Saturday, April 16, 2016

GONE GIRL ಚಿತ್ರ
ಸಿನಿಮಾ ನೋಡಿ ಬಂದ ನಂತರ ಯಾರಾದರೂ ಆ ಕಥೆ ಹೇಳು ಅಂತ ಕೇಳಿದ್ರೆ ನಾವು ಶುರು ಮಾಡುತ್ತಿದ್ದ ರೀತಿಯನ್ನು ಒಮ್ಮೆ ನೆನಪಿಸಿಕೊಳ್ಳಿ! "ಹೀರೋಯಿನ್ನು ರೋಡಲ್ಲಿ ಹೋಗ್ತಿರ್ತಾಳೆ. ಆಗ ಬರ್ತಾನೆ ಭಯಂಕರ ವಿಲನ್ನು. ಬುಲೆಟ್ಟಲ್ಲಿ ಕೂತ್ಕೊಂಡು ಅವಳ ಪಕ್ಕ ಬಂದು ಅವಳನ್ನು ರೇಗಿಸಿದಾಗ ಅವಳು ಕಪಾಳಕ್ಕೆ ಹೊಡೀತಾಳೆ. ಆಗ ವಿಲನ್ನಿಗೆ ಕೋಪ ಬಂದು ಅವಳ ಸೀರೆಯ ಸೆರಗಿಗೆ ಕೈಹಾಕ್ತಾನೆ. ಆಗ ಅವಳು ಕಿರುಚ್ಕೊಳ್ತಾಳೆ. ಆಗ ಎಂಟ್ರಿ ಕೊಡ್ತಾನೆ ನೋಡು ನಮ್ಮ ಹೀರೋ. ವಿಲನ್ನಿಗೆ ಯದ್ವಾ ತದ್ವಾ ಹೊಡ್ದು ಅವಳನ್ನು ಕಾಪಾಡ್ತಾನೆ. ಆಗಲೇ ಅವರಿಬ್ಬರ ಮಧ್ಯೆ ಪ್ರೀತಿ ಶುರುವಾಗುತ್ತೆ".

ಇಲ್ಲಿ ನೋಡಿ ಹೀರೋ, ಹೀರೋಯಿನ್ನು, ವಿಲನ್ನು ಇವರ ಪಾತ್ರಗಳಿಗೆ ಒಂದು ಚೌಕಟ್ಟು ಇದೆ. ಹೀರೋಯಿನ್ನು ವಿಲನ್ನಿಗೆ ಹೊಡಿಯೋದು ಕಮ್ಮಿ. ಹೀರೋ ಮಾಡೋದೆಲ್ಲ ಒಳ್ಳೇದೇ. ವಿಲನ್ನು ಅಪ್ಪಿತಪ್ಪಿಯೂ ಒಂದೂ ಒಳ್ಳೆ ಕೆಲಸ ಮಾಡ್ಬಾರ್ದು..... ಹೀಗೆ ಸಾಗುತ್ತೆ ಪಾತ್ರಗಳಿಗೆ ನಾವು ಹಾಕುವ ನಿರ್ಬಂಧಗಳು. ಆದರೆ ನಿಜವಾದ ಸವಾಲು ಅಂದ್ರೆ ಸಿನಿಮಾ ನೋಡುವಾಗ ಯಾವುದೇ ಪಾತ್ರವನ್ನು ಇದು ಒಳ್ಳೇದು/ಕೆಟ್ಟದ್ದು ಅಂತ ಹೇಳದೇ ಅವುಗಳ ಮನುಷ್ಯ ಸಹಜ ಗುಣಗಳನ್ನು ಹೇಳುವುದು. ಉದಾಹರಣೆಗೆ, "ದುನಿಯಾ" ಸಿನಿಮಾದ ರಂಗಾಯಣ ರಘುರವರ ಪಾತ್ರವನ್ನೇ ಅವಲೋಕಿಸಿ. ತಕ್ಷಣಕ್ಕೆ ಅದರ ಗುಣ ಒಳ್ಳೆಯದೋ ಕೆಟ್ಟದ್ದೋ ಅಂತ ಹೇಳುವುದು ಸುಲಭದ ಮಾತಲ್ಲ. ಇಂತಹ ಪಾತ್ರಗಳು ಸಿನಿಮಾ ಮುಗಿದ ಮೇಲೂ ಮತ್ತೆ ಮತ್ತೆ ಅದೇ ಪ್ರಶ್ನೆ ಹಾಕಿ ನಮ್ಮನ್ನು ಕಾಡುತ್ತವೆ.

