖ್ಯವಾಗಿ ಕಥೆಯ ಜೊತೆಯಲ್ಲೇ ಹಾಸ್ಯ ಬಂದಿದೆಯೇ ಹೊರತು, ಅದಕ್ಕಾಗಿಯೇ ಸಂದರ್ಭಗಳನ್ನು ಸೃಷ್ಟಿಸಿಲ್ಲ.

ಸಿನಿಮಾ ಬಿಡುಗಡೆಯಾಗುವ ಮೊದಲೇ ಗೆದ್ದಿದ್ದದ್ದು ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್. ಬಿಡುಗಡೆಯಾಗಿದ್ದು ಮೂರು ಹಾಡುಗಳು ನಾಲಿಗೆಯ ಮೇಲೆ ಹರಿದಾಡುವಷ್ಟು ಎಲ್ಲ ಕಡೆ ಕೇಳಿ ಬರುತ್ತಿದ್ದವು. ಆಗಲೇ ಈ ಸಿನಿಮಾದ ಪ್ರಚಾರ ಅರ್ಧ ಮುಗಿದಂತಿತ್ತು. ಸಿನಿಮಾ ನೋಡುವಾಗ ಕೆಲವು ಹೈವೋಲ್ಟೇಜ್ ದೃಶ್ಯಗಳಲ್ಲಿ ಅವರ ಹಿನ್ನೆಲೆ ಸಂಗೀತ ನಮ್ಮನ್ನು ಮಂತ್ರಮುಗ್ಧರನ್ನಾಗಿ ಮಾಡುತ್ತದೆ.

ಅದೊಂದು ದೃಶ್ಯವಿದೆ. "ನಮ್ಮನ್ನು ಊರವರು ಹೊರಗಿಟ್ಟರೂ, ಆ ಊರಿಗಾಗಿ ನಾವು ಏನು ಬೇಕಾದರೂ ಮಾಡಲು ಸಿದ್ಧ" ಅನ್ನುವ ಡೈಲಾಗು ನನಗೆ ಅದೆಷ್ಟು "ವ್ಹಾವ್" ಅನ್ನಿಸಿತು ಅಂದರೆ, ಸಿನಿಮಾವನ್ನೇನಾದರೂ ಒಂದೆರಡು ನಿಮಿಷ ನಿಲ್ಲಿಸುವ ಅವಕಾಶವಿದ್ದರೆ ನಿಲ್ಲಿಸಿ, ಮನಸಾರೆ ಚಪ್ಪಾಳೆ ಹೊಡೆದು ನಂತರ ಮುಂದುವರೆಸುತ್ತಿದ್ದೆ. ಅದು ನಿರ್ದೇಶಕ ಜಡೇಶ್ ಹಂಪಿ ಅವರ ಕೈಚಳಕವೋ, ಅಥವಾ ಮಾಸ್ತಿಯವರ ಕೈಚಳಕವೋ... ಆದರೆ ನಿಮ್ಮೆಲ್ಲ ಸಿನಿಮಾಗಳಲ್ಲಿ ಅವಕಾಶ ಸಿಕ್ಕುವಾಗೆಲ್ಲ ಹೀಗೆ ಕೆಲ ವಿಚಾರಗಳನ್ನು ಹೇಳುವ ಸಂವೇದನೆ ನಿಮ್ಮಲ್ಲಿ ಸದಾ ಜಾಗೃತವಾಗಿರಲಿ ಎಂದು ಆಶಿಸುತ್ತೇನೆ.

ಈ ಸಿನಿಮಾವನ್ನು ಕೆಲ ಬಾಲಿವುಡ್ ಸಿನಿಮಾಗಳಿಗೆ ಹೋಲಿಸಲು ಮನಸ್ಸಾಗದು. ಬಹುಶಃ ಅದು ಈ ಸಿನಿಮಾಗೆ ಮಾಡುವ ಅವಮಾನವಾಗಬಹುದು. ಜನಪ್ರಿಯ ಅನ್ನಿಸಿಕೊಂಡ ಬಾಸ್ಕೆಟ್'ಬಾಲ್, ಫುಟ್ಬಾಲ್, ಕ್ರಿಕೆಟ್ ಆಟಗಳ ಮಧ್ಯೆ ನಮ್ಮವೇ ಅನ್ನಿಸಿಕೊಂಡ ಖೋಖೋ ರೀತಿಯ ಆಟಗಳು ನೇಪಥ್ಯಕ್ಕೆ ಸರಿದಿದ್ದರ ಬಗ್ಗೆ, ಅದನ್ನು ಆಡಿ ಚಾಂಪಿಯನ್ ಆದವರು ನಂತರ ಏನೂ ಇಲ್ಲ ಅನ್ನುವಂತಾಗಿದ್ದರ ಬಗ್ಗೆ ಸಿನಿಮಾ ವಿಷಾದ ವ್ಯಕ್ತಪಡಿಸುತ್ತದೆ. ಈ ಮೂಲಕ ದೇಸೀ ಕ್ರೀಡೆಗಳ ಬಗ್ಗೆ, ಆ ಆಟಗಾರರ ಬಗ್ಗೆ ನಮ್ಮೆಲ್ಲರ ಹಾಗೂ ಸಂಬಂಧಪಟ್ಟವರ ಗಮನ ಸೆಳೆಯುವಂತೆ ಈ ಸಿನಿಮಾ ಮಾಡಬಲ್ಲದು.

ಒಂದು ಚಂದದ ಸಿನಿಮಾ ಮುಗಿದ ಬಳಿಕವೂ ನಿಮಗೆ ಅದರ ಹೀರೋ ಯಾರು ಅಂತ ಹೇಳಲು ಕಷ್ಟವಾದರೆ ಅದಕ್ಕೆ ಕಾರಣ ಆ ಸಿನಿಮಾದ ಎಲ್ಲರೂ ಕೇವಲ ಪಾಲುದಾರರಾಗಿ ಕೆಲಸ ಮಾಡಿದ್ದಾರೆ ಅಂತರ್ಥ. ಗುರುಶಿಷ್ಯರು ಅದಕ್ಕೊಂದು ಉತ್ತಮ ಉದಾಹರಣೆ.

ಕ್ರೀಡೆಯ ಬಗೆಗಿನ ಸಿನಿಮಾ ಅಂದುಕೊಂಡರೂ ಇದು ನಾವಂದುಕೊಂಡಷ್ಟು ಸುಲಭವಲ್ಲ. ಆ ಕ್ರೀಡೆಯ ಬಗ್ಗೆ ನಿರ್ದೇಶಕ ಮತ್ತು ಆತನ ತಂಡ ಒಳ್ಳೆಯ ರೀಸರ್ಚ್ ಮಾಡಿರಬೇಕು. ಆ ಆಟದ ಒಳ-ಹೊರಗನ್ನು ಅಭ್ಯಯಿಸಿರಬೇಕು. ಸಿನಿಮಾದುದ್ದಕ್ಕೂ ಅನೇಕ ಪಂದ್ಯಗಳು ನಡೆಯುವುದರಿಂದ ಪ್ರತೀ ಪಂದ್ಯಕ್ಕೂ ಅವವೇ ದೃಶ್ಯಗಳನ್ನು ಹಾಕಲಾಗದು. ಪ್ರತೀ ಪಂದ್ಯವನ್ನೂ ಬೇರೆ ಬೇರೆ ರೀತಿಯ ಸನ್ನಿವೇಶಗಳ ಮೂಲಕ ರೋಚಕವಾಗಿಡಬೇಕು. ಈ ದೃಶ್ಯಗಳನ್ನು ಮನಸ್ಸಿಗೆ ನಾಟುವಂತೆ ಚಿತ್ರೀಕರಿಸಲಾಗಿದೆ. ಮಾಮೂಲಿ ಸಿನಿಮಾಗಳ ಚಿತ್ರೀಕರಣಕ್ಕೂ ಕ್ರೀಡೆಗಳ ಬಗೆಗಿನ ಸಿನಿಮಾಗಳ ಚಿತ್ರೀಕರಣಕ್ಕೂ ವ್ಯತ್ಯಾಸವಿದೆ. ಈ ಸಿನಿಮಾದಲ್ಲಿ ಬರುವ ಖೋಖೋ ಆಟಗಳು ನಿಮ್ಮನ್ನು ಮೈಮರೆಸಿದವು ಅಂದರೆ ಕ್ಯಾಮೆರಾ ಹಿಂದೆ ನಿಂತ ಅರೂರ್ ಸುಧಾಕರ್ ಶೆಟ್ಟಿ ಅವರಿಗೆ ಒಂದು ಶಹಬ್ಬಾಷ್ ಹೇಳಲೇಬೇಕು.

