Thursday, March 12, 2020

ಪ್ಯಾರಾಸೈಟ್ (2019).....Korean Movie





ಕೊರಿಯನ್ ಸಿನಿಮಾ ಪ್ಯಾರಾಸೈಟ್ ನೋಡಲು ಶುರುವಾದಾಗ ಇದು ಸಾಮಾನ್ಯವಾದ ಕಾಮಿಡಿ ಸಿನಿಮಾ ಅನ್ನಿಸಿತು. ಆದರೆ ಮಧ್ಯದಲ್ಲಿ ಇದ್ದಕ್ಕಿದ್ದಂತೆ ಥ್ರಿಲ್ ಕೊಡುವ ಅಂಶಗಳು ಶುರುವಾದ ಮೇಲೆ ಇದು ಬೇರೆಯದೇ ರೀತಿಯ ಸಿನಿಮಾ ಅಂತ ಸ್ಪಷ್ಟವಾಯಿತು.

ಸಿನಿಮಾ ಇಷ್ಟವಾಯಿತು. ಗಮನ ಸೆಳೆದಿದ್ದು ಎಂದರೆ ನಮ್ಮೊಳಗೆ ಕಾಣುವ ಸಮಸ್ಯೆಯೊಂದನ್ನು ಗೋಳು ಹೊಯ್ದುಕೊಳ್ಳುವ ಹಾಗೆ ಹೇಳದೆ ಕಾಮಿಡಿಯಲ್ಲಿ ಹೇಳುತ್ತ ಹೋಗಿ, ಕಡೆಗೆ ಗಂಭೀರ ವಿಷಯವೊಂದನ್ನು ಹೇಳುವುದಿದೆಯಲ್ಲ. ಅದು ನಿಜವಾಗಿ ಕೃತಿಯೊಂದನ್ನು ಗೆಲ್ಲಿಸುತ್ತದೆ. ಇದೇ ಕಾರಣಕ್ಕಾಗಿ ಅಲ್ಲಿನ ಪರಿಸರವನ್ನು ತೋರಿಸುತ್ತ ಕಥೆ ಹೇಳುವ ಪ್ಯಾರಾಸೈಟ್ ಇಷ್ಟವಾದದ್ದು.

ಈ ಸಿನಿಮಾದಲ್ಲಿ ಶ್ರೀಮಂತನಾದ ಪಾರ್ಕ್, ಕೆಲಸದಾಳು ಕಿಮ್'ನಿಂದ ಬರುವ ವಾಸನೆಯ ಬಗ್ಗೆ ಹೇಳುವಾಗ ಸಿನಿಮೀಯ ಅನಿಸಿಕೊಳ್ಳುತ್ತದೆ. ಆದರೆ ಯೋಚಿಸಿ ನೋಡಿದರೆ ಅದು ಕೊರಿಯಾದಲ್ಲಷ್ಟೇ ಅಲ್ಲ. ಪ್ರಪಂಚದ ಎಲ್ಲ ದೇಶಗಳಲ್ಲೂ ಇವೆ. ನಮ್ಮಲ್ಲೇ ನೋಡಿ. ಬಿಎಂಟಿಸಿ ಬಸ್ಸಿನಲ್ಲಿ ಪ್ರಯಾಣ ಮಾಡುವ ಕೆಲಸಗಾರರ ಬೆವರಿನ ವಾಸನೆಯ ಬಗ್ಗೆ ಕೆಲವರು ಅಸಹ್ಯಪಟ್ಟುಕೊಳ್ಳುವುದನ್ನು ನೋಡಿದ್ದೇನೆ. ಅವರಿಗೆ ಬೇರೆ ಆಯ್ಕೆಯಾದರೂ ಏನಿದೆ. ಆತ ಊಬರ್/ಓಲಾ ಕ್ಯಾಬ್'ನಲ್ಲಿ ಪ್ರಯಾಣಿಸಲು ಶಕ್ತನಲ್ಲ. ಇರುವುದರಲ್ಲಿ ಕಡಿಮೆ ಬೆಲೆಯ ಬಿಎಂಟಿಸಿಯಷ್ಟೇ ಅವನ ಪಾಲಿಗೆ. ಬೆಳಗಿನಿಂದ ಕೂಲಿ ಮಾಡಿ ಬೆವರು ಸುರಿಸಿ ಸಂಜೆ ಮನೆಗೆ ಮರಳುವಾಗ ಆತನ ಮೈಯಿಂದ ಬೆವರಿನ ವಾಸನೆಯ ಬದಲಿಗೆ ಪರಿಮಳ ಹೊರಡಲಿ ಅನ್ನುವುದು ಎಷ್ಟು ಅವಾಸ್ತವಿಕ ಅನ್ನಿಸುತ್ತೆ ಯೋಚಿಸಿ. ಪ್ಯಾರಾಸೈಟ್'ನಲ್ಲೂ ಅಷ್ಟೇ. ಅಲ್ಲಿ ಆ ವಾಸನೆಗೆ ಕಾರಣ ಅವರು ವಾಸ ಮಾಡುವ ಕೆಳಮಾಳಿಗೆ ಅನ್ನುವ ವಾಸ್ತವ ಮನಸ್ಸಿಗೆ ನೋವು ತರುತ್ತದೆ.

