Thursday, March 21, 2019

Tamil movie : ಕುಟ್ರಮೇ ದಂಡನೈ



ಅನವಶ್ಯಕ ಹೀರೋಯಿಸಮ್ಮು, ಸಿನಿಮಾದ ಕಥೆಗೆ ಬೇಕಿಲ್ಲದ ನಾಯಕಿಯನ್ನು ಒಲಿಸಿಕೊಳ್ಳುವ ದೃಶ್ಯಗಳು, ಬೇಡದ ಪಾತ್ರಗಳು.ಹಾಡುಗಳು. ಫೈಟುಗಳು. ಎಲ್ಲದರಿಂದ ಚಿಕ್ಕದಿರಬೇಕಿದ್ದ ಸಿನಿಮಾ ಎರಡೂವರೆ ಗಂಟೆಯಾಗಿ ಸಿಕ್ಕಾಪಟ್ಟೆ Lengthy ಅನಿಸುತ್ತಿದೆಯಾ? ಈ ಬಗೆಯ ಬೋರಿಂಗ್ ಅಂಶಗಳಿಲ್ಲದ ಕುತೂಹಲಭರಿತ ಕಥೆಯಿರುವ ಪುಟ್ಟ, ಆದರೆ ಸಂಪೂರ್ಣ ತೃಪ್ತಿ ಕೊಡುವ ಸಿನಿಮಾವೊಂದು ಬೇಕಿದೆಯೇ?

ಹಾಗಿದ್ದರೆ ನೀವು ನೋಡಲೇಬೇಕಾದ ಸಿನಿಮಾ......ತಮಿಳಿನ "ಕುಟ್ರಮೇ ದಂಡನೈ" (ಅಪರಾಧವೇ ಶಿಕ್ಷೆ).

ಸಿನಿಮಾದ ಮುಖ್ಯ ಪಾತ್ರ ರವಿ. ಆತ ಪುಟ್ಟ ಏಜೆನ್ಸಿಯೊಂದರಲ್ಲಿ ಸಣ್ಣ ಸಂಬಳಕ್ಕೆ ಕೆಲಸ ಮಾಡುತ್ತಿದ್ದಾನೆ. ಕ್ರೆಡಿಟ್ ಕಾರ್ಡ್ ಬಿಲ್ ಕಟ್ಟದವರ ಮನೆಗಳಿಗೆ ಹೋಗಿ ಅವರಿಂದ ಹಣವನ್ನು ಪಡೆದುಬರುವುದು ಆತನ ಕೆಲಸ. ಆತ ಅನಾಥ. ಈಗಿರುವ ದೊಡ್ಡ ಸಮಸ್ಯೆಯೆಂದರೆ ಆತನಿಗೆ ಕಣ್ಣು ಸರಿಯಾಗಿ ಕಾಣಿಸುತ್ತಿಲ್ಲ. ಆತ ಟನ್ನಲ್ ವಿಷನ್ ಸಮಸ್ಯೆಯಿಂದ ಬಳಲುತ್ತಿದ್ದಾನೆ. ಸಾಮಾನ್ಯರಿಗೆ ಕಾಣುವಂತೆ ಆತನಿಗೆ ಪೂರ್ತಿ ದೃಷ್ಟಿ ಇಲ್ಲ. ಏನನ್ನು ನೋಡಿದರೂ ಅದರ ಮಧ್ಯಭಾಗವಷ್ಟೇ ಬಾಗಿಲ ಕೀಲಿಕೈ ಕಿಂಡಿಯಲ್ಲಿ ನೋಡಿದರೆ ಎಷ್ಟು ಕಾಣುತ್ತದೋ, ಅಷ್ಟು ಕಾಣುತ್ತಿದೆ. ಬರುಬರುತ್ತ ಆ ಕಿಂಡಿಯೂ ಚಿಕ್ಕದಾಗುತ್ತಿದೆ. ಆಸ್ಪತ್ರೆಯಲ್ಲಿ ತೋರಿಸಿದಾಗ ಅವರು "ಇದು ಗಂಭೀರ ಸಮಸ್ಯೆ, ಇದು ಇನ್ನೂ ಜಾಸ್ತಿಯಾಗುತ್ತ ಹೋಗಿ ಕೆಲವೇ ವರ್ಷಗಳಲ್ಲಿ ನೀವು ಸಂಪೂರ್ಣ ಕುರುಡಾಗಬಹುದು. ಹಾಗಾಗುವ ಮುನ್ನವೇ ಕಣ್ಣಿನ ಕಸಿ ಮಾಡಿಸಿಕೊಳ್ಳಿ" ಅಂತ ಸಲಹೆ ನೀಡುತ್ತಾರೆ. ಮೊದಲೇ ಬಡವ. ಅವನಿಗೆ ಅಷ್ಟು ಲಕ್ಷಾಂತರ ಹಣ ಎಲ್ಲಿಂದ ಬರಬೇಕು.

ಒಂದು ದಿನ ಮನೆಗೆ ಬಂದಾಗ ಆತ ವಾಸವಿರುವ ಕಟ್ಟಡದ ಇನ್ನೊಂದು ಮನೆಯಲ್ಲಿ ಒಬ್ಬಾಕೆಯ ಕೊಲೆಯಾಗಿರುತ್ತದೆ. ಅಲ್ಲಿಂದ ಒಬ್ಬ ವ್ಯಕ್ತಿ ಬರುವುದನ್ನು ಈತ ನೋಡಿಬಿಡುತ್ತಾನೆ. ಆತ ನೋಡಿದ್ದನ್ನು ಎಲ್ಲಿಯೂ ಹೇಳದಂತೆ ಸುಮ್ಮನಿರಲು ಅವನಿಗೆ ಅತ್ತಲಿನ ವ್ಯಕ್ತಿ ಆಫರ್ ಮಾಡುವ ದುಡ್ಡೂ ಲಕ್ಷ ಲಕ್ಷ......

ಮುಂದೇನಾಗಬಹುದು ಊಹಿಸಿಕೊಳ್ಳಿ! ಇದು ಆರಂಭವಷ್ಟೇ. ಕಥೆ ಇನ್ನೂ ಏನೇನೋ ಇದೆ.... ....ಸಿನಿಮಾದ ಒಂದೊಂದು ದೃಶ್ಯವೂ ಮುಖ್ಯ. ಕಡೆಯ ದೃಶ್ಯದವರೆಗೂ ಮಿಸ್ ಮಾಡಿಕೊಳ್ಳಬಾರದ ಅನೇಕ ಪ್ರಮುಖ ವಿಷಯಗಳಿವೆ. ನೀವು ಸಿನಿಮಾ ನೋಡಲು ಶುರುಮಾಡಿದರೆ ಕಡೆಯವರೆಗೂ ಅತ್ತಿತ್ತ ಅಲುಗಾಡುವುದಿಲ್ಲ. ಅಷ್ಟು ಥ್ರಿಲ್ಲಿಂಗ್ ಆಗಿದೆ. ಸಿನಿಮಾ ಮುಗಿದ ಮೇಲೂ ಮತ್ತೆ ಅದರ ಬಗ್ಗೆ ಯೋಚಿಸುತ್ತೇವೆ. ಕಥೆಯನ್ನು ಹಾಗೆ ಹೆಣೆಯಲಾಗಿದೆ.