ಹೆಚ್ಚು-ಕಡಿಮೆ ಎರಡೂ-ಮುಕ್ಕಾಲು ತಾಸಿನ ಸಿನಿಮಾ ಒಂದು ಕ್ಷಣ ಕೂಡ ಬೇಸರವಾಗದಂತೆ ನೋಡಿಸಿಕೊಳ್ಳುತ್ತದೆ ಅಂದರೆ ಅದಕ್ಕಿಂತ ಬೇರೇನೂ ಹೇಳುವುದು ಬೇಕಿಲ್ಲ. ಸಿನಿಮಾದ ಕಥೆ ಹೇಳುತ್ತಲೇ ಅನೇಕ ವಿಚಾರಗಳನ್ನು ಹೇಳಲು ಪ್ರಯತ್ನಿಸುವ ಜಡೇಶ್ ಕೆ ಹಂಪಿ ಅವರ ಬಗ್ಗೆ ನನಗೆ ಅಪಾರ ಮೆಚ್ಚುಗೆ. ಇವರು ಇನ್ನಷ್ಟು ಒಳ್ಳೆಯ ಸಿನಿಮಾಗಳನ್ನು ನಮಗೆ ಕೊಡಬಲ್ಲರು ಎಂಬ ಭರವಸೆ ಮೂಡಿಸುತ್ತಾರೆ. ಈ ನಿರ್ದೇಶಕನ ಬಗ್ಗೆ "ಜಂಟಲ್ ಮ್ಯಾನ್" ಸಿನಿಮಾದಿಂದ ಹುಟ್ಟಿಕೊಂಡ ನಂಬಿಕೆ ಈ ಸಿನಿಮಾದಲ್ಲೂ ಮುಂದುವರೆದು ಮುಂದಿನ ದಿನಗಳಲ್ಲಿ ಇವರ ಸಿನಿಮಾಗಳಿಗೆ ಖಂಡಿತವಾಗಿ ಪ್ರೇಕ್ಷಕರು ಕಾಯಬಲ್ಲರು.

ಒಳ್ಳೆಯ ನಿರ್ದೇಶಕನನ್ನು, ಒಳ್ಳೆಯ ಪಾತ್ರವರ್ಗವನ್ನು, ಒಳ್ಳೆಯ ಕಥೆಯನ್ನು ಆಯ್ದುಕೊಂಡು ಇಂಥದ್ದೊಂದು ಒಳ್ಳೆಯ ಸಿನಿಮಾವನ್ನು ತಮ್ಮ ನಿರ್ಮಾಣ ಸಂಸ್ಥೆಯ ಮೂಲಕ ನೀಡಿದ ತರುಣ್ ಸುಧೀರ್ ಅವರಿಗೆ ಅಭಿನಂದನೆಗಳು... ಇನ್ನು ಮುಂದೆಯೂ ಅವರ ನಿರ್ಮಾಣದಲ್ಲಿ ಒಳ್ಳೆಯ ಸಿನಿಮಾಗಳನ್ನು ಪ್ರೇಕ್ಷಕ ಕಾಣುವಂತಾಗಲಿ.

-Santhosh Kumar LM
26-Sep-2022



Wednesday, September 21, 2022

ವೆಂದು ತಣಿಂದದು ಕಾಡು (Tamil, 2022)




ಹಳ್ಳಿಯಲ್ಲಿ ಓದಿಕೊಂಡ ಹುಡುಗನೊಬ್ಬ ಕೆಲಸ ಸಿಗದೆ ಏನು ಬೇಕಾದರೂ ಮಾಡಬಲ್ಲೆ ಅನ್ನುವ ಸ್ಥಿತಿಯಲ್ಲಿದ್ದಾಗ ಅಲ್ಲಿಯೂ ಅವನನ್ನು ಉಳಿಯಗೊಡದಂಥ ಪರಿಸ್ಥಿತಿ ಎದುರಾಗುತ್ತದೆ. ಆಗ ಆತನ ತಾಯಿ ಆತನನ್ನು ಆ ಊರಿಂದಲೇ ಬಹುದೂರ ಹೋಗುವಂತೆ ದಾರಿಯೊಂದನ್ನು ಹುಡುಕುತ್ತಾಳೆ. ಆತ ಮುಂದೇನಾಗುತ್ತಾನೆ ಅನ್ನುವ ರೋಚಕ ಕಥೆಯೇ "ವೆಂದು ತಣಿಂದದು ಕಾಡು"

ಗ್ಯಾಂಗ್‍ಸ್ಟರ್ ಸಿನಿಮಾಗಳ ಕಥೆಯ ಫಾರ್ಮ್ಯಾಟ್ ಎಲ್ಲ ಒಂದು ರೀತಿಯಲ್ಲಿ ಒಂದೇ ರೀತಿಯದ್ದಾಗಿರುತ್ತದೆ. ಆದರೆ ಆ ಕಥೆಯನ್ನು ಹೆಣೆದು ತೋರಿಸುವ ರೀತಿ ಹೇಗೆ ಅನ್ನುವುದರ ಮೇಲೆ ಆ ಸಿನಿಮಾ ಹೇಗಿದೆ ಅನ್ನುವುದು ನಿರ್ಧಾರವಾಗುತ್ತದೆ. ಆ ದೃಷ್ಟಿಯಲ್ಲಿ ನೋಡಿದರೆ "ವೆಂದು ತಣಿಂದದು ಕಾಡು" ಜಿ.ವಿ.ಮೆನನ್ ಅವರ ಸಿನಿಮಾ. ಸಾವಧಾನವಾಗಿ ಸಾಗುತ್ತಲೇ ಎಲ್ಲ ದೃಶ್ಯಗಳನ್ನು ಮನೋಜ್ಞವಾಗಿ ಕಟ್ಟಿಕೊಡುವುದು ಅವರ ಕಥೆ ಹೇಳುವ ರೀತಿ. ಇಲ್ಲಿ ಎಲ್ಲ ಕಡೆ ಅದಕ್ಕೆ ಅವಕಾಶವಿಲ್ಲ. ಕೆಲವು ಕಡೆ ಅದು ಓಡಬೇಕು. ಕೆಲವು ಕಡೆ ಉಸಿರೆಳೆದುಕೊಳ್ಳಬೇಕು. ಹಾಗಾಗಿಯೇ ಎಲ್ಲಿ ಅವಕಾಶ ಸಿಗುತ್ತದೋ ಅಲ್ಲೆಲ್ಲ ತಮ್ಮ ಕೈಚಳಕ ತೋರಿಸಿಬಿಡುತ್ತಾರೆ.

ಮುಂಬೈಯ ಮನೆಮಾಳಿಗೆಯೊಂದರಲ್ಲೇ ಮೂವತ್ತೈದು ಜನ ಮಲಗಿಕೊಳ್ಳುವ ಆ ದೃಶ್ಯಗಳು ನೈಜವಾಗಿ ಮೂಡಿಬಂದಿವೆ. ಮುಂಬೈ ನಗರದ ಧಾವಂತ, ಅಲ್ಲಿಯ ಜನಜೀವನ, ಅಲ್ಲಿಯ ಭೂಗತ ಜಗತ್ತು, ಹೊರರಾಜ್ಯಗಳಿಂದ ಹೋಗುವ ನಿರೋದ್ಯೋಗಿ ಯುವಕರನ್ನು ತನ್ನ ಜಾಲದಲ್ಲಿ ಬಂಧಿಸಿಬಿಡುವಿಕೆ, ಅಲ್ಲಿಯೂ ಇರಲಾರದೆ ಇತ್ತ ಊರಿಗೆ ವಾಪಸ್ಸು ಬರಲಾರದ ಅಸಹಾಯಕತೆ-ಒಂಟಿತನ ಎಲ್ಲವನ್ನೂ ಸಿನಿಮಾದಲ್ಲಿ ಮನಸ್ಸಿಗೆ ನಾಟುವಂತೆ ತೋರಿಸಲಾಗಿದೆ. ಅತ್ತ ಭೂಗತ ಜಗತ್ತನ್ನು ತೋರಿಸುವಾಗಲೂ ಎಲ್ಲೆಲ್ಲಿ ಅವಕಾಶವಿದೆಯೋ ಅಲ್ಲಿ ಮನರಂಜನೆಯನ್ನು ಬಡಿಸುವುದನ್ನು ಮರೆತಿಲ್ಲ. ಎಲ್ಲಿಯೂ ಬೋರ್ ಹೊಡೆಸದಂತೆ ಚಿತ್ರಕಥೆ ಹೆಣೆಯಲಾಗಿದೆ. ಹೊಡೆದಾಟದ ದೃಶ್ಯಗಳಲ್ಲಿ, ಮಧ್ಯೆ ಅಲ್ಲಲ್ಲಿ ಬರುವ ಪ್ರೀತಿಯ ಕಥೆ, ಹಾಡುಗಳು ಹೀಗೆ ಅನೇಕ ಕಡೆ ಲಾಂಗ್-ಟೇಕ್ ಬಳಸಲಾಗಿದೆ. ಒಂದು ಹಾಡಿನಲ್ಲಂತೂ ಅಷ್ಟೂ ಹೊತ್ತಿನ ಸಾಹಿತ್ಯವನ್ನು ಕಲಾವಿದರು ಹೇಗೆ ನೆನಪಿಟ್ಟುಕೊಂಡು ನಟಿಸಿದರು ಅನ್ನುವಷ್ಟು ಸುದೀರ್ಘವಾದ ಶಾಟ್ ಇದೆ.

