Saturday, August 25, 2012

ನೆನಪಿದೆ ಅಮ್ಮ!!

                                                                                                                                                                         (ಚಿತ್ರಕೃಪೆ:Google)
ಇನ್ನೂ ನೆನಪಿದೆ ಅಮ್ಮ,
ನಿನ್ನುದರ ಸೀಳಿ ನಾ ಹೊರಬಂದಾಗ,
ಸಿಕ್ಕ ಮರುಹುಟ್ಟಿನಲೂ,
ನನ್ನ ನೋಡುವ ನಿನ್ನ ಕಾತರ.

ಇನ್ನೂ ನೆನಪಿದೆ ಅಮ್ಮ,
ನಿನ್ನೆದೆಯ ನಾ ಚೀಪುವಾಗ,
ನಾನೊದ್ದ ಕಾಲಿನ ನೋವಿಗೆ,
ನಿನ್ನ ತುಟಿಯಲ್ಲಿ ಮಿನುಗಿದ ನಗು.

ಇನ್ನೂ ನೆನಪಿದೆ ಅಮ್ಮ,
ಮೊಸರನ್ನವನಿಕ್ಕುತ ನೀ ತೋರಿದ,
ಮಾಳಿಗೆಯ ಅಚ್ಚರಿಯ ಚಂದಿರ,
ಎಣಿಸಿದ ನಕ್ಷತ್ರ.

ಇನ್ನೂ ನೆನಪಿದೆ ಅಮ್ಮ,
ನಾ ನಿನ್ನ ತೊದಲು ಕರೆದಾಗ,
ಬಳಿ ಓಡಿ ಬಂದು,
ನೀನಪ್ಪಿದ ಬಿಸಿ ಸ್ಪರ್ಶ.

ಇನ್ನೂ ನೆನಪಿದೆ ಅಮ್ಮ,
ಅಪ್ಪ ಬರೆದ ಬೆನ್ನ ಬಾಸುಂಡೆಗಳ,
ಮೇಲೆ ನೀ ಹಚ್ಚಿದ,
ಕಣ್ಣೀರ ಲೇಪನ.

ಇನ್ನೂ ನೆನಪಿದೆ ಅಮ್ಮ,
ಯಶಸ್ಸಿನುತ್ತುಂಗವನೇರಲು,
ನೀ ಗುಂಡಿಗೆಯಲ್ಲಿ ಬಿತ್ತಿದ,
ಉತ್ಸಾಹದ ಚಿಲುಮೆ.

ಇನ್ನೂ ನೆನಪಿದೆ ಅಮ್ಮ,
ನಾನವಳ ಕೈ ಹಿಡಿದಾಗ,
ನಿನ್ನ ಕಣ್ಣಂಚಿನಲಿ,
ಜಿನುಗಿದ ಆ ಮುತ್ತು ಹನಿ.

ಇನ್ನೂ ನೆನಪಿದೆ ಅಮ್ಮ,
ಇದ್ದಕಿದ್ದಂತೆ ನೀನೆದ್ದು,
ಹೊರಟು ನಿಂತಾಗ,
ಬೆಂಬಿಡದೆ ಕಾಡಿದ ಅಸಾಧ್ಯ ಯಾತನೆ.

Thursday, August 23, 2012

ಹಸಿವಿನ ಅಂತರಾಳದಲ್ಲಿ..

ಏನಪ್ಪಾ ಇದು, ಒಂದೇ ಸಮನೆ ಹಸಿವಾಗುತ್ತಿದೆ.
ಮಧ್ಯಾಹ್ನ ಊಟ ಮಾಡಿ ಇನ್ನೂ ಮೂರು ಘಂಟೆಗಳೂ ಕಳೆದಿಲ್ಲ.
ಈ ಕಂಪ್ಯೂಟರಿನ ಮುಂದೆ ಕೂತು ಕೀಲಿಮಣೆ ಒತ್ತೋಕೆ ಶುರು ಮಾಡಿದ್ರೆ, ಅಂತಹ ಊಟ ಕರಗುವಷ್ಟು ಮೈ ಬಗ್ಗೋ ಕೆಲಸಾನ
ಯಾವ ಸಾಫ್ಟ್‌ವೇರ್ ಇಂಜಿನಿಯರ್ ಮಾಡಲ್ಲ ಅನ್ನೋದು ನನ್ನ ವಾದ.
ಆದ್ರೂ ಈ ಹೊಟ್ಟೆ ಮಾತ್ರ ತಾಳ ಬಾರಿಸೋದು ನಿಲ್ಲಿಸ್ತಾ ಇಲ್ಲ.

"ಏನ್ ಗುರೂ, ಪಿಜ್ಜಾ ಆರ್ಡರ್ ಮಾಡ್ತಿಯಂತೆ" ಪಕ್ಕದಲ್ಲಿದ್ದ ನಿಖಿಲ್ ಧ್ವನಿ.
"ಅಯ್ಯೋ ಸುಮ್ನಿರಪ್ಪ, ಯಾವ್ ಖುಷಿಗೆ", ನನ್ನ ಪ್ರಶ್ನೆ.
"ಅದೇ ಕಣೋ ಮದುವೆಯಾದೆಯಲ್ಲ, ಐದು ವರ್ಷದ ಹಿಂದೆ, ಅದಕ್ಕೆ ಅನ್ಕೋ!!"
ನಾನೂ ಬಿಡಲಿಲ್ಲ "ಯಾಕಪ್ಪಾ, ಆಮೇಲೂ ಏನೇನೋ ಮಾಡಿದೆ, ಅದಕ್ಕೆಲ್ಲಾ ಬೇಡವೇ?"
ನಿಖಿಲ್,"ನಾನೇನು ಬೇಡ ಅಂತ ಹೇಳಿದೆನಾ? ನಾಳೆ ಪಿಜ್ಜಾ ಅದಕ್ಕೋಸ್ಕರ ಕೊಡಿಸು"

ಅಪ್ಪ, ಈ ಜನಗಳು ಬೇಕಾದ್ರೆ ಬೆಳಿಗ್ಗೆ ಆಗಿದ್ದಕ್ಕೆ, ಸಂಜೆ ಆಗಿದ್ದಕ್ಕೆ, ಕೋಳಿ ಕೂಗಿದ್ದಕ್ಕೆ, ಕ್ಷೌರ ಮಾಡಿಸಿದ್ದಕ್ಕೆ,....
ಯಪ್ಪಾ,ಯಾವುದಕ್ಕೆ ಬೇಕಾದ್ರೂ ಟ್ರೀಟ್ ಕೇಳ್ತಾರೆ.
ಅದ್ಯಾವ ಪುಣ್ಯಾತ್ಮ ಶುರು ಮಾಡಿದ್ನೋ ಈ ಪಾರ್ಟೀ ಅನ್ನೋ ಪದವನ್ನ.

"ಅದೇನಪ್ಪ ಒಂದು ಪಿಜ್ಜಾ ಕೊಡಿಸೋದಕ್ಕೆ ಅದೇನು ಗೊಣಗುತ್ತೀಯೋ?
ನಾನೇನು ಇಡೀ ಕಂಪನಿಗೆ ಕೊಡಿಸೋಕೆ ಹೇಳಿದೆನಾ?, ಬರೀ ನಮ್ 26 ಜನಗಳ ಟೀಮಿಗೆ ಅಷ್ಟೇ!!"
ನಿಖಿಲ್ ನಿಂದ ಮತ್ತೊಂದು ಶಾಕ್.

