Friday, March 3, 2023

19.20.21 (Kannada, 2023)

 


ಸಿನಿಮಾದ ಮೊದಮೊದಲ ಶೋಗಳಿಗೆ ಹೋದಾಗ ಅಲ್ಲಿ ಚಿತ್ರತಂಡವೂ ಇರುತ್ತದೆ. ಸಿನಿಮಾ ಮುಗಿಯುತ್ತಿದ್ದಂತೆ ಪ್ರೇಕ್ಷಕರೆಲ್ಲರೂ ಒಮ್ಮೆ ಚಪ್ಪಾಳೆ ತಟ್ಟಿ ಚಿತ್ರತಂಡಕ್ಕೆ ಮೆಚ್ಚುಗೆ ಸೂಚಿಸುವುದು ವಾಡಿಕೆ. ಆದರೆ 19.20.21 ಸಿನಿಮಾ ಮುಗಿದು ನಿರ್ದೇಶಕರ ತಂಡ ವೇದಿಕೆಗೆ ಬಂದು ತುಂಬಾ ಹೊತ್ತಾದರೂ ಎಲ್ಲ ಪ್ರೇಕ್ಷಕರೂ ಚಪ್ಪಾಳೆ ತಟ್ಟುತ್ತಲೇ ಇದ್ದರು. ಇಡೀ ಚಿತ್ರಮಂದಿರ ಎದ್ದುನಿಂತು ಅವರಿಗೆ Standing Ovation ಕೊಟ್ಟಿದ್ದೇ ಹೇಳುತ್ತಿತ್ತು ಸಿನಿಮಾದ ತೂಕವೇನೆಂಬುದನ್ನು.

ಆ ಸಿನಿಮಾ ಕೊಟ್ಟ ನಿಟ್ಟುಸಿರು ಅಂಥದ್ದು. ನಿರ್ದೇಶಕ ಮಂಸೋರೆಗೆ ಕೇಳಿದರೆ ಅವರು ಹೇಳುತ್ತಾರೆ: "ಇಲ್ಲಿ ನನ್ನದೇನಿಲ್ಲ. ಅಸಹಾಯಕರಿಗೆ ನಮ್ಮ ಸಂವಿಧಾನ ಕೊಡುವಂತಹ ಈ ರಕ್ಷಣೆಯನ್ನು, ನಿಟ್ಟುಸಿರನ್ನು ಸಿನಿಮಾ ಮಾಡಿದ್ದೇನೆ" ಅಂತ. ಆ ನಿಟ್ಟುಸಿರನ್ನು ಹಾಗೇ ಪ್ರೇಕ್ಷಕರಿಗೆ ವರ್ಗಾಯಿಸಿದ್ದಾರೆ.

19.20.21

ಇದು ಕನ್ನಡಕ್ಕೊಂದು "ಜೈ ಭೀಮ್" ಸಿನಿಮಾ! ಬಹುತೇಕ ಸಿನಿಮಾಗಳು ಎಂಟರ್'ಟೈನ್‍ಮೆಂಟಿಗಾಗಿ ಬರುತ್ತವೆ. ಆದರೆ ಎಜುಕೇಟ್ ಮಾಡಬಲ್ಲ ಸಿನಿಮಾಗಳು ಕೆಲವೇ ಕೆಲವು. ಎಜುಕೇಟ್ ಅಂದಾಕ್ಷಣ ಬಹುತೇಕರು ಉಪದೇಶ ಅಂದುಕೊಳ್ಳುವ ಅಪಾಯವೇ ಹೆಚ್ಚು. ಈ ಸಿನಿಮಾ ಉಪದೇಶ ಮಾಡುವುದಿಲ್ಲ. ಒಂದು ಪುಟ್ಟ ಪಾಠ ಹೇಳಿ ಸಂವಿಧಾನವೆನ್ನುವುದು ನಮಗೆ ಏಕೆ ಬೇಕು ಅನ್ನುವ ಸತ್ಯವನ್ನು ನಮಗೆ ಮನದಟ್ಟು ಮಾಡುತ್ತದೆ. ಅದು ಜೀವನ ಪೂರ್ತಿ ಮರೆಯಲಾಗದ, ಮರೆಯಬಾರದ ಪಾಠ.

