Saturday, April 25, 2020

ಪುನ್ನಗೈ ವಾಂಗಿನಾಲ್ ಕಣ್ಣೀರ್ ಇಳವಸಂ...Tamil ShotFilm

ಪುನ್ನಗೈ ವಾಂಗಿನಾಲ್ ಕಣ್ಣೀರ್ ಇಳವಸಂ ( ನಗುವ ಕೊಂಡರೆ ಕಣ್ಣೀರು ಉಚಿತ )


Punnagai Vaanginaal Kanneer Elavasam Tamil Short Film | Friends ...


ಈ ಕಿರುಚಿತ್ರದ ಬಗೆ ಬರೆಯಲೇಬೇಕು. ಬರೀ ನೋಡಿ ಅಂತ ಬರೆದುಬಿಡುತ್ತಿದ್ದೆ. ಆದರೆ ಬೇಸರವೆಂದರೆ ಈ ಚಿತ್ರಕ್ಕೆ ಸಬ್'ಟೈಟಲ್ ಇಲ್ಲ. ತಮಿಳು ಬರದವರಿಗೆ ಸನ್ನಿವೇಶ ಅರ್ಥವಾಗದಿರಬಹುದು..ಆದ್ದರಿಂದಲೇ ಕೊಂಚ ಕಥೆ ಹೇಳುತ್ತೇನೆ. ಎಲ್ಲ ಭಾಷೆಯ ಸಿನಿಮಾಪ್ರೇಮಿಗಳು ಇದನ್ನು ನೋಡಬೇಕೆಂಬುದು ನನ್ನ ಆಶಯ.

ಈ ಕಿರುಚಿತ್ರ ಮಾಡಿದ್ದೇ "ನಾಳಯ ಇಯಕ್ಕುನರ್" (ಭವಿಷ್ಯದ ನಿರ್ದೇಶಕ) ಅನ್ನುವ ಸ್ಪರ್ಧೆಯೊಂದಕ್ಕೆ. ಕಲೈನ್ನರ್ ತಮಿಳು ಚಾನೆಲ್ ನಡೆಸುವ ಈ ಸ್ಪರ್ಧೆಯಲ್ಲಿ ಈ ಕಿರುಚಿತ್ರ ಮೊದಲ ಬಹುಮಾನವನ್ನು ಗಿಟ್ಟಿಸಿತು. ಸ್ವತಃ ಹಿರಿಯ ನಟ ಕಮಲ್ ಹಾಸನ್ ಈ ಸಿನಿಮಾವನ್ನು ಮತ್ತು ನಿರ್ದೇಶಕನನ್ನು ಮುಕ್ತಕಂಠದಿಂದ ಹೊಗಳಿದರು.

ಚಿತ್ರದ ಪರಿಕಲ್ಪನೆಯೇ ಎಷ್ಟು ವಿಚಿತ್ರ-ವಿಭಿನ್ನ-ಸೂಕ್ಷ್ಮವಾಗಿದೆಯೆಂದರೆ ಹೇಳುವಾಗಲೇ ಎದೆ ಝಲ್ ಅನ್ನುತ್ತದೆ. ಇಂಥದ್ದೊಂದು ಕಥೆಯನ್ನು ಕಿರುಚಿತ್ರಕ್ಕೆ ಬಳಸಿಕೊಳ್ಳಬೇಕಿತ್ತಾ ಅನ್ನುವ ಪ್ರಶ್ನೆ ನಿಮಗೆ ಮೂಡದಿದ್ದರೆ ಕೇಳಿ.

ಈ ಕಿರುಚಿತ್ರವಿರುವುದೇ ಹನ್ನೆರಡು ನಿಮಿಷ. ಚಿತ್ರ ನೋಡಿ ಮುಗಿದ ಮೇಲೆ, ಪ್ರತೀ ಪಾತ್ರದ ಬಗ್ಗೆ ಅದಿರುವ ಸನ್ನಿವೇಶವನ್ನು ಊಹಿಸಿಕೊಂಡು ಯೋಚಿಸಿ. ನಿಮಗೆ ಯಾವುದು ಸರಿ ತಪ್ಪು ಅಂತ ಕಂಡುಹಿಡಿಯಬಹುದಾ? ಗೊತ್ತಿಲ್ಲ.

