Sunday, July 21, 2013

ಮೂಕ ಕರು

"ಪಂಜು" ವಾರಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ:

(http://www.panjumagazine.com/?p=3203)

"ಲೋ ಮಗಾ, ಬಿಸಿಲು ನೆತ್ತಿಗೇರ್ತಾ ಅದೆ, ಕರಾನ ಜಮೀನ್ ತಾವ ಹೊಡ್ಕಂಡ್ ಹೋಗಿ ಮರಕ್ ಕಟ್ಟಾಕಿ ಮೇಯಕ್ ಬುಡು. ಹಾಂ… ಹೋಗಕ್ ಉಂಚೆ ಮನೆತಾವ್ ಒಸಿ ನೀರು ಕುಡುಸ್ಬುಡು. ಬರದ್ ಹೊತ್ತಾಗ್ಬೋದು. ಇಸ್ಕೂಲಿಂದ ಬಂದ್ ಮ್ಯಾಕೆ ಮತ್ತೆ ಹೊಡ್ಕಂಡ್ ಬಂದ್ ಕೊಟ್ಟಿಗೇಲಿ ಕಟ್ಟಾಕ್ ಬುಡು. ಮರಿಬ್ಯಾಡ" ಪೇಟೆಗೆ ಹೊರಟಿದ್ದ ನಮ್ಮಪ್ಪ ಕೂಗಿ ಹೇಳಿದರು. ಒಲ್ಲದ ಮನಸ್ಸಿಂದ ನಾ "ಹೂಂ…..ಸರಿ" ಅಂದಿದ್ದು ಅಪ್ಪಂಗೆ ಕೇಳಿಸಲೇ ಇಲ್ಲ. 
ನಮ್ಮದೊಂದು ಚಿಕ್ಕ ಹಳ್ಳಿ. ನಮ್ಮ ಜಮೀನಿದ್ದದ್ದು ಹಳ್ಳಿಯಿಂದ ಹೊರಗೆ. ಮೂರು ಮೈಲಿ ನಡೀಬೇಕು. ಒಂದು ಬೆಳೆ ಮುಗಿದು ಇನ್ನೊಂದು ಬೆಳೆಗೆ ಜಮೀನು ಸಿದ್ಧವಾಗುತ್ತಿದ್ದ ಸಮಯ. ಆದ್ದರಿಂದ ತೆಕ್ಕಲು ಬಿದ್ದಿದ್ದ ಜಮೀನಿನಲ್ಲಿ ಉಳಿದುಕೊಂಡ ಅಷ್ಟಿಷ್ಟು ಮೇವನ್ನು ತಿನ್ನಲು ನಮ್ಮ ಮನೆಯ ಹಸುಕರುಗಳನ್ನೇ ಬಿಡುತ್ತಿದ್ದೆವು. ನನಗೋ ಮುಂಚಿನಿಂದಲೂ ಈ ಬೇಸಿಗೆ, ಹಸು ಕರು, ವ್ಯವಸಾಯ, ಅದರಿಂದ ಬರೋ ಸ್ವಲ್ಪ ಕಾಸು ಇವೆಲ್ಲ ಕೊಂಚವೂ ಇಷ್ಟವಾಗದ ವಿಷಯಗಳು. ಆದರೂ ಅಪ್ಪ ಕೆಲಸಕ್ಕೆ ಅಂತ ಕರೆದಾಗ ಅಂಜಿಕೆಯಿಂದ ಕೆಲಸಕ್ಕೆ ಬರಲಾರೆ ಅನ್ನುವಂತಿಲ್ಲ. ಆದರೂ ಹಲವಾರು ಬಾರಿ ಶಾಲೆ, ಪರೀಕ್ಷೆ, ತಲೆನೋವು, ಮನೆಪಾಠ ಅಂತ ಏನೇನೋ ನೆಪವೊಡ್ಡಿ  ಅಪ್ಪ ಹೇಳುವ ಕೆಲಸದಿಂದ ತಪ್ಪಿಸಿಕೊಂಡು ಬಿಡುತ್ತಿದ್ದೆ.
 
