ಮದ ಯಾನೈ ಕೂಟ್ಟಂ (ಮದದಾನೆಗಳ ಕೂಟ) (2013, Family Drama, Thriller)
ಅಲ್ಲೊಂದು ಮದುವೆ ನಡೆಯುತ್ತದೆ. ಆಡಂಬರವಿಲ್ಲ. ಆದರೆ ಆ ಸ್ಥಿತಿಗತಿಯ ಮನೆಯಲ್ಲಿ ಚೆಂದ ನಡೆಯಬಹುದಾದ ಮದುವೆ. ಅಲ್ಲಿ ಅತಿಥಿಗಳು ಯಾವುದೇ ಥಿಯೇಟರಿನಲ್ಲಿ ಕೂತಂತೆ ಒಬ್ಬರ ಪಕ್ಕ ಓರಣವಾಗಿ ಕೂತಿರುವುದಿಲ್ಲ. ಅಲ್ಲಿ ಜನರ ಓಡಾಟವಿದೆ. ಒಬ್ಬೊಬ್ಬರಲ್ಲೂ ಸಂಭ್ರಮವಿದೆ. ಆ ಮದುಮಗನೂ ನೋಡಲು ಹೀರೋ ಥರವಿಲ್ಲ. ಆದರೆ ಲಕ್ಷಣವಾಗಿದ್ದಾನೆ. ಮದುವೆ ಜೋಡಿಯನ್ನು ಕರೆದುಕೊಂಡು ಹೋಗುವ ಬೀದಿಯಲ್ಲಿ ಜನರ ಕುಣಿದಾಟ.
ಆ ಮನೆಯಲ್ಲೊಂದು ಸಾವಾಗಿದೆ. ತೀರಿಕೊಂಡವನ ಜೊತೆ ನೋಡಲು ಬಂದವರೆಲ್ಲರ ಒಡನಾಟ ಬೇರೆಬೇರೆಯಿದೆ. ಅಲ್ಲೊಂದು ಶಾಮಿಯಾನ, ಬಂದವರ ಮೌನ, ಆತ್ಮೀಯರ ಗೋಳಾಟ, ಅಲ್ಲಲ್ಲೇ ಆಗದವರ ಮನಸ್ತಾಪಗಳು, ಆ ಭಾಗದಲ್ಲಿನ ಸಾವಿನ ಸಂದರ್ಭದ ವಿಧಿವಿಧಾನಗಳು....ಇಂಥ ಅನೇಕ ದೃಶ್ಯಗಳಲ್ಲಿ ಎಲ್ಲೂ ಅತಿಶಯೋಕ್ತಿಗಳಿಲ್ಲ. ಆದರೆ ಇದು ಖಂಡಿತ ಆರ್ಟ್ ಸಿನಿಮಾ ಅಲ್ಲ. ಭಯ ಹುಟ್ಟಿಸುವ ರೋಚಕ ದೃಶ್ಯಗಳಿವೆ. ಕದಿರ್ ಅನ್ನುವ ನಟನೊಬ್ಬನನ್ನು ತಮಿಳು ಚಿತ್ರರಂಗಕ್ಕೆ ಪರಿಚಯಿಸಿದ ಸಿನಿಮಾ ಇದು.
ಸಿನಿಮಾದ ಹೆಸರು "ಮದ ಯಾನೈ ಕೂಟ್ಟಂ". ಬಿಡುಗಡೆಯಾಗಿದ್ದು 2013 ರಲ್ಲಿ. ಖ್ಯಾತ ನಿರ್ದೇಶಕ ಬಾಲು ಮಹೇಂದರ್ ಶಿಷ್ಯ ವಿಕ್ರಮ್ ಸುಗುಮಾರನ್ ನಿರ್ದೇಶನದಲ್ಲಿ ಮೂಡಿಬಂದ ಫ್ಯಾಮಿಲಿ ಡ್ರಾಮಾ ಥ್ರಿಲ್ಲರ್ ಚಿತ್ರ.
