Saturday, February 2, 2013

"ಚಿಕ್ಕ" ಮಕ್ಕಳಾ?

Poorvi and Me


ಮಕ್ಕಳು ಅಂತ ಅನ್ನುವಾಗ "ಚಿಕ್ಕ" ಅಂತ ಒಂದು ಪದ ಸೇರಿಸಿ ಚಿಕ್ಕಮಕ್ಕಳು ಅಂತ ಕರೆದುಬಿಟ್ಟಿರುತ್ತೇವೆ. ಅದು ಅವುಗಳ ವಯಸ್ಸು,ಆಕಾರವನ್ನು ಗಮನದಲ್ಲಿಟ್ಟುಕೊಂಡೋ ಅಥವಾ ಅವುಗಳ ಬುದ್ಧಿಶಕ್ತಿಯನ್ನು ಗಮನದಲ್ಲಿಟ್ಟುಕೊಂಡೋ ಅಂತ ಗೊತ್ತಾಗುವುದಿಲ್ಲ. ಕೆಲವರಂತೂ ಮಕ್ಕಳಿಗೆ ಲಾಜಿಕಲ್ ಆಗಿ ಯೋಚನೆ ಮಾಡುವುದಕ್ಕೆ ಬರುವುದಿಲ್ಲ ಅಂತ ಹೇಳುತ್ತಿರುತ್ತಾರೆ. ಅಂಥವರಿಗೆಲ್ಲ ತಮ್ಮ ಅಭಿಪ್ರಾಯ ತಪ್ಪು ಅಂತ ಗೊತ್ತಾಗುವುದೇ ಅವರ ಮನೆಯೊಳಗೆ ಒಂದು ಮಗು ಪ್ರವೇಶ ಕೊಟ್ಟಾಗ!!

======================================================

ಯಾವುದೇ ಕುತೂಹಲವಿದ್ದರೂ ನಾನು ಅದನ್ನು ನನ್ನ ಮಗಳು ಪೂರ್ವಿಯಿಂದಲೇ ಬಗೆಹರಿಸಿಕೊಳ್ಳಬಯಸುತ್ತೇನೆ.
ಎರಡು ತಿಂಗಳ ಹಿಂದೆ ನನಗೆ ಆ ಪ್ರಶ್ನೆ ಮನಸ್ಸಿನಲ್ಲಿ ಮೂಡಿ ಅವಳನ್ನೇ ಕೇಳಬೇಕೆನಿಸಿತು.

ನಾನು ಮತ್ತು ನನ್ನ ಮಡದಿ ಆಟವಾಡುತ್ತಿದ್ದ ಪೂರ್ವಿಯನ್ನು ಹತ್ತಿರ ಕರೆದೆವು.
ನಾನು ಕೇಳಿದೆ "ಪೂರ್ವಿ ಬಂಗಾರಿ, ನೀನು ದೊಡ್ಡವಳಾದ ಮೇಲೆ ಏನಾಗುತ್ತೀಯ?", ಅದು ನೇರ ಮತ್ತು ಇದ್ದಕ್ಕಿದಂತೆ ಅವಳತ್ತ ಎಸೆದ ಪ್ರಶ್ನೆ.
ಒಂದು ಚೂರು ಯೋಚನೆ ಮಾಡದೆ ಒಂದೇ ಕ್ಷಣದಲ್ಲಿ ಉತ್ತರಿಸಿದಳು, "ಪಪ್ಪಾ, ನಾನು ದೊಡ್ಡವಳಾದ ಮೇಲೆ lipstick ಹಚ್ಚಿಕೊತೀನಿ!!"
ತಡೆಯಲಾಗಲಿಲ್ಲ, ಗೊಳ್ ಎಂದು ನಕ್ಕುಬಿಟ್ಟೆವು. ಅವಳೂ ನಮ್ಮ ಜೊತೆ ನಕ್ಕಳು, ಕಾರಣ ತಿಳಿಯದೇ!