"ದೇವ್ರು, ನಾನೇನು ಕುಬೇರನ ವಂಶದವನಲ್ಲಪ್ಪ,
ಇಲ್ಲಿ ನಾನು ಯೋಚನೆ ಮಾಡುತ್ತಾ ಇರೋದು ಬರೀ 26 ಜನಗಳ ಚಿಕ್ಕ(!) ಟೀಮಿನ ವಿಷಯವಲ್ಲ,
ಆ 26 ಜನಗಳಲ್ಲಿ ಪ್ರತಿಯೊಬ್ಬರ ತಿನ್ನುವ ಕೆಪಾಸಿಟಿಯ ಬಗ್ಗೆ,
ನಂಗೂ ಮನೆ ಅಂತ ಒಂದಿದೆ, ಸ್ವಲ್ಪ ಸಂಬಳ ಮನೆಗೂ ಕೊಡ್ಬೇಕಪ್ಪ"

"ಈಗೇನು?, ಕಳೆದ ಐದಾರು ತಿಂಗಳಿನಿಂದ ನೀನೇನೂ ಟ್ರೀಟ್ ಕೊಡಿಸಿಲ್ಲ,
ಈಗ ಒಂದು ಪಿಜ್ಜಾ ಕೊಡಿಸೋಕೆ ಆಗೋಲ್ವೇ,ಸರಿ ಬಿಡು"
ಈತ ಅಷ್ಟೊಂದು ಸಲೀಸಾಗಿ ಬಿಡೋ ಆಸಾಮಿಯಲ್ಲ ಎನಿಸಿತು.

ನನಗೆ ಪಿಜ್ಜಾ ತಿನ್ನಬೇಕೆಂಬ ಆಸೆಯಾಗಿತ್ತೇನೋ ನಿಜ,
ಆದರೆ ಜತೆಗೆ ಇಡೀ ಟೀಮಿಗೆ ಪಿಜ್ಜಾ ತಿನ್ನಿಸಿ ಜೇಬಿಗೆ ಕತ್ತರಿ ಹಾಕಿಸಿಕೊಳ್ಳಬೇಕೆಂಬ ಮಹಾದಾಶೆಯಂತೂ ಇರಲಿಲ್ಲ.

"ಓಕೆ ದೇವ್ರು, ನಿಮ್ಮ ಕುದುರೇನೇ ಮುಂದೆ ಹೋಗ್ಲಿ, ಅದೇನು ಬೇಕೋ ಹೇಳಿ ಆರ್ಡರ್ ಮಾಡ್ತೀನಿ" ಕೊನೆಗೂ ನನ್ನೊಳಗಿಂದ ಸೋಲೊಪ್ಪಿಕೊಂಡ ಸ್ವರ.

"ಹೂಓಹೂಊಹೂಊ" ಇಡೀ ಟೀಮ್ ತಾವೇನೋ ಪ್ರಪಂಚವನ್ನೇ ಗೆದ್ದೆವೋ ಅನ್ನಿಸುವಷ್ಟು ಜೋರಾಗಿ ಕೂಗಿದರು.
"ಆಹಾಹ ನೋಡಿ, ಇನ್ನೊಬ್ರ ದುಡ್ಡಲ್ಲಿ ತಿನ್ನೋದು ಅಂದ್ರೆ ಮೃಷ್ಟಾನ್ನ ತಿಂದ ಹಾಗಾಗುತ್ತೇನೋ" ನಾನೊಮ್ಮೆ ಪೆಚ್ಚುಮೋರೆಯಲ್ಲಿ ಹೇಳಿದೆ.
ಯಾರೊಬ್ಬರೂ ಕೇಳಿಸಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ!!

ಸರಿ,ಒಬ್ಬೊಬ್ಬರೂ ಬಂದು ತಮತಮ್ಮ ಪಿಜ್ಜಾ ಆಯ್ಕೆಗಳನ್ನು ಹೇಳಿದ್ದಾಯ್ತು.
ಪಿಜ್ಜಾ ಸೆಂಟರಿಗೆ ಫೋನ್ ಮಾಡಿ ಆರ್ಡರ್ ಕೊಟ್ಟಿದ್ದಾಯ್ತು.
ಪಿಜ್ಜಾ ಎಲ್ಲಿಗೆ ತರಬೇಕು ಅಂತ ವಿಳಾಸ ಕೂಡ ಕೊಟ್ಟೆವು.
ಪಿಜ್ಜಾ ಸೆಂಟರಿನ ಅಂಗಡಿಯಾತ "ಆರ್ಡರ್ ಬರೋಕೆ ಗರಿಷ್ಟ ಅರ್ಧ ಘಂಟೆಯಾಗುತ್ತದೆ.
ದಯವಿಟ್ಟು ಕಾಯಿರಿ ಸಾರ್" ಅಂದು ಹೇಳಿ ಫೋನಿಟ್ಟ.

ಅಯ್ಯೋ ಈಗ ನೋಡಿ, ಮತ್ತೊಮ್ಮೆ ಮರೆತಿದ್ದ ಹಸಿವು ಮತ್ತೊಮ್ಮೆ ಬಾಯಿಬಡಿಯುತ್ತಿದೆ.

ಆ ಪಿಜ್ಜಾ ಅಂಗಡಿಯವನಿಗೇನು ಗೊತ್ತು,
ಅರ್ಧ ಘಂಟೆಯೆಂದರೆ 30 ನಿಮಿಷಗಳು,
ಅರ್ಥಾತ್ 30x60=1800 ಸೆಕೆಂಡುಗಳು.

ಅದರಲ್ಲೂ ಆರ್ಡರ್ ಕೊಟ್ಟ ಮೇಲೆ ಪಿಜ್ಜಾ ಬರೋ ತನಕ ಕಾಯೋದಿದೆಯಲ್ಲ ಅದು ಬಹಳ ಸಂಕಟದ ಸಮಯ.
ಅಲ್ಲ ಸ್ವಾಮಿ, ಕೊಡೋ ದುಡ್ಡು ಕೊಟ್ಟು ಮತ್ತೆ ಊಟಕ್ಕೆ ಕಾಯಬೇಕು ಅನ್ನೋದೆಲ್ಲ ಈಗಿನ ಕಾಲದಲ್ಲಿ ಶುರುವಾಗಿದೆಯಲ್ಲ.
ಊಟಕ್ಕೆ ಅಂತಹ ಬರ ಬಂದಿದೆಯಾ...

ಅಯ್ಯೋ ಬಿಡಿ, ಈಗ ಮತ್ತೆ ಪಿಜ್ಜಾ ವಿಷಯಕ್ಕೆ ಬರೋಣ.
ಅದೂ ಇದೂ ಮಾತನಾಡುತ್ತಾ ಹೇಗಾದರೂ ಸಮಯ ತಳ್ಳೋಣವೆಂದರೆ ಯಾವುದೂ ನೆನಪಿಗೆ ಬರುತ್ತಿಲ್ಲ.