ಆ ಮನೆಯಲ್ಲಿ ವಯಸ್ಸಾದ ಅಜ್ಜಿಯಿದೆ. ಆಕೆಗೆ ಇಬ್ಬರು ಗಂಡುಮಕ್ಕಳು. ಒಬ್ಬ ಹೆಂಡತಿಯೊಂದಿಗೆ ಬೇರೆ ಮನೆಯಲ್ಲಿದ್ದಾನೆ. ಈ ಮನೆಯಲ್ಲಿ ಆ ಅಜ್ಜಿ ಇನ್ನೊಬ್ಬ ಮಗನ ಕುಟುಂಬದ ಜೊತೆಯಲ್ಲಿದೆ. ಆ ಮಗನೋ ಕುಟುಂಬವನ್ನು ಹೇಗೆ ನಿಭಾಯಿಸಬೇಕು ಅಂತ ಭಾಷಣ ಮಾಡುವಷ್ಟು, ಕಾರ್ಯಕ್ರಮಗಳನ್ನು ಕೊಡುವಷ್ಟು ಪ್ರಸಿದ್ಧಿ ಹೊಂದಿದಾತ. ಅವನಿಗೂ ಇಬ್ಬರು ಮಕ್ಕಳು. ಆ ಮಕ್ಕಳಲ್ಲಿ ಒಬ್ಬ ಮಗಳಿಗೆ ಈಗಾಗಲೇ ಒಂದು ಮಗುವಿದೆ. ಈಗ ಮತ್ತೆ ಆಕೆ ಗರ್ಭಿಣಿ. ಅಂದರೆ ಅಜ್ಜಿಗೆ ಈಗಾಗಲೇ ಮರಿಮಕ್ಕಳು ಇದ್ದಾರೆ.

ಇದೀಗ ಅಲ್ಲೊಂದು ಧರ್ಮಸಂಕಟವಿದೆ. ಆ ಅಜ್ಜಿಯ ಗಂಡ ಒಂದು ತಿಂಗಳ ಹಿಂದಷ್ಟೇ ತೀರಿಕೊಂಡಿದ್ದಾರೆ. ಆ ಅಜ್ಜಿಗೆ ಏನೋ ಆರಾಮಿಲ್ಲ ಎಂದೆನ್ನಿಸಿ ಆಸ್ಪತ್ರೆಗೆ ಕರೆದುಕೊಂಡು ಹೋದರೆ ಡಾಕ್ಟರ್ "ಆಕೆ ಮೂರು ತಿಂಗಳ ಗರ್ಭಿಣಿ" ಎಂದು ಹೇಳಿದ್ದಾರೆ!! ಮಗನಿಗೆ ಅದನ್ನು ಸಮಾಜದೆದುರು ಹೇಗೆ ತಾನೆ ಹೇಳಿಕೊಂಡಾನು? ಹೇಳಿಕೊಂಡರೆ ಅವಮಾನ. ತೆಗೆಸಿಬಿಡೋಣವೆಂದರೆ ಅದು ಆಕೆಯ ಜೀವಕ್ಕೆ ಕುತ್ತು ತರಬಹುದೆಂದು ವೈದ್ಯರು ಗರ್ಭಪಾತವನ್ನು ನಿರಾಕರಿಸಿದ್ದಾರೆ. ಜೊತೆಗೆ "ನಿಮ್ಮ ತಾಯಿಯನ್ನು ಜೋಪಾನವಾಗಿ ನೋಡಿಕೊಳ್ಳಬೇಕು" ಅಂತ ಮಗನಿಗೆ ಹೇಳಿದ್ದಾರೆ.

