Tuesday, February 5, 2013

ನಾ ಕಂಡ ಹೀರೋಗಳು-1

ಪಂಜು ವೆಬ್ ಸೈಟ್ ನ ಮೊದಲ ಸಂಚಿಕೆಯಲ್ಲೇ ಪ್ರಕಟವಾದ ನನ್ನ ಲೇಖನ.
ಲಿಂಕ್: http://www.panjumagazine.com/?p=70

===========================================================
ನಾನಾಗ ಒಂಭತ್ತನೆಯ ತರಗತಿಯಲ್ಲಿ ಓದುತ್ತಿದ್ದೆ. ಆ ವರ್ಷದಲ್ಲಿ ನಡೆದ ರಾಷ್ಟ್ರ ಮಟ್ಟದ ಭಾರತೀಯ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಮೊದಲು ಜಿಲ್ಲಾ ಮಟ್ಟದ ಸ್ಪರ್ಧೆ ಮೈಸೂರಿನಲ್ಲಿ ನಡೆದಿತ್ತು. ನಮ್ಮ ವಿಜ್ಞಾನ ಮಾಸ್ತರರಾಗಿದ್ದ ನಾಗೇಂದ್ರರವರ ಮಾರ್ಗದರ್ಶನದಲ್ಲಿ ಭಾಗವಹಿಸಿದ್ದ ನಾನು, ಗ್ರಾಮೀಣ ವಿಭಾಗದಿಂದ ರಾಜ್ಯ ಮಟ್ಟದ ಸಮಾವೇಶಕ್ಕೆ ಆಯ್ಕೆಯಾಗಿದ್ದೆ.
ಬರೀ ೧೫ ದಿನಗಳ ಕಾಲಾವಕಾಶವಿದ್ದುದರಿಂದ ನಾನು ನಮ್ಮ ಮಾಸ್ತರರ ಕೊಳ್ಳೇಗಾಲ ನಿವಾಸದಲ್ಲಿಯೇ ಬೀಡು ಬಿಟ್ಟು ಹಗಲಿರುಳು ಶ್ರಮಿಸಿದ್ದೆ. ರಾಜ್ಯಮಟ್ಟದ ಸಮಾವೇಶಕ್ಕೆ ಅರಸೀಕೆರೆ ಮದುವೆ ಹೆಣ್ಣಿನಂತೆ ಅಲಂಕಾರಗೊಂಡಿತ್ತು. ಬೆಳಿಗ್ಗೆಯೇ ಕೊಳ್ಳೇಗಾಲ ಬಿಟ್ಟ ನಾವು ಮಧ್ಯಾಹ್ನವೇ ಅರಸೀಕೆರೆ ತಲುಪಿದ್ದೆವು. ಪ್ರತಿ ಜಿಲ್ಲೆಯವರಿಗೊಂದು ಕೊಂಚ ವಿಶಾಲವೆನಿಸುವಷ್ಟು ಜಾಗವಿದ್ದ ಕೊಠಡಿಯನ್ನು ತಂಗಲು ವ್ಯವಸ್ಥೆ ಮಾಡಲಾಗಿತ್ತು. ಬಿಸಿಲ ಝಳವಿದ್ದುದರಿಂದ ಆ ಕೊಠಡಿಯಲ್ಲಿ ಮಲಗಿಕೊಂಡ ಕೂಡಲೇ ಅದ್ಯಾವಾಗ ನಿದ್ರೆ ಹತ್ತಿತೆಂದೇ ತಿಳಿಯಲಿಲ್ಲ.

