Friday, January 31, 2020

Stalingrad (2013)...Russian Movie

Stalingrad (2013)....War, Action, Drama
Language: Russian, German




ಯುದ್ಧದ ಮುಖ ಕರಾಳ. ಅದರ ಕರಾಳತೆಯನ್ನು ತೋರಿಸುವ ಪ್ರಯತ್ನವೇ ಬಹುತೇಕ ಸಿನಿಮಾಗಳಲ್ಲಿ ಆಗಿದ್ದರೂ ಅದಕ್ಕೆ ಬೇರೊಂದು ಆಯಾಮ ಕೊಟ್ಟು ವಿವರಗಳನ್ನು ಪ್ರೇಕ್ಷಕನ ಮುಂದಿಡುವ ಪ್ರಯತ್ನಗಳು ವಿರಳವೇ. ಒಂದಷ್ಟು ಯುದ್ಧದ ಸಿನಿಮಾಗಳನ್ನು ನೋಡಿದರೆ ಅಲ್ಲಿ ಆ ಕಥೆಗಾರ ತನ್ನ ದೇಶದ ಸೈನಿಕರ ಶೌರ್ಯವನ್ನೇ ಪರೋಕ್ಷವಾಗಿ ಹೊಗಳಿ ಉಳಿದವಕ್ಕೆ ಕಡಿಮೆ ಪ್ರಾಶಸ್ತ್ಯ ನೀಡಿರುತ್ತಾನೆ. ಭಾರತೀಯ ಸಿನಿಮಾಗಳಲ್ಲಿ ಪ್ರೇಮಕಥೆಯನ್ನು ಮೂಲ ಕಥೆಯಾಗಿಸಿ ಉಳಿದ ಸಮಸ್ಯೆಗಳನ್ನು ಜೊತೆಜೊತೆಯಲ್ಲಿಯೇ ಪರಿಣಾಮಕಾರಿಯಾಗಿ ಹೇಳುವುದನ್ನು ಮಣಿರತ್ನಂರ ಸಿನಿಮಾಗಳಲ್ಲಿ ಕಾಣಬಹುದು.


ಇತ್ತೀಚೆಗೆ ನಾ ನೋಡಿದ ಇಂಥದ್ದೊಂದು ಸಿನಿಮಾ, ರಷ್ಯನ್ ಭಾಷೆಯ "ಸ್ಟಲಿಂಗ್ರಾಡ್". ವಿಮರ್ಶೆಗಳು, ರೇಟಿಂಗ್'ಗಳು ಈ ಸಿನಿಮಾ ಅಷ್ಟೇನೂ ಚೆನ್ನಾಗಿಲ್ಲ ಅಂತ ಹೇಳಿದ್ದರೂ ನೋಡಿದಾಗ ಚೆನ್ನಾಗಿದೆ ಅನ್ನಿಸಿದ್ದು ಸುಳ್ಳಲ್ಲ. ಇದು ಐಮ್ಯಾಕ್ಸ್ ಫಾರ್ಮ್ಯಾಟಿನಲ್ಲಿ ಬಂದ ಮೊದಲ ರಷ್ಯನ್ ಚಿತ್ರ. ವಿಮರ್ಶಕರಿಗೆ ಯುದ್ಧದ ಜೊತೆಗೆ ಇತರೆ ವಿಷಯಗಳನ್ನು ತುರುಕಿದ್ದು ಇಷ್ಟವಾದಂತೆ ಕಂಡಿಲ್ಲ. ಜೊತೆಗೆ ರಷ್ಯನ್ ಸಿನಿಮಾ ಆದ್ದರಿಂದ ಹೆಚ್ಚಾಗಿ ರಷ್ಯನ್ ಸೈನಿಕರ ಬಗ್ಗೆಯೇ ವಿವರ ಹೇಳಿರುವುದು ಸಹಜ ಕೂಡ. ಅದೂ ಕೂಡ ಅನೇಕರ ವಿಮರ್ಶೆಗಳಲ್ಲಿ ವ್ಯಕ್ತವಾಗಿದೆ.


ಜಪಾನಿನಲ್ಲಿ 2011ರಲ್ಲಿ ಸುನಾಮಿಯ ಹೊಡೆತಕ್ಕೆ ಸಿಕ್ಕು ಕಟ್ಟಡಗಳ ಅವಶೇಷಗಳಡಿಯಲ್ಲಿ ಸಿಲುಕಿದ ಜರ್ಮನ್ ವಿದ್ಯಾರ್ಥಿಗಳನ್ನು ರಷ್ಯನ್ ಸೈನಿಕರು ಕಾಪಾಡುವಾಗ ಆ ರಕ್ಷಣೆಯ ಸಂದರ್ಭದಲ್ಲಿ ಅವರಿಗೆ ವಿಶ್ವಾಸ ತುಂಬಲು ಆ ರಷ್ಯನ್ ಸೈನಿಕನೊಬ್ಬ ತನ್ನದೇ ದೇಶದಲ್ಲಿ ನಡೆದ ರಷ್ಯನ್-ಜರ್ಮನ್ ನಡುವಿನ ಸ್ಟಾಲಿಂಗ್ರಾಡ್ ಯುದ್ಧದ ಬಗೆಗಿನ ಕಥೆಯನ್ನು ಹೇಳುತ್ತಾನೆ.


1942-1943ನೆಯ ಇಸವಿಯಲ್ಲಿ ಎರಡನೆಯ ಮಹಾಯುದ್ಧದ ಸಂದರ್ಭದಲ್ಲಿ ಜರ್ಮನ್ ಪಡೆ ರಷ್ಯಾದ ಸ್ಟಲಿಂಗ್ರಾಡ್ ನಗರವನ್ನು (ಈಗ ಅದು ವೋಲ್ಗೋಗ್ರಾಡ್ ಎಂದು ಮರುನೇಮಕಗೊಂಡಿದೆ) ವಶಪಡಿಸಿಕೊಳ್ಳಲು ಧಾವಿಸುತ್ತದೆ. ಆಗ ಇತ್ತಲಿಂದ ರಷ್ಯನ್ ಸೈನಿಕರು ಸಹ ಅರ್ಧ ಶಿಥಿಲಗೊಂಡ ಕಟ್ಟಡವೊಂದರಲ್ಲಿ ಕುಳಿತು ಜರ್ಮನ್ ಪಡೆಯನ್ನು ಎದುರಿಸುತ್ತಾರೆ. ಈ ಯುದ್ಧದಲ್ಲಿ ಎರಡೂ ಸೈನ್ಯಕ್ಕೆ ಸೇರಿದ ಲಕ್ಷಾಂತರ ಸೈನಿಕರು, ಸ್ಥಳೀಯರು ಪ್ರಾಣ ಕಳೆದುಕೊಳ್ಳಬೇಕಾಗುತ್ತದೆ. ಆ ಸನ್ನಿವೇಶದ ಕಥೆಯೇ ಈ ಸಿನಿಮಾ.


