Saturday, March 8, 2014

ಸರ್…. ಡ್ರಾಪ್ ಪ್ಲೀಸ್!


                                                                                                                                                                               (ಚಿತ್ರಕೃಪೆ:Google)
(http://www.panjumagazine.com/?p=6516)



ಒಂದು 

ಸುಮಾರು 15 ವರ್ಷಗಳ ಹಿಂದೆ ಮೈಸೂರಿನಲ್ಲಿ PUC ಓದುತ್ತಿದ್ದ ಸಂದರ್ಭ. ಅಪ್ಪ ನನಗೆ ಕೊಡಿಸಿದ ಸೆಕೆಂಡ್ ಹ್ಯಾಂಡ್ ಬೈಸಿಕಲ್ಲು ಮುರಿದು ಮೂಲೆ ಸೇರಿತ್ತು. ಅದರ ರಿಪೇರಿಗೂ ನೂರು ರೂಪಾಯಿ ಇಲ್ಲದ ಪರಿಸ್ಥಿತಿ. ಕಾಲೇಜು ಶುರುವಾಗುತ್ತಿದ್ದುದೇ ಒಂಭತ್ತು ಗಂಟೆಗೆ. ಮೊದಲ ಪಿರಿಯಡ್ ಮುಂಗೋಪಿ ಮತ್ತು ಮಹಾಸಿಡುಕ ಪ್ರೊಫೆಸರ್ ಸಾಂಬಶಿವಯ್ಯನವರದ್ದು. ಆದ್ದರಿಂದ ಅವರು ಕ್ಲಾಸಿಗೆ ಪ್ರವೇಶವಾಗುವ ಮೊದಲೇ ಎಲ್ಲರೂ ಒಳಗಿರಬೇಕಿತ್ತು. ಲೇಟಾಗಿ ಬಂದವರಿಗೆ ಮರದ ಸ್ಕೇಲಿನ ಬಿಸಿಯೇಟು. ಬರದೆ ಹೋದವರ ಮನೆಗೆ absence report. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಪ್ರತಿ ವಿದ್ಯಾರ್ಥಿಗೂ ಹೇಗಾದರೂ ಮಾಡಿ ಅವರ ಪಿರಿಯಡ್ ಶುರುವಾಗುವ ಮೊದಲೇ ಕಾಲೇಜು ತಲುಪುವ ಬಯಕೆ.

ನನಗೆ ಸೈಕಲ್ಲು ಕೈ ಕೊಟ್ಟಿದ್ದರಿಂದ ಬೇಗನೆ ಎದ್ದು ಆದಷ್ಟು ಬೇಗ ರೆಡಿಯಾಗುತ್ತಿದ್ದೆ. ರಾತ್ರಿ ಉಳಿದ ಅನ್ನವಿದ್ದರೆ ಮೊಸರು ಕಲೆಸಿ ಬೇಗ ಬೇಗ ತಿಂದು ಹೊರಡುತ್ತಿದ್ದೆ. ಇಲ್ಲದಿದ್ದರೆ ಅದೂ ಇಲ್ಲ, ಬೇಗ ತಿಂಡಿ ಮಾಡೋಕೆ ಸಾಧ್ಯವಿಲ್ಲದರಿಂದ ಎಷ್ಟೋ ಸಲ ಉಪವಾಸದಲ್ಲೇ ಕಾಲೇಜಿಗೆ ಓಡಿದ್ದೇನೆ. ವಾಸವಿದ್ದ ಬಾಡಿಗೆ ಮನೆಯಿಂದ ನಾ ಓದುತ್ತಿದ್ದ JSS ಕಾಲೇಜು ಸುಮಾರು ಐದು ಕಿಲೋಮೀಟರ್ ದೂರ. ಸಿಟಿ ಬಸ್ಸಿನಲ್ಲಿ ಹೋಗೋಣವೆಂದರೆ ಅದಕ್ಕೆ ಕೊಡಲೂ ಕಾಸಿರಲಿಲ್ಲ. ದೇವರಿಗೆ ಆ ವಿಷಯದಲ್ಲಂತೂ ನಾನು ಕೃತಜ್ಞ. ಆತ ಆ ದಿನಗಳಲ್ಲಿ ನನಗೆ ಕೊಟ್ಟಿದ್ದು ಬಡತನವಷ್ಟೇ ಹೊರತು ಸೋಮಾರಿತನವಲ್ಲ. ಬ್ಯಾಗು ಬೆನ್ನಿಗೇರಿಸಿ ಕಾಲೇಜಿಗೆ ನಡಿಗೆಯಲ್ಲಿ ಹೊರಟೆನೆಂದರೆ ಕಷ್ಟವನ್ನು ಮಾತ್ರ ಯಾವ ಕ್ಷಣದಲ್ಲಿಯೂ ಶಪಿಸಲಿಲ್ಲ. 

