Thursday, November 18, 2021

ಗರುಡ ಗಮನ ವೃಷಭ ವಾಹನ (ಕನ್ನಡ, ಕ್ರೈಂ ಡ್ರಾಮಾ, 2021)

 





ಗರುಡ ಗಮನ ವೃಷಭ ವಾಹನ (ಕನ್ನಡ, ಕ್ರೈಂ ಡ್ರಾಮಾ, 2021)

"ಲೇಯ್ ಜುಟ್ಟೂ.... ನಾನ್ ಎಂಥ ಕಿತ್ತೋಗಿರೋ ನನ್ ಮಗಾ ನಿನಗೆ ಗೊತ್ತಿಲ್ಲ.... ಸುಮ್ಮನೆ ಸೈಲೆಂಟಾಗಿ ಸೈಡಲ್ಲಿದ್ಬುಡು" ಅನ್ನೋ ಡೈಲಾಗು ಸಾಮಾನ್ಯವಾಗಿ ಹೀರೋ ಒಬ್ಬನನ್ನು ಮಾಸ್ ಸ್ಟೈಲ್'ನಲ್ಲಿ ತೋರಿಸುವಾಗ ಆತ ತನ್ನ ಎದುರಾಳಿಗೆ ಬಳಸುವ ಡೈಲಾಗು!

ಆದರೆ ಈ ನಿರ್ದೇಶಕನಿಗೆ ಅವೆಲ್ಲ ಹೇಳುವುದು ಬೇಕಿಲ್ಲ. ಏಕೆಂದರೆ ನಿಜ ಜೀವನದಲ್ಲಿ ಮಾಸ್ ಡೈಲಾಗನ್ನು ಯಾರೂ ಯಾರ ಎದುರೂ ನಾಟಕೀಯವಾಗಿ ಹೇಳುವುದಿಲ್ಲ! ಅದಕ್ಕಾಗಿಯೇ ನಿರ್ದೇಶಕ ರಾಜ್ ಬಿ ಶೆಟ್ಟಿ ಈ ಡೈಲಾಗಿನ ಬದಲಾಗಿ ಅದೇ ಸಾಲುಗಳನ್ನು ಒಂದು ಕಾಡುವ ಟ್ಯೂನ್ ಇರುವ ಹಾಡಿನೊಳಗೆ ಬೆರೆಸಿ ಆರಂಭದಲ್ಲೇ ನೀಡುತ್ತ ಇಡೀ ಸಿನಿಮಾ ನೋಡಲು ಬೇಕಾದ ಮನಸ್ಥಿತಿಯನ್ನು ಪ್ರೇಕ್ಷಕನಿಗೆ ಕಟ್ಟಿಕೊಡುತ್ತಾರೆ!

Keep your silence


Keep your distance

You better stay away
Oh
you’re better off this way



You won’t believe
the things that I’ve been through
so
You better stay away


Hell knows
you’re better off this way!