ಅದು ತಮಿಳುನಾಡಿನ ಕಂಬಂ-ತೇಣಿ ಬಳಿಯ ಊರು. ಆತನ ಹೆಸರು ಜಯಕ್ಕೋಡಿ. ಅವನಿಗೆ ಇಬ್ಬರು ಹೆಂಡತಿಯರು. ಮೊದಲ ಹೆಂಡತಿಯಿಂದ ಒಂದು ಗಂಡು, ಒಂದು ಹೆಣ್ಣು. ಎರಡನೇ ಹೆಂಡತಿಯಿಂದ ಒಂದು ಗಂಡು, ಒಂದು ಹೆಣ್ಣು. ತನ್ನ ಗಂಡನ ಎರಡನೆ ಸಂಬಂಧದ ಬಗ್ಗೆ ತಿಳಿದಾಕ್ಷಣ ಮೊದಲ ಹೆಂಡತಿ ತನ್ನಣ್ಣನ ಮನೆಯಲ್ಲಿ ಬಂದು ನೆಲೆಸಿದ್ದಾಳೆ. ಸಹಜವಾಗಿ ಆಕೆಗೆ ತನ್ನ ಗಂಡನ ಬಗ್ಗೆ ಮತ್ತು ಆತನನ್ನು ಮರುಳು ಮಾಡಿದವಳ ಬಗ್ಗೆ ಆಕ್ರೋಶವಿದೆ. ಅವಳ ಅಣ್ಣನಿಗೂ ತನ್ನ ತಂಗಿಯ ಬಾಳನ್ನು ಹಾಳು ಮಾಡಿದ ಆಕೆಯ ಗಂಡನ ಬಗ್ಗೆ ದ್ವೇಷವಿದೆ. ಆ ಊರಿನ ಒಂದಷ್ಟು ಜನ ಹುಡುಗರೆಲ್ಲ ಈ ಅಣ್ಣ-ತಂಗಿಯ ಸುಪರ್ದಿನಲ್ಲೇ ಅವರು ಹೇಳಿದ ಎಂತಹ ಕೆಲಸ ಬೇಕಾದರೂ ಮಾಡುತ್ತಾರೆ.
ಇವರ ಸಹವಾಸವೇ ಬೇಡ ಅಂತ ಜಯಕ್ಕೋಡಿ ತನ್ನ ಎರಡನೆಯ ಹೆಂಡತಿಯ ಮತ್ತು ಮಕ್ಕಳ ಜೊತೆ ನೆಲೆಸಿದ್ದಾನೆ. ಈ ಎರಡೂ ಕುಟುಂಬದ ಒಬ್ಬರಿಗೊಬ್ಬರಿಗೆ ಆಗುವುದಿಲ್ಲ. ಅದರೆ ಮೊದಲ ಹೆಂಡತಿಯ ಮಗನಿಗೆ, ಎರಡನೆಯ ಹೆಂಡತಿಯ ಮಗ ಅಂದರೆ ತಮ್ಮನನ್ನು ಕಂಡರೆ ಏನೋ ಪ್ರೀತಿ. ಅದರೆ ಅಮ್ಮ-ಮಾವನ ಬಿಗಿಯಿಂದ ಆತನೊಂದಿಗೆ ಮಾತನಾಡುತ್ತಿಲ್ಲ.
ಜಯಕ್ಕೋಡಿ ತನ್ನ ಮಗಳನ್ನು ಮದುವೆ ಮಾಡಿದ ಮರುದಿನವೇ ತೀವ್ರ ಹೃದಯಾಘಾತದಿಂದ ಅಸುನೀಗುತ್ತಾನೆ. ಇದೀಗ ಅವನ ಶವಸಂಸ್ಕಾರವನ್ನು ಮೊದಲ ಹೆಂಡತಿಯ ಮನೆಯಲ್ಲೇ ನಡೆಯಬೇಕೆಂದು ಪಟ್ಟು ಹಿಡಿಯುತ್ತಾರೆ. ಅಲ್ಲಿಂದ ಕಥೆ ಅನೇಕ ನಾಟಕೀಯ ತಿರುವುಗಳೊಂದಿಗೆ ಸಾಗುತ್ತದೆ. ಅಲ್ಲಿ ಸುರಿಯುವ ರಕ್ತದ ಚಿತ್ರಣ ಬಿಟ್ಟರೆ ಉಳಿದ ಜಗಳಗಳೆಲ್ಲ ಸಾಮಾನ್ಯವಾಗಿ ನಾವು ನೋಡಿರುವಂಥವೇ. ಸಿನಿಮಾ ನೋಡುವಾಗ ನಾವೇ ಒಂದು ಸಾವಿನ ಮನೆಯಲ್ಲಿ ಕೂತಂತೆ ಭಾಸವಾಗುತ್ತದೆ.