ಸಿನಿಮಾದ ಕ್ಯಾಮೆರಾ ಕೆಲಸ ಹೇಗಿದೆಯೆಂದರೆ ಸಿನಿಮಾ ಮುಗಿದ ಮೇಲೂ. ಪ್ರತಿಯೊಬ್ಬರೂ ಅತ್ತಿತ್ತ ನೋಡಿ ನನಗೂ ಎಲ್ಲವೂ ಕಾಣಿಸುತ್ತಿದೆಯೇ ಅಥವಾ "ಟನಲ್ ವಿಷನ್" ಸಮಸ್ಯೆ ನನಗೂ ಇದೆಯಾ ಅಂತ ಒಮ್ಮೆಯಾದರೂ ಯೋಚಿಸುತ್ತೇವೆ. ಸಿನಿಮಾ ನಮ್ಮನ್ನು ಆವರಿಸಿಕೊಳ್ಳುವುದೆಂದರೆ ಹೀಗೆಯೇ. ಆತನ ಕಣ್ಣಿನ ಸಮಸ್ಯೆಯಿಂದ ಲಿಫ್ಟ್'ನಲ್ಲಿ ಎದುರಾಗುವ ಪಕ್ಕದ ಮನೆಯಾಕೆಯ ಜೊತೆಗಿನ ಮಿಸ್-ಕಮ್ಯೂನಿಕೇಶನ್, ಆತ ಬೈಕು ಓಡಿಸುವಾಗಿನ ಸಮಸ್ಯೆ, ಪೊಲೀಸು ಎದುರು ಬಂದಾಗ ಅಕ್ಕಪಕ್ಕದವರು ಕಾಣದಿರುವುದು ಎಲ್ಲ ಸೂಕ್ಷ್ಮಗಳನ್ನು ತೋರಿಸಿರುವ ರೀತಿ ನಮಗೇ ಆ ಸಮಸ್ಯೆಯಿದೆಯೇನೋ ಅನ್ನಿಸುವಷ್ಟು ಆ ಸಿನಿಮಾದೊಳಗೆ ಹೋಗಿಬಿಡುತ್ತೇವೆ.

ಸಿನಿಮಾ ಇರುವುದೇ ತೊಂಭತ್ತು ನಿಮಿಷ! "ಕಾಕ ಮುಟ್ಟೈ" ಸಿನಿಮಾಗಾಗಿ ನ್ಯಾಷನಲ್ ಅವಾರ್ಡ್ ಗೆದ್ದ ನಿರ್ದೇಶಕ ಮಣಿಕಂಡನ್ ಈ ಚಿತ್ರದ ನಿರ್ದೇಶಕರು. ಅನವಶ್ಯಕ ಎನಿಸುವ ಸಂಭಾಷಣೆಗಳಾಗಲೀ, ಒಂದು ದೃಶ್ಯವಾಗಲಿ ಎಲ್ಲೂ ಇಲ್ಲ. ಹಾಡು ಇಲ್ಲ. ಆದರೆ ಕ್ಷಣಕ್ಷಣಕ್ಕೂ ಕುತೂಹಲ ಮಿಶ್ರಿತ ಭಯವನ್ನು ತನ್ನ ಹಿನ್ನೆಲೆ ಸಂಗೀತದಲ್ಲೇ ಹೇಳುವ ಇಳಯರಾಜ ಅವರ ಕೈಚಳಕವಿದೆ! ಕಲಾವಿದರೆಲ್ಲರೂ ತಮ್ಮ ಪಾತ್ರದೊಳಗೆ ಜೀವಿಸಿದ್ದಾರೆ. ಒಬ್ಬಳು ಕಾಲ್ ಸೆಂಟರಿನ ಉದ್ಯೋಗಿ, ಬೈಕಿನಲ್ಲಿ ಕಲೆಕ್ಷನ್ನಿಗೆಂದು ಹೋಗುವ ಕಣ್ಣಿನ ಸಮಸ್ಯೆಯ ಹುಡುಗ, ಕಡಿಮೆ ಸಂಬಳ ದುಡಿದು ತರುವ ಕುಟುಂಬಗಳಿರುವ ಕಟ್ಟಡ ಎಲ್ಲದರ ಆಯ್ಕೆಗೆ ನಿರ್ದೇಶಕನಿಗೆ ಹ್ಯಾಟ್ಸಾಫ್ ಹೇಳಲೇಬೇಕು.

ಸಿನಿಮಾ ನೋಡಿ......ಇಷ್ಟವಾಗದಿದ್ದರೆ ಕೇಳಿ!


(ತಮಿಳು ಅರ್ಥವಾಗುವವರು ಯೂಟ್ಯೂಬ್ ನಲ್ಲಿ ಈ ಸಿನಿಮಾ ನೋಡಬಹುದು. ಸಬ್-ಟೈಟಲ್ ಇಲ್ಲ. https://www.youtube.com/watch?v=eDczdDF9-Gk)

ಸಂತೋಷ್ ಕುಮಾರ್ ಎಲ್.ಎಂ
21-Mar-2019

Tuesday, March 19, 2019

Tamil Movie: ಓನಾಯುಮ್ ಆಟ್ಟುಕ್ಕುಟ್ಟಿಯುಮ್







ಕೆಲವು ಸಿನಿಮಾಗಳನ್ನು ನೋಡಿದ ಮೇಲೆ ಇಷ್ಟು ಚೆನ್ನಾಗಿದೆಯಲ್ಲ. ಏಕೆ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸನ್ನು ತಂದುಕೊಡಲಿಲ್ಲ ಅನ್ನುವ ಪ್ರಶ್ನೆ ತಲೆಯಲ್ಲಿ ಕೊರೆಯಲು ಶುರುವಾಗುತ್ತದೆ. ಎಷ್ಟು ಯೋಚಿಸಿದರೂ ಅದಕ್ಕೆ ಸಮಂಜಸವಾದ ಉತ್ತರ ದೊರಕುವುದಿಲ್ಲ.


ಇತ್ತೀಚೆಗೆ ನೋಡಿದ ಆ ರೀತಿಯ ಸಿನಿಮಾ "ಓನಾಯುಮ್ ಆಟ್ಟುಕ್ಕುಟ್ಟಿಯುಮ್" (ತೋಳವೂ, ಕುರಿಮರಿಯೂ) . ಮಿಸ್ಕಿನ್ ನಿರ್ದೇಶಿಸಿ, ನಿರ್ಮಾಣ ಮಾಡಿ, ನಟಿಸಿದ ಸಿನಿಮಾ. ಮಿಸ್ಕಿನ್ ಸಿನಿಮಾಗಳೆಂದರೆ ಹೇಳಲೇಬೇಕಿಲ್ಲ. ಕಥೆಯಲ್ಲೇ ಒಂದು ವೇಗವಿರುತ್ತದೆ. ಮುಂದೇನು ಅಂತ ಪ್ರತೀ ದೃಶ್ಯದಲ್ಲೇ ಪ್ರೇಕ್ಷಕನನ್ನು ಹಿಡಿದಿಟ್ಟುಕೊಳ್ಳುತ್ತ ಸಾಗುತ್ತದೆ. ಈ ಸಿನಿಮಾದಲ್ಲೂ ಆ ಬಗೆಯ ವಿಭಿನ್ನ ನಿರೂಪಣೆಯಿದೆ.


ನಸುಕಿನ ಜಾವದಲ್ಲಿ ಗುಂಡೇಟು ತಿಂದವನೊಬ್ಬ ರಸ್ತೆಯ ಬದಿಯಲ್ಲಿ ಪ್ರಜ್ಞೆಯಿಲ್ಲದೆ ಬಿದ್ದಿರುತಾನೆ. ರಕ್ತ ಹರಿದಿರುತ್ತದೆ. ಹತ್ತಿರಕ್ಕೆ ಬಂದು ನೋಡುವ ಅನೇಕ ವಾಹನ ಸವಾರರು ಹತ್ತಿರ ಬಂದು ನೋಡಿ ತಮಗೂ ಅದಕ್ಕೂ ಸಂಬಂಧವೇ ಇಲ್ಲವೆಂಬಂತೆ ಮುಂದೆ ನಡೆಯುತ್ತಾರೆ. ಅದೇ ದಾರಿಯಲ್ಲಿ ಬೈಕಿನಲ್ಲಿ ಮನೆಗೆ ವಾಪಸ್ಸಾಗುತ್ತಿದ್ದ ಮೆಡಿಕಲ್ ವಿದ್ಯಾರ್ಥಿ ಚಂದ್ರು ಇದನ್ನು ನೋಡಿ ಹತ್ತಿರ ಬಂದು ಆ ವ್ಯಕ್ತಿಯ ನಾಡಿಬಡಿತ ನೋಡುತ್ತಾನೆ. ಇನ್ನೂ ಆತ ಬದುಕಿದ್ದಾನೆ. ರಸ್ತೆಯಲ್ಲಿ ಬರುವ ಅನೇಕ ವಾಹನಗಳಿಂದ ಸಹಾಯ ಕೇಳಿದರೂ ಯಾರೂ ಕೈಜೋಡಿಸುವುದಿಲ್ಲ.