ಇದು ಕೆಲವೇ ಕೆಲವು ಪ್ರೇಕ್ಷಕರು ನೋಡಿ, ಅರ್ಥ ಮಾಡಿಕೊಳ್ಳಬೇಕಾದ ಸಿನಿಮಾವಲ್ಲ. ಪ್ರತಿಯೊಬ್ಬ ಭಾರತೀಯನೂ ನೋಡಿ ಅರ್ಥ ಮಾಡಿಕೊಳ್ಳಬೇಕಾದ, ಅಳವಡಿಸಿಕೊಳ್ಳಬೇಕಾದ ಸಿನಿಮಾ. ಅನೇಕ ಸಲ ಮಲಯಾಳಂ ಸಿನಿಮಾಗಳನ್ನು ನೋಡಿ "ನಮ್ಮಲ್ಲಿ ಏಕೆ ಈ ಬಗೆಯ ಕಥೆಗಳು ಬರುತ್ತಿಲ್ಲ" ಅಂದಾಗ ಅನೇಕರು "ಛೇ.. ಆ ಥರ ಅಲ್ಲಿ ನಡೆಯುತ್ತೆ ಅದಕ್ಕೆ ಆ ಥರ ಕಥೆಗಳು ಬರ್ತಿವೆ" ಅನ್ನುವುದುಂಟು. ವಾಸ್ತವದಲ್ಲಿ ಜೈಭೀಮ್ ಕಥೆ ತಮಿಳುನಾಡಿನಲ್ಲಿ ನಡೆದಿದೆ. ಅದೇ ಥರ "ಪಡ" ಕಥೆ ಕೇರಳದಲ್ಲಿ ನಡೆದಿದೆ. ನಮ್ಮಲ್ಲೂ ಆ ಥರದ ಕಥೆಗಳು ನಡೆಯುತ್ತಿವೆ. ಆದರೆ ಅದನ್ನು ಸೂಕ್ಷ್ಮವಾಗಿ ಗಮನಿಸಿ ತೆರೆಯ ಮೇಲೆ ತರುವ ಪ್ರಯತ್ನ ನಡೆಯುತ್ತಿಲ್ಲ ಅಷ್ಟೇ.

ಹೌದಾ? ನಡೆಯುತ್ತದಾ? ಅಂತ ಪರುಪ್ರಶ್ನೆ ಹಾಕುವವರಿಗೆ ಮಂಸೋರೆ & ತಂಡ "19.20.21" ಸಿನಿಮಾ ಕೊಟ್ಟು "ನೋಡಿ, ನಮಗೆ ಕಾಣಿಸುತ್ತಿದೆ" ಅಂತ ಉತ್ತರ ನೀಡಿದ್ದಾರೆ. ಈ ಮೂಲಕ ಈಗಾಗಲೇ ಹರಿವು, ನಾತಿಚರಾಮಿ, ಆಕ್ಟ್-1978 ಸಿನಿಮಾ ನೋಡಿ ಮತ್ತೆ ಬಂದ ಪ್ರೇಕ್ಷಕನಿಗೆ ನಿರ್ದೇಶಕ ಮಂಸೋರೆ ನಿರಾಶೆಯನ್ನುಂಟು ಮಾಡುವುದಿಲ್ಲ.