ಮತ್ತೊಮ್ಮೆ ನಿಖಿಲ್ ನ ಆಗಮನ.
"ಗುರೂ, ನಿನ್ನ ಮದುವೆ ಸ್ಟೋರಿ ಹೇಳು. ಅಲ್ಲಿತನಕ ಟೈಮ್ ಪಾಸ್ ಮಾಡೋಣ"
"ಈ ಟೈಮಲ್ಲಿ ಅವೆಲ್ಲ ಬೇಕಾ, ಮೊದ್ಲು ಪಿಜ್ಜಾ ತಿನ್ನೋಣ"
"ಪಿಜ್ಜಾ ಬರಬೇಕಲ್ಲ"
"ಹೌದಲ್ವೇ, ಪಿಜ್ಜಾನೇನು ಈ ಪುಣ್ಯಾತ್ಮರು ಗಿಡದಲ್ಲಿ ಬೆಳಿತಾರ, ಅರ್ಧ ಘಂಟೆ ಬೇಕಂತೆ
ನೀನೇನೇ ಹೇಳು,ಈ ಪಿಜ್ಜಾ ಸೆಂಟರಿನವರಿಗಿರುವಷ್ಟು ದುರಹಂಕಾರ ಯಾರಿಗೂ ಇಲ್ಲ,
ಯಾರಿಗೆ ಇಷ್ಟವಾಗಲೀ ಬಿಡಲಿ, ವ್ಯಾಪಾರ ಜೋರಾಗಿ ಆಗುತ್ತಲ್ಲ ಅನ್ನೋ ಅಸಡ್ಡೆ,
ಅದಕ್ಕೆ ಹೊಟ್ಟೆ ತುಂಬಿದವನ ಮನೆಗೆ ಊಟಕ್ಕೆ ಹೋಗಬೇಡ ಅನ್ನೋದು"

"ಹೌದು ಗುರು, ಸರಿಯಾಗಿ ಹೇಳಿದೆ. ಇವರಿಗೆ ಸರಿಯಾಗಿ ಬುದ್ಧಿ ಕಲಿಸಬೇಕು.
ಏನಾದರೊಂದು ಮಾಡೋಣ"
"ಏನು ಮಾಡಬೇಕು, ನೀವೆಲ್ಲರೂ ಸೇರಿ ಒಂದು ಐಡಿಯಾ ಕೊಡಿ, ಅದನ್ನೇ ಮಾಡೋಣ"
ಅಷ್ಟೊತ್ತಿಗಾಗಲೇ ಪಿಜ್ಜಾ ಬರುವಿಕೆಯನ್ನು ಎದುರು ನೋಡುತ್ತಿದ್ದ ಎಲ್ಲರ ಪಿತ್ತ ನೆತ್ತಿಗೇರಿತ್ತು.

ಓಕೇ, ಈಗಾಗಲೇ 40 ನಿಮಿಷವಾಗಿದೆ.
ಇನ್ನು ಅವನು ಪಿಜ್ಜಾ ತಂದರೂ ತೆಗೆದುಕೊಳ್ಳೋದು ಬೇಡ!
ನಿರ್ಧಾರವಾಯಿತು.

ಇದರ ಮಧ್ಯೆ ಮತ್ತೊಂದು ಕ್ರಿಮಿನಲ್ ಐಡಿಯಾ.
ಈ ಪಿಜ್ಜಾ ಸೆಂಟರಿನವರನ್ನು ಹಾಗೆಯೇ ಬಿಟ್ಟು ಬಿಡಬಾರದು.
ಅವರಿಂದ ಒಂದಾದರೂ ಕ್ಷಮಾಪತ್ರ ಪಡೆಯಬೇಕು.
ಜೊತೆಗೆ ಇವರಿಗೆ ಸ್ವಲ್ಪ ದಿನ ನಮ್ಮನ್ನು ಮರೆಯೋಕೆ ಆಗಬಾರದು, ಆ ರೀತಿ ಪಾಠ ಕಲಿಸಬೇಕು.
ಏನು ಮಾಡೋದು?

ತಕ್ಷಣ ಅಲ್ಲಿಯವರೆಗೆ ಸುಮ್ಮನೇ ಕುಳಿತಿದ್ದ ಆಮೀರ ಎದ್ದು ಬಂದು ಒಂದು ಸೂಪರ್ ಐಡಿಯಾ ಕೊಟ್ಟ.

"ಗುರೂ, ನೋಡು, ಈ ಐಡಿಯಾ ಉಪಯೋಗಿಸಿದ್ರೆ ನೀ ಹೇಳಿದ್ದನ್ನೆಲ್ಲಾ ಮಾಡಬಹುದು,
ಪ್ರತೀ ಪಿಜ್ಜಾ ಸೆಂಟರಿನವರಿಂದಲೂ ಗ್ರಾಹಕರಿಗಾಗಿ ಒಂದು ಪಾಲಿಸಿ ಇದೆ.
ಯಾವುದೇ ವ್ಯಕ್ತಿ ಪಿಜ್ಜಾ ಆರ್ಡರ್ ಕೊಟ್ಟ ಮೇಲೆ, ಅದ್ಯಾವುದೇ ಸ್ಥಳದಲ್ಲಿದ್ದರೂ ಮುಂದಿನ 30 ನಿಮಿಷದೊಳಗೆ ಆರ್ಡರ್ ಡೆಲಿವೆರಿ ಕೊಡಬೇಕು.
ಕೇವಲ 10 ನಿಮಿಷ ತಡವಾದರೂ ಆತ ತಂದ ಪಿಜ್ಜಾಗೆ ಇಂತಿಷ್ಟು ಅಂತ ರಿಯಾಯಿತಿ ಅಥವಾ ಪೂರ್ತಿ ಪಿಜ್ಜಾ ಉಚಿತವಾಗಿ ಕೊಡಬೇಕು.
ಇದರಿಂದ ಗ್ರಾಹಕನಿಗೂ ಆ ಪಿಜ್ಜಾ ಕಂಪನಿಯ ಮೇಲೆ ನಂಬಿಕೆ ಹೋಗೋದಿಲ್ಲ, ಆ ಕಂಪನಿಗೂ ಆ ಗ್ರಾಹಕನನ್ನು ಕಳೆದುಕೊಳ್ಳೋ ಭೀತಿ ಇರೋದಿಲ್ಲ,
ಈಗಾಗಲೇ ಆರ್ಡರ್ ಕೊಟ್ಟು 40 ನಿಮಿಷವಾಗಿದೆ, ಈ ಅವಕಾಶವನ್ನು ಮಿಸ್ ಮಾಡ್ಕೋಬಾರದು, ಏನಂತೀಯ"

ನಿಖಿಲ್ ಓಡಿ ಬಂದವನೇ "ಸೂಪರ್ ಐಡಿಯಾ ಆಮೀರ್" ಎಂದು ಕೈಕೊಟ್ಟ.
"ಗುರೂ ಬಿಡಬೇಡ, ನಿನ್ನ ಮಾತಿನ ಶೈಲಿನ ಇಲ್ಲಿ ಉಪಯೋಗಿಸು" ಎಂದು ನನಗೆ ಹೇಳಿದ.

