Tuesday, November 19, 2013

ಪಟಾಕಿ

("ಪಂಜು"ವಿನಲ್ಲಿ ಪ್ರಕಟವಾದ ನನ್ನ ಸಣ್ಣ ಕಥೆ )
(ಚಿತ್ರಕೃಪೆ:Google)
ಅದು ಬೃಹದಾಕಾರವಾಗಿ ಬೆಳೆದ ನಗರದ ಮೂಲೆಯಲ್ಲಿ, ಇನ್ನೂ ತಲೆಯೆತ್ತಿ ನಿಲ್ಲಲೂ ಕಷ್ಟಪಡುತ್ತಿರುವ ಒಂದು ಬಡವರ್ಗದವರ ಏರಿಯಾ. ನಾಲ್ಕು ಗಂಟೆಗೆಲ್ಲ ಎದ್ದು ಕೂಲಿಗೆ ಹೊರಡುವ ಶ್ರಮಜೀವಿಗಳು ಮತ್ತೆ ವಾಪಸ್ಸು ಬರುವುದೇ ಸಂಜೆ ಸೂರ್ಯ ಮುಳುಗುವ ಹೊತ್ತಿಗೆ.

ಮನೆಯೊಳಗೆ ಅಜ್ಜಿಯ ಕೈತುತ್ತು ತಿಂದು ಮಲಗಿದ ಪುಟ್ಟಿ ದೀಪಳಿಗೆ ನಿದ್ರೆ ಬರುತ್ತಿಲ್ಲ. ಅಜ್ಜಿ ನಾಳೆಯ ದಿನ ದೀಪಾವಳಿ ಅಂತ ಹೇಳಿದ್ದಾಳೆ. ಅಪ್ಪ ಹುಟ್ಟಿದಾಗಿನಿಂದ ಇಲ್ಲಿಯವರೆಗೆ ಯಾವತ್ತಿಗೂ ಪಟಾಕಿ ತರುವುದನ್ನು ಮರೆತಿಲ್ಲ. ಯಾವುದಕ್ಕೂ ದುಡ್ಡಿಲ್ಲದಿದ್ದರೂ ಪ್ರತೀ ತಿಂಗಳು ಪಟಾಕಿಗೆಂದೇ ಇಂತಿಷ್ಟು ಅಂತ ಒಂದಷ್ಟು ಚಿಲ್ಲರೆ ಎತ್ತಿಡುತ್ತಿದ್ದ.. ಅಲ್ಲೆಲ್ಲೂ ಪಟಾಕಿ ಮಾರುವ ಅಂಗಡಿಗಳಿರಲಿಲ್ಲ. ಹಬ್ಬ ಶುರುವಾಗುವ ಒಂದು ವಾರದ ಮುಂಚೆಯೇ ಅಪ್ಪ ದೂರದ ಮಾರುಕಟ್ಟೆಗೆ ಹೋಗಿ ಪಟಾಕಿಯನ್ನು ತರುತ್ತಿದ್ದ. ಒಂದು ದಿನ ಹಬ್ಬ ಇರುವಾಗಲೇ ಅಡಿಗೆಯಾದ ಮೇಲೆ ಒಲೆಯಿಂದ ಕೆಂಡವೆಲ್ಲ ತಗೆದು ಆ ಪಟಾಕಿಯ ಪೊಟ್ಟಣವನ್ನು ಇನ್ನೂ ಬಿಸಿಯಿರುತ್ತಿದ್ದ ಅ ಒಲೆಯ ಪಕ್ಕದಲ್ಲಿಟ್ಟು ಬೆಚ್ಚಗೆ ಮಾಡಿಕೊಳ್ಳುತ್ತಿದ್ದರು. ಇದರಿಂದಾಗಿ ಬಹಳಷ್ಟು ಪಟಾಕಿಗಳು ಟುಸ್ ಆಗುತ್ತಿರಲಿಲ್ಲ.
ಪುಟ್ಟಿಯಂತೂ ಹಬ್ಬದ ದಿನ ಅದೆಷ್ಟು ಬೇಗ ಸಂಜೆಯಾಗುವುದೋ ಅಂತ ಕಾಯುತ್ತಿದ್ದಳು. ಅಂದು ಆಕೆಗೆ ಊಟವೇ ಬೇಡ. ಸಂಜೆಯಾದೊಡನೆ ಅಪ್ಪನೊಂದಿಗೆ ಅಂಗಳದಲ್ಲಿ ಪಟಾಕಿ ಸಿಡಿಸಲು ತಯಾರಿ ನಡೆಯುತ್ತಿತ್ತು. ಪೊಟ್ಟಣದೊಳಗಿಂದ ಪಟಾಕಿಯನ್ನು ಒಂದೊಂದಾಗಿ ಅಪ್ಪ ದೀಪಳ ಕೈಗಿಡುತ್ತಿದ್ದ. ಗಂಧದಕಡ್ಡಿಯೊಂದನ್ನು ಹಚ್ಚಿ ಅಂಗಳದಲ್ಲಿ ಪಟಾಕಿಯ ಬತ್ತಿಗೆ ಕಿಡಿ ಸೋಕಿಸಿ ಓಡಿ ಬರುತ್ತಿದ್ದಳು. ಪಟಾಕಿ ಸಿಡಿದ ಖುಷಿಗೆ ಅಪ್ಪನನ್ನು ಅಪ್ಪಿ ಮುದ್ದಾಡುತ್ತಿದ್ದಳು. ಅವಳ ಸಂತೋಷವನ್ನು ನೋಡುತ್ತಿದ್ದ ಅಪ್ಪನಿಗೆ ತನಗಿದ್ದ ಕಷ್ಟಗಳೆಲ್ಲ ಮರೆತು ಹೋಗುತ್ತಿದ್ದವು. ದೀಪಾವಳಿ ಸಮೀಪಿಸುತ್ತಿದ್ದ ದಿನಗಳಲ್ಲಿ ಹುಟ್ಟಿದ್ದಕ್ಕೋ ಏನೋ ಅವಳಿಗೆ ಅಕ್ಕಪಕ್ಕದ ಮನೆಯವರೆಲ್ಲ ಸೇರಿ ದೀಪ ಅಂತಲೇ ಹೆಸರಿಟ್ಟಿದ್ದರು.ಒಂದು ವರ್ಷದ ಮಗುವಾಗಿದ್ದಾಗಲೇ ಅಮ್ಮನನ್ನು ಕಳೆದುಕೊಂಡ ತಬ್ಬಲಿ ದೀಪಳ ಖುಷಿಯೊಂದೇ ಅಪ್ಪನ ಏಕೈಕ ಗುರಿಯಾಗಿತ್ತು. 
ಆದರೆ ಈ ಸಲವೇಕೋ ಹಬ್ಬ ನಾಳೆಯಿದ್ದರೂ ಅಪ್ಪ ಪಟಾಕಿ ತಂದಿರಲಿಲ್ಲ. ಅದರ ಯೋಚನೆಯಲ್ಲಿಯೇ ನಿದ್ರೆ ಹತ್ತಿರ ಸುಳಿದಿರಲಿಲ್ಲ. ಯಾಕೋ ಕೇಳಿಯೇಬಿಡೋಣವೆಂದು ಅಪ್ಪನತ್ತ ತಿರುಗಿದಳು.
 "ಯಾಕೆ ದೀಪು, ನಿದ್ರೆ ಬರ್ತಿಲ್ವಾ ಬಂಗಾರಿ?" ಅಂತ ಅಪ್ಪ ಅಂದ.
ದೀಪ ಹೇಳಿದಳು, "ಇಲ್ಲ ಪಪ್ಪಾ,ಯಾಕೋ ನಿದ್ರೆ ಬರ್ತಿಲ್ಲ.ಆಮೇಲೆ.... ಆಮೇಲೆ... ಏನೋ ಕೇಳಲಾ?"
"ಕೇಳು ಪುಟ್ಟಿ."
"ಯಾಕೆ ಪಪ್ಪಾ, ನಾಳೆ ದೀಪಾವಳಿ ಹಬ್ಬ ತಾನೇ? ಇಷ್ಟು ದಿನ ಒಂದು ವಾರದ ಮುಂಚೆನೇ ಪಟಾಕಿ ತರ್ತಿದ್ದಲ್ವಾ ಈ ಸಲ ಯಾಕೆ ತಂದಿಲ್ಲಾ?"
"ಓಹ್, ಹೌದಲ್ವಾ ಪುಟ್ಟಿ. ಮರೆತುಬಿಟ್ಟೆಕಣವ್ವಾ. ನಾಳೆಗೆ ಹೋಗಿ ಮಾರ್ಕೆಟ್ ಹತ್ರ ಪಟಾಕಿ ತರ್ತೀನಿ "
"ನಿಜವಾಗಲೂ.... ?"
"ಹೂಮ್.... ದೀಪು. ನಿಜವಾಗಲೂ... ಈಗ ಮಲ್ಕೊಳವ್ವಾ" ಅಂತ ಪ್ರೀತಿಯಿಂದ ಹೇಳಿ ದೀಪಳನ್ನು ಎದೆಗೆ ಆತುಕೊಂಡು ತಟ್ಟಲಾರಂಭಿಸಿದ. ನಿಧಾನವಾಗಿ ಮಗುವಿಗೆ ನಿದ್ರೆ ಹತ್ತಿತ್ತು. ಕಿಟಕಿಯಾಚೆ ಮಲಗದ ಮಕ್ಕಳು ಹಬ್ಬದ ಮುಂಚೆಯೇ ಪಟಾಕಿ ಹೊಡೆಯಲು ಶುರು ಮಾಡಿದ್ದರು. ಪ್ರತೀ ಬಾರಿ ಪಟಾಕಿ ಶಬ್ದ ಕೇಳಿದಾಗ ಮನಸ್ಸಿನಲ್ಲಿ ಹೇಳಲಾರದ ಸಂಕಟವೊಂದು ಕಾಡುತ್ತಿತ್ತು.
ನಿಜವಾಗಿಯೂ ಆತ ಪಟಾಕಿ ತರೋದನ್ನು ಮರೆತಿದ್ದನೇ?ಇಲ್ಲ. ಕಮ್ಮಿ ಸಂಬಳಕ್ಕೆ ಕೆಲಸ ಮಾಡಿಸಿಕೊಳ್ಳುತ್ತಿದ್ದ ಗಾರ್ಮೆಂಟ್ ಫ್ಯಾಕ್ಟರಿಯೂ ಮೂರು ತಿಂಗಳ ಹಿಂದೆ ನಷ್ಟದಿಂದಾಗಿ ಬಾಗಿಲು ಮುಚ್ಚಿತ್ತು. ಸಾವಿರಾರು ನೌಕರರು ಕೆಲಸ ಕಳೆದುಕೊಂಡು ಬೀದಿಗೆ ಬರುವಂತಾಯಿತು. ಒಂದು ಹೊತ್ತಿನ ಊಟ ಹುಟ್ಟಿಸಿಕೊಳ್ಳಲೂ ಕಷ್ಟಪಡುವ ದುಸ್ತರ ಪರಿಸ್ಥಿತಿ ಎದುರಾಗಿತ್ತು . ಈತ ಹಾಗೂ ಹೀಗೂ ದಿನಗೂಲಿಗೆ ಹೋಗಿ ಬರುತ್ತಿದ್ದ ದುಡ್ಡಿನಲ್ಲಿ ದಿನದ ಜೀವನ ಮುಂದುವರೆಯುತ್ತಿತ್ತು. ಮನೆಯಲ್ಲಿ ವಯಸ್ಸಾದ ತನ್ನಮ್ಮ ಇದ್ದದ್ದಕ್ಕೆ ಮಗು ದೀಪಳ ಸಾಕುವುದು ಸಮಸ್ಯೆಯಾಗಲಿಲ್ಲ. ಆದರೆ ಕೂಲಿ ಸಿಕ್ಕರೆ ಮಾತ್ರ ಮೂವರಿಗೂ ಊಟಕ್ಕೆ ದಾರಿಯಾಗುತ್ತಿತ್ತು ಅಷ್ಟೇ. ಯಾಕೋ ಜೀವನ ದಿನದಿಂದ ದಿನಕ್ಕೆ ಕಷ್ಟದ ಕೂಪದೊಳಕ್ಕೆ ಬೀಳುತ್ತಿದೆಯಾ ಅನಿಸುತ್ತಿತ್ತು. ತಬ್ಬಲಿ ದೀಪಳ ಸಂತೋಷವೇ ತನ್ನ ಸಂತೋಷ ಅಂತ ಅಂದುಕೊಂಡಿದ್ದವನಿಗೆ  ಈ ಬಾರಿ ಪಟಾಕಿ ತರಲು ಮಾತ್ರ ಬಿಡಿಗಾಸು ಇರಲಿಲ್ಲ. ಜೊತೆಗೆ ದೀಪಾವಳಿ ಹತ್ತಿರ ಬಂದಿದ್ದರಿಂದ ಕೆಲಸಗಳು ನಿಲ್ಲಿಸಿದ್ದರಿಂದ ಈತನಿಗೆ ಕೂಲಿಯೂ ಸಿಗುತ್ತಿರಲಿಲ್ಲ. ಊಟಕ್ಕೇ ಕಷ್ಟವಾಗಿರುವಾಗ ಪಟಾಕಿಯೋ, ಹಬ್ಬಕ್ಕೆ ಸಾಮಾನುಗಳೋ...
"ಮಾದೇಸ್ವರಾ,ಹೇಗಾದರೂ ಮಾಡಿ ನಾಳೆ ಕೂಲಿ ಸಿಗುವ ಹಾಗೆ ಮಾಡಪ್ಪ" ಅಂತ ಪ್ರಾರ್ಥಿಸುತ್ತಾ ಮಲಗಿದವನಿಗೆ ನಿದ್ರೆ ಹತ್ತಿದ್ದೇ ತಿಳಿಯಲಿಲ್ಲ.



------------------------------------------------



ಬೆಳಿಗ್ಗೆ ಎಚ್ಚರವಾಗುವಷ್ಟರಲ್ಲಿ ಎಂಟು ಗಂಟೆ. ಅಪ್ಪ ಎದ್ದು ಕೆಲಸಕ್ಕೆ ಹೊರಟು ಹೋಗಿದ್ದ. ದೀಪಳಿಗೆ ಯಾಕೋ ಮನಸಿಲ್ಲ. ಅಜ್ಜಿ ಒಂದೇ ಸಮನೆ "ಬಾ, ಹಲ್ಲುಜ್ಜು, ಹಾಲು ಕುಡೀವಂತೆ" ಅಂತ ಕೂಗುತ್ತಿದ್ದಾಳೆ. ದೀಪ ಗುಡಿಸಲ ಹೊರಬಂದಳು. ದೂರದಲ್ಲಿ ಒಂದಷ್ಟು ಹುಡುಗರು ಗುಂಪು ಕಟ್ಟಿಕೊಂಡು ಪಟಾಕಿ ಹಿಡಿದುಕೊಂಡಿವೆ. ಹತ್ತಿರ ಹೋಗಿ ನೋಡಿದಳು. ಅದೊಂಥರಾ ಲಾಟರಿ ಇದ್ದ ಹಾಗೆ. ಒಂದು ಪುಟ್ಟ  ಮೇಜಿನ ಮೇಲೆ ಒಂದರಿಂದ ನೂರರವರೆಗೆ ಸಂಖ್ಯೆಗಳನ್ನು ಬರೆದು ಅವುಗಳ ಮೇಲೆ ಒಂದೊಂದು ವಿವಿಧ ರೀತಿಯ ಪಟಾಕಿಗಳನ್ನು ಇಡಲಾಗಿದೆ. ಕೆಲವು ಸಂಖ್ಯೆಗಳ ಮೇಲೆ ಏನೂ ಇಲ್ಲ. ಒಂದು ಡಬ್ಬದಲ್ಲಿ ಒಂದರಿಂದ ನೂರರವರೆಗೆ ಬರೆದ ಚೀಟಿಗಳನ್ನು ಹಾಕಲಾಗಿದೆ. ಒಂದು ರೂಪಾಯಿ ಕೊಟ್ಟರೆ ಆ ಹುಡುಗ ಡಬ್ಬವನ್ನು ಅಲ್ಲಾಡಿಸಿ ಮುಂದೆ ಹಿಡಿಯುತ್ತಾನೆ. ಯಾವುದಾದರೊಂದು ಚೀಟಿಯನ್ನು ಆರಿಸಿ ಬಂದ ಸಂಖ್ಯೆ ನೋಡಬೇಕು. ಆ ಸಂಖ್ಯೆಯಲ್ಲಿ ಯಾವುದಾದರೂ ಪಟಾಕಿಯಿದ್ದರೆ ಮಾತ್ರ ಅದು ಸಿಗುತ್ತದೆ. ಇಲ್ಲದಿದ್ದರೆ ಏನೂ ಇಲ್ಲ.