ಇದು ಆರಂಭ...ಅಲ್ಲೇ ಪ್ರೇಕ್ಷಕನಿಗೆ ತಾನು ನೋಡ ಹೊರಟ ಸಿನಿಮಾ ಮಾಮೂಲಿ "ಕ್ರೈಂ ಡ್ರಾಮಾ" ಅಲ್ಲ ಅಂತ ಅನ್ನಿಸುವುದು. ಇಲ್ಲಿ ಒಳಹೋದ ಪ್ರೇಕ್ಷಕ ಹೊರಬರಲು ಸಾಧ್ಯವೇ ಇಲ್ಲ ಅನ್ನುವ ಹಾಗೆ ನಿರ್ದೇಶಕ ಅವನನ್ನು ಕಥೆಯೊಳಗೆ ಕಟ್ಟಿಹಾಕಿಬಿಡುತ್ತಾರೆ! "Demon in Me" ಅಂತ ತನ್ನೊಳಗಿನ ರಾಕ್ಷಸನನ್ನು ಜನರಿಗೆ ತೋರಿಸಬೇಕಿತ್ತು ರಾಜ್ ಬಿ ಶೆಟ್ಟಿ! ಆದರೆ ಸಿನಿಮಾದ ಆ Demon ಅನ್ನು ನೋಡುತ್ತ ನೋಡುತ್ತ "Demon in Us" ಪ್ರೇಕ್ಷಕನ ಶಿಳ್ಳೆಗಳ ಮೂಲಕ, ಚಪ್ಪಾಳೆಯ ಮೂಲಕ, ಕೂಗುವುದರ ಮೂಲಕ ಹೊರಬರುತ್ತಾನೆ! ಇದು non-stop ನಡೆಯುತ್ತಲೇ ಇರುತ್ತದೆ. ಇದು ಪ್ರೇಕ್ಷಕನನ್ನು ಪರಿಣಾಮಕಾರಿಯಾಗಿ ತನ್ನೊಳಗೆ ಸೆಳೆದುಕೊಳ್ಳುವುದಕ್ಕೆ ಒಂದು ಸಿನಿಮಾಗಿರುವ ಶಕ್ತಿ!


ತಮಿಳಿನ "ವಿಕ್ರಮ್ ವೇದ" ಸಿನಿಮಾ ಓಟಿಟಿಯಲ್ಲಿ ಬಿಡುಗಡೆಯಾದಾಗ ಅಲ್ಲಿ ನೋಡಿದ ಮೇಲೆ ಮೈನವಿರೇಳಿಸುವ ಆ ಮಾಸ್ ದೃಶ್ಯಗಳನ್ನು ಥಿಯೇಟರಿನಲ್ಲೇ ನೋಡಿ ಆನಂದಿಸಬೇಕಿತ್ತು ಅಂತ ಅದೆಷ್ಟು ಕೈಹಿಸುಕಿಕೊಂಡೆನೋ. ಅಂಥದ್ದೇ, ಅಷ್ಟೇ Force ಇರುವ ರೋಮಾಂಚಕ ದೃಶ್ಯಗಳನ್ನು ನೋಡಬೇಕೆಂದರೆ "ಗರುಡ ಗಮನ ವೃಷಭ ವಾಹನ"ವನ್ನು ಥಿಯೇಟರಿನಲ್ಲೇ ನೀವು ನೋಡಬೇಕು.


ಸಾಮಾನ್ಯವಾಗಿ ಸಿನಿಮಾದ ಕಥೆಯನ್ನು ಗ್ರಾಫಿನಲ್ಲಿ ಹಾಕಿಕೊಳ್ಳುವುದಾದರೆ ಇಡೀ ಸಿನಿಮಾದಲ್ಲಿ ಮೂರ್ನಾಲ್ಕು ಕಡೆ ಪ್ರೇಕ್ಷಕನನ್ನು "ವ್ಹಾವ್" ಅನ್ನಿಸುವ ದೃಶ್ಯಗಳಿರುತ್ತವೆ. ಆದರೆ ಈ ಸಿನಿಮಾದಲ್ಲಿ ಹಾಗಿಲ್ಲ. ಒಂದು ದೃಶ್ಯ "ತಾನು ಬೆಸ್ಟ್" ಅಂತ ಬಂದರೆ ಅದರ ಮುಂದಿನ ದೃಶ್ಯವೇ ಹಿಂದಿನ ದೃಶ್ಯಕ್ಕೇ ಸೆಡ್ಡು ಹೊಡೆಯುತ್ತ "ನಾನು ನಿನಗಿಂತ ಬೆಸ್ಟ್" ಅಂತ ಅದಕ್ಕಿಂತ ಅದ್ಬುತ ಅನ್ನಿಸುವ ಅನುಭವ ನೀಡುತ್ತದೆ. ಹೀಗೇ ಸಿನಿಮಾ ಸಾಗುತ್ತದೆ.


