Thursday, March 21, 2019

Tamil movie : ಕುಟ್ರಮೇ ದಂಡನೈ



ಅನವಶ್ಯಕ ಹೀರೋಯಿಸಮ್ಮು, ಸಿನಿಮಾದ ಕಥೆಗೆ ಬೇಕಿಲ್ಲದ ನಾಯಕಿಯನ್ನು ಒಲಿಸಿಕೊಳ್ಳುವ ದೃಶ್ಯಗಳು, ಬೇಡದ ಪಾತ್ರಗಳು.ಹಾಡುಗಳು. ಫೈಟುಗಳು. ಎಲ್ಲದರಿಂದ ಚಿಕ್ಕದಿರಬೇಕಿದ್ದ ಸಿನಿಮಾ ಎರಡೂವರೆ ಗಂಟೆಯಾಗಿ ಸಿಕ್ಕಾಪಟ್ಟೆ Lengthy ಅನಿಸುತ್ತಿದೆಯಾ? ಈ ಬಗೆಯ ಬೋರಿಂಗ್ ಅಂಶಗಳಿಲ್ಲದ ಕುತೂಹಲಭರಿತ ಕಥೆಯಿರುವ ಪುಟ್ಟ, ಆದರೆ ಸಂಪೂರ್ಣ ತೃಪ್ತಿ ಕೊಡುವ ಸಿನಿಮಾವೊಂದು ಬೇಕಿದೆಯೇ?

ಹಾಗಿದ್ದರೆ ನೀವು ನೋಡಲೇಬೇಕಾದ ಸಿನಿಮಾ......ತಮಿಳಿನ "ಕುಟ್ರಮೇ ದಂಡನೈ" (ಅಪರಾಧವೇ ಶಿಕ್ಷೆ).

ಸಿನಿಮಾದ ಮುಖ್ಯ ಪಾತ್ರ ರವಿ. ಆತ ಪುಟ್ಟ ಏಜೆನ್ಸಿಯೊಂದರಲ್ಲಿ ಸಣ್ಣ ಸಂಬಳಕ್ಕೆ ಕೆಲಸ ಮಾಡುತ್ತಿದ್ದಾನೆ. ಕ್ರೆಡಿಟ್ ಕಾರ್ಡ್ ಬಿಲ್ ಕಟ್ಟದವರ ಮನೆಗಳಿಗೆ ಹೋಗಿ ಅವರಿಂದ ಹಣವನ್ನು ಪಡೆದುಬರುವುದು ಆತನ ಕೆಲಸ. ಆತ ಅನಾಥ. ಈಗಿರುವ ದೊಡ್ಡ ಸಮಸ್ಯೆಯೆಂದರೆ ಆತನಿಗೆ ಕಣ್ಣು ಸರಿಯಾಗಿ ಕಾಣಿಸುತ್ತಿಲ್ಲ. ಆತ ಟನ್ನಲ್ ವಿಷನ್ ಸಮಸ್ಯೆಯಿಂದ ಬಳಲುತ್ತಿದ್ದಾನೆ. ಸಾಮಾನ್ಯರಿಗೆ ಕಾಣುವಂತೆ ಆತನಿಗೆ ಪೂರ್ತಿ ದೃಷ್ಟಿ ಇಲ್ಲ. ಏನನ್ನು ನೋಡಿದರೂ ಅದರ ಮಧ್ಯಭಾಗವಷ್ಟೇ ಬಾಗಿಲ ಕೀಲಿಕೈ ಕಿಂಡಿಯಲ್ಲಿ ನೋಡಿದರೆ ಎಷ್ಟು ಕಾಣುತ್ತದೋ, ಅಷ್ಟು ಕಾಣುತ್ತಿದೆ. ಬರುಬರುತ್ತ ಆ ಕಿಂಡಿಯೂ ಚಿಕ್ಕದಾಗುತ್ತಿದೆ. ಆಸ್ಪತ್ರೆಯಲ್ಲಿ ತೋರಿಸಿದಾಗ ಅವರು "ಇದು ಗಂಭೀರ ಸಮಸ್ಯೆ, ಇದು ಇನ್ನೂ ಜಾಸ್ತಿಯಾಗುತ್ತ ಹೋಗಿ ಕೆಲವೇ ವರ್ಷಗಳಲ್ಲಿ ನೀವು ಸಂಪೂರ್ಣ ಕುರುಡಾಗಬಹುದು. ಹಾಗಾಗುವ ಮುನ್ನವೇ ಕಣ್ಣಿನ ಕಸಿ ಮಾಡಿಸಿಕೊಳ್ಳಿ" ಅಂತ ಸಲಹೆ ನೀಡುತ್ತಾರೆ. ಮೊದಲೇ ಬಡವ. ಅವನಿಗೆ ಅಷ್ಟು ಲಕ್ಷಾಂತರ ಹಣ ಎಲ್ಲಿಂದ ಬರಬೇಕು.