ನಂಗಂತೂ ಒಂದೇ ಸಲ ಹುಮ್ಮಸ್ಸು ಬಂತು.
"ಎಲ್ಲರಿಗೂ ಪುಕ್ಸಟ್ಟೆ ಪಿಜ್ಜಾ, ಟ್ರೀಟ್ ಮಾತ್ರ ನಂ ಹೆಸರಲ್ಲಿ" ಮನಸ್ಸು ಒಂದು ಬಾರಿ ಕುಣಿಯಿತು.

ಇದೀಗ ಮನದಲ್ಲೇ ಏನು ಮಾತನಾಡಬೇಕು ಅಂತ ತೀರ್ಮಾನಿಸಿ ಪಿಜ್ಜಾ ಹುಡುಗನ ಬರುವಿಕೆಗಾಗಿ ಕಾಯತೊಡಗಿದೆ.
ಕೊನೆಗೂ ಪಿಜ್ಜಾಸೆಂಟರಿನ ಸ್ಕೂಟರ್ ನಮ್ಮ ಗೇಟಿನ ಹೊರಗೆ 45 ನಿಮಿಷಗಳ ನಂತರ ಬಂತು.
ಅದ್ಯಾಕೋ ಪೆಚ್ಚುಮೋರೆ ಹಾಕಿಕೊಂಡು ಆ ಹುಡುಗ ನಿಂತಿದ್ದ.
ನಾ ಅವನ ಬಳಿಗೆ ಹೋದವನೇ ಒಂದೇ ಸಮನೆ ಬೈಯೋಕೆ ಶುರು ಮಾಡಿದೆ.

"ಸ್ವಲ್ಪನಾದ್ರೂ ಟೈಮ್ ಸೆನ್ಸ್ ಇಲ್ವಾ ನಿಮ್ಮ ಪಿಜ್ಜಾ ಸೆಂಟರಿನವರಿಗೆ,
ದುಡ್ಡೂ ಕೊಟ್ಟು ತಲೇನೂ ಬೋಳಿಸ್‌ಕೊಂಡ್ರಂತೆ ಅದೆಲ್ಲೋ,ಹಾಗಾಗಿದೆ ನಮ್ ಕತೆ.
ಇಲ್ಲೇನೂ ಧರ್ಮಕ್ಕೆ ಪಿಜ್ಜಾ ತರ್ತಿಯ, ದುಡ್ಡು ಕೊಡಲ್ವಾ?
ನಂಗೆ ಬೇಡ.
ವಾಪಸ್ ತೆಗೆದುಕೊಂಡು ಹೋಗು,
ನಿಮ್ ಮ್ಯಾನೇಜರ್ ಗೆ ನಂಗೆ ಒಂದು ಮೇಲ್ ಕಳ್ಸೋಕೆ ಹೇಳು.
ನಂಗೆ ಗೊತ್ತು ನಿಮ್ಮನ್ನ ಎಲ್ಲಿ ವಿಚಾರಿಸ್ಕೋಬೇಕು ಅಂತ.
ಬರೋಬ್ಬರಿ ಮುಕ್ಕಾಲು ಘಂಟೆ ಆದ ಮೇಲೆ ತಂದಿದ್ದಿಯಾ"

ಪಿಜ್ಜಾ ಸೆಂಟರಿನ ಹುಡುಗ ತಡಬಡಾಯಿಸಿದ.
"ಸರ್ ಅದು ಹಾಗಲ್ಲ,
ಇಲ್ಲಿಗೆ ಡೆಲಿವರಿ ಮಾಡಬೇಕಿದ್ದ ಹುಡುಗ ನಾನಲ್ಲ, ಅದು.."

ನಾನು ಬಿಡಲಿಲ್ಲ, "ಏನ್ ಅದು ಇದು, ಅವನೇನು ಕತ್ತೆ ಮೇಯಿಸೋಕೆ ಹೋಗಿದ್ದಾನ,
ನಿಮ್ಗೆ ಬಿಸ್ನೆಸ್ ಮಿತಿಮೀರಿ ಬೆಳೆದಿದೆ ಅಂತ ಸೊಕ್ಕು, ಅದಕ್ಕೆ ಅಸಡ್ಡೆ"

ಕೊನೆಗೂ ನನ್ನ ಕೋಪದ ಮಾತಿನ ಪರಿ ಅವನಿಗೆ ತಟ್ಟಿತು ಅನ್ನಿಸುತ್ತೆ.
"ಸರ್ ಒಂದು ನಿಮಿಷ, ನಮ್ ಮ್ಯಾನೇಜರ್ ಗೆ ಒಂದು ಫೋನ್ ಮಾಡ್ತೀನಿ ಇರಿ" ಎಂದವನೇ ಆತನ ಮ್ಯಾನೇಜರ್ ಗೆ ಫೋನ್ ಮಾಡಿ,
ಅದೇನೋ ಒಂದು ನಿಮಿಷ ಮಾತಾಡಿದ.
ನಂತರ "ಸರ್, ನೀವೀಗ ಈ ಪಿಜ್ಜಾಗೇ ಏನು ದುಡ್ಡು ಕೊಡಬೇಕಿಲ್ಲ, ದಯವಿಟ್ಟು ತೆಗೆದುಕೊಳ್ಳಿ,
ತಡವಾದದ್ದಕ್ಕೆ ಕ್ಷಮೆಯಿರಲಿ" ಎಂದು ಹೇಳಿ ಪಿಜ್ಜಾಗಳ ಪೊಟ್ಟಣಗಳನ್ನು ನನ್ನ ಕೈಗಿತ್ತ.

ಆದರೂ ನಾನೇನೋ ಸಮಾಧಾನವಾಗದವನಂತೆ ನಟಿಸುತ್ತಾ,
"ಹೋಗಲಿ, ಆದರೆ ಅಷ್ಟಕ್ಕೇ ಸುಮ್ಮನಾಗುವವನಲ್ಲ ನಾನು,
ನಿಮ್ಮ ಮ್ಯಾನೇಜರ್ ನಿಂದ ಅಥವಾ ಅದ್ಯಾವನೋ ಡೆಲಿವೆರಿ ಮಾಡ್‌ಬೇಕಿತ್ತು ಅಂದೆಯಲ್ಲ ಅವನಿಂದ ಇನ್ನೆರಡು ದಿನಗಳಲ್ಲಿ ನನಗೊಂದು
ಕ್ಷಮೆ ಕೋರಿರೋ ಮೇಲ್ ಬೇಕು" ಎಂದೆ.

"ಆಯ್ತು ಸರ್ " ಎಂದ ಹುಡುಗ ಸ್ಕೂಟರ್ ಏರಿ ಮರೆಯಾದ.