ಈ ಪೀಠಿಕೆಗೆ ನಾಂದಿ ಹಾಡಲು ಕಾರಣವಾದ ಚಿತ್ರ "Gone Girl". ಯಾವ ಪಾತ್ರಗಳ ಗುಣಗಳನ್ನೂ ಒಳ್ಳೆಯವೆಂದೋ ಕೆಟ್ಟವೆಂದೋ ಹೇಳದೇ ಅದರ ಅವಲೋಕನವನ್ನು ಕೇವಲ ಪ್ರೇಕ್ಷಕನಿಗೆ ಬಿಡುವ ತಂತ್ರ ಈ ಸಿನಿಮಾದಲ್ಲಿ ಬಹಳ ಇಷ್ಟವಾಯಿತು. ಈ ಚಿತ್ರದ ಎಲ್ಲ ಪಾತ್ರಗಳು ಹಾಗೆಯೇ ರಚನೆಯಾಗಿವೆ. ಇದೊಂದೇ ಈ ಚಿತ್ರದ ವಿಶೇಷವಲ್ಲ. ಮೊದಲಿಗೆ ಈ ಸಿನಿಮಾದ ಕಥೆಯ ಕೊಂಚವೇ ಕೊಂಚ ಸಾರಂಶವನ್ನು(ಪೂರ್ತಿಯಲ್ಲ) ಹೇಳುತ್ತೇನೆ ಕೇಳಿ.
-------------------------
ಅಂದು ನಿಕ್ ಮತ್ತು ಎಮಿ ದಂಪತಿಗಳ ಐದನೇ ವಿವಾಹ ವಾರ್ಷಿಕೋತ್ಸವ. ಬೆಳಗ್ಗೆ ತನ್ನ ಸಹೋದರಿಯನ್ನು ಭೇಟಿ ಮಾಡಿ ಮನೆಗೆ ಮರಳುವ ನಿಕ್'ಗೆ ತನ್ನ ಹೆಂಡತಿ ಎಮಿ ಮನೆಯಿಂದ ಕಾಣೆಯಾಗಿರುವುದು ತಿಳಿಯುತ್ತದೆ. ತಕ್ಷಣವೇ ಆತ ಪೊಲೀಸರಿಗೆ ಮಾಹಿತಿ ನೀಡಿ ಬರಹೇಳುತ್ತಾನೆ. ಕಾಣೆಯಾದ ಎಮಿಯ ತಂದೆ-ತಾಯಿ ಪ್ರಸಿದ್ಧ ಲೇಖಕರು. ತಮ್ಮ ಮಗಳು ಎಮಿ ಮಗುವಾಗಿದ್ದಾಗ ಅವಳನ್ನೇ ಪ್ರೇರಣೆಯಾಗಿಟ್ಟುಕೊಂಡು ಅವರು ಬರೆದ "Amazing Amy" ಮಕ್ಕಳ ಕಥೆಗಳು ಪ್ರಖ್ಯಾತಿಯಾಗಿವೆ. ಹಾಗಾಗಿ ಎಮಿ ಕೂಡ ಸಮಾಜದಲ್ಲಿ ಎಲ್ಲರಿಗೂ ಚಿರಪರಿಚಿತಳೇ. ಹಾಗಾಗಿ ಆಕೆ ಕಾಣೆಯಾದ ವಿಚಾರ ಮಾಧ್ಯಮಗಳಲ್ಲಿ ತಕ್ಷಣವೇ ರಾಷ್ಟ್ರೀಯ ಪ್ರಮುಖ ಸುದ್ದಿಯಾಗಿ ಬಿತ್ತರವಾಗುತ್ತದೆ. ಇತ್ತ ಪೊಲೀಸರು ಈ ಕೇಸನ್ನು ಬಗೆಹರಿಸಲು ಪ್ರಯತ್ನಿಸುತ್ತಿದ್ದರೆ ಅತ್ತ ಮಾಧ್ಯಮ ಪ್ರತಿನಿಧಿಗಳು ಹಿಂಡುಹಿಂಡಾಗಿ ಮನೆಮುಂದೆ ಬೀಡು ಬಿಟ್ಟು ಇವರ ಪ್ರತೀ ಚಲನವಲನಗಳನ್ನು ನೇರಪ್ರಸಾರದಲ್ಲಿ ಬಿತ್ತರಿಸುತ್ತಿರುತ್ತವೆ.