ಕೊನೆಗೆ ಅರ್ಥವಾಯಿತು.
ಅವರಮ್ಮನ ಬ್ಯಾಗ್ನಲ್ಲಿ Lipstick ಕಂಡಾಗಲೆಲ್ಲ ನಾನೂ ಹಚ್ಚಿಕೊಳ್ಳುತ್ತೇನೆ ಅಂತ ಹಠ ಮಾಡುತ್ತಾಳೆ.
ಅದಕ್ಕೆ ಅವರಮ್ಮನ ಒಂದೇ ಉತ್ತರ, "ಚಿಕ್ಕಮಕ್ಕಳೆಲ್ಲ ಹಚ್ಚಿಕೊಳ್ಳಬಾರದು,ನೀನು ದೊಡ್ದವಳಾದ ಮೇಲೆ ಹಚ್ಚಿಕೊಳ್ಳುವಿಯಂತೆ!!".

======================================================


ಬೆಂಗಳೂರಿನಿಂದ ಮೂರೂವರೆ ಘಂಟೆಯ ಪ್ರಯಾಣ ಮಾಡಿದರೆ ನನ್ನ ಊರು ಸಿಗುತ್ತದೆ. ಕೆಲಸಕ್ಕೆ ಸೇರಿದ ಮೇಲೆ ಇತ್ತೀಚಿಗೆ ಎರಡು ತಿಂಗಳಿಗೊಮ್ಮೆ ಊರಿಗೆ ಹೋಗುತ್ತೇನೆ. ನಾ ಹೋಗುವ ಸಮಯದಲ್ಲೇ ನಮ್ಮ ಜೊತೆ ಕಾಲ ಕಳೆಯಲು ನನ್ನ ಅಕ್ಕ ಕೂಡ ಅವರ ಕುಟುಂಬದ ಜೊತೆಗೆ ಹಾಜರಿಯಿರುತ್ತಾಳೆ. ನನ್ನ ಅಕ್ಕನ ಮಗನ ಹೆಸರು ನೂತನ್. ಪೂರ್ವಿ ಮತ್ತು ನೂತನ್ ಇಬ್ಬರಿಗೂ ಹೆಚ್ಚು ಕಡಿಮೆ ಒಂದೇ ವಯಸ್ಸಿನವರು (3 ವರ್ಷ), ನೂತನ್ ಕೇವಲ ಕೆಲವೇ ತಿಂಗಳುಗಳಲ್ಲಿ ಪೂರ್ವಿಗಿಂತ ದೊಡ್ಡವನು. ಮಕ್ಕಳು ತನ್ನ ಓರಗೆಯ ಇನ್ನಿತರ ಮಕ್ಕಳನ್ನು ಇಷ್ಟಪಡುವಷ್ಟು ಇನ್ನಾರನ್ನೂ ಇಷ್ಟಪಡುವುದಿಲ್ಲ. ಪೂರ್ವಿ ಬರುತ್ತಾಳೆಂದರೆ ನೂತನ್ ಗೆ ಎಲ್ಲಿಲ್ಲದ ಸಂಭ್ರಮವಿರುತ್ತದೆ. ಇಬ್ಬರೂ ಆಟವಾಡುತ್ತಾ ಕುಳಿತರೆ ಇಡೀ ಜಗತ್ತನ್ನೇ ಮರೆತುಬಿಟ್ಟಿರುತ್ತಾರೆ. ಆಗಾಗ ಜಗಳವಾಡುತ್ತಾರೆ ಕೂಡ.