ಒಂದಷ್ಟು ದೂರ ನಡೆಯುವುದು, ಸುಸ್ತಾದಾಗ ನಿಂತು ಆ ರಸ್ತೆಯಲ್ಲಿ ಸಾಗುವ ದ್ವಿಚಕ್ರ ವಾಹನಗಳತ್ತ ನೋಡುವುದು. ಅವರ ದೃಷ್ಟಿ ತಾಕಿತೆಂದ ತಕ್ಷಣ "ಸರ್, ಡ್ರಾಪ್ ಪ್ಲೀಸ್" ಅಂತ ದೈನ್ಯ ಭಾವದಿಂದ ಕೇಳುವುದು. ಈ ಒಂದು ವಿಚಾರದಲ್ಲಿ ನನಗೆ ಬೇಡುವ ಭಿಕ್ಷುಕರ ಅವಸ್ಥೆ ಸಾವಿರ ಪಟ್ಟು ಅರ್ಥವಾಗುತ್ತದೆ. ದೇವರು ಆ ವಾಹನದವರಿಗೆ ಆ ಕ್ಷಣ ಸರಿಯಾದ ಬುದ್ಧಿ ಕೊಟ್ಟಿದ್ದರೆ ಆ ಕ್ಷಣ ನನ್ನನ್ನು ಹತ್ತಿಸಿಕೊಳ್ಳುತ್ತಿದ್ದರು. ಕೇವಲ ಆ ರಸ್ತೆಯ ಕೊನೆಯವರೆಗಾದರೂ ಸರಿಯೇ, ಡ್ರಾಪ್ ತೆಗೆದುಕೊಳ್ಳುತ್ತಿದ್ದೆ. ಮತ್ತೆ ಅಲ್ಲಿಂದ ಒಂದಷ್ಟು ದೂರ ನಡೆಯುವುದು, ಮತ್ತೆ ಇನ್ನೊಂದು ದ್ವಿಚಕ್ರ ವಾಹನದ ಡ್ರಾಪ್ ಗಾಗಿ ಕಾಯುವುದು. ಇದೇ ಮುಂದುವರೆಯುತ್ತಿತ್ತು. ಬಹಳಷ್ಟು ಬಾರಿ ಡ್ರಾಪ್ ಕೇಳಿದ ಮೇಲೆಯೂ ಅವರು ಅದೇ ರಸ್ತೆಯಲ್ಲೇ ಹೋದರೂ ನನ್ನ ಬಗ್ಗೆ ತಿರಸ್ಕಾರದ ನೋಟ ಬೀರಿ ಮುಂದೆ ಸಾಗುತ್ತಿದ್ದರು. ನಡೆದು ಸುಸ್ತಾಗಿದ್ದ ನನಗೆ ತಡೆದುಕೊಳ್ಳಲಾಗದೆ ನಿಜಕ್ಕೂ ಆ ಕ್ಷಣ ಕಣ್ಣಲ್ಲಿ ನೀರು ಜಿನುಗಿಸುತ್ತಿತ್ತು.