ಈ ಕೇಸನ್ನು ಕೈಗೆತ್ತಿಕೊಳ್ಳುವ ಪೊಲೀಸ್ ಡಿಟೆಕ್ಟಿವ್ ಬೋನಿಗೆ ಪರಿಶೀಲಿಸುವಾಗ ಅನೇಕ ಸುಳಿವುಗಳು ಸಿಗುತ್ತದೆ. ಅಲ್ಲಿ ಯಾರೋ ತೊಳೆದಿದ್ದರೂ ದೊರಕುವ ಅರ್ಧಂಬರ್ಧ ರಕ್ತದ ಕಲೆಗಳು ಎಮಿಯದೆಂದು ಗೊತ್ತಾಗುವ ಜೊತೆಗೆ ಆಕೆ ಕೊಲೆಯಾಗಿರಬಹುದೆಂದು ಸಂದೇಹಿಸಲಾಗುತ್ತದೆ. ಎಮಿಯ ಗಂಡ ನಿಕ್'ನನ್ನು ವಿಚಾರಣೆ ಮಾಡುವ ವೇಳೆ ಅವಳ ಬಗೆಗಿನ ಯಾವುದೇ ಸರಳ ಪ್ರಶ್ನೆಗಳಿಗೂ ಉತ್ತರ ಕೊಡಲು ವಿಫಲನಾಗುತ್ತಾನೆ. ಉದಾ: ಅವಳ ಗೆಳತಿಯರು ಯಾರು? ಅವಳ ರಕ್ತದ ಗುಂಪೇನು? ಅನ್ನುವಂತಹ ಸಾಮಾನ್ಯ ಪ್ರಶ್ನೆಗಳಿಗೂ ಅವನ ಬಳಿ ಉತ್ತರವಿಲ್ಲ. ಇನ್ನು ಮುಂದೆ ಹೋಗಿ ಬೋನಿ ಅವರ ಆರ್ಥಿಕ ಸ್ಥಿತಿಯ ಬಗ್ಗೆ ಮಾಹಿತಿ ಹುಡುಕಿದಾಗ, 2007 ಇಸವಿಯಲ್ಲಿನ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ನ್ಯೂಯಾರ್ಕಿನಿಂದ ನಿಕ್'ನ ತವರೂರಿಗೆ ವಾಸ್ತವ್ಯ ಬದಲಿಸಿದ್ದರು ಮತ್ತು ಇದೀಗಲೂ ಕ್ರೆಡಿಟ್ ಕಾರ್ಡಿನಲ್ಲಿ ಬಹಳಷ್ಟು ಸಾಲವಿದೆ ಎಂಬುದು ತಿಳಿಯುತ್ತದೆ.

