Thursday, December 31, 2020

ಪಾವ ಕದೈಗಳ್ (ತಮಿಳು, 2020)








ಪಾವ ಕದೈಗಳ್ (ತಮಿಳು, 2020)

ನಾಲ್ಕು ಪುಟ್ಟ ಕಥೆಗಳನ್ನು ಹೊಂದಿರುವ ಈ ಸಿನಿಮಾ ನೆಟ್‍ಫ್ಲಿಕ್ಸ್'ನಲ್ಲಿದೆ. ಸೂಕ್ಷ್ಮ ವಿಷಯಗಳನ್ನು ಮನೋಜ್ಞವಾಗಿ ಹೇಳಲಾಗಿದೆ. ಎರಡನೆಯ ಕಥೆಯನ್ನು ಬಿಟ್ಟರೆ ಉಳಿದ ಮೂರೂ ಕಥೆಗಳು ಮನಸ್ಸಿನಲ್ಲಿ ಅಚ್ಚೊತ್ತುತ್ತವೆ. ಒಂದು ಕಥೆ ಮುಗಿದ ಕೂಡಲೆ ಒಂದು ವಿರಾಮ ತೆಗೆದುಕೊಂಡು ಆ ಕಥೆಯ ಬಗ್ಗೆ ಯೋಚಿಸುವಂತೆ ಮಾಡುತ್ತವೆ. ಪ್ರತೀ ಕಥೆಯು ಮೂವತ್ತೈದು ನಿಮಿಷಗಳ ಆಸುಪಾಸಿನಲ್ಲಿವೆಯದರೂ ಬಹುಬೇಗನೆ ನಮಗೆ connect ಆಗುತ್ತವೆ. ಮತ್ತು ಮುಗಿಯುವುದರೊಳಗೆ ತಮ್ಮ ಕೆಲಸವನ್ನು ಮುಗಿಸಿರುತ್ತವೆ.

ಗೌತಮ್ ಮೆನನ್ ನಿರ್ದೇಶನದ ಜೊತೆಗೆ ಅವರ ಅಭಿನಯವೂ ಇಲ್ಲಿದೆ. ಮೂರು ಮಕ್ಕಳ ತಂದೆಯ ಪಾತ್ರವೊಂದರಲ್ಲಿ ತುಂಬಾ ಸಹಜವಾಗಿ ಕಾಣಿಸುತ್ತಾರೆ. ಅವರ ಎಂದಿನ ಸಿನಿಮಾಗಳಂತೆ ಇಲ್ಲೂ ಬಹುಮುಖ್ಯ ವಿಷಯವೊಂದನ್ನು ಸೂಕ್ಷ್ಮವಾಗಿ ತೋರಿಸಿದ್ದಾರೆ. ನಿಜಕ್ಕೂ ದೃಶ್ಯ ಮಾಧ್ಯಮದಲ್ಲೂ ಈ ಬಗೆಯ ವಿಚಾರಗಳನ್ನು ಸಶಕ್ತವಾಗಿ ಮಾತನಾಡಬಹುದೇ ಎಂಬ ಪ್ರಶ್ನೆಗೆ ಇಲ್ಲಿ ಉತ್ತರ ಸಿಕ್ಕಿತು. ಬಹುಶಃ ದೌರ್ಜನ್ಯದ ಕಥೆಗಳಲ್ಲಿ ತಂದೆಯ ಮಗ್ಗುಲಿಂದ ಘಟನೆಯನ್ನು ನೋಡಿದ್ದು ಇದೇ ಮೊದಲು ಅನ್ನಿಸುತ್ತದೆ. ಕಥೆ ಹೇಳಿಬಿಡಲೇ ಎನಿಸುತ್ತದೆ. ಚಿಕ್ಕ ಕಥೆಯ ಎಳೆಯನ್ನೂ ಹೇಳಿ ನಿಮ್ಮ ರಸಾನುಭೂತಿ ಹಾಳುಗೆಡವಲು ನಾ ಸಿದ್ಧನಿಲ್ಲ. ಸಿನಿಮಾ ನೋಡಿ.

ಸುಧಾ ಕೊಂಗರ ಕೂಡ ಈಗಾಗಲೇ ಹೆಸರು ಮಾಡಿದ ನಿರ್ದೇಶಕರಿಗಿಂತ ತಾನೇನು ಕಡಿಮೆಯಿಲ್ಲ ಅನ್ನುವ ಮಟ್ಟಿಗೆ ಜಿದ್ದಿಗೆ ಬಿದ್ದು ಮೊದಲ ಕಥೆಯಲ್ಲೇ ಚಪ್ಪಾಳೆ ಗಿಟ್ಟಿಸುತ್ತಾರೆ. ಕಾಳಿದಾಸ್ ಜಯರಾಮ್ ಅನ್ನುವ ನಟನೊಬ್ಬ ನಿಮಿಷದಲ್ಲೇ ಕಣ್ಣೀರು ತರಿಸುತ್ತಾನೆ. ಒಂದೇ ಪುಟ್ಟ ಕಥೆಯೊಳಗೆ ಜಾತಿ, ಧರ್ಮ, ಪ್ರೀತಿ, ಸಲಿಂಗ ಪ್ರೇಮ, ಅದನ್ನು ಕೆಟ್ಟದಾಗಿ ಕಾಣುವ ಪ್ರಪಂಚ, ನಿರಾಕರಣೆ ಎಲ್ಲವನ್ನೂ ತೋರಿಸಿ ಅಲ್ಲಿಯೂ ನಮ್ಮನ್ನು ಯೋಚನೆಗೆ ಹಚ್ಚಿದ್ದು ನನಗೆ ಸಿಕ್ಕಾಪಟ್ಟೆ ಇಷ್ಟವಾಯಿತು. ಕಡೆಯ ಕಥೆಯಲ್ಲಿ ಮನುಷ್ಯನೊಳಗಿನ ಜಾತಿ ಪ್ರೇಮದಿಂದಾಗಿ ಹುಟ್ಟುವ ತಣ್ಣಗಿನ ಕ್ರೌರ್ಯವನ್ನು ಎಂದಿನಂತೆ ಚಿತ್ರಿಸಿರುವುದು ನಿರ್ದೇಶಕ ವೆಟ್ರಿಮಾರನ್.

ಒಟ್ಟಿನಲ್ಲಿ ಮೂರು ಕಥೆಗಳ ತೂಕದಿಂದಾಗಿ ಇಡೀ ಸಿನಿಮಾ ಇಷ್ಟವಾಯಿತು. ನೋಡಿರದಿದ್ದರೆ ನೋಡಿ. ನಿಮ್ಮೊಳಗೆ ಮೂಡುವ ಪ್ರಶ್ನೆಗಳನ್ನು ಪರಾಮರ್ಶಿಸಿ!

-Santhoshkumar LM
31-Dec-2020


Saturday, December 19, 2020

ಒಂದು ಶಿಕಾರಿಯ ಕಥೆ....(Kannada, 2020)

 



ಒಂದು ಶಿಕಾರಿಯ ಕಥೆ

Brilliant storyline! ಈ ಸಿನಿಮಾಗೆ "ಅರಿಷಡ್ವರ್ಗ" ಅಂತಲೂ ಹೆಸರಿಡಬಹುದಿತ್ತು. ಅಷ್ಟು ಮನುಷ್ಯನ ಅಂತರಂಗದ ತೊಳಲಾಟದ ಅನೇಕ ವಿಷಯಗಳನ್ನು ಸಮರ್ಥವಾಗಿ ಕಥೆಯನ್ನಾಗಿಸಿದ ಸಿನಿಮಾ. ಕೆಲವು ತಿರುವುಗಳನ್ನು ಊಹಿಸಬಹುದಾದರೂ ಒಂದು ಒಳ್ಳೆಯ ಸಿನಿಮಾಗೆ ಬೇಕಾಗುವಷ್ಟು ತಿರುವುಗಳನ್ನು ನಿರ್ದಿಷ್ಟ ಅಂತರದಲ್ಲಿ ಇಡಲಾಗಿದೆ. ಯಕ್ಷಗಾನವನ್ನು ಕಥೆಯ ಪ್ರಮುಖ ಭಾಗಕ್ಕೆ ಅಳವಡಿಸಿಕೊಂಡಿರುವುದು ಮೆಚ್ಚಬೇಕಾದ ವಿಷಯ. ನಮ್ಮ ನೆಲದ ಸಂಸ್ಕೃತಿಯ ವಿಷಯಗಳನ್ನು ಹೀಗೆ ಸಿನಿಮಾಗಳಲ್ಲಿ ಬಳಸಿಕೊಳ್ಳುವುದಕ್ಕಿಂದ ಹೆಚ್ಚಿನ ಖುಶಿ ಇನ್ನೇನಿದೆ? ಹಿಂಸೆ, ಅಹಿಂಸೆ, ಕೋಪ, ವೈಮನಸ್ಸು, ದುರಾಸೆ, ಮೋಹ, ನ್ಯಾಯ, ಅನ್ಯಾಯ, ನಂಬಿಕೆ, ಮೋಸ, ಪ್ರೀತಿ ಹೀಗೆ ಅದೆಷ್ಟು ವಿಷಯಗಳನ್ನು ವಿಭಿನ್ನ ಪಾತ್ರಗಳ ಮನಸ್ಥಿತಿಯಿಂದ ಹೇಳಲಾಗಿದೆ ಅನ್ನುವುದು ಈ ಸಿನಿಮಾದಲ್ಲಿ ಇಷ್ಟವಾದ ಅಂಶ. ಹಿನ್ನೆಲೆ ಸಂಗೀತವಂತೂ ಬೇರೆ ಬೇರೆ ಸಂದರ್ಭಕ್ಕೆ ಅನುಗುಣವಾಗಿ ಸಿನಿಮಾದುದ್ದಕ್ಕೂ ಖುಶಿ ಕೊಡುತ್ತದೆ. ಶಿಕಾರಿಯ ದೃಶ್ಯಗಳು, ಹರ್ಷನ ಒಂಟಿತನದ ದೃಶ್ಯಗಳು ಛಾಯಾಗ್ರಾಹಕನಿಗೆ ಸವಾಲೊಡ್ಡಿ ಒಳ್ಳೆಯ ಕೆಲಸ ತೆಗೆಸಿವೆ. ಉದಾಹರಣೆಗೆ ಉಮಾ ಒಲೆಯ ಮುಂದೆ ಕುಳಿತ ದೃಶ್ಯ, ಹರ್ಷ ಒಂಟಿಯಾಗಿ ಮಲಗಿದ್ದಾಗ ನೆರಳಲ್ಲಿ ತೋರಿಸುವ ಯಕ್ಷಗಾನದ ದೃಶ್ಯ, ಹುಲಿವೇಷಧಾರಿ ತೆಪ್ಪವನ್ನು ನಡೆಸುವ ದೃಶ್ಯ, ಹರ್ಷ ಚಿತ್ರಗಳನ್ನು ಗೋಡೆಯಲ್ಲಿ ಮೂಡಿಸುವಾಗಿನ ದೃಶ್ಯ ಎಲ್ಲವೂ ಮನಸ್ಸಿಗೆ ಮುದ ಕೊಡುತ್ತವೆ. ಪಾತ್ರಧಾರಿಗಳು ಸಹ ಉತ್ತಮ ಅಭಿನಯದಿಂದ ನಮ್ಮ ಮನಸ್ಸೆಳೆಯುತ್ತಾರೆ. ಒಬ್ಬರಿಗಿಂತ ಇನ್ನೊಬ್ಬರು ಅನ್ನುವಂತೆ ಎಲ್ಲ ಪಾತ್ರಗಳಿಗೂ ಇಲ್ಲಿ ತೂಕವಿದೆ. ಒಟ್ಟಾರೆ ಸಿನಿಮಾ ಒಂದು ಕಾದಂಬರಿ ಓದಿದಂತೆ ಭಾಸವಾಗುತ್ತದೆ.

ಸಿನಿಮಾದ ನಿರೂಪಣೆಯಲ್ಲಿ ಕೊಂಚ ವೇಗವಿರಬೇಕಿತ್ತು. ಕೆಲವು ಸನ್ನಿವೇಶಗಳನ್ನು Cinematic Libertyಯನ್ನು ಬಳಸಿಕೊಂಡೇ ಇನ್ನಷ್ಟು ಬಿಗಿಯಾಗಿ, ಮನಮುಟ್ಟುವಂತೆ ಹೇಳಬಹುದಿತ್ತು. ಸಂಭಾಷಣೆಯಲ್ಲಿ ಎಲ್ಲ ಪಾತ್ರಗಳ ಮಾತುಗಳಿಗೆ ಆ ಭಾಗದ ಸೊಗಡಿದೆಯಾದರೂ ಮೋಹನನ ಪಾತ್ರಕ್ಕೆ ಮಾತ್ರ ಅದರಿಂದ ಹೊರತಾಗಿದ್ದುದು ಕೊಂಚ ಇರಿಸು-ಮುರಿಸಾಗಲು ಕಾರಣವಾಯಿತು. ಹಾಡುಗಳಿವೆಯಾದರೂ ಮನಸ್ಸಿಗೆ ಅಷ್ಟು ನಾಟುವುದಿಲ್ಲ. ಸಚಿನ್ ಸಾಹಿತ್ಯದ ಜವಾಬ್ದಾರಿಯನ್ನು ಬೇರೆಯವರಿಗೆ ಒಪ್ಪಿಸಬೇಕಿತ್ತು. ಹಾಡುಗಳಿಗೆ ಇನ್ನಷ್ಟು ಒತ್ತು ನೀಡಿ ಅವೇ ಸಿನಿಮಾಗೆ ಇನ್ನಷ್ಟು ತೂಕ ನೀಡಿದ್ದರೆ, ಈ ಸಿನಿಮಾ ಇನ್ನೊಂದು ಅತ್ಯುತ್ತಮ ಚಿತ್ರ ಆಗುತ್ತಿದ್ದುದರಲ್ಲಿ ಅನುಮಾನವಿಲ್ಲ ಅನ್ನಿಸಿತು. ಅದಿರಲಿ.

ಕನ್ನಡಕ್ಕೆ ಒಳ್ಳೆಯ ಸಿನಿಮಾ ನೀಡಬಲ್ಲ ಹೆಸರಾಂತ ನಿರ್ದೇಶಕರಾಗುವ ಎಲ್ಲ ಲಕ್ಷಣಗಳೂ, ಪ್ರತಿಭೆಯೂ ಸಚಿನ್ ಶೆಟ್ಟಿ ಅವರಲ್ಲಿವೆ. ಆ ನಂಬಿಕೆ ಈ ಸಿನಿಮಾ ನೋಡುವಾಗ ಪ್ರೇಕ್ಷಕನಿಗೆ ಸ್ಪಷ್ಟವಾಗಿ ಗೋಚರವಾಗುತ್ತದೆ. ಶುಭವಾಗಲಿ!

ಇನ್ನೂ ನೋಡಿರದಿದ್ದರೆ ಅಮೇಝಾನ್ ಪ್ರೈಮ್'ನಲ್ಲಿದೆ. ನೋಡಿ!

-Santhoshkumar LM

Tuesday, September 29, 2020

Vadachennai (2018, Tamil)




ವೆಟ್ರಿಮಾರನ್‍ರವರ "ಅಸುರನ್" ನೋಡಿದಾಗಿನಿಂದ "ವಡಚೆನ್ನೈ" ಹೇಗಿರಬಹುದೆಂಬ ಕುತೂಹಲವಿತ್ತು. ಸಮಯದ ಅಭಾವದಿಂದ ನೋಡಲಾಗಿರಲಿಲ್ಲ. ಕಡೆಗೂ ನೋಡಿದೆ. ಒಂದು ಆಟ, ಜನಜೀವನ, ಸಮಸ್ಯೆ, ಅವಕಾಶವಾದಿತನ, ರೌಡಿಯಿಸಂ, ಗ್ಯಾಂಗ್‍ಸ್ಟರ್ ಕಥೆ, ಸೇಡು, ಕೊಲೆ, ಪಿತೂರಿ, ಪ್ರೀತಿ....ಇತ್ಯಾದಿತ್ಯಾದಿ ಅದೆಷ್ಟು ವಿಷಯಗಳನ್ನು With Detail ಹೇಳೋಕೆ ಪ್ರಯತ್ನಿಸುವ ವೆಟ್ರಿಮಾರನ್ ನಿರ್ದೇಶನ ನಿಜಕ್ಕೂ ಬೆರಗು ಹುಟ್ಟಿಸುವಂಥದ್ದು. ಸಿನಿಮಾ ನೋಡುವಾಗಲೇ ಅವರು ಕಟ್ಟಿಕೊಡುವ ಆ ಜನಜೀವನದ ಚಿತ್ರಣ ನಮ್ಮನ್ನು ಸಂಪೂರ್ಣವಾಗಿ ತನ್ನತ್ತ ಸೆಳೆದುಕೊಳ್ಳುತ್ತದೆ. ಈ ಸಿನಿಮಾದಲ್ಲಿ ಬಳಸಿರುವ Non-Linear ಕಥೆ ಹೇಳುವ ರೀತಿಯೇ ಸಿನಿಮಾದ Highlight. ಇವೆಲ್ಲದರ ಮಧ್ಯೆ ಸಿನಿಮಾವನ್ನು ಎಲ್ಲೂ ಬೇಸರ ಹುಟ್ಟದಂತೆ ರೋಚಕವಾಗಿ ಕೊಂಡೊಯ್ಯುತ್ತಾರೆ ಅನ್ನುವುದೇ ನನಗೆ ಇಷ್ಟವಾಗುವುದು.




ಧನುಷ್ ವೆಟ್ರಿಮಾರನ್ ಸಿನಿಮಾಗಳಿಗೆ ಸರಿಯಾಗಿ ಹೊಂದಿಕೆಯಾಗುತ್ತಾರೋ, ಅಥವ ಧನುಷ್‍ರನ್ನು ವೆಟ್ರಿಮಾರನ್ ಮಾತ್ರವೇ ಬೇರೆಯದೇ ರೀತಿಯಲ್ಲಿ ತೋರಿಸುವುದೋ ಅರ್ಥವಾಗುವುದಿಲ್ಲ. ಅಷ್ಟು ಚೆನ್ನಾಗಿ ಸಿನಿಮಾದಲ್ಲಿ ಯಾವುದೇ Build-up ಇಲ್ಲದೆ ಕೇವಲ ನಟನಾಗಿ ಕಾಣಿಸಿಕೊಳ್ಳುತ್ತಾರೆ. ಮಧ್ಯೆ ಮಧ್ಯೆ ಅಲ್ಲಲ್ಲಿ ಕೊಡುವ ಟ್ವಿಸ್ಟುಗಳು ಬೆಚ್ಚಿಬೀಳಿಸುತ್ತವೆ. ಯಾವ ಪಾತ್ರ ತೆಗೆದುಕೊಂಡರೂ ಯಾರೂ ತಮ್ಮ ಪಾತ್ರಕ್ಕೆ ಅಷ್ಟು ಮಹತ್ವವಿಲ್ಲ ಅಂತ ದೂರುವ ಅಗತ್ಯವೇ ಇಲ್ಲ. ಅಷ್ಟು ಪ್ರಾಮುಖ್ಯತೆ ಎಲ್ಲ ಪಾತ್ರಗಳಿಗಿದೆ. ಇದನ್ನು ನೋಡಿದ ಮೇಲೆ ಮುಂದಿನ ಭಾಗ ಯಾವಾಗ ಬರುತ್ತದೋ ಅಂತ ಕಾಯುವಂತಾಗಿದೆ.




ರಕ್ತಪಾತವನ್ನು ಹಾಗೆಯೇ ಹಸಿಹಸಿಯಾಗಿ ತೋರಿಸುವುದರಿಂದ ಸಿನಿಮಾಗೆ ಎ ಸರ್ಟಿಫಿಕೇಟ್ ಕೊಡಲಾಗಿದೆ. ಆದರೆ ಸಿನಿಮಾವನ್ನು ಬರೀ ಮನರಂಜನೆಯ ದೃಷ್ಟಿಯಿಂದಲಷ್ಟೇ ಅಲ್ಲದೆ ಬೇರೆ ಬೇರೆ ಉದ್ದೇಶಗಳಿಗೆ ನೋಡುವ ವಿದ್ಯಾರ್ಥಿಗಳಿಗೆ ವೆಟ್ರಿಮಾರನ್ ಸಿನಿಮಾಗಳು ಖಂಡಿತ ಅಭ್ಯಾಸ ಮಾಡಲೇಬೇಕಾದ ಸರಕುಗಳು. ಸಮಸ್ಯೆಯೆಂದರೆ ಈ ಸಿನಿಮಾಗಳು ನೋಡಿ ಮರೆಯುವಂಥ ಸಿನಿಮಾಗಳಲ್ಲ. ನೋಡಿದ ಮೇಲೆ ಒಂದಷ್ಟು ದಿನಗಳಾದರೂ ನಮ್ಮೊಳಗೆ ಅವುಗಳ ಕಿಕ್ ಉಳಿಯುವಂಥವು. ನಮ್ಮ ಕನ್ನಡದ ನಟ ಕಿಶೋರ್ ಅವರನ್ನು ತಮಿಳು ಚಿತ್ರರಂಗ ಎಷ್ಟು ವಿಭಿನ್ನ ಪಾತ್ರಗಳಿಗೆ ಬಳಸಿಕೊಳ್ಳುತ್ತಾರೆ ಅಂತ ಖುಶಿ-ಹೊಟ್ಟೆಕಿಚ್ಚು ಒಟ್ಟೊಟ್ಟಿಗೆ ಉಂಟಾಗುತ್ತದೆ.



-Santhosh Kumar LM
29-Sep-2020




Friday, July 24, 2020

French Biriyani (kannada, 2020)






ಇದು ನನ್ನ ಅನಿಸಿಕೆ. ಹಾಸ್ಯ Genreನ ಸಿನಿಮಾಗಳನ್ನು ಎರಡು ಬಗೆಯಲ್ಲಿ ವಿಂಗಡಿಸಬಹುದು. ಒಂದು ಸಿನಿಮಾದ ಕಥೆಯೊಳಗೆ ಬೆರೆತು ಹೋದ ಹಾಸ್ಯ. ಇನ್ನೊಂದು ಕಥೆಯ ಎಳೆ ಮಾಮೂಲಿಯಾಗಿದ್ದು ಸಂಭಾಷಣೆಯಲ್ಲಿ ತರುವ ಹಾಸ್ಯ. ಮೊದಲ ಬಗೆಯಲ್ಲಿ ನಮಗರಿವಿಲ್ಲದೆ ನಾವು ನಕ್ಕರೆ, ಎರಡನೆಯ ಬಗೆಯಲ್ಲಿ ಸಂಭಾಷಣೆಗಳು ನಗು ಉಕ್ಕಿಸುತ್ತವೆ. ಮೊದಲನೆಯದರ ಸಮಸ್ಯೆಯೆಂದರೆ ಸಿನಿಮಾ ನಮ್ಮನ್ನು ಸೆಳೆದುಕೊಳ್ಳದಿದ್ದರೆ ಹಾಸ್ಯ ದೊಡ್ಡ ಮಟ್ಟದಲ್ಲಿ ಸೋಲುತ್ತದೆ. ಗೆದ್ದರೆ ಸಿನಿಮಾ ಸೂಪರ್ ಹಿಟ್. ಯಾವುದೇ ಅಶ್ಲೀಲ ಸಂಭಾಷಣೆಯಿಲ್ಲದ ಕಥೆಯೊಂದಿಗೆ ಹಾಸ್ಯ ಬೆರೆತ, ಕಡೆಗೆ ಅನಿರೀಕ್ಷಿತ ತಿರುವಿನೊಂದಿಗೆ ಅದ್ಭುತ ಸಂದೇಶವೊಂದನ್ನು ಕೊಟ್ಟ "ಒಂದು ಮೊಟ್ಟೆಯ ಕಥೆ" ಇದಕ್ಕೊಂದು ಉದಾಹರಣೆ.

ಎರಡನೆಯ ಬಗೆಯ ಹಾಸ್ಯದ ಸಿನಿಮಾಗಳಲ್ಲಿ ರಿಸ್ಕ್ ಕಡಿಮೆ. ಏಕೆಂದರೆ ಸಂದರ್ಭವನ್ನು ಸೃಷ್ಟಿಸಿ ನಮಗೆ ಬೇಕಾದ ಹಾಸ್ಯದ ಸಂಭಾಷಣೆಯನ್ನು ತುರುಕಿದರೆ ಅರ್ಧಕ್ಕರ್ಧ ಗೆದ್ದಂತೆ. ನನ್ನ ಪ್ರಕಾರ "ಫ್ರೆಂಚ್ ಬಿರಿಯಾನಿ" ಎರಡನೆಯ ವರ್ಗಕ್ಕೆ ಸೇರಿದ ಸಿನಿಮಾ. ಸಿನಿಮಾ ಪೂರ್ತಿ ಡೈಲಾಗುಗಳಲ್ಲಿ ಹಾಸ್ಯವನ್ನು ಬೆರೆಸಲು ನಿರ್ದೇಶಕ ಶ್ರಮ ಹಾಕಿದ್ದಾರೆ.

ಅನೇಕ ಪಾತ್ರಗಳು ಸ್ವತಂತ್ರವಾಗಿಯೇ ಹಾಸ್ಯವುಕಿಸುತ್ತವೆ. ಅರ್ಧಂಬರ್ಧ ಇಂಗ್ಲೀಷ್ ಅರ್ಥವಾಗುವ ರಂಗಾಯಣ ರಘು "ರೇಸಿಸ್ಟ್" ಅನ್ನೋ ಪದವನ್ನು "ರನ್ನಿಂಗ್ ರೇಸ್ನಲ್ಲಿ ಭಾಗವಹಿಸುವವ" ಎಂದು ಭಾವಿಸಿ ನಮ್ಮ ಮನೆಯವರೆಲ್ಲ "ರೇಸಿಸ್ಟ್-ಗಳು" ಅಂತ ಅನ್ನುವುದು. ಆ ವಿದೇಶಿಗ ತನಗೆ ಇಂಡಿಯಾ ಅನ್ನುವುದು "ಫಾರಿನ್ ಕಂಟ್ರಿ" ಅಂದಾಗ "ಇಂಡಿಯಾ ಮಾತ್ರ ಲೋಕಲ್, ಉಳಿದದ್ದೆಲ್ಲ ಫಾರಿನ್" ಅಂತ ವಾದಿಸುವುದು ಇಂಥವೆಲ್ಲ ನಗು ತರಿಸುತ್ತವೆ. ಅದರಲ್ಲೂ ಮಕ್ಕಳಾಗಲಿಲ್ಲ ಅಂತ ವೈದ್ಯರ ಬಳಿ ಬರುವ ಗಂಡ-ಹೆಂಡತಿ ಜೋಡಿಯ ಹಾಸ್ಯ ಇಷ್ಟವಾಯಿತು. ಆ ಪಾತ್ರಗಳಲ್ಲಿ ನಟಿಸಿದ ನಾಗಭೂಷಣ ಮತ್ತು ಹರಳು ಹುರಿದಂತೆ ಮಾತನಾಡುವ (ರಹೀಲಾ ಪಾತ್ರದ) ಸಿಂಧು ಮೂರ್ತಿ ಜೋಡಿ ಇಷ್ಟವಾದರು. ವಾಟರ್ ಪ್ಯೂರಿಫೈಯರ್ ಮಾರಲೆಂದು ಬಂದು ಡಾನ್ ಕೈಯಲ್ಲಿ ಸಿಕ್ಕಿಕೊಂಡು ಕೊನೆಯವರೆಗೂ ಮೂಲೆಯೊಂದರಲ್ಲಿ ನೇತಾಡುವ ಪಾತ್ರದಲ್ಲಿ ಹಂಪಕುಮಾರ್ ಅಂಗಡಿ ನಕ್ಕುನಗಿಸುತ್ತಾರೆ.

ಆದರೆ ಸಿನಿಮಾದಲ್ಲಿ ಹೀರೋ ರೇಂಜಿಗೆ ಸಿಕ್ಕಾಪಟ್ಟೆ ಇಷ್ಟವಾಗಿದ್ದು "ಮಝಲ್ ಮಣಿ" ಪಾತ್ರದಲ್ಲಿ ಬರುವ ಮಹಂತೇಶ್ ಹೀರೇಮಠ್. ಒಂದು ಕ್ಷಣ ಥೇಟ್ ತಮಿಳಿನ ಯೋಗಿ ಬಾಬು ಕನ್ನಡದಲ್ಲಿ ನಟಿಸಿದರೇನೋ ಅಂದುಕೊಂಡೆ. ಆ ಸನ್ನಿವೇಶ, ವಾತಾವರಣಕ್ಕೂ ತಮಿಳಿನ ಕೆಲ ಸಿನಿಮಾಗಳ ಛಾಯೆ ಇದೆ. ಆದರೆ ಯಾವ ಕ್ಷಣದಲ್ಲೂ ಆತನ ನಟನೆ ಅತಿರೇಕ ಅನಿಸಿಕೊಳ್ಳಲಿಲ್ಲ. ಗಂಭೀರವಾಗಿದ್ದುಕೊಂಡೇ ನಕ್ಕುನಗಿಸುತ್ತಾರೆ. ಗ್ಯಾರಂಟಿ ಆತನಿಗೆ ಅವಕಾಶಗಳು ಸಿಗಲಿವೆ. ಬಹುತೇಕ ಪಾತ್ರಗಳಿಗೆ ಹಾಸ್ಯದ ಲೇಪವಿರುವುದರಿಂದ, ಇಡೀ ಸಿನಿಮಾವನ್ನು ಹೊತ್ತು ಹೋಗುವ ಜವಾಬ್ದಾರಿ ದಾನಿಶ್ ಸೇಠ್'ಗೆ ಸಿಗಲಿಲ್ಲ ಅನ್ನಿಸಿತು.

ಇಷ್ಟೆಲ್ಲ ಹೇಳಿದ್ದು ಸಂಭಾಷಣೆ ಮತ್ತು ಎಲ್ಲ ಪಾತ್ರಗಳನ್ನು ಬಿಡಿಬಿಡಿಯಾಗಿ ನೋಡಿದಾಗ. ಆದರೆ ಇಡೀ ಕತೆಯನ್ನು ಒಟ್ಟಾಗಿ ನೋಡಿದರೆ ಸಿನಿಮಾಗೆ ಅನ್ನಿಸಿಕೊಳ್ಳುವಷ್ಟು ಕಥೆ ಸಶಕ್ತವಾಗಿಲ್ಲ ಅನ್ನಿಸಿತು. ಕಥೆಯೇ ಹೀಗಿರುವಾಗ ಕ್ಲೈಮ್ಯಾಕ್ಸ್ ಹೇಗಿದೆ, ಓಪನಿಂಗ್ ಹೇಗಿದೆ ಅಂತ ಕೇಳುವುದು ಅಸಮಂಜಸ. ಕೆಲವು ಕಡೆ ಹಾಸ್ಯಕ್ಕೆಂದೇ ಬಳಕೆಯಾಗುವ ಪದಗಳು ಎಲ್ಲರಿಗೂ ಇಷ್ಟವಾಗುವುದಿಲ್ಲವೇನೋ ಆಪೇಕ್ಷಾರ್ಹ ಪದಗಳನ್ನು ಬಳಸದೆ Rap Songಗಳನ್ನು ಬರೆಯುವಂತಿಲ್ಲವೇ ಎಂದು ನನಗೆ ಒಂದು ಹಾಡನ್ನು ಕೇಳಿದಾಗ ಅನ್ನಿಸಿತು. ಪುನೀತ್ ಹಾಡಿರುವ ಹಾಡೊಂದಕ್ಕೆ ಹೆಜ್ಜೆ ಹಾಕುವ ಧೈರ್ಯವನ್ನು ಸ್ವತಃ ನಿರ್ದೇಶಕರೇ ಏಕೆ ಮಾಡಿದರೋ ನಾ ಕಾಣೆ! ಪುನೀತ್ ಅವರೇ ಆ ಹಾಡಿಗೆ ಡ್ಯಾನ್ಸ್ ಮಾಡಿದ್ದರೆ ಸಿನಿಮಾಗೆ ಇನ್ನೊಂದು ತೂಕ ಬಂದಿರುತ್ತಿತ್ತು.

ಕೆಲವು ಕಡೆ ಗೊಂದಲ ಮೂಡಿಸುವ ವಿಷಯವೆಂದರೆ ಫ್ರೆಂಚ್ ವ್ಯಕ್ತಿಗೆ ಇಲ್ಲಿಯವರು ಕನ್ನಡದಲ್ಲಿ ಹೇಳಿದಾಗ ಅರ್ಥವಾಗಲಿಲ್ಲ ಅಂತ ಅಡ್ಡಡ್ಡ ತಲೆಯಾಡಿಸುತ್ತಾನೆ. ಮಧ್ಯೆ ಪ್ರವೇಶಿಸುವ ದಾನಿಶ್ ಸೇಠ್ ಉರ್ದು/ಹಿಂದಿಯಲ್ಲಿ ಅದನ್ನು ಹೇಳಿದಾಗ ಅರ್ಥವಾಯಿತು ಎಂಬಂತೆ ಪ್ರತಿಕ್ರಿಯಿಸುತ್ತಾನೆ.

ಒಟ್ಟಾರೆ ಏನನ್ನಿಸಿತು ಅಂದರೆ "ಲಾ" ಸಿನಿಮಾ ನೋಡಿದಾಗಿನ ಕಿರಿಕಿರಿ ಇಲ್ಲಿ ಕಾಣಲಿಲ್ಲ. ಪನ್ನಗಭರಣ ಕಥೆಯ ಬಗ್ಗೆ ಇನ್ನೊಂದಷ್ಟು ಹೋಂವರ್ಕ್ ಮಾಡಲಿ. ಇದೇ ಹಾಸ್ಯವನ್ನು ಸಶಕ್ತ ಕಥೆಯೊಂದಿಗೆ ಕೊಟ್ಟಿದ್ದರೆ ಇದು ಬೇರೆಯದೇ ಥರ ಇರುತ್ತಿತ್ತು ಅನ್ನುವುದರಲ್ಲಿ ಸಂಶಯವಿಲ್ಲ. PRK Productions ಆಯ್ಕೆ ತಪ್ಪುತ್ತಿದ್ದಾರೆ ಅಂತ ಮತ್ತೊಮ್ಮೆ ಅನಿಸುತ್ತಿರುವುದು ಬೇಸರದ ವಿಷಯ. ಏಕೆಂದರೆ ನಾವು ಅಂಥ ಬ್ಯಾನರ್'ನಿಂದ ಬಯಸುತ್ತಿರುವುದು average ಸಿನಿಮಾಗಳನ್ನಲ್ಲ

-Santhosh Kumar LM
24-Jul-2020

Friday, July 17, 2020

ಲಾ (LAW)...... ( Kannada Movie, 2020)

ಲಾ (LAW) ( Kannada Movie, 2020, courtroom drama, Amazon Prime)

Law 2020 Kannada Movie Review -Silly Execution Burries A Decent ...

ಸರ್. ಗ್ಯಾಂಗ್‍ರೇಪ್ ಆಗಿದೆ...
ಹೌದಾ....ಯಾರು ಯಾರು ಗ್ಯಾಂಗ್‍ರೇಪ್ ಮಾಡಿದ್ದು?
ಗ್ಯಾಂಗ್‍ರೇಪ್ ಎಲ್ಲಾಯ್ತು?
ಗ್ಯಾಂಗ್‍ರೇಪ್ ಆಗೋಕಿಂತ ಮುಂಚೆ ಆ ಹುಡುಗಿ ಅಲ್ಲೇನ್ ಮಾಡ್ತಿದ್ಲು?
ನಿಂದೇ ಏನಮ್ಮ....ಗ್ಯಾಂಗ್‍ರೇಪ್ ಕೇಸು?
ಗ್ಯಾಂಗ್‍ರೇಪ್ ಆದ ಹುಡುಗಿ ಆ ದಿನ ಮೆಡಿಕಲ್ ಟೆಸ್ಟಿಗೆ ಬರದೆ ಮರುದಿನ ಬರುತ್ತಾಳೆ....
ಈ ಥರದ ಗ್ಯಾಂಗ್‍ರೇಪ್‍ಗಳಿಗೆ ಅಂತ್ಯ ಹಾಡಬೇಕು

--------------------------------
ಅಲ್...ಲಾ!
ನಾ ಯಾವ್ ಸಿನಿಮಾ ನೋಡಿದೆ ಈಗ?
ಕಾಮಿಡಿ ಸಿನಿಮಾನ? ಗಂಭೀರವಾದ ಮೆಸೇಜ್ ಕೊಡುವ ಸಿನಿಮಾನ?