"19.20.21" ಈಗಾಗಲೇ ಅನೇಕ ಕಡೆ ಹೇಳಿರುವಂತೆ ಒಂದು ಸತ್ಯ ಘಟನೆಯ ಆಧಾರಿತ ಕಥೆ. ಆದಿವಾಸಿ ವಿಠ್ಠಲ್ ಮಲೆಕುಡಿಯ ಮತ್ತು ಆತನ ತಂದೆ ಲಿಂಗಣ್ಣ ಮಲೆಕುಡಿಯ ಅವರ ಮೇಲೆ ವಿಧಿಸಿದ್ದ ಸುಳ್ಳು ದೇಶದ್ರೋಹದ ಆಪಾದನೆಯ ಸುತ್ತ ನಡೆಯುವ ಕಥೆ. "ಜೈಭೀಮ್" ಸಿನಿಮಾಗೆ ಏಕೆ ಇದನ್ನು ಹೋಲಿಸಿದೆನೆಂದರೆ ಕಥೆಯ ಒಳತಿರುಳು ಮತ್ತು ಆಶಯ ಒಂದೇ ಆಗಿದೆ. ಈ ಮೂಲಕ ಸಂವಿಧಾನ ನಮಗೇನು ಮಾಡಿದೆ ಅಂತ ಕೇಳುವ ಈ ದೇಶದ ಪ್ರತೀ ಕಟ್ಟಕಡೆಯ ಪ್ರಜೆಗೂ ಈ ಸಿನಿಮಾ ಉತ್ತರ ನೀಡಿ ಸಣ್ಣದೊಂದು ಆಶಾಕಿರಣ ನೀಡಬಲ್ಲದು. ಸಾವಿರ ಅಪರಾಧಿಗಳಿಗೆ ಶಿಕ್ಷೆಯಾಗುವುದೋ ಬಿಡುವುದೋ, ಆದರೆ ಒಬ್ಬ ನಿರಪರಾಧಿಗೆ ಶಿಕ್ಷೆಯಾಗಬಾರದು. ಆಳುವ ವರ್ಗ, ನಮ್ಮನ್ನು ರಕ್ಷಿಸಬೇಕಾದ ಇಲಾಖೆಗಳೇ ನಮ್ಮೆದುರು ನಿಂತರೂ ಸಂವಿಧಾನ ನಮ್ಮನ್ನು ಕಾಪಾಡಬಲ್ಲುದು ಎಂದಾಗ ಅದರ ಮಹತ್ವ ನಮಗರಿವಾಗುತ್ತದೆ.


ಆದರೆ ಅದು ಎಲ್ಲರಿಗೂ ತಿಳಿದಿರಬೇಕಲ್ಲವೇ? ನಮ್ಮನ್ನು ಕಾಪಾಡಬಲ್ಲ, ನಮ್ಮ ಹಕ್ಕುಗಳನ್ನು ಕಾಪಾಡಬಲ್ಲ ಇಂಥ ಸಂವಿಧಾನದ ಬಗ್ಗೆ ತಿಳಿಯಬೇಕೆಂದರೆ ಅದಕ್ಕೆ ಓದಿಕೊಂಡಿರಬೇಕಾಗಿರುತ್ತದೆ. ಸಂವಿಧಾನವೆಂದರೆ ನಮ್ಮೆಲ್ಲರಿಗೂ ಅತೀ ಬೋರಿಂಗ್ ಸಬ್ಜೆಕ್ಟು. ಓದುವವರಿಗೆ ಹೀಗಿರುವಾಗ ಅಕ್ಷರ ಕಲಿಯದವರಿಗೆ ಇನ್ನು ಹೇಗೆ? ಆದರೆ ಮಂಸೋರೆ ಮಾತ್ರ ತನ್ನ ಸಿನಿಮಾದಿಂದಲೇ ಅದರ ಮಹತ್ವವನ್ನು ಸಾರುತ್ತ ಅನಕ್ಷರಸ್ಥರಿಗೂ ಅರ್ಥವಾಗುವಂತೆ ಅದನ್ನು ತಿಳಿಸಬೇಕಾದ್ದು ನಮ್ಮ ಕರ್ತವ್ಯ ಅಂತ ಹೇಳುತ್ತಾರೆ, ಅದನ್ನು ಮಾಡಿದ್ದಾರೆ.

3-March-2012, ವಿಠ್ಠಲ್ ಮಲೆಕುಡಿಯ ಮತ್ತು ಆತನ ತಂದೆಯನ್ನು ಸುಳ್ಳುಕೇಸ್ ಹೊರಿಸಿ ಪೊಲೀಸರು ಬಂಧಿಸಿ ಎಳೆದುಕೊಂಡು ಹೋದ ದಿನ. ಕಾಕತಾಳೀಯವೆಂಬಂತೆ ಹನ್ನೊಂದು ವರ್ಷಗಳ ತರುವಾಯ ಅದೇ ಕಥೆ ಅದೇ ದಿನಾಂಕದಂದು ಸಿನಿಮಾ ಆಗಿ ನಮ್ಮೆದುರು ಬಿಡುಗಡೆಯಾಗುತ್ತಿದೆ.

