Thursday, March 24, 2016

Room ಚಿತ್ರ

ಆತನೊಬ್ಬನಿದ್ದಾನೆ. ಅವಳನ್ನು ಅಪಹರಿಸಿ ತಂದು, ತನ್ನ ಮನೆಯ ಹಿಂಬದಿಯ ಶೆಡ್ಡಿನಲ್ಲಿ ಕೂಡಿ ಹಾಕಿ ದಿನವೂ ಲೈಂಗಿಕವಾಗಿ ಬಳಸಿಕೊಳ್ಳುವಷ್ಟು ಕ್ರೂರಿ ಆತ. ಆ ಮನೆಗೆ ಕಿಟಕಿಗಳಿಲ್ಲ. ಕೇವಲ ಅಲ್ಲಿರುವುದು ಬದುಕಲು ಬೇಕಾಗುವಷ್ಟು ಕನಿಷ್ಟ ಸೌಕರ್ಯಗಳಷ್ಟೇ. ಅಲ್ಲಿರುವ ಜಾಗದಲ್ಲೇ ದಿನನಿತ್ಯ ಕಾರ್ಯಗಳು, ಸ್ನಾನ, ಅಡಿಗೆ ಎಲ್ಲವೂ ಆಗಬೇಕು. ಚಾವಣಿಯಿಂದ ಒಳಕ್ಕೆ ಬೀಳುವ ಬೆಳಕು ಅವಳಿಗೂ ಒಂದು ಬಗೆಯ ಆಶಾಕಿರಣವೇ! ಆ ರೂಮಿಗೊಂದು ಎಲೆಕ್ಟ್ರಾನಿಕ್ ಲಾಕ್ ಇದೆ. ಅಲ್ಲಿ ಸೀಕ್ರೆಟ್ ಕೋಡ್ ಒತ್ತಿದರಷ್ಟೇ ಬಾಗಿಲು ತೆರೆಯುತ್ತದೆ. ಅದು ಅವನಿಗೆ ಮಾತ್ರ ಗೊತ್ತಿದೆ. ಒಳಗಿನಿಂದ ಎಷ್ಟೇ ಕೂಗಿದರೂ ಹೊರಗಿನವರಿಗೆ ಏನೂ ಕೇಳಿಸುವುದಿಲ್ಲ. ಆತ ರಾತ್ರಿ ಬರುತ್ತಾನೆ, ಆಹಾರಕ್ಕೆ ಒಂದಷ್ಟು ಸಾಮಾನು ಕೊಟ್ಟು ತನ್ನ ಕೆಲಸ ಮುಗಿಸಿ ಹೊರಟುಬಿಡುತ್ತಾನೆ. ಆಕೆ ಅಲ್ಲಿ ಏನೂ ಮಾಡಲಾಗದ ಅಸಹಾಯಕಿ.