ಯಾರಾದರೂ ನನಗೆ "ಈ ಸಿನಿಮಾ ಹೆಂಗೈತ್ ಲಾ?" ಅಂತ ಕೇಳಿದರೆ
ನಾ ಹೇಳೋದೊಂದೇ "ಚೆನ್ನಾಗಿಲ್..ಲಾ"
-------------------------------

ಈ ಥರ ಹೇಳಿದರೆ ಆ ಸಿನಿಮಾ ಮಾಡಿದವರಿಗೆ ಬೇಸರವಾಗಬಹುದು. ಆದರೆ ಹೀಗೆ ಬರೆಯಲೇಬೇಕು. ನಿಜವಾಗಿ ಮೆಸೇಜು ಕೊಡುವ ಸಿನಿಮಾವನ್ನು ಮಾಡುವ ಮೊದಲು ಚೆನ್ನಾಗಿ ಹೋಮ್‍ವರ್ಕ್ ಮಾಡಿ ನಂತರ ಬನ್ನಿ. ಇಲ್ಲದಿದ್ದರೆ ಈ ಥರದ ಸೂಕ್ಷ್ಮಗಳನ್ನೇ ಅರಿಯದೆ ಬಂದು ಪ್ರೇಕ್ಷಕರಿಗ್ಯಾಕೆ ತೊಂದರೆ ಕೊಡುತ್ತೀರಿ?

ಯಾವ ಕಾಲದಲ್ಲಿದ್ದೀವಿ ನಾವು ಅನ್ನುವ ಹಾಗಿದೆ ಈ ಸಿನಿಮಾದ ಕಥೆಯನ್ನು ಹೇಳಿರುವ ರೀತಿ. ಸಾಮೂಹಿಕ ಅತ್ಯಾಚಾರದ ಕರಾಳ ಮುಖವನ್ನು ನಮಗೆ ದರ್ಶನ ಮಾಡಿಸಿ ಅದರ ಬಗ್ಗೆ ಕೋಪವೊಂದನ್ನು ಸೃಷ್ಟಿಸಿ, ಅದಕ್ಕೆ ಕಾರಣರಾದವರ ಮೇಲೆ ಮರಣದಂಡನೆಯಾಗುವಂತೆ ಮಾಡಿ ಪ್ರೇಕ್ಷಕನಿಗೆ ನಿಟ್ಟುಸಿರೊಂದಿಗೆ ಸಿನಿಮಾ ಕೊನೆಯಾಗಬೇಕಿತ್ತು.

ಆದರೆ ಶುರುವಿನಿಂದಲೇ "ಬುಟ್ಬುಡ್ರೋ" ಅಂತ ಪ್ರೇಕ್ಷಕನೇ ಸಿನಿಮಾದ ನಿರ್ದೇಶಕನಿಗೆ ಹೇಳಬೇಕೆನಿಸುತ್ತದೆ.
--------------------
ಅಲ್ಲಾ ಗುರೂ... ಮಂಡ್ಯ ರಮೇಶ್ ಅವರನ್ನು ಹಾಕಿಕೊಂಡ ತಕ್ಷಣ ಅವರಿಗೆ ಹಾಸ್ಯದ ದೃಶ್ಯವನ್ನೇ ಕೊಡಬೇಕಾ? ರಂಗಕಲಾವಿದರಾದ ಮಂಡ್ಯ ರಮೇಶ್‍ಗೆ ಗಂಭೀರ ಪಾತ್ರವನ್ನು ಕೊಟ್ಟರೂ ಅದನ್ನು ಅಚ್ಚುಕಟ್ಟಾಗಿ ಮಾಡಬಲ್ಲರು. ಅಂಥ ಸನ್ನಿವೇಶದಲ್ಲಿ ಹಾಸ್ಯ ಬೇಕಿತ್ತಾ ಅನ್ನುವುದು ಮೊದಲನೆಯ ಅಸಹನೆಗೆ ಸಾಕ್ಷಿ. ಅದು ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆಯೊಬ್ಬಳಿಗೆ ಪೊಲೀಸ್ ಇಲಾಖೆ ತೋರುವ ಉಡಾಫೆಯ ರೀತಿ ಅಂತ ಸಮಜಾಯಿಷಿ ನೀಡಬಹುದು. ಆದರೆ ಅದನ್ನು ಹೇಳಲು ಹತ್ತಾರು ಮಾರ್ಗಗಳಿವೆ. ಅಲ್ಲಿ ಹಾಸ್ಯದ ಥರದ ಡೈಲಾಗುಗಳು ಬೇಕಿತ್ತಾ? ಅಲ್ಲಿಗೇ ಅದು ಕೊನೆಗೊಳ್ಳುವುದಿಲ್ಲ. ಮಾತಿಗೊಮ್ಮೆ ರೇಪ್, ಗ್ಯಾಂಗ್‍ರೇಪ್ ಅನ್ನುವ ಪದಗಳನ್ನು ಸಂಭಾಷಣೆ ಬರೆದವರೇ ಅತ್ಯಾಚಾರಗೊಳಿಸಿದ್ದಾರೆ ಅನ್ನಬಹುದು. ಅಷ್ಟರಮಟ್ಟಿಗೆ ಆ ಪದಗಳನ್ನು ವಿವೇಕವಿಲ್ಲದೆ ಬಳಸಲಾಗಿದೆ.

ಬಹುತೇಕ ದೃಶ್ಯಗಳಲ್ಲಿ ನಾಯಕಿಯ ನೋವು ನಮಗರ್ಥವಾಗುವುದೇ ಇಲ್ಲ. ಯಾಕೆಂದರೆ ಅಲ್ಲಿ ಆ ಭಾವ ವ್ಯಕ್ತವಾಗುವುದೇ ಇಲ್ಲ. ಅವಿನಾಶ್ ಒಬ್ಬ ಅಪ್ಪನಾಗಿ ಈ ಥರ ನಡೆದುಕೊಳ್ಳುತ್ತಾರಾ?ಅಂತ ಅನ್ನಿಸದೆ ಇರದು. ಅದಕ್ಕೆ ಕಾರಣವನ್ನು ನಂತರ ಕೊಟ್ಟರೂ ಅದು convince ಮಾಡುವುದಿಲ್ಲ.

ಕಥೆ ಹೇಳಿರುವ ರೀತಿಯೂ ಅಷ್ಟೇ... ಮೊದಲಿಂದಲೇ ಅಚ್ಯುತ್‍ಕುಮಾರ್ ದೃಶ್ಯಗಳನ್ನು ಇದ್ದಕ್ಕಿದ್ದಂತೆ ತೋರಿಸುವುದರಿಂದ ಇಲ್ಲೇನೋ ಬೇರೆಯದೇ ಇದೆ ಅನ್ನುವುದು ಗೊತ್ತಾಗುವುದಕ್ಕೆ ಹೆಚ್ಚು ಸಮಯ ಹಿಡಿಸುವುದಿಲ್ಲ. ಹಾಗಾಗಿ ಕಥಾಹಂದರವನ್ನು ಹೆಚ್ಚುಕಡಿಮೆ ಮೊದಲ ಅರ್ಧಘಂಟೆಯಲ್ಲೇ ಊಹಿಸಬಹುದು. ಕಥೆಯಲ್ಲಿ ಹೊಸದೇನೂ ಇಲ್ಲ. ಹಳೆಯದನ್ನು ಹೊಸದಾಗಿಯೂ ಹೇಳಿಲ್ಲ. ಇತ್ತೀಚೆಗೆ ಅಮೇಜಾನ್ ಪ್ರೈಮ್‍ನಲ್ಲೇ ಪ್ರೀಮಿಯರ್ ಆದ "ಪೊನ್‍ಮಗಳ್ ವಂದಾಳ್" ಸಿನಿಮಾದಲ್ಲೂ ನಾಯಕಿಯೇ ತನಗೆ ಅನ್ಯಾಯವಾಗಿದೆ ಅಂತ ನ್ಯಾಯಾಲಯದಲ್ಲಿ ವಾದ ಮಾಡುವುದು ಈ ಸಿನಿಮಾದಲ್ಲೂ ಪುನರಾವರ್ತನೆಯಾಗಿದೆ. ಇವೆರಡೂ ಸಿನಿಮಾಗಳನ್ನು ಒಂದಾದ ಮೇಲೆೊಂದರಂತೆ ಇದೇ platform ನಲ್ಲಿ ನೋಡಿದ್ದು ಇನ್ನಷ್ಟು ಅಸಹನೆಗೆ ಕಾರಣವಾಯಿತು. ಕೃಷ್ಣ ಹೆಬ್ಬಾಳೆ, ರಾಜೇಶ್ ನಟರಂಗ ಇವರಿಬ್ಬರ ಪಾತ್ರ ಪೋಷಣೆಯಷ್ಟೇ ಸಿನಿಮಾದಲ್ಲಿ ಚೆನ್ನಾಗಿದೆ.

ತನ್ನ ಮಗ ಅತ್ಯಾಚಾರದ ಕೇಸ್'ನಲ್ಲಿ ಸಿಕ್ಕಿಹಾಕಿಕೊಂಡಿರುವಾಗ ಅವನನ್ನು ಹೇಗೆ ಬಿಡಿಸುವುದು ಅಂತ "ಆಕೆ" ವಕೀಲರೊಂದಿಗೆ ಚರ್ಚಿಸುವಾಗಲೂ ಅವಳು ಬಾಳೆಹಣ್ಣು ಸಿಪ್ಪೆ ಸುಲಿದು ತಿನ್ನುತ್ತಿರುತ್ತಾಳೆ. ಇನ್ನೊಂದು ದೃಶ್ಯದಲ್ಲಿ ಚಿಪ್ಸ್ ತಿನ್ನುತ್ತ ತನ್ನ ಕೋಪ ಹೊರಹಾಕುತ್ತಾಳೆ. ಈ ವಿಷಯ ಚಿಕ್ಕದಿರಬಹುದು. ಆದರೆ ಸಿನಿಮಾ ಇಷ್ಟವಾಗದಿರಲು ಸಹ ಬಗೆಯ ಚಿಕ್ಕ ವಿಷಯಗಳೂ ಕಾರಣವಾಗುತ್ತವೆ. ತೆಲುಗು ಸಿನಿಮಾಗಳಲ್ಲಿ ತೋರಿಸುವ ಖಳನಾಯಕಿಯರನ್ನು ನೋಡಿ ಈ ಥರ ಮಾಡಿದ್ರಾ? ಗೊತ್ತಿಲ್ಲ.

ಆ ನ್ಯಾಯಾಲಯದಲ್ಲಾದರೂ ಕೊಂಚ ಗಂಭೀರತೆಯಿದೆಯೇ? ಒಂದು ಕಡೆ ಸಂತ್ರಸ್ತೆ ತನ್ನ ದುಃಖವನ್ನು ಅದುಮಿಟ್ಟಿಕೊಂಡು ವಾದ ಮಾಡುವಾಡುತ್ತಿರುತ್ತಾಳೆ. ಇದರ ಮಧ್ಯೆ ಮುಖ್ಯಮಂತ್ರಿ ಚಂದ್ರು ನ್ಯಾಯಾಧೀಶರಾಗಿಯೂ ಅವರಿಂದಲೂ ಗಂಭೀರ ದೃಶ್ಯದ ಮಧ್ಯೆ ಸಿಲ್ಲಿ ಜೋಕ್ ಹೇಳಿಸುವ ಪ್ರಯತ್ನ ಮಾಡುತ್ತಾರೆ. ಸ್ವತಃ ವಕೀಲರೇ ಘನವೆತ್ತ ನ್ಯಾಯಾಧೀಶರ ಮೇಲೆ "ಹುಡುಗೀರನ್ನ ನೋಡಿದ್ರೆ ನೀವು ಕರಗಿಹೋಗಿ ಅವರು ಹೇಳುವ ಕಥೆಗಳನ್ನು ನಂಬಿಬಿಡ್ತೀರ" ಅನ್ನುವ ಥರದ ಆರೋಪ ಮಾಡ್ತಾರೆ. ಇವೆಲ್ಲ ನಡೆಯುತ್ತವಾ? ಯಾರಾದರೂ ಕೋರ್ಟು-ಕಾನೂನು ತಿಳಿದವರು ಇದನ್ನು ನೋಡಿದರೆ "ಖಂಡಿತ ಕೋರ್ಟ್‍ರೂಮು ಹಿಂಗಿರಲ್...ಲಾ" ಅನ್ನುವುದು ಗ್ಯಾರಂಟಿ.

ಅದಕ್ಕೆ ಹೇಳಿದ್ದು. ಸಿನಿಮಾ ನಿರ್ದೇಶಕನಿಗೆ ತಾನು ಮಾಡುತ್ತಿರುವ ಸಿನಿಮಾದ Genre ಯಾವುದು ಅನ್ನುವ ಸ್ಪಷ್ಟತೆ ಇಲ್ಲ ಅಂತ. ಎಲ್ಲವೂ ಇರಲಿ ಅಂತ ಹಾಸ್ಯವನ್ನು ಎಲ್ಲೆಂದರಲ್ಲಿ ತುರುಕುವ ಬದಲು,ಕೊಂಚ ರಿಸ್ಕ್ ಅನ್ನಿಸಿದರೂ ಸರಿಯೇ. ಗಂಭೀರ ಕಥೆಯುಳ್ಳ ಸಿನಿಮಾಗಳನ್ನು ಗಂಭೀರವಾಗಿಯೇ ಮಾಡಿ ಒಂದು ವರ್ಗದ ಪ್ರೇಕ್ಷಕರನ್ನಾದರೂ ತೃಪ್ತಿಪಡಿಸುವ ನಿರ್ದೇಶಕರು ಬೇಕು. ಯುವ ಸಿನಿಮಾ ನಿರ್ದೇಶಕರುಗಳು ಈ ಸಿನಿಮಾವನ್ನು ನೋಡಿ ತಾವು ಯಾವ ಬಗೆಯ ತಪ್ಪುಗಳನ್ನು ಮಾಡಬಾರದೆಂದು ಅರ್ಥೈಸಿಕೊಳ್ಳುವುದು ಒಳ್ಳೆಯದು.

ಇಂಥ ಸಿನಿಮಾಗೆ ಇಷ್ಟೆಲ್ಲ ಬರೆಯುವುದು ಬೇಕಿರಲಿಲ್ಲ. ಆದರೆ ಇದು ದೊಡ್ಡ ಬ್ಯಾನರಿನ ಸಿನಿಮಾ. ನಮ್ಮ ನಿರೀಕ್ಷೆ ಸಹಜವಾಗಿ ಹೆಚ್ಚಿರುತ್ತದೆ. ಕೃಷ್ಣ ಹೆಬ್ಬಾಳೆ, ಅಚ್ಯುತ್‍ಕುಮಾರ್, ರಾಜೇಶ್ ನಟರಂಗ, ಅವಿನಾಶ್, ಸುಧಾರಾಣಿ, ಮುಖ್ಯಮಂತ್ರಿ ಚಂದ್ರು ಎಷ್ಟು ಒಳ್ಳೊಳ್ಳೆಯ ಕಲಾವಿದರನ್ನು ಒಳಗೊಂಡೂ ಅಚ್ಚುಕಟ್ಟಾದ ಸಿನಿಮಾವನ್ನು ನಮಗೆ ಕೊಡಲು ಸಾಧ್ಯವಾಗದೆ ಹೋದರೆ ಅದಕ್ಕೆ ನಿರ್ದೇಶಕರು ಜವಾಬ್ದಾರಿ ಹೊರಲೇಬೇಕು.

ಪುನೀತ್ ರಾಜ್‍ಕುಮಾರ್ ಅವರ ಬ್ಯಾನರಿನಿಂದ ಒಳ್ಳೆಯ ಸಿನಿಮಾಗಳು ಬರಲಿ. ಕಥೆಯ ಬಗ್ಗೆ, ಚಿತ್ರಕರ್ಮಿಗಳ ಬಗ್ಗೆ ಹೆಚ್ಚು ನಿಗಾವಹಿಸಿ ಒಳ್ಳೆಯ ಚಿತ್ರಗಳನ್ನು ಪ್ರೇಕ್ಷಕರಿಗೆ ಕೊಡಲಿ ಅನ್ನುವುದಷ್ಟೇ ಆಶಯ.

Santhosh Kumar LM
17-Jul-2020

Tuesday, May 12, 2020

ಮದ ಯಾನೈ ಕೂಟ್ಟಂ ....(2013, Tamil)




Madha Yaanai Koottam (2013)


ಮದ ಯಾನೈ ಕೂಟ್ಟಂ (ಮದದಾನೆಗಳ ಕೂಟ) (2013, Family Drama, Thriller) 

ಅಲ್ಲೊಂದು ಮದುವೆ ನಡೆಯುತ್ತದೆ. ಆಡಂಬರವಿಲ್ಲ. ಆದರೆ ಆ ಸ್ಥಿತಿಗತಿಯ ಮನೆಯಲ್ಲಿ ಚೆಂದ ನಡೆಯಬಹುದಾದ ಮದುವೆ. ಅಲ್ಲಿ ಅತಿಥಿಗಳು ಯಾವುದೇ ಥಿಯೇಟರಿನಲ್ಲಿ ಕೂತಂತೆ ಒಬ್ಬರ ಪಕ್ಕ ಓರಣವಾಗಿ ಕೂತಿರುವುದಿಲ್ಲ. ಅಲ್ಲಿ ಜನರ ಓಡಾಟವಿದೆ. ಒಬ್ಬೊಬ್ಬರಲ್ಲೂ ಸಂಭ್ರಮವಿದೆ. ಆ ಮದುಮಗನೂ ನೋಡಲು ಹೀರೋ ಥರವಿಲ್ಲ. ಆದರೆ ಲಕ್ಷಣವಾಗಿದ್ದಾನೆ. ಮದುವೆ ಜೋಡಿಯನ್ನು ಕರೆದುಕೊಂಡು ಹೋಗುವ ಬೀದಿಯಲ್ಲಿ ಜನರ ಕುಣಿದಾಟ.

ಆ ಮನೆಯಲ್ಲೊಂದು ಸಾವಾಗಿದೆ. ತೀರಿಕೊಂಡವನ ಜೊತೆ ನೋಡಲು ಬಂದವರೆಲ್ಲರ ಒಡನಾಟ ಬೇರೆಬೇರೆಯಿದೆ. ಅಲ್ಲೊಂದು ಶಾಮಿಯಾನ, ಬಂದವರ ಮೌನ, ಆತ್ಮೀಯರ ಗೋಳಾಟ, ಅಲ್ಲಲ್ಲೇ ಆಗದವರ ಮನಸ್ತಾಪಗಳು, ಆ ಭಾಗದಲ್ಲಿನ ಸಾವಿನ ಸಂದರ್ಭದ ವಿಧಿವಿಧಾನಗಳು....ಇಂಥ ಅನೇಕ ದೃಶ್ಯಗಳಲ್ಲಿ ಎಲ್ಲೂ ಅತಿಶಯೋಕ್ತಿಗಳಿಲ್ಲ. ಆದರೆ ಇದು ಖಂಡಿತ ಆರ್ಟ್ ಸಿನಿಮಾ ಅಲ್ಲ. ಭಯ ಹುಟ್ಟಿಸುವ ರೋಚಕ ದೃಶ್ಯಗಳಿವೆ. ಕದಿರ್ ಅನ್ನುವ ನಟನೊಬ್ಬನನ್ನು ತಮಿಳು ಚಿತ್ರರಂಗಕ್ಕೆ ಪರಿಚಯಿಸಿದ ಸಿನಿಮಾ ಇದು.

ಸಿನಿಮಾದ ಹೆಸರು "ಮದ ಯಾನೈ ಕೂಟ್ಟಂ". ಬಿಡುಗಡೆಯಾಗಿದ್ದು 2013 ರಲ್ಲಿ. ಖ್ಯಾತ ನಿರ್ದೇಶಕ ಬಾಲು ಮಹೇಂದರ್ ಶಿಷ್ಯ ವಿಕ್ರಮ್ ಸುಗುಮಾರನ್ ನಿರ್ದೇಶನದಲ್ಲಿ ಮೂಡಿಬಂದ ಫ್ಯಾಮಿಲಿ ಡ್ರಾಮಾ ಥ್ರಿಲ್ಲರ್ ಚಿತ್ರ.

ಅದು ತಮಿಳುನಾಡಿನ ಕಂಬಂ-ತೇಣಿ ಬಳಿಯ ಊರು. ಆತನ ಹೆಸರು ಜಯಕ್ಕೋಡಿ. ಅವನಿಗೆ ಇಬ್ಬರು ಹೆಂಡತಿಯರು. ಮೊದಲ ಹೆಂಡತಿಯಿಂದ ಒಂದು ಗಂಡು, ಒಂದು ಹೆಣ್ಣು. ಎರಡನೇ ಹೆಂಡತಿಯಿಂದ ಒಂದು ಗಂಡು, ಒಂದು ಹೆಣ್ಣು. ತನ್ನ ಗಂಡನ ಎರಡನೆ ಸಂಬಂಧದ ಬಗ್ಗೆ ತಿಳಿದಾಕ್ಷಣ ಮೊದಲ ಹೆಂಡತಿ ತನ್ನಣ್ಣನ ಮನೆಯಲ್ಲಿ ಬಂದು ನೆಲೆಸಿದ್ದಾಳೆ. ಸಹಜವಾಗಿ ಆಕೆಗೆ ತನ್ನ ಗಂಡನ ಬಗ್ಗೆ ಮತ್ತು ಆತನನ್ನು ಮರುಳು ಮಾಡಿದವಳ ಬಗ್ಗೆ ಆಕ್ರೋಶವಿದೆ. ಅವಳ ಅಣ್ಣನಿಗೂ ತನ್ನ ತಂಗಿಯ ಬಾಳನ್ನು ಹಾಳು ಮಾಡಿದ ಆಕೆಯ ಗಂಡನ ಬಗ್ಗೆ ದ್ವೇಷವಿದೆ. ಆ ಊರಿನ ಒಂದಷ್ಟು ಜನ ಹುಡುಗರೆಲ್ಲ ಈ ಅಣ್ಣ-ತಂಗಿಯ ಸುಪರ್ದಿನಲ್ಲೇ ಅವರು ಹೇಳಿದ ಎಂತಹ ಕೆಲಸ ಬೇಕಾದರೂ ಮಾಡುತ್ತಾರೆ.

ಇವರ ಸಹವಾಸವೇ ಬೇಡ ಅಂತ ಜಯಕ್ಕೋಡಿ ತನ್ನ ಎರಡನೆಯ ಹೆಂಡತಿಯ ಮತ್ತು ಮಕ್ಕಳ ಜೊತೆ ನೆಲೆಸಿದ್ದಾನೆ. ಈ ಎರಡೂ ಕುಟುಂಬದ ಒಬ್ಬರಿಗೊಬ್ಬರಿಗೆ ಆಗುವುದಿಲ್ಲ. ಅದರೆ ಮೊದಲ ಹೆಂಡತಿಯ ಮಗನಿಗೆ, ಎರಡನೆಯ ಹೆಂಡತಿಯ ಮಗ ಅಂದರೆ ತಮ್ಮನನ್ನು ಕಂಡರೆ ಏನೋ ಪ್ರೀತಿ. ಅದರೆ ಅಮ್ಮ-ಮಾವನ ಬಿಗಿಯಿಂದ ಆತನೊಂದಿಗೆ ಮಾತನಾಡುತ್ತಿಲ್ಲ.

ಜಯಕ್ಕೋಡಿ ತನ್ನ ಮಗಳನ್ನು ಮದುವೆ ಮಾಡಿದ ಮರುದಿನವೇ ತೀವ್ರ ಹೃದಯಾಘಾತದಿಂದ ಅಸುನೀಗುತ್ತಾನೆ. ಇದೀಗ ಅವನ ಶವಸಂಸ್ಕಾರವನ್ನು ಮೊದಲ ಹೆಂಡತಿಯ ಮನೆಯಲ್ಲೇ ನಡೆಯಬೇಕೆಂದು ಪಟ್ಟು ಹಿಡಿಯುತ್ತಾರೆ. ಅಲ್ಲಿಂದ ಕಥೆ ಅನೇಕ ನಾಟಕೀಯ ತಿರುವುಗಳೊಂದಿಗೆ ಸಾಗುತ್ತದೆ. ಅಲ್ಲಿ ಸುರಿಯುವ ರಕ್ತದ ಚಿತ್ರಣ ಬಿಟ್ಟರೆ ಉಳಿದ ಜಗಳಗಳೆಲ್ಲ ಸಾಮಾನ್ಯವಾಗಿ ನಾವು ನೋಡಿರುವಂಥವೇ. ಸಿನಿಮಾ ನೋಡುವಾಗ ನಾವೇ ಒಂದು ಸಾವಿನ ಮನೆಯಲ್ಲಿ ಕೂತಂತೆ ಭಾಸವಾಗುತ್ತದೆ.

ಫ್ಯಾಮಿಲಿ ಡ್ರಾಮಾ ಕಥೆಯಾದರೂ ಕೊನೆಯ ದೃಶ್ಯದವರೆಗಿನ ನಿರೂಪಣೆ ಒಂದೇ ಕ್ಷಣವೂ ಬೇಸರ ಹುಟ್ಟಿಸುವುದಿಲ್ಲ. ಇಡೀ ಸಿನಿಮಾ ಮೊದಲ ದೃಶ್ಯದ ಫೀಲ್ ಹೇಗಿದೆಯೋ, ಮುಗಿಯುವಾಗಲೂ ಅದೇ ರೀತಿ ಮುಕ್ತಾಯವಾಗುತ್ತದೆ. ಮೊದಲ ನಿರ್ದೇಶನದಲ್ಲೇ ಸುಗುಮಾರನ್'ಗೆ ತನ್ನ ಸಿನಿಮಾ ಬಗ್ಗೆ ಇರುವ ಸ್ಪಷ್ಟತೆ ಮೆಚ್ಚುವಂಥದ್ದು.

  • ತನ್ನ ತಂದೆಯ ಇನ್ನೊಬ್ಬಳು ಹೆಂಡತಿಯ ಮಗ ಶತ್ರುಗಳಿಗೆ ಹಿಗ್ಗಾಮುಗ್ಗಾ ಚಚ್ಚಿದ್ದನ್ನು ಕೇಳುವ ಮೊದಲ ಹೆಂಡತಿಯ ಮಗ "ಎಷ್ಟಾದರೂ ಅವನು ನನ್ನ ತಮ್ಮ" ಅಂತ ಮೀಸೆ ತಿರುವುತ್ತಾನೆ.
  • ಜಾತ್ರೆಯಲ್ಲಿ ಮೊದಲ ಹೆಂಡತಿ ದುಡ್ಡು ಕೊಟ್ಟಾಗ ಸ್ಪೀಕರಿನಲ್ಲಿ ಅದನ್ನು ಅನೌನ್ಸ್ ಮಾಡುವಾತ ಆಕೆಯ ಹೆಸರನ್ನು ಮಾತ್ರ ಕರೆಯುತ್ತಾನೆ. ಆಗ ಆಕೆ ಅವನಿಗೆ ದಬಾಯಿಸಿ "ನನ್ನ ಗಂಡನ ಹೆಸರು ಸೇರಿಸಿ ಹೇಳು" ಅಂತಾಳೆ. ಆತ "ಅವನ ಹೆಸರ್ಯಾಕೆ?" ಅಂದಾಗ "ನಾನು ಕಟ್ಟಿಕೊಂಡ ಹೆಂಡತಿ. ಅವನನ್ನು ಹೇಗೆ ಬೇಕಾದರೂ ಬೈತೀನಿ. ಬೇರೆಯವರು ಯಾರಾದರೂ ಅವನು-ಇವನು ಅಂತ ಮಾತಾಡಿದ್ರೆ ಚಮ್ಡಾ ಸುಲೀತೀನಿ" ಅಂತ ರೇಗುತ್ತಾಳೆ.
  • ಶವವನ್ನು ಮೊದಲ ಹೆಂಡತಿಯ ಮನೆಗೆ ತಂದ ದೃಶ್ಯ...... ಇಷ್ಟು ದಿನ ಅವನನ್ನು ಕಂಡೊಡನೆ ಉರಿದು ಬೀಳುತ್ತಿದ್ದ ಹೆಂಡತಿ ಕಣ್ಣೀರಾಗುತ್ತಾಳೆ.
  • "ಎಂದಾದರೂ ನಾವೆಲ್ಲ ಒಂದಾಗುತ್ತೇವೆ, ನೀ ವಾಪಸ್ಸು ಬರುವೆ ಅಂತ ಕಾಯ್ತಿದ್ದೆ ಅಪ್ಪ" ಅಂತ ಎದೆ ಬಡಿದುಕೊಂಡು ಅಳುವ ಮೊದಲ ಹೆಂಡತಿಯ ಮಗ.
  • ತನ್ನ ಗಂಡನ ಎರಡನೇ ಹೆಂಡತಿಯನ್ನು ಕೊಲೆ ಮಾಡುತ್ತಾರೆ ಎಂದು ತಿಳಿದ ಮೊದಲನೆ ಹೆಂಡತಿ ತಾನೇ ಹೋಗಿ ಆಕೆಯನ್ನು ರಕ್ಷಿಸುತ್ತಾಳೆ

ಈ ಥರ ಪುಟ್ಟ ಪುಟ್ಟ ಅನೇಕ ಸೂಕ್ಷ್ಮ ದೃಶ್ಯಗಳಿವೆ. "ಲೇಯ್ ತಮ್ಮಯ್ಯ. ಆಗಲೇ ಅದೆಲ್ಗ್ ಒಂಟೆ. ಇಟ್ಟುಣ್ಕೊಂಡೋಗು" ಅಂತ ಗದರಿಸಿ ಹೇಳಿದರೂ ಅಲ್ಲೊಂದು ಪ್ರೀತಿ ಇರುತ್ತಲ್ಲ. ಅದೇ ರೀತಿ ಆ ಭಾಗದ ಜನರು ಮಾತನಾಡುವುದು ನಮಗೆ ಒರಟಾಗಿ ಧ್ವನಿಸಬಹುದು. ಆದರೆ ಅಲ್ಲಿ ಪ್ರೀತಿಯಿರುತ್ತದೆ. ಅದೇ ಬಗೆಯ ಸಂಭಾಷಣೆಯನ್ನು ಇಲ್ಲಿ ಸಿನಿಮಾದುದ್ದಕ್ಕೂ ಬಳಸಿಕೊಂಡಿದ್ದಾರೆ. ನಾವು ಅಲ್ಲೇ ಇದ್ದೀವೇನೋ ಅನ್ನುವ ಭಾವ ಕೊನೆಯವರೆಗೂ ಇರುತ್ತದೆ. ಹಿನ್ನೆಲೆ ಸಂಗೀತ, ಹಾಡುಗಳೂ ಅಷ್ಟೇ, ಹೊಸತೆನಿಸುತ್ತದೆ. ಯಾವುದೇ ಹಾಡನ್ನು ಸ್ಕಿಪ್ ಮಾಡದೇ ಸಿನಿಮಾ ನೋಡಿದೆ. "ಉನ್ನೈ ವಳಂಗಾದ" ಅನ್ನುವ ಮೊದಲ ಹಾಡನ್ನು ನೀವು ಅರಗಿಸಿಕೊಳ್ಳದಿದ್ದರೆ ಸಿನಿಮಾದ ಅರ್ಥವನ್ನೇ ಅರ್ಧ ಕಳೆದುಕೊಂಡಂತೆ.

ಪ್ರೇಮಕಥೆಯೊಂದು ಮಧ್ಯೆ ಹಾದು ಹೋದರೂ ಅದು ಕೂಡ ಸಿನಿಮಾದ ರೋಚಕತೆಯನ್ನು ಹಾಳು ಮಾಡುವುದಿಲ್ಲ. ಈ ಸಿನಿಮಾದಲ್ಲಿ ಯಾವ ಪಾತ್ರ ಸರಿ, ಯಾವ ಪಾತ್ರ ತಪ್ಪು ಅನ್ನುವ ನೀತಿಯನ್ನು ಹೇಳುವುದಿಲ್ಲ. ಏಕೆಂದರೆ ಆ ಕ್ಷಣಕ್ಕೆ ತಕ್ಕಂತೆ ಪಾತ್ರಗಳು ಪ್ರತಿಕ್ರಿಯಿಸುವುದನ್ನೇ ಇಲ್ಲಿ ಕಥೆಯಾಗಿ ಹೇಳಲಾಗಿದೆ.

"ಯು" ಸರ್ಟಿಫಿಕೇಟ್ ಇದ್ದರೂ ರಕ್ತ ಧಾರಾಳವಾಗಿ ಎಲ್ಲೆಲ್ಲೂ ಕಾಣುವ ಸಿನಿಮಾ. ಚಿಕ್ಕಮಕ್ಕಳು ನೋಡದಿದ್ದರೆ ಒಳ್ಳೆಯದು. ನೆಟ್'ಪ್ಲಿಕ್ಸ್ ಅಥವಾ ಪ್ರೈಮ್'ನಲ್ಲಿ ಇರಲೇಬೇಕಾದಂಥ ಸಿನಿಮಾ. ಏಕಿಲ್ಲವೋ ಗೊತ್ತಿಲ್ಲ. ಸದ್ಯಕ್ಕೆ ಯೂಟ್ಯೂಬಿನಲ್ಲಿದೆ. ಸಬ್'ಟೈಟಲ್ ಇಲ್ಲ. ತಮಿಳು ಬಲ್ಲವರು, ಅರ್ಥೈಸಿಕೊಳ್ಳುವವರು ನೋಡಿ. ಚಿತ್ರರಂಗದ ಗೆಳೆಯರು ಮಿಸ್ ಮಾಡಬಾರದ ಸಿನಿಮಾ.

ಎ.ಎಸ್.ಜಿ ಅಪ್ಪು, ಈ ಥರದ ಸಿನಿಮಾವೊಂದನ್ನು ನೋಡಲು ಹೇಳಿದ್ದಕ್ಕೆ ಧನ್ಯವಾದಗಳು. :-) ಇಂಥ ಸಿನಿಮಾ ನೋಡಿದಾಗ ಹೇಳುತ್ತಿರಿ.

-Santhosh Kumar LM
12-May-2020

Friday, May 8, 2020

ಅಸ್ತು ( ಮರಾಠಿ, 2013)


ಅಸ್ತು ( ಮರಾಠಿ, 2013)










ಆ ಅಜ್ಜನನ್ನು ಒಬ್ಬ ಪರಿಚಯಸ್ಥ ಹುಡುಗ ಇನ್ನೊಂದು ಮನೆಯಲ್ಲಿ ನೋಡಿಕೊಳ್ಳುತ್ತಿರುತ್ತಾನೆ. ಅಜ್ಜನಿಗೆ alzheimer's ಖಾಯಿಲೆ. ಎಲ್ಲ ಮರೆತುಹೋಗಿರುತ್ತದೆ. ಅದೊಂದು ದಿನ ಆ ಹುಡುಗನಿಗೆ ಪರೀಕ್ಷೆ. ಹಾಗಾಗಿ ಅದೇ ಊರಿನಲ್ಲಿರುವ ಆ ಅಜ್ಜನ ಹಿರೀಮಗಳನ್ನು ಕರೆದು ಆ ಅಜ್ಜನನ್ನು ಕಳಿಸಿ ಕಾಲೇಜಿಗೆ ಹೊರಡುತ್ತಾನೆ.

ಇತ್ತ ಅಜ್ಜನನ್ನು ಕರೆದುಕೊಂಡು ಕಾರಿನಲ್ಲಿ ಹೊರಡುವ ಮಗಳಿಗೆ ಮಧ್ಯದಲ್ಲೊಂದು ಅಂಗಡಿಯಲ್ಲಿ ಏನೋ ತುರ್ತಾಗಿ ಖರೀದಿ ಮಾಡಬೇಕಿರುತ್ತದೆ. ಅಜ್ಜನನ್ನು ಕಾರಿನೊಳಗೆ ಕೂರಿಸಿ ಲಾಕ್ ಮಾಡಿ ಅಂಗಡಿಗೆ ಹೋಗುತ್ತಾಳೆ.