ಅಷ್ಟು ಹೊತ್ತಿನವರೆಗೆ ಸುಮ್ಮನೇ ನನ್ನ ಹಿಂದೆ ನಿಂತಿದ್ದವರೆಲ್ಲ "ಹೋ" ಎಂದು ಖುಷಿಯಲ್ಲಿ ಕೂಗಿದರು.
"ಅದೇನು ಮಾತಾಡ್ತೀಯಾ ಗುರೂ,
ಹುಟ್ಟಿದಾಗ್ಲೇ ಆ ದೇವ್ರು ಮಾತಾಡೋ ಕಲೆ ನಿಂಗೆ ಕೊಟ್ಟವನೆ,
ನೋಡು ಬರೀ ಮಾತಲ್ಲೇ 5-6 ಸಾವಿರದ ಪಿಜ್ಜಾ ಫ್ರೀಯಾಗಿ ಕೊಡಿಸಿಬಿಟ್ಟೆಯಲ್ಲ, ಸೂಪರ್"

ನಂಗೆ ಗೆದ್ಡೆ ಎನ್ನುವ ಉತ್ಸಾಹದ ಜೊತೆಗೆ,
ನನ್ನ ಬುದ್ಧಿವಂತಿಕೆಯ ಬಗ್ಗೆ ನನಗೇ ಅಭಿಮಾನ ಹುಟ್ಟಿತ್ತು.
ಎಲ್ಲರೂ ಹೊಟ್ಟೆ ಬಿರಿಯುವಂತೆ, ತಂದ ಪಿಜ್ಜಾವನ್ನು ತಿಂದು ತೇಗಿದರು.
ತಿನ್ನುವಾಗ ಬರೀ ಉಚಿತ ಪಿಜ್ಜಾದ ಬಗ್ಗೆಯೇ ಮಾತು.

---------------------------------------------------------------------------------------------

ಈ ಘಟನೆ ನಡೆದು 4 ದಿನಗಳಾಗಿವೆ.ಪಿಜ್ಜಾ ವಿಷಯವಂತೂ ಮರೆತೇ ಹೋಗಿದೆ.
ಆಗ ನನ್ನ ಮೇಲ್‌ಬಾಕ್ಸ್ ಗೆ "ಪಿಜ್ಜಾ ಸೆಂಟರಿನಿಂದ ಕ್ಷಮಾಪಣೆ" ಎಂದು ಒಕ್ಕಣೆಯಿರುವ ಮೇಲೊಂದು ಬಂತು.

ಅದನ್ನು ತೆರೆದು ಓಡತೊಡಗಿದೆ.
"ಪ್ರಿಯ ಗ್ರಾಹಕ ಗುರೂಗೆ,
ಪಿಜ್ಜಾ ಸೆಂಟರಿನ ಡೆಲಿವರಿ ಹುಡುಗ ವೆಂಕಟೇಶ ಮಾಡುವ ವಂದನೆಗಳು.
ನನ್ನ ಸಹೋದ್ಯೋಗಿ ತಿಳಿಸಿದಂತೆ ತಾವೇ ಕೇಳಿದ ಕ್ಷಮಾಪಣಾ ಪತ್ರವನ್ನು ನಾನೀಗ ಬರೆದು ತಮ್ಮ ಮುಂದಿಡುತ್ತಿದ್ದೇನೆ.

ಇದೇ ಕಳೆದ ಸೋಮವಾರ ತಾವು ನೀಡಿದ ಪಿಜ್ಜಾ ಆರ್ಡರ್ ಡೆಲಿವರಿಯನ್ನು ನಾನು ಮಾಡಬೇಕಿತ್ತು.
ರೆಡಿಯಾಗಿದ್ದ ಪಿಜ್ಜಾವನ್ನು ನನ್ನ ಸ್ಕೂಟರಿನಲ್ಲಿಟ್ಟು ತಮ್ಮ ಆಫೀಸಿನ ಬಳಿ ಬರುತ್ತಿದ್ದೆ.
ದುರ್ವಿಧಿ ಯಾವ ಸಮಯದಲ್ಲಿ ಬೇಕಾದರೂ ನಮಗೆ ಅಘಾತ ನೀಡುತ್ತದೆ.
ನನಗೊಬ್ಬ ಎರಡೂವರೆ ವರ್ಷದ ಒಬ್ಬ ಮಗ.
ಆತ ಹುಟ್ಟಿದ ಒಂದೇ ವರ್ಷದಲ್ಲಿ ಮಾರುಕಟ್ಟೆಗೆ ತರಕಾರಿ ತರಲೆಂದು ಹೋದ ಆತನ ಅಮ್ಮ,
ಅರ್ಥಾತ್ ನನ್ನ ಮುದ್ದಿನ ಮಡದಿ ತಿರುಗಿ ಮನೆಗೆ ಬರಲಿಲ್ಲ.
ಬರುವ ದಾರಿಯಲ್ಲಿ ಆದ ಅಪಘಾತದಲ್ಲಿ ವಿಧಿ ಅವಳನ್ನು ನನ್ನಿಂದ ದೂರ ಮಾಡಿತು.
ನಂತರ ನನ್ನ ಮಗುವನ್ನು ನನ್ನ ತಾಯಿಯೇ ನೋಡಿಕೊಳ್ಳುತ್ತಿದ್ದರು.
ವಾರದ ಹಿಂದೆ ನನ್ನಮ್ಮ ಊಟ ಮಾಡಿಸುವಾಗ ಆಟವಾಡುತ್ತಿದ್ದ ನನ್ನ ಮುದ್ದು ಕಂದ, ಮಹಡಿಯಿಂದ ಬಿದ್ದು ತಲೆಗೆ ಗಂಭೀರ ಗಾಯ ಮಾಡಿಕೊಂಡಿತ್ತು.
ತುರ್ತು ನಿಗಾ ಘಟಕದಲ್ಲಿ ಆತನನ್ನು ಸೇರಿಸಲಾಗಿತ್ತು.
ಚಿಕಿತ್ಸೆಗೆ ದುಡ್ಡಿಲ್ಲದೇ ಅಂದು ಸಂಬಳದ ದಿನವಾದ್ದರಿಂದ ಕೆಲಸಕ್ಕೆ ಹಾಜರಾಗಿದ್ದೆ.

ನಿಮ್ಮ ಪಿಜ್ಜಾ ಡೆಲಿವೆರಿ ಮಾಡಬೇಕಾಗಿ ನಾನು ಹೊರಡಬೇಕಿತ್ತು.
ಆಗ ಆಸ್ಪತ್ರೆಯಿಂದ ನನ್ನ ತಾಯಿ ಕರೆ ಮಾಡಿ ಸಿಡಿಲ ವಾರ್ತೆಯನ್ನು ನನಗೆ ತಿಳಿಸಿದರು.
ನನ್ನ ಮುದ್ದು ಕಂದಮ್ಮನೂ ನನ್ನನ್ನು ಬಿಟ್ಟು ದೂರ ಆಗಲಿದ್ದ.
ಹೋಗುವ ಅವಸರದಲ್ಲಿ ನಾನು ನನ್ನ ಕೆಲಸವನ್ನು ಬೇರೆಯವರಿಗೆ ವಹಿಸಿ ತೆರಳಿದ್ದೆ.
ಅದಕ್ಕಾಗಿ ನಿಮಗೆ ಬರಬೇಕಿದ್ದ ಪಿಜ್ಜಾ ತಡವಾಯಿತು.