ಕಡೆಗೆ ತಾನೇ ತನ್ನ ಬೈಕಿನಲ್ಲಿ ಹಿಂದೆ ಕೂರಿಸಿಕೊಂಡು ಬ್ಯಾಲೆನ್ಸ್ ಮಾಡುತ್ತ ಹತ್ತಿರದ ಆಸ್ಪತ್ರೆಗೆ ಬರುತ್ತಾನೆ. ಆಸ್ಪತ್ರೆಯ ಸಿಬ್ಬಂದಿ ಯಾರೂ ನೆರವಿಗೆ ಬರುವುದಿಲ್ಲ. ಡ್ಯೂಟಿಯಲ್ಲಿದ್ದ ಡಾಕ್ಟರೂ ಸಹ ತಾನು ಆಪರೇಶನ್ ಒಂದರಲ್ಲಿ ನಿರತನಾಗಿರುವುದಾಗಿ ಹೇಳುತ್ತಾನೆ. ಚಂದ್ರುಗೆ ಕೋಪ ಬಂದು ಅವರಿದ್ದ ಕೊಠಡಿಗೇ ನುಗುತ್ತಾನೆ. ಅಲ್ಲಿ ಡಾಕ್ಟರು ಯಾರೊಂದಿಗೋ ಫೋನ್ ಸಂಭಾಷಣೆಯಲ್ಲಿರುತ್ತಾನೆ. ಚಂದ್ರು ಬೇಡಿಕೊಂಡರೂ, ಬೆದರಿಸಿದರೂ ಇವನಿಗೆ ಬೈದು ಕಳಿಸುತ್ತಾರೆಯೇ ಹೊರತು ಪ್ರಥಮ ಚಿಕಿತ್ಸೆಯನ್ನೂ ಕೊಡುವುದಿಲ್ಲ. ಇದು ಪೊಲೀಸು ಕೇಸು. ಮೊದಲು ಪೊಲೀಸರ ಅನುಮತಿ ಪಡೆದು ಬಾ ಅಂತ ಬೈದು ಕಳಿಸುತ್ತಾರೆ.


ಚಂದ್ರು ಮತ್ತೆ ಆ ವ್ಯಕ್ತಿಯನ್ನು ಕೂರಿಸಿಕೊಂಡು ಹತ್ತಿರದ ಪೊಲೀಸಿನವರ ಬಳಿ ಹೋದರೆ ಇವನ ಮೇಲೆಯೇ ಅನುಮಾನ ತೋರಿಸುತ್ತ ನಿರ್ಲಕ್ಷಿಸುತ್ತಾರೆ. ಅಷ್ಟೇ ಅಲ್ಲ, ಅತ್ತ ಚಂದ್ರು ಒಬ್ಬ ಪೊಲೀಸಿನವನ ಜೊತೆ ಮಾತನಾಡುವಾಗ, ಇತ್ತ ಇನ್ನೊಬ್ಬ ಪೊಲೀಸು ಆ ವ್ಯಕ್ತಿಯ ವಾಚು ಬಿಚ್ಚಿಕೊಳ್ಳುತ್ತಾನೆ. ಜೊತೆಗೆ ಎಸ್ಪಿ ರೌಂಡ್ಸಿನಿಂದ ಮರಳಿ ಬರುವವರೆಗೆ ಕಾಯಬೇಕು ಅಂತ ಸುಮ್ಮನೆ ಕೂರುತ್ತಾರೆ.


ಚಂದ್ರು ಇನ್ನು ತಡ ಮಾಡಿದರೆ ಆ ವ್ಯಕ್ತಿ ಜೀವ ಹೋಗುತ್ತದೆ ಎಂಬ ಅರಿವಾಗುತ್ತದೆ. ಚಂದ್ರು ಮೊದಲೇ ಮೆಡಿಕಲ್ ವಿದ್ಯಾರ್ಥಿ. ಹಾಗಾಗಿ ಬೇಕಾದ ಔಷಧಿ-ಪರಿಕರಗಳನ್ನು ಆಸ್ಪತ್ರೆಯೊಂದರಲ್ಲಿ ಕೊಂಡು ಆ ವ್ಯಕ್ತಿಯನ್ನು ತನ್ನ ಮನೆಗೇ ಕರೆತರುತ್ತಾನೆ. ಅಣ್ಣ-ಅತ್ತಿಗೆಗೆ ಗೊತ್ತಾಗದಂತೆ ಮೇಲಿನ ತನ್ನ ರೂಮಿಗೆ ಹೊತ್ತು ಹೋಗುತ್ತಾನೆ. ಈ ಮಧ್ಯೆ ತನ್ನ ಗೆಳೆಯರಿಗೆ, ಪ್ರೊಫ಼ೆಸರಿಗೆ ಕರೆ ಮಾಡುತ್ತಲೇ ಇರುತ್ತಾನೆ. ರಾತ್ರಿಯಾದ್ದರಿಂದ ಯಾರೂ ಕರೆ ಸ್ವೀಕರಿಸುವುದಿಲ್ಲ. ಪ್ರೊಫ಼ೆಸರ್ ಒಂದು ಹೊತ್ತಿನಲ್ಲಿ ಕರೆ ಸ್ವೀಕರಿಸುತ್ತಾನೆ. ಚಂದ್ರು ಸದ್ಯದ ಪರಿಸ್ಥಿತಿಯನ್ನು ವಿವರಿಸಿದಾಗ ಪ್ರೊಫ಼ೆಸರ್ ಯದ್ವಾತದ್ವಾ ಬೈಯುತ್ತಾನೆ. "ನೀನು ಮಾಡುತ್ತಿರುವುದು ಅಪರಾಧ. ಪೊಲೀಸಿನವರಿಗೆ ಮಾಹಿತಿ ನೀಡದೆ ಗುಂಡು ಬಿದ್ದಿರುವ ವ್ಯಕ್ತಿಗೆ ಚಿಕಿತ್ಸೆ ಕೊಡುತ್ತಿರುವುದು ಮಹಾಪರಾಧ. ನಿನ್ನ ಗುರುವಾಗಿರುವುದಕ್ಕೆ ನನಗೆ ನಾಚಿಕೆಯಾಗುತ್ತಿದೆ" ಎಂದು ಹೇಳಿ ಕರೆ ಕಟ್ ಮಾಡುತ್ತಾರೆ.


ಐದು ನಿಮಿಷ ಏನೋ ಅರಿವಾದವರಂತೆ ಪ್ರೊಫ಼ೆಸರ್ ತಾನಾಗಿಯೇ ಕರೆ ಮಾಡಿ ಆ ವ್ಯಕ್ತಿಗೆ ಹೇಗೆ ಚಿಕಿತ್ಸೆ ನೀಡಬೇಕು ಎಂದು ಫೋನಿನಲ್ಲೇ ಹೇಳುತ್ತಾರೆ. ಚಂದ್ರು ತನ್ನ ರೂಮಿನಲ್ಲೇ ಇರುವ ಸೌಲಭ್ಯದಲ್ಲಿ ಒಂದೂವರೆ ಘಂಟೆಗಳ ಕಾಲ ಆ ವ್ಯಕ್ತಿಗೆ ಆಪರೇಶನ್ ಮಾಡಿ ಬುಲೆಟ್ ಹೊರತೆಗೆಯುತ್ತಾನೆ.


ಬೆಳಿಗ್ಗೆ ಚಂದ್ರುಗೆ ಎಚ್ಚರವಾಗುವ ಹೊತ್ತಿಗೆ ಅವನ ರೂಮು ಎಲ್ಲ ಖಾಲಿಯಾಗಿರುತ್ತದೆ. ಆ ವ್ಯಕ್ತಿಯೂ ಮಾಯ. ಅಲ್ಲಿಂದ ಶುರು ಸರ್ಕಸ್. ಪೊಲೀಸಿನವರು ಚಂದ್ರು , ಮತ್ತು ಅವನ ಅಣ್ಣ-ಅತ್ತಿಗೆಯನ್ನು ಬಂಧಿಸಿ ಕರೆದೊಯ್ಯುತ್ತಾರೆ.