ಆ ರಸ್ತೆಯ ಅತ್ತ ಬದಿಯಲ್ಲಿ ಮಾವುತ ಆನೆಯೊಂದಿಗೆ ಭಿಕ್ಷೆ ಬೇಡುತ್ತಿರುತ್ತಾನೆ. ಅಜ್ಜನಿಗೆ ಆ ಆನೆಯ ಮೇಲೆ ಕೂರುವ ಆಸೆ. ಇತ್ತ ಅಂಗಡಿಯಲ್ಲಿ ಆತನ ಮಗಳು ಬೇಕಾದ್ದನ್ನು ಖರೀದಿಸಿ ವಾಪಸ್ಸು ಬರುವಷ್ಟರ ಹೊತ್ತಿಗೆ ಅಜ್ಜ ಕಾಣೆಯಾಗಿರುತ್ತಾನೆ.

ಒಂದೆಡೆ ತನ್ನ ಬೇಜವಾಬ್ದಾರಿತನವನ್ನು ಶಪಿಸಿಕೊಳ್ಳುತ್ತ ಗಂಡನೊಂದಿಗೆ ಅಪ್ಪನನ್ನು ಹುಡುಕುವ ಕಥೆಯೇ "ಅಸ್ತು".  ಅಪ್ಪನನ್ನು ಹುಡುಕುವ ಹಾದಿಯಲ್ಲಿ ಆಕೆಯ ಮನಸ್ಸಿನಲ್ಲಿ ಉಂಟಾಗುವ ತೊಳಲಾಟಗಳು ಇಲ್ಲಿಯ ಮುಖ್ಯ ಕಥಾಹಂದರ.

2013ರಲ್ಲಿ ಮೊದಲಿಗೆ ಜರ್ಮನ್ ಚಿತ್ರೋತ್ಸವದಲ್ಲಿ ಭಾಗವಹಿಸಿದರೂ, ವಿತರಕರು ಸಿಗದ ಕಾರಣ ತಡವಾಗಿ ಅಂದರೆ 2016ರಲ್ಲಿ ಕ್ರೌಡ್‌ಫಂಡಿಂಗ್ ನೆರವಿನೊಂದಿಗೆ ಬಿಡುಗಡೆಯಾಯಿತು. ಅಷ್ಟರಲ್ಲೇ ಬೇರೆ ಬೇರೆ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು  ಅದು ಬಾಚಿದ್ದು ಅನೇಕ ಪ್ರಶಸ್ತಿಗಳನ್ನು. 

ಈ ಸಿನಿಮಾದ ನಿರ್ದೇಶಕರು ಸುಮಿತ್ರಾ ಭಾವೆ ಮತ್ತು  ಸುನಿಲ್ ಸುಕ್ಥಂಕರ್. ನಿರೂಪಣಾ ಶೈಲಿಯೇ ಮಂದಗತಿಯಲ್ಲಿದ್ದು ಕಳೆದುಹೋದ ಅಪ್ಪನ ಹುಡುಕುವಾಗಿನ ಭಾವವನ್ನು ಕಟ್ಟಿಕೊಡುತ್ತದೆ. ಸಿನಿಮಾದಲ್ಲಿ ಯಾರ ನಟನೆ ಚೆನ್ನಾಗಿದೆ ಎಂದರೆ ಹೇಳುವುದು ಕಷ್ಟ. ಅಷ್ಟರಮಟ್ಟಿಗೆ ಎಲ್ಲರ ಅಭಿನಯ ಚೆನ್ನಾಗಿದೆ. 

Alzheimer's ಖಾಯಿಲೆಯಿಂದ ಮರೆತುಹೋಗುವ ಪಾತ್ರದಲ್ಲಿ ಮೋಹನ್ ಅಗಶೆ ಮಗುವಿನಂತೆ ಅನಿಸುತ್ತಾರೆ. ಅವರ ಮಗಳ ಪಾತ್ರದಲ್ಲಿರುವುದು ಇರಾವತಿ ಹರ್ಷೆ. ನಟಿ ಅಮೃತಾ ಸುಭಾಷ್ ಮಾವುತನ ಹೆಂಡತಿಯಾಗಿ ಮಾಡಿದ ಪೋಷಕ ಪಾತ್ರಕ್ಕಾಗಿ 2014ರಲ್ಲಿ ರಾಷ್ಟ್ರಪ್ರಶಸ್ತಿ ಸಿಕ್ಕಿತು. 

ಮಾವುತನ ಹೆಂಡತಿಯ ಮತ್ತು ಅಜ್ಜನ ಪಾತ್ರದ ನಡುವೆ ನಡೆಯುವ ಒಂದೆರಡು ದೃಶ್ಯಗಳಲ್ಲಂತೂ ಕಣ್ಣಂಚಿನಲ್ಲಿ ಹನಿಜಾರುವುದನ್ನು ತಡೆಯಲು ಸಾಧ್ಯವಿಲ್ಲ. ಆ ದೃಶ್ಯಗಳ ಬಗ್ಗೆ ಇಲ್ಲಿ ಹೇಳಬಾರದು. ಸಿನಿಮಾ ನೋಡಿ.

ಹಾಂ...ಹೇಳಲು ಮರೆತೆ......ಇದರಲ್ಲೊಂದು ಕನ್ನಡದ ಹಾಡಿದೆ!!

ಈ ಸಿನಿಮಾ ನೋಡಿ ಅಂತ ಹೇಳಿದ್ದು: 

-Santhosh Kumar LM
08-May-2020

Saturday, April 25, 2020

ಪುನ್ನಗೈ ವಾಂಗಿನಾಲ್ ಕಣ್ಣೀರ್ ಇಳವಸಂ...Tamil ShotFilm

ಪುನ್ನಗೈ ವಾಂಗಿನಾಲ್ ಕಣ್ಣೀರ್ ಇಳವಸಂ ( ನಗುವ ಕೊಂಡರೆ ಕಣ್ಣೀರು ಉಚಿತ )


Punnagai Vaanginaal Kanneer Elavasam Tamil Short Film | Friends ...


ಈ ಕಿರುಚಿತ್ರದ ಬಗೆ ಬರೆಯಲೇಬೇಕು. ಬರೀ ನೋಡಿ ಅಂತ ಬರೆದುಬಿಡುತ್ತಿದ್ದೆ. ಆದರೆ ಬೇಸರವೆಂದರೆ ಈ ಚಿತ್ರಕ್ಕೆ ಸಬ್'ಟೈಟಲ್ ಇಲ್ಲ. ತಮಿಳು ಬರದವರಿಗೆ ಸನ್ನಿವೇಶ ಅರ್ಥವಾಗದಿರಬಹುದು..ಆದ್ದರಿಂದಲೇ ಕೊಂಚ ಕಥೆ ಹೇಳುತ್ತೇನೆ. ಎಲ್ಲ ಭಾಷೆಯ ಸಿನಿಮಾಪ್ರೇಮಿಗಳು ಇದನ್ನು ನೋಡಬೇಕೆಂಬುದು ನನ್ನ ಆಶಯ.

ಈ ಕಿರುಚಿತ್ರ ಮಾಡಿದ್ದೇ "ನಾಳಯ ಇಯಕ್ಕುನರ್" (ಭವಿಷ್ಯದ ನಿರ್ದೇಶಕ) ಅನ್ನುವ ಸ್ಪರ್ಧೆಯೊಂದಕ್ಕೆ. ಕಲೈನ್ನರ್ ತಮಿಳು ಚಾನೆಲ್ ನಡೆಸುವ ಈ ಸ್ಪರ್ಧೆಯಲ್ಲಿ ಈ ಕಿರುಚಿತ್ರ ಮೊದಲ ಬಹುಮಾನವನ್ನು ಗಿಟ್ಟಿಸಿತು. ಸ್ವತಃ ಹಿರಿಯ ನಟ ಕಮಲ್ ಹಾಸನ್ ಈ ಸಿನಿಮಾವನ್ನು ಮತ್ತು ನಿರ್ದೇಶಕನನ್ನು ಮುಕ್ತಕಂಠದಿಂದ ಹೊಗಳಿದರು.

ಚಿತ್ರದ ಪರಿಕಲ್ಪನೆಯೇ ಎಷ್ಟು ವಿಚಿತ್ರ-ವಿಭಿನ್ನ-ಸೂಕ್ಷ್ಮವಾಗಿದೆಯೆಂದರೆ ಹೇಳುವಾಗಲೇ ಎದೆ ಝಲ್ ಅನ್ನುತ್ತದೆ. ಇಂಥದ್ದೊಂದು ಕಥೆಯನ್ನು ಕಿರುಚಿತ್ರಕ್ಕೆ ಬಳಸಿಕೊಳ್ಳಬೇಕಿತ್ತಾ ಅನ್ನುವ ಪ್ರಶ್ನೆ ನಿಮಗೆ ಮೂಡದಿದ್ದರೆ ಕೇಳಿ.

ಈ ಕಿರುಚಿತ್ರವಿರುವುದೇ ಹನ್ನೆರಡು ನಿಮಿಷ. ಚಿತ್ರ ನೋಡಿ ಮುಗಿದ ಮೇಲೆ, ಪ್ರತೀ ಪಾತ್ರದ ಬಗ್ಗೆ ಅದಿರುವ ಸನ್ನಿವೇಶವನ್ನು ಊಹಿಸಿಕೊಂಡು ಯೋಚಿಸಿ. ನಿಮಗೆ ಯಾವುದು ಸರಿ ತಪ್ಪು ಅಂತ ಕಂಡುಹಿಡಿಯಬಹುದಾ? ಗೊತ್ತಿಲ್ಲ.

ಆ ಮನೆಯಲ್ಲಿ ವಯಸ್ಸಾದ ಅಜ್ಜಿಯಿದೆ. ಆಕೆಗೆ ಇಬ್ಬರು ಗಂಡುಮಕ್ಕಳು. ಒಬ್ಬ ಹೆಂಡತಿಯೊಂದಿಗೆ ಬೇರೆ ಮನೆಯಲ್ಲಿದ್ದಾನೆ. ಈ ಮನೆಯಲ್ಲಿ ಆ ಅಜ್ಜಿ ಇನ್ನೊಬ್ಬ ಮಗನ ಕುಟುಂಬದ ಜೊತೆಯಲ್ಲಿದೆ. ಆ ಮಗನೋ ಕುಟುಂಬವನ್ನು ಹೇಗೆ ನಿಭಾಯಿಸಬೇಕು ಅಂತ ಭಾಷಣ ಮಾಡುವಷ್ಟು, ಕಾರ್ಯಕ್ರಮಗಳನ್ನು ಕೊಡುವಷ್ಟು ಪ್ರಸಿದ್ಧಿ ಹೊಂದಿದಾತ. ಅವನಿಗೂ ಇಬ್ಬರು ಮಕ್ಕಳು. ಆ ಮಕ್ಕಳಲ್ಲಿ ಒಬ್ಬ ಮಗಳಿಗೆ ಈಗಾಗಲೇ ಒಂದು ಮಗುವಿದೆ. ಈಗ ಮತ್ತೆ ಆಕೆ ಗರ್ಭಿಣಿ. ಅಂದರೆ ಅಜ್ಜಿಗೆ ಈಗಾಗಲೇ ಮರಿಮಕ್ಕಳು ಇದ್ದಾರೆ.

ಇದೀಗ ಅಲ್ಲೊಂದು ಧರ್ಮಸಂಕಟವಿದೆ. ಆ ಅಜ್ಜಿಯ ಗಂಡ ಒಂದು ತಿಂಗಳ ಹಿಂದಷ್ಟೇ ತೀರಿಕೊಂಡಿದ್ದಾರೆ. ಆ ಅಜ್ಜಿಗೆ ಏನೋ ಆರಾಮಿಲ್ಲ ಎಂದೆನ್ನಿಸಿ ಆಸ್ಪತ್ರೆಗೆ ಕರೆದುಕೊಂಡು ಹೋದರೆ ಡಾಕ್ಟರ್ "ಆಕೆ ಮೂರು ತಿಂಗಳ ಗರ್ಭಿಣಿ" ಎಂದು ಹೇಳಿದ್ದಾರೆ!! ಮಗನಿಗೆ ಅದನ್ನು ಸಮಾಜದೆದುರು ಹೇಗೆ ತಾನೆ ಹೇಳಿಕೊಂಡಾನು? ಹೇಳಿಕೊಂಡರೆ ಅವಮಾನ. ತೆಗೆಸಿಬಿಡೋಣವೆಂದರೆ ಅದು ಆಕೆಯ ಜೀವಕ್ಕೆ ಕುತ್ತು ತರಬಹುದೆಂದು ವೈದ್ಯರು ಗರ್ಭಪಾತವನ್ನು ನಿರಾಕರಿಸಿದ್ದಾರೆ. ಜೊತೆಗೆ "ನಿಮ್ಮ ತಾಯಿಯನ್ನು ಜೋಪಾನವಾಗಿ ನೋಡಿಕೊಳ್ಳಬೇಕು" ಅಂತ ಮಗನಿಗೆ ಹೇಳಿದ್ದಾರೆ.

ಇದೀಗ ಈತನಿಗೆ ಹೆಂಡತಿಯಿಂದಲೂ ಒತ್ತಡವಿದೆ. ಕಾರಣ ಗರ್ಭಿಣಿಯಾದ ಮಗಳೂ ಮನೆಸೇರಿದ್ದಾಳೆ. ಅವಳನ್ನು ನೋಡಲು ಅಳಿಯ ಯಾವುದೇ ಸಂದರ್ಭದಲ್ಲಿ ತನ್ನ ಮನೆಗೆ ಬರಬಹುದು. ಬಂದರೆ ಈ ವಿಷಯ ತಿಳಿದರೆ ಅವಮಾನ. ಹಾಗಾಗಿ "ನಿಮ್ಮ ತಾಯಿಯನ್ನು ನಿಮ್ಮ ತಮ್ಮನ ಬಳಿ ಬಿಟ್ಟು ಬನ್ನಿ" ಅಂತ ಒಂದೇ ಸಮನೆ ಗಲಾಟೆ ಮಾಡುತ್ತಿದ್ದಾಳೆ. ತಮ್ಮನ ಮನೆಯಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ.

ಏನಾದರೂ ಸುಳ್ಳುಹೇಳಿ ವೃದ್ಧಾಶ್ರಮದಲ್ಲಿ ಬಿಡೋಣವೆಂದರೆ ಅಲ್ಲೂ ಈ ವಿಷಯ ತಿಳಿದ ಮೇಲೆ ನೋಡಿಕೊಳ್ಳಲು ಅಸಾಧ್ಯವೆಂದು ಸೇರಿಸಿಕೊಳ್ಳುತ್ತಿಲ್ಲ. ಮಗ ಏನು ತಾನೇ ಮಾಡಿಯಾನು?

ಮುಂದೇನು?

ಈ ಚಿತ್ರ ನೋಡಿ. ಸೂಕ್ಷ್ಮ ಸಂಗತಿಗಳನ್ನು ಹೇಳಿರುವ ರೀತಿ ನಿಜಕ್ಕೂ ಯುವ ಸಿನಿಮಾ ನಿರ್ದೇಶಕರುಗಳಿಗೆ ಸಹಾಯವಾಗಬಲ್ಲದು. ದಿನಪತ್ರಿಕೆಯಲ್ಲಿ ವೃದ್ಧೆಯೊಬ್ಬರು ಗರ್ಭಿಣಿಯಾದ ಸುದ್ದಿಯೊಂದನ್ನು ನೋಡಿದ ನಿರ್ದೇಶಕ ನಿಥಿಲನ್'ಗೆ ಈ ಸಿನಿಮಾದ ಎಳೆ ಸಿಕ್ಕಿದ್ದು. ಏಳೆಂಟು ವರ್ಷಗಳ ಹಿಂದೆ ಈ ಸಿನಿಮಾ ನೋಡಿದ್ದಾಗ ಎಲ್ಲರಿಗೂ ಇದರ ಬಗ್ಗೆ ಹೇಳುತ್ತಿದ್ದೆ. ಮೊನ್ನೆ "ಕುರಂಗು ಬೊಮ್ಮೈ" ನೋಡಿದಾಗ ತಿಳಿದ ವಿಷಯವೆಂದರೆ ಆ ಸಿನಿಮಾದ ನಿರ್ದೇಶಕ ಕೂಡ ಇದೇ ನಿಥಿಲನ್.

ನೋಡಿರದಿದ್ದರೆ ನೋಡಿ. ಖಂಡಿತ ನಿಮ್ಮ ಅಮೂಲ್ಯ ಹನ್ನೆರಡು ನಿಮಿಷಗಳಿಗೆ ನಾ ಗ್ಯಾರಂಟಿ ಕೊಡಬಲ್ಲೆ.

(ಯೂಟ್ಯೂಬ್ ಲಿಂಕ್ ಕಮೆಂಟಿನಲ್ಲಿದೆ.)

-Santhosh Kumar LM
25-Apr-2020




Saturday, April 18, 2020

ಕೆರಂಡಿರು..... (2003) Brazil movie

Carandiru (2003) - IMDb






ಮೊನ್ನೆ ರವೀಂದ್ರ ವೆಂಶಿಯವರು "ಕೆರಂಡಿರು" (2003) ಅನ್ನುವ ಬ್ರೆಜಿಲ್ ಸಿನಿಮಾ ಬಗ್ಗೆ ಹೇಳಿದರು. ಪೋರ್ಚುಗೀಸ್ ಭಾಷೆಯಲ್ಲಿರುವ ಸಿನಿಮಾ. ಬ್ರೆಜಿಲ್‍ನ ಸೆಂಟ್ರಲ್ ಜೈಲಿನಲ್ಲಿರುವ ಖೈದಿಗಳನ್ನು HIV ಪರೀಕ್ಷೆಗೊಳಪಡಿಸಲು ಬರುವ ವೈದ್ಯನೊಬ್ಬ ರಕ್ತದ ಮಾದರಿಯನ್ನು ಸಂಗ್ರಹಿಸುವಾಗ ಅವರನ್ನು ಮಾತಿಗೆಳೆದು ಅವರ ಹಿನ್ನೆಲೆಯನ್ನು ಕೇಳುತ್ತಾನೆ. ಮೊದಲೇ ಖೈದಿಗಳು. ಅವರಿಗೆ ಅವರ ಕೃತ್ಯದ ಬಗೆಗಿನ ಯಾವುದೇ ಅಪರಾಧಿ ಪ್ರಜ್ಞೆಯಿಲ್ಲ. ಹಾಗಾಗಿ ತಾವು ಜೈಲಿಗೆ ಬಂದ ಕಥೆಯನ್ನು ತಮ್ಮದೇ ರೀತಿಯಲ್ಲಿ ಹೇಳಿಕೊಳ್ಳುತ್ತಾರೆ. ಆ ಡಾಕ್ಟರ್ ಕೂಡ ಸರಿ-ತಪ್ಪು ಎಂಬಂತೆ ನೋಡದೆ ಅವರ ಮಾತುಗಳಿಗೆ ಕಿವಿಯಾಗುತ್ತಾನೆ. ಕೊನೆಯ ದೃಶ್ಯದಲ್ಲಿ 1992ರಲ್ಲಿ ಬ್ರೆಜಿಲ್‍ನ ಜೈಲೊಂದರಲ್ಲಿ ವಾಸ್ತವದಲ್ಲಿ ನಡೆದ ಮಾರಣಹೋಮ ತಳುಕುಹಾಕಿ ಸಿನಿಮಾ ಮುಗಿಯುತ್ತದೆ.

ಸಿನಿಮಾ ನೋಡುವಾಗ ಸಾಧಾರಣ ಅನ್ನಿಸಿತು. ಜೈಲು ಹೀಗೂ ಇರುತ್ತದಾ ಅನ್ನುವುದು ಆ ಅಭಿಪ್ರಾಯಕ್ಕೆ ಕಾರಣ. ಆದರೆ ನೋಡಿಯಾದ ಮೇಲೆ ಬ್ರೆಜಿಲ್ ದೇಶದ ಕಿಕ್ಕಿರಿದು ತುಂಬಿದ ಜೈಲುಗಳ ಬಗ್ಗೆ ಪುಟ್ಟ ವೀಡಿಯೋವೊಂದನ್ನು ನೋಡಿದ ಮೇಲೆ ಸಿನಿಮಾ ಯಾವ ವಿಷಯಗಳನ್ನು ಪರೋಕ್ಷವಾಗಿ ಹೇಳುವ ಪ್ರಯತ್ನ ಮಾಡಿದೆ ಅಂತ ಅರ್ಥವಾಯಿತು. ಎರಡು ಸಾವಿರ ಖೈದಿಗಳನ್ನು ಇಡಬಹುದಾದ ಜೈಲುಗಳಲ್ಲಿ ನಾಲ್ಕೂವರೆ ಸಾವಿರ ಖೈದಿಗಳನ್ನು ಕೂಡಿಡುವುದು. ಅಂದರೆ 1950ರಲ್ಲಿ ನಿರ್ಮಾಣವಾದ ಆ ಜೈಲಿನ ಕೆಲಕೋಣೆಗಳು ಇರುವುದೇ ಇಬ್ಬರನ್ನು ಕೂಡಿಹಾಕಲು. ಆದರೆ ಅಲ್ಲಿ ಸ್ಥಳದ ಅಭಾವ ಶುರುವಾದ ಮೇಲೆ ಎಂಟೊಂಭತ್ತು ಜನರನ್ನು ಕೂಡಿಹಾಕುವುದು. ಸರಿಯಾಗಿ ಗಾಳಿಯೂ ಬರದ ಕೋಣೆಗಳು. ಅಲ್ಲೇ ಗುಂಪುಘರ್ಷಣೆ ನಡೆಯುವುದು. ಖೈದಿಗಳಿಗೆ ಮಾದಕವಸ್ತುಗಳು ಸರಬರಾಜಾಗುವುದು. ನೀರಿಲ್ಲದೇ ಖೈದಿಗಳು ಕಷ್ಟಪಡುವುದು. ಸಲಿಂಗಿಗಳಿಗಾಗಿಯೇ ಬೇರೆ ಕೋಣೆಗಳು. ಶುಚಿತ್ವವಿಲ್ಲದೇ ಅನೇಕರಿಗೆ ಕ್ಷಯರೋಗ ಬರುವುದು. ಹೀಗೆ ಅಸಮರ್ಪಕ ನಿರ್ವಹಣೆಯಿಂದ ಒದ್ದಾಡುವ ಅನೇಕ ವಿಷಯಗಳಿವೆ. ಇವೆಲ್ಲವನ್ನು ಸಿನಿಮಾದಲ್ಲಿ ಸೂಚ್ಯವಾಗಿಯೇ ಹೇಳಲಾಗಿದೆ.

ಹಾಗೆಯೇ ಇಡೀ ಜೈಲಿಗೆ ಇದ್ದದ್ದು ಹದಿನೈದು ಸೆಕ್ಯೂರಿಟಿ ಗಾರ್ಡುಗಳು. ಕ್ಷುಲ್ಲಕ ಕಾರಣಕ್ಕೆ ಜೈಲಿನೊಳಗೆ ಶುರುವಾದ ಗಲಭೆಯನ್ನು ನಿಯಂತ್ರಿಸಲು ಸಾಧ್ಯವಾಗದೆ ಮಿಲಿಟರಿಯ ಸಹಾಯ ಕೋರಿದಾಗ ತಕ್ಷಣವೇ ಬರುವ ಮಿಲಿಟರಿ ಪಡೆ ಹಿಂದೆಮುಂದೆ ನೋಡದೆ 111 ಖೈದಿಗಳನ್ನು ಹತ್ಯೆಗೈದಿದ್ದು 1992ರಲ್ಲಿ. ಆ ಘಟನೆಯನ್ನು ಸಿನಿಮಾದ ಅಂತ್ಯಕ್ಕೆ ಬಳಸಿಕೊಳ್ಳಲಾಗಿದೆ. ಈ ಸಿನಿಮಾ ಚಿತ್ರೀಕರಣವಾಗಿದ್ದೂ ಅದೇ ಜೈಲಿನಲ್ಲಿ. 2002ರಲ್ಲಿ ಜೈಲು ಕಟ್ಟಡವನ್ನು ನೆಲಸಮ ಮಾಡಲಾಯಿತು.

ಅರ್ಥವಾಗಿದ್ದಿಷ್ಟು. ಕೆಲವು ಸಿನಿಮಾಗಳು ನೇರವಾಗಿ ನಮಗೆ ಮನರಂಜನೆ ಅಂತ ಕೆಲವೇ ವಿಷಯಗಳನ್ನು ಹೇಳಿದರೂ ಹಿನ್ನೆಲೆಯನ್ನು ಅರ್ಥ ಮಾಡಿಕೊಂಡಾಗ ಮಾತ್ರ ಬೇರೆ ಬೇರೆ ವಿಷಯಗಳು ಅರ್ಥವಾಗುತ್ತವೆ.


-Santhosh Kumar LM
18-Apr-2020

Thursday, April 16, 2020

ದಿ ಬೆಸ್ಟ್ ಆ್ಯಕ್ಟರ್...Kannada (2019) Micro movie



ಕೆಲವೊಮ್ಮೆ ಎರಡೂವರೆ ಗಂಟೆಯ ಸಿನಿಮಾ ಹೇಳದ ವಿಷಯವೊಂದನ್ನು ಕಿರುಚಿತ್ರವೊಂದು ಸಮರ್ಥವಾಗಿ ಹೇಳಿಬಿಡುತ್ತದೆ. ಅಥವ ಕಿರುಚಿತ್ರವೊಂದರಲ್ಲಿ ಹೇಳಬಹುದಾದ ಕಥೆಯನ್ನು ಎರಡೂವರೆ ಗಂಟೆ ಸಿನಿಮಾದೊಳಗೆ ಹಾಕಿ ರಬ್ಬರಿನಂತೆ ಎಳೆದು ಪ್ರೇಕ್ಷಕನ ತಾಳ್ಮೆ ಪರೀಕ್ಷಿಸಲಾಗುತ್ತದೆ.


ಸಿನಿಮಾ ನಿರ್ದೇಶಕನೊಬ್ಬನಿಗೆ ತಾನು ಹೇಳುವ ಕಥಾವಸ್ತುವನ್ನು ಎಷ್ಟು ಅವಧಿಯೊಳಗೆ ಸಮರ್ಥವಾಗಿ ಹೇಳಬಲ್ಲೆ ಎಂಬ ಸ್ಪಷ್ಟತೆ ಇದ್ದರೆ ಅದೇ ಆತನ ಮೊದಲ ಯಶಸ್ಸು. "ದಿ ಬೆಸ್ಟ್ ಆ್ಯಕ್ಟರ್" ಸಿನಿಮಾ ಇದಕ್ಕೊಂದು ಉತ್ತಮ ಉದಾಹರಣೆ.


ಈ ಹಿಂದೆಯೇ ಈ ಸಿನಿಮಾ ನೋಡಿ ಬರೆದಿದ್ದೆ. ಇದೀಗ ಯೂಟ್ಯೂಬ್'ನಲ್ಲಿ ಮತ್ತೊಮ್ಮೆ ಬಿಡುಗಡೆಯಾದ್ದರಿಂದ ಇನ್ನೊಮ್ಮೆ ನೋಡುವ ಮನಸ್ಸಾಯಿತು. ಹಾಗಾಗಿ ಇದರ ಬಗ್ಗೆ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದೇನೆ. ಇದೊಂದು ಕನ್ನಡದ ಮೈಕ್ರೋ ಮೂವಿ. ಇದರ ಅವಧಿಯೇ ಕೇವಲ 44 ನಿಮಿಷಗಳು. ಆದರೆ ಎರಡೂವರೆ ಗಂಟೆಯ ಸಿನಿಮಾ ನೋಡಿದಾಗ ಸಿಗುವಾಗಿನ ತೃಪ್ತಿ ಈ ಮೈಕ್ರೋಮೂವಿ ನೋಡಿದಾಗ ಸಿಗುತ್ತದೆ.


ಎಲ್ಲರಿಗೂ ಕಲಾವಿದರಾಗಬೇಕೆಂಬ ಆಸೆಯಿರುತ್ತದೆ. ಅದರೆ ಒಳಗೆ ಪ್ರತಿಭೆಯಿದ್ದೂ ಎದೆಯೊಳಗೆ ಸಾಧಿಸಬೇಕೆಂಬ ಛಲವಿದ್ದೂ, ಹೊರಗಿನ ಪ್ರಪಂಚ ಆ ಆಸೆಗೆ ತಣ್ಣೀರೆರಚುವ, ತನಗೆ ತಾನು ಧೈರ್ಯ ಹೇಳಿಕೊಂಡು ಮುಂದೆ ಸಾಗಿದರೂ ಮತ್ತೆ ಹೊರಗಿನ ಪ್ರಪಂಚ "ನೀ ಬಣ್ಣ ಹಚ್ತೀನಿ ಅಂದ್ರೆ ಧರ್ಮಕ್ಕೂ ಸೇರಿಸಿಕೊಳ್ಳೋರು ಯಾರು ಇಲ್ಲ! " ಎಂದು ಹೀಯಾಳಿಸಿ, ಚಿಗುರುತ್ತಿರುವ ಆಕಾಂಕ್ಷೆಗೆ ಕೊಡಲಿಯೇಟು ಕೊಡುವ ವಸ್ತುವನ್ನಾಧರಿಸಿದ ಸಿನಿಮಾ. ಈ ಸಿನಿಮಾದಲ್ಲಿ ಗಿಡಗಳ ಮುಂದೆ ಕೂತು ತನ್ನ ಕಲೆಯನ್ನು ಅವುಗಳಿಗೆ ಪ್ರದರ್ಶಿಸುವ ಮಾಬ್ಲಣ್ಣನ ದೃಶ್ಯ ಪ್ರೋತ್ಸಾಹ ಕೊಡದ ಇಡೀ ಸಮಾಜಕ್ಕೆ ಹಿಡಿದ ಕನ್ನಡಿಯಂತಿದೆ.


"ನಿರ್ಮಾಪಕನಿಗೆ ಸಿನಿಮಾದ ವ್ಯಾಕರಣ, ಅಭಿರುಚಿ ಚೆನ್ನಾಗಿದ್ದರೆ ಒಂದು ಕೆಟ್ಟ ಸ್ಕ್ರಿಪ್ಟ್ ಸಿನಿಮಾ ಆಗೋದು ತಪ್ಪುತ್ತೆ, ಒಂದು ಒಳ್ಳೆ ಸ್ಕ್ರಿಪ್ಟ್ ಕಸದ ಬುಟ್ಟಿ ಸೇರೋದು ತಪ್ಪುತ್ತೆ" ಅನ್ನುವ ಪಂಚಿಂಗ್ ಡೈಲಾಗೊಂದು ಈ ಸಿನಿಮಾದಲ್ಲಿದೆ. ಈ ಸಿನಿಮಾದ ನಿರ್ಮಾತೃಗಳಿಗೆ ಒಳ್ಳೆಯ ಅಭಿರುಚಿಯಿದ್ದುದರಿಂದಲೇ ಇಂಥ ಒಳ್ಲೆಯ ಸ್ಕ್ರಿಪ್ಟ್ ಸಿನಿಮಾ ಆಯಿತು ಎಂದು ಧೈರ್ಯವಾಗಿ ಹೇಳಬಹುದು.


"ಹಣ ಏನು ಬೇಕಾದರೂ ಸೃಷ್ಟಿ ಮಾಡುತ್ತೆ, ಸೃಜನಶೀಲತೆಯೊಂದನ್ನು ಬಿಟ್ಟು!"
"ಒಂದು ಹೆಣ್ಣು ತನ್ನ ಮಗುವಿಗೆ ಜನ್ಮ ಕೊಡುವಾಗ ಅನುಭವಿಸೋ ನೋವನ್ನು ನಟಿಸೋದು ಕಷ್ಟ"


ಇದಿಷ್ಟೇ ಅಲ್ಲ. ಸಂಭಾಷಣೆ ಕಡಿಮೆ ಇದ್ದರೂ ಸನ್ನಿವೇಶಕ್ಕೆ ತಕ್ಕ ಹಾಗೆ ಬರೆದ ಭಾಸ್ಕರ್ ಬಂಗೇರ (Bhaskar Bangera) ಅವರ ಇದೇ ಥರದ ಅನೇಕ ತೂಕದ ಸಾಲುಗಳಿವೆ. ಖುಶಿಯೆಂದರೆ ಕಥೆ ಯಾವ ಪರಿಸರದ ಹಿನ್ನೆಲೆಯಲ್ಲಿ ನಡೆಯುತ್ತದೋ ಅದೇ ಪರಿಸರದ ಕುಂದಾಪ್ರ ಕನ್ನಡವನ್ನು ಸಂಭಾಷಣೆಯಲ್ಲಿ ಬಳಸಿಕೊಂಡಿರುವುದು. ಈ ಕಾರಣದಿಂದಲೇ ಒಂದು ಕಥೆ ನಮ್ಮದಾಗುವುದು!


ಸಿನಿಮಾದ ನಿಜವಾದ ಹೀರೋ ಛಾಯಾಗ್ರಹಣ! ನದಿ, ಬಲೆ ಬೀಸುವ ಮೀನುಗಾರರು, ಹಸಿರು, ತುಳಿಯುವ ಸೈಕಲ್ಲಿಗೆ ಜಾಗ ಬಿಡುವ ಭೂಮಿ, ಬಿಸಿನೀರೊಲೆಯ ಹೊಗೆ, ಬೀಡಿ ಸೇದುವ ವೇಷತೊಟ್ಟ ಯಕ್ಷಗಾನ ಕಲಾವಿದ, ಹೀಗೆ ಪ್ರತೀ ದೃಶ್ಯವೂ ಕಟ್ಟನ್ನು ಹಾಕಿ ಗೋಡೆಗೆ ನೇತುಹಾಕುವಷ್ಟು ಸುಂದರವಾಗಿಯೂ ಹೊಸದಾಗಿಯೂ ಇವೆ. ಹಾಗಾಗಿಯೇ ಇದೇ ವಿಭಾಗಕ್ಕೆ ಪ್ರಶಸ್ತಿಗಳು ಬಂದಿರುವುದರಲ್ಲಿ ಅಚ್ಚರಿಯೇನಿಲ್ಲ. ಎರಡು ಮೂರು ದೃಶ್ಯಗಳಲ್ಲಿ ಬಳಸುವ ಟ್ರಾನ್ಸಿಷನ್ ಎಫೆಕ್ಟ್ ಕ್ಯಾಮೆರಾದ್ದೋ ಅಥವಾ ಸಂಕಲನಕಾರನದ್ದೋ ಅನ್ನುವಷ್ಟು ವಿಭಿನ್ನವಾಗಿದ್ದು ಅಚ್ಚರಿಯುಂಟು ಮಾಡುತ್ತವೆ.

ಸಂಚಾರಿ ವಿಜಯ್ ನಟನೆಯಲ್ಲಿ ಲವಲವಿಕೆಯಿದೆ. ಬಾಲಕಲಾವಿದರ ದಂಡೇ ಸಿನಿಮಾದ ಅನೇಕ ದೃಶ್ಯಗಳಲ್ಲಿದೆ.


ಆದರೆ ಸಿನಿಮಾ ಮುಗಿಯುವಾಗ ನಮ್ಮ ಮನಸ್ಸನ್ನು ಗೆಲ್ಲುವುದು ಮಾಬ್ಲಣ್ಣನ ಪಾತ್ರದ ಮಾಧವ ಕಾರ್ಕಡರವರು.


"ನಂಗೂ ಬಣ್ಣ ಅಂದರೆ ಇಷ್ಟ" ಅಂತ ಮಗನೊಂದಿಗೆ ಮಗುವಾಗುವ,
ಬಣ್ಣ ಹುಡುಕುತ್ತ ಚಿಕ್ಕಮಗುವಿನ ಕಾತುರ ತೋರುವ,
ಬೆರ್ಚಪ್ಪನ ಮುಖದ ಮೇಲಿನ ಬಣ್ಣವನ್ನೂ ನೋಡಿ ಅಸೂಯೆಪಡುವ,
ಅದೇ ಮರುಕ್ಷಣ ಬಣ್ಣ ಹಚ್ಚೇ ತೀರುವೆನೆಂದು ಬೆರ್ಚಪ್ಪನಿಗೆ ಸವಾಲು ಹಾಕುವ,
" ಕತ್ತಲಿಂದ ಬೆಳಕಿಗೆ ಬರ್ತಾರೆ ಅಂದ್ರೆ ಹೆಚ್ಚಿನ ಜನರು ದೀಪ ನಂದಿಸೋಕೆ ಯೋಚನೆ ಮಾಡ್ತಾರೆ... ಆದರೆ ನಮ್ಮೊಳಗೊಂದು ಕಿಚ್ಚಿದ್ದರೆ ಯಾರೇನೂ ಮಾಡೋಕೆ ಸಾಧ್ಯವಿಲ್ಲ" ಅಂತ ಒಳಗಿನ ಕಿಚ್ಚು ತೋರುವ,
"ನನಗೆ ಬಣ್ಣ ಯಾರೂ ಕೊಡುವವರಿಲ್ಲ...ನನಗೆ ನಾನೇ" ಅಂತ ಮರುಕಪಡುವ
ಬಣ್ಣ ಸಿಕ್ಕಾಗಿನ ಅದೇ ಮಗುವಿನ ಮೊಗದ ಹೊಳಪ ತೋರುವ ಅಭಿನಯದಲ್ಲಿ ಅವರು ನಮ್ಮನ್ನು ಮಂತ್ರಮುಗ್ಧನನ್ನಾಗಿ ಮಾಡುತ್ತಾರೆ.


