Sunday, December 30, 2012

ಸಜೆ

                                                                                                                           (ಚಿತ್ರಕೃಪೆ:Google)

ಚಿನ್ನದ ಸರ ಕಳುವಾಯಿತು,
ಪೊಲೀಸರು ಹಿಡಿದರು,
ಸರ ಮರಳಿ ಬಂತು.
ಅಪರಾಧಿಗೆ
ಒಂದು ವರ್ಷದ ಸಜೆ!!

ಅಲ್ಯಾರೋ ಶೀಲ ಕಳೆದುಕೊಂಡರು,
ಪೊಲೀಸರು ಹಿಡಿದರು,
ಕೋಟಿ ಜನ ಮಾತಾಡಿದರು.
ಸಂತ್ರಸ್ತೆಗೆ
ಜೀವನ ಪೂರ್ತಿ ಸಜೆ!!

("ಅವಧಿ"ಯಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸಿ ಸಂಚಿಕೆಗೆ ನಾ ಕಳಿಸಿದ ಪುಟ್ಟ ಕವನ:
http://avadhimag.com/?p=72633)

Monday, December 24, 2012

ಚೀಟ …..ಚೀಟ .....
ಆಕೆಗೆ ಅರ್ಥವಾಗಲಿಲ್ಲ!!
ನನ್ನ ಸಹಪಾಠಿಯೊಬ್ಬ ಮತ್ತೊಮ್ಮೆ "ಚೀಟ" ಅಂತ ಸಂಬೋಧಿಸಿ ಕರೆದಾಗ ಹೊಸದಾಗಿ ಬಂದಿದ್ದ ಆ ಉಪಾಧ್ಯಾಯಿನಿಯೊಬ್ಬರು ಅಕ್ಷರಶಃ ಏನೆಂದು ತಿಳಿಯದೆ ದಂಗಾಗಿ ಹೋಗಿದ್ದರು!!
ಕೊನೆಗೆ ಬೇರೆ ಮಾಸ್ತರರೊಬ್ಬರು ಆತ ಕರೆದಿದ್ದು "ಟೀಚರ್" ಅಂತ ತಿಳಿಹೇಳಿದಾಗಲೇ ಆಕೆಗೆ ಅರ್ಥವಾಗಿದ್ದು!!

"ಟೀಚರ್" ಬರುಬರುತ್ತಾ "ಟೀಚ" ಆಗಿ, ಕೊನೆಗೆ "ಚೀಟ" ಅಂತ ಮಾರ್ಪಾಡಾಗಿತ್ತು!!
ಕೊನೆಗೂ ಆತ "ಟೀಚರ್"ನ್ನು ಕಲಿಯಲೇ ಇಲ್ಲ, ಅವರು ಕಲಿಸಿದ್ದನ್ನು ಕೂಡ!! ಅದು ಬೇರೆ ವಿಷಯ.
ನಾ ಕಲಿತ ನಮ್ಮೂರ ಶಾಲೆಯ ಹುಡುಗರ ಮುಗ್ಧತೆಗೆ ಇದೊಂದು ಉದಾಹರಣೆಯಷ್ಟೇ.

ವರ್ಷಕ್ಕೊಮ್ಮೆ ಉಚಿತ ಪುಸ್ತಕಗಳನ್ನು ಸರ್ಕಾರ ಕೊಡುತ್ತಿತ್ತು. ಅದು ಬರೇ ಒಂದನೇ ಮತ್ತು ಎರಡನೇ ತರಗತಿಗೆ ಮಾತ್ರ.
ಮುಂದಿನ ವಾರ ಹೊಸ ಪುಸ್ತಕ ಬರುತ್ತಿದೆಯೆಂದರೆ ಈಗಿಂದೀಗಲೇ ಮನಸ್ಸು ಬಕ ಪಕ್ಷಿಯಂತೆ ಕಾಯುತ್ತಿರುತ್ತಿತ್ತು!! ಉಚಿತ ಪುಸ್ತಕ ವಿತರಿಸಿದ ದಿನ ಊಟ, ನಿದ್ರೆ ಏನೂ ಬೇಡ. ಅಪ್ಪನಿಂದ ದುಡ್ಡು ತೆಗೆದುಕೊಂಡು ಶೆಟ್ಟರಂಗಡಿಯ ರಟ್ಟು ತಂದು ಜೋಪಾನವಾಗಿ ಆ ಪುಸ್ತಕಕ್ಕೆ ಹೊರಕವಚ ಹಾಕಿ, ಓದಲು ಕುಳಿತುಬಿಡುತ್ತಿದ್ದೆವು. ಇಡೀ ಪುಸ್ತಕದಲ್ಲಿಯ ಚಿತ್ರಗಳನ್ನು ನೋಡಿ, ನಂತರ ಎಲ್ಲ ಪಾಠ ಓದಿ ಮುಗಿಸಿದ ನಂತರವಷ್ಟೇ ಉಳಿದ ಪ್ರಪಂಚ ಅರಿವಿಗೆ ಬರುತ್ತಿದ್ದುದು!!

ನಿಮಗೆ ಗೊತ್ತಾ?
ಐದನೇ ಕ್ಲಾಸಿಂದ ಆರನೇ ಕ್ಲಾಸಿಗೆ ಹೋಗಬೇಕಾದರೆ ನಮ್ಮೂರ ಶಾಲೆಯಲ್ಲಂತೂ ಬಹಳ ಸುಲಭವಿತ್ತು. ಬರೀ ಹಿಂದೆ ತಿರುಗಿ ಕುಳಿತರೆ ಸಾಕು!! ಗಾಬರಿಯಾಗಬೇಡಿ. ಕೇವಲ ಒಂದೇ ಕೊಠಡಿಯಲ್ಲಿ ಐದನೇ ಮತ್ತು ಆರನೇ ತರಗತಿಗಳು ನಡೆಯುತ್ತಿದ್ದವು. ಗುಡುಗು ಮಳೆ ಸುರಿದು ಹೆಂಚುಗಳು ಹಾರಿಹೋಗಿ ಮಳೆ ಬಂದ ದಿನ ಐದನೇ ತರಗತಿಯ ಕೊಠಡಿಯೆಲ್ಲ ಜಲಾವೃತಗೊಂಡಿತ್ತು. ಸುತ್ತ ಹಸಿರು ಬೆಟ್ಟಗಳಿಂದ ಕೂಡಿದ್ದ ನಮ್ಮೂರಿನಲ್ಲಿ ಅದ್ಯಾವುದೋ ಕಾಲದಲ್ಲಿ ಗಾಳಿ ಬೀಸಲು ಶುರು ಮಾಡಿದರೆ ಮುಗಿಯಿತು, ಕೊಠಡಿಗಳ ಹೆಂಚುಗಳು ನಿಲ್ಲುವುದಿಲ್ಲ. ಹೆಂಚುಗಳೇನಾದರೂ ಅಪ್ಪಿತಪ್ಪಿ ಪುಟ್ಟ ಮಕ್ಕಳ ತಲೆಮೇಲೆ ಬಿದ್ದರೇನು ಗತಿ!!  ಆದ್ದರಿಂದ ಒಂದಷ್ಟು ತಿಂಗಳುಗಳ ಮಟ್ಟಿಗೆ ಐದನೇ ತರಗತಿಯ ಮಕ್ಕಳನ್ನು ಆರನೇ ತರಗತಿಯ ಕೊಠಡಿಯೊಳಗೇ ಕೂರಿಸಿ ಪಾಠ ಮಾಡಲು ವ್ಯವಸ್ಥೆ ಮಾಡಲಾಗಿತ್ತು.