ಸಂಜೆ ಏಳುವಷ್ಟರಲ್ಲಿ ಮೈಸೂರು ಜಿಲ್ಲೆಯ ನಗರ ವಿಭಾಗಗಳಿಂದ ಬರಬೇಕಿದ್ದ ಅಭ್ಯರ್ಥಿಗಳೆಲ್ಲ ತಮ್ಮ ಮಾರ್ಗದರ್ಶಕರ ಜತೆ ಬಂದು ಕೊಠಡಿ ಸೇರಿಯಾಗಿತ್ತು. ನಾಗೇಂದ್ರ ಮಾಸ್ತರರು ಎದ್ದವರೇ ಮುಖ ತೊಳೆದು ಫ್ರೆಶ್ ಆಗಿ ಬರಲು ಹೊರಟರು. ನಾನು ಕೊಠಡಿಯಲ್ಲೇ ಉಳಿದೆ. ಪಕ್ಕದಲ್ಲಿ ಕುಳಿತು ಮೈಸೂರು ಜಿಲ್ಲೆಯಿಂದ ಬಂದ ಸಹ ಅಭ್ಯರ್ಥಿಗಳನ್ನು ನಿಧಾನವಾಗಿ ಗಮನಿಸತೊಡಗಿದೆ. ಬಂದವರೆಲ್ಲ ನಗರ ಪ್ರದೇಶದವರೇ ಆಗಿದ್ದು ನೋಡಲಿಕ್ಕೆ ಬಹಳ ನೀಟಾಗಿ ಡ್ರೆಸ್ ಮಾಡಿಕೊಂಡಿದ್ದರು. ಅದ್ಯಾವುದೋ ಸಿಕ್ಕ ಪ್ಯಾಂಟ್, ಶರ್ಟನ್ನು ಸಿಕ್ಕಿಸಿಕೊಂಡು ಬಂದಿದ್ದ ನನಗೆ ಏನೋ ಒಂದು ತರಹದ ಕೀಳರಿಮೆ ಕಾಡತೊಡಗಿತ್ತು.

 


ಆ ಟೀಚರ್ ಗಳು ಬಹಳ ನಿರರ್ಗಳವಾಗಿ ಮಾತನಾಡುತ್ತಿದ್ದರು. ಅವರ ಶಿಷ್ಯರುಗಳು ಕೂಡ!! ನಾ ಎದ್ದಿದ್ದನ್ನು ನೋಡಿ ಆಲ್ಲಿದ್ದ ಟೀಚರ್ ಗಳಲ್ಲೊಬ್ಬರು ಬನ್ನಿ ಎಲ್ಲರೂ ಪರಿಚಯಿಸಿಕೊಳ್ಳೋಣ ಎಂದು ಸೂಚಿಸಿದರು. ಯಾಕೋ ಸಂಕೋಚದಿಂದ ಎದ್ದು ನಿಂತು ಅವರ ಬಳಿಗೆ ಹೋದೆ. ಪ್ರತಿಯೊಬ್ಬರೂ ಇನ್ನೊಬ್ಬರಿಗೆ ಶೇಕ್ ಹ್ಯಾಂಡ್ ಕೊಡುವುದು ನಂತರ ಅವರ, ಶಾಲೆಯ ಮತ್ತು ಕುಟುಂಬದ ಹಿನ್ನೆಲೆಯನ್ನು ಹೇಳಬೇಕಿತ್ತು. ಆ ಹುಡುಗಿ ಓದುತ್ತಿರೋದು ಮರಿಮಲ್ಲಪ್ಪ ಸ್ಕೂಲಿನಲ್ಲಿ. ಅವರ ಅಪ್ಪ ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್ ನಲ್ಲಿ ಬ್ಯಾಂಕ್ ಮ್ಯಾನೇಜರ್. ಆ ಹುಡುಗ ಸೈಂಟ್  ಜೋಸೆಫ್ ಸ್ಕೂಲ್, ಅಪ್ಪ ಬೆಂಗಳೂರಿನಲ್ಲಿ ಸಿವಿಲ್ ಇಂಜಿನಿಯರ್ ಆಗಿದ್ದಾರೆ. ಹೀಗೆ ನಾಲ್ಕೈದು ಹುಡುಗರ ಪರಸ್ಪರ ಪರಿಚಯವಾದ ತರುವಾಯ ನನ್ನ ಸರದಿ ಬಂತು.
ಏನಂತ ತಾನೇ ಹೇಳಲಿ? ನನಗೆ ಯಾವಾಗಲೂ ನನ್ನ ಬಗ್ಗೆ ಕೀಳರಿಮೆಯಿತ್ತು. ಮೊದಲಿಗೆ ನಾನು ಕನ್ನಡ ಮಾಧ್ಯಮದ ಸರಕಾರೀ ಪ್ರೌಢಶಾಲೆಯಲ್ಲಿ ಓದುತ್ತಿದ್ದೇನೆ. ನಮ್ಮಪ್ಪ ಕೇವಲ ಒಬ್ಬ ವ್ಯವಸಾಯಗಾರರಷ್ಟೇ!! ಅದನ್ನು ಹೇಗೆ ಹೇಳಿಕೊಳ್ಳುವುದು? ಅದೇನು ಇಂಜಿನೀರ್ ಅಥವಾ ಬ್ಯಾಂಕ್ ಮ್ಯಾನೇಜರ್ ನಷ್ಟು ಹೇಳಿಕೊಳ್ಳಬಲ್ಲ, ಜೊತೆಗೆ ಅಷ್ಟೊಂದು ಸಂಬಳ ಬರಿಸುವ ಕೆಲಸವಲ್ಲ.

