Thursday, February 14, 2013

ಕಣ್ಣು - ಕಣ್ಣೀರು (ಚುಟುಕಗಳು)("ಪಂಜು" ಅಂತರ್ಜಾಲ ತಾಣದಲ್ಲಿ February-4ರಂದು ಪ್ರಕಟವಾದ ನನ್ನ ಚುಟುಕಗಳು
http://www.panjumagazine.com/?p=499)


 =========================================
(ಚಿತ್ರಕೃಪೆ:Google)
ಕಣ್ಣೀರು

ಅತ್ತುಬಿಡು ಎಂದಾಗ,
ಬರದ ಹನಿ,
ಅಳಬೇಡ ತಡೆಯೆಂದಾಗ,
ಉಕ್ಕಿ ಹರಿವ ಧಾರೆ!!

 =========================================

ಹೃದಯ

ಇದ್ದಾಗ,
ಕೊಂಚವೂ ಗೋಚರಿಸದ ,
ತನ್ನನ್ನೇ ಕೊಟ್ಟು ಬರಿದಾದ ಮೇಲೆ,
ಭಾರ ತೋರುವ,
ಏಕೈಕ  ವೈಚಿತ್ರ್ಯ!!

 =========================================

ಕಣ್ಣು

ತೆರೆದಿದ್ದಾಗ
ಇದ್ದುದನ್ನು
ಮಾತ್ರ ತೋರುವ,
ಮುಚ್ಚಿದಾಗ 
ಏನೇನನ್ನೋ
ತೋರುವ
ಪ್ರಚೋದಕ!!

 =========================================

Monday, February 11, 2013

ಬರೀ ಗೆಲ್ಲಬೇಕೆನ್ನುವವರಿಗಲ್ಲ...ಮದುವೆ!!


ಟೈಮಾಯ್ತು ಧಾರೆ ಆಮೇಲೆ ಮುಂದುವರೆಯಲಿ.
ಈಗ ತಾಳಿ ಕಟ್ಟಿಸಿಬಿಡಿ ಅಯ್ನೋರೇ.

ಬೇಗ ಬೇಗ ಬಾರಪ್ಪ.....
ಯಾರಮ್ಮಾ ಅದು, ಬೇಗ ಹೋಗಿ ಈ ಮಾಂಗಲ್ಯ ತಟ್ಟೆನ ಎಲ್ಲ ಹಿರಿಯರ ಹತ್ರ ಮುಟ್ಟಿಸಿಕೊಂಡು ಬಾರಮ್ಮ.
ಇನ್ನೊಂದಿಬ್ರು ಬೇಗ ಹೋಗಿ ಅಕ್ಷತೆ ಎಲ್ಲರಿಗೂ ಹಂಚಿ.

ಸಂತು, ಬಾರಪ್ಪ ನೀನು ಎಡಗಡೆ ಕೂತ್ಕೋ.
ಲಾವಣ್ಯ ನೀನು ಈ ಕಡೆ ಕೂತ್ಕೊಳ್ಳಮ್ಮ.

ಇಡೀ ಮದುವೆ ಛತ್ರದಲ್ಲಿದ್ದ ಜನಗಳೆಲ್ಲ ಮಂಟಪದ ಸುತ್ತ ಇರುವೆಗಳು ಮುತ್ತಿಕೊಂಡಂತೆ ನಿಂತುಕೊಂಡರು.
ಇದೇನು ನಿಜವಾ?! ನನಗೇ ನಾನೇ ಕೇಳಿಕೊಂಡ ಪ್ರಶ್ನೆ!!


ಲಾವಣ್ಯ ನೀವು ಸಂತೋಷರ ಕಾಲನ್ನು ಮುಟ್ಟಿ  ನಮಸ್ಕಾರ ಮಾಡ್ಕೊಳಿ.
ಅಷ್ಟರವರೆಗೆ ಸುಮ್ಮನೆ ನಿಂತಿದ್ದ ಗೆಳೆಯರು "ಮಗಾ, ನಿನ್ ಲೈಫ್ ಅಲ್ಲಿ ಮೊದಲ ಮತ್ತು ಕೊನೆ ಸಲ ಹೆಂಡತಿಯಿಂದ ನಮಸ್ಕಾರ ಮಾಡಿಸಿಕೊಳ್ಳೋದು, ಚೆನ್ನಾಗಿ ಮಾಡಿಸಿಕೊ"
ಎಲ್ಲ ಗೊಳ್ ಎಂದು ನಕ್ಕರು.

ಬೇಗ ಆ ಮಾಂಗಲ್ಯ ಇರೋ ತಟ್ಟೆ ತಗೊಳ್ಳಿ.
ಇಬ್ಬರೂ ಅದಕ್ಕೆ ವಿಭೂತಿ, ಅರಿಶಿನ, ಕುಂಕುಮ, ಹೂವು ಇಟ್ಟು ಪೂಜೆ ಮಾಡಿ.
ಇಬ್ಬರೂ ಈ ಅಕ್ಷತೆ ತಗೊಂಡು ಮಾಂಗಲ್ಯದ ಮೇಲೆ ಹಾಕಿ.
ಇಬ್ಬರೂ ಗಂಧದಕಡ್ಡಿ ಹಚ್ಚಿ ಪೂಜೆ ಮಾಡಿ.

ಸಂತೋಷ್ ಈಗ ನೀನು ಆ ಕರ್ಪೂರದ ಆರತಿ ಬೆಳಗು. ನಿಧಾನ....
ಅಜಯ್ ಸುಮ್ಮನಿರದೆ, "ಹೇಯ್ ನೋಡ್ರೋ ಸಂತೋಷನ್ ಕೈ ನಡುಗ್ತಾ ಇದೆ."
ಎಲ್ಲರೂ ಗೊಳ್ ಎಂದು ನಕ್ಕರು.
"ಪಾಪ, ನಮ್ ಹುಡುಗನ್ನ ನೋಡಿ ನಗಬೇಡ್ರಪ್ಪ, ಅವನಿಗೆ ತಾಳಿ ಕಟ್ಟಿ ಅಭ್ಯಾಸ ಇಲ್ಲ, ಇದೇ ಮೊದಲು" ಗಂಡಿನ ಕಡೆಯವರ ತಿರುಗೇಟು.
ಮತ್ತೆ ಎಲ್ಲರ ಮುಖದಲ್ಲಿ ನಗು.

ಈಗ ಸಂತೋಷ್ ಮಾಂಗಲ್ಯವನ್ನು ಕೈನಲ್ಲಿ ತಗೊಳ್ಳಪ್ಪ.
ಸರಿ, ವಾದ್ಯದವರಿಗೆ ಹೇಳಿ. ಮಂಗಳವಾದ್ಯ.......ಮಂಗಳವಾದ್ಯ.....

ಡುಂ ಡುಂ ಡುಂ ಡುಂ ಡುಂ ಡುಂ ಡುಂ ಡುಂ ಡುಂ ಡುಂ ............

================================


11-Feb-2008

ಹೌದು, ಗೆಳೆಯರೇ, ಈ ಮೇಲಿನ ಪ್ರಸಂಗ ನಡೆದು ಇವತ್ತಿಗೆ ಸರಿಯಾಗಿ ಐದು ವರ್ಷ. ನಾನು ಮತ್ತು ನನ್ನ ಗೆಳತಿ, ಬಾಳ ಸಂಗಾತಿಗಳಾಗಿ ಒಬ್ಬರಿಗೊಬ್ಬರು ಕೈಕೈ ಹಿಡಿದ ಸಂದರ್ಭ.
ಇಡೀ ಕಲ್ಯಾಣ ಮಂಟಪ ಸಡಗರದಲ್ಲಿ ನಲಿಯುತ್ತಿದ್ದರೆ, ಮಗಳನ್ನು ಚಿಕ್ಕಂದಿನಿಂದ ಮುದ್ದಾಗಿ ಬೆಳೆಸಿ ಇನ್ನೊಬ್ಬರ ಮನೆಗೆ ಕಳುಹಿಸಿಕೊಡಲು ಹೆತ್ತವರು ಗದ್ಗದಿತರಾದ ಹೃದಯಸ್ಪರ್ಶೀ ಸಂದರ್ಭ.
ಒಂದೆಡೆ ಪ್ರೀತಿಸಿದವಳನ್ನು ಮದುವೆಯಾದೆ ಎಂಬ ಖುಷಿಯಿದ್ದರೆ, ಇನ್ನೊಂದೆಡೆ ಸಾವಿರ ಸವಾಲುಗಳ ಕೊಟ್ಟು,  "ನೋಡಿಯೇಬೇಡೋಣ, ನಾನಾ, ಇಲ್ಲ ನೀನಾ?" ಅಂತ ಭುಜ ತಟ್ಟಿ ನಿಂತಿರುವ
ಜೀವನ ಒಂದು ಕಡೆ.  ಬಹುಷಃ ಇದು ಎಲ್ಲರ ಜೀವನದಲ್ಲಿ ಬರುವಂತಹ ಅಮೂಲ್ಯ ಘಳಿಗೆಗಳಲ್ಲೊಂದು.