ಇವತ್ತೂ ಅಪ್ಪ ಯಾವುದೋ ಕಾರ್ಯದ ನಿಮಿತ್ತ ಪಕ್ಕದ ಪೇಟೆಗೆ ತೆರಳಿದ್ದರು. ತಾವು ಕರುವನ್ನು ಜಮೀನಿನ ಬಳಿ ಹೊಡೆದುಕೊಂಡು ಹೋಗಿ ಅಲ್ಲಿ ಮೇಯಲು ಬಿಟ್ಟು ನಂತರ ಪೇಟೆಗೆ ಹೊರಟಿದ್ದರೆ ಅದು ಸಾಧ್ಯವಾಗದ ಮಾತು. ಏಕೆಂದರೆ ಬೆಳಗಿನ ಬಸ್ಸನ್ನು ಬಿಟ್ಟರೆ ನಂತರದ್ದು ಮಧ್ಯಾಹ್ನವೇ. ಅದಕ್ಕಾಗಿ ಶಾಲೆಗೇ ಹೊರಡುವ ಮುಂಚೆ ನನ್ನನ್ನೇ ಕರುವನ್ನು ಜಮೀನಿಗೆ ಮೇಯಲು ಬಿಟ್ಟು ಬರುವಂತೆ ಹೇಳಿ ಹೋಗಿದ್ದರು. ಒಲ್ಲದ ಮನಸ್ಸಿನಿಂದಲೇ ನೀರು ಕುಡಿಸಿ ಕರುವನ್ನು ಬೇಗನೆ ಓಡಿಸಿಕೊಂಡು ಜಮೀನಿಗೆ ಹೋಗಿದ್ದೆ. ಬೆಳೆ ಮುಗಿದ ಜಮೀನಿನಲ್ಲಿ ಹಸಿರು ಹುಲ್ಲು ಬೆಳೆದು ನಿಂತಿರುತ್ತದೆ. ಜಮೀನಿನ ಒಳಗೆ ಒಂದು ತೆರೆದ ಬಾವಿಯಿದೆ. ಅದನ್ನು ತೋಡಿ ಅದೆಷ್ಟು ವರ್ಷಗಳಾಗಿವೆಯೋ ನಾ ಕಾಣೆ. ಆದರೆ ಅದು ಇದುವರೆಗೂ ಎಂತಹ ಬರವಿದ್ದ ಸಮಯದಲ್ಲೂ ಬತ್ತಿಲ್ಲವೆಂಬುದು ಊರ ಜನರು ಹೇಳುವ ಮಾತು. ಆ ಬಾವಿಯ ನೀರು ಬಹಳ ರುಚಿ. ಅ ನೀರು ಕನ್ನಡಿಯಷ್ಟೇ ಪರಿಶುದ್ಧ. ಬಗ್ಗಿ ನೋಡಿ ನಮ್ಮ ಮುಖದ ಪ್ರತಿಬಿಂಬ ನೋಡಿಕೊಳ್ಳಬಹುದು.  ಆ ಬಾವಿಗೆ ಹೊಂದಿಕೊಂಡಂತೆ ಐದಾರು ಹೆಜ್ಜೆ ದೂರದಲ್ಲಿ ಬಹಳ ಎತ್ತರಕ್ಕೆ ಬೆಳೆದ ತೆಂಗಿನಮರವೊಂದಿದೆ. ಅದರ ಸುತ್ತ ಹುಲ್ಲು ಯಥೇಚ್ಛವಾಗಿ ಬೆಳೆದಿದೆ. ಅಪ್ಪನೇನಾದರೂ ಮೇಯಿಸಲು ಬಂದರೆ ಎಲ್ಲ ದನಕರುಗಳನ್ನೂ ಸುಮ್ಮನೆ ಅವುಗಳ ಇಚ್ಛೆಯಂತೆ ಜಮೀನಿನಲ್ಲಿ ಮೇಯಲು ಬಿಡುತ್ತಾನೆ. ಅವು ದಿನಪೂರ್ತಿ ಹೊಟ್ಟೆತುಂಬ ಮೇಯ್ದ ನಂತರ ಆ ಬಾವಿಯ ಪಕ್ಕದ ತೊಟ್ಟಿಯಲ್ಲಿ ತುಂಬಿದ ನೀರನ್ನು ಕುಡಿಸಿ ಮನೆಗೆ ಹಿಂತಿರುಗುತ್ತಾನೆ. ನಾನು ಬರೇ ಕರುವನ್ನು ಕರೆತಂದರೆ ಆ ಬಾವಿಯ ಪಕ್ಕದಲ್ಲಿಯ ತೆಂಗಿನ ಮರಕ್ಕೆ ಕಟ್ಟಿಹಾಕಿ ಹಗ್ಗವನ್ನು ಕೊಂಚ ಉದ್ದವಾಗಿಯೇ ಬಿಟ್ಟು ಮನೆ ಕಡೆ ಹೊರಟುಬಿಡುತ್ತೇನೆ. ಆ ಹಗ್ಗದ ಉದ್ದಕ್ಕೆ ಎಷ್ಟು ಸ್ಥಳವನ್ನು ಆ ಕರು ತಲುಪಬಲ್ಲುದೋ ಅಲ್ಲಿಯವರೆಗೆ ಅದು ಹುಲ್ಲು ಮೇಯ್ದಿರುತ್ತದೆ.  ಸಂಜೆ ಶಾಲೆ ಮುಗಿದ ಮೇಲೆ ಜಮೀನಿಗೆ ಬಂದು ಕರುವಿಗೆ ನೀರು ಕುಡಿಸಿ ಮತ್ತೆ ಮನೆ ಕಡೆ ಕರೆದುತರಬೇಕು.
 