ಇದನ್ನು ತಿಳಿದು ಮತ್ತೆ ಮನೆಯೊಳಗೆ ಓಡಿದ ದೀಪ ಅಜ್ಜಿಯ ಬಳಿ ಒಂದು ರೂಪಾಯಿ ಕೇಳಿದಳು. ಅಜ್ಜಿ ಕೊಡಲಿಲ್ಲ. ದೀಪ ಅಳುತ್ತ ಕುಳಿತಾಗ ಸೆರಗಂಚಿನಿಂದ ಕಟ್ಟಿಟ್ಟಿದ್ದ ಒಂದು ರೂಪಾಯಿಯ ನಾಣ್ಯವನ್ನು ಕೊಟ್ಟಳು. ಒಂದೇ ಉಸಿರಿಗೆ ಆ ಪಟಾಕಿಯ ಹುಡುಗನ ಬಳಿ ಓಡಿದ ದೀಪ ಒಂದು ರೂಪಾಯಿಯನ್ನು ಆತನ ಕೈಗಿಟ್ಟಳು. ಆತ ಡಬ್ಬವನ್ನು ಅಲ್ಲಾಡಿಸಿ ಕೊಟ್ಟಾಗ ಎತ್ತಿದ ಚೀಟಿಯಲ್ಲಿದ್ದ ನಂಬರಿಗೆ ಯಾವುದೇ ಪಟಾಕಿ ಬಂದಿರಲಿಲ್ಲ. ಮತ್ತೆ ಅಳುತ್ತಾ ಮನೆಯೊಳಗೆ ಬಂದು ಪೆಚ್ಚು ಮೋರೆಯಲ್ಲಿ ಕುಳಿತಳು. ಆ ದಿನ ಊಟವನ್ನೂ ಸರಿಯಾಗಿ ಮಾಡಲಿಲ್ಲ.
ಅಜ್ಜಿಯ ಒತ್ತಾಯಕ್ಕಷ್ಟೇ ಒಂದೆರಡು ತುತ್ತು ತಿಂದಳು.
------------------------------------------------------------


ಸೂರ್ಯ ಇನ್ನೇನು ಮುಳುಗುವುದರಲ್ಲಿದ್ದ. ಕಾಯುತ್ತ ಕುಳಿತಿದ್ದ ದೀಪಳಿಗೆ ದೂರದಲ್ಲಿ ಅಪ್ಪ ಬರುವುದು ಕಾಣಿಸಿತು. ಏನಾಶ್ಚರ್ಯ, ಅವನ ಕೈಯಲ್ಲಿ ಪಟಾಕಿಯ ದೊಡ್ಡ ಬ್ಯಾಗು. ಓಡಿ ಹೋಗಿ ಅಪ್ಪನನ್ನು ತಬ್ಬಿ ಮುದ್ದಾಡಿದಳು. ಕೆನ್ನೆಗೊಂದು ಮುತ್ತ ಕೊಟ್ಟು ತನಗೆಷ್ಟು ನೀನು ಇಷ್ಟ ಅಂತ ಹೇಳಿದಳು. ಅವಳ ಕಣ್ಣುಗಳಲ್ಲಿನ ಹೊಳಪು ಕಂಡ ಅಪ್ಪನಿಗೆ ಹಾಲು ಕುಡಿದಷ್ಟು ಸಂತೋಷ.
ದೀಪಳ ಕೈಗೆ ನೂರು ರೂಪಾಯಿ ಕೊಟ್ಟು, "ಹೋಗು ಮಗಳೇ ಅಂಗಡಿಯಲ್ಲಿ ಅಕ್ಕಿ,ಬೇಳೆ ಕೊಂಡು ತಾ, ಊಟ ಮಾಡಿದ ಆಮೇಲೆ ಪಟಾಕಿ ಹೊಡೆಯುವಿಯಂತೆ" ಎಂದು ಹೇಳಿದ. ಖುಷಿಯಲ್ಲೇ ಮಗಳು ಅಂಗಡಿಯತ್ತ ಓಡಿದಳು.
ನಂತರ ತನ್ನ ಅಮ್ಮನಿಗೆ ಹೇಳಿದ.
"ಅವ್ವಾ, ಬೇಗ ಅಡುಗೆ ಮಾಡಿ ಅವಳಿಗೆ ತಿನ್ನಿಸು. ನೀನೂ ಊಟ ಮಾಡು. ಆಮೇಲೆ ಅವಳ ಕೂಡ ಪಟಾಕಿ ಹೊಡಿ"
ಆಕೆ ಕೇಳಿದಳು,"ಏನಪ್ಪಾ, ಇವತ್ತು ದೇವರ ದಯೆ, ಕೂಲಿ ಕೆಲಸ ಸಿಕ್ತಾ?"
ಈತ,"ಇಲ್ಲ ಕಣವ್ವಾ. ನಮ್ಮ ಗ್ರಹಚಾರ ನೆಟ್ಟಗಿಲ್ಲ. ಕೂಲಿ ಇವತ್ತೂ ಸಿಗಲಿಲ್ಲ"
ಅವ್ವ, "ಹಂಗಾದ್ರೆ, ಈ ಪಟಾಕಿ, ದುಡ್ಡೆಲ್ಲ ......."
ಈತ, "ಹ್ಞೂ ಕಣವ್ವಾ, ಕೆಲ್ಸಾ ಸಿಕ್ದೇ ಬೇಜಾರಾಗಿ ಒಂದ್ ಕಡೆ ಕೂತ್ಕಂಡ್ ಯೋಚ್ನೆ ಮಾಡ್ತಿದ್ದೆ. ಅಲ್ಲೊಂದ್ ಕಡೆ ರಕ್ತದಾನ ನಡೀತಿತ್ತು. ಒಂದ್ ಬಾಟಲಿ ರಕ್ತ ಕೊಟ್ರೆ ಐನೂರು ರೂಪಾಯಿ ಕೊಡ್ತಿದ್ರು, ರಕ್ತ ತಾನೇ. ಇವತ್ತು ಕೊಟ್ರೆ ನಾಳೆಗೆ ಮತ್ತೆ ಬತ್ತದೆ. ಈ ದೀಪಾವಳಿ ದಿನ ನನ್ ಮಗಳು ದೀಪನ್ ಮುಖದಲ್ಲಿ ಬರೋ ಸಂತೋಷನ ತಪ್ಪುಸ್ಕೊಂಡ್ರೆ ಮತ್ತೆ ಅದನ್ನ ನೋಡೋಕೆ ಇನ್ನೊಂದ್ ವರ್ಷ ಕಾಯಬೇಕು.... ಅದಕ್ಕೇ... ರಕ್ತ ಕೊಟ್ಟು ಬಂದೆ.... ಸರಿ... ಡಾಕ್ಟ್ರು ಮಲ್ಕೊಂಡು ಚೆನ್ನಾಗಿ ನಿದ್ರೆ ಮಾಡ್ಬೇಕು ಅಂತ ಹೇಳವ್ರೆ. ಮಲ್ಕೊತೀನಿ. ದೀಪುಗೆ ಊಟ ಮಾಡ್ಸು" ಅಂತ ಹೇಳಿ ಮಲಗಿದ.
ಅವ್ವನ ಕಣ್ಣಂಚಿನಲ್ಲಿ ಹನಿಯಿತ್ತು.........!

Sunday, July 21, 2013

ಮೂಕ ಕರು

"ಪಂಜು" ವಾರಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ:

(http://www.panjumagazine.com/?p=3203)

"ಲೋ ಮಗಾ, ಬಿಸಿಲು ನೆತ್ತಿಗೇರ್ತಾ ಅದೆ, ಕರಾನ ಜಮೀನ್ ತಾವ ಹೊಡ್ಕಂಡ್ ಹೋಗಿ ಮರಕ್ ಕಟ್ಟಾಕಿ ಮೇಯಕ್ ಬುಡು. ಹಾಂ… ಹೋಗಕ್ ಉಂಚೆ ಮನೆತಾವ್ ಒಸಿ ನೀರು ಕುಡುಸ್ಬುಡು. ಬರದ್ ಹೊತ್ತಾಗ್ಬೋದು. ಇಸ್ಕೂಲಿಂದ ಬಂದ್ ಮ್ಯಾಕೆ ಮತ್ತೆ ಹೊಡ್ಕಂಡ್ ಬಂದ್ ಕೊಟ್ಟಿಗೇಲಿ ಕಟ್ಟಾಕ್ ಬುಡು. ಮರಿಬ್ಯಾಡ" ಪೇಟೆಗೆ ಹೊರಟಿದ್ದ ನಮ್ಮಪ್ಪ ಕೂಗಿ ಹೇಳಿದರು. ಒಲ್ಲದ ಮನಸ್ಸಿಂದ ನಾ "ಹೂಂ…..ಸರಿ" ಅಂದಿದ್ದು ಅಪ್ಪಂಗೆ ಕೇಳಿಸಲೇ ಇಲ್ಲ. 
ನಮ್ಮದೊಂದು ಚಿಕ್ಕ ಹಳ್ಳಿ. ನಮ್ಮ ಜಮೀನಿದ್ದದ್ದು ಹಳ್ಳಿಯಿಂದ ಹೊರಗೆ. ಮೂರು ಮೈಲಿ ನಡೀಬೇಕು. ಒಂದು ಬೆಳೆ ಮುಗಿದು ಇನ್ನೊಂದು ಬೆಳೆಗೆ ಜಮೀನು ಸಿದ್ಧವಾಗುತ್ತಿದ್ದ ಸಮಯ. ಆದ್ದರಿಂದ ತೆಕ್ಕಲು ಬಿದ್ದಿದ್ದ ಜಮೀನಿನಲ್ಲಿ ಉಳಿದುಕೊಂಡ ಅಷ್ಟಿಷ್ಟು ಮೇವನ್ನು ತಿನ್ನಲು ನಮ್ಮ ಮನೆಯ ಹಸುಕರುಗಳನ್ನೇ ಬಿಡುತ್ತಿದ್ದೆವು. ನನಗೋ ಮುಂಚಿನಿಂದಲೂ ಈ ಬೇಸಿಗೆ, ಹಸು ಕರು, ವ್ಯವಸಾಯ, ಅದರಿಂದ ಬರೋ ಸ್ವಲ್ಪ ಕಾಸು ಇವೆಲ್ಲ ಕೊಂಚವೂ ಇಷ್ಟವಾಗದ ವಿಷಯಗಳು. ಆದರೂ ಅಪ್ಪ ಕೆಲಸಕ್ಕೆ ಅಂತ ಕರೆದಾಗ ಅಂಜಿಕೆಯಿಂದ ಕೆಲಸಕ್ಕೆ ಬರಲಾರೆ ಅನ್ನುವಂತಿಲ್ಲ. ಆದರೂ ಹಲವಾರು ಬಾರಿ ಶಾಲೆ, ಪರೀಕ್ಷೆ, ತಲೆನೋವು, ಮನೆಪಾಠ ಅಂತ ಏನೇನೋ ನೆಪವೊಡ್ಡಿ  ಅಪ್ಪ ಹೇಳುವ ಕೆಲಸದಿಂದ ತಪ್ಪಿಸಿಕೊಂಡು ಬಿಡುತ್ತಿದ್ದೆ.
 
ಇವತ್ತೂ ಅಪ್ಪ ಯಾವುದೋ ಕಾರ್ಯದ ನಿಮಿತ್ತ ಪಕ್ಕದ ಪೇಟೆಗೆ ತೆರಳಿದ್ದರು. ತಾವು ಕರುವನ್ನು ಜಮೀನಿನ ಬಳಿ ಹೊಡೆದುಕೊಂಡು ಹೋಗಿ ಅಲ್ಲಿ ಮೇಯಲು ಬಿಟ್ಟು ನಂತರ ಪೇಟೆಗೆ ಹೊರಟಿದ್ದರೆ ಅದು ಸಾಧ್ಯವಾಗದ ಮಾತು. ಏಕೆಂದರೆ ಬೆಳಗಿನ ಬಸ್ಸನ್ನು ಬಿಟ್ಟರೆ ನಂತರದ್ದು ಮಧ್ಯಾಹ್ನವೇ. ಅದಕ್ಕಾಗಿ ಶಾಲೆಗೇ ಹೊರಡುವ ಮುಂಚೆ ನನ್ನನ್ನೇ ಕರುವನ್ನು ಜಮೀನಿಗೆ ಮೇಯಲು ಬಿಟ್ಟು ಬರುವಂತೆ ಹೇಳಿ ಹೋಗಿದ್ದರು. ಒಲ್ಲದ ಮನಸ್ಸಿನಿಂದಲೇ ನೀರು ಕುಡಿಸಿ ಕರುವನ್ನು ಬೇಗನೆ ಓಡಿಸಿಕೊಂಡು ಜಮೀನಿಗೆ ಹೋಗಿದ್ದೆ. ಬೆಳೆ ಮುಗಿದ ಜಮೀನಿನಲ್ಲಿ ಹಸಿರು ಹುಲ್ಲು ಬೆಳೆದು ನಿಂತಿರುತ್ತದೆ. ಜಮೀನಿನ ಒಳಗೆ ಒಂದು ತೆರೆದ ಬಾವಿಯಿದೆ. ಅದನ್ನು ತೋಡಿ ಅದೆಷ್ಟು ವರ್ಷಗಳಾಗಿವೆಯೋ ನಾ ಕಾಣೆ. ಆದರೆ ಅದು ಇದುವರೆಗೂ ಎಂತಹ ಬರವಿದ್ದ ಸಮಯದಲ್ಲೂ ಬತ್ತಿಲ್ಲವೆಂಬುದು ಊರ ಜನರು ಹೇಳುವ ಮಾತು. ಆ ಬಾವಿಯ ನೀರು ಬಹಳ ರುಚಿ. ಅ ನೀರು ಕನ್ನಡಿಯಷ್ಟೇ ಪರಿಶುದ್ಧ. ಬಗ್ಗಿ ನೋಡಿ ನಮ್ಮ ಮುಖದ ಪ್ರತಿಬಿಂಬ ನೋಡಿಕೊಳ್ಳಬಹುದು.  ಆ ಬಾವಿಗೆ ಹೊಂದಿಕೊಂಡಂತೆ ಐದಾರು ಹೆಜ್ಜೆ ದೂರದಲ್ಲಿ ಬಹಳ ಎತ್ತರಕ್ಕೆ ಬೆಳೆದ ತೆಂಗಿನಮರವೊಂದಿದೆ. ಅದರ ಸುತ್ತ ಹುಲ್ಲು ಯಥೇಚ್ಛವಾಗಿ ಬೆಳೆದಿದೆ. ಅಪ್ಪನೇನಾದರೂ ಮೇಯಿಸಲು ಬಂದರೆ ಎಲ್ಲ ದನಕರುಗಳನ್ನೂ ಸುಮ್ಮನೆ ಅವುಗಳ ಇಚ್ಛೆಯಂತೆ ಜಮೀನಿನಲ್ಲಿ ಮೇಯಲು ಬಿಡುತ್ತಾನೆ. ಅವು ದಿನಪೂರ್ತಿ ಹೊಟ್ಟೆತುಂಬ ಮೇಯ್ದ ನಂತರ ಆ ಬಾವಿಯ ಪಕ್ಕದ ತೊಟ್ಟಿಯಲ್ಲಿ ತುಂಬಿದ ನೀರನ್ನು ಕುಡಿಸಿ ಮನೆಗೆ ಹಿಂತಿರುಗುತ್ತಾನೆ. ನಾನು ಬರೇ ಕರುವನ್ನು ಕರೆತಂದರೆ ಆ ಬಾವಿಯ ಪಕ್ಕದಲ್ಲಿಯ ತೆಂಗಿನ ಮರಕ್ಕೆ ಕಟ್ಟಿಹಾಕಿ ಹಗ್ಗವನ್ನು ಕೊಂಚ ಉದ್ದವಾಗಿಯೇ ಬಿಟ್ಟು ಮನೆ ಕಡೆ ಹೊರಟುಬಿಡುತ್ತೇನೆ. ಆ ಹಗ್ಗದ ಉದ್ದಕ್ಕೆ ಎಷ್ಟು ಸ್ಥಳವನ್ನು ಆ ಕರು ತಲುಪಬಲ್ಲುದೋ ಅಲ್ಲಿಯವರೆಗೆ ಅದು ಹುಲ್ಲು ಮೇಯ್ದಿರುತ್ತದೆ.  ಸಂಜೆ ಶಾಲೆ ಮುಗಿದ ಮೇಲೆ ಜಮೀನಿಗೆ ಬಂದು ಕರುವಿಗೆ ನೀರು ಕುಡಿಸಿ ಮತ್ತೆ ಮನೆ ಕಡೆ ಕರೆದುತರಬೇಕು.
 

 
ಕರುವನ್ನು ಜಮೀನಿನಲ್ಲಿ ಮೇಯಲಿಕ್ಕೆ ಕಟ್ಟಿಹಾಕಿ ಶಾಲೆಗೇ ಹೋದ ನಾನು ಅದನ್ನು ಮರೆತೇಬಿಟ್ಟಿದ್ದೆ. ದಿನದ ಕೊನೆಯ ಪಿರಿಯಡ್ ಆಟವಾಡುವುದಕ್ಕೆ ಬಿಟ್ಟಿದ್ದರಿಂದ ಶಾಲೆಯ ಸಮಯ ಮುಗಿದ ಮೇಲೂ ಆಟವನ್ನು ಮುಂದುವರೆಸಿದ್ದೆವು. ಸಂಜೆ ಏಳಾಯಿತು, ಎಂಟಾಯಿತು. ಕತ್ತಲಾದ್ದರಿಂದ ಶಾಲೆಯ ಹತ್ತಿರದಲ್ಲೇ ಇದ್ದ ಸುನೀಲನ ಮನೆಗೆ ಹೋಗಿ ಅವರಮ್ಮ ಕೊಟ್ಟ ಕಾಫೀ ಹೀರುತ್ತಾ ಮನೆಪಾಠದ ನೆಪದಲ್ಲಿ ಹರಟೆ ಹೊಡೆಯುತ್ತ ಕುಳಿತುಬಿಟ್ಟೆವು.
 
ಸರಿಯಾಗೇ ಎಂಟು ಘಂಟೆಯ ಬಸ್ಸಿಗೆ ಪೇಟೆಗೆ ಹೋಗಿದ್ದ ಅಪ್ಪ ಮನೆಗೆ ಬಂದರು. ಬಂದವರೇ ಮೊದಲು ನೋಡಿದ್ದು ಕೊಟ್ಟಿಗೆಯಲ್ಲಿ ಕರುವಿದೆಯಾ ಅಂತ. ಅಮ್ಮನನ್ನು ವಿಚಾರಿಸಿದಾಗ "ಅವ್ನು ಇಸ್ಕೂಲಿಂದ ಇನ್ನೂ ಬಂದಿಲ್ಲ ಕಣ, ನೋಡಿ" ಅಂದರು. ಅಪ್ಪ "ಅವನ್ ಎಲ್ ಒಯ್ತನೆ, ಬೊಡ್ಡಿಕೂಸು?!. ಕರಾನ ಜಮೀನಲ್ಲಿ ಕಟ್ಟಾಕಿ ಎಲ್ಲೋ ಇಸ್ಕೂಲ್ ಮುಗಿಸ್ಕಂಡವ ಊರ್ ತಿರ್ಗಕ್ ಹೋಗಿರಬೇಕು, ಅವನು ಅಟ್ಟಿಗ್ ಬರಲಿ. ಇವತ್ತು ಹುಟ್ನಿಲ್ಲ ಅಂತ ಅನ್ನುಸ್ಬುಡ್ತೀನಿ " ಅಂತ ಟಾರ್ಚನ್ನು ಕೈಲಿ ಹಿಡಿದವರೇ ಬಿರಬಿರನೆ ಹೆಜ್ಜೆ ಹಾಕುತ್ತಾ ಜಮೀನಿನ ಕಡೆ ನಡೆದರು. ಹಳ್ಳಿಯ ಮಾಮೂಲಿ ಹಣೆಬರಹ. ಆರು ಘಂಟೆಗೆಲ್ಲ ಕರೆಂಟು ತೆಗೆದಿದ್ದರು. ಇಡೀ ಹಳ್ಳಿಯೇ ಕತ್ತಲಲ್ಲಿ ಮಲಗಿತ್ತು. ಅಲ್ಲೊಬ್ಬರು ಇಲ್ಲೊಬ್ಬರು ಹೆಂಡ ಕುಡಿದು ರಸ್ತೆಯಲ್ಲಿ ಅಡ್ಡವಾಗಿ ಸಿಗುತ್ತಿದ್ದರು.
 
ತಣ್ಣನೆಯ ಗಾಳಿ ಬೀಸುತ್ತಲಿದೆ. ಇದ್ದಕ್ಕಿದ್ದಂತೆ ಗಾಳಿಯ ಆರ್ಭಟ ಶುರುವಾಯಿತು. ಮರಗಳು ಜೋರಾಗಿ ಆಡಲಾರಂಭಿಸಿದವು.ಆಕಾಶದಲ್ಲಿ ಮಿಂಚು.  ಮಳೆ ಬರುವ ಸೂಚನೆ. ಅಪ್ಪ ಕೊಡೆ ತರಲು ಮರೆತ ತನ್ನನ್ನು ತಾನು "ಛೇ" ಅಂತ ಬೈದುಕೊಳ್ಳುತ್ತಾ ಬೇಗನೆ ಹೆಜ್ಜೆ ಹಾಕತೊಡಗಿದರು. ಹೊರಟು ಐದು ನಿಮಿಷವಾಗಿಲ್ಲ. ಹನಿಗಳು ಚಟಪಟ ಅಂತ ಬೀಳಲಾರಂಭಿಸಿದವು. "ಚಡೀ………. ಲ್" ಅಂತ ಗುಡುಗಿದ್ದು ಒಮ್ಮೆ ತಮ್ಮ ಪಕ್ಕದಲ್ಲೇ ದೊಡ್ಡ ಬಂಡೆಯೊಂದನ್ನು ಎತ್ತಿ ಯಾರೋ ಪಕ್ಕದಲ್ಲೇ ನಿಂತು ತಲೆಯ ಮೇಲೆ ಹಾಕಿದಂತೆ ಭಾಸವಾಯಿತು. ಕಿವಿ ತಮಟೆ ಹೊಡೆಯುವುದೊಂದು ಬಾಕಿ. ಆಗ ಶುರುವಾಯಿತು ನೋಡಿ, ಕುಂಭದ್ರೋಣ ಮಳೆ. ಆಕಾಶಕ್ಕೇ ಯಾರೋ ರಂಧ್ರ ಕೊರೆದಂತೆ. ಅಷ್ಟು ಹೊತ್ತಿಗಾಗಲೇ ಮೈಮೇಲಿದ್ದ ಬಟ್ಟೆಗಳೆಲ್ಲ ಒದ್ದೆಯಾಗಿ  ಮೈಗೆಲ್ಲ ಸ್ನಾನವಾಗಿತ್ತು. ಕೈಲಿದ್ದ ಟಾರ್ಚಿನ ಬೆಳಕು ಬಹುದೂರ ಸಾಗುತ್ತಿರಲಿಲ್ಲ. ಈ ಮಳೆಗೂ ಆ ಕತ್ತಲೆಗೂ ಆ ಬಡಪಾಯಿ ಪುಟ್ಟ ಕರುವಿನ ಸ್ಥಿತಿ ಹೇಗಾಗಬೇಡ? ಹೇಗಾದರೂ ಮಾಡಿ ಬೇಗಬೇಗನೆ ಕರುವನ್ನು ಮನೆಗೆ ತಲುಪಿಸಬೇಕು ಅಂದುಕೊಳ್ಳುತ್ತಾ ಆ ಮಳೆಯನ್ನೂ ಲೆಕ್ಕಿಸದೇ ಜಮೀನಿನ ಕಡೆಗೆ ಹೆಜ್ಜೆ ಹಾಕತೊಡಗಿದರು.
 