ಆರಂಭದಿಂದಲೂ ಗಂಭೀರವಾಗಿ ಸಾಗುವ ಸಿನಿಮಾದ ಮಧ್ಯೆ ಇದ್ದಕ್ಕಿದ್ದಂತೆ ಬರುವ "ಹೇ ಮಲ್ಲಿ ಪೂ ವಚ್ಚಿ ವಚ್ಚಿ ವಾಡುದೆ" (ಮಲ್ಲಿಗೇ ಹೂ ಮುಡಿದು ಮುಡಿದು ಬಾಡುತಿದೆ) ಹಾಡು ಸಿನಿಮಾ ನೋಡುತ್ತಿದ್ದವರನ್ನು ಎದ್ದುನಿಂತು ಕುಣಿಯುವಂತೆ ಮಾಡುತ್ತದೆ. ಎಆರ್ ರೆಹಮಾನ್ ಅವರ ಸಂಗೀತ ಇದಕ್ಕೆ ಮುಖ್ಯ ಕಾರಣ. ಸಿನಿಮಾದುದ್ದಕ್ಕೂ ಅವರ ಹಿನ್ನೆಲೆ ಸಂಗೀತವೂ ಕಡಿಮೆಯೇನಿಲ್ಲ.
ಈ ಸಿನಿಮಾದ ನಾಯಕನಟ ಸಿಂಬು aka ಸಿಲಂಬರಸನ್ ಅವರಿಗೆ ಈ ಸಿನಿಮಾದಲ್ಲಿ ಯಾವುದೇ ರೀತಿಯ ಬಿಲ್ಡಪ್ ಇಲ್ಲ. ಅವರ ಲುಕ್ ಕೂಡ ಸಾಮಾನ್ಯ ಹುಡುಗನೊಬ್ಬನಂತೆಯೇ ಇದೆ. ಆದರೆ ಈ ಪಾತ್ರಕ್ಕಾಗಿ ಮಾಡಿರುವ ಅವರ ಶ್ರಮ ಎದ್ದು ಕಾಣುತ್ತದೆ. "ಮಾನಾಡು" ಸಿನಿಮಾದ ಯಶಸ್ಸಿನ ನಂತರ ಮತ್ತೆ ಈ ಸಿನಿಮಾಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿರುವುದು ಖುಶಿಯ ವಿಚಾರ. ಇದು ಈ ಸಿನಿಮಾದ ಮೊದಲ ಭಾಗವಷ್ಟೇ. ಮುಂದಿನ ಭಾಗದ ನಿರ್ಮಾಣ ಪ್ರಗತಿಯಲ್ಲಿದೆ.

ಸಿನಿಮಾದ ಅಂತ್ಯದಲ್ಲಿ ಮುಂದಿನ ಭಾಗಕ್ಕೆ ಪೂರಕವಾಗುವಂತೆ ಕೆಲವಷ್ಟು ದೃಶ್ಯಗಳಿವೆ. ಅವನ್ನು ಧಾವಂತದಲ್ಲಿ ಮುಗಿಸಿ ತುರುಕಿದಂತೆ ಕಾಣುವುದರಿಂದ ಸಿನಿಮಾ ಅಲ್ಲಿಗೇ ಮುಗಿದಿರಬೇಕಿತ್ತು ಅನ್ನಿಸುತ್ತದೆ. ಇಲ್ಲದಿದ್ದರೆ ಇಡೀ ಸಿನಿಮಾ ಒಂದೇ ರೀತಿಯ ಫೀಲ್ ಕೊಡುತ್ತಿತ್ತು. ಆದರೂ ಎರಡನೆಯ ಭಾಗಕ್ಕೆ ಕಾಯುವಂತೆ ಮಾಡುತ್ತದೆ.

-Santhosh Kumar LM
21-Sep-2022

Friday, August 19, 2022

Jogi movie Celebrating 17 years!






"ಜೋಗಿ" ಸಿನಿಮಾ ರಾಜ್ಯದಾದ್ಯಂತ ಎಲ್ಲ ಚಿತ್ರಮಂದಿರಗಳಲ್ಲಿ ಭರ್ತಿ ಪ್ರದರ್ಶನ ಕೊಡುತ್ತಿದ್ದ ವೇಳೆ ಕೊಳ್ಳೇಗಾಲದ ಚಿತ್ರಮಂದಿರವೊಂದಕ್ಕೆ ಶಿವರಾಜ್‍ಕುಮಾರ್ ಆಗಮಿಸಿದ್ದರು. ಅಭಿಮಾನಿಗಳು "ಶಿವಣ್ಣನಿಗೆ ಜೈ" ಅನ್ನಲಿಲ್ಲ. "ನಮ್ ಜೋಗಿ ಮಾದೇಸಂಗೆ ಜೈ" ಅಂದರು. ಶಿವರಾಜ್‍ಕುಮಾರ್ ಅತ್ತ ನೋಡಿ ಪ್ರೀತಿಯಿಂದ ಕೈತೋರಿ ಅಭಿಮಾನಿಗಳೆಲ್ಲರ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದರು. ಜನಮಾನಸದಲ್ಲಿ ಒಬ್ಬ ನಾಯಕನಟನ ಪಾತ್ರ ಹೇಗೆ ದಾಖಲಾಗುತ್ತದೆ ಅನ್ನುವುದು ಎಂದೆಂದಿಗೂ ಅಚ್ಚರಿಯ ಸಂಗತಿಯೇ.


"ಜೋಗಿ" ಮೇಲ್ನೋಟಕ್ಕೆ ಒಂದು ರೌಡಿಯಿಸಂ ಕಥೆ ಸಿನಿಮಾ ಅನ್ನಿಸಬಹುದು. ನೋಡಿದ ಮೇಲೆ ತಾಯಿ-ಸೆಂಟಿಮೆಂಟ್ ಕಥೆ ಇರುವ ಸಿನಿಮಾ ಅನ್ನಿಸಬಹುದು. ಅದು ಇಡೀ ಸಿನಿಮಾವನ್ನು ಒಂದೆರಡು ಪದಗಳಲ್ಲಿ ಹೇಳಬಯಸುವವರು ಕೊಟ್ಟುಬಿಡುವ ಟ್ಯಾಗ್! ಆದರೆ ಆ ಸಿನಿಮಾದಲ್ಲಿ ಅದಕ್ಕೂ ಮೀರಿದ ನಮ್ಮ ಮಣ್ಣಿನ ವಿಷಯಗಳನ್ನು ಹೇಳುವ ಕುಸುರಿಯಿದೆ. ಇಲ್ಲದಿದ್ದರೆ ಜೋಗಿಯನ್ನೇ ಹಿಂಬಾಲಿಸಿಕೊಂಡು ಬಂದ ಅದೇ ಮದರ್-ಸೆಂಟಿಮೆಂಟಿನ, ರೌಡಿಯಿಸಂ ಕಥೆಯುಳ್ಳ ಅನೇಕ ಸಿನಿಮಾಗಳು ಜೋಗಿಯಂತೆಯೇ ಸೂಪರ್ ಹಿಟ್ ಆಗಬೇಕಿತ್ತು. ಹಾಗಾಗಲಿಲ್ಲ.