ತಡವಾಗಿದ್ದಕ್ಕೆ ನನ್ನ ಕಂಪನಿ ನಿಮಗೆ ತಲುಪಬೇಕಿದ್ದ ಪಿಜ್ಜಾವನ್ನು ನಿಮಗೆ ಉಚಿತವಾಗಿ ಕೊಟ್ಟಿದೆ.
ತಾವು ಪಿಜ್ಜಾವನ್ನು ತಿಂದು ಆನಂದಿಸಿದರೆಂದು ನಾವು ಭಾವಿಸುತ್ತೇವೆ.
ನಷ್ಟ ಭರಿಸಲಿಕ್ಕಾಗಿ ನನ್ನ ಸಂಬಳದಿಂದ ಆ ಹಣವನ್ನು ಹಿಡಿದುಕೊಳ್ಳಲಾಗಿದೆ.
ಇನ್ನು ಮುಂದೆ ತಮ್ಮ ಪಿಜ್ಜಾ ತಡವಾಗದಂತೆ ನಮ್ಮ ಕಂಪನಿ ಎಚ್ಚರ ವಹಿಸುತ್ತದೆ ಎಂಬುದನ್ನು ತಮಗೆ ತಿಳಿಸಲು ಇಚ್ಛಿಸುತ್ತೇನೆ.

ಇಂತಿ ವಂದನೆಗಳೊಂದಿಗೆ,
ವೆಂಕಟೇಶ,
ಡೆಲಿವೆರಿ ಬಾಯ್,
ಪಿಜ್ಜಾ ಸೆಂಟರ್"

ಎಲ್ಲರಿಗೂ ಅದರ ಬಗ್ಗೆ ಹೇಗೆ ಹೇಳುವುದು, ಅರ್ಥವಾಗಲಿಲ್ಲ.
ಹೊಟ್ಟೆಯೊಳಗೆ ಏನೋ ಕಲಕಿದಂತಾಯ್ತು.
ಜೊತೆಗೆ ಕಣ್ಣಂಚಿನಲ್ಲಿ ನೀರ ಹನಿಯೊಂದು ತೊಟ್ಟಿಕ್ಕಿತು.
---------------------------------------------

--ಪರಿಕಲ್ಪನೆ
ಸಂತು

(ಗೆಳೆಯರೇ,
ಇಲ್ಲಿ ಉಲ್ಲೇಖಿಸಿದ ಪಿಜ್ಜಾ ಸೆಂಟರ್ ಮತ್ತು ಪಾತ್ರಧಾರಿಗಳೆಲ್ಲ ಬರೀ ಕಲ್ಪನೆ ಮಾತ್ರ.
ಇಲ್ಲಿ ಕಾರ್ಪೊರೇಟ್ ವಾತಾವರಣದ ಪರಿಚಯ ಮಾಡಿಸಲಿಕ್ಕಾಗಿ ಕೆಲವು ಸಂಭಾಷಣೆಗಳಲ್ಲಿ ಆಂಗ್ಲ ಭಾಷೆಯನ್ನು
ಉದ್ದೇಶಪೂರ್ವಕವಾಗಿ ಬಳಸಲಾಗಿದೆ.
ವ್ಯಂಗ್ಯವಾಗಿಯೇ ಕತೆಯ ಹೇಳುತ್ತಾ ಕೊನೆಗೆ ಹೇಳಲೇಬೇಕಾದ ಗಂಭೀರ ವಿಷಯವನ್ನು ವಿಭಿನ್ನವಾಗಿ ಹೇಳುವ ಪ್ರಯತ್ನ ಮಾಡಿದ್ದೇನೆ.
ಜೊತೆಗೆ ನೀತಿಯೊಂದು ಅಪ್ರಸ್ತುತವಾಗಿ ನಮ್ಮ ತಲೆಯಲ್ಲಿ ಈ ಕತೆ ಮುಗಿಯುವಾಗ ಬಂದು ಹೋಗುತ್ತದೆ.
ತಮಗೆ ಇಷ್ಟವಾಗುತ್ತದೆಂಬ ನಂಬಿಕೆಯೊಂದಿಗೆ, -ಸಂತು )

Sunday, August 19, 2012

ವ್ಯರ್ಥ

(ಚಿತ್ರಕೃಪೆ: google)
ಕುಡಿಯಲೋದ ಕರುವನೆಳೆದು,
ಕಂಬದಲ್ಲಿ ಕಟ್ಟಿಹಾಕಿ,
ತಾಯಮೊಲೆಯ ಹಿಂಡಿ ಕರೆದು,
ಹಾಲು ತಂದು ಮೊಸರ ಮಾಡಿ,
ಮೊಸರ ಗಡಿಗೆ ಕೆಳಗೆ ಬೀಳೆ,
ವ್ಯರ್ಥವಾಯಿತೇ, ಇಲ್ಲ ಅರ್ಥವಾಯಿತೇ?

ನೆರೆಯ ಹೊರೆಯ ಹೊಟ್ಟೆಯುರಿಸಿ,
ಒಡವೆ ಕಾಸು ಗೂಡಲಿರಿಸಿ
ಪರರ ವ್ಯಥೆಗೆ ಕುರುಡನಾಗಿ,
ತನಗೆ ತಾನೇ ಮಿತ್ರನಾಗಿ,
ಕೊನೆಗೆ ಎದೆಗೆ ತೂತು ಬೀಳೆ,
ವ್ಯರ್ಥವಾಯಿತೇ, ಇಲ್ಲ ಅರ್ಥವಾಯಿತೇ?

ಪೈಸೆ ದುಡಿದು ಗಂಜಿ ಕುಡಿದು,
ಒಡೆದ ಮನಗಳೆಲ್ಲ ಬೆಸೆದು,
ಕಷ್ಟಸುಖದಿ ಭಾಗಿಯಾಗಿ,
ಎಲ್ಲ ಜನಗಳಣ್ಣನಾಗಿ,
ದೇಹವಳಿದು ಹೆಸರು ಉಳಿಯೇ,
ವ್ಯರ್ಥವಾಯಿತೇ, ಇಲ್ಲ ಅರ್ಥವಾಯಿತೇ?

Thursday, August 9, 2012

ಓಹ್ ಒಲಿಂಪಿಕ್!!

(ಚಿತ್ರಕೃಪೆ: google)
ಕೈಯಲ್ಲೊಂದು ಹಾಳೆ ಜತೆಗೆ ಪೆನ್ನು. ಏಕೋ ಏನೋ ಗೀಚಬೇಕೆನಿಸಿತು.
ಇದೇ ವಿಷಯ ಕಳೆದ ತಿಂಗಳಿನಿಂದ ತಲೆ ಕೊರೆಯುತ್ತಿದೆ.

"ಇಂಗ್ಲೆಂಡ್ ನಲ್ಲಿ ೨೦೧೨ರ ಒಲಿಂಪಿಕ್ ನಡೆಯುತ್ತಿದೆ.
ಕ್ಯೂಬ,ಉಕ್ರೇನ್, ಹಂಗೇರಿ,ಕಝಕ್ ಸ್ತಾನ್ ಈ ರಾಷ್ಟ್ರಗಳೆಲ್ಲ ಎಷ್ಟು ದೊಡ್ಡದಿವೆ?
ನಮ್ಮ ಭಾರತದ ಅರ್ಧದಷ್ಟಿವೆಯಾ?
ಕೊನೆಯ ಪಕ್ಷ ನಮ್ಮ ದೇಶದ ಯಾವುದಾದರೊಂದು ರಾಜ್ಯದಷ್ಟಿದೆಯಾ?
ಅವುಗಳ ಜನಸಂಖ್ಯೆಯಾದರೂ ಎಷ್ಟು?
ಇಡೀ ರಾಷ್ಟ್ರದ ಒಟ್ಟು ಜನಸಂಖ್ಯೆ ನಮ್ಮ ದೇಶದ ಯಾವುದಾದರೊಂದು ಮಹಾನಗರದ ಒಟ್ಟು ಜನಸಂಖ್ಯೆಗಿಂತ ಹೆಚ್ಚಿರಲಾರದು!!