ವರ್ಷವಿಡೀ ಕಷ್ಟಪಟ್ಟು ವ್ಯವಸಾಯ ಮಾಡಿದ ಮೇಲೆ ಬಂದರೆ ಬಂತು, ಇಲ್ಲದಿದ್ದರೆ ಇಲ್ಲ ಎನ್ನುವ ಪರಿಸ್ಥಿತಿ. ಕಡೆಗೆ ಧೈರ್ಯ ಮಾಡಿ ಕೈ ಕುಲುಕಿದವನೇ "ನನ್ನ ಹೆಸರು ಸಂತೋಷ್, ಲೊಕ್ಕನಹಳ್ಳಿ ಎನ್ನುವ ಗ್ರಾಮದಲ್ಲಿ ಸರಕಾರೀ ಪ್ರೌಢಶಾಲೆಯೊಂದರಲ್ಲಿ ಒಂಭತ್ತನೇ ತರಗತಿ ಓದುತ್ತಿದ್ದೇನೆ" ಎಂದು ಹೇಳಿ ಬೇಗನೆ ಆ ವಾಕ್ಯ ಮುಗಿಸಿ ಹಿಂದೆ ಬರಲು ರೆಡಿಯಾದೆ!

ಅಷ್ಟು ಹೊತ್ತಿಗೆ ಸುಮ್ಮನೆ ಕೇಳಿಸಿಕೊಳ್ಳುತ್ತಿದ್ದ ಆ ಟೀಚರ್ ನನ್ನನ್ನು ಹೋಗದಂತೆ ಮತ್ತೆ ಕರೆದು "ಯಾಕಪ್ಪಾ ನಿಮ್ಮ ತಂದೆಯವರ ಕೆಲಸ ಹೇಳಲೇ ಇಲ್ಲ" ಅಂದುಬಿಟ್ಟರು. ಕಡೆಗೆ ಬೇರೆ ವಿಧಿಯಿಲ್ಲದೇ "ಏನೂ ಕೆಲಸ ಅಂತ ಏನಿಲ್ಲ ಮೇಡಂ, ನಮ್ಮಪ್ಪ ಕೇವಲ ಇರೋ ಚಿಕ್ಕ ಭೂಮಿಯಲ್ಲಿ ಬೇಸಾಯ ಮಾಡ್ತಾರೆ" ಎಂದು ಕೇವಲ ಆಯಮ್ಮನಿಗೆ ಕೇಳಿಸುವಷ್ಟು ಮಾತ್ರ ಹೇಳಿ ಹೊರಡಲನುವಾದೆ. ತಕ್ಷಣ ಮತ್ತೊಂದು ಪ್ರಶ್ನೆ…"ಏನು ಬೆಳೆಯುತ್ತೀರ", ನನ್ನ ಶಾರ್ಟ್ ಅಂಡ್ ಸ್ವೀಟ್ ಉತ್ತರ "ಜೋಳ". ಆ ಟೀಚರ್ ಗೆ ನನ್ನ ಮುಜುಗರ, ನಾ ಉತ್ತರಿಸುತ್ತಿದ್ದ ಧಾಟಿಯಲ್ಲಿಯೇ ಅರ್ಥವಾಗಿ ಹೋಯಿತು. ನನ್ನ ಹತ್ತಿರ ಬಂದವರೇ ನನ್ನ ಬೆನ್ನು ತಟ್ಟಿ, ಕೈಹಿಡಿದು ಹೇಳತೊಡಗಿದರು!!