ಈ ಮಧ್ಯೆ ನಮಗೆ Flashbackನಲ್ಲಿ ಅವರಿಬ್ಬರೂ ಪರಿಚಯವಾದ ಬಗೆಗೆ, ನಂತರ ಮದುವೆಯಾದ ಬಗ್ಗೆ, ಕೊಂಚ ದಿನ ಅವರಿಬ್ಬರೂ ಚೆನ್ನಾಗಿಯೇ ಸಂಸಾರ ಮಾಡಿದ ಬಗ್ಗೆ ದೃಶ್ಯಗಳನ್ನು ತೋರಿಸಲಾಗುತ್ತದೆ. ನಂತರ ಅವರಿಬ್ಬರ ಮಧ್ಯೆ ಎಲ್ಲವೂ ಸರಿಯಿಲ್ಲ ಎನ್ನುವುದು ಆಕೆ ಬರೆಯುವ ಡೈರಿಯ ದಾಖಲೆಗಳಿಂದ ಗೊತ್ತಾಗುತ್ತದೆ. ಈ ಮಧ್ಯೆ ಡಿಟೆಕ್ಟಿವ್ ಬೋನಿಗೆ ಎಮಿಯು ಕೆಲ ತಿಂಗಳ ಹಿಂದೆ ತನ್ನ ಸ್ವಯಂರಕ್ಷಣೆಗೆ ಪಿಸ್ತೂಲೊಂದನ್ನು ಕೊಳ್ಳಲು ಪ್ರಯತ್ನಿಸಿದ್ದಳು ಎಂಬ ಮಾಹಿತಿಯೂ ಸಿಗುತ್ತದೆ. ನಂತರದ ದೃಶ್ಯಗಳಲ್ಲಿ ನಿಕ್ ತನ್ನ ಹಳೆಯ ಪ್ರೇಯಸಿಯೊಂದಿಗೆ ಇನ್ನೂ ಅನೈತಿಕ ಸಂಬಂಧ ಹೊಂದಿರುವ ಬಗ್ಗೆ ನಿಕ್'ನ ಸಹೋದರಿಗೆ ರೆಡ್ ಹ್ಯಾಂಡೆಡ್ ಆಗಿ ಸಿಕ್ಕಿ ಬೀಳುವುದರೊಂದಿಗೆ, ನಿಕ್ ತನ್ನ ಪತ್ನಿಯನ್ನು ಕೊಲೆ ಮಾಡಿ ಮುಚ್ಚಿಡಲು ಪ್ರಯತ್ನಿಸುತ್ತಿದ್ದಾನೆ ಎಂಬುದು ಮಾಧ್ಯಮಗಳಲ್ಲೂ ಪ್ರಸಾರವಾಗುತ್ತದೆ.
---------------------

ಓಹ್! ತುಂಬ ಕುತೂಹಲಕಾರಿಯಾಗಿದೆ ಅಲ್ಲವೇ?! ಇದೀಗ ನಿಕ್'ನಿಂದ ಸತ್ಯವನ್ನು ಹೊರಗೆಳೆಯುವುದಷ್ಟೇ ಸಿನಿಮಾದ ಉದ್ದೇಶವೆಂದರೆ ಇದೂ ಒಂದು ಮಾಮೂಲಿ ಕ್ರೈಂ ಸಿನಿಮಾ ಅಷ್ಟೇ! ಕ್ಷಮಿಸಿ, ಕಥೆ ಹಾಗಿಲ್ಲ!!
---------------------

ಎಮಿಯು ನಿಕ್'ನನ್ನು ಮದುವೆಯಾಗುವ ಮುನ್ನ ಆಕೆಗೂ ಇಬ್ಬರೊಂದಿಗೆ ಸಂಬಂಧ ಮುರಿದು ಬಿದ್ದಿರುತ್ತದೆ.
ಆ ಎರಡೂ ಸಂಬಂಧಗಳಲ್ಲಿನ ಇಬ್ಬರೂ ಹುಡುಗರು ಆಕೆಯ ಮೇಲೆ ದೈಹಿಕ ಹಲ್ಲೆ ಮಾಡಿದ, ಅತ್ಯಾಚಾರ ಮಾಡಿದಂತಹ ಕೇಸುಗಳಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಅವರಲ್ಲಿ ಒಬ್ಬನನ್ನು ಭೇಟಿ ಮಾಡುವ ನಿಕ್'ಗೆ ಆತ ನಿರಪರಾಧಿ ಎಂದು ಗೊತ್ತಾಗುವುದರೊಂದಿಗೆ ಕಥೆ ಮತ್ತೆ ದಿಕ್ಕು ಬದಲಿಸುತ್ತದೆ.