ಆಗ ಗೊತ್ತಾಗುವ ವಿಷಯವೆಂದರೆ ಚಂದ್ರು ಚಿಕಿತ್ಸೆ ಕೊಟ್ಟು ಪ್ರಾಣವುಳಿಸಿದ ವ್ಯಕ್ತಿ, ಪೊಲೀಸ್ ಇಲಾಖೆಗೆ ಬೇಕಾದ Most-Wanted-criminal "WOLF". ಹದಿನಾಲ್ಕು ಕೊಲೆ ಕೇಸಿನಲ್ಲಿ ಪ್ರಮುಖ ಆರೋಪಿಯಾದ ಆತ ಎಷ್ಟೋ ವರ್ಷಗಳಿಂದ ಪೊಲೀಸಿನವರಿಂದ ತಪ್ಪಿಸಿಕೊಂಡು ಓಡಾಡುತ್ತಿರುತ್ತಾನೆ. ಮೇಲಿಂದಲೂ ಅವನನ್ನು ಎನ್-ಕೌಂಟರ್ ಮಾಡುವ ಆದೇಶ ಬಂದಿರುತ್ತದೆ. ಹಿಂದಿನ ರಾತ್ರಿಯಷ್ಟೇ ಪೊಲೀಸರ ಗುಂಡೇಟು ತಿಂದು ತಪ್ಪಿಸಿಕೊಂಡಿರುತ್ತಾನೆ. ಅಲ್ಲಿಂದ ಮುಂದೆ ಆತನನ್ನು ಕಾಪಾಡುವುದು ಚಂದ್ರು!


ಚಂದ್ರು ತಾನು ನಿರಪರಾಧಿ ಅಂತ ಹೇಳಿದರೂ, ಪೊಲೀಸರು ಆವನ ಮುಖಾಂತರವೇ ಆ ಅಪರಾಧಿಯನ್ನು ಕೊಲೆ ಮಾಡಲು ನಿರ್ಧರಿಸುತ್ತಾರೆ! ಇಲ್ಲದಿದ್ದರೆ ನೀನು ಜೀವನಪೂರ್ತಿ ಜೈಲಿನಲ್ಲೇ ಕೊಳೆಯಬೇಕು ಎಂದು ಬೆದರಿಸುತ್ತಾರೆ.


ಮೆಡಿಕಲ್ ಸ್ಟೂಡೆಂಟ್ ಆದ ಚಂದ್ರುವಿನ ಕೆಲಸ ಮನುಷ್ಯರನ್ನು ಸಾವಿನಿಂದ ಕಾಪಾಡುವುದು ಅಷ್ಟೇ. ಆದರೆ ಕಾಪಾಡಲು ಹೋಗಿ ಅವನಿಂದ ಸಿಕ್ಕಿಹಾಕಿಕೊಂಡಿದ್ದಕ್ಕಾಗಿ ಅವನ ಮೇಲೆ ಚಂದ್ರುವಿಗೆ ಕೋಪವಿದೆ. ಆದ್ದರಿಂದ ಆತ ಈ ಕೊಲೆ ಮಾಡಲು ಒಪ್ಪಿಕೊಳ್ಳುತ್ತಾನೆಯೇ? ಈ ಕಥೆಯಲ್ಲಿ ಆತ ತೋಳವೋ? ಕುರಿಮರಿಯೋ? Wolf ಒಳ್ಳೆಯವನೋ ಕೆಟ್ಟವನೋ?


ಈ ಮೇಲೆ ಹೇಳಿದ್ದು ಸಿನಿಮಾದ ಆರಂಭದ ಕೆಲ ದೃಶ್ಯಗಳಷ್ಟೇ. ಮುಂದೆ ಸಿನಿಮಾ ಹೇಗೆ ಸಾಗುತ್ತದೆ ಅಂತ ಸಿನಿಮಾ ನೋಡಿಯೇ ತಿಳಿಯಬೇಕು. ಒಂದು ದೃಶ್ಯದಲ್ಲಂತೂ Wolf ಪಾತ್ರ ಮಾಡಿದ ಮಿಸ್ಕಿನ್ ಇಡೀ ಚಿತ್ರದ ಸಾರವನ್ನು ಪುಟ್ಟ ಕಥೆಯಲ್ಲಿ ಹೇಳಿಬಿಡುತ್ತಾರೆ. ಸಿನಿಮಾದ ಪಾತ್ರಗಳ ಹಿನ್ನೆಲೆಯನ್ನು ಆ ಕಥೆಯಿಂದಲೇ ಅರ್ಥೈಸಿಕೊಳ್ಳಬೇಕು. ಅಷ್ಟು ವಿಭಿನ್ನವಾಗಿದೆ ನಿರೂಪಣೆ.


ಸಿನಿಮಾದಲ್ಲಿ ಹಾಡುಗಳಿಲ್ಲ! ಹೀರೋಯಿನ್ ಇಲ್ಲ! ಆದರೆ ಹಿನ್ನೆಲೆ ಸಂಗೀತವಂತೂ "ಇದ್ಯಾರಪ್ಪ ಇಷ್ಟು ಚೆನ್ನಾಗಿ ಮಾಡಿದ್ದಾರೆ" ಅಂತ ನೋಡೋಣವೆನಿಸುತ್ತದೆ. ನೋಡಿದರೆ ಅದು "ಇಳಯರಾಜ"! ಮುಂದೆ ಹೇಳಬೇಕಿಲ್ಲ.


Once Again ಸಿನಿಮಾ ಮುಗಿದ ಮೇಲೆ, ಇದ್ಯಾಕೆ ಅಷ್ಟು ಯಶಸ್ವಿಯಾಗಲಿಲ್ಲ ಅನ್ನುವ ಪ್ರಶ್ನೆ ನಮ್ಮನ್ನು ಕಾಡತೊಡಗುತ್ತದೆ. ಈ ಸಿನಿಮಾ 2013ರಲ್ಲಿ ಬಿಡುಗಡೆಯಾಗಿದ್ದು. ವಿಭಿನ್ನ ಸಿನಿಮಾಗಳನ್ನು ನೋಡಬೇಕೆನಿಸುವವ್ರಿಗೆ ಇದೊಂದು ಉತ್ತಮ ಆಯ್ಕೆ. ನೋಡಬೇಕೆನಿಸಿದರೆ ಯೂಟ್ಯೂಬಿನಲ್ಲಿದೆ. ನೋಡಿ.


#santhuLm
24-Feb-2019

Timil Movie: ಪರಿಯೇರುಮ್ ಪೆರುಮಾಳ್





ರಜನೀಕಾಂತ್ ಅಭಿನಯದ ಕಬಾಲಿ ಚಿತ್ರ ಬಿಡುಗಡೆಯಾದಾಗ ನಾನು ಮಲೇಷ್ಯಾದಲ್ಲಿದ್ದೆ. ಇಲ್ಲಿಗಿಂತ ಒಂದು ದಿನ ಮೊದಲೇ ಅಲ್ಲಿ ಬಿಡುಗಡೆಯಾಗಿತ್ತು. ಅದ್ಯಾವ ಪರಿ ಜನ ಆ ಸಿನಿಮಾ ನೋಡಲು ಮುಗಿಬಿದ್ದಿದ್ದರು ಅಂತೀರಿ. ಆ ಕಥೆಯೂ ಮಲೇಷ್ಯಾ ತಮಿಳಿಯನ್ನರ ಮೇಲೆ ನಡೆಯುವ ದೌರ್ಜನ್ಯವನ್ನು ಹೇಳುತ್ತದಲ್ಲ. ಆದರೆ ನನಗೆ ರಜನೀಕಾಂತ್ ಸಿನಿಮಾ ನೋಡಿದ ಹಾಗಾಗಲಿಲ್ಲ. ಕಾರಣ ರಜನೀಕಾಂತ್ ಇದ್ದರೂ ನಿರ್ದೇಶಕ ತಾನಂದುಕೊಂಡದ್ದನ್ನು ದೃಶ್ಯರೂಪದಲ್ಲಿ ತೋರಿಸಲು ಸೋತಿದ್ದ.