ಈ ಸಿನಿಮಾದ ಕಥೆಗೆ ಸೂಕ್ತ ಕಲಾವಿದರಾದ ಮಾಧವ ಕಾರ್ಕಡ ಅವರನ್ನು ನಿರ್ದೇಶಕರು ಆಯ್ದುಕೊಂಡಿದ್ದಾರೆ.


ಗೆಳೆಯ, ಸಹೋದರ ನಾಗರಾಜ್ ಸೋಮಯಾಜಿ (Nagaraj Somayaji) ಅತ್ಮೀಯರೆಂದು ಇದೆಲ್ಲವನ್ನೂ ಹೇಳುತ್ತಿಲ್ಲ. ಯಾವುದೇ ಕೆಲಸವನ್ನು ಮಾಡಿದರೂ ಅಚ್ಚುಕಟ್ಟಾಗಿ ಮಾಡುತ್ತಾರೆ. ನಾಟಕವಿರಬಹುದು, ಸಿನಿಮಾವಿರಬಹುದು, ಅವರ ಫೋಟೋಗ್ರಫಿಯ ವೃತ್ತಿಜೀವನದಲ್ಲೇ ಇರಬಹುದು. ಮೊದಲ ಪ್ರಯತ್ನವಾದರೂ ಪ್ರತಿಯೊಂದರಲ್ಲೂ ಅವರ ಶ್ರದ್ಧೆ, ಶಿಸ್ತು ಎದ್ದು ಕಾಣುತ್ತದೆ. ಬಹುತೇಕರು ಮಾಡುವಂತೆ ಚೊಚ್ಚಲ ಕಿರುಚಿತ್ರಕ್ಕಾಗಿ ಯಾವುದೋ ಅದೇ ಹಳೆಯ ಪ್ರೇಮಕಥೆಗಳನ್ನು ತೆಗೆದುಕೊಳ್ಳದೆ ಶ್ರೀಧರ ಬನವಾಸಿಯವರ ಕಥೆಯನ್ನು ಆಧರಿಸಿ ಸಿನಿಮಾವಾಗಿಸಿದ್ದಾರೆ. ಮುಂದೆಯೂ ಸಾಹಿತ್ಯವನ್ನಾಧರಿಸಿದ ಸಿನಿಮಾಗಳು ಅವರಿಂದ ಮೂಡಿ ಬರಲಿ ಎಂದು ಆಶಿಸುತ್ತ ಅವರ ಮುಂದಿನ ಪ್ರಯತ್ನಗಳಿಗೆ ಶುಭ ಕೋರೋಣ.


ಕೊರೋನಾ ಟೈಮಿನಲ್ಲಿ ಮನೆಯಲ್ಲೇ ಕುಳಿತು ಏನು ಮಾಡಬೇಕೆಂದು ತೋಚದಿರುವ ಪರಿಸ್ಥಿತಿಯಲ್ಲಿ ಈ ಸಿನಿಮಾ ಯೂಟ್ಯೂಬಿನಲ್ಲಿ ಬಿಡುಗಡೆಯಾಗಿದೆ.


ನೋಡದಿದ್ದವರು ಒಮ್ಮೆ ನೋಡಿ. ಖಂಡಿತವಾಗಿಯೂ ನಿಮಗೆ ಇಷ್ಟವಾಗುತ್ತದೆ. ನೋಡಿ, ಇಷ್ಟವಾದರೆ ನಿಮ್ಮ ಗೆಳೆಯರೊಂದಿಗೆ ಹಂಚಿಕೊಳ್ಳಿ. ಚೊಚ್ಚಲ ಪ್ರಯತ್ನಕ್ಕೆ ಬೆನ್ನು ತಟ್ಟಿ.


-Santhosh Kumar LM
16-Apr-2020

Monday, April 13, 2020

ಕುರಂಗು ಬೊಮ್ಮೈ ....2017 Tamil Movie

Kurangu Bommai Movie Poster (#3 of 3) - IMP Awards

ಯುವನಿರ್ದೇಶಕರುಗಳಿಗೆ ಆಧಾರವಾಗಿ ದೊಡ್ಡ ಬಜೆಟ್'ನ ಪ್ರಾಜೆಕ್ಟುಗಳು ಸಿಗುವುದು ಕಷ್ಟ. ಹಾಗಾಗಿಯೇ ಅನೇಕ ಪ್ರತಿಭಾವಂತರು ತಮಗೆ ಸಿಗುವ ಕಡಿಮೆ ಬಜೆಟ್ಟಿನಲ್ಲೇ ಒಳ್ಳೆಯ ಸಿನಿಮಾ ಮಾಡುವ ಒತ್ತಡಕ್ಕೆ ಸಿಲುಕುತ್ತಾರೆ. ಕಳೆದ ನಾಲ್ಕೈದು ವರ್ಷಗಳಲ್ಲಿ ಈ ಬಗೆಯ ಅನೇಕ ಸಿನಿಮಾಗಳು ತಮಿಳಿನಲ್ಲಿ ಬಂದಿವೆ. ಖುಶಿಯ ವಿಚಾರವೆಂದರೆ ಒಳ್ಳೆಯ ಪ್ರಯತ್ನಗಳಿಗೆ ತಮಿಳು ಚಿತ್ರರಂಗ ಒಳ್ಳೆಯ ಬೆಂಬಲ ಕೊಡುತ್ತದೆ.


ಕಡಿಮೆ ಬಜೆಟ್ ಅಂತ ಅನ್ನಿಸಿದರೂ ಸಿನಿಮಾ ಹೇಳುವ ಕಥೆ ಕುತೂಹಲ ಹುಟ್ಟಿಸುವಲ್ಲಿ ಎಲ್ಲಿಯೂ ನಿರಾಶೆ ಮಾಡುವುದಿಲ್ಲ. ಅಂತ ಸಿನಿಮಾಗಳ ಪೈಕಿ 2017ರಲ್ಲಿ ಬಿಡುಗಡೆಯಾದ ನಿಥಿಲನ್ ಚೊಚ್ಚಲ ನಿರ್ದೇಶನದ ಸಿನಿಮಾ "ಕುರಂಗು ಬೊಮ್ಮೈ" ಕೂಡ ಒಂದು. ಕ್ರೈಮ್ ಥ್ರಿಲ್ಲರ್ ಕಥೆ ಹೊಂದಿರುವ ಈ ಸಿನಿಮಾದ ಕಥೆ ನಮಗೆ ಸಾಧಾರಣ ಅನ್ನಿಸಬಹುದು. ಆದರೆ ಆ ಕಥೆಯನ್ನು ಹೇಳುವ ರೀತಿ ಮುದ ಕೊಡುತ್ತದೆ. ಇಲ್ಲೂ ಸಹ non-linear ಶೈಲಿಯನ್ನೇ ಅಳವಡಿಸಿಕೊಂಡಿದ್ದರೂ ಪ್ರೇಕ್ಷಕನಿಗೆ ಗೊಂದಲವಾಗುವುದಿಲ್ಲ. ಅದರ ಬದಲಾಗಿ ಆ ಶೈಲಿಯೇ ಕಥೆಯನ್ನು ಸಿನಿಮಾಂತ್ಯದವರೆಗೆ ಕೊಂಚ ಕೊಂಚವೇ ಅನಾವರಣಗೊಳಿಸುತ್ತ ಸಾಗುತ್ತದೆ.


ಸಿನಿಮಾದ ನಾಯಕನಟ "ಕುಟ್ರಮೇ ದಂಡನೈ" ಸಿನಿಮಾದಲ್ಲೂ ನಟಿಸಿದ್ದ ವಿದಾರ್ಥ್, ಎಂದಿನಂತೆ ಯಾವುದೇ ಹೀರೋಯಿಸಂ ತೋರಿಸದ ನಟನೆ. ಆದರೆ ಈ ಸಿನಿಮಾದಲ್ಲಿ ಗಮನ ಸೆಳೆಯುವುದು ಸ್ಲಗ್ಗರ್ ಪಾತ್ರದಲ್ಲಿ ನಟಿಸಿರುವ ಇದೇ ಸಿನಿಮಾದ ನಿರ್ಮಾಪಕ ತೇನಪ್ಪನ್. ಅದಕ್ಕಿಂತ ಮುಖ್ಯವಾಗಿ ನಾಯಕನ ಅಪ್ಪನ ಪಾತ್ರದಲ್ಲಿ ನಟಿಸಿರುವ ಹಿರಿಯ ನಿರ್ದೇಶಕ ಬಿ.ಭಾರತಿರಾಜಾ. ಕಳ್ಳನ ಜೊತೆ ಸೇರುವ ಅವಶ್ಯಕತೆಯೇನಿತ್ತು ಅನ್ನುವ ಪ್ರಶ್ನೆಗೆ ಭಾರತಿರಾಜಾ ಹೇಳುವ ಪ್ರತಿಕ್ರಿಯೆಯಲ್ಲಿ ಒಂದು ಪುಟ್ಟ ಕಥೆಯಿದೆ. ನಿಮಗೆ ತಮಿಳು ಬರುವುದಾದರೆ ಆ ಕಥೆ ಕೇಳುವಾಗಲೇ ಆ ಪಾತ್ರದ ಬಗ್ಗೆ ಮನಸ್ಸಿನಲ್ಲೊಂದು ಅನುಕಂಪ ಮೂಡಿ ಸಿನಿಮಾದ ಬಗೆಗಿನ ಮೂಡ್ ಬದಲಾಗುತ್ತದೆ. ಈ ಸಂಭಾಷಣೆಯಿರದಿದ್ದರೆ ಆ ಸಿನಿಮಾ ತೂಕ ಕಡಿಮೆಯಾಗಿರುತ್ತಿತ್ತು.


ಸಿನಿಮಾದ ಕಥೆಯಲ್ಲೂ ಎಲ್ಲೂ ಇದು ಒಳ್ಳೆಯದು, ಇದು ಕೆಟ್ಟದ್ದು ಅಂತ ಕಪ್ಪು-ಬಿಳುಪಾಗಿ ಏನನ್ನೂ ತೋರಿಸಿಲ್ಲ. ಆದರೆ ಹಣಕ್ಕಾಗಿ ದುರಾಸೆಪಡುವ ಸಮಾಜದ ಮುಖವನ್ನು ಇಡೀ ಸಿನಿಮಾದಲ್ಲಿ ಕೋತಿಗೆ ದೃಷ್ಟಾಂತವಾಗಿ ತೋರಿಸಲಾಗಿದೆ. ವಿಶೇಷವೆಂದರೆ ನಮ್ಮ ಕನ್ನಡದ ಅಜನೀಶ್ ಲೋಕನಾಥ್ ಅವರು ಈ ಸಿನಿಮಾದ ಮೂಲಕ ತಮಿಳಿಗೂ ಪಾದಾರ್ಪಣೆ ಮಾಡಿದ್ದಾರೆ. ಅವರಿಗೆ ಶುಭ ಹಾರೈಸೋಣ.


ನೋಡಿರದಿದ್ದರೆ ಏನೂ expectation ಇಲ್ಲದೆ ನೋಡಿ, ಇಷ್ಟವಾಗಬಹುದು. ಒಮ್ಮೆಯಂತೂ ನೋಡಲಡ್ಡಿಯಿಲ್ಲ.


Cinema Recommended by: ಎ ಎಸ್ ಜಿ.
Thank you 🙂


-Santhosh Kumar LM
13-Apr-2020

Tuesday, April 7, 2020

HIT.....2020 (Telugu)

Hit : The First Case (2020) - Review, Star Cast, News, Photos ...


HIT: The First Case (2020, Telugu, Suspense thriller)

ದುರುವಂಗಳ್ ಪದಿನಾರು ಸಿನಿಮಾದ ನಂತರ ಅದರಷ್ಟೇ ಕಿಕ್ ಕೊಟ್ಟ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ. ಕಥೆಯೊಂದು ಚೆನ್ನಾಗಿದ್ದರೆ ಬೇರೇನೂ ಅಷ್ಟೊಂದು ಸಮಸ್ಯೆಯೇ ಆಗುವುದಿಲ್ಲ ಅನ್ನುವುದಕ್ಕೆ ಈ ಸಿನಿಮಾ ಒಳ್ಳೆಯ ಉದಾಹರಣೆ.

ಅಪಹರಣ, ರಹಸ್ಯ, ಕುತೂಹಲ ಕಡೆಯವರೆಗೂ ಕಾಯ್ದುಕೊಳ್ಳುವಿಕೆ. ನಾಯಕನಂತೆಯೇ ನಮಗೂ ಏನಾಗಿದೆಯೆಂದು ಅರ್ಥವಾಗದ ಗೊಂದಲ, ಕ್ಲೂ ಸಿಕ್ಕರೂ ಅದರಿಂದ ಏನೂ ಅರ್ಥವಾಗದ ಕ್ಲಿಷ್ಟ ಪ್ರಕರಣ, ಸಮಸ್ಯೆಯಾಗಿ ಕಾಡುವ ನಾಯಕನ ಹಿನ್ನೆಲೆ ಹೀಗೆ ಸಸ್ಪೆನ್ಸ್ ಥ್ರಿಲ್ಲರ್'ಗೆ ಬೇಕಾಗುವ ಎಲ್ಲ ಅಂಶಗಳೂ ಕಥೆಯಲ್ಲಿವೆ. ಒಂದೆರಡು ಕಡೆಗಳಲ್ಲಿ ಕೊಡುವ ಸಮಜಾಯಿಷಿ ನಮ್ಮನ್ನು ಸಮಾಧಾನಪಡಿಸದಿದ್ದರೂ ಕಥೆಯ ದೃಷ್ಟಿಯಿಂದ ಎಲ್ಲೂ ಲೋಪವೆನಿಸಿಕೊಂಡಿಲ್ಲ. ಸಿನಿಮಾದ ಆರಂಭದಲ್ಲಿ ಕಥಾನಾಯಕನ ಬುದ್ಧಿಮತ್ತೆಯನ್ನು ಪ್ರೇಕ್ಷಕನಿಗೆ ಪರಿಚಯಿಸಲು ತೋರಿಸುವ ಎರಡು ಪ್ರಸಂಗಗಳೂ ಸಹ ರಸವತ್ತಾಗಿವೆ.

ತನ್ನ ಹಿನ್ನೆಲೆಯೇ ತನ್ನ ಕೆಲಸದ ಮಧ್ಯೆ ಕಾಡಿಸುವ, ಅದರಿಂದ ವಿಚಲಿತನಾದರೂ ಕೆಲಸದ ವಿಷಯದಲ್ಲಿ ಯಾವುದೇ ರಾಜಿ ತೋರದ ನಾಯಕನ ಪಾತ್ರದಲ್ಲಿ ವಿಶ್ವಾಕ್ ಸೇನ್ ಸಹಜವಾಗಿ ಅಭಿನಯಿಸಿದ್ದಾರೆ. ಸಿನಿಮಾದ ಸಸ್ಪೆನ್ಸ್ ಬಯಲಾದ ಮೇಲೆ ಮತ್ತೊಮ್ಮೆ ಮೊದಲಿನಿಂದ ಯೋಚಿಸಿದರೆ ಸಿನಿಮಾದ ಕಥೆಯನ್ನು ಹೆಣೆಯಲು ಎಷ್ಟು ಶ್ರಮ-ಶ್ರದ್ಧೆವಹಿಸಿದ್ದಾರೆ ಅಂತ ಅರ್ಥವಾಗುತ್ತದೆ. ಪ್ರೇಕ್ಷಕನ ಆಲೋಚನೆಯನ್ನು ಬೇರೆ ಬೇರೆ ವಿಷಯಗಳತ್ತ ಹರಿಸಿ ಗೊಂದಲವನ್ನುಂಟು ಮಾಡಲು ಇಲ್ಲಿ ಆಯ್ದುಕೊಂಡಿರುವ ಮಾರ್ಗವೂ ಮೆಚ್ಚುಗೆ ತರುವಂಥದ್ದು. ಇದರಿಂದಲೇ ಕಥೆಯುದ್ದಕ್ಕೂ ಪ್ರೇಕ್ಷಕ ಅಪರಾಧಿ ಇವನಿರಬಹುದೇ ಎಂದು ಪ್ರತೀ ಪಾತ್ರದ ಬಗ್ಗೆ ಯೋಚಿಸುತ್ತಲೇ ಇರುತ್ತಾನೆ.

ನೋಡಿರದಿದ್ದರೇ ಇಂದೇ ನೋಡಿ..... ಅಮೇಜಾನ್ ಪ್ರೈಮ್'ನಲ್ಲಿದೆ.

-Santhosh Kumar LM
07-Apr-2020

Saturday, April 4, 2020

Don't Breathe...... (2016) English Movie





Don't Breathe (2016) Horror, Thriller

ಅವರು ಮೂವರು ಚಿಕ್ಕ ಪುಟ್ಟ ಕಳ್ಳತನ ಮಾಡಿಕೊಂಡು ಬದುಕು ನಡೆಸುತ್ತಿರುವವರು. ಈಗ ಅವರಿಗೆ ಆ ಬಗೆಯ ಜೀವನ ಶೈಲಿ ಬೇಸರವಾಗಿದೆ. ಈಗೀಗ ಅವರು ಕಳ್ಳತನ ಮಾಡುವ ವಸ್ತುಗಳಿಗೂ ಮಧ್ಯವರ್ತಿಯಿಂದ ಸರಿಯಾದ ಬೆಲೆ ಸಿಗುತ್ತಿಲ್ಲ. ಹಾಗಾಗಿ ಕೊಂಚ ದೊಡ್ಡದೇ ಆದರೂ ಹೆಚ್ಚು ಹಣ ಸಿಗುವ ದರೋಡೆಯೊಂದನ್ನು ಮಾಡಿ ಬೇರೆ ಸ್ಥಳಕ್ಕೆ ಹೋಗಿ ನೆಲೆಸಬೇಕೆಂಬ ನಿರ್ಧಾರ ಮಾಡುತ್ತಾರೆ.

ಹೆಚ್ಚು ಜನ ಓಡಾಡದ ಪ್ರದೇಶದಲ್ಲಿ ಒಂದು ಮನೆಯಿದೆ. ಅಲ್ಲಿ ಒಬ್ಬ ನಿವೃತ್ತ ಸೇನಾಧಿಕಾರಿ ಒಂಟಿಯಾಗಿ ಜೀವನ ಸಾಗಿಸುತ್ತಿದ್ದಾನೆ. ಸೇನೆಯಲ್ಲಿದ್ದಾಗ ನಡೆದ ಬಾಂಬ್ ದಾಳಿಯಲ್ಲಿ ಆತನ ಕಣ್ಣು ಹೋಗಿ ಆತ ಕುರುಡನಾಗಿದ್ದಾನೆ. ಅವನ ಮಗಳು ಅಪಘಾತವೊಂದರಲ್ಲಿ ತೀರಿಹೋಗಿದ್ದರಿಂದ ಪರಿಹಾರದ ಹಣವಾಗಿ ದೊಡ್ಡ ಮೊತ್ತ ಅವನ ಕೈಸೇರಿದ ಮಾಹಿತಿ ಇವರಿಗೆ ಸಿಗುತ್ತದೆ.

ಈ ಮೂವರೂ ಅವನ ಮನೆಗೆ ಕನ್ನ ಹಾಕುತ್ತಾರೆ. ಅಲ್ಲಿಂದ ನಿಜವಾದ ಪರದಾಟ ಶುರುವಾಗುತ್ತದೆ. ಆ ಜಟಾಪಟಿಯಲ್ಲಿ ಯಾರು ಗೆಲ್ಲುತ್ತಾರೆ ಅನ್ನುವುದೇ ಕಥೆ.

2016 ರಲ್ಲಿ ಬಿಡುಗಡೆಯಾದ ಈ ಸಿನಿಮಾದ ಹೆಸರು "Dont Breathe". ಇರುವುದೇ ಒಂದೂವರೆ ಗಂಟೆಗೂ ಕಡಿಮೆ ಅವಧಿಯ ಸಿನಿಮಾ. ಆದರೆ ನಾವೇ ಆ ಮನೆಯೊಳಗೆ ಕನ್ನ ಹಾಕಹೋಗಿ ಸಿಕ್ಕಿಕೊಂಡ ಉಸಿರುಗಟ್ಟಿದ ಫೀಲಾಗುತ್ತದೆ. ಹಾರರ್ ಅನ್ನಿಸುವಂತೆ ಚಿತ್ರೀಕರಿಸಲಾಗಿದೆಯಾದರೂ ಸಂಪೂರ್ಣ ಥ್ರಿಲ್ಲರ್ ಸಿನಿಮಾ. ಜಾಸ್ತಿ ಅರ್ಥ ಮಾಡಿಕೊಳ್ಳಲು ಏನೂ ಇರಬಾರದು. ಆದರೆ ಥ್ರಿಲ್ ಸಿಗುವ ಸಿನಿಮಾ ನೋಡಬೇಕು ಅಂತ ಬಯಸುವ ಸಿನಿಮಾ-ಪ್ರೇಮಿಗಳಿಗೆ ಹೇಳಿ ಮಾಡಿಸಿದ ಸಿನಿಮಾ. ಇಡೀ ಸಿನಿಮಾದಲ್ಲಿ ನಿಶ್ಯಬ್ದವೇ ಹಿನ್ನೆಲೆ ಸಂಗೀತ. ಉಸಿರಾಡಿದರೂ ಇನ್ನೊಬ್ಬರಿಗೆ ಕೇಳಿಸಿಬಿಡುತ್ತದೇನೋ ಅನ್ನಿಸುವಿಕೆ. ಹಾಗಾಗಿ ಸಿನಿಮಾದ ಹೆಸರೂ ಕೂಡ ಸರಿಯಾಗಿಯೇ ಸಮಂಜಸವಾಗಿದೆ.

ಮಜಾ ಅಂದರೆ ಈ ಸಿನಿಮಾದ ಕಥೆಯನ್ನು ಆ ಕಳ್ಳತನ ಮಾಡುವವರ ದೃಷ್ಟಿಕೋನದಿಂದ ತೆಗೆಯಲಾಗಿದೆ. ಸಿನಿಮಾ ನೋಡುವಾಗ ಯಾವ ಅಂಶ ನಮಗೆ ಭಯ ಹುಟ್ಟಿಸುತ್ತಿದೆ ಅಂತಲೇ ಕೆಲಕಾಲ ತಬ್ಬಿಬ್ಬಾಗುತ್ತೇವೆ. ಏಕೆಂದರೆ ವೀಕ್ಷಕನ ಮನಸ್ಸು ಆ ಕಳ್ಳತನ ಮಾಡುತ್ತಿರುವವರ ಪರವಾಗಲಿ ಅಥವ ತನ್ನ ಮನೆಗೆ ನುಗ್ಗಿದವರಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ಪರದಾಡುವ ಕುರುಡ ಸೇನಾಧಿಕಾರಿಯ ಪರವಾಗಲಿ ಇರುವುದಿಲ್ಲ. ಈ ವಿಭಿನ್ನತೆಯೇ ಈ ಸಿನಿಮಾದಲ್ಲಿ ಇಷ್ಟವಾಯಿತು.

ಈ ಸಿನಿಮಾದ ಎರಡನೇ ಭಾಗಕ್ಕೆ ಈಗಾಗಲೇ ಸಿದ್ಧತೆ ನಡೆದಿದ್ದು, ಆ ಚಿತ್ರತಂಡ ಮುಂದಿನ ವರ್ಷಕ್ಕೆ ಬಿಡುಗಡೆ ಮಾಡುವ ಆಶಯ ಹೊಂದಿದೆಯಂತೆ.

ಥ್ರಿಲ್ಲರ್ ಪ್ರಿಯರಿಗೆ ಒಂದೂವರೆ ಗಂಟೆ ಭರಪೂರ ಮನರಂಜನೆ ಕೊಡುವ ಸಿನಿಮಾ....ನೆಟ್‍ಫ್ಲಿಕ್ಸ್'ನಲ್ಲಿದೆ. ತಪ್ಪದೇ ನೋಡಿ!

-Santhosh Kumar LM
04-Apr-2020

Thursday, April 2, 2020

ರಾಮಾ ರಾಮಾ ರೇ....2016 (Kannada Cinema)

Satya Prakash's Rama Rama Re is out on YouTube- Cinema express ಈ ಚಿತ್ರ ಬಿಡುಗಡೆಯಾಗಿದ್ದಾಗ ಮಲೇಷ್ಯಾದಲ್ಲಿದ್ದೆ. ನೋಡಲು ಸಾಧ್ಯವಾಗಿರಲಿಲ್ಲ.


ಕಡೆಗೂ ಇಂದು ಈ ಚಿತ್ರವನ್ನು ನೋಡಿದೆ. ನೆಟ್‍ಫ್ಲಿಕ್ಸ್'ನಲ್ಲಿದ್ದ ಸಿನಿಮಾವನ್ನು ನೋಡದೆ ಕಡೆಗೊಂದು ದಿನ ಹುಡುಕಿದಾಗ ತೆಗೆದು ಹಾಕಿದ್ದರು. ಇದೀಗ ಯೂಟ್ಯೂಬ್'ನಲ್ಲಿ ಬಿಡುಗಡೆಯಾಗಿದೆ.


ವಿಶೇಷವೆಂದರೆ ಇಂದು ರಾಮನವಮಿಯ ದಿನವೇ "ರಾಮಾ ರಾಮಾ ರೇ" ಸಿನಿಮಾ ನೋಡುವಂತಾಯಿತು.


ಅದ್ಭುತ ಸಿನಿಮಾ...ನಾಲ್ಕು ವರ್ಷದ ಹಿಂದಿನದ್ದು......ನೀವಾಗಲೇ ನೋಡಿರುತ್ತೀರಿ. ಹೇಳಲೇನೂ ಉಳಿದಿಲ್ಲ. ಕಾನ್ಸೆಪ್ಟ್, ಕಲಾವಿದರು, ಹಿನ್ನೆಲೆ ಸಂಗೀತ, "ಕೇಳು ಕೃಷ್ಣ, ಹೇಳು ಪಾರ್ಥ" ಹಾಡು, ಜೀಪು, ಹಸಿರೇ ಇಲ್ಲದ ನೀರು ಕಾಣದ ಒಣ ಭೂಮಿ, ಬಿಸಿಲು, ಜನರು, ಅವರದೇ ಆದ ಆದ್ಯತೆಗಳು, ಆಸೆ, ಮಾನವೀಯತೆ, ಭಗವದ್ಗೀತೆಯ ಸಾರ, ಅತ್ಯುತ್ತಮ ಅಂತ್ಯ .....ಇತ್ಯಾದಿತ್ಯಾದಿ


ಕೆಲವು ಕಡೆಯಂತೂ ಗಂಟಲುಬ್ಬಿ ಬರುವ ನಿರೂಪಣೆ.


ನೀವಿನ್ನೂ ನೋಡಿರದಿದ್ದರೆ ನೋಡಲೇಬೇಕಾದ ಕನ್ನಡದ ಸಿನಿಮಾ...ನೋಡಿ.


-Santhosh kumar LM
02-Apr-2020

Wednesday, April 1, 2020

ಗಾಡ್ ಫಾದರ್ 2020 (Tamil, Thriller)


ಗಾಡ್ ಫಾದರ್ 2020 (ತಮಿಳು, ಥ್ರಿಲ್ಲರ್)

ಅಲ್ಲೊಬ್ಬ ಡಾನ್ ಇದ್ದಾನೆ. ಅವನಿಗೊಬ್ಬ ಮಗ. ಆ ಮಗನಿಗೆ ಹೃದಯಸಂಬಂಧಿ ಖಾಯಿಲೆ. ಹಾಗಾಗಿ ಬೇರೊಂದು ಹೃದಯವನ್ನು ಕಸಿ ಮಾಡದ ಹೊರತು ಬದುಕುಳಿಯಲಾರ

ಇತ್ತ ನಮ್ಮ ಮುಗ್ಧ ಸಿನಿಮಾ ನಾಯಕ. ಹೆಂಡತಿ ಮತ್ತು ಮಗನೊಂದಿಗೆ ಸಂತೋಷದ ಜೀವನ ಸಾಗಿಸುತ್ತಿದ್ದಾನೆ.

ಡಾನ್'ಗೆ ಬೇರೆಯವರ ಜೀವದ ಬಗ್ಗೆ ಚಿಂತೆಯಲ್ಲ. ಅವನಿಗೆ ಸದ್ಯದ ಆದ್ಯತೆ ತನ್ನ ಮಗನನ್ನು ಉಳಿಸಿಕೊಳ್ಳುವುದು. ಅದಕ್ಕೆ ಇರುವುದೊಂದೇ ದಾರಿ. ತನ್ನ ಮಗನ ರಕ್ತದ ಗುಂಪು ಹೊಂದಿಕೆಯಾಗುವ ಮಗುವೊಂದನ್ನು ಹುಡುಕಿ, ಬಲಿಕೊಟ್ಟು ಆ ಮಗುವಿನ ಹೃದಯವನ್ನು ಕಸಿ ಮಾಡಿಸಿ ತನ್ನ ಮಗುವನ್ನು ಉಳಿಸಿಕೊಳ್ಳುವುದು.

ರಕ್ತ ಪರೀಕ್ಷಾಕೇಂದ್ರಕ್ಕೆ ನುಗ್ಗಿ ಅಲ್ಲಿ ಸಿಕ್ಕ ದಾಖಲೆಗಳನ್ನು ಹುಡುಕಿದಾಗ ಆ ರೌಡಿಗಳಿಗೆ ಸಿಗುವ ಮಗುವಿನ ವಿವರವೆಂದರೆ ನಮ್ಮ ಕಥಾನಾಯಕನ ಮಗು. ಆ ವಿಳಾಸವನ್ನು ಹುಡುಕಿಕೊಂಡು ಬರುವ ಡಾನ್ ಮತ್ತು ಅವನ ಸಹಚರರಿಂದ ನಮ್ಮ ನಾಯಕ ತನ್ನ ಮಗುವನ್ನು ಕಾಪಾಡಲು ಸಾಧ್ಯವೇ ಅನ್ನುವುದೇ ಈ ವರ್ಷ ಬಿಡುಗಡೆಯಾದ "ಗಾಡ್ ಫಾದರ್" ತಮಿಳು ಚಿತ್ರದ ಕಥೆ.

ನಾಯಕ ನಟರಾಜನ್ ಸುಬ್ರಮಣ್ಯಂ ಎಂದಿನಂತೆ ಸಹಜ ಅಭಿನಯ. ಡಾನ್ ಪಾತ್ರದಲ್ಲಿ ಮಲಯಾಳಂ ನಟ ಲಾಲ್ ಮ್ಯಾನರಿಸಂ ತುಂಬಾ ಇಷ್ಟವಾಯಿತು. ಸೂಪರ್ ಡಿಲಕ್ಸ್ ಚಿತ್ರದಲ್ಲಿ ನಟಿಸಿರುವ ಪುಟಾಣಿ ಅಶ್ವಂತ್ ಇಲ್ಲೂ ಸಹ ನಟಿಸಿದ್ದಾನೆ. ಥ್ರಿಲ್ಲರ್ ಸಿನಿಮಾಗಳನ್ನು ಇಷ್ಟಪಡುವವರಿಗೆ ಒಮ್ಮೆ ನೋಡಬಹುದಾದ ಚಿತ್ರ. ನೋಡಿ.

-Santhosh Kumar LM
01-Apr-2020

Monday, March 30, 2020

ವೈರಸ್(2019)....Malayalam Movie



ಯಾವ ಸಿನಿಮಾ ನೋಡಿದರೂ ಮೊದಲು Zero Expectation ಇಂದಾನೇ ಶುರು ಮಾಡಿದರೆ ಒಳ್ಳೆಯದು. ಏಕೆಂದರೆ ಏನೋ ಅಂದುಕೊಂಡು ಅಲ್ಲೇ ಏನೋ ಬಂದಾಗ ಆಗುವ ಭ್ರಮನಿರಸನವೇ ಹೆಚ್ಚು. ಮೊನ್ನೆ ಮೊನ್ನೆ ನನ್ನ ಸಿನಿ-ಪರಿಚಯದಲ್ಲಿ "ಐ ಯಾಮ್ ಲಿಜೆಂಡ್" ಸಿನಿಮಾವನ್ನು ಪರಿಚಯಿಸಿದಾಗ ಮತ್ತು Contagion (2011) ಸಿನಿಮಾದ ಬಗ್ಗೆ ಬರೆದಾಗ ಬಹುತೇಕರು ನನಗೆ ಮೆಸೇಜ್ ಮಾಡಿ ಹೇಳಿದ್ದು ಮಲಯಾಳಂನ ವೈರಸ್(2019) ಸಿನಿಮಾ ನೋಡಿ ಅಂತ. ಅಷ್ಟು ಜನ ಹೇಳುವಾಗ Expectation ಜಾಸ್ತಿಯೇ ಇರುತ್ತದೆ. ಈ ಸಿನಿಮಾ ಅದನ್ನು ಹುಸಿಗೊಳಿಸಲಿಲ್ಲ ಕೂಡ.

ವೈರಸ್ ಸಿನಿಮಾ ಬಹುತೇಕ ಹೊಂದಾಣಿಕೆಯಾಗಿದ್ದು ಇಂಗ್ಲೀಷಿನ Contagion ಸಿನಿಮಾಗೆ. ಬಹುಶಃ ಭಾರತೀಯ ಚಿತ್ರರಂಗದಲ್ಲೂ ವೈದ್ಯಕೀಯ ಲೋಕದ ಬಗ್ಗೆ ಇಷ್ಟು ಗಂಭೀರವಾಗಿ ಸಿನಿಮಾ ಮಾಡಬಲ್ಲೆವು ಅಂತ ಈ ಸಿನಿಮಾ ತೋರಿಸಿಕೊಡಬಲ್ಲುದು ಅನ್ನಿಸಿತು.

Contagion ಸಿನಿಮಾದಲ್ಲಿ ವೈರಸ್ ಹೇಗೆ ಶುರುಹಚ್ಚಿಕೊಂಡಿತು. ಅದು ಮನುಷ್ಯನಿಗೆ ಹರಡಿದ ಬಗೆ, ಅದನ್ನು ಕಂಡುಹಿಡಿದ ಬಗೆ, ಲಸಿಕೆ ಕಂಡು ಹಿಡಿಯುವ ವಿಧಾನ, ಹೀಗೆ ಇನ್ನೋ ಎಷ್ಟು ವಿಷಯಗಳ ಬಗ್ಗೆ ಏಕಕಾಲಕ್ಕೆ ಹೇಳಿದರೆ, ವೈರಸ್ ಸಿನಿಮಾ Contact Tracing ವಿಷಯವನ್ನೇ ಮುಖ್ಯ ವಿಷಯವನ್ನಾಗಿ ಹೇಳುತ್ತೆ. ಅದರಲ್ಲೂ ಭಾರತ ದೇಶದಲ್ಲಿ ಈ ಬಗೆಯ ವಿಷಯಗಳಲ್ಲೂ ಕೇವಲ ವೈದ್ಯಕೀಯ ವಿಷಯಗಳಷ್ಟೇ ಇರುವುದಿಲ್ಲ. ಅಲ್ಲಿ ರಾಜಕೀಯ, ನಂಬಿಕೆ ಎಲ್ಲವೂ ಇರುತ್ತದೆ. ಹಾಗೆ ವಿಷಯದ ಗಂಭೀರತೆ ಕೆಡದಂತೆ ಕಥೆ ಗೆರೆ ದಾಟದಂತೆ ಎಲ್ಲ ವಿಷಯಗಳನ್ನು ಹೇಳುತ್ತಲೇ ವೈರಸ್ ಒಂದರ ವಿರುದ್ಧ ಹೋರಾಡುವ ವಿಷಯವನ್ನು ಪರಿಣಾಮಕಾರಿಯಾಗಿ ಹೇಳಿರುವುದು ನನಗಿಲ್ಲಿ ಇಷ್ಟವಾಯಿತು.