ಆದರೆ ಸಿನಿಮಾ ಯುದ್ಧದ ಇನ್ನೊಂದು ಮುಖವನ್ನು ಸಹ ತೋರಿಸುತ್ತದೆ. ರಷ್ಯನ್ ಸೈನಿಕರು ಕಾಯುತ್ತಿದ್ದ ಕಟ್ಟಡದಲ್ಲಿಯೇ "ಕಾತ್ಯ" ಅನ್ನುವಾಕೆ ವಾಸವಿರುತ್ತಾಳೆ. ಆಕೆ ತನ್ನ ಪೋಷಕರನ್ನು ಸ್ವಲ್ಪ ದಿನಗಳ ಹಿಂದಷ್ಟೇ ಕಳೆದುಕೊಂಡಿರುತ್ತಾಳೆ. ಯುದ್ಧದ ಸಂದರ್ಭದಲ್ಲಿ ಆಕೆಯನ್ನು ಅಲ್ಲಿಂದ ಸ್ಥಳಾಂತರಿಸಲು ಪ್ರಯತ್ನಿಸಲಾಗುತ್ತದಾದರೂ ಆಕೆ ತನ್ನ ಮನೆಯನ್ನು ಬಿಟ್ಟು ಹೊರಡದೆ ಅಲ್ಲೇ ಕೂರುತ್ತಾಳೆ. ಅಲ್ಲಿ ಕುಳಿತ ಸೈನಿಕರು ಮತ್ತು ಅವಳ ಮಧ್ಯೆ ಬಾಂಧವ್ಯವೊಂದು ಶುರುವಾಗುತ್ತದೆ. ಅವಳನ್ನು ಕಾಪಾಡುತ್ತಲೇ ಆ ಸೈನಿಕರು ವೈರಿಗಳನ್ನು ಎದುರಿಸುತ್ತಾರೆ.


ಇತ್ತ ಜರ್ಮನ್ ಸೈನಿಕ ಕಾಹ್ನ್ ಸಹ ತನ್ನ ತೀರಿಹೋದ ಹೆಂಡತಿಯನ್ನೇ ಹೋಲುವ ರಷ್ಯನ್ ಮಹಿಳೆ ಮಾಷಾಳನ್ನು ನೋಡಿದ ತಕ್ಷಣವೇ ಪ್ರೇಮದಲ್ಲಿ ಬೀಳುತ್ತಾನೆ. ಮೊದಮೊದಲಿಗೆ ಆಕೆ ತಿರಸ್ಕಾರ ತೋರಿದರೂ ಆತ ತೋರುವ ಪ್ರಾಮಾಣಿಕ ಕಾಳಜಿ ಮತ್ತು ಪ್ರೀತಿಗೆ ಸೋಲುತ್ತಾಳೆ. ಪರಸ್ಪರರ ಭಾಷೆಗಳು ಅರ್ಥವಾಗದಿದ್ದರೂ ಅವರಿಬ್ಬರಲ್ಲಿ ಪ್ರೀತಿ ಮೂಡುತ್ತದೆ. ಅಷ್ಟರಲ್ಲಿ ಅಲ್ಲಿಗೆ ಬರುವ ಜರ್ಮನ್ ಮೇಲಧಿಕಾರಿಗೆ ಈ ವಿಷಯ ತಿಳಿದು ತನ್ನ ವಿರೋಧಿ ರಾಷ್ಟ್ರವಾದ ರಷ್ಯಾದವಳಾದ್ದರಿಂದ ಆಕೆಯ ಸಂಗವನ್ನು ಬಿಟ್ಟು ರಷ್ಯನ್ ಸೈನಿಕರು ಕುಳಿತ ಕಟ್ಟಡವನ್ನು ಸುತ್ತುವರೆದು ವಶಪಡಿಸಿಕೊಳ್ಳುವಂತೆ ಆಜ್ಞೆ ಮಾಡುತ್ತಾನೆ. ಕಡೆಯ ದೃಶ್ಯದ ಹೊತ್ತಿಗೆ ಎಲ್ಲವೂ ನಾಮಾವಶೇಷವಾಗುವುದರೊಂದಿಗೆ ಸಿನಿಮಾ ಮುಗಿಯುತ್ತದೆ.


-Santhosh Kumar LM
31-Jan-2020

Friday, January 10, 2020

Kolaigaran (2019)....Tamil movie









ಕೊಲೈಗಾರನ್ (2019) [ತಮಿಳು Murder Mystery, Thriller]

ಅರ್ಜುನ್ ಸರ್ಜಾ, ವಿಜಯ್ ಆಂಟನಿ ನಟಿಸಿದ ಚಿತ್ರ.

ಫ್ಲಾಟ್ ಒಂದರಲ್ಲಿ ಅಮ್ಮ-ಮಗಳು ವಾಸವಿದ್ದಾರೆ. ಅದೇ ಎದುರಿನ ಫ್ಲಾಟ್'ನಲ್ಲಿ ಪ್ರಭಾಕರನ್ ವಾಸವಿದ್ದಾನೆ. ಆತ ಯಾರೊಂದಿಗೂ ಹೆಚ್ಚು ಮಾತನಾಡಲಾರ.


ಅದೊಂದು ದಿನ ಅದೇ ಊರಿನ ನಿರ್ಜನ ಪ್ರದೇಶವೊಂದರಲ್ಲಿ ಶವವೊಂದು ದೊರಕುತ್ತದೆ. ನೋಡಲಾಗಿ ಅದರ ಮುಖವನ್ನು ಗುರುತು ಹಿಡಿಯಲಾಗದಂತೆ ಜಜ್ಜಿ ನಂತರ ಸುಟ್ಟುಹಾಕಲಾಗಿರುತ್ತದೆ.

ಆ ಕೇಸನ್ನು ಕೈಗೆತ್ತಿಕೊಳ್ಳುವ ಡಿಸಿಪಿ ಕಾರ್ತಿಕೇಯನ್ ಬಹುಬೇಗನೆ ಆ ಶವ ಯಾರದೆಂದು ಕಂಡುಹಿಡಿಯುತ್ತಾರೆ. ಜೊತೆಗೆ ಕೊಲೆಯ ಹಿನ್ನೆಲೆಯನ್ನು ಕಂಡುಹಿಡಿಯುತ್ತಾರೆ. ಆದರೆ ಕೊಲೆ ಹೇಗಾಗಿರಬಹುದು ಅನ್ನುವ ಚಿತ್ರಣ ಸರಿಯಾಗಿ ದೊರಕುವುದಿಲ್ಲ. ಅದೊಂದು ದಿನ ಕೊಲೆಗಾರನೇ ಬಂದು ತಾನೇ ಕೊಲೆ ಮಾಡಿದ್ದಾಗಿ ಒಪ್ಪಿಕೊಳ್ಳುತ್ತಾನೆ.