 


"ಸಂತೋಷ್ ಮುಜುಗರ ಬೇಡಪ್ಪ, ಈ ದೇಶದ ಬೆನ್ನೆಲುಬು ರೈತ. ಇಲ್ಲಿರುವ ಕೋಟ್ಯಾಂತರ ಜನಗಳಲ್ಲಿ ಯಾರು ಬೇಕೆಂದರೂ ಇಂಜಿನಿಯರ್ ಆಗಬಹುದು. ಡಾಕ್ಟರ್ ಆಗಬಹುದು. ಅದಕ್ಕೆ ಕೇವಲ ವಿದ್ಯೆ ಬುದ್ದಿಯಿದ್ದರೆ ಸಾಕು. ಆದರೆ ರೈತರಾಗಲು ಮನಸ್ಸಿರಬೇಕು,ಉಳೋಕೆ ಭೂಮಿಯಿರಬೇಕು.ಆ ಭೂತಾಯಿಯನ್ನು ಮನಸಾರೆ ಭಕ್ತಿ ಭಾವದಿಂದ ಆಲಂಗಿಸಬೇಕು. ಅದಕ್ಕಿಂತಲೂ ದಣಿವಾದ ಮೇಲೂ ಉಳುವೆನೆನ್ನುವ ಛಲ ಬೇಕು. ಮಳೆರಾಯ ಬರುವನೆನ್ನುವ ನಂಬಿಕೆ ಬೇಕು. ಕೊನೆಗೆ ಉತ್ತು ಬಿತ್ತು ಫಸಲು ಬಂದ ಮೇಲೂ ಕೈಗೆ ಹಣ ಬರುವ ತನಕ ತಾಳ್ಮೆ ಬೇಕು. ಆದರೂ ರೈತನಿಗೆ ಸಿಗೋದು ಕೇವಲ ಬಿಡಿಗಾಸಷ್ಟೇ. ಆದರೂ ಮತ್ತೊಮ್ಮೆ ಆ ದುಡ್ಡಿನಲ್ಲಿ ಸಿಗುವ ಸಂತೋಷಕ್ಕೆ ದೇಹವನೊಡ್ಡದೇ, ಮತ್ತೊಮ್ಮೆ ನೇಗಿಲು ಕಟ್ಟಿ ಉಳಲು ಹೊರಡುತ್ತಾನೆ. ಹೀಗೆ ಇಡೀ ಜಗತ್ತಿಗೆ ದುಡಿಮೆಯೆಂದರೇನು ಅನ್ನುವುದನ್ನು ತೋರಿಸಿಕೊಡುತ್ತಾನೆ.
ಇಂಜಿನಿಯರ್, ಡಾಕ್ಟರ್ ಗಳು ಒಂದು ದಿನ ಕೆಲಸ ಮಾಡದೇ ಕುಳಿತರೂ ಏನೂ ಆಗುವುದಿಲ್ಲ, ಆದರೆ ಒಬ್ಬ ರೈತ ತನ್ನ ಕೆಲಸ ಮಾಡದೇ ಕೈಕಟ್ಟಿ ಕುಳಿತುಬಿಟ್ಟರೆ, ಇಡೀ ಜಗತ್ತಿಗೆ ಉಣ್ಣೋಕೆ ಅನ್ನದಗಳೂ ಇರುವುದಿಲ್ಲ. ಯಾರ ಹಂಗಿನಲ್ಲೂ ಬದುಕದೇ, ಕೇವಲ ಭೂತಾಯಿ ವರುಣರಾಯನನ್ನು ಮಾತ್ರ ನಂಬಿ ಬಾಳುವ ಏಕೈಕ ಸ್ವಾಭಿಮಾನಿ ರೈತ. ನಿಮ್ಮಿಂದ ನಾವು, ಆದರೆ ನಮ್ಮಿಂದ ನೀವಲ್ಲ. ಇಂದು ಆ ನಗರ ಪ್ರದೇಶಗಳಲ್ಲಿ ಕೋಟ್ಯಾಂತರ ಜನ ತಿನ್ನುವ ಪ್ರತೀ ಅನ್ನದಗಳಿನ ಹಿಂದೆ ನಿಮ್ಮ ನಿಸ್ವಾರ್ಥ ಪರಿಶ್ರಮವಿದೆ. ಕೃಷಿಯ ಬಗ್ಗೆ, ನಮ್ಮೆಲ್ಲ ದೇಶದ ರೈತರ ಬಗ್ಗೆ ನನಗೆ ಹೆಮ್ಮೆಯಿದೆ. ಅದಕ್ಕಾಗಿ ನಿಮ್ಮ ತಂದೆಗೆ ನಾನು ಕೃತಜ್ಞತೆ ಅರ್ಪಿಸಬಯಸುತ್ತೇನೆ. ಇನ್ನೆಂದಿಗೂ ನಿಮ್ಮ ತಂದೆಯ ಕೆಲಸದ ಬಗ್ಗೆ ನಿನಗೆ ಮುಜುಗರ ಬೇಡ."