 
ಕರುವನ್ನು ಜಮೀನಿನಲ್ಲಿ ಮೇಯಲಿಕ್ಕೆ ಕಟ್ಟಿಹಾಕಿ ಶಾಲೆಗೇ ಹೋದ ನಾನು ಅದನ್ನು ಮರೆತೇಬಿಟ್ಟಿದ್ದೆ. ದಿನದ ಕೊನೆಯ ಪಿರಿಯಡ್ ಆಟವಾಡುವುದಕ್ಕೆ ಬಿಟ್ಟಿದ್ದರಿಂದ ಶಾಲೆಯ ಸಮಯ ಮುಗಿದ ಮೇಲೂ ಆಟವನ್ನು ಮುಂದುವರೆಸಿದ್ದೆವು. ಸಂಜೆ ಏಳಾಯಿತು, ಎಂಟಾಯಿತು. ಕತ್ತಲಾದ್ದರಿಂದ ಶಾಲೆಯ ಹತ್ತಿರದಲ್ಲೇ ಇದ್ದ ಸುನೀಲನ ಮನೆಗೆ ಹೋಗಿ ಅವರಮ್ಮ ಕೊಟ್ಟ ಕಾಫೀ ಹೀರುತ್ತಾ ಮನೆಪಾಠದ ನೆಪದಲ್ಲಿ ಹರಟೆ ಹೊಡೆಯುತ್ತ ಕುಳಿತುಬಿಟ್ಟೆವು.
 
ಸರಿಯಾಗೇ ಎಂಟು ಘಂಟೆಯ ಬಸ್ಸಿಗೆ ಪೇಟೆಗೆ ಹೋಗಿದ್ದ ಅಪ್ಪ ಮನೆಗೆ ಬಂದರು. ಬಂದವರೇ ಮೊದಲು ನೋಡಿದ್ದು ಕೊಟ್ಟಿಗೆಯಲ್ಲಿ ಕರುವಿದೆಯಾ ಅಂತ. ಅಮ್ಮನನ್ನು ವಿಚಾರಿಸಿದಾಗ "ಅವ್ನು ಇಸ್ಕೂಲಿಂದ ಇನ್ನೂ ಬಂದಿಲ್ಲ ಕಣ, ನೋಡಿ" ಅಂದರು. ಅಪ್ಪ "ಅವನ್ ಎಲ್ ಒಯ್ತನೆ, ಬೊಡ್ಡಿಕೂಸು?!. ಕರಾನ ಜಮೀನಲ್ಲಿ ಕಟ್ಟಾಕಿ ಎಲ್ಲೋ ಇಸ್ಕೂಲ್ ಮುಗಿಸ್ಕಂಡವ ಊರ್ ತಿರ್ಗಕ್ ಹೋಗಿರಬೇಕು, ಅವನು ಅಟ್ಟಿಗ್ ಬರಲಿ. ಇವತ್ತು ಹುಟ್ನಿಲ್ಲ ಅಂತ ಅನ್ನುಸ್ಬುಡ್ತೀನಿ " ಅಂತ ಟಾರ್ಚನ್ನು ಕೈಲಿ ಹಿಡಿದವರೇ ಬಿರಬಿರನೆ ಹೆಜ್ಜೆ ಹಾಕುತ್ತಾ ಜಮೀನಿನ ಕಡೆ ನಡೆದರು. ಹಳ್ಳಿಯ ಮಾಮೂಲಿ ಹಣೆಬರಹ. ಆರು ಘಂಟೆಗೆಲ್ಲ ಕರೆಂಟು ತೆಗೆದಿದ್ದರು. ಇಡೀ ಹಳ್ಳಿಯೇ ಕತ್ತಲಲ್ಲಿ ಮಲಗಿತ್ತು. ಅಲ್ಲೊಬ್ಬರು ಇಲ್ಲೊಬ್ಬರು ಹೆಂಡ ಕುಡಿದು ರಸ್ತೆಯಲ್ಲಿ ಅಡ್ಡವಾಗಿ ಸಿಗುತ್ತಿದ್ದರು.
 