ಇದೇ ನಮಗೆ ಕ್ಲೈಮ್ಯಾಕ್ಸ್ ಅನ್ನಿಸುತ್ತದೆ. ಆದರೆ ಕಥೆ ಅಲ್ಲಿಗೆ ಮುಗಿಯುವುದಿಲ್ಲ. ಕೊಲೆ ಹೇಗಾಗಿರಬಹುದು, ನಿಜವಾಗಿ ಯಾರು ಮಾಡಿದರು, ಏಕೆ ಮಾಡಿದರು ಅನ್ನುವ ವಿಷಯವೇ ಪ್ರೇಕ್ಷಕನನ್ನು ಕೊನೆಯವರೆಗೂ ಹಿಡಿದು ಕೂರಿಸುತ್ತದೆ. ಸಿನಿಮಾ ಮುಗಿದ ಮೇಲಷ್ಟೇ ನಾವು ಒಂದನ್ನೊಂದು ಜೋಡಿಸಿ ಅರ್ಥೈಸಿಕೊಳ್ಳಲು ಸಾಧ್ಯವಾಗುವುದು. ಕೊಲೆಗಾರ ಯಾರೆಂದು ಹೇಳಿ ಕೊಲೆಯ ರೀತಿಯನ್ನು ಕಡೆಯವರೆಗೂ ಹೇಳದಿರುವುದು ಈ ಸಿನಿಮಾದಲ್ಲಿ ಹೊಸತು.

ಡಿಟೆಕ್ಟಿವ್ ಥ್ರಿಲ್ಲರ್ ಸಿನಿಮಾಗಳನ್ನು ನೋಡುವವರಿಗೆ ಈ ಸಿನಿಮಾ ಖುಶಿ ಕೊಡಬಲ್ಲುದು. ಕಥೆಯ ಸಂಕೀರ್ಣತೆ, ರಹಸ್ಯವನ್ನು ಕೊನೆಯವರೆಗೂ ಬಿಟ್ಟುಕೊಡದ ರೀತಿ "ದುರುವಂಗಳ್ ಪದಿನಾರು" ಸಿನಿಮಾವನ್ನು ನೆನಪಿಸುತ್ತದೆ.

ಜಪಾನೀ ಚಿತ್ರ "ಸಸ್ಪೆಕ್ಟ್ ಎಕ್ಸ್"ವನ್ನು ಆಧರಿಸಿಯೇ ಈ ಚಿತ್ರವನ್ನು ರಿಮೇಕ್ ಮಾಡಲಾಗಿದೆ. ಆದರೆ ಕಥೆಯನ್ನು ಅಗತ್ಯಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳಲಾಗಿದೆ.

" ಸಸ್ಪೆಕ್ಟ್ ಎಕ್ಸ್" ನೋಡಿರದಿದ್ದರೆ ಈ ಸಿನಿಮಾವನ್ನು ಧಾರಾಳವಾಗಿ ನೋಡಿ,
ಒಮ್ಮೆ ನೋಡಲು ಅಡ್ಡಿಯಿಲ್ಲ.

-Santhosh Kumar LM
10-Jan-2020

Tuesday, January 7, 2020

The Plan...Kannada Movie





The Plan (Kannada Thriller)-2015

ಕನ್ನಡದಲ್ಲಿ ಥ್ರಿಲ್ಲರ್ ಸಿನಿಮಾಗಳು ಬರುವುದೇ ಕಡಿಮೆಯೇನೋ ಅನ್ನಿಸಿಬಿಡುತ್ತದೆ. ಅಥವ ಇಲ್ಲಿಯ ಪ್ರೇಕ್ಷಕರಿಗೆ ಇಷ್ಟವಾಗುವುದಿಲ್ಲವೇ ಅಂತ ಪ್ರಶ್ನೆ ಕೇಳಿಕೊಂಡರೆ ರಂಗಿತರಂಗದಂತಹ ಅನೇಕ ಸಿನಿಮಾಗಳು ಕಣ್ಣೆದುರಿಗೆ ಬಂದು "ಹಾಗೇನಿಲ್ಲ" ಅಂತ ಉತ್ತರ ಕೊಡುತ್ತವೆ.

ಮೊನ್ನೆ ಸಹೋದ್ಯೋಗಿಯೊಬ್ಬರು ಈ ಸಿನಿಮಾವನ್ನು ನೋಡಿ ಎಂದು ಹೇಳಿದರು. ಹುಡುಕಿದರೆ Netflix ನಲ್ಲೇ ಇದೆ. ಏನೋ ಸುಮಾರಾಗಿರಬೇಕು ಅಂತ ನೋಡಲು ಕುಳಿತವನಿಗೆ ಸಿಕ್ಕಿದ್ದಂತೂ ಅಚ್ಚರಿಯೇ!

ಇಡೀ ಸಿನಿಮಾ ಕುತೂಹಲದಿಂದ ಒಂದು ಕ್ಷಣವೂ ಕಣ್ಮಿಟುಕಿಸದಂತೆ ನೋಡಿಸಿಕೊಳ್ಳುತ್ತೆ. ಒಂದೇ ಹಾಡು. ಚಿತ್ರಕಥೆಯ ಶೈಲಿಯೂ ಅಷ್ಟೇ, ಬೇರಾವುದೋ ಭಾಷೆಯ ಸಿನಿಮಾದಲ್ಲೂ ನೋಡಿದ್ದೇವೆ ಅನ್ನಿಸಿದರೂ ಕನ್ನಡಕ್ಕಿನ್ನೂ ಹೊಸತು.

ಗಂಭೀರ ಕೊಲೆಯ ಆರೋಪದಲ್ಲಿ ಹದಿನೈದು ದಿನಗಳ ಮಟ್ಟಿಗೆ ಜೈಲೊಂದಕ್ಕೆ ಬರುವ ವಿಚಾರಣಾಧೀನ ಖೈದಿಗಳು ತಾವು ಪ್ರಕರಣದಿಂದ ತಪ್ಪಿಸಿಕೊಳ್ಳಲು ಯಾವುದೇ ದಾರಿಯಿಲ್ಲ ಎಂಬ ಸತ್ಯ ಅರಿವಾದಾಗ ಆ ಜೈಲಿನಿಂದ ತಪ್ಪಿಸಿಕೊಳ್ಳುವುದೊಂದೇ ದಾರಿ ಎಂಬ ನಿರ್ಧಾರಕ್ಕೆ ಬರುತ್ತಾರೆ. ಅವರಿಗೆ ಪರೋಕ್ಷವಾಗಿ ಸಹಾಯ ಮಾಡುವಾತ ಅದೇ ದಿನ ಜೈಲರ್ ಆಗಿ ಬರುವ ಹೊಸ ಅಧಿಕಾರಿ (ಅನಂತ್ ನಾಗ್).