ಪೂರ್ವಕ್ಕೊಂದು ಬ್ಲಾಕ್ ಬೋರ್ಡು. ಪಶ್ಚಿಮಕ್ಕೊಂದು ಬ್ಲಾಕ್ ಬೋರ್ಡು!!
ಐದನೇ ತರಗತಿಯ ಮಕ್ಕಳು ಕೊಠಡಿಯ ಅರ್ಧಭಾಗಕ್ಕೆ ಕುಳಿತು ಪಶ್ಚಿಮಕ್ಕೆ ಮುಖ ಹಾಕಿ ಕೂರಬೇಕು. ಹಾಗೆಯೇ ಆರನೆಯ ತರಗತಿಯ ಮಕ್ಕಳು ಕೊಠಡಿಯ ಇನ್ನರ್ಧಭಾಗಕ್ಕೆ ಕುಳಿತು ಪೂರ್ವಕ್ಕೆ ಮುಖ ಹಾಕಿ ಕೂರಬೇಕು.ಕೂರಲಿಕ್ಕೆ ಹಲಗೆಗಳೇ ಆಧಾರ. ಏಕಾಗ್ರತೆ ಅಂದರೆ ಅದು!!  ಬೇರೆ ಮಾಸ್ತರರು ಆರನೇ ಕ್ಲಾಸಿಗೆ ಯಾವ ಪಾಠ ಮಾಡುತ್ತಿದ್ದಾರೆ ಎನ್ನುವುದರ ಬಗ್ಗೆ ಕಿವಿಯಲ್ಲಿ ಕೇಳಿಸಿಕೊಳ್ಳದೆ, ಬರೀ ನಮ್ಮ ಐದನೇ ಕ್ಲಾಸಿನ ಮಾಸ್ತರರ ದನಿಯನ್ನು ಮಾತ್ರ ಆಲಿಸಬೇಕು. ಏಳನೇ ತರಗತಿಗೆ ಹೋಗುವುದೆಂದರೆ ಬಡ್ತಿ ಪಡೆದಂತೆ! ಏಕೆಂದರೆ ಕುಳಿತುಕೊಳ್ಳುವುದಕ್ಕೆ ಮುಂಚಿನಂತೆ ಹಲಗೆಗಳಿರಲಿಲ್ಲ, ಹೊಸ ಬೆಂಚುಗಳನ್ನು ಹಾಕಲಾಗಿತ್ತು!!

ತರಗತಿಯಲ್ಲಿದ್ದ ವಿದ್ಯಾರ್ಥಿಗಳನ್ನು ಆರು ಗುಂಪುಗಳನ್ನಾಗಿ ವಿಂಗಡಿಸಲಾಗಿತ್ತು.ತರಗತಿಯ ಬಾಗಿಲ ಹಿಂದೆ ಆ ಗುಂಪುಗಳ ಪಟ್ಟಿಯೊಂದನ್ನು ತಯಾರಿಸಿ ಅಂಟಿಸಲಾಗಿತ್ತು. ವಾರದ ಆರು ದಿನಗಳಲ್ಲಿ ದಿನಕ್ಕೊಂದು ಗುಂಪಿನಂತೆ ಪ್ರತಿ ಗುಂಪಿನ ಸದಸ್ಯರು ತರಗತಿಯ ಕೋಣೆಯ ಶುಚಿತ್ವ ಕಾಪಾಡಬೇಕು!! ಇಬ್ಬರು ಸದಸ್ಯರು ಹಲಗೆಗಳನ್ನು ಎತ್ತಿ ನಿಲ್ಲಿಸುವುದು, ನಂತರ ಮುಂಚಿನಂತೆ ಮಲಗಿಸುವುದನ್ನು ಮಾಡಿದರೆ,ಉಳಿದ ಸದಸ್ಯರು ಕಸ ಗುಡಿಸುತ್ತಿದ್ದರು. ಇನ್ನಷ್ಟು ಜನ ಪಕ್ಕದ ಬೋರ್ವೆಲ್ ನಿಂದ ಕೊಡಗಳಲ್ಲಿ ನೀರು ತಂದರೆ, ಉಳಿದವರು ಆ ನೀರನ್ನು ಶಾಲೆಯ ಮುಂದಿನ ಆವರಣದಲ್ಲಿ ನೀರು ಸಿಂಪಡಿಸಿ ಧೂಳು ಏಳದ ಹಾಗೆ ಮಾಡಬೇಕಿತ್ತು. ಇವೆಲ್ಲವೂ ಬೆಳಗಿನ 10 ಘಂಟೆಯ ಬೆಲ್ ಹೊಡೆಯುವುದರೊಳಗೆ ಮುಗಿಯಬೇಕು.