ಒಂದು ದಿನ ಮನೆಗೆ ಬಂದಾಗ ಆತ ವಾಸವಿರುವ ಕಟ್ಟಡದ ಇನ್ನೊಂದು ಮನೆಯಲ್ಲಿ ಒಬ್ಬಾಕೆಯ ಕೊಲೆಯಾಗಿರುತ್ತದೆ. ಅಲ್ಲಿಂದ ಒಬ್ಬ ವ್ಯಕ್ತಿ ಬರುವುದನ್ನು ಈತ ನೋಡಿಬಿಡುತ್ತಾನೆ. ಆತ ನೋಡಿದ್ದನ್ನು ಎಲ್ಲಿಯೂ ಹೇಳದಂತೆ ಸುಮ್ಮನಿರಲು ಅವನಿಗೆ ಅತ್ತಲಿನ ವ್ಯಕ್ತಿ ಆಫರ್ ಮಾಡುವ ದುಡ್ಡೂ ಲಕ್ಷ ಲಕ್ಷ......

ಮುಂದೇನಾಗಬಹುದು ಊಹಿಸಿಕೊಳ್ಳಿ! ಇದು ಆರಂಭವಷ್ಟೇ. ಕಥೆ ಇನ್ನೂ ಏನೇನೋ ಇದೆ.... ....ಸಿನಿಮಾದ ಒಂದೊಂದು ದೃಶ್ಯವೂ ಮುಖ್ಯ. ಕಡೆಯ ದೃಶ್ಯದವರೆಗೂ ಮಿಸ್ ಮಾಡಿಕೊಳ್ಳಬಾರದ ಅನೇಕ ಪ್ರಮುಖ ವಿಷಯಗಳಿವೆ. ನೀವು ಸಿನಿಮಾ ನೋಡಲು ಶುರುಮಾಡಿದರೆ ಕಡೆಯವರೆಗೂ ಅತ್ತಿತ್ತ ಅಲುಗಾಡುವುದಿಲ್ಲ. ಅಷ್ಟು ಥ್ರಿಲ್ಲಿಂಗ್ ಆಗಿದೆ. ಸಿನಿಮಾ ಮುಗಿದ ಮೇಲೂ ಮತ್ತೆ ಅದರ ಬಗ್ಗೆ ಯೋಚಿಸುತ್ತೇವೆ. ಕಥೆಯನ್ನು ಹಾಗೆ ಹೆಣೆಯಲಾಗಿದೆ.