ಇದೀಗ ಈತನಿಗೆ ಹೆಂಡತಿಯಿಂದಲೂ ಒತ್ತಡವಿದೆ. ಕಾರಣ ಗರ್ಭಿಣಿಯಾದ ಮಗಳೂ ಮನೆಸೇರಿದ್ದಾಳೆ. ಅವಳನ್ನು ನೋಡಲು ಅಳಿಯ ಯಾವುದೇ ಸಂದರ್ಭದಲ್ಲಿ ತನ್ನ ಮನೆಗೆ ಬರಬಹುದು. ಬಂದರೆ ಈ ವಿಷಯ ತಿಳಿದರೆ ಅವಮಾನ. ಹಾಗಾಗಿ "ನಿಮ್ಮ ತಾಯಿಯನ್ನು ನಿಮ್ಮ ತಮ್ಮನ ಬಳಿ ಬಿಟ್ಟು ಬನ್ನಿ" ಅಂತ ಒಂದೇ ಸಮನೆ ಗಲಾಟೆ ಮಾಡುತ್ತಿದ್ದಾಳೆ. ತಮ್ಮನ ಮನೆಯಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ.

ಏನಾದರೂ ಸುಳ್ಳುಹೇಳಿ ವೃದ್ಧಾಶ್ರಮದಲ್ಲಿ ಬಿಡೋಣವೆಂದರೆ ಅಲ್ಲೂ ಈ ವಿಷಯ ತಿಳಿದ ಮೇಲೆ ನೋಡಿಕೊಳ್ಳಲು ಅಸಾಧ್ಯವೆಂದು ಸೇರಿಸಿಕೊಳ್ಳುತ್ತಿಲ್ಲ. ಮಗ ಏನು ತಾನೇ ಮಾಡಿಯಾನು?

ಮುಂದೇನು?

ಈ ಚಿತ್ರ ನೋಡಿ. ಸೂಕ್ಷ್ಮ ಸಂಗತಿಗಳನ್ನು ಹೇಳಿರುವ ರೀತಿ ನಿಜಕ್ಕೂ ಯುವ ಸಿನಿಮಾ ನಿರ್ದೇಶಕರುಗಳಿಗೆ ಸಹಾಯವಾಗಬಲ್ಲದು. ದಿನಪತ್ರಿಕೆಯಲ್ಲಿ ವೃದ್ಧೆಯೊಬ್ಬರು ಗರ್ಭಿಣಿಯಾದ ಸುದ್ದಿಯೊಂದನ್ನು ನೋಡಿದ ನಿರ್ದೇಶಕ ನಿಥಿಲನ್'ಗೆ ಈ ಸಿನಿಮಾದ ಎಳೆ ಸಿಕ್ಕಿದ್ದು. ಏಳೆಂಟು ವರ್ಷಗಳ ಹಿಂದೆ ಈ ಸಿನಿಮಾ ನೋಡಿದ್ದಾಗ ಎಲ್ಲರಿಗೂ ಇದರ ಬಗ್ಗೆ ಹೇಳುತ್ತಿದ್ದೆ. ಮೊನ್ನೆ "ಕುರಂಗು ಬೊಮ್ಮೈ" ನೋಡಿದಾಗ ತಿಳಿದ ವಿಷಯವೆಂದರೆ ಆ ಸಿನಿಮಾದ ನಿರ್ದೇಶಕ ಕೂಡ ಇದೇ ನಿಥಿಲನ್.

ನೋಡಿರದಿದ್ದರೆ ನೋಡಿ. ಖಂಡಿತ ನಿಮ್ಮ ಅಮೂಲ್ಯ ಹನ್ನೆರಡು ನಿಮಿಷಗಳಿಗೆ ನಾ ಗ್ಯಾರಂಟಿ ಕೊಡಬಲ್ಲೆ.

(ಯೂಟ್ಯೂಬ್ ಲಿಂಕ್ ಕಮೆಂಟಿನಲ್ಲಿದೆ.)

-Santhosh Kumar LM
25-Apr-2020