Wednesday, September 25, 2019

Tamil movie : ಮನುಸಂಗಡ

ಮನುಸಂಗಡ (Manusangada)
(ಮನುಷ್ಯರೇ ಕಣ್ರೋ...(ನಾವೂ))....
ತಮಿಳು ಸಿನಿಮಾ (2018)
------------------------------

ಕೊಳಪ್ಪನ್ ಇದೀಗ ಚೆನ್ನೈನಲ್ಲಿ ಕೆಲಸ ಮಾಡುತ್ತಿದ್ದಾನೆ. ಅದೊಂದು ಮಧ್ಯರಾತ್ರಿ ಊರಿನಿಂದ ತಂದೆ ತೀರಿಕೊಂಡ ಸುದ್ದಿ ಬರುತ್ತದೆ. ತಕ್ಷಣವೇ ಬಸ್ಸಿನಲ್ಲಿ ಹೊರಟು ತನ್ನ ಹಳ್ಳಿಗೆ ಬರುತ್ತಾನೆ.

ಒಂದೆಡೆ ಅಪ್ಪನನ್ನು ಕಳೆದುಕೊಂಡ ದುಃಖ ಮನಸ್ಸನ್ನು ಆವರಿಸಿದ್ದರೆ ಇನ್ನೊಂದು ಕಡೆ ಆತಂಕ. ಅದಕ್ಕೆ ಕಾರಣ, ಆ ಹಳ್ಳಿಯಲ್ಲಿ ಕಾಲಾನುಕಾಲದಿಂದ ಜಾತಿ ಕಲಹವಿದೆ. ಕೊಳಪ್ಪನ್ ದಲಿತ ಸಮುದಾಯಕ್ಕೆ ಸೇರಿದವನು.
ಆ ಹಳ್ಳಿಯಲ್ಲಿ ಶವವನ್ನು ಹೊತ್ತು ಹೋಗಲು ಇರುವುದೊಂದೇ ಸಾಮಾನ್ಯ ದಾರಿ. ಅಲ್ಲಿ ಮೇಲ್ಜಾತಿಯವರ ಮನೆಗಳಿವೆ. ಇನ್ನೊಂದು ದಾರಿಯನ್ನು ದಾರಿ ಅಂತ ಕರೆಯಲೇ ಸಾಧ್ಯವಿಲ್ಲ. ಕಲ್ಲು ಮುಳ್ಳುಗಳೇ ತುಂಬಿವೆ. ಸಾಮಾನ್ಯ ದಾರಿಯಲ್ಲಿ ಶವ ಹೊತ್ತು ಹೋಗಲು ಮೇಲ್ಜಾತಿಯವರು ಬಿಡುವುದಿಲ್ಲ. ಹಿಂದೆಯೂ ಅನೇಕ ಬಾರಿ ಇದೇ ವಿಷಯಗಳಿಗೆ ಹೊಡೆದಾಟವಾಗಿ ಆ ಕ್ಷೇತ್ರದ ಶಾಸಕರೆಲ್ಲ ಬರುತ್ತಾರಾದರೂ ಅವರ ಸಂಧಾನವೆಲ್ಲ "ಇದೊಂದು ಬಾರಿ ಆ ಇನ್ನೊಂದು ದಾರಿಯಲ್ಲಿಯೇ ಹೋಗಿಬಿಡಿ" ಅನ್ನುವ ಹೇಳಿಕೆಗಳಲ್ಲೇ ಮುಗಿಯುತ್ತವೆ.

"ಸಾಯುವವರೆಗೂ ಅವರ ಮನೆಗಳಲ್ಲೇ ಜೀತ ಮಾಡಿದ ನಮ್ಮಪ್ಪ, ಆತ ತೀರಿಕೊಂಡ ತಕ್ಷಣ ಅವನ ಶವವೂ ಸಾಗಬಾರದ ಹಾಗೆ ಹೇಗೆ ಅನಿಷ್ಟವಾಗಿ ಹೋದ" ಅಂತ ಕೊಳಪ್ಪ ತನಗೇ ಪ್ರಶ್ನೆ ಹಾಕಿಕೊಳ್ಳುತ್ತಾನೆ. ಹೀಗಾಗಿ ಈ ಬಾರಿ ಕೊಳಪ್ಪನ್ ಮತ್ತು ಅವನ ಗೆಳೆಯರು ಶವಯಾತ್ರೆ ಸಾಮಾನ್ಯ ದಾರಿಯಲ್ಲಿಯೇ ಸಾಗಬೇಕು ಅನ್ನುವ ಮನಸ್ಸು ಮಾಡುತ್ತಾರೆ. ಪೊಲೀಸರು ಮತ್ತು ಆ ಊರಿನ RDO ಸಹಾಯ ಕೇಳುತ್ತಾರಾದರೂ ಯಾವುದೇ ಸಹಾಯವಾಗುವುದಿಲ್ಲ.  ಹೀಗಾಗಿ ಅದೇ ಊರಿನ ದಲಿತ ನಾಯಕನೊಬ್ಬ ಸೂಕ್ತ ಕಾನೂನಿನ ಸಹಾಯ ಪಡೆಯಲು ಸಹಕಾರ ನೀಡುತ್ತಾನೆ.