ಆ ಕ್ಷಣಗಳನ್ನು ಈಗಲೂ ನೆನೆಸಿಕೊಂಡರೆ ಮೈ ರೋಮಾಂಚನಗೊಳ್ಳುತ್ತದೆ. ಅಪ್ಪ ಕೊಡಿಸಿದ ಮೊದಲ ಡ್ರಾಯಿಂಗ್ ಬುಕ್ ನಲ್ಲಿ ಯಾವುದೇ ಚಿತ್ರ ಬರೆದಿದ್ದರೂ, ಅದನ್ನು ಕೆಲವು ವರ್ಷಗಳ ನಂತರ ತೆರೆದು ನೋಡಿದಾಗ ಮೈಪುಳಕಗೊಳ್ಳುತ್ತದೆಯಲ್ಲ ಅದೇ ರೀತಿಯ ಭಾವತರಂಗಗಳನ್ನು ಸೃಷ್ಟಿಸುವ ವಿಶೇಷ ಘಳಿಗೆಯೆಂದರೆ ಅದು.

ಇದಾಗಿ ಐದು ವರ್ಷಗಳಾಗಿವೆ ಎಂದು ನಂಬಲೂ ಕಷ್ಟವಾಗುತ್ತದೆ. ನಿಜಕ್ಕೂ ಸಂಸಾರದ ಕ್ಷಣಗಳನ್ನು ನೆಮ್ಮದಿಯಿಂದ ಕಳೆಯಬೇಕೆಂದರೆ ಸುಖ-ದುಃಖಗಳೆರಡನ್ನೂ ಒಂದೇ ರೀತಿಯಲ್ಲಿ ಸ್ವೀಕರಿಸಿ ಸಹಬಾಳ್ವೆಯಿಂದ ಜೀವನ ನಡೆಸುವ ಮನಸ್ಥಿತಿಯಿರಬೇಕು. ಗೆಲ್ಲುವ ಸೋಲುವ ಎರಡಕ್ಕೂ ಸಿದ್ಧವಿರಬಲ್ಲವರಿಗೆ ಮಾತ್ರ ಈ ವಿವಾಹ. ಬರೇ ನಾನು ಮಾತ್ರ ಗೆಲ್ಲುವೆನೆನ್ನುವ ಮನೋಭಾವದವರಿಗಲ್ಲ ಎಂಬುದು ನಾ ಕಂಡುಕೊಂಡ ಉತ್ತರ. ವಿವಾಹನಂತರದ ಜೀವನದ ಬಗ್ಗೆ ಏನೇನೋ ಹೇಳಿ ದಿಗಿಲು ಮೂಡಿಸಿದ್ದ ಗೆಳೆಯರೆಲ್ಲರೂ ಒಮ್ಮೆ ನೆನಪಾಗಿ ನಗು ಬರುತ್ತದೆ.

ಹೀಗೆಯೇ ನನ್ನ ಲಗ್ನಪತ್ರಿಕೆಯನ್ನು ನೋಡುವಾಗ ನನ್ನ ಮನಃ ಪಟಲದಲ್ಲಿ ಮೂಡಿದ ಈ ಚಿತ್ರಗಳನ್ನು ಈ ದಿನ ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ.
ನಮ್ಮ ಮೇಲೆ ನಿಮ್ಮ ಆಶೀರ್ವಾದವಿರಲಿ...ಸದಾ.

ನಿಮ್ಮವನು
ಸಂತು.

Tuesday, February 5, 2013

ನಾ ಕಂಡ ಹೀರೋಗಳು-1

ಪಂಜು ವೆಬ್ ಸೈಟ್ ನ ಮೊದಲ ಸಂಚಿಕೆಯಲ್ಲೇ ಪ್ರಕಟವಾದ ನನ್ನ ಲೇಖನ.
ಲಿಂಕ್: http://www.panjumagazine.com/?p=70

===========================================================
ನಾನಾಗ ಒಂಭತ್ತನೆಯ ತರಗತಿಯಲ್ಲಿ ಓದುತ್ತಿದ್ದೆ. ಆ ವರ್ಷದಲ್ಲಿ ನಡೆದ ರಾಷ್ಟ್ರ ಮಟ್ಟದ ಭಾರತೀಯ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಮೊದಲು ಜಿಲ್ಲಾ ಮಟ್ಟದ ಸ್ಪರ್ಧೆ ಮೈಸೂರಿನಲ್ಲಿ ನಡೆದಿತ್ತು. ನಮ್ಮ ವಿಜ್ಞಾನ ಮಾಸ್ತರರಾಗಿದ್ದ ನಾಗೇಂದ್ರರವರ ಮಾರ್ಗದರ್ಶನದಲ್ಲಿ ಭಾಗವಹಿಸಿದ್ದ ನಾನು, ಗ್ರಾಮೀಣ ವಿಭಾಗದಿಂದ ರಾಜ್ಯ ಮಟ್ಟದ ಸಮಾವೇಶಕ್ಕೆ ಆಯ್ಕೆಯಾಗಿದ್ದೆ.
ಬರೀ ೧೫ ದಿನಗಳ ಕಾಲಾವಕಾಶವಿದ್ದುದರಿಂದ ನಾನು ನಮ್ಮ ಮಾಸ್ತರರ ಕೊಳ್ಳೇಗಾಲ ನಿವಾಸದಲ್ಲಿಯೇ ಬೀಡು ಬಿಟ್ಟು ಹಗಲಿರುಳು ಶ್ರಮಿಸಿದ್ದೆ. ರಾಜ್ಯಮಟ್ಟದ ಸಮಾವೇಶಕ್ಕೆ ಅರಸೀಕೆರೆ ಮದುವೆ ಹೆಣ್ಣಿನಂತೆ ಅಲಂಕಾರಗೊಂಡಿತ್ತು. ಬೆಳಿಗ್ಗೆಯೇ ಕೊಳ್ಳೇಗಾಲ ಬಿಟ್ಟ ನಾವು ಮಧ್ಯಾಹ್ನವೇ ಅರಸೀಕೆರೆ ತಲುಪಿದ್ದೆವು. ಪ್ರತಿ ಜಿಲ್ಲೆಯವರಿಗೊಂದು ಕೊಂಚ ವಿಶಾಲವೆನಿಸುವಷ್ಟು ಜಾಗವಿದ್ದ ಕೊಠಡಿಯನ್ನು ತಂಗಲು ವ್ಯವಸ್ಥೆ ಮಾಡಲಾಗಿತ್ತು. ಬಿಸಿಲ ಝಳವಿದ್ದುದರಿಂದ ಆ ಕೊಠಡಿಯಲ್ಲಿ ಮಲಗಿಕೊಂಡ ಕೂಡಲೇ ಅದ್ಯಾವಾಗ ನಿದ್ರೆ ಹತ್ತಿತೆಂದೇ ತಿಳಿಯಲಿಲ್ಲ.

ಸಂಜೆ ಏಳುವಷ್ಟರಲ್ಲಿ ಮೈಸೂರು ಜಿಲ್ಲೆಯ ನಗರ ವಿಭಾಗಗಳಿಂದ ಬರಬೇಕಿದ್ದ ಅಭ್ಯರ್ಥಿಗಳೆಲ್ಲ ತಮ್ಮ ಮಾರ್ಗದರ್ಶಕರ ಜತೆ ಬಂದು ಕೊಠಡಿ ಸೇರಿಯಾಗಿತ್ತು. ನಾಗೇಂದ್ರ ಮಾಸ್ತರರು ಎದ್ದವರೇ ಮುಖ ತೊಳೆದು ಫ್ರೆಶ್ ಆಗಿ ಬರಲು ಹೊರಟರು. ನಾನು ಕೊಠಡಿಯಲ್ಲೇ ಉಳಿದೆ. ಪಕ್ಕದಲ್ಲಿ ಕುಳಿತು ಮೈಸೂರು ಜಿಲ್ಲೆಯಿಂದ ಬಂದ ಸಹ ಅಭ್ಯರ್ಥಿಗಳನ್ನು ನಿಧಾನವಾಗಿ ಗಮನಿಸತೊಡಗಿದೆ. ಬಂದವರೆಲ್ಲ ನಗರ ಪ್ರದೇಶದವರೇ ಆಗಿದ್ದು ನೋಡಲಿಕ್ಕೆ ಬಹಳ ನೀಟಾಗಿ ಡ್ರೆಸ್ ಮಾಡಿಕೊಂಡಿದ್ದರು. ಅದ್ಯಾವುದೋ ಸಿಕ್ಕ ಪ್ಯಾಂಟ್, ಶರ್ಟನ್ನು ಸಿಕ್ಕಿಸಿಕೊಂಡು ಬಂದಿದ್ದ ನನಗೆ ಏನೋ ಒಂದು ತರಹದ ಕೀಳರಿಮೆ ಕಾಡತೊಡಗಿತ್ತು.