ನೀವು ನಂಬಲೇಬೇಕು. ಜೋಗಿ ಸಿನಿಮಾ ಬಂದ ಮೇಲೆಯೇ ಅನೇಕ ಜನರಿಗೆ ನಮ್ಮ ರಾಜ್ಯದಲ್ಲೊಂದು "ಮಹದೇಶ್ವರ ಬೆಟ್ಟ" (ನಮಗೆ ಮಾದಪ್ಪನ ಬೆಟ್ಟ, ಕೆಲವರಿಗೆ ಮಾದೇಸುರುನ್ ಬೆಟ್ಟ) ಎಂಬ ಸ್ಥಳವಿದೆ ಅಂತ ಗೊತ್ತಾಯಿತು! ಅದಕ್ಕೂ ಮುನ್ನ ಅನೇಕ ಗೆಳೆಯರು ನಮ್ಮ ದೇವರಮನೆಯಲ್ಲಿನ ಮಾದಪ್ಪನ ಫೋಟೋ ನೋಡಿ ನನ್ನ ಬಳಿ ಬಂದು "ಮಹದೇಶ್ವರ/ಮಾದಪ್ಪ ಅಂದರೆ ಯಾವ ದೇವರು" ಅಂತ ಕೇಳಿದ್ದಾರೆ. ಜೋಗಿ ಬಂದ ಮೇಲೆ ಮೊದಲಿಗಿಂತಲೂ ಬೆಟ್ಟಕ್ಕೆ ಬರುವ ಜನರು ಹೆಚ್ಚಾದರು. ಒಂದು ಸಿನಿಮಾ ಪರೋಕ್ಷವಾಗಿ ಉಂಟು ಮಾಡುವ ಪ್ರಭಾವ ಹೀಗೆ ಬೇರೆ ಬೇರೆ ರೀತಿಯದ್ದಾಗಿರುತ್ತದೆ!


ಒಂದು ಸಿನಿಮಾದ ಕಥೆ ಒಂದು ಭಾಗದಲ್ಲಿ ನಡೆಯುತ್ತದೆ ಅನ್ನುವುದಾದರೆ ಅದರ ಸಂಭಾಷಣೆ, ಸಾಹಿತ್ಯ, ಕಥೆ, ಚಿತ್ರಕಥೆ ಎಲ್ಲವನ್ನೂ ಆ ಭಾಗದ ಪ್ರತಿಭೆಗಳೇ ಬರೆದರೆ ಚೆಂದ ಅಂತ ನನ್ನ ನಂಬಿಕೆ. ಇದು ಅನೇಕ ಬಾರಿ ಸಾಬೀತಾಗಿದೆ. ಬೇರೆ ಭಾಗದವರು ಬರೆದಾಗ ಬರದ ಕೆಲವು ಸೂಕ್ಷ್ಮ ಸಂಗತಿಗಳು ಅದೇ ಮಣ್ಣಿನ ಜನ ಬರೆದಾಗ ಮಾತ್ರ ಮೂಡಿ ಬರುತ್ತವೆ. ಇದು ಪ್ರಾಮಾಣಿಕವಾಗಿ ನಡೆದಾಗ ಪ್ರಪಂಚದ ಬೇರೆ ಬೇರೆ ಭಾಗಗಳ ಜನರಿಗೆ ಈ ಪ್ರದೇಶದ ಸಂಸ್ಕೃತಿಯ, ಸ್ಥಳೀಯತೆಯ ಪರಿಚಯವಾಗುತ್ತದೆ.


ಆ ಸಿನಿಮಾದ ಮೊದಲ ದೃಶ್ಯದಲ್ಲೇ ಜೋಗಿಯ ಮನೆಯನ್ನು ಪರಿಚಯಿಸುವ ದೃಶ್ಯವಿದೆ. ಮರದ ಕಂಬಗಳಿರುವ ಹಜಾರದ ಮನೆ, ಅಲ್ಲಲ್ಲಿ ನೇತುಹಾಕಿದ ಬಟ್ಟೆಗಳು, ಅಲ್ಲೇ ಮಂಚ, ಅದರ ಮೇಲೆ ಮಲಗಿರುವ ಅಪ್ಪ (ರಮೇಶ್ ಭಟ್). ಮಂಚದ ಮೇಲೆಯೇ ಕುಳಿತ ಕೋಳಿ! ಆ ಮನೆಯ ಒಂದು ಬದಿಯಲ್ಲಿ ಪುಟ್ಟ ಅಡುಗೆ ಮನೆ, ಗೋಡೆಗೆ ಮೆತ್ತಿದ ಮಸಿ, ಮೂಲೆಯಲ್ಲಿಟ್ಟ ರಾಗಿ ವಾಡೆ(ದೊಡ್ಡ ಮಣ್ಣಿನ ಮಡಕೆ), ನೀರಿನ ಹಂಡೆ, ಗೋಡೆಯ ಸಣ್ಣ ಗೂಡಿನಲ್ಲಿಟ್ಟ ಎಣ್ಣೆ ಬಾಟಲಿ, ಡಬ್ಬಗಳು, ರುಬ್ಬುವ ಕಲ್ಲು,ಟ್ರಂಕುಗಳು, ಹಳೆಯ ಮರದ ಪೆಟ್ಟಿಗೆಗಳು, ಗೋಡೆಗೆ ನೇತುಬಿಟ್ಟ ಕ್ಯಾಲೆಂಡರು, ಸೌದೆ ಒಲೆಯನ್ನು ಕೊಳವೆಯಲ್ಲಿ ಊದುತ್ತ ಅಡುಗೆ ಮಾಡುತ್ತಿರುವ ತಾಯಿ (ಅರುಂಧತಿ ನಾಗ್), ಒಲೆಯಿಂದ ಏಳುವ ಹೊಗೆ, ಒಂದೆಡೆ ದೇವರ ಮನೆ. ದೇವರ ಮನೆಯ ಗೋಡೆಯ ತುಂಬ ನೇತುಹಾಕಿದ ಬೇರೆ ಬೇರೆ ದೇವರುಗಳ ಫೋಟೋಗಳು, ಒಂದೆಡೆ ನೇತುಹಾಕಿದ ಮೊರ........ಇತ್ಯಾದಿ.


ಇವೆಲ್ಲದರ ಜೊತೆಗೆ "ಅದ್ಯಾಕುಡಾ ಮಾದೇಸ? ಕೂಸೆ?" ಅಂತ ಕೊಳ್ಳೇಗಾಲದ/ಚಾಮರಾಜನಗರದ ಸೊಗಡಿನ ಕನ್ನಡ ಮಾತನಾಡುತ್ತಿದ್ದರೆ ಈ ಊರು ಸಿಂಗಾನಲ್ಲೂರು ಅಂತ ಹೇಳುವ ಅವಶ್ಯಕತೆ ಇದೆಯೇ ನೀವೇ ಹೇಳಿ?! ಇದೇ ಕಾರಣಕ್ಕೆ ಆ ಪ್ರದೇಶದ ಪ್ರತಿಭೆಗಳು ಬರೆದಾಗ ಸ್ವಾಭಾವಿಕವಾಗಿ ಮೂಡುವ ದೃಶ್ಯ ಹೇಗಿರುತ್ತದೆ ಅಂತ ಹೇಳಿದ್ದು. ಈ ಸಿನಿಮಾದ ಸಂಭಾಷಣೆ ಬರೆದಿರುವುದು ಮಳವಳ್ಳಿ ಸಾಯಿಕೃಷ್ಣ ಅವರು.


ಇದೇ ಸಿನಿಮಾದ ಮತ್ತೊಂದು ದೃಶ್ಯದಲ್ಲಿ ತೀರಿಕೊಂಡ ಹಿರಿಯರಿಗೆ ವರ್ಷಕ್ಕೊಮ್ಮೆ ಎಡೆಯಿಕ್ಕುವ ದೃಶ್ಯವೊಂದಿದೆ. ಆ ಆಚರಣೆಗೆ ದ್ಯಾವರಗುಡ್ಡ/ಜೋಗಯ್ಯನನ್ನು ಕರೆಸುತ್ತಾರೆ. ಅವರಿಗೆ ಯಾವ ಮಂತ್ರವೂ ಗೊತ್ತಿಲ್ಲ. ಆದರೆ ತೀರಿಕೊಂಡವರ ಹೆಸರನ್ನು ಕೂಗುತ್ತ "ನಮಗೆ ಬಂದ ಹಾಗೆ ಭಕ್ತಿಯಿಂದ ಇದನ್ನೆಲ್ಲ ಅರ್ಪಿಸುತ್ತಿದ್ದೇವೆ. ಎಷ್ಟಾದರೂ ನಾವು ನಿಮ್ಮ ಮಕ್ಕಳು. ಚಿಕ್ಕಪುಟ್ಟ ತಪ್ಪಿದ್ದರೆ ಹೊಟ್ಟೆಗಾಕ್ಕೊಂಡು ನಾವು ಮಾಡಿದ್ದನ್ನು ಅರ್ಪಿಸಿಕೊಳ್ಳಿ. ಮನೆಮಕ್ಕಳನ್ನು ಆಶೀರ್ವದಿಸಿ" ಅಂತ ಕೇಳಿಕೊಳ್ಳುವ ಸಂಭಾಷಣೆಯಿದೆ. ಅದೇ ಮಣ್ಣಿನ ಘಮಲು ಗೊತ್ತಿಲ್ಲದ ಯಾವ ಬರಹಗಾರನು ಆ ಥರದ ಸಂಭಾಷಣೆಯನ್ನು ಬರೆಯಲಾರ ಅನ್ನುವುದು ನನ್ನ ದೃಢವಾದ ನಂಬಿಕೆ. ಸಾಧ್ಯವಾದರೆ ಆ ದೃಶ್ಯವನ್ನು ಮತ್ತೊಮ್ಮೆ ನೋಡಿ, ಸಂಭಾಷಣೆಯನ್ನು ಅದರೊಳಗಿನ ಸತ್ವವನ್ನು ದಯವಿಟ್ಟು ಗಮನಿಸಿ.