ಎಲ್ಲೂ ಬೋರೆನಿಸುವುದಿಲ್ಲ. ಮೂರು ಜನ ಹುಡುಗರೂ ಹೊಸಬರೇ. ಆದರೆ ಇಲ್ಲಿ ಅನಂತ್ ನಾಗ್, ರಮೇಶ್ ಭಟ್, ಪ್ರಮೋದ್ ಶೆಟ್ಟಿ, ಬಿಟ್ಟರೆ ಎಲ್ಲರೂ ಹೊಸಬರೇ. ಆದರೆ ಕಥೆ-ಚಿತ್ರಕಥೆಯೇ ಇಲ್ಲಿ ನಾಯಕ. ಈ ಸಿನಿಮಾ ಸೂಪರ್ ಹಿಟ್ ಆಗಬೇಕಿತ್ತು ಅನ್ನಿಸದೇ ಇರಲಾರದು.

ಇಂತಹ ಸಿನಿಮಾಗಳು ಕನ್ನಡದಲ್ಲಿ ಬರುತ್ತಿರಬೇಕು. ಇಂತಹ ಸಿನಿಮಾ ಬಂದರೆ, ಇದೇ ಬಗೆಯ ಮನರಂಜನೆ ಸಿಗುತ್ತದೆ ಎಂಬ ಖಾತ್ರಿ ಸಿಕ್ಕರೆ ಅದೆಷ್ಟೇ ಹೊಸಬರ ಚಿತ್ರವಾದರೂ ಥಿಯೇಟರಿಗೆ ಹೋಗುವುದಕ್ಕೆ ಹಿಂಜರಿಯಲಾರೆ.

ನೋಡಿರದಿದ್ದರೆ ಒಮ್ಮೆ ನೋಡಿ. (Netflix ನಲ್ಲಿದೆ)

-Santhosh Kumar LM
06-Jan-2020

Friday, January 3, 2020

One Cut Of The Dead (2017)...Japanese movie








One Cut Of The Dead (2017)

2017ರಲ್ಲಿ ಬಿಡುಗಡೆಯಾದ ಜಪಾನೀ ಭಾಷೆಯ ಚಿತ್ರ. ಬಹುಶಃ ಈ ಸಿನಿಮಾ ಮಾಡುವಾಗ ಸ್ವತಃ ಅದರ ನಿರ್ಮಾತೃಗಳಿಗೂ ಅದು ಇಷ್ಟು ಜನಪ್ರಿಯವಾಗುತ್ತದೆ ಅಂತ ಕನಸು-ಮನಸಿನಲ್ಲಿಯೂ ಎಣಿಸಿರಲಿಲ್ಲವೆಂದು ಕಾಣುತ್ತದೆ. ಏಕೆಂದರೆ ಈ ಸಿನಿಮಾ ಬಿಡುಗಡೆ ಮಾಡಿದ್ದೇ ಒಂದು ಥಿಯೇಟರಿನಲ್ಲಿ. ಅದೂ ಆರು ದಿನಗಳ ಪ್ರದರ್ಶನದ ಒಪ್ಪಂದದ ಮೇರೆಗೆ!

ನೋಡಿ. ಹೊಸ ಆಲೋಚನೆ, ಕೆಲಸದ ಗುಣಮಟ್ಟವಷ್ಟೇ ಅನೇಕ ಸಲ ಮುಖ್ಯವಾಗುತ್ತದೆ. ಅದಕ್ಕೆ ಹಾಕಿದ ಹಣವಲ್ಲ. ಇಪ್ಪತ್ತು ಲಕ್ಷ ರೂಪಾಯಿಗಿಂತಲೂ ಕಡಿಮೆ ಬಜೆಟ್ಟಿನ ಚಿತ್ರವೊಂದು ಜಪಾನೊಂದರಲ್ಲೇ ಇನ್ನೂರು ಕೋಟಿ ದುಡ್ಡು ಮಾಡಿತು. ಅದರ ಮೌಲ್ಯ ತಿಳಿದ ಪ್ರಸಿದ್ಧ ಹಂಚಿಕೆದಾರರೊಬ್ಬರು ವಿದೇಶಗಳಲ್ಲೂ ಬಿಡುಗಡೆ ಮಾಡಿದ್ದರಿಂದ ಅಲ್ಲೂ ಇನ್ನೂರು ಕೋಟಿಗಿಂತಲೂ ಹೆಚ್ಚು ಸಂಪಾದಿಸಿತು.

ಇಪ್ಪತ್ತು ಲಕ್ಷವೆಲ್ಲಿ? ನಾಲ್ಕುನೂರು ಕೋಟಿಯೆಲ್ಲಿ?! ಇದಕ್ಕೆ ಕಾರಣ ಸಿನಿಮಾದ ಹೊಸತು ಎನಿಸುವ ಕಥೆಯೊಂದನ್ನು ಕೊಟ್ಟಿದ್ದು ಅಷ್ಟೇ!!

ಇದೊಂದು Zombie Horror ಚಿತ್ರ...."ಅಂತ ಅಂದುಕೊಳ್ಳಿ" ಅಂತಲೇ ಇಲ್ಲಿ ಹೇಳುತ್ತೇನೆ. ಏಕೆಂದರೆ ಸಿನಿಮಾದೊಳಗೆ ನಾವೇ ನಂಬಲಾಗದ ಅನೇಕ ಆಶ್ಚರ್ಯಕರ ಸಂಗತಿಗಳು ತೆರೆದುಕೊಳ್ಳುತ್ತ ಹೋಗುತ್ತವೆ. ಎಲ್ಲವನ್ನು ನೋಡುವ ಮುನ್ನವೇ ಹೇಳಿದರೆ ಇಲ್ಲಿ ನಿಮ್ಮ ಕುತೂಹಲವನ್ನು ಕೊಂದಂತಾಗಬಹುದು.

ಒಂದು Zombie ಚಿತ್ರವನ್ನು ಚಿತ್ರೀಕರಿಸಲು ಹಳತಾದ ಬಂಗಲೆಯೊಳಕ್ಕೆ ತಂಡವೊಂದು ಬರುತ್ತದೆ. ಆ ಬಂಗಲೆ ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಯಾವುದೋ ಪ್ರಯೋಗಗಳಿಗೆ ಬಳಸಿಕೊಳ್ಳಲಾಗಿತ್ತು ಅನ್ನುವುದು ಗೊತ್ತಾಗುತ್ತದೆ. ಚಿತ್ರೀಕರಣ ಶುರುವಾಗುತ್ತದೆ. Zombie ಪಾತ್ರಧಾರಿ ಎದುರಿಗೆ ಬಂದಾಗ ಭಯಪಡುವ ದೃಶ್ಯ ನಿರ್ದೇಶಕನಿಗೆ ತೃಪ್ತಿ ಕೊಡುವುದಿಲ್ಲ. ಕೋಪಿಸಿಕೊಂಡವನೇ ಎಲ್ಲರ ಮೇಲೆ ಕೂಗಾಡಿ ಹೊರಗೆ ಹೋಗುತ್ತಾನೆ. ನಟಿ ಬೇಸರದಲ್ಲಿದ್ದರೆ ಎಲ್ಲರೂ ನಿರ್ದೇಶಕ ಮರಳಿ ಬರಲಿ ಎಂದು ಕಾಯುತ್ತಿರುತ್ತಾರೆ. ಇದ್ದಕ್ಕಿದ್ದ ಹಾಗೆ ರಕ್ತಸಿಕ್ತವಾದ ನಿಜವಾದ Zombieಯೇ ಅಲ್ಲಿ ಪ್ರತ್ಯಕ್ಷವಾಗುತ್ತದೆ. ಅಲ್ಲಿ ಕುಳಿತಿದ್ದವರೆಲ್ಲ ಓಡಲು ಶುರುವಿಟ್ಟುಕೊಂಡರೆ ಅದು ಹಿಂಬಾಲಿಸುತ್ತದೆ. ಅದನ್ನು ಎದುರಿಸುವಾಗ ಮತ್ತೊಂದು....!! ಎದೆ ಢವಢವ ಶುರುವಿಟ್ಟುಕೊಂಡರೆ......