 


ಆ ಟೀಚರ್ ಗಳು ಬಹಳ ನಿರರ್ಗಳವಾಗಿ ಮಾತನಾಡುತ್ತಿದ್ದರು. ಅವರ ಶಿಷ್ಯರುಗಳು ಕೂಡ!! ನಾ ಎದ್ದಿದ್ದನ್ನು ನೋಡಿ ಆಲ್ಲಿದ್ದ ಟೀಚರ್ ಗಳಲ್ಲೊಬ್ಬರು ಬನ್ನಿ ಎಲ್ಲರೂ ಪರಿಚಯಿಸಿಕೊಳ್ಳೋಣ ಎಂದು ಸೂಚಿಸಿದರು. ಯಾಕೋ ಸಂಕೋಚದಿಂದ ಎದ್ದು ನಿಂತು ಅವರ ಬಳಿಗೆ ಹೋದೆ. ಪ್ರತಿಯೊಬ್ಬರೂ ಇನ್ನೊಬ್ಬರಿಗೆ ಶೇಕ್ ಹ್ಯಾಂಡ್ ಕೊಡುವುದು ನಂತರ ಅವರ, ಶಾಲೆಯ ಮತ್ತು ಕುಟುಂಬದ ಹಿನ್ನೆಲೆಯನ್ನು ಹೇಳಬೇಕಿತ್ತು. ಆ ಹುಡುಗಿ ಓದುತ್ತಿರೋದು ಮರಿಮಲ್ಲಪ್ಪ ಸ್ಕೂಲಿನಲ್ಲಿ. ಅವರ ಅಪ್ಪ ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್ ನಲ್ಲಿ ಬ್ಯಾಂಕ್ ಮ್ಯಾನೇಜರ್. ಆ ಹುಡುಗ ಸೈಂಟ್  ಜೋಸೆಫ್ ಸ್ಕೂಲ್, ಅಪ್ಪ ಬೆಂಗಳೂರಿನಲ್ಲಿ ಸಿವಿಲ್ ಇಂಜಿನಿಯರ್ ಆಗಿದ್ದಾರೆ. ಹೀಗೆ ನಾಲ್ಕೈದು ಹುಡುಗರ ಪರಸ್ಪರ ಪರಿಚಯವಾದ ತರುವಾಯ ನನ್ನ ಸರದಿ ಬಂತು.
ಏನಂತ ತಾನೇ ಹೇಳಲಿ? ನನಗೆ ಯಾವಾಗಲೂ ನನ್ನ ಬಗ್ಗೆ ಕೀಳರಿಮೆಯಿತ್ತು. ಮೊದಲಿಗೆ ನಾನು ಕನ್ನಡ ಮಾಧ್ಯಮದ ಸರಕಾರೀ ಪ್ರೌಢಶಾಲೆಯಲ್ಲಿ ಓದುತ್ತಿದ್ದೇನೆ. ನಮ್ಮಪ್ಪ ಕೇವಲ ಒಬ್ಬ ವ್ಯವಸಾಯಗಾರರಷ್ಟೇ!! ಅದನ್ನು ಹೇಗೆ ಹೇಳಿಕೊಳ್ಳುವುದು? ಅದೇನು ಇಂಜಿನೀರ್ ಅಥವಾ ಬ್ಯಾಂಕ್ ಮ್ಯಾನೇಜರ್ ನಷ್ಟು ಹೇಳಿಕೊಳ್ಳಬಲ್ಲ, ಜೊತೆಗೆ ಅಷ್ಟೊಂದು ಸಂಬಳ ಬರಿಸುವ ಕೆಲಸವಲ್ಲ.

ವರ್ಷವಿಡೀ ಕಷ್ಟಪಟ್ಟು ವ್ಯವಸಾಯ ಮಾಡಿದ ಮೇಲೆ ಬಂದರೆ ಬಂತು, ಇಲ್ಲದಿದ್ದರೆ ಇಲ್ಲ ಎನ್ನುವ ಪರಿಸ್ಥಿತಿ. ಕಡೆಗೆ ಧೈರ್ಯ ಮಾಡಿ ಕೈ ಕುಲುಕಿದವನೇ "ನನ್ನ ಹೆಸರು ಸಂತೋಷ್, ಲೊಕ್ಕನಹಳ್ಳಿ ಎನ್ನುವ ಗ್ರಾಮದಲ್ಲಿ ಸರಕಾರೀ ಪ್ರೌಢಶಾಲೆಯೊಂದರಲ್ಲಿ ಒಂಭತ್ತನೇ ತರಗತಿ ಓದುತ್ತಿದ್ದೇನೆ" ಎಂದು ಹೇಳಿ ಬೇಗನೆ ಆ ವಾಕ್ಯ ಮುಗಿಸಿ ಹಿಂದೆ ಬರಲು ರೆಡಿಯಾದೆ!

ಅಷ್ಟು ಹೊತ್ತಿಗೆ ಸುಮ್ಮನೆ ಕೇಳಿಸಿಕೊಳ್ಳುತ್ತಿದ್ದ ಆ ಟೀಚರ್ ನನ್ನನ್ನು ಹೋಗದಂತೆ ಮತ್ತೆ ಕರೆದು "ಯಾಕಪ್ಪಾ ನಿಮ್ಮ ತಂದೆಯವರ ಕೆಲಸ ಹೇಳಲೇ ಇಲ್ಲ" ಅಂದುಬಿಟ್ಟರು. ಕಡೆಗೆ ಬೇರೆ ವಿಧಿಯಿಲ್ಲದೇ "ಏನೂ ಕೆಲಸ ಅಂತ ಏನಿಲ್ಲ ಮೇಡಂ, ನಮ್ಮಪ್ಪ ಕೇವಲ ಇರೋ ಚಿಕ್ಕ ಭೂಮಿಯಲ್ಲಿ ಬೇಸಾಯ ಮಾಡ್ತಾರೆ" ಎಂದು ಕೇವಲ ಆಯಮ್ಮನಿಗೆ ಕೇಳಿಸುವಷ್ಟು ಮಾತ್ರ ಹೇಳಿ ಹೊರಡಲನುವಾದೆ. ತಕ್ಷಣ ಮತ್ತೊಂದು ಪ್ರಶ್ನೆ…"ಏನು ಬೆಳೆಯುತ್ತೀರ", ನನ್ನ ಶಾರ್ಟ್ ಅಂಡ್ ಸ್ವೀಟ್ ಉತ್ತರ "ಜೋಳ". ಆ ಟೀಚರ್ ಗೆ ನನ್ನ ಮುಜುಗರ, ನಾ ಉತ್ತರಿಸುತ್ತಿದ್ದ ಧಾಟಿಯಲ್ಲಿಯೇ ಅರ್ಥವಾಗಿ ಹೋಯಿತು. ನನ್ನ ಹತ್ತಿರ ಬಂದವರೇ ನನ್ನ ಬೆನ್ನು ತಟ್ಟಿ, ಕೈಹಿಡಿದು ಹೇಳತೊಡಗಿದರು!!

 


"ಸಂತೋಷ್ ಮುಜುಗರ ಬೇಡಪ್ಪ, ಈ ದೇಶದ ಬೆನ್ನೆಲುಬು ರೈತ. ಇಲ್ಲಿರುವ ಕೋಟ್ಯಾಂತರ ಜನಗಳಲ್ಲಿ ಯಾರು ಬೇಕೆಂದರೂ ಇಂಜಿನಿಯರ್ ಆಗಬಹುದು. ಡಾಕ್ಟರ್ ಆಗಬಹುದು. ಅದಕ್ಕೆ ಕೇವಲ ವಿದ್ಯೆ ಬುದ್ದಿಯಿದ್ದರೆ ಸಾಕು. ಆದರೆ ರೈತರಾಗಲು ಮನಸ್ಸಿರಬೇಕು,ಉಳೋಕೆ ಭೂಮಿಯಿರಬೇಕು.ಆ ಭೂತಾಯಿಯನ್ನು ಮನಸಾರೆ ಭಕ್ತಿ ಭಾವದಿಂದ ಆಲಂಗಿಸಬೇಕು. ಅದಕ್ಕಿಂತಲೂ ದಣಿವಾದ ಮೇಲೂ ಉಳುವೆನೆನ್ನುವ ಛಲ ಬೇಕು. ಮಳೆರಾಯ ಬರುವನೆನ್ನುವ ನಂಬಿಕೆ ಬೇಕು. ಕೊನೆಗೆ ಉತ್ತು ಬಿತ್ತು ಫಸಲು ಬಂದ ಮೇಲೂ ಕೈಗೆ ಹಣ ಬರುವ ತನಕ ತಾಳ್ಮೆ ಬೇಕು. ಆದರೂ ರೈತನಿಗೆ ಸಿಗೋದು ಕೇವಲ ಬಿಡಿಗಾಸಷ್ಟೇ. ಆದರೂ ಮತ್ತೊಮ್ಮೆ ಆ ದುಡ್ಡಿನಲ್ಲಿ ಸಿಗುವ ಸಂತೋಷಕ್ಕೆ ದೇಹವನೊಡ್ಡದೇ, ಮತ್ತೊಮ್ಮೆ ನೇಗಿಲು ಕಟ್ಟಿ ಉಳಲು ಹೊರಡುತ್ತಾನೆ. ಹೀಗೆ ಇಡೀ ಜಗತ್ತಿಗೆ ದುಡಿಮೆಯೆಂದರೇನು ಅನ್ನುವುದನ್ನು ತೋರಿಸಿಕೊಡುತ್ತಾನೆ.
ಇಂಜಿನಿಯರ್, ಡಾಕ್ಟರ್ ಗಳು ಒಂದು ದಿನ ಕೆಲಸ ಮಾಡದೇ ಕುಳಿತರೂ ಏನೂ ಆಗುವುದಿಲ್ಲ, ಆದರೆ ಒಬ್ಬ ರೈತ ತನ್ನ ಕೆಲಸ ಮಾಡದೇ ಕೈಕಟ್ಟಿ ಕುಳಿತುಬಿಟ್ಟರೆ, ಇಡೀ ಜಗತ್ತಿಗೆ ಉಣ್ಣೋಕೆ ಅನ್ನದಗಳೂ ಇರುವುದಿಲ್ಲ. ಯಾರ ಹಂಗಿನಲ್ಲೂ ಬದುಕದೇ, ಕೇವಲ ಭೂತಾಯಿ ವರುಣರಾಯನನ್ನು ಮಾತ್ರ ನಂಬಿ ಬಾಳುವ ಏಕೈಕ ಸ್ವಾಭಿಮಾನಿ ರೈತ. ನಿಮ್ಮಿಂದ ನಾವು, ಆದರೆ ನಮ್ಮಿಂದ ನೀವಲ್ಲ. ಇಂದು ಆ ನಗರ ಪ್ರದೇಶಗಳಲ್ಲಿ ಕೋಟ್ಯಾಂತರ ಜನ ತಿನ್ನುವ ಪ್ರತೀ ಅನ್ನದಗಳಿನ ಹಿಂದೆ ನಿಮ್ಮ ನಿಸ್ವಾರ್ಥ ಪರಿಶ್ರಮವಿದೆ. ಕೃಷಿಯ ಬಗ್ಗೆ, ನಮ್ಮೆಲ್ಲ ದೇಶದ ರೈತರ ಬಗ್ಗೆ ನನಗೆ ಹೆಮ್ಮೆಯಿದೆ. ಅದಕ್ಕಾಗಿ ನಿಮ್ಮ ತಂದೆಗೆ ನಾನು ಕೃತಜ್ಞತೆ ಅರ್ಪಿಸಬಯಸುತ್ತೇನೆ. ಇನ್ನೆಂದಿಗೂ ನಿಮ್ಮ ತಂದೆಯ ಕೆಲಸದ ಬಗ್ಗೆ ನಿನಗೆ ಮುಜುಗರ ಬೇಡ."