ಇದು ಸಂಭಾಷಣೆಗಳ ಸತ್ವವಾದರೆ, ಹಾಡಿನ ಸಾಹಿತ್ಯದ್ದೇ ಮತ್ತೊಂದು ತೂಕ. ಸಿನಿಮಾದ ದೃಶ್ಯ ಬೆಂಗಳೂರಿನಿಂದ ಚಾಮರಾಜನಗರ ಪ್ರಾಂತ್ಯಕ್ಕೆ ಶಿಫ಼್ಟ್ ಆಗುವಾಗ ಬರುವ ಹಾಡೇ "ಏಳುಮಲೆ ಮೇಲೇರಿ". ಆ ಹಾಡಿನ Placement ತುಂಬಾ ಚೆನ್ನಾಗಿದೆ. ಒಂದೇ ಗುಕ್ಕಿನಲ್ಲಿ ನಮ್ಮ ಮೂಡ್ ಬೆಂಗಳೂರಿನಿಂದ ಚಾಮರಾಜನಗರಕ್ಕೆ ಶಿಫ್ಟ್ ಆಗಿಬಿಡುತ್ತದೆ.


ಮಾದಪ್ಪನ ಬೆಟ್ಟದ ಮುಖ್ಯ ಗೋಪುರದ ಮುಂಭಾಗ. "ಅಕ್ಕಯ್ಯ ನೋಡುಬಾರೆ" ಅನ್ನುವಾಗಲೇ ಗಂಗೆಯನ್ನು ಹೊತ್ತು ತರುವ ಹೆಣ್ಣುಮಕ್ಕಳು ಮಾದಪ್ಪನಿಗೆ "ಹಾಲರವಿ" ತರೋದನ್ನು ನೆನಪಿಸುತ್ತಾರೆ. ಅಲ್ಲಲ್ಲಿ ಹೊಡೆಯುವ "ಈಡುಗಾಯಿ"ಗಾಗಿ ಒಬ್ಬರ ಮೇಲೆ ಒಬ್ಬರು ಬಿದ್ದು ಬಾಚಿಕೊಳ್ಳೋದನ್ನು ತೋರಿಸಲಾಗುತ್ತದೆ. ಎತ್ತ ನೋಡಿದರತ್ತ ಜನಜಂಗುಳಿ. ಮಾದಪ್ಪನ ಬೆಟ್ಟ ಅಂದರೆ ಅಮಾವಾಸ್ಯೆಯ ದಿನ ನಡೆಯುವ ಎಣ್ಣೆಮಜ್ಜನ ಸೇವೆಗೆ ಸಿಕ್ಕಾಪಟ್ಟೆ ಜನ ಇರುತ್ತಾರೆ. ಕಾಲಿಡಲು ಜಾಗವಿರುವುದಿಲ್ಲ. ಅದರಲ್ಲೂ ಹಬ್ಬ, ಜಾತ್ರೆ, ತೇರು, ಎಣ್ಣೆಮಜ್ಜನ ಸೇವೆ ಒಟ್ಟಿಗೆ ಬಂತೆಂದರೆ ಅದೆಷ್ಟು ಜನ ಇರುತ್ತಾರೆ ಎಂದರೆ ಚಾಮರಾಜನಗರದ ಬೇರೆ ಬೇರೆ ಕಡೆಗೆ ಹೋಗುವ ಪ್ರೈವೇಟ್ ಬಸ್ಸುಗಳೆಲ್ಲವನ್ನು ಕ್ಯಾನ್ಸಲ್ ಮಾಡಿ ಬರೀ ಬೆಟ್ಟದ ಕಡೆ ಬಿಟ್ಟಿರುತ್ತಾರೆ. ಕೊಳ್ಳೇಗಾಲಕ್ಕೆ ಬರುವ ಪ್ರತೀ ಬೆಟ್ಟದ ಬಸ್ಸು ಕೆಲವೇ ನಿಮಿಷಗಳಲ್ಲಿ ಭರ್ತಿಯಾಗುತ್ತದೆ. ಇಂಥದ್ದೇ ದಿನದಲ್ಲಿ ಈ ಹಾಡಿನ ಚಿತ್ರೀಕರಣ ಮಾಡಿರುವುದು ಈ ಹಾಡಿನ ವಿಶೇಷ! ಹಾಡಿನಲ್ಲಿ ತೇರು, ಜನಜಂಗುಳಿ ಎಲ್ಲವನ್ನೂ ಕಾಣಬಹುದು.


ಮಹದೇಶ್ವರ ಅಂತ ಈಗೀಗ ಎಲ್ಲ ಕಡೆ ಬಳಸಿದರೂ ಅತ್ತಲಿನ ಎಲ್ಲರೂ ಹೇಳುವುದು ಮಾದಯ್ಯ, ಮಾದಪ್ಪ, ಮಾದೇಸ್ವರ ಅಂತಲೇ! ಈ ಹಾಡಿನ ಸಾಹಿತ್ಯದಲ್ಲೂ ಮಾದಯ್ಯ, ಮಾದಪ್ಪ ಅಂತಲೇ ಬಳಸುತ್ತಾರೆ. ಮಾದಪ್ಪ ಪುಟ್ಟ ಹುಡುಗನ ರೂಪ ಹೊಂದಿರುವ ಚಲುವ. ಆತನ ಭಕ್ತರಿಗೆ ಆತ "ಮುದ್ದು ಮಾದಪ್ಪ". ದೇವರಾದರೂ ಮಗು ಮಗುವೇ ತಾನೇ? ಆತ ಆಡುವ ಎಲ್ಲ ತುಂಟಾಟ, ಚೆಲ್ಲಾಟಗಳಿಂದ ಆತನ ಭಕ್ತರಿಗೆ ಆತ "ಚೆಲ್ಲಾಟಗಾರ ಮಾದಪ್ಪ".





ಸಾಹಿತ್ಯ:
ಅಕ್ಕಯ್ಯ ನೋಡು ಬಾರೆ ಈ ಚೆಲುವನಾ
ಚಿಕ್ಕವಳೇ ನೋಡು ಬಾರೇ
ಚಿಕ್ಕವಳೇ ನೋಡು ಬಾರೇ
ಚೆಲುವಯ್ಯನ ನೋಡು ಬಾರೇ ಈ ಕಂದನ
ನಲಿನಲಿದು ನೋಡು ಬಾರೇ
ಕುಣಿಕುಣಿದು ನೋಡು ಬಾರೇ
ಉಘೇ.. ಉಘೇ.. ಉಘೇ.. ಉಘೇ.. ಉಘೇ..


ಏಳು ಮಲೆ ಮ್ಯಾಲೇರಿ
ಕುಂತ ನಮ್ಮ ಮಾದೇವಾ
ನಾಗುಮಲೆ ಮ್ಯಾಲೇರಿ ನಿದ್ದೆ ಮಾಡೋ ಮಾದೇವಾ
ಈ ನಿದ್ದೆ ಸಾಕು ಮಾದೇವಾ..
ನೀ ಎದ್ದು ಬಾರೋ ಮಾದೇವಾ
ಬಿಡಿ ಬಿಡಿ ಎಲ್ಲಾ ದಾರಿ ಬಿಡಿ
ಬರೀ ಮಾತಿಗೆಲ್ಲಾ ಜಗ್ಗಲ್ಲಾ...