ನಿಕ್'ನ ಅನೈತಿಕ ಸಂಬಂಧ ತಿಳಿದ ದಿನದಿಂದ ಮನನೊಂದ ಎಮಿ, ಅವನಿಗೆ ಜೀವನದ ಅತೀ ದೊಡ್ಡ ಪಾಠ ಕಲಿಸುವ ದೃಷ್ಟಿಯಿಂದ ಅನೇಕ ತಿಂಗಳುಗಳಿಂದ ಯೋಜನೆ ರೂಪಿಸಿರುತ್ತಾಳೆ. ಮೊದಲು ತಾನು ನಾಪತ್ತೆಯಾಗಬೇಕು. ನಂತರ ಎಲ್ಲರಿಗೂ ತಾನು ಕೊಲೆಯಾಗಿದ್ದೇನೆನ್ನುವ ಅನುಮಾನ ಬರಬೇಕು. ಎಲ್ಲರಿಗೂ ತಾನು ನಿಕ್ ಮೇಲೆಯೇ ಸಂದೇಹ ಬರುವಂತೆ ಮಾಡಿ ಅವನನ್ನು ಜೈಲಿಗೆ ಕಳುಹಿಸಿ ಬದುಕಿನಲ್ಲೇ ದೊಡ್ಡ ಪಾಠ ಕಲಿಸಬೇಕು ಎಂಬ ಯೋಜನೆ ಹಾಕಿಕೊಂಡು ಅದರಂತೆಯೇ ಪ್ರತಿಯೊಂದನ್ನು ರೂಪಿಸುತ್ತಾಳೆ. ತನ್ನ ರಕ್ತವನ್ನು ಅಲ್ಲಲ್ಲಿ ಚೆಲ್ಲಿ, ಹಾಗೆಯೇ ತಾನು ಕೊಲೆಯಾಗುವ ಮುನ್ನ ಗರ್ಭಿಣಿ ಎಂಬಂತೆ ತೋರಿಸುವ ಕಳ್ಳ ರಿಪೋರ್ಟ್, ಅವನಿಗೆ ಗೊತ್ತಾಗದಂತೆ ಕ್ರೆಡಿಟ್ ಕಾರ್ಡಿನಲ್ಲಿ ಅನೇಕ ವಸ್ತುಗಳ ಖರೀದಿ. ಹೀಗೆ ಹತ್ತು ಹಲವು ದಾಖಲೆಗಳನ್ನು ಸೃಷ್ಟಿಸಿ ತಮ್ಮ ವಾರ್ಷಿಕೋತ್ಸವದ ದಿನವೇ ನಾಪತ್ತೆಯಾಗುವಂತೆ ನಾಟಕವಾಡುತ್ತಾಳೆ
---------------------