ಈ ಮಾತನ್ನು ಕೇಳಿದ ನನಗೆ ಅರಿವಿಲ್ಲದೆಯೇ ರೋಮಾಂಚನವಾಯಿತು. ಇದುವರೆಗೂ ಅರ್ಥವಾಗಿರದಿದ್ದ ನಮ್ಮ ತಂದೆಯವರ ಕೃಷಿಯ ವಿಶೇಷತೆ ಈಗ ಅರ್ಥವಾಗಿ ಮನಸ್ಸಿನಲ್ಲಿಯೇ ಖುಷಿಪಟ್ಟೆ.ಗೊತ್ತಿದ್ದೂ ಗೊತ್ತಿರದಂತಿದ್ದ ನನ್ನ ಕಣ್ಣ ತೆರೆಸಿದ ಆ ಟೀಚರನ್ನು ನಾ ನನ್ನ ಜೀವನದಲ್ಲಿ ಮರೆಯಲಾರೆ. ಅದೇ ಕೊನೆ!! ಈಗ ಯಾರೇ "What is your Father?" ಎಂದು ಕೇಳಿದರೆ ಮುಜುಗರವಿಲ್ಲದೆಯೇ ಎದೆತಟ್ಟಿ "He is an agriculturist!!" ಎಂದು ಹೇಳುತ್ತೇನೆ. ಅದ್ಯಾಕೋ ಆವಾಗಲೆಲ್ಲ ಆ ಅರಸಿಕೆರೆಯ ಆ ಟೀಚರ್ ನೆನಪಿಗೆ ಬರುತ್ತಾರೆ!! ಆಗ ನನ್ನನ್ನು ನಾನು ಕೇಳಿಕೊಳ್ಳುತ್ತೇನೆ…. ಹೀರೋಗಳನ್ನು ನೋಡೋಕೆ ಕೇವಲ ಸಿನಿಮಾಗಳಿಗೆ ಹೋಗಬೇಕಾ ಅಂತ!!
–ಸಂತುಗುಟ್ಟು

"Kiyoshi Jewelers" ನಡೆಸುತ್ತಿರುವ "Valentine Couple Contest"ಗೆ ನನ್ನ ಮತ್ತು ನನ್ನ ಮಡದಿಯ ಭಾವಚಿತ್ರವನ್ನು ನನ್ನ ಒಂದು ಪುಟ್ಟ ಕವನದೊಂದಿಗೆ ಕಳುಹಿಸಿದ್ದೆ.
ಅದರ ನೆನಪಿಗಾಗಿ...
=============================================
 
ಒಬ್ಬನೇ ಬರಡು ಭೂಮಿಯ ಮೇಲೆ
ಉತ್ತು ಬಿತ್ತುವುದರಲ್ಲಿದ್ದೆ.
ಆಕೆ ಸಿಕ್ಕಳು, ಪ್ರೀತಿಮಳೆ ಸುರಿಸಿದಳು
ಈಗ ಬಾಳಭೂಮಿಯ ತುಂಬೆಲ್ಲ ನಗುವ ಹೂಗಳು!!

ನನ್ನ ಅವಳ ಗೆಳೆತನಕ್ಕೀಗ
ಬರೇ ಹನ್ನೊಂದು ವರ್ಷ!!
ನಮ್ಮಿಬ್ಬರ ಮಡಿಲಲ್ಲಿ ಪುಟ್ಟಿಯೊಬ್ಬಳಿದ್ದಾಳೆ
ತುಂಬಿರುವಳು ಬಾಳಿನಲಿ ಹರುಷ!

ಎಲ್ಲ ಹೇಳಿದರೇನು, ಪ್ರೀತಿಯಿಲ್ಲದಿದ್ದರೂ
ಇಲ್ಲಿ ಬದುಕಬಹುದು, ಅದು ಸುಳ್ಳಲ್ಲ!!
ಪ್ರಾಣವಿಲ್ಲದ ದೇಹ ಎಷ್ಟು ದಿನವಿದ್ದರೇನು
ಅದ ಜೀವನವೆಂದು ಕರೆವರಾರಿಲ್ಲ!!

ಕಳೆದಿಷ್ಟೂ ದಿನಗಳ ಜರಡಿ ಹಿಡಿದರೆ
ಕೆಳಗೆ ಸುರಿದದ್ದೆಲ್ಲ ಕೆಲವೇ ಹೊಟ್ಟು!.
ಮೇಲೆ ನೋಡಿ, ಉಳಿದದ್ದೆಲ್ಲ ಸಕ್ಕರೆ
ಅವಳ ಪ್ರೀತಿಯೇ ಇದರ ಗುಟ್ಟು!!

ಪ್ರೇಮರಾಗದಲಿ ಅಪಸ್ವರವೂ ಇಂಪು
ಹಾಡುವ ಸಾಲೆಲ್ಲ ಮುಗಿದ ಮೇಲೂ!
ಒಂದೊಂದು ಸ್ವರಗಳೂ ಕಾಡುತಲಿರುತಾವೆ
ಈ ದೇಹ ಇಲ್ಲಿಂದ ಅಳಿದ ಮೇಲೂ!!

====================================

Saturday, February 2, 2013

"ಚಿಕ್ಕ" ಮಕ್ಕಳಾ?

Poorvi and Me


ಮಕ್ಕಳು ಅಂತ ಅನ್ನುವಾಗ "ಚಿಕ್ಕ" ಅಂತ ಒಂದು ಪದ ಸೇರಿಸಿ ಚಿಕ್ಕಮಕ್ಕಳು ಅಂತ ಕರೆದುಬಿಟ್ಟಿರುತ್ತೇವೆ. ಅದು ಅವುಗಳ ವಯಸ್ಸು,ಆಕಾರವನ್ನು ಗಮನದಲ್ಲಿಟ್ಟುಕೊಂಡೋ ಅಥವಾ ಅವುಗಳ ಬುದ್ಧಿಶಕ್ತಿಯನ್ನು ಗಮನದಲ್ಲಿಟ್ಟುಕೊಂಡೋ ಅಂತ ಗೊತ್ತಾಗುವುದಿಲ್ಲ. ಕೆಲವರಂತೂ ಮಕ್ಕಳಿಗೆ ಲಾಜಿಕಲ್ ಆಗಿ ಯೋಚನೆ ಮಾಡುವುದಕ್ಕೆ ಬರುವುದಿಲ್ಲ ಅಂತ ಹೇಳುತ್ತಿರುತ್ತಾರೆ. ಅಂಥವರಿಗೆಲ್ಲ ತಮ್ಮ ಅಭಿಪ್ರಾಯ ತಪ್ಪು ಅಂತ ಗೊತ್ತಾಗುವುದೇ ಅವರ ಮನೆಯೊಳಗೆ ಒಂದು ಮಗು ಪ್ರವೇಶ ಕೊಟ್ಟಾಗ!!

======================================================

ಯಾವುದೇ ಕುತೂಹಲವಿದ್ದರೂ ನಾನು ಅದನ್ನು ನನ್ನ ಮಗಳು ಪೂರ್ವಿಯಿಂದಲೇ ಬಗೆಹರಿಸಿಕೊಳ್ಳಬಯಸುತ್ತೇನೆ.
ಎರಡು ತಿಂಗಳ ಹಿಂದೆ ನನಗೆ ಆ ಪ್ರಶ್ನೆ ಮನಸ್ಸಿನಲ್ಲಿ ಮೂಡಿ ಅವಳನ್ನೇ ಕೇಳಬೇಕೆನಿಸಿತು.