ಆದರೆ ಅದೇ ನಿರ್ದೇಶಕ, ತನ್ನ ಮುಂದಿನ ಸಿನಿಮಾ ಕಾಲಾದಲ್ಲಿ ಈ ತಪ್ಪನ್ನು ಮಾಡಲಿಲ್ಲ. ರಜನೀಕಾಂತ್ ಸಿನಿಮಾದೊಳಗೆ ತಾನು ಹೇಳಬೇಕಾದ್ದನ್ನು ಹೇಳಿದ್ದ. ಆದರೆ ಇನ್ನೂ ಬೇರೆ ರೀತಿಯಲ್ಲಿ ಹೇಳಬಹುದು ಅಂತ ನನಗನ್ನಿಸಿತ್ತು. ಆ ಸಿನಿಮಾದಲ್ಲಿ ಬರುವ ಅನೇಕ ವಿಷಯಗಳು ಸಿನಿಮಾ ಭಾಷೆಯನ್ನು ಅರಿತಿರುವ ಮಂದಿಗಷ್ಟೇ ಅರ್ಥವಾಗಲು ಸಾಧ್ಯ ಅನ್ನಿಸಿತ್ತು.

ಹೇಳಬೇಕು ಅಂತ ಅನ್ನಿಸಿದ್ದನ್ನು ಸಿನಿಮಾದೊಳಗೆ ಕಷ್ಟಪಟ್ಟು ತುರುಕಲಾಗುವುದಿಲ್ಲ. ಹಾಗೆ ಮಾಡಿದರೂ ಒಟ್ಟಾರೆ ಸಿನಿಮಾ ನೋಡುವಾಗ ತನ್ನ ಮೂಲ ಉದ್ದೇಶವನ್ನೇ ಮರೆತಿರುತ್ತದೆ. ಹಾಗಾದಾಗಲೇ ಪ್ರೇಕ್ಷಕ ನಿರಾಸೆಗೊಂಡು "ಇವನೇನೋ ಬೇಕು ಅಂತ ಈ ಥರ ಸಿನಿಮಾ ತೆಗೆದಿದ್ದಾನೆ" ಅಂತ ಬೈಕೊಂಡು ಹೋಗುತ್ತಾನೆ. ಆದರೆ ಅದೇ ಪ.ರಂಜಿತ್ ನಿರ್ಮಾಣದಲ್ಲಿ ಬಂದ "ಪರಿಯೇರುಮ್ ಪೆರುಮಾಳ್" ಸಿನಿಮಾದಲ್ಲಿ ನಾನಂದುಕೊಂಡ ನಿರೀಕ್ಷೆಗಳಿಗೆಲ್ಲ ಉತ್ತರ ಸಿಕ್ಕಿತು. ಕಡೆಯವರೆಗೂ ನಮ್ಮನ್ನು ಹಿಡಿದಿಟ್ಟುಕೊಳ್ಳುವ ಕಥೆ. ಮಾರಿ ಸೆಲ್ವರಾಜ್ ನಿರ್ದೇಶನದ್ದು. ಜಾತಿಸಮಸ್ಯೆಯ ಬಗ್ಗೆ ಹೇಳುತ್ತ ಇನ್ನೇನೋ ಆಗಬಹುದಿದ್ದ ಸಿನಿಮಾವನ್ನು ಕಮರ್ಶಿಯಲ್ ಅನ್ನುವ ರೀತಿಯಲ್ಲೇ ಹೇಳುವಲ್ಲಿ ಸಫಲರಾಗುತ್ತಾರೆ. ಅವರ ಉದ್ದೇಶ ವಾಸ್ತವಕ್ಕೆ ಕನ್ನಡಿ ಹಿಡಿಯುವುದಷ್ಟೇ. ಮುಂದೇನಾಗಬೇಕು ಅನ್ನುವ ಪರಿಹಾರವಲ್ಲ. ಕುರುಡನಂತಿರುವ ಸಮಾಜಕ್ಕೆ ಕಡೇಪಕ್ಷ ಹೀಗಾದರೂ ತೋರಿಸಿದರೆ, ಅದರಿಂದ ಮನುಷ್ಯತ್ವದ ಕಿಡಿಯೊಂದು ಹೊತ್ತಿಕೊಂಡು ಆ ಸಮಸ್ಯೆಯ ಪರಿಹಾರದತ್ತ ಮನಸ್ಸು ಮಾಡಿದರೆ ಅದಕ್ಕಿಂತ ಬೆಳವಣಿಗೆ ಇನ್ನೊಂದಿಲ್ಲ. ಇಂಥ ಸಿನಿಮಾಗಳು ಬರಬೇಕು. ಮತ್ತು ಹೀಗೆಯೇ ಇರಬೇಕು.

ಕಥೆಯಲ್ಲಿ ಅನಾವಶ್ಯಕ ಸಂಭಾಷಣೆಗಳಿಲ್ಲ. ಸಂಭಾಷಣೆಯನ್ನೂ ಕೋಪವನ್ನೂ ಕೇವಲ ದೃಶ್ಯದಲ್ಲಿ ತೋರಿಸುವುದಷ್ಟೆ ಇಲ್ಲಿಯ ನಿರ್ದೇಶಕನ ಗುರಿ. ಅದರಲ್ಲಿ ಆತ ಗೆಲ್ಲುತ್ತಾನೆ ಕೂಡ. ನಾಯಕನ ಪ್ರೀತಿಯ ನಾಯಿಯನ್ನು ಕೊಂದಾಗಲೂ ಆತ ಮಾತಿನಲ್ಲಿ ಬೈಯುತ್ತ ಕೂರುವುದಿಲ್ಲ.ಆದರೆ ಅಲ್ಲೊಂದು ಅಗ್ನಿಪರ್ವತ ಕೋಪವನ್ನು ತನ್ನೊಳಗೆ ಹಿಡಿದಿಟ್ಟುಕೊಳ್ಳುತ್ತದೆ. ಸಿನಿಮಾ ನೋಡಲು ಕೂತ ಈ ಮೊದಲ ದೃಶ್ಯದಲ್ಲೇ ಇಡೀ ಚಿತ್ರ ನೋಡಲು ಬೇಕಾದ ಮನಸ್ಥಿತಿಯನ್ನು ಅಲ್ಲಿ ಸೃಷ್ಟಿಸಲಾಗುತ್ತದೆ. ಆತನನ್ನು ಕಾಲೇಜಿನಲ್ಲಿ ಇಂಗ್ಲೀಷಿನಲ್ಲಿ ಹೇಳುವ ನೋಟ್ಸನ್ನು ಬರೆದುಕೊಳ್ಳುತ್ತಿಲ್ಲ ಅಂತ ಕೋಪದಲ್ಲಿ ಹೊರಗೆ ಕಳಿಸುವಾಗಲೂ, ಆತ ಅವಮಾನದಲ್ಲೂ ಕೆಟ್ಟದಾಗಿ ಕೂಗಾಡುವುದಿಲ್ಲ. ಬದಲಿಗೆ ಬೇರೆಯವರ ನೋಟ್ಸನ್ನೂ ಒಮ್ಮೆ ಪರೀಕ್ಷಿಸಿ ಅಂತ ಅವಲತ್ತುಕೊಳ್ಳುತ್ತಾನೆ. ಆತನ ಉದ್ದೇಶ ಸತ್ಯವನ್ನು ತೋರಿಸುವುದಷ್ಟೇ ಹೊರತು ಆ ಉಪನ್ಯಾಸಕರ ಮೇಲೆ ಕೂಗಾಡುವುದಲ್ಲ. ಸಿನಿಮಾದ ಮುಖ್ಯ ದೃಶ್ಯವೊಂದರಲ್ಲಿ ಆತ ಏಕೆ ಮಾತನಾಡಲು ಹಿಂಜರಿಯುತ್ತೇನೆ(ವೆ) ಅಂತ ಹೇಳುತ್ತಾನೆ. ಪ್ರೇಕ್ಷಕ ಅದು ಕೇವಲ ಆ ದೃಶ್ಯಕ್ಕಷ್ಟೇ ಹೇಳುವ ಸಂಭಾಷಣೆಯಲ್ಲ ಅಂತ ಅರ್ಥೈಸಿಕೊಳ್ಳುವಷ್ಟು ಸುಲಭ ಮತ್ತು ಪರಿಣಾಮಕಾರಿಯಾಗಿದೆ.