ಮತ್ತೆ ಆ ತಿರಸ್ಕಾರ "ಯಾವೋನ್ನೂ ಡ್ರಾಪ್ ಕೇಳಲ್ಲ" ಅಂತ ಹೇಳಿಸುತ್ತಾ ಇನ್ನಷ್ಟು ದೂರ ನಡೆಯುವಂತೆ ಪ್ರೇರೇಪಿಸುತ್ತಿತ್ತು. ಎಷ್ಟೇ ಆದರೂ, "ಬಡವನ ಕೋಪ ದವಡೆಗೆ ಮೂಲ" ನೋಡಿ. ಸ್ವಲ್ಪ ದೂರ ನಡೆದು ಸುಸ್ತಾದ ಮೇಲೆ ಆ ಮುಂಚಿನ ದುಃಖ ಅವಮಾನಗಳೆಲ್ಲ ಕರಗಿ ಮತ್ತೆ ಇನ್ಯಾವುದೋ ದ್ವಿಚಕ್ರ ವಾಹನಕ್ಕೆ ಡ್ರಾಪ್ ಅಂತ ಕೈಯೊಡ್ದುತ್ತಿದ್ದೆ. ಇದೇ ಪ್ರಯೋಗ ನಾನು ಕಾಲೇಜು ಮುಟ್ಟುವತನಕ ನಡೆಯುತ್ತಿತ್ತು. ಆ ಮೈಸೂರಿನ ದಿನಗಳಲ್ಲಿ ಸಾವಿರ ಬಾರಿ ಆ ಬಗೆಯ ಅವಮಾನಗಳನ್ನು ದುಃಖ ನುಂಗುವುದನ್ನು ಕಲಿತಿದ್ದೇನೆ. ಯಾರೋ ನಮ್ಮ JSS ಕಾಲೇಜಿನ ಹುಡುಗನೇ ಸಿಕ್ಕಿ ಕಾಲೇಜಿನವರೆಗೆ ಡ್ರಾಪ್ ಕೊಟ್ಟರಂತೂ ಆ ದಿನ ನನಗೆ ಸಿಕ್ಕ ದೇವರುಗಳಿಗೆಲ್ಲ ಕೈಮುಗಿಯುತ್ತಿದ್ದೆ. ಇದೇ ಡ್ರಾಪ್ ಕಥೆ ಮಧ್ಯಾಹ್ನ ಕಾಲೇಜಿನಿಂದ ಮನೆ ಸೇರುವಾಗಲೂ ನಡೆಯುತ್ತಿತ್ತು. ಪುಣ್ಯಕ್ಕೆ ಕಾಲೇಜಿನಿಂದ ಮನೆಗೆ ಹೊರಡುವ ನನ್ನ ಸಹಪಾಠಿಗಳು ಯಾರಾದರೊಬ್ಬರು ನನ್ನನ್ನು ಸಾಧ್ಯವಾದಷ್ಟು ದೂರ ಡ್ರಾಪ್ ಮಾಡುತ್ತಿದ್ದರು.ಅದ್ಯಾವ ಜನುಮದಲ್ಲಿ ನಮ್ಮ ಋಣವಿತ್ತೋ, ಹಾಗೆ ಡ್ರಾಪ್ ಕೊಟ್ಟವರಿಗೆಲ್ಲ ಪ್ರತಿಯಾಗಿ ಹೇಳಿದ್ದು ಬರೀ "ಥ್ಯಾಂಕ್ಸ್ " ಅಂದಿದ್ದೊಂದೇ.