ಅದು ಊರ ಹೊರಭಾಗವಾದ್ದರಿಂದ ಜಮೀನಿನ ಹತ್ತಿರ ಯಾವುದೇ ಮನೆಗಳಿಲ್ಲ. ಆ ಮಳೆಗೂ, ಕಾಲಿಗೆ ತಾಕುವ ಆ ಚಿಕ್ಕಪುಟ್ಟ ಗಿಡಗಳು, ಮೊಳಕಾಲುದ್ದ ಹರಿಯುತ್ತಿರುವ ನೀರು, ನಂತರ ಜಮೀನಿನ ಒಳಗೆ ಕಾಲಿಟ್ಟಾಗ ಮೊದಲೇ ಮಣ್ಣಿದ್ದ ನೆಲಕ್ಕೆ ನೀರು ಬಿದ್ದು ಅಂಟುವ ಆ ಕೆಸರಿಗೂ ಬೇಗ ಬೇಗ ನಡೆಯಲು ಕೊಂಚ ಕಷ್ಟವಾಗುತ್ತಿತ್ತು. ಜಮೀನು ಹತ್ತಿರ ಬಂತು. ದೂರದಿಂದಲೇ ಒಡೆಯನನ್ನು ಕಂಡ ಆ ಕರು "ಅಂಬಾ" ಎಂದು ಕೂಗಿಕೊಳ್ಳಲಾರಂಭಿಸಿತು. ಆ ತೆಂಗಿನಮರದ ಬಳಿ ಹೋದವರೇ ಊರುಗುಣಿಕೆಯನ್ನು ಬಿಚ್ಚಿದರು. ಈಗ ಕರುವಿಗೆ ಕೊಂಚ ನಿರಾಳವಾಯಿತು. ಕರು ಮರದ ಅತ್ತ ಬದಿಯಲ್ಲಿ, ಅಪ್ಪ ಇತ್ತ ಬದಿಯಲ್ಲಿ. ಪೂರ್ಣ ಸಂಪೂರ್ಣ ಕತ್ತಲು. ಆಗಲೇ ಆಗಿದ್ದು ಎಡವಟ್ಟು. ಟಾರ್ಚನ್ನು ಒಂದು ಕೈಲಿ ಹಿಡಿದುಕೊಂಡೇ ಕರುವಿನ ಹಗ್ಗವನ್ನು ಹಿಡಿಯುವ ಭರದಲ್ಲಿ ಟಾರ್ಚ್ ಅಲುಗಾಡಿದ್ದರಿಂದ ಅತ್ತಲಿದ್ದ ಕರುವಿಗೆ ಮರದ ನೆರಳಿನಾಕೃತಿ  ಅಲುಗಾಡಿದಂತೆ ಕಂಡಿತು! ಇದ್ದಕ್ಕಿದ್ದಂತೆ ಮರ ಅಲುಗಾಡಿದಂತೆ ಕಂಡದ್ದರಿಂದ ಆ ಕರುವಿಗೆ ಗಾಬರಿಯಾಗಿ ದಿಕ್ಕೆಟ್ಟು ಹಿಂದಕ್ಕೆ ಓಡಿತು.
 
ಎರಡೇ ಕ್ಷಣ. ಅಪ್ಪನ ಎದೆ ಝಲ್ಲೆಂದಿತು. ದಿಕ್ಕೆಟ್ಟು ಹಿಂದಕ್ಕೆ ಜಿಗಿದ ಕರು ಹಗ್ಗದ ಸಮೇತ ನಲವತ್ತು ಅಡಿ ಆಳದ ತೆರೆದ ಬಾವಿಗೆ "ದುಡುಂ…. "ಎಂಬ ಶಬ್ದದೊಡನೆ ಬಿದ್ದಿತ್ತು. ಅಪ್ಪ ಒಂದೇ ಕ್ಷಣದಲ್ಲಿ ಆದ ಈ ಅನಾಹುತಕ್ಕೆ ಶಾಕ್ ಆದರೂ ತಕ್ಷಣವೇ ಹೆಚ್ಚು ಕಾಲ ಯೋಚಿಸದೇ ಟಾರ್ಚನ್ನು ಕೈಯಲ್ಲಿ ಗಟ್ಟಿ ಹಿಡಿದು ಬಾವಿಯ ಅಂಚಿನಲ್ಲಿ ನಿಂತು ಒಳಗೆ ಬೆಳಕು ಬಿಟ್ಟರು. ಟಾರ್ಚಿನ ಬೆಳಕು ಪೂರ್ತಿ ಒಳಗೆ ಹೋಗಲಿಲ್ಲ. ಬಾವಿಯ ಒಳಗಿಂದ ಸ್ವಲ್ಪ ಶಬ್ದವೂ ಬರುತ್ತಿಲ್ಲ. ರಾಡಿಯಾಗಿದ್ದ ಚಪ್ಪಲಿಯನ್ನು ಕಾಲಿಂದಲೇ ಎತ್ತಿ ಬಿಸಾಕಿದವರೇ ಬಾವಿಯ ಒಂದು ಮೂಲೆಯ  ಹೋಗಿ ಅಲ್ಲಿದ್ದ ಮೆಟ್ಟಿಲನ್ನು ನಿಧಾನವಾಗಿ ಒಂದೊಂದಾಗೇ ಇಳಿಯತೊಡಗಿದರು. ಮೆಟ್ಟಿಲನ್ನು ಇತ್ತೀಚಿಗೆ ಉಪಯೋಗಿಸದ ಕಾರಣ ಮಣ್ಣೆಲ್ಲ ಒಂದು ಬದಿಗಿದ್ದು ಕಾಲಿಟ್ಟರೆ ಮಳೆಯ ನೀರಿನಿಂದಾಗಿ ಜರ್ರನೆ ಜಾರುತ್ತಿತ್ತು. ಬೇರೆ ದಾರಿಯೇ ಇಲ್ಲ. ಕರುವನ್ನು ಬದುಕಿಸಿಕೊಳ್ಳಲೇಬೇಕು. ತನಗೆ ಈಜು ಬರುವುದಿಲ್ಲ!! ಆದರೂ ಇನ್ನೊಂದು ಜೀವದ ಬೆಲೆ ತನಗೆ ಗೊತ್ತು. ಈ ಜಗತ್ತಿನ ಯಾವ ಪ್ರಾಣಿ ಪಕ್ಷಿ ಸಂಕುಲದ್ದಾಗಲಿ ಜೀವವೆಂದರೆ ಜೀವ ತಾನೇ? ಮನುಷ್ಯರು ಜೀವ ಉಳಿಸಿಕೊಳ್ಳುವ ಸಲುವಾಗಿ ಮಾತಿನಲ್ಲೇ ಯಾವ ತರಹದ ಸುಳ್ಳು, ಹಣ, ಹಲವಾರು ಆಮಿಷವೊಡ್ಡಬಲ್ಲರು. ಪಾಪ ಅವಾದರೋ ಮೂಕಪ್ರಾಣಿಗಳು. ಹೇಗೆ ತಾನೇ ತಮ್ಮ ದುಗುಡವನ್ನು ಹೇಳಿಕೊಂಡಾವು?
 
ನೀರಿನ ಮಟ್ಟದ ಮೇಲಿನ ಕೊನೆಯ ಮೆಟ್ಟಿಲಂತೂ ಸರಿಯಾಗಿ ಕಾಣುತ್ತಲೇ ಇಲ್ಲ. ಮೇಲೆ ಸುರಿಯುತ್ತಿರುವ ಮಳೆಯ ಪರಿಣಾಮ ನೀರು ಝರಿಯಂತೆ ಮೆಟ್ಟಿಲುಗಳ ಮೂಲಕ ಒಳ ನುಗ್ಗುತ್ತಿದೆ. ನಿಧಾನವಾಗಿ ಕೊನೆಯ ಮೆಟ್ಟಿಲ ಮೇಲೆ ಒಂದೇ ಕಾಲಿಟ್ಟರು. ಸರ್ರನೆ ಜಾರಿತು. ತಕ್ಷಣ ಸಮತೋಲನ ಕಾಯ್ದುಕೊಂಡವರೇ ನಿಧಾನವಾಗಿ ಕೊನೆಯ ಮೆಟ್ಟಿಲ ಮೇಲೆ ತಳವೂರಿ ಕುಳಿತುಬಿಟ್ಟರು. ಆಗ ಮುಂದಿನ ನೀರಿನಲ್ಲಿ ಈಜುತ್ತಾ ತನ್ನತ್ತ ಏನೋ ಬಂದಂತಾಯ್ತು. ಅದೇ ಕ್ಷಣಕ್ಕೆ ಮಿಂಚೊಂದು ಫಳ್ಳನೆ ಹೊಳೆದು ಮರೆಯಾಯಿತು. ಹೌದು ಅದು ತನ್ನದೇ ಮುದ್ದಿನ ಕರು. ಅದನ್ನು ಹಿಡಿದುಕೊಳ್ಳಲು ಮುಂದೆ ಬಾಗಿದರೂ ಅದು ಕೈಗೆ ಸಿಗಲಿಲ್ಲ . ಅಪ್ಪಿ ತಪ್ಪಿ ಬಿದ್ದರೆ ಕರುವಿನ ಜೊತೆ ತಾನೂ ಇಹಲೋಕ ತ್ಯಜಿಸಬೇಕಾಗುತ್ತದೆ. ಮಲೆಮಹದೇಶ್ವರನನ್ನು ಮನದಲ್ಲಿಯೇ ನೆನೆದು ಮತ್ತೊಮ್ಮೆ ತನ್ನ ಶಕ್ತಿಯನ್ನೆಲ್ಲ ಬಳಸಿ ಅದು ತನ್ನತ್ತ ಬರುವುದನ್ನೇ ಕಾಯ್ದು ಒಮ್ಮೆಗೇ ಅದರ ಮೂಗುದಾರವನ್ನು ಹಿಡಿದುಕೊಂಡು ಬಿಟ್ಟರು. ಅಷ್ಟು ಹೊತ್ತು ಕಾಲಿಗೆ ಯಾವುದೇ ಆಧಾರ ಸಿಗದೆ ಈಜಾಡುತ್ತ ತನ್ನ ಪ್ರಾಣವನ್ನು ಕೈಲಿ ಹಿಡಿದುಕೊಂಡಿದ್ದ ಮುದ್ದಿನ ಕರು ಜೋರಾಗಿ ನಿಟ್ಟುಸಿರು ಬಿಟ್ಟಿತು. ಆದರೆ ಇತ್ತ ಆ ಜಾಗದಲ್ಲಿ ಕುಳಿತೇ ಆ ಕರುವಿನ ಮೂಗುದಾರವನ್ನು ಹಿಡಿದು ಅದು ಮುಳುಗದಂತೆ ತೇಲಿಸುತ್ತ ಕುಳಿತಿದ್ದ ಅಪ್ಪನ ಮೇಲೆ ಮಳೆ ಧೋ ಅಂತ ಸುರಿಯುತ್ತಿದೆ. ಬಹುಷಃ ನೀರು ನುಗ್ಗಿರಬೇಕು,ಅಷ್ಟು ಹೊತ್ತಿನ ತನಕ ಬೆಳಗುತ್ತಿದ್ದ ಟಾರ್ಚ್ ಇದ್ದಕ್ಕಿದಂತೆ ಆರಿ ಹೋಯಿತು.ಇನ್ನು ಅದರ ಉಪಯೋಗವಿಲ್ಲವೆಂದರಿತ ಅಪ್ಪ ಅದನ್ನು ಅಲ್ಲೇ ಹರಿಯುತ್ತಿದ್ದ ನೀರಿನೊಳಗೆ ಬೀಸಾಕಿಬಿಟ್ಟ. ಈಗ ಇನ್ನೊಂದು ಕೈಗೆ ಬಿಡುವಾದ್ದರಿಂದ "ಒಂದು ತಪ್ಪಿದರೆ ಇನ್ನೊಂದು " ಎಂಬಂತೆ ಕೈ ಶಕ್ತಿ ಇಂಗಿ ಹೋದಂತೆಲ್ಲ ಒಂದು ಕೈಯಿಂದ ಇನ್ನೊಂದಕ್ಕೆ ಕರುವಿನ ಮೂಗುದಾರವನ್ನು ಬದಲಾಯಿಸಿಕೊಳ್ಳುತ್ತಾ ಸಮಯ ದೂಡಲಾರಂಭಿಸಿದರು. ಕೂತ ಜಾಗದಲ್ಲಿಯೇ ಘಂಟೆಗಳ ಕಾಲ ಬಾಗಿ ಕರುವನ್ನು ಹಿಡಿದುಕೊಂಡಿರುವುದರಿಂದ ಕೈ ನೋಯಲಾರಂಭಿಸಿತು.  ಆಗ ಸಮಯ ರಾತ್ರಿ ಹನ್ನೆರಡು. ಎಂಟು ಘಂಟೆಗೆ ಹೋದವರು ಇನ್ನೂ ಬಂದಿಲ್ಲವೆಂದು ಅಮ್ಮನಿಗೆ ಭಯ ಶುರುವಾಯಿತು. ಸಿಡಿಲು ಬೇರೆ ಬಡಿದು ಜೀವವೇ ನಡುಗುವಷ್ಟು ಸದ್ದಾಯಿತು. ಏನಾದರೂ ಸಿಡಿಲಿಗೆ ಸಿಕ್ಕಿ…..ಅಯ್ಯೋ ದೇವರೇ ಅಂತ, ಬೇಗನೆ ಕೂಗಿ ಪಕ್ಕದ ಮನೆಯಲ್ಲಿ ಮಲಗಿದ್ದ ಬಸವರಾಜನನ್ನು ಕರೆದು ಇನ್ನೊಂದಿಬ್ಬರನ್ನು ಜತೆಹಾಕಿಕೊಂಡು ಕೊಡೆ, ಟಾರ್ಚ್ ಹಿಡಿದು ಬೇಗಬೇಗನೆ ಹೊಲದ ಕಡೆಗೆ ಹೆಜ್ಜೆ ಹಾಕಿದರು. ಜಮೀನಿನ ದಾರಿಯಲ್ಲಿ ಹುಡುಕುತ್ತಾ ಬಂದು ಹತ್ತಿರ ಬರುತ್ತಿದ್ದಂತೆ ಪರಿಸ್ಥಿತಿ ಅರ್ಥವಾಗತೊಡಗಿತ್ತು. ತೆಂಗಿನಮರದ ಬುಡದಲ್ಲಿ ಕಟ್ಟಿದ್ದ ಕರುವೂ ನಾಪತ್ತೆಯಾಗಿದ್ದನ್ನು ಕಂಡು ಏನೋ ಆಗಬಾರದ್ದು ಆಗಿದೆ ಎಂಬಂತೆ  "ಬೇಗ ಬಾವಿ ಒಳಗೆ ನೋಡ್ಲಾ ಬಸ್ರಾಜ" ಅಂತ ಕೂಗಿದಳು. ಅವರು ಟಾರ್ಚ್ ಬಿಟ್ಟಾಗ ಬಾವಿಯ ಒಳಗೆ ಮಳೆಯಿಂದ ನೆನೆದು ಮುದ್ದೆಯಾಗಿ ನಡುಗುತ್ತಾ ಒಂದು ಕೈಯಲ್ಲಿ ಕರುವಿನ ಮೂಗುದಾರ ಹಿಡಿದಿದ್ದ ಅಪ್ಪ ಕಂಡ. ತನ್ನ ಮುಖದ ಮೇಲೆ ಬಿದ್ದ ಬೆಳಕಿನಿಂದಾಗಿ ಅಪ್ಪನಿಗೆ ಉಸಿರು ಬಂದಂತಾಯ್ತು. "ಬೇಗ ಇಳಿರ್ಲಾ" ಅಂತ ಎಲ್ಲರೂ ಕೂಗಿಕೊಂಡರು. ಮುಂದಿನ ಅರ್ಧ ಘಂಟೆಯಲ್ಲಿ ಹಗ್ಗದ ಸಹಾಯದಿಂದ ಕರುವನ್ನು ಮೇಲೆ ತರಲಾಯಿತು.  ಕೈಗಳು ಮರಗಟ್ಟಿ ಹೋಗಿದ್ದರೂ ಸುರಿಯುವ ಮಳೆಯ ಆರ್ಭಟದ ಮಧ್ಯದಲ್ಲೂ ಹೇಗೆ ನಾಲ್ಕು ತಾಸುಗಳ ಕಾಲ ಅಪ್ಪ ಆ ಕರುವನ್ನು ಹಿಡಿದುಕೊಂಡಿದ್ದರೋ ನಾ ಕಾಣೆ. ಅಪ್ಪ ಹೇಳಿದ "ಇನ್ನೊಂದರ್ಧ ಘಂಟೆ ತಡವಾಗಿದ್ದರೆ, ನಾನು ಮತ್ತೆ ಕರು ಜೀವಂತವಾಗಿರ್ತಿರ್ಲಿಲ್ಲ" ಅಂದಾಗ ಎಲ್ಲರ ಕಣ್ಣಲ್ಲಿ ನೀರು.
ಮೂಕ ಕರು ಕೃತಜ್ಞತೆ ಹೇಳಿಕೊಳ್ಳಲಾಗದೆ ಅಪ್ಪನ ಬಳಿ ಬಂದು ಆವನ ಕೆನ್ನೆ ನೇವರಿಸಿತು. 
ಅಪ್ಪ ಅದರ ಮೈ ಸವರುತ್ತಿದ್ದ………….
ಈಗಲೂ ಅಪ್ಪ ಹೇಳಿದ ಮಾತು ನನ್ನ ಕಿವಿಯಲ್ಲಿ ಗುಂಯ್-ಗುಡುತ್ತಿದೆ. "ಮನ್ಸಂದಾಗಲೀ, ಮೂಕ ಪ್ರಾಣಿಗಳದ್ದಾಗಲೀ ಜೀವ ಅಂದ್ ಮ್ಯಾಕೆ ಜೀವ ತಾನೇಯಾ?" 
 