ನಾನು ಮತ್ತು ನನ್ನ ಮಡದಿ ಆಟವಾಡುತ್ತಿದ್ದ ಪೂರ್ವಿಯನ್ನು ಹತ್ತಿರ ಕರೆದೆವು.
ನಾನು ಕೇಳಿದೆ "ಪೂರ್ವಿ ಬಂಗಾರಿ, ನೀನು ದೊಡ್ಡವಳಾದ ಮೇಲೆ ಏನಾಗುತ್ತೀಯ?", ಅದು ನೇರ ಮತ್ತು ಇದ್ದಕ್ಕಿದಂತೆ ಅವಳತ್ತ ಎಸೆದ ಪ್ರಶ್ನೆ.
ಒಂದು ಚೂರು ಯೋಚನೆ ಮಾಡದೆ ಒಂದೇ ಕ್ಷಣದಲ್ಲಿ ಉತ್ತರಿಸಿದಳು, "ಪಪ್ಪಾ, ನಾನು ದೊಡ್ಡವಳಾದ ಮೇಲೆ lipstick ಹಚ್ಚಿಕೊತೀನಿ!!"
ತಡೆಯಲಾಗಲಿಲ್ಲ, ಗೊಳ್ ಎಂದು ನಕ್ಕುಬಿಟ್ಟೆವು. ಅವಳೂ ನಮ್ಮ ಜೊತೆ ನಕ್ಕಳು, ಕಾರಣ ತಿಳಿಯದೇ!

ಕೊನೆಗೆ ಅರ್ಥವಾಯಿತು.
ಅವರಮ್ಮನ ಬ್ಯಾಗ್ನಲ್ಲಿ Lipstick ಕಂಡಾಗಲೆಲ್ಲ ನಾನೂ ಹಚ್ಚಿಕೊಳ್ಳುತ್ತೇನೆ ಅಂತ ಹಠ ಮಾಡುತ್ತಾಳೆ.
ಅದಕ್ಕೆ ಅವರಮ್ಮನ ಒಂದೇ ಉತ್ತರ, "ಚಿಕ್ಕಮಕ್ಕಳೆಲ್ಲ ಹಚ್ಚಿಕೊಳ್ಳಬಾರದು,ನೀನು ದೊಡ್ದವಳಾದ ಮೇಲೆ ಹಚ್ಚಿಕೊಳ್ಳುವಿಯಂತೆ!!".

======================================================


ಬೆಂಗಳೂರಿನಿಂದ ಮೂರೂವರೆ ಘಂಟೆಯ ಪ್ರಯಾಣ ಮಾಡಿದರೆ ನನ್ನ ಊರು ಸಿಗುತ್ತದೆ. ಕೆಲಸಕ್ಕೆ ಸೇರಿದ ಮೇಲೆ ಇತ್ತೀಚಿಗೆ ಎರಡು ತಿಂಗಳಿಗೊಮ್ಮೆ ಊರಿಗೆ ಹೋಗುತ್ತೇನೆ. ನಾ ಹೋಗುವ ಸಮಯದಲ್ಲೇ ನಮ್ಮ ಜೊತೆ ಕಾಲ ಕಳೆಯಲು ನನ್ನ ಅಕ್ಕ ಕೂಡ ಅವರ ಕುಟುಂಬದ ಜೊತೆಗೆ ಹಾಜರಿಯಿರುತ್ತಾಳೆ. ನನ್ನ ಅಕ್ಕನ ಮಗನ ಹೆಸರು ನೂತನ್. ಪೂರ್ವಿ ಮತ್ತು ನೂತನ್ ಇಬ್ಬರಿಗೂ ಹೆಚ್ಚು ಕಡಿಮೆ ಒಂದೇ ವಯಸ್ಸಿನವರು (3 ವರ್ಷ), ನೂತನ್ ಕೇವಲ ಕೆಲವೇ ತಿಂಗಳುಗಳಲ್ಲಿ ಪೂರ್ವಿಗಿಂತ ದೊಡ್ಡವನು. ಮಕ್ಕಳು ತನ್ನ ಓರಗೆಯ ಇನ್ನಿತರ ಮಕ್ಕಳನ್ನು ಇಷ್ಟಪಡುವಷ್ಟು ಇನ್ನಾರನ್ನೂ ಇಷ್ಟಪಡುವುದಿಲ್ಲ. ಪೂರ್ವಿ ಬರುತ್ತಾಳೆಂದರೆ ನೂತನ್ ಗೆ ಎಲ್ಲಿಲ್ಲದ ಸಂಭ್ರಮವಿರುತ್ತದೆ. ಇಬ್ಬರೂ ಆಟವಾಡುತ್ತಾ ಕುಳಿತರೆ ಇಡೀ ಜಗತ್ತನ್ನೇ ಮರೆತುಬಿಟ್ಟಿರುತ್ತಾರೆ. ಆಗಾಗ ಜಗಳವಾಡುತ್ತಾರೆ ಕೂಡ.

ಹೊಸಬಟ್ಟೆಯ ಬೆಲೆ ಗೊತ್ತಾಗಲೆಂದು ಹಾಕಿರುತ್ತಾರಲ್ಲ ಆ PrcieTag ಒಂದು ನೂತನ್ ಕೈಗೆ ಸಿಕ್ಕಿತ್ತು, ಅದರಲ್ಲಿ ಒಂದು ಹೂವಿನ ಚಿತ್ರವಿದ್ದ ಕಾರಣ ಅದನ್ನು ತನ್ನ ಕೈಲಿ ಹಿಡಿದುಕೊಂಡಿದ್ದ. ಪೂರ್ವಿ ನೋಡಿದ್ದೇ ತಡ ಅದು ತನಗೆ ಬೇಕೆಂದು ರಂಪಾಟ ಮಾಡಿಬಿಟ್ಟಳು. ಅತ್ತಿದ್ದು, ಕಿತ್ತಾಡಿದ್ದು ಎಲ್ಲ ಆಯಿತು. ನೂತನ್ ಅವಳಿಗೆ ಅದನ್ನು ಕೊಡಲೇ ಇಲ್ಲ. ಕೊನೆಗೆ ನಾವೇ ಅಲ್ಲೆಲ್ಲೋ ಬಿದ್ದಿದ್ದ ಇನ್ನೊಂದು PrcieTag ತಂದು ಪೂರ್ವಿಗೆ ಕೊಡುವಷ್ಟರಲ್ಲಿ ಸಾಕಾಗಿತ್ತು. ಆದರೂ ನೂತನ್ ಕೈಲಿದ್ದ PrcieTag ಬೇಕಿತ್ತು ಅನ್ನುವಂತೆ ಪೂರ್ವಿ ಮುಖ ಮಾಡಿಕೊಂಡಿದ್ದಳು.

ಸೋಮವಾರದ ಬೆಳಗ್ಗೆಯೇ ಕಾರಿನಲ್ಲಿ ಹೊರಟು ನಿಂತೆವು. ನಾವು ಹೊರಡುತ್ತೇವೆಂದರೆ ಸಾಕು ನಮ್ಮ ಅಪ್ಪಅಮ್ಮನವರ ಮುಖ ಇದ್ದಕ್ಕಿದ್ದಂತೆ ಚಿಕ್ಕದಾಗಿಬಿಡುತ್ತದೆ. ಒಂದೆರಡು ದಿನಗಳಿಂದ ಓಡಾಡಿಕೊಂಡಿದ್ದ ಪೂರ್ವಿ ಹೊರಡುವಾಗ ಮೌನವಾಗಿಬಿಡುತ್ತಾರೆ. ಎಲ್ಲರೂ ಪೂರ್ವಿಯನ್ನು ಎತ್ತಿ ಮುದ್ದಾಡಿ ಕಳಿಸಿಕೊಡುವ ಸಮಯ. ನೂತನ್ ಸಪ್ಪೆ ಮುಖದಿಂದ ಅಮ್ಮನ ಹೆಗಲ ಮೇಲೆ
ಮಲಗಿದ್ದ.

ಎಲ್ಲರೂ ನೂತನ್ ಗೆ ಹೇಳಿದರು. "ನೂತನ್, ShakeHand ಕೊಡು, ಪೂರ್ವಿಗೆ Bye ಹೇಳು!!"
ಸಪ್ಪೆ ಮುಖದಿಂದಲೇ "Bye ಪೂರ್ವಿ" ಅಂತ ಹೇಳಿ ಮತ್ತೆ ಅವರಮ್ಮನ ಭುಜದ ಮೇಲೆ ಮಲಗಿಕೊಂಡ.
ಕಾರಿನ ಇಂಜಿನ್ ಸ್ಟಾರ್ಟ್ ಮಾಡಿ ಇನ್ನೇನು ಮುಂದೆ ಹೊರಡಬೇಕು.ತಕ್ಷಣ ಅದೇನು ನೆನಪಾಯಿತೋ ಹತ್ತಿರ ಓಡಿ ಬಂದವನೇ, ಜೇಬಿಂದ ಅದೇನನ್ನೋ ತೆಗೆದು "ತಗೋ ಇಟ್ಟುಕೋ" ಎಂದು ಕೊಟ್ಟ.

 ಪೂರ್ವಿ ಅದನ್ನು ಖುಷಿಯಿಂದ ತೆಗೆದುಕೊಂಡವಳೇ "Thank you, Bye" ಎನ್ನುತ್ತಾ ಮುಗುಳ್ನಕ್ಕಳು. ಅವನ ಮುಖದಲ್ಲೂ ಮುಗುಳ್ನಗು ಮಿಂಚಿ ಮರೆಯಾಯಿತು. ಅವನು ಅವಳಿಗೆ ಕೊಟ್ಟದ್ದು, ನೆನ್ನೆ ತಾನೇ ಘಂಟೆಗಟ್ಟಲೆ ಜಗಳವಾಡಲು ಕಾರಣವಾದ ಅದೇ "PriceTag"!! ನಿಂತಿದ್ದ  ಎಲ್ಲರಿಗೂ ಏನೆಂದು ಹೇಳಬೇಕೆಂದೇ ತಿಳಿಯಲಿಲ್ಲ.
 ಈ ಚಿಕ್ಕ-ಮಕ್ಕಳ ದೊಡ್ಡ-ಮನಸ್ಸು ಬಹಳ ಮೆಚ್ಚುಗೆಯಾಗಿ, ಹೃದಯ ತುಂಬಿ ಬಂತು!!