ತಣ್ಣನೆಯ ಗಾಳಿ ಬೀಸುತ್ತಲಿದೆ. ಇದ್ದಕ್ಕಿದ್ದಂತೆ ಗಾಳಿಯ ಆರ್ಭಟ ಶುರುವಾಯಿತು. ಮರಗಳು ಜೋರಾಗಿ ಆಡಲಾರಂಭಿಸಿದವು.ಆಕಾಶದಲ್ಲಿ ಮಿಂಚು.  ಮಳೆ ಬರುವ ಸೂಚನೆ. ಅಪ್ಪ ಕೊಡೆ ತರಲು ಮರೆತ ತನ್ನನ್ನು ತಾನು "ಛೇ" ಅಂತ ಬೈದುಕೊಳ್ಳುತ್ತಾ ಬೇಗನೆ ಹೆಜ್ಜೆ ಹಾಕತೊಡಗಿದರು. ಹೊರಟು ಐದು ನಿಮಿಷವಾಗಿಲ್ಲ. ಹನಿಗಳು ಚಟಪಟ ಅಂತ ಬೀಳಲಾರಂಭಿಸಿದವು. "ಚಡೀ………. ಲ್" ಅಂತ ಗುಡುಗಿದ್ದು ಒಮ್ಮೆ ತಮ್ಮ ಪಕ್ಕದಲ್ಲೇ ದೊಡ್ಡ ಬಂಡೆಯೊಂದನ್ನು ಎತ್ತಿ ಯಾರೋ ಪಕ್ಕದಲ್ಲೇ ನಿಂತು ತಲೆಯ ಮೇಲೆ ಹಾಕಿದಂತೆ ಭಾಸವಾಯಿತು. ಕಿವಿ ತಮಟೆ ಹೊಡೆಯುವುದೊಂದು ಬಾಕಿ. ಆಗ ಶುರುವಾಯಿತು ನೋಡಿ, ಕುಂಭದ್ರೋಣ ಮಳೆ. ಆಕಾಶಕ್ಕೇ ಯಾರೋ ರಂಧ್ರ ಕೊರೆದಂತೆ. ಅಷ್ಟು ಹೊತ್ತಿಗಾಗಲೇ ಮೈಮೇಲಿದ್ದ ಬಟ್ಟೆಗಳೆಲ್ಲ ಒದ್ದೆಯಾಗಿ  ಮೈಗೆಲ್ಲ ಸ್ನಾನವಾಗಿತ್ತು. ಕೈಲಿದ್ದ ಟಾರ್ಚಿನ ಬೆಳಕು ಬಹುದೂರ ಸಾಗುತ್ತಿರಲಿಲ್ಲ. ಈ ಮಳೆಗೂ ಆ ಕತ್ತಲೆಗೂ ಆ ಬಡಪಾಯಿ ಪುಟ್ಟ ಕರುವಿನ ಸ್ಥಿತಿ ಹೇಗಾಗಬೇಡ? ಹೇಗಾದರೂ ಮಾಡಿ ಬೇಗಬೇಗನೆ ಕರುವನ್ನು ಮನೆಗೆ ತಲುಪಿಸಬೇಕು ಅಂದುಕೊಳ್ಳುತ್ತಾ ಆ ಮಳೆಯನ್ನೂ ಲೆಕ್ಕಿಸದೇ ಜಮೀನಿನ ಕಡೆಗೆ ಹೆಜ್ಜೆ ಹಾಕತೊಡಗಿದರು.
 