ಮುಂದೆ ಕರು ಕರೆತರದೇ ಶಾಲೆಯ ಬಳಿಯೇ ಆಟವಾಡುತ್ತಾ ಕಾಲಕಳೆದ ನನ್ನ ಕಥೆ ಏನಾಯಿತೆನ್ನುವ ನಿಮ್ಮ ಪ್ರಶ್ನೆಗೆ ನನ್ನ ಬೆನ್ನಿನ ಮೇಲೆ ಈಗಲೂ ಉಳಿದಿರುವ ಬಾಸುಂಡೆಗಳೇ ಸಾಕ್ಷಿ!!
 
(ಗೆಳೆಯ ವಿಶ್ವನಾಥ ಕಲ್ಲಣ್ಣ ರವರ ನಿಜ ಜೀವನದ ಘಟನೆಯಿಂದ ಪ್ರೇರಿತನಾಗಿ…….)
–ಸಂತು

Monday, June 17, 2013

ಗಿಫ್ಟ್ ಶಾಪ್ ನಲ್ಲೊಂದು ದಿನ

"ಪಂಜು" ವಾರಪತ್ರಿಕೆಯಲ್ಲಿ  ನನ್ನ ಲೇಖನ:

http://www.panjumagazine.com/?p=1786


ಪ್ರಪಂಚ ಓಡುತ್ತಿದೆ ಅನ್ನುವ ಭ್ರಮೆಯಲ್ಲಿ ನಾವು! ಪ್ರಪಂಚವೇನೂ ಓಡುತ್ತಿಲ್ಲ, ಅದು ಇದ್ದಲ್ಲೇ ಇದೆ. ಆದರೆ ಮನುಷ್ಯನೆಂಬೋ ಈ ಮನುಷ್ಯ ಮಾಮೂಲಿ ಜೀವನವನ್ನು ಸುಖಾಸುಮ್ಮನೆ ಓಡಿಸುತ್ತಿದ್ದಾನೆ ಎನ್ನುವುದು ತಿಳಿದವರ ಮಾತು. ಅದೇನೇ ಇರಲಿ ಈ ಓಡುತ್ತಿರುವ ಜೀವನದ ಮಧ್ಯೆ ಅದೆಷ್ಟೋ ಮುಗ್ಧರು, ಬಡವರು, ಅಸಹಾಯಕ ಪುಟಾಣಿಗಳು ನಮ್ಮ ಕಾಲಿಗೆ ಎಡವಿದರೂ ನಮಗೆ ಗೊತ್ತೇ ಇಲ್ಲದವರಂತೆ ಮುಂದೆ ಹೋಗುತ್ತಿರುತ್ತೇವೆ.


ನಮ್ಮ ಪಕ್ಕದಲ್ಲೇ ರಸ್ತೆಯಲ್ಲಿ ಅಪಘಾತವಾಗಿ ನಮ್ಮ ಅಪ್ಪನ ವಯಸ್ಸಿನ ವ್ಯಕ್ತಿಯೊಬ್ಬ ಬಿದ್ದು ಹೊರಳಾಡುತ್ತಿದ್ದರೆ ಆತನ ಕಡೆಗೆ ಕಣ್ಣಾಯಿಸಿಯೂ ನೋಡದೆ ಆಫೀಸಿನತ್ತ ಗಾಡಿ ನಡೆಸುತ್ತೇವೆ. ಬಣ್ಣಬಣ್ಣದ ದೀಪಗಳೊಂದಿಗೆ ಜಗಮಗಿಸುವ ಪಾನಿಪೂರಿ ಅಂಗಡಿಯಲ್ಲಿ ಅಷ್ಟೊಂದು ಯೋಗ್ಯವಲ್ಲದಿದ್ದರೂ ಅದಕ್ಕೆ ನಲವತ್ತು ಐವತ್ತು ರೂಪಾಯಿ ಕೊಟ್ಟು ತಿನ್ನುವವರಿಗೆ, ಅಲ್ಲೇ ಹಿಂದೆ ನಿಂತು "ಅಮ್ಮ,ಅಣ್ಣಾ, ಹೊಟ್ಟೆಗೆ ಏನೂ ತಿಂದಿಲ್ಲಣ್ಣ, ಏನಾದರೂ ಸಹಾಯ ಮಾಡಿ" ಎನ್ನುವ ಸ್ವರ ಕೇಳಿಸುವುದೇ ಇಲ್ಲ. ಅವರಿಗೆ ಐವತ್ತು ಪೈಸೆ ಕೊಡದಿದ್ದರೂ ನಡೆದೀತು. ಆ ಹಸಿವಿನ ಮುಖವನ್ನೊಮ್ಮೆ ನೋಡಿದರೆ ಸಾಕು. ಕಡೇ ಪಕ್ಷ ಆ ಹಸಿವಿನ ನೋವಾದರೂ ಗೊತ್ತಾಗುತ್ತದೆ. ಆದರೆ ಅವರತ್ತ ನೋಡುವ ವ್ಯವಧಾನವೆಲ್ಲಿಯಾದರೂ ನಮಗೆಲ್ಲಿದೆ.


ಇಂತಹ ಪ್ರಪಂಚದ ಮಧ್ಯದಲ್ಲೂ ಅಲ್ಲಲ್ಲಿ ಬೇರೆಯೇ ತರಹದ ಜನಗಳು ನಮಗೆ ಕಾಣ ಸಿಗುತ್ತಾರೆ. ಅಂತಹದ್ದೊಂದು ಅನುಭವವನ್ನು ನಾ ಹೇಳುತ್ತಿದ್ದೇನೆ.
ನೆನಪಿಡಿ, ಇದು ಕಟ್ಟು ಕಥೆಯಲ್ಲ!!


—————————————————
ಅರಮನೆ ನಗರಿ ಮೈಸೂರಿನ ಹೃದಯಭಾಗದಲ್ಲಿರುವ ಸರಸ್ವತಿಪುರಂನಲ್ಲಿ ಪ್ರತಿಷ್ಟಿತ ಕಂಪೆನಿಯ ಗಿಫ್ಟ್ ಶಾಟ್ ಒಂದಿದೆ. ಅಲ್ಲಿಗೆ ಬರುವ ಗ್ರಾಹಕರೆಲ್ಲರೂ ಕೊಂಚ ಶ್ರೀಮಂತ ವರ್ಗದವರೇ. ಏಕೆಂದರೆ ಅಲ್ಲಿ ಮಾರುವ ಉಡುಗೊರೆ ಸಾಮಾನುಗಳೆಲ್ಲ ಬ್ರಾಂಡೆಡ್ ನವು, ಹೆಚ್ಚಾಗಿ ವಿದೇಶೀ ಮಾಲುಗಳೇ. ಬೇರೆಲ್ಲೋ ಚಿಕ್ಕ ಅಂಗಡಿಗಳಲ್ಲಿ ಕೊಂಡರೆ ಸಿಗುವ ಸಾಮಾನುಗಳನ್ನು ಇಲ್ಲಿ ದುಪ್ಪಟ್ಟು ದರದಲ್ಲಿ ಮಾರಾಟ ಮಾಡಲಾಗುತ್ತದೆ. ಕೊಡುವ ಕಾರಣವೊಂದೇ, ಅವುಗಳ ಗುಣಮಟ್ಟ ಬೇರಾವ ಅಂಗಡಿಗಳಿಗೂ ಸರಿಸಾಟಿಯಾಗಲಾರದು.


ಅಲ್ಲಿ ಕೇವಲ ಗ್ರಾಹಕರ ನಿರ್ವಹಣೆಗಾಗಿ ಐದಾರು ಜನ ಹುಡುಗಿಯರು ಕೆಲಸ ಮಾಡುತ್ತಿದ್ದಾರೆ. ಅವರ ಕೆಲಸವೆಂದರೆ ಗ್ರಾಹಕರಿಗೆ ತಮ್ಮ ಗಿಫ್ಟ್ ಗಳನ್ನು ಆರಿಸಿಕೊಳ್ಳಲು ಸಹಾಯ ಮಾಡುವುದು. ಅವರು ಆರಿಸಿದ ಮೇಲೆ ಅವುಗಳನ್ನು ಉಡುಗೊರೆಗಾಗಿ ಗಿಫ್ಟ್ ಪ್ಯಾಕ್ ಮಾಡುವುದು.ಆ ಹುಡುಗಿಯರಿಗೆ ಆ ಗಿಫ್ಟ್ ಶಾಪ್ ನ ಮಾಲೀಕ ಕೊಡುವುದು ಮಾಸಿಕ ಕೇವಲ ಎರಡು ಸಾವಿರ ರುಪಾಯಿ. ಅವರುಗಳಿಗೆ ಆ ಸಂಬಳವನ್ನು ಬಿಟ್ಟರೆ ಬೇರಾವ ಆದಾಯ ಬರುವುದಿಲ್ಲ. ಆದರೆ ದಿನದ ಹೊಟ್ಟೆಪಾಡಿಗಾಗಿ ಕೆಲಸ ಮಾಡಲೇಬೇಕು. ಅದೂ ಬೆಳಗ್ಗೆ ಒಂಭತ್ತರಿಂದ ರಾತ್ರಿ  ಎಂಟರತನಕ! ನೆನಪಿಡಿ, ದಿನ ಪೂರ ನಿಂತೇ ಇರಬೇಕು. ಅಲ್ಲಿ ಆ ಹುಡುಗಿಯರು ಕೆಲಸದ ಮಧ್ಯೆ ಗಿರಾಕಿಗಳ ಬಗ್ಗೆ ಗಮನ ಕೊಡದೇ, ಮಧ್ಯೆ ಕುಳಿತುಬಿಡುತ್ತಾರೆ ಎಂಬ ಕಾರಣದಿಂದ ಅವರಿಗಾಗಿ ಯಾವುದೇ ಕುರ್ಚಿಗಳನ್ನು ಹಾಕಿಲ್ಲ.  ಮಾಲೀಕ ಎಂತಹ ಜಿಪುಣನೆಂದರೆ, ಹಬ್ಬ ಹರಿದಿನಗಳಲ್ಲಿ ರಾತ್ರಿ ಎಂಟರ ನಂತರ ಸ್ವ ಇಚ್ಚೆಯಿಂದ ಕೆಲಸ ಮಾಡಿದರೂ ಒಂದು ರೂಪಾಯಿಯನ್ನೂ ಜಾಸ್ತಿ ಕೊಡುತ್ತಿರಲಿಲ್ಲ. ಇಂತಹ ಪರಿಸ್ಥಿತಿಯಲ್ಲೂ ಹೇಗಾದರೂ ಮಾಡಿ ಹೆಚ್ಚು ವ್ಯಾಪಾರ ಮಾಡಬೇಕು ಎನ್ನುವುದು ಮಾಲೀಕನ ಆಶಯ, ಹೀಗಾಗಿ ಕೆಲಸದ ಹುಡುಗಿಯರ ಮೇಲೆ ಒತ್ತಡ ಹೇರುತ್ತಿದ್ದ.


ಅದೊಂದು ಮಧ್ಯಾಹ್ನ, ಹೊರಗೆ ಬಿರುಬಿಸಿಲು. ಸದ್ಯದಲ್ಲೇ ಯಾವುದೋ ಹಬ್ಬವಿದ್ದುದರಿಂದ ಆ ಅಂಗಡಿ ಉಡುಗೊರೆ ಕೊಳ್ಳುವ ಗ್ರಾಹಕರಿಂದ ತುಂಬಿಹೋಗಿದೆ.  ಎಲ್ಲ ಹುಡುಗಿಯರು ಗ್ರಾಹಕರನ್ನು ಗಮನಿಸುವುದರಲ್ಲಿ ತಲ್ಲೀನರಾಗಿದ್ದಾರೆ. ಆಗ BMW ಕಾರೊಂದು ಬಂದು ನಿಲ್ಲುತ್ತದೆ. ಅದರೊಳಗಿಂದ ಇಳಿದ ವ್ಯಕ್ತಿಯ ವೇಷ ಭೂಷಣ ಹಾವ ಭಾವವೇ ಆತ ಆಗರ್ಭ ಶ್ರೀಮಂತ ಎನ್ನುವುದನ್ನು ಸಾರಿ ಹೇಳುತ್ತಿತ್ತು. ಟಕಟಕನೆ ನಡೆದು ಬಂದು ನೇರ ಆ ಹುಡುಗಿಯ ಬಳಿಗೆ ಹೋಗುತ್ತಾನೆ. "ನನ್ನ ಕಸಿನ್ ಮಗುವಿನ ಹುಟ್ಟಿದ ದಿನ ಇವತ್ತು. ಏನಾದರೂ ಉಡುಗೊರೆ ಕೊಡಬೇಕು. ಕೊಂಚ ನಿಮ್ಮ ಅಂಗಡಿಯಲ್ಲಿರುವ ಉಡುಗೊರೆಯ ವಸ್ತುಗಳನ್ನೆಲ್ಲ ತೋರಿಸುತ್ತೀಯ" ಅಂತ ಕೇಳಿ ಒಂದೊಂದನ್ನು ಗಮನಿಸುತ್ತ ಹೋಗುತ್ತಾನೆ. ಅದೇಕೋ ಯಾವುದೂ ಇಷ್ಟವಾಗುವುದಿಲ್ಲ. ಕೊನೆಗೆ "ಯಾವುದೂ ಬೇಡ, ಒಳ್ಳೆಯ ಚಾಕಲೇಟ್ ಗಳನ್ನು ತೋರಿಸು" ಅಂತ ಕೇಳುತ್ತಾನೆ.


ಆ ಹುಡುಗಿ ಒಂದೊಂದು ಚಾಕಲೇಟ್ ತೆಗೆದು ತೋರಿಸುತ್ತ ಅವುಗಳ ಬೆಲೆ ಹೇಳತೊಡಗುತ್ತಾಳೆ. ಕೊನೆಗೆ ಆಯ್ಕೆ ಮಾಡಿದ ಎರಡರಲ್ಲಿ ಯಾವುದು ಅತ್ಯಂತ ರುಚಿಯಾಗಿದೆ ಅಂತ ಕೇಳುತ್ತಾನೆ. ಈಕೆ ಬರೇ ಬೆಲೆ ನೋಡಿ ದುಬಾರಿ ಬೆಲೆಯ ಚಾಕಲೇಟ್ ತೋರಿಸಿ "ಇದು ಚೆನ್ನಾಗಿದೆಯಂತೆ ಸರ್, ತಗೊಳ್ಳಿ" ಅಂತ ಕೇಳುತ್ತಾಳೆ.


"ಚೆನ್ನಾಗಿದೆಯಂತಾ, ಯಾಕೆ ಈ ಅಂತೆ-ಕಂತೆ? ಯಾಕಮ್ಮ ನಿಮಗೆ ಗೊತ್ತಿಲ್ವಾ ?"ಅವನ ಪ್ರಶ್ನೆ.
ಈಕೆ ಒಂದು ಕ್ಷಣ ಯೋಚಿಸತೊಡಗುತ್ತಾಳೆ. ಬರುತ್ತಿರೋದೆ ತಿಂಗಳಿಗೆ ಎರಡು ಸಾವಿರ, ಅದರಲ್ಲಿ ತಮ್ಮನ ಟ್ಯೂಷನ್ ಫೀಸ್, ಮನೆಗೆ ಅಡಿಗೆ ಸಾಮಾನು ಎಲ್ಲವನ್ನೂ ಅದರಲ್ಲೇ ತರಬೇಕು. 
ಇನ್ನು ಈ ಚಾಕಲೇಟ್ ಗೆ ಎಲ್ಲಿಂದ ನಾಲ್ಕುನೂರು ರೂಪಾಯಿಗಳನ್ನು ಕೊಡುವುದು?


"ಕ್ಷಮಿಸಿ ಸರ್, ಇಲ್ಲಿರುವ ಯಾವ ಹುಡುಗಿಗೂ ಇದರ ಟೇಸ್ಟ್ ಗೊತ್ತಿಲ್ಲ,  ನಮ್ಮ ಯೋಗ್ಯತೆಗೆ ಇದರ ಬೆಲೆ ಬಹಳ ದುಬಾರಿ ಸರ್. ನಮಗೆ ಸಿಗೋ ಸಂಬಳಕ್ಕೆ ನಮ್ಮ ಜೀವನ ಸಾಗಿಸೋದೆ ದೊಡ್ಡ ವಿಷಯ. ಅಂಥದ್ದರಲ್ಲಿ ಈ ಚಾಕಲೇಟ್ ತಿನ್ನುವ ದೊಡ್ಡ ಆಸೆ ಯಾಕೆ ಸರ್? ಅದಕ್ಕೋಸ್ಕರ ಬರೀ ಇದರ ಬಗ್ಗೆ ಕೇಳಿ ತಿಳಿದುಕೊಂಡಿದ್ದೇವೆ ಅಷ್ಟೇ!!" ಆ ಮುಗ್ಧ ಹುಡುಗಿಯ ನೇರ ನುಡಿ.


"ಓಕೆ ಕಣಮ್ಮ, ಪರವಾಗಿಲ್ಲ ಬಿಡಿ.ಎರಡು ಕೊಡಿ" ಎಂದು ಕೈಯಲ್ಲಿ ನೂರರ ಎಂಟು ನೋಟನ್ನು ಕೊಟ್ಟು, ನಂತರ ಹೇಳಿದರು.


"ಬರೀ ಒಂದನ್ನು ಮಾತ್ರ ಗಿಫ್ಟ್ ಪ್ಯಾಕ್ ಮಾಡಮ್ಮ, ಮತ್ತೊಂದನ್ನು ನೀವೆಲ್ಲರೂ ಹಂಚಿಕೊಂಡು ತಿನ್ನಿರಿ"!! ಅಂತ ಹೇಳಿ ಯಾರ ಮಾತಿಗೂ ಕಾಯದೇ, ತಾನು ಪ್ಯಾಕ್ ಮಾಡಿಸಿಕೊಂಡ ಚಾಕಲೇಟ್ ಹಿಡಿದು ಹೊರ ನಡೆಯುತ್ತಾನೆ.


ಅಲ್ಲಿ ನಿಂತಿದ್ದ ಆ ಎಲ್ಲ ಕೆಲಸದ ಹುಡುಗಿಯರ ಕಣ್ಣಲ್ಲಿ ಕೃತಜ್ಞ ಭಾವ, ಕಾಣದ ಹನಿ ಕಣ್ಣೀರು.
ಅಂಗಡಿ ಮಾಲೀಕ ಮಾತ್ರ ಬೆಪ್ಪು!!


 ನನಗನ್ನಿಸಿದ್ದು "ಹೀರೋಗಳನ್ನು ನೋಡೋಕೆ ಸಿನಿಮಾಗಳಿಗೇ ಹೋಗಬೇಕಾ??

Thursday, February 14, 2013

ಕಣ್ಣು - ಕಣ್ಣೀರು (ಚುಟುಕಗಳು)



("ಪಂಜು" ಅಂತರ್ಜಾಲ ತಾಣದಲ್ಲಿ February-4ರಂದು ಪ್ರಕಟವಾದ ನನ್ನ ಚುಟುಕಗಳು
http://www.panjumagazine.com/?p=499)


 =========================================
(ಚಿತ್ರಕೃಪೆ:Google)
ಕಣ್ಣೀರು

ಅತ್ತುಬಿಡು ಎಂದಾಗ,
ಬರದ ಹನಿ,
ಅಳಬೇಡ ತಡೆಯೆಂದಾಗ,
ಉಕ್ಕಿ ಹರಿವ ಧಾರೆ!!

 =========================================

ಹೃದಯ

ಇದ್ದಾಗ,
ಕೊಂಚವೂ ಗೋಚರಿಸದ ,
ತನ್ನನ್ನೇ ಕೊಟ್ಟು ಬರಿದಾದ ಮೇಲೆ,
ಭಾರ ತೋರುವ,
ಏಕೈಕ  ವೈಚಿತ್ರ್ಯ!!