ಒಬ್ಬ ಒಳ್ಳೆಯ ಸಿನಿಮಾ ಕಸುಬುದಾರನ ಕೈಗೆ ಎಂಥ ಸಬ್ಜೆಕ್ಟ್ ಸಿಕ್ಕರೂ ಆತ ಅದನ್ನು ಒಂದು ಒಳ್ಳೆಯ ಕೃತಿಯನ್ನಾಗಿ ಹೇಗೆ ಮಾಡಬಲ್ಲ ಅನ್ನುವುದಕ್ಕೆ ಗರುಡಗಮನ ಸಾಕ್ಷಿ! ಸಿನಿಮಾದ ಚಿತ್ರಕಥೆಯನ್ನು ಬರೆಯುವಾಗ ನಿರ್ದೇಶಕ ಪ್ರತಿ ಸನ್ನಿವೇಶದಲ್ಲೂ ಆ ದೃಶ್ಯ ಪ್ರೇಕ್ಷಕರಿಗೆ ಯಾವ ರೀತಿಯ ಅನುಭವ ನೀಡಬಲ್ಲುದು ಎಂದು ಊಹಿಸಿಯೇ ದೃಶ್ಯ ಹೆಣೆದಿರುತ್ತಾನೆ. ಚಿತ್ರಮಂದಿರದಲ್ಲಿ ಕುಳಿತ ಪ್ರೇಕ್ಷಕನಿಗೆ ಆ ಸನ್ನಿವೇಶಗಳು ಅದೇ ರೀತಿ ಅನುಭವ ಕೊಟ್ಟುಬಿಟ್ಟರೆ ಆ ಸಿನಿಮಾ ಅಲ್ಲಿಗೆ ಗೆದ್ದಂತೆಯೇ. ಇಲ್ಲಿ "ಗರುಡಗಮನ ವೃಷಭವಾಹನ" ಬರೀ ಪಾಸ್ ಆಗಿಲ್ಲ.... ಡಿಸ್ಟಿಂಕ್ಷನ್ ಗಳಿಸುತ್ತದೆ!

ಕ್ರೈಂ ಡ್ರಾಮಾ ಅಂದರೆ ಬರೀ ರೌಡಿಗಳ ಮಾಸ್ ಡೈಲಾಗುಗಳೇ ತುಂಬಿ ಹೋಗಿರುತ್ತವೆ. ಇಲ್ಲಿ ಹಾಗಿಲ್ಲ. ಅವೆಲ್ಲವನ್ನು ಬದಿಗಿರಿಸಿ ಬೇರೆಯದೇ ರೀತಿಯ ಕಥೆ ಹೆಣೆಯಲಾಗಿದೆ. ಹಿಂದಿನ ದಿನವಷ್ಟೇ ಒಬ್ಬ ಎದುರಾಳಿಯನ್ನು ಮುಗಿಸಿ ಎಲ್ಲರನ್ನು ನಡುಗಿಸಿ ಬಂದವನೊಬ್ಬ ಲೋಕಲ್ ಹುಡುಗರ ಜೊತೆ ಸೇರಿ "ಹೇಯ್ ಇದು ಔಟ್ ಅಲ್ಲ ಕಣೋ.... ಫುಲ್ ಟಾಸ್ ಹಾಕ್ಬೇಡ ಮಾರಾಯಾ....ಎಂಥದೋ ಇದು ವೈಡ್ ಬಾಲ್...ಅಂಪೈರ್ ಹೇಳಿ ಆಯ್ತು, ನೀ ಹೋಗು" ಅಂತ ಮಕ್ಕಳಂತೆಯೇ ಜಗಳವಾಡುತ್ತ ಕ್ರಿಕೆಟ್ ಆಡುತ್ತಿದ್ದರೆ ಆ ಸಹಜತೆ ಪ್ರೇಕ್ಷಕನಿಗೆ ಭರಪೂರ ನಗು ತರಿಸುತ್ತದೆ.