ಆದರೂ ಆ ರಾಷ್ಟ್ರಗಳ ಕ್ರೀಡಾಪಟುಗಳ ಹುರುಪು ನೋಡಿ.
ಈಗಾಗಲೇ ಆ ದೇಶಗಳು ಒಂದಷ್ಟು ಚಿನ್ನ, ಬೆಳ್ಳಿ ಹಾಗೂ ಕಂಚು ಪದಕಗಳನ್ನು ಗೆದ್ದಾಗಿವೆ.
ಇನ್ನೂ ಗೆಲ್ಲುತ್ತಲೂ ಇವೆ.

ಇನ್ನು ಅಮೇರಿಕ ಹಾಗೂ ಚೀನಾ ದೇಶಗಳ ಜೊತೆ ಚಿನ್ನದ ಪದಕಗಳ ಹೋಲಿಕೆಯಂತೂ ಮಾಡ ಹೊರಟವ ಮೂರ್ಖನೇ ಸರಿ.
ಏನಾಗಿದೆ ನಮ್ಮ ಕ್ರೀಡಾಪಟುಗಳಿಗೆ?
ಒಂದೆರಡು ಬೆಳ್ಳಿ, ಒಂದೆರಡು ಕಂಚು!!
ಒಂದೊಂದು ರಾಜ್ಯದ ಜನಗಳು ಒಂದೊಂದು ಕ್ರೀಡೆಯಲ್ಲಿ ಪಳಗಿ ಒಲಿಂಪಿಕ್ ನಲ್ಲಿ   ಭಾಗವಹಿಸಿದರೂ ಯಾವ ಕ್ರೀಡೆಯಲ್ಲೂ ನಮ್ಮ ಭಾರತದವರು ಇಲ್ಲದೇ ಹೋಗುವುದಿಲ್ಲ. ಅಲ್ಲವೇ?
ಹೇಗಿದ್ದರೂ ಒಂದಷ್ಟು ಪದಕಗಳಂತೂ ಗ್ಯಾರಂಟಿ.

ಛೇ.
ಏನು ಮಾಡುತ್ತಿದ್ದಾರೆ ನಮ್ಮ ದೇಶದವರೆಲ್ಲ.ಎಲ್ಲ ಸೋಮಾರಿಗಳು.
ಏನಾಗಿದೆ ಇವರಿಗೆ ಧಾಡಿ?"

ಇನ್ನೇನು ನನ್ನ ಲೇಖನ ಮುಗಿಯಬೇಕಿತ್ತು.

"ಅಲ್ಲಪ್ಪಾ ಮಹಾರಾಯ, ಇನ್ನೊಂದು ಸಲ ನೀನೇನು ಬರೆದಿದ್ದೀಯಾ ಯೋಚಿಸಿ ಹೇಳು"
ಇದ್ಯಾರ ಧ್ವನಿ?
ಓಹ್ ನನ್ನ ಮನಸ್ಸು ಮಾತನಾಡುತ್ತಿದೆ!!

ನಾನೂ ಬಿಡಲಿಲ್ಲ, ಕೇಳಿದೆ "ಯಾಕಪ್ಪಾ, ನಾನೇನು ತಪ್ಪು ಬರೆದಿದ್ದೀನಿ"
ಮನಸು, "ಈ ದೇಶದ ಜನಗಳು ಸೋಮಾರಿ ಎಂದೆಯಾ? ಅದು ಸರೀನಾ?"
ನಾನು, "ಮತ್ತಿನ್ನೇನು ಏನಾಗುತ್ತೆ ಇವರ ಕೈಲಿ, ಕಷ್ಟದ ಕೆಲಸ ಯಾವುದೂ ಆಗಬಾರದು.
 ಏನೂ ಮಾಡದೇ ಚಿನ್ನದ ಪದಕ ಬಾ ಅಂದ್ರೆ ಬರುತ್ಯೆ?,
ನಾನೇನು ತಪ್ಪು ಹೇಳಿದೆ?
ನಂಗೂ ದೇಶದ ಮೇಲೆ ಭಕ್ತಿ ಇದೆ, ಪ್ರೀತಿ ಇದೆ.
ನಮ್ಮ ದೇಶದ ಹೆಸರು ಒಲಿಂಪಿಕ್ ಪದಕಗಳ ಪಟ್ಟಿಯಲ್ಲಿ ಚೀನಾ ಅಮೇರಿಕಗಳ ತರಹ ಅಗ್ರಸ್ತಾನದಲ್ಲಿ ಇರಬೇಕು ಅನ್ನೋ ಆಸೆ ಇದ್ದರೆ ಅದು ತಪ್ಪೇ"

ಮನಸು  ಯೋಚಿಸಿ ಹೇಳಿತು,"ಪುಣ್ಯಾತ್ಮ, ನಿಂದೆಲ್ಲ ವಾದವನ್ನು ಒಪ್ಪುತ್ತೀನಿ.
ನಂಗೂ ನಮ್ಮ ದೇಶದ ಹೆಸರು ಪದಕಗಳ ಪಟ್ಟಿಯಲ್ಲಿ ರಾರಾಜಿಸಬೇಕು ಅನ್ನೋ ಆಸೆ ಇದೆ.
ನಾನೂ ಈ ದೇಶದ ಅಪ್ಪಟ ಪ್ರೇಮಿ. ನಾನು ಕೂಡ ನಿನ್ನ ತರಹ ಯೋಚನೆ ಮಾಡುತ್ತೇನೆ.
ಇಷ್ಟೆಲ್ಲಾ  ರಾಜಕೀಯ ಪುಡಾರಿಗಳ ತರಹ ಭಾಷಣ ಬಿಗಿಯೋ ನೀನು,
ನೀನೇ ಯಾಕೆ ಆ ಕೆಲ್ಸ ಮಾಡಬಾರದು?
ನೀನೇ ಯಾಕೆ ಯಾವುದಾದರೊಂದು ಕ್ರೀಡೆಯಲ್ಲಿ ಪಳಗಿ ಒಲಿಂಪಿಕ್ ನಲ್ಲಿ ಸ್ಪರ್ಧಿಸಬಾರದು?
ಎಂಟು ಗಂಟೆಗೆ ಹೋಗಬೇಕಾದ ಆಫೀಸಿಗೆ, ಎಂಟೂವರೆಗೆ ಎದ್ದು ತಡಬಡಾಯಿಸಿಕೊಂಡು ಹೋಗುವ ಜಾಯಮಾನದವನು ನೀನು.
ಕೊನೆಯ ಪಕ್ಷ ಯಾವುದಾದರೊಂದು ಸ್ಪರ್ಧೆಯಲ್ಲಿ ಭಾಗವಹಿಸುತ್ತೇನೆಂದು ಎದೆ ತಟ್ಟಿ ಹೇಳಿನೋಡು.
ಕೊನೆಯ ಪಕ್ಷ ಒಲಿಂಪಿಕ್ ಬೇಡ, ನಿನ್ನದೇ ಏರಿಯಾದ ಆಟಗಾರರೊಂದಿಗೆ ಜಯಿಸಿ ನೋಡು.
ಆಗ ಗೊತ್ತಾಗುತ್ತದೆ, ನಿನಗೆ ಅದಕ್ಕೆ ಬೇಕಾದ ಶ್ರಮ!!
ಆ ಆಟಗಾರರೋ, ಕೊನೆಯ ಪಕ್ಷ ಬೆಳ್ಳಿ,ಕಂಚು ಪದಕಗಳನ್ನಾದರೂ ಪಡೆದಿದ್ದಾರೆ.
ನೀನೇನು ಮಾಡಿದ್ದೀಯಾ?
ಈಗ ಯೋಚಿಸು, ಬರೀ ತಪ್ಪು ಹುಡುಕುವುದರಲ್ಲಿ ಕಾಲ ಕಳೆಯುತ್ತೀಯೋ?
ಅಥವಾ ಇನ್ನೇನಾದರೂ ಸರಿಯಾದ ಕೆಲಸ ಮಾಡುತ್ತೀಯೋ.
ಯೋಚಿಸಿ ನೋಡು!!"