ಫ್ಯಾಮಿಲಿ ಡ್ರಾಮಾ ಕಥೆಯಾದರೂ ಕೊನೆಯ ದೃಶ್ಯದವರೆಗಿನ ನಿರೂಪಣೆ ಒಂದೇ ಕ್ಷಣವೂ ಬೇಸರ ಹುಟ್ಟಿಸುವುದಿಲ್ಲ. ಇಡೀ ಸಿನಿಮಾ ಮೊದಲ ದೃಶ್ಯದ ಫೀಲ್ ಹೇಗಿದೆಯೋ, ಮುಗಿಯುವಾಗಲೂ ಅದೇ ರೀತಿ ಮುಕ್ತಾಯವಾಗುತ್ತದೆ. ಮೊದಲ ನಿರ್ದೇಶನದಲ್ಲೇ ಸುಗುಮಾರನ್'ಗೆ ತನ್ನ ಸಿನಿಮಾ ಬಗ್ಗೆ ಇರುವ ಸ್ಪಷ್ಟತೆ ಮೆಚ್ಚುವಂಥದ್ದು.
- ತನ್ನ ತಂದೆಯ ಇನ್ನೊಬ್ಬಳು ಹೆಂಡತಿಯ ಮಗ ಶತ್ರುಗಳಿಗೆ ಹಿಗ್ಗಾಮುಗ್ಗಾ ಚಚ್ಚಿದ್ದನ್ನು ಕೇಳುವ ಮೊದಲ ಹೆಂಡತಿಯ ಮಗ "ಎಷ್ಟಾದರೂ ಅವನು ನನ್ನ ತಮ್ಮ" ಅಂತ ಮೀಸೆ ತಿರುವುತ್ತಾನೆ.
- ಜಾತ್ರೆಯಲ್ಲಿ ಮೊದಲ ಹೆಂಡತಿ ದುಡ್ಡು ಕೊಟ್ಟಾಗ ಸ್ಪೀಕರಿನಲ್ಲಿ ಅದನ್ನು ಅನೌನ್ಸ್ ಮಾಡುವಾತ ಆಕೆಯ ಹೆಸರನ್ನು ಮಾತ್ರ ಕರೆಯುತ್ತಾನೆ. ಆಗ ಆಕೆ ಅವನಿಗೆ ದಬಾಯಿಸಿ "ನನ್ನ ಗಂಡನ ಹೆಸರು ಸೇರಿಸಿ ಹೇಳು" ಅಂತಾಳೆ. ಆತ "ಅವನ ಹೆಸರ್ಯಾಕೆ?" ಅಂದಾಗ "ನಾನು ಕಟ್ಟಿಕೊಂಡ ಹೆಂಡತಿ. ಅವನನ್ನು ಹೇಗೆ ಬೇಕಾದರೂ ಬೈತೀನಿ. ಬೇರೆಯವರು ಯಾರಾದರೂ ಅವನು-ಇವನು ಅಂತ ಮಾತಾಡಿದ್ರೆ ಚಮ್ಡಾ ಸುಲೀತೀನಿ" ಅಂತ ರೇಗುತ್ತಾಳೆ.
- ಶವವನ್ನು ಮೊದಲ ಹೆಂಡತಿಯ ಮನೆಗೆ ತಂದ ದೃಶ್ಯ...... ಇಷ್ಟು ದಿನ ಅವನನ್ನು ಕಂಡೊಡನೆ ಉರಿದು ಬೀಳುತ್ತಿದ್ದ ಹೆಂಡತಿ ಕಣ್ಣೀರಾಗುತ್ತಾಳೆ.
- "ಎಂದಾದರೂ ನಾವೆಲ್ಲ ಒಂದಾಗುತ್ತೇವೆ, ನೀ ವಾಪಸ್ಸು ಬರುವೆ ಅಂತ ಕಾಯ್ತಿದ್ದೆ ಅಪ್ಪ" ಅಂತ ಎದೆ ಬಡಿದುಕೊಂಡು ಅಳುವ ಮೊದಲ ಹೆಂಡತಿಯ ಮಗ.