 =========================================

ಕಣ್ಣು

ತೆರೆದಿದ್ದಾಗ
ಇದ್ದುದನ್ನು
ಮಾತ್ರ ತೋರುವ,
ಮುಚ್ಚಿದಾಗ 
ಏನೇನನ್ನೋ
ತೋರುವ
ಪ್ರಚೋದಕ!!

 =========================================

Monday, February 11, 2013

ಬರೀ ಗೆಲ್ಲಬೇಕೆನ್ನುವವರಿಗಲ್ಲ...ಮದುವೆ!!


ಟೈಮಾಯ್ತು ಧಾರೆ ಆಮೇಲೆ ಮುಂದುವರೆಯಲಿ.
ಈಗ ತಾಳಿ ಕಟ್ಟಿಸಿಬಿಡಿ ಅಯ್ನೋರೇ.

ಬೇಗ ಬೇಗ ಬಾರಪ್ಪ.....
ಯಾರಮ್ಮಾ ಅದು, ಬೇಗ ಹೋಗಿ ಈ ಮಾಂಗಲ್ಯ ತಟ್ಟೆನ ಎಲ್ಲ ಹಿರಿಯರ ಹತ್ರ ಮುಟ್ಟಿಸಿಕೊಂಡು ಬಾರಮ್ಮ.
ಇನ್ನೊಂದಿಬ್ರು ಬೇಗ ಹೋಗಿ ಅಕ್ಷತೆ ಎಲ್ಲರಿಗೂ ಹಂಚಿ.

ಸಂತು, ಬಾರಪ್ಪ ನೀನು ಎಡಗಡೆ ಕೂತ್ಕೋ.
ಲಾವಣ್ಯ ನೀನು ಈ ಕಡೆ ಕೂತ್ಕೊಳ್ಳಮ್ಮ.

ಇಡೀ ಮದುವೆ ಛತ್ರದಲ್ಲಿದ್ದ ಜನಗಳೆಲ್ಲ ಮಂಟಪದ ಸುತ್ತ ಇರುವೆಗಳು ಮುತ್ತಿಕೊಂಡಂತೆ ನಿಂತುಕೊಂಡರು.
ಇದೇನು ನಿಜವಾ?! ನನಗೇ ನಾನೇ ಕೇಳಿಕೊಂಡ ಪ್ರಶ್ನೆ!!


ಲಾವಣ್ಯ ನೀವು ಸಂತೋಷರ ಕಾಲನ್ನು ಮುಟ್ಟಿ  ನಮಸ್ಕಾರ ಮಾಡ್ಕೊಳಿ.
ಅಷ್ಟರವರೆಗೆ ಸುಮ್ಮನೆ ನಿಂತಿದ್ದ ಗೆಳೆಯರು "ಮಗಾ, ನಿನ್ ಲೈಫ್ ಅಲ್ಲಿ ಮೊದಲ ಮತ್ತು ಕೊನೆ ಸಲ ಹೆಂಡತಿಯಿಂದ ನಮಸ್ಕಾರ ಮಾಡಿಸಿಕೊಳ್ಳೋದು, ಚೆನ್ನಾಗಿ ಮಾಡಿಸಿಕೊ"
ಎಲ್ಲ ಗೊಳ್ ಎಂದು ನಕ್ಕರು.

ಬೇಗ ಆ ಮಾಂಗಲ್ಯ ಇರೋ ತಟ್ಟೆ ತಗೊಳ್ಳಿ.
ಇಬ್ಬರೂ ಅದಕ್ಕೆ ವಿಭೂತಿ, ಅರಿಶಿನ, ಕುಂಕುಮ, ಹೂವು ಇಟ್ಟು ಪೂಜೆ ಮಾಡಿ.
ಇಬ್ಬರೂ ಈ ಅಕ್ಷತೆ ತಗೊಂಡು ಮಾಂಗಲ್ಯದ ಮೇಲೆ ಹಾಕಿ.
ಇಬ್ಬರೂ ಗಂಧದಕಡ್ಡಿ ಹಚ್ಚಿ ಪೂಜೆ ಮಾಡಿ.

ಸಂತೋಷ್ ಈಗ ನೀನು ಆ ಕರ್ಪೂರದ ಆರತಿ ಬೆಳಗು. ನಿಧಾನ....
ಅಜಯ್ ಸುಮ್ಮನಿರದೆ, "ಹೇಯ್ ನೋಡ್ರೋ ಸಂತೋಷನ್ ಕೈ ನಡುಗ್ತಾ ಇದೆ."
ಎಲ್ಲರೂ ಗೊಳ್ ಎಂದು ನಕ್ಕರು.
"ಪಾಪ, ನಮ್ ಹುಡುಗನ್ನ ನೋಡಿ ನಗಬೇಡ್ರಪ್ಪ, ಅವನಿಗೆ ತಾಳಿ ಕಟ್ಟಿ ಅಭ್ಯಾಸ ಇಲ್ಲ, ಇದೇ ಮೊದಲು" ಗಂಡಿನ ಕಡೆಯವರ ತಿರುಗೇಟು.
ಮತ್ತೆ ಎಲ್ಲರ ಮುಖದಲ್ಲಿ ನಗು.

ಈಗ ಸಂತೋಷ್ ಮಾಂಗಲ್ಯವನ್ನು ಕೈನಲ್ಲಿ ತಗೊಳ್ಳಪ್ಪ.
ಸರಿ, ವಾದ್ಯದವರಿಗೆ ಹೇಳಿ. ಮಂಗಳವಾದ್ಯ.......ಮಂಗಳವಾದ್ಯ.....

ಡುಂ ಡುಂ ಡುಂ ಡುಂ ಡುಂ ಡುಂ ಡುಂ ಡುಂ ಡುಂ ಡುಂ ............

================================






11-Feb-2008

ಹೌದು, ಗೆಳೆಯರೇ, ಈ ಮೇಲಿನ ಪ್ರಸಂಗ ನಡೆದು ಇವತ್ತಿಗೆ ಸರಿಯಾಗಿ ಐದು ವರ್ಷ. ನಾನು ಮತ್ತು ನನ್ನ ಗೆಳತಿ, ಬಾಳ ಸಂಗಾತಿಗಳಾಗಿ ಒಬ್ಬರಿಗೊಬ್ಬರು ಕೈಕೈ ಹಿಡಿದ ಸಂದರ್ಭ.
ಇಡೀ ಕಲ್ಯಾಣ ಮಂಟಪ ಸಡಗರದಲ್ಲಿ ನಲಿಯುತ್ತಿದ್ದರೆ, ಮಗಳನ್ನು ಚಿಕ್ಕಂದಿನಿಂದ ಮುದ್ದಾಗಿ ಬೆಳೆಸಿ ಇನ್ನೊಬ್ಬರ ಮನೆಗೆ ಕಳುಹಿಸಿಕೊಡಲು ಹೆತ್ತವರು ಗದ್ಗದಿತರಾದ ಹೃದಯಸ್ಪರ್ಶೀ ಸಂದರ್ಭ.
ಒಂದೆಡೆ ಪ್ರೀತಿಸಿದವಳನ್ನು ಮದುವೆಯಾದೆ ಎಂಬ ಖುಷಿಯಿದ್ದರೆ, ಇನ್ನೊಂದೆಡೆ ಸಾವಿರ ಸವಾಲುಗಳ ಕೊಟ್ಟು,  "ನೋಡಿಯೇಬೇಡೋಣ, ನಾನಾ, ಇಲ್ಲ ನೀನಾ?" ಅಂತ ಭುಜ ತಟ್ಟಿ ನಿಂತಿರುವ
ಜೀವನ ಒಂದು ಕಡೆ.  ಬಹುಷಃ ಇದು ಎಲ್ಲರ ಜೀವನದಲ್ಲಿ ಬರುವಂತಹ ಅಮೂಲ್ಯ ಘಳಿಗೆಗಳಲ್ಲೊಂದು.

ಆ ಕ್ಷಣಗಳನ್ನು ಈಗಲೂ ನೆನೆಸಿಕೊಂಡರೆ ಮೈ ರೋಮಾಂಚನಗೊಳ್ಳುತ್ತದೆ. ಅಪ್ಪ ಕೊಡಿಸಿದ ಮೊದಲ ಡ್ರಾಯಿಂಗ್ ಬುಕ್ ನಲ್ಲಿ ಯಾವುದೇ ಚಿತ್ರ ಬರೆದಿದ್ದರೂ, ಅದನ್ನು ಕೆಲವು ವರ್ಷಗಳ ನಂತರ ತೆರೆದು ನೋಡಿದಾಗ ಮೈಪುಳಕಗೊಳ್ಳುತ್ತದೆಯಲ್ಲ ಅದೇ ರೀತಿಯ ಭಾವತರಂಗಗಳನ್ನು ಸೃಷ್ಟಿಸುವ ವಿಶೇಷ ಘಳಿಗೆಯೆಂದರೆ ಅದು.

ಇದಾಗಿ ಐದು ವರ್ಷಗಳಾಗಿವೆ ಎಂದು ನಂಬಲೂ ಕಷ್ಟವಾಗುತ್ತದೆ. ನಿಜಕ್ಕೂ ಸಂಸಾರದ ಕ್ಷಣಗಳನ್ನು ನೆಮ್ಮದಿಯಿಂದ ಕಳೆಯಬೇಕೆಂದರೆ ಸುಖ-ದುಃಖಗಳೆರಡನ್ನೂ ಒಂದೇ ರೀತಿಯಲ್ಲಿ ಸ್ವೀಕರಿಸಿ ಸಹಬಾಳ್ವೆಯಿಂದ ಜೀವನ ನಡೆಸುವ ಮನಸ್ಥಿತಿಯಿರಬೇಕು. ಗೆಲ್ಲುವ ಸೋಲುವ ಎರಡಕ್ಕೂ ಸಿದ್ಧವಿರಬಲ್ಲವರಿಗೆ ಮಾತ್ರ ಈ ವಿವಾಹ. ಬರೇ ನಾನು ಮಾತ್ರ ಗೆಲ್ಲುವೆನೆನ್ನುವ ಮನೋಭಾವದವರಿಗಲ್ಲ ಎಂಬುದು ನಾ ಕಂಡುಕೊಂಡ ಉತ್ತರ. ವಿವಾಹನಂತರದ ಜೀವನದ ಬಗ್ಗೆ ಏನೇನೋ ಹೇಳಿ ದಿಗಿಲು ಮೂಡಿಸಿದ್ದ ಗೆಳೆಯರೆಲ್ಲರೂ ಒಮ್ಮೆ ನೆನಪಾಗಿ ನಗು ಬರುತ್ತದೆ.





ಹೀಗೆಯೇ ನನ್ನ ಲಗ್ನಪತ್ರಿಕೆಯನ್ನು ನೋಡುವಾಗ ನನ್ನ ಮನಃ ಪಟಲದಲ್ಲಿ ಮೂಡಿದ ಈ ಚಿತ್ರಗಳನ್ನು ಈ ದಿನ ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ.
ನಮ್ಮ ಮೇಲೆ ನಿಮ್ಮ ಆಶೀರ್ವಾದವಿರಲಿ...ಸದಾ.

ನಿಮ್ಮವನು
ಸಂತು.

Tuesday, February 5, 2013

ನಾ ಕಂಡ ಹೀರೋಗಳು-1

ಪಂಜು ವೆಬ್ ಸೈಟ್ ನ ಮೊದಲ ಸಂಚಿಕೆಯಲ್ಲೇ ಪ್ರಕಟವಾದ ನನ್ನ ಲೇಖನ.
ಲಿಂಕ್: http://www.panjumagazine.com/?p=70

===========================================================
ನಾನಾಗ ಒಂಭತ್ತನೆಯ ತರಗತಿಯಲ್ಲಿ ಓದುತ್ತಿದ್ದೆ. ಆ ವರ್ಷದಲ್ಲಿ ನಡೆದ ರಾಷ್ಟ್ರ ಮಟ್ಟದ ಭಾರತೀಯ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಮೊದಲು ಜಿಲ್ಲಾ ಮಟ್ಟದ ಸ್ಪರ್ಧೆ ಮೈಸೂರಿನಲ್ಲಿ ನಡೆದಿತ್ತು. ನಮ್ಮ ವಿಜ್ಞಾನ ಮಾಸ್ತರರಾಗಿದ್ದ ನಾಗೇಂದ್ರರವರ ಮಾರ್ಗದರ್ಶನದಲ್ಲಿ ಭಾಗವಹಿಸಿದ್ದ ನಾನು, ಗ್ರಾಮೀಣ ವಿಭಾಗದಿಂದ ರಾಜ್ಯ ಮಟ್ಟದ ಸಮಾವೇಶಕ್ಕೆ ಆಯ್ಕೆಯಾಗಿದ್ದೆ.
ಬರೀ ೧೫ ದಿನಗಳ ಕಾಲಾವಕಾಶವಿದ್ದುದರಿಂದ ನಾನು ನಮ್ಮ ಮಾಸ್ತರರ ಕೊಳ್ಳೇಗಾಲ ನಿವಾಸದಲ್ಲಿಯೇ ಬೀಡು ಬಿಟ್ಟು ಹಗಲಿರುಳು ಶ್ರಮಿಸಿದ್ದೆ. ರಾಜ್ಯಮಟ್ಟದ ಸಮಾವೇಶಕ್ಕೆ ಅರಸೀಕೆರೆ ಮದುವೆ ಹೆಣ್ಣಿನಂತೆ ಅಲಂಕಾರಗೊಂಡಿತ್ತು. ಬೆಳಿಗ್ಗೆಯೇ ಕೊಳ್ಳೇಗಾಲ ಬಿಟ್ಟ ನಾವು ಮಧ್ಯಾಹ್ನವೇ ಅರಸೀಕೆರೆ ತಲುಪಿದ್ದೆವು. ಪ್ರತಿ ಜಿಲ್ಲೆಯವರಿಗೊಂದು ಕೊಂಚ ವಿಶಾಲವೆನಿಸುವಷ್ಟು ಜಾಗವಿದ್ದ ಕೊಠಡಿಯನ್ನು ತಂಗಲು ವ್ಯವಸ್ಥೆ ಮಾಡಲಾಗಿತ್ತು. ಬಿಸಿಲ ಝಳವಿದ್ದುದರಿಂದ ಆ ಕೊಠಡಿಯಲ್ಲಿ ಮಲಗಿಕೊಂಡ ಕೂಡಲೇ ಅದ್ಯಾವಾಗ ನಿದ್ರೆ ಹತ್ತಿತೆಂದೇ ತಿಳಿಯಲಿಲ್ಲ.

ಸಂಜೆ ಏಳುವಷ್ಟರಲ್ಲಿ ಮೈಸೂರು ಜಿಲ್ಲೆಯ ನಗರ ವಿಭಾಗಗಳಿಂದ ಬರಬೇಕಿದ್ದ ಅಭ್ಯರ್ಥಿಗಳೆಲ್ಲ ತಮ್ಮ ಮಾರ್ಗದರ್ಶಕರ ಜತೆ ಬಂದು ಕೊಠಡಿ ಸೇರಿಯಾಗಿತ್ತು. ನಾಗೇಂದ್ರ ಮಾಸ್ತರರು ಎದ್ದವರೇ ಮುಖ ತೊಳೆದು ಫ್ರೆಶ್ ಆಗಿ ಬರಲು ಹೊರಟರು. ನಾನು ಕೊಠಡಿಯಲ್ಲೇ ಉಳಿದೆ. ಪಕ್ಕದಲ್ಲಿ ಕುಳಿತು ಮೈಸೂರು ಜಿಲ್ಲೆಯಿಂದ ಬಂದ ಸಹ ಅಭ್ಯರ್ಥಿಗಳನ್ನು ನಿಧಾನವಾಗಿ ಗಮನಿಸತೊಡಗಿದೆ. ಬಂದವರೆಲ್ಲ ನಗರ ಪ್ರದೇಶದವರೇ ಆಗಿದ್ದು ನೋಡಲಿಕ್ಕೆ ಬಹಳ ನೀಟಾಗಿ ಡ್ರೆಸ್ ಮಾಡಿಕೊಂಡಿದ್ದರು. ಅದ್ಯಾವುದೋ ಸಿಕ್ಕ ಪ್ಯಾಂಟ್, ಶರ್ಟನ್ನು ಸಿಕ್ಕಿಸಿಕೊಂಡು ಬಂದಿದ್ದ ನನಗೆ ಏನೋ ಒಂದು ತರಹದ ಕೀಳರಿಮೆ ಕಾಡತೊಡಗಿತ್ತು.

 


ಆ ಟೀಚರ್ ಗಳು ಬಹಳ ನಿರರ್ಗಳವಾಗಿ ಮಾತನಾಡುತ್ತಿದ್ದರು. ಅವರ ಶಿಷ್ಯರುಗಳು ಕೂಡ!! ನಾ ಎದ್ದಿದ್ದನ್ನು ನೋಡಿ ಆಲ್ಲಿದ್ದ ಟೀಚರ್ ಗಳಲ್ಲೊಬ್ಬರು ಬನ್ನಿ ಎಲ್ಲರೂ ಪರಿಚಯಿಸಿಕೊಳ್ಳೋಣ ಎಂದು ಸೂಚಿಸಿದರು. ಯಾಕೋ ಸಂಕೋಚದಿಂದ ಎದ್ದು ನಿಂತು ಅವರ ಬಳಿಗೆ ಹೋದೆ. ಪ್ರತಿಯೊಬ್ಬರೂ ಇನ್ನೊಬ್ಬರಿಗೆ ಶೇಕ್ ಹ್ಯಾಂಡ್ ಕೊಡುವುದು ನಂತರ ಅವರ, ಶಾಲೆಯ ಮತ್ತು ಕುಟುಂಬದ ಹಿನ್ನೆಲೆಯನ್ನು ಹೇಳಬೇಕಿತ್ತು. ಆ ಹುಡುಗಿ ಓದುತ್ತಿರೋದು ಮರಿಮಲ್ಲಪ್ಪ ಸ್ಕೂಲಿನಲ್ಲಿ. ಅವರ ಅಪ್ಪ ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್ ನಲ್ಲಿ ಬ್ಯಾಂಕ್ ಮ್ಯಾನೇಜರ್. ಆ ಹುಡುಗ ಸೈಂಟ್  ಜೋಸೆಫ್ ಸ್ಕೂಲ್, ಅಪ್ಪ ಬೆಂಗಳೂರಿನಲ್ಲಿ ಸಿವಿಲ್ ಇಂಜಿನಿಯರ್ ಆಗಿದ್ದಾರೆ. ಹೀಗೆ ನಾಲ್ಕೈದು ಹುಡುಗರ ಪರಸ್ಪರ ಪರಿಚಯವಾದ ತರುವಾಯ ನನ್ನ ಸರದಿ ಬಂತು.
ಏನಂತ ತಾನೇ ಹೇಳಲಿ? ನನಗೆ ಯಾವಾಗಲೂ ನನ್ನ ಬಗ್ಗೆ ಕೀಳರಿಮೆಯಿತ್ತು. ಮೊದಲಿಗೆ ನಾನು ಕನ್ನಡ ಮಾಧ್ಯಮದ ಸರಕಾರೀ ಪ್ರೌಢಶಾಲೆಯಲ್ಲಿ ಓದುತ್ತಿದ್ದೇನೆ. ನಮ್ಮಪ್ಪ ಕೇವಲ ಒಬ್ಬ ವ್ಯವಸಾಯಗಾರರಷ್ಟೇ!! ಅದನ್ನು ಹೇಗೆ ಹೇಳಿಕೊಳ್ಳುವುದು? ಅದೇನು ಇಂಜಿನೀರ್ ಅಥವಾ ಬ್ಯಾಂಕ್ ಮ್ಯಾನೇಜರ್ ನಷ್ಟು ಹೇಳಿಕೊಳ್ಳಬಲ್ಲ, ಜೊತೆಗೆ ಅಷ್ಟೊಂದು ಸಂಬಳ ಬರಿಸುವ ಕೆಲಸವಲ್ಲ.