ನಮ್ಮಲ್ಲಿ ಈ ಬಗೆಯ ಸಮಸ್ಯೆಗಳ ವಿಷಯಗಳಿಲ್ಲವೇ? ನೂರಾರು ಇವೆ. ಆದರೆ ಸಮಸ್ಯೆಯೊಂದನ್ನೇ ತೋರಿಸದೆ, ಅದನ್ನು ಸಿನಿಮಾದ ಕಥೆಯಲ್ಲಿ ಹದವಾಗಿ ಬೆರೆಸಿ ಈ ಬಗೆಯಲ್ಲಿ ಕೊಡಲು ನಿರ್ದೇಶಕರು ಮನಸ್ಸು ಮಾಡಬೇಕಷ್ಟೇ.

ಈ ಸಿನಿಮಾ ಆಸ್ಕರ್'ಗೆ ಎಷ್ಟು ಅರ್ಹ ಅಂತ ತಲೆಕೆಡಿಸಿಕೊಳ್ಳಬೇಕಿಲ್ಲ. ಇಂಗ್ಲೀಷ್ ಅಲ್ಲದ ಸಿನಿಮಾವೊಂದು ಮೊದಲ ಬಾರಿಗೆ ನಾಲ್ಕು ಆಸ್ಕರ್ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡು ಪ್ರಪಂಚದ ಗಮನ ಸೆಳೆಯಿತಲ್ಲ. ಅದು ಈ ಸಲದ ಆಸ್ಕರ್ ಪ್ರಶಸ್ತಿಯ ವಿಶೇಷತೆ. ಮುಂದಿನ ವರ್ಷಗಳಲ್ಲಿ ಉಳಿದ ದೇಶದ ಭಾಷೆಗಳ ಸಿನಿಮಾಗಳೂ ಪ್ರಶಸ್ತಿಗಳನ್ನು ಬಾಚಿಕೊಳ್ಳಲು ಇದು ಆರಂಭವಷ್ಟೇ ಅಂದುಕೊಳ್ಳೋಣ.

ಆಸ್ಕರ್ ಬಂದಿದೆ. ಕಲಾತ್ಮಕ ಸಿನಿಮಾಗಳನ್ನು ನೋಡುವವರು ಇದನ್ನು ಮೆಚ್ಚಿದ್ದಾರೆ, ನಮಗಿಷ್ಟವಾಗುತ್ತದೋ ಇಲ್ಲವೋ ಅಂದುಕೊಂಡು ಸುಮ್ಮನಾಗದಿರಿ. ಸಬ್'ಟೈಟಲ್ ಓದಿ ಸಿನಿಮಾ ನೋಡುವ ಅಭ್ಯಾಸ ನಿಮಗಿದ್ದರೆ ಖಂಡಿತ ನೋಡಿ. ಇಷ್ಟವಾಗುತ್ತದೆ.

#Santhosh Kumar LM
12-Mar-2020