Saturday, July 21, 2012

ಅನುಕರಣೆ- ನಮ್ಮ ಕಾಡುವ ಪೆಡಂಭೂತ


ಆತನೊಬ್ಬ ವೇದಿಕೆಯ ಮೇಲೆ ನಿಂತು ಕನ್ನಡದ ಮೇರು ನಟರ ಜನಪ್ರಿಯ ಸಂಭಾಷಣೆಗಳನ್ನು ಹೇಳುತ್ತಿದ್ದಾನೆ.
ಅದೊಂದು ದೊಡ್ಡ ಸಭೆ. ಸಾವಿರಾರು ಜನರಿದ್ದಾರೆ. ಈತನ ಮಿಮಿಕ್ರಿಗೆ ಯಾವೊಬ್ಬನ ಪ್ರತಿಕ್ರಿಯೆಯೂ ಇಲ್ಲ.
ಮೇರು ನಟರ ಹೆಸರನ್ನು ಹೇಳುವಾಗ ಚಪ್ಪಾಳೆ ಹೊಡೆದ ಜನ ಅವರ ಡೈಲಾಗ್ ಹೇಳಿದಾಗ ಮಾತ್ರ ಸುಮ್ಮನಿದ್ದಾರೆ.

ಹೌದು. ಇದೇ.. ನಾನು ಸರಿ.
ನೆನಪಾಗುತ್ತಿದೆ. ಇದೇ ಡೈಲಾಗ್-ಗಳನ್ನು ಮೊನ್ನೆಯೆಲ್ಲೋ ಬೇರೊಂದು ಕಾರ್ಯಕ್ರಮದಲ್ಲಿ ನೋಡಿದ್ದೆ.
ಮಿಮಿಕ್ರಿ ದಯಾನಂದ್ ಅವರು ಇದೇ ಸಂದರ್ಭವನ್ನು ಹೇಳುತ್ತಾ ನಟರ ಅನುಕರಣೆ ಮಾಡುವಾಗ ಜನರ ಕರತಾಡನ ಮುಗಿಲು ಮುಟ್ಟುವಂತಿತ್ತು.
ಅವರು ಡೈಲಾಗ್ ಹೇಳುತ್ತಿದ್ದರೆ ಶಂಕರ್ ನಾಗ್, ರಾಜಣ್ಣ, ವಿಷ್ಣು ಎಲ್ಲರೂ ನಮ್ಮ ಮುಂದೆಯೇ ಇದ್ದಾರೇನೋ ಅನ್ನುವಂತೆ ಜನ ಹುಚ್ಚೆದ್ದು ಕುಣಿಯುತ್ತಿದ್ದರು.
ಅವರ ಹಾವ ಭಾವ ದಿವಂಗತ ನಟರನ್ನು ಸಭೆಗೆ ಎಳೆದು ತರುತ್ತ ಜನಗಳನ್ನು ಮೋಡಿ ಮಾಡಿ, ಜನಗಳು "ಒನ್ಸ್ ಮೊರ್". ಎಂದು ಕೂಗುತ್ತಿದ್ದರು.

ಇಲ್ಲೇಕೆ ಹೀಗಾಯ್ತು?
ಈ ಆಸಾಮಿ ಮಿಮಿಕ್ರಿ ದಯಾನಂದ್ ಗಿಟ್ಟಿಸಿದ ಚಪ್ಪಾಳೆಯನ್ನೇ ತನ್ನ ತಲೆಯಲ್ಲಿಟ್ಟುಕೊಂಡು ಅವರ ಕಾನ್ಸೆಪ್ಟ್ ಕದ್ದುಬಿಟ್ಟನಾ?
ನಾನು ಇಲ್ಲಿ ಹೇಳುತ್ತಿರುವುದು ಮಿಮಿಕ್ರಿ ದಯಾನಂದ್ ರ ಅನುಕರಣೆಯನ್ನಲ್ಲ.
ಅವರ ಜನಪ್ರಿಯತೆಯನ್ನು ತಲೆಯಲ್ಲಿ ತುಂಬಿಕೊಂಡು ನಾನೇ ದಯಾನಂದ್ ಎನ್ನುವಂತೆ ದಯಾನಂದ್ ರ ಅನುಕರಣೆ ಮಾಡಹೊರಟಿದ್ದು.