ಸೆಕೆಂಡ್ PUCಯ ದಿನಗಳಲ್ಲಿ ಬೆಳಿಗ್ಗೆಯೇ ನನ್ನ ಲೆಕ್ಚರರ್ ಬಳಿ ಟ್ಯೂಶನ್ ಗೆಂದು ಹೋದರೆ ಅವರೇ ಅಲ್ಲಿಂದ ಕಾಲೇಜಿನವರೆಗೆ ಬಿಡುತ್ತಿದ್ದರು. ಕಾಲೇಜು ತಲುಪಲು ಅದೆಷ್ಟು ದಾರಿಗಳೋ! ಕಡೆಗೂ ಮತ್ತೆ ನನಗೆ ಚಿಂತೆ ಶುರುವಾಯಿತು. ಪರೀಕ್ಷೆಯ ದಿನಗಳಲ್ಲಿ ಪರೀಕ್ಷೆಯ ಒತ್ತಡದ ನಡುವೆ ಬೆಳಿಗ್ಗೆ ಹೇಗೆ ಕಾಲೇಜಿಗೆ ನಡೆದು ಹೋಗುವುದು. ಆ ಚಿಂತೆಯಲ್ಲಿದ್ದಾಗ ನನಗೆ ಟ್ಯೂಶನ್ನಿನಲ್ಲಿ ಪರಿಚಯವಾದ ಗೆಳೆಯನೆಂದರೆ ಪ್ರಶಾಂತ್. ಕಾಲೇಜು ಒಂದೇ ಆದರೂ ಬೇರೆ ವಿಭಾಗದಲ್ಲಿದ್ದ. ಆತ ನನ್ನ ಅವಸ್ಥೆ ನೋಡಲಾರದೇ ತಾನೇ ಬಂದು ಆತನ ದ್ವಿಚಕ್ರ ವಾಹನದಲ್ಲಿ ಕರೆದೊಯ್ದು ಮತ್ತು ಪರೀಕ್ಷೆ ಮುಗಿದ ಮೇಲೆ ಮನೆಯವರೆಗೂ ತಲುಪಿಸುತ್ತಿದ್ದ. ವಿಚಿತ್ರ ನೋಡಿ, ಬಡವರಿಗೆ ಹೆಚ್ಚು ಆಪ್ತವಾಗುವುದೂ ಕೂಡ ಬಡವರೇ! ಆತನೂ ಅಷ್ಟೊಂದು ಶ್ರೀಮಂತ ಕುಟುಂಬದಿಂದ ಬಂದಿರಲಿಲ್ಲ. ಪೆಟ್ರೋಲ್ ಗೂ ಸೇರಿ ಸ್ವಲ್ಪವಷ್ಟೇ ಆತನಿಗೆ ಪಾಕೆಟ್-ಮನಿ ಅಂತ ಸಿಗುತ್ತಿತ್ತು. ಅವನ ಮನೆಯ ರೂಟ್ ಇದ್ದದ್ದೇ ಬೇರೆ ಕಡೆ. ಆದರೂ ನನ್ನನ್ನು ಕರೆದೊಯ್ಯುವ ಸಲುವಾಗಿ ಬೇಗನೇ ಮನೆಯಿಂದ ಹೊರಟು ನನ್ನನ್ನು ಕಾಲೇಜು ತಲುಪಿಸುತ್ತಿದ್ದ. 

ಸಮಯ ಹಾಗೇ ಇರುವುದಿಲ್ಲ ನೋಡಿ. ಒಂದಷ್ಟು ವರ್ಷಗಳ ಶ್ರಮದ ನಂತರ ನಾನು ಬೆಂಗಳೂರಿನ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆದೆ. ಡ್ರಾಪ್ ಕೇಳುತ್ತಿದ್ದವನ ಮನೆಯಲ್ಲೀಗ ಒಂದು ಪುಟ್ಟ ಕಾರಿದೆ. ಈಗಲೂ ಮನೆಯವರೊಂದಿಗೆ ಎಲ್ಲಾದರೂ ಹೊರಗೆ ಹೋಗುವಾಗ ಯಾರಾದರೂ "ಸರ್ …ಡ್ರಾಪ್ ಪ್ಲೀಸ್" ಎಂದಾಗ ನನಗರಿವಿಲ್ಲದಂತೆಯೇ ನನ್ನ ಕಾಲು ಬ್ರೇಕ್ ಅದುಮಿರುತ್ತದೆ. 