ಹೊಸಬಟ್ಟೆಯ ಬೆಲೆ ಗೊತ್ತಾಗಲೆಂದು ಹಾಕಿರುತ್ತಾರಲ್ಲ ಆ PrcieTag ಒಂದು ನೂತನ್ ಕೈಗೆ ಸಿಕ್ಕಿತ್ತು, ಅದರಲ್ಲಿ ಒಂದು ಹೂವಿನ ಚಿತ್ರವಿದ್ದ ಕಾರಣ ಅದನ್ನು ತನ್ನ ಕೈಲಿ ಹಿಡಿದುಕೊಂಡಿದ್ದ. ಪೂರ್ವಿ ನೋಡಿದ್ದೇ ತಡ ಅದು ತನಗೆ ಬೇಕೆಂದು ರಂಪಾಟ ಮಾಡಿಬಿಟ್ಟಳು. ಅತ್ತಿದ್ದು, ಕಿತ್ತಾಡಿದ್ದು ಎಲ್ಲ ಆಯಿತು. ನೂತನ್ ಅವಳಿಗೆ ಅದನ್ನು ಕೊಡಲೇ ಇಲ್ಲ. ಕೊನೆಗೆ ನಾವೇ ಅಲ್ಲೆಲ್ಲೋ ಬಿದ್ದಿದ್ದ ಇನ್ನೊಂದು PrcieTag ತಂದು ಪೂರ್ವಿಗೆ ಕೊಡುವಷ್ಟರಲ್ಲಿ ಸಾಕಾಗಿತ್ತು. ಆದರೂ ನೂತನ್ ಕೈಲಿದ್ದ PrcieTag ಬೇಕಿತ್ತು ಅನ್ನುವಂತೆ ಪೂರ್ವಿ ಮುಖ ಮಾಡಿಕೊಂಡಿದ್ದಳು.

ಸೋಮವಾರದ ಬೆಳಗ್ಗೆಯೇ ಕಾರಿನಲ್ಲಿ ಹೊರಟು ನಿಂತೆವು. ನಾವು ಹೊರಡುತ್ತೇವೆಂದರೆ ಸಾಕು ನಮ್ಮ ಅಪ್ಪಅಮ್ಮನವರ ಮುಖ ಇದ್ದಕ್ಕಿದ್ದಂತೆ ಚಿಕ್ಕದಾಗಿಬಿಡುತ್ತದೆ. ಒಂದೆರಡು ದಿನಗಳಿಂದ ಓಡಾಡಿಕೊಂಡಿದ್ದ ಪೂರ್ವಿ ಹೊರಡುವಾಗ ಮೌನವಾಗಿಬಿಡುತ್ತಾರೆ. ಎಲ್ಲರೂ ಪೂರ್ವಿಯನ್ನು ಎತ್ತಿ ಮುದ್ದಾಡಿ ಕಳಿಸಿಕೊಡುವ ಸಮಯ. ನೂತನ್ ಸಪ್ಪೆ ಮುಖದಿಂದ ಅಮ್ಮನ ಹೆಗಲ ಮೇಲೆ
ಮಲಗಿದ್ದ.

ಎಲ್ಲರೂ ನೂತನ್ ಗೆ ಹೇಳಿದರು. "ನೂತನ್, ShakeHand ಕೊಡು, ಪೂರ್ವಿಗೆ Bye ಹೇಳು!!"
ಸಪ್ಪೆ ಮುಖದಿಂದಲೇ "Bye ಪೂರ್ವಿ" ಅಂತ ಹೇಳಿ ಮತ್ತೆ ಅವರಮ್ಮನ ಭುಜದ ಮೇಲೆ ಮಲಗಿಕೊಂಡ.
ಕಾರಿನ ಇಂಜಿನ್ ಸ್ಟಾರ್ಟ್ ಮಾಡಿ ಇನ್ನೇನು ಮುಂದೆ ಹೊರಡಬೇಕು.ತಕ್ಷಣ ಅದೇನು ನೆನಪಾಯಿತೋ ಹತ್ತಿರ ಓಡಿ ಬಂದವನೇ, ಜೇಬಿಂದ ಅದೇನನ್ನೋ ತೆಗೆದು "ತಗೋ ಇಟ್ಟುಕೋ" ಎಂದು ಕೊಟ್ಟ.