ಹಂಗೇ ಕುಣಿರೋ ಹಿಂಗೇ ಕುಣಿರೋ
ನಮ್ಮ ಮುದ್ದು ಮಾದಯ್ಯನ ಮುಂದೆ ಬಗ್ಗಿ ಕುಣಿರೋ
ಎದ್ದು ಕುಣಿರೋ ಬಿದ್ದೂ ಕುಣಿರೋ
ನಮ್ಮ ಮುದ್ದು ಮಾದಯ್ಯನ ಮುಂದೆ
ಬಗ್ಗಿ ಕುಣಿರೋ




ಕಾಡೆಲ್ಲಾ ತುಂಬೈತೆ ಹೂಗಂಧ..
ಕಾವೇರಿ ಹರಿದೈತೆ ಏನ್ ಚಂದ


ಕುಣಿದಾವೂ ಗುಬ್ಬಿ... ಮಾದೇವಾ
ತಂದ್ಯಾವೋ ಗುಟುಕು.. ಮಾದೇವಾ


ಮುದ್ದು ಮಾದಪ್ಪ
ನಿದ್ದೆ ಸಾಕಪ್ಪ
ಎದ್ದು ಬಾರಪ್ಪ ಮಾದೇವಾ


ನಲಿದ್ಯಾವೋ ನವಲೂ .. ಮಾದೇವಾ
ನುಲಿದ್ಯಾವೋ ನಾಗ.. ಮಾದೇವಾ


ಕೊಡುವಾಗಲೆಲ್ಲಾ ಕೊಡ್ತಾನೋ ನಮ್ಮಪ್ಪ ಶಿವಾ
ಅವನು ಒಲಿದರೆ ಕೊರಡು ಕೊನರಿ ಬಂಗಾರ ಬಾಳವ್ವಾ
ಅಕ್ಕರೆ ಮಾತಾಡಿ ಪೂಜೆ ಮಾಡಿ
ಅಂದವನೇ ಮಾದೇವಾ...




ಕೆಂಪಾದೋ ಸೊಂಪಾದೋ ಬಾನೆಲ್ಲಾ...
ಕಂಪಾದೋ ತಂಪಾದೋ ಮಾಳೆಲ್ಲ..


ಈ ಹಕ್ಕಿ ಹಾಡ .. ಕೇಳಯ್ಯಾ
ಆ ದುಂಬಿ ನಾದ ... ಕೇಳಯ್ಯಾ


ಚಂದ್ರ ಚಕೋರ
ಚೆಲ್ಲಾಟಗಾರ
ಚಂದ ಮಾಯ್ಕಾರ ಮಾದೇವ


ಕೇಳಯ್ಯಾ ದುಂಡು ಮಾದೇವಾ
ಎದ್ದೇಳೋ ಮಂಡೆ ಮಾದೇವಾ


ಕೊಡುವಾಗಲೆಲ್ಲಾ ಕೊಡ್ತಾನೋ ನಮ್ಮಪ್ಪ ಶಿವಾ
ಅವನು ಒಲಿದರೆ ಕೊರಡು ಕೊನರಿ ಬಂಗಾರ ಬಾಳವ್ವಾ
ಅಕ್ಕರೆ ಮಾತಾಡಿ ಪೂಜೆ ಮಾಡಿ
ಅಂದವನೇ ಮಾದೇವಾ...


(ಗಾಯಕರು: ಎಸ್.ಪಿ.ಬಾಲಸುಬ್ರಹ್ಮಣ್ಯಂ)




ಈ ಸಾಹಿತ್ಯದ ಸಾಲುಗಳಲ್ಲಿ ಬರುವ ಮಾಳೆಲ್ಲ, ಕೆಂಪಾದೋ, ಸೊಂಪಾದೋ, ದುಂಬಿನಾದ, ಮಂಡೆ ಮಾದೇವ, ಮಾಯ್ಕಾರ, ಏಳುಮಲೆ, ನಾಗಮಲೆ ಇವೆಲ್ಲ ಆ ಪ್ರಾಂತ್ಯದಲ್ಲಿ ಹೆಚ್ಚಾಗಿ ಬಳಸುವ ಪದಗಳು


<< ಅವನು ಒಲಿದರೆ ಕೊರಡು ಕೊನರಿ ಬಂಗಾರ ಬಾಳವ್ವಾ>>
ಮಾದಪ್ಪ ಒಲಿದರೆ ಕೊರಡು (ಒಣಗಿ ಬಿದ್ದ ಮರದ ತುಂಡು) ಕೂಡ ಕೊನರುತ್ತದೆ (ಚಿಗುರುತ್ತದೆ). ಅವನನ್ನು ನಂಬಿದರೆ ನಮ್ಮ ಬಾಳು ಬಂಗಾರವಾಗುತ್ತದೆ


(Ref:
ನೀನೊಲಿದರೆ ಕೊರಡು ಕೊನರುವುದಯ್ಯ
-ಬಸವಣ್ಣ)


 

ಕಾವೇರಿ (ನಮ್ಮ ರಾಜ್ಯದಿಂದ ಪಕ್ಕದ ತಮಿಳುನಾಡಿಗೆ ಹರಿಯುವ ಕಾವೇರಿ ನದಿ ಮಹದೇಶ್ವರ ಬೆಟ್ಟದ ಪಕ್ಕದಲ್ಲೇ ಹರಿದು ಮೆಟ್ಟೂರು ಸೇರುತ್ತದೆ) ಇದೇ "ಕಾರಣಕ್ಕೆ ಕಾವೇರಿ ಹರಿದೈತೆ ಏನ್ ಚಂದ" ಅನ್ನುವ ಸಾಲನ್ನು ಕಾಣಬಹುದಾಗಿದೆ.


 

ಉಘೇ ಉಘೇ
ಉಘೇ ಮಹಾಂತ್ ಮಲ್ಲಯ್ಯ


(ಮಾದಪ್ಪನಿಗೆ ಕೂಗುವ ಜೈಕಾರ)

 

ನಾಗುಮಲೆ = ನಾಗಮಲೆ ಮಹದೇಶ್ವರ ಬೆಟ್ಟದಿಂದ 15km ದೂರದಲ್ಲಿರುವ ಸ್ಥಳ. ಅಲ್ಲೇ ಮಾದಪ್ಪ ತಪಸ್ಸಿಗೆ ಕುಳಿತದ್ದು. ಅವರಿಗೆ ನೆರಳಾಗಲೆಂದು ಸರ್ಪವೊಂದು ಬಂದು ತನ್ನ ಹೆಡೆಯನ್ನು ಮಾದಪ್ಪನ ತಲೆಯ ಮೇಲೆ ತಂದು ನೆರಳು ನೀಡಿತಂತೆ.

 

ಹ್ಯಾಟ್ರಿಕ್ ಹೀರೋ ಶಿವರಾಜ್'ಕುಮಾರ್ ತಮ್ಮ ಎನರ್ಜಿಗೆ ಹೆಸರಾದವರು. ಈ ಹಾಡಿನಲ್ಲಿ ಸಿಕ್ಕಾಪಟ್ಟೆ ಕುಣಿದಿದ್ದಾರೆ. ಇಡೀ ಹಾಡಿನಲ್ಲಿ ಶಿವರಾಜ್'ಕುಮಾರ್ ಸೇರಿದಂತೆ ಎಲ್ಲ ಕಲಾವಿದರು ಬರಿಗಾಲಲ್ಲಿ ಕುಣಿದಿದ್ದಾರೆ. ಬಿಸಿಲಿನಲ್ಲೂ ನೂರಾರು ನೃತ್ಯಕಲಾವಿದರಿಂದ ಕುಣಿಸಲಾಗಿದೆ. ಬೆಟ್ಟದ ಬಿಸಿಲಿನ ಅರಿವಿರುವವರಿಗೆ ಗೊತ್ತಾಗುತ್ತದೆ ಆ ನೃತ್ಯ ಕಲಾವಿದರ ಕಾಲಿಗೆ ಬೊಬ್ಬೆ ಬಂದಿರಲೂಬಹುದೆಂದು.


ಈ ಹಾಡಿಗೆ ಬಳಸಲಾಗಿರುವ ಸಂಗೀತ ವಾದ್ಯಗಳ ಪೈಕಿ ಮುಖ್ಯವಾಗಿರುವುದು ಕಂಸಾಳೆ. ಮಾದಪ್ಪನಿಗೆ ಬಹಳ ಇಷ್ಟವಾದದ್ದು. ಗುರುಕಿರಣ್ ಅದೆಷ್ಟು ಚೆಂದ ಬಳಸಿಕೊಂಡಿದ್ದಾರೆ ನೋಡಿ.


ಹೀಗೆ ಚಂದದ ಚಿತ್ರವೊಂದು ಸುಮ್ಮನೆ ಹಾಗೇ ಹಿಟ್ ಆಗುವುದಿಲ್ಲ. ಪ್ರತೀ ವಿಷಯಗಳು ಸರಿಯಾಗಿ ಕೂಡಿ ಬಂದಾಗ ಇಂಥದ್ದೊಂದು ಚಂದದ ಸಿನಿಮಾ ಆಗುತ್ತದೆ. ಇಲ್ಲಿ ನಮ್ಮ ಮಣ್ಣಿನ ಘಮಲಿರುವ ಅನೇಕ ಅಂಶಗಳಿವೆ. ಇದೇ ಕಾರಣಕ್ಕೆ ಈ ಸಿನಿಮಾವನ್ನು ಬೇರೆ ಯಾವ ಭಾಷೆಯಲ್ಲೂ ರಿಮೇಕ್ ಮಾಡಿದಾಗ ಇದು ಅಲ್ಲಿನ ಸಿನಿಮಾ ಅನ್ನಿಸಿಕೊಳ್ಳಲಿಲ್ಲ.