ಅಬ್ಬರಿಸಿ ಭಯಪಡಿಸಬಾರದು. ಜೋರಾಗಿ ಅತ್ತು ಇನ್ನೊಬ್ಬರನ್ನು ಅಳಿಸಬಾರದು. ಅಸಹಜವಾಗಿ ಏನನ್ನೂ ಮಾಡದೆ ಕೇವಲ ಸನ್ನಿವೇಶವನ್ನು ಕಟ್ಟಿಕೊಡುವ ಮೂಲಕವೇ ಪ್ರೇಕ್ಷಕನನ್ನು ನಗಿಸಬೇಕು, ಅಳಿಸಬೇಕು, ಕೋಪ, ಆಕ್ರೋಷ, ಎಲ್ಲವೂ ಆತನ ಮನಸ್ಸಿನಲ್ಲಿ ತಂತಾನೇ ಸೃಷ್ಟಿಯಾಗಬೇಕು ಅನ್ನುವುದು ಈ ಸಿನಿಮಾ ಹೇಳಿಕೊಟ್ಟ ಪಾಠ!

ಲಾರಿಯೊಳಗೆ ಕೂತು ಪಾತ್ರವೊಂದು ಡ್ರೈವಿಂಗ್ ಕಲಿಯುತ್ತಿರುತ್ತದೆ. ಆ ಸನ್ನಿವೇಶದಲ್ಲಿ ನಗು ಬುಗ್ಗೆಯಾಗಿ ಹೊರಬರುತ್ತದೆ. ಮುಂದಿನ ದೃಶ್ಯದಲ್ಲಿ ನಾವು ನಕ್ಕಿದ್ದನ್ನೇ ನೆನಪಿಸಿಕೊಂಡರೆ ಬೇರೆಯದೇ ಫೀಲ್ ಆಗುತ್ತದೆ. ಪರೋಕ್ಷವಾಗಿ ನಿರ್ದೇಶಕ ಏನನ್ನೆಲ್ಲ ಮಾಡಿ ಪ್ರೇಕ್ಷಕನಿಗೆ ಕಥೆ ಹೇಳಬಹುದು ಅನ್ನುವುದೇ ಇಲ್ಲಿಯ ವಿಶೇಷತೆ. ಈ ದೃಶ್ಯ ಮತ್ತೆ ಮತ್ತೆ ನಿಮಗೆ ನೆನಪಾದರೆ ಅದರಲ್ಲಿ ಅತಿಶಯೋಕ್ತಿಯೇನಿಲ್ಲ.

ಈ ಸಿನಿಮಾ ನೋಡಿ ಬಂದ ಮೇಲೆ ಚಪ್ಪಲಿ, ನಾಯಿ, ಹುಡುಗರು, ಕ್ರಿಕೆಟ್, ಹುಲಿಕುಣಿತ, ಲಾರಿ, ಕೇಬಲ್, ಮಂಗಳಾದೇವಿ, ಕದ್ರಿ, RX ಅನ್ನುವ ಪದಗಳೆಲ್ಲಾ ತಲೆಯಲ್ಲಿ ಗಿರಕಿ ಹೊಡೆಯಲು ಶುರುಮಾಡುತ್ತವೆ ಅನ್ನುವುದಕ್ಕೆ ಅವನ್ನೆಲ್ಲ ಎಷ್ಟು ಸಶಕ್ತವಾಗಿ ಕಥೆಯೊಳಗೆ ಬಳಸಿಕೊಂಡಿದ್ದಾರೆ ಅಂತ ಅರ್ಥ.