ಮಂಜು ಅನ್ನುವ (ವಿಠ್ಠಲ್ ಮಲೆಕುಡಿಯ) ಪಾತ್ರದಲ್ಲಿ ಶೃಂಗ ಮನೋಜ್ಞವಾಗಿ ನಟಿಸಿದ್ದಾರೆ. ಆತನ ಕಣ್ಣುಗಳಲ್ಲಿ ಆ ಪಾತ್ರಕ್ಕೆ ಬೇಕಾದ ಮುಗ್ಧತೆ, ದೈನ್ಯತೆ ಇದೆ. ಆತನಲ್ಲದೆ ಇನ್ನಾರೂ ಈ ಪಾತ್ರಕ್ಕೆ ಅಷ್ಟು ಚೆನ್ನಾಗಿ ಹೊಂದಲಾರರು ಅನ್ನುವಷ್ಟರ ಮಟ್ಟಿಗೆ ಅವರು ವಿಠ್ಠಲ್ ಮಲೆಕುಡಿಯ ಅವರನ್ನು ಮೈಮೇಲೆ ತಂದುಕೊಂಡು ಅಭಿನಯಿಸಿದ್ದಾರೆ. ಕ್ಲೈಮ್ಯಾಕ್ಸಿನಲ್ಲಿ ಒಂದೇ ಒಂದು ಪದ ಮಾತನಾಡದೆ ಕಣ್ಣೀರು ತರಿಸುವಂತೆ ಅಭಿನಯಿಸಿರುವುದು ಅವರೆಂಥ ನಟ ಅನ್ನುವುದನ್ನು ತೋರಿಸುತ್ತದೆ. ಆತ "ನನಗ್ಯಾಕೆ ಬೇಕಿತ್ತು ಈ ಉಸಾಬರಿ? ನನ್ನ ಪಾಡಿಗೆ ಕಾಲೇಜಿಗೆ ಹೋಗಿ ಬಂದಿದ್ರೆ ನಿಮಗೆಲ್ಲ ಈ ಪಾಡು ಬರ್ತಿತ್ತಾ?" ಅನ್ನೋ ಥರದ ಅಸಹಾಯಕತೆಯ ಡೈಲಾಗು ಹೇಳಿದಾಗಲಂತೂ ತಮ್ಮ ಹಿತದ ಬಗ್ಗೆ ಚಿಂತಿಸದೆ ಅನ್ಯಾಯವನ್ನು ಪ್ರಶ್ನಿಸುವ ಅದೆಷ್ಟೋ ಸಾವಿರಾರು ಜನರ ಧ್ವನಿಯಾಗಿ ಕೇಳಿಸಿತು.


ನಮಗೆ ಯಕಶ್ಚಿತ್ ಸುದ್ದಿಯಾಗಿ ಕಾಣುವ ವಿಷಯದ ಹಿಂದೆ ಅದೆಂಥ ನೋವು, ಹೋರಾಟಗಳಿರಬಲ್ಲದು ಅನ್ನುವುದನ್ನು ನೋಡಲು ರಾಮ್ ಪಾತ್ರ ಪರೀಕ್ಷೆ ಬರೆಯಲು ಹೋದಾಗಿನ ದೃಶ್ಯಗಳಲ್ಲಿ ನೋಡಬೇಕು. ಅದನ್ನು ವಿವಿಧ ಪಾತ್ರಗಳಿಂದ, ಸನ್ನಿವೇಶದಿಂದ ಕಟ್ಟಿಕೊಟ್ಟಿರುವ ರೀತಿ ನಿಜಕ್ಕೂ ಯಾವ ಥ್ರಿಲ್ಲರ್ ಸಿನಿಮಾಗೂ ಕಡಿಮೆಯಿಲ್ಲ. ಆ ದೃಶ್ಯವನ್ನು ಚಿತ್ರಮಂದಿರದಲ್ಲೇ ಆ ಮೌನ-ಆತಂಕದ ಮಧ್ಯದಲ್ಲೇ ನೋಡಬೇಕು!