 ಪೂರ್ವಿ ಅದನ್ನು ಖುಷಿಯಿಂದ ತೆಗೆದುಕೊಂಡವಳೇ "Thank you, Bye" ಎನ್ನುತ್ತಾ ಮುಗುಳ್ನಕ್ಕಳು. ಅವನ ಮುಖದಲ್ಲೂ ಮುಗುಳ್ನಗು ಮಿಂಚಿ ಮರೆಯಾಯಿತು. ಅವನು ಅವಳಿಗೆ ಕೊಟ್ಟದ್ದು, ನೆನ್ನೆ ತಾನೇ ಘಂಟೆಗಟ್ಟಲೆ ಜಗಳವಾಡಲು ಕಾರಣವಾದ ಅದೇ "PriceTag"!! ನಿಂತಿದ್ದ  ಎಲ್ಲರಿಗೂ ಏನೆಂದು ಹೇಳಬೇಕೆಂದೇ ತಿಳಿಯಲಿಲ್ಲ.
 ಈ ಚಿಕ್ಕ-ಮಕ್ಕಳ ದೊಡ್ಡ-ಮನಸ್ಸು ಬಹಳ ಮೆಚ್ಚುಗೆಯಾಗಿ, ಹೃದಯ ತುಂಬಿ ಬಂತು!!


======================================================


ಮೊನ್ನೆ ಕಾರ್ಯದ ನಿಮಿತ್ತ Czech Republic ದೇಶಕ್ಕೆ ತತ್ ಕ್ಷಣ ಒಬ್ಬನೇ ಹೊರಡಬೇಕಾಗಿ ಬಂದಾಗ ಬಟ್ಟೆ ಬರೆಯನ್ನೆಲ್ಲ ಪ್ಯಾಕ್ ಮಾಡಿಕೊಳ್ಳುತ್ತಿದ್ದೆ.
ಪೂರ್ವಿ ಹತ್ತಿರ ಬಂದವಳೇ "ಪಪ್ಪಾ, ನನ್ನನ್ನೂ ಜೊತೆ ಕರ್ಕೊಂಡು ಹೋಗು, ಪಪ್ಪಾ " ಅಂತ ಕೇಳಿದಳು.
ನಾನಂದೆ, "ಬೇಡ ಬಂಗಾರಿ, ನಾನು ಒಬ್ಬನೇ ಹೋಗ್ತಾ ಇದ್ದೀನಿ".
ಪೂರ್ವಿ,"ಇಲ್ಲ ಪಪ್ಪಾ, ನಾನೂ ಜೊತೆಗೆ ಬರ್ತೀನಿ. ಪ್ಲೀಸ್. ನೀನು ನನಗೆ ಚಾಕಲೇಟ್, ಐಸ್ ಕ್ರೀಂ, ಚಿಪ್ಸ್, ಎಳನೀರು ಏನನ್ನೂ ಕೊಡಿಸು ಅಂತ ಕೇಳಲ್ಲ....ಪ್ಲೀ....ಸ್"

ಸುಮ್ಮನೆ ಅವಳು ಏನೇನೋ ಬೇಕೆಂದು ಹಠ ಮಾಡಿದಾಗಲೆಲ್ಲ , "ನೀನು ಹಠ ಮಾಡಿದರೆ ಯುರೋಪ್ ಗೆ ಕರ್ಕೊಂಡು ಹೋಗಲ್ಲ ನೋಡು" ಅಂತ ನಾನೇ ಅವಳಿಗೆ ಹೇಳುತ್ತಿದ್ದ ಮಾತುಗಳು ನೆನಪಾಗಿ ಬೇಸರವಾಗಿತ್ತು. ಅವಳನ್ನು ಬಿಟ್ಟು ಏರ್ ಪೋರ್ಟ್ ಗೆ ಹೊರಡುವ ಸಂದರ್ಭದಲ್ಲಿ ಕಣ್ಣೀರು ತುಂಬಿ ಬಂದಿತ್ತು.