ಮೊದಲನೇ ಸಿನಿಮಾ ಹಿಟ್ ಆದರೆ ಒಂದು ಅನುಮಾನ ಇರುತ್ತದೆ. ನಿರ್ದೇಶಕ ಗಿಮಿಕ್ ಮಾಡಿ ಗೆದ್ದಿರಬಹುದಾ ಅಂತ. ಅದನ್ನು ಪರಿಹರಿಸಬೇಕೆಂದರೆ ನಿರ್ದೇಶಕ ಮತ್ತೊಂದು ಹಿಟ್ ಕೊಡಲೇಬೇಕು. ಮತ್ತೆ ಕೊಡುತ್ತಲೇ ಇರಬೇಕು. ಅದು ಇಲ್ಲಿನ ಅನಿವಾರ್ಯತೆ. ಇಲ್ಲಿ ರಾಜ್ ಬಿ ಶೆಟ್ಟಿ ತೆಗೆದುಕೊಂಡಿರುವುದು ದೊಡ್ಡ ಸವಾಲಿನ ಕೆಲಸವೇ. "ಒಂದು ಮೊಟ್ಟೆಯ ಕಥೆ" ಸಿನಿಮಾದಲ್ಲಿ ಬೋಳುತಲೆಯ ಮದುವೆಯಾಗದ ಅವಿವಾಹಿತನ ಪಾತ್ರದಲ್ಲಿ ನಮ್ಮನ್ನು ನಕ್ಕುನಲಿಸಿದ್ದ ರಾಜ್ ಶೆಟ್ಟಿ ಈ ಸಿನಿಮಾದಲ್ಲಿ ಮಾಡಿದ ಪಾತ್ರಕ್ಕೂ ಆ ಸಿನಿಮಾದ ಆ ಪಾತ್ರಕ್ಕೂ ಯಾವುದೇ ಸಾಮ್ಯತೆ ಇಲ್ಲ. ಎರಡೂ ಸಿನಿಮಾಗಳ ನಿರ್ದೇಶಕ ಇವರೇನಾ ಅನ್ನುವ ಮಟ್ಟಿಗೆ ಮೇಕಿಂಗ್ ಎರಡೂ ಸಿನಿಮಾಗಳಲ್ಲಿ ವಿಭಿನ್ನವಾಗಿದೆ.

"ಒಂದು ಮೊಟ್ಟೆಯ ಕಥೆ" ನೋಡಿ ಈ ಸಿನಿಮಾಗೆ ಹೋಗುವಾಗ "ಹಾಸ್ಯ ಪಾತ್ರ ಮಾಡಿದವರು ಗಂಭೀರ ಪಾತ್ರ ಮಾಡಬಲ್ಲರೇ?" ಅನ್ನುವ ಅನುಮಾನವಿತ್ತು. ಈಗ ಈ ಸಿನಿಮಾ ನೋಡಿದ ಮೇಲೆ "ಆ ಸಿನಿಮಾದ ಹಾಸ್ಯದ ಪಾತ್ರ ಮಾಡಿದ್ದು ಇವರೇನಾ?" ಅನ್ನುವ ಮಟ್ಟಿಗಿನ ಅವರ Transformation ಇಲ್ಲಿದೆ! Script ಮತ್ತು execution ಎರಡೂ ಸರಿಯಿದ್ದು ಚೆನ್ನಾಗಿದ್ದರೆ ಒಬ್ಬ ನಟ ಹೇಗೆ ಬೇಕಾದರೂ ತೆರೆಯ ಮೇಲೆ ರಾರಾಜಿಸಬಹುದು ಅಂತ ಇಲ್ಲಿ ಸ್ಪಷ್ಟವಾಗಿ ತಿಳಿಯುತ್ತದೆ.