ಅದು ಊರ ಹೊರಭಾಗವಾದ್ದರಿಂದ ಜಮೀನಿನ ಹತ್ತಿರ ಯಾವುದೇ ಮನೆಗಳಿಲ್ಲ. ಆ ಮಳೆಗೂ, ಕಾಲಿಗೆ ತಾಕುವ ಆ ಚಿಕ್ಕಪುಟ್ಟ ಗಿಡಗಳು, ಮೊಳಕಾಲುದ್ದ ಹರಿಯುತ್ತಿರುವ ನೀರು, ನಂತರ ಜಮೀನಿನ ಒಳಗೆ ಕಾಲಿಟ್ಟಾಗ ಮೊದಲೇ ಮಣ್ಣಿದ್ದ ನೆಲಕ್ಕೆ ನೀರು ಬಿದ್ದು ಅಂಟುವ ಆ ಕೆಸರಿಗೂ ಬೇಗ ಬೇಗ ನಡೆಯಲು ಕೊಂಚ ಕಷ್ಟವಾಗುತ್ತಿತ್ತು. ಜಮೀನು ಹತ್ತಿರ ಬಂತು. ದೂರದಿಂದಲೇ ಒಡೆಯನನ್ನು ಕಂಡ ಆ ಕರು "ಅಂಬಾ" ಎಂದು ಕೂಗಿಕೊಳ್ಳಲಾರಂಭಿಸಿತು. ಆ ತೆಂಗಿನಮರದ ಬಳಿ ಹೋದವರೇ ಊರುಗುಣಿಕೆಯನ್ನು ಬಿಚ್ಚಿದರು. ಈಗ ಕರುವಿಗೆ ಕೊಂಚ ನಿರಾಳವಾಯಿತು. ಕರು ಮರದ ಅತ್ತ ಬದಿಯಲ್ಲಿ, ಅಪ್ಪ ಇತ್ತ ಬದಿಯಲ್ಲಿ. ಪೂರ್ಣ ಸಂಪೂರ್ಣ ಕತ್ತಲು. ಆಗಲೇ ಆಗಿದ್ದು ಎಡವಟ್ಟು. ಟಾರ್ಚನ್ನು ಒಂದು ಕೈಲಿ ಹಿಡಿದುಕೊಂಡೇ ಕರುವಿನ ಹಗ್ಗವನ್ನು ಹಿಡಿಯುವ ಭರದಲ್ಲಿ ಟಾರ್ಚ್ ಅಲುಗಾಡಿದ್ದರಿಂದ ಅತ್ತಲಿದ್ದ ಕರುವಿಗೆ ಮರದ ನೆರಳಿನಾಕೃತಿ  ಅಲುಗಾಡಿದಂತೆ ಕಂಡಿತು! ಇದ್ದಕ್ಕಿದ್ದಂತೆ ಮರ ಅಲುಗಾಡಿದಂತೆ ಕಂಡದ್ದರಿಂದ ಆ ಕರುವಿಗೆ ಗಾಬರಿಯಾಗಿ ದಿಕ್ಕೆಟ್ಟು ಹಿಂದಕ್ಕೆ ಓಡಿತು.
 
ಎರಡೇ ಕ್ಷಣ. ಅಪ್ಪನ ಎದೆ ಝಲ್ಲೆಂದಿತು. ದಿಕ್ಕೆಟ್ಟು ಹಿಂದಕ್ಕೆ ಜಿಗಿದ ಕರು ಹಗ್ಗದ ಸಮೇತ ನಲವತ್ತು ಅಡಿ ಆಳದ ತೆರೆದ ಬಾವಿಗೆ "ದುಡುಂ…. "ಎಂಬ ಶಬ್ದದೊಡನೆ ಬಿದ್ದಿತ್ತು. ಅಪ್ಪ ಒಂದೇ ಕ್ಷಣದಲ್ಲಿ ಆದ ಈ ಅನಾಹುತಕ್ಕೆ ಶಾಕ್ ಆದರೂ ತಕ್ಷಣವೇ ಹೆಚ್ಚು ಕಾಲ ಯೋಚಿಸದೇ ಟಾರ್ಚನ್ನು ಕೈಯಲ್ಲಿ ಗಟ್ಟಿ ಹಿಡಿದು ಬಾವಿಯ ಅಂಚಿನಲ್ಲಿ ನಿಂತು ಒಳಗೆ ಬೆಳಕು ಬಿಟ್ಟರು. ಟಾರ್ಚಿನ ಬೆಳಕು ಪೂರ್ತಿ ಒಳಗೆ ಹೋಗಲಿಲ್ಲ. ಬಾವಿಯ ಒಳಗಿಂದ ಸ್ವಲ್ಪ ಶಬ್ದವೂ ಬರುತ್ತಿಲ್ಲ. ರಾಡಿಯಾಗಿದ್ದ ಚಪ್ಪಲಿಯನ್ನು ಕಾಲಿಂದಲೇ ಎತ್ತಿ ಬಿಸಾಕಿದವರೇ ಬಾವಿಯ ಒಂದು ಮೂಲೆಯ  ಹೋಗಿ ಅಲ್ಲಿದ್ದ ಮೆಟ್ಟಿಲನ್ನು ನಿಧಾನವಾಗಿ ಒಂದೊಂದಾಗೇ ಇಳಿಯತೊಡಗಿದರು. ಮೆಟ್ಟಿಲನ್ನು ಇತ್ತೀಚಿಗೆ ಉಪಯೋಗಿಸದ ಕಾರಣ ಮಣ್ಣೆಲ್ಲ ಒಂದು ಬದಿಗಿದ್ದು ಕಾಲಿಟ್ಟರೆ ಮಳೆಯ ನೀರಿನಿಂದಾಗಿ ಜರ್ರನೆ ಜಾರುತ್ತಿತ್ತು. ಬೇರೆ ದಾರಿಯೇ ಇಲ್ಲ. ಕರುವನ್ನು ಬದುಕಿಸಿಕೊಳ್ಳಲೇಬೇಕು. ತನಗೆ ಈಜು ಬರುವುದಿಲ್ಲ!! ಆದರೂ ಇನ್ನೊಂದು ಜೀವದ ಬೆಲೆ ತನಗೆ ಗೊತ್ತು. ಈ ಜಗತ್ತಿನ ಯಾವ ಪ್ರಾಣಿ ಪಕ್ಷಿ ಸಂಕುಲದ್ದಾಗಲಿ ಜೀವವೆಂದರೆ ಜೀವ ತಾನೇ? ಮನುಷ್ಯರು ಜೀವ ಉಳಿಸಿಕೊಳ್ಳುವ ಸಲುವಾಗಿ ಮಾತಿನಲ್ಲೇ ಯಾವ ತರಹದ ಸುಳ್ಳು, ಹಣ, ಹಲವಾರು ಆಮಿಷವೊಡ್ಡಬಲ್ಲರು. ಪಾಪ ಅವಾದರೋ ಮೂಕಪ್ರಾಣಿಗಳು. ಹೇಗೆ ತಾನೇ ತಮ್ಮ ದುಗುಡವನ್ನು ಹೇಳಿಕೊಂಡಾವು?
 