ದಿನಗಳೆದಂತೆ ಮಾಸ್ತರರು ಬರೆಯಲು ಬಳಸುತ್ತಿದ್ದ ಕಪ್ಪು ಹಲಗೆ ತನ್ನ ಬಣ್ಣ ಕಳೆದುಕೊಂಡು ಅವರೇನು ಬರೆಯುತ್ತಾರೋ ಅರ್ಥವಾಗುತ್ತಿರಲಿಲ್ಲ. ತಿಂಗಳಿಗೊಂದು ಬಾರಿ ಶಾಲೆಯ ಪಕ್ಕದ ಪೊದೆಗಳಲ್ಲಿ ಬೆಳೆದ ಯಾವುದೋ ಸೊಪ್ಪು ಕಿತ್ತು  ತಂದು, ಅದಕ್ಕೆ ಕೊಂಚ ಇದ್ದಲು, ನೀರು ಹಾಕಿ ಚೆನ್ನಾಗಿ ಅರೆದು ಅದನ್ನು ಆ ಕಪ್ಪು ಹಲಗೆಗೆ ಚೆನ್ನಾಗಿ ಉಜ್ಜಿ ಕೊಂಚ ಒಣಗಲು ಬಿಟ್ಟರೆ....ವ್ಹಾವ್, ಕಪ್ಪು ಹಲಗೆ ಆಗ ತನ್ನ ನಿಜವಾದ ಹೊಳಪು ತೋರಿಸುತ್ತಿತ್ತು.ಈ ಕೆಲಸದ ಜವಾಬ್ದಾರಿಯನ್ನು ಆ ತರಗತಿಯ ಲೀಡರ್ ವಹಿಸಿಕೊಳ್ಳಬೇಕಿತ್ತು. ಇವತ್ತಿನ ಟೀಮ್ ಬಿಲ್ಡಿಂಗ್, ಕೋ-ಆರ್ಡಿನೇಷನ್ ಎಂದು ನೂರಾರು ಮೈಲಿ ನಮ್ಮನು ಕರೆದುಕೊಂಡು ಹೋಗಿ ಕಲಿಸುವ ಪಾಠಗಳನ್ನು, ಅವತ್ತಿಗೆ ಕೇವಲ ತರಗತಿಗಳನ್ನು ಶುಚಿ ಮಾಡುವ ಚಟುವಟಿಕೆಯಲ್ಲಿಯೇ ನಮ್ಮ ಮಾಸ್ತರುಗಳು ಕಲಿಸಿಬಿಟ್ಟರು ಅನಿಸುತ್ತದೆ.

ಈಗ ಬಹಳಷ್ಟು ವರ್ಷಗಳು ಕಳೆದು ಹೋಗಿವೆ. ಇಂದು ಅದೇ ಶಾಲೆ ವರ್ಣರಂಜಿತವಾಗಿ ಬದಲಾಗಿದೆ. ಸುತ್ತ ಬೆಳೆದಿದ್ದ ಮುಳ್ಳು ಪೊದೆಗಲೆಲ್ಲ ಮಾಯವಾಗಿ ಈಗ ಕಾಂಪೌಂಡು ತಲೆಯೆತ್ತಿದೆ. ಮುಂಚಿದ್ದ ಹಲಗೆಗಳೆಲ್ಲ ಹೋಗಿ ಬೆಂಚುಗಳು ಬಂದಾಗಿವೆ.ಸರಕಾರ ಮಕ್ಕಳನ್ನು ಶಾಲೆಗೆಳೆದು ತರಲು ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಮುಂಚಿನಂತೆ ಸೂರ್ಯ ಇಣುಕಲು ಶಾಲಾ ಕೊಠಡಿಯೊಳಗೆ ಒಡೆದ ಹೆಂಚುಗಳಿಲ್ಲ. ಸರಕಾರವೇ ಶಾಲಾ ಕೊಠಡಿಗಳನ್ನು ಸ್ವಚ್ಛಗೊಳಿಸಲು ಕೆಲಸಗಾರರನ್ನು ನೇಮಿಸಿದೆ. ಆಟಪಾಠಗಳ ಕಡೆಗೆ ಮಕ್ಕಳ ಗಮನವನ್ನು ಸೆಳೆಯಲು ನಾನಾ ಕಸರತ್ತುಗಳು ನಡೆಯುತ್ತಿವೆ. ಬಿಸಿಯೂಟ, ಉಚಿತ ಮೊಟ್ಟೆ, ಹಾಲು, ಅಕ್ಕಿ, ಪುಸ್ತಕ, ಸಮವಸ್ತ್ರ, ಬೈಸಿಕಲ್ಲು ಎಲ್ಲ ಯೋಜನೆಗಳನ್ನೂ ನೋಡಿಯಾಗಿದೆ. ನಮಗೆ ವಿದ್ಯಾರ್ಜನೆ ಮಾಡಿದ ಆ ಶಾಲೆಯನ್ನು ಈಗ ನೋಡಿದರೆ ಯಾವುದೋ ಆ ಬಿಡಿಸಲಾಗದ ನಂಟಿನ ನೆನಪಾಗುತ್ತದೆ. ಯಾವುದೇ ಸ್ಥಿತಿಯಲ್ಲಿದ್ದರೂ ನಮ್ಮನ್ನು ವಿದ್ಯಾವಂತರನ್ನಾಗಿ ಮಾಡಿ ಇಂದು ತಾನೇನು ಮಾಡಿಲ್ಲವೆಂಬಂತೆ ಮೌನವಾಗಿ ಕುಳಿತು ತನ್ನ ಸೇವೆಯನ್ನು ಇತರ ಕಂದಮ್ಮಗಳಿಗೂ ಮುಂದುವರೆಸಿರುವ ಆ ಶಾಲೆಯ ಬಗ್ಗೆ ಮನದೊಳಗೇ ಅಪಾರ ಗೌರವ ಮೂಡುತ್ತದೆ.

ಮೊನ್ನೆ ಊರಿಗೆ ಹೋಗಿದ್ದಾಗ ಅದರ ಹೊಸರೂಪವನ್ನು ನೋಡಿದ ನನಗೆ ಫೋಟೋ ಕ್ಲಿಕ್ಕಿಸದೆ ಇರಲು ಮನಸ್ಸಾಗಲಿಲ್ಲ.

ನಿಮ್ಮವನು,
-ಸಂತು

Friday, December 21, 2012

ನನ್ನವ್ವ!!

                                                                                                                                (ಚಿತ್ರಕೃಪೆ :Google)


ಬರೀ ಮಾಯನ್ನರಿಗಷ್ಟೇ
ತನ್ನ ಮನದ ದುಗುಡ
ಹೇಳಿಕೊಳ್ಳುವವಳಲ್ಲ ನನ್ನವ್ವ!!
ಜ್ಯೋತಿಷಿಗಳು ಕಿವಿಯೂದಲಿ,
ಸಾವಿರ ಜನ ಕೋಟಿ ಮಾತಾಡಲಿ!!
ತನ್ನ ಮನೆಗೆ ಬೆಂಕಿಯಿಟ್ಟು
ಮಕ್ಕಳನ್ನೆಲ್ಲ ಕೊಲ್ಲುವಷ್ಟು
ಕಟುಕಳಲ್ಲ ಆಕೆ!!
ಮುನಿಸಿದ್ದರೆ ಆಗಾಗ
ಮೈಯೊದರುತ್ತಾಳೆ!!
ನಿಜಕ್ಕೂ ಕೋಪ ಬಂದರೆ
ಕೋಳಿ ಕೇಳಿ ಕಾರ ಅರೆಯುವುದಿಲ್ಲ,
ನನ್ನ ಹಡೆದವ್ವ!!