======================================================


ಈಗಾಗಲೇ ನೀವೆಲ್ಲರೂ ನಾನು ಅವಳ ಜೊತೆ ಹಾಡುವ ವೀಡಿಯೊ ತುಣುಕೊಂದನ್ನು ನೋಡಿರುತ್ತೀರಿ. (ಇಲ್ಲದಿದ್ದರೆ ಈ ಕೆಳಕಂಡ ಲಿಂಕಿನಲ್ಲಿ ಒಮ್ಮೆ ನೋಡಿಬಿಡಿ.)

http://www.youtube.com/watch?v=vqawNp5Jse8

ನಾ ಅವಳ ಜೊತೆ ಕುಳಿತುಕೊಂಡು ಈ ಹಾಡು ಹಾಡಿ ಸುಮಾರು ಎರಡು ತಿಂಗಳಾಗಿದೆ. ನಾ ಪಕ್ಕದಲ್ಲಿ ಮಲಗಿರುವಾಗ ಭಾವಗೀತೆಗಳನ್ನು ಹಾಡುತ್ತಿದ್ದರೆ ಸುಮ್ಮನೆ ಕೇಳಿಸಿಕೊಳ್ಳುತ್ತಾ ಮಲಗಿಬಿಡುತ್ತಾಳೆ. ಇಂದು ಈ ಲೇಖನ ಬರೆಯುವುದಕ್ಕೆ ಕೊಂಚ ಮುಂಚೆ Czech Republic ನಿಂದ ಮನೆಗೆ ಫೋನ್ ಮಾಡಿದಾಗ ಆಕೆ ಇನ್ನೂ ಎಚ್ಚರವಾಗಿಯೇ ಇದ್ದಳು.ರಾತ್ರಿ ಹನ್ನೊಂದಾಗಿದ್ದರೂ ಮಲಗಿರಲಿಲ್ಲ. ಅವಳೊಂದಿಗೆ ಏನೇನೋ ಮಾತನಾಡಿದ ಮೇಲೆ ಕೊನೆಗೆ "ಪಪ್ಪಾ,ನನಗೆ ಏನನ್ನಾದರೂ ಹಾಡು"ಎಂದಳು."ನಾಕುತಂತಿ" ಹಾಡಿದೆ. ಹಾಡು ಮುಗಿಯುವುದರಲ್ಲಿ ಅಕೆಯ ಕಣ್ಣಿಗೆ ನಿದ್ರೆ ಹತ್ತಿತ್ತು.

ಎದುರಿದ್ದಾಗ ಮಕ್ಕಳು ಹಠ ಹಿಡಿದಾಗ ಸಹನೆ ಕಳೆದುಕೊಂಡು, ಅವುಗಳ ತರಲೆಗಳನ್ನು ನೋಡಿ ಬೇಸತ್ತು ಹೋಗಿರುತ್ತೇವೆ . ಅವುಗಳು ಎದುರಿಲ್ಲದಿದ್ದಾಗ ಅವುಗಳ ಗೈರುಹಾಜರಿಯಿಂದ ಉಂಟಾಗುವ ಒಂಟಿತನದ ಭಾವ ಇದೆಯಲ್ಲ, ಅದನ್ನು ಆ ಕಷ್ಟ ಅನುಭವಿಸಿದವನೇ ಬಲ್ಲ!!

ನಿಮ್ಮವನು
ಸಂತು.

12 comments:

  1. ತಾಯಿಯ ಹೃದಯದ ಹಾಡನ್ನು ಎಲ್ಲರೂ ಗುನುಗುನಿಸುತ್ತಾರೆ, ಆದರೆ ಸದ್ದಿಲ್ಲದೇ ಅದೆಲ್ಲೋ ದುಡಿಯುತ್ತಾ ಮಗುವಿನ ಕನಸು ಕಾಣುವ ತಂದೆಯ ಕನವರಿಕೆ ಬಹಳಷ್ಟು ಮನಗಳಿಗೆ ಕೇಳುವುದೇ ಇಲ್ಲ. ನೀವು ನನ್ನ ಎದೆಯ ಹಾಡು ಹಾಡಿದಿರಿ.