ಎರಡು


ರಾತ್ರಿ ಒಂಭತ್ತರ ಸಮಯವಿರಬಹುದು. ಬೆಂಗಳೂರಿನ ಹೊರವಲಯದಲ್ಲಿ ಆ ಡ್ರೈವರ್ ತನ್ನ ಕ್ಯಾಬ್ ಚಲಿಸುತ್ತಿದ್ದಾನೆ. ಅಲ್ಲೇ ರಸ್ತೆ ಮಧ್ಯದಲ್ಲಿ ಗರ್ಭಿಣಿ ಹೆಂಗಸೊಬ್ಬಳು ಕೈ ಹಾಕಿ "ಸರ್, ಡ್ರಾಪ್ ಪ್ಲೀಸ್" ಎನ್ನುತ್ತಾಳೆ. ಹತ್ತಿಸಿಕೊಂಡ ಆತ ಮುಂದೆ ಚಲಿಸುತ್ತಾನೆ. ಒಂದರ್ಧ ಮೈಲಿ ಹೋಗಿರಬಹುದು. ಒಂದು ಹೆಚ್ಚು ಜನಸಂದಣಿಯಿಲ್ಲದ ಪ್ರದೇಶ ಬಂದಾಗ ಆ ಹೆಂಗಸು ತನ್ನ ಹೊಟ್ಟೆಗೆ ಸಿಕ್ಕಿಸಿಕೊಂಡಿದ್ದ ಬಟ್ಟೆ ಗಂಟನ್ನು ಹೊರತೆಗೆಯುತ್ತಾಳೆ. ಆಕೆ ಗರ್ಭಿಣಿಯಲ್ಲ! ಹಾಗೆ ನಟಿಸುತ್ತಿದ್ದಳು. ಯೋಚಿಸುವಷ್ಟರಲ್ಲಿ ಆಕೆಯ ಕೈಯಲ್ಲಿ ಚಾಕು ಪ್ರತ್ಯಕ್ಷವಾಗಿದೆ. ಅದರಿಂದ ಆ ಡ್ರೈವರ್-ನ ಕುತ್ತಿಗೆಗೆ ಒತ್ತಿ ಹಿಡಿದು "ನಿಲ್ಲಿಸು" ಅಂತ ಅರಚುತ್ತಾಳೆ. ಆತ ನಿಲ್ಲಿಸಿದಾಕ್ಷಣ ಅಲ್ಲೇ ಅಡಗಿ ಕುಳಿತಿದ್ದ ಆಕೆಯ ಕಡೆಯವರು ಇವನ ವಾಹನನನ್ನು ಸುತ್ತುವರೆದು ಪ್ರಾಣ ಬೆದರಿಕೆ ಹಾಕಿ ಇವನಲ್ಲಿದ್ದ ಹಣ, ಮೊಬೈಲು ಎಲ್ಲವನ್ನೂ ದೋಚಿ ಪರಾರಿಯಾಗುತ್ತಾರೆ. ಜರ್ಜರಿತನಾದ ಆ ಡ್ರೈವರ್ ಇನ್ನು ಮುಂದೆ ಜೀವನದಲ್ಲಿ ಯಾರು ಸಾಯುತ್ತಿದ್ದರೂ ಡ್ರಾಪ್ ಕೊಡುವುದಿಲ್ಲ ಅಂತ ನಿರ್ಧಾರ ಮಾಡುತ್ತಾನೆ.
ದಿನಪತ್ರಿಕೆಗಳಲ್ಲಿ ಈ ರೀತಿ ಗರ್ಭಿಣಿಯರ, ರೋಗಿಗಳ ಸೋಗಿನಲ್ಲಿ ಅಥವಾ ಸುಂದರ ಹುಡುಗಿಯರ ಡ್ರಾಪ್ ಕೇಳಲೆಂದು ನಿಲ್ಲಿಸಿ ಡ್ರಾಪ್ ಕೊಟ್ಟವರನ್ನು ದೋಚುವ ಸುದ್ದಿಗಳನ್ನು ಓದುತ್ತಿರುತ್ತೇವೆ. ಹಾಗಾಗಿ ಕಾಲ ಬದಲಾಗಿದೆ, ಯಾರಾದರೂ "ಸರ್ …ಡ್ರಾಪ್ ಪ್ಲೀಸ್"ಎಂದಾಗ ಮನಸ್ಸು ಕೇವಲ ನಮ್ಮ ಸುರಕ್ಷತೆಯ ಬಗ್ಗೆ ಯೋಚಿಸುತ್ತದೆ ಹೊರತು ಡ್ರಾಪ್ ಕೇಳಿದವನ ಪರಿಸ್ಥಿತಿಯ ಬಗ್ಗೆ ಅಲ್ಲ. ಯಾರೋ ಮಾಡುವ ತಪ್ಪಿಗೆ ಇನ್ಯಾರೋ ಬೆಲೆ ತೆರುವುದೆಂದರೆ ಇದೇ ಅಲ್ಲವೇ?