ಏಕೆಂದರೆ ಮಿಮಿಕ್ರಿ ಮಾಡುವವನು ಆ ನಟರ ದೃಷ್ಟಿ, ಹಾವ ಭಾವ, ಧ್ವನಿ ಪ್ರತಿಯೊಂದನ್ನು ನೂರಾರು ಬಾರಿ ಅಭ್ಯಾಸ ಮಾಡಬೇಕಾಗುತ್ತದೆ.
ಅಷ್ಟೇ ಅಲ್ಲ ಆ ನಟನ ಡೈಲಾಗ್ ಬಾಯಿಪಾಠ ಮಾಡಬೇಕು.
ಆ ಸಿನಿಮಾದಲ್ಲಿ ಆತ ಹೇಳಿದ ಪರಿಯಲ್ಲೇ ಈತನೂ ಹೇಳಬೇಕು.
ಅಷ್ಟೇ ಅಲ್ಲ, ಕಾರ್ಯಕ್ರಮದಲ್ಲಿ ಸಭಿಕರೆದುರು ಮಿಮಿಕ್ರಿಯನ್ನು ಮಾಡಿ ತೋರಿಸುವಾಗ ಸ್ವಲ್ಪ ಸಮಯದಲ್ಲೇ ಮೂರ್ನಾಲ್ಕು ನಟರ ಮಿಮಿಕ್ ಮಾಡಬೇಕಾಗಿರುತ್ತದೆ.
ಹಾಗಾಗಿ ತಕ್ಷಣದಲ್ಲಿ ಒಬ್ಬೊಬ್ಬ ನಟರ ಧ್ವನಿಯಿಂದ ಇನ್ನೊಬ್ಬ ನಟರ ಧ್ವನಿಗೆ ಜಿಗಿಯಬೇಕು.
ಈ ಮೇಲಿನ ಯಾವುದೇ ವಿಷಯದಲ್ಲಿ ಕೊಂಚ ಎಡವಟ್ಟಾದರೂ ಮಿಮಿಕ್ರಿ ದೊಡ್ಡ ಕಾಮೆಡಿಯಾಗಿಬಿಡುತ್ತದೆ.

ಹೌದು.ಪ್ರತಿ ಮನುಷ್ಯನ ಜೀವನದಲ್ಲಿ ಈ ವಿಷಯ ಪ್ರತೀ ಹಂತದಲ್ಲಿ ಕಾಡುತ್ತಿರುತ್ತದೆ.

ಸಚಿನ್ ಶತಕ ಬಾರಿಸಿದ ಮರುಕ್ಷಣ ತನ್ನ ಬ್ಯಾಟನ್ನು ಗಾಳಿಯಲ್ಲಿ ಆಡಿಸುತ್ತಾನೆ.
ಕಿಕ್ಕಿರಿದು ತುಂಬಿದ ಸ್ಟೇಡಿಯಮ್ ನಲ್ಲಿನ ಜನಗಳ ಕೂಗು ಇಡೀ ದೇಶಕ್ಕೆ ಕೇಳಿಸುತ್ತಿರುತ್ತದೆ.
ಮರುದಿನ ಈತ ಬ್ಯಾಟೊಂದನ್ನು ಹಿಡಿದು ಮೈದಾನಕ್ಕೆ ಕ್ರಿಕೆಟ್ ಕಲಿಯಲೆಂದು ಹೊರಡುತ್ತಾನೆ, ಸಚಿನ್ ರೀತಿಯೇ!!
ನಾಲ್ಕು ದಿನಗಳ ನಂತರ ಬ್ಯಾಟು ಮೂಲೆ ಸೇರಿರುತ್ತದೆ.
ಮತ್ತೊಮ್ಮೆ ಅದರ ನೆನಪಾಗುವುದು ಸಚಿನ್ ಇನ್ನೊಮ್ಮೆ ಶತಕ ಬಾರಿಸಿದಾಗಲೇ!