ಈ ಮಾತನ್ನು ಕೇಳಿದ ನನಗೆ ಅರಿವಿಲ್ಲದೆಯೇ ರೋಮಾಂಚನವಾಯಿತು. ಇದುವರೆಗೂ ಅರ್ಥವಾಗಿರದಿದ್ದ ನಮ್ಮ ತಂದೆಯವರ ಕೃಷಿಯ ವಿಶೇಷತೆ ಈಗ ಅರ್ಥವಾಗಿ ಮನಸ್ಸಿನಲ್ಲಿಯೇ ಖುಷಿಪಟ್ಟೆ.ಗೊತ್ತಿದ್ದೂ ಗೊತ್ತಿರದಂತಿದ್ದ ನನ್ನ ಕಣ್ಣ ತೆರೆಸಿದ ಆ ಟೀಚರನ್ನು ನಾ ನನ್ನ ಜೀವನದಲ್ಲಿ ಮರೆಯಲಾರೆ. ಅದೇ ಕೊನೆ!! ಈಗ ಯಾರೇ "What is your Father?" ಎಂದು ಕೇಳಿದರೆ ಮುಜುಗರವಿಲ್ಲದೆಯೇ ಎದೆತಟ್ಟಿ "He is an agriculturist!!" ಎಂದು ಹೇಳುತ್ತೇನೆ. ಅದ್ಯಾಕೋ ಆವಾಗಲೆಲ್ಲ ಆ ಅರಸಿಕೆರೆಯ ಆ ಟೀಚರ್ ನೆನಪಿಗೆ ಬರುತ್ತಾರೆ!! ಆಗ ನನ್ನನ್ನು ನಾನು ಕೇಳಿಕೊಳ್ಳುತ್ತೇನೆ…. ಹೀರೋಗಳನ್ನು ನೋಡೋಕೆ ಕೇವಲ ಸಿನಿಮಾಗಳಿಗೆ ಹೋಗಬೇಕಾ ಅಂತ!!
–ಸಂತು