                                                                 -ಸಂತು

Monday, December 17, 2012

ಕಣ್ಣೀರು (ಚುಟುಕಗಳು-2)
ಮಗಳ ಹೆರಿಗೆಯಲ್ಲಿ,
ಸುಮ್ಮನಿದ್ದ
ಅಪ್ಪ,
ಪುಟ್ಟ ಮೊಮ್ಮಗಳ
ಕಿವಿ
ಚುಚ್ಚುವಾಗ
ಹಾಕಿದ
ಕಣ್ಣೀರು!!
----------------------------------

ಅದೇಕೋ,
ಮೌನದಲ್ಲಿಯ
ನಿಶ್ಚಲ
ಜಡ ವಸ್ತುಗಳೂ,
ಅಂತರಂಗದಲ್ಲಿ
ಹುಚ್ಚೆದ್ದು
ಕುಣಿಯುತ್ತವೆ!!
----------------------------------

ಸಾವ ಮನೆಗೆ,
ಹೊರಟ ನೆಂಟನೊಬ್ಬನ  ಹೆಂಡತಿ
ತಡೆದು ಹೇಳಿದಳು,
ಉಂಡು ಹೋಗಿ,
ಬರುವುದು
ಹೊತ್ತಾಗಬಹುದು!!
----------------------------------

                                                                                  --ಸಂತು

Saturday, December 15, 2012

ಚಿಗುರ ಚಿವುಟಬೇಕೆ??!!
                                                                                                           
                                                                                                                                                               (ಚಿತ್ರಕೃಪೆ: Google)
2001ನೇ ಇಸವಿ. ಮೈಸೂರಿನಿಂದ ಬೆಂಗಳೂರಿಗೆ ಬಂದಿದ್ದೆನಾದ್ದರಿಂದ ಎಲ್ಲವೂ ಹೊಸತು.
ಹೊಸ ಸ್ಥಳ, ಹೊಸ ಕೋರ್ಸು, ಹೊಸ ಮನೆ, ಹೊಸ ರುಚಿ, ಹೊಸ ಜನಗಳ ಒಡನಾಟ, ಒಟ್ಟಿನಲ್ಲಿ ಹೊಸ ಜೀವನ ಶುರುವಾಗಿತ್ತು.

ಅದೇಕೋ ಕೊಂಚ ಸಂಕೋಚ ಮತ್ತು ಆತ್ಮ ವಿಶ್ವಾಸದ ಕೊರತೆ.
ಎಲ್ಲಿ ನನ್ನನ್ನು ಹಳ್ಳಿಯವನು ಅಥವಾ ಮಾತನಾಡೋಕೆ ಇಂಗ್ಲಿಷ್ ಬರುವುದಿಲ್ಲ ಅಂತ ಹೀಯಾಳಿಸಿಬಿಡುತ್ತಾರೇನೋ ಅನ್ನುವ ಆತಂಕ. ಕಾಲೇಜಿಗೆ ಸೇರಿದ ಬಹಳಷ್ಟು ತಿಂಗಳುಗಳ ಕಾಲ ನಮ್ಮ ಗುಂಪಿನ ಹತ್ತಿರದ ಹುಡುಗರೊಡನೆ ಮಾತನಾಡುತ್ತಿದ್ದೆ ಹೊರತು ಬೇರಾರ ಜೊತೆಯಲ್ಲೂ ಮಾತನಾಡುತ್ತಿರಲಿಲ್ಲ. ಇಂಗ್ಲಿಷ್ ಭಾಷೆ ಹಳ್ಳಿಯ ಹುಡುಗರನ್ನು ಅದೆಷ್ಟು ಪೇಚಾಟಕ್ಕೆ ಸಿಕ್ಕಿಸಿಬಿಡುತ್ತದೆ ಅನ್ನುವುದು ಆ ಹುಡುಗರಿಗೆ ಮಾತ್ರ ಗೊತ್ತು.
ಅದರ ಬಗ್ಗೆ ಬೇರೊಂದು ಸಲ ಮಾತನಾಡೋಣ.

ಚಿಕ್ಕಂದಿನಿಂದಲೂ ನಾನು ಆಟಗಳಲ್ಲಿ ಕೊಂಚ ಕಮ್ಮಿ ಆಸಕ್ತಿ ತೋರಿದವನು.
ಆದರೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ (ಅಂದರೆ ಎಲ್ಲಿ ದೈಹಿಕ ಶ್ರಮ ಇಲ್ಲವೋ ಅಂತಹ ಚಟುವಟಿಕೆಗಳಲ್ಲಿ !! )ಬಹಳ ಹುರುಪಿನಿಂದ ಪಾಲ್ಗೊಳ್ಳುತ್ತಿದ್ದೆ. ನನಗೆ ಬಹಳ ಸಂತೋಷ ಕೊಡುವ ಕಾರ್ಯಕ್ರಮಗಳೆಂದರೆ- ಹಾಡುವುದು, ಅಭಿನಯ ಮತ್ತು ಮಿಮಿಕ್ರಿ!! ಬಹಳಷ್ಟು ಬಾರಿ ವಾರ್ಷಿಕೋತ್ಸವಗಳಲ್ಲಿ ಭಾಗವಹಿಸಿ ಇವುಗಳನ್ನೆಲ್ಲ ಮಾಡಿದ್ದೆನಾದರೂ ಹತ್ತನೇ ತರಗತಿಯ ನಂತರದ ನಗರ ಜೀವನ ಇವಕ್ಕೆಲ್ಲ ಕೊಂಚ ಬ್ರೇಕ್ ಹಾಕಿತ್ತು.

ಬಹಳ ಅಂತರ್ಮುಖಿಯಾಗಿದ್ದ ನಾನು ಇಂಜಿನಿಯರಿಂಗ್ ನ 2ನೇ ವರ್ಷದ ನಂತರ ಕೊಂಚ ಹೊಸ ವಾತಾವರಣಕ್ಕೆ ಹೊಂದಿಕೊಳ್ಳತೊಡಗಿದೆ. ಎಲ್ಲರೂ ಗೆಳೆಯರಾಗತೊಡಗಿದರು. ನಮಗೆ ಪಾಠ ಮಾಡುತ್ತಿದ್ದ ಕನಕವಳ್ಳಿ ಎನ್ನುವ ಟೀಚರ್ ಒಬ್ಬರು ತಮ್ಮ ತರಗತಿಗಳಲ್ಲಿ, ಬಹಳಷ್ಟು ಸಮಯ ಪಾಠಕ್ಕಿಂತ ಟೈಮ್ ಪಾಸ್ ಮಾಡುತ್ತಿದ್ದುದೇ ಹೆಚ್ಚು!! :) ಯಾರಿಂದಲೋ ನಾನು ಮಿಮಿಕ್ರಿ ಮಾಡುತ್ತೇನೆ ಅನ್ನುವ ವಿಷಯ ನಮ್ಮ ಕ್ಲಾಸಿನಲ್ಲಿ ಗೊತ್ತಾಗಿ ಹೋಯಿತು. ದಿನವೂ ನಾನು ಮಿಮಿಕ್ರಿ ಮಾಡಬೇಕೆಂದು ಒತ್ತಡ ಶುರುವಾಯಿತು.