ನೀರಿನ ಮಟ್ಟದ ಮೇಲಿನ ಕೊನೆಯ ಮೆಟ್ಟಿಲಂತೂ ಸರಿಯಾಗಿ ಕಾಣುತ್ತಲೇ ಇಲ್ಲ. ಮೇಲೆ ಸುರಿಯುತ್ತಿರುವ ಮಳೆಯ ಪರಿಣಾಮ ನೀರು ಝರಿಯಂತೆ ಮೆಟ್ಟಿಲುಗಳ ಮೂಲಕ ಒಳ ನುಗ್ಗುತ್ತಿದೆ. ನಿಧಾನವಾಗಿ ಕೊನೆಯ ಮೆಟ್ಟಿಲ ಮೇಲೆ ಒಂದೇ ಕಾಲಿಟ್ಟರು. ಸರ್ರನೆ ಜಾರಿತು. ತಕ್ಷಣ ಸಮತೋಲನ ಕಾಯ್ದುಕೊಂಡವರೇ ನಿಧಾನವಾಗಿ ಕೊನೆಯ ಮೆಟ್ಟಿಲ ಮೇಲೆ ತಳವೂರಿ ಕುಳಿತುಬಿಟ್ಟರು. ಆಗ ಮುಂದಿನ ನೀರಿನಲ್ಲಿ ಈಜುತ್ತಾ ತನ್ನತ್ತ ಏನೋ ಬಂದಂತಾಯ್ತು. ಅದೇ ಕ್ಷಣಕ್ಕೆ ಮಿಂಚೊಂದು ಫಳ್ಳನೆ ಹೊಳೆದು ಮರೆಯಾಯಿತು. ಹೌದು ಅದು ತನ್ನದೇ ಮುದ್ದಿನ ಕರು. ಅದನ್ನು ಹಿಡಿದುಕೊಳ್ಳಲು ಮುಂದೆ ಬಾಗಿದರೂ ಅದು ಕೈಗೆ ಸಿಗಲಿಲ್ಲ . ಅಪ್ಪಿ ತಪ್ಪಿ ಬಿದ್ದರೆ ಕರುವಿನ ಜೊತೆ ತಾನೂ ಇಹಲೋಕ ತ್ಯಜಿಸಬೇಕಾಗುತ್ತದೆ. ಮಲೆಮಹದೇಶ್ವರನನ್ನು ಮನದಲ್ಲಿಯೇ ನೆನೆದು ಮತ್ತೊಮ್ಮೆ ತನ್ನ ಶಕ್ತಿಯನ್ನೆಲ್ಲ ಬಳಸಿ ಅದು ತನ್ನತ್ತ ಬರುವುದನ್ನೇ ಕಾಯ್ದು ಒಮ್ಮೆಗೇ ಅದರ ಮೂಗುದಾರವನ್ನು ಹಿಡಿದುಕೊಂಡು ಬಿಟ್ಟರು. ಅಷ್ಟು ಹೊತ್ತು ಕಾಲಿಗೆ ಯಾವುದೇ ಆಧಾರ ಸಿಗದೆ ಈಜಾಡುತ್ತ ತನ್ನ ಪ್ರಾಣವನ್ನು ಕೈಲಿ ಹಿಡಿದುಕೊಂಡಿದ್ದ ಮುದ್ದಿನ ಕರು ಜೋರಾಗಿ ನಿಟ್ಟುಸಿರು ಬಿಟ್ಟಿತು. ಆದರೆ ಇತ್ತ ಆ ಜಾಗದಲ್ಲಿ ಕುಳಿತೇ ಆ ಕರುವಿನ ಮೂಗುದಾರವನ್ನು ಹಿಡಿದು ಅದು ಮುಳುಗದಂತೆ ತೇಲಿಸುತ್ತ ಕುಳಿತಿದ್ದ ಅಪ್ಪನ ಮೇಲೆ ಮಳೆ ಧೋ ಅಂತ ಸುರಿಯುತ್ತಿದೆ. ಬಹುಷಃ ನೀರು ನುಗ್ಗಿರಬೇಕು,ಅಷ್ಟು ಹೊತ್ತಿನ ತನಕ ಬೆಳಗುತ್ತಿದ್ದ ಟಾರ್ಚ್ ಇದ್ದಕ್ಕಿದಂತೆ ಆರಿ ಹೋಯಿತು.ಇನ್ನು ಅದರ ಉಪಯೋಗವಿಲ್ಲವೆಂದರಿತ ಅಪ್ಪ ಅದನ್ನು ಅಲ್ಲೇ ಹರಿಯುತ್ತಿದ್ದ ನೀರಿನೊಳಗೆ ಬೀಸಾಕಿಬಿಟ್ಟ. ಈಗ ಇನ್ನೊಂದು ಕೈಗೆ ಬಿಡುವಾದ್ದರಿಂದ "ಒಂದು ತಪ್ಪಿದರೆ ಇನ್ನೊಂದು " ಎಂಬಂತೆ ಕೈ ಶಕ್ತಿ ಇಂಗಿ ಹೋದಂತೆಲ್ಲ ಒಂದು ಕೈಯಿಂದ ಇನ್ನೊಂದಕ್ಕೆ ಕರುವಿನ ಮೂಗುದಾರವನ್ನು ಬದಲಾಯಿಸಿಕೊಳ್ಳುತ್ತಾ ಸಮಯ ದೂಡಲಾರಂಭಿಸಿದರು. ಕೂತ ಜಾಗದಲ್ಲಿಯೇ ಘಂಟೆಗಳ ಕಾಲ ಬಾಗಿ ಕರುವನ್ನು ಹಿಡಿದುಕೊಂಡಿರುವುದರಿಂದ ಕೈ ನೋಯಲಾರಂಭಿಸಿತು.  