ಇದು ಒಂದೆರಡು ದಿನ ಅಥವ ವಾರಗಳಲ್ಲ. ಹೀಗೆಯೇ ಬರೋಬ್ಬರಿ ಏಳು ವರ್ಷ ಕಳೆದಿದೆ. ಆಗಾಗ ಆಕೆ ಖಿನ್ನತೆಗೆ ಒಳಗಾಗುತ್ತಾಳೆ. ಅಲ್ಲೇ ಅವಳಿಗೊಂದು ಗಂಡು ಮಗುವಾಗಿದೆ. ಆಕೆಗೆ ಆ ಮಗುವಷ್ಟೇ ಪ್ರಪಂಚ. ಇದೀಗ ಆ ಮಗು ನಾಲ್ಕು ವರ್ಷ ತುಂಬಿ ಐದಕ್ಕೆ ಕಾಲಿಡುತ್ತಿದೆ. ಆತ ಬರುವ ಹೊತ್ತಿಗೆ ಆ ಮಗುವನ್ನು ಹೇಗಾದರೂ ಮಾಡಿ ವಾರ್ಡ್ರೋಬಿನೊಳಗೆ ಮಲಗಿಸಿಬಿಡುವುದು ಮತ್ತು ಅದೇ ನೆಪ ಹೇಳಿ ಆ ಮಗುವನ್ನು ಮುಟ್ಟದಂತೆ ನೋಡಿಕೊಳ್ಳುವುದು ಅವಳ ಪ್ರತಿದಿನದ ಸವಾಲು. ಆ ಮಗುವಿಗೆ ಆ ರೂಮಿನ ಹೊರಗಿನ ಜಗತ್ತಿನ ಪರಿವೆಯೇ ಇಲ್ಲ. ಟಿವಿಯ ಕಾರ್ಯಕ್ರಮ ನೋಡುತ್ತ ಅಲ್ಲಿನ ವ್ಯಕ್ತಿ ಮತ್ತು ಪರಿಸರದ ಬಗ್ಗೆ ಕೇಳುವಾಗಲೆಲ್ಲ ಆಕೆ ಮಗುವಿಗೆ ಅವೆಲ್ಲವೂ ವಾಸ್ತವವಲ್ಲ ಎಂದೇ ಹೇಳುತ್ತಿದ್ದಾಳೆ.ಆಕೆ ದಿನ ದಿನವೂ ಹೊರಹೋಗುವ ಅವಕಾಶಕ್ಕಾಗಿ ಕಾಯುತ್ತಿದ್ದಾಳೆ. ಮಗುವಿಗೆ ಐದು ವರ್ಷವಾದಾಗ ಅವನ ಸಹಾಯವನ್ನು ಬೇಡುವ ನಿರ್ಧಾರ ಮಾಡುತ್ತಾಳೆ. ಇದೀಗ ಹೊರಪ್ರಪಂಚದ ವಾಸ್ತವವನ್ನು ಅದಕ್ಕೆ ಅರ್ಥ ಮಾಡಿಸಲು ಹೆಣಗಾಡುತ್ತಿದ್ದಾಳೆ. ಏನಾಗುತ್ತದೋ ಗೊತ್ತಿಲ್ಲ. ಇಬ್ಬರೂ ಹೊರಹೋಗುವುದಿರಲಿ. ಕಡೇ ಪಕ್ಷ ಆ ಮಗುವನ್ನಾದರೂ ಹೊರಗಿನ ಪ್ರಪಂಚಕ್ಕೆ ಕಳುಹಿಸಿ ಅದರ ಬಾಳನ್ನು ಈ ನರಕದಿಂದ ಪಾರು ಮಾಡುವುದು ಅವಳ ಉದ್ದೇಶ. ಅದರಂತೆ ಒಮ್ಮೆ ಆ ಮಗುವಿಗೆ ವಿಪರೀತ ಜ್ವರ ಬರುವಂತೆ ಮಾಡಿ ಆಸ್ಪತ್ರೆಗಾದರೂ ಕರೆದುಕೊಂಡು ಹೋಗುವಂತೆ ಅವನಿಗೆ ಹೇಳುತ್ತಾಳೆ. ಆಸ್ಪತ್ರೆಗೆ ಹೋದಾಗ ಜೋರಾಗಿ ಕೂಗಿಕೊಂಡು ಸುತ್ತಲಿನವರ ಗಮನ ಸೆಳೆದು ತಪ್ಪಿಸಿಕೋ ಎಂಬ ಬುದ್ಧಿಯನ್ನು ಆ ಮಗುವಿಗೆ ಹೇಳುತ್ತಾಳೆ. ಆದರೆ ಆತ ಮಗುವಿನ ಅನಾರೋಗ್ಯ ನೋಡಿಯೂ, ಮುಖ ಸಿಂಡರಿಸಿ ಹೋಗುವುದರೊಂದಿಗೆ ಆ ಉಪಾಯ ಹಳ್ಳ ಹಿಡಿಯುತ್ತದೆ.


ಮರುದಿನವೇ ಮತ್ತೆ ಆ ಮಗು ಚಿಕಿತ್ಸೆ ಸಿಗದ ಕಾರಣ ಕೊನೆಯುಸಿರೆಳೆಯಿತೆಂದು ನಟಿಸಿ, ಅದಕ್ಕೂ ನಟಿಸಲು ಹೇಳಿ ಅದರ ಶವಸಂಸ್ಕಾರ ಮಾಡಿ ಬಾ ಎನ್ನುವಂತೆ ಉಪಾಯ ಮಾಡುತ್ತಾಳೆ...........ಆ ರಾತ್ರಿ.......ಮಗುವಿಗೆ ಧೈರ್ಯ ಹೇಳಿ ಕಡೆಯದಾಗೊಮ್ಮೆ ಅದಕ್ಕೆ ಮುತ್ತನಿಟ್ಟು, ಧೈರ್ಯತುಂಬಿ ಕಾರ್ಪೆಟ್ಟೊಂದಕ್ಕೆ ಸುತ್ತಿದ್ದಾಳೆ......ಆ ರೂಮಿನ ಬಾಗಿಲು ಸೀಕ್ರೆಟ್ ಕೋಡ್ ಒತ್ತಿ ತೆರೆಯುತ್ತಿರುವ ಶಬ್ದವಾಗುತ್ತದೆ...... ಆತ ಒಳಬರುತ್ತಿದ್ದಾನೆ.........