======================================================


ಮೊನ್ನೆ ಕಾರ್ಯದ ನಿಮಿತ್ತ Czech Republic ದೇಶಕ್ಕೆ ತತ್ ಕ್ಷಣ ಒಬ್ಬನೇ ಹೊರಡಬೇಕಾಗಿ ಬಂದಾಗ ಬಟ್ಟೆ ಬರೆಯನ್ನೆಲ್ಲ ಪ್ಯಾಕ್ ಮಾಡಿಕೊಳ್ಳುತ್ತಿದ್ದೆ.
ಪೂರ್ವಿ ಹತ್ತಿರ ಬಂದವಳೇ "ಪಪ್ಪಾ, ನನ್ನನ್ನೂ ಜೊತೆ ಕರ್ಕೊಂಡು ಹೋಗು, ಪಪ್ಪಾ " ಅಂತ ಕೇಳಿದಳು.
ನಾನಂದೆ, "ಬೇಡ ಬಂಗಾರಿ, ನಾನು ಒಬ್ಬನೇ ಹೋಗ್ತಾ ಇದ್ದೀನಿ".
ಪೂರ್ವಿ,"ಇಲ್ಲ ಪಪ್ಪಾ, ನಾನೂ ಜೊತೆಗೆ ಬರ್ತೀನಿ. ಪ್ಲೀಸ್. ನೀನು ನನಗೆ ಚಾಕಲೇಟ್, ಐಸ್ ಕ್ರೀಂ, ಚಿಪ್ಸ್, ಎಳನೀರು ಏನನ್ನೂ ಕೊಡಿಸು ಅಂತ ಕೇಳಲ್ಲ....ಪ್ಲೀ....ಸ್"

ಸುಮ್ಮನೆ ಅವಳು ಏನೇನೋ ಬೇಕೆಂದು ಹಠ ಮಾಡಿದಾಗಲೆಲ್ಲ , "ನೀನು ಹಠ ಮಾಡಿದರೆ ಯುರೋಪ್ ಗೆ ಕರ್ಕೊಂಡು ಹೋಗಲ್ಲ ನೋಡು" ಅಂತ ನಾನೇ ಅವಳಿಗೆ ಹೇಳುತ್ತಿದ್ದ ಮಾತುಗಳು ನೆನಪಾಗಿ ಬೇಸರವಾಗಿತ್ತು. ಅವಳನ್ನು ಬಿಟ್ಟು ಏರ್ ಪೋರ್ಟ್ ಗೆ ಹೊರಡುವ ಸಂದರ್ಭದಲ್ಲಿ ಕಣ್ಣೀರು ತುಂಬಿ ಬಂದಿತ್ತು.

======================================================


ಈಗಾಗಲೇ ನೀವೆಲ್ಲರೂ ನಾನು ಅವಳ ಜೊತೆ ಹಾಡುವ ವೀಡಿಯೊ ತುಣುಕೊಂದನ್ನು ನೋಡಿರುತ್ತೀರಿ. (ಇಲ್ಲದಿದ್ದರೆ ಈ ಕೆಳಕಂಡ ಲಿಂಕಿನಲ್ಲಿ ಒಮ್ಮೆ ನೋಡಿಬಿಡಿ.)

http://www.youtube.com/watch?v=vqawNp5Jse8

ನಾ ಅವಳ ಜೊತೆ ಕುಳಿತುಕೊಂಡು ಈ ಹಾಡು ಹಾಡಿ ಸುಮಾರು ಎರಡು ತಿಂಗಳಾಗಿದೆ. ನಾ ಪಕ್ಕದಲ್ಲಿ ಮಲಗಿರುವಾಗ ಭಾವಗೀತೆಗಳನ್ನು ಹಾಡುತ್ತಿದ್ದರೆ ಸುಮ್ಮನೆ ಕೇಳಿಸಿಕೊಳ್ಳುತ್ತಾ ಮಲಗಿಬಿಡುತ್ತಾಳೆ. ಇಂದು ಈ ಲೇಖನ ಬರೆಯುವುದಕ್ಕೆ ಕೊಂಚ ಮುಂಚೆ Czech Republic ನಿಂದ ಮನೆಗೆ ಫೋನ್ ಮಾಡಿದಾಗ ಆಕೆ ಇನ್ನೂ ಎಚ್ಚರವಾಗಿಯೇ ಇದ್ದಳು.ರಾತ್ರಿ ಹನ್ನೊಂದಾಗಿದ್ದರೂ ಮಲಗಿರಲಿಲ್ಲ. ಅವಳೊಂದಿಗೆ ಏನೇನೋ ಮಾತನಾಡಿದ ಮೇಲೆ ಕೊನೆಗೆ "ಪಪ್ಪಾ,ನನಗೆ ಏನನ್ನಾದರೂ ಹಾಡು"ಎಂದಳು."ನಾಕುತಂತಿ" ಹಾಡಿದೆ. ಹಾಡು ಮುಗಿಯುವುದರಲ್ಲಿ ಅಕೆಯ ಕಣ್ಣಿಗೆ ನಿದ್ರೆ ಹತ್ತಿತ್ತು.

ಎದುರಿದ್ದಾಗ ಮಕ್ಕಳು ಹಠ ಹಿಡಿದಾಗ ಸಹನೆ ಕಳೆದುಕೊಂಡು, ಅವುಗಳ ತರಲೆಗಳನ್ನು ನೋಡಿ ಬೇಸತ್ತು ಹೋಗಿರುತ್ತೇವೆ . ಅವುಗಳು ಎದುರಿಲ್ಲದಿದ್ದಾಗ ಅವುಗಳ ಗೈರುಹಾಜರಿಯಿಂದ ಉಂಟಾಗುವ ಒಂಟಿತನದ ಭಾವ ಇದೆಯಲ್ಲ, ಅದನ್ನು ಆ ಕಷ್ಟ ಅನುಭವಿಸಿದವನೇ ಬಲ್ಲ!!

ನಿಮ್ಮವನು
ಸಂತು.

Friday, February 1, 2013

ಹಿಂಗಿದ್ರು ನಮ್ ಮೇಷ್ಟ್ರು!

(ದಿನಾಂಕ 31-ಜನವರಿ-೨೦೧೩ ರಂದು ಅವಧಿಯಲ್ಲಿ ಪ್ರಕಟವಾದ ನನ್ನ ಲೇಖನ.
 http://avadhimag.com/?p=73186)

ಆರನೇ ಕ್ಲಾಸು ನಡೆಯುತ್ತಿತ್ತು.ಸಮಾಜ ವಿಜ್ಞಾನಕ್ಕೆ ಯಾರೂ ಇಲ್ಲದ ಕಾರಣ ನಮ್ಮ ಶಾಲೆಯ ಮುಖ್ಯೋಪಧ್ಯಾಯರೇ ಆ ವಿಷಯವನ್ನೂ ತೆಗೆದುಕೊಳ್ಳುತ್ತಿದ್ದರು.ವಿದ್ಯಾರ್ಥಿಗಳು ಅಷ್ಟೊಂದು ಸೀರಿಯಸ್ ಆಗಿ ಕುಳಿತುಕೊಳ್ಳುತ್ತಿರಲಿಲ್ಲ.ಸ್ವಲ್ಪ ದಿನಗಳಲ್ಲೇ ಇದ್ದಕ್ಕಿದ್ದಂತೆ ಹೊಸ ಉಪಾಧ್ಯಾಯರ ನೇಮಕವಾಯಿತು. ಎಲ್ಲ ವಿದ್ಯಾರ್ಥಿಗಳಿಗೂ ಹೊಸ ಮೇಷ್ಟ್ರು ಹೇಗಿರುತ್ತಾರೋ ಅನ್ನುವ ಕುತೂಹಲ. ಆ ಕುತೂಹಲ ಬಹಳಷ್ಟು ದಿನ ಉಳಿಯಲಿಲ್ಲ. ನಮ್ಮ ತರಗತಿಗೂ ಅವರನ್ನೇ ಪಾಠ ಮಾಡಲು ನೇಮಕ ಮಾಡಲಾಯಿತು.