ಈ ಕೊರೋನಾ ಪರಿಸ್ಥಿತಿಯಲ್ಲಿ ಈ ಸಿನಿಮಾವನ್ನು ಸಹ ಭಾರತೀಯರು ನೋಡುವುದು ತುಂಬ ಮುಖ್ಯ. ವೈದ್ಯಕೀಯ ಲೋಕ ತಮ್ಮ ಜೀವವನ್ನು ಪಣವಿಟ್ಟು ರೋಗಿಗಳ ಶುಶ್ರೂಷೆಗಾಗಿ ನಿಲ್ಲುವುದು ಕೇವಲ ಸಂಬಳಕ್ಕಾಗಿ ಅಲ್ಲ ಅನ್ನುವುದು ಅನೇಕರಿಗೆ ಅರ್ಥವಾಗಬೇಕು. ಕೊರೋನಾ ಪರಿಸ್ಥಿತಿಯಲ್ಲಿ Quarantine ಎಷ್ಟು ಮುಖ್ಯ, ಅದನ್ನು ಮೀರುವ ಒಬ್ಬೊಬ್ಬ ಬೇಜವಾಬ್ದಾರಿ ವ್ಯಕ್ತಿಯಿಂದಲೂ ಅದೆಷ್ಟು ಜನರಿಗೆ ಯಾತನೆ ಅನ್ನುವುದರ ಪರಿವೆ ಇಲ್ಲಿ ಕೆಲವರಿಗೆ ಇದ್ದಂತೆ ಕಾಣುತ್ತಿಲ್ಲ.

ಚಿತ್ರನಟರ ದಂಡೇ ಈ ಸಿನಿಮಾದಲ್ಲಿದೆ. ಯಾರೂ ಇಲ್ಲಿ ಮುಖ್ಯ-ಅಮುಖ್ಯರೆನಿಸುವುದಿಲ್ಲ. ಅಷ್ಟು ನಾಜೂಕಾಗಿ ಎಲ್ಲರಿಂದ ನಟನೆಯನ್ನು ಹೊರತೆಗೆಯಲಾಗಿದೆ. ಅಷ್ಟು ಪಾತ್ರಗಳನ್ನಿಟ್ಟುಕೊಂಡು ಅಷ್ಟು ದೃಶ್ಯಗಳನ್ನಿಟ್ಟುಕೊಂಡು ಅವೆಲ್ಲವನ್ನು ನಿಭಾಯಿಸಿರುವ ರೀತಿ ಮೆಚ್ಚುವಂಥದ್ದು. ಹಾಡುಗಳಿಲ್ಲದ ಈ ಸಿನಿಮಾದಲ್ಲಿ ಹಿನ್ನೆಲೆ ಸಂಗೀತವೇ ಎಲ್ಲ ಸನ್ನಿವೇಶಗಳಿಗೂ ಉಸಿರು.

ಇಷ್ಟವಾಗದ್ದು ಏನಾದರೂ ಬರೀಲೇಬೇಕಲ್ವಾ? ಡೈಲಾಗುಗಳು ಕನ್ನಡದಲ್ಲಿರಬೇಕಿತ್ತು ಅನ್ನೋದು ಬಿಟ್ರೆ ಇನ್ನೇನೂ ಇಲ್ಲ! :-)

ನೋಡಿರದಿದ್ದರೆ ನೋಡಿ. ಅಮೇಜಾನ್ ಪ್ರೈಮ್'ನಲ್ಲಿದೆ.

-Santhosh Kumar LM
30-Mar-2020

Friday, March 27, 2020

The Peanut Butter Falcon.....2019 (English)


ಮನಸ್ಸಿಗೆ ಒಂಥರ ಖಾಲಿ ಖಾಲಿ ಅನ್ನಿಸುತ್ತಿದೆಯಾ? ಒಂದು ಸಿನಿಮಾ ನೋಡಬೇಕು. ನೋಡಿದ ಮೇಲೆ ಮನಸ್ಸಿನಲ್ಲಿ ಗೆಲುವು ಮೂಡಬೇಕು ಅಂತ ಅನ್ನಿಸುತ್ತಿದೆಯೇ? ಹಾಗಿದ್ದರೆ ಅಂಥ ಪರಿಸ್ಥಿತಿಗೋಸ್ಕರವೇ ಮಾಡಿದ ಸಿನಿಮಾ "The Peanut Butter Falcon"

Down Syndrome ಇರುವ ಹುಡುಗ ZAK. ಆತ ಏಕಾಏಕಿ ತನಗೆ ಚಿಕಿತ್ಸೆ ದೊರಕುತ್ತಿರುವ ಶಿಬಿರದಿಂದ ತಪ್ಪಿಸಿಕೊಂಡು ಹೊರಬೀಳುತ್ತಾನೆ. ಆತನಿಗೆ ರೆಸ್ಲಿಂಗ್ ಹುಚ್ಚು, ತಾನು ಆರಾಧಿಸುವ ರೆಸ್ಲರ್ ಅನ್ನು ಆತನ ಊರಿಗೆ ಹೋಗಿ ಭೇಟಿಯಾಗಿ ಆತನಿಂದ ರೆಸ್ಲಿಂಗ್ ಕಲಿಯಬೇಕೆನ್ನುವ ಮಹತ್ವಾಕಾಂಕ್ಷೆ ಆತನಿಗೆ. ಆತ ತಪ್ಪಿಸಿಕೊಂಡ ವಿಚಾರ ತಿಳಿದ ತಕ್ಷಣವೇ ಆತನ ಜವಾಬ್ದಾರಿ ವಹಿಸಿಕೊಂಡಿದ್ದ ಎಲಿಯನರ್ ಅವನಿಗಾಗಿ ಹುಡುಕಾಟ ಶುರು ಮಾಡಿದ್ದಾಳೆ.

ಇನ್ನೊಂದೆಡೆ ಟೇಲರ್ ಒಬ್ಬ ಮೀನುಗಾರ. ಲೈಸೆನ್ಸ್ ಇಲ್ಲದಿದ್ದುದರಿಂದ ಹಿಡಿದ ಏಡಿಗಳನ್ನು ಕಳ್ಳತನದ್ದು ಅಂತ ಪರಿಗಣಿಸಲಾಗಿದೆ. ಇದೇ ವಿಷಯಕ್ಕೆ ಅಲ್ಲಿನ ಲೈಸೆನ್ಸ್ ಇರುವ ಮೀನುಗಾರರೊಂದಿಗೆ ಜಗಳ ಮಾಡಿಕೊಂಡಿದ್ದಾನೆ. ಅದೊಂದು ದಿನ ಜಗಳವಾದ ದಿನ ಕೋಪಗೊಂಡು ಅವರ ಸಲಕರಣೆಗಳಿಗೆಲ್ಲ ಬೆಂಕಿ ಹಾಕಿ ಅವರು ಹಿಡಿಯಬಂದಾಗ ಅವನ ಮೋಟಾರು-ಬೋಟ್ ಹತ್ತಿ ತಪ್ಪಿಸಿಕೊಂಡಿದ್ದಾನೆ. ಅವರು ಈತನ ಬೆನ್ನುಹತ್ತಿದ್ದಾರೆ. ಟೇಲರ್ ಗೆ ತನ್ನ ಬೋಟಿನೊಳಗೆ ಅಡಗಿ ಕುಳಿತಿರುವ ZAK ಬಗ್ಗೆ ಗೊತ್ತಿಲ್ಲ.

ಮುಂದಿನ ಅವರ ಪಯಣದ ಕಥೆಯೇ " The Peanut Butter Falcon". ಒಂದು ಕ್ಷಣವೂ ಬೋರ್ ಹೊಡೆಸದ ಈ ಕಥೆಯಲ್ಲಿ ಮನಸ್ಸಿಗೆ ತಾಕುವ ಸನ್ನಿವೇಶಗಳಿವೆ. ಟೇಲರ್'ನ ಒರಟು ಮಾತಿಗೆ ಮುಗ್ಧನಾಗಿ ಉತ್ತರ ನೀಡುವ ಮತ್ತು ಮರುಪ್ರಶ್ನೆ ಹಾಕುವ ZAK ಮನಸ್ಸು ಗೆದ್ದುಬಿಡುತ್ತಾನೆ.

ಸನ್ನಿವೇಶಗಳಿಗೆ ತಕ್ಕಂತೆ ಆಯ್ದುಕೊಂಡಿರುವ ಬೇರೆ ಬೇರೆ Music Bitಗಳು ನಮ್ಮನ್ನು ಆ ಪಯಣದಲ್ಲಿ ಜೊತೆಗೆ ಕೊಂಡೊಯ್ಯುತ್ತವೆ.

ನೋಡಿ....

-Santhoshkumar LM
27-Mar-2020

Tuesday, March 24, 2020

ಮಾಫಿಯಾ- ಚಾಪ್ಟರ್ 1.....(2020) (Tamil Cinema)



ಮಾಫಿಯಾ- ಚಾಪ್ಟರ್ 1

ಕಾರ್ತಿಕ್ ನರೇನ್! ತನ್ನ ಇಪ್ಪತ್ತೆರಡನೆಯ ವಯಸ್ಸಿಗೆ "ದುರುವಂಗಳ್ ಪದಿನಾರು" ಅನ್ನುವ ರೋಚಕ ಸಸ್ಪೆನ್ಸ್ ಥ್ರಿಲ್ಲರ್ ಕಥೆಯುಳ್ಳ ತಮಿಳು ಸಿನಿಮಾವೊಂದನ್ನು ಕೊಟ್ಟು ಎಲ್ಲರಿಂದಲೂ ಪ್ರಶಂಸೆ ಗಳಿಸಿದವ. ಆ ಸಿನಿಮಾ ನೋಡಿದರೆ ನೀವು ನಿಜವಾಗಿಯೂ ಅಷ್ಟು ಚಿಕ್ಕವ ಅಷ್ಟು ಅಚ್ಚುಕಟ್ಟಾದ ಸಿನಿಮಾ ನಿರ್ದೇಶಿಸಿದ್ದಾನೆ ಅಂದು ನಂಬಲಾರಿರಿ. ದೃಶ್ಯಗಳ ಪ್ರತೀ ಪುಟ್ಟ ಪುಟ್ಟ Detail ಗಳಿಗೆ ಎಷ್ಟು ಮಹತ್ವ ಕೊಡುತ್ತಾನೆ ಅಂತ ಆ ಸಿನಿಮಾದಲ್ಲಿ ತಿಳಿಯುತ್ತದೆ. ಅಷ್ಟೇ ಅಲ್ಲ. ಅನೇಕ ಯುವ ನಿರ್ದೇಶಕರುಗಳಿಗೆ ಆ ಸಿನಿಮಾ ಪ್ರೇರಣೆಯಾಗಿದೆ.

ಆತನ ಮುಂದಿನ ಸಿನಿಮಾ ಕಳೆದ ತಿಂಗಳು ಬಿಡುಗಡೆಯಾದ "ಮಾಫಿಯಾ-ಚಾಪ್ಟರ್ 1". ಮಾದಕ ದ್ರವ್ಯಗಳ ಸಾಗಣೆಯನ್ನು ತಡೆಗಟ್ಟಿ ನಗರವನ್ನು ಮಾದಕ ವಸ್ತುಗಳ ರಹಿತ ನಗರವನ್ನಾಗಿಸಿ ಅದರ ಮೂಲಕವೇ ಆಗಬಹುದಾದ ಅಪರಾಧವನ್ನು ತಡೆಗಟ್ಟಬೇಕು ಅನ್ನುವ ಇರಾದೆ ಹೊಂದಿದ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋದ ಅಧಿಕಾರಿ ಆರ್ಯನ್. ಸಹಜವಾಗಿಯೇ ಕೋಟ್ಯಾಂತರ ರೂಪಾಯಿ ವ್ಯವಹಾರವುಳ್ಳ ಈ ದಾರಿಯಲ್ಲಿ ಆತ ಎದುರಿಸುವ ಸವಾಲುಗಳೇನು ಅನ್ನುವುದೇ ಈ ಸಿನಿಮಾದ ಕಥೆ.

ಈ ಸಿನಿಮಾದಲ್ಲೂ ಅಷ್ಟೇ. ಕಥೆಯಲ್ಲಿ ಹೊಸತು ಅನ್ನುವುದು ಅಂಥದ್ದೇನಿಲ್ಲ ಅನಿಸಿದರೂ ಪ್ರೇಕ್ಷಕನಿಗೆ ಆ ಸಿನಿಮಾ ಕೊಡುವ ಅನುಭವವೇ ಬೇರೆ. ಎಲ್ಲೂ ಕಥೆ ಜಾಳು ಜಾಳು ಎನಿಸಿಕೊಳ್ಳುವುದಿಲ್ಲ. ನಾಯಕನಾಗಿ ಅರುಣ್ ವಿಜಯ್ ಮತ್ತು ಮಾಫಿಯಾ ಡಾನ್'ನ ಪಾತ್ರದಲ್ಲಿ ಪ್ರಸನ್ನ ಇಬ್ಬರದೂ ಪೈಪೋಟಿಯಿದ್ದಂತೆ ಅದ್ಭುತ ಅಭಿನಯ. ಹಿನ್ನೆಲೆ ಸಂಗೀತವೇ ಮಾದಕ ದ್ರವ್ಯಗಳ ಸಾಮ್ರಾಜ್ಯದ ಅಮಲನ್ನು ಕೊಡುತ್ತದೆ.

ಕಥೆ ಮುಗಿಯಿತು ಎನ್ನುವಾಗ ಖುದ್ಧು ಖಳನಾಯಕನೇ "ನೀನೀಗ ಮುಗಿಸುತ್ತಿರುವುದು ಕೇವಲ ಒಂದು ತುಣುಕನ್ನಷ್ಟೇ. ದೊಡ್ಡ ದೊಡ್ಡ ದೊರೆಗಳೇ ನಿನಗೆ ಪಾಠ ಕಲಿಸಲು ಕಾಯುತ್ತಿದ್ದಾರೆ" ಅಂದು ಮುಂದಿನ ಕಥೆಗೆ ಒಳ್ಳೆಯ ಪೀಠಿಕೆ ಹಾಕಿಕೊಡುತ್ತಾನೆ. ಆಗಲೇ ಮುಂದಿನ ಸಿನಿಮಾಗೆ ನಿರ್ದೇಶಕ ಖಳನಾಯಕ ಯಾರಿರಬಹುದೆಂದು ಪರಿಚಯವನ್ನೂ ಮಾಡುತ್ತಾರೆ. ಮುಂದಿನ ಚಾಪ್ಟರ್'ನಲ್ಲಿ ಸಿನಿಮಾ ಇನ್ನೂ ರೋಚಕವಾಗಿರುವುದರಲ್ಲಿ ಯಾವುದೇ ಅನುಮಾನವಿಲ್ಲ.

ನೋಡಿರದಿದ್ದರೆ ನೋಡಿ. ಅಮೇಜಾನ್ ಪ್ರೈಮ್'ನಲ್ಲಿದೆ.

-Santhosh Kumar LM
24-Mar-2020


Sunday, March 22, 2020

Contagion (2011).... English...Movie

2020ರಲ್ಲಿ ಏನಾಗುತ್ತದೆ ಅಂತ ಹೇಳಲು ಈ ಸಿನಿಮಾ ಮಾಡಿದ್ದರಾ?





http://avadhimag.com/?p=226435




Contagion (2011) (English, Action, Drama, Sci-Fi Thriller)




Height of Coincidence ಅಂದರೆ ಏನೆಂದು ಈ ಸಿನಿಮಾ ನೋಡಿಯೇ ಅರಿಯಬೇಕು! ಈ ಸಿನಿಮಾದ ನಿರ್ದೇಶಕರು ಏನಾದರೂ Time-Travel ಮಾಡಿ ಹತ್ತು ವರ್ಷ ಮುಂದಕ್ಕೆ ಹೋಗಿ 2020ರಲ್ಲಿ ಏನಾಗುತ್ತದೆ ಅಂತ ತಿಳಿದುಕೊಂಡು, ವಾಪಸ್ಸು ಹೋಗಿ ಈ ಸಿನಿಮಾ ಮಾಡಿದ್ದರಾ? ಗೊತ್ತಿಲ್ಲ. ಅಥವಾ ಯಾವುದಾದರೂ ವಿಶ್ವವಿಖ್ಯಾತ ಜ್ಯೋತಿಷಿಯನ್ನು ಭೇಟಿಯಾಗಿ ಮುಂದೇನಾಗಬಹುದು ಅನ್ನುವ ವಿಚಾರ ತಿಳಿದುಕೊಂಡು ಈ ಸಿನಿಮಾ ಮಾಡಿದ್ರಾ? ಗೊತ್ತಿಲ್ಲ.




ಹೀಗೆ ನಿಮಗೂ ಅನ್ನಿಸಬೇಕು ಅನ್ನುವ ಅನಿಸಿಕೆಯಿದ್ದರೆ 2011 ಬಿಡುಗಡೆಯಾದ ಇಂಗ್ಲೀಷ್ ಸಿನಿಮಾ Contagion ಅನ್ನು ನೋಡಲೇಬೇಕು. ನೋಡಿದ ಮೇಲೆ ಈಗ ನಡೆಯುತ್ತಿರುವ ಕೊರೋನಾ ವಿಪತ್ತಿನ ಬಗ್ಗೆ ಒಂದು ಒಳನೋಟ ಸಿಗಬಹುದು.




ಹಾಂಗ್-ಕಾಂಗ್ ಬಿಸಿನೆಸ್ ಟ್ರಿಪ್ ಮುಗಿಸಿ ಹೊರಡುವ ಬೆಥ್ ಎಮ್ಹೋಫ್ ಎನ್ನುವಾಕೆ ತನ್ನೂರು ಮಿನ್ನಿಯಾಪೋಲಿಸ್ ಸೇರುವ ಮೊದಲು ಚಿಕಾಗೊ ವಿಮಾನ ನಿಲ್ದಾಣದಲ್ಲಿ ಕೆಲಘಂಟೆಗಳ ಕಾಲ ಲೇ-ಓವರ್ ತೆಗೆದುಕೊಳ್ಳುತ್ತಾಳೆ. ಆಕೆಯ ಉದ್ದೇಶ ಆ ಸಮಯದಲ್ಲಿ ತನ್ನ ಮಾಜಿ ಪ್ರಿಯಕರನನ್ನು ಭೇಟಿ ಮಾಡುವುದಾಗಿರುತ್ತದೆ. ನಂತರ ಮಿನ್ನಿಯಾಪೋಲಿಸ್'ಗೆ ತಲುಪಿದ ಎರಡೇ ದಿನಗಳಲ್ಲಿ ಬೆಥ್ ತೀವ್ರ ಅನಾರೋಗ್ಯಕ್ಕೆ ಒಳಗಾಗುತ್ತಾಳೆ. ಆಕೆಯ ಪತಿ ಮಿಚ್ ಅವಳನ್ನು ತಕ್ಷಣವೇ ಆಸ್ಪತ್ರೆಗೆ ಕೊಂಡೊಯ್ಯುತ್ತಾನಾದರೂ ಕೆಲವೇ ಕ್ಷಣಗಳಲ್ಲಿ ಆಕೆಯ ಜೀವ ಹೋಗಿರುತ್ತದೆ. ಅಲ್ಲಿಂದ ಮಿಚ್ ಮನೆಗೆ ಬರುವುದರೊಳಗೆ ಮಗನೂ ಸಹ ಪ್ರಾಣ ಕಳೆದುಕೊಂಡಿರುತ್ತಾನೆ. ತಕ್ಷಣವೇ ಕಾರ್ಯಪ್ರವೃತ್ತರಾಗುವ ಆರೋಗ್ಯ ಇಲಾಖೆ ಆತನನ್ನು quarantine ನಲ್ಲಿರಿಸಿ ತಪಾಸಣೆ ನಡೆಸಿದಾಗ ಆತನಿಗಿರುವ ರೋಗನಿರೋಧಕ ಶಕ್ತಿಯಿಂದಾಗಿ ಈ ಸೋಂಕು ತಗುಲಿಲ್ಲ ಎಂದು ಖಾತ್ರಿಯಾಗುತ್ತದೆ.




ಬೆಥ್'ಳ ಬಿಸಿನೆಸ್ ಟ್ರಿಪ್ ಬಗ್ಗೆ ತಿಳಿದ ಆರೋಗ್ಯ ಇಲಾಖೆ ಆಕೆ ಅಲ್ಲಿ ಯಾರನ್ನೆಲ್ಲ ಭೇಟಿಯಾದಳು ಎಂದು ಸೋಂಕಿನ ಮೂಲ ಪತ್ತೆ ಹಚ್ಚಲು ಶುರುಮಾಡುತ್ತದೆ. ಇನ್ನೊಂದು ಎಳೆಯಲ್ಲಿ ಈ ವೈರಸ್'ಗೆ ಔಷಧ ಕಂಡು ಹಿಡಿಯಲು ಇನ್ನೊಂದು ತಂಡ ಹೊರಡುತ್ತದೆ. ಮತ್ತೊಂದು ತಂಡ ಸೋಂಕು ತಗುಲಿದವರನ್ನು ಸಂಪರ್ಕಿಸಿ ಅವರು ಭೇಟಿ ಮಾಡಿದವರ ಮಾಹಿತಿ ಸಂಗ್ರಹಿಸಿ, ಅವರಿಂದ ಇನ್ನಷ್ಟು ಜನರಿಗೆ ಸೋಂಕು ಹರಡದಂತೆ ತಡೆಯಲು ಪ್ರಯತ್ನಿಸುತ್ತದೆ. ಮುಂದೆ ಏನೆಲ್ಲ ಜರುಗುತ್ತದೆ ಅನ್ನುವ ವಿವರವಾದ ಕಥೆಯೇ ಈ ಸಿನಿಮಾ "Contagion"




ಈ ಸಿನಿಮಾ ಬಗ್ಗೆ Height of Coincidence ಅಂತ ಯಾಕೆ ಪ್ರಸ್ತಾಪ ಮಾಡಿದೆ ಅಂದರೆ,




-ಈ ಸಿನಿಮಾ ಕೂಡ ಒಂದು ವೈರಸ್ ಇಡೀ ಪ್ರಪಂಚವನ್ನು ಗೋಳು ಹೊಯ್ದುಕೊಳ್ಳುವ ಕಥೆಯ ಕುರಿತದ್ದು

- ಕಥೆಯ ಅರಂಭ ಕೂಡ ಹಾಂಕ್'ಕಾಂಗ್ ಅಂದರೆ ಏಷ್ಯಾದಿಂದಲೇ ಶುರುವಾಗುತ್ತೆ

- ಇಲ್ಲಿ ವಿವರಿಸುವ ವೈರಸ್ ಕೂಡ ಗಾಳಿಯ ಮೂಲಕ ಹರಡುವುದಿಲ್ಲ. ಬದಲಿಗೆ ಸೋಂಕಿನ ವ್ಯಕ್ತಿ ಕೆಮ್ಮಿದಾಗ/ಸೀನಿದಾಗ ಆತನಿಂದ ಹೊರಬೀಳುವ ಹನಿಗಳು ಯಾವುದಾದರೂ ವಸ್ತುವಿನ ಮೇಲ್ಮೈ ಮೇಲಿದ್ದಾಗ, ಅದನ್ನು ಮುಟ್ಟುವ ಮತ್ತು ನಂತರ ತಮ್ಮ ಮುಖ-ಕಣ್ಣು-ಮೂಗು-ಬಾಯಿಗಳನ್ನು ಮುಟ್ಟಿಕೊಳ್ಳುವ ಇತರೆ ಆರೋಗ್ಯಕರ ವ್ಯಕ್ತಿಗಳಿಗೆ ಈ ಸೋಂಕು ಸುಲಭವಾಗಿ ಹರಡುತ್ತದೆ.

- ಈ ಸೋಂಕಿಗೆ ಕಾರಣ ಕೂಡ ಪ್ರಾಣಿಗಳಿಂದಲೇ ಅಂದರೆ ಹಂದಿ ಮತ್ತು ಬಾವಲಿಯಿಂದ ಮನುಷ್ಯನಿಗೆ ಹರಡಿದ ವೈರಸ್ ಆಗಿರುತ್ತದೆ.

- ಈ ವೈರಸ್ ಕೂಡ ದೇಶದಿಂದ ದೇಶಕ್ಕೆ ವಿಮಾನದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಂದಲೇ ಹರಡುತ್ತದೆ.

- ಮೊದಲಿಗೆ ಈ ವೈರಸ್'ನ ಗುಣಲಕ್ಷಣಗಳನ್ನು ಪತ್ತೆ ಮಾಡುವಾಗಲೇ ಅದಕ್ಕಾಗಿಯೇ ಬಂದ ವೈದ್ಯಾಧಿಕಾರಿಗೂ ಕೂಡ ತಗುಲುತ್ತದೆ.

- ವಿಶ್ವ ಆರೋಗ್ಯ ಸಂಸ್ಥೆ (WHO) ತಕ್ಷಣವೇ ಪ್ರತಿಕ್ರಿಯಿಸಿ ಈ ಸೋಂಕಿನ ಕಾರಣ ಮತ್ತು ಲಸಿಕೆ ಕಂಡು ಹಿಡಿಯಲು ಪ್ರಯತ್ನಿಸುವುದು.

- ದೊಡ್ಡ ದೊಡ್ಡ ನಗರಗಳ ಎಲ್ಲ ನಾಗರಿಕರಿಗೆ ದಿಗ್ಬಂಧನ (quarantine) ವಿಧಿಸುವುದು.

- ಸೋಂಕು ತಗುಲಿದವರನ್ನು ಸಂಪರ್ಕಿಸಿ ಅವರು ಭೇಟಿ ಮಾಡಿದವರ ಮಾಹಿತಿ ಸಂಗ್ರಹಿಸಿ, ಅವರಿಂದ ಇನ್ನಷ್ಟು ಜನರಿಗೆ ಸೋಂಕು ಹರಡದಂತೆ ತಡೆಯಲು ಪ್ರಯತ್ನಿಸುವುದು. ಇದನ್ನು Contact Tracing ಅನ್ನುತ್ತಾರೆ

- ವೈರಸ್'ನ ಕುರಿತಾದ ಬಯೋಲಾಜಿಕಲ್ ವಾರ್ಫೇರ್ ನ ಬಗ್ಗೆ ಊಹಾಪೋಹ

- ಲಸಿಕೆ/ಮದ್ದನ್ನು ತಾವೇ ಕಂಡು ಹಿಡಿದೆವೆಂದು ಹೇಳಿಕೊಳ್ಳುವ ತವಕ

- ಪರಿಸ್ಥಿತಿಯ ಲಾಭ ಪಡೆದು ಗಾಳಿಸುದ್ದಿ ಹಬ್ಬಿಸಿ ತಮ್ಮ ಔಷಧ ಹೆಚ್ಚು ಮಾರಾಟವಾಗುವಂತೆ ನೋಡಿಕೊಳ್ಳುವುದು.




ಹೀಗೆ ನೂರಾರು ವಿಷಯಗಳಿವೆ. ಅಷ್ಟೇ ಅಲ್ಲ ಇದರ ಹೊರತಾಗಿ ಈ ಬಗೆಯ ವೈರಸ್ ಸೋಂಕಿನ ಸಮಸ್ಯೆ ತಾರಕಕ್ಕೇರಿದಾಗ ಆಗುವ ಪರಿಣಾಮಗಳೇನು? ಆಹಾರಕ್ಕಾಗಿ ಹೊಡೆದಾಟ, ಔಷಧಕ್ಕಾಗಿ ಹೊಡೆದಾಟ ಹೀಗೆ ಅನೇಕ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಲಾಗಿದೆ. ಈ ಸಿನಿಮಾ ನೋಡುವಾಗ ಸೋಂಕಿನ ತೀವ್ರತೆ ಮತ್ತು ವೈದ್ಯರ ಕಷ್ಟ ನಮಗರ್ಥವಾಗಬಹುದು. ವೈದ್ಯಲೋಕವೇ ಒಪ್ಪಿಕೊಳ್ಳುವ ಹಾಗೆ ವಾಸ್ತವಕ್ಕೆ ಹತ್ತಿರವಾಗುವಂತೆ ಲಸಿಕೆ ಕಂಡುಹಿಡಿಯುವ ಪ್ರಕ್ರಿಯೆಯನ್ನು ತೋರಿಸಲಾಗಿದೆ.




ನಿಮಗೆ ಗೊತ್ತಿರಲಿ. ಕೊರೋನಾ ಸಮಸ್ಯೆ ಶುರುವಾದ ಮೇಲೆ ಅಂತರ್ಜಾಲದಲ್ಲಿ ಹುಡುಕಾಡಿದ ಸಿನಿಮಾಗಳ ಪೈಕಿ Steven Soderberg ನಿರ್ದೇಶನದ ಈ ಸಿನಿಮಾ " Contagion" ಮೊದಲ ಸ್ಥಾನದಲ್ಲಿದೆ.




ತಪ್ಪದೇ ನೋಡಿ. ನೋಡಬೇಕೆನ್ನುವವರಿಗೆ ಅಮೇಜಾನ್ ಪ್ರೈಮ್'ನಲ್ಲಿ ಸಿಗುತ್ತದೆ.






-ಸಂತೋಷ್ ಕುಮಾರ್ ಎಲ್.ಎಂ.

ಬೆಂಗಳೂರು

Thursday, March 19, 2020

ನನ್ನ ಪ್ರಕಾರ(2019)....Kannada Cinema

Image may contain: 4 people, glasses and text

ಪೋಸ್ಟರ್ ನೋಡಿ ಸಿನಿಮಾದ ಗುಣಮಟ್ಟವನ್ನು ನಿರ್ಧರಿಸಬಾರದು ಅಂತ ಅದಕ್ಕೆ ಹೇಳೋದು, ದಿಯಾ, ಲವ್ Mocktail ಸಿನಿಮಾಗಳು ಜನಗಳನ್ನು OTT platformಗಳ ಮೂಲಕ ತಲುಪಿದ ಮೇಲೆ ಮುಂಚೆಗಿಂತಲೂ ಸದ್ದು ಮಾಡುತ್ತಿವೆ.

ದಿಯಾ, ಲವ್ Mocktail ಗಳಂತಹ ಸಿನಿಮಾಗಳು ಲವ್ ಸ್ಟೋರಿಗಳನ್ನು ಇಷ್ಟಪಡುವವರಿಗಾದರೆ, ಥ್ರಿಲ್ಲರ್ ಸಿನಿಮಾಗಳನ್ನು ಇಷ್ಟಪಡುವವರಿಗಾಗಿಯೇ ಇರುವ ಸಿನಿಮಾ "ನನ್ನ ಪ್ರಕಾರ". ಇದೂ ಪ್ರೈಮ್'ನಲ್ಲಿದೆ ನೋಡಿ.

ಇದೊಂದು ಸಸ್ಪೆನ್ಸ್, ಥ್ರಿಲ್ಲರ್, ಮರ್ಡರ್-ಮಿಸ್ಟ್ರಿ ಸಿನಿಮಾ. ಕಥೆಯನ್ನು ಅಚ್ಚುಕಟ್ಟಾಗಿ ಹೆಣೆಯಲಾಗಿದೆ. ಒಂದು ಕೊಲೆ, ದಾರಿ ತಪ್ಪಿಸುವ ವಿಷಯಗಳು, ಸಂಶಯಪಟ್ಟು ಇನ್ನೆಲ್ಲೋ ಸಾಗುವ ಕಥೆ, ಇವನೇ ಅಂತ ನೋಡಿದರೆ ಆತ ಅಪರಾಧಿಯಲ್ಲ, ಒಂದು ಕೊಲೆಗೆ ಸಂಬಂಧಪಟ್ಟ ಎಲ್ಲ ವ್ಯಕ್ತಿಗಳು ಸಿಕ್ಕ ಮೇಲೂ ಅಪರಾಧ ಹೇಗೆ ನಡೆದಿರಬಹುದು ಅಂತಲೂ ಸರಿಯಾಗಿ ಅರ್ಥವಾಗದಿರುವಿಕೆ....ಹೀಗೆ ಒಂದು ಮರ್ಡರ್ ಮಿಸ್ಟ್ರಿ ಸಿನಿಮಾಗೆ ಬೇಕಾಗುವ ಎಲ್ಲ ವಿಷಯಗಳು ಇದರಲ್ಲಿವೆ.

ಅದರಲ್ಲೂ ಕಥೆ ಒಂದು ಜಾಗದಲ್ಲಂತೂ ಏನಾಗುತ್ತಿದೆ ಅಂತಲೇ ತಿಳಿಯುವುದಿಲ್ಲ. ಪ್ರಕರಣವನ್ನು ಬೇಧಿಸಲು ಹೊರಡುವ ಅಶೋಕ್ ಜೊತೆ ನಮಗೂ ಅದೆಷ್ಟು ಕ್ಲಿಷ್ಟಕರ ಅಂತ ಅನ್ನಿಸುತ್ತದೆ. ಈ ಸನ್ನಿವೇಶದಲ್ಲಿ ಪ್ರೇಕ್ಷಕನನ್ನೂ ಚಿಂತನೆಗೆ ಹಚ್ಚುವ ಕಥನ ಶೈಲಿ ತಮಿಳಿನ ಸೂಪರ್ ಹಿಟ್ ಚಿತ್ರ "ದುರುವಂಗಳ್ ಪದಿನಾರು" ನೆನಪಾಯಿತು. ಅಷ್ಟರಮಟ್ಟಿಗೆ ಕಥೆ ತುಂಬಾ ಇಷ್ಟವಾಯಿತು.

ಕಥಾ ನಿರೂಪಣೆ ಇನ್ನಷ್ಟು ಗಂಭೀರವಾಗಿ, ಬಿಗಿಯಾಗಿದ್ದರೆ ಸಿನಿಮಾದ Output ಇನ್ನೂ ಚೆನ್ನಾಗಿರುತ್ತಿತ್ತು. ಅಶೋಕ್ ಪಾತ್ರದಲ್ಲಿ ಕಿಶೋರ್ ಸಕ್ಕತ್. ಅವರೊಬ್ಬರೇ ಸಾಕು ಸಿನಿಮಾವನ್ನು ಹೊತ್ತೊಯ್ಯಲು. ಅವರ ಪತ್ನಿಯ ಪಾತ್ರದಲ್ಲಿ ಪ್ರಿಯಾಮಣಿ ನಟಿಸಿದ್ದಾರೆ. ಆ ಪಾತ್ರದಿಂದ ಕಥೆಗೆ ತಿರುವು ಸಿಗುತ್ತದಾದರೂ ಅಷ್ಟೊಂದು ಅವಕಾಶವಿಲ್ಲ. ಆ ಪಾತ್ರಕ್ಕೆ ಜನಪ್ರಿಯರಾದ ಪ್ರಿಯಾಮಣಿ ಬದಲಾಗಿ ಇನ್ನಾರಾದರೂ ಅವಕಾಶಕ್ಕಾಗಿ ಕಾಯುತ್ತಿರುವ ಪ್ರತಿಭೆಗಳಿಗೆ ಕೊಡಬಹುದಿತ್ತು. ಬಹುಶಃ ಸಿನಿಮಾದ ಪ್ರಚಾರಕ್ಕೆ ಸುಲಭವಾಗಲಿ ಅಂತಿರಬಹುದಾ ಗೊತ್ತಿಲ್ಲ.

ಮೊದಲರ್ಧ ತಾಸಿನ ಸಿನಿಮಾದಲ್ಲಿ ಯಾಕೋ ಪಾತ್ರಧಾರಿಗಳ ನಟನೆ ಸಹಜವಾಗಿಲ್ಲ ಅನ್ನಿಸಿತು. ಇನ್ನೇನು ಬೋರ್ ಹೊಡೆಸಲು ಶುರು ಅನ್ನುವಷ್ಟರಲ್ಲಿ ಮತ್ತೆ ಕಥೆ TakeOff ತೆಗೆದುಕೊಂಡಿತು. ಅಲ್ಲಿ ಮಯೂರಿ ಚೆನ್ನಾಗಿ ನಟಿಸಿದ್ದಾರೆ. ಇಂಥ ಕಥೆಗಳ ಕನ್ನಡ ಸಿನಿಮಾಗಳು ಬರುತ್ತಿರುವುದು ಖುಶಿಯ ವಿಚಾರ. ನಿರ್ದೇಶಕರು ಇದೇ Genreನ ಮುಂದಿನ ಸಿನಿಮಾಗಳನ್ನು ಇನ್ನಷ್ಟು ಅಚ್ಚುಕಟ್ಟಾಗಿ ಮಾಡುತ್ತಾರೆಂಬುದರಲ್ಲಿ ಅನುಮಾನವೇ ಇಲ್ಲ.