ಅಶ್ವಥ್ ಮೈಕ್ ಹಿಡಿದು ನಿಂತರೆ ಎದುರಿರುವವನು ತನ್ನ ಮೈಮರೆಯಬೇಕು.
ಒಮ್ಮೆ ಅದ ನೋಡಿ ಈತನೂ ರೇರ್ರೆರೆರೆರೇರಾ ಎಂದು ಹಾಡಲು ತೊಡಗುತ್ತಾನೆ.
ಯಾರೋ ಒಬ್ಬರು ಬರೆದ ಅರ್ಥಗರ್ಭಿತ ಕವನಕ್ಕೆ ಮರುಳಾಗಿ ಈತನೂ ಕವನ ಬರೆಯುತ್ತೇನೆಂದು ಹೊರಡುತ್ತಾನೆ.
ಕನ್ನಡದ ಪದಗಳ ಬಗ್ಗೆ ಒಲವು ಮತ್ತು ಅರಿವೇ ಇಲ್ಲದ ವ್ಯಕ್ತಿಯೊಬ್ಬ ಎದ್ದು ನಿಂತು ನಾ ಕನ್ನಡದಲ್ಲಿ ಕವಿತೆಯ ಬರೆಯುತ್ತೇನೆ ಎಂದು ಹೇಳಿದರೆ,
ಎದುರಿಗಿರುವವನ ಸ್ಥಿತಿ ಹೇಗಿರಬೇಡ ನೀವೇ ಯೋಚಿಸಿ.
ಈ ರೀತಿಯ ಸಾವಿರಾರು ಉದಾಹರಣೆಗಳನ್ನು ನಾವು ಕೊಡಬಹುದು.

ಪ್ರಸಿದ್ಧ ವ್ಯಕ್ತಿಗಳ ಅನುಕರಣೆ ವಿಷಯ ಹಾಗಿರಲಿ.
ಪಕ್ಕದ ಮನೆಯವರ ಮಗ ಡಾಕ್ಟರ್ ಅದನೆಂದು ತಿಳಿದು, ತಮ್ಮ ಮಗನಿಗೆ ಇಷ್ಟವಿಲ್ಲದ ಸೈನ್ಸ್ ಕೊಡಿಸಿಬಿಟ್ಟಿರುತ್ತಾರೆ.
ಮೊದಲ ವರ್ಷದ PUC ನಲ್ಲೇ ಮಗ 5-6 ಸಬ್ಜೆಕ್ಟುಗಳಲ್ಲಿ ಫೇಲಾಗಿರುತ್ತಾನೆ.
ಇದು ಬೇಕಿತ್ತಾ?

ಆಮೀರ್ ಖಾನ್ ನ ಎಯ್ಟ್ ಪ್ಯಾಕ್ ದೇಹ ನೋಡಿ ಈತನೂ ಜಿಮ್ ಕಡೆಗೆ ಧಾವಿಸುತ್ತಾನೆ.
ರಘುಧೀಕ್ಷಿತ್ ಗಿಟಾರ್ ಹಿಡಿದು ಹಾಡುವ ಭಂಗಿಗೆ ಬೆರಗಾಗಿ, ಇವನೂ ಗಿಟಾರ್ ಕಲಿಯಲೆಂದು ಅಪ್ಪನಿಗೆ ಜೋತುಬಿದ್ದು ದುಬಾರಿಯ ಗಿಟಾರ್ಒಂದನ್ನು ಕೊಡಿಸಿಕೊಂಡು, ಕಲಿಯಲೆಂದು ಸಂಗೀತ ಶಾಲೆಗೆ ಹೊರಡುತ್ತಾನೆ.
ನಾಲ್ಕೂ ದಿನವೂ ಆಗಿಲ್ಲ ಆಗಲೇ ಎಲ್ಲರೆದುರು ಹಾಡೋಕೆ ಶುರು ಮಾಡುತ್ತಾನೆ.
ಯಾತನೆಯಾದರೂ ನೆರೆಯವರು ಅದ್ಭುತ ಎಂದು ಸುಳ್ಳು ಹೊಗಳಿಕೆ ನೀಡುತ್ತಾರೆ.