ವರ್ಷವಿಡೀ ಕಷ್ಟಪಟ್ಟು ವ್ಯವಸಾಯ ಮಾಡಿದ ಮೇಲೆ ಬಂದರೆ ಬಂತು, ಇಲ್ಲದಿದ್ದರೆ ಇಲ್ಲ ಎನ್ನುವ ಪರಿಸ್ಥಿತಿ. ಕಡೆಗೆ ಧೈರ್ಯ ಮಾಡಿ ಕೈ ಕುಲುಕಿದವನೇ "ನನ್ನ ಹೆಸರು ಸಂತೋಷ್, ಲೊಕ್ಕನಹಳ್ಳಿ ಎನ್ನುವ ಗ್ರಾಮದಲ್ಲಿ ಸರಕಾರೀ ಪ್ರೌಢಶಾಲೆಯೊಂದರಲ್ಲಿ ಒಂಭತ್ತನೇ ತರಗತಿ ಓದುತ್ತಿದ್ದೇನೆ" ಎಂದು ಹೇಳಿ ಬೇಗನೆ ಆ ವಾಕ್ಯ ಮುಗಿಸಿ ಹಿಂದೆ ಬರಲು ರೆಡಿಯಾದೆ!

ಅಷ್ಟು ಹೊತ್ತಿಗೆ ಸುಮ್ಮನೆ ಕೇಳಿಸಿಕೊಳ್ಳುತ್ತಿದ್ದ ಆ ಟೀಚರ್ ನನ್ನನ್ನು ಹೋಗದಂತೆ ಮತ್ತೆ ಕರೆದು "ಯಾಕಪ್ಪಾ ನಿಮ್ಮ ತಂದೆಯವರ ಕೆಲಸ ಹೇಳಲೇ ಇಲ್ಲ" ಅಂದುಬಿಟ್ಟರು. ಕಡೆಗೆ ಬೇರೆ ವಿಧಿಯಿಲ್ಲದೇ "ಏನೂ ಕೆಲಸ ಅಂತ ಏನಿಲ್ಲ ಮೇಡಂ, ನಮ್ಮಪ್ಪ ಕೇವಲ ಇರೋ ಚಿಕ್ಕ ಭೂಮಿಯಲ್ಲಿ ಬೇಸಾಯ ಮಾಡ್ತಾರೆ" ಎಂದು ಕೇವಲ ಆಯಮ್ಮನಿಗೆ ಕೇಳಿಸುವಷ್ಟು ಮಾತ್ರ ಹೇಳಿ ಹೊರಡಲನುವಾದೆ. ತಕ್ಷಣ ಮತ್ತೊಂದು ಪ್ರಶ್ನೆ…"ಏನು ಬೆಳೆಯುತ್ತೀರ", ನನ್ನ ಶಾರ್ಟ್ ಅಂಡ್ ಸ್ವೀಟ್ ಉತ್ತರ "ಜೋಳ". ಆ ಟೀಚರ್ ಗೆ ನನ್ನ ಮುಜುಗರ, ನಾ ಉತ್ತರಿಸುತ್ತಿದ್ದ ಧಾಟಿಯಲ್ಲಿಯೇ ಅರ್ಥವಾಗಿ ಹೋಯಿತು. ನನ್ನ ಹತ್ತಿರ ಬಂದವರೇ ನನ್ನ ಬೆನ್ನು ತಟ್ಟಿ, ಕೈಹಿಡಿದು ಹೇಳತೊಡಗಿದರು!!

 


"ಸಂತೋಷ್ ಮುಜುಗರ ಬೇಡಪ್ಪ, ಈ ದೇಶದ ಬೆನ್ನೆಲುಬು ರೈತ. ಇಲ್ಲಿರುವ ಕೋಟ್ಯಾಂತರ ಜನಗಳಲ್ಲಿ ಯಾರು ಬೇಕೆಂದರೂ ಇಂಜಿನಿಯರ್ ಆಗಬಹುದು. ಡಾಕ್ಟರ್ ಆಗಬಹುದು. ಅದಕ್ಕೆ ಕೇವಲ ವಿದ್ಯೆ ಬುದ್ದಿಯಿದ್ದರೆ ಸಾಕು. ಆದರೆ ರೈತರಾಗಲು ಮನಸ್ಸಿರಬೇಕು,ಉಳೋಕೆ ಭೂಮಿಯಿರಬೇಕು.ಆ ಭೂತಾಯಿಯನ್ನು ಮನಸಾರೆ ಭಕ್ತಿ ಭಾವದಿಂದ ಆಲಂಗಿಸಬೇಕು. ಅದಕ್ಕಿಂತಲೂ ದಣಿವಾದ ಮೇಲೂ ಉಳುವೆನೆನ್ನುವ ಛಲ ಬೇಕು. ಮಳೆರಾಯ ಬರುವನೆನ್ನುವ ನಂಬಿಕೆ ಬೇಕು. ಕೊನೆಗೆ ಉತ್ತು ಬಿತ್ತು ಫಸಲು ಬಂದ ಮೇಲೂ ಕೈಗೆ ಹಣ ಬರುವ ತನಕ ತಾಳ್ಮೆ ಬೇಕು. ಆದರೂ ರೈತನಿಗೆ ಸಿಗೋದು ಕೇವಲ ಬಿಡಿಗಾಸಷ್ಟೇ. ಆದರೂ ಮತ್ತೊಮ್ಮೆ ಆ ದುಡ್ಡಿನಲ್ಲಿ ಸಿಗುವ ಸಂತೋಷಕ್ಕೆ ದೇಹವನೊಡ್ಡದೇ, ಮತ್ತೊಮ್ಮೆ ನೇಗಿಲು ಕಟ್ಟಿ ಉಳಲು ಹೊರಡುತ್ತಾನೆ. ಹೀಗೆ ಇಡೀ ಜಗತ್ತಿಗೆ ದುಡಿಮೆಯೆಂದರೇನು ಅನ್ನುವುದನ್ನು ತೋರಿಸಿಕೊಡುತ್ತಾನೆ.
ಇಂಜಿನಿಯರ್, ಡಾಕ್ಟರ್ ಗಳು ಒಂದು ದಿನ ಕೆಲಸ ಮಾಡದೇ ಕುಳಿತರೂ ಏನೂ ಆಗುವುದಿಲ್ಲ, ಆದರೆ ಒಬ್ಬ ರೈತ ತನ್ನ ಕೆಲಸ ಮಾಡದೇ ಕೈಕಟ್ಟಿ ಕುಳಿತುಬಿಟ್ಟರೆ, ಇಡೀ ಜಗತ್ತಿಗೆ ಉಣ್ಣೋಕೆ ಅನ್ನದಗಳೂ ಇರುವುದಿಲ್ಲ. ಯಾರ ಹಂಗಿನಲ್ಲೂ ಬದುಕದೇ, ಕೇವಲ ಭೂತಾಯಿ ವರುಣರಾಯನನ್ನು ಮಾತ್ರ ನಂಬಿ ಬಾಳುವ ಏಕೈಕ ಸ್ವಾಭಿಮಾನಿ ರೈತ. ನಿಮ್ಮಿಂದ ನಾವು, ಆದರೆ ನಮ್ಮಿಂದ ನೀವಲ್ಲ. ಇಂದು ಆ ನಗರ ಪ್ರದೇಶಗಳಲ್ಲಿ ಕೋಟ್ಯಾಂತರ ಜನ ತಿನ್ನುವ ಪ್ರತೀ ಅನ್ನದಗಳಿನ ಹಿಂದೆ ನಿಮ್ಮ ನಿಸ್ವಾರ್ಥ ಪರಿಶ್ರಮವಿದೆ. ಕೃಷಿಯ ಬಗ್ಗೆ, ನಮ್ಮೆಲ್ಲ ದೇಶದ ರೈತರ ಬಗ್ಗೆ ನನಗೆ ಹೆಮ್ಮೆಯಿದೆ. ಅದಕ್ಕಾಗಿ ನಿಮ್ಮ ತಂದೆಗೆ ನಾನು ಕೃತಜ್ಞತೆ ಅರ್ಪಿಸಬಯಸುತ್ತೇನೆ. ಇನ್ನೆಂದಿಗೂ ನಿಮ್ಮ ತಂದೆಯ ಕೆಲಸದ ಬಗ್ಗೆ ನಿನಗೆ ಮುಜುಗರ ಬೇಡ."

ಈ ಮಾತನ್ನು ಕೇಳಿದ ನನಗೆ ಅರಿವಿಲ್ಲದೆಯೇ ರೋಮಾಂಚನವಾಯಿತು. ಇದುವರೆಗೂ ಅರ್ಥವಾಗಿರದಿದ್ದ ನಮ್ಮ ತಂದೆಯವರ ಕೃಷಿಯ ವಿಶೇಷತೆ ಈಗ ಅರ್ಥವಾಗಿ ಮನಸ್ಸಿನಲ್ಲಿಯೇ ಖುಷಿಪಟ್ಟೆ.ಗೊತ್ತಿದ್ದೂ ಗೊತ್ತಿರದಂತಿದ್ದ ನನ್ನ ಕಣ್ಣ ತೆರೆಸಿದ ಆ ಟೀಚರನ್ನು ನಾ ನನ್ನ ಜೀವನದಲ್ಲಿ ಮರೆಯಲಾರೆ. ಅದೇ ಕೊನೆ!! ಈಗ ಯಾರೇ "What is your Father?" ಎಂದು ಕೇಳಿದರೆ ಮುಜುಗರವಿಲ್ಲದೆಯೇ ಎದೆತಟ್ಟಿ "He is an agriculturist!!" ಎಂದು ಹೇಳುತ್ತೇನೆ. ಅದ್ಯಾಕೋ ಆವಾಗಲೆಲ್ಲ ಆ ಅರಸಿಕೆರೆಯ ಆ ಟೀಚರ್ ನೆನಪಿಗೆ ಬರುತ್ತಾರೆ!! ಆಗ ನನ್ನನ್ನು ನಾನು ಕೇಳಿಕೊಳ್ಳುತ್ತೇನೆ…. ಹೀರೋಗಳನ್ನು ನೋಡೋಕೆ ಕೇವಲ ಸಿನಿಮಾಗಳಿಗೆ ಹೋಗಬೇಕಾ ಅಂತ!!
–ಸಂತು



ಗುಟ್ಟು

"Kiyoshi Jewelers" ನಡೆಸುತ್ತಿರುವ "Valentine Couple Contest"ಗೆ ನನ್ನ ಮತ್ತು ನನ್ನ ಮಡದಿಯ ಭಾವಚಿತ್ರವನ್ನು ನನ್ನ ಒಂದು ಪುಟ್ಟ ಕವನದೊಂದಿಗೆ ಕಳುಹಿಸಿದ್ದೆ.
ಅದರ ನೆನಪಿಗಾಗಿ...
=============================================
 
ಒಬ್ಬನೇ ಬರಡು ಭೂಮಿಯ ಮೇಲೆ
ಉತ್ತು ಬಿತ್ತುವುದರಲ್ಲಿದ್ದೆ.
ಆಕೆ ಸಿಕ್ಕಳು, ಪ್ರೀತಿಮಳೆ ಸುರಿಸಿದಳು
ಈಗ ಬಾಳಭೂಮಿಯ ತುಂಬೆಲ್ಲ ನಗುವ ಹೂಗಳು!!

ನನ್ನ ಅವಳ ಗೆಳೆತನಕ್ಕೀಗ
ಬರೇ ಹನ್ನೊಂದು ವರ್ಷ!!
ನಮ್ಮಿಬ್ಬರ ಮಡಿಲಲ್ಲಿ ಪುಟ್ಟಿಯೊಬ್ಬಳಿದ್ದಾಳೆ
ತುಂಬಿರುವಳು ಬಾಳಿನಲಿ ಹರುಷ!

ಎಲ್ಲ ಹೇಳಿದರೇನು, ಪ್ರೀತಿಯಿಲ್ಲದಿದ್ದರೂ
ಇಲ್ಲಿ ಬದುಕಬಹುದು, ಅದು ಸುಳ್ಳಲ್ಲ!!
ಪ್ರಾಣವಿಲ್ಲದ ದೇಹ ಎಷ್ಟು ದಿನವಿದ್ದರೇನು
ಅದ ಜೀವನವೆಂದು ಕರೆವರಾರಿಲ್ಲ!!

ಕಳೆದಿಷ್ಟೂ ದಿನಗಳ ಜರಡಿ ಹಿಡಿದರೆ
ಕೆಳಗೆ ಸುರಿದದ್ದೆಲ್ಲ ಕೆಲವೇ ಹೊಟ್ಟು!.
ಮೇಲೆ ನೋಡಿ, ಉಳಿದದ್ದೆಲ್ಲ ಸಕ್ಕರೆ
ಅವಳ ಪ್ರೀತಿಯೇ ಇದರ ಗುಟ್ಟು!!

ಪ್ರೇಮರಾಗದಲಿ ಅಪಸ್ವರವೂ ಇಂಪು
ಹಾಡುವ ಸಾಲೆಲ್ಲ ಮುಗಿದ ಮೇಲೂ!
ಒಂದೊಂದು ಸ್ವರಗಳೂ ಕಾಡುತಲಿರುತಾವೆ
ಈ ದೇಹ ಇಲ್ಲಿಂದ ಅಳಿದ ಮೇಲೂ!!

====================================

Saturday, February 2, 2013

"ಚಿಕ್ಕ" ಮಕ್ಕಳಾ?

Poorvi and Me


ಮಕ್ಕಳು ಅಂತ ಅನ್ನುವಾಗ "ಚಿಕ್ಕ" ಅಂತ ಒಂದು ಪದ ಸೇರಿಸಿ ಚಿಕ್ಕಮಕ್ಕಳು ಅಂತ ಕರೆದುಬಿಟ್ಟಿರುತ್ತೇವೆ. ಅದು ಅವುಗಳ ವಯಸ್ಸು,ಆಕಾರವನ್ನು ಗಮನದಲ್ಲಿಟ್ಟುಕೊಂಡೋ ಅಥವಾ ಅವುಗಳ ಬುದ್ಧಿಶಕ್ತಿಯನ್ನು ಗಮನದಲ್ಲಿಟ್ಟುಕೊಂಡೋ ಅಂತ ಗೊತ್ತಾಗುವುದಿಲ್ಲ. ಕೆಲವರಂತೂ ಮಕ್ಕಳಿಗೆ ಲಾಜಿಕಲ್ ಆಗಿ ಯೋಚನೆ ಮಾಡುವುದಕ್ಕೆ ಬರುವುದಿಲ್ಲ ಅಂತ ಹೇಳುತ್ತಿರುತ್ತಾರೆ. ಅಂಥವರಿಗೆಲ್ಲ ತಮ್ಮ ಅಭಿಪ್ರಾಯ ತಪ್ಪು ಅಂತ ಗೊತ್ತಾಗುವುದೇ ಅವರ ಮನೆಯೊಳಗೆ ಒಂದು ಮಗು ಪ್ರವೇಶ ಕೊಟ್ಟಾಗ!!

======================================================

ಯಾವುದೇ ಕುತೂಹಲವಿದ್ದರೂ ನಾನು ಅದನ್ನು ನನ್ನ ಮಗಳು ಪೂರ್ವಿಯಿಂದಲೇ ಬಗೆಹರಿಸಿಕೊಳ್ಳಬಯಸುತ್ತೇನೆ.
ಎರಡು ತಿಂಗಳ ಹಿಂದೆ ನನಗೆ ಆ ಪ್ರಶ್ನೆ ಮನಸ್ಸಿನಲ್ಲಿ ಮೂಡಿ ಅವಳನ್ನೇ ಕೇಳಬೇಕೆನಿಸಿತು.

ನಾನು ಮತ್ತು ನನ್ನ ಮಡದಿ ಆಟವಾಡುತ್ತಿದ್ದ ಪೂರ್ವಿಯನ್ನು ಹತ್ತಿರ ಕರೆದೆವು.
ನಾನು ಕೇಳಿದೆ "ಪೂರ್ವಿ ಬಂಗಾರಿ, ನೀನು ದೊಡ್ಡವಳಾದ ಮೇಲೆ ಏನಾಗುತ್ತೀಯ?", ಅದು ನೇರ ಮತ್ತು ಇದ್ದಕ್ಕಿದಂತೆ ಅವಳತ್ತ ಎಸೆದ ಪ್ರಶ್ನೆ.
ಒಂದು ಚೂರು ಯೋಚನೆ ಮಾಡದೆ ಒಂದೇ ಕ್ಷಣದಲ್ಲಿ ಉತ್ತರಿಸಿದಳು, "ಪಪ್ಪಾ, ನಾನು ದೊಡ್ಡವಳಾದ ಮೇಲೆ lipstick ಹಚ್ಚಿಕೊತೀನಿ!!"
ತಡೆಯಲಾಗಲಿಲ್ಲ, ಗೊಳ್ ಎಂದು ನಕ್ಕುಬಿಟ್ಟೆವು. ಅವಳೂ ನಮ್ಮ ಜೊತೆ ನಕ್ಕಳು, ಕಾರಣ ತಿಳಿಯದೇ!

ಕೊನೆಗೆ ಅರ್ಥವಾಯಿತು.
ಅವರಮ್ಮನ ಬ್ಯಾಗ್ನಲ್ಲಿ Lipstick ಕಂಡಾಗಲೆಲ್ಲ ನಾನೂ ಹಚ್ಚಿಕೊಳ್ಳುತ್ತೇನೆ ಅಂತ ಹಠ ಮಾಡುತ್ತಾಳೆ.
ಅದಕ್ಕೆ ಅವರಮ್ಮನ ಒಂದೇ ಉತ್ತರ, "ಚಿಕ್ಕಮಕ್ಕಳೆಲ್ಲ ಹಚ್ಚಿಕೊಳ್ಳಬಾರದು,ನೀನು ದೊಡ್ದವಳಾದ ಮೇಲೆ ಹಚ್ಚಿಕೊಳ್ಳುವಿಯಂತೆ!!".

======================================================


ಬೆಂಗಳೂರಿನಿಂದ ಮೂರೂವರೆ ಘಂಟೆಯ ಪ್ರಯಾಣ ಮಾಡಿದರೆ ನನ್ನ ಊರು ಸಿಗುತ್ತದೆ. ಕೆಲಸಕ್ಕೆ ಸೇರಿದ ಮೇಲೆ ಇತ್ತೀಚಿಗೆ ಎರಡು ತಿಂಗಳಿಗೊಮ್ಮೆ ಊರಿಗೆ ಹೋಗುತ್ತೇನೆ. ನಾ ಹೋಗುವ ಸಮಯದಲ್ಲೇ ನಮ್ಮ ಜೊತೆ ಕಾಲ ಕಳೆಯಲು ನನ್ನ ಅಕ್ಕ ಕೂಡ ಅವರ ಕುಟುಂಬದ ಜೊತೆಗೆ ಹಾಜರಿಯಿರುತ್ತಾಳೆ. ನನ್ನ ಅಕ್ಕನ ಮಗನ ಹೆಸರು ನೂತನ್. ಪೂರ್ವಿ ಮತ್ತು ನೂತನ್ ಇಬ್ಬರಿಗೂ ಹೆಚ್ಚು ಕಡಿಮೆ ಒಂದೇ ವಯಸ್ಸಿನವರು (3 ವರ್ಷ), ನೂತನ್ ಕೇವಲ ಕೆಲವೇ ತಿಂಗಳುಗಳಲ್ಲಿ ಪೂರ್ವಿಗಿಂತ ದೊಡ್ಡವನು. ಮಕ್ಕಳು ತನ್ನ ಓರಗೆಯ ಇನ್ನಿತರ ಮಕ್ಕಳನ್ನು ಇಷ್ಟಪಡುವಷ್ಟು ಇನ್ನಾರನ್ನೂ ಇಷ್ಟಪಡುವುದಿಲ್ಲ. ಪೂರ್ವಿ ಬರುತ್ತಾಳೆಂದರೆ ನೂತನ್ ಗೆ ಎಲ್ಲಿಲ್ಲದ ಸಂಭ್ರಮವಿರುತ್ತದೆ. ಇಬ್ಬರೂ ಆಟವಾಡುತ್ತಾ ಕುಳಿತರೆ ಇಡೀ ಜಗತ್ತನ್ನೇ ಮರೆತುಬಿಟ್ಟಿರುತ್ತಾರೆ. ಆಗಾಗ ಜಗಳವಾಡುತ್ತಾರೆ ಕೂಡ.