ಇಷ್ಟವಾಯಿತು. ನೋಡಿರದಿದ್ದರೆ ಖಂಡಿತ ನೋಡಿ. ಅಮೇಜಾನ್ ಪ್ರೈಮ್'ನಲ್ಲಿದೆ.

-Santhosh Kumar LM
19-Mar-2020

Friday, March 13, 2020

Mardaani-2.....Hindi Movie

Image result for mardaani 2

ಇಷ್ಟವಾಯ್ತು.....
ಹಾಡುಗಳಿಲ್ಲ, ಬೋರಿಂಗ್ ಅನ್ನುವ ಯಾವುದೇ ಅಂಶಗಳಿಲ್ಲ.
ಹೀರೋ(-ಇನ್) ಬಿಲ್ಡಪ್ಪುಗಳಿಲ್ಲ. ಕಥೆಯೇ ಈ ಸಿನಿಮಾದ ಜೀವಾಳ.


ದಿಟ್ಟ ಮನೋಭಾವದ ಹೆಣ್ಣುಮಕ್ಕಳನ್ನು ಕಂಡರೆ ಕೆಂಡಕಾರುವ ಆ ವಿಕೃತ ಮನಸ್ಸಿನ ಬಾಲಾಪರಾಧಿ. ಆತನಿಂದಾಗುವ ಅಪಹರಣ ಮತ್ತು ಅತ್ಯಾಚಾರ. ಆತನನ್ನು ಹಿಡಿಯಲು ಹೊರಡುವ ದಿಟ್ಟ ಪೊಲೀಸ್ ಅಧಿಕಾರಿ ನಾಯಕಿ. ಆಕೆಯ ದಿಟ್ಟತನದಿಂದಲೂ ವಿಚಲಿತನಾಗುವ ಖಳ. ಇದೀಗ ಇವರಿಬ್ಬರ ಮಧ್ಯೆಯೇ ಕಣ್ಣಾಮುಚ್ಚಾಲೆಯಾಟ. ಕಣ್ಣಮುಂದೆಯೇ ನಿಂತು ಆಟವಾಡಿಸುವ ಚತುರ ಖಳ! ಹೀಗೆ ಕೊನೆಯವರೆಗೆ ಸಾಗುವ ಕಥೆಗೊಂದು ಅಂತ್ಯ.


ಅತ್ಯಾಚಾರಿಗಳ ಬೆನ್ನಟ್ಟಿ ಹೋಗುವ ಕಥೆಗಳಿರುವ ಅನೇಕ ಸಿನಿಮಾಗಳು ಬಂದಿವೆ. ಆದರೆ ಇಲ್ಲಿ ಕೊಂಚ ಧೈರ್ಯದಿಂದ ಮುಂದೆ ಬಂದರೂ ಹೆಣ್ಣುಮಕ್ಕಳ ನಡತೆಯನ್ನೇ ಕೆಟ್ಟದಾಗಿ ಕಾಣುವ ಸಮಾಜದ ಬಗ್ಗೆ ಹೇಳುತ್ತಾರೆ. ಇಡೀ ಸಿನಿಮಾದಲ್ಲಿ ನಮ್ಮ ಗಮನ ಸೆಳೆಯುವುದು ಖಳ ಪಾತ್ರಧಾರಿ ವಿಶಾಲ್ ಜೇತ್ವಾ. ಅವರಿಗೆ ಒಳ್ಳೆಯ ಭವಿಷ್ಯವಿದೆ.


ನೋಡಿರದಿದ್ದರೆ ನೋಡಿ. ಪ್ರೈಮ್'ನಲ್ಲಿದೆ.


-Santhosh Kumar LM
13-Mar-2020

Thursday, March 12, 2020

ಪ್ಯಾರಾಸೈಟ್ (2019).....Korean Movie





ಕೊರಿಯನ್ ಸಿನಿಮಾ ಪ್ಯಾರಾಸೈಟ್ ನೋಡಲು ಶುರುವಾದಾಗ ಇದು ಸಾಮಾನ್ಯವಾದ ಕಾಮಿಡಿ ಸಿನಿಮಾ ಅನ್ನಿಸಿತು. ಆದರೆ ಮಧ್ಯದಲ್ಲಿ ಇದ್ದಕ್ಕಿದ್ದಂತೆ ಥ್ರಿಲ್ ಕೊಡುವ ಅಂಶಗಳು ಶುರುವಾದ ಮೇಲೆ ಇದು ಬೇರೆಯದೇ ರೀತಿಯ ಸಿನಿಮಾ ಅಂತ ಸ್ಪಷ್ಟವಾಯಿತು.

ಸಿನಿಮಾ ಇಷ್ಟವಾಯಿತು. ಗಮನ ಸೆಳೆದಿದ್ದು ಎಂದರೆ ನಮ್ಮೊಳಗೆ ಕಾಣುವ ಸಮಸ್ಯೆಯೊಂದನ್ನು ಗೋಳು ಹೊಯ್ದುಕೊಳ್ಳುವ ಹಾಗೆ ಹೇಳದೆ ಕಾಮಿಡಿಯಲ್ಲಿ ಹೇಳುತ್ತ ಹೋಗಿ, ಕಡೆಗೆ ಗಂಭೀರ ವಿಷಯವೊಂದನ್ನು ಹೇಳುವುದಿದೆಯಲ್ಲ. ಅದು ನಿಜವಾಗಿ ಕೃತಿಯೊಂದನ್ನು ಗೆಲ್ಲಿಸುತ್ತದೆ. ಇದೇ ಕಾರಣಕ್ಕಾಗಿ ಅಲ್ಲಿನ ಪರಿಸರವನ್ನು ತೋರಿಸುತ್ತ ಕಥೆ ಹೇಳುವ ಪ್ಯಾರಾಸೈಟ್ ಇಷ್ಟವಾದದ್ದು.

ಈ ಸಿನಿಮಾದಲ್ಲಿ ಶ್ರೀಮಂತನಾದ ಪಾರ್ಕ್, ಕೆಲಸದಾಳು ಕಿಮ್'ನಿಂದ ಬರುವ ವಾಸನೆಯ ಬಗ್ಗೆ ಹೇಳುವಾಗ ಸಿನಿಮೀಯ ಅನಿಸಿಕೊಳ್ಳುತ್ತದೆ. ಆದರೆ ಯೋಚಿಸಿ ನೋಡಿದರೆ ಅದು ಕೊರಿಯಾದಲ್ಲಷ್ಟೇ ಅಲ್ಲ. ಪ್ರಪಂಚದ ಎಲ್ಲ ದೇಶಗಳಲ್ಲೂ ಇವೆ. ನಮ್ಮಲ್ಲೇ ನೋಡಿ. ಬಿಎಂಟಿಸಿ ಬಸ್ಸಿನಲ್ಲಿ ಪ್ರಯಾಣ ಮಾಡುವ ಕೆಲಸಗಾರರ ಬೆವರಿನ ವಾಸನೆಯ ಬಗ್ಗೆ ಕೆಲವರು ಅಸಹ್ಯಪಟ್ಟುಕೊಳ್ಳುವುದನ್ನು ನೋಡಿದ್ದೇನೆ. ಅವರಿಗೆ ಬೇರೆ ಆಯ್ಕೆಯಾದರೂ ಏನಿದೆ. ಆತ ಊಬರ್/ಓಲಾ ಕ್ಯಾಬ್'ನಲ್ಲಿ ಪ್ರಯಾಣಿಸಲು ಶಕ್ತನಲ್ಲ. ಇರುವುದರಲ್ಲಿ ಕಡಿಮೆ ಬೆಲೆಯ ಬಿಎಂಟಿಸಿಯಷ್ಟೇ ಅವನ ಪಾಲಿಗೆ. ಬೆಳಗಿನಿಂದ ಕೂಲಿ ಮಾಡಿ ಬೆವರು ಸುರಿಸಿ ಸಂಜೆ ಮನೆಗೆ ಮರಳುವಾಗ ಆತನ ಮೈಯಿಂದ ಬೆವರಿನ ವಾಸನೆಯ ಬದಲಿಗೆ ಪರಿಮಳ ಹೊರಡಲಿ ಅನ್ನುವುದು ಎಷ್ಟು ಅವಾಸ್ತವಿಕ ಅನ್ನಿಸುತ್ತೆ ಯೋಚಿಸಿ. ಪ್ಯಾರಾಸೈಟ್'ನಲ್ಲೂ ಅಷ್ಟೇ. ಅಲ್ಲಿ ಆ ವಾಸನೆಗೆ ಕಾರಣ ಅವರು ವಾಸ ಮಾಡುವ ಕೆಳಮಾಳಿಗೆ ಅನ್ನುವ ವಾಸ್ತವ ಮನಸ್ಸಿಗೆ ನೋವು ತರುತ್ತದೆ.

ನಮ್ಮಲ್ಲಿ ಈ ಬಗೆಯ ಸಮಸ್ಯೆಗಳ ವಿಷಯಗಳಿಲ್ಲವೇ? ನೂರಾರು ಇವೆ. ಆದರೆ ಸಮಸ್ಯೆಯೊಂದನ್ನೇ ತೋರಿಸದೆ, ಅದನ್ನು ಸಿನಿಮಾದ ಕಥೆಯಲ್ಲಿ ಹದವಾಗಿ ಬೆರೆಸಿ ಈ ಬಗೆಯಲ್ಲಿ ಕೊಡಲು ನಿರ್ದೇಶಕರು ಮನಸ್ಸು ಮಾಡಬೇಕಷ್ಟೇ.

ಈ ಸಿನಿಮಾ ಆಸ್ಕರ್'ಗೆ ಎಷ್ಟು ಅರ್ಹ ಅಂತ ತಲೆಕೆಡಿಸಿಕೊಳ್ಳಬೇಕಿಲ್ಲ. ಇಂಗ್ಲೀಷ್ ಅಲ್ಲದ ಸಿನಿಮಾವೊಂದು ಮೊದಲ ಬಾರಿಗೆ ನಾಲ್ಕು ಆಸ್ಕರ್ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡು ಪ್ರಪಂಚದ ಗಮನ ಸೆಳೆಯಿತಲ್ಲ. ಅದು ಈ ಸಲದ ಆಸ್ಕರ್ ಪ್ರಶಸ್ತಿಯ ವಿಶೇಷತೆ. ಮುಂದಿನ ವರ್ಷಗಳಲ್ಲಿ ಉಳಿದ ದೇಶದ ಭಾಷೆಗಳ ಸಿನಿಮಾಗಳೂ ಪ್ರಶಸ್ತಿಗಳನ್ನು ಬಾಚಿಕೊಳ್ಳಲು ಇದು ಆರಂಭವಷ್ಟೇ ಅಂದುಕೊಳ್ಳೋಣ.

ಆಸ್ಕರ್ ಬಂದಿದೆ. ಕಲಾತ್ಮಕ ಸಿನಿಮಾಗಳನ್ನು ನೋಡುವವರು ಇದನ್ನು ಮೆಚ್ಚಿದ್ದಾರೆ, ನಮಗಿಷ್ಟವಾಗುತ್ತದೋ ಇಲ್ಲವೋ ಅಂದುಕೊಂಡು ಸುಮ್ಮನಾಗದಿರಿ. ಸಬ್'ಟೈಟಲ್ ಓದಿ ಸಿನಿಮಾ ನೋಡುವ ಅಭ್ಯಾಸ ನಿಮಗಿದ್ದರೆ ಖಂಡಿತ ನೋಡಿ. ಇಷ್ಟವಾಗುತ್ತದೆ.

#Santhosh Kumar LM
12-Mar-2020

Friday, February 7, 2020

ತೇಜೋ-ತುಂಗಭದ್ರಾ By Vasudhendra



ಇದು ಇತಿಹಾಸದ ಪುಸ್ತಕವಲ್ಲ. ಎಲ್ಲಿಯೂ ಯಾವ ಇಸವಿಯಲ್ಲಿ ಏನಾಯಿತು ಅನ್ನುವ ಪಠ್ಯವನ್ನು ಎಲ್ಲೂ ಹೇಳಿಲ್ಲ. ಆ ಬಗೆಯ ಪುಸ್ತಕವನ್ನು ನೀವು ಎದುರು ನೋಡುತ್ತಿದ್ದರೆ ದಯವಿಟ್ಟು ಈ ಪುಸ್ತಕ ನಿಮಗೆ ಸರಿಯಾದ ಆಯ್ಕೆಯಲ್ಲ. ಆದರೆ ಒಂದು ಕಾಲಮಾನವನ್ನು ತನ್ನ ಕೃತಿಗೆ ಆಯ್ದುಕೊಂಡು, ಆ ಕಾಲಮಾನದಲ್ಲಿ ಬರುವ ಇತಿಹಾಸದ ಘಟನೆಗಳಿಗೆ ಲೇಖಕ ತನ್ನ ಕಾಲ್ಪನಿಕ ಕಥೆಯನ್ನು ಹೆಣೆದಿರುವಂತಹ ರೋಚಕ ಕಥೆ ಇದರೊಳಗಿದೆ.



ಈ ಕಾದಂಬರಿಯಲ್ಲಿ ಒಂದೇ ಸಮುದ್ರದ ಎರಡು ದಡಗಳಿವೆ. ಒಂದು ಪೋರ್ಚುಗಲ್ ದೇಶದ ಲಿಸ್ಬನ್'ನತ್ತ ಚಾಚಿಕೊಂಡಿದ್ದರೆ ಇನ್ನೊಂದು ಭಾರತದ ಗೋವಾದಲ್ಲಿದೆ. ಕಥೆಯ ಪಾತ್ರಗಳು ಆ ದಡದಿಂದ ಈ ದಡಕ್ಕೆ ಪ್ರಯಾಣಿಸಬೇಕು. ಅದಕ್ಕೆ ಇತಿಹಾಸದ ಮಹತ್ತರವಾದ ಪ್ರಯಾಣವೊಂದರ ಸಾಕ್ಷಿಯಿದೆ. ಆ ಪ್ರಯಾಣದ ಮುಂಚಿನ ಕೆಲವರ್ಷಗಳಲ್ಲಿ ಲಿಸ್ಬನ್ ನಲ್ಲಿ ಅನೇಕ ಘಟನೆಗಳಾಗಿವೆ. ಅದೇ ರೀತಿ ಪ್ರಯಾಣ ನಡೆಯುವಾಗಲೂ ಮತ್ತು ಪ್ರಯಾಣ ಮುಗಿದ ತರುವಾಯವೂ ಇತ್ತ ಭಾರತದಲ್ಲೂ ಅನೇಕ ಗುರುತಿಟ್ಟುಕೊಳ್ಳಬೇಕಾದ ಘಟನೆಗಳಿವೆ. ಇವೆಲ್ಲವನ್ನೂ ಬಳಸಿಕೊಂಡು ಆ ಸಮಯದಲ್ಲಿ ಎರಡೂ ದೇಶಗಳಲ್ಲಿ ನಡೆದ ಸಾಮಾಜಿಕ ಜೀವನದ ಅನೇಕ ವಿಷಯಗಳನ್ನು ಬಳಸಿಕೊಂಡು ಈ ಕಥೆಯನ್ನು ಹೆಣೆಯಲಾಗಿದೆ. ಇದೇ ಈ ಕಾದಂಬರಿಯ ಕಥೆ ಹೆಣೆದ ತಂತ್ರ.



ಬಹುಶಃ ಈ ಕಾದಂಬರಿಯಲ್ಲಿ ಹೇಳುವ ಹಾಗೆ ಸಾಮಾಜಿಕ ವಿಷಯಗಳನ್ನು ನನ್ನ ಹೈಸ್ಕೂಲಿನ ಸಮಾಜ ಪಠ್ಯದಲ್ಲಿ ಹೇಳಿದ್ದರೆ ನನಗೆ ಆ ಪುಸ್ತಕ ಇನ್ನೂ ಹೆಚ್ಚು ಅರ್ಥವಾಗುತ್ತಿತ್ತೇನೋ! ಉಪ್ಪಿಟ್ಟು ಇಷ್ಟವಿಲ್ಲ ಅಂದಾಗ ಅಮ್ಮ ಅದಕ್ಕೆ ಘಮ್ಮೆನ್ನುವ ಅವರೇಕಾಳು ಹಾಕಿ "ಈಗ ನೋಡು" ಅನ್ನುವಂತಿದೆ ಈ ಕಥಾತಂತ್ರ. ಒಂದೊಂದೇ ಅವರೇಕಾಳನ್ನು ಉಪ್ಪಿಟ್ಟಿನ ಜೊತೆ ತಿನ್ನುತ್ತ ಕಡೆಗೆ ನೋಡಿದರೆ ತಟ್ಟೆ ಖಾಲಿ. ಬಹುಶಃ ಅನೇಕ ಕಡೆ ಈ ಕಾದಂಬರಿ ರೋಚಕವೆನಿಸುವ ಕಥೆ ಹೇಳಿರುವುದರಿಂದಲೇ ಏನೋ 450 ಪುಟಗಳಿದ್ದರೂ ನನಗೆ ತನ್ನಷ್ಟಕ್ಕೆ ತಾನೇ ಓದಿಸಿಕೊಂಡು ಹೋಯಿತು. ಇಲ್ಲೇ ಒಂದು ಕೃತಿಯಾಗಿ ಇದರ ಗೆಲುವಿದೆ. ನಮಗೆ ಗೊತ್ತೇ ಇರದ ಅನೇಕ ಬೆಚ್ಚಿಬೀಳಿಸುವ ವಿಷಯಗಳನ್ನು ಕಥನದ ಭಾಗವಾಗಿಯೇ ಲೇಖಕರು ನಮಗೆ ಪರಿಚಯ ಮಾಡಿಕೊಡುತ್ತಾರೆ.


ನೆನಪಿಡಿ. ಇತಿಹಾಸವೆಂದರೆ ನಮಗೆ ಕಣ್ಮುಂದೆ ಬರುವುದೇ ರಾಜ, ಅವನಿಗಿದ್ದ ರಾಣಿಯರು, ಅವನ ಸಾಮ್ರಾಜ್ಯದ ವಿಸ್ತಾರ, ಯಾವ ಇಸವಿಯಲ್ಲಿ ಯಾವ ಯುದ್ಧ ಗೆದ್ದ, ಎಷ್ಟು ಸಂಪತ್ತು ಗಳಿಸಿದ. ಮತ್ತು ಬಹುತೇಕ ವಿವರಗಳಲ್ಲಿ ಆತನ ಸಾಮ್ರಾಜ್ಯ ಸುಭಿಕ್ಷವಾಗಿತ್ತು ಅನ್ನುವ ಸಾಲಿನೊಂದಿಗೆ ಕೊನೆಗೊಳ್ಳುತ್ತದೆ. ಈ ಕಾದಂಬರಿಯಲ್ಲಿ ರಾಜರ ಬಗ್ಗೆ ಗುಣಗಾನವಿಲ್ಲ. ರಾಜರು ಪಾತ್ರಗಳಾಗಿ ಬರುತ್ತಾರಾದರೂ ಕಥೆಯ ಯಾವುದೋ ಒಂದು ಭಾಗದಲ್ಲಿ ಮೂಲಕಥೆಗೆ ತಿರುವು ಕೊಟ್ಟು ಹೋಗುತ್ತಾರೆ. ಆದರೆ ಅವರ ಆಳ್ವಿಕೆಯ ಸಮಯದ ಸಾಮಾಜಿಕ ನಂಬಿಕೆಗಳು, ಆಚರಣೆಗಳು, ವಿವಿಧ ಮಹತ್ತರ ಘಟನೆಗಳು ಹೇಗೆ ಜನಸಾಮಾನ್ಯರ ಜೀವನದಲ್ಲಿ ಪರಿಣಾಮ ಬೀರಿದವು ಅನ್ನುವುದನ್ನು ಕಥೆ ಓದುತ್ತಲೇ ತಿಳಿಯಬಹುದು. ಮತ್ತೊಮ್ಮೆ ಹೇಳುವುದಾದರೆ ಇವೆಲ್ಲ ಘಟನೆಗಳನ್ನು ಪಾಠ ಹೇಳುವಂತೆ ಎಲ್ಲೂ ಹೇಳಿಲ್ಲ. ಕಥೆಯ ಭಾಗವಾಗಿಯೇ ಅವು ಚಿತ್ರಿತವಾಗಿವೆ. ಪುಸ್ತಕದ ಪ್ರತೀ ಪುಟದಲ್ಲು ಗುರುತಿಟ್ಟುಕೊಳ್ಳಬಲ್ಲ ಅನೇಕ ಸಾಲುಗಳಿವೆ. ಅಲ್ಲಿ ಪಾತ್ರಗಳ ನಡುವೆ ವಿಚಾರವೊಂದರ ಬಗ್ಗೆ ತರ್ಕ ನಡೆಯುತ್ತದೆ. ಆ ಸಾಲುಗಳು ಕಥೆಗೂ ಚಂದ ಕಾಣುತ್ತದೆ. ಕಥೆಯ ಹೊರಗೂ ಓದಲು ಅರ್ಥ ಕೊಡುವಂತಿವೆ.


ಈ ಕಾದಂಬರಿಯಲ್ಲಿ ಬರುವ ಅನೇಕ ವಿಷಯಗಳನ್ನು ಪ್ರಸ್ತುತ ಪ್ರಪಂಚಕ್ಕೂ ತಳುಕು ಹಾಕಿಕೊಳ್ಳಬಹುದು.

*******************************************************************************************


ಗ್ಯಾಬ್ರಿಯಲ್ ಈ ಕಥೆಯಲ್ಲಿರುವ ಅನೇಕ ನಾಯಕರುಗಳಲ್ಲಿ ಒಬ್ಬ ನಾಯಕ. ಆತ ಚಿಕ್ಕವನಾಗಿದ್ದಾಗ ಮೊದಲೇ ಕ್ರಿಶ್ಚಿಯನ್ನರು ಯಹೂದಿಗಳನ್ನು ಅಧರ್ಮೀಯರು ಎಂದು ಶತ್ರುಗಳು ಎಂಬಂತೆ ನೋಡುತ್ತಿದ್ದ ಹೊತ್ತು. ಅದೊಮ್ಮೆ "ತಾನು ಯಹೂದಿಯರನ್ನು ಕಣ್ಣಾರೆ ನೋಡಬೇಕು" ಎಂದು ಆಸೆಪಟ್ಟು ತನ್ನ ಚಿಕ್ಕಪ್ಪನೊಡನೆ ಆ ಜನರು ವಲಸೆ ಬರುತ್ತಿದ್ದ ಶಿಬಿರಗಳತ್ತ ಹೋಗುತ್ತಾನೆ. ಆಗ ಆತನಿಗೆ ಗೊತ್ತಾಗುತ್ತದೆ ಅವರೆಲ್ಲರೂ ತಮ್ಮಂತೆಯೇ ಕಾಣುವ ಮನುಷ್ಯರು ಅಂತ.


-೦-೦-೦-೦-೦-೦-೦-೦-೦-೦-೦-೦-೦೦-೦-೦-೦-೦



ಭಾರತೀಯ ಮಸಾಲೆ ಪದಾರ್ಥಗಳಿಗೆ ಪೋರ್ಚುಗಲ್ ದೇಶದಲ್ಲಿ ಚಿನ್ನದ ಬೆಲೆಯಿರುತ್ತದೆ. ಇಡೀ ಪ್ರಪಂಚವೇ ಸಂಪದ್ಭರಿತ ಭಾರತದ ಮೇಲೆ ಕಣ್ಣಿಟ್ಟಿರುತ್ತದೆ.


-೦-೦-೦-೦-೦-೦-೦-೦-೦-೦-೦-೦-೦೦-೦-೦-೦-೦


ಯಹೂದಿಗಳನ್ನು ಎಲ್ಲರೂ ದ್ವೇಷಿಸಿದರೂ ಪೋರ್ಚುಗಲ್ ರಾಜ ತನ್ನ ದೇಶದೊಳ್ಳಕ್ಕೆ ಬಿಟ್ಟುಕೊಳ್ಳುತ್ತಾನೆ. ಅದು ಅವರ ಮೇಲಿನ ಪ್ರೀತಿಯಿಂದಲ್ಲ. ಆದರೆ ಬುದ್ಧಿವಂತರಾದ ಯಹೂದಿಗಳು ವ್ಯಾಪಾರಸ್ಥರು. ಅವರು ಬಂದರೆ ದೇಶದ ಆದಾಯ ಹೆಚ್ಚಿ ಉದ್ಧಾರವಾಗುತ್ತದೆ ಎಂಬ ಸ್ವಾರ್ಥದ ಕಾರಣಕ್ಕೆ!

-೦-೦-೦-೦-೦-೦-೦-೦-೦-೦-೦-೦-೦೦-೦-೦-೦-೦

ಅದಾಗ ತಾನೇ ಮುದ್ರಣದ ತಂತ್ರಜ್ಞಾನ ದೇಶದೊಳಗೆ ಕಾಲಿಟ್ಟು ಕೈಬರಹದಿಂದಲೇ ಜೀವನ ಮಾಡುತ್ತಿದ್ದ ಅನೇಕರು ಅದನ್ನು ದ್ವೇಷಿಸುತ್ತಾರೆ. ತಮ್ಮ ಕೆಲಸ ಕಳೆದುಕೊಳ್ಳುವ ಭಯದಿಂದ!

-೦-೦-೦-೦-೦-೦-೦-೦-೦-೦-೦-೦-೦೦-೦-೦-೦-೦



ಯಹೂದಿಗಳು ಬುದ್ಧಿವಂತರು ಹೌದು. ಆದರೆ ಮುದ್ರಣಕ್ಕೆ ಸಂಬಂಧಿಸಿದ ಶ್ರಮದ ಕೆಲಸಗಳನ್ನು ಮಾಡಲು ಆಫ್ರಿಕಾದ ಗುಲಾಮರನ್ನು ಬಳಸಿಕೊಳ್ಳುತ್ತಾರೆ.


-೦-೦-೦-೦-೦-೦-೦-೦-೦-೦-೦-೦-೦೦-೦-೦-೦-೦


ಯಹೂದಿಗಳಲ್ಲೂ ಗಂಡು ಮಗು ಹುಟ್ಟಿದರಷ್ಟೇ ಸಂಭ್ರಮ. ಮನೆಯಲ್ಲಿ ಸಡಗರ, ಹಬ್ಬದ ವಾತಾವರಣ. ಹೆಣ್ಣು ಮಗು ಹುಟ್ಟಿದರೆ ತಮ್ಮ ವ್ಯವಹಾರಕ್ಕೆ ಉಪಯೋಗವಾಗಲಾರಳು ಅನ್ನುವ ಲೆಕ್ಕಾಚಾರ.



-೦-೦-೦-೦-೦-೦-೦-೦-೦-೦-೦-೦-೦೦-೦-೦-೦-೦


ಯಹೂದಿಗಳನ್ನು ಪೋರ್ಚುಗಲ್ಲಿನ ಜನಸಾಮಾನ್ಯರು ದ್ವೇಷಿಸುವುದಿಲ್ಲ. ಆದರೆ ಸ್ವತಃ ಅಧಿಕಾರದಲ್ಲಿದ್ದ ರಾಣಿಯೇ ಯಹೂದಿಗಳನ್ನು ಕೊಲ್ಲಿ ಅಂದರೆ ಈಗಾಗಲೇ ಯಹೂದಿಗಳ ವ್ಯವಹಾರ-ಸಂಪತ್ತನ್ನು ನೋಡಿ ಹೊಟ್ಟೆಕಿಚ್ಚುಪಡುವ ಜನಸಾಮಾನ್ಯರು ಸುಮ್ಮನೆ ಬಿಟ್ಟಾರೆಯೇ?



-೦-೦-೦-೦-೦-೦-೦-೦-೦-೦-೦-೦-೦೦-೦-೦-೦-೦



ಯಹೂದಿಗಳು ಬದುಕುಳಿಯಬೇಕೆಂದರೆ ಮತಾಂತರ ಹೊಂದಬೇಕಾದ, ಅಥವಾ ಸಾಧ್ಯವಿಲ್ಲವೆಂದರೆ ತಮ್ಮೆಲ್ಲ ಸಂಪತ್ತನ್ನು ಅಲ್ಲೇ ಬಿಟ್ಟು ದೇಶಾಂತರ ಹೋಗಬೇಕಾದ ಸಂದರ್ಭ. ಈ ಇಕ್ಕಟ್ಟಿನ ಸಂದರ್ಭದಲ್ಲಿ ಪ್ರಶ್ನೆಯೊಂದು ಎದುರಾಗುತ್ತದೆ "ಧರ್ಮ ಮುಖ್ಯವೇ? ಅಥವ ಬದುಕೇ". ಯಹೂದಿಗಳು ಆಯ್ಕೆ ಮಾಡಿಕೊಂಡದ್ದು ಏನು? ಈ ಸಂದರ್ಭ ನಮ್ಮನ್ನು ಆತ್ಮಾವಲೋಕನಕ್ಕೆ ಹಚ್ಚುತ್ತದೆ.


-೦-೦-೦-೦-೦-೦-೦-೦-೦-೦-೦-೦-೦೦-೦-೦-೦-೦



ಮತಾಂತರ ಒಂದೇ ಅಂತಿಮವಲ್ಲ. ಏಕೆಂದರೆ ಮೂಲ ಧರ್ಮದಲ್ಲೇ ಇದ್ದವರು ನೇರವಾಗಿ ಮತಾಂತರ ಹೊಂದಿದವರನ್ನು ತಮ್ಮವರೆಂದು ಎಷ್ಟು ಮನಃಪೂರ್ವಕವಾಗಿ ಒಪ್ಪಿಕೊಳ್ಳಬಹುದು?



-೦-೦-೦-೦-೦-೦-೦-೦-೦-೦-೦-೦-೦೦-೦-೦-೦-೦



ಭಾರತದ ಅತೀ ದುಬಾರಿ ಸುವಾಸನೆಭರಿತ ಮಸಾಲೆ ಪದಾರ್ಥಗಳ ಮೇಲೆ ಪ್ರಪಂಚದ ಕಣ್ಣಿರುವಾಗ ಜೀವ ಕೊಟ್ಟಾದರೂ ಸರಿ. ಭಾರತಕ್ಕೆ ಅಪಾಯಕಾರಿ ನೌಕೆಯಲ್ಲಿ ಪ್ರಯಾಣಿಸಿ ಹೋಗಿಬರುತ್ತೇವೆನ್ನುವ ಎಲ್ಲ ರಾಷ್ಟ್ರಗಳ ಜನಗಳು. ಭಾರತದ ಈ ಆಕರ್ಷಣೆಯಿಂದ ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಳ್ಳುತ್ತೇವೆ ಎಂದು ಅಲ್ಲಿನ ಜನಗಳು ಭಾರತವನ್ನೇ ದ್ವೇಷಿಸುವ ಪರಿ.

ಗಮನಿಸಿ. ಕೆಲ ವರ್ಷಗಳ ಹಿಂದೆ ಭಾರತೀಯ ಸಾಫ್ಟ್ವೇರ್ ಜಗತ್ತಿನಲ್ಲೂ ಅಮೇರಿಕಾ ಕೈತುಂಬಾ ಹಣವನ್ನು ಕೊಟ್ಟು ಭಾರತೀಯ ನೌಕರರನ್ನು ತನ್ನತ್ತ ಸೆಳೆಯುತ್ತಿದ್ದಾಗ ಅದೆಷ್ಟು ಜನ ಅಮೇರಿಕಾವನ್ನು ದ್ವೇಷಿಸುತ್ತಿದ್ದರು?


-೦-೦-೦-೦-೦-೦-೦-೦-೦-೦-೦-೦-೦೦-೦-೦-೦-೦



ಪೋರ್ಚುಗೀಸ್ ದೇಶದಲ್ಲಿ ರಾಜ ಒಂದು ಹಿಡಿ ಮೆಣಸು ಎಸೆದರೆ ಇಡೀ ಜನಸಮೂಹ ಅದರ ಒಂದೇ ಕಾಳನ್ನು ಕಸಿಯುವ ಭರದಲ್ಲಿ ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಉಂಟಾಗುತ್ತದೆ. ಅದು ಆ ದೇಶದಲ್ಲಿ ಆಗ ಮೆಣಸಿಗಿದ್ದ ಬೆಲೆ.


ಅದೇ ಸಮಯದಲ್ಲಿ ವಿಜಯನಗರ ಸಾಮ್ರಾಜ್ಯದಲ್ಲಿ ತೆಂಬಕೇಶ್ವರನ ತೇರಿಗೆ ಕೈಮುಗಿಯುತ್ತ ಜನ ರಾಶಿ ರಾಶಿ ಮೆಣಸನ್ನು ಎರಚುತ್ತಾರೆ. ಇಡೀ ಬೀದಿಗಳಲ್ಲೆಲ್ಲ ಮೆಣಸು. ಮರುದಿನ ಕಸಗುಡಿಸುವವರು ಅವನ್ನೆಲ್ಲ ತಿಪ್ಪೆಗೆ ಸುರಿದು ಹಾದಿಬೀದಿಗಳನ್ನು ಸ್ವಚ್ಚಗೊಳಿಸುತ್ತಾರೆ. ವಿಪರ್ಯಾಸ ಅನ್ನಿಸುವ ಎರಡೂ ದೇಶದ ಪರಿಸ್ಥಿತಿಗಳನ್ನು ಗಮನಿಸಿ


-೦-೦-೦-೦-೦-೦-೦-೦-೦-೦-೦-೦-೦೦-೦-೦-೦-೦


ಪ್ರಪಂಚದ ಯಾವುದೇ ದೇಶದ ಯಾವುದೇ ಕಾಲಮಾನವಿರಲಿ. ಯುದ್ಧ ಎನ್ನುವುದು ಬಂದಾಕ್ಷಣ ವ್ಯಾಪಾರಿಗಳಿಗೆ ಅದು ವ್ಯಾಪಾರದ ಸಂಗತಿಯೇ. ಯುದ್ಧ ಹೆಚ್ಚಾದಷ್ಟು ಅವರಿಗೆ ಲಾಭವೇ



-೦-೦-೦-೦-೦-೦-೦-೦-೦-೦-೦-೦-೦೦-೦-೦-೦-೦


ಅತ್ತ ಲಿಸ್ಬನ್ ನಲ್ಲಿರಲಿ, ಇತ್ತ ವಿಜಯನಗರ ಸಾಮ್ರಾಜ್ಯದಲ್ಲಿರಲಿ. ಎರಡೂ ಕಡೆ ಕೇವಲ ಗಂಡು ಸಂತಾನಕ್ಕೆ ಮಾತ್ರ ಹಾತೊರೆಯುತ್ತಿದ್ದ ಜನ. ಲಿಂಗ ತಾರತಮ್ಯತೆಗೆ ದೇಶದ ಹಂಗಿಲ್ಲ!



-೦-೦-೦-೦-೦-೦-೦-೦-೦-೦-೦-೦-೦೦-೦-೦-೦-೦


ವಿಜಯನಗರ ಸಾಮ್ರಾಜ್ಯದ ತೆಂಬಕಸ್ವಾಮಿಗೆ ಪ್ರಾಣಿಗಳನ್ನು ಬಲಿ ಕೊಡುವ ರೀತಿ ಮತ್ತು ಅಚಾನಕ್ಕಾಗಿ ಭಕ್ತಳೊಬ್ಬಳು ತನ್ನ ಕಿರುಬೆರಳನ್ನು ಬಲಿ ಕೊಡುವ ಭಯಾನಕ ದೃಶ್ಯ



-೦-೦-೦-೦-೦-೦-೦-೦-೦-೦-೦-೦-೦೦-೦-೦-೦-೦



ಯಾವುದೇ ದೇಶದ ಯಾವುದೇ ರಾಜನಾದರೂ ಅವನ ನಂಬಿಕೆಯ ಮೇಲಷ್ಟೇ ಅಲ್ಲಿನ ನಿರ್ಣಯಗಳು ನಡೆಯುತ್ತವೆ.
ಉದಾ:ಕೃಷ್ಣದೇವರಾಯನೂ ತಾನು ವಿಷ್ಣುವನ್ನು ಪೂಜಿಸುತ್ತಿದ್ದರಿಂದ ಶೈವ ಹೆಸರಾದ ತೆಂಬಕಪುರಕ್ಕೆ ವೈಷ್ಣವಪುರ ಎಂದು ನಾಮಕರಣ ಮಾಡುವ ನಿರ್ಧಾರ ತೆಗೆದುಕೊಳ್ಳುವಿಕೆ.
ಈ ಘಟನೆಗಳು ಈಗ ನಡೆಯುತ್ತಿಲ್ಲವೇ?