ಹೀಗೆ ಆರಂಭವಾಗುವ ಸಿನಿಮಾ ಎಲ್ಲೆಲ್ಲೋ ಸಾಗುತ್ತದೆ. ಇದ್ದಕ್ಕಿದ್ದಂತೆ ಮಧ್ಯದಲ್ಲಿಯೇ ಸಿನಿಮಾ ಮುಗಿದ ಫೀಲ್.... ಎಂಡ್ ಕ್ರೆಡಿಟ್ಸ್ ಶುರುವಾಗುತ್ತದೆ.

ಇನ್ನೇನು ಮುಗಿಯಿತು ಅನ್ನುವಷ್ಟರಲ್ಲಿ ಅಲ್ಲೇ ಇನ್ನೊಂದು ಕಥೆ! ಎಲ್ಲವೂ ಅಯೋಮಯ. ಪ್ರೇಕ್ಷಕ ತಲೆಕೆಡಿಸಿಕೊಳ್ಳುತ್ತಾನೆ ಅನ್ನುವಷ್ಟರಲ್ಲಿ ನಿರಾಳ!

ಅದರ ಬಗ್ಗೆ ಹೆಚ್ಚಿಗೆ ಇಲ್ಲಿ ಹೇಳಬಾರದು. ಸಿನಿಮಾ ನೋಡಿ.

Zombie ಸಿನಿಮಾಗಳನ್ನು ನೋಡುವವರಿಗೆ ಎಲ್ಲ ಸಿನಿಮಾಗಳಂತೆ ಇದು ಸಾಮಾನ್ಯ ಅನ್ನಿಸಿದರೂ ಒಂದು ಘಟ್ಟ ಮುಗಿದ ನಂತರ ಬೇರೆಯದೆ ಅನ್ನಿಸಿಕೊಂಡು ಮನರಂಜನೆ ನೀಡುವುದು ಖಂಡಿತ. ನೋಡಿರದಿದ್ದರೆ ನೋಡಿ. ಮೊದಲ ನಲವತ್ತೈದು ನಿಮಿಷಗಳನ್ನು ಒಂದೇ ಶಾಟ್'ನಲ್ಲಿ ಚಿತ್ರೀಕರಿಸಿಕೊಳ್ಳಲಾಗಿದೆ! ಸಿನಿಮಾ ಮುಗಿದ ಮೇಲೆ ಅದರ ಚಿತ್ರೀಕರಣದ ಬಗ್ಗೆಯೂ ಖಂಡಿತ ತಲೆಕೆಡಿಸಿಕೊಳ್ಳುತ್ತೀರಿ!


ಭಾಷೆ ಯಾವುದಾದರೂ ಸರಿ ಅನ್ನುವ, ಹೊಸತನ್ನು ಬಯಸುವ ಸಿನಿಪ್ರಿಯರು ಈ ಸಿನಿಮಾ ನೋಡಬಹುದು. ಸಿನಿರಂಗದಲ್ಲೇ ಕೆಲಸ ಮಾಡುವವರು ಈ ಸಿನಿಮಾ ನೋಡಿದರೆ ಹೊಸಪ್ರಯತ್ನಗಳ ಬಗ್ಗೆ ನಂಬಿಕೆಯನ್ನು ಜೀವಂತವಾಗಿರಿಸಿಕೊಳ್ಳಬಹುದು.

-Santhosh Kumar LM

03-Jan-2020

ಅವನೇ ಶ್ರೀಮನ್ನಾರಾಯಣ (2019)







ಅವನೇ ಶ್ರೀಮನ್ನಾರಾಯಣ (2019)

ಈ ಸಿನಿಮಾವನ್ನು ನೀವಿನ್ನೂ ನೋಡಿರದಿದ್ದರೆ ಈ ಬರಹವನ್ನು ಮುಂದೆ ಓದಬೇಡಿ. ಸಿನಿಮಾ ನೋಡಿ ಬನ್ನಿ. ಖಂಡಿತವಾಗಿಯೂ ಇದು ಒಮ್ಮೆ ನೋಡಲೇಬಹುದಾದ ಸಿನಿಮಾ.

ಸಿನಿಮಾ ನೀವೀಗಾಗಲೇ ನೋಡಿದ್ದು ನಿಮಗೆ ಸಿಕ್ಕಾಪಟ್ಟೆ ಇಷ್ಟವಾಗಿದ್ದರೆ ನಾನು ಬರೆದಿರುವ ‌ಕೆಲವು ವಿಷಯಗಳು ನಿಮಗೆ ಅಸಮಾಧಾನ ತರಬಹುದು. ಕ್ಷಮೆಯಿರಲಿ.

The proof of the pudding is in the eating ಅನ್ನುವ ಮಾತೊಂದಿದೆ. ಅದರರ್ಥ ಯಾವುದೇ ವಿಚಾರ ಅರ್ಥವಾಗಬೇಕೆಂದರೆ ಅದನ್ನು ಸ್ವತಃ ಅನುಭವಿಸಿದಾಗಲಷ್ಟೇ ಅಂತ. ಹೀಗಾಗಿ ಗೆಳೆಯರು ಬಗೆಬಗೆಯ ಅಭಿಪ್ರಾಯ ಹೇಳಿದರೂ "ಅವನೇ ಶ್ರೀಮನ್ನಾರಾಯಣ" ಸಿನಿಮಾವನ್ನು ಚಿತ್ರಮಂದಿರದಲ್ಲಿಯೇ ನೋಡುವ ನಿರ್ಧಾರ ಮಾಡಿದೆ. ಏಕೆಂದರೆ ಈ ಸಿನಿಮಾವನ್ನು ಈಗ ನೋಡದೇ ನಂತರ ಅಮೇಜಾನ್ ಪ್ರೈಮ್‌ನಲ್ಲೋ ಅಥವಾ ನೆಟ್‌ಫ್ಲಿಕ್ಸ್‌ನಲ್ಲೋ ನೋಡುವ ಸಿನಿಮಾವಲ್ಲ. ಕೋಟಿ ಕೋಟಿ ಸುರಿದು, ಹಗಲು ರಾತ್ರಿಯೆನ್ನದೇ ವರ್ಷಾನುಗಟ್ಟಲೆ ಸಮಯ-ಬುದ್ಧಿ ವ್ಯಯಿಸಿದ ಸಿನಿಮಾವನ್ನು ನೋಡುವ ರೀತಿಯೂ ಅದಲ್ಲ. ಅದಿರಲಿ. ನನಗನ್ನಿಸಿದಂತೆ ಇದು great ಸಿನಿಮಾ ಅಲ್ಲ. ಹಾಗಂದ ಕ್ಷಣ ಇದು ಕೆಟ್ಟ ಸಿನಿಮಾ ಅಂತ ಧ್ವನಿಸುವ ಅಪಾಯವಿದೆ. ಹಾಗಾಗಿ ಕೊಂಚ ವಿವರವಾಗಿ ಬರೆಯುವ ಪ್ರಯತ್ನ ಮಾಡಿದ್ದೇನೆ‌. ಕೆಲ ವಿಷಯಗಳಲ್ಲಿ ಹೆಚ್ಚು ಆಸ್ಥೆ ವಹಿಸಿದ್ದರೆ KGFರೀತಿಯೇ ಇನ್ನೂ ಹೆಚ್ಚು ಸದ್ದು ಮಾಡುವ ಎಲ್ಲ ಸಾಧ್ಯತೆಯಿತ್ತು.