ನಾವು ಇಲ್ಲಿ ತಿಳಿದುಕೊಳ್ಳಬೇಕಾದ ವಿಷಯವೊಂದಿದೆ.
ಯೂರೋಪಿನ ದೇಶವೊಂದರ ಪ್ರಾಹ ನಗರದಲ್ಲಿ ಐತಿಹಾಸಿಕ ಸೇತುವೆಯೊಂದಿದೆ.
ನಾನು ಹೀಗೆಯೇ ಅಲ್ಲಿ ವಾಕಿಂಗ್ ಹೋಗುವಾಗ ದಾರಿಯಲ್ಲಿ ಕೆಲವು ಭಿಕ್ಷುಕರಿರುತ್ತಾರೆ.
ಕೈಯಲ್ಲೊಂದು ವೈಯೊಲಿನ್ ಹಿಡಿದು ಇಬ್ಬಿಬ್ಬರು ಒಟ್ಟೊಟ್ಟಿಗೆ ಬಾರಿಸತೊಡಗುತ್ತಾರೆ.
ಅವರೆಷ್ಟು ಚೆನ್ನಾಗಿ ಬಾರಿಸುತ್ತಿರುತ್ತಾರೆಂದರೆ ಇವರೇನಾದರೂ ನಮ್ಮ ದೇಶದಲ್ಲಿದ್ದರೆ ಇಷ್ಟು ಹೊತ್ತಿಗೆ ದೊಡ್ಡ ಸಂಗೀತ ನಿರ್ದೇಶಕರಾಗುತ್ತಿದ್ದರೇನೋ ಎನಿಸುತ್ತದೆ. ಸ್ವಲ್ಪ ಹೊತ್ತಿಗಾಗಲೇ ಅವರ ಮುಂದೆ ಇಟ್ಟ ಟೋಪಿಗಳು ಜನಗಳು ಹಾಕುವ ಚಿಲ್ಲರೆಗಳಿಂದ ತುಂಬಿ ಹೋಗುತ್ತವೆ.

ನಾನು ಇಲ್ಲಿ ಹೇಳುತ್ತಿರುವ ವಿಷಯವೊಂದನ್ನು ತಾವು ಸೂಕ್ಷ್ಮವಾಗಿ ಗಮನಿಸಬೇಕು.
ಇನ್ನೊಬ್ಬರ ಕೌಶಲ್ಯವನ್ನು ನೋಡಿ ಪ್ರೇರಿತರಾಗುವುದು ಬೇರೆ.
ಆದರೆ ಆ ಕೌಶಲ್ಯವನ್ನು ಹೊಂದಿರುವವರ ಜನಪ್ರಿಯತೆಯನ್ನು ನೋಡಿ ಅತಿ ಸ್ವಲ್ಪ ಸಮಯದಲ್ಲಿ ಅವರಂತೆ ಆಗಬೇಕೆಂದು ಮನಸ್ಸಿನಲ್ಲಿ ಹೇಳಿಕೊಳ್ಳುತ್ತಾ ಅವರನ್ನೇ ಅನುಕರಿಸತೊಡಗುವುದು.

ಇದು ದೊಡ್ಡ ಅಪಾಯ.
ಯಾಕೆಂದರೆ ಈ ರೀತಿ ಬರೇ ಅನುಕರಣೆ ಮಾಡುತ್ತಾ ಹೊರಟ ಪ್ರತಿಶತ 99 ಜನ ಬೇಗನೆ ಈ ಕಾರ್ಯಕ್ಕೆ ತಿಲಾಂಜಲಿ ಹಾಡುತ್ತಾರೆ.
ಕಾರಣ ಯಾವುದೇ ಕಲಿಕೆಯ ಆರಂಭಕ್ಕೂ ಮತ್ತು ಆ ಕೌಶಲ್ಯವನ್ನು ಪಡೆದು ಜನಪ್ರಿಯತೆ ಗಳಿಸುವ ಹಂತಕ್ಕೂ ನಡುವೆ ಬಹಳ ದೊಡ್ಡ ಅಂತರವಿರುತ್ತದೆ.
ಅದರ ಅರಿವು ನಮಗೆ ಆರಂಭದಲ್ಲಾಗಿರುವುದಿಲ್ಲ.
ಬ್ಯಾಟ್ ಹಿಡಿದು ಬಿಸಿಲಿನಲ್ಲಿ ಮೂರ್ನಾಲ್ಕು ದಿನ ಬೆವರಿಲಿಸಿದಾಗಲೇ ಇಳಿದುಹೋಗಿರುತ್ತದೆ.