ಮೊದಲರ್ಧದಲ್ಲಿ ಮೈನವಿರೇಳಿಸುವ ಮಾಸ್ ದೃಶ್ಯಗಳಿಗೆ ಮೀಸಲಾಗಿದ್ದರೆ ದ್ವಿತೀಯಾರ್ಧದಲ್ಲಿ ಕಥೆ ತನ್ನ ದಿಕ್ಕು ಬದಲಿಸುತ್ತ ನಮ್ಮೊಳಗೆ ತಲ್ಲಣವನ್ನುಂಟು ಮಾಡುತ್ತದೆ. ಮುಂದೇನು ಅನ್ನುವ ಕುತೂಹಲ ಕೊನೆಯವರೆಗೂ ಕಾಯ್ದುಕೊಳ್ಳುವುದು ಇಲ್ಲಿಯ ವಿಶೇಷ. ದ್ವಿತೀಯಾರ್ಧ ಮೊದಲಾರ್ಧಕ್ಕಿಂತ ನಿಧಾನ ಅನ್ನಿಸುವುದು ಸಹಜ. ಅದಕ್ಕೆ ಕಾರಣ ಮೊದಲಾರ್ಧದಲ್ಲಿರುವ ಬೆಸ್ಟ್ ಮಾಸ್ ದೃಶ್ಯಗಳು!

ಈ ಸಿನಿಮಾ ನೋಡಿದವರು ರಿಷಭ್ ಶೆಟ್ಟಿಯನ್ನು ಖಂಡಿತ ಗಂಭೀರ ಪಾತ್ರಕ್ಕೆ ಎಷ್ಟು ಒಪ್ಪುತ್ತಾರೆ ಅನ್ನದೆ ಇರಲಾರರು. ಪುಟ್ಟ ಪುಟ್ಟ ಪಾತ್ರಗಳು ನಟಿಸುತ್ತಿಲ್ಲವೇನೋ ಎಂಬಂತೆ ಸಹಜವಾಗಿಯೇ ಅಭಿನಯಿಸುತ್ತವೆ. ಸ್ಥಳೀಯ ಪ್ರತಿಭೆಗಳನ್ನೇ ಸಿನಿಮಾಗೆ ಬಳಸಿಕೊಂಡು ಸಹಜವಾದ ಕಥೆ ಹೇಳುವಿಕೆ ರಾಜ್ ಶೆಟ್ಟಿಯವರಿಗೆ ಒಲಿದಿರುವ ಜಾಣ್ಮೆ! ಗೋಪಾಲಕೃಷ್ಣ ದೇಶಪಾಂಡೆ ಅವರದು ಮೊದಲಿಗೆ ಚಿಕ್ಕ ಪಾತ್ರ ಅನ್ನಿಸಿದರೆ ದ್ವಿತೀಯಾರ್ಧದಲ್ಲಿ ಬಹುತೇಕ ತಿರುವುಗಳಿಗೆ ಕಾರಣಕರ್ತರಾಗಿ ಮುಖ್ಯವಾಗಿಬಿಡುತ್ತಾರೆ.


"ಉಳಿದವರು ಕಂಡಂತೆ" ಸಿನಿಮಾದಲ್ಲೇ ಹುಲಿ ಕುಣಿತ ನೋಡಿ ತಲೆಕೆಡಿಸಿಕೊಂಡು ಕುಣಿದವರು ನಾವು....ಅದನ್ನೇ ಮತ್ತೆ ಇನ್ನೊಂದು ಸಿನಿಮಾದಲ್ಲಿ ಮಾಡಿದ್ದಾರೆ ಅಂದರೆ ಅದು "ಉಳಿದವರು ಕಂಡಂತೆ"ಯ ನಕಲಿ ಅಂತ ಕಾಣಿಸಬಹುದು ತಾನೇ? ಇಲ್ಲಿ ಹಾಗಾಗಿಲ್ಲ. ಹುಲಿ‌ಕುಣಿತವನ್ನು ಬರೀ ಮನರಂಜನೆಯ ಅಂಶವನ್ನಾಗಿ ತೆಗೆದುಕೊಳ್ಳದೆ ಸಿನಿಮಾದ ಕಥೆಯ ಭಾಗವನ್ನಾಗಿ ತೆಗೆದುಕೊಂಡಿದ್ದಾರೆ. ಅದರ placement ಹೇಗಿದೆ ಅಂದರೆ ನಾವೂ ಮೈಮರೆತು ಕೂಗುತ್ತೇವೆ. ಅದು ಈ ಸಿನಿಮಾದ Best Moment. ಇದು ಗ್ಯಾರಂಟಿ ಅನೇಕ ವರ್ಷಗಳು ನಮ್ಮ ನೆನಪಿನಲ್ಲಿ ಉಳಿಯಬಲ್ಲ ದೃಶ್ಯ!