ನಿಂಬೆಹಣ್ಣನ್ನು ಡೆಲ್ಲಿಯಿಂದ ತರಿಸಿದೆ. ಕಡ್ಲೆಕಾಯಿ ಉತ್ತರಪ್ರದೇಶದ್ದು. ಎಣ್ಣೆ ಮಧ್ಯಪ್ರದೇಶದ್ದು. ಉಪ್ಪು ಕನ್ಯಾಕುಮಾರಿದು. ಕಡ್ಲೆಬೇಳೆ ತಿರುವನಂತಪುರದ್ದು. ಹಸಿಮೆಣಸಿನಕಾಯಿ ಕಾಶ್ಮೀರದ್ದು. ಸಾಸಿವೆ ಬಂಗಾಳದ್ದು.......ಇತ್ಯಾದಿ

ಹೀಗೆ ಯಾವ ಯಾವ ಪದಾರ್ಥಗಳನ್ನು ಎಲ್ಲೆಲ್ಲಿಂದ ಎಷ್ಟೆಷ್ಟು ಕಷ್ಟಪಟ್ಟು ತರಿಸಿದೆವು ಅಂತ ಯಾರಾದರೂ ಹೇಳುತ್ತಾರೆ ಅಂದುಕೊಳ್ಳೋಣ. ಅವೆಲ್ಲವೂ ಮುಖ್ಯವಾಗುತ್ತವಾ? ಇಲ್ಲ. ಚಿತ್ರಾನ್ನ ಮಾಡಿ ತಟ್ಟೆಯಲ್ಲಿ ಕೊಟ್ಟಾಗ ಅದರ ಮೊದಲ ತುತ್ತನ್ನು ತೆಗೆದು ಬಾಯಿಗಿಟ್ಟು ಆಸ್ವಾದಿಸುತ್ತೇವಲ್ಲ. ಆ ಕ್ಷಣದಲ್ಲಿ ಅದನ್ನು ತಿನ್ನುತ್ತಿರುವವನಿಗೆ ಅದರ ರುಚಿ ಹೇಗಿತ್ತು ಅನ್ನುವುದಷ್ಟೇ ಅಲ್ಲಿ ಮುಖ್ಯವಾಗುತ್ತದೆ.

ಈ ಸಿನಿಮಾದಲ್ಲಿ ಆಗಿದ್ದು ಅದೇ‌. ಸಿನಿಮಾ ಮುಗಿದು ಹೊರಬರುವಾಗ ಏನೋ ಮಿಸ್ ಆಯ್ತಲ್ಲ ಅಂತ ಅನ್ನಿಸುವುದು ಸಹಜ. ಆ ನಿಟ್ಟಿನಲ್ಲಿ ಅದಕ್ಕೆ ಕಾರಣಗಳೇನಿರಬಹುದು ಅನ್ನುವುದನ್ನು ಯೋಚಿಸಲು ಪ್ರಯತ್ನಪಟ್ಟಿದ್ದೇನೆ ಅಷ್ಟೇ. ಇದು "ಅವನೇ ಶ್ರೀಮನ್ನಾರಾಯಣ" ಸಿನಿಮಾದ ವಿಮರ್ಶೆಯಲ್ಲ. ಇದು ನನ್ನ ಅಭಿಪ್ರಾಯ ಅಷ್ಟೇ. ಹತ್ತನೇ ತರಗತಿಯಲ್ಲಿ ಫೇಲಾದವನನ್ನು, ಡಿಗ್ರಿಯಲ್ಲಿ ಫೇಲಾದವನನ್ನು, ಎಂಬಿಎ ಮಾಡಲು ಪರೀಕ್ಷೆ ಬರೆದು ಕಮ್ಮಿ ಮಾರ್ಕ್ಸ್ ತೆಗೆದುಕೊಂಡವರನ್ನು ಒಂದೇ ತಕ್ಕಡಿಯಲ್ಲಿ ತೂಗಿ ಎಲ್ಲರೂ ಒಂದೇ ಎಂದು ಹೇಳಲು ಹೇಗೆ ಸಾಧ್ಯವಿಲ್ಲವೋ, ಹಾಗೆಯೇ "ಅವನೇ,,,ಶ್ರೀ" ಸಿನಿಮಾವನ್ನು ಕೂಡ ಉಳಿದ ಸಿನಿಮಾಗಳಿಗೆ ಹೇಳುವಂತೆ ಒಂದೇ ವಾಕ್ಯದಲ್ಲಿ ಹೇಗಿದೆ ಎಂದು ಹೇಳಲು ಅಸಾಧ್ಯ. ಮೊನ್ನೆ ಈ ಸಿನಿಮಾದ ಪ್ರೀಮಿಯರ್ ಶೋ ನೋಡಿ ಬಂದ ಅನೇಕರಿಗೆ ಹೇಗಿದೆ ಎಂದು ಕೇಳಿದ್ದಕ್ಕೆ ಅವರು ಕೊಟ್ಟ ಉತ್ತರವೂ ಹೀಗೆಯೇ ಇತ್ತು. ಆಗಲೇ ಹೀಗಿರಬಹುದಾ ಅನಿಸಿತ್ತು.