ಕನ್ನಡವೇ ಮಾತನಾಡದಿದ್ದ ಹುಡುಗಿಯರು ಅದೆಲ್ಲಿ ನನ್ನ ಮಿಮಿಕ್ರಿ ಇಷ್ಟಪಡುತ್ತಾರೆ ಅಂತ ಸುಮ್ಮನಿದ್ದೆ.
ದಿನದಿನವೂ ಏನಾದರೊಂದು ನೆಪ ಹೇಳಿ ತಪ್ಪಿಸಿಕೊಳ್ಳುತ್ತಿದ್ದೆ.ಇನ್ನೇನು ಇಂಟರ್ನಲ್ ಪರೀಕ್ಷೆಗಳು ಶುರುವಾಗಬೇಕೆಂದಿದ್ದಾಗ ಅದೇ ಟೀಚರ್ ತಾವು 3 ತಿಂಗಳು ರಜದಲ್ಲಿ ಹೋಗುತ್ತಿರುವುದಾಗಿ ಹೇಳಿದರು. ಕೊನೆಯ ದಿನ ರಜಕ್ಕೆ ಹೋಗುವ ಮುನ್ನ ನಾನು ಮಿಮಿಕ್ರಿ ಮಾಡಲೇಬೇಕೆಂದು ಪೂರ್ತಿ ಒತ್ತಡ ಹಾಕಿಬಿಟ್ಟರು.ಸರಿ, ಮಾಡದೆ ಬೇರೆ ವಿಧಿಯಿಲ್ಲ.

ಎದ್ದು ನಿಂತು ಧೈರ್ಯವಹಿಸಿ ಕೊನೆಗೂ ಕನ್ನಡದ ರಿಯಲ್ ಸ್ಟಾರ್ ಉಪೇಂದ್ರರ ಎರಡು ಡೈಲಾಗ್ ಗಳನ್ನು ಸಂದರ್ಭ ಸಹಿತ ಅನುಕರಣೆ ಮಾಡಿದೆ.ಅದ್ಯಾವ ಪರಿ ಕ್ಲಾಸಿನಲ್ಲಿ ಕೂತಿದ್ದವರೆಲ್ಲ ಚಪ್ಪಾಳೆ ಹೊಡೆದು ಎಂಜಾಯ್ ಮಾಡಿದರೆಂದರೆ ನಾನು ಅಂತಹದ್ದೊಂದು ಪ್ರತಿಕ್ರಿಯೆಯನ್ನು ಎದುರು ನೋಡಿರಲಿಲ್ಲ.ನಂತರ ಬಹಳಷ್ಟು ಜನ ನನ್ನ ಬಳಿಗೆ ಬಂದು ಅಭಿನಂದಿಸಿದರು.

ಸಮಯ ಕಳೆದಿದ್ದೆ ಗೊತ್ತಾಗಲಿಲ್ಲ.ಇಂಜಿನಿಯರಿಂಗ್ ನ ಕೊನೆಯ ವರ್ಷ. ಕಾಲೇಜಿನ ವಾರ್ಷಿಕೋತ್ಸವದ ಸಿದ್ಧತೆ ಭರದಿಂದ ಸಾಗಿತ್ತು.ನಮ್ಮ ಕ್ಲಾಸಿನವರ ಒತ್ತಾಯದ ಮೇರೆಗೆ ನನ್ನ ಹೆಸರನ್ನು ಮಿಮಿಕ್ರಿಗೆ ಕೊಡಲಾಯಿತು. ಆಡಿಷನ್ ಶುರುವಾಯಿತು. ಅದೇಕೋ ನನ್ನ ಮನಸ್ಸಿನಲ್ಲಿ ಏನನ್ನಿಸಿತೋ ನಮ್ಮ ಆಡಿಷನ್ ಮಾಡುತ್ತಿದ್ದ ನಮ್ಮ ಕಾಲೇಜಿನ ಆಡಳಿತ ಮಂಡಳಿಯಲ್ಲೊಬ್ಬರಿಗೆ ವಿನಂತಿಸಿಕೊಂಡೆ.ಮಿಮಿಕ್ರಿಯನ್ನು ಎಲ್ಲರೆದುರು ಈಗ ಆಡಿಷನ್ ಕೊಟ್ಟರೆ ನಂತರ ಅದನ್ನು ನೋಡಲು ಅಂತಹ ಉತ್ಸಾಹವಿರುವುದಿಲ್ಲ. ಆದ್ದರಿಂದ ಕ್ಲಾಸಿನ ಒಳಗೆ ಆಡಿಷನ್ ಕೊಡುವೆ ಎಂದು ಹೇಳಿ ಕ್ಲಾಸಿನ ಒಳಗೆ ಕರೆತಂದೆ. ಬರೋಬ್ಬರಿ 10 ನಿಮಿಷ ನಾನು ಬಹಳ ಇಷ್ಟಪಟ್ಟ ನಟರುಗಳೆಲ್ಲರ ಮಿಮಿಕ್ರಿಗಳನ್ನೆಲ್ಲ ಮಾಡಿ ತೋರಿಸಿದೆ.

ಅವುಗಳನ್ನೆಲ್ಲ ನೋಡಿದ ಆ ಮನುಷ್ಯ ಹೇಳಿದ ಮಾತೆಂದರೆ ..
ಯಾವ ಸಂಭಾಷಣೆಯೂ ಸಭ್ಯವಾಗಿಲ್ಲ, ಮಿಮಿಕ್ರಿ ಬಹಳ ಚೆನ್ನಾಗಿದೆಯಾದರೂ ಯಾವುದರಲ್ಲೂ ಪೌರಾಣಿಕ ಸಂಭಾಷಣೆಗಳಿಲ್ಲ.
ನಂತರ ನನಗೆ ಅರ್ಥವಾಗಿದ್ದು ಆ ಪುಣ್ಯಾತ್ಮನಿಗೆ ಬೇಕಾಗಿದ್ದುದು ಬರೀ ಪೌರಾಣಿಕವಷ್ಟೇ.
ನಂಗೆ ಉದಾಹರಣೆ ಕೊಟ್ಟದ್ದು ತೆಲುಗಿನ ಬಹಳ ಹಳೆ ನಟರ ಸಂಭಾಷಣೆಗಳನ್ನು.
"ಇನ್ನೂ ಮೂರ್ನಾಲ್ಕು ದಿನಗಳ ಸಮಯವಿದೆ, ಯಾವುದಾದರೂ ಪೌರಾಣಿಕ ಚಿತ್ರದ ಸಂಭಾಷಣೆ ಕಲಿತು ಬಾ" ಅಂದ.
ಅಹಂ ಅನ್ನುವುದು ಕೆಲವು ಬಾರಿ ಅದೆಷ್ಟು ನಮ್ಮನ್ನು ನಿಷ್ಠುರ ಮಾಡುತ್ತದೆಂದರೆ, "ನಂಗೆ ಬರೋದೆ ಇಷ್ಟು, ಬೇಕಿದ್ದರೆ ಮಾಡುತ್ತೇನೆ, ಇಲ್ಲ ಅಂದ್ರೆ ಬೇಡ ಬಿಡಿ" ಅಂತ ಖಡಾಖಂಡಿತವಾಗಿ ಹೇಳಿ ಹೊರ ಬಂದುಬಿಟ್ಟೆ.