ಸಿನಿಮಾದ ಕ್ಯಾಮೆರಾ ಕೆಲಸ ಹೇಗಿದೆಯೆಂದರೆ ಸಿನಿಮಾ ಮುಗಿದ ಮೇಲೂ. ಪ್ರತಿಯೊಬ್ಬರೂ ಅತ್ತಿತ್ತ ನೋಡಿ ನನಗೂ ಎಲ್ಲವೂ ಕಾಣಿಸುತ್ತಿದೆಯೇ ಅಥವಾ "ಟನಲ್ ವಿಷನ್" ಸಮಸ್ಯೆ ನನಗೂ ಇದೆಯಾ ಅಂತ ಒಮ್ಮೆಯಾದರೂ ಯೋಚಿಸುತ್ತೇವೆ. ಸಿನಿಮಾ ನಮ್ಮನ್ನು ಆವರಿಸಿಕೊಳ್ಳುವುದೆಂದರೆ ಹೀಗೆಯೇ. ಆತನ ಕಣ್ಣಿನ ಸಮಸ್ಯೆಯಿಂದ ಲಿಫ್ಟ್'ನಲ್ಲಿ ಎದುರಾಗುವ ಪಕ್ಕದ ಮನೆಯಾಕೆಯ ಜೊತೆಗಿನ ಮಿಸ್-ಕಮ್ಯೂನಿಕೇಶನ್, ಆತ ಬೈಕು ಓಡಿಸುವಾಗಿನ ಸಮಸ್ಯೆ, ಪೊಲೀಸು ಎದುರು ಬಂದಾಗ ಅಕ್ಕಪಕ್ಕದವರು ಕಾಣದಿರುವುದು ಎಲ್ಲ ಸೂಕ್ಷ್ಮಗಳನ್ನು ತೋರಿಸಿರುವ ರೀತಿ ನಮಗೇ ಆ ಸಮಸ್ಯೆಯಿದೆಯೇನೋ ಅನ್ನಿಸುವಷ್ಟು ಆ ಸಿನಿಮಾದೊಳಗೆ ಹೋಗಿಬಿಡುತ್ತೇವೆ.

ಸಿನಿಮಾ ಇರುವುದೇ ತೊಂಭತ್ತು ನಿಮಿಷ! "ಕಾಕ ಮುಟ್ಟೈ" ಸಿನಿಮಾಗಾಗಿ ನ್ಯಾಷನಲ್ ಅವಾರ್ಡ್ ಗೆದ್ದ ನಿರ್ದೇಶಕ ಮಣಿಕಂಡನ್ ಈ ಚಿತ್ರದ ನಿರ್ದೇಶಕರು. ಅನವಶ್ಯಕ ಎನಿಸುವ ಸಂಭಾಷಣೆಗಳಾಗಲೀ, ಒಂದು ದೃಶ್ಯವಾಗಲಿ ಎಲ್ಲೂ ಇಲ್ಲ. ಹಾಡು ಇಲ್ಲ. ಆದರೆ ಕ್ಷಣಕ್ಷಣಕ್ಕೂ ಕುತೂಹಲ ಮಿಶ್ರಿತ ಭಯವನ್ನು ತನ್ನ ಹಿನ್ನೆಲೆ ಸಂಗೀತದಲ್ಲೇ ಹೇಳುವ ಇಳಯರಾಜ ಅವರ ಕೈಚಳಕವಿದೆ! ಕಲಾವಿದರೆಲ್ಲರೂ ತಮ್ಮ ಪಾತ್ರದೊಳಗೆ ಜೀವಿಸಿದ್ದಾರೆ. ಒಬ್ಬಳು ಕಾಲ್ ಸೆಂಟರಿನ ಉದ್ಯೋಗಿ, ಬೈಕಿನಲ್ಲಿ ಕಲೆಕ್ಷನ್ನಿಗೆಂದು ಹೋಗುವ ಕಣ್ಣಿನ ಸಮಸ್ಯೆಯ ಹುಡುಗ, ಕಡಿಮೆ ಸಂಬಳ ದುಡಿದು ತರುವ ಕುಟುಂಬಗಳಿರುವ ಕಟ್ಟಡ ಎಲ್ಲದರ ಆಯ್ಕೆಗೆ ನಿರ್ದೇಶಕನಿಗೆ ಹ್ಯಾಟ್ಸಾಫ್ ಹೇಳಲೇಬೇಕು.

ಸಿನಿಮಾ ನೋಡಿ......ಇಷ್ಟವಾಗದಿದ್ದರೆ ಕೇಳಿ!


(ತಮಿಳು ಅರ್ಥವಾಗುವವರು ಯೂಟ್ಯೂಬ್ ನಲ್ಲಿ ಈ ಸಿನಿಮಾ ನೋಡಬಹುದು. ಸಬ್-ಟೈಟಲ್ ಇಲ್ಲ. https://www.youtube.com/watch?v=eDczdDF9-Gk)

ಸಂತೋಷ್ ಕುಮಾರ್ ಎಲ್.ಎಂ
21-Mar-2019