ಕಾರಣ ನಮಗೆಲ್ಲರಿಗೂ ಗೊತ್ತಿದೆ. "ಅವನೇ ಶ್ರೀ.." ಎರಡು ತಿಂಗಳಲ್ಲಿ ಸ್ಕ್ರಿಪ್ಟ್ ಮುಗಿಸಿ, ನಲವತ್ತು ದಿನಗಳಲ್ಲಿ ಚಿತ್ರೀಕರಣ ಮಾಡಿ, ಒಂದು ತಿಂಗಳಲ್ಲಿ ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿಸಿ, ತರಾತುರಿಯಲ್ಲಿ ಬಂದ ಸಿನಿಮಾವಲ್ಲ. ಸಿನಿಮಾ ತಂಡದ ಮೂರುವರ್ಷಗಳ ಕಠಿಣ ಶ್ರಮ ನಮಗೆ ತೆರೆಯಲ್ಲಿ ಎದ್ದು ಕಾಣುತ್ತದೆ. ಅಮರಾವತಿಯೆಂಬ ಕಾಲ್ಪನಿಕ ನಗರ, ಅಲ್ಲಿ ನಡೆಯುವ ಕಥೆ, ಪಾತ್ರಧಾರಿಗಳ ನಟನೆ, ಉಡುಗೆ ಎಲ್ಲಕ್ಕೂ ಹಾಕಿದ ಶ್ರಮ ನಿಜಕ್ಕೂ ಎದ್ದು ಕಾಣುತ್ತದೆ. Presentation ವಿಚಾರಕ್ಕೆ ಬಂದರೆ ಈ ಸಿನಿಮಾ ಖಂಡಿತವಾಗಿಯೂ ಎತ್ತರದಲ್ಲಿ ನಿಲ್ಲುತ್ತದೆ.

ಹಾಗಂತ ಸಿನಿಮಾ ಒಂದು ಪ್ರಾಡಕ್ಟ್ ಆಗಿ ಇಷ್ಟವಾಗಲೇಬೇಕೇ? ಇಲ್ಲದೆಯೂ ಇರಬಹುದು. ಅದಕ್ಕೆ ಕಾರಣವೂ ಇರುತ್ತದೆ. ನಮಗೆ ಬೆಸ್ಟ್ ಅನ್ನಿಸುವ ಕಥೆ ಇನ್ನೊಬ್ಬನಿಗೆ ಸಾಧಾರಣ ಅನ್ನಿಸಬಹುದು. ಮೇಕಿಂಗ್ ಎಷ್ಟು ಚಂದವೇ ಇದ್ದರೂ ಕಥೆಯೂ ಅದಕ್ಕೆ ಜೀವಾಳವೇ. ಅದನ್ನು ಎಲ್ಲಿಯೂ ಅಲ್ಲಗೆಳೆಯುವಂತಿಲ್ಲ. ವೈಯಕ್ತಿಕವಾಗಿ ನನಗೆ ಕೊರತೆ ಅನ್ನಿಸಿದ್ದು ಕಥೆಯೇ. "ಅವನೇ ಶ್ರೀ.." ಸಿದ್ಧ ಮಾಡಿಕೊಂಡ ದೊಡ್ಡ ವೇದಿಕೆಗೆ ಅಯ್ದುಕೊಂಡ ಕಥೆ ತಕ್ಕುದಾಗಲಿಲ್ಲ. ಪರಿಪೂರ್ಣ ಅನಿಸಿಕೊಳ್ಳಲು ಮತ್ತು ಸಿನಿಮೀಯ ಅನುಭವ ನೀಡಲು ಆಯ್ದುಕೊಂಡ ಮತ್ತು ನಿರ್ಲಕ್ಷಿಸಿದ ವಿಷಯಗಳೇ ಕಥೆಯ ಪ್ರಮುಖ ಹಂತಗಳಲ್ಲಿ ಪ್ರೇಕ್ಷಕನಿಗೆ ರೋಮಾಂಚಕ ಅನುಭವಗಳನ್ನು ನೀಡಲು ವಿಫಲವಾದವು. ಯಾವುದೇ Genreನ ಕಮರ್ಷಿಯಲ್ ಸಿನಿಮಾಗಳಾಗಲಿ, ಅಲ್ಲಲ್ಲಿ ಆ ಬಗೆಯ ಅಂಶಗಳು ಇರಲೇಬೇಕು. ಅದು ನಾಯಕನ ಎಂಟ್ರಿ ದೃಶ್ಯದ ಮುನ್ನ ನಾವು ಪ್ರೇಕ್ಷಕನಿಗೆ ಕಟ್ಟಿಕೊಡುವ ಹಿನ್ನೆಲೆಯಿರಬಹುದು. ಅಥವಾ ನಿಧಿ ಸಿಕ್ಕಾಗಿನ ದೃಶ್ಯವಿರಬಹುದು, ಅಥವ ಅನಿರೀಕ್ಷಿತ ಸಂದರ್ಭದಲ್ಲಿ ದಿಢೀರ್ ಸಂಭವಿಸುವ ಘಟನೆಯಾಗಬಹುದು. "ಉಳಿದವರು ಕಂಡಂತೆ" ಸಿನಿಮಾದ (ರಿಶಬ್ ಶೆಟ್ಟಿ-ತಾರ) ಅಮ್ಮ-ಮಗ ಅನೇಕ ವರ್ಷಗಳ ನಂತರ ಮುಖಾಮುಖಿಯಾಗುವ ದೃಶ್ಯ, KGFನ ಮಣ್ಣಲ್ಲಿ ಬಿದ್ದ ಬ್ರೆಡ್‌ಅನ್ನು ನಾಯಕ ಕಾರು ನಿಲ್ಲಿಸಿ ಆ ತಾಯಿಗೆ ಎತ್ತಿಕೊಡುವ ಈ ಬಗೆಯ ದೃಶ್ಯಗಳನ್ನು ಮರೆಯಲು ಸಾಧ್ಯವೇ?

ಸಿನಿಮಾದ ಕಾಲಾವಧಿ ಮೂರು ಗಂಟೆಗೂ ಹೆಚ್ಚು, ಇದು ಖಂಡಿತವಾಗಿಯೂ ಜಾಸ್ತಿಯೇ. ಆದರೆ ಎಲ್ಲಿಯೂ ಬೋರ್ ಹೊಡೆಸುವುದಿಲ್ಲ ಅನ್ನುವಷ್ಟರ ಮಟ್ಟಿಗೆ ಸಿನಿಮಾದ ನಿರೂಪಣೆಯ ಬಗ್ಗೆ ನನ್ನ ಮೆಚ್ಚುಗೆಯಿದೆ. ರಕ್ಷಿತ್ ಶೆಟ್ಟಿಯವರಿಗೆ ತನ್ನ Strength & Weakness ಬಗ್ಗೆ ಅರಿವಿದೆ. ಮತ್ತು ತನ್ನ ಯಾವ ಮ್ಯಾನರಿಸಂ ಪ್ರೇಕ್ಷಕನಿಗೆ ಇಷ್ಟವಾಗಬಹುದೆಂದು ಗೊತ್ತಿದೆ. ಹಾಗಾಗಿ ಅದನ್ನೇ ಈ ಸಿನಿಮಾದಲ್ಲಿ ಅಳವಡಿಸಿಕೊಂಡಿದ್ದಾರೆ. ಅದು ಸರಿಯಾಗಿ ಕೆಲಸಮಾಡಿದೆ ಕೂಡಾ. "Hands-up" ಹಾಡು ಬಿಟ್ಟರೆ ಉಳಿದವು ಮನಸ್ಸಿಗೆ ನಾಟಲಿಲ್ಲ. ಆದರೆ ಸಿನಿಮಾ ಪೂರ್ತಿ ಅಮರಾವತಿಯ ಕಾಲ್ಪನಿಕ ಲೋಕದಲ್ಲಿ ತೇಲಿಸಿದ್ದು ಮಾತ್ರ ಚಿತ್ರದುದ್ದಕ್ಕೂ ತೇಲಿ ಬರುವ ಹಿನ್ನೆಲೆ ಸಂಗೀತ. ಪ್ರತೀ ಚಿತ್ರದಲ್ಲಿ ಉತ್ತಮ್ಮ ಹಿನ್ನೆಲೆ ಸಂಗೀತವನ್ನು ಆಸ್ವಾದಿಸುತ್ತ ಇದೀಗ ನಮ್ಮ expectation ಕೂಡ ಹಾಗೆಯೇ ಬೆಳೆಯುತ್ತಿದೆ ಅನ್ನುವುದಕ್ಕೆ ಈಗ ನಮಗೆ ಸಿಗುತ್ತಿರುವ ಹಿನ್ನೆಲೆ ಸಂಗೀತದ ಗುಣಮಟ್ಟವೇ ಸಾಕ್ಷಿ.