    ReplyDelete
    Replies
    1. ಮಂಜುನಾಥ ಸರ್,
      ನಿಜವಾಗಿಯೂ ನನಗೆ ನಿಮ್ಮ ಪ್ರತಿಕ್ರಿಯೆ ನೋಡಿ ಬಹಳ ಖುಷಿಯಾಯಿತು.
      ನಿಜ, ಅಪ್ಪನೆಲ್ಲೋ ಕುಳಿತು ಮಕ್ಕಳ ಭವಿಷ್ಯದ ಕನಸ್ಸು ಕಾಣುತ್ತಾ ದುಡಿಯುತ್ತಿರುತ್ತಾನೆ. ಅವನ ಮನದ ಮಿಡಿತ ಬಹಳಷ್ಟು ಜನರಿಗೆ ಗೊತ್ತಾಗಿರುವುದೇ ಇಲ್ಲ.
      ಈ ಪೋಸ್ಟ್ ಬರೆಯುವುದಕ್ಕೆ ಮುಂಚೆ ಯೋಚಿಸುತ್ತಿದ್ದೆ, ಇದನ್ನು Publish ಮಾಡಬೇಕೋ ಬೇಡವೋ ಅಂತ. ಇದು ನನ್ನ ವೈಯುಕ್ತಿಕ ವಿಷಯವೆಂದು ಸುಮ್ಮನಿದ್ದೆ.
      ಈಗ ನಿಮ್ಮ ಪ್ರತಿಕ್ರಿಯೆ ಓದಿದ ಮೇಲೆ ಖುಷಿಯಾಯಿತು.

      Delete
  2. Replies
    1. Thanks nattu for your continuous support for writing!!

      Delete
  3. very nice!! my son is also a 4 year old.. so it was just like u were writing about him.. enjoyed the feel with which its written.. a good write up to read and start the day :)

    ReplyDelete
    Replies
    1. Hi Lakshmi,
      Thank you so much. What else I can expect from you.
      Those are really sweet and encouraging words.
      Once again thank you and keep coming to my blog and pour such support:)

      Delete
  4. ಸಂತೋಷ್,ಒಂದೊಂದು ಸನ್ನಿವೇಶ ತುಂಬಾ ಮನಸ್ಸಿಗೆ ಖುಷಿ ಕೊಡ್ತು. ಮಕ್ಕಳ ಮನಸ್ಸು ಹೀಗೇನೆ, ದೊಡ್ದವರನ್ನ ಯೋಚನೆ ಮಾಡೋ ಹಾಗೆ ಮಾತಾಡ್ತಾರೆ. ನಿಜ, ಮಕ್ಕಳು ಹತ್ತಿರ ಇದ್ದಾಗ ಇರದ ತಾಳ್ಮೆ, ದೂರ ಆದಾಗ ಕಾಡುತ್ತೆ...

    ReplyDelete
    Replies
    1. ಸುಮತಿ,
      Thank you so much:) ನನ್ನ ಈ ಸ್ವಂತ ಅನುಭವವನ್ನು ಇಳಿಸಿದ ಈ ಬರಹವನ್ನು ಇಷ್ಟಪಟ್ಟಿದ್ದಕ್ಕೆ.
      ಈ ಲೇಖನ ಬರೆಯಲು ಪ್ರೇರಣೆ ಕೊಟ್ಟಿದ್ದೆ ನೀವು ಅಶ್ವಿನ್ ನ ಬಗ್ಗೆ ಬರೆದ ಒಂದು ಚಿಕ್ಕ status.
      ಆಗ ನನಗೂ ಪೂರ್ವಿಯ ಜೊತೆ ನನಗಾದ ಅನುಭವಗಳನ್ನು ಬರೆಯಬೇಕೆನಿಸಿತು.
      ಅದರ ಪ್ರತಿಫಲವೇ ಈ ಲೇಖನ:)

      ಅದಕ್ಕಾಗಿ ಮತ್ತೊಮ್ಮೆ ನಿಮಗೆ Thanks!!