4 comments:

  1. How true e deshdalli yarbekidru engineer and doctor agbohudu.... hmmm Agriculturists and Soldiers such devine profession idakke "Motivation" is the biggest factor avrabagge yavathu hemme padbeku naavu.

    Very happy to see you writing so many nice articles and post :) please continue :) and I will always follow to read all your work :D

    ReplyDelete
    Replies
    1. Thank you so much Ramya, All these are my own experiences.
      Just I thought of writing it down as I have learn a lot from every incident.

      It is nice feeling that you are liking them. Thanks for your like+Encouragement+support :)

      Delete
  2. ಸಂತೋಷ್. . ಓದುತ್ತಾ ಕಣ್ಣಾಲಿಗಳಲ್ಲಿ ನೀರು ಜಿನುಗಿತು. . !ಒಂದೆಡೆ ನಿನ್ನ ಬದಲಾಗಿ ನನ್ನನ್ನೇ ಆ ಸ್ಥಾನದಲ್ಲಿಟ್ಟು ನೋಡಿದೆ. . ಅದೇ ರೀತಿಯ ಕೀಳಿರಿಮೆಯೇ ಹೊರಪ್ರಪಂಚಕ್ಕೆ ನನ್ನನ್ನು ತೆರೆದುಕೊಳ್ಳಲಿಕ್ಕೆ ಎಷ್ಟೋ ವರ್ಷ ಬಿಟ್ಟಿರಲಿಲ್ಲ. . !

    ReplyDelete
    Replies
    1. ಧನ್ಯವಾದಗಳು ಭವಾನಿ ಅಕ್ಕ. ನಿಜವಾಗಿಯೂ ನೀವು ಹೇಳಿದ್ದು ಸರಿ.
      ನಾನು ಈ ಕೀಳರಿಮೆ ಎಂಬ ನರಕದಲ್ಲಿ ಸುಮಾರು ಇಪ್ಪತ್ತು ವರ್ಷಗಳ ಕಾಲ ಈಜಿ ಕೊನೆಗೆ ಅದರಿಂದ ಮುಕ್ತಿ ಪಡೆದಿದ್ದೇನೆ.
      ನನ್ನ ನಿಮ್ಮಂಥವರು ಇನ್ನೂ ಕೋಟಿಗಟ್ಟಲೆ ಜನಗಳು ಈಗಲೂ ಕೀಳರಿಮೆಯಿಂದ ಹೆಣಗಾಡುತ್ತಿದ್ದಾರೆ. ಸಮಸ್ಯೆಯೆಂದರೆ ಅದರಿಂದ ಹೊರಗೆ ಬರಲು ಅವರೂ ಪ್ರಯತ್ನ ಪಡಬೇಕು. ಜೊತೆಗೆ ಬೇರೆಯವರೂ ಸಹಾಯ ಮಾಡಬೇಕು. ಈ ಮೇಲಿನ ನನ್ನ ಬರಹದಲ್ಲಿ ಆ ಅರಸೀಕೆರೆಯ ಟೀಚರ್ ಇಲ್ಲದಿದ್ದಿದ್ದರೆ ಈಗಲೂ ನಾನು ಮುಂಚಿನಂತೆಯೇ ಇರುತ್ತಿದ್ದೆನೇನೋ ಅನ್ನಿಸುತ್ತದೆ.
      ಅದರ ಬಗ್ಗೆ ಇನ್ನೂ ಬಹಳ ಬರೆಯಬೇಕಿದೆ.

      ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು:)

      Delete

Please post your comments here.