ಅಮರಾವತಿಯ ಕೋಟೆಯನ್ನು, ಕೋಟೆಯೊಳಗಿನ ನಾಯಕನನ್ನು, ಹೊಡೆದಾಟದ ದೃಶ್ಯಗಳನ್ನು ಅದ್ಭುತವಾಗಿ ತೋರಿಸಿರುವ ಕ್ಯಾಮೆರಾ ಕೆಲಸ ಶ್ಲಾಘನೀಯ. ಅಮರಾವತಿಯ ಪ್ರಪಂಚವನ್ನೇ ಕಟ್ಟಿಕೊಟ್ಟ ಕಲಾನಿರ್ದೇಶನದ ವಿಭಾಗಕ್ಕೂ ಕ್ರೆಡಿಟ್ ಸಲ್ಲಬೇಕು. ಕಡೆಯ ಹೊಡೆದಾಟದ ದೃಶ್ಯದಲ್ಲಿ ಸಿಗುವ ನೈಜತೆ, ಥ್ರಿಲ್ ಮೊದಲ ಬಾರ್'ನೊಳಗಿನ ಹೊಡೆದಾಟದ ದೃಶ್ಯದಲ್ಲಿ ಸಿಗಲಿಲ್ಲ. ಇಂಥ ದೃಶ್ಯಗಳಲ್ಲಿ ಲೋಪವನ್ನೆಲ್ಲ ಮುಚ್ಚಿಹಾಕಿದ್ದು ಮಾತ್ರ ರಕ್ಷಿತ್-ಅಚ್ಯುತ್ ಜೋಡಿಯ ನಕ್ಕುನಗಿಸುವ ತಿಳಿಹಾಸ್ಯ.

ಮತ್ತದೇ ಬರವಣಿಗೆಯ ವಿಭಾಗಕ್ಕೆ ಬಂದರೆ ನಾಟಕ ತಂಡ, ಅವರ ಹಿನ್ನೆಲೆ, ನಿಧಿಯ ರಹಸ್ಯ, ಸಮುದ್ರಮಂಥನದ ನಾಟಕ, ನಿಧಿಯನ್ನು ಪತ್ತೆ ಹಚ್ಚುವಿಕೆ ಇವೆಲ್ಲವೂ ಒಗಟಿನ ರೀತಿಯಲ್ಲೇ ಇದ್ದರೂ ಅವನ್ನು ಬಿಡಿಸಿದಾಗಲೂ ಏನೋ ಹೊಸದು ಅನ್ನಿಸಿಕೊಳ್ಳಲಿಲ್ಲ. ಆ ಭಾಗವೂ ರಸಾನುಭವ ಕೊಡುವಲ್ಲಿ ವಿಫಲವಾಯಿತು.

ಇವೆಲ್ಲದರ ಮಧ್ಯೆ ನಾವೂ ಸಿನಿಮಾದ ಹೀರೋಗಳೇ ಅನಿಸಿಕೊಂಡವರು ಮಾತ್ರ ಖಳನಟರಾದ ಬಾಲಾಜಿ ಮನೋಹರ್ ಮತ್ತು ಪ್ರಮೋದ್ ಶೆಟ್ಟಿ. ಕನ್ನಡ ಚಿತ್ರರಂಗ ಇವರನ್ನು ಹೀಗೆಯೇ ಹೆಚ್ಚು ಅವಕಾಶ ನೀಡಿ ಬಳಸಿಕೊಳ್ಳುವಂತಾಗಲಿ.

ಯಾವುದೇ ಕನ್ನಡ ಸಿನಿಮಾದ ಬಗ್ಗೆ ಕನ್ನಡ ಪ್ರೇಕ್ಷಕರಾಗಿ ದ್ವೇಷ ನಮಗೇಕಿರಬೇಕು? ನಮ್ಮ ಕನ್ನಡ ಸಿನಿಮಾ...ಅದರ ಬಗ್ಗೆ ನಮ್ಮ expectation ಹೆಚ್ಚಿರಬೇಕು. ಅದಕ್ಕೆ ತಕ್ಕುದಾದ ಸಿನಿಮಾಗಳನ್ನು ಚಿತ್ರರಂಗದವರು ಮಾಡಬೇಕು. ಮತ್ತು ಆ ಸಿನಿಮಾಗಳು ಜಗತ್ತನ್ನು ಮುಟ್ಟಬೇಕು. ಎಲ್ಲ ಕಡೆ ನಮ್ಮ ಎದೆತಟ್ಟಿಕೊಳ್ಳುತ್ತ "ನಮ್ಮ ಸಿನಿಮಾ ನೋಡಿ" ಅಂತ ಹೇಳಬೇಕೆನ್ನುವುದು ದೂರದಾಸೆ. ಆ ಬಗೆಯ ಅನಿಸಿಕೆಯನ್ನು ಅತ್ತ ಕಡೆ ಗುರಿಯಿಟ್ಟವರಿಗಷ್ಟೇ ಹೇಳಲು ಸಾಧ್ಯವಲ್ಲವೇ? ಹಾಗಾಗಿಯೇ ಈ ಅಭಿಪ್ರಾಯ "ಅವನೇ ಶ್ರೀ.." ತಂಡಕ್ಕೆ.

ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಚೆನ್ನಾಗಿ ಸಂಪಾದಿಸಲಿ. ಮತ್ತೆ ಇದೇ ಚಿತ್ರತಂಡ ಇನ್ನೂ ದೊಡ್ಡ ಸಾಹಸಗಳಿಗೆ ಕೈಹಾಕಲಿ ಎಂಬ ಹಾರೈಕೆಯೊಂದಿಗೆ.....

-Santhosh Kumar LM
30-Dec-2019