- ತನ್ನ ಗಂಡನ ಎರಡನೇ ಹೆಂಡತಿಯನ್ನು ಕೊಲೆ ಮಾಡುತ್ತಾರೆ ಎಂದು ತಿಳಿದ ಮೊದಲನೆ ಹೆಂಡತಿ ತಾನೇ ಹೋಗಿ ಆಕೆಯನ್ನು ರಕ್ಷಿಸುತ್ತಾಳೆ
ಈ ಥರ ಪುಟ್ಟ ಪುಟ್ಟ ಅನೇಕ ಸೂಕ್ಷ್ಮ ದೃಶ್ಯಗಳಿವೆ. "ಲೇಯ್ ತಮ್ಮಯ್ಯ. ಆಗಲೇ ಅದೆಲ್ಗ್ ಒಂಟೆ. ಇಟ್ಟುಣ್ಕೊಂಡೋಗು" ಅಂತ ಗದರಿಸಿ ಹೇಳಿದರೂ ಅಲ್ಲೊಂದು ಪ್ರೀತಿ ಇರುತ್ತಲ್ಲ. ಅದೇ ರೀತಿ ಆ ಭಾಗದ ಜನರು ಮಾತನಾಡುವುದು ನಮಗೆ ಒರಟಾಗಿ ಧ್ವನಿಸಬಹುದು. ಆದರೆ ಅಲ್ಲಿ ಪ್ರೀತಿಯಿರುತ್ತದೆ. ಅದೇ ಬಗೆಯ ಸಂಭಾಷಣೆಯನ್ನು ಇಲ್ಲಿ ಸಿನಿಮಾದುದ್ದಕ್ಕೂ ಬಳಸಿಕೊಂಡಿದ್ದಾರೆ. ನಾವು ಅಲ್ಲೇ ಇದ್ದೀವೇನೋ ಅನ್ನುವ ಭಾವ ಕೊನೆಯವರೆಗೂ ಇರುತ್ತದೆ. ಹಿನ್ನೆಲೆ ಸಂಗೀತ, ಹಾಡುಗಳೂ ಅಷ್ಟೇ, ಹೊಸತೆನಿಸುತ್ತದೆ. ಯಾವುದೇ ಹಾಡನ್ನು ಸ್ಕಿಪ್ ಮಾಡದೇ ಸಿನಿಮಾ ನೋಡಿದೆ. "ಉನ್ನೈ ವಳಂಗಾದ" ಅನ್ನುವ ಮೊದಲ ಹಾಡನ್ನು ನೀವು ಅರಗಿಸಿಕೊಳ್ಳದಿದ್ದರೆ ಸಿನಿಮಾದ ಅರ್ಥವನ್ನೇ ಅರ್ಧ ಕಳೆದುಕೊಂಡಂತೆ.
ಪ್ರೇಮಕಥೆಯೊಂದು ಮಧ್ಯೆ ಹಾದು ಹೋದರೂ ಅದು ಕೂಡ ಸಿನಿಮಾದ ರೋಚಕತೆಯನ್ನು ಹಾಳು ಮಾಡುವುದಿಲ್ಲ. ಈ ಸಿನಿಮಾದಲ್ಲಿ ಯಾವ ಪಾತ್ರ ಸರಿ, ಯಾವ ಪಾತ್ರ ತಪ್ಪು ಅನ್ನುವ ನೀತಿಯನ್ನು ಹೇಳುವುದಿಲ್ಲ. ಏಕೆಂದರೆ ಆ ಕ್ಷಣಕ್ಕೆ ತಕ್ಕಂತೆ ಪಾತ್ರಗಳು ಪ್ರತಿಕ್ರಿಯಿಸುವುದನ್ನೇ ಇಲ್ಲಿ ಕಥೆಯಾಗಿ ಹೇಳಲಾಗಿದೆ.
"ಯು" ಸರ್ಟಿಫಿಕೇಟ್ ಇದ್ದರೂ ರಕ್ತ ಧಾರಾಳವಾಗಿ ಎಲ್ಲೆಲ್ಲೂ ಕಾಣುವ ಸಿನಿಮಾ. ಚಿಕ್ಕಮಕ್ಕಳು ನೋಡದಿದ್ದರೆ ಒಳ್ಳೆಯದು. ನೆಟ್'ಪ್ಲಿಕ್ಸ್ ಅಥವಾ ಪ್ರೈಮ್'ನಲ್ಲಿ ಇರಲೇಬೇಕಾದಂಥ ಸಿನಿಮಾ. ಏಕಿಲ್ಲವೋ ಗೊತ್ತಿಲ್ಲ. ಸದ್ಯಕ್ಕೆ ಯೂಟ್ಯೂಬಿನಲ್ಲಿದೆ. ಸಬ್'ಟೈಟಲ್ ಇಲ್ಲ. ತಮಿಳು ಬಲ್ಲವರು, ಅರ್ಥೈಸಿಕೊಳ್ಳುವವರು ನೋಡಿ. ಚಿತ್ರರಂಗದ ಗೆಳೆಯರು ಮಿಸ್ ಮಾಡಬಾರದ ಸಿನಿಮಾ.
ಎ.ಎಸ್.ಜಿ ಅಪ್ಪು, ಈ ಥರದ ಸಿನಿಮಾವೊಂದನ್ನು ನೋಡಲು ಹೇಳಿದ್ದಕ್ಕೆ ಧನ್ಯವಾದಗಳು. :-) ಇಂಥ ಸಿನಿಮಾ ನೋಡಿದಾಗ ಹೇಳುತ್ತಿರಿ.
-Santhosh Kumar LM
12-May-2020
Post a Comment
Please post your comments here.