-೦-೦-೦-೦-೦-೦-೦-೦-೦-೦-೦-೦-೦೦-೦-೦-೦-೦



ಮಲ ಹೊರುವ ಪದ್ಧತಿ


-೦-೦-೦-೦-೦-೦-೦-೦-೦-೦-೦-೦-೦೦-೦-೦-೦-೦



ಅಲ್ಲೆಲ್ಲೋ ಉತ್ತರ ಭಾರತದಲ್ಲಿಯಷ್ಟೇ ಸತೀಸಹಗಮನ ಪದ್ಧತಿಯನ್ನು ಕೇಳಿದ್ದ ನಮಗೆ ಬೆಚ್ಚಿಬೀಳಿಸುವುದು ವಿಜಯನಗರ ಸಾಮ್ರಾಜ್ಯದಲ್ಲೇ ಈ ಪದ್ಧತಿ ಜಾರಿಯಲ್ಲಿತ್ತು ಅನ್ನುವುದು. ಇದರ ಬಗ್ಗೆ ಬೇರೇನೂ ಹೇಳಲಾರೆ. ಕಾದಂಬರಿಯಲ್ಲಿಯೇ ನೀವು ಓದಬೇಕು. ಬರೀ ಹೆಂಡತಿಯೊಬ್ಬಳು ಗಂಡನೊಡನೆ ಚಿತೆಗೆ ಹಾರುವುದನ್ನು ಮಾತ್ರ ಅರಿತಿದ್ದ ನಮಗೆ ಅದರ ಬಗೆಗಿನ ವಿವರಗಳು, ವಾತಾವರಣ, ಮಕ್ಕಳ ಮೇಲೆ ಅದು ಸೃಷ್ಟಿಸುವ ಪರಿಣಾಮ ಭಯಾನಕ!


-೦-೦-೦-೦-೦-೦-೦-೦-೦-೦-೦-೦-೦೦-೦-೦-೦-೦


ವಿಜಯನಗರ ಸಾಮ್ರಾಜ್ಯಾಧಿಪತಿಯಾಗಿದ್ದ ಕೃಷ್ಣದೇವರಾಯ ಸಾಮಾನ್ಯ ಮಹಿಳೆಯಾಗಿದ್ದ ಗುಣಸುಂದರಿಯೊಂದಿಗೆ ಸಾಹಿತ್ಯಿಕ ಚರ್ಚೆಯಲ್ಲಿ ತೊಡಗುವುದು. ಮತ್ತು ತಾನು ಆಕೆಯ ಟೀಕೆಯನ್ನು ಮನಸಾ ಸ್ವೀಕರಿಸುವುದು



-೦-೦-೦-೦-೦-೦-೦-೦-೦-೦-೦-೦-೦೦-೦-೦-೦-೦



ಭಾರತಕ್ಕೆ ವಿದೇಶೀಯರಿಂದ ಕಾಗದ ಬಳಕೆಯ ಪರಿಚಯ


-೦-೦-೦-೦-೦-೦-೦-೦-೦-೦-೦-೦-೦೦-೦-೦-೦-೦



ಅಟ್ಟಹಾಸಗೈಯುವ ಪ್ಲೇಗ್ ರೋಗ


-೦-೦-೦-೦-೦-೦-೦-೦-೦-೦-೦-೦-೦೦-೦-೦-೦-೦


ಜಾತಿಪದ್ಧತಿಯ ಆಚರಣೆ, ಮತ್ತು ಈ ವ್ಯವಸ್ಥೆಯನ್ನು ಅರಿಯದ ವಿದೇಶೀಯರು



-೦-೦-೦-೦-೦-೦-೦-೦-೦-೦-೦-೦-೦೦-೦-೦-೦-೦


ಕಾಲ-ದೇಶಗಳ ಗಡಿಯಿಲ್ಲದೆ ಎಲ್ಲ ಸ್ಥಳಗಳಲ್ಲೂ ಕಸಿಯಲಾಗುತ್ತಿದ್ದ ಸ್ತ್ರೀಯರ ಹಕ್ಕು. ಪೋರ್ಚುಗೀಸರ ನೌಕೆಗಳಲ್ಲಿ ಸ್ತ್ರೀಯರ ಪ್ರಯಾಣವನ್ನು ನಿಷೇಧಿಸುವಿಕೆ!



-೦-೦-೦-೦-೦-೦-೦-೦-೦-೦-೦-೦-೦೦-೦-೦-೦-೦



ಕ್ರಿಶ್ಚಿಯನ್ ಧರ್ಮಾಧಿಕಾರಿಯೆ ಆದೇಶ ಕೊಟ್ಟಾಗ ಅಲ್ಲಿ ನಡೆಯುವ ಯಹೂದಿಗಳ ಮಾರಣಹೋಮ


-೦-೦-೦-೦-೦-೦-೦-೦-೦-೦-೦-೦-೦೦-೦-೦-೦-೦


ನಾವೆಗಳಲ್ಲಿ ಕಾಮವನ್ನು ಹತ್ತಿಕ್ಕಲು ಅಲ್ಲಿ ನಡೆಯುತ್ತಿದ್ದ ಸಲಿಂಗಕಾಮ



-೦-೦-೦-೦-೦-೦-೦-೦-೦-೦-೦-೦-೦೦-೦-೦-೦-೦



ತೆಂಬಕೇಶ್ವರನಿಗೆ ನಡೆಯುವ ಸಿಡಿಯಾಟದ ಸೇವೆ! ಇವತ್ತಿಗೂ ಇದು ತಮಿಳುನಾಡಿನಲ್ಲಿ ನಡೆಯುತ್ತಿಲ್ಲವೇ?


-೦-೦-೦-೦-೦-೦-೦-೦-೦-೦-೦-೦-೦೦-೦-೦-೦-೦



ಸಿಕ್ಕಿಬೀಳುವ ಗೂಢಾಚಾರರಿಗೆ ವಿಜಯನಗರದಲ್ಲಿ ಸಿಗುತ್ತಿದ್ದ ಆನೆಯಿಂದ ತುಳಿಸಿ ಕೊಲ್ಲುವ ಶಿಕ್ಷೆ


-೦-೦-೦-೦-೦-೦-೦-೦-೦-೦-೦-೦-೦೦-೦-೦-೦-೦


ಆಗ ತಾನೇ ಮೆಣಸಿಗೆ ಪರ್ಯಾಯವಾಗಿ ಮೆಣಸಿನಕಾಯಿ ಪರಿಚಯವಾಗುವ ಸಂದರ್ಭ



-೦-೦-೦-೦-೦-೦-೦-೦-೦-೦-೦-೦-೦೦-೦-೦-೦-೦


ವಿಜಯನಗರ ಸಾಮ್ರಾಜ್ಯದಲ್ಲಿ ರಾಜರ ಒಳಿತಿಗಾಗಿ ವಿವಿಧ ಸಂದರ್ಭಗಳಲ್ಲಿ ನಡೆಯುತ್ತಿದ್ದ ಲೆಂಕಸೇವೆ. ಇದೇ ಕಾದಂಬರಿಯ ಹೈಲೈಟು. ಓದುವಾಗ ಮೈನಡುಗುವುದು ಖಾತ್ರಿ!

-೦-೦-೦-೦-೦-೦-೦-೦-೦-೦-೦-೦-೦೦-೦-೦-೦-೦



ಸಮುದ್ರದ ಮೇಲೆ ಆಹಾರ ಸೇವಿಸಬಾರದೆನ್ನುವ ನಂಬಿಕೆಯ ಕಾರಣಕ್ಕೆ ನೌಕಾದಳವನ್ನು ಹೆಚ್ಚು ಬಲಪಡಿಸದ ಅಂದಿನ ರಾಜರ ಮನಸ್ಥಿತಿ. ಇದೇ ಕಾರಣದಿಂದಾಗಿ ವಿದೇಶೀ ವ್ಯಾಪಾರಿಗಳು ದೇಶದೊಳಕ್ಕೆ ಕಾಲಿಟ್ಟಿದ್ದು


-೦-೦-೦-೦-೦-೦-೦-೦-೦-೦-೦-೦-೦೦-೦-೦-೦-೦


ಅನಿರೀಕ್ಷಿತವಾಗಿ ಕಥೆಯೊಳಕ್ಕೆ ಭೇಟಿಕೊಡುವ, ಮತ್ತು ಇಡೀ ಕಥೆಯ ಸಾರಾಂಶವನ್ನು ತನ್ನ "ಲೊಳಲೊಟ್ಟೆ" ಎಂಬ ಕೀರ್ತನೆಯೊಳಗೆ ಹೇಳಿ ಹೊರಡುವ ಪುರಂದರದಾಸರು



-೦-೦-೦-೦-೦-೦-೦-೦-೦-೦-೦-೦-೦೦-೦-೦-೦-೦



ಗೋವಾದೊಳಗೆ ನಡೆಯುವ ಸಾಮೂಹಿಕ ಮತಾಂತರ


-೦-೦-೦-೦-೦-೦-೦-೦-೦-೦-೦-೦-೦೦-೦-೦-೦-೦


ಮತ್ತೊಮ್ಮೆ ಕಥೆಯ ಕೊನೆಯಲ್ಲಿ ಬರುವ "ಜೀವ(ನ) ಮುಖ್ಯವೋ, ಧರ್ಮ ಮುಖ್ಯವೋ" ಪ್ರಶ್ನೆ


*******************************************************************************************


ಗೆಳೆಯರೇ ಇಲ್ಲೆಲ್ಲೂ ನಾ ಮೂಲ ಕಥೆಯನ್ನು ಹೇಳೇ ಇಲ್ಲ. ಈ ಮೇಲಿನ ಅಂಶಗಳೆಲ್ಲ ಮೂಲ ಕಥೆಯೊಳಗೆ ಬರುವ ನೂರಾರು ವಿಷಯಗಳು. ಬರೀ ಈ ರಾಜ ಸತ್ತ, ಆ ರಾಜ ಯುದ್ಧ ಗೆದ್ದ ಅನ್ನುವ ಕಥೆಗಳನ್ನು ಓದಿದ್ದ ನಮಗೆ ರಾಜಾಧಿಪತ್ಯ ನಡೆಯುವಾಗ ಜನಸಾಮಾನ್ಯರ ಜೀವನ ಹೇಗಿತ್ತು ಅನ್ನುವ ವಿಷಯಗಳನ್ನು ಕುತೂಹಲಕಾರಿ ಕಥೆಯೊಂದಿಗೆ ನಮಗೆ ಉಣಬಡಿಸುವ "ತೇಜೋ ತುಂಗಭದ್ರಾ" ಕಾದಂಬರಿಯನ್ನು ನೀವು ಓದಲೇಬೇಕು.


ಕೃತಿಯ ಬಗ್ಗೆ ಎಲ್ಲೂ ಪ್ರಶ್ನೆಯೇ ಇಲ್ಲವೇ? ಅಂತ ಕೇಳಿದರೆ. ಒಂದೆರಡು ವಿಷಯಗಳ ಬಗ್ಗೆ ತಕರಾರಿದೆ.


1. ಮಾಪಳನಾಯಕ ಹಂಪಮ್ಮಳಿಗಾಗಿ ಕುಸ್ತಿ ಮಾಡುತ್ತಾನೆ. ಅದು ಭೀಮಕುಸ್ತಿ ಅಂದರೆ ಒಬ್ಬ ಪಟು ಇನ್ನೊಬ್ಬನ ಜೀವ ತೆಗೆಯಬಹುದು. ಇದು ತಿಳಿದಿದ್ದರೂ ಮಾಪಳನಾಯಕನ ಹೆಂಡತಿಯಾದ ತೆಂಕಮ್ಮನಿಗೆ ತನ್ನ ಗಂಡ ಕುಸ್ತಿಯಲ್ಲಿ ಭಾಗವಹಿಸುವುದರ ಬಗ್ಗೆ ಯಾವ ನಿಲುವಿತ್ತು ಅನ್ನುವುದರ ಬಗ್ಗೆ ಸ್ಪಷ್ಟ ಚಿತ್ರಣವಿಲ್ಲ.


2. ಕೇಶವನ ಅಪರಾಧಿಪ್ರಜ್ಞೆಯ ಬಗ್ಗೆ ಉಲ್ಲೇಖವಿದೆ. ಆದರೆ ಆತ ಪುಟ್ಟ ಮಗು ಈಶ್ವರಿಯ ಮೇಲೆ ಕೈ ಮಾಡುವುದು ಹಂಪಮ್ಮನಿಗೆ ತಿಳಿಯುವುದೇ ಇಲ್ಲ. ಹೀಗಾಗಿ ಲೆಂಕಸೇವೆಯ ನಂತರದ ಪುಟ್ಟ ಮಗು ಈಶ್ವರಿಯ ಪ್ರತಿಕ್ರಿಯೆಯನ್ನೇ ತಪ್ಪೆನ್ನುವಂತೆ ಚಿತ್ರಿತವಾಗುತ್ತದೆ. ಸರಿಯೇ?



ಎಲ್ಲ ವಿವರಗಳಿಗಿಂತ ಮುಂಚೆ, ಓದಿಸಿಕೊಳ್ಳುವ ಕೃತಿಯಾಗಿ ಪುಸ್ತಕವೊಂದು ಗೆಲ್ಲಬೇಕು. ಆ ವಿಷಯದಲ್ಲಿ ಈ ಕಾದಂಬರಿಯ ಕರ್ತೃ ವಸುಧೇಂದ್ರರವರು ಈಗಾಗಲೇ ಗೆದ್ದಿದ್ದಾರೆ. ಈ ಪುಸ್ತಕ ಓದಿದ ಮೇಲೆ ಪ್ರತಿಯೊಬ್ಬರಿಗೂ ಅನ್ನಿಸುವ ಪ್ರಶ್ನೆ. ಈ ವಿವರಗಳನ್ನು ಕಲೆಹಾಕಲು ಲೇಖಕರು ಅದೆಷ್ಟು ಸಂಬಂಧಪಟ್ಟ ಕೃತಿಗಳ ಅಧ್ಯಯನ ಮಾಡಿರಬೇಕು ಎಂಬುದು.


ಈಗಾಗಲೇ ಖ್ಯಾತ ವಿಮರ್ಶಕರು ಇದನ್ನು ಶ್ರೇಷ್ಠ ಕೃತಿ ಎಂದು ಹೇಳಿದ್ದಾರೆ. ನಾನು ಹೇಳುವುದೇನಿದೆ. ಅದನ್ನೇ ಮತ್ತೊಮ್ಮೆ ಹೇಳಬಲ್ಲೆ. ವಿನಂತಿಯೊಂದನ್ನು ಲೇಖಕರಿಗೆ ಮಾಡಬಲ್ಲೆ. ಈ ಬಗೆಯ ಕೃತಿಗಳ ಸೃಷ್ಟಿ ಎಲ್ಲರಿಂದಲೂ ಸಾಧ್ಯವಲ್ಲ. ಆ ಶ್ರಮ, ಬದ್ಧತೆ ಎಲ್ಲರಿಗೂ ಸಾಧ್ಯವಿಲ್ಲ. ನೀವೀಗಾಗಲೇ ಅದಕ್ಕೆ ಕೈಹಾಕಿದ್ದೀರ. ಇದೊಂದರೊಂದಿಗೆ ನಿಲ್ಲಿಸಬೇಡಿ. ಇನ್ನಷ್ಟು ಬರಲಿ. ಚರಿತ್ರೆಯನ್ನು ಸಾಮಾನ್ಯರ ದೃಷ್ಟಿಯಿಂದಲೂ ನೋಡುವಂತಾಗಲಿ ಅನ್ನುವುದಷ್ಟೇ ಆಶಯ.

-------------------
ಈ ಕಾದಂಬರಿಯ ಆಯ್ದ ಸಾಲುಗಳು::

1. ಧರ್ಮಗಳ ವಿಷಯ ಗೇಬ್ರಿಯಲ್'ಗೆ ಯಾವತ್ತೂ ಸಂಕೀರ್ಣವೆನಿಸುತ್ತೆ. ಇಡೀ ಜಗತ್ತಿಗೆ ಒಂದೇ ಧರ್ಮವಿದ್ದರೆ ಚೆನ್ನಾಗಿತ್ತು. ಹೀಗೆ ಒಬ್ಬರನ್ನೊಬ್ಬರು ಅಧರ್ಮಿಗಳೆಂದು ಜರಿದು ಬಡಿದಾಡುವ ಸಂದರ್ಭ ಇರುತ್ತಿರಲಿಲ್ಲ ಎಂದು ಕೆಲವೊಮ್ಮೆ ಅನ್ನಿಸುತ್ತದೆ ಆದರೆ ಹಿಂದೆಯೇ ಧರ್ಮವಲ್ಲದಿದ್ದರೆ ಜನರು ಬೇರೆಯದಕ್ಕೆ ಜಗಳವಾಡುತ್ತಿದ್ದರಲ್ಲವೆ ಎಂದು ಹೊಳೆಯುತ್ತದೆ. ಈ ಮಾನವ ದ್ವೇಷದಲ್ಲಿ ಧರ್ಮದ ಪಾತ್ರವೆಷ್ಟು. ಮನುಷ್ಯರ ಪಾತ್ರವೆಷ್ಟು? ಬಹುಶಃ ಜಗಳವಾಡುವುದು ಮನುಷ್ಯರ ಹುಟ್ಟುಗುಣವೆ? ಹಸಿವೆ, ನಿದ್ದೆ, ನೀರಡಿಕೆಗಳಿಗೆ ದೇಹವನ್ನು ತೃಪ್ತಿಪಡಿಸಿದಂತೆ ಜಗಳವಾಡಿಯೂ ಅದನ್ನು ತೃಪ್ತಿಪಡಿಸಬೇಕೇ?


2. ಪಾಪಪ್ರಜ್ಞೆಯೆನ್ನುವುದು ಹೊರಗಿನಿಂದ ಬಲವಂತವಾಗಿ ತುಂಬುವಂತಹದ್ದಲ್ಲ. ಯಾವುದೋ ಪಾದ್ರಿಯೋ, ಧಾರ್ಮಿಕ ಗ್ರಂಥವೋ, ಕಾನೂನೋ ಜೀವಿಯೊಂದರಲ್ಲಿ ನೀತಿ-ಅನೀತಿಗಳ ವಿವರಗಳನ್ನು ಕಟ್ಟಿಕೊಡಬೇಕಾಗಿಲ್ಲ. ಸೂಕ್ಷ್ಮನಾದ ವ್ಯಕ್ತಿಗೆ ಆಂತರಿಕವಾಗಿಯೇ ಅದರ ಅರಿವಾಗುತ್ತದೆ. ಸರಿ-ತಪ್ಪುಗಳು ಸ್ಪಷ್ಟವಾಗಿ ಗೋಚರಿಸತೊಡಗುತ್ತವೆ.

3. ತನ್ನದಲ್ಲದ ನೆಲದಲ್ಲಿ ಮನುಷ್ಯ ಬದುಕಿಯಾನೆ ಹೊರತು, ಸಸ್ಯಗಳು ಹೇಗೆ ಬದುಕಿಯಾವು?

------------------.


-Santhosh Kumar LM
06-Feb-2020

Friday, January 31, 2020

Stalingrad (2013)...Russian Movie

Stalingrad (2013)....War, Action, Drama
Language: Russian, German




ಯುದ್ಧದ ಮುಖ ಕರಾಳ. ಅದರ ಕರಾಳತೆಯನ್ನು ತೋರಿಸುವ ಪ್ರಯತ್ನವೇ ಬಹುತೇಕ ಸಿನಿಮಾಗಳಲ್ಲಿ ಆಗಿದ್ದರೂ ಅದಕ್ಕೆ ಬೇರೊಂದು ಆಯಾಮ ಕೊಟ್ಟು ವಿವರಗಳನ್ನು ಪ್ರೇಕ್ಷಕನ ಮುಂದಿಡುವ ಪ್ರಯತ್ನಗಳು ವಿರಳವೇ. ಒಂದಷ್ಟು ಯುದ್ಧದ ಸಿನಿಮಾಗಳನ್ನು ನೋಡಿದರೆ ಅಲ್ಲಿ ಆ ಕಥೆಗಾರ ತನ್ನ ದೇಶದ ಸೈನಿಕರ ಶೌರ್ಯವನ್ನೇ ಪರೋಕ್ಷವಾಗಿ ಹೊಗಳಿ ಉಳಿದವಕ್ಕೆ ಕಡಿಮೆ ಪ್ರಾಶಸ್ತ್ಯ ನೀಡಿರುತ್ತಾನೆ. ಭಾರತೀಯ ಸಿನಿಮಾಗಳಲ್ಲಿ ಪ್ರೇಮಕಥೆಯನ್ನು ಮೂಲ ಕಥೆಯಾಗಿಸಿ ಉಳಿದ ಸಮಸ್ಯೆಗಳನ್ನು ಜೊತೆಜೊತೆಯಲ್ಲಿಯೇ ಪರಿಣಾಮಕಾರಿಯಾಗಿ ಹೇಳುವುದನ್ನು ಮಣಿರತ್ನಂರ ಸಿನಿಮಾಗಳಲ್ಲಿ ಕಾಣಬಹುದು.


ಇತ್ತೀಚೆಗೆ ನಾ ನೋಡಿದ ಇಂಥದ್ದೊಂದು ಸಿನಿಮಾ, ರಷ್ಯನ್ ಭಾಷೆಯ "ಸ್ಟಲಿಂಗ್ರಾಡ್". ವಿಮರ್ಶೆಗಳು, ರೇಟಿಂಗ್'ಗಳು ಈ ಸಿನಿಮಾ ಅಷ್ಟೇನೂ ಚೆನ್ನಾಗಿಲ್ಲ ಅಂತ ಹೇಳಿದ್ದರೂ ನೋಡಿದಾಗ ಚೆನ್ನಾಗಿದೆ ಅನ್ನಿಸಿದ್ದು ಸುಳ್ಳಲ್ಲ. ಇದು ಐಮ್ಯಾಕ್ಸ್ ಫಾರ್ಮ್ಯಾಟಿನಲ್ಲಿ ಬಂದ ಮೊದಲ ರಷ್ಯನ್ ಚಿತ್ರ. ವಿಮರ್ಶಕರಿಗೆ ಯುದ್ಧದ ಜೊತೆಗೆ ಇತರೆ ವಿಷಯಗಳನ್ನು ತುರುಕಿದ್ದು ಇಷ್ಟವಾದಂತೆ ಕಂಡಿಲ್ಲ. ಜೊತೆಗೆ ರಷ್ಯನ್ ಸಿನಿಮಾ ಆದ್ದರಿಂದ ಹೆಚ್ಚಾಗಿ ರಷ್ಯನ್ ಸೈನಿಕರ ಬಗ್ಗೆಯೇ ವಿವರ ಹೇಳಿರುವುದು ಸಹಜ ಕೂಡ. ಅದೂ ಕೂಡ ಅನೇಕರ ವಿಮರ್ಶೆಗಳಲ್ಲಿ ವ್ಯಕ್ತವಾಗಿದೆ.


ಜಪಾನಿನಲ್ಲಿ 2011ರಲ್ಲಿ ಸುನಾಮಿಯ ಹೊಡೆತಕ್ಕೆ ಸಿಕ್ಕು ಕಟ್ಟಡಗಳ ಅವಶೇಷಗಳಡಿಯಲ್ಲಿ ಸಿಲುಕಿದ ಜರ್ಮನ್ ವಿದ್ಯಾರ್ಥಿಗಳನ್ನು ರಷ್ಯನ್ ಸೈನಿಕರು ಕಾಪಾಡುವಾಗ ಆ ರಕ್ಷಣೆಯ ಸಂದರ್ಭದಲ್ಲಿ ಅವರಿಗೆ ವಿಶ್ವಾಸ ತುಂಬಲು ಆ ರಷ್ಯನ್ ಸೈನಿಕನೊಬ್ಬ ತನ್ನದೇ ದೇಶದಲ್ಲಿ ನಡೆದ ರಷ್ಯನ್-ಜರ್ಮನ್ ನಡುವಿನ ಸ್ಟಾಲಿಂಗ್ರಾಡ್ ಯುದ್ಧದ ಬಗೆಗಿನ ಕಥೆಯನ್ನು ಹೇಳುತ್ತಾನೆ.


1942-1943ನೆಯ ಇಸವಿಯಲ್ಲಿ ಎರಡನೆಯ ಮಹಾಯುದ್ಧದ ಸಂದರ್ಭದಲ್ಲಿ ಜರ್ಮನ್ ಪಡೆ ರಷ್ಯಾದ ಸ್ಟಲಿಂಗ್ರಾಡ್ ನಗರವನ್ನು (ಈಗ ಅದು ವೋಲ್ಗೋಗ್ರಾಡ್ ಎಂದು ಮರುನೇಮಕಗೊಂಡಿದೆ) ವಶಪಡಿಸಿಕೊಳ್ಳಲು ಧಾವಿಸುತ್ತದೆ. ಆಗ ಇತ್ತಲಿಂದ ರಷ್ಯನ್ ಸೈನಿಕರು ಸಹ ಅರ್ಧ ಶಿಥಿಲಗೊಂಡ ಕಟ್ಟಡವೊಂದರಲ್ಲಿ ಕುಳಿತು ಜರ್ಮನ್ ಪಡೆಯನ್ನು ಎದುರಿಸುತ್ತಾರೆ. ಈ ಯುದ್ಧದಲ್ಲಿ ಎರಡೂ ಸೈನ್ಯಕ್ಕೆ ಸೇರಿದ ಲಕ್ಷಾಂತರ ಸೈನಿಕರು, ಸ್ಥಳೀಯರು ಪ್ರಾಣ ಕಳೆದುಕೊಳ್ಳಬೇಕಾಗುತ್ತದೆ. ಆ ಸನ್ನಿವೇಶದ ಕಥೆಯೇ ಈ ಸಿನಿಮಾ.


ಆದರೆ ಸಿನಿಮಾ ಯುದ್ಧದ ಇನ್ನೊಂದು ಮುಖವನ್ನು ಸಹ ತೋರಿಸುತ್ತದೆ. ರಷ್ಯನ್ ಸೈನಿಕರು ಕಾಯುತ್ತಿದ್ದ ಕಟ್ಟಡದಲ್ಲಿಯೇ "ಕಾತ್ಯ" ಅನ್ನುವಾಕೆ ವಾಸವಿರುತ್ತಾಳೆ. ಆಕೆ ತನ್ನ ಪೋಷಕರನ್ನು ಸ್ವಲ್ಪ ದಿನಗಳ ಹಿಂದಷ್ಟೇ ಕಳೆದುಕೊಂಡಿರುತ್ತಾಳೆ. ಯುದ್ಧದ ಸಂದರ್ಭದಲ್ಲಿ ಆಕೆಯನ್ನು ಅಲ್ಲಿಂದ ಸ್ಥಳಾಂತರಿಸಲು ಪ್ರಯತ್ನಿಸಲಾಗುತ್ತದಾದರೂ ಆಕೆ ತನ್ನ ಮನೆಯನ್ನು ಬಿಟ್ಟು ಹೊರಡದೆ ಅಲ್ಲೇ ಕೂರುತ್ತಾಳೆ. ಅಲ್ಲಿ ಕುಳಿತ ಸೈನಿಕರು ಮತ್ತು ಅವಳ ಮಧ್ಯೆ ಬಾಂಧವ್ಯವೊಂದು ಶುರುವಾಗುತ್ತದೆ. ಅವಳನ್ನು ಕಾಪಾಡುತ್ತಲೇ ಆ ಸೈನಿಕರು ವೈರಿಗಳನ್ನು ಎದುರಿಸುತ್ತಾರೆ.


ಇತ್ತ ಜರ್ಮನ್ ಸೈನಿಕ ಕಾಹ್ನ್ ಸಹ ತನ್ನ ತೀರಿಹೋದ ಹೆಂಡತಿಯನ್ನೇ ಹೋಲುವ ರಷ್ಯನ್ ಮಹಿಳೆ ಮಾಷಾಳನ್ನು ನೋಡಿದ ತಕ್ಷಣವೇ ಪ್ರೇಮದಲ್ಲಿ ಬೀಳುತ್ತಾನೆ. ಮೊದಮೊದಲಿಗೆ ಆಕೆ ತಿರಸ್ಕಾರ ತೋರಿದರೂ ಆತ ತೋರುವ ಪ್ರಾಮಾಣಿಕ ಕಾಳಜಿ ಮತ್ತು ಪ್ರೀತಿಗೆ ಸೋಲುತ್ತಾಳೆ. ಪರಸ್ಪರರ ಭಾಷೆಗಳು ಅರ್ಥವಾಗದಿದ್ದರೂ ಅವರಿಬ್ಬರಲ್ಲಿ ಪ್ರೀತಿ ಮೂಡುತ್ತದೆ. ಅಷ್ಟರಲ್ಲಿ ಅಲ್ಲಿಗೆ ಬರುವ ಜರ್ಮನ್ ಮೇಲಧಿಕಾರಿಗೆ ಈ ವಿಷಯ ತಿಳಿದು ತನ್ನ ವಿರೋಧಿ ರಾಷ್ಟ್ರವಾದ ರಷ್ಯಾದವಳಾದ್ದರಿಂದ ಆಕೆಯ ಸಂಗವನ್ನು ಬಿಟ್ಟು ರಷ್ಯನ್ ಸೈನಿಕರು ಕುಳಿತ ಕಟ್ಟಡವನ್ನು ಸುತ್ತುವರೆದು ವಶಪಡಿಸಿಕೊಳ್ಳುವಂತೆ ಆಜ್ಞೆ ಮಾಡುತ್ತಾನೆ. ಕಡೆಯ ದೃಶ್ಯದ ಹೊತ್ತಿಗೆ ಎಲ್ಲವೂ ನಾಮಾವಶೇಷವಾಗುವುದರೊಂದಿಗೆ ಸಿನಿಮಾ ಮುಗಿಯುತ್ತದೆ.


-Santhosh Kumar LM
31-Jan-2020

Friday, January 10, 2020

Kolaigaran (2019)....Tamil movie









ಕೊಲೈಗಾರನ್ (2019) [ತಮಿಳು Murder Mystery, Thriller]

ಅರ್ಜುನ್ ಸರ್ಜಾ, ವಿಜಯ್ ಆಂಟನಿ ನಟಿಸಿದ ಚಿತ್ರ.

ಫ್ಲಾಟ್ ಒಂದರಲ್ಲಿ ಅಮ್ಮ-ಮಗಳು ವಾಸವಿದ್ದಾರೆ. ಅದೇ ಎದುರಿನ ಫ್ಲಾಟ್'ನಲ್ಲಿ ಪ್ರಭಾಕರನ್ ವಾಸವಿದ್ದಾನೆ. ಆತ ಯಾರೊಂದಿಗೂ ಹೆಚ್ಚು ಮಾತನಾಡಲಾರ.


ಅದೊಂದು ದಿನ ಅದೇ ಊರಿನ ನಿರ್ಜನ ಪ್ರದೇಶವೊಂದರಲ್ಲಿ ಶವವೊಂದು ದೊರಕುತ್ತದೆ. ನೋಡಲಾಗಿ ಅದರ ಮುಖವನ್ನು ಗುರುತು ಹಿಡಿಯಲಾಗದಂತೆ ಜಜ್ಜಿ ನಂತರ ಸುಟ್ಟುಹಾಕಲಾಗಿರುತ್ತದೆ.

ಆ ಕೇಸನ್ನು ಕೈಗೆತ್ತಿಕೊಳ್ಳುವ ಡಿಸಿಪಿ ಕಾರ್ತಿಕೇಯನ್ ಬಹುಬೇಗನೆ ಆ ಶವ ಯಾರದೆಂದು ಕಂಡುಹಿಡಿಯುತ್ತಾರೆ. ಜೊತೆಗೆ ಕೊಲೆಯ ಹಿನ್ನೆಲೆಯನ್ನು ಕಂಡುಹಿಡಿಯುತ್ತಾರೆ. ಆದರೆ ಕೊಲೆ ಹೇಗಾಗಿರಬಹುದು ಅನ್ನುವ ಚಿತ್ರಣ ಸರಿಯಾಗಿ ದೊರಕುವುದಿಲ್ಲ. ಅದೊಂದು ದಿನ ಕೊಲೆಗಾರನೇ ಬಂದು ತಾನೇ ಕೊಲೆ ಮಾಡಿದ್ದಾಗಿ ಒಪ್ಪಿಕೊಳ್ಳುತ್ತಾನೆ.

ಇದೇ ನಮಗೆ ಕ್ಲೈಮ್ಯಾಕ್ಸ್ ಅನ್ನಿಸುತ್ತದೆ. ಆದರೆ ಕಥೆ ಅಲ್ಲಿಗೆ ಮುಗಿಯುವುದಿಲ್ಲ. ಕೊಲೆ ಹೇಗಾಗಿರಬಹುದು, ನಿಜವಾಗಿ ಯಾರು ಮಾಡಿದರು, ಏಕೆ ಮಾಡಿದರು ಅನ್ನುವ ವಿಷಯವೇ ಪ್ರೇಕ್ಷಕನನ್ನು ಕೊನೆಯವರೆಗೂ ಹಿಡಿದು ಕೂರಿಸುತ್ತದೆ. ಸಿನಿಮಾ ಮುಗಿದ ಮೇಲಷ್ಟೇ ನಾವು ಒಂದನ್ನೊಂದು ಜೋಡಿಸಿ ಅರ್ಥೈಸಿಕೊಳ್ಳಲು ಸಾಧ್ಯವಾಗುವುದು. ಕೊಲೆಗಾರ ಯಾರೆಂದು ಹೇಳಿ ಕೊಲೆಯ ರೀತಿಯನ್ನು ಕಡೆಯವರೆಗೂ ಹೇಳದಿರುವುದು ಈ ಸಿನಿಮಾದಲ್ಲಿ ಹೊಸತು.

ಡಿಟೆಕ್ಟಿವ್ ಥ್ರಿಲ್ಲರ್ ಸಿನಿಮಾಗಳನ್ನು ನೋಡುವವರಿಗೆ ಈ ಸಿನಿಮಾ ಖುಶಿ ಕೊಡಬಲ್ಲುದು. ಕಥೆಯ ಸಂಕೀರ್ಣತೆ, ರಹಸ್ಯವನ್ನು ಕೊನೆಯವರೆಗೂ ಬಿಟ್ಟುಕೊಡದ ರೀತಿ "ದುರುವಂಗಳ್ ಪದಿನಾರು" ಸಿನಿಮಾವನ್ನು ನೆನಪಿಸುತ್ತದೆ.

ಜಪಾನೀ ಚಿತ್ರ "ಸಸ್ಪೆಕ್ಟ್ ಎಕ್ಸ್"ವನ್ನು ಆಧರಿಸಿಯೇ ಈ ಚಿತ್ರವನ್ನು ರಿಮೇಕ್ ಮಾಡಲಾಗಿದೆ. ಆದರೆ ಕಥೆಯನ್ನು ಅಗತ್ಯಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳಲಾಗಿದೆ.

" ಸಸ್ಪೆಕ್ಟ್ ಎಕ್ಸ್" ನೋಡಿರದಿದ್ದರೆ ಈ ಸಿನಿಮಾವನ್ನು ಧಾರಾಳವಾಗಿ ನೋಡಿ,
ಒಮ್ಮೆ ನೋಡಲು ಅಡ್ಡಿಯಿಲ್ಲ.

-Santhosh Kumar LM
10-Jan-2020

Tuesday, January 7, 2020

The Plan...Kannada Movie





The Plan (Kannada Thriller)-2015

ಕನ್ನಡದಲ್ಲಿ ಥ್ರಿಲ್ಲರ್ ಸಿನಿಮಾಗಳು ಬರುವುದೇ ಕಡಿಮೆಯೇನೋ ಅನ್ನಿಸಿಬಿಡುತ್ತದೆ. ಅಥವ ಇಲ್ಲಿಯ ಪ್ರೇಕ್ಷಕರಿಗೆ ಇಷ್ಟವಾಗುವುದಿಲ್ಲವೇ ಅಂತ ಪ್ರಶ್ನೆ ಕೇಳಿಕೊಂಡರೆ ರಂಗಿತರಂಗದಂತಹ ಅನೇಕ ಸಿನಿಮಾಗಳು ಕಣ್ಣೆದುರಿಗೆ ಬಂದು "ಹಾಗೇನಿಲ್ಲ" ಅಂತ ಉತ್ತರ ಕೊಡುತ್ತವೆ.

ಮೊನ್ನೆ ಸಹೋದ್ಯೋಗಿಯೊಬ್ಬರು ಈ ಸಿನಿಮಾವನ್ನು ನೋಡಿ ಎಂದು ಹೇಳಿದರು. ಹುಡುಕಿದರೆ Netflix ನಲ್ಲೇ ಇದೆ. ಏನೋ ಸುಮಾರಾಗಿರಬೇಕು ಅಂತ ನೋಡಲು ಕುಳಿತವನಿಗೆ ಸಿಕ್ಕಿದ್ದಂತೂ ಅಚ್ಚರಿಯೇ!