ಹೀಯಾಳಿಸಿ ಬರೆದಿದ್ದ ಹಾಳೆಯನ್ನು ಪರ್ರನೆ ಹರಿದು ಹಾಕಿ,
ಮತ್ತೊಂದು ಹೊಸ ಹಾಳೆಯ ಮೇಲೆ ಬರೆಯತೊಡಗಿದೆ....

"ಪದಕ ಗೆದ್ದ ಭಾರತಾಂಬೆಯ ಪುತ್ರರಿಗೆ ಅಭಿನಂದನೆಗಳು!!
ಅಮ್ಮನ ಕೀರ್ತಿ ಎತ್ತಿ ಹಿಡಿಯುವ ನಿಮ್ಮ ಈ ಕಾರ್ಯ ಹೀಗೆಯೇ ಸಾಗುತಿರಲಿ,
ಜೈ ಭಾರತ ಮಾತೆ".

ಮನಸ್ಸು ಮುಗುಳ್ನಗುತ್ತಿತ್ತು:)

                                                                                                              --ಪರಿಕಲ್ಪನೆ
                                                                                                             ಸಂತು.

Wednesday, August 8, 2012

ಅನುಮಾನ!


ನುಡಿವ ನಾಲಗೆಯ ನಡೆಯ ಮೇಲೇಕೋ ನನಗನುಮಾನ.
ಟೊಳ್ಳು ಪೊಳ್ಳು ಸುಳ್ಳು ನುಡಿದು,
ನನ್ನ ಕಳ್ಳನನ್ನಾಗಿಸುವ,
ನಾಲಗೆಯ ಮೇಲೆ ನನಗನುಮಾನ.

ಕಳ್ಳ ದೃಷ್ಟಿಯನಾಕುವ ಕಣ್ಣುಗಳ ಮೇಲೇಕೋ ನನಗನುಮಾನ.
ಕಂಡ ಕಂಡದ್ದರ ಮೇಲೆ ಕಣ್ಣು ಹಾಕಿ,
ಮುಖಕ್ಕೆ ಮಸಿ ಬಳಿಸುವ ,
ಕಣ್ಣುಗಳ ಮೇಲೆ ನನಗನುಮಾನ.

ಮುಗ್ಧ ಮಗುವಿನಂತೆ ಮುಗುಳ್ನಗುವ ಮನಸ ಮೇಲೇಕೋ ನನಗನುಮಾನ.
ಮತ್ತೆ ಮತ್ತೆ ಮೇಲಕ್ಕೆದ್ದು ಮೊಂಡಾಟ ತೋರಿಸಿ,
ಬುದ್ಧಿಯ ಮೇಲೆ ಮಂಕು ಕವಿಸುವ,
ಮನಸ ಮೇಲೇಕೋ ನನಗನುಮಾನ.
                      --ಸಂತು

Thursday, August 2, 2012

ಚುಟುಕ-ರಕ್ಷಾಬಂಧನ
ದಿನ ಬೆಳಗಾದರೆ ಬೀದಿ ಸುತ್ತುತ್ತಿದ್ದ,
ರೋಡು ರೋಮಿಯೋಗಳಿಗೆಲ್ಲ,
ಇಂದು ಮನೆಯೇ ವಾಸಸ್ಥಾನ.
ಓಹ್, ಇಂದು ರಕ್ಷಾಬಂಧನ!!

Wednesday, August 1, 2012

ಮರೆವು

ಹೊಡೆಯುವುದ ಕಲಿತೆ, ಬಡಿಯುವುದ ಕಲಿತೆ.
ರಕ್ಕಸದೇಣಿಯನತ್ತುವ ತವಕದಲಿ,
ದಕ್ಕುವಾ ಚಿತ್ರಗಳನೇ ನಾ ಮರೆತೆ.

ಸಹಿಸುವುದ ಕಲಿತೆ, ದಹಿಸುವುದ ಕಲಿತೆ.
ಇರುಳ ಮಬ್ಬಿನಲಿ ನೆಮ್ಮದಿಯನುಡುಕುತ್ತಾ,
ಕಳೆದ ಕ್ಷಣಗಳನೇ ನಾ ಮರೆತೆ.

ಗಳಿಸುವುದ ಕಲಿತೆ, ಉಳಿಸುವುದ ಕಲಿತೆ.
ಮೊಮ್ಮಕ್ಕಳಿಗೋಸುಗ ಎತ್ತಿಕ್ಕುವ ದಿಟ್ಟಿನಲಿ,
ನನ್ನ ತುತ್ತ ತಿನ್ನುವದ ನಾ ಮರೆತೆ.

ಇತಿಹಾಸ ಕಲಿತೆ, ಮುಂಬರುವುದನರಿತೆ.
ನಿನ್ನೆ ನಾಳೆಗಳ ಕಲಹಗಳ ನಡುವೆ,
ಇಂದು ಬಾಳುವುದ ನಾ ಮರೆತೆ.

ಉತ್ತುವುದ ಕಲಿತೆ, ಬಿತ್ತುವುದ ಕಲಿತೆ.
ಬೆಳೆದ ಭತ್ತವನುಣ್ಣುವ ಭರದಲಿ,
ಭೂತಾಯವ್ವನ ಋಣವ ನಾ ಮರೆತೆ.

ಬಾಳ ಬಂಡಿಯಲಿ ಕುಳಿತೆ, ನೊಗವನಿಕ್ಕುವುದನೂ ಕಲಿತೆ.
ಸವಾರಿಯ ಮಾಡುವ ಅಹಮ್ಮಿನ ಹಂಗಿನಲಿ
ಕಡಾಣಿ ಇಲ್ಲದ್ದನ್ನೇ ನಾ ಮರೆತೆ.
 -ನಿಮ್ಮವನು,
ಸಂತು.