ಹೊಸಬಟ್ಟೆಯ ಬೆಲೆ ಗೊತ್ತಾಗಲೆಂದು ಹಾಕಿರುತ್ತಾರಲ್ಲ ಆ PrcieTag ಒಂದು ನೂತನ್ ಕೈಗೆ ಸಿಕ್ಕಿತ್ತು, ಅದರಲ್ಲಿ ಒಂದು ಹೂವಿನ ಚಿತ್ರವಿದ್ದ ಕಾರಣ ಅದನ್ನು ತನ್ನ ಕೈಲಿ ಹಿಡಿದುಕೊಂಡಿದ್ದ. ಪೂರ್ವಿ ನೋಡಿದ್ದೇ ತಡ ಅದು ತನಗೆ ಬೇಕೆಂದು ರಂಪಾಟ ಮಾಡಿಬಿಟ್ಟಳು. ಅತ್ತಿದ್ದು, ಕಿತ್ತಾಡಿದ್ದು ಎಲ್ಲ ಆಯಿತು. ನೂತನ್ ಅವಳಿಗೆ ಅದನ್ನು ಕೊಡಲೇ ಇಲ್ಲ. ಕೊನೆಗೆ ನಾವೇ ಅಲ್ಲೆಲ್ಲೋ ಬಿದ್ದಿದ್ದ ಇನ್ನೊಂದು PrcieTag ತಂದು ಪೂರ್ವಿಗೆ ಕೊಡುವಷ್ಟರಲ್ಲಿ ಸಾಕಾಗಿತ್ತು. ಆದರೂ ನೂತನ್ ಕೈಲಿದ್ದ PrcieTag ಬೇಕಿತ್ತು ಅನ್ನುವಂತೆ ಪೂರ್ವಿ ಮುಖ ಮಾಡಿಕೊಂಡಿದ್ದಳು.

ಸೋಮವಾರದ ಬೆಳಗ್ಗೆಯೇ ಕಾರಿನಲ್ಲಿ ಹೊರಟು ನಿಂತೆವು. ನಾವು ಹೊರಡುತ್ತೇವೆಂದರೆ ಸಾಕು ನಮ್ಮ ಅಪ್ಪಅಮ್ಮನವರ ಮುಖ ಇದ್ದಕ್ಕಿದ್ದಂತೆ ಚಿಕ್ಕದಾಗಿಬಿಡುತ್ತದೆ. ಒಂದೆರಡು ದಿನಗಳಿಂದ ಓಡಾಡಿಕೊಂಡಿದ್ದ ಪೂರ್ವಿ ಹೊರಡುವಾಗ ಮೌನವಾಗಿಬಿಡುತ್ತಾರೆ. ಎಲ್ಲರೂ ಪೂರ್ವಿಯನ್ನು ಎತ್ತಿ ಮುದ್ದಾಡಿ ಕಳಿಸಿಕೊಡುವ ಸಮಯ. ನೂತನ್ ಸಪ್ಪೆ ಮುಖದಿಂದ ಅಮ್ಮನ ಹೆಗಲ ಮೇಲೆ
ಮಲಗಿದ್ದ.

ಎಲ್ಲರೂ ನೂತನ್ ಗೆ ಹೇಳಿದರು. "ನೂತನ್, ShakeHand ಕೊಡು, ಪೂರ್ವಿಗೆ Bye ಹೇಳು!!"
ಸಪ್ಪೆ ಮುಖದಿಂದಲೇ "Bye ಪೂರ್ವಿ" ಅಂತ ಹೇಳಿ ಮತ್ತೆ ಅವರಮ್ಮನ ಭುಜದ ಮೇಲೆ ಮಲಗಿಕೊಂಡ.
ಕಾರಿನ ಇಂಜಿನ್ ಸ್ಟಾರ್ಟ್ ಮಾಡಿ ಇನ್ನೇನು ಮುಂದೆ ಹೊರಡಬೇಕು.ತಕ್ಷಣ ಅದೇನು ನೆನಪಾಯಿತೋ ಹತ್ತಿರ ಓಡಿ ಬಂದವನೇ, ಜೇಬಿಂದ ಅದೇನನ್ನೋ ತೆಗೆದು "ತಗೋ ಇಟ್ಟುಕೋ" ಎಂದು ಕೊಟ್ಟ.

 ಪೂರ್ವಿ ಅದನ್ನು ಖುಷಿಯಿಂದ ತೆಗೆದುಕೊಂಡವಳೇ "Thank you, Bye" ಎನ್ನುತ್ತಾ ಮುಗುಳ್ನಕ್ಕಳು. ಅವನ ಮುಖದಲ್ಲೂ ಮುಗುಳ್ನಗು ಮಿಂಚಿ ಮರೆಯಾಯಿತು. ಅವನು ಅವಳಿಗೆ ಕೊಟ್ಟದ್ದು, ನೆನ್ನೆ ತಾನೇ ಘಂಟೆಗಟ್ಟಲೆ ಜಗಳವಾಡಲು ಕಾರಣವಾದ ಅದೇ "PriceTag"!! ನಿಂತಿದ್ದ  ಎಲ್ಲರಿಗೂ ಏನೆಂದು ಹೇಳಬೇಕೆಂದೇ ತಿಳಿಯಲಿಲ್ಲ.
 ಈ ಚಿಕ್ಕ-ಮಕ್ಕಳ ದೊಡ್ಡ-ಮನಸ್ಸು ಬಹಳ ಮೆಚ್ಚುಗೆಯಾಗಿ, ಹೃದಯ ತುಂಬಿ ಬಂತು!!


======================================================


ಮೊನ್ನೆ ಕಾರ್ಯದ ನಿಮಿತ್ತ Czech Republic ದೇಶಕ್ಕೆ ತತ್ ಕ್ಷಣ ಒಬ್ಬನೇ ಹೊರಡಬೇಕಾಗಿ ಬಂದಾಗ ಬಟ್ಟೆ ಬರೆಯನ್ನೆಲ್ಲ ಪ್ಯಾಕ್ ಮಾಡಿಕೊಳ್ಳುತ್ತಿದ್ದೆ.
ಪೂರ್ವಿ ಹತ್ತಿರ ಬಂದವಳೇ "ಪಪ್ಪಾ, ನನ್ನನ್ನೂ ಜೊತೆ ಕರ್ಕೊಂಡು ಹೋಗು, ಪಪ್ಪಾ " ಅಂತ ಕೇಳಿದಳು.
ನಾನಂದೆ, "ಬೇಡ ಬಂಗಾರಿ, ನಾನು ಒಬ್ಬನೇ ಹೋಗ್ತಾ ಇದ್ದೀನಿ".
ಪೂರ್ವಿ,"ಇಲ್ಲ ಪಪ್ಪಾ, ನಾನೂ ಜೊತೆಗೆ ಬರ್ತೀನಿ. ಪ್ಲೀಸ್. ನೀನು ನನಗೆ ಚಾಕಲೇಟ್, ಐಸ್ ಕ್ರೀಂ, ಚಿಪ್ಸ್, ಎಳನೀರು ಏನನ್ನೂ ಕೊಡಿಸು ಅಂತ ಕೇಳಲ್ಲ....ಪ್ಲೀ....ಸ್"

ಸುಮ್ಮನೆ ಅವಳು ಏನೇನೋ ಬೇಕೆಂದು ಹಠ ಮಾಡಿದಾಗಲೆಲ್ಲ , "ನೀನು ಹಠ ಮಾಡಿದರೆ ಯುರೋಪ್ ಗೆ ಕರ್ಕೊಂಡು ಹೋಗಲ್ಲ ನೋಡು" ಅಂತ ನಾನೇ ಅವಳಿಗೆ ಹೇಳುತ್ತಿದ್ದ ಮಾತುಗಳು ನೆನಪಾಗಿ ಬೇಸರವಾಗಿತ್ತು. ಅವಳನ್ನು ಬಿಟ್ಟು ಏರ್ ಪೋರ್ಟ್ ಗೆ ಹೊರಡುವ ಸಂದರ್ಭದಲ್ಲಿ ಕಣ್ಣೀರು ತುಂಬಿ ಬಂದಿತ್ತು.

======================================================


ಈಗಾಗಲೇ ನೀವೆಲ್ಲರೂ ನಾನು ಅವಳ ಜೊತೆ ಹಾಡುವ ವೀಡಿಯೊ ತುಣುಕೊಂದನ್ನು ನೋಡಿರುತ್ತೀರಿ. (ಇಲ್ಲದಿದ್ದರೆ ಈ ಕೆಳಕಂಡ ಲಿಂಕಿನಲ್ಲಿ ಒಮ್ಮೆ ನೋಡಿಬಿಡಿ.)

http://www.youtube.com/watch?v=vqawNp5Jse8

ನಾ ಅವಳ ಜೊತೆ ಕುಳಿತುಕೊಂಡು ಈ ಹಾಡು ಹಾಡಿ ಸುಮಾರು ಎರಡು ತಿಂಗಳಾಗಿದೆ. ನಾ ಪಕ್ಕದಲ್ಲಿ ಮಲಗಿರುವಾಗ ಭಾವಗೀತೆಗಳನ್ನು ಹಾಡುತ್ತಿದ್ದರೆ ಸುಮ್ಮನೆ ಕೇಳಿಸಿಕೊಳ್ಳುತ್ತಾ ಮಲಗಿಬಿಡುತ್ತಾಳೆ. ಇಂದು ಈ ಲೇಖನ ಬರೆಯುವುದಕ್ಕೆ ಕೊಂಚ ಮುಂಚೆ Czech Republic ನಿಂದ ಮನೆಗೆ ಫೋನ್ ಮಾಡಿದಾಗ ಆಕೆ ಇನ್ನೂ ಎಚ್ಚರವಾಗಿಯೇ ಇದ್ದಳು.ರಾತ್ರಿ ಹನ್ನೊಂದಾಗಿದ್ದರೂ ಮಲಗಿರಲಿಲ್ಲ. ಅವಳೊಂದಿಗೆ ಏನೇನೋ ಮಾತನಾಡಿದ ಮೇಲೆ ಕೊನೆಗೆ "ಪಪ್ಪಾ,ನನಗೆ ಏನನ್ನಾದರೂ ಹಾಡು"ಎಂದಳು."ನಾಕುತಂತಿ" ಹಾಡಿದೆ. ಹಾಡು ಮುಗಿಯುವುದರಲ್ಲಿ ಅಕೆಯ ಕಣ್ಣಿಗೆ ನಿದ್ರೆ ಹತ್ತಿತ್ತು.

ಎದುರಿದ್ದಾಗ ಮಕ್ಕಳು ಹಠ ಹಿಡಿದಾಗ ಸಹನೆ ಕಳೆದುಕೊಂಡು, ಅವುಗಳ ತರಲೆಗಳನ್ನು ನೋಡಿ ಬೇಸತ್ತು ಹೋಗಿರುತ್ತೇವೆ . ಅವುಗಳು ಎದುರಿಲ್ಲದಿದ್ದಾಗ ಅವುಗಳ ಗೈರುಹಾಜರಿಯಿಂದ ಉಂಟಾಗುವ ಒಂಟಿತನದ ಭಾವ ಇದೆಯಲ್ಲ, ಅದನ್ನು ಆ ಕಷ್ಟ ಅನುಭವಿಸಿದವನೇ ಬಲ್ಲ!!

ನಿಮ್ಮವನು
ಸಂತು.

Friday, February 1, 2013

ಹಿಂಗಿದ್ರು ನಮ್ ಮೇಷ್ಟ್ರು!

(ದಿನಾಂಕ 31-ಜನವರಿ-೨೦೧೩ ರಂದು ಅವಧಿಯಲ್ಲಿ ಪ್ರಕಟವಾದ ನನ್ನ ಲೇಖನ.
 http://avadhimag.com/?p=73186)

ಆರನೇ ಕ್ಲಾಸು ನಡೆಯುತ್ತಿತ್ತು.ಸಮಾಜ ವಿಜ್ಞಾನಕ್ಕೆ ಯಾರೂ ಇಲ್ಲದ ಕಾರಣ ನಮ್ಮ ಶಾಲೆಯ ಮುಖ್ಯೋಪಧ್ಯಾಯರೇ ಆ ವಿಷಯವನ್ನೂ ತೆಗೆದುಕೊಳ್ಳುತ್ತಿದ್ದರು.ವಿದ್ಯಾರ್ಥಿಗಳು ಅಷ್ಟೊಂದು ಸೀರಿಯಸ್ ಆಗಿ ಕುಳಿತುಕೊಳ್ಳುತ್ತಿರಲಿಲ್ಲ.ಸ್ವಲ್ಪ ದಿನಗಳಲ್ಲೇ ಇದ್ದಕ್ಕಿದ್ದಂತೆ ಹೊಸ ಉಪಾಧ್ಯಾಯರ ನೇಮಕವಾಯಿತು. ಎಲ್ಲ ವಿದ್ಯಾರ್ಥಿಗಳಿಗೂ ಹೊಸ ಮೇಷ್ಟ್ರು ಹೇಗಿರುತ್ತಾರೋ ಅನ್ನುವ ಕುತೂಹಲ. ಆ ಕುತೂಹಲ ಬಹಳಷ್ಟು ದಿನ ಉಳಿಯಲಿಲ್ಲ. ನಮ್ಮ ತರಗತಿಗೂ ಅವರನ್ನೇ ಪಾಠ ಮಾಡಲು ನೇಮಕ ಮಾಡಲಾಯಿತು.

ಕ್ಲಾಸಿನಲ್ಲಿ ಇದ್ದುದರಲ್ಲೇ ನಾನು ಕೊಂಚ ಚೆನ್ನಾಗಿ ಓದುತ್ತಿದ್ದೆ. ಅಪ್ಪ ಅಮ್ಮನಿಂದ ಯಾವತ್ತೂ ಓದಿನ ವಿಷಯಕ್ಕೆ ಹೀಗೆಯೇ ಮಾಡಬೇಕು ಅಂತ ಹೇಳಿಸಿಕೊಂಡವನಲ್ಲ. ಎಂದಿಗೂ ಯಾರಿಂದಲೂ ಬೈಸಿಕೊಳ್ಳದ ನಾನು ಅವತ್ತು ಮಾತ್ರ ದೊಣ್ಣೆಯಿಂದ ಪಟಾರನೆ ಏಟು ತಿಂದಿದ್ದೆ. ಮೊದಲ ಬೆತ್ತದೇಟು ಕಣ್ಣಲ್ಲಿ ನೀರು ತರಿಸಿತ್ತು. ಮನೆಗೆ ಹೋಗಿ ಏನೂ ಆಗಿಲ್ಲದವನಂತೆ ಸುಮ್ಮನಿದ್ದೆ. ಎಲ್ಲರಿಂದಲೂ ಬಹಳ ಹೊತ್ತು ಮುಚ್ಚಿಡಲಾಗಲಿಲ್ಲ. ಅಜ್ಜಿ ಕೆಂಪಾಗಿದ್ದ ನನ್ನ ಕೈ ನೋಡಿ “ಯಾವನ ಅವ ನನ್ ಕೂಸುನ್ ಕೈಗ್ ಹೊಡದೌನು? ಅವನ್ಗೇನು ಎದೆ ಸಿರ ಮುರದೋಗಿದ್ದ?” ಅಂತ ಹೊಡೆದ ಮೇಷ್ಟ್ರಿಗೆ ಬೈದಿದ್ದರು.
(ಯಾರು ನನ್ನ ಕೂಸಿನ ಕೈಗೆ ಹೊಡೆದಿದ್ದು, ಅವನಿಗೇನು ಎದೆ ಶಿರ ಮುರಿದು ಹೋಗಿದೆಯ?– ಕೊಳ್ಳೇಗಾಲದ ನಮ್ಮ ಭಾಷೆ!!)

ಅಷ್ಟಕ್ಕೂ ಆ ಮೇಷ್ಟ್ರು ನನಗೆ ಏಟು ಕೊಟ್ಟಿದ್ದು ನನ್ನ ಬಳಿ ಪಠ್ಯಪುಸ್ತಕ ಇಲ್ಲವೆಂದಿದ್ದಕ್ಕೆ. ಶಾಲೆ ಶುರುವಾಗಿ ಒಂದೂವರೆ ತಿಂಗಳಾದರೂ ಇನ್ನೂ ಪಠ್ಯಪುಸ್ತಕ ಕೊಂಡಿರಲಿಲ್ಲ. ಕೊಳ್ಳಲು ಹಣವೂ ಇರಲಿಲ್ಲ. ಬರೀ ಮೇಷ್ಟ್ರು ಮಾಡುವ ಪಾಠ ಕೇಳಿ,ಅವರು ಕೊಡುತ್ತಿದ್ದ ನೋಟ್ಸ್ ನಿಂದಲೇ ಓದಿಕೊಳ್ಳುತ್ತಿದ್ದೆವು.ಆದರೆ ಈಗ ಹಾಗಲ್ಲ. ಹೊಸ ಮೇಷ್ಟ್ರು ಎಲ್ಲರಿಗೂ ಬಿಸಿ ಮುಟ್ಟಿಸಿದ್ದರು.ಅದೇ ನಾಳೆ ಎಲ್ಲರೂ ಅಪ್ಪ ಅಮ್ಮನಿಂದ ಸಾಲ ಮಾಡಿಸಿಯಾದರೂ ಪುಸ್ತಕ ಕೊಂಡು ತರಗತಿಯೊಳಗೆ ಕಾಲಿಟ್ಟಿದ್ದರು. ಆ ಬದಲಾವಣೆ ತಂದ ಮೇಷ್ಟ್ರ ಹೆಸರು “ಜಯಣ್ಣ”.

ಜಯಣ್ಣ ಮೇಷ್ಟ್ರು ಬಂದಾಗಿನಿಂದ ಮಕ್ಕಳ ಶಿಸ್ತು ಕೊಂಚ ಸುಧಾರಿಸಿತು. ಮುಂದಿನ ಪಿರಿಯಡ್ ಸಮಾಜವೆಂದರೆ ಇಡೀ ಕ್ಲಾಸು ನಿಶ್ಶಬ್ದ. ನಂತರದ ದಿನಗಳಲ್ಲಿ ನಿಜಕ್ಕೂ ಆ ಮೇಷ್ಟ್ರ “ಹವಾ” ಯಾವ ಮಟ್ಟಕ್ಕೆ ತಲುಪಿತ್ತೆಂದರೆ,ಒಂದು ದಿನ ಶಾಲೆ ಮುಗಿಸಿ ಮನೆಗೆ ಬಂದ ನನ್ನ ತಮ್ಮ, ನಮ್ಮಮ್ಮನಿಗೆ “ನಮ್ಮ ಜಯಣ್ಣ ಮೇಷ್ಟ್ರ ಬಗ್ಗೆ ನಿಂಗೆ ಗೊತ್ತಿಲ್ಲ. ಹೆಂಗ್ ಹೊಡಿತಾರೆ ಗೊತ್ತಾ? ದೊಣ್ಣೆ ಹಿಡ್ಕೊಂಡ್ ಬಂದ್ರೆ ನೀನೂ ಓಡಬೇಕು!!” ಅಂತ ಹೇಳಿದ್ದ.