ಆಗ ಸಮಯ ರಾತ್ರಿ ಹನ್ನೆರಡು. ಎಂಟು ಘಂಟೆಗೆ ಹೋದವರು ಇನ್ನೂ ಬಂದಿಲ್ಲವೆಂದು ಅಮ್ಮನಿಗೆ ಭಯ ಶುರುವಾಯಿತು. ಸಿಡಿಲು ಬೇರೆ ಬಡಿದು ಜೀವವೇ ನಡುಗುವಷ್ಟು ಸದ್ದಾಯಿತು. ಏನಾದರೂ ಸಿಡಿಲಿಗೆ ಸಿಕ್ಕಿ…..ಅಯ್ಯೋ ದೇವರೇ ಅಂತ, ಬೇಗನೆ ಕೂಗಿ ಪಕ್ಕದ ಮನೆಯಲ್ಲಿ ಮಲಗಿದ್ದ ಬಸವರಾಜನನ್ನು ಕರೆದು ಇನ್ನೊಂದಿಬ್ಬರನ್ನು ಜತೆಹಾಕಿಕೊಂಡು ಕೊಡೆ, ಟಾರ್ಚ್ ಹಿಡಿದು ಬೇಗಬೇಗನೆ ಹೊಲದ ಕಡೆಗೆ ಹೆಜ್ಜೆ ಹಾಕಿದರು. ಜಮೀನಿನ ದಾರಿಯಲ್ಲಿ ಹುಡುಕುತ್ತಾ ಬಂದು ಹತ್ತಿರ ಬರುತ್ತಿದ್ದಂತೆ ಪರಿಸ್ಥಿತಿ ಅರ್ಥವಾಗತೊಡಗಿತ್ತು. ತೆಂಗಿನಮರದ ಬುಡದಲ್ಲಿ ಕಟ್ಟಿದ್ದ ಕರುವೂ ನಾಪತ್ತೆಯಾಗಿದ್ದನ್ನು ಕಂಡು ಏನೋ ಆಗಬಾರದ್ದು ಆಗಿದೆ ಎಂಬಂತೆ  "ಬೇಗ ಬಾವಿ ಒಳಗೆ ನೋಡ್ಲಾ ಬಸ್ರಾಜ" ಅಂತ ಕೂಗಿದಳು. ಅವರು ಟಾರ್ಚ್ ಬಿಟ್ಟಾಗ ಬಾವಿಯ ಒಳಗೆ ಮಳೆಯಿಂದ ನೆನೆದು ಮುದ್ದೆಯಾಗಿ ನಡುಗುತ್ತಾ ಒಂದು ಕೈಯಲ್ಲಿ ಕರುವಿನ ಮೂಗುದಾರ ಹಿಡಿದಿದ್ದ ಅಪ್ಪ ಕಂಡ. ತನ್ನ ಮುಖದ ಮೇಲೆ ಬಿದ್ದ ಬೆಳಕಿನಿಂದಾಗಿ ಅಪ್ಪನಿಗೆ ಉಸಿರು ಬಂದಂತಾಯ್ತು. "ಬೇಗ ಇಳಿರ್ಲಾ" ಅಂತ ಎಲ್ಲರೂ ಕೂಗಿಕೊಂಡರು. ಮುಂದಿನ ಅರ್ಧ ಘಂಟೆಯಲ್ಲಿ ಹಗ್ಗದ ಸಹಾಯದಿಂದ ಕರುವನ್ನು ಮೇಲೆ ತರಲಾಯಿತು.  ಕೈಗಳು ಮರಗಟ್ಟಿ ಹೋಗಿದ್ದರೂ ಸುರಿಯುವ ಮಳೆಯ ಆರ್ಭಟದ ಮಧ್ಯದಲ್ಲೂ ಹೇಗೆ ನಾಲ್ಕು ತಾಸುಗಳ ಕಾಲ ಅಪ್ಪ ಆ ಕರುವನ್ನು ಹಿಡಿದುಕೊಂಡಿದ್ದರೋ ನಾ ಕಾಣೆ. ಅಪ್ಪ ಹೇಳಿದ "ಇನ್ನೊಂದರ್ಧ ಘಂಟೆ ತಡವಾಗಿದ್ದರೆ, ನಾನು ಮತ್ತೆ ಕರು ಜೀವಂತವಾಗಿರ್ತಿರ್ಲಿಲ್ಲ" ಅಂದಾಗ ಎಲ್ಲರ ಕಣ್ಣಲ್ಲಿ ನೀರು.
ಮೂಕ ಕರು ಕೃತಜ್ಞತೆ ಹೇಳಿಕೊಳ್ಳಲಾಗದೆ ಅಪ್ಪನ ಬಳಿ ಬಂದು ಆವನ ಕೆನ್ನೆ ನೇವರಿಸಿತು. 
ಅಪ್ಪ ಅದರ ಮೈ ಸವರುತ್ತಿದ್ದ………….
ಈಗಲೂ ಅಪ್ಪ ಹೇಳಿದ ಮಾತು ನನ್ನ ಕಿವಿಯಲ್ಲಿ ಗುಂಯ್-ಗುಡುತ್ತಿದೆ. "ಮನ್ಸಂದಾಗಲೀ, ಮೂಕ ಪ್ರಾಣಿಗಳದ್ದಾಗಲೀ ಜೀವ ಅಂದ್ ಮ್ಯಾಕೆ ಜೀವ ತಾನೇಯಾ?" 
 