ಇಂಜಿನಿಯರಿಂಗ್ ಮುಗಿದು ಜೀವನ ಕೆಲಸಕ್ಕೆ ನನ್ನನ್ನು ಶುರುಹಚ್ಚಿತು. ನಾನು ಕೆಲಸ ಮಾಡಿದ ಮೊದಲ ಕಂಪನಿಯಲ್ಲಿ ಮತ್ತು ಎರಡನೆಯ ಕಂಪನಿಯಲ್ಲಿ ಮತ್ತದೇ ಮಿಮಿಕ್ರಿಗಳ ಪ್ರದರ್ಶನ. ತರಬೇತಿಯ ಸಮಯದಲ್ಲಿ ಕೊಟ್ಟ ಕಾರ್ಯಕ್ರಮಕ್ಕೆ ಎಲ್ಲರಿಂದಲೂ ಬಹಳಷ್ಟು ಅಭಿನಂದನೆ ಸಿಕ್ಕಿತು. ಕನ್ನಡ ಬರದಿದ್ದ ಬೇರೆ ರಾಜ್ಯದವರೆಲ್ಲ ಅದೆಷ್ಟು ಖುಷಿಪಟ್ಟರೆಂದರೆ, "ನಿನ್ನ ಮಿಮಿಕ್ರಿ ನೋಡಿದ ಮೇಲೆ ನಿಮ್ಮ ಉಪೇಂದ್ರನ ಚಿತ್ರ ನೋಡಬೇಕು ಅಂತ ಆಸೆಯಾಗಿದೆ" ಅಂತ ಹೇಳಿ ಹೋದರು!!
ಕೆಲವರಂತೂ ನನ್ನನ್ನು ಕೆಲ ದಿನಗಳ ಕಾಲ ಉಪ್ಪಿ ಅಂತಲೇ ಕರೆಯುತ್ತಿದ್ದರು.

ಅದಿರಲಿ. ನನ್ನ ಮಿಮಿಕ್ರಿ ಕತೆಯ ಬಗ್ಗೆ ಅಲ್ಲ ನಾನು ನಿಮಗೆ ಹೇಳಹೊರಟಿದ್ದು!!
ನನ್ನ ಕ್ಲಾಸಿನವರಿಗೆ ಕಾಣದ, ನನ್ನ ಕಂಪನಿಯವರು ನೋಡದ ಅ ಮಿಮಿಕ್ರಿ ಸಂಭಾಷಣೆಯಲ್ಲಿನ ಅಸಭ್ಯತೆ ಆತನಿಗೆ ಕಂಡಿದ್ದಾದರೂ ಎಲ್ಲಿ?! ಅದೇಕೋ ಕೆಲವರು ಕೆಲಸಮಯ ಸುಮ್ಮನೆ ಏನಾದರೊಂದು ಹೇಳಿ ಇನ್ನೊಬ್ಬರ ನೆನಪಿನ ಪುಟಗಳಲ್ಲಿ ಉಳಿದುಬಿಡುತ್ತಾರೆ. ಅವರಿಗೆ ತಮ್ಮ ಆದರ್ಶವೇ ಇತರರಿಗೂ ಮಾದರಿಯಾಗಬೇಕೆಂಬ ಹುಚ್ಚು ತಲೆಯಲ್ಲಿ ಮನೆಮಾಡಿರುತ್ತದೆ. ಅದನ್ನು ಇಡೀ ಪ್ರಪಂಚವೇ ಪರಿಪಾಲಿಸಬೇಕು ಅನ್ನುವ ಭ್ರಮೆಯಲ್ಲಿ ಓಡಾಡುತ್ತಿರುತ್ತಾರೆ.
ಅಂತಹವರು ಹೊಸ ಪ್ರಪಂಚಕ್ಕೆ ಎಂದಿಗೂ ಹೊಂದಿಕೊಳ್ಳುವುದಿಲ್ಲ, ನನ್ನ ಮಿಮಿಕ್ರಿಯನ್ನು ಅಸಭ್ಯವೆಂದ ಆ ಪುಣ್ಯಾತ್ಮನ ಹಾಗೆ.
ಆತ ಭಾಷಣಕ್ಕೆ ಬಂದರೆ ಎಂತಹ ರಸವತ್ತಾದ ವಿಷಯವನ್ನು ಘಂಟೆಗಳ ಕಾಲ ಮಾತನಾಡಿ ಬೋರು ಹೊಡೆಸುತ್ತಿದ್ದನೆಂದರೆ,ಆತ ಭಾಷಣಕ್ಕೆ ನಿಂತರೆ ಸಾಕು ಎಲ್ಲರೂ ಅವನಿಗೆ ಹಿಡಿಶಾಪ ಹಾಕುತ್ತಿದ್ದರು. ಪಾಪ ಅವನಿಗೆ ಅದು ಗೊತ್ತಿರಲಿಲ್ಲ !!

ಅದಾಗಿ ವರ್ಷಗಳೇ ಕಳೆದಿವೆ.
ಈಗಲೂ ಯಾರಾದರೂ ಹೊಸದಾಗಿ ಏನಾದರೊಂದು ಪ್ರಯತ್ನ ಮಾಡಿದರೆ ನಾನು ಯಾವಾಗಲೂ ಅವರನ್ನು ಹುರಿದುಂಬಿಸುತ್ತೇನೆ. ಒಂದು ಕವನ ಬರೆದು ತೋರಿಸಿದರೆ ಅವರ ಸಾಹಿತ್ಯ ಪ್ರೇಮಕ್ಕೆ ಶಹಬ್ಬಾಷ್ ಹೇಳಬೇಕೇ ಹೊರತು, ಅದರಲ್ಲಿಯ ಒಂದು ದೋಷ ಹುಡುಕಿ "ಮೊದಲು ಕನ್ನಡ ಕಲಿ" ಅಂತ ಹೇಳುವುದಲ್ಲ.
ಯಾರಿಗೆ ಗೊತ್ತು, ನಾಳೆ ಆತನೇ ಆ ಕ್ಷೇತ್ರದಲ್ಲಿ ಬಹಳಷ್ಟು ಬೆಳೆದು ಹೆಮ್ಮರವಾಗಿ ನಿಲ್ಲಬಹುದು.