ನಿರ್ದೇಶಕರಿಗೆ ನಾವು ತೆಗೆಯುವ ಸಿನಿಮಾದಲ್ಲಿ ಬೇರೆಯದೇ ಥರದ ಫ್ಲೇವರ್ ಬೇಕು ಅನ್ನೋ ಸ್ಪಷ್ಟತೆ ಇದೆ. ಹಾಗಾಗಿಯೇ ಕ್ರೈಮ್ ಡ್ರಾಮಾ ಅನಿಸಿಕೊಳ್ಳುವ ಈ ಸಿನಿಮಾದಲ್ಲಿ ನಮ್ಮ ಮನಸೆಳೆಯುವ ನೈಜ ಅಂಶಗಳಿವೆ. ಇಡೀ ಸಿನಿಮಾ ಹುಡುಕಿದರೂ ಎಲ್ಲೂ ಎಲ್ಲೋ ನಡೆಯುವ ವಿಷಯಗಳನ್ನು ಕಥೆ ಮಾಡಿಲ್ಲ. ಮಂಗಳೂರಿನ ಅಪ್ಪಟ ಸ್ಥಳೀಯ ವಿಷಯಗಳನ್ನಿಟ್ಟುಕೊಂಡೇ ಅದ್ಭುತ ಅನ್ನಿಸುವಂತೆ ಚಿತ್ರಕಥೆ ಮಾಡಿದ್ದಾರೆ. ಕೊಲೆಯ ದೃಶ್ಯಗಳಿದ್ದರೂ ಅವುಗಳನ್ನು ಚಿತ್ರೀಕರಿಸಿರುವ ರೀತಿ ಮನಸ್ಸಿಗೆ ಘಾಸಿ ಮಾಡದೆ ಕೇವಲ ಆ ದೃಶ್ಯದ ತೀವ್ರತೆಯನ್ನು ಅರಿಯುವಂತೆ ಮಾಡಿದೆ. ಮಿದುನ್ ಮುಕುಂದನ್ ಅವರು ನೀಡಿರುವ ಸಿನಿಮಾದ ಹಿನ್ನೆಲೆ ಸಂಗೀತ ಬೇರೆ ಮಾಡಿ ಅನುಭವಿಸಲಾಗದಷ್ಟು ಸಿನಿಮಾದೊಳಗೆ ಬೆರೆತುಹೋಗಿದೆ!

ಸಿನಿಮಾ ಓಘದಲ್ಲೇ ಒಂದು ನಿರಾಳವಿದೆ. ಆ ನಿರಾಳತೆಯೊಳಗೆ ಒಂದು force ಇದೆ. ಅದನ್ನು ನೀವು ಒಳ್ಳೆಯ Audio system ಉಳ್ಳ ಥಿಯೇಟರಿನಲ್ಲೇ ನೋಡಿ ಅನುಭವಿಸಬೇಕು. ಬೇಕಿದ್ದರೆ "ಇಡೀ ಸಿನಿಮಾವನ್ನು ಒಂದೂ ಕಡೆ ಚಪ್ಪಾಳೆ ಹೊಡೆಯದೆ ರೋಮಾಂಚನಗೊಳ್ಳದೆ ನೋಡಿ" ಅಂತ ಸವಾಲು ಹಾಕಿ. ಸಿನಿಮಾ ಹಾಗಿದೆ! "ಉಳಿದವರು ಕಂಡಂತೆ" ಬಿಡುಗಡೆಯಾದಾಗ ಅದೇ ಬೇರೆ ಬಗೆಯ ಪ್ರೇಕ್ಷಕರನ್ನು ಸೃಷ್ಟಿಸಿಕೊಂಡಿತ್ತು. ಅಂಥವರೆಲ್ಲರಿಗೂ ಈ ಸಿನಿಮಾ ನಿಜವಾಗಿ ಇಷ್ಟವಾಗುತ್ತದೆ.