ಮುಂದೆ ಕರು ಕರೆತರದೇ ಶಾಲೆಯ ಬಳಿಯೇ ಆಟವಾಡುತ್ತಾ ಕಾಲಕಳೆದ ನನ್ನ ಕಥೆ ಏನಾಯಿತೆನ್ನುವ ನಿಮ್ಮ ಪ್ರಶ್ನೆಗೆ ನನ್ನ ಬೆನ್ನಿನ ಮೇಲೆ ಈಗಲೂ ಉಳಿದಿರುವ ಬಾಸುಂಡೆಗಳೇ ಸಾಕ್ಷಿ!!
 
(ಗೆಳೆಯ ವಿಶ್ವನಾಥ ಕಲ್ಲಣ್ಣ ರವರ ನಿಜ ಜೀವನದ ಘಟನೆಯಿಂದ ಪ್ರೇರಿತನಾಗಿ…….)
–ಸಂತು

3 comments:

  1. ನಿಜವಾಗಲೂ ಮನಸ್ಸಿಗೆ ನಾಟಿದ ಲೇಖನ

    ReplyDelete
  2. A person essentially help to make seriously articles I might state. That is the very first time I frequented your web page and to this point? I surprised with the research you made to make this actual publish amazing. Fantastic job!

    ReplyDelete

Please post your comments here.