ಚಿತ್ರದಲ್ಲಿ ಬರೀ ಕಾಲೇಜು ಜೀವನವನ್ನಷ್ಟೇ ತೋರಿಸದೆ, ಅಲ್ಲಲ್ಲಿ ಊರಿನಲ್ಲಿ ನಡೆಯುವ ಜಾತಿಜಗಳಗಳ ಹತ್ಯೆಗಳ ವಿವಿಧ ಮುಖಗಳನ್ನು ಮಧ್ಯೆ ಮಧ್ಯೆ ತೋರಿಸುತ್ತ ತಾನು ಹೇಳುವ ವಿಷಯದ ತೀವ್ರತೆಯನ್ನು ಹೆಚ್ಚುಮಾಡುತ್ತಾರೆ. ಚಿತ್ರದ ಅನೇಕ ದೃಶ್ಯಗಳನ್ನು ಅದು ಹೇಳುವ ಸಂದೇಶಗಳನ್ನು ಒಂದೊಂದಾಗಿ ಚರ್ಚಿಸಬಹುದು. ಆದರೆ ಇವೆಲ್ಲ ಅಂಶಗಳಿದ್ದೂ ಒಟ್ಟಾರೆಯಾಗಿಯೂ ಇದು ಸಂಪೂರ್ಣ ಸಿನಿಮಾದಂತೆ ಭಾಸವಾಗುತ್ತದೆ.

ಕಬಾಲಿಯಲ್ಲಿ ನಾಯಕ ಹಾಕಿಕೊಳ್ಳುವ ಬಟ್ಟೆಯ ಬಗ್ಗೆಯೂ ಸಾಂಕೇತಿಕವಾಗಿ ತೋರಿಸಿದ್ದೇವೆ ಅಂತ ನಿರ್ದೇಶಕ ಹೇಳಿದ್ದರು. ಹಾಗೆ ಹೇಳಿದ್ದರೂ ನಮಗೆ ಮನಸ್ಸಿಗೆ ಅವು ಅಷ್ಟೊಂದು ತಾಕುವುದಿಲ್ಲ. ಆದರೆ ಇಲ್ಲಿ ಹಾಗೆ ತೋರಿಸುವ ಕಡೆಯ ದೃಶ್ಯದ ಎರಡು ಲೋಟಗಳ ರೂಪಕಗಳು, ಪೆರುಮಾಳ್ ರೈಲಿನ ಹಳಿಯ ಮೇಲೆ ಬಿದ್ದಿದ್ದಾಗ ಅವನ ನಾಯಿ ಕರುಪ್ಪಿಯಂತೆ ಬರುವ ರೂಪಕಗಳು, ತಾನು ಮುಂದಿನ ಬೆಂಚಿಗಾಗಿ ಆ ಹುಡುಗರ ಮಧ್ಯೆ ಜಗಳ ನಡೆದಾಗ ಪೆರುಮಾಳ್ "ಯಾಕೆ, ನಾವು ಮುಂದೆ ಬರಬಾರದೇ?" ಅಂತ ಕೇಳುವಾಗ ಆತ ಬೆಂಚಿನ ಬಗ್ಗೆ ಹೇಳುತ್ತಿಲ್ಲ ಅನ್ನುವಂತಹ ವಿಷಯಗಳು, ......ಸಾಮಾನ್ಯ ಪ್ರೇಕ್ಷಕನಾಗಿಯೇ ಅರ್ಥೈಸಿಕೊಳ್ಳಬಹುದು.

ಪುಟ್ಟ ಹಳ್ಳಿಯಿಂದ ಸಮುದಾಯವೊಂದರಿಂದ ಓದಲು ಬರುವ ಹುಡುಗನನ್ನು ಅವನ ಸುತ್ತಲಿನ ಘಟನೆಗಳು, ಸಮಾಜ ಹೇಗೆಲ್ಲ ಕಾಡುತ್ತವೆ ಅನ್ನುವುದನ್ನು ಗೋಳು ಅನ್ನುವ ಹಾಗೆ ತೋರಿಸದೆ, ಲಘು ಹಾಸ್ಯದಿಂದಲೇ ತೋರಿಸಲಾಗಿದೆ. ಆದರೆ ಎಲ್ಲಿಯೂ ಆ ಸಮಸ್ಯೆಗಳು ಅವಾಸ್ತವಿಕ ಅನ್ನಿಸುವುದಿಲ್ಲ. ಡಾಕ್ಯುಮೆಂಟರಿ ಅನ್ನುವಂತಹ ವಿಷಯವನ್ನು ಸಿನಿಮಾ ಆಗಿ ಮಾರ್ಪಡಿಸಲು ಈ ಬಗೆಯ ದೃಶ್ಯಗಳು ಅವಶ್ಯಕ. ಜತೆಗೆ ಸಿನಿಮಾ ನೋಡುವಾಗ ಇದ್ಯಾವುದೋ ದೇಶದ ಸಿನಿಮಾದ ಹಾಗೆ ಅನ್ನಿಸುವುದಿಲ್ಲ. ನಮ್ಮ ಬೀದಿಯಲ್ಲೇ ನಡೆಯುತ್ತಿದೆ ಅನ್ನಿಸುತ್ತದೆ. ಅದಕ್ಕೆ ಕಾರಣ ನಿರ್ದೇಶಕ ತನ್ನದೇ ಸುತ್ತಲಿನ ವಾತಾವರಣವನ್ನು ಕಟ್ಟಿಕೊಡುವ ರೀತಿ. ಈ ಸಿನಿಮಾದಲ್ಲಿ ಬರುವ ಆ ಖಳ, ನಾಯಕನ ತಂದೆ, ನಾಯಕಿ, ಅವರ ಮೆಚ್ಚಿನ ಉಪನ್ಯಾಸಕರು, ಪ್ರಿನ್ಸಿಪಾಲರು, ಪ್ರೀತಿಯ ನಾಯಿ ಕರುಪ್ಪಿ......ಎಲ್ಲರ ಪಾತ್ರಗಳು ಮನಸ್ಸಿನಲ್ಲಿ ಉಳಿಯುತ್ತವೆ. ಮತ್ತು ಅವುಗಳನ್ನು ಚಿತ್ರಿಸಿರುವ ರೀತಿಯೂ ವಿಭಿನ್ನ.

ಮುಕ್ತಾಯಕ್ಕೂ ಮುನ್ನ ನಾಯಕ ಹುಡುಗಿಯ ತಂದೆಗೆ ಹೇಳುತ್ತಾನೆ " ನೀವು ನೀವಾಗಿಯೇ ಇರುವವರೆಗೂ, ನಾನು ಯಾವಾಗಲೂ ನಾನಾಗಿಯೇ ಇರಬೇಕು ಅಂತ ಎದುರು ನೋಡುವವರೆಗೂ ಇಲ್ಲಿ ಯಾವುದೂ ಬದಲಾಗದು" ಅಂತ ಹೇಳುತ್ತಾನೆ. ಅದೊಂದು ಡೈಲಾಗ್ ಹಾಗೆಯೇ ಮನಸ್ಸಿನಲ್ಲಿ ಉಳಿಯುತ್ತದೆ.

-----------------------

ಸಿನಿಮಾ ನೋಡುವಾಗ "ವ್ಹಾ" ಅನ್ನಿಸಿದ ಸೂಪರ್ ಸೀನ್:

ಪೆರುಮಾಳ್ ಲಾ ಕಾಲೇಜಿಗೆ ಅಡ್ಮಿಷನ್'ಗೆಂದು ತನ್ನ ತಾಯಿಯೊಂದಿಗೆ ಹಳ್ಳಿಯಿಂದ ನಗರಕ್ಕೆ ಬರುತ್ತಾನೆ. ಆತ ಮುಗ್ಧ.

"ಗುಡ್, ಈ ಕಾಲೇಜಿನಲ್ಲಿ ಸೀಟು ಸಿಗೋದೆ ಕಷ್ಟ. ಎಷ್ಟು ಜನ ಕಷ್ಟಪಡುತ್ತಾರೆ?! ನಿನಗೆ ಸೀಟು ಸಿಕ್ಕಿದೆ" ಅಂತ ಸಂತೋಷದ ವಿಷಯವನ್ನು ಹೇಳುವ ಪ್ರಿನ್ಸಿಪಾಲರು "ಓದಿದ ಮೇಲೆ ಏನಾಗಬೇಕು ಅಂದುಕೊಂಡಿದ್ದೀಯ?" ಅಂತ ಕೇಳ್ತಾರೆ.

ಆಗ ಅವನು ತಡವರಿಸದೆ "ಡಾಕ್ಟರ್" ಅನ್ನುತ್ತಾನೆ.

