Saturday, June 2, 2012

ಹೀಗೂ ಉಂಟು!!


ಕಣ್ಣಾಮುಚ್ಚಾಲೆಯಾಡುತ್ತಾನೆ
ಮೋಡದೊಳಗೆ ಸೇರಿ ರವಿಯೂ,
ನಾ ಕ್ಯಾಮೆರಾವನೆತ್ತಿಕೊಂಡಾಗ..

ಆಕೆ ಮುನಿಸಿಕೊಂಡಾಗ
ಪಾತ್ರೆಗಳೂ ಮಾತನಾಡುತ್ತವೆ.

ಅಕ್ಕಿ ಮುಗಿದಾಗಲೇ ಯಾಕೋ
ಹಸಿವು ಹೆಚ್ಚಾಗುತ್ತದೆ.

ಹಾವೂ ವಿಷವುಗುಳುತ್ತದೆ
ಬಾಯಿಗೇಕೋ ರುಚಿಯೆನಿಸದೇ.

ಪಕ್ಕದ ಛತ್ರದ ಮಂಗಳವಾದ್ಯಗಳೂ
ನಿದ್ರೆ ಹಾಳು ಮಾಡುತ್ತವೆ
ಬೆಳಗಿನ ನಿದ್ರೆ ಅಮಂಗಳವೆಂದು ಹೇಳುತ್ತಾ.

ಸಮುದ್ರವೇಕೋ ನೀರು ಕುಡಿಯುತ್ತಲೇ ಇದೆ,
ತನ್ನೊಡಲೊಳಗಿರುವ ನೀರು
ದಾಹವ ತೀರಿಸುತ್ತಿಲ್ಲವೆಂಬಂತೆ.

ಹಸಿದ ಹೊಟ್ಟೆಯವನ ಬಾಯಲ್ಲಿ
ಎಂಜಲೆಲೆಯ ಮೇಲಿನ ಮೈಸೂರು ಪಾಕೂ ನೀರೂರಿಸುತ್ತದೆ.

ತಲೆನೋವು ಮಾಯವಾಗುತ್ತದೆ
ಬರೀ ಅವಳ ಸ್ಪರ್ಶದಿಂದ, ಅಮೃತಾಂಜನವಿಲ್ಲದೆಯೇ.

ಅವ ಆ ನಿಷೇಧವಿರುವ ಜಾಗದಲ್ಲೇ ಉಗುಳುತ್ತಾನೆ,
ಆ ಫಲಕವ ಬರೆದವನ ನೆನೆಸಿಕೊಳ್ಳುತ್ತ.

ಮುಟ್ಟಿದೊಡನೆ ನೀರಲ್ಲಿದ್ದ ಚಂದಿರ
ಕಣ್ಮರೆಯಾಗಿ ಸೇರುತ್ತಾನೆ ನೀಲಾಕಾಶ.

ಕುಡಿದು ಓಡಿಸುವವನ ಗಾಡಿಯೂ
ತೂರಾಡುತ್ತಲೇ ಬರುತ್ತದೆ!!
 -ಸಂತು                
                                                

                                                                          
ಸ್ನೇಹಿತರೆ,
ನಮ್ಮ ಸುತ್ತಮುತ್ತಲ ಕ್ರಿಯೆಗಳನ್ನು ಇದ್ದಂತೆಯೇ ನೋಡದೇ ಬೇರೆಯದೇ ದೃಷ್ಟಿಕೋನದಿಂದ ನೋಡುವ ಚಿಕ್ಕಪ್ರಯತ್ನ.
ಪ್ರತಿ ಸಾಲುಗಳನ್ನು ಎರಡೆರಡು ಬಾರಿ ಓದಿದರೆ ಸೂಕ್ಷ್ಮ ಅರಿವಿಗೆ ಬರುತ್ತದೆ.ಧನ್ಯವಾದಗಳು.