ಕಥೆ ಎಷ್ಟು ರೋಚಕವೆನಿಸುತ್ತದೆಯಲ್ಲವೇ? ಹೌದು. ಇದು 2015ರಲ್ಲಿ ಬಿಡುಗಡೆಯಾದ "ರೂಮ್" ಚಿತ್ರದ ಸನ್ನಿವೇಶ. ಈ ಚಿತ್ರ ನೋಡಿದರೆ ಆ ಮಗು ಮತ್ತು ತಾಯಿಯ ಪಾತ್ರ ಮಾಡಿದ
Jacob Tremblay ಮತ್ತು Brie Larsonರನ್ನು ನಿಜವಾಗಿಯೂ ಅಭಿನಂದಿಸಬೇಕೆನಿಸುತ್ತದೆ. ಪ್ರತೀ ದೃಶ್ಯದಲ್ಲೂ ಮನಸ್ಸಿಗೆ ನಾಟುವಂತೆ ಮನೋಜ್ಞವಾಗಿ ನಟಿಸಿದ್ದಾರೆ. ಅನೇಕ ಬೇರೆ ಬೇರೆ ಪ್ರಶಸ್ತಿಗಳೊಂದಿಗೆ, ಪ್ರಮುಖವಾಗಿ Brie Larson ಈ ಚಿತ್ರದ ಅಭಿನಯಕ್ಕೆ "ಅತ್ಯುತ್ತಮ ನಟಿ" ಆಸ್ಕರ್ ಗರಿಯನ್ನು ಮುಡಿಗೇರಿಸಿಕೊಂಡಿದ್ದಾರೆ ಎಂದರೆ ಈ ಚಿತ್ರದ ಅವರ ಪಾತ್ರದ ತೂಕವನ್ನು ಗಮನಿಸಲೇಬೇಕು.


ಹಾಗಂತ ಇದು ಹಾರರ್ ಚಿತ್ರವಲ್ಲ. ಒಂದು ಚಿಕ್ಕ ಕೋಣೆಯಲ್ಲೇ ವರ್ಷಗಳಷ್ಟು ಸಮಯ ಕಳೆಯುವ ಮಗು ಹೊರಗಿನ ಪ್ರಪಂಚದ ಬಗ್ಗೆ ಅರಿವೇ ಇಲ್ಲದಿರುವಾಗಿನ ಮನಸ್ಥಿತಿ, ಮತ್ತು ಅಲ್ಲಿಂದ ಹೊರಗೆ ಬಂದಾಗ ತಾಯಿ-ಮಗ ಇಬ್ಬರೂ ಎದುರಿಸುವ ಪ್ರಪಂಚ, ಸವಾಲುಗಳು, ಮಾನಸಿಕ ಒತ್ತಡ....ಎಲ್ಲವನ್ನೂ ಮನದಟ್ಟಾಗುವಂತೆ ಅದ್ಭುತವಾಗಿ ಚಿತ್ರೀಕರಿಸಲಾಗಿದೆ. ಎಲ್ಲ ವಿವರಗಳನ್ನು ತೋರಿಸಿದ್ದರೆ ದೊಡ್ಡ ಧಾರಾವಾಹಿಯೇ ಆಗಿಬಿಡಬಹುದಾಗಿದ್ದ ಕಥೆಯ ಬೇಕಾದ ಅಂಶಗಳನ್ನಷ್ಟೇ ತೋರಿಸಿ ಬೇರೆಯದೇ Genre-ಗೆ ಸಿನಿಮಾ ಕೊಂಡುಹೋದ ನಿರ್ದೇಶಕರಿಗೆ ಹ್ಯಾಟ್ಸಾಫ್ ಹೇಳಲೇಬೇಕು.


Emma Donoghue ರವರ ಅದೇ ಹೆಸರಿನ ಕಾದಂಬರಿಯ ಕಥಾವಸ್ತುವನ್ನೇ ಇಲ್ಲಿ ಸಿನಿಮಾಗೆ ರೂಪಾಂತರಿಸಲಾಗಿದೆ. ಇಷ್ಟವಾಗುತ್ತದೆ. ಸಾಧ್ಯವಾದರೆ ನೀವೂ ಒಮ್ಮೆ ನೋಡಿ.......

"ROOM"


-ಸಂತೋಷ್ ಕುಮಾರ್ ಎಲ್.ಎಂ

No comments:

Post a Comment

Please post your comments here.