ಮೂರು 


ಬದಲಾದ ಈ ಮನಸ್ಥಿತಿಯ ಬಗ್ಗೆ ಯೋಚಿಸುತ್ತಾ ಮೊನ್ನೆ ಮೊನ್ನೆ ನನ್ನ ವಿವಾಹ ವಾರ್ಷಿಕೋತ್ಸವದ ದಿನ ಊಟಿಯಿಂದ ಮೈಸೂರಿಗೆ ಪ್ರಯಾಣ ಬೆಳೆಸಿದ್ದೆವು. ಮಾರ್ಗ ಮಧ್ಯೆ ಗುಂಡ್ಲುಪೇಟೆಗೆ ಇನ್ನೇನು ಹದಿನೈದು ಕಿಲೋಮೀಟರ್ ಇರಬೇಕಾದರೆ ಭಾರದ ಬ್ಯಾಗು ಹೊತ್ತ ಒಂದಷ್ಟು ಸರ್ಕಾರಿ ಶಾಲೆಯ ಹುಡುಗರು ಬಸ್ಸಿಗೆ ಕಾಯುತ್ತಾ ಮಧ್ಯೆ ಬರುವ ವಾಹನಗಳಿಗೆ ಕೈ ತೋರಿಸಿ "ಡ್ರಾಪ್ ಸಾ" ಅಂತ ಬೇಡುತ್ತಿದ್ದರು. 
ನಿಲ್ಲಿಸಿ ನಾಲ್ಕೈದು ಚಿಕ್ಕ ಮಕ್ಕಳನ್ನು ಹತ್ತಿಸಿಕೊಂಡೆ. ಓಡಿಸುತ್ತಿರುವಾಗ ಹಿಂದೆ ಆ ಮಕ್ಕಳ ಮಾತು ಕೇಳಿಸುತ್ತಿತ್ತು "ಸೂಪರ್ ಕಲಾ, ಇವತ್ತು ಇಸ್ಕೂಲ್ಗೆ ಬೇಗನೇ ಸೇರ್ಕಬೋದು. ಮೊದುಲ್ನೆ ಸರ್ತಿ ಕಾರು ಸಿಕ್ತು, ಎಷ್ಟು ಚೆಂದಾಗದೆ ಅಲ್ವಾ?" ಹೀಗೆ ಮಾತನಾಡುತ್ತ ಪಿಳಿಪಿಳಿ ಕಣ್ಣು ಬಿಡುತ್ತ ಸುತ್ತಲಿನ ಪರಿಸರವನ್ನು ಮತ್ತು ಆ ಕಾರಿನ ಪ್ರಯಾಣವನ್ನು ಆನಂದಿಸುತ್ತಿದ್ದರು. ಇಳಿಯುವಾಗ ನನ್ನೆಡೆಗೆ ಹಲ್ಲು ಕಿರಿಯುತ್ತಾ "ಟ್ಯಾಂಕ್ಸು ಸಾ" ಎಂದವರ ಮುಖದಲ್ಲಿ ಖುಷಿಯಿತ್ತು.

ನನ್ನ ಮುಖದಲ್ಲಿಯೂ…

ನಿಮ್ಮವನು
ಸಂತು.