ಆದರೆ ಬೆಳೆಯುವ ಮುನ್ನವೇ ಚಿಗುರನ್ನು ಚಿವುಟುವ ಕಾರ್ಯಕ್ಕೆ ನಾವು ಮುಂದಾಗಬಾರದು ಅಲ್ಲವೇ? ಏನಂತೀರಿ?

                                                                                                                          ನಿಮ್ಮವನು,
                                                                                                                          -ಸಂತುSaturday, December 8, 2012

ಚಳಿಯಿದೆ!!(ಚಿತ್ರಕೃಪೆ:Google)
 
[ czech republic ನ ರೂಮೊಂದರಲ್ಲಿ -10° temperature ನಲ್ಲಿ ಚಳಿ ತಡೆಯದಾದಾಗ ಉಕ್ಕಿ ಬಂದ ಸಾಲುಗಳು:-) ]

ಬಹಳ ಚಳಿಯಿದೆ,
ಪಕ್ಕದಲ್ಲಿ ಅವಳಿಲ್ಲ!!

ತುಂಬಿದ ಬಾಟಲಿಯಿದೆ,
ಹಂಚಿಕೊಳ್ಳಲು ಗ್ಲಾಸಿಲ್ಲ!!

ನಮ್ಮೂರ ಬಜ್ಜಿಯ ನೆನಪಿದೆ,
ಇಲ್ಲಿ ಮಾಡಲು ಮಿರ್ಚಿಯಿಲ್ಲ!!

ಸಾವಿರ ಮಾತು ಕಾಯುತಲಿವೆ,
ಯಾವ ಕಿವಿಗಳಿಗೂ ಬಿಡುವಿಲ್ಲ!!

ಮನಸ್ಸೇಕೋ ಕುಣಿಯುತ್ತಿದೆ,
ಜೊತೆ ಹೆಜ್ಜೆಹಾಕಲು ಪಾದ ತಯಾರಿಲ್ಲ.

ಅಶ್ವತ್ಥರ ಗಾನವಿದೆ,
ನಿಲ್ಲಿಸಲು ಮನಸ್ಸಾಗುತ್ತಿಲ್ಲ!!

ಎಲ್ಲಕ್ಕೂ ಮುನ್ನ, ನನ್ನ-ಅವಳ ಕತೆಯಿದೆ,
ಎಷ್ಟು ಸಲ ಓದಿದರೂ ಬೇಸರವಿಲ್ಲ!!

                                                    -ಸಂತು

Tuesday, December 4, 2012

ಹೊರಗಿನವರದ್ದು ಮಾತ್ರ ಉಪಕಾರವೇ?


ಊಟ ಮಾಡುತ್ತಿರುವಾಗ ಏನಾದರೂ ಕೆಮ್ಮಿದರೆ,
ಏನಾದರೂ ನಮ್ಮ ಗೆಳೆಯರೋ ಅಥವಾ ಸಹೋದ್ಯೋಗಿಗಳೋ ಒಂದು ಲೋಟ ನೀರು ತಂದು ಕೊಟ್ಟರೆ ಸಾಕು.
 "ಥ್ಯಾಂಕ್ಸ್ ರೀ, ತುಂಬಾ ಥ್ಯಾಂಕ್ಸ್" ಅಂತ ಹಲವು ಬಾರಿ ಹೇಳಿರುತ್ತೇವೆ.
ಅದೇ ನಮ್ಮ ಮನೆಯಲ್ಲಿ ಅಂತಹ ಸಾವಿರಾರು ಉಪಕಾರಗಳು ನಡೆದಿರುತ್ತವೆ.

ಉದಾಹರಣೆಗೆ, ಕಛೇರಿ ಮುಗಿಸಿ ಮನೆಗೆ ಬರುವವರೆಗೆ ಹಸಿವಿದ್ದರೂ ಊಟಕ್ಕಾಗಿ ಕಾಯುವ ಮಡದಿ.
ಮಗನ ಫೀಸು ಕಟ್ಟಬೇಕೆಂದು ಹಬ್ಬಗಳಿಗೂ ಯಾವುದೇ ಹೊಸಬಟ್ಟೆ ಕೊಳ್ಳದ ಅಪ್ಪ.
ಮಗ ಊಟ ಮಾಡಲಿ ಅಂತ ಮೊಸರು, ತುಪ್ಪ ತಿನ್ನದೇ ಎತ್ತಿಡುವ ಅಮ್ಮ!!
ಕೊಂಚ ತಲೆನೋವಿದೆ ಎಂದ ಮಾತ್ರಕ್ಕೆ ಅದೆಷ್ಟೇ ದೂರವಿದ್ದರೂ ನಡೆದು ಹೋಗಿ ಮಾತ್ರೆ ತರುವ ತಮ್ಮ.
ಊರಿಗೆ ಹೊರಡುತ್ತಾರೆಂದು ಬೆಳಗಾಗುವ ಮೊದಲೇ ಕಾರು ತೊಳೆದು ಅಚ್ಚರಿ ತೋರುವ ಬಾವ!!
ವಿದೇಶಕ್ಕೆ ಹೋಗುತ್ತಾರೆಂದು ನಾವು ಕೇಳದಿದ್ದರೂ ಚಿತ್ರಾನ್ನದ ಗೊಜ್ಜು ಮಾಡಿ ಕೊಡುವ ಅತ್ತೆ.
ಹೀಗೆ ಹೇಳುತ್ತಾ ಹೋದರೆ ನಮ್ಮ ಮನೆಯವರ ಬಗ್ಗೆ ಪುಟಗಟ್ಟಲೆ ಬರೆದುಬಿಡಬಹುದು.

ಹೀಗೆ ಎಷ್ಟೋ ಸಲ ಇಂತಹ ಅನೇಕ ತ್ಯಾಗಗಳು, ಉಪಕಾರಗಳು ನಮ್ಮ ಕಣ್ಣ ಮುಂದೆ ನಡೆದಿದ್ದರೂ ಕುರುಡರಂತೆ ಸುಮ್ಮನಿದ್ದುಬಿಡುತ್ತೇವೆ.
ಮಧ್ಯಾಹ್ನದ ಊಟದ ಡಬ್ಬಿ ಮರೆತಿದ್ದಾನೆಂದು, ಕಾಲೇಜಿನವರೆಗೆ ಬಂದು ಕೆಲಸದ ಮದ್ಯದಲ್ಲೂ ಅಪ್ಪ ಡಬ್ಬಿ ಕೊಟ್ಟು ಹೋದರೆ,
ಯಾಕೆ ಬಂದೆ ಅಂತ ಪ್ರಶ್ನೆ ಹಾಕುತ್ತೇವೆಯೇ ಹೊರತು ಅವರ ಶ್ರಮಕ್ಕೆ ಮನಸ್ಸಿನಲ್ಲಿ ಒಂದು ಕೃತಜ್ಞತಾ ಭಾವ ಮೂಡಿರುವುದಿಲ್ಲ.