ಕ್ಲಾಸಿನಲ್ಲಿ ಇದ್ದುದರಲ್ಲೇ ನಾನು ಕೊಂಚ ಚೆನ್ನಾಗಿ ಓದುತ್ತಿದ್ದೆ. ಅಪ್ಪ ಅಮ್ಮನಿಂದ ಯಾವತ್ತೂ ಓದಿನ ವಿಷಯಕ್ಕೆ ಹೀಗೆಯೇ ಮಾಡಬೇಕು ಅಂತ ಹೇಳಿಸಿಕೊಂಡವನಲ್ಲ. ಎಂದಿಗೂ ಯಾರಿಂದಲೂ ಬೈಸಿಕೊಳ್ಳದ ನಾನು ಅವತ್ತು ಮಾತ್ರ ದೊಣ್ಣೆಯಿಂದ ಪಟಾರನೆ ಏಟು ತಿಂದಿದ್ದೆ. ಮೊದಲ ಬೆತ್ತದೇಟು ಕಣ್ಣಲ್ಲಿ ನೀರು ತರಿಸಿತ್ತು. ಮನೆಗೆ ಹೋಗಿ ಏನೂ ಆಗಿಲ್ಲದವನಂತೆ ಸುಮ್ಮನಿದ್ದೆ. ಎಲ್ಲರಿಂದಲೂ ಬಹಳ ಹೊತ್ತು ಮುಚ್ಚಿಡಲಾಗಲಿಲ್ಲ. ಅಜ್ಜಿ ಕೆಂಪಾಗಿದ್ದ ನನ್ನ ಕೈ ನೋಡಿ “ಯಾವನ ಅವ ನನ್ ಕೂಸುನ್ ಕೈಗ್ ಹೊಡದೌನು? ಅವನ್ಗೇನು ಎದೆ ಸಿರ ಮುರದೋಗಿದ್ದ?” ಅಂತ ಹೊಡೆದ ಮೇಷ್ಟ್ರಿಗೆ ಬೈದಿದ್ದರು.
(ಯಾರು ನನ್ನ ಕೂಸಿನ ಕೈಗೆ ಹೊಡೆದಿದ್ದು, ಅವನಿಗೇನು ಎದೆ ಶಿರ ಮುರಿದು ಹೋಗಿದೆಯ?– ಕೊಳ್ಳೇಗಾಲದ ನಮ್ಮ ಭಾಷೆ!!)

ಅಷ್ಟಕ್ಕೂ ಆ ಮೇಷ್ಟ್ರು ನನಗೆ ಏಟು ಕೊಟ್ಟಿದ್ದು ನನ್ನ ಬಳಿ ಪಠ್ಯಪುಸ್ತಕ ಇಲ್ಲವೆಂದಿದ್ದಕ್ಕೆ. ಶಾಲೆ ಶುರುವಾಗಿ ಒಂದೂವರೆ ತಿಂಗಳಾದರೂ ಇನ್ನೂ ಪಠ್ಯಪುಸ್ತಕ ಕೊಂಡಿರಲಿಲ್ಲ. ಕೊಳ್ಳಲು ಹಣವೂ ಇರಲಿಲ್ಲ. ಬರೀ ಮೇಷ್ಟ್ರು ಮಾಡುವ ಪಾಠ ಕೇಳಿ,ಅವರು ಕೊಡುತ್ತಿದ್ದ ನೋಟ್ಸ್ ನಿಂದಲೇ ಓದಿಕೊಳ್ಳುತ್ತಿದ್ದೆವು.ಆದರೆ ಈಗ ಹಾಗಲ್ಲ. ಹೊಸ ಮೇಷ್ಟ್ರು ಎಲ್ಲರಿಗೂ ಬಿಸಿ ಮುಟ್ಟಿಸಿದ್ದರು.ಅದೇ ನಾಳೆ ಎಲ್ಲರೂ ಅಪ್ಪ ಅಮ್ಮನಿಂದ ಸಾಲ ಮಾಡಿಸಿಯಾದರೂ ಪುಸ್ತಕ ಕೊಂಡು ತರಗತಿಯೊಳಗೆ ಕಾಲಿಟ್ಟಿದ್ದರು. ಆ ಬದಲಾವಣೆ ತಂದ ಮೇಷ್ಟ್ರ ಹೆಸರು “ಜಯಣ್ಣ”.

ಜಯಣ್ಣ ಮೇಷ್ಟ್ರು ಬಂದಾಗಿನಿಂದ ಮಕ್ಕಳ ಶಿಸ್ತು ಕೊಂಚ ಸುಧಾರಿಸಿತು. ಮುಂದಿನ ಪಿರಿಯಡ್ ಸಮಾಜವೆಂದರೆ ಇಡೀ ಕ್ಲಾಸು ನಿಶ್ಶಬ್ದ. ನಂತರದ ದಿನಗಳಲ್ಲಿ ನಿಜಕ್ಕೂ ಆ ಮೇಷ್ಟ್ರ “ಹವಾ” ಯಾವ ಮಟ್ಟಕ್ಕೆ ತಲುಪಿತ್ತೆಂದರೆ,ಒಂದು ದಿನ ಶಾಲೆ ಮುಗಿಸಿ ಮನೆಗೆ ಬಂದ ನನ್ನ ತಮ್ಮ, ನಮ್ಮಮ್ಮನಿಗೆ “ನಮ್ಮ ಜಯಣ್ಣ ಮೇಷ್ಟ್ರ ಬಗ್ಗೆ ನಿಂಗೆ ಗೊತ್ತಿಲ್ಲ. ಹೆಂಗ್ ಹೊಡಿತಾರೆ ಗೊತ್ತಾ? ದೊಣ್ಣೆ ಹಿಡ್ಕೊಂಡ್ ಬಂದ್ರೆ ನೀನೂ ಓಡಬೇಕು!!” ಅಂತ ಹೇಳಿದ್ದ.

======================================================

ಶಾಲೆ ಮುಗಿಸಿ ಕಾಲೇಜಿಗೆಂದು ಮೈಸೂರಿಗೆ ಕಾಲಿಟ್ಟಿದ್ದೆ. ಆಗ ತಾನೇ 10ನೇ ತರಗತಿ ಮುಗಿಸಿ ಶಾಲೆಯಿಂದ ಹೊರಬಂದ ಮಕ್ಕಳಿಗೆ ಅದೇನೋ ಹೊಸ ತರಹದ ಹುಮ್ಮಸ್ಸು.ಅದೇನೋ ಆ ಚಿಕ್ಕಮಕ್ಕಳು ಎಂಬ ಹಣೆಪಟ್ಟಿ ಕಳಚಿ ಕಾಲೇಜು-ಹುಡುಗರು ಎಂಬ ಹೊಸ ಹೆಸರು ಬಂದೊಡನೆ ಹಕ್ಕಿಗಳಿಗೆ ರೆಕ್ಕೆ ಬಂದ ಹಾಗಾಗಿಬಿಡುತ್ತದೆ ಮನಸು.ಯಾರಾದರೂ ಲೆಕ್ಚರರ್ ಕ್ಲಾಸಿನಲ್ಲಿ ಗಲಾಟೆ ಮಾಡುತ್ತಿದ್ದ ಅಂತ ಗದರಿಸಿದರೆ, “ಏನಪ್ಪಾ ಜಾಸ್ತಿ ಮಾತಾಡ್ತಿದ್ದೀಯ, ಹೊರಗಡೆ ಬಾ ನೋಡ್ಕೊತ್ತೀನಿ” ಅಂತ ಅವರನ್ನೇ ಗದರಿಸಿದ ಸಹಪಾಠಿಗಳೂ ಇದ್ದರು.

ಅಂತಹ ವಾತಾವರಣದಲ್ಲಿ ನವಯುವಕರ ಚಳಿಬಿಡಿಸಲೆಂದು ಬಂದ ಸಿಪಾಯಿಯೆಂದರೆ ಪ್ರೊಫೆಸರ್ ಸಾಂಬಶಿವಯ್ಯ. ಸೇನೆಯಿಂದ ನಿವೃತ್ತಿ ಪಡೆದು ಬಂಡ ನಂತರ ನಮ್ಮ ಕಾಲೇಜಿಗೆ ಪ್ರೊಫೆಸರ್ ಆಗಿ ಕಾರ್ಯ ಸಲ್ಲಿಸುತಿದ್ದರು.ಮೊದಲೇ ಮಿಲಿಟರಿ ಮ್ಯಾನ್. ಆರಡಿ ದೇಹದ, ಕಂಚಿನ ಕಂಠದ ಸಾಂಬ ಶಿವಯ್ಯ ನಡೆದು ಬರುತ್ತಿದ್ದರೆ ಪ್ರತಿಯೊಬ್ಬರಿಗೂ ಭಯವಾಗುತ್ತಿತ್ತು. ಕಾಲೇಜಿನೊಳಕ್ಕೆ ನಡೆದು ಬರುತ್ತಿದ್ದರೆ, ಹೆಚ್ಚು ಕಡಿಮೆ ಒಂದು ಫರ್ಲಾಂಗ್ ನಷ್ಟು ಕಾಣುವ ಕಾರಿಡಾರಿನಲ್ಲಿ ಒಬ್ಬನೇ ಒಬ್ಬ ವಿದ್ಯಾರ್ಥಿಯೂ ಕಾಣಿಸಿಕೊಳ್ಳುತ್ತಿರಲಿಲ್ಲ. ಯಾಕೆಂದರೆ ಬೋರೆನಿಸುವ ಪಿರಿಯಡ್ಡುಗಳನ್ನೂ ಅಟೆಂಡ್ ಮಾಡಿಸದೆ ಬಿಡುತ್ತಿರಲಿಲ್ಲ ಅಸಾಮಿ.ಭೌತಶಾಸ್ತ್ರವನ್ನು ಎಲ್ಲ ಪಿಯುಸಿ ತರಗತಿಗಳಿಗೆ ಪಾಠ ಮಾಡುತ್ತಿದ್ದ ಅವರ ಕೈಯಲ್ಲಿ, ಯಾವಾಗಲೂ ಒಂದು ಪುಸ್ತಕ ಮತ್ತು ನಾಲ್ಕಡಿ ಉದ್ದದ ಕೋಲು! ಎಲ್ಲಾದರೂ ಯಾವುದೇ ವಿದ್ಯಾರ್ಥಿ ಪಿರಿಯಡ್ ಬಂಕ್ ಮಾಡಿ ಹೊರಟು ಸಿಕ್ಕಿಹಾಕಿಕೊಂಡರೆ ಮುಗಿಯಿತು. ಹಣ್ಣುಗಾಯಿ ನೀರುಗಾಯಿ!! ತಪ್ಪಿಸಿಕೊಂಡರೂ ಅವರ ಐಡಿ ಕಾರ್ಡ್ ನಂಬರ್ ಬರೆದುಕೊಂಡು ಅವರಪ್ಪ ಅಮ್ಮನಿಗೆ ಒಂದು ಲೆಟರ್ ಬರೆದುಬಿಡುತ್ತಿದ್ದರು. ಅವರೇ ಎನ್ ಸಿ ಸಿ ಗೆ ಮುಖ್ಯಸ್ಥರಾಗಿದ್ದರಿಂದ ಎಲ್ಲಿ ತಪ್ಪಿಸಿಕೊಂಡರೂ ಅಲ್ಲಿ ಬಿಡುತ್ತಿರಲಿಲ್ಲ. ಕ್ಲಾಸಿನಲ್ಲಿ ಅವರು ಪಾಠ ಮಾಡುವಾಗ ಸೂಜಿ ಬಿದ್ದರೂ ಶಬ್ದ ಸ್ಪಷ್ಟ. ಅಷ್ಟೊಂದು ನಿಶ್ಶಬ್ದ.ಅವರ ಉಪಟಳ ತಡೆಯಲಾಗದೆ ಒಬ್ಬ ಹುಚ್ಚು ವಿದ್ಯಾರ್ಥಿ ಅವರಿಗೆ ಬುದ್ಧಿ ಕಲಿಸಬೇಕೆಂದು ಅವರ ಮನೆ ವಿಳಾಸ ಹುಡುಕಿ ಹಾವೊಂದನ್ನು ದಪ್ಪ ಬಾಕ್ಸಿನಲ್ಲಿಟ್ಟು ಕೊರಿಯರ್ ಮಾಡಿದ್ದನಂತೆ!!