ಇತ್ತೀಚೆಗೆ ನಾ ಓದಿದ ಪತ್ರಿಕೆಯೊಂದರಲ್ಲಿ ಯಶಸ್ಸಿನ ಸೂತ್ರಗಳ ಬಗ್ಗೆ ಕೊಡಲಾಗಿತ್ತು.
ಯಾವುದೇ ವ್ಯಕ್ತಿ ಯಾವುದೇ ವಿಷಯದಲ್ಲಿ ಅತ್ಯುನ್ನತ ಪರಿಣಿತನಾಗಬೇಕೆಂದರೆ ಕನಿಷ್ಟ ಪಕ್ಷ ಹತ್ತು ಸಾವಿರ ಘಂಟೆಗಳ ಶ್ರಮವನ್ನು ಮನಸಾರೆ ಹಾಕಬೇಕು ಎಂಬುದು. ದಿನಕ್ಕೊಮ್ಮೆ 4 ಘಂಟೆಗಳ ಲೆಕ್ಕಾಚಾರದಲ್ಲಿ ಅದೆಷ್ಟು ವರ್ಷ ಕಾಯಬೇಕು ಎನ್ನುವ ಲೆಕ್ಕಾಚಾರ ಪಕ್ಕಕ್ಕಿರಲಿ. ಕೊನೇಪಕ್ಷ ಅದಕ್ಕೆ ಬೇಕಾಗುವ ಶ್ರದ್ಧೆಯ ಅವಶ್ಯಕತೆಯ ಅರಿವು ನಮಗಾಗಬೇಕು.

ಪ್ರತಿ ವ್ಯಕ್ತಿಗೂ ತನ್ನದೇ ಆದ ವಿಶಿಷ್ಟ ಪ್ರತಿಭೆಯನ್ನು ದೇವರು ನಮಗೆ ಕೊಟ್ಟಿರುತ್ತಾನೆ.
ಅದರ ಅರಿವು ನಮಗಾದಾಗ ಅದಕ್ಕೆ ಜೋಪಾನವಾಗಿ ನೀರುಣಿಸಿ ನಿರಂತರ ಪರಿಶ್ರಮ ಮತ್ತು ಶ್ರದ್ಧೆಯಿಂದ ಬೆಳೆಸುವ ಕಾರ್ಯ ನಮ್ಮದಾಗಬೇಕು.
ಆಗ ಯಶಸ್ಸು, ಜನಗಳ ಕರತಾಡನ, ತನ್ನಂತಾನೆ ಹಿಂದೆ ಓಡಿ ಬರುತ್ತದೆ.

ಪ್ರತಿಯೊಂದನ್ನು ನಮ್ಮ ಸ್ವಂತದ್ದಾಗಿಯೇ ಪಡೆಯೋಣ.
ಅಲ್ಲಿಯವರೆಗೂ ಸಚಿನ್ ನ ಬ್ಯಾಟು, ರಘುಧೀಕ್ಷಿತ್ ರ ಗಿಟಾರ್, ಅಶ್ವಥ್ ರ ತೆರೆರೇರಾ, ಆಮೀರ್ ನ ದಷ್ಟಪುಷ್ಟ ದೇಹ ಅವರ ಬಳಿಯೇ ಇರಲಿ.
ನೀವೇನಂತೀರಿ??


ನಿಮ್ಮ ಗೆಳೆಯ,
ಸಂತು

Friday, July 13, 2012

ಸಿಹಿ!!

ಆ ಮೊದಲ ರಾತ್ರಿಯಲ್ಲಿ,
ಬಹಳ ಸಿಹಿಯಾಗಿತ್ತು.
ಗೊತ್ತಿಲ್ಲ.
ಆ ನಿನ್ನ ತುಟಿಯೋ,
ಅಥವಾ
ನೀ ತಂದ ಹಾಲೋ!!


ಅಂದು ನಾ ಬರೆದ ಪ್ರೇಮಪತ್ರವನ್ನೇಕೋ,
ಇಂದು ಗೆದ್ದಲು ತಿನ್ನುತ್ತಿದೆ.
ಪಾಪ ಅದಕ್ಕೆ ಗೊತ್ತಿಲ್ಲ,
ಆ ಅಕ್ಷರಗಳಿಂದ,
ದೊಡ್ಡ ಪ್ರೇಮವೃಕ್ಷವೊಂದಾಗಲೇ ಬೆಳೆದು ನಿಂತಿದೆಯೆಂದು!!


ಯುಗಾದಿಯಂದು ನಾ ಬೇವು ಬೆಲ್ಲ
ತಿನ್ನುವುದಿಲ್ಲ.
ಮನೆಯಲ್ಲಿಯೇ ನಡೆಯುತ್ತದೆ,
ನಿತ್ಯ ಯುಗಾದಿ.
ಏನಾದರೊಂದು ಅವಳಿಗೆ ತಂದರೆ,
ಅಥವಾ ಮರೆತು ಬಂದರೆ!!


--ಸಂತು