ನಾನು ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಓದುತ್ತಿದ್ದ ಸಮಯದಲ್ಲಿ ಒಬ್ಬನೇ ಒಂದು ಬಾಡಿಗೆ ಮನೆಯಲ್ಲಿ ವಾಸವಾಗಿದ್ದೆ.
ಒಂದು ದಿನ ಅದೆಂತಹ ಜ್ವರ ಬಂದಿತ್ತೆಂದರೆ 24 ಘಂಟೆಗಳ ಕಾಲ ಊಟ,ತಿಂಡಿ ಇಲ್ಲದೇ ಪ್ರಜ್ಞೆಯೇ ಇಲ್ಲದವನಂತೆ ಬಿದ್ದುಕೊಂಡಿದ್ದೆ.
ಅಂದೇನೋ ಜಮೀನಿನ ಕೆಲಸದಲ್ಲಿ ಮಗ್ನರಾಗಿದ್ದ ಅಪ್ಪ ಅಮ್ಮ ಫೋನು ಮಾಡಿರಲಿಲ್ಲ.
ಅವತ್ತು ನನಗರ್ಥವಾಗಿದ್ದು, ಬಂಧು-ಬಳಗವೆನ್ನುವವರು ನಮ್ಮ ಯೋಗಕ್ಷೇಮ ವಿಚಾರಿಸಿಕೊಳ್ಳಲು ಇಲ್ಲದಿದ್ದರೆ ನಮ್ಮ ಪಾಡು ಹೇಗಿರುತ್ತದೆಂದು!!

ಏನಾಯಿತು ಬಿಡು, ಏನು ಸುಮ್ಮನೆ ಮಾಡುತ್ತಾರೆಯೇ? ಮನೆಯವರಲ್ಲವೇ? ಅಂತ ನಮ್ಮ ಮನಸ್ಸಿಗೆ ಯಾವತ್ತಾದರೂ ಅನ್ನಿಸುತ್ತಾ?
ಹಾಗಿದ್ದರೆ ಬಹುಶಃ, ಆ ರೀತಿಯ ಪ್ರೀತಿ ತೋರಿಸುವವರನ್ನು,ನಮ್ಮ ಖುಷಿಗೋಸ್ಕರ ಕಷ್ಟಪದುವವರನ್ನು ನಾವು ಕಳೆದುಕೊಂಡಾಗಲೇ ಅದರ ಬೆಲೆ ಗೊತ್ತಾಗುವುದು.
ಕೊಂಚ ನಮ್ಮ ಬಗ್ಗೆ ನಾವೇ ಈ ರೀತಿಯ ಪ್ರಶ್ನೆ ಕೇಳಿಕೊಂಡಾಗ ಅದರ ಅರಿವು ನಮಗಾಗುತ್ತದೆ.

ಟೈಮಿಗೆ ಸರಿಯಾಗಿ ರುಚಿರುಚಿಯಾಗಿ ಊಟ ಮಾಡಿಕೊಡುವ ಹೆಂಡತಿಯ ಮೇಲೆ ಖಾರ ಇಲ್ಲ,ಉಪ್ಪಿಲ್ಲ, ಹುಳಿ ಜಾಸ್ತಿಯಾಯ್ತು ಅಂತ ಸುಳ್ಳೇ ದರ್ಪ ತೋರುತ್ತೇವೆ!!
ಬೇರೆ ಯಾವುದೋ ಊರಿಗೆ ಒಬ್ಬಂಟಿಯಾಗಿ ಹೋಗಿ, ಅಲ್ಲಿಯ ಊಟಕ್ಕೆ ನಾಲಿಗೆ ಹೊಂದಿಕೊಳ್ಳದೆ,
ಎಂಟ್ಹತ್ತು ಬಾರಿ ಪುಳಿಯೋಗರೆ ತಿನ್ನುವಷ್ಟರ ಹೊತ್ತಿಗೆ ಹೆಂಡತಿಯ ಮೇಲೆ ತೋರುತ್ತಿದ್ದ ದರ್ಪ ಮುಕ್ಕಾಲು ಇಳಿದು ಹೋಗಿರುತ್ತದೆ:)

ಸರಿನಪ್ಪ, ಈಗೇನು ಮಾಡೋಣ? ಏನೂ ಬೇಡ.
ಅವರು ನಿಮಗಾಗಿ ಮಾಡುತ್ತಿರುವ ಈ ರೀತಿಯ ಸಹಾಯಗಳನ್ನು ಮನಸ್ಸಿನಲ್ಲೇ ಯೋಚಿಸಿ.
ಯಾವತ್ತಾದರೊಂದು ದಿನ ಅದರ ಬಗ್ಗೆ ಮಾತನಾಡಿ, ಅವರ ಸೇವೆಗಳಿಗೆ, ಪ್ರೀತಿಗೆ ಒಂದು ಥ್ಯಾಂಕ್ಸ್ ಹೇಳಿ.
ಯಾವತ್ತೋ ಒಂದು ದಿನ ಅಚಾನಕ್ಕಾಗಿ ಅವರುಗಳಿಗೆ ಚಿಕ್ಕದೊಂದು surprise ಕೊಡಿ.
ಅವರು ನಿರೀಕ್ಷಿಸಿರದ ಹಬ್ಬದಲ್ಲಿ ಅವರಿಗಾಗಿ ಒಂದು ಚಿಕ್ಕ ಉಡುಗೊರೆ ತಂದುಕೊಡಿ.
ಉಡುಗೊರೆ ದುಬಾರಿಯದ್ದೇ ಆಗಿರಬೇಕಿಲ್ಲ, ಅದರಲ್ಲಿ ನಿಮ್ಮ ದುಬಾರಿ ಪ್ರೀತಿಯಿರಬೇಕು ಅಷ್ಟೇ:)

ಇದು ಕೇವಲ ಉಡುಗೊರೆ ಪಡೆದವರಿಗಷ್ಟೇ ಸಂತೋಷ ಕೊಡುವುದಿಲ್ಲ.
ಉಡುಗೊರೆ ಕೊಟ್ಟ ನಿಮ್ಮ ಮನಸ್ಸೂ ನಿಮಗೊಂದು ಥ್ಯಾಂಕ್ಸ್ ಹೇಳುತ್ತದೆ, ಇವತ್ತು ಸರಿಯಾದ ಕೆಲಸ ಮಾಡಿದ್ದೀಯ ಅಂತ ಹೇಳುತ್ತಾ..!!

                                                                                                                            -ಸಂತು