ಆಪದ್ಬಾಂಧವನಾಗಿ ಬರುವ ವಕೀಲರ ಪಾತ್ರದಲ್ಲಿ ಬಾಲಾಜಿ ಮನೋಹರ್ ಈ ಸಿನಿಮಾದ ನಿಜವಾದ ಹೀರೋ. ಕ್ಲೈಮ್ಯಾಕ್ಸಿನಲ್ಲಿ ಅವರು ಬಂದಾಗೆಲ್ಲ ಪ್ರೇಕ್ಷಕನಿಗೆ ಒಂದು ಹಿತವಾದ ಸಮಾಧಾನ ಸಿಗುತ್ತದೆ. ಅವರು ವಾದ ಮಾಡುವಾಗಲೆಲ್ಲ ಅವರೇ ಸಂವಿಧಾನದ ಪ್ರತಿರೂಪವಾಗಿ "ನಾನಿದ್ದೀನಲ್ಲ, ಭಯಪಡಬೇಡಿ" ಅನ್ನುವ ರೀತಿಯ ಧೈರ್ಯವನ್ನು,ಬೆಚ್ಚಗಿನ ಕಂಫರ್ಟ್ ಅನ್ನು ಪ್ರೇಕ್ಷಕನಿಗೆ ನೀಡುತ್ತಾರೆ. ಅವರು ಕಥೆಯ ಪಾತ್ರವಾಗಿಯೂ, ಆದಿವಾಸಿಗಳ ಪರವಾಗಿ ನಿಂತು ಹೋರಾಡುವ ವಕೀಲನಾಗಿಯೂ ನಿಜವಾಗಿ ಸಿನಿಮಾದ "ಸೂಪರ್ ಹೀರೋ". ಕ್ಲೈಮ್ಯಾಕ್ಸಿನ ಅನೇಕ ಡೈಲಾಗುಗಳಿಗೆ ಅನೇಕರು ಚಪ್ಪಾಳೆ ಹೊಡೆಯುತ್ತಲೇ ಇದ್ದರು. ಅದಕ್ಕೆ ಮುಖ್ಯ ಕಾರಣ ಬಾಲಾಜಿ ಮನೋಹರ್ ಆ ಪಾತ್ರವನ್ನು ನಿಭಾಯಿಸಿರುವ ರೀತಿ.


ಇವರಲ್ಲದೇ ಕೃಷ್ಣ ಹೆಬ್ಬಾರ್, ಎಂ. ಡಿ. ಪಲ್ಲವಿ, ರಾಮ್ ಮಂಜೋನಾಥ್, ರಾಜೇಶ್ ನಟರಂಗ, ಹರಿ ಪರಾಕ್, ಬಿ.ಎಂ. ಗಿರಿರಾಜ್, ಪಿ. ಡಿ ಸತೀಶ್ಚಂದ್ರ, ಮಹದೇವ್ ಹಡಪದ್, ಉಗ್ರಂ ಸಂದೀಪ್, ವೆಂಕಟೇಶ್ ಪ್ರಸಾದ್, ಅರವಿಂದ್ ಕುಪ್ಳೀಕರ್ ಸೇರಿದಂತೆ ಅನೇಕ ನಟರು ಅತ್ಯುತ್ತಮ ಪಾತ್ರಗಳಾಗಿದ್ದಾರೆ.


ಸಿನಿಮಾದ ಹೈಲೈಟೇ ಕ್ಲೈಮ್ಯಾಕ್ಸು. ಬೇರೆ ಸಿನಿಮಾಗಳಲ್ಲಿ ಅಷ್ಟು ನೀಳ ದೃಶ್ಯ ಅನ್ನಿಸಿದರೂ ಈ ಸಿನಿಮಾದಲ್ಲಿ ಹಾಗನ್ನಿಸುವುದಿಲ್ಲ. ಏಕೆಂದರೆ ಕೋರ್ಟ್ ರೂಮಿನ ದೃಶ್ಯ ನಮ್ಮನ್ನು ಸಂಪೂರ್ಣವಾಗಿ ಮಂತ್ರಮುಗ್ಧರನ್ನಾಗಿ ಮಾಡುತ್ತದೆ. ಇಡೀ ಸಿನಿಮಾದ ಬರಹದಲ್ಲಿ ವೀರೇಂದ್ರ ಮಲ್ಲಣ್ಣ ಮತ್ತು ಅವಿನಾಶ್ ಜಿ ಅವರ ವೃತ್ತಿಪರತೆ, ಅನುಭವೀ ಬರವಣಿಗೆ ಎದ್ದು ಕಾಣುತ್ತದೆ. ಕೋರ್ಟ್ ದೃಶ್ಯಗಳಲ್ಲಿ ಬಳಸಿದ ಡೈಲಾಗುಗಳಿಗೆ ಸಂವಿಧಾನದ ಬಗೆಗೆ ತಿಳಿದುಕೊಂಡು ಎಷ್ಟು ಸರಳವಾಗಿ ಅದನ್ನು ಪ್ರೇಕ್ಷಕನಿಗೆ ದಾಟಿಸಿದ್ದಾರೆ ಅಂದರೆ ಅವರ ಹೋಂವರ್ಕ್ ಎದ್ದು ಕಾಣುತ್ತದೆ. ಮುಖ್ಯವಾಗಿ ಇಂಥ ಕಥೆಗಳನ್ನು ಸಿನಿಮಾ ಮಾಡುವಾಗ ನೀರಸವಾಗುವ ಸಾಧ್ಯತೆಯೇ ಜಾಸ್ತಿ. ಆದರೆ ಅದನ್ನು ಆಸಕ್ತಿ ಹುಟ್ಟುವಂತೆ ಚಿತ್ರಕಥೆಗೆ ತರುವಲ್ಲಿ ಬರಹಗಾರರ ಅನುಭವ ಬಹಳ ಮುಖ್ಯ. ಆ ಕೆಲಸವನ್ನು ಚಿತ್ರತಂಡ ಅಚ್ಚುಕಟ್ಟಾಗಿ ಮಾಡಿದೆ.