ಪ್ರಿನ್ಸಿಪಾಲ್'ಗೆ ಶಾಕ್! ಒಳಗೊಳಗೆ ಅವನ ಪೆದ್ದುತನದ ಬಗ್ಗೆ ನಗುತ್ತ "ಸರಿ ಹೊರಡಿ" ಅನ್ನುತಾರೆ. ಅವರ ತಾಯಿ ಆ ಕೊಠಡಿಯಿಂದ ಹೊರಗೆ ಹೋದ ಮೇಲೆ ಅವನನ್ನು ಮತ್ತೆ ಒಳಗೆ ಕರೆದು, "ಲೇ, ನೀನು ಸೇರಿಕೊಳ್ಳುತ್ತ ಇರೋದು ಲಾ ಕಾಲೇಜು. ಇಲ್ಲಿ ಓದಿಯಾದ ಮೇಲೆ ಲಾಯರ್ ಆಗೋದು. ಡಾಕ್ಟರಲ್ಲ" ಅನ್ನುತ್ತ ಹೇಳುತ್ತಾರೆ.

ಮಧ್ಯೆಯೇ ಅವರ ಮಾತನ್ನು ತಡೆದ ಪೆರುಮಾಳ್,
" ಸರ್, ನಾನು ಹೇಳಿದ್ದು ಬರೀ ಡಾಕ್ಟರ್ ಅಲ್ಲ.
ಡಾಕ್ಟರ್ ಬಿ.ಆರ್. ಅಂಬೇಡ್ಕರ್" ಅನ್ನುತ್ತಾನೆ!!
------------------------------
ಇದೊಂದು ಗೋಳಿನ ಸಿನಿಮಾ ಅಲ್ಲ. ಆದರೆ ಖಂಡಿತ ನಮ್ಮ ಕಣ್ತೆರೆಸುವ ಸಿನಿಮಾ. ನೋಡುವಾಗ ಅನ್ನಿಸಿದ್ದನ್ನು ಬಿಡಿಬಿಡಿಯಾಗಿ ಹೇಳಿದ್ದೇನೆ.. ಮಿಸ್ ಮಾಡದೇ ನೋಡಿ.

Amazon Prime ನಲ್ಲಿದೆ
------------------------------

ಸಂತೋಷ್ ಕುಮಾರ್ ಎಲ್.ಎಂ.
01-Mar-2019

Tamil Cinema:ಜೋಕರ್








ಅನೇಕ ಸಲ ಈ ಸಿನಿಮಾ ಸಿಕ್ಕಾಪಟ್ಟೆ ಗಂಭೀರ ಕಥೆಯುಳ್ಳದ್ದು ಅಂತ ಹೋಗುತ್ತೇವೆ. ನೋಡಿದರೆ ಸಿಲ್ಲಿ ಸಿಲ್ಲಿ ಅನಿಸುವಷ್ಟು ಕಾಮಿಡಿಯಾಗಿರುತ್ತದೆ. ಕೆಲವು ಸಿನಿಮಾಗಳ ಹೆಸರನ್ನು ನೋಡಿ ಇದು ತಿಳಿಹಾಸ್ಯವಿರಬಹುದಾದ ಸಿನಿಮಾ ಅಂದುಕೊಳ್ಳುತ್ತೇವೆ. ಆದರೆ ಆ ಸಿನಿಮಾ ನಗಿಸುತ್ತಲೇ ಗಂಭೀರವಾದ ವಿಷಯವೊಂದನ್ನು ಹೇಳುತ್ತಿರುತ್ತದೆ. ತಮಿಳಿನ "ಜೋಕರ್" ಈ ಎರಡನೇ ಧಾಟಿಯ ಸಿನಿಮಾ.


ಶಂಕರ್ ಸಿನಿಮಾ 'ಅನ್ನಿಯನ್' ಅನ್ನು ನೀವು ನೋಡಿರಬಹುದು. ಅಲ್ಲಿ ಸಮಾಜದಲ್ಲಿ ನಡೆಯುವ ಚಿಕ್ಕಪುಟ್ಟ ಭ್ರಷ್ಟಾಚಾರಗಳೇ ನಾಯಕನ ಮನಸ್ಸಿಗೆ ನಾಟಿ ಆ ಸಣ್ಣ ಅಪರಾಧಗಳನ್ನು ಮಾಡಿದವರನ್ನೇ ಅಟ್ಟಾಡಿಸಿಕೊಂಡು ಹೊಡೆಯುತ್ತಾನೆ. ಎದುರಾಳಿ ಅದ್ಯಾವ ಪ್ರಭಾವೀ ಶಕ್ತಿಶಾಲಿ ವ್ಯಕ್ತಿಯಾಗಿರಲಿ. ಸೂಪರ್-ಹೀರೋನಂತೆ ಎಲ್ಲಿಂದಲೋ ಬಂದು ದಾಳಿಮಾಡಿ ಹಣ್ಣುಗಾಯಿ ನೀರುಗಾಯಿ ಮಾಡುತ್ತಾನೆ. ನಿರ್ದೇಶಕ ಶಂಕರ್'ಗೆ ಸತ್ಯಾಗ್ರಹ ಮಾಡಿಸುವುದರಲ್ಲಿ ಆಸಕ್ತಿಯಿಲ್ಲ. ಅಷ್ಟು ವ್ಯವಧಾನವೂ ಇಲ್ಲ. ಅವನಿಗೆ ಬೇಕಾಗಿರುವುದು ಈ ಕ್ಷಣದ ಪರಿಹಾರ. ಅದಕ್ಕೆ ಆತ ಹೀರೋನ ಕೈಗೆ ಯಾವ ಆಯುಧವನ್ನಾದರೂ ಕೊಡಬಲ್ಲ.


ಆದರೆ ಜೋಕರ್ ಸಿನಿಮಾದ ಹೀರೋ ಆ ಬಗೆಯ ಸೂಪರ್ ಹೀರೋ ಅಲ್ಲ. ಆತ ಒಬ್ಬ ಸಾಮಾನ್ಯ ಮನುಷ್ಯ. ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾಮಾನ್ಯ ಮನುಷ್ಯನೇ ಸೂಪರ್ ಹೀರೋ ಎಂಬ ಸತ್ಯವನ್ನು ಅರಿತುಕೊಂಡವ. ತಾನೇ ಈ ವ್ಯವಸ್ಥೆಯ ಆಧಾರಸ್ಥಂಭವೆಂಬಂತೆ ಪ್ರತಿಯೊಂದನ್ನು ಹಿಂಜರಿಕೆಯಿಲ್ಲದೆಯೇ ಪ್ರಶ್ನಿಸಬಲ್ಲವ. ಅನ್ಯಾಯವಾದಲ್ಲಿ ಕಾನೂನಾತ್ಮಕವಾಗಿಯೇ ಅದಕ್ಕೊಂದು ಪರಿಹಾರ ಹುಡುಕಬಲ್ಲೆ ಅಂತ ಹೊರಡುವವ. ಕಿತ್ತುಹೋದ ರಾಜಕೀಯ ವ್ಯವಸ್ಥೆಯಲ್ಲಿ ಏನೂ ಆಗದಿದ್ದಾಗ ಜನರ ಕಣ್ತೆರೆಸಲು ಮತ್ತು ಜನಪ್ರತಿನಿಧಿಗಳ ನಿದ್ರೆಗೆಡಿಸಲು ಗಾಂಧೀತತ್ವವನ್ನು ಬಳಸಬಹುದು ಎಂಬ ವಿಶ್ವಾಸವುಳ್ಳವ. ಒಟ್ಟಿನಲ್ಲಿ ಏನಾದರೂ ತಪ್ಪು ಎಂದು ಕಂಡುಬಂದಲ್ಲಿ ಹಿಂದೆಮುಂದೆ ನೋಡದೇ ಮುನ್ನುಗ್ಗುವವ.