ಆಮೇಲೇನಾಯಿತು ಎಂಬುದು ಇಲ್ಲಿ ಮುಖ್ಯವಲ್ಲ!!

ಮನೆಯಲ್ಲಿ ಎಲ್ಲ ಮಕ್ಕಳು ಅಪ್ಪ ಅಮ್ಮಂದಿರಿಗೆ ಆ ಪ್ರೊಫೆಸರ್ ರ ವಿಷಯವನ್ನು ಹೇಳಿದ್ದರೂ, ಎಲ್ಲ ತಂದೆತಾಯಿಗಳೂ ತಮ್ಮ ಮಕ್ಕಳ 2ನೇ ವರ್ಷದ ಪಿಯುಸಿಗೆ ಅವರ ಬಳಿಯೇ ಭೌತಶಾಸ್ತ್ರಕ್ಕೆ ಟ್ಯೂಶನ್ ಕಲಿಸಲು ನಾ ಮುಂದು ತಾ ಮುಂದು ಎಂಬಂತೆ ವ್ಯವಸ್ಥೆ ಮಾಡುತ್ತಿದ್ದರು. ಅವರ ಬಳಿ ಟ್ಯೂಶನ್ ಗೆ ವರ್ಷದ ಮುಂಚೆಯೇ ನೋಂದಣಿಯಾಗಿಬಿಡುತ್ತಿತ್ತು. ಯಾಕೆಂದರೆ ಅವರ ಬಳಿ ಟ್ಯೂಶನ್ ಗೆ ಹೋದವರಿಗೆ ಭೌತಶಾಸ್ತ್ರದಲ್ಲಿ ಫೇಲಾಗುವ ಅಥವಾ ಕಡಿಮೆ ಅಂಕ ಪಡೆಯುವ ಭಯವಿರುತ್ತಿರಲಿಲ್ಲ.

======================================================

ನಮ್ಮ ಬಾಲ್ಯದ ಶಾಲೆಯನ್ನು ನೆನಪಿಸಿಕೊಳ್ಳುವಾಗ ತುಂಬಾ ನೆನಪಿಗೆ ಬಂದವರೆಂದರೆ ಇದೇ ಜಯಣ್ಣ ಮೇಷ್ಟ್ರು.ಕೆಲವು ಹಳ್ಳಿಯ ಹುಡುಗರು ಎಷ್ಟು ಮೊಂಡರಿರುತ್ತಾರೆ ಎಂದರೆ ಅವರಿಗೆ ಅಷ್ಟು ಶಿಸ್ತು ಕಲಿಸದಿದ್ದರೆ ಜಪ್ಪಯ್ಯ ಎಂದರೂ ಕಲಿಯುವುದಿಲ್ಲ.ಬರೀ ಹೊಡೆಯುವ ವಿಷಯದಲ್ಲಿ ಜಯಣ್ಣ ಮೇಷ್ಟ್ರು ಕೊಂಚ ಒರಟುತನ ತೋರಿಸುತ್ತಿದ್ದರೆ ವಿನಹ ಪಾಠದಲ್ಲಿ ಮಾತ್ರ ಬಹಳ ಶಿಸ್ತು.ಆ ಶಾಲೆಯಲ್ಲಿ ಓದುವ ಸಮಯದಲ್ಲಿ ಅವರ ದೊಣ್ಣೆಗೆ ಹೆದರಿ ಅವರಿಗೆ ಬಹಳ ಶಾಪ ಹಾಕುತ್ತಿದ್ದುದು ನಿಜ.ಆದರೆ ಒಂದು ಬಾರಿ ಶಾಲೆಯನ್ನು ಬಿಟ್ಟು ಹೊರಗೆ ಬಂದ ಮೇಲೆ ಅದೇ ಜಯಣ್ಣ ಮೇಷ್ಟ್ರು ಯಾಕೋ ಮನಸ್ಸಿನಲ್ಲಿ ತುಂಬಾ ಕಾಡತೊಡಗುತ್ತಾರೆ. ಶಾಲೆ ಬಿಟ್ಟ ಮರುಘಳಿಗೆ ನಮಗನ್ನಿಸುವುದು ಅವರು ಕಲಿಸಿದ ಶಿಸ್ತಿನಿಂದಲೇ ಅಲ್ಲವೇ ಇವೆಲ್ಲ ಸಾಧಿಸಲಿಕ್ಕೆ ಆಗಿದ್ದು ಅಂತ.

ಮೊನ್ನೆ ಮೊನ್ನೆ ಊರಿಗೆ ಹೋಗಿದ್ದಾಗ ನಾನು ಜಯಣ್ಣ ಮೇಷ್ಟ್ರ ಬಗ್ಗೆ ಪ್ರಸ್ತಾಪಿಸಿದಾಗ ಅವರು ಬಹಳ ವರ್ಷಗಳ ಹಿಂದೆಯೇ ಬೇರೆ ಊರಿಗೆ ವರ್ಗವಾಗಿ ಹೋಗಿದ್ದಾರೆ. ಅವರಿಗೆ ಕೊಂಚ ವಯಸ್ಸಾಗಿ ಕಣ್ಣು ಅಷ್ಟೊಂದು ಸರಿಯಾಗಿ ಕಾಣುತ್ತಿಲ್ಲ. ಮುಂಚಿನಷ್ಟು ಹುರುಪಿಲ್ಲ,ಬಹಳ ಸೊರಗಿ ಹೋಗಿದ್ದಾರೆ ಅಂತ ಹೇಳಿದರು. ಯಾಕೋ ಮನಸ್ಸಿಗೆ ಬಹಳ ನೋವಾಯಿತು.
ಕಾಲೇಜಿನ ಬಿಸಿರಕ್ತಗಳ ಸೊಕ್ಕಡಗಿಸಿದ್ದ ಸಾಂಬಶಿವಯ್ಯನವರು ಈಗ ಅದೇ ಕಾಲೇಜಿನ ಪ್ರಿನ್ಸಿಪಾಲರಾಗಿದ್ದಾರೆ ಅಂತ ಕೇಳಿ ಸಂತೋಷವಾಯಿತು.ದೇವರು ಅವರೆಲ್ಲರನ್ನೂ ಚೆನ್ನಾಗಿಟ್ಟಿರಲಿ.

ಖಂಡಿತ ಪ್ರತೀ ಶಾಲೆಯಲ್ಲಿ, ಕಾಲೇಜಿನಲ್ಲಿ ಇಂತಹ ಕೊಂಚ ಶಿಸ್ತಿನ, ಕೋಪಿಷ್ಠ ಆದರೆ ಬದಲಾವಣೆಗೆ ಕಾರಣರಾದ ಗುರುಗಳು ಒಬ್ಬರಾದರು ನಿಮಗೆ ಖಂಡಿತ ಸಿಗುತ್ತಾರೆ. ಈ ಲೇಖನ ಓದುವಾಗ ಖಂಡಿತ ನಿಮಗೆ ಅವರುಗಳ ಚಿತ್ರಪಟ ಮನಸ್ಸಿನಲ್ಲಿ ಮಿಂಚಿ ಮರೆಯಾಗಿರುತ್ತದೆ. ಜೊತೆಗೆ ಮತ್ತೊಮ್ಮೆ ಅವರ ಬಗ್ಗೆ ಗೌರವ ಮೂಡಿರುತ್ತದೆ.
ಹೌದಾ?…ಹಾಗಿದ್ದರೆ ನನ್ನ ಶ್ರಮ ಸಾರ್ಥಕ.

 ನಿಮ್ಮವನು
 ಸಂತು