ಇಡೀ ಸಿನಿಮಾ ಕುತೂಹಲದಿಂದ ಒಂದು ಕ್ಷಣವೂ ಕಣ್ಮಿಟುಕಿಸದಂತೆ ನೋಡಿಸಿಕೊಳ್ಳುತ್ತೆ. ಒಂದೇ ಹಾಡು. ಚಿತ್ರಕಥೆಯ ಶೈಲಿಯೂ ಅಷ್ಟೇ, ಬೇರಾವುದೋ ಭಾಷೆಯ ಸಿನಿಮಾದಲ್ಲೂ ನೋಡಿದ್ದೇವೆ ಅನ್ನಿಸಿದರೂ ಕನ್ನಡಕ್ಕಿನ್ನೂ ಹೊಸತು.

ಗಂಭೀರ ಕೊಲೆಯ ಆರೋಪದಲ್ಲಿ ಹದಿನೈದು ದಿನಗಳ ಮಟ್ಟಿಗೆ ಜೈಲೊಂದಕ್ಕೆ ಬರುವ ವಿಚಾರಣಾಧೀನ ಖೈದಿಗಳು ತಾವು ಪ್ರಕರಣದಿಂದ ತಪ್ಪಿಸಿಕೊಳ್ಳಲು ಯಾವುದೇ ದಾರಿಯಿಲ್ಲ ಎಂಬ ಸತ್ಯ ಅರಿವಾದಾಗ ಆ ಜೈಲಿನಿಂದ ತಪ್ಪಿಸಿಕೊಳ್ಳುವುದೊಂದೇ ದಾರಿ ಎಂಬ ನಿರ್ಧಾರಕ್ಕೆ ಬರುತ್ತಾರೆ. ಅವರಿಗೆ ಪರೋಕ್ಷವಾಗಿ ಸಹಾಯ ಮಾಡುವಾತ ಅದೇ ದಿನ ಜೈಲರ್ ಆಗಿ ಬರುವ ಹೊಸ ಅಧಿಕಾರಿ (ಅನಂತ್ ನಾಗ್).

ಎಲ್ಲೂ ಬೋರೆನಿಸುವುದಿಲ್ಲ. ಮೂರು ಜನ ಹುಡುಗರೂ ಹೊಸಬರೇ. ಆದರೆ ಇಲ್ಲಿ ಅನಂತ್ ನಾಗ್, ರಮೇಶ್ ಭಟ್, ಪ್ರಮೋದ್ ಶೆಟ್ಟಿ, ಬಿಟ್ಟರೆ ಎಲ್ಲರೂ ಹೊಸಬರೇ. ಆದರೆ ಕಥೆ-ಚಿತ್ರಕಥೆಯೇ ಇಲ್ಲಿ ನಾಯಕ. ಈ ಸಿನಿಮಾ ಸೂಪರ್ ಹಿಟ್ ಆಗಬೇಕಿತ್ತು ಅನ್ನಿಸದೇ ಇರಲಾರದು.

ಇಂತಹ ಸಿನಿಮಾಗಳು ಕನ್ನಡದಲ್ಲಿ ಬರುತ್ತಿರಬೇಕು. ಇಂತಹ ಸಿನಿಮಾ ಬಂದರೆ, ಇದೇ ಬಗೆಯ ಮನರಂಜನೆ ಸಿಗುತ್ತದೆ ಎಂಬ ಖಾತ್ರಿ ಸಿಕ್ಕರೆ ಅದೆಷ್ಟೇ ಹೊಸಬರ ಚಿತ್ರವಾದರೂ ಥಿಯೇಟರಿಗೆ ಹೋಗುವುದಕ್ಕೆ ಹಿಂಜರಿಯಲಾರೆ.

ನೋಡಿರದಿದ್ದರೆ ಒಮ್ಮೆ ನೋಡಿ. (Netflix ನಲ್ಲಿದೆ)

-Santhosh Kumar LM
06-Jan-2020

Friday, January 3, 2020

One Cut Of The Dead (2017)...Japanese movie








One Cut Of The Dead (2017)

2017ರಲ್ಲಿ ಬಿಡುಗಡೆಯಾದ ಜಪಾನೀ ಭಾಷೆಯ ಚಿತ್ರ. ಬಹುಶಃ ಈ ಸಿನಿಮಾ ಮಾಡುವಾಗ ಸ್ವತಃ ಅದರ ನಿರ್ಮಾತೃಗಳಿಗೂ ಅದು ಇಷ್ಟು ಜನಪ್ರಿಯವಾಗುತ್ತದೆ ಅಂತ ಕನಸು-ಮನಸಿನಲ್ಲಿಯೂ ಎಣಿಸಿರಲಿಲ್ಲವೆಂದು ಕಾಣುತ್ತದೆ. ಏಕೆಂದರೆ ಈ ಸಿನಿಮಾ ಬಿಡುಗಡೆ ಮಾಡಿದ್ದೇ ಒಂದು ಥಿಯೇಟರಿನಲ್ಲಿ. ಅದೂ ಆರು ದಿನಗಳ ಪ್ರದರ್ಶನದ ಒಪ್ಪಂದದ ಮೇರೆಗೆ!

ನೋಡಿ. ಹೊಸ ಆಲೋಚನೆ, ಕೆಲಸದ ಗುಣಮಟ್ಟವಷ್ಟೇ ಅನೇಕ ಸಲ ಮುಖ್ಯವಾಗುತ್ತದೆ. ಅದಕ್ಕೆ ಹಾಕಿದ ಹಣವಲ್ಲ. ಇಪ್ಪತ್ತು ಲಕ್ಷ ರೂಪಾಯಿಗಿಂತಲೂ ಕಡಿಮೆ ಬಜೆಟ್ಟಿನ ಚಿತ್ರವೊಂದು ಜಪಾನೊಂದರಲ್ಲೇ ಇನ್ನೂರು ಕೋಟಿ ದುಡ್ಡು ಮಾಡಿತು. ಅದರ ಮೌಲ್ಯ ತಿಳಿದ ಪ್ರಸಿದ್ಧ ಹಂಚಿಕೆದಾರರೊಬ್ಬರು ವಿದೇಶಗಳಲ್ಲೂ ಬಿಡುಗಡೆ ಮಾಡಿದ್ದರಿಂದ ಅಲ್ಲೂ ಇನ್ನೂರು ಕೋಟಿಗಿಂತಲೂ ಹೆಚ್ಚು ಸಂಪಾದಿಸಿತು.

ಇಪ್ಪತ್ತು ಲಕ್ಷವೆಲ್ಲಿ? ನಾಲ್ಕುನೂರು ಕೋಟಿಯೆಲ್ಲಿ?! ಇದಕ್ಕೆ ಕಾರಣ ಸಿನಿಮಾದ ಹೊಸತು ಎನಿಸುವ ಕಥೆಯೊಂದನ್ನು ಕೊಟ್ಟಿದ್ದು ಅಷ್ಟೇ!!

ಇದೊಂದು Zombie Horror ಚಿತ್ರ...."ಅಂತ ಅಂದುಕೊಳ್ಳಿ" ಅಂತಲೇ ಇಲ್ಲಿ ಹೇಳುತ್ತೇನೆ. ಏಕೆಂದರೆ ಸಿನಿಮಾದೊಳಗೆ ನಾವೇ ನಂಬಲಾಗದ ಅನೇಕ ಆಶ್ಚರ್ಯಕರ ಸಂಗತಿಗಳು ತೆರೆದುಕೊಳ್ಳುತ್ತ ಹೋಗುತ್ತವೆ. ಎಲ್ಲವನ್ನು ನೋಡುವ ಮುನ್ನವೇ ಹೇಳಿದರೆ ಇಲ್ಲಿ ನಿಮ್ಮ ಕುತೂಹಲವನ್ನು ಕೊಂದಂತಾಗಬಹುದು.

ಒಂದು Zombie ಚಿತ್ರವನ್ನು ಚಿತ್ರೀಕರಿಸಲು ಹಳತಾದ ಬಂಗಲೆಯೊಳಕ್ಕೆ ತಂಡವೊಂದು ಬರುತ್ತದೆ. ಆ ಬಂಗಲೆ ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಯಾವುದೋ ಪ್ರಯೋಗಗಳಿಗೆ ಬಳಸಿಕೊಳ್ಳಲಾಗಿತ್ತು ಅನ್ನುವುದು ಗೊತ್ತಾಗುತ್ತದೆ. ಚಿತ್ರೀಕರಣ ಶುರುವಾಗುತ್ತದೆ. Zombie ಪಾತ್ರಧಾರಿ ಎದುರಿಗೆ ಬಂದಾಗ ಭಯಪಡುವ ದೃಶ್ಯ ನಿರ್ದೇಶಕನಿಗೆ ತೃಪ್ತಿ ಕೊಡುವುದಿಲ್ಲ. ಕೋಪಿಸಿಕೊಂಡವನೇ ಎಲ್ಲರ ಮೇಲೆ ಕೂಗಾಡಿ ಹೊರಗೆ ಹೋಗುತ್ತಾನೆ. ನಟಿ ಬೇಸರದಲ್ಲಿದ್ದರೆ ಎಲ್ಲರೂ ನಿರ್ದೇಶಕ ಮರಳಿ ಬರಲಿ ಎಂದು ಕಾಯುತ್ತಿರುತ್ತಾರೆ. ಇದ್ದಕ್ಕಿದ್ದ ಹಾಗೆ ರಕ್ತಸಿಕ್ತವಾದ ನಿಜವಾದ Zombieಯೇ ಅಲ್ಲಿ ಪ್ರತ್ಯಕ್ಷವಾಗುತ್ತದೆ. ಅಲ್ಲಿ ಕುಳಿತಿದ್ದವರೆಲ್ಲ ಓಡಲು ಶುರುವಿಟ್ಟುಕೊಂಡರೆ ಅದು ಹಿಂಬಾಲಿಸುತ್ತದೆ. ಅದನ್ನು ಎದುರಿಸುವಾಗ ಮತ್ತೊಂದು....!! ಎದೆ ಢವಢವ ಶುರುವಿಟ್ಟುಕೊಂಡರೆ......

ಹೀಗೆ ಆರಂಭವಾಗುವ ಸಿನಿಮಾ ಎಲ್ಲೆಲ್ಲೋ ಸಾಗುತ್ತದೆ. ಇದ್ದಕ್ಕಿದ್ದಂತೆ ಮಧ್ಯದಲ್ಲಿಯೇ ಸಿನಿಮಾ ಮುಗಿದ ಫೀಲ್.... ಎಂಡ್ ಕ್ರೆಡಿಟ್ಸ್ ಶುರುವಾಗುತ್ತದೆ.

ಇನ್ನೇನು ಮುಗಿಯಿತು ಅನ್ನುವಷ್ಟರಲ್ಲಿ ಅಲ್ಲೇ ಇನ್ನೊಂದು ಕಥೆ! ಎಲ್ಲವೂ ಅಯೋಮಯ. ಪ್ರೇಕ್ಷಕ ತಲೆಕೆಡಿಸಿಕೊಳ್ಳುತ್ತಾನೆ ಅನ್ನುವಷ್ಟರಲ್ಲಿ ನಿರಾಳ!

ಅದರ ಬಗ್ಗೆ ಹೆಚ್ಚಿಗೆ ಇಲ್ಲಿ ಹೇಳಬಾರದು. ಸಿನಿಮಾ ನೋಡಿ.

Zombie ಸಿನಿಮಾಗಳನ್ನು ನೋಡುವವರಿಗೆ ಎಲ್ಲ ಸಿನಿಮಾಗಳಂತೆ ಇದು ಸಾಮಾನ್ಯ ಅನ್ನಿಸಿದರೂ ಒಂದು ಘಟ್ಟ ಮುಗಿದ ನಂತರ ಬೇರೆಯದೆ ಅನ್ನಿಸಿಕೊಂಡು ಮನರಂಜನೆ ನೀಡುವುದು ಖಂಡಿತ. ನೋಡಿರದಿದ್ದರೆ ನೋಡಿ. ಮೊದಲ ನಲವತ್ತೈದು ನಿಮಿಷಗಳನ್ನು ಒಂದೇ ಶಾಟ್'ನಲ್ಲಿ ಚಿತ್ರೀಕರಿಸಿಕೊಳ್ಳಲಾಗಿದೆ! ಸಿನಿಮಾ ಮುಗಿದ ಮೇಲೆ ಅದರ ಚಿತ್ರೀಕರಣದ ಬಗ್ಗೆಯೂ ಖಂಡಿತ ತಲೆಕೆಡಿಸಿಕೊಳ್ಳುತ್ತೀರಿ!


ಭಾಷೆ ಯಾವುದಾದರೂ ಸರಿ ಅನ್ನುವ, ಹೊಸತನ್ನು ಬಯಸುವ ಸಿನಿಪ್ರಿಯರು ಈ ಸಿನಿಮಾ ನೋಡಬಹುದು. ಸಿನಿರಂಗದಲ್ಲೇ ಕೆಲಸ ಮಾಡುವವರು ಈ ಸಿನಿಮಾ ನೋಡಿದರೆ ಹೊಸಪ್ರಯತ್ನಗಳ ಬಗ್ಗೆ ನಂಬಿಕೆಯನ್ನು ಜೀವಂತವಾಗಿರಿಸಿಕೊಳ್ಳಬಹುದು.

-Santhosh Kumar LM

03-Jan-2020

ಅವನೇ ಶ್ರೀಮನ್ನಾರಾಯಣ (2019)







ಅವನೇ ಶ್ರೀಮನ್ನಾರಾಯಣ (2019)

ಈ ಸಿನಿಮಾವನ್ನು ನೀವಿನ್ನೂ ನೋಡಿರದಿದ್ದರೆ ಈ ಬರಹವನ್ನು ಮುಂದೆ ಓದಬೇಡಿ. ಸಿನಿಮಾ ನೋಡಿ ಬನ್ನಿ. ಖಂಡಿತವಾಗಿಯೂ ಇದು ಒಮ್ಮೆ ನೋಡಲೇಬಹುದಾದ ಸಿನಿಮಾ.

ಸಿನಿಮಾ ನೀವೀಗಾಗಲೇ ನೋಡಿದ್ದು ನಿಮಗೆ ಸಿಕ್ಕಾಪಟ್ಟೆ ಇಷ್ಟವಾಗಿದ್ದರೆ ನಾನು ಬರೆದಿರುವ ‌ಕೆಲವು ವಿಷಯಗಳು ನಿಮಗೆ ಅಸಮಾಧಾನ ತರಬಹುದು. ಕ್ಷಮೆಯಿರಲಿ.

The proof of the pudding is in the eating ಅನ್ನುವ ಮಾತೊಂದಿದೆ. ಅದರರ್ಥ ಯಾವುದೇ ವಿಚಾರ ಅರ್ಥವಾಗಬೇಕೆಂದರೆ ಅದನ್ನು ಸ್ವತಃ ಅನುಭವಿಸಿದಾಗಲಷ್ಟೇ ಅಂತ. ಹೀಗಾಗಿ ಗೆಳೆಯರು ಬಗೆಬಗೆಯ ಅಭಿಪ್ರಾಯ ಹೇಳಿದರೂ "ಅವನೇ ಶ್ರೀಮನ್ನಾರಾಯಣ" ಸಿನಿಮಾವನ್ನು ಚಿತ್ರಮಂದಿರದಲ್ಲಿಯೇ ನೋಡುವ ನಿರ್ಧಾರ ಮಾಡಿದೆ. ಏಕೆಂದರೆ ಈ ಸಿನಿಮಾವನ್ನು ಈಗ ನೋಡದೇ ನಂತರ ಅಮೇಜಾನ್ ಪ್ರೈಮ್‌ನಲ್ಲೋ ಅಥವಾ ನೆಟ್‌ಫ್ಲಿಕ್ಸ್‌ನಲ್ಲೋ ನೋಡುವ ಸಿನಿಮಾವಲ್ಲ. ಕೋಟಿ ಕೋಟಿ ಸುರಿದು, ಹಗಲು ರಾತ್ರಿಯೆನ್ನದೇ ವರ್ಷಾನುಗಟ್ಟಲೆ ಸಮಯ-ಬುದ್ಧಿ ವ್ಯಯಿಸಿದ ಸಿನಿಮಾವನ್ನು ನೋಡುವ ರೀತಿಯೂ ಅದಲ್ಲ. ಅದಿರಲಿ. ನನಗನ್ನಿಸಿದಂತೆ ಇದು great ಸಿನಿಮಾ ಅಲ್ಲ. ಹಾಗಂದ ಕ್ಷಣ ಇದು ಕೆಟ್ಟ ಸಿನಿಮಾ ಅಂತ ಧ್ವನಿಸುವ ಅಪಾಯವಿದೆ. ಹಾಗಾಗಿ ಕೊಂಚ ವಿವರವಾಗಿ ಬರೆಯುವ ಪ್ರಯತ್ನ ಮಾಡಿದ್ದೇನೆ‌. ಕೆಲ ವಿಷಯಗಳಲ್ಲಿ ಹೆಚ್ಚು ಆಸ್ಥೆ ವಹಿಸಿದ್ದರೆ KGFರೀತಿಯೇ ಇನ್ನೂ ಹೆಚ್ಚು ಸದ್ದು ಮಾಡುವ ಎಲ್ಲ ಸಾಧ್ಯತೆಯಿತ್ತು.

ನಿಂಬೆಹಣ್ಣನ್ನು ಡೆಲ್ಲಿಯಿಂದ ತರಿಸಿದೆ. ಕಡ್ಲೆಕಾಯಿ ಉತ್ತರಪ್ರದೇಶದ್ದು. ಎಣ್ಣೆ ಮಧ್ಯಪ್ರದೇಶದ್ದು. ಉಪ್ಪು ಕನ್ಯಾಕುಮಾರಿದು. ಕಡ್ಲೆಬೇಳೆ ತಿರುವನಂತಪುರದ್ದು. ಹಸಿಮೆಣಸಿನಕಾಯಿ ಕಾಶ್ಮೀರದ್ದು. ಸಾಸಿವೆ ಬಂಗಾಳದ್ದು.......ಇತ್ಯಾದಿ

ಹೀಗೆ ಯಾವ ಯಾವ ಪದಾರ್ಥಗಳನ್ನು ಎಲ್ಲೆಲ್ಲಿಂದ ಎಷ್ಟೆಷ್ಟು ಕಷ್ಟಪಟ್ಟು ತರಿಸಿದೆವು ಅಂತ ಯಾರಾದರೂ ಹೇಳುತ್ತಾರೆ ಅಂದುಕೊಳ್ಳೋಣ. ಅವೆಲ್ಲವೂ ಮುಖ್ಯವಾಗುತ್ತವಾ? ಇಲ್ಲ. ಚಿತ್ರಾನ್ನ ಮಾಡಿ ತಟ್ಟೆಯಲ್ಲಿ ಕೊಟ್ಟಾಗ ಅದರ ಮೊದಲ ತುತ್ತನ್ನು ತೆಗೆದು ಬಾಯಿಗಿಟ್ಟು ಆಸ್ವಾದಿಸುತ್ತೇವಲ್ಲ. ಆ ಕ್ಷಣದಲ್ಲಿ ಅದನ್ನು ತಿನ್ನುತ್ತಿರುವವನಿಗೆ ಅದರ ರುಚಿ ಹೇಗಿತ್ತು ಅನ್ನುವುದಷ್ಟೇ ಅಲ್ಲಿ ಮುಖ್ಯವಾಗುತ್ತದೆ.

ಈ ಸಿನಿಮಾದಲ್ಲಿ ಆಗಿದ್ದು ಅದೇ‌. ಸಿನಿಮಾ ಮುಗಿದು ಹೊರಬರುವಾಗ ಏನೋ ಮಿಸ್ ಆಯ್ತಲ್ಲ ಅಂತ ಅನ್ನಿಸುವುದು ಸಹಜ. ಆ ನಿಟ್ಟಿನಲ್ಲಿ ಅದಕ್ಕೆ ಕಾರಣಗಳೇನಿರಬಹುದು ಅನ್ನುವುದನ್ನು ಯೋಚಿಸಲು ಪ್ರಯತ್ನಪಟ್ಟಿದ್ದೇನೆ ಅಷ್ಟೇ. ಇದು "ಅವನೇ ಶ್ರೀಮನ್ನಾರಾಯಣ" ಸಿನಿಮಾದ ವಿಮರ್ಶೆಯಲ್ಲ. ಇದು ನನ್ನ ಅಭಿಪ್ರಾಯ ಅಷ್ಟೇ. ಹತ್ತನೇ ತರಗತಿಯಲ್ಲಿ ಫೇಲಾದವನನ್ನು, ಡಿಗ್ರಿಯಲ್ಲಿ ಫೇಲಾದವನನ್ನು, ಎಂಬಿಎ ಮಾಡಲು ಪರೀಕ್ಷೆ ಬರೆದು ಕಮ್ಮಿ ಮಾರ್ಕ್ಸ್ ತೆಗೆದುಕೊಂಡವರನ್ನು ಒಂದೇ ತಕ್ಕಡಿಯಲ್ಲಿ ತೂಗಿ ಎಲ್ಲರೂ ಒಂದೇ ಎಂದು ಹೇಳಲು ಹೇಗೆ ಸಾಧ್ಯವಿಲ್ಲವೋ, ಹಾಗೆಯೇ "ಅವನೇ,,,ಶ್ರೀ" ಸಿನಿಮಾವನ್ನು ಕೂಡ ಉಳಿದ ಸಿನಿಮಾಗಳಿಗೆ ಹೇಳುವಂತೆ ಒಂದೇ ವಾಕ್ಯದಲ್ಲಿ ಹೇಗಿದೆ ಎಂದು ಹೇಳಲು ಅಸಾಧ್ಯ. ಮೊನ್ನೆ ಈ ಸಿನಿಮಾದ ಪ್ರೀಮಿಯರ್ ಶೋ ನೋಡಿ ಬಂದ ಅನೇಕರಿಗೆ ಹೇಗಿದೆ ಎಂದು ಕೇಳಿದ್ದಕ್ಕೆ ಅವರು ಕೊಟ್ಟ ಉತ್ತರವೂ ಹೀಗೆಯೇ ಇತ್ತು. ಆಗಲೇ ಹೀಗಿರಬಹುದಾ ಅನಿಸಿತ್ತು.

ಕಾರಣ ನಮಗೆಲ್ಲರಿಗೂ ಗೊತ್ತಿದೆ. "ಅವನೇ ಶ್ರೀ.." ಎರಡು ತಿಂಗಳಲ್ಲಿ ಸ್ಕ್ರಿಪ್ಟ್ ಮುಗಿಸಿ, ನಲವತ್ತು ದಿನಗಳಲ್ಲಿ ಚಿತ್ರೀಕರಣ ಮಾಡಿ, ಒಂದು ತಿಂಗಳಲ್ಲಿ ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿಸಿ, ತರಾತುರಿಯಲ್ಲಿ ಬಂದ ಸಿನಿಮಾವಲ್ಲ. ಸಿನಿಮಾ ತಂಡದ ಮೂರುವರ್ಷಗಳ ಕಠಿಣ ಶ್ರಮ ನಮಗೆ ತೆರೆಯಲ್ಲಿ ಎದ್ದು ಕಾಣುತ್ತದೆ. ಅಮರಾವತಿಯೆಂಬ ಕಾಲ್ಪನಿಕ ನಗರ, ಅಲ್ಲಿ ನಡೆಯುವ ಕಥೆ, ಪಾತ್ರಧಾರಿಗಳ ನಟನೆ, ಉಡುಗೆ ಎಲ್ಲಕ್ಕೂ ಹಾಕಿದ ಶ್ರಮ ನಿಜಕ್ಕೂ ಎದ್ದು ಕಾಣುತ್ತದೆ. Presentation ವಿಚಾರಕ್ಕೆ ಬಂದರೆ ಈ ಸಿನಿಮಾ ಖಂಡಿತವಾಗಿಯೂ ಎತ್ತರದಲ್ಲಿ ನಿಲ್ಲುತ್ತದೆ.

ಹಾಗಂತ ಸಿನಿಮಾ ಒಂದು ಪ್ರಾಡಕ್ಟ್ ಆಗಿ ಇಷ್ಟವಾಗಲೇಬೇಕೇ? ಇಲ್ಲದೆಯೂ ಇರಬಹುದು. ಅದಕ್ಕೆ ಕಾರಣವೂ ಇರುತ್ತದೆ. ನಮಗೆ ಬೆಸ್ಟ್ ಅನ್ನಿಸುವ ಕಥೆ ಇನ್ನೊಬ್ಬನಿಗೆ ಸಾಧಾರಣ ಅನ್ನಿಸಬಹುದು. ಮೇಕಿಂಗ್ ಎಷ್ಟು ಚಂದವೇ ಇದ್ದರೂ ಕಥೆಯೂ ಅದಕ್ಕೆ ಜೀವಾಳವೇ. ಅದನ್ನು ಎಲ್ಲಿಯೂ ಅಲ್ಲಗೆಳೆಯುವಂತಿಲ್ಲ. ವೈಯಕ್ತಿಕವಾಗಿ ನನಗೆ ಕೊರತೆ ಅನ್ನಿಸಿದ್ದು ಕಥೆಯೇ. "ಅವನೇ ಶ್ರೀ.." ಸಿದ್ಧ ಮಾಡಿಕೊಂಡ ದೊಡ್ಡ ವೇದಿಕೆಗೆ ಅಯ್ದುಕೊಂಡ ಕಥೆ ತಕ್ಕುದಾಗಲಿಲ್ಲ. ಪರಿಪೂರ್ಣ ಅನಿಸಿಕೊಳ್ಳಲು ಮತ್ತು ಸಿನಿಮೀಯ ಅನುಭವ ನೀಡಲು ಆಯ್ದುಕೊಂಡ ಮತ್ತು ನಿರ್ಲಕ್ಷಿಸಿದ ವಿಷಯಗಳೇ ಕಥೆಯ ಪ್ರಮುಖ ಹಂತಗಳಲ್ಲಿ ಪ್ರೇಕ್ಷಕನಿಗೆ ರೋಮಾಂಚಕ ಅನುಭವಗಳನ್ನು ನೀಡಲು ವಿಫಲವಾದವು. ಯಾವುದೇ Genreನ ಕಮರ್ಷಿಯಲ್ ಸಿನಿಮಾಗಳಾಗಲಿ, ಅಲ್ಲಲ್ಲಿ ಆ ಬಗೆಯ ಅಂಶಗಳು ಇರಲೇಬೇಕು. ಅದು ನಾಯಕನ ಎಂಟ್ರಿ ದೃಶ್ಯದ ಮುನ್ನ ನಾವು ಪ್ರೇಕ್ಷಕನಿಗೆ ಕಟ್ಟಿಕೊಡುವ ಹಿನ್ನೆಲೆಯಿರಬಹುದು. ಅಥವಾ ನಿಧಿ ಸಿಕ್ಕಾಗಿನ ದೃಶ್ಯವಿರಬಹುದು, ಅಥವ ಅನಿರೀಕ್ಷಿತ ಸಂದರ್ಭದಲ್ಲಿ ದಿಢೀರ್ ಸಂಭವಿಸುವ ಘಟನೆಯಾಗಬಹುದು. "ಉಳಿದವರು ಕಂಡಂತೆ" ಸಿನಿಮಾದ (ರಿಶಬ್ ಶೆಟ್ಟಿ-ತಾರ) ಅಮ್ಮ-ಮಗ ಅನೇಕ ವರ್ಷಗಳ ನಂತರ ಮುಖಾಮುಖಿಯಾಗುವ ದೃಶ್ಯ, KGFನ ಮಣ್ಣಲ್ಲಿ ಬಿದ್ದ ಬ್ರೆಡ್‌ಅನ್ನು ನಾಯಕ ಕಾರು ನಿಲ್ಲಿಸಿ ಆ ತಾಯಿಗೆ ಎತ್ತಿಕೊಡುವ ಈ ಬಗೆಯ ದೃಶ್ಯಗಳನ್ನು ಮರೆಯಲು ಸಾಧ್ಯವೇ?

ಸಿನಿಮಾದ ಕಾಲಾವಧಿ ಮೂರು ಗಂಟೆಗೂ ಹೆಚ್ಚು, ಇದು ಖಂಡಿತವಾಗಿಯೂ ಜಾಸ್ತಿಯೇ. ಆದರೆ ಎಲ್ಲಿಯೂ ಬೋರ್ ಹೊಡೆಸುವುದಿಲ್ಲ ಅನ್ನುವಷ್ಟರ ಮಟ್ಟಿಗೆ ಸಿನಿಮಾದ ನಿರೂಪಣೆಯ ಬಗ್ಗೆ ನನ್ನ ಮೆಚ್ಚುಗೆಯಿದೆ. ರಕ್ಷಿತ್ ಶೆಟ್ಟಿಯವರಿಗೆ ತನ್ನ Strength & Weakness ಬಗ್ಗೆ ಅರಿವಿದೆ. ಮತ್ತು ತನ್ನ ಯಾವ ಮ್ಯಾನರಿಸಂ ಪ್ರೇಕ್ಷಕನಿಗೆ ಇಷ್ಟವಾಗಬಹುದೆಂದು ಗೊತ್ತಿದೆ. ಹಾಗಾಗಿ ಅದನ್ನೇ ಈ ಸಿನಿಮಾದಲ್ಲಿ ಅಳವಡಿಸಿಕೊಂಡಿದ್ದಾರೆ. ಅದು ಸರಿಯಾಗಿ ಕೆಲಸಮಾಡಿದೆ ಕೂಡಾ. "Hands-up" ಹಾಡು ಬಿಟ್ಟರೆ ಉಳಿದವು ಮನಸ್ಸಿಗೆ ನಾಟಲಿಲ್ಲ. ಆದರೆ ಸಿನಿಮಾ ಪೂರ್ತಿ ಅಮರಾವತಿಯ ಕಾಲ್ಪನಿಕ ಲೋಕದಲ್ಲಿ ತೇಲಿಸಿದ್ದು ಮಾತ್ರ ಚಿತ್ರದುದ್ದಕ್ಕೂ ತೇಲಿ ಬರುವ ಹಿನ್ನೆಲೆ ಸಂಗೀತ. ಪ್ರತೀ ಚಿತ್ರದಲ್ಲಿ ಉತ್ತಮ್ಮ ಹಿನ್ನೆಲೆ ಸಂಗೀತವನ್ನು ಆಸ್ವಾದಿಸುತ್ತ ಇದೀಗ ನಮ್ಮ expectation ಕೂಡ ಹಾಗೆಯೇ ಬೆಳೆಯುತ್ತಿದೆ ಅನ್ನುವುದಕ್ಕೆ ಈಗ ನಮಗೆ ಸಿಗುತ್ತಿರುವ ಹಿನ್ನೆಲೆ ಸಂಗೀತದ ಗುಣಮಟ್ಟವೇ ಸಾಕ್ಷಿ.

ಅಮರಾವತಿಯ ಕೋಟೆಯನ್ನು, ಕೋಟೆಯೊಳಗಿನ ನಾಯಕನನ್ನು, ಹೊಡೆದಾಟದ ದೃಶ್ಯಗಳನ್ನು ಅದ್ಭುತವಾಗಿ ತೋರಿಸಿರುವ ಕ್ಯಾಮೆರಾ ಕೆಲಸ ಶ್ಲಾಘನೀಯ. ಅಮರಾವತಿಯ ಪ್ರಪಂಚವನ್ನೇ ಕಟ್ಟಿಕೊಟ್ಟ ಕಲಾನಿರ್ದೇಶನದ ವಿಭಾಗಕ್ಕೂ ಕ್ರೆಡಿಟ್ ಸಲ್ಲಬೇಕು. ಕಡೆಯ ಹೊಡೆದಾಟದ ದೃಶ್ಯದಲ್ಲಿ ಸಿಗುವ ನೈಜತೆ, ಥ್ರಿಲ್ ಮೊದಲ ಬಾರ್'ನೊಳಗಿನ ಹೊಡೆದಾಟದ ದೃಶ್ಯದಲ್ಲಿ ಸಿಗಲಿಲ್ಲ. ಇಂಥ ದೃಶ್ಯಗಳಲ್ಲಿ ಲೋಪವನ್ನೆಲ್ಲ ಮುಚ್ಚಿಹಾಕಿದ್ದು ಮಾತ್ರ ರಕ್ಷಿತ್-ಅಚ್ಯುತ್ ಜೋಡಿಯ ನಕ್ಕುನಗಿಸುವ ತಿಳಿಹಾಸ್ಯ.

ಮತ್ತದೇ ಬರವಣಿಗೆಯ ವಿಭಾಗಕ್ಕೆ ಬಂದರೆ ನಾಟಕ ತಂಡ, ಅವರ ಹಿನ್ನೆಲೆ, ನಿಧಿಯ ರಹಸ್ಯ, ಸಮುದ್ರಮಂಥನದ ನಾಟಕ, ನಿಧಿಯನ್ನು ಪತ್ತೆ ಹಚ್ಚುವಿಕೆ ಇವೆಲ್ಲವೂ ಒಗಟಿನ ರೀತಿಯಲ್ಲೇ ಇದ್ದರೂ ಅವನ್ನು ಬಿಡಿಸಿದಾಗಲೂ ಏನೋ ಹೊಸದು ಅನ್ನಿಸಿಕೊಳ್ಳಲಿಲ್ಲ. ಆ ಭಾಗವೂ ರಸಾನುಭವ ಕೊಡುವಲ್ಲಿ ವಿಫಲವಾಯಿತು.

ಇವೆಲ್ಲದರ ಮಧ್ಯೆ ನಾವೂ ಸಿನಿಮಾದ ಹೀರೋಗಳೇ ಅನಿಸಿಕೊಂಡವರು ಮಾತ್ರ ಖಳನಟರಾದ ಬಾಲಾಜಿ ಮನೋಹರ್ ಮತ್ತು ಪ್ರಮೋದ್ ಶೆಟ್ಟಿ. ಕನ್ನಡ ಚಿತ್ರರಂಗ ಇವರನ್ನು ಹೀಗೆಯೇ ಹೆಚ್ಚು ಅವಕಾಶ ನೀಡಿ ಬಳಸಿಕೊಳ್ಳುವಂತಾಗಲಿ.

ಯಾವುದೇ ಕನ್ನಡ ಸಿನಿಮಾದ ಬಗ್ಗೆ ಕನ್ನಡ ಪ್ರೇಕ್ಷಕರಾಗಿ ದ್ವೇಷ ನಮಗೇಕಿರಬೇಕು? ನಮ್ಮ ಕನ್ನಡ ಸಿನಿಮಾ...ಅದರ ಬಗ್ಗೆ ನಮ್ಮ expectation ಹೆಚ್ಚಿರಬೇಕು. ಅದಕ್ಕೆ ತಕ್ಕುದಾದ ಸಿನಿಮಾಗಳನ್ನು ಚಿತ್ರರಂಗದವರು ಮಾಡಬೇಕು. ಮತ್ತು ಆ ಸಿನಿಮಾಗಳು ಜಗತ್ತನ್ನು ಮುಟ್ಟಬೇಕು. ಎಲ್ಲ ಕಡೆ ನಮ್ಮ ಎದೆತಟ್ಟಿಕೊಳ್ಳುತ್ತ "ನಮ್ಮ ಸಿನಿಮಾ ನೋಡಿ" ಅಂತ ಹೇಳಬೇಕೆನ್ನುವುದು ದೂರದಾಸೆ. ಆ ಬಗೆಯ ಅನಿಸಿಕೆಯನ್ನು ಅತ್ತ ಕಡೆ ಗುರಿಯಿಟ್ಟವರಿಗಷ್ಟೇ ಹೇಳಲು ಸಾಧ್ಯವಲ್ಲವೇ? ಹಾಗಾಗಿಯೇ ಈ ಅಭಿಪ್ರಾಯ "ಅವನೇ ಶ್ರೀ.." ತಂಡಕ್ಕೆ.

ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಚೆನ್ನಾಗಿ ಸಂಪಾದಿಸಲಿ. ಮತ್ತೆ ಇದೇ ಚಿತ್ರತಂಡ ಇನ್ನೂ ದೊಡ್ಡ ಸಾಹಸಗಳಿಗೆ ಕೈಹಾಕಲಿ ಎಂಬ ಹಾರೈಕೆಯೊಂದಿಗೆ.....

-Santhosh Kumar LM
30-Dec-2019