ಕಡೆಯದಾಗಿ,
ಈ ಮೇಲಿನ ಹಾಡು ಸೇರಿದಂತೆ ಈ ಸಿನಿಮಾದ ಎಲ್ಲ ಹಾಡುಗಳ ಸಾಹಿತ್ಯ, ಕಥೆ, ಚಿತ್ರಕಥೆ ಬರೆದಿರುವುದು ನಿರ್ದೇಶಕ ಪ್ರೇಮ್. ಸಿನಿಮಾದ ಯಶಸ್ಸಿನ ಬಹುಭಾಗ ಇವರಿಗೆ ಸಲ್ಲಬೇಕು. ಇಂದು 19-Aug. ಜೋಗಿ ಸಿನಿಮಾ ಬಿಡುಗಡೆಯಾದದ್ದು 19-Aug-2005 ರಲ್ಲಿ. ಅಂದರೆ ಆಗಲೇ ಇಂದಿಗೆ 17 ವರ್ಷಗಳಾಯಿತಂತೆ. ನಿನ್ನೆಯಷ್ಟೇ ಬಿಡುಗಡೆಯಾಗಿ ಥಿಯೇಟರುಗಳಲ್ಲಿ ಬ್ಲ್ಯಾಕ್ ಟಿಕೆಟ್ ಕೊಂಡು ಸಿನಿಮಾ ನೋಡಿದ ಹಾಗಿದೆ.


ಅಂಥದ್ದೊಂದು ಸಿನಿಮಾ ಕೊಟ್ಟ ಜೋಗಿ ಸಿನಿಮಾ ತಂಡದವರಿಗೆ ಅಭಿನಂದನೆಗಳು.


ಧನ್ಯವಾದಗಳು.
-ಸಂತೋಷ್ ಕುಮಾರ್ ಎಲ್.ಎಂ (Santhoshkumar Lm)


#Jogi #17years


#santhuLm
19-Aug-2022

Wednesday, March 9, 2022

Killer Spider (Persian, 2020)







2000-01 ನೇ ಇಸವಿಯಲ್ಲಿ ಇರಾನಿನ ಮಶಾದ್ ನಗರದ ಹೊರಭಾಗದ ಬೇರೆ ಬೇರೆ ಜಾಗಗಳಲ್ಲಿ ಕೇವಲ ಎರಡು ವರ್ಷಗಳ ಅವಧಿಯಲ್ಲಿ ಹದಿನಾರು ಶವಗಳು ಪತ್ತೆಯಾಗುತ್ತವೆ. ಆ ಶವಗಳೆಲ್ಲ ಮಹಿಳೆಯರದೇ ಆಗಿರುತ್ತವೆ.

ಮುಂದಿನ ಕೆಲವೇ ದಿನಗಳಲ್ಲಿ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಯೀದ್ ಹನೈ (saeed hanai) ಎಂಬಾತ ಸಿಕ್ಕಿಬೀಳುತ್ತಾನೆ. ಅವನನ್ನು ವಿಚಾರಣೆಗೊಳಪಡಿಸಿದಾಗ ಆ ಹದಿನಾರೂ ಮಹಿಳೆಯರನ್ನು ತಾನೇ ಕೊಂದು ಬಿಸಾಡಿದ್ದಾಗಿ ಒಪ್ಪಿಕೊಳ್ಳುತ್ತಾನೆ. ಅಚ್ಚರಿಯೆಂದರೆ ಆ ಕೊಲೆಗಳನ್ನು ಮಾಡಿದ್ದಕ್ಕೆ ಆತನಿಗೆ ಯಾವುದೇ ಪಶ್ಚಾತ್ತಾಪವಿರುವುದಿಲ್ಲ. ಏಕೆಂದರೆ ಆ ಕೊಲೆಯಾದ ಮಹಿಳೆಯರೆಲ್ಲ ವೇಶ್ಯಾವಾಟಿಕೆಯಲ್ಲಿ ತೊಡಗಿರುತ್ತಾರೆ. ಆತ "ಅವರೆಲ್ಲರನ್ನು ಅಂತ್ಯಗೊಳಿಸಿ ಇಡೀ ನಗರವನ್ನು ಇತರರಿಗೆ ವಾಸಿಸಲು ಅನುಕೂಲವಾಗುವಂತೆ ಸ್ವಚ್ಚಗೊಳಿಸುವ ಪವಿತ್ರ ಕಾರ್ಯದಲ್ಲಿ ತೊಡಗಿದೆ" ಅಂತ ಎದೆತಟ್ಟಿ ಹೇಳಿಕೊಳ್ಳುತ್ತಾನೆ.

ಆತನಿಗೆ ಮದುವೆಯಾಗಿ ಈಗಾಗಲೇ ಮೂವರು ಮಕ್ಕಳಿರುತ್ತಾರೆ. ಆತನ ಹೆಂಡತಿಯ ಜೊತೆ ಇನ್ಯಾರೋ ಅಶ್ಲೀಲವಾಗಿ ವರ್ತಿಸಿದರು ಎಂಬ ಕಾರಣಕ್ಕೆ ಆತನಿಗಾಗಿ ಇಡೀ ಮಶಾದ್ ನಗರದಲ್ಲಿ ಹುಡುಕಾಡಿ ಸೋಲುತ್ತಾನೆ. ಇದೇ ಸಂದರ್ಭದಲ್ಲಿ ಆತನಿಗೆ ಅಲ್ಲಿ ನಡೆಯುತ್ತಿರುವ ವೇಶ್ಯಾವಾಟಿಕೆಯ ಬಗ್ಗೆ ತಿಳಿದು ಬರುತ್ತದೆ. ಕೇವಲ ಮಹಿಳೆಯರಿಂದಲೇ ಇಂಥ ಕೆಟ್ಟ ಕೆಲಸಗಳೆಲ್ಲ ನಡೆಯುತ್ತಿವೆ ಎಂಬ ತಪ್ಪು ಗ್ರಹಿಕೆಯಿಂದ ಅಂಥವರನ್ನೆಲ್ಲ ಈ ಸಮಾಜದಿಂದಲೇ ಅಳಿಸಿ ಹಾಕುವ ಪಣತೊಟ್ಟು ಒಬ್ಬೊಬ್ಬರನ್ನಾಗಿ ಕೊಲೆ ಮಾಡುತ್ತಿರುತ್ತಾನೆ.

ಅಂಥವರನ್ನು ತನ್ನ ಮನೆಗೆ ಬರುವಂತೆ ಮಾಡಿ, ಮನೆಯೊಳಗೆ ಅವರನ್ನು ಕೊಲೆ ಮಾಡುವುದರಿಂದ ಆ ಸರಣಿ ಕೊಲೆಗಳನ್ನು "Spider Killing" ಅಂತ ಕರೆಯಲಾಯಿತು. ವಿಚಿತ್ರವೆಂದರೆ ಹತ್ಯೆಯಾದವರು ತಮ್ಮ ಕುಟುಂಬವನ್ನು ಮುನ್ನಡೆಸಲು ಬೇರೆ ವಿಧಿಯಿಲ್ಲದೆ ಆ ಬಗೆಯ ಚಟುವಟಿಕೆಗಳಲ್ಲಿ ಭಾಗಿಯಾಗಿರುತ್ತಾರೆ.

ವಿಚಾರಣೆ ನಡೆಸಿದ ಘನ ನ್ಯಾಯಾಲಯ ಆರೋಪಿಗೆ ಗಲ್ಲುಶಿಕ್ಷೆ ವಿಧಿಸುತ್ತದೆ. ಆಗಲೂ ಆತನ ಕೃತ್ಯದ ಬಗ್ಗೆ ಅನೇಕ ಪರ-ವಿರೋಧ ಚರ್ಚೆಗಳಾಗುತ್ತವೆ. ಎಲ್ಲ ದೇಶಗಳಲ್ಲೂ ಎಲ್ಲ ಕಾಲಗಳಲ್ಲೂ ಧರ್ಮಾಂಧರು, Extremist ಗಳು ಇದ್ದರು, ಇರುತ್ತಾರೆ ಅನ್ನುವುದು ಈ ಘಟನೆಯ ಬಗ್ಗೆ ಗೊತ್ತಾದಾಗ ಅರ್ಥವಾಗುತ್ತದೆ.