======================================================

ಶಾಲೆ ಮುಗಿಸಿ ಕಾಲೇಜಿಗೆಂದು ಮೈಸೂರಿಗೆ ಕಾಲಿಟ್ಟಿದ್ದೆ. ಆಗ ತಾನೇ 10ನೇ ತರಗತಿ ಮುಗಿಸಿ ಶಾಲೆಯಿಂದ ಹೊರಬಂದ ಮಕ್ಕಳಿಗೆ ಅದೇನೋ ಹೊಸ ತರಹದ ಹುಮ್ಮಸ್ಸು.ಅದೇನೋ ಆ ಚಿಕ್ಕಮಕ್ಕಳು ಎಂಬ ಹಣೆಪಟ್ಟಿ ಕಳಚಿ ಕಾಲೇಜು-ಹುಡುಗರು ಎಂಬ ಹೊಸ ಹೆಸರು ಬಂದೊಡನೆ ಹಕ್ಕಿಗಳಿಗೆ ರೆಕ್ಕೆ ಬಂದ ಹಾಗಾಗಿಬಿಡುತ್ತದೆ ಮನಸು.ಯಾರಾದರೂ ಲೆಕ್ಚರರ್ ಕ್ಲಾಸಿನಲ್ಲಿ ಗಲಾಟೆ ಮಾಡುತ್ತಿದ್ದ ಅಂತ ಗದರಿಸಿದರೆ, “ಏನಪ್ಪಾ ಜಾಸ್ತಿ ಮಾತಾಡ್ತಿದ್ದೀಯ, ಹೊರಗಡೆ ಬಾ ನೋಡ್ಕೊತ್ತೀನಿ” ಅಂತ ಅವರನ್ನೇ ಗದರಿಸಿದ ಸಹಪಾಠಿಗಳೂ ಇದ್ದರು.

ಅಂತಹ ವಾತಾವರಣದಲ್ಲಿ ನವಯುವಕರ ಚಳಿಬಿಡಿಸಲೆಂದು ಬಂದ ಸಿಪಾಯಿಯೆಂದರೆ ಪ್ರೊಫೆಸರ್ ಸಾಂಬಶಿವಯ್ಯ. ಸೇನೆಯಿಂದ ನಿವೃತ್ತಿ ಪಡೆದು ಬಂಡ ನಂತರ ನಮ್ಮ ಕಾಲೇಜಿಗೆ ಪ್ರೊಫೆಸರ್ ಆಗಿ ಕಾರ್ಯ ಸಲ್ಲಿಸುತಿದ್ದರು.ಮೊದಲೇ ಮಿಲಿಟರಿ ಮ್ಯಾನ್. ಆರಡಿ ದೇಹದ, ಕಂಚಿನ ಕಂಠದ ಸಾಂಬ ಶಿವಯ್ಯ ನಡೆದು ಬರುತ್ತಿದ್ದರೆ ಪ್ರತಿಯೊಬ್ಬರಿಗೂ ಭಯವಾಗುತ್ತಿತ್ತು. ಕಾಲೇಜಿನೊಳಕ್ಕೆ ನಡೆದು ಬರುತ್ತಿದ್ದರೆ, ಹೆಚ್ಚು ಕಡಿಮೆ ಒಂದು ಫರ್ಲಾಂಗ್ ನಷ್ಟು ಕಾಣುವ ಕಾರಿಡಾರಿನಲ್ಲಿ ಒಬ್ಬನೇ ಒಬ್ಬ ವಿದ್ಯಾರ್ಥಿಯೂ ಕಾಣಿಸಿಕೊಳ್ಳುತ್ತಿರಲಿಲ್ಲ. ಯಾಕೆಂದರೆ ಬೋರೆನಿಸುವ ಪಿರಿಯಡ್ಡುಗಳನ್ನೂ ಅಟೆಂಡ್ ಮಾಡಿಸದೆ ಬಿಡುತ್ತಿರಲಿಲ್ಲ ಅಸಾಮಿ.ಭೌತಶಾಸ್ತ್ರವನ್ನು ಎಲ್ಲ ಪಿಯುಸಿ ತರಗತಿಗಳಿಗೆ ಪಾಠ ಮಾಡುತ್ತಿದ್ದ ಅವರ ಕೈಯಲ್ಲಿ, ಯಾವಾಗಲೂ ಒಂದು ಪುಸ್ತಕ ಮತ್ತು ನಾಲ್ಕಡಿ ಉದ್ದದ ಕೋಲು! ಎಲ್ಲಾದರೂ ಯಾವುದೇ ವಿದ್ಯಾರ್ಥಿ ಪಿರಿಯಡ್ ಬಂಕ್ ಮಾಡಿ ಹೊರಟು ಸಿಕ್ಕಿಹಾಕಿಕೊಂಡರೆ ಮುಗಿಯಿತು. ಹಣ್ಣುಗಾಯಿ ನೀರುಗಾಯಿ!! ತಪ್ಪಿಸಿಕೊಂಡರೂ ಅವರ ಐಡಿ ಕಾರ್ಡ್ ನಂಬರ್ ಬರೆದುಕೊಂಡು ಅವರಪ್ಪ ಅಮ್ಮನಿಗೆ ಒಂದು ಲೆಟರ್ ಬರೆದುಬಿಡುತ್ತಿದ್ದರು. ಅವರೇ ಎನ್ ಸಿ ಸಿ ಗೆ ಮುಖ್ಯಸ್ಥರಾಗಿದ್ದರಿಂದ ಎಲ್ಲಿ ತಪ್ಪಿಸಿಕೊಂಡರೂ ಅಲ್ಲಿ ಬಿಡುತ್ತಿರಲಿಲ್ಲ. ಕ್ಲಾಸಿನಲ್ಲಿ ಅವರು ಪಾಠ ಮಾಡುವಾಗ ಸೂಜಿ ಬಿದ್ದರೂ ಶಬ್ದ ಸ್ಪಷ್ಟ. ಅಷ್ಟೊಂದು ನಿಶ್ಶಬ್ದ.ಅವರ ಉಪಟಳ ತಡೆಯಲಾಗದೆ ಒಬ್ಬ ಹುಚ್ಚು ವಿದ್ಯಾರ್ಥಿ ಅವರಿಗೆ ಬುದ್ಧಿ ಕಲಿಸಬೇಕೆಂದು ಅವರ ಮನೆ ವಿಳಾಸ ಹುಡುಕಿ ಹಾವೊಂದನ್ನು ದಪ್ಪ ಬಾಕ್ಸಿನಲ್ಲಿಟ್ಟು ಕೊರಿಯರ್ ಮಾಡಿದ್ದನಂತೆ!!

ಆಮೇಲೇನಾಯಿತು ಎಂಬುದು ಇಲ್ಲಿ ಮುಖ್ಯವಲ್ಲ!!

ಮನೆಯಲ್ಲಿ ಎಲ್ಲ ಮಕ್ಕಳು ಅಪ್ಪ ಅಮ್ಮಂದಿರಿಗೆ ಆ ಪ್ರೊಫೆಸರ್ ರ ವಿಷಯವನ್ನು ಹೇಳಿದ್ದರೂ, ಎಲ್ಲ ತಂದೆತಾಯಿಗಳೂ ತಮ್ಮ ಮಕ್ಕಳ 2ನೇ ವರ್ಷದ ಪಿಯುಸಿಗೆ ಅವರ ಬಳಿಯೇ ಭೌತಶಾಸ್ತ್ರಕ್ಕೆ ಟ್ಯೂಶನ್ ಕಲಿಸಲು ನಾ ಮುಂದು ತಾ ಮುಂದು ಎಂಬಂತೆ ವ್ಯವಸ್ಥೆ ಮಾಡುತ್ತಿದ್ದರು. ಅವರ ಬಳಿ ಟ್ಯೂಶನ್ ಗೆ ವರ್ಷದ ಮುಂಚೆಯೇ ನೋಂದಣಿಯಾಗಿಬಿಡುತ್ತಿತ್ತು. ಯಾಕೆಂದರೆ ಅವರ ಬಳಿ ಟ್ಯೂಶನ್ ಗೆ ಹೋದವರಿಗೆ ಭೌತಶಾಸ್ತ್ರದಲ್ಲಿ ಫೇಲಾಗುವ ಅಥವಾ ಕಡಿಮೆ ಅಂಕ ಪಡೆಯುವ ಭಯವಿರುತ್ತಿರಲಿಲ್ಲ.

======================================================

ನಮ್ಮ ಬಾಲ್ಯದ ಶಾಲೆಯನ್ನು ನೆನಪಿಸಿಕೊಳ್ಳುವಾಗ ತುಂಬಾ ನೆನಪಿಗೆ ಬಂದವರೆಂದರೆ ಇದೇ ಜಯಣ್ಣ ಮೇಷ್ಟ್ರು.ಕೆಲವು ಹಳ್ಳಿಯ ಹುಡುಗರು ಎಷ್ಟು ಮೊಂಡರಿರುತ್ತಾರೆ ಎಂದರೆ ಅವರಿಗೆ ಅಷ್ಟು ಶಿಸ್ತು ಕಲಿಸದಿದ್ದರೆ ಜಪ್ಪಯ್ಯ ಎಂದರೂ ಕಲಿಯುವುದಿಲ್ಲ.ಬರೀ ಹೊಡೆಯುವ ವಿಷಯದಲ್ಲಿ ಜಯಣ್ಣ ಮೇಷ್ಟ್ರು ಕೊಂಚ ಒರಟುತನ ತೋರಿಸುತ್ತಿದ್ದರೆ ವಿನಹ ಪಾಠದಲ್ಲಿ ಮಾತ್ರ ಬಹಳ ಶಿಸ್ತು.ಆ ಶಾಲೆಯಲ್ಲಿ ಓದುವ ಸಮಯದಲ್ಲಿ ಅವರ ದೊಣ್ಣೆಗೆ ಹೆದರಿ ಅವರಿಗೆ ಬಹಳ ಶಾಪ ಹಾಕುತ್ತಿದ್ದುದು ನಿಜ.ಆದರೆ ಒಂದು ಬಾರಿ ಶಾಲೆಯನ್ನು ಬಿಟ್ಟು ಹೊರಗೆ ಬಂದ ಮೇಲೆ ಅದೇ ಜಯಣ್ಣ ಮೇಷ್ಟ್ರು ಯಾಕೋ ಮನಸ್ಸಿನಲ್ಲಿ ತುಂಬಾ ಕಾಡತೊಡಗುತ್ತಾರೆ. ಶಾಲೆ ಬಿಟ್ಟ ಮರುಘಳಿಗೆ ನಮಗನ್ನಿಸುವುದು ಅವರು ಕಲಿಸಿದ ಶಿಸ್ತಿನಿಂದಲೇ ಅಲ್ಲವೇ ಇವೆಲ್ಲ ಸಾಧಿಸಲಿಕ್ಕೆ ಆಗಿದ್ದು ಅಂತ.

ಮೊನ್ನೆ ಮೊನ್ನೆ ಊರಿಗೆ ಹೋಗಿದ್ದಾಗ ನಾನು ಜಯಣ್ಣ ಮೇಷ್ಟ್ರ ಬಗ್ಗೆ ಪ್ರಸ್ತಾಪಿಸಿದಾಗ ಅವರು ಬಹಳ ವರ್ಷಗಳ ಹಿಂದೆಯೇ ಬೇರೆ ಊರಿಗೆ ವರ್ಗವಾಗಿ ಹೋಗಿದ್ದಾರೆ. ಅವರಿಗೆ ಕೊಂಚ ವಯಸ್ಸಾಗಿ ಕಣ್ಣು ಅಷ್ಟೊಂದು ಸರಿಯಾಗಿ ಕಾಣುತ್ತಿಲ್ಲ. ಮುಂಚಿನಷ್ಟು ಹುರುಪಿಲ್ಲ,ಬಹಳ ಸೊರಗಿ ಹೋಗಿದ್ದಾರೆ ಅಂತ ಹೇಳಿದರು. ಯಾಕೋ ಮನಸ್ಸಿಗೆ ಬಹಳ ನೋವಾಯಿತು.
ಕಾಲೇಜಿನ ಬಿಸಿರಕ್ತಗಳ ಸೊಕ್ಕಡಗಿಸಿದ್ದ ಸಾಂಬಶಿವಯ್ಯನವರು ಈಗ ಅದೇ ಕಾಲೇಜಿನ ಪ್ರಿನ್ಸಿಪಾಲರಾಗಿದ್ದಾರೆ ಅಂತ ಕೇಳಿ ಸಂತೋಷವಾಯಿತು.ದೇವರು ಅವರೆಲ್ಲರನ್ನೂ ಚೆನ್ನಾಗಿಟ್ಟಿರಲಿ.

ಖಂಡಿತ ಪ್ರತೀ ಶಾಲೆಯಲ್ಲಿ, ಕಾಲೇಜಿನಲ್ಲಿ ಇಂತಹ ಕೊಂಚ ಶಿಸ್ತಿನ, ಕೋಪಿಷ್ಠ ಆದರೆ ಬದಲಾವಣೆಗೆ ಕಾರಣರಾದ ಗುರುಗಳು ಒಬ್ಬರಾದರು ನಿಮಗೆ ಖಂಡಿತ ಸಿಗುತ್ತಾರೆ. ಈ ಲೇಖನ ಓದುವಾಗ ಖಂಡಿತ ನಿಮಗೆ ಅವರುಗಳ ಚಿತ್ರಪಟ ಮನಸ್ಸಿನಲ್ಲಿ ಮಿಂಚಿ ಮರೆಯಾಗಿರುತ್ತದೆ. ಜೊತೆಗೆ ಮತ್ತೊಮ್ಮೆ ಅವರ ಬಗ್ಗೆ ಗೌರವ ಮೂಡಿರುತ್ತದೆ.
ಹೌದಾ?…ಹಾಗಿದ್ದರೆ ನನ್ನ ಶ್ರಮ ಸಾರ್ಥಕ.

 ನಿಮ್ಮವನು
 ಸಂತು

Sunday, January 20, 2013

ಜನಪ್ರಿಯ (ಚುಟುಕಗಳು)



                                                                                                                                             (ಚಿತ್ರಕೃಪೆ:Google)
ಜನಪ್ರಿಯ


ನಮ್ಮ ನಿಮ್ಮೆಲ್ಲರ
ಜನಪ್ರಿಯ ನಾಯಕ
ಎಂದ ಮೇಲೂ
ನೆರೆದಿದ್ದ ಜನ
ಪಿಸುಗುಟ್ಟಿಕೊಂಡರಂತೆ,
ಯಾರವನು?

===============================

ಸಂಪಾದನೆ

ಕೆಲವರಿಗಂತೂ ಕಷ್ಟದ ಕೂಗು
ಕೇಳುವ ಕಿವಿಗಳಿರದಿದ್ದರೂ,
ಕೆರ ಕಾಯುವವನಿಗೆ
ಕಾಸು ಕೊಡುವ ಕರಗಳಿರುತ್ತವೆ.

ಅದಕಾಗಿಯೇ,
ದೇಗುಲದ ಮುಂದಿನ
ಕೆರ ಕಾಯುವವ
ಭಿಕ್ಷುಕನಿಗಿಂತ ಸಿರಿವಂತ!!

===============================

ನೆನಪು

ಹುಡುಗೀ,
ಹರಿದ ಪುಸ್ತಕದ
ಕಳೆದ ಪುಟಗಳೇ ನೀನು.
ಅಂತ್ಯವಿಲ್ಲದ ಕತೆಗೆ
ಬರೀ ಮುನ್ನುಡಿಯೇ ನೆನಪು!!

===============================

Sunday, January 13, 2013

ಕರಗಿ!! (ಚುಟುಕಗಳು)



 ಕರಗಿ!!

ಬಲಾತ್ಕಾರಕ್ಕೆ ಬಲಿಯಾದ
ಬಾಲೆಯ ಪರ
ಪ್ರತಿಭಟನೆಯಲ್ಲಿ,
ಹಚ್ಚಿದ್ದ
ಮೇಣದಬತ್ತಿಗಳೂ
ಕಣ್ಣೀರಿಡುತ್ತಿದ್ದವು....
ಕರಗಿ!!

====================================
  ಹೆಣ್ಣು ಹೆತ್ತಾಗ!!

"ಹೆಮ್ಮಾರಿ ಹೆತ್ತವ್ಳೆ ಹೆಣ್ಣ"
ಎಂದು ಅಮ್ಮಂಗೆ ಬೈದು,
ನನ್ನನ್ನು ನೋಡಲು ಬರದ ನಮ್ಮಪ್ಪ,
ಇಂದು ಮನೆ ಬಿಟ್ಟ ಮಗನನ್ನು
ನೋಡಿ ಹೇಳುತ್ತಿದ್ದಾನೆ,
"ಆವ ನನ್ನ ಪಾಲಿಗೆ ಸತ್ತ,
ಇರುವವಳೊಬ್ಬಳೇ ನನ್ನ ಮಗಳು!!"
====================================

ಹೋರಾಟ!! 

ಮಹಿಳೆಯರ
ಶೋಷಣೆಯ ವಿರುದ್ಧ
ಘೋಷಣೆ ಕೂಗಿ,
ಮನೆಗೆ ಬಂದ ಗಂಡ,
ಊಟ ರೆಡಿಯಿಲ್ಲವೆಂದು,
ಹೆಂಡತಿಗೆ ಬಡಿಗೆಯೆತ್ತಿಕೊಂಡ!!
====================================

Sunday, January 6, 2013

ದಾಂಪತ್ಯ

                                                                                                            (ಚಿತ್ರಕೃಪೆ:Google)


ಮುನಿಸಿಕೊಂಡ ಮೌನ ಮಾತಾಡಲಿಲ್ಲ,
ಮಾತು ಮಾತಾಡಿಸುವುದ ಮರೆಯಲಿಲ್ಲ.

ಕ್ಷಣಕ್ಷಣವೂ ಕಾಲದೂಡುವರು ಕಷ್ಟಸುಖಗಳಲ್ಲಿಯೇ,
ನೂರ್ಕಾಲವೂ ನಡೆಯುವರು ನೆಮ್ಮದಿಯಲ್ಲಿಯೇ.

ಬದುಕುತ್ತಾರಿಬ್ಬರೂ ಬವಣೆಗಳ ಬಂಧನದಿಂದಾಚೆ,
ಬಲ್ಲಿದರಾಗಲಿ ಬಡವರಾಗಲಿ ಬಾಹುಬಂಧನಗಳಿಂದೀಚೆ.

ಸಂಸಾರ ಸಾಗರದಲಿ ಸಮರಸವಿಬ್ಬರದೂ ಸೇರಿ,
ದೂರವಾಗದಿವರ ದಾಂಪತ್ಯಕ್ಕದೊಂದೇ ದಾರಿ.

ಮಾತು ಮಾತಾಡುವಾಗ ಮೌನ ಮೌನವಾಗಿರುತ್ತದೆ,
ಮೌನ ಮಾತಾಡುವಾಗ ಮಾತು ಮೌನವಾಗಿರುತ್ತದೆ!!

                                                                             --ಸಂತು