ಅತ್ತ ಮನೆಯ ಮುಂದೆ ಶವವಿಟ್ಟಿದ್ದರೂ ಇತ್ತ ಉಚ್ಛ ನ್ಯಾಯಾಲಯದಲ್ಲಿ writ ಅರ್ಜಿ ಸಲ್ಲಿಸಿ ತಕ್ಷಣವೇ ಆದೇಶ ಪಡೆಯುತ್ತಾರೆ. ನ್ಯಾಯಾಲಯ ತನ್ನ ಆದೇಶದಲ್ಲಿ ಸ್ಥಳೀಯ ಪೊಲೀಸ್ ಠಾಣೆಯ ಇನ್ಸ್ಪೆಕ್ಟರುಗಳಿಗೂ, RDO ಗಳಿಗೂ, ಸ್ವತಃ ತಾವೇ ನಿಂತು ಕೊಳಪ್ಪನ್ ತಂದೆಯ ಶವಯಾತ್ರೆ ಸಾಮಾನ್ಯ ದಾರಿಯಲ್ಲಿಯೇ ನಡೆದು,  ಸಂಸ್ಕಾರವಾಗುವಂತೆ ಸೂಕ್ತ ರಕ್ಷಣೆ ಕೊಟ್ಟು ನೋಡಿಕೊಳ್ಳಬೇಕು ಅಂತ ಹೇಳಿರುತ್ತದೆ. ಕೊಳಪ್ಪನ್ ಮುಖದಲ್ಲಿ ಸಂತೋಷ ಕಾಣುತ್ತದೆ.

ಕೊಳಪ್ಪನ್ ಅಂದುಕೊಂಡಂತೆಯೇ ಶವಯಾತ್ರೆ, ಶವಸಂಸ್ಕಾರ ನಡೆಯುತ್ತದೆಯೇ? ನ್ಯಾಯಾಲಯದ ಆದೇಶ ಏನಾಯಿತು? ಅನ್ನುವುದೇ ಮುಂದಿನ ಕಥೆ.

2016ರಲ್ಲಿ ನಡೆದ ನೈಜ ಘಟನೆಯೊಂದನ್ನು ಆಧರಿಸಿಯೇ ಈ ಸಿನಿಮಾದ ಕಥೆ ಹೆಣೆಯಲಾಗಿದೆ. ಇಡೀ ಸಿನಿಮಾ ನಮ್ಮನ್ನು ವಿಷಾದದಲ್ಲಿಯೇ ಕರೆದೊಯ್ಯುತ್ತದೆ. ಮನೆಯ ಮುಂದೆಯೇ ಮೂರು ದಿನ ಇಟ್ಟ ಶವ, ಅಲ್ಲಿಯ ವಾತಾವರಣ ಎಲ್ಲವನ್ನು ಎಷ್ಟು ನೈಜವಾಗಿ ಚಿತ್ರಿಸಲಾಗಿದೆಯೆಂದರೆ ನಮ್ಮ ಮುಂದೆಯೇ ನಡೆಯುತ್ತಿದೆಯೇನೋ ಅನ್ನುವ ಭಾವ ಮೂಡುತ್ತದೆ. ಉದ್ದೇಶಪೂರ್ವಕವಾಗಿ ಸಿನಿಮಾದ ಗತಿಯನ್ನು ನಿಧಾನ ಮಾಡಿರುವುದು ಆ ಮೂರ್ನಾಲ್ಕು ದಿನ ಶವವಿಟ್ಟು ಕಾಯುವ ಸನ್ನಿವೇಶಗಳ ಕರಾಳತೆಯನ್ನು ಹಾಗೆಯೇ ಪ್ರೇಕ್ಷಕನಿಗೆ ತೋರಿಸಲು ಅನ್ನಿಸುತ್ತದೆ. ಕಡೆಯ ದೃಶ್ಯವಂತೂ ನಿಮ್ಮ ಕರುಳು ಹಿಂಡುವುದು ಗ್ಯಾರಂಟಿ.

90 ನಿಮಿಷಗಳ ಈ ಸಿನಿಮಾ ಯಾವುದೇ ಪರಿಹಾರವನ್ನು ಹೇಳುವುದಿಲ್ಲ. ಆದರೆ ಮನಸ್ಸಿನಲ್ಲಿ ಪ್ರಶ್ನೆಯನ್ನಂತೂ ಹುಟ್ಟುಹಾಕುತ್ತದೆ. ಕಾನೂನು ತುಳಿತಕ್ಕೊಳಗಾದವರ ಪರವಾಗಿದ್ದರೂ ಅದನ್ನು ಕಾರ್ಯಗತಗೊಳಿಸುವವರು ಮೇಲ್ವರ್ಗದವರ ಪರವಾಗಿದ್ದಾಗ ಏನಾಗಬಹುದು ಎಂಬುದರ ಚಿತ್ರಣವೇ "ಮನಸಂಗಡ".

ಅನೇಕ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಪ್ರಶಸ್ತಿ ಪಡೆದು ಮೆಚ್ಚುಗೆ ಗಳಿಸಿದ ಈ ಚಿತ್ರದ ನಿರ್ದೇಶಕ ಅಮ್ಷನ್ ಕುಮಾರ್.

ನೋಡಬೇಕೆನ್ನುವವರು... Netflix ನಲ್ಲಿದೆ ನೋಡಿ.

ಸಂತೋಷ್ ಕುಮಾರ್ ಎಲ್.ಎಂ
25-Sep-2019