ಇವನ್ನೆಲ್ಲ ಒಬ್ಬಾತ ಮಾಸ್ ಹೀರೋ ಆಗಿ ಮಾಡುತ್ತಾನೆ ಎಂದು ಊಹಿಸಿದರೆ ತಪ್ಪಾಗುತ್ತದೆ. ಒಬ್ಬಾತ ತಾನು ಈ ದೇಶದ ರಾಷ್ಟ್ರಪತಿ ಎಂದು ತನ್ನನ್ನು ತಾನು ಘೋಷಿಸಿಕೊಂಡು ಅದರಂತೆಯೇ ಹಾವಭಾವ ತೋರಿಸುತ್ತ ಛತ್ರಿಯಿರುವ ಟಿವಿಎಸ್ ಮೊಪೆಡ್ ಮೇಲೆ ಕೂತು ಗಾಂಭೀರ್ಯದಿಂದ ಹೊರಡುವಾಗ ನಕ್ಕು ಸಾಕಾಗುತ್ತೇವೆ. ಆ ಸಿನಿಮಾದೊಳಗೂ ಅವನ ಪರಿಪಾಟಲನ್ನು ನೋಡಿ ನಗುವವರೇ! ಆದರೆ ಒಂದೊಂದು ದೃಶ್ಯ ಮುಗಿದಂತೆ ಆ ಹಾವಭಾವದ ಹಿಂದಿನ ಗಂಭೀರತೆ ಅರ್ಥವಾಗತೊಡಗುತ್ತದೆ. ನಂತರ ಆ ವ್ಯಕ್ತಿಯ ಹಿನ್ನೆಲೆ ಗೊತ್ತಾದಾಗ ಮನಸ್ಸು ಆರ್ದ್ರವಾಗುತ್ತದೆ. ನಾವು ಊಹಿಸುವಂತೆಯೇ ನಗ್ನ ಸಮಾಜದ ಮಧ್ಯೆ ನಿಂತ ಬಟ್ಟೆ ತೊಟ್ಟವ ಎಲ್ಲರೆದುರು ತನ್ನನ್ನು ಸಮರ್ಥಿಸಿಕೊಳ್ಳಲಾಗದ ಪರಿಸ್ಥಿತಿಯಲ್ಲೂ ತನ್ನ ನಿಲುವನ್ನು ಬದಲಾಯಿಸಿಕೊಳ್ಳುವುದಿಲ್ಲ. ಕಡೆಗೆ ಆ ನಗ್ನ ಸಮಾಜ ಅವನನ್ನು ನೆಲಕ್ಕೆ ನೂಕಿ ಅವನ ಕಳೇಬರದ ಮೇಲೆ ನಡೆಯುತ್ತದೆ.


ಸಿನಿಮಾದ ಅಂತ್ಯದಲ್ಲಿ ನೋಡುಗ ದೊರೆಗಳು ಮುಖ ಒರೆಸಿಕೊಳ್ಳುವಂತೆ ವಸ್ತುವಿಷಯವನ್ನು ಹೇಳಲಾಗುತ್ತದೆ. ಸಿನಿಮಾದಿಂದ ಎದ್ದು ಬರುವಾಗ ನೋಡುಗ ಇನ್ನು ಮುಂದೆ ಸಮಾಜದ ಸಮಸ್ಯೆಯ ಬಗ್ಗೆ ಯಾರಾದರೂ ಸೊಲ್ಲೆತ್ತಿದರೆ ಅವರನ್ನು ಜೋಕರ್'ನಂತೆ ನೋಡುವುದಿಲ್ಲ ಅಂತ ಪ್ರತಿಜ್ಞೆ ಮಾಡುತ್ತಾನೆ. ಅದು ಈ ಸಿನಿಮಾವನ್ನು ಸಮರ್ಥವಾಗಿ ಹೇಳಿರುವ ರೀತಿ. ಪ್ರಶ್ನೆ ಮಾಡುವವರನ್ನು ಜೋಕರ್'ನನ್ನಾಗಿ ಮಾಡುವ ಕೆಟ್ಟ ಬೆಳವಣಿಗೆಗಳನ್ನು ಈ ಸಿನಿಮಾ ಸಂಪೂರ್ಣವಾಗಿ ಬೆತ್ತಲು ಮಾಡುತ್ತದೆ. ಸಿನಿಮಾದ ಕೊನೆಯಲ್ಲೇ ಆ ಸಿನಿಮಾದ ಶೀರ್ಷಿಕೆ ಅರ್ಥವಾಗುವುದು ಕೂಡ.


ಈ ಸಿನಿಮಾದಲ್ಲಿ ನನಗಿಷ್ಟವಾಗಿದ್ದು ಯಾವುದೇ ಅಜೆಂಡಾ ಅಂತ ಇಟ್ಟುಕೊಂಡು ಮಾಡಿದ ಸಿನಿಮಾವಲ್ಲ. ಕೆಲವು ನಿರ್ದೇಶಕರ ಕಥೆ ಹೇಳುವಿಕೆಯಲ್ಲೇ ಅವರು ಯಾವ ಪಕ್ಷದ ವಿರುದ್ಧ ಮಾತನಾಡುತ್ತಿದ್ದಾನೆ ಅಂತ ಹೇಳಬಹುದು. ಆದರೆ ಇಲ್ಲಿಯ ನಿರ್ದೇಶಕ ಕೇವಲ ಬಡವರ ಪರ, ನಿರ್ಗತಿಕರ ಪರ, ಪ್ರಜಾಪ್ರಭುತ್ವದ ಸರ್ವಶಕ್ತ ಮತದಾರ ಪ್ರಭುವಿನ ಪರ, ಅನ್ಯಾಯದ ವಿರುದ್ಧವಾಗಿ ಮಾತನಾಡುತ್ತನೆಯೇ ಹೊರತು ಅದಕ್ಕೆ ಯಾವ ಪಕ್ಷದವರು ಕಾರಣ ಅಂತ ಹೇಳುವುದರಲ್ಲಿ ತಲೆಕೆಡಿಸಿಕೊಂಡಿಲ್ಲ. ಏಕೆಂದರೆ ಅವ ಹೇಳುವ ಸಮಸ್ಯೆಗಳೂ ದಶಕಗಳಿಂದಲೇ ನಮ್ಮ ಮಧ್ಯೆ ಹೊಕ್ಕಿವೆ. ಪರಿಹರಿಸದಿದ್ದರೆ ಮುಂದೆಯೂ ಇರುತ್ತವೆ. ಈ ಬಗೆಯ ಸಿನಿಮಾಗಳು ಇನ್ನೂ ಮೂವತ್ತು ವರ್ಷಗಳ ನಂತರ ನೋಡಿದ ಮೇಲೂ ಪ್ರಶ್ನೆ ಮಾಡುವ ಮನೋಭಾವವನ್ನು ಜನಸಾಮಾನ್ಯರಲ್ಲಿ ತುಂಬಬೇಕು.


ಸಿನಿಮಾದಲ್ಲಿ ಕಥೆ, ಅದನ್ನು ಹೇಳಿರುವ ರೀತಿ, ಸಂಗೀತ, ನಿರ್ದೇಶನ, ಕಲಾವಿದರು, ಸಂಭಾಷಣೆ, ಛಾಯಾಗ್ರಹಣ ಎಲ್ಲವೂ ಚೆನ್ನಾಗಿದೆ. ಆರ್ಟ್ ಸಿನಿಮಾ ನೋಡಬೇಕು ಅನ್ನುವವರಿಗೂ, ಕಥೆಯಿರುವ ಸಿನಿಮಾ ನೋಡಬೇಕು ಅಂದುಕೊಳ್ಳುವವರಿಗೂ, ವಿಭಿನ್ನ ಸಿನಿಮಾದ ತುಡಿತದಲ್ಲಿರುವವರಿಗೂ ಇದು ಖಂಡಿತ ನೋಡಲೇಬೇಕಾದ ಸಿನಿಮಾ. ಈ ಸಿನಿಮಾದ ಬಗ್ಗೆ ಇರುವ ರೇಟಿಂಗ್ ಅನ್ನು ನೋಡಿದರೇ ಇದರ ತೂಕವನ್ನು ಅಳೆಯಬಹುದು. ಕೆಲವೆಡೆ ಎಳೆದಂತೆ ಅನ್ನಿಸಿದರೂ ಮುಗಿದ ಮೇಲೆ ಅನೇಕ ವಿಷಯಗಳ ಬಗ್ಗೆ ಚಿಂತನೆಗೆ ಹಚ್ಚುವ ಸಿನಿಮಾ.


ಸಾಧ್ಯವಾದರೆ ಒಮ್ಮೆ ನೋಡಿ.

ಸಂತೋಷ್ ಕುಮಾರ್ ಎಲ್.ಎಂ
19-Mar-2019