ಸಿನಿಮಾದ ಕಥೆ ಹೇಳದಲೇ ಹೇಗಿದೆ ಅನ್ನುವುದನ್ನು ಹೇಳಬೇಕು ಅನ್ನುವ ಸಲುವಾಗಿ "ಸಿನಿಮಾ ಯಾವ ಅನುಭವ ಕೊಟ್ಟಿದೆ" ಅನ್ನುವುದನ್ನು ಮಾತ್ರ ಇಲ್ಲಿ ಹೇಳಿದ್ದೇನೆ. ಸಿನಿಮಾ ನೋಡಿದವರೊಂದಿಗೆ ಮಾತನಾಡಲು ಹಲವಾರು ವಿಷಯಗಳಿವೆ. ಅವೆಲ್ಲವನ್ನೂ ಈಗಲೇ ಮಾತನಾಡುವುದು ಬೇಡ. ನೋಡಿದವರು ಕಥೆ ಹೇಳಿ ಅದರ ಸ್ವಾರಸ್ಯವನ್ನು ಕಿತ್ತುಕೊಳ್ಳುವ ಮುನ್ನ ಥಿಯೇಟರಿಗೆ ಹೋಗಿ ನೋಡಿಬಿಡಿ. ನಮ್ಮೊಳಗೊಬ್ಬ ಮತ್ತೊಬ್ಬ ದಿಟ್ಟ, ಸಶಕ್ತ ನಿರ್ದೇಶಕ ಒಳ್ಳೆಯ ಸಿನಿಮಾಗಳನ್ನು ಕೊಡುವೆನೆಂಬ ಭರವಸೆ ಕೊಟ್ಟು ಅದರಂತೆಯೇ ಆತ್ಮವಿಶ್ವಾಸದಿಂದಲೇ ಇಂಥದ್ದೊಂದು ಒಳ್ಳೆಯ ಸಿನಿಮಾ ಕೊಟ್ಟಿದ್ದಾನೆ. ನಾವೆಲ್ಲ ಅದನ್ನು ನೋಡಿ ಅವನ ಬೆನ್ನು ತಟ್ಟಿ, Celebrate ಮಾಡಲೇಬೇಕಾದ ಸಿನಿಮಾ ಇದು.

ಈ ಸಿನಿಮಾ ಒಮ್ಮೆ ನೋಡಿ. ನೀವೇ ಹೇಳುತ್ತೀರಿ "ಇದು ಥಿಯೇಟರಿನಲ್ಲಷ್ಟೇ ನೋಡಬೇಕಾದ ಸಿನಿಮಾ" ಅಂತ. ರಾಜಾದ್ಯಂತ ಕಳೆದೆರಡು ವಾರಗಳಲ್ಲಿ ಇದ್ದಕ್ಕಿದ್ದಂತೆ ಶುರುವಾದ ಮಳೆ-ಚಳಿಯಿಂದ ಹೊರಬರಲಾರದೆ ನಡುಗುತ್ತಿರುವ ಜನರಿಗೆ "ಗರುಡ ಗಮನ ವೃಷಭ ವಾಹನ" ಚಳಿ ಬಿಡಿಸುವುದಂತೂ ಗ್ಯಾರಂಟಿ. ಸಿನಿಮಾ ಮಂದಿರದೊಳಕ್ಕೆ ನಾವು ಧೈರ್ಯದಿಂದ ಕಾಲಿಡಬೇಕಷ್ಟೇ.

-SanthoshKumar L M
18-Nov-2021


No comments:

Post a Comment

Please post your comments here.