ಕ್ಷಮಿಸಿ, ಮತ್ತೆ ಕಥೆ ನಾವಂದುಕೊಂಡಂತೆ ನಡೆಯುವುದಿಲ್ಲ. ಅನಿರೀಕ್ಷಿತ ತಿರುವುಗಳನ್ನು ಪಡೆದುಕೊಳ್ಳುತ್ತ ಸಾಗುವ ಕಥೆ ಪ್ರೇಕ್ಷಕನಿಗೆ ಎಲ್ಲಿಯೂ ಸುಳಿವು ಕೊಡದಂತೆ ಸಾಗುತ್ತದೆ. ಸುಳಿವು ಸಿಕ್ಕಿತು ಎನ್ನುವಷ್ಟರಲ್ಲಿ ಅದು ತಪ್ಪುಗ್ರಹಿಕೆ ಎಂಬಂತೆ ಮತ್ತಾವುದೋ ದಾರಿ ಹಿಡಿಯುತ್ತದೆ. ಕಡೆಯ ಕ್ಷಣದವರೆಗೂ ಹೀಗೆಯೇ ಸಾಗುವ ಸಿನಿಮಾ ತಾರ್ಕಿಕ ಅಂತ್ಯವನ್ನೇನೋ ಕಾಣುತ್ತದೆ. ಆದರೆ ಮುಗಿದ ನಂತರ ಮತ್ತೆ ನಮ್ಮ ಮನಸ್ಸಿನೊಳಗೆ ಯಾರು ಮಾಡಿದ್ದು ಸರಿ, ಯಾರು ಮಾಡಿದ್ದು ತಪ್ಪು ಅನ್ನುವ ಪ್ರಶ್ನೆಗಳನ್ನು ಹಾಕಿ ಮತ್ತೆ ಒಂದೊಂದೇ ದೃಶ್ಯವನ್ನು ಮೆಲುಕು ಹಾಕುತ್ತ ಇದಕ್ಕೆ ಕಾರಣವೇನಿರಬಹುದು ಅನ್ನುವುದನ್ನು ಅವಲೋಕಿಸುವಂತೆ ಮಾಡುತ್ತದೆ. ಇದು ಕಥೆಯ ಮತ್ತು ಪಾತ್ರಗಳನ್ನು ಕಟ್ಟಿದ ಬಗೆಗಿರುವ ತಾಕತ್ತು. ಹೈಪ್ರೊಫೈಲ್ ಕೇಸುಗಳಲ್ಲಿ ಮಾಧ್ಯಮಗಳು ಜನಗಳ ಭಾವನೆಯೊಂದಿಗೆ ಹೇಗೆ ಆಟವಾಡುತ್ತವೆ ಎನ್ನುವುದನ್ನು ಈ ಚಿತ್ರದಲ್ಲಿ ಸೂಕ್ಷ್ಮವಾಗಿ ಹೇಳಲಾಗಿದೆ.

ಚಿತ್ರ ಎರಡೂವರೆ ಘಂಟೆ ಓಡಿದರೂ ಎಲ್ಲೂ ಬೇಸರವಾಗುವುದಿಲ್ಲ ಎಂದರೆ ಇದರ ಕಥೆಯನ್ನು ಮತ್ತು ನಿರ್ಮಾತೃಗಳನ್ನು ಶ್ಲಾಘಿಸಲೇಬೇಕು. ಈ "Gone Girl" ಚಿತ್ರದ ನಿರ್ದೇಶಕ ಡೇವಿಡ್ ಫಿಂಚರ್. ಬಹುತೇಕ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾದ ಈ ಚಿತ್ರದ ಮೂಲ 2012ರಲ್ಲಿ ಬಿಡುಗಡೆಯಾಗಿ 85 ಲಕ್ಷ ಪ್ರತಿ ಮಾರಾಟವಾದ ಇದೇ ಹೆಸರಿನ ಜನಪ್ರಿಯ ಕಾದಂಬರಿ "Gone Girl". ಕಾದಂಬರಿಯನ್ನು ಬರೆದ gillian flynn ರವರೇ ಈ ಚಿತ್ರಕ್ಕೆ ಚಿತ್ರಕಥೆಯನ್ನೂ ಬರೆದಿದ್ದಾರೆ. Ben Affleck ನಿಕ್ ಪಾತ್ರದಲ್ಲಿ ಮತ್ತು Rosamund Pike ಎಮಿ ಪಾತ್ರದಲ್ಲಿ ಇಡೀ ಚಿತ್ರವನ್ನು ಆವರಿಸಿಕೊಳ್ಳುತ್ತಾರೆ.

ಇದೊಂದು ಸೈಕೋಪಾತ್ ಚಿತ್ರವಾ? ಕ್ರೈ ಥ್ರಿಲ್ಲರ್? ಫ್ಯಾಮಿಲಿ ಡ್ರಾಮಾ? ಗೊತ್ತಿಲ್ಲ! ಚಿತ್ರವನ್ನೊಮ್ಮೆ ನೋಡಿ ನೀವೇ ಹೇಳಿ! :)


-ಸಂತೋಷ್ ಕುಮಾರ್ ಎಲ್.ಎಂ.