      Delete
  5. ವಾಹ್ಹ್ , ತುಂಬಾ ಚೆನ್ನಾಗಿ ಹೃದಯದ ಮಾತುಗಳನ್ನು ಅಕ್ಷರ ರುಪಕ್ಕಿಳಿಸಿದ್ದೀರಿ. ಓದುಗರಿಗಾಗಿ ಹೀಗೆಯೇ ಬರಿತಾ ಇರಿ.
    ಧನ್ಯವಾದಗಳು.

    ReplyDelete
    Replies
    1. ಧನ್ಯವಾದಗಳು ನಂದಿ ಸರ್, ನಿಮ್ಮ ಪ್ರೋತ್ಸಾಹ ಹೀಗೆಯೇ ಮುಂದುವರೆಯಲಿ. ಖಂಡಿತ ಬರೆಯುತ್ತೇನೆ:)

      Delete
  6. Ah what a touching post Santhu, I am really touched I was in tears end of it. Yeah how true adike tane helodu makalu devara samaana anta.
    Tumba chenagi bardidiri, neenu purvi na miss madkoltirodu yeddu kanstide...

    My best wishes to your sweet family, and blessings to the angel Poorvi :D

    ReplyDelete
    Replies
    1. Hi Ramya,
      Thank you so much. ನಿಮಗೆ ಇಷ್ಟ ಆಗಿದೆ ಅಂದ್ರೆ ಅದಕ್ಕಿಂತ ಖುಷಿ ಏನಿದೆ.
      ನಿಜವಾಗಿ ಹೇಳಬೇಕೆಂದರೆ ಈ ಲೇಖನ ಬರೆದ ಮೇಲೆ ಅದನ್ನು ಪೋಸ್ಟ್ ಮಾಡಬೇಕೋ ಬೇಡವೋ ಅಂತ ಸುಮ್ಮನಿದ್ದೆ.
      ಯಾಕೆಂದರೆ ಅದು ಕೇವಲ ನನ್ನ ಜೀವನಕ್ಕೆ(ಪೂರ್ವಿ ಬಂಗಾರಿಗೆ) ಸಂಬಂಧಿಸಿದ್ದು ಅಂತ.
      ಈಗ ನಿಮ್ಮೆಲ್ಲರ ಪ್ರತಿಕ್ರಿಯೆ ನೋಡಿದರೆ ಪೋಸ್ಟ್ ಮಾಡದೇ ಇದ್ದಿದ್ದರೆ ಎಂತಹ ತಪ್ಪು ಮಾಡಿಬಿದುತ್ತಿದ್ದೆ ಅನಿಸುತ್ತದೆ!!
      Yes,ನಿಜವಾಗೂ ಪೂರ್ವಿನ ಸಿಕ್ಕಾಪಟ್ಟೆ ಮಿಸ್ ಮಾಡ್ಕೊಳ್ತಾ ಇದೀನಿ.

      ಮಕ್ಕಳು ಅಂದರೆ ದೇವರಿಗೆ ಸಮಾನ, ಹೌದು ನಿಮ್ಮ ಮಾತು ನಿಜ.
      ನೋಡಿ ಓದಿದ ನಿಮ್ಮೆಲ್ಲರಿಗೂ ದೇವರುಗಳು ಇಷ್ಟವಾಗಿದ್ದಾರೆ ಅಲ್ಲವೇ:)

      ನಿಮ್ಮ ಪ್ರೋತ್ಸಾಹ ಹೀಗೆಯೇ ಇರಲಿ ಎಂದು ಆಶಿಸುತ್ತಾ....Santhu :)

      Delete

Please post your comments here.