ಧರಣಿ ಮಂಡಲ ಮಧ್ಯದೊಳಗೆ ಸಿನಿಮಾ ಬಂದಾಗಿನಿಂದಲೂ ನಾನು ಆ ಸಿನಿಮಾದ ಸಂಗೀತ ನಿರ್ದೇಶಕ ರೊನಾಡ ಬಕ್ಕೇಶ್ ಅವರ ಅಭಿಮಾನಿಯಾಗಿದ್ದೇನೆ. ಅವರ ಕೈಚಳಕ 19.20.21 ನಲ್ಲಿಯೂ ಮುಂದುವರೆಯುವುದರೊಂದಿಗೆ ಅವರೊಬ್ಬರು ಸಿನಿರಂಗದ ಸಂಗೀತಕ್ಷೇತ್ರದಲ್ಲಿ ಆಸ್ತಿಯಾಗಬಲ್ಲರು ಅನ್ನುವ ನಂಬಿಕೆಯಂತೂ ಮೂಡುತ್ತದೆ.


ಮುಖ್ಯವಾಗಿ ಇಂತಹ ಸಿನಿಮಾಗಳು ಗೆಲ್ಲಬೇಕು. ಇಂತಹ ಸಿನಿಮಾಗಳಿಗೆ ದುಡ್ಡು ಹಾಕುವ ದೇವರಾಜ್ ಆರ್ ಅನ್ನುವ ಥರದ ನಿರ್ಮಾಪಕರು ಉಳಿಯಬೇಕು. ಮತ್ತು ಹಾಗಾದಾಗ ಮಾತ್ರ ಅವರು ಮತ್ತೊಂದು ಇಂಥದ್ದೇ ಸಿನಿಮಾಗೆ ಹಣ ಹಾಕಲು ಧೈರ್ಯ ತೋರಲು ಸಾಧ್ಯ! ಖ್ಯಾತ ಛಾಯಾಗ್ರಾಹಕ ಸತ್ಯ ಹೆಗಡೆ ಅವರು ಕೂಡ ಈ ಸಿನಿಮಾದ ನಿರ್ಮಾಣದಲ್ಲಿ ಭಾಗಿಯಾಗಿ ಅಧಾರವಾಗಿ ನಿಂತಿದ್ದಾರೆ.


"ಇಂತಹ ಸಿನಿಮಾಗಳು ಗೆಲ್ಲಬೇಕು, ಗೆಲ್ಲಿಸಿ" ಅನ್ನುವುದು ತೀರಾ ಸಾಗಿಹಾಕುವ ಮಾತಾಗುತ್ತದೆ. ನಿಜವಾಗಿ ಹೇಳಬೇಕೆಂದರೆ ಇಂತಹ ಸಿನಿಮಾಗಳನ್ನು ಮಿಸ್ ಮಾಡಿಕೊಂಡರೆ ನಿಜವಾಗಿ ಸೋತವರು ಸಿನಿಮಾದವರಲ್ಲ. ಪ್ರೇಕ್ಷಕರಾದ ನಾವುಗಳು.


-Santhoshkumar LM


#santhuLm
03-Mar-2023