ಈ ಘಟನೆಗಳನ್ನೇ ಆಧರಿಸಿದ "Killer Spider" ಎಂಬ ಸಿನಿಮಾ ಇರಾನಿನಲ್ಲಿ ೨೦೨೦ರಲ್ಲಿ ಬಿಡುಗಡೆಯಾಗಿದೆ. ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಈ ಸಿನಿಮಾ ಪ್ರದರ್ಶನಗೊಂಡಿದ್ದರಿಂದ ನೋಡುವ ಅವಕಾಶ ಸಿಕ್ಕಿತು. ಕೊಲೆ ಮಾಡುವ ದೃಶ್ಯಗಳು ರಿಪೀಟೆಡ್ ಅನ್ನಿಸಿದವು ಅನ್ನುವುದನ್ನು ಬಿಟ್ಟರೆ, ಅನೇಕ ಸೂಕ್ಷ್ಮ ವಿಷಯಗಳನ್ನು ಸಿನಿಮಾದಲ್ಲಿ ಹೇಳಲು ಪ್ರಯತ್ನಿಸಲಾಗಿದೆ.

ಪೊಲೀಸರು ಸಯೀದ್ ಹನೈನನ್ನು ಬಂಧಿಸಿ ಕರೆದೊಯ್ಯುವಾಗ ಆತನ ತಾಯಿ ಮೊಮ್ಮಗನನ್ನು ಕಳುಹಿಸಿ "ಹೋಗು.... ಜೋರಾಗಿ ಗೋಳಾಡು...... ಮತ್ತು ನೀನು ಮಾಡಿರುವ ಕೆಲಸದ ಬಗ್ಗೆ ನಮಗೆ ಹೆಮ್ಮೆಯಿದೆ ಅಂತ ಕಿರುಚಿ ಹೇಳು" ಅಂತ ಕಳುಹಿಸುತ್ತಾಳೆ. ಆ ಮಗು ಹಾಗೆಯೇ ಮಾಡುತ್ತದೆ. ಅದೊಂದು ದೃಶ್ಯ ಅನೇಕ ವಿಷಯಗಳನ್ನು ನಮಗೆ ಹೇಳುತ್ತದೆ.

ಅವಕಾಶ ಸಿಕ್ಕರೆ ನೋಡಿ....

-Santhosh Kumar LM
09-Mar-2022

Thursday, February 10, 2022

The boy in the striped pajamas (2008, English)








The boy in the striped pajamas (2008, English)

ಯಹೂದಿಗಳನ್ನು ಬಂಧಿಸಿಟ್ಟು ಮಾರಣ ಹೋಮ ನಡೆಸುತ್ತಿದ್ದ ಕಾನ್ಸಂಟ್ರೇಷನ್ ಕ್ಯಾಂಪಿನೊಳಗೆ.... ಬಂಧಿಯಾಗಿರುವ ಎಂಟು ವರ್ಷದ ಪುಟ್ಟ ಹುಡುಗನಿಗೂ, ಅದೇ ಕಾನ್ಸಂಟ್ರೇಷನ್ ಕ್ಯಾಂಪಿನಲ್ಲಿ ಸೈನಿಕನಾಗಿರುವವನೊಬ್ಬನ ಮಗನಿಗೂ ಹೀಗೆ ಗೆಳೆತನವಾಗುತ್ತದೆ. ಆ ಮೂಲಕ ಎರಡೂ ಬದಿಯ ಪ್ರಪಂಚವನ್ನು ನಮಗೆ ಅರ್ಥ ಮಾಡಿಸುವ ಸಿನಿಮಾ "The boy in the striped pajamas".







----







ಎಂಟು ವರ್ಷದ ಬಾಲಕ Bruno, ಮತ್ತು ಅವನಿಗೆ ಮನೆಗೆ ಬಂದು ಪಾಠ ಹೇಳಿಕೊಡುವ (ನಾಜಿ ಪ್ರಾಪಗ್ಯಾಂಡಾ ದ ಮೇಲೆ ವಿಶೇಷ ಒಲವು ಇರುವ) Herr Liszt ನಡುವಿನ ಸಂಭಾಷಣೆ.....




Herr Liszt: Yes Bruno?




Bruno: I don't understand, the Jew is down to this one man?




Herr Liszt: The Jew here means the entire Jewish race. If it was just this one man I'm sure something would be done about him.




Bruno: There is such thing as a nice Jew isn't there?




Herr Liszt: [Sarcastically] I think Bruno if you ever find a nice Jew, you'd be the best explorer in the world.




---------------------------------




ತುಂಬಾ ದಿನಗಳಾದ ಮೇಲೆ ಬಾಕಿ ಇದ್ದ ಸಿನಿಮಾಗಳ ಪೈಕಿ ಇದನ್ನು ನೋಡಿದೆ. ಮುಗಿದ ಮೇಲೆ ಈ ಸಿನಿಮಾಗೆ ಪ್ರತಿ ಪಾತ್ರವನ್ನು ಕಟ್ಟಿರುವ ರೀತಿ ಮತ್ತು ಅವುಗಳಿಗೆ ಸಂಭಾಷಣೆ ಬರೆದ ರೀತಿ ಅದ್ಭುತ ಅನ್ನಿಸಿತು. ಬರೀ ಈ ನಾಲ್ಕು ಪಾತ್ರಗಳನ್ನು ಗಮನಿಸಿ.




ಸೈನಿಕ - ಆತನಿಗೆ ತಾನು ಮಾಡುತ್ತಿರುವುದು ಒಳ್ಳೆಯದು, ಕೆಟ್ಟದ್ದು ಎಲ್ಲವೂ ಗೊತ್ತಿದೆ. ಆದರೆ "ಹಿಟ್ಲರ್ ಮಾಡುತ್ತಿರುವುದೆಲ್ಲ ಈ ದೇಶವನ್ನು ಮತ್ತೆ ಉತ್ತುಂಗಕ್ಕೇರಿಸಲು" ಅಂತ ನಂಬಿರುವ ನಾಜಿ ಪಡೆಯ ಹಿರಿಯ ಸೈನಿಕ




ಸೈನಿಕನ ಹೆಂಡತಿ - ಸ್ವತಃ ಗಂಡನೇ ಸೈನಿಕನಾಗಿದ್ದರೂ ಆತ ತೊಡಗಿರುವ ಪಾಪಕೃತ್ಯವನ್ನು ನೋಡಿ ಪ್ರಶ್ನಿಸುವವಳು, ಪ್ರತಿರೋಧಿಸುವವಳು




ಮಗಳು (12 ವರ್ಷ) - ದೊಡ್ಡವರು ಹೇಳಿದ್ದನ್ನು ಕಣ್ಣುಮುಚ್ಚಿ ನಂಬಿ, "ಯಹೂದಿಗಳೆಲ್ಲ ಪಾಪಿಗಳು, ಅವರೆಲ್ಲ ಈ ಭೂಮಿಯಿಂದ ಸರ್ವನಾಶವಾಗಬೇಕು" ಅಂತ ಬ್ರೈನ್ ವಾಶ್ ಆಗಿರುವವಳು




ಮಗ (8 ವರ್ಷ) - ಯಾರು ಏನು ಹೇಳಿದರೂ ಅದನ್ನು ನಂಬದೇ, ತಾನೇ ಪ್ರತಿಯೊಂದನ್ನು explore ಮಾಡಿ ಅದರ ಮೂಲಕವಷ್ಟೇ ಸತ್ಯಾಸತ್ಯತೆಗಳನ್ನು ಪರಿಶೀಲಿಸುವವನು!




ಯಹೂದಿಗಳ ಮೇಲಿನ ನಾಜಿಗಳ ಹಿಂಸೆಯನ್ನು ದೊಡ್ಡವರ ದೃಷ್ಟಿಕೋನದಲ್ಲಿ ತೋರಿಸದೆ ಅದನ್ನು ಎಂಟು ವರ್ಷದ ಬಾಲಕನೊಬ್ಬನ ಕಣ್ಣಿನಿಂದ ನೋಡಲು ಪ್ರಯತ್ನಿಸಿರುವುದು ಈ ಸಿನಿಮಾದಲ್ಲಿ ಬೆಸ್ಟ್. ನೋಡಿ ಚರ್ಚೆ ಮಾಡಲು ಸಕ್ಕತ್ ಸಿನಿಮಾ ಇದು.




ಸೈನಿಕನ ಮಗನ Explore ಮಾಡುವ, ಅನುಕಂಪ ತೋರುವ ಕಣ್ಣುಗಳು

ಮತ್ತು

ಯಹೂದಿ ಹುಡುಗನ ಅಮಾಯಕ, ದೈನ್ಯ ಕಣ್ಣುಗಳು

ಸಿನಿಮಾ ಮುಗಿದ ಮೇಲೂ ಕಾಡುವುದು ಗ್ಯಾರಂಟಿ.




ನೋಡಿರದಿದ್ದರೆ ನೋಡಿ. ನೆಟ್‍ಫ್ಲಿಕ್ಸ್'ನಲ್ಲಿದೆ.




